ಸೋಹನ್‌ ಸಿಂಗ್‌ ಟೀಟಾ ಅವರ ಮುಗಿಯದ ಬದುಕಿಸಬೇಕೆನ್ನಿಸುವ ಛಲವು ನೀರಿನೊಳಗೆ ಮತ್ತು ಹೊರಗೆ ಹಲವು ಜೀವಗಳನ್ನು ಉಳಿಸಲು ಸಹಾಯ ಮಾಡಿದೆ. ಭುಲೆ ಚಕ್‌ ಎನ್ನುವ ಹಳ್ಳಿಯ ಮತ್ತು ಸುತ್ತಮುತ್ತಲಿನ ಬೀದಿಗಳಲ್ಲಿ ಹೊಗೆಯ ಮೋಡಗಳ ನಡುವಿನಿಂದ ಹೊರಬರುವ ದೇವರಂತೆ ಕಾಣುವ ಅವರು ತಮ್ಮ ಮೋಟಾರು ಬೈಕಿನಲ್ಲಿ ವಿವಿಧ ಬಗೆಯ ಪೌಷ್ಟಿಕ ತರಕಾರಿಗಳನ್ನು ಮಾರುವುದನ್ನು ಕಾಣಬಹುದು. ಆದರೆ ಅವರು ಖ್ಯಾತರಾಗಿರುವುದು ತಮ್ಮ ನೀರಿನಲ್ಲಿ ಮುಳುಗೇಳುವ ನೈಪುಣ್ಯದಿಂದ. ಸೋಹನ್‌ ಆಗಾಗ ಪಂಜಾಬಿನ ಗುರುದಾಸಪುರ ಜಿಲ್ಲೆಯ ತನ್ನ ಹಳ್ಳಿಯಲ್ಲಿನ ಕಾಲುವೆಗಳಿಗೆ ಆಗಾಗ ಡೈವ್‌ ಮಾಡುತ್ತಿರುತ್ತಾರೆ.

“ಮುಳುಗುತ್ತಿರುವ ಜನರನ್ನು ರಕ್ಷಿಸುವುದು ನನ್ನ ಕೆಲಸವೇನಲ್ಲ. ಆದರೂ ನಾನಿದನ್ನು ಮಾಡುತ್ತೇನೆ,” ಎನ್ನುತ್ತಾರೆ 42 ವರ್ಷದ ಸೋಹನ್. ಅವರು ಇದನ್ನು ಹಿಂದಿನ 20 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. “ನಿಮಗೆ ʼನೀರೆಂದರೆ ಜೀವʼ ಎನ್ನಿಸಬಹುದು. ಆದರೆ ನಾನು ಅದು ಒಂದು ಸಾವಿರ ಸಲ ಜನರ ಪಾಲಿಗೆ ಮೃತ್ಯುವಾಗಿದ್ದನ್ನು ಕಂಡಿದ್ದೇನೆ,” ಎನ್ನುತ್ತಾರೆ ತಾವು ನೀರಿನಿಂದ ಹೊರ ಹಾಕಿದ ಹೆಣಗಳನ್ನು ಲೆಕ್ಕ ಹಾಕುತ್ತಾ ಸೋಹನ್.

ಗುರುದಾಸಪುರ ಅಥವಾ ಅದರ ನೆರೆಯ ಪಟಾಣ್‌ ಕೋಟ್‌ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಕಾಲುವೆಗಳಿಗೆ ಬಿದ್ದವರನ್ನು ರಕ್ಷಿಸಲು ಅಥವಾ ಶವವನ್ನು ಹೊರತೆಗೆಯುವ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಮೊದಲು ನೆನಪಾಗುವ ಹೆಸರು ಸೋಹನ್‌ ಅವರದು. ಬಿದ್ದಿರುವ ವ್ಯಕ್ತಿ ಆಕಸ್ಮಿಕವಾಗಿ ಬಿದ್ದಿರುವುದೋ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿರುವುದೋ ಎನ್ನುವುದನ್ನು ತಿಳಿದುಕೊಳ್ಳಲು ಕಾಯದೆ ಸೋಹನ್‌ ಮೊದಲು ನೀರಿಗೆ ಹಾರುತ್ತಾರೆ. “ಆ ಕ್ಷಣಕ್ಕೆ ನೀರಿಗೆ ಬಿದ್ದ ವ್ಯಕ್ತಿಯನ್ನು ಜೀವಂತವಾಗಿ ಮೇಲೆ ತರುವುದಷ್ಟೇ ನನ್ನ ಆದ್ಯತೆಯಾಗಿರುತ್ತದೆ,” ಎನ್ನುತ್ತಾರೆ ಸೋಹನ್. ಆದರೆ ಒಂದು ವೇಳೆ ಅವರು ತೀರಿಕೊಂಡಿದ್ದರೆ, “ಸಂಬಂಧಿಕರು ಕೊನೆಯ ಬಾರಿಗೆ ಅವರ ಮುಖವನ್ನು ನೋಡಬೇಕೆಂದು ನಾನು ಬಯಸುತ್ತೇನೆ," ಎಂದು ಶಾಂತವಾಗಿ ಹೇಳುವ ಅವರ ದನಿಯಲ್ಲಿ ಒಂದು ಸಾವಿರ ಜನರ ಜೀವ ಹೋದ ನೋವು ತುಂಬಿಕೊಂಡಿತ್ತು.

ಸೋಹನ್‌ ತಿಂಗಳಿಗೆ ಕನಿಷ್ಟವೆಂದರೂ 2-3 ಹೆಣಗಳನ್ನು ಕಾಲುವೆಗಳಿಂದ ತೆಗೆಯುತ್ತಾರೆ. ಈ ಕುರಿತಾದ ತನ್ನ ಅನುಭವದ ಕುರಿತು ಮಾತನಾಡುವಾಗ ಅವರು ತತ್ವಜ್ಞಾನದ ಮೊರೆ ಹೋಗುತ್ತಾರೆ. ಅವರು ಹೇಳುವಂತೆ, “ಬದುಕೆನ್ನುವುದು ಸುಂಟರಗಾಳಿ ಇದ್ದಂತೆ, ಅದೊಂದು ಚಕ್ರ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿಯೇ ಆರಂಭವೂ ಆಗುತ್ತದೆ.”

PHOTO • Amir Malik

ಸೋಹನ್ ಸಿಂಗ್ ಟೀಟಾ ತನ್ನ ತರಕಾರಿ ಗಾಡಿಯನ್ನು ತನ್ನ ಮೋಟಾರ್ ಬೈಕಿಗೆ ಕಟ್ಟುತ್ತಾರೆ, ಅದನ್ನು ಭುಲೆ ಚಕ್ ಎನ್ನುವ ಹಳ್ಳಿ ಮತ್ತು ಗುರುದಾಸಪುರ ಜಿಲ್ಲೆಯ ಹತ್ತಿರದ ಸ್ಥಳಗಳಲ್ಲಿ ಓಡಿಸುತ್ತಾ ವ್ಯಾಪಾರ ಮಾಡುತ್ತಾರೆ

ಭುಲೆ ಚಕ್ ಬಳಿಯ ಕಾಲುವೆಗಳು ಪಂಜಾಬಿನ ಅನೇಕ ಜಿಲ್ಲೆಗಳಿಗೆ ರಾವಿ ನದಿಯ ನೀರನ್ನು ಸಾಗಿಸುವ ಅಪ್ಪರ್ ಬಾರಿ ದೋಆಬ್ ಕಾಲುವೆಯ (Upper Bari Doab Canal/ಯುಬಿಡಿಸಿ) 247 ವಿತರಣಾ ಕೇಂದ್ರಗಳ ಜಾಲದ ಭಾಗವಾಗಿದೆ. ಐತಿಹಾಸಿಕವಾಗಿ ಮಹತ್ವದ ಜಲಮೂಲವಾದ ಕಾಲುವೆ ವ್ಯವಸ್ಥೆಯು ರಾವಿ ಮತ್ತು ಬಿಯಾಸ್ ನದಿಗಳ ನಡುವೆ ಇರುವ ಬಾರಿ ದೋಆಬ್ ಪ್ರದೇಶಕ್ಕೆ ನೀರನ್ನು ಪೂರೈಸುತ್ತದೆ (ದೋಆಬ್ ಎಂದರೆ 'ಎರಡು ನದಿಗಳ ನಡುವಿನ ನೆಲ').

ಇಂದಿನ ಕಾಲುವೆಯು 17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಶಹಜಹಾನ್ ನಿರ್ಮಿಸಿದ ಹಿಂದಿನ ಆವೃತ್ತಿಯಲ್ಲಿ ತನ್ನ ಮೂಲವನ್ನು ಹೊಂದಿದೆ. ನಂತರ ಇದನ್ನು ಮಹಾರಾಜ ರಣಜಿತ್ ಸಿಂಗ್ ಅವರ ಆಳ್ವಿಕೆಯಲ್ಲಿ ವಿಸ್ತರಿಸಲಾಯಿತು, ಮತ್ತು ನಂತರ 19ನೇ ಶತಮಾನದಲ್ಲಿ ಬ್ರಿಟಿಷ್ ರಾಜ್ ಇದನ್ನು ನೀರಾವರಿ ಕಾಲುವೆಯಾಗಿ ಅಭಿವೃದ್ಧಿಪಡಿಸಿತು. ಇಂದು, ಯುಬಿಡಿಸಿ ಪಠಾಣ್‌ಕೋಟ್, ಗುರುದಾಸಪುರ ಮತ್ತು ದೋಆಬ್‌ನ ಇತರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ ಮತ್ತು 5.73 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ.

ಭುಲೆ ಚುಕ್ ಪ್ರದೇಶದ ಜನರು ಈ ಕಾಲುವೆಯನ್ನು 'ಬಡಿ ನಹರ್' ('ದೊಡ್ಡ ಕಾಲುವೆ') ಎಂದು ಕರೆಯುತ್ತಾರೆ. ಈ ಜಲಮೂಲದ ಬಳಿ ಬೆಳೆದ ಸೋಹನ್ ಕಾಲುವೆಗಳ ಸುತ್ತಲೂ ಸಮಯ ಕಳೆಯುವುದು ಸ್ವಾಭಾವಿಕವಾಗಿತ್ತು. "ನಾನು ನನ್ನ ಸ್ನೇಹಿತರೊಂದಿಗೆ ಈಜುತ್ತಿದ್ದೆ. ನಾವು ಮಕ್ಕಳಾಗಿದ್ದೆವು, ಮತ್ತು ಕಾಲುವೆಗಳು ಮತ್ತು ತೊರೆಗಳು ಕೊಲೆಗಡುಕರಾಗಿ ಪರಿಣಮಿಸುತ್ತವೆ ಎಂದು ಆಗ ಯೋಚಿಸಿರಲಿಲ್ಲ," ಎಂದು ಅವರು ಹೇಳುತ್ತಾರೆ.

2002ರಲ್ಲಿ ಅವರು ಮೊದಲ ಬಾರಿಗೆ ಶವವನ್ನು ಹುಡುಕಲು ಕಾಲುವೆಗೆ ಇಳಿದರು. ಕಾಲುವೆಯಲ್ಲಿ ಮುಳುಗಿದ ಒಬ್ಬರನ್ನು ಹುಡುಕುವಂತೆ ಗ್ರಾಮದ ಸರಪಂಚ್ ಅವರಿಗೆ ಸೂಚಿಸಿದ್ದರು. "ನಾನು ಶವವನ್ನು ಹುಡುಕಿ ತೀರಕ್ಕೆ ತಂದಿದ್ದೆ," ಎಂದು ಅವರು ಹೇಳುತ್ತಾರೆ. "ಅದು ಒಬ್ಬ ಹುಡುಗನ ಶವವಾಗಿತ್ತು. ನಾನು ಅವನ ಶವವನ್ನು ನನ್ನ ಕೈಗಳಲ್ಲಿ ಹಿಡಿದಾಗ, ನೀರಿನೊಂದಿಗಿನ ನನ್ನ ಸಂಬಂಧವು ಶಾಶ್ವತವಾಗಿ ಬದಲಾಯಿತು. ಅಂದು ಮೊದಲ ಬಾರಿ ನೀರು ಭಾರವೆನ್ನಿಸಿತು ಮತ್ತು ಹೃದಯವೂ ಭಾರವಾಯಿತು. ಆ ದಿನ, ನದಿ, ಕಾಲುವೆ, ಸಮುದ್ರ, ಸಾಗರ - ಪ್ರತಿಯೊಂದು ಜಲಮೂಲವು ಬಲಿಯನ್ನು ಬಯಸುತ್ತದೆ ಎನ್ನುವುದನ್ನು ನಾನು ಅರಿತುಕೊಂಡೆ. ಇದು ಜೀವವನ್ನು ಬಯಸುತ್ತದೆ," ಎಂದು ಸೋಹನ್ ಹೇಳುತ್ತಾರೆ. "ನಿಮಗೆ ಹಾಗನ್ನಿಸುವುದಿಲ್ಲವೆ?"

ಸೋಹನ್‌ ವಾಸಿಸುವ ಗ್ರಾಮದಿಂದ 50 ಕಿಲೋಮೀಟರ್ ದೂರದಲ್ಲಿರುವ ಬಟಾಲಾ, ಮುಕೇರಿಯನ್, ಪಠಾಣ್‌ಕೋಟ್ ಮತ್ತು ಟಿಬ್ರಿಯ ಜನರು ಅವರ ಸೇವೆಗಾಗಿ ಅವರನ್ನು ಸಂಪರ್ಕಿಸುತ್ತಾರೆ. ದೂರದ ಸ್ಥಳಗಳಿಗೆ ಹೋಗುವಾಗ ಅವರಿಗೆ ಮೋಟಾರ್‌ ಬೈಕುಗಳ ಪ್ರಯಾಣ ಲಭ್ಯವಾಗುತ್ತದೆ. ಹತ್ತಿರದ ಸ್ಥಳಗಳಿಗೆ ತಮ್ಮ ತರಕಾರಿ ಗಾಡಿ ಅಟ್ಯಾಚ್‌ ಮಾಡಿರುವ ಮೋಟಾರುಬೈಕಿನಲ್ಲೇ ಪ್ರಯಾಣಿಸುತ್ತಾರೆ.

PHOTO • Amir Malik
PHOTO • Amir Malik

ಎಡ: ತರಕಾರಿ ವ್ಯಾಪಾರ ಸೋಹನ್ ಅವರ ಆದಾಯದ ಏಕೈಕ ಮೂಲವಾಗಿದೆ. ಬಲ: ಭುಲೆ ಚಕ್ ನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಟಿಬ್ರಿಯಲ್ಲಿರುವ ಅಪ್ಪರ್ ಬಾರಿ ದಆಬ್ ಕಾಲುವೆ

ರಕ್ಷಿಸಲ್ಪಟ್ಟ ಅಥವಾ ಸತ್ತ ವ್ಯಕ್ತಿಯ ಸಂಬಂಧಿಕರು ಕೆಲವೊಮ್ಮೆ 5,000-7,000 ರೂ.ಗಳನ್ನು ನೀಡುತ್ತಾರೆ ಎಂದು ಸೋಹನ್ ಹೇಳುತ್ತಾರೆ. ಆದರೆ ಅಂತಹ ಪಾವತಿಯನ್ನು ಸ್ವೀಕರಿಸಲು ಅವರು ಇಷ್ಟಪಡುವುದಿಲ್ಲ. ಸೋಹನ್‌ ಅವರಿಗೆ ಇರುವ ಏಕೈಕ ಆದಾಯ ಮೂಲವೆಂದರೆ ಅವರ ತರಕಾರಿ ವ್ಯಾಪಾರ. ಆ ಮೂಲಕ ಅ ರು ದಿನವೊಂದಕ್ಕೆ 200-400 ರೂಪಾಯಿಗಳನ್ನು ಗಳಿಸುತ್ತಾರೆ. ಅವರ ಬಳಿ ಯಾವುದೇ ಭೂಮಿಯ ಮಾಲಕತ್ವವಿಲ್ಲ. ವಿಚ್ಛೇದನ ಪಡೆದಾಗಿನಿಂದ ಒಂಟಿ ಪೋಷಕನಾಗಿ 13 ವರ್ಷದ ಮಗಳನ್ನು ನೋಡಿಕೊಳ್ಳುವುದರ ಜೊತೆಗೆ ತಮ್ಮ 62 ವರ್ಷದ ತಾಯಿಯನ್ನು ಸಹ ನೋಡಿಕೊಳ್ಳುತ್ತಾರೆ.

ಕೆಲವೊಮ್ಮೆ, ಅನಿರೀಕ್ಷಿತ ಕ್ಷಣಗಳಲ್ಲಿ ಅಪಾಯವು ಬಚ್ಚಿಟ್ಟುಕೊಂಡಿರುತ್ತದೆ. ಮೂರು ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ಸೋಹನ್ ನೆನಪಿಸಿಕೊಳ್ಳುತ್ತಾರೆ. ಟಿಬ್ರಿಯಲ್ಲಿ (ಭುಲೆ ಚಕ್‌ನಿಂದ ಮೂರು ಕಿಲೋಮೀಟರ್ ದೂರದಲ್ಲಿ) ಮಹಿಳೆಯೊಬ್ಬಳು ಕಾಲುವೆಗೆ ಜಿಗಿಯುವುದನ್ನು ನೋಡಿದ ತಕ್ಷಣವೇ ಅವರೂ ಧುಮುಕಿದ್ದರು. "ಅವಳು 40 ವರ್ಷದ ಮಹಿಳೆ. ಅವಳು ನನಗೆ ಅವಳನ್ನು ರಕ್ಷಿಸಲು ಬಿಡಲಿಲ್ಲ. ಅವಳು ನನ್ನನ್ನು ಹಿಡಿದು ಕೆಳಗೆ ಎಳೆಯಲು ಪ್ರಾರಂಭಿಸಿದಳು," ಎಂದು ಸೋಹನ್ ಹೇಳುತ್ತಾರೆ. ಒಂದು ಜೀವವನ್ನು ಉಳಿಸಲು ಆ 15-20 ನಿಮಿಷಗಳ ಹೋರಾಟದಲ್ಲಿ, ಅವಳ ಕೂದಲನ್ನು ಹಿಡಿದು ಅವಳನ್ನು ಹೊರಗೆಳೆದರು. "ಅಷ್ಟೊತ್ತಿಗಾಗಲೇ ಅವಳು ಮೂರ್ಛೆ ಹೋಗಿದ್ದಳು."

ಸೋಹನ್ ಅವರ ಪರಿಣತಿಯು ನೀರಿನಲ್ಲಿ ದೀರ್ಘ ಸಮಯದವರೆಗೆ ತನ್ನ ಉಸಿರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿದೆ. "ನನ್ನ 20ರ ದಶಕದಲ್ಲಿ, ನಾನು ನನ್ನ ಉಸಿರನ್ನು ನಾಲ್ಕು ನಿಮಿಷಗಳ ಕಾಲ ನೀರಿನೊಳಗೆ ಹಿಡಿದಿಟ್ಟುಕೊಳ್ಳುತ್ತಿದ್ದೆ. ಈಗ ಆ ಸಾಮರ್ಥ್ಯ ಮೂರು ನಿಮಿಷಗಳಿಗೆ ಇಳಿದಿದೆ." ಆದರೆ ಅವರು ಆಮ್ಲಜನಕ ಸಿಲಿಂಡರ್ ಬಳಸುವುದಿಲ್ಲ. "ನಾನು ಅದನ್ನು ಎಲ್ಲಿಂದ ತರಲಿ? ಅದೂ ಕೂಡ ತುರ್ತು ಪರಿಸ್ಥಿತಿಯಲ್ಲಿ" ಎಂದು ಅವರು ಕೇಳುತ್ತಾರೆ.

ಜಿಲ್ಲಾ ಅಪರಾಧ ದಾಖಲೆ ಬ್ಯೂರೋದ ಉಸ್ತುವಾರಿ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜಿಂದರ್ ಕುಮಾರ್, 2020ರಲ್ಲಿ ಪೊಲೀಸರು ಅಪ್ಪರ್ ಬಾರಿ ದೋಆಬ್ ಕಾಲುವೆಯಿಂದ ನಾಲ್ಕು ಮೃತ ದೇಹಗಳನ್ನು ಹೊರತೆಗೆಯಲು ಮುಳುಗುತಜ್ಞರ ಸಹಾಯವನ್ನು ಕೋರಿದರು ಎಂದು ಹೇಳುತ್ತಾರೆ. 2021ರಲ್ಲಿ, ಅವರು ಐದು ದೇಹಗಳನ್ನು ಹೊರಹಾಕಿದ್ದರು. ಈ ಸಂದರ್ಭಗಳಲ್ಲಿ, ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಸಾವು ಆತ್ಮಹತ್ಯೆ ಅಥವಾ ಕೊಲೆಯಿಂದ ಸಂಭವಿಸಿದೆಯೇ ಅಥವಾ ಆಕಸ್ಮಿಕವೇ ಅಥವಾ ಅನುಮಾನಾಸ್ಪದ ಸನ್ನಿವೇಶಗಳಿವೆಯೇ ಎಂದು ತನಿಖೆ ನಡೆಸಲು ಪೊಲೀಸರಿಗೆ ಅವಕಾಶ ನೀಡುತ್ತದೆ. ಕೆಲವು ಸಾವುಗಳು ದಾಖಲಾಗದೆ ಹೋಗುವ ಸಾಧ್ಯತೆಯಿರುತ್ತದೆ.

"ಜನರು ಆತ್ಮಹತ್ಯೆಯಿಂದ ಸಾಯಲು ನದಿಗಳು ಮತ್ತು ಕಾಲುವೆಗಳಿಗೆ ಧುಮುಕುತ್ತಾರೆ" ಎಂದು ಸಬ್-ಇನ್ಸ್ಪೆಕ್ಟರ್ ಹೇಳುತ್ತಾರೆ. "ಅನೇಕ ಬಾರಿ, ಅವರು ಈಜು ತಿಳಿಯದೆ ಸ್ನಾನ ಮಾಡಲು ನೀರಿಗಿಳಿಯುತ್ತಾರೆ ಮತ್ತು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ, ನೀರಿನಲ್ಲಿ ಜಾರಿ ಮುಳುಗುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀರಿನಲ್ಲಿ ಮುಳುಗಿಸಿ ಕೊಂದ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ," ಎಂದು ರಾಜಿಂದರ್ ಕುಮಾರ್ ಹೇಳುತ್ತಾರೆ.

PHOTO • Amir Malik

ಸೋಹನ್‌ ಕುರಿತು ಹಿಂದಿ ಪತ್ರಿಕೆಯೊಂದರಲ್ಲಿ ಬಂದ ವರದಿ. ಅವರ ಕೆಲಸದ ಕುರಿತು ತಿಳಿದಿದ್ದರೂ, ಸರ್ಕಾರವು ಇಲ್ಲಿಯವರೆಗೆ ಮುಳುಗು ತಜ್ಞರಿಗೆ ಯಾವುದೇ ಬೆಂಬಲವನ್ನು ನೀಡಿಲ್ಲ ಎಂದು ಅವರು ಹೇಳುತ್ತಾರೆ

2020ರಲ್ಲಿ, ಗುರುದಾಸಪುರದ ಅಪ್ಪರ್ ಬಾರಿ ದೋಆಬ್ ಕಾಲುವೆಯಿಂದ ನಾಲ್ಕು ಮೃತ ದೇಹಗಳನ್ನು ಹೊರತೆಗೆಯಲು ಪೊಲೀಸರು ಮುಳುಗುತಜ್ಞರ ಸಹಾಯವನ್ನು ಕೋರಿದರು

ಈ ಕಾಲುವೆಗಳಲ್ಲಿನ ಹೆಚ್ಚಿನ ಸಾವುಗಳು ಬೇಸಿಗೆಯಲ್ಲಿ ಸಂಭವಿಸುತ್ತವೆ ಎಂದು ಸೋಹನ್ ವಿವರಿಸುತ್ತಾರೆ. "ಸುಡುವ ಬಿಸಿಲಿನಿಂದ ಪಾರಾಗಲೆಂದು ಗ್ರಾಮಸ್ಥರು ನೀರಿಗೆ ಇಳಿಯುತ್ತಾರೆ ಮತ್ತು ಆಕಸ್ಮಿಕವಾಗಿ ಮುಳುಗುತ್ತಾರೆ," ಎಂದು ಅವರು ಹೇಳುತ್ತಾರೆ. "ದೇಹಗಳು ತೇಲುತ್ತವೆ, ಮತ್ತು ಅವುಗಳನ್ನು ಕಾಲುವೆಯಲ್ಲಿ ಕಂಡುಹಿಡಿಯುವುದು ಕಷ್ಟ. ಆದ್ದರಿಂದ ನಾನು ನೀರಿನ ಹರಿವನ್ನು ಅನುಸರಿಸಿ ವಿವಿಧ ಸ್ಥಳಗಳಲ್ಲಿ ನೋಡುತ್ತಲೇ ಇರಬೇಕು. ಇದು ಒಂದು ಅಪಾಯಕಾರಿ ಕೆಲಸ, ಇಲ್ಲಿ ನಾನು ನನ್ನ ಬದುಕನ್ನೇ ಪಣಕ್ಕಿಟ್ಟಿರುತ್ತೇನೆ."

ಅಪಾಯಗಳ ಹೊರತಾಗಿಯೂ, ಸೋಹನ್ ಈ ಕೆಲಸವನ್ನು ಮುಂದುವರಿಸಿದ್ದಾರೆ. "ನಾನು ಇದುವರೆಗೆ ನೀರಿಗೆ ಇಳಿದಾಗಲೆಲ್ಲ [ಮೃತ] ದೇಹವನ್ನು ಹುಡುಕಿ ತರುವಲ್ಲಿ ವಿಫಲವಾಗಿಲ್ಲ. ನೀರಿಗೆ ಬಿದ್ದ ಜನರನ್ನು ಕಾಪಾಡುವವರಿಗೆ ಉದ್ಯೋಗ ನೀಡಬೇಕೆಂದು ಬಯಸುತ್ತೇನೆ. ಇದರಿಂದ ನನ್ನಂತಹ ಜನರಿಗೆ ಸಹಾಯವಾಗುತ್ತದೆ,” ಎಂದು ಅವರು ಹೇಳುತ್ತಾರೆ.

“ನಮ್ಮೂರಿನಲ್ಲಿ ಒಂದು ಡಜನ್ನಿಗೂ ಹೆಚ್ಚು ಮಂದಿ ಮುಳುಗು ತಜ್ಞರಿದ್ದಾರೆ,” ಎಂದು ಪಂಜಾಬಿನಲ್ಲಿ ಇತರ ಹಿಂದುಳಿದ ವರ್ಗಗಳಡಿಯಲ್ಲಿ ಪಟ್ಟಿ ಮಾಡಲಾಗಿರುವ ಲಬಾನಾ ಸಿಖ್ ಸಮುದಾಯಕ್ಕೆ ಸೇರಿದ ಸೋಹನ್ ಹೇಳುತ್ತಾರೆ. “ಸಂಬಳದ ಮಾತು ಅತ್ತಗಿರಲಿ, ಸರಕಾರ ಇದನ್ನೊಂದು ಕೆಲಸವೆಂದು ಸಹ ಪರಿಗಣಿಸುವುದಿಲ್ಲ,” ಎಂದು ಸೋಹನ್‌ ಕೋಪದಿಂದ ಹೇಳುತ್ತಾರೆ.

ದೇಹವನ್ನು ಪತ್ತೆಹಚ್ಚಲು ಕಷ್ಟವಾದ ಸಂದರ್ಭಗಳಲ್ಲಿ ಕನಿಷ್ಠ ನಾಲ್ಕರಿಂದ ಐದು ಮುಳುಗು ತಜ್ಞರು ಸೋಹನ್ ಅವರೊಂದಿಗೆ ಬರುತ್ತಾರೆ. ಅವರಲ್ಲಿ 23 ವರ್ಷದ ಗಗನ್ ದೀಪ್ ಸಿಂಗ್ ಕೂಡ ಒಬ್ಬರು. ಅವರು ಲಬಾನಾ ಸಿಖ್ ಸಮುದಾಯಕ್ಕೆ ಸೇರಿದವರು. ಅವರು 2019ರಲ್ಲಿ ಸೋಹನ್ ಅವರೊಂದಿಗೆ ಈ ಕೆಲಸದಲ್ಲಿ ಜೊತೆಯಾದರು. "ಶವವನ್ನು ಹುಡುಕಲು ನಾನು ಮೊದಲ ಬಾರಿ ನೀರಿಗೆ ಇಳಿದಾಗ ನನಗೆ ಭಯವಾಯಿತು. ನನ್ನ ಭಯವನ್ನು ನಿವಾರಿಸಲು ನಾನು ವಾಹೇಗುರು (ಪ್ರಾರ್ಥನೆ) ಪಠಿಸಿದೆ," ಎಂದು ಅವರು ನೆನಪಿಸಿಕೊಳ್ಳುತ್ತಾರೆ.

PHOTO • Amir Malik
PHOTO • Amir Malik

ಎಡ: ಕಳೆದ 20 ವರ್ಷಗಳಿಂದ ಸೋಹನ್ ಗುರುದಾಸಪುರ ಮತ್ತು ಪಠಾಣ್‌ ಕೋಟ್ ಕಾಲುವೆಗಳಿಗೆ ಧುಮುಕುತ್ತಿದ್ದಾರೆ. ಬಲ: ಗಗನದೀಪ್ ಸಿಂಗ್ 2019ರಲ್ಲಿ ಸೋಹನ್‌ ಅವರಿಗೆ ಸಹಾಯಕನಾಗಿ ಕೆಲಸ ಆರಂಭಿಸಿದರು

10 ವರ್ಷದ ಬಾಲಕನೊಬ್ಬನ ಶವ ಹೊರತೆಗೆವ ಸಂದರ್ಭದಲ್ಲಿ ಅವರು ಆಳವಾಗಿ ನೊಂದಿದ್ದರು. “ಆ ಹುಡುಗ ಹತ್ತಿರದ ಘೋಟ್ ಪೋಖರ್ ಎಂಬ ಹಳ್ಳಿಯವ. ಪಬ್‌ ಜಿ ಆಡಿದ್ದಕ್ಕಾಗಿ ಬಯ್ದರು ಹಾಗು ಓದದ ಕಾರಣಕ್ಕೆ ಅಮ್ಮ ಹೊಡೆದರು ಎಂದು ಅವನು ಗಾಜಿಕೋಟ್‌ ಬಳಿ ನೀರಿಗೆ ಹಾರಿದ್ದ,” ಎಂದು ಗಗನ್ ದೀಪ್ ಹೇಳುತ್ತಾರೆ.

ಅವರೊಂದಿಗೆ ಇಬ್ಬರು ಮುಳಗುತಜ್ಞರಿದ್ದರು. ಭುಲೆ ಚಕ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಧರಿವಾಲ್ ಗ್ರಾಮದಿಂದ ಆಗಮಿಸಿದವರಲ್ಲಿ ಒಬ್ಬರು ಆಕ್ಸಿಜನ್ ಸಿಲಿಂಡರ್ ತಂದಿದ್ದರು. "ಅವರು ಅದನ್ನು ನನಗೆ ಕೊಟ್ಟರು. ಅದನ್ನು ಹಾಕಿಕೊಂಡು ನೀರಿಗಿಳಿದೆ. ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿದ್ದೆ. ಕೊನೆಗೆ, ಇಡೀ ದಿನ ಹುಡುಕಿದ ನಂತರ, ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದ ದೇಹವು ಉಬ್ಬಿದ ಸ್ಥಿತಿಯಲ್ಲಿ ಕಂಡುಬಂದಿತು... ಅವನೊಬ್ಬ ಸುಂದರ ಹುಡುಗನಾಗಿದ್ದ. ತನ್ನ ಪೋಷಕರು ಮತ್ತು ಇಬ್ಬರು ಸಹೋದರಿಯರನ್ನು ಬಿಟ್ಟು ಅಗಲಿದ್ದ," ಎಂದು ಅವರು ಹೇಳುತ್ತಾರೆ. ಆನ್‌ಲೈನ್‌ ಆಟಗಳನ್ನು ಆಡುತ್ತಿದ್ದ ಗಗನದೀಪ್ ಈ ಘಟನೆಯ ನಂತರ ಆಡುವುದನ್ನು ನಿಲ್ಲಿಸಿಬಿಟ್ಟರು. “ನನ್ನ ಫೋನಿನಲ್ಲಿ ಪಬ್‌-ಜಿ ಇದೆ ಆದರೆ ನಾನು ಅದನ್ನು ಆಡುವುದಿಲ್ಲ.”

ಇದುವರೆಗೆ, ಗಗನ್ ದೀಪ್ ಕಾಲುವೆಗಳಿಂದ ಮೂರು ಶವಗಳನ್ನು ಹೊರತೆಗೆದಿದ್ದಾರೆ. "ಇದಕ್ಕಾಗಿ ನಾನು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಅವರು ನೀಡಿದರೂ, ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತೇನೆ," ಎಂದು ಅವರು ಹೇಳುತ್ತಾರೆ. ಸೇನಾ ಆಕಾಂಕ್ಷಿಯಾಗಿರುವ ಅವರು ತಮ್ಮ ಪೋಷಕರೊಂದಿಗೆ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಸ್ಥಳೀಯ ಅನಿಲ ವಿತರಣಾ ಏಜೆನ್ಸಿಯಲ್ಲಿ ಜನರ ಮನೆಗಳಿಗೆ ಸಿಲಿಂಡರುಗಳನ್ನು ತಲುಪಿಸುವ ಕೆಲಸ ಮಾಡಿ 6,000 ರೂ.ಗಳನ್ನು ಸಂಪಾದಿಸುತ್ತಾರೆ. ಕುಟುಂಬವು ಒಂದು ಎಕರೆ ಭೂಮಿಯನ್ನು ಹೊಂದಿದೆ, ಅಲ್ಲಿ ಅವರು ಗೋಧಿ ಮತ್ತು ಹುಲ್ಲನ್ನು ಬೆಳೆಯುತ್ತಾರೆ ಮತ್ತು ಕೆಲವು ಆಡುಗಳನ್ನು ಸಾಕುತ್ತಾರೆ. 60ರ ಹರೆಯದ ಅವರ ತಂದೆ ಆಟೋ ರಿಕ್ಷಾವನ್ನು ಹೊಂದಿದ್ದಾರೆ, ಇದನ್ನು ಗಗನ್ ದೀಪ್ ಸಹ ಕೆಲವೊಮ್ಮೆ ಓಡಿಸುತ್ತಾರೆ.

ಕಾಲುವೆಗಳಲ್ಲಿ, ಮುಳುಗುಜತ್ಞರು ಅಲ್ಲಿ ಹರಡಿದ ಕಸದ ರಾಶಿಗಳ ಮೂಲಕ ಸಾಗಲು ಹೆಣಗಾಡುತ್ತಾರೆ, ಮತ್ತು ಇದರಿಂದಾಗಿ ಶವಗಳನ್ನು ಹುಡುಕಲು ಹೆಚ್ಚು ಗಂಟೆಗಳ ಕಾಲ ನೀರಿನಲ್ಲಿ ಕಳೆಯುತ್ತಾರೆ.

ಧರಿವಾಲ್‌ ಗ್ರಾಮದಲ್ಲಿ ಕಾಲುವೆಯನ್ನು ದಾಟುತ್ತಿರುವಾಗ ಬಿದ್ದು ಮುಳಗಿದ 19 ವರ್ಷದ ಯುವಕನೊಬ್ಬನ ಶವವನ್ನು ಹೊರತೆಗೆಯಲೆಂದು 2020ರಲ್ಲಿ ಪೊಲೀಸರು ಗಗನದೀಪ್‌ ಅವರಿಗೆ ಕರೆ ಕಳುಹಿಸಿದ್ದರು. “ಆ ಯುವಕನ ದೇಹ ಮುಳುಗಿದ ಒಂದೆರಡು ಗಂಟೆಗಳ ನಂತರ ನಾನು ಅಲ್ಲಿಗೆ ತಲುಪಿದ್ದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಬೆಳಗಿನ ಹತ್ತು ಗಂಟೆಗೆ ಶವ ಹುಡುಕಲು ಪ್ರಾರಂಭಿಸಿದೆನಾದರೂ ಸಂಜೆ 4 ಗಂಟೆಯವರೆಗೂ ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ.” ಈ ಕಾರ್ಯದಲ್ಲಿ ಅವರು ಕಾಲುವೆ ಒಂದು ದಡದಿಂದ ಇನ್ನೊಂದು ದಡಕ್ಕೆ ಹಗ್ಗ ಕಟ್ಟಿ ಮೂರು ಜನರ ಸರಪಣಿ ನಿರ್ಮಿಸಿ ಒಟ್ಟಿಗೆ ನೀರಿಗೆ ಜಿಗಿಯಬೇಕಾಯಿತು. “ಸಾಕಷ್ಟು ಕಸವಿದ್ದ ಕಾರಣ ಆ ಹುಡುಗನ ಶವ ಹುಡುಕುವುದು ಬಹಳ ಕಷ್ಟವಾಗಿತ್ತು. ಒಂದು ದೊಡ್ಡ ಕಲ್ಲು ಶವವನ್ನು ಚಲಿಸದಂತೆ ತಡೆದಿತ್ತು,” ಎಂದು ಅವರು ಹೇಳುತ್ತಾರೆ.

PHOTO • Amir Malik

ಟಿಬ್ರಿ ಕಾಲುವೆಗೆ ಅಭಿಮುಖವಾಗಿರುವ ಸೇತುವೆಯ ಮೇಲೆ ಗಗನ್ ದೀಪ್ ನಿಂತಿರುವುದು. ʼಕೆಲವೊಮ್ಮೆ ನಾನೇನು ಮಾಡುತ್ತಿದ್ದೇನೆಂದು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ. ಆದರೆ ಬಿಟ್ಟ ಬಿಡುವ ಬಗ್ಗೆ ಯೋಚಿಸುವುದಿಲ್ಲʼ

ಅವರು ತಮ್ಮ ಈ ಕೆಲಸದ ಮೂಲಕ ಭೌತಶಾಸ್ತ್ರದ ಕೆಲವು ನಿಯಮಗಳನ್ನು ಸಹ ಕಲಿತಿದ್ದಾರೆ. "ಮೃತ ದೇಹಗಳು ಮೇಲ್ಮೈಗೆ ಬಂದು ತೇಲಲು ಕನಿಷ್ಠ 72 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಮತ್ತು ಅವು ನೀರಿನಲ್ಲಿ ಚಲಿಸುತ್ತವೆ. ಒಬ್ಬ ವ್ಯಕ್ತಿಯು ಒಂದು ಬಿಂದುವಿನಲ್ಲಿ ನೀರಿಗೆ ಧುಮುಕಿದರೆ, ಶವ ಅಲ್ಲಿಯೇ ಸಿಗುವುದಿಲ್ಲ," ಎಂದು ಗಗನದೀಪ್ ಹೇಳುತ್ತಾರೆ, 2021ರಲ್ಲಿ ಟಿಬ್ರಿ ಕಾಲುವೆಯಲ್ಲಿ 16 ವರ್ಷದ ಬಾಲಕನ ಶವವನ್ನು ಹೊರತೆಗೆದ ತನ್ನ ಅನುಭವವನ್ನು ವಿವರಿಸುತ್ತಾರೆ. “ಆ ಹುಡುಗನ ಶವಕ್ಕಾಗಿ ಅವನು ಜಿಗಿದ ಸ್ಥಳದಲ್ಲಿ ಹುಡುಕಿದ್ದೆ ಆದರೆ ಸಿಕ್ಕಿರಲಿಲ್ಲ. ನಂತರ ನಾನು ಮೂಗಿಗೆ ಟ್ಯೂಬ್‌ ಹಾಕಿಕೊಂಡು ಅದಕ್ಕೆ ಪೈಪ್‌ ಜೋಡಿಸಿಕೊಂಡೆ. ಇದು ನನಗೆ ನೀರಿನಲ್ಲಿ ಉಸಿರುಗಟ್ಟದಂತೆ ತಡೆಯುತ್ತದೆ.”

ಕೊನೆಗೆ ಹೆಣ ಸಿಗುವಾಗ ಸಂಜೆಯಾಗಿತ್ತು. “ಕಾಲುವೆಯ ಇನ್ನೊಂದು ತುದಿಯಲ್ಲಿ ಸುಮಾರು 25 ಅಡಿ ಆಳದ ನೀರಿತ್ತು. ಸೋಹನ್ ಮತ್ತು ನಾನು ಇಬ್ಬರೂ ಹುಡುಕುತ್ತಿದ್ದೆವು," ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಶವವನ್ನು ಮರುದಿನ ಹುಡುಕೋಣ ಎಂದು ಸೋಹನ್‌ ಹೇಳಿದರು. ಆದರೆ ಮರುದಿನ ಬಂದಾಗ ಶವವು ಅಲ್ಲಿಂದ ಕಣ್ಮರೆಯಾಗಿತ್ತು. ಅದು ಇನ್ನೊಂದು ದಡಕ್ಕೆ ಸ್ಥಳಾಂತರಗೊಂಡು ಕಾಲುವೆಯ ತಳಭಾಗದಲ್ಲಿ ನೆಲೆಸಿತ್ತು." ಅದನ್ನು ಹುಡುಕಿ ತೆಗೆಯಲು ಮುಳುಗು ತಜ್ಞರಿಗೆ ಸುಮಾರು ಮೂರು ಗಂಟೆಗಳು ಬೇಕಾಯಿತು. “ನಾವು ಕನಿಷ್ಟ 300 ಬಾರಿಯಾದರೂ ನೀರಿನೊಳಗೆ ಮುಳಗಿರಬಹುದು. ಒಮ್ಮೊಮ್ಮೆ ನಾನು ಏನು ಮಾಡುತ್ತಿದ್ದೇನೆ ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ… ಆದರೆ ಈ ಕೆಲಸವನ್ನು ಬಿಟ್ಟುಬಿಡುವ ಕುರಿತು ಯೋಚಿಸುವುದಿಲ್ಲ. ಮಾನವ ಜೀವಿಗಳ ನಿಸ್ವಾರ್ಥ ಸೇವೆಯೇ ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಅದನ್ನು ತೊಡೆದು ಹಾಕಲು ಸಾಧ್ಯವಿಲ್ಲ,” ಎಂದು ಗಗನದೀಪ್ ಹೇಳುತ್ತಾರೆ.

ಅದಾಗ್ಯೂ, ಸೋಹನ್‌ ನೀರಿನಲ್ಲಿ ಬದುಕಿನ ಸಂಕೀರ್ಣತೆಗಳನ್ನು ಕಾಣುತ್ತಾರೆ. ಅವರು ಪ್ರತಿದಿನ ಸಂಜೆ ಹಾಗೂ ಸಮಯ ಸಿಕ್ಕಾಗಲೆಲ್ಲ ಟಿಬ್ರಿ ನದಿಯತ್ತ ಹೋಗಲು ಇದೊಂದು ಕಾರಣವಾಗಿದೆ. “ನನಗೆ ಈಗ ಈಜನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು [ದುರಂತ] ಘಟನೆಯ ನೆನಪುಗಳನ್ನು ನಾನು ನನ್ನ ಹೃದಯದಿಂದ ಅಳಿಸುತ್ತೇನೆ," ಎಂದು ಅವರು ಹೇಳುತ್ತಾರೆ. ಪ್ರತಿಬಾರಿ ನಾವು ನೀರಿನಿಂದ ಹೆಣವೊಂದನ್ನು ಮೇಲಕ್ಕೆ ತಂದಾಗ ಆ ವ್ಯಕ್ತಿಯ ಸಂಬಂಧಿಕರು ಭಾಗಶಃ ಸಾಯುವುದನ್ನು ನಾವು ನೋಡುತ್ತೇವೆ. ಇದು ಸಾಯುವ ರೀತಿಯಲ್ಲ ಎನ್ನುವ ವಿಷಾದದೊಡನೆ ಶವವನ್ನು ಒಯ್ಯುತ್ತಾರೆ.”

ಸೋಹನ್‌ ಅವರ ಮನಸ್ಸಿನಲ್ಲಿ ಕಾಲುವೆಗೆ ಬಹಳ ಪ್ರಮುಖವಾದ ಸ್ಥಾನವಿದೆ. 2004ರಲ್ಲಿ ಮೊರಾಕ್ಕೊದಲ್ಲಿ ಕೆಲಸ ಮಾಡಲು ಅವಕಾಶ ದೊರಕಿತ್ತು. ಆದರೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಉತ್ತರ ಆಫ್ರಿಕಾದ ಗಡಿಯಲ್ಲಿರುವ ಮೆಡಿಟರೇನಿಯನ್ ಸಮುದ್ರ ತೀರವು ಅವರಿಗೆ ತನ್ನ ಕಾಲುವೆ ನೀಡುತ್ತಿದ್ದ ಆಪ್ತತೆಯನ್ನು ನೀಡಲಿಲ್ಲ. ಬೇರೆ ಯಾವ್ಯಾವುದೋ ಕೆಲಸಗಳನ್ನು ಮಾಡಲಾಗದೆ ಅವರು ನಾಲ್ಕು ವರ್ಷಗಳಲ್ಲಿ ಅಲ್ಲಿಂದ ಹಿಂದಿರುಗಿದರು. “ನಾನು ಅಲ್ಲಿದ್ದಾಗ ಟಿಬ್ರಿಯ ನೆನಪು ಬಹಳವಾಗಿ ಕಾಡುತ್ತಿತ್ತು. ಈಗಲೂ ಸಹ ನಾನು ನನ್ನ ಬಿಡುವಿನ ಸಮಯವನ್ನು ಕಾಲುವೆ ನೋಡುತ್ತಾ ಕಳೆಯುತ್ತೇನೆ,” ಎಂದು ಅವರು ತಮ್ಮ ದೈನಂದಿನ ಕೆಲಸಕ್ಕೆ ಮರಳುತ್ತಾ ಹೇಳಿದರು. ನಂತರ ಆಲೂಗಡ್ಡೆ, ಈರುಳ್ಳಿ, ಟೊಮೆಟೊ ಮತ್ತು ಇತರ ತರಕಾರಿಗಳನ್ನು ಹೊತ್ತುಕೊಂಡು, ತನ್ನ ಮೋಟಾರುಬೈಕನ್ನು ಏರಿ ಎಂದಿನ ವ್ಯಾಪಾರಕ್ಕೆ ತೆರಳಿದರು.

ವರದಿಯನ್ನು ತಯಾರಿಸುವಲ್ಲಿ ಸಹಾಯ ನೀಡಿದ ಸುಮೇಧಾ ಮಿತ್ತಲ್ ಅವರಿಗೆ ಲೇಖಕರು ಕೃತಜ್ಞತೆ ತಿಳಿಸಲು ಬಯಸುತ್ತಾರೆ .

ನೀವು ಆತ್ಮಹತ್ಯೆಯ ಯೋಚನೆಯಲ್ಲಿದ್ದರೆ ಅಥವಾ ಅಂತಹ ಸಂಕಷ್ಟದಲ್ಲಿರುವವರ ಕುರಿತು ನಿಮಗೆ ತಿಳಿದಿದ್ದರೆ ದಯವಿಟ್ಟು ದಯವಿಟ್ಟು ರಾಷ್ಟ್ರೀಯ ಸಹಾಯವಾಣಿ ಯಾದ ಕಿರಣ್ ಅನ್ನು 1800-599-0019 (24/7 ಟೋಲ್ ಫ್ರೀ ) ಸಂಖ್ಯೆಯ ಮೂಲಕ ತಲುಪಿ ಅಥವಾ ನಿಮ್ಮ ಹತ್ತಿರದ ಯಾವುದಾದರೂ ಸಹಾಯವಾಣಿಗೆ ಕರೆ ಮಾಡಿ . ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಸೇವೆಗಳ ಬಗ್ಗೆ ಮಾಹಿತಿ ಪಡೆಯಲು , ದಯವಿಟ್ಟು SPIF ನ ಮಾನಸಿಕ ಆರೋಗ್ಯ ಡೈರೆಕ್ಟರಿಗೆ ಭೇಟಿ ನೀಡಿ .

ಅನುವಾದ: ಶಂಕರ. ಎನ್. ಕೆಂಚನೂರು

Amir Malik

Amir Malik is an independent journalist, and a 2022 PARI Fellow.

Other stories by Amir Malik
Editor : S. Senthalir

S. Senthalir is Assistant Editor at the People's Archive of Rural India. She reports on the intersection of gender, caste and labour. She was a PARI Fellow in 2020

Other stories by S. Senthalir
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru