ಆಗ ಮಧ್ಯಾಹ್ನದ ಸಮಯ. ಕತ್ಕರಿವಡಿಯ ನಡ್ಸರ್‍ನ ದೇವಸ್ಥಾನದ ಹೊರಗೆ ಕೆಲವು ಕಾರುಗಳು ಬಂದು ನಿಂತವು. ಯಾರು ಬಂದರೆಂದು ಇಣುಕಿ ನೋಡಿದ ವಿಷ್ಣು ವಘ್ಮರೆ, ಕತ್ಕರಿ ಭಾಷೆಯಲ್ಲಿ ಏನೋ ಹೇಳಿದ. ಸುಮಾರು 15 ಜನ ಗಂಡಸರು ಹಾಗೂ ಸ್ತ್ರೀಯರಾದಿಯಾಗಿ ಬಂದವರನ್ನು ಸ್ವಾಗತಿಸಲು ಹೊರಗೆ ಬಂದರು.

"ಅವರು ಹೆಚ್ಚಿನ ಸಂಖ್ಯೆಯ ಕೂಲಿಗಳನ್ನು ಕರೆದೊಯ್ಯಲು ಬಂದಿದ್ದು, ಅವರೆಲ್ಲರೂ ಈಗ ಮಾತುಕತೆಗೆ ಕುಳಿತುಕೊಳ್ಳುತ್ತಾರೆ. ನಮ್ಮಲ್ಲಿನ ಹೆಚ್ಚು ಜನಕ್ಕೆ ಈ ಮುಖದ್ದಮ್‍ಗಳಿಂದ (ಗುತ್ತಿಗೆದಾರರು) ಮೂರ್ಖರಾಗುತ್ತಿದ್ದೇವೆಂಬುದು ತಿಳಿದಿಲ್ಲ. ಅವರು ನಮ್ಮನ್ನು ಶೋಷಿಸಿದರೂ ಸಹ ಅವರ ಕೆಲಸಗಳಿಗಾಗಿ ಮತ್ತೆ ಅವರಲ್ಲಿಗೇ ಹೋಗುತ್ತೇವೆ. ನಾನೆಂದೂ ಭಟ್ಟಿಗೆ ಹೋಗುವುದಿಲ್ಲ," ಎನ್ನುತ್ತಾನೆ 21 ವರ್ಷ ವಯಸ್ಸಿನ ವಿಷ್ಣು. ಆತನು ಹತ್ತಿರದ ಹಳ್ಳಿಗಳಲ್ಲಿ ಆಗಾಗ ತನಗೆ ದೊರಕಿದ ಕೆಲಸಗಳನ್ನು ಮಾಡುತ್ತಾನೆ.

ಮಹಾರಾಷ್ಟ್ರದ ರಾಯ್‍ಗಡ್ ಜಿಲ್ಲೆಯ (ಜನಗಣತಿಯ ದಾಖಲೆಗಳಲ್ಲಿ ಇದನ್ನು ರಾಯ್ಘರ್ ಎನ್ನುತ್ತಾರೆ.) ಸುದ್ಘಡ್ ಕ್ಷೇತ್ರದ (ಬ್ಲಾಕ್) ನಡ್ಸರ್ ಪಂಚಾಯತ್‍ನಲ್ಲಿ, ನಡ್ಸರ್ ಕತ್ಕರಿವಡಿಯು ಒಂದು ಸಣ್ಣ ಹಳ್ಳಿ. ಇಲ್ಲಿನ ಸಮುದಾಯವನ್ನು ನಿರ್ದಿಷ್ಟವಾಗಿ ಹಿಂದುಳಿದ ಬುಡಕಟ್ಟು ಎಂಬುದಾಗಿ ದಾಖಲಿಸಲಾಗಿದೆ. ಇಲ್ಲಿನ 360 ಕತ್ಕರಿ ಆದಿವಾಸಿಗಳಲ್ಲಿ ಬಹುತೇಕರು ದೀಪಾವಳಿಯ ನಂತರ ಸಾಮಾನ್ಯವಾಗಿ, ನವೆಂಬರ್ ತಿಂಗಳ ಮಧ್ಯಂತರದಲ್ಲಿ ವಲಸೆ ಹೋಗುತ್ತಾರೆ. ಆಂಧ್ರ ಪ್ರದೇಶ, ಕರ್ನಾಟಕ, ಚಿಪ್ಲನ್, ಅಮರಾವತಿ ಮತ್ತು ಮಹಾರಾಷ್ಟ್ರದ ಇತರೆ ಕೆಲವು ಸ್ಥಳಗಳ ಇದ್ದಿಲಿನ ಗೂಡುಗಳಲ್ಲಿ ಕೆಲಸ ಮಾಡುವ ಇವರು, ಜೂನ್ ತಿಂಗಳ ಪ್ರಾರಂಭದಲ್ಲಿ ಹಳ್ಳಿಗೆ ವಾಪಸ್ಸಾಗುತ್ತಾರೆ. ಈ ಭಟ್ಟಿಗಳಲ್ಲಿ ಬಬೂಲ್ ಮರಗಳಿಂದ ಇದ್ದಿಲನ್ನು ತಯಾರಿಸಲಾಗುತ್ತದೆ. ಹೋಟೆಲ್ಲುಗಳಲ್ಲಿನ ಬಾರ್ಬೆಕ್ಯೂ ಮತ್ತು ತಂದೂರ್‍ಗಳಿಗೆ ಇವನ್ನು ಬಳಸಲಾಗುತ್ತದೆ.

ಈ ಕೂಲಿಗಳನ್ನು ಕೊಂಡೊಯ್ಯುವ ಟ್ರಕ್‍ಗಳು ಮಹಾರಾಷ್ಟ್ರದೊಳಗಿನ ಇದ್ದಿಲಿನ ಗೂಡುಗಳನ್ನು ಸುಮಾರು 18 ಗಂಟೆಗಳಲ್ಲಿ ತಲುಪುತ್ತವೆ. 38 ಗಂಟೆಗಳಲ್ಲಿ ಅವು ಇತರೆ ರಾಜ್ಯಗಳನ್ನು ತಲುಪುತ್ತವೆ. ಬಯಲು ಪ್ರದೇಶದಲ್ಲಿ ಒಣಹುಲ್ಲು, ಬಿದಿರು ಹಾಗೂ ಕಬ್ಬಿನ ಜಲ್ಲೆಗಳ ನಿರುಪಯುಕ್ತ ವಸ್ತುಗಳಿಂದ ಅಷ್ಟೇನು ಭದ್ರವಿಲ್ಲದ ಕಚ್ಚಾ ವಾಸದ ಮನೆಗಳನ್ನು ಇವರು ನಿರ್ಮಿಸಿಕೊಳ್ಳುತ್ತಾರೆ. ವಿದ್ಯುತ್ ಅಥವಾ ಶೌಚಗೃಹಗಳಿಲ್ಲದ ಈ ಮನೆಗಳಲ್ಲಿ ವಾಸಿಸುವ ಅವರಿಗೆ ಕಾಡು ಪ್ರಾಣಿಗಳು ಹಾಗೂ ಹಾವುಗಳ ಆತಂಕ ನಿರಂತರ.

Group of People standing
PHOTO • Karishma V.

ಅನೇಕ ಕತ್ಕರಿ ಆದಿವಾಸಿಗಳು ಇಟ್ಟಿಗೆ ಗೂಡುಗಳು (ಮೇಲ್ಕಾಣಿಸಿದ) ಅಥವಾ ಬಬೂಲ್ ಮರದಿಂದ ತಯಾರಿಸಲಾಗುವ ಹೋಟೆಲ್ಲುಗಳಲ್ಲಿ ಬಾರ್ಬೆಕ್ಯೂ ಹಾಗೂ ತಂದೂರ್‍ಗಳಿಗೆ ಬಳಸುವ, ಇದ್ದಿಲಿನ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ.

ಬಬೂಲ್ ಕಾಡುಗಳಲ್ಲಿ ಬಬೂಲ್ ಮರಗಳ ತೋಪು ಇದ್ದು, ಸ್ಥಳೀಯರು ಸದರಿ ಭೂಮಿಯ ಮಾಲೀಕರಾಗಿದ್ದಾರೆ. ಕಂಟ್ರ್ಯಾಕ್ಟರುಗಳು ಭೂಮಾಲೀಕರೊಂದಿಗಿನ ಒಪ್ಪಂದದೊಂದಿಗೆ ಮರಗಳನ್ನು ಪಡೆಯುತ್ತಾರೆ. ಇದಕ್ಕೆ ಬದಲಾಗಿ ನೆಡುತೋಪುಗಳಿಗಾಗಿ ಅವರ ಭೂಮಿಗಳನ್ನು ಅವರು ಖಾಲಿಮಾಡುತ್ತಾರೆ. ಕೆಲಸಗಾರರು ಬಬೂಲ್ ಮರಗಳನ್ನು ಕತ್ತರಿಸಿ, ಗೂಡುಗಳನ್ನು ನಿರ್ಮಿಸಿ, ಮರಳನ್ನು ಸುರಿದು, ಬಬೂಲನ್ನು ಸುಡುತ್ತಾರೆ. ನಂತರ ಟ್ರಕ್ಕುಗಳಲ್ಲಿ ಇದ್ದಿಲನ್ನು ತುಂಬಲಾಗುತ್ತದೆ. ಮರಗಳನ್ನು ತೆರವುಗೊಳಿಸಿದ ಇವರು ಭೂಮಿಯನ್ನು ಹಸನುಗೊಳಿಸಿ ಕೃಷಿಗೆ ಅಣಿಗೊಳಿಸುತ್ತಾರೆ.

ಇದೇ ಪಂಚಾಯತ್‍ ನ ಥನಾಲೆ ಕತ್ಕರಿವಡಿ ಸಣ್ಣ ಹಳ್ಳಿಯ 36 ರ ಸಂದೀಪ್ ಪವಾರ್, "ಮುಖದ್ದಂಗಳು ರೂ. 20,000-40,000ವನ್ನು ಪ್ರಾಮಾಣಿಕವಾಗಿ ಪಾವತಿಸುತ್ತಾರೆ." ಎನ್ನುತ್ತಾನೆ. ಈ ಹಣವು ಭಟ್ಟಿಯ ಸ್ಥಳ, ಕೆಲಸದ ಸ್ವರೂಪ ಹಾಗೂ ಒಪ್ಪಂದಗಳನ್ನು ಅವಲಂಬಿಸಿರುತ್ತದೆ. "ಮುಂಗಡವಾಗಿ ನೀಡಲಾಗುವ ಇಷ್ಟೊಂದು ಹಣವೇ ನಮ್ಮ ಆದಿವಾಸಿಗಳ ಆಮಿಷಕ್ಕೆ ಕಾರಣ. ಕೆಲವೊಮ್ಮೆ, ಕುಟುಂಬಗಳಲ್ಲಿ ವಿವಾಹದ ಏರ್ಪಾಟು ಇದ್ದಲ್ಲಿ, ಮುಖದ್ದಂ, ಕುಟುಂಬವೊಂದಕ್ಕೆ ರೂ. 80,000 ದವರೆಗೂ ಪಾವತಿಸುತ್ತಾನೆ."

ಗೂಡುಗಳಲ್ಲಿ ದಂಪತಿಗಳನ್ನು ದುಡಿಮೆಯ ಘಟಕವೆಂಬುದಾಗಿ ಪರಿಗಣಿಸಲಾಗುತ್ತದೆ. ವಲಸೆ ಬಂದ ಇತರೆ ಕುಟುಂಬದ ಸದಸ್ಯರು ಮೂಟೆಗಳನ್ನು ಹೊರುವುದು ಮತ್ತಿತರ ಕೆಲಸಗಳಲ್ಲಿ ಸಹಾಯಮಾಡುತ್ತಾರೆ. ಇದು ಕೆಲಸದ ವೇಗವನ್ನು ಹೆಚ್ಚಿಸುತ್ತದಾದರೂ, ಅವರಿಗೆ ಪ್ರತ್ಯೇಕವಾಗಿ ಹಣವನ್ನು ಪಾವತಿಸುವುದಿಲ್ಲ. ಕಂಟ್ರ್ಯಾಕ್ಟರುಗಳು ಪ್ರತಿ ಕುಟುಂಬಕ್ಕೂ ಆಹಾರ ಹಾಗೂ ಪಡಿತರಕ್ಕಾಗಿ ಪ್ರತಿ ವಾರ ರೂ. 400 ನ್ನು ಅಂದರೆ ಏಳು ತಿಂಗಳಿಗೆ ಸುಮಾರು ರೂ. 12,000 ನ್ನು ಪಾವತಿಸುತ್ತಾರೆ. ಈ ಮೊತ್ತವನ್ನು ಕೂಲಿಯ ಭಾಗವಾಗಿ ಪರಿಗಣಿಸಲಾಗುತ್ತದೆಯಲ್ಲದೆ, ದಂಪತಿಗಳು ಇದರ ಮರುಪಾವತಿಗೂ ದುಡಿಮೆಯಲ್ಲಿ ತೊಡಗತಕ್ಕದ್ದು.

ಈ ದುಡಿಮೆಯು ತ್ರಾಸದಾಯಕವಾಗಿದ್ದು ಮುಂಜಾನೆ 7 ಕ್ಕೆ ಪ್ರಾರಂಭಗೊಂಡು, ರಾತ್ರಿ 9 ರವರೆಗೂ ಸಾಗುತ್ತದೆ. ಹತ್ತಿರದ ಮಾರುಕಟ್ಟೆಯಿಂದ ದಿನಸಿಯನ್ನು ಕೊಳ್ಳಲು ವಾರಕ್ಕೊಮ್ಮೆ ಬಿಡುವು ದೊರೆಯುತ್ತದೆ. ಪುಣೆ ಜಿಲ್ಲೆಯ ಖೆದ್ ತಾಲ್ಲೂಕಿನ ಭಟ್ಟಿಯಲ್ಲಿ ಈ ವರ್ಷ ಕೆಲಸ ನಿರ್ವಹಿಸುತ್ತಿರುವ ಶಶಿಕಾಂತ್ ವಘ್ಮರೆ, "ಇಂದು ಮಕರ ಸಂಕ್ರಾಂತಿ, ಬೆಳಗಿನಿಂದ ನಾವು ಬಿಡುವಿಲ್ಲದಂತೆ ದುಡಿಯುತ್ತಿದ್ದೇವೆ. ಕೆಲವೊಮ್ಮೆ ತಡರಾತ್ರಿಯವರೆಗೂ ಟ್ರಕ್ಕುಗಳಿಗೆ ಮರ ಹಾಗೂ ಇದ್ದಿಲನ್ನು ತುಂಬಿಸುತ್ತೇವೆ", ಎನ್ನುತ್ತಾರೆ.

ಈ ದುಡಿಮೆಯು ತ್ರಾಸದಾಯಕವಾಗಿದ್ದು; ಮುಂಜಾನೆ 7 ಕ್ಕೆ ಪ್ರಾರಂಭಗೊಂಡು, ರಾತ್ರಿ 9 ರವರೆಗೂ ಸಾಗುತ್ತದೆ. ಹತ್ತಿರದ ಮಾರುಕಟ್ಟೆಯಿಂದ ದಿನಸಿಯನ್ನು ಕೊಳ್ಳಲು ವಾರಕ್ಕೊಮ್ಮೆ ಬಿಡುವು ದೊರೆಯುತ್ತದೆ. ಪುಣೆ ಜಿಲ್ಲೆಯ ಖೆದ್ ತಾಲ್ಲೂಕಿನ ಭಟ್ಟಿಯಲ್ಲಿ ಈ ವರ್ಷ ಕೆಲಸ ನಿರ್ವಹಿಸುತ್ತಿರುವ ಶಶಿಕಾಂತ್ ವಘ್ಮರೆ, "ಇಂದು ಮಕರ ಸಂಕ್ರಾಂತಿ, ಬೆಳಗಿನಿಂದ ನಾವು ಬಿಡುವಿಲ್ಲದಂತೆ ದುಡಿಯುತ್ತಿದ್ದೇವೆ. ಕೆಲವೊಮ್ಮೆ ತಡರಾತ್ರಿಯವರೆಗೂ ಟ್ರಕ್ಕುಗಳಿಗೆ ಮರ ಹಾಗೂ ಇದ್ದಿಲನ್ನು ತುಂಬಿಸುತ್ತೇವೆ" ಎನ್ನುತ್ತಾರೆ.

ಮುಂಗಡವಾಗಿ ಪಾವತಿಸಿದ ಹಣವನ್ನು ಕಡಿತಗೊಳಿಸಿ, ಉಳಿದ ಹಣವನ್ನು ಪಾವತಿಸಲು ತುಂಬಿದ ಮೂಟೆಗಳನ್ನು ಲೆಕ್ಕಹಾಕಲಾಗುತ್ತದೆ ಎಂಬುದು ಕಂಟ್ರಾಕ್ಟರ್‍ನ ಅಂಬೋಣ. ಸುಮಾರು 240 ಕಿ.ಮೀ. ದೂರದ ಅಹ್ಮದ್‍ ನಗರವೆಂಬ ಊರಿನಲ್ಲಿ ವಾಸಿಸುತ್ತಿರುವ ಮಂಗೇಶ್ ರಾಧೋಡ್ ಎಂಬ ಮುಖದ್ದಂ ಅಂದು ಈ ಸಣ್ಣ ಹಳ್ಳಿಗೆ ಭೇಟಿ ನೀಡಿದ್ದನು. "ಪ್ರತಿ ಮೂಟೆಯೂ 25 ಕೆ. ಜಿ ಇದ್ದಿಲನ್ನು ಹೊಂದಿದ್ದು, ಒಬ್ಬ ಕೂಲಿಗೆ (ದಂಪತಿ) ಪ್ರತಿ ತುಂಬಿದ ಮೂಟೆಗೆ ರೂ. 120 ನ್ನು ನೀಡುತ್ತೇವೆ" ಎಂದು ಆತ ತಿಳಿಸುತ್ತಾನೆ.

ಅಮರಾವತಿ ಜಿಲ್ಲೆಯ ದರ್ಯಾಪುರ್ ತಾಲ್ಲೂಕಿನ ನವ್‍ನಾಥ್ ಚವಾಣ್ ತಿಳಿಸುವಂತೆ ಪ್ರತಿ ಮೂಟೆಯ ದರವನ್ನು ಪರಿಗಣಿಸಲಾಗುತ್ತದೆ. 2018 ರಲ್ಲಿ ನಡ್ಸರ್ ಕತ್ಕರಿವಡಿಯ 36 ಕುಟುಂಬಗಳು ದರ್ಯಾಪುರಕ್ಕೆ ವಲಸೆ ಬಂದಿದ್ದವು. "ನಾವು ಅವರಿಗೆ ಮುಂಗಡವನ್ನು ಪಾವತಿಸುತ್ತೇವೆ. ಅವರು ತಯಾರಿಸಿದ ಪ್ರತಿ ಇದ್ದಿಲ ಮೂಟೆಗೆ ಕುಟುಂಬಕ್ಕೆ 120 ರೂ.ಗಳನ್ನು ನೀಡುತ್ತೇವೆ. ತಮಗೆ ನೀಡಲಾದ ಮುಂಗಡವನ್ನು ಹಿಂದಿರುಗಿಸುವವರೆಗೂ ಅವರು ನಮಗೆ ಬಾಧ್ಯಸ್ಥರು. ಅವರು ಇದಕ್ಕಿಂತಲೂ ಹೆಚ್ಚು ಮೂಟೆಗಳನ್ನು ತಯಾರಿಸಿದರೆ, ಪ್ರತಿ ಮೂಟೆಗೂ ಹೆಚ್ವುವರಿ ಹಣವನ್ನು ಪಡಿತರದ ಹಣವನ್ನು ಕಡಿತಗೊಳಿಸಿದ ನಂತರ ನಗದು ರೂಪದಲ್ಲಿ ಪಾವತಿಸುತ್ತೇವೆ." ಎಂದು ಆತ ತಿಳಿಸುತ್ತಾನೆ.

ಸೂಕ್ತ ಋತುವಿನಲ್ಲಿ, ಕೂಲಿಕಾರ ಕುಟುಂಬವು ಒಂದು ಸಾವಿರ ಅಥವಾ 1,20,000 ರೂ.ಗಳಿಗೆ ಸಮನಾದ ಕೆಲಸವನ್ನು ನಿರ್ವಹಿಸುತ್ತದೆ. ಒಂದು ಕುಟುಂಬವು ಸರಾಸರಿ 500 ಮೂಟೆಗಳನ್ನು ತುಂಬಿಸುತ್ತದೆ. ಇದರಿಂದ ಅವರಿಗೆ 60,000 ರೂ. ದೊರೆಯುತ್ತದೆ (ಮುಂಗಡ ಹಾಗೂ ಪಡಿತರದ ಹಣವನ್ನು ಕಡಿತಗೊಳಿಸಿ). ಆದರೆ ಕೊನೆಗೆ ಇವರಿಗೆ ಯಾವುದೇ ಹೆಚ್ಚುವರಿ ಹಣವು ದೊರೆಯುವುದಿಲ್ಲ. ನಡ್ಸರ್‍ನ ಕತ್ಕರಿವಡಿ ಮತ್ತು ಥನಲೆಯ ಕತ್ಕರಿವಡಿಯಲ್ಲಿ ನಾನು ಭೇಟಿಯಿತ್ತ 40 ಕುಟುಂಬಗಳಲ್ಲಿ ಯಾರಿಗೂ ಪ್ರತಿ ಮೂಟೆಗೆ ಹಣವನ್ನು ಪಾವತಿಸಿದ ನೆನಪಿಲ್ಲ. ಪ್ರತಿ ಋತುವಿನಲ್ಲೂ 500-700 ಇದ್ದಿಲ ಮೂಟೆಗಳನ್ನು ಅವರು ತಯಾರಿಸುತ್ತಾರಾದರೂ ತಮ್ಮಲ್ಲ್ಲಿ ಯಾರಿಗೂ ಯಾವುದೇ ವರ್ಷವೂ ಹೆಚ್ಚುವರಿ ಹಣವನ್ನು ಋತುವಿನ ಕೊನೆಯಲ್ಲಿ ಪಡೆದ ನೆನಪಿಲ್ಲವೆಂದು ಅವರೆಲ್ಲರೂ ತಿಳಿಸುತ್ತಾರೆ.

ಬಬೂಲ್ ಇಟ್ಟಿಗೆ ಗೂಡಿನ ನಿಯತ ಕೂಲಿಕಾಳಾದ 32 ವರ್ಷದ ಸಂಗೀ ವಘ್ಮರೆ, "ಮದುವೆಗೆಂದು ನಾವು 70,000 ರೂ.ಗಳ ಮುಂಗಡ ಪಡೆದಿದ್ದೆವು. ಅದರ ಮರುಪಾವತಿ ಹಾಗೂ ಪಡಿತರದ ವೆಚ್ಚವನ್ನು ಭರಿಸಲು ನಾವು ದುಡಿಯಲೇಬೇಕು", ಎನ್ನುತ್ತಾಳೆ. ಇದು ಒಟ್ಟಾರೆ 82,000 ರೂ.ಗಳು ಅಥವ ಸುಮಾರು 700 ಮೂಟೆಗಳಾಗುತ್ತದೆ. ಆಕೆ ಹಾಗೂ ಆಕೆಯ ಪತಿಯು ಆ ಋತುವಿನಲ್ಲಿ 1,000 ಮೂಟೆಗಳನ್ನು ತುಂಬುವಲ್ಲಿ ಯಶಸ್ವಿಯಾದರು. ಆಕೆಗೆ ಲೆಕ್ಕಾಚಾರವನ್ನು ತೋರಿಸಿದ ನಾನು, ಉಳಿದ 300 ಮೂಟೆಗಳಿಗೆ ಮುಖದ್ದಮ್‍ನಿಂದ ಆಕೆ 38,000 ರೂ.ಗಳನ್ನು ಪಡೆದಳೇ ಎಂಬುದನ್ನು ವಿಚಾರಿಸಿದೆ. ಕಿಲಕಿಲನೆ ನಕ್ಕ ಆಕೆ, "ಆತ ನಮಗೆ ಒಂದು ಸ್ಟೀರಿಯೊ ಮತ್ತು ಚಿನ್ನದ ನಾಣ್ಯಗಳನ್ನು ನೀಡಿದ", ಎನ್ನುತ್ತಾಳೆ. ಈ ಪ್ರೋತ್ಸಾಹಕ ಇನಾಮಿನ ಮೌಲ್ಯ 5,000 ರೂ.ಗಳು.

Woman in front of television
PHOTO • Karishma V.

ಕಂಟ್ರ್ಯಾಕ್ಟರನು 38,000 ರೂ.ಗಳಿಗೆ ಬದಲಾಗಿ ಸಂಗೀತ ವಘ್ಮರೆ ಹಾಗೂ ಆಕೆಯ ಪತಿಗೆ ಈ ಸ್ಟೀರಿಯೊ ಹಾಗೂ ಎರಡು ಚಿನ್ನದ ನಾಣ್ಯಗಳನ್ನು ನೀಡಿದ್ದಾನೆ.

ನಿಮಗೆ 30,000 ರೂ.ಗಳ ಮುಂಗಡ ಹಣವನ್ನು ನೀಡಿದಲ್ಲಿ, ನಿಮ್ಮ ಬಾಕಿ ತೀರಿದೆಯೆಂದು ಮುಖದ್ದಂ ತಿಳಿಸುವವರೆಗೂ ನೀವು ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಯಾವುದೇ ಕುಟುಂಬವು ಋತುವಿನಲ್ಲಿ ಕೇವಲ 200 ಮೂಟೆಗಳನ್ನು ಮಾತ್ರವೇ ನಿರ್ವಹಿಸಲು ಸಾಧ್ಯವಾದರೆ ಅವರು ಮುಂದಿನ ವರ್ಷವೂ ಕೆಲಸಕ್ಕೆ ಬಂದು ಅವರ ಬಾಕಿ ಮುಗಿಯುವವರೆಗೂ ಸಂಬಳವಿಲ್ಲದಂತೆ ದುಡಿಯತಕ್ಕದ್ದು ಎನ್ನುತ್ತಾರೆ ಸಣ್ಣ ಹಳ್ಳಿಯಲ್ಲಿನ ವಯೋವೃದ್ಧ, 79 ವರ್ಷದ ಬಾಪು ಹಿಲಮ್.

ಇದ್ದಿಲ ಗೂಡುಗಳಲ್ಲಿ ತಿಂಗಳಾನುಗಟ್ಟಲೆ ವಾಸಿಸುವ ಅವರ ದುಡಿಮೆಯ ಪ್ರಮಾಣ ಅಪಾರವಾದುದು. ಅವರಿಗೆ ಸಾಕಷ್ಟು ಊಟವೂ ಸಿಗದು. ತಮ್ಮ ಹಳ್ಳಿಗೆ ಹಿಂದಿರುಗುವ ಹೊತ್ತಿಗಾಗಲೇ ಅವರ ಮಕ್ಕಳು ಪೌಷ್ಠಿಕ ಆಹಾರವಿಲ್ಲದೆ ಸೊರಗಿರುತ್ತಾರೆ. ಕೆಲವು ಜಿಲ್ಲೆಗಳಲ್ಲಿ ಅಂಗನವಾಡಿಗಳು ಪ್ರತಿ ವರ್ಷದ ಜುಲೈ-ಸೆಪ್ಟೆಂಬರ್‍ನಲ್ಲಿ ಗರ್ಭಿಣಿ ಹಾಗೂ ಹಾಲೂಡುವ ಹೆಂಗಸರು ಹಾಗೂ 2-6 ವರ್ಷದ ಮಕ್ಕಳಿಗೆ ಹೆಚ್ಚುವರಿ ಮೊಟ್ಟೆಗಳು ಅಥವ ಕಡಲೆ ಬೀಜದ ಚಿಕ್ಕಿಗಳನ್ನು ನೀಡುತ್ತವೆ.

ಥನಲೆಯಲ್ಲಿನ (ಪಂಚಾಯತ್‍ನ ಆದಿವಾಸಿರಹಿತ ಸಣ್ಣ ಹಳ್ಳಿ) ರಾಯ್‍ಗಡ್ ಜಿಲ್ಲಾ ಪರಿಷತ್ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಬು ಮಹದಿಕ್, ನಮ್ಮಲಿರುವ ಒಟ್ಟು 40 ಮಕ್ಕಳಲ್ಲಿ, 20 ಮಕ್ಕಳು ಕತ್ಕರಿ ಕುಟುಂಬದವರು. ಅಕ್ಟೋಬರ್ ನಂತರ ಈ ಮಕ್ಕಳು ಇತರೆ ರಾಜ್ಯಗಳಿಗೆ ವಲಸೆ ಹೋಗಿ, ಜೂನ್‍ ನಲ್ಲಿ ಹಿಂದಿರುಗುತ್ತಾರೆ. ಈ ಅವಧಿಯಲ್ಲಿ ಇವರು ಸ್ಥಳೀಯ ಶಾಲೆಗಳಲ್ಲಿ ದಾಖಲಾಗುವುದಿಲ್ಲ. ಅವರು ವಾಪಸ್ಸು ಬಂದಾಗ, ಸರ್ಕಾರದ ಅನುತ್ತೀರ್ಣರಹಿತ ನೀತಿಯಿಂದಾಗಿ ಮುಂದಿನ ತರಗತಿಗಳಿಗೆ ಇವರಿಗೆ ಪ್ರವೇಶವನ್ನು ನೀಡಲಾಗುತ್ತದೆ. ಇವರು 9 ನೇ ತರಗತಿಗೆ ತಲುಪುವ ಹೊತ್ತಿಗೆ, ಮೂಲಾಕ್ಷರ ಹಾಗೂ ಬರಖಡಿಗಳಷ್ಟನ್ನು (ಮೂಲ ಅಕ್ಷರಗಳು) ಮಾತ್ರವೇ ಕಲಿತಿರುತ್ತಾರೆ. ಇವರಲ್ಲಿ ಅನೇಕರು 9 ನೇ ತರಗತಿಯಲ್ಲಿ ಅನುತ್ತೀರ್ಣಗೊಂಡು ಶಾಲೆಯನ್ನು ತೊರೆಯುತ್ತಾರೆ.

ಥನಲೆಯಂತಹ ಸಣ್ಣ ಹಳ್ಳಿಯಲ್ಲಿನ ಅನೇಕ ಕುಟುಂಬಗಳು, ಸ್ವಂತ ಭೂಮಿಯನ್ನು ಹೊಂದಿದ್ದು, ಮಾನ್ಸೂನ್ ನಂತರ ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಕೆಲವರು ತಾಲ್ಲೂಕು ಹಾಗೂ ಅದರ ಸುತ್ತಮುತ್ತಲಿನಲ್ಲಿ ದಿನಗೂಲಿಯ ಕೆಲಸವನ್ನು ಅರಸುತ್ತಾರೆ. ಇವರಲ್ಲಿನ ಅನೇಕರ ಕುಟುಂಬದ ಸದಸ್ಯರು ನಗರಗಳಲ್ಲಿ ದುಡಿಯುತ್ತಿದ್ದಾರೆ.

ನಿಮಗೆ 30,000 ರೂ.ಗಳ ಮುಂಗಡ ಹಣವನ್ನು ನೀಡಿದಲ್ಲಿ, ನಿಮ್ಮ ಬಾಕಿ ತೀರಿದೆಯೆಂದು ಮುಖದ್ದಂ ತಿಳಿಸುವವರೆಗೂ ನೀವು ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಯಾವುದೇ ಕುಟುಂಬವು ಋತುವಿನಲ್ಲಿ ಕೇವಲ 200 ಮೂಟೆಗಳನ್ನು ಮಾತ್ರವೇ ನಿರ್ವಹಿಸಲು ಸಾಧ್ಯವಾದರೆ ಅವರು ಮುಂದಿನ ವರ್ಷವೂ ಕೆಲಸಕ್ಕೆ ಬಂದು ಅವರ ಬಾಕಿ ಮುಗಿಯುವವರೆಗೂ ಸಂಬಳವಿಲ್ಲದಂತೆ ದುಡಿಯತಕ್ಕದ್ದು ಎನ್ನುತ್ತಾರೆ ಸಣ್ಣ ಹಳ್ಳಿಯಲ್ಲಿನ ವಯೋವೃದ್ಧ, 79 ವರ್ಷದ ಬಾಪು ಹಿಲಮ್.

ಕೃಷಿಗೆ ಸಂಬಂಧಿಸಿದ ಕೆಲಸಗಳಿಗೆ ನಡ್ಸರ್‍ನಲ್ಲಿ ದಿನವೊಂದಕ್ಕೆ ಪುರುಷರಿಗೆ 350 ರೂ.ಗಳನ್ನು ಹಾಗೂ ಸ್ತ್ರೀಯರಿಗೆ 250 ರೂ.ಗಳನ್ನು ನೀಡಲಾಗುತ್ತದೆ. “ಆದರೆ ಕೃಷಿಯು ಋತುಕಾಲಿಕವಾಗಿದ್ದು ಭತ್ತದ ಕಟಾವನ್ನು ಪೂರೈಸಿದ ಮೇಲೆ, ಮಾನ್ಸೂನ್ ನಂತರ ಹಳ್ಳಿಯಲ್ಲಿ ಯಾವುದೇ ಕೆಲಸವು ಲಭ್ಯವಿರುವುದಿಲ್ಲ. ನಮ್ಮಲ್ಲಿ ಬಹುತೇಕರಿಗೆ ಸ್ವಂತ ಭೂಮಿಯೂ ಇಲ್ಲ. ಹೀಗಾಗಿ ಮಳೆಯ ನಂತರ ನಮ್ಮ ಜನರು ವಲಸೆ ಹೋಗುತ್ತಾರೆ”. ಎನ್ನುತ್ತಾನೆ ಸಂದೀಪ್.

ಕತ್ಕರಿಗಳು ವಲಸೆ ಹೋದಾಗ, ಹಲವಾರು ದಾಖಲೆ ಪತ್ರಗಳನ್ನು ಪಡೆಯುವ ಅವರ ಪ್ರಯತ್ನಗಳೂ ಸಹ ವಿಳಂಬವಾಗುತ್ತವೆ. ಮನವಿ ಸಲ್ಲಿಸಿದ ನಂತರ ವಲಸೆ ಹೋಗುವ ಹಳ್ಳಿಗರು; ತಲಥಿಗಳು ಮನೆ-ಮನೆಯ ತಪಾಸಣೆಗೆ ತೆರಳಿದಾಗ ಹಾಜರಿರುವುದಿಲ್ಲವಾದ ಕಾರಣ, ತಹಸೀಲುಗಳಲ್ಲಿನ ಹಲವು ಜಾತಿ ಪ್ರಮಾಣಪತ್ರದ ಫಾರಂಗಳು ಧೂಳು ತಿನ್ನುತ್ತಿವೆ. ಪರಿಶಿಷ್ಟ ಪಂಗಡದವರಿಗೆ ಜಿಲ್ಲೆಯ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್‍ರವರು ನೀಡಿದ ಜಾತಿ ಪ್ರಮಾಣ ಪತ್ರವು ಸರ್ಕಾರದ ಯೋಜನೆ ಹಾಗೂ ಸಬ್ಸಿಡಿಗಳನ್ನು ಪಡೆಯಲು ಪ್ರಮುಖ ದಾಖಲೆಯಾಗಿರುತ್ತದೆ. ಮನೆಗಳ ಸಮೀಕ್ಷೆಯ ಕಾರ್ಯವು ನಡೆಯುವಾಗಲೆಲ್ಲ ಕತ್ಕರಿಗಳು ಹಾಜರಿರದ ಕಾರಣ ಅವರನ್ನು ಲೆಕ್ಕಕ್ಕೆ ಸೇರಿಸಿರುವುದಿಲ್ಲ.

ಸಣ್ಣ ಹಳ್ಳಿಯಲ್ಲಿ ಕೆಲಸದ ಆಯ್ಕೆಯ ಅವಕಾಶಗಳು ಸೀಮಿತವೇ ಆದರೂ, ಏಳು ತಿಂಗಳ ಕಾಲ ಹೊರಗೆ ಹೋಗುವುದು ಉಚಿತವೇ? ಅಲ್ಲಿನ ಸಂಪಾದನೆಯೂ ಸದರಿ ಅವಧಿಗೆ ಇಡೀ ಕುಟುಂಬಕ್ಕೆ ಹೋಲಿಸಿದಾಗ, ಬಹಳ ನಿಕೃಷ್ಟವೆನಿಸುತ್ತದೆ. “ತುರ್ತು ಪರಿಸ್ಥಿತಿಗಳು ಮತ್ತು ಹಣದ ಅವಶ್ಯಕತೆ ಬಹಳವಿದ್ದಾಗ, ಸುಣ್ಣದ ಗೂಡಿನ ಕಂಟ್ರ್ಯಾಕ್ಟರ್‍ನಿಂದ ಕಾರ್ಮಿಕರು ಬೇಕೆಂದಷ್ಟು ಹಣ ಪಡೆಯುತ್ತಾರೆ. MGNREGA, ಒಂದು ದಿನಕ್ಕೆ ಹೆಚ್ಚಿನ ಹಣವನ್ನು ಪಾವತಿಸುತ್ತದೆಯಾದರೂ (ರೂ. 201), ಕೆಲಸವನ್ನು ನಿರ್ವಹಿಸಿದ ಆರು ತಿಂಗಳ ನಂತರ ಹಣವು ಕಾರ್ಮಿಕರ ಖಾತೆಗಳಿಗೆ ಜಮೆಯಾಗುತ್ತದೆ. ಕೆಲವರಿಗಂತೂ 2015 ರಿಂದಲೂ ಹಣವು ಪಾವತಿಯಾಗಿರುವುದಿಲ್ಲ!” ಎನ್ನುವ ವಿಷ್ಣು. ಇತ್ತೀಚೆಗೆ ಕ್ಷೇತ್ರ ಮಟ್ಟದ ಸಾಮಾಜಿಕ ಪರಿಶೋಧನಾ ತಂಡದಲ್ಲಿದ್ದನು.

2006 ರ ಅರಣ್ಯ ಹಕ್ಕು ಕಾಯ್ದೆಯನ್ನು ಈ ಪ್ರದೇಶದಲ್ಲಿ ಸೂಕ್ತವಾಗಿ ಜಾರಿಗೊಳಿಸಿದಲ್ಲಿ ಅದರಿಂದ ಉಪಯೋಗವಿದೆ. ನಡ್ಸರ್‍ನ ಒಟ್ಟಾರೆ ಸುಮಾರು 5,100 ಹೆಕ್ಟೇರ್ ಪ್ರದೇಶದ 3,500 ಹೆಕ್ಟೇರ್ ಭೂಮಿಯಲ್ಲಿ ಕಾಡು ಆವರಿಸಿದೆ. ಆದರೆ ಇಲ್ಲಿನ ಬಹುಪಾಲು ಕತ್ಕರಿಗಳಿಗೆ ಅವರು ಕೃಷಿಯಲ್ಲಿ ತೊಡಗಬಹುದಾದ ಭೂಮಿಯಿಲ್ಲ. ಅರಣ್ಯ ಹಕ್ಕು ಕಾಯ್ದೆಯು ಇವರಿಗೆ ವ್ಯಕ್ತಿಗತ ಅಥವ ಸಮುದಾಯ ಅರಣ್ಯ ಹಕ್ಕುಗಳನ್ನು ಒದಗಿಸಿದಲ್ಲಿ, ಅದರಿಂದ ಕೃಷಿ ಹಾಗೂ ಸಣ್ಣಪುಟ್ಟ ಅರಣ್ಯ ಉತ್ಪನ್ನಗಳ ಸಂಗ್ರಹವು ಸಾಧ್ಯವಾಗುತ್ತದೆ. "ಅರಣ್ಯಾಧಿಕಾರಿಗಳು ನಮ್ಮನ್ನು ಹೊರಗೆ ಓಡಿಸುವ ತನಕ ನಮ್ಮಲ್ಲಿನ ಅನೇಕರು ಅಲ್ಲಿ ವ್ಯವಸಾಯ ನಡೆಸುತ್ತಿದ್ದೆವು," ಎನ್ನುತ್ತಾರೆ ಸಂದೀಪ್. "ಈಗ ನಮ್ಮಲ್ಲಿನ ಕೆಲವರು ಭೂಮಿಯ ಹಕ್ಕನ್ನು ಪಡೆದಿದ್ದು, ವಲಸೆ ಹೋಗುವ ಅಗತ್ಯವಿಲ್ಲ."


Man walking
PHOTO • Karishma V.
Man sitting
PHOTO • Karishma V.

ಇಟ್ಟಿಗೆ ಗೂಡುಗಳಲ್ಲಿನ ಕೆಲಸವನ್ನು ತಪ್ಪಿಸಲು, ಸಂದೀಪ್ ಪವಾರ್ (ಎಡಕ್ಕೆ), ಹಳ್ಳಿಯಲ್ಲಿ ಇಟ್ಟಿಗೆ ಗೂಡಿನ ಸಮೂಹವನ್ನು ಪ್ರಾರಂಭಿಸುವ ಸರ್ಕಾರದ ಯೋಜನೆಗೆ ದಾಖಲಾದರೆ, ವಿಷ್ಣು ವಘ್ಮರೆ (ಬಲಕ್ಕೆ), ಹತ್ತಿರದ ಹಳ್ಳಿಗಳಲ್ಲಿನ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗುತ್ತಾರೆ.

2009 ರ ಒಂದು ಋತುವಿನಲ್ಲಿ ಒಮ್ಮೆ ಇಟ್ಟಿಗೆ ಗೂಡಿನಲ್ಲಿ ಕೆಲಸವನ್ನು ನಿರ್ವಹಿಸಿದ್ದ ಸಂದೀಪ್, ಇನ್ನೆಂದಿಗೂ ಹಳ್ಳಿಯನ್ನು ತೊರೆದು ಅಂತಹ ನಿಕೃಷ್ಟ ಸ್ಥಿತಿಯಲ್ಲಿನ ವಾಸಸ್ಥಳಕ್ಕೆ ತೆರಳಬಾರದೆಂದು ನಿರ್ಧರಿಸಿದ. ಆತನ ತಂದೆ ಹರಿ ಪವಾರ್ ಅವರಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ 33 ಗುಂಟೆ (40 ಗುಂಟೆಯು ಒಂದು ಎಕರೆಗೆ ಸಮ) ಭೂಮಿಯು ಮಂಜೂರಾಗಿದ್ದ ಕಾರಣ, ಆತನಿಗೆ ಈ ಆಯ್ಕೆಯು ಸಾಧ್ಯವಾಯಿತು. ಆತನ ಕುಟುಂಬವು ದೊಡ್ಡ ಭೂ ಪ್ರದೇಶದಲ್ಲಿ ಅಕ್ಕಿ, ನಚನಿ, ತರಕಾರಿ ಹಾಗೂ ಹೂಗಳನ್ನು ಬೆಳೆಯುತ್ತಾರಾದರೂ, ಅವರಿಗೆ ಆ ಭೂಮಿಯ ಒಡೆತನವಿಲ್ಲ.

ಆದರೆ ಥನಲೆ ಕತ್ಕರಿವಡಿ ಸಣ್ಣ ಹಳ್ಳಿಯ 65 ಕುಟುಂಬಗಳಲ್ಲಿ ಕೇವಲ ಮೂರು ಕುಟುಂಬಗಳಿಗೆ ಮಾತ್ರವೇ ಅರಣ್ಯ ಹಕ್ಕು ಕಾಯ್ದೆಯ ‘ವ್ಯಕ್ತಿಗತ ಅರಣ್ಯ ಹಕ್ಕುಗಳ’ ವ್ಯಾಪ್ತಿಯಡಿ ಭೂಮಿಯು ದೊರೆತಿದೆ. ಅಗತ್ಯ ಪ್ರಮಾಣ ಪತ್ರಗಳಿಲ್ಲದಿರುವುದು ಹಾಗೂ ಕಾನೂನಿನ ಸೌಲಭ್ಯಗಳನ್ನು ಕುರಿತ ಯಾವುದೇ ತಿಳುವಳಿಕೆಯಿಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ರಾಯ್‍ಗಡ ಜಿಲ್ಲೆಯ ಪೆನ್ ತಾಲ್ಲೂಕಿನ ಸಮಗ್ರ ಆದಿವಾಸಿ ಅಭಿವೃದ್ಧಿ ಯೋಜನೆಯ ಕಛೇರಿಯು ಆದಿವಾಸಿಗಳಿಗಾಗಿ, ಅದರಲ್ಲೂ ವಿಶೇಷವಾಗಿ ಕತ್ಕರಿಯಂತಹ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳಿಗೆಂದು (PVTGs) ಹಣವನ್ನು ವೀಸಲಿರಿಸಿದ್ದು, ಅವರಿಗಾಗಿ ಪ್ರತ್ಯೇಕ ಯೋಜನೆಗಳನ್ನೂ ಹೊಂದಿದೆ. ಸುಣ್ಣದ ಗೂಡಿನ ನಿರ್ಮಾಣಕ್ಕೆಂದು 10 ಜನರ ಗುಂಪಿಗೆ ಶೇ. 100 ರ ಸಬ್ಸಿಡಿಯನ್ನುಳ್ಳ 3 ಲಕ್ಷ ಹಣವನ್ನು ಮೂರು ಹಂತಗಳಲ್ಲಿ ಬಿಡುಗಡೆಗೊಳಿಸುವುದು ಅಂತಹ ಯೋಜನೆಗಳಲ್ಲೊಂದು. "ಭಟ್ಟಿಗಳಲ್ಲಿ ದುಡಿಯಲಿಕ್ಕೆಂದು ಹೊರಗೆ ಹೋಗುವ ಬದಲು, ಈಗ ನಾವು ನಮ್ಮದೇ ಇಟ್ಟಿಗೆಯ ಗೂಡನ್ನು ಹೊಂದಿದ್ದೇವೆ," ಎನ್ನುತ್ತಾನೆ ಸಂದೀಪ್. ಆತ ಹಾಗೂ ಇತರೆ ಒಂಭತ್ತು ಜನರ ಗುಂಪು, ಗೂಡನ್ನು ನಿರ್ವಹಿಸಿ, ಲಾಭವನ್ನು ಹಂಚಿಕೊಳ್ಳುತ್ತದೆ. ಅಂದರೆ, ಕುಟುಂಬವೊಂದಕ್ಕೆ ಸುಮಾರು ಮಾರ್ಚ್‍ನಿಂದ ಅಕ್ಟೋಬರ್‍ವರೆಗಿನ ಎಂಟು ತಿಂಗಳ ಅವಧಿಯ ಕೆಲಸಕ್ಕೆ ಸುಮಾರು 20,000 ರೂ.ಗಳು ಲಭ್ಯವಿದೆ. ಜೂನ್‍ನಿಂದ ಅಕ್ಟೋಬರ್‍ವರೆಗಿನ ಅವಧಿಯಲ್ಲಿ, ಕೆಲವರು ಖಾರಿಫ್ ಋತುವಿನ ಕೃಷಿ ಕೆಲಸವನ್ನು ಪಡೆಯುತ್ತಾರೆ.

ಆದರೆ ಅನೇಕ ಕತ್ಕರಿಗಳಿಗೆ ಭಟ್ಟಿ ಯೋಜನೆ ಬಗ್ಗೆ ತಿಳಿದಿಲ್ಲ. 2018 ರ ಸಂದೀಪ್‍ನ ಯಶಸ್ಸಿನ ನಂತರ, ನಡ್ಸರ್ ಕತ್ಕರಿವಡಿಯ ಎರಡು ಮತ್ತು ತಾಲ್ಲೂಕಿನ ಕತ್ಕರಿ ಸಣ್ಣ ಹಳ್ಳಿಯಿಂದ ಮತ್ತೊಂದು ಅರ್ಜಿಯನ್ನು ಸಲ್ಲಿಸಲಾಗಿದೆ.

ಪ್ರವಾಸೋದ್ಯಮ ಉದ್ಯಮದಿಂದಲೂ ಸಹ ಕೆಲವು ಕೆಲಸಗಳು ಲಭ್ಯವಿದೆ. ಸುಧಗಡ್ ತೆಹ್‍ಸಿಲ್‍ನ ಪಲಿ ಎಂಬ ಊರು ಅಷ್ಟ ವಿನಾಯಕ ಪರಿಕ್ರಮದ ಎಂಟು ಗಣಪತಿಗಳಲ್ಲಿ ಒಂದಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿ ಐತಿಹಾಸಿಕ ಕೋಟೆ ಮತ್ತು ಗುಹೆಗಳಿವೆ. ಈ ಎರಡಕ್ಕೂ ನಡ್ಸರ್ ಪ್ರವೇಶ ಮಾರ್ಗವಾಗಿದೆ. "ತೋಟದ ಮನೆಯ ಮಾಲೀಕರಿಂದ ನಿಯುಕ್ತಿಗೊಂಡ ಕಾರಣ ನಾವು ವಲಸೆ ಹೋಗುವುದಿಲ್ಲ. ಕೂಲಿಯು (ಪುರುಷರಿಗೆ 200 ಹಾಗೂ ಸ್ತ್ರೀಯರಿಗೆ 150 ರೂ.ಗಳು)" ಅಲ್ಪ ಮೊತ್ತದ್ದಾದರೂ ನಾವು ಇಲ್ಲೇ ಹತ್ತಿರದಲ್ಲೇ ವಾಸಿಸಬಹುದು. ನಮಗೆ ಹಣದ ಅವಶ್ಯಕತೆಯಿದ್ದಲ್ಲಿ, ಸ್ವಲ್ಪ ಹಣವು ಮುಂಗಡವಾಗಿಯೂ ದೊರೆಯುತ್ತದೆ," ಎನ್ನುತ್ತಾರೆ, ನಡ್ಸರ್ ಪಂಚಾಯತ್‍ನ ಆದಿವಾಸಿವಾಡಿ ಬಹಿರಂಪಡದ 51 ವರ್ಷ ವಯಸ್ಸಿನ ಭಿವ ಪವಾರ್.

ಹತ್ತಿರದ ಸಣ್ಣ ಹಳ್ಳಿಗಳ ಕತ್ಕರಿಗಳು ದೊಡ್ಡ ಸಂಖ್ಯೆಯಲ್ಲಿ ವಲಸೆಹೋಗುವ ಸಂದರ್ಭದಲ್ಲಿ, ಈ ಸಣ್ಣ ಹಳ್ಳಿಯ 12 ಕುಟುಂಬಗಳು ಇಲ್ಲಿಯೇ ಉಳಿಯುವ ಪ್ರಯತ್ನ ನಡೆಸಿದ್ದಾರೆ. ಅವರಲ್ಲೊಬ್ಬರು "ನಮ್ಮ ವಿವೇಚನೆಗೇ ಬಿಟ್ಟಲ್ಲಿ, ನಾವು ನಮ್ಮ ಹಳ್ಳಿಯನ್ನೆಂದಿಗೂ ತೊರೆಯುವುದಿಲ್ಲ", ಎನ್ನುತ್ತಾರೆ.

ಅನುವಾದ: ಶೈಲಜ ಜಿ. ಪಿ.

Karishma V.

Karishma V. has been working as a Chief Minister’s Rural Development Fellow in Raigad district since April 2017. Her areas of interest are tribal development and women’s empowerment.

Other stories by Karishma V.
Translator : Shailaja G. P.
shailaja1.gp@gmail.com

Shailaja (shailaja1.gp@gmail.com) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.