ಬಜರಂಗ್ ಗಾಯಕ್ವಾಡ್ ಯಾವಾಗ ಐದು ಕೆಜಿ ತೂಕ ಕಳೆದುಕೊಂಡನೋ ಆಗ ಅವರಿಗೆ ಆಗಿರುವ ಹಾನಿ ಮನವರಿಕೆಯಾಯಿತು. “ಇದಕ್ಕೂ ಮೊದಲು ನಾನು ಪ್ರತಿದಿನ ಆರು ಲೀಟರ್ ಎಮ್ಮೆ ಹಾಲು ಕುಡಿಯುತ್ತಿದ್ದೆ, 50 ಬಾದಾಮಿ ತಿನ್ನುತ್ತಿದ್ದೆ, 12 ಬಾಳೆ ಹಣ್ಣು ಮತ್ತು ಎರಡು ಮೊಟ್ಟೆ ತಿನ್ನುತ್ತಿದ್ದೆ, ಜತೆಯಲ್ಲಿ ದಿನಬಿಟ್ಟು ದಿನ ಮಾಂಸ ಸೇವಿಸುತ್ತಿದ್ದೆ,” ಎಂದು ಅವರು ಹೇಳಿದರು. ಈಗ ಅವರು ಒಂದು ದಿನದಲ್ಲಿ ಸೇವಿಸುತ್ತಿದ್ದ ಆಹಾರವನ್ನು ಏಳುದಿನಗಳ ಕಾಲ ಸೇವಿಸುತ್ತಾರೆ ಅಥವಾ ಕೆಲವೊಮ್ಮೆ ಇನ್ನೂ ಹೆಚ್ಚು ಅವಧಿಗೂ ಸೇವಿಸುವುದಿದೆ- ಇದರಿಂದಾಗಿ ಅವರ ತೂಕ 61 ಕೆಜಿಗೆ ಕುಸಿದಿದೆ.
”ಒಬ್ಬ ಕುಸ್ತಿಪಟು ತನ್ನ ತೂಕವನ್ನು ಕಳೆದುಕೊಳ್ಳಬಾರದು.” ಎನ್ನುತ್ತಾರೆ, ಕೊಲಾಪುರ ಜಿಲ್ಲೆಯ ಜುನೇ ಪರಗಣ ಗ್ರಾಮದ 25 ವರ್ಷ ಹರೆಯದ ಬಜರಂಗ್. “ಇದು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ, ಮತ್ತು ಇದರಿಂದಾಗಿ ನೀವು ಹೋರಾಡುವ ವೇಳೆ ಉತ್ತಮ ನಡೆಯನ್ನು ಪ್ರದರ್ಶಿಸಲು ಆಗದು. ನಮ್ಮ ಖುರಾಕ್ (ಆಹಾರ ಕ್ರಮ) ತರಬೇತಿಯಷ್ಟೇ ಪ್ರಮುಖವಾದುದು.”. ಪಶ್ಚಿಮ ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಿಂದ ಬಂದಿರುವ ಇತರ ಕುಸ್ತಿಪಟುಗಳಂತೆ ತನ್ನ ಭರ್ಜರಿ ಭೋಜನಕ್ಕಾಗಿ ಕೆಮ್ಮಣ್ಣು ಕಣದಲ್ಲಿ ಮುಕ್ತ ಕುಸ್ತಿಯಿಂದ -ಮುಕ್ತ ಕುಸ್ತಿ ಸ್ಪರ್ಧೆಗಳಲ್ಲಿ ಸಿಗುವ ನಗದು ಬಹುಮಾನವನ್ನು ಅವಲಂಬಿಸಿರುತ್ತಾರೆ.
ಕೊಲ್ಲಾಪುರದ ಡೊನೋಲಿ ಗ್ರಾಮದಲ್ಲಿ ನಡೆದ ಕುಸ್ತಿಯ ನಂತರ 500 ದಿನಗಳು ಕಳೆದರೂ ಬಜರಂಗ್ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿಲ್ಲ. “ತೀವ್ರವಾಗಿ ಗಾಯಗೊಂಡಾಗಲೂ ನಾನು ಈ ರೀತಿಯಲ್ಲಿ ದೀರ್ಘವಾದ ಬಿಡುವು ತೆಗೆದುಕೊಂಡಿಲ್ಲ,” ಎಂದು ಹೇಳಿದರು.


ಎಡ: 2021ರ ಜುಲೈ ತಿಂಗಳಲ್ಲಿ ನೆರೆಗೆ ತುತ್ತಾದ ತಮ್ಮ ಮನೆಯಲ್ಲಿ ಬಜರಂಗ್ ಹಾಗೂ ಅವರ ತಾಯಿ ಪುಷ್ಪಾ ಗಾಯಕ್ವಾಡ್. ಬಲ: ಮಳೆಯಿಂದ ಹಾನಿಗೊಳಗಾದ ತಾಲೀಮಿನ ಸ್ಥಳವನ್ನು ವೀಕ್ಷಿಸುತ್ತಿರುವ ಕೋಚ್ ಮಾರುತಿ ಮಾನೆ. ಲಾಕ್ಡೌನ್ನಿಂದಾಗಿ ಒಂದು ವರ್ಷ ನಿಂತು ಹೋಗಿದ್ದ ಕುಸ್ತಿಗೆ ಮತ್ತೆ ನೆರೆ ಹಾವಳಿ
2020ರ ಮಾರ್ಚ್ನಿಂದ ಕುಸ್ತಿಗಳು ಸ್ಥಗಿತಗೊಂಡಿವೆ, ಲಾಕ್ಡೌನ್ ತೆರವಾದ ನಂತರ ಮಹಾರಾಷ್ಟ್ರದಾದ್ಯಂತ ಜಾತ್ರೆ (ಹಬ್ಬ)ಗಳು ಆರಂಭಗೊಂಡಿತು, ಈ ಸಂದರ್ಭದಲ್ಲಿ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದವು, ಆದರೆ ನಿಷೇಧ ಮುಂದುವರಿದು ಈಗಲೂ ಸ್ಪರ್ಧೆ ನಡೆಸಲು ಆಸಾಧ್ಯವಾಗಿದೆ.
ಕೊವಿಡ್19 ಮಹಾಮಾರಿ ಆರಂಭಗೊಳ್ಳುವುದಕ್ಕೆ ಮುನ್ನ ಬಜರಂಗ್ ಪಶ್ಷಿಮ ಮಹಾರಾಷ್ಟ್ರದ ಗ್ರಾಮಗಳಲ್ಲಿ ನಡೆಯುವ ವಿವಿಧ ಕುಸ್ತಿ ಸ್ಪರ್ಧೆಗಳು ಮತ್ತು ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 1,50,000 ರೂ. ಬಹುಮಾನವನ್ನು ಗಳಿಸಿದ್ದರು. ಅದು ಅವರ ವರ್ಷದ ಆದಾಯವಾಗಿತ್ತು. “ಒಬ್ಬ ಉತ್ತಮ ಕುಸ್ತಿಪಟು ವರ್ಷದಲ್ಲಿ ಕನಿಷ್ಟ 150 ಪಂದ್ಯಗಳಲ್ಲಿ ಭಾಗವಹಿಸಬಹುದು,” ಎಂದು ಅವರು ಹೇಳಿದರು. ಅಕ್ಟೋಬರ್ ಕೊನೆಯಲ್ಲಿ ಆರಂಭಗೊಂಡ ಕುಸ್ತಿ ಋತು ಏಪ್ರಿಲ್-ಮೇ ವರೆಗೂ ನಡೆಯುತ್ತಿತ್ತು. (ಮಳೆಗಾಲ ಆರಂಭವಾಗುವುದಕ್ಕೆ ಮುನ್ನ). “ಒಂದು ಋತುವಿನಲ್ಲಿ ಹವ್ಯಾಸಿ ಕುಸ್ತಿಪಟುಗಳು 50,000 ರೂ. ಗಳಿಸಬಹುದು, ಹಿರಿಯ ಕುಸ್ತಿಪಟುಗಳು 20 ಲಕ್ಷ ರೂ. ವರೆಗೂ ಸಂಪಾದಿಸಬಹುದು,” ಎಂದು ಬಜರಂಗ್ ಅವರ ಕೋಚ್ 51 ವರ್ಷ ಪ್ರಾಯದ ಮಾರುತಿ ಮಾನೆ ಹೇಳಿದರು.
ಲಾಕ್ಡೌನ್ಗಿಂತ ಮುಂಚೆ ಅಂದರೆ 2109ರಲ್ಲಿ ಪಶ್ಚಿಮ ಮಹಾರಾಷ್ಟ್ರ ಹಾಗೂ ಕೊಂಕಣ ಭಾಗದಲ್ಲಿ ನೆರೆ ಹಾವಳಿಯಿಂದಾಗಿ ಹತ್ಕಾನಂಗ್ಲೆ ತಾಲೂಕಿನ ಜುನೇ ಪರಗಾಂವ್ ಭಾಗದಲ್ಲಿ ಬಜರಂಗ್ ಹಾಗೂ ಇತರ ಪೈಲ್ವಾನರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಮೂರು ದಿನಗಳ ಕಾಲ ಸುರಿದ ಮಳೆಯಿಂದಾಗಿ ವರಣಾ ನದಿಯ ಉತ್ತರ ಭಾಗದ ದಡದಲ್ಲಿದ್ದ ಜುನೇ (ಹಳೆಯ) ಪರಗಣ ಮತ್ತು ಅದಕ್ಕೆ ಹೊಂದಿಕೊಂಡಿರುವ ಪರಗಣಗಳು ಮುಳುಗಿಹೋಗಿದ್ದವು. ಎರಡು ಗ್ರಾಮಗಳ ಒಟ್ಟು ಜನಸಂಖ್ಯೆ 13130 (2011ರ ಜನಗಣತಿ ಪ್ರಕಾರ)


ಲಾಕ್ಡೌನ್ನ ನಿರ್ಬಂಧಗಳಿಂದಾಗಿ ಮಹಾರಾಷ್ಟ್ರದಾದ್ಯಂತ ತಾಲೀಮುಗಳು ಮತ್ತು ಅಖಾಡಗಳು ಮುಚ್ಚಲ್ಪಟ್ಟಿವೆ. ಇದು ಪೈಲ್ವಾನರ ಅಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಭ್ಯಾಸ ಮತ್ತು ಸ್ಪರ್ಧೆ ಇವುಗಳ ನಡುವೆ ಬಹಳ ಅಂತರ ನಿರ್ಮಾಣವಾದ ಪರಿಣಾಮ ಅನೇಕ ಕುಸ್ತಿಪಟುಗಳು ಬೇರೆ ಕೆಲಸಗಳನ್ನು ನೋಡುತ್ತಿದ್ದಾರೆ
ಕೋಚ್ ಮಾರುತಿ ಮಾನೆ ಅವರು ಅಂದಾಜಿಸಿರುವ ಪ್ರಕಾರ ಶತಮಾನದಷ್ಟು ಹಳೆಯದಾದ ಜುನೇ ಪರಗಣದಲ್ಲಿರುವ ಜೈ ಹನುಮಾನ್ ತಾಲೀಮು ಕೂಡ ನೆರೆಯಿಂದಾಗಿ ಮುಳುಗಿತ್ತು. ಇಲ್ಲಿನ ಮತ್ತು ಪಕ್ಕದ ಹಳ್ಳಿಯ 50ಕ್ಕೂ ಹೆಚ್ಚು ಕುಸ್ತಿಪಟುಗಳ ನೆರವಿನಿಂದ ದೂರದ ಸಾಂಗ್ಲಿ ಜಿಲ್ಲೆಯಿಂದ 27,000 ಕೆಜಿ ಕೆಂಪು ಮಣ್ಣನ್ನು ಲಾರಿಯಲ್ಲಿ ತಂದು 23 x 20 ಅಡಿ ವಿಸ್ತೀರ್ಣದ ತರಬೇತಿ ಸಭಾಂಗಣವನ್ನು ಪುನರ್ ನಿರ್ಮಾಣ ಮತ್ತು ಐದು ಅಡಿ ಆಳದ ಕುಸ್ತಿಯ ಕಣವನ್ನು ನಿರ್ಮಿಸಲಾಯಿತು. ಇದನ್ನು ನಿರ್ಮಿಸಲು 50,000 ರೂ. ವೆಚ್ಚವಾಯಿತು.
ಆದಾಗ್ಯೂ, ಲಾಕ್ಡೌನ್ ನಿರ್ಬಂಧಗಳಿಂದಾಗಿ ಮಹಾರಾಷ್ಟ್ರದಾದ್ಯಂತ ತಾಲೀಮು ಅಥವಾ ಅಖಾಡಗಳು ಕೂಡ ಮುಚ್ಚಲ್ಪಟ್ಟವು. ಇದು ಬಜರಂಗ್ ಸೇರಿಂದತೆ ಇತರ ಕುಸ್ತಿಪಟುಗಳ ತರಬೇತಿಯ ಮೇಲೆ ಪರಿಣಾಮ ಬೀರಿತು. ಅಭ್ಯಾಸ ಮತ್ತು ಸ್ಪರ್ಧೆ ಇವುಗಳ ನಡುವಿನ ಅಂತರ ಹೆಚ್ಚಾದಂತೆ ಅನೇಕ ಕುಸ್ತಿಪಟುಗಳು ಕುಸ್ತಿಯನ್ನು ತೊರೆದು ಬೇರೆ ಕೆಲಸದ ಕಡೆಗೆ ಹೋಗುವಂತಾಯಿತು.
2021ರ ಜೂನ್ ತಿಂಗಳಲ್ಲಿ ಬಜರಂಗ್ ಕೂಡ ತನ್ನ ಮನೆಯಿಂದ 20 ಕಿ.ಮೀ. ದೂರದಲ್ಲಿರುವ ಅಟೋಮೊಬೈಬಲ್ ಬಿಡಿ ಭಾಗಗಳ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ಸೇರಿಕೊಂಡರು. “ತಿಂಗಳಿಗೆ 10,000 ರೂ. ಗಳಿಸುತ್ತೇನೆ, ಅದರಲ್ಲಿ 7,000 ರೂ. ಆಹಾರಕ್ಕೇ ಬೇಕಾಗುತ್ತದೆ,” ಎಂದು ಹೇಳಿದರು. ಇವರ ಕೋಚ್ ಮಾರುತಿ ಮಾನೆ ಹೇಳುವ ಪ್ರಕಾರ ಅಗ್ರ ಕ್ರಮಾಂಕದ ಕುಸ್ತಿಪಟುಗಳಿಗೆ ದಿನಕ್ಕೆ 1,000 ರೂ. ಆಹಾರಕ್ಕೇ ಬೇಕಾಗುತ್ತದೆ. ಆದರೆ ಇದನ್ನು ಕಾಯ್ದುಕೊಳ್ಳಲಾಗದ ಬಜರಂಗ್, 2020ರ ಆಗಸ್ಟ್ನಲ್ಲಿ ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿದರು-ಮತ್ತು ಇದರಿಂದಾಗಿ ತೂಕ ಕಳೆದುಕೊಂಡ.
'ಯಾವುದೇ ಕುಸ್ತಿಪಟು ಕನಿಷ್ಠ ಎರಡು ತಿಂಗಳ ಕಾಲವೂ ಅಭ್ಯಾಸ ಮಾಡುತ್ತಿಲ್ಲ,' ಎಂದಿರುವ ಕೋಚ್ ಮಾನೆ, 'ಮೊದಲು ಇಲ್ಲಿರುವ ಮಣ್ಣು [ಹಸಿಮಣ್ಣು] ಒಂದು ತಿಂಗಳ ಕಾಲ ಒಣಗಬೇಕು'
ಕೃಷಿ ಕೂಲಿಯಾಗಿದ್ದ ತಂದೆ 2013ರಲ್ಲಿ ತೀರಿಕೊಂಡ ನಂತರ ಬಜರಂಗ್ ವಿವಿಧ ರೀತಿಯ ಉದ್ಯೋಗವನ್ನು ಮಾಡಿದರು. ಕೆಲ ಸಮಯ ಅವರು ಸ್ಥಳೀಯ ಹಾಲು ಸಹಕಾರಿ ಸಂಘದಲ್ಲಿ ದಿನಕ್ಕೆ 150 ರೂ. ವೇತನಕ್ಕೆ ಅಪಾರ ಪ್ರಮಾಣದ ಹಾಲನ್ನು ಪ್ಯಾಕ್ ಮಾಡುವ ಕೆಲಸವನ್ನೂ ಮಾಡಿದರು,
ಅವರ ತಾಯಿ 50 ವರ್ಷದ ಪುಷ್ಪ ಅಖಾಡದ ಪ್ರಯಾಣದಲ್ಲಿ ನೆರವಾಗುತ್ತಾರೆ- 12 ವರ್ಷ ವಯಸ್ಸಿನಲ್ಲೇ ಬಜರಂಗ್ ಸ್ಥಳೀಯ ಕುಸ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. “ಕೃಷಿ ಕೂಲಿಯಾಳಾಗಿ ಕೆಲಸ ಮಾಡಿ ಆತನನ್ನು ಕುಸ್ತಿಪಟುವನ್ನಾಗಿ ಮಾಡಿದೆ,[ದಿನಕ್ಕೆ ಆರು ಗಂಟೆ ಕೆಲಸ ಮಾಡಿದರೆ 100ರೂ, ಗಳಿಕೆ] ಆದರೆ ಈಗ ಬಹಳ ಕಷ್ಟವಾಗುತ್ತಿದೆ, ಕೆಲಸವಿಲ್ಲ, ಏಕೆಂದರೆ ಮತ್ತೆ ಮತ್ತೆ ನೆರೆಯಾಗುತ್ತಿದೆ,” ಎಂದು ಪುಷ್ಪಾ ಹೇಳಿದರು.
ಬಜರಂಗ್ ಅವರು ಕೂಲಿಯಾಗಿ ಮಾಡುತ್ತಿರುವ ಹೊಸ ಕೆಲಸ ಬೆನ್ನು ಮೂಳೆ ಮುರಿದಷ್ಟು ಕಠಿಣ. ಕಡ್ಡಾಯವಾಗಿ ಮಾಡಬೇಕಾಗಿದ್ದ ಅಭ್ಯಾಸದ ಸಮಯವನ್ನೂ ಈ ಕೆಲಸ ನುಂಗಿಹಾಕುತ್ತದೆ. “ಅಭ್ಯಾಸಕ್ಕೆ ಹೊಗಬಾರದು ಎಂದು ಅನಿಸಿದ ದಿನಗಳೂ ಇದ್ದವು,” ಎನ್ನುತ್ತಾರೆ ಬಜರಂಗ್. ಮಾರ್ಚ್ 2020 ರಿಂದ ಕುಸ್ತಿ ಅಖಾಡಗಳು ಮುಚ್ಚುಗಡೆಯಾಗಿದ್ದರೂ ಕೆಲವು ಕುಸ್ತಿಪಟುಗಳು ಒಳಗಿನಿಂದಲೇ ಅಭ್ಯಾಸ ಮಾಡುತ್ತಿದ್ದಾರೆ.

2020ರ ಮಾರ್ಚ್ನಿಂದ ಜುನೇ ಪರಗಾಂವ್ ಗ್ರಾಮದಲ್ಲಿರುವ ಕುಸ್ತಿಕಣಗಳು ಮುಚ್ಚಿದ್ದರೂ, ಕೆಲವು ಕುಸ್ತಿಪಟುಗಳು ಕುಸ್ತಿ ಕೇಂದ್ರದ ಒಳಗೆ ಅಭ್ಯಾಸ ಮಾಡುತ್ತಿದ್ದಾರೆ. ಅವರು ಕುಸ್ತಿಯ ವೇಳೆ ಉತ್ತಮ ಹಿಡಿತಕ್ಕಾಗಿ ಮೈಯನ್ನು ಕೆಂಪು ಮಣ್ಣಿನಿಂದ ಮುಚ್ಚಿಕೊಳ್ಳುತ್ತಾರೆ
ಕುಸ್ತಿಯ ಅಖಾಡವನ್ನು ಒಂದು ವರ್ಷದ ಪರ್ಯಂತ ಅಲ್ಪ ಪ್ರಮಾಣದಲ್ಲಿ ಬಳಸಿದ ನಂತರ 2021 ಮೇ ತಿಂಗಳಲ್ಲಿ ಕುಸ್ತಿಪಟುಗಳು ಅಖಾಡವನ್ನು ಪುನರ್ ನಿರ್ಮಾಣ ಮಾಡುವ ಸಿದ್ಧತೆಯಲ್ಲಿ ತೊಡಗಿದರು. 520 ಲೀಟರ್ ಎಮ್ಮೆ ಹಾಲು, 300 ಕೆ.ಜಿ. ಅರಶಿನ ಹುಡಿ, 15ಕೆಜಿ ಹುಡಿಮಾಡಿದ ಕರ್ಪೂರ, ಸುಮಾರು 2,500 ಲಿಂಬೆ ಹಣ್ಣಿನ ರಸ, 150 ಕೆಜಿ ಉಪ್ಪು, 180 ಲೀಟರ್ ಅಡುಗೆ ಎಣ್ಣೆ, 50 ಲೀಟರ್ ಬೇವು ನೆನೆದ ನೀರು ಇವುಗಳನ್ನು ಕೆಂಪು ಮಣ್ಣಿಗೆ ಸೇರಿಸಲಾಯಿತು. ಈ ರೀತಿ ಮಾಡಿದ ಮಿಶ್ರಣವು ಕುಸ್ತಿಪಟುಗಳನ್ನು ಸೋಂಕು, ಮುರಿತ ಹಾಗೂ ಪ್ರಮುಖ ಗಾಯಗಳಿಂದ ರಕ್ಷಣೆ ಮಾಡುತ್ತದೆ ಎಂಬ ನಂಬಲಾಗಿದೆ. ಇದಕ್ಕೆ ತಗಲಿದ 1,00,000 ರೂ.ಗಳನ್ನು ಕುಸ್ತಿಪಟುಗಳು ಮತ್ತು ಈ ಕ್ರೀಡೆಗೆ ಪ್ರೋತ್ಸಾಹ ನೀಡುವವರು ಭರಿಸಿರುತ್ತಾರೆ.
ಇದಾಗಿ ಎರಡು ತಿಂಗಳ ಕಳೆದಿಲ್ಲ, ಜುಲೈ 23ರಂದು ಮಳೆ ಮತ್ತು ನೆರೆಯ ನೀರಿನಿಂದ ಊರು ಮತ್ತೆ ಮುಳುಗಿತು. “2109ರಲ್ಲಿ ಕುಸ್ತಿ ಕೇಂದ್ರದ ಒಳಗಡೆ ನೀರು 10 ಅಡಿ ವರೆಗೆ ಇದ್ದಿತ್ತು, ಆದರೆ, 2021ರಲ್ಲಿ 14 ಅಡಿಗಳ ಗಡಿ ದಾಟಿತು,” ಎನ್ನುತ್ತಾರೆ ಬಜರಂಗ್. “ನಮಗೆ [ಮತ್ತೆ] ಹಣ ನೀಡಲು ಅಸಾಧ್ಯ. ಆದ್ದರಿಂದ ನಾನು ಪಂಚಾಯಿತಿಯನ್ನು ಸಂಪರ್ಕಿಸಿದೆ, ಆದರೆ ಯಾರೂ ನೆರವಿಗೆ ಮುಂದೆ ಬರಲಿಲ್ಲ,”
“ಎರಡು ತಿಂಗಳ ಅವಧಿಗೆ ಯಾವುದೇ ಕುಸ್ತಿಪಟುವಿಗೂ ತರಬೇತಿ ಪಡೆಯಲು ಆಗುವುದಿಲ್ಲ,” ಎನ್ನುತ್ತಾರೆ ಕೋಚ್ ಮಾನೆ, “ಮೊದಲು ಎಲ್ಲ ಮಣ್ಣು [ಹಸಿ ಮಣ್ಣ] ಒಂದು ತಿಂಗಳ ಕಾಲ ಒಣಗಬೇಕು. ಆ ನಂತರ ಅವರು ಹೊಸ ಮಣ್ಣನ್ನು ಖರೀದಿಸಬೇಕು,”

ಜುನೇ ಪರಗಾಂವ್ನ ಕುಸ್ತಿಪಟುವೊಬ್ಬರು ವ್ಯಾಯಾಮದ ಒಂದು ಭಾಗವಾಗಿರುವ ಹಗ್ಗ ಏರುವುದರಲ್ಲಿ ನಿರತರಾಗಿರುವುದು. “ನೀವು ಒಂದು ದಿನ ತರಬೇತಿಯನ್ನು ತಪ್ಪಿಸಿಕೊಂಡರೂ, ಎಂಟು ದಿನ ಹಿಂದೆ ಉಳಿಯುತ್ತೀರಿ,” ಎನ್ನುತ್ತಾರೆ ಸಚಿನ್ ಪಾಟೀಲ್
ಈ ಬಾರಿ ಅಂತರವು ಮತ್ತಷ್ಟು ನೇರ ಪರಿಣಾಮ ಬೀರಿದೆ. “ಒಂದು ವೇಳೆ ನೀವು ಒಂದು ದಿನದ ತರಬೇತಿಯಿಂದ ವಂಚಿತರಾದರೂ ಎಂಟು ದಿನಗಳ ಹಿನ್ನಡೆ ಕಾಣುತ್ತೀರಿ,” ಎಂದು ಪ್ರತಿಷ್ಠಿತ ಕೇಸರಿ ಕುಸ್ತಿಯಲ್ಲಿ ಸ್ಪರ್ಧಿಸಿದ್ದ 29 ವರ್ಷದ ಸಚಿನ್ ಪಾಟೀಲ್ ಹೇಳುತ್ತಾರೆ. ಸಾಮಾನ್ಯವಾಗಿ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಕುಸ್ತಿ ಸಂಸ್ಥೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಟೂರ್ನಿಯನ್ನು ಆಯೋಜಿಸುತ್ತಿತ್ತು. 2020ರ ಫೆಬ್ರವರಿ ತಿಂಗಳಲ್ಲಿ ಅವರು ಹರಿಯಾಣದಲ್ಲಿ ನಡೆದ ಏಳು ಸ್ಪರ್ಧೆಗಳನ್ನು ಗೆದ್ದಿದ್ದರು. “ಅದೊಂದು ಉತ್ತಮ ಋತುವಾಗಿತ್ತು, ನಾನು 25.000 ರೂ. ಗಳಿಸಿದೆ,” ಎಂದು ಅವರು ಹೇಳಿದರು.
ಸಚಿನ್ ನಾಲ್ಕು ವರ್ಷಗಳ ಕಾಲ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಿದ್ದರು, ಗದ್ದೆಗಳಲ್ಲಿ ರಾಸಾಯನಿಕ ಗೊಬ್ಬರವನ್ನು ಸಿಂಪಡಿಸುವ ಕೆಲಸದಲ್ಲಿ ತೊಡಗಿ, ಅವರು ತಿಂಗಳಿಗೆ 6,000 ರೂ. ಗಳಿಸುತ್ತಿದ್ದರು. ಸ್ವಲ್ಪ ಅವಧಿಗೆ ಅವರಿಗೆ ಕೊಲ್ಲಾಪುರ ಜಿಲ್ಲೆಯಲ್ಲಿರುವ ವರಣಾ ಸಕ್ಕರೆ ಸಹಕಾರಿ ಸಂಘದಿಂದ ತಿಂಗಳಿಗೆ 1,000 ರೂ. ಪ್ರತಿದಿನ ಒಂದು ಲೀಟರ್ ಹಾಲು ಮತ್ತು ಉಳಿದುಕೊಳ್ಳುವುದಕ್ಕೆ ಅವಕಾಶದ ನೆರವು ಸಿಗುತ್ತಿತ್ತು. (ಆಗ ಉತ್ತಮ ಸಾಧನೆ ಮಾಡಿದ ದಾಖಲೆಯನ್ನು ಹೊಂದಿರುವ ಯುವ ಕುಸ್ತಿಪಟುಗಳಿಗೆ ರಾಜ್ಯ ಸರಕಾರದ ಸಕ್ಕರೆ ಕಾರ್ಖಾನೆ ಮತ್ತು ಹಾಲು ಸಹಕಾರಿ ಸಂಘಗಳಿಂದ ಸಹಾಯ ದೊರೆಯುತ್ತಿತ್ತು. 2014 ರಿಂದ 2017ರ ಅವಧಿಯಲ್ಲಿ ಬಜರಂಗ್ ನೆರವನ್ನು ಪಡೆದಿದ್ದರು,)
2020 ಮಾರ್ಚ್ಗೆ ಮೊದಲು ಅವರು ಬೆಳಿಗ್ಗೆ 4:30ರಿಂದ ಬೆಳಿಗ್ಗೆ 9ರವರೆಗೆ ಅಭ್ಯಾಸ ನಡೆಸುತ್ತಿದ್ದರು, ನಂತರ ಸಂಜೆ 5:30ಕ್ಕೆ ಮತ್ತೆ ಅಭ್ಯಾಸ ಮುಂದುವರಿಯುತ್ತಿತ್ತು. “ಆದರೆ ಅವರಿಗೆ ಲಾಕ್ಡೌನ್ ಸಂದರ್ಭದಲ್ಲಿ ಅಭ್ಯಾಸ ಮಾಡಲಾಗಲಿಲ್ಲ. ಅದರ ಪರಿಣಾಮ ಈಗ ತೋರುತ್ತಿದೆ.,” ಎನ್ನುತ್ತಾರೆ ಕೋಚ್ ಮಾನೆ. ಕುಸ್ತಿಪಟುಗಳ ಮತ್ತೆ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾದರೆ ಕನಿಷ್ಠ ನಾಲ್ಕು ತಿಂಗಳ ಕಾಲ ಕಠಿಣ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಅಂದಾಜಿಸಿದ್ದಾರೆ. ಎರಡು ವರ್ಷಗಳ ಅಂತರದಲ್ಲಿ ಎರಡು ನೆರೆ ಮತ್ತು ಕೋವಿಡ್ ಕಾರಣದಿಂದಾಗಿ ತನ್ನ ಕುಸ್ತಿಯ ಉತ್ತಮ ಕಾಲ ಕಳೆದು ಹೋಯಿತೆಂಬ ಆತಂಕವನ್ನು ಸಚಿನ್ ವ್ಯಕ್ತಪಡಿದ್ದಾರೆ.

ಈ ಎಲ್ಲ ಹಿನ್ನಡೆಗಳಿಂದಾಗಿ ಒಂದು ಕಾಲದಲ್ಲಿ ಜನಪ್ರಿಯ ಕ್ರೀಡೆಯಾಗಿದ್ದ ಕುಸ್ತಿ, ಈಗಾಗಲೇ ಕುಸಿದಿದ್ದು, ಮತ್ತೆ ಗಂಭೀರ ಅವನತಿಯತ್ತ ಹೆಜ್ಜೆ ಹಾಕಿದೆ
“20 ರಿಂದ 25ರ ಅವಧಿಯಲ್ಲಿ ನೀವು ಉತ್ತಮವಾಗಿ ಪ್ರದರ್ಶನ ನೀಡಬಲ್ಲಿರಿ. ಆ ನಂತರ ಕುಸ್ತಿಯಲ್ಲಿ ಮುಂದುವರಿಯುವುದು ಕಷ್ಟ,” ಎಂದು ಮಾನೆ ವಿವರಿಸಿದರು. ಅವರು ಕೂಡ 20 ವರ್ಷಗಳ ಕಾಲ ಕುಸ್ತಿಯಲ್ಲಿ ತೊಡಗಿಕೊಂಡು, ಈಗ ಕಳೆದ ಎರಡು ದಶಕಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದಾರೆ. “ಗ್ರಾಮೀಣ ಪ್ರದೇಶದ ಕುಸ್ತಿಪಟುಗಳ ಬದುಕು ಸಂಕಷ್ಟ ಮತ್ತು ನೋವಿನಿಂದ ತುಂಬಿದೆ, ಕೆಲವು ಉತ್ತಮ ಕುಸ್ತಿಪಟುಗಳು ಕೂಡ ಕೂಲಿಗಳಾಗಿ ದುಡಿಯುತ್ತಿದ್ದಾರೆ,” ಎಂದರು.
ಸರಣಿಯಾಗಿ ಬಂದ ಹಿನ್ನಡೆಯಿಂದಾಗಿ ಒಂದು ಕಾಲದಲ್ಲಿ ಜನಪ್ರಿಯ ಕ್ರೀಡೆಯಾಗಿದ್ದ ಕುಸ್ತಿ ಈಗಾಗಲೇ ಕುಸಿತ ಕಂಡಿದ್ದು, ಈಗ ಅವನತಿಯ ಗಂಭೀರತೆಯಲ್ಲಿದೆ. ಮಹಾರಷ್ಟ್ರದಲ್ಲಿ ಮುಕ್ತ ಕುಸ್ತಿ ಸ್ಪರ್ಧೆಯನ್ನು ಜನಪ್ರಿಯಗೊಳಿಸಿದ್ದು, ದೊರೆ ಮತ್ತು ಸಾಮಾಜಿಕ ಸುಧಾರಕ ಸಾಹು ಮಹಾರಾಜ (1890ರ ಕೊನೆಯಲ್ಲಿ ಆರಂಭಿಸಿದ್ದು). ಅಫಘಾನಿಸ್ತಾನ, ಇರಾನ್, ಪಾಕಿಸ್ತಾನ, ಟರ್ಕಿ ಮತ್ತು ಕೆಲವು ಆಫ್ರಿಕ ದೇಶದ ಕುಸ್ತಿಪಟುಗಳಿಗೆ ಗ್ರಾಮಗಳಲ್ಲಿ ಸಾಕಷ್ಟು ಬೇಡಿಕೆ ಇದ್ದಿತ್ತು. ( ನೋಡಿ ಕುಸ್ತಿ: ಜಾತ್ಯತೀತ ಮತ್ತು ಸಮನ್ವಯ )
“ದಶಕದ ಹಿಂದೆ ಜುನೇ ಪರಗಾಂವ್ನಲ್ಲಿ ಕನಿಷ್ಠ 100 ಕುಸ್ತಿಪಟುಗಳು ಇರುತ್ತಿದ್ದರು. ಈಗ ಅದು 55ಕ್ಕೆ ಕುಸಿದಿದೆ. ಜನರಲ್ಲಿ ತರಬೇತಿ ಪಡೆಯಲು ಹಣವಿಲ್ಲ,” ಎನ್ನುತ್ತಾರೆ ಮಾನೆ. ದಾಂಗರ್ ಸಮುದಾಯಕ್ಕೆ ಸೇರಿದ ಮಾನೆ ಅವರು ಮಾನೆ ಕುಟುಂಬದ ಎರಡನೇ ಪೀಳಿಗೆಯ ಕುಸ್ತಿಪಟು. ಘುನಾಕಿ, ಕಿನಿ, ನೀಲೆವಾಡಿ ಮತ್ತು ಪರಗಣ ಹಾಗೂ ಜುನೇ ಪರಗಾಂವ್ನ ವಿದ್ಯಾರ್ಥಿಗಳಿಗೆ ಅವರು ಶುಲ್ಕವಿಲ್ಲದೆ ಕುಸ್ತಿ ತರಬೇತಿ ನೀಡುತ್ತಿದ್ದಾರೆ.
!['This year [2021], the floods were worse than 2019' says Bajrang, and the water once again caused widespread destruction in Juney Pargaon village](/media/images/08a-IMG_7144-SJ-In_Kolhapur-_wrestlers_die.max-1400x1120.jpg)
!['This year [2021], the floods were worse than 2019' says Bajrang, and the water once again caused widespread destruction in Juney Pargaon village](/media/images/08b-IMG_7246-SJ-In_Kolhapur-_wrestlers_die.max-1400x1120.jpg)
“ಈ ವರ್ಷ [2021] 2019ರ ನೆರೆಗಿಂತ ಕೆಟ್ಟದಾಗಿತ್ತು.,” ಎನ್ನುತ್ತಾರೆ ಬಜರಂಗ್, ಜುನೇ ಪರಗಣ ಗ್ರಾಮದಲ್ಲಿ ನೀರು ಅಪಾರವಾದ ಹಾನಿಯನ್ನುಂಟುಮಾಡಿತು
ಅವರ ಕುಸ್ತಿ ಟ್ರೋಫಿಗಳು ಕುಸ್ತಿ ಮನೆಯ ಎತ್ತರದ ಕಪಾಟನ್ನು ಅಲಂಕರಿಸಿದ್ದರಿಂದ ಅವು ನೆರೆಯ ನೀರಿನಿಂದ ಸುರಕ್ಷಿತವಾಗಿದ್ದವು. ಆ ಮಹಾಪೂರದ ಬಗ್ಗೆ ಮಾತನಾಡಿದ ಅವರು, “ಜುಲೈ 23 (2021) ನಾವು ರಾತ್ರಿ 2 ಗಂಟೆಗೆ ಮನೆಯನ್ನು ತೊರೆದು ಹತ್ತಿರದ ಹೊಲವನ್ನು ಸೇರಿಕೊಂಡೆವು. ನೀರು ಅತ್ಯಂತ ವೇಗದಲ್ಲಿ ಏರಲಾರಂಭಿಸಿತು, ಒಂದು ದಿನದಲ್ಲೇ ಇಡೀ ಊರು ಮುಳುಗಿತು,” ಮಾನೆ ಅವರ ಕುಟುಂಬ ಆರು ಮೇಕೆ ಮತ್ತು ಒಂದು ಎಮ್ಮೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು, ಆದರೆ 25 ಹೇಂಟೆಗಳನ್ನು ಕಳೆದುಕೊಳ್ಳಬೇಕಾಯಿತು. ಜುಲೈ 28ರಂದು ಪ್ರವಾಹದ ನೀರು ಇಳಿಮುಖವಾಗುತ್ತಿದ್ದಂತೆ ಮಾನೆ ಅವರು ಇತರ 20 ಕುಸ್ತಿಪಟುಗಳೊಂದಿಗೆ ಕುಸ್ತಿ ತರಬೇತಿ ಕೇಂದ್ರಕ್ಕೆ ತೆರಳಿದಾಗ ಎಲ್ಲವೂ ನಾಶವಾಗಿರುವುದು ಗಮನಕ್ಕೆ ಬಂತು.
ಯುವ ಪೀಳಿಗೆಯ ಕುಸ್ತಿಪಟುಗಳ ಮೇಲೆ ಇದು ಕೆಟ್ಟ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಅವರು ಚಿಂತಿತರಾಗಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ [2018-19] ಸಾಂಗ್ಲಿ ಜಿಲ್ಲೆಯ 20ವರ್ಷದ ಕುಸ್ತಿಪಟು ಮಯೂರ್ ಬಗಾಡಿ 10ಕ್ಕೂ ಹೆಚ್ಚು ಕುಸ್ತಿ ಸ್ಪರ್ಧೆಗಳನ್ನು ಗೆದ್ದಿದ್ದಾರೆ. “ನಾನು ಹೆಚ್ಚು ಕಲಿಯುವುದಕ್ಕೆ ಮತ್ತು ಹೆಚ್ಚಿನ ಪ್ರವಾಸ ಮಾಡುವುದಕ್ಕೆ ಮುನ್ನ ಲಾಕ್ಡೌನ್ ಎಲ್ಲವನ್ನೂ ಕಸಿದುಕೊಂಡಿತು,” ಎಂದು ಅವರು ಹೇಳಿದರು. ಅಲ್ಲಿಂದ ಅವರು ಮನೆಯಲ್ಲಿ ಸಾಕಿರುವ ಎರಡು ಎಮ್ಮೆಗಳಿಂದ ಹಾಲು ತೆಗೆಯುವುದು ಮತ್ತು ಕೃಷಿ ಭೂಮಿಯಲ್ಲಿ ಕುಟುಂಬಕ್ಕೆ ನೆರವಾಗು ಕೆಲಸವನ್ನು ಮಾಡುತ್ತಿದ್ದಾರೆ.
2020 ಫೆಬ್ರವರಿಯಲ್ಲಿ ಘುನಾಕಿ ಗ್ರಾಮದಲ್ಲಿ ನಡೆದ ಕೊನೆಯ ಸ್ಪರ್ಧೆಯಲ್ಲಿ ಅವರು 2,000ರೂ, ಗೆದ್ದಿದ್ದರು. “ಗೆದ್ದವರು ಬಹುಮಾನದ ಮೊತ್ತದಲ್ಲಿ ಶೇ,80ರಷ್ಟನ್ನು ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ರನ್ನರ್ ಅಪ್ ಶೇ.20 ಭಾಗ,” ಎಂದು ಸಚಿನ್ ಪಾಟೀಲ್ ವಿವರಿಸಿದರು. ಈ ರೀತಿಯಲ್ಲಿ ಪ್ರತಿಯೊಂದು ಸ್ಪರ್ಧೆಯು ಒಂದಿಷ್ಟು ಆದಾಯವನ್ನು ತರುತ್ತಿತ್ತು.
ಇತ್ತೀಚಿನ ಪ್ರವಾಹಕ್ಕೆ ಮುನ್ನ ಮಯೂರ್ ಮತ್ತು ಹತ್ತಿರದ ನೀಲೆವಾಡಿ ಗ್ರಾಮದ ಇತರ ಮೂವರು ಕುಸ್ತಿಪಟುಗಳು ಆಗಾಗ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಜುನೇ ಪರಗಣಕ್ಕೆ ಪ್ರಯಾಣಿಸುತ್ತಿದ್ದರು. “ನಮ್ಮ ಊರಿನಲ್ಲಿ ಕುಸ್ತಿಯ ತರಬೇತಿ ಕೇಂದ್ರ ಇಲ್ಲ,” ಎಂದು ಅವರು ಹೇಳಿದರು.


ಎಡ: 2005 ಮತ್ತು 2019ರಲ್ಲೂ ನೆರೆಯಿಂದ ಹಾನಿಗೊಳಗಾಗಿರುವ ಕುಸ್ತಿಪಟು ಸಚಿನ್ ಪಾಟೀಲ್ ಅವರ ಮನೆ. ಬಲ: ಎರಡು ವರ್ಷಗಳಲ್ಲಿ 10ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳನ್ನು ಗೆದ್ದಿರುವ ನಿಲೇವಾಡಿಯ ಮಯೂರ್ ಬಗಾಡಿ
ಕಳೆದ ತಿಂಗಳ ನೆರೆಯ ಬಗ್ಗೆ ಮಾತನಾಡಿದ ಅವರು, “ಒಂದು ದಿನವಿಡೀ ನಾವು ಮೂರು ಅಡಿ ನೀರಿನಲ್ಲೇ ಉಳಿದಿದ್ದೆವು. ಸುರಕ್ಷಿತರಾದ ನಂತರವೂ ನಾನು ಜ್ವರಪೀಡಿತನಾದೆ,” ಬಗಾಡಿಯವರು ಪರಗಾಂವ್ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಒಂದು ವಾರಗಳ ಕಾಲ ತಂಗಿದರು. “ನಮ್ಮ ಇಡೀ ಮನೆಯೇ ಮುಳುಗಿತು, ಜತೆಯಲ್ಲಿ 10 ಗುಂಟ [0.25 ಎಕರೆ] ಭೂಮಿಯೂ ಮುಳುಗಿತು,” ಎಂದು ಮಯೂರ್ ಹೇಳಿದರು. ಕುಟುಂಬವು 60,000 ರೂ. ಬೆಲೆಯ 20 ಟನ್ ಕಬ್ಬನ್ನು ಕಳೆದುಕೊಂಡಿತು. ಅವರು ಮನೆಯಲ್ಲಿ ಸಂಗ್ರಹಿಸಿದ್ದ 70 ಕೆಜಿಯಷ್ಟು ಕಾಳು, ಗೋದಿ ಮತ್ತು ಅಕ್ಕಿಯನ್ನೂ ಕಳೆದುಕೊಂಡರು. “ಎಲ್ಲವೂ ಹೋಯಿತು,” ಎನ್ನುತ್ತಾರೆ ಮಯೂರ್.
ನೆರೆ ಹಾವಳಿಯ ನಂತರ ಮಯೂರ್ ಕೃಷಿಕರು ಹಾಗೂ ಕೃಷಿ ಕೂಲಿಕಾರರು ಆಗಿರುವ ತನ್ನ ಹೆತ್ತವರಿಗೆ ಮನೆಯನ್ನು ಸ್ವಚ್ಛ ಮಾಡುವ ಮೂಲಕ ನೆರವಾದರು. “ಇಲ್ಲಿಯ ದುರ್ನಾಥ ಇನ್ನೂ ಹೋಗಿಲ್ಲ, ಆದರೆ ಈಗ ನಾವು ಇಲ್ಲಿಯೇ ತಿಂದು ಮಲಗಬೇಕು,” ಎಂದರು.
ನೆರೆಯು ಬಹಳ ಕೆಟ್ಟ ರೀತಿಯಲ್ಲಿ ಹಾನಿ ಮಾಡಿದೆ ಎನ್ನುತ್ತಾರೆ ಬಜರಂಗ್, “2019ರ ನೆರೆಯು 2005ರ ನೆರೆಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಮತ್ತು 2019ರಲ್ಲಿ ಪರಿಹಾರವಾಗಿ ನಮಗೆ ಒಂದು ಪೈಸೆಯನ್ನೂ ಸಿಕ್ಕಿಲ್ಲ. ಈ ವರ್ಷ ಪ್ರವಾಹ [2021], 2019ಕ್ಕಿಂತಲೂ ಹೆಚ್ಚು ಹಾನಿ ಮಾಡಿತ್ತು,” ಎಂದು ಅವರು ಹೇಳಿದರು. “ಸರಕಾರ ಐಪಿಎಲ್ [ಇಂಡಿಯನ್ ಪ್ರೀಮಿಯರ್ ಲೀಗ್ಗೆ] ಬೆಂಬಲ ಸೂಚಿಸುತ್ತದೆ, ಅದೇ ರೀತಿ ಬೇರೆ ದೇಶಗಳಿಗೂ ಸ್ಥಳಾಂತರ ಮಾಡುತ್ತದೆ. ಹೀಗಿರುವಾಗ ಕುಸ್ತಿಗೆ ಯಾಕೆ ಏನಾದರೂ ಮಾಡಬಾರದು?”
“ಪರಿಸ್ಥಿತಿ ಹೇಗೆಯೇ ಇರಲಿ, ನಾನು ಯಾವುದೇ ಕುಸ್ತಿಪಟು ವಿರುದ್ಧ ಹೋರಾಡಲು ಸಿದ್ಧ,” ಎಂದು ಹೇಳಿರುವ ಸಚಿನ್, “ಆದರೆ ಕೋವಿಡ್ ಮತ್ತು ಎರಡು ಪ್ರವಾಹದ ವಿರುದ್ಧ ಹೋರಾಡಲು ಸಾಧ್ಯವಿಲ್ಲ,”
ಅನುವಾದ: ಸೋಮಶೇಖರ ಪಡುಕರೆ