ಮಕ್ಕಳ ತೆಲುಗು ಪೌರಾಣಿಕ ಕಥೆಗಳಲ್ಲಿನ ದುಷ್ಟ ಮಾಂತ್ರಿಕ ಮಾಯಲ ಪಕೀರ್, ಆಂಧ್ರ ಪ್ರದೇಶದಲ್ಲಿನ ಅನಂತಪುರದ ಬೀದಿಗಳಲ್ಲೀಗ ಠಳಾಯಿಸುತ್ತಿದ್ದಾನೆ. ಈ ಮಾಂತ್ರಿಕನ ವೇಷದಲ್ಲಿರುವವರು, ಕಿಶೋರ್ ಕುಮಾರ್. ಅಂದರೆ, ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅಲ್ಲ. ಇವರು, ಆಂಧ್ರ ಪ್ರದೇಶದ ಸಶಸ್ತ್ರ ಮೀಸಲು ಪೊಲೀಸ್. ನಗರದ ಕೇಂದ್ರ ಭಾಗದಲ್ಲಿರುವ ಕ್ಲಾಕ್ ಟವರ್‌ನ ಬಳಿ ಏಪ್ರಿಲ್ ೨ರಂದು ಅವರ ಈ ಭಾವಚಿತ್ರವನ್ನು ತೆಗೆಯಲಾಗಿದೆ.
ತೆಲುಗು ಮಾತನಾಡುವ ಪ್ರದೇಶಗಳಲ್ಲಿ, ಸಾರ್ವಜನಿಕರಿಗೆ ತನ್ನ ಸಂದೇಶಗಳನ್ನು ತಲುಪಿಸಲು, ಸಾಂದರ್ಭಿಕವಾಗಿ ದೈಹಿಕ ಶಿಕ್ಷೆಯನ್ನು ಬಳಸುವ ಪೊಲೀಸ್ ಬಲವು, ಕಲೆಯ ಮೂಲಕ ಅವುಗಳನ್ನು ತಲುಪಿಸುವ ಪ್ರಯತ್ನವನ್ನು ಕೈಗೊಂಡಿದೆ (ಕೈಗಳ ಸ್ವಚ್ಛತೆಯನ್ನು ಕುರಿತಂತೆ ಅರಿವನ್ನು ಮೂಡಿಸುವ ತಮ್ಮ ಪ್ರಯತ್ನದಲ್ಲಿ ರಾಮುಲೋ ರಾಮಲ ಎಂಬ ತೆಲುಗಿನ ಜನಪ್ರಿಯ ಗೀತೆಗೆ, ಪೊಲೀಸರು ಹೆಜ್ಜೆ ಹಾಕುತ್ತಿರುವುದನ್ನು ಮತ್ತೊಂದು ಜಿಲ್ಲೆಯ ವೀಡಿಯೋದಲ್ಲಿ ಕಾಣಬಹುದು). ‘ಅನಂತಪುರ ಪೊಲೀಸ್’ ಎಂಬ ಶೀರ್ಷಿಕೆಯುಳ್ಳ ಫೇಸ್‌ಬುಕ್ ಪುಟದಲ್ಲಿ, ಭಯಾನಕವಾಗಿ ಕಾಣುವ ತಲೆಯುಡುಗೆಯನ್ನು (headdress) ಧರಿಸಿರುವ ಮಾಯಲ ಪಕೀರ್ (ಆಕಾ ಕಿಶೋರ್ ಕುಮಾರ್) ಭಾವಚಿತ್ರವನ್ನು ಪೋಸ್ಟ್ ಮಾಡಲಾಗಿತ್ತು. (‘ಮುಕುಟ’ ಎಂಬುದು ಕರೊನ ಎಂಬ ಪದದ ಒಂದು ಅರ್ಥವೂ ಹೌದು)
ಪೊಲೀಸ್ ಕಾರ್ಯಾಚರಣೆಯ ವಾಹನ ಮತ್ತು ಈ “ಮಾಂತ್ರಿಕನ ಈ ನವೀನ ವೇಷಧಾರಿಯು”, ನಿರ್ಬಂಧಗಳನ್ನು ಸಡಿಲಗೊಳಿಸಿದ ಅವಧಿಯಲ್ಲಿ; ಉದಾಹರಣೆಗೆ, ಜನರು ದಿನಸಿಗಳನ್ನು ಖರೀದಿಸಲು ಮನೆಯಿಂದ ಹೊರಬರುವ ಸಮಯದಲ್ಲಿ, ಸಾಮಾಜಿಕ ಅಂತರ ಹಾಗೂ ಇತರೆ ನೈರ್ಮಲ್ಯಯುಕ್ತ ನಡವಳಿಕೆಗಳನ್ನು ಕುರಿತ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುತ್ತಾರೆ ಎಂಬುದಾಗಿ ಅನಂತಪುರದ ಪೊಲೀಸರು ತಿಳಿಸಿದರು. ಈ ಸಂದೇಶವನ್ನು ಜನನಿಬಿಡ ತರಕಾರಿ ಮಾರುಕಟ್ಟೆಗಳು, ಸರ್ಕಾರಿ ಆಸ್ಪತ್ರೆಗಳು, ದಿನಸಿ ಅಂಗಡಿಗಳು ಮತ್ತು ಎರಡು ರಸ್ತೆಗಳು ಕೂಡುವ ಪ್ರಮುಖ ಚೌಕಗಳಿಗೆ ಒಯ್ಯಲಾಗುತ್ತದೆ. ಜನರಲ್ಲಿ ತಮ್ಮ ದುರ್ದೆಸೆಯನ್ನು ಕುರಿತ ಭೀತಿಯನ್ನು ಹೋಗಲಾಡಿಸುವಲ್ಲಿ, ಹಿಂದೆಂದೂ ನೆರವನ್ನು ಬಯಸದ ಪೊಲೀಸರಿಗೆ ಇದು ನೂತನ ಮಾರ್ಗವೆನಿಸಿದೆ.


ಅನುವಾದ : ಶೈಲಜ ಜಿ . ಪಿ .