ಮೊದಲಿಗೆ ತಂಗಮ್ಮ ತನ್ನ ಬರುವಿಕೆಯನ್ನು ಘೋಷಿಸುವುದು ಅಲ್ಲಿ ಬಿದ್ದಿರುವ ತೆಂಗಿನ ಕೋಲನ್ನು ಆಯ್ದುಕೊಂಡು ನಿವೇಶನದ ಪೊದೆಗಳಿಗೆ ಬಡಿಯುವ ಮೂಲಕ. “ಪೊದೆಗಳು ಅಡ್ಡಾದಿಡ್ಡಿಯಾಗಿ ಬೆಳೆದಿರುವ ನಿವೇಶನಗಳಿಗೆ ನಾನು ಬಹಳ ಎಚ್ಚರಿಕೆಯಿಂದ ಪ್ರವೇಶಿಸುತ್ತೇನೆ. ಅಲ್ಲಿಗೆ ಹೋಗುವ ಮೊದಲು ಕೋಲಿನಿಂದ ಬಡಿದು ಸದ್ದು ಮಾಡುತ್ತೇನೆ. ಆಗ ಅಲ್ಲಿರಬಹುದಾದ ಹಾವು ಅಥವಾ ಇತರ ಯಾವುದೇ ಅಪಾಯಕಾರಿ ಜೀವಿಗಳು ಅಲ್ಲಿಂದ ಓಡುತ್ತವೆ.” ಎಂದು ಹೇಳುತ್ತಾರೆ. ಎತ್ತರದ ತೆಂಗಿನ ಮರಗಳ ಅಡಿಯಲ್ಲಿ ಬೆಳೆದು ನಿಂತ ಪೊದೆ ಮತ್ತು ಬಿದ್ದ ಗರಿಗಳು ಮತ್ತು ಹುಲ್ಲಿನ ನಡುವೆ ಇರಬಹುದಾದ ಜೀವಿಗಳ ಕುರಿತು ಬಹಳ ಎಚ್ಚರಿಕೆ ವಹಿಸುತ್ತಾರವರು.
ಈ ಪುಟ್ಟ ಪೊದೆಗಳಿರುವುದು ಎರ್ನಾಲಕುಲಂ ನಗರದ ಹೌಸಿಂಗ್ ಕಾಲನಿಯ ಖಾಲಿ ನಿವೇಶನಗಳಲ್ಲಿ. “ದಾರಿಯುದ್ದಕ್ಕೂ [ಒಳ್ಳೆಯ] ತೆಂಗಿನಕಾಯಿ ಸಿಗುವುದು ಅದೃಷ್ಟದ ಸಂಕೇತ” ಎನ್ನುತ್ತಾರೆ ಈ 62 ವರ್ಷದ ತಮ್ಮ ಜೀವನೋಪಾಯಕ್ಕೆ ಬೇರೆ ಕೆಲಸ ಸಿಗದೆ ತೆಂಗಿನಕಾಯಿಗಳನ್ನು ಒಟ್ಟುಗೂಡಿಸಿ ಮಾರುವ ಮಹಿಳೆ ಹೇಳುತ್ತಾರೆ. ಬಹಳಷ್ಟು ಮಲಯಾಳಿ ಅಡುಗೆ ಮನೆಗಳಲ್ಲಿ ತೆಂಗಿನಕಾಯಿಗೆ ಮಹತ್ವದ ಸ್ಥಾನವಿದ್ದು ಅಲ್ಲಿ ತೆಂಗಿನಕಾಯಿಗೆ ಸದಾ ಬೇಡಿಕೆಯಿರುತ್ತದೆ.
“ಮೊದಲು ಕೆಲಸ ಮುಗಿದ ನಂತರ ಇಲ್ಲಿ ಅಕ್ಕಪಕ್ಕದಲ್ಲಿ ಕಾಯಿ ಹೆಕ್ಕುತ್ತಿದ್ದೆ[ಪುದಿಯ ರೋಡ್ ಜಂಕ್ಷನ್] ಆದರೆ ನನ್ನ ಈಗಿನ ಆರೋಗ್ಯ ಸ್ಥಿತಿ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ” ಎತ್ತರಕ್ಕೆ ಬೆಳೆದು ನಿಂತ ಹುಲ್ಲಿನ ನಡುವೆ ಸಾಗುತ್ತಾ ಅವರು ಹೇಳುತ್ತಾರೆ. ಒಮ್ಮೊಮ್ಮೆ ಉಸಿರು ತೆಗೆದುಕೊಳ್ಳಲು, ಅಥವಾ ಕಾಯಿ ಹುಡುಕಲು ಅಲ್ಲಲ್ಲಿ ನಿಲ್ಲುತ್ತಾರೆ. ಹೀಗೆ ಕಾಯಿ ಹುಡುಕುವಾಗ ಕಣ್ಣು ಕುರುಡಾಗಿಸುವ ಬಿಸಿಲಿನಿಂದ ಪಾರಾಗಲು ಕಣ್ಣಿಗೆ ಕೈಯನ್ನು ಅಡ್ಡಲಾಗಿ ಹಿಡಿಯುತ್ತಾರೆ.
ಐದು ವರ್ಷಗಳ ಹಿಂದೆ, ತಂಗಮ್ಮ ಉಸಿರಾಟದ ತೊಂದರೆ, ತೀವ್ರ ಆಯಾಸ ಮತ್ತು ಇತರ ಥೈರಾಯ್ಡ್ ಸಂಬಂಧಿತ ತೊಡಕುಗಳಿಂದ ಬಳಲಲು ಪ್ರಾರಂಭಿಸಿದರು. ಇದರಿಂದಾಗಿ ಅವರು ಮಾಡುತ್ತಿದ್ದ ಮನೆಗೆಲಸವನ್ನು ಬಿಡುವಂತಾಯಿತು ಮತ್ತು ಅದರೊಂದಿಗೆ ಅವರಿಗೆ ಬರುತ್ತಿದ್ದ 6,000 ರೂ.ಗಳ ಸಂಪಾದನೆಯೂ ನಿಂತುಹೋಯಿತು. ಆದಾಯದ ಅಗತ್ಯವಿದ್ದ ತಂಗಮ್ಮನಿಗೆ ಮನೆಯಲ್ಲಿ ಉಳಿಯುವುದು ಸುಲಭದ ಆಯ್ಕೆಯಾಗಿರಲಿಲ್ಲ, ಹೀಗಾಗಿ ಅವರು ಮನೆಗಳ ಧೂಳು ಸ್ವಚ್ಚ ಮಾಡುವುದು ಮತ್ತು ನೆರೆಹೊರೆಯ ಅಂಗಳಗಳನ್ನು ಸ್ವಚ್ಛಗೊಳಿಸುವಂತಹ ಕಡಿಮೆ ದೈಹಿಕ ಪ್ರಯಾಸಕರ ಕೆಲಸಗಳಿಗೆ ಹೋಗತೊಡಗಿದರು. ಕೋವಿಡ್ -19 ಅಪ್ಪಳಿಸಿದ ನಂತರ, ಆ ಕೆಲಸವೂ ನಿಂತುಹೋಯಿತು.


ಕೋಲು ಮತ್ತು ಪ್ಲಾಸ್ಟಿಕ್ ಚೀಲದೊಡನೆ ಸಜ್ಜಾಗಿರುವ ತಂಗಮ್ಮ. ಅವರು ಕಳೆ ಗಿಡಗಳು ಬೆಳೆದು ನಿಂತ ಖಾಲಿ ನಿವೇಶನಗಳಲ್ಲಿ ತೆಂಗಿನ ಮರದಿಂದ ಬೀಳುವ ಕಾಯಿಗಳನ್ನು ಹುಡುಕಿ ಸಂಗ್ರಹಿಸುತ್ತಾರೆ. (ಬಲ) ಪೊದೆಗಳಲ್ಲಿ ಅಡಗಿರಬಹುದಾದ ಹಾವು ಮತ್ತು ಇತರೆ ಜೀವಿಗಳನ್ನು ಓಡಿಸುವ ಸಲುವಾಗಿ ಕೋಲನ್ನು ಬಡಿಯುತ್ತಾರೆ


ಎಡ: ದಾರಿ ಮಾಡಿಕೊಳ್ಳುವ ಸಲುವಾಗಿ ಕೆಲವೊಮ್ಮೆ ಮರಗಳ ಕೆಳಗಿನ ಗರಿಗಳನ್ನು ಕಡಿಯಬೇಕಾಗುತ್ತದೆ. ಬಲ: ಒಂದೋ, ಎರಡೋ ಕಾಯಿ ಸಿಕ್ಕಾಗ ಇಲ್ಲಿ ಈಗಾಗಲೇ ಯಾರೋ ಕಾಯಿ ಹೆಕ್ಕಿಕೊಂಡು ಹೋಗಿದ್ದಾರೆಂದು ತೀರ್ಮಾನಿಸುತ್ತಾರೆ
ಅದರ ನಂತರ ತಂಗಮ್ಮ ಹೀಗೆ ಖಾಲಿ ನಿವೇಶನಗಳಲ್ಲಿನ ಮರದಿಂದ ಸಿಗುವ ಬಿದ್ದ ತೆಂಗಿನಕಾಯಿಗಳನ್ನು ಆಯ್ದು ಮಾರಿ ಬರುವ ಹಣದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಜೊತೆಗೆ ಸರ್ಕಾರದಿಮದ 1,600 ರೂಪಾಯಿಗಳ ಪೆನ್ಷನ್ ಕೂಡಾ ಸಿಗುತ್ತಿದೆ.
“ಈ ನಿವೇಶನಗಳಿಗೆ ಬರದಂತೆ ಯಾರೂ ನನ್ನನ್ನು ತಡೆಯುವುದಿಲ್ಲ. ಎಲ್ಲರಿಗೂ ನಾನು ಯಾವುದೇ ಹಾನಿ ಮಾಡುವುದಿಲ್ಲವೆಂದು ಗೊತ್ತು” ಎನ್ನುತ್ತಾರೆ ತಂಗಮ್ಮ. ಅವರು ಈ ನಿವೇಶನಗಳಲ್ಲಿನ ಆರೋಗ್ಯವಂತ ತೆಂಗಿನ ಮರಗಳಡಿ ಕಾಯಿಗಾಗಿ ಹುಡುಕುತ್ತಾರೆ.
ತಂಗಮ್ಮ ತಮ್ಮ ಕೆಲಸದ ಕುರಿತು ಹೇಳುತ್ತಾ, ಬಿದ್ದಿರಬಹುದಾದ ತಂಗಿನಕಾಯಿಗಳನ್ನು ಹೆಕ್ಕಲು ಮರದ ಬುಡಕ್ಕೆ ಸಾಗಲು ದಾರಿಯಲ್ಲಿನ ಕೊಂಬೆಗಳನ್ನು ಕತ್ತರಿಸುತ್ತಾ, ಪೊದೆಗಳನ್ನು ಬದಿಗೆ ಸರಿಸುತ್ತಾ ಸಾಗುತ್ತಿದ್ದರು. ಕಾಯಿ ಸಿಕ್ಕಿದರೆ ಅಲ್ಲೆ ದಂಡೆಯ ಮೇಲಿರಿಸಿ ಹುಡುಕಾಟ ಮುಂದುವರೆಸುತ್ತಿದ್ದರು.
ಸುಮಾರು ಒಂದು ಗಂಟೆಗಳ ಕಾಲ ಹೀಗೆ ತೆಂಗಿನಕಾಯಿ ಹುಡುಕಿ ಮುಗಿಸಿದ ನಂತರ ತಂಗಮ್ಮ ಇನ್ನೊಂದು ಕಾಂಪೌಂಡಿನ ಒಳಗೆ ಹೋಗುತ್ತಾರೆ. ಅದು ಅವರು ಮೊದಲು ಕೆಲಸ ಮಾಡುತ್ತಿದ್ದ ಮಾಲಿಕರ ಮನೆ. ಅಲ್ಲಿ ಅವರಿಗಾಗಿ ಒಂದು ಲೋಟ ನೀರು ಕಾದಿರುತದೆ.
ದಣಿವಾರಿಸಿಕೊಂಡ ತಂಗಮ್ಮ ತಮ್ಮ ಬಟ್ಟೆ ಮತ್ತು ಮೈಗೆ ಅಂಟಿಕೊಂಡ ಎಲೆಗಳು ಮತ್ತು ಕಳೆಯನ್ನು ಜಾಡಿಸಿ ಸ್ವಚ್ಛಗೊಳಿಸಿಕೊಂಡು ನಂತರ ಕಾಯಿಗಳ ವಿಂಗಡಣೆ ಆರಂಭಿಸುತ್ತಾರೆ. ಅವುಗಳನ್ನು ಗಾತ್ರಕ್ಕೆ ಅನುಗುಣವಾಗಿ ಬೇರೆ ಬೇರೆ ಚೀಲಗಳಿಗೆ ಹಾಕಿ ಹತ್ತಿರದ ಮನೆ ಮತ್ತು ಹೋಟೆಲ್ಲುಗಳಿಗೆ ಮಾರುತ್ತಾರೆ. ಮಾಮೂಲಿ ಗಾತ್ರದ ಕಾಯಿಗೆ 20 ರೂ. ದೊರಕಿದರೆ ದೊಡ್ಡ ಕಾಯಿಗಳಿಗೆ 30 ರೂ. ಸಿಗುತ್ತದೆ.
ತೆಂಗಿನಕಾಯಿಗಳನ್ನು ವಿಂಗಡಿಸಿ ಮುಗಿದ ನಂತರ ತಾನು ಕೆಲಸದಲ್ಲಿ ತೊಟ್ಟುಕೊಂಡಿದ್ದ ನೈಟಿಯನ್ನು ಬಿಚ್ಚಿಟ್ಟು ಸೀರೆ ಉಟ್ಟುಕೊಳ್ಳುತ್ತಾರೆ. ನಂತರ ಅಲ್ಲಿಂದ ಪುದಿಯ ಜಂಕ್ಷನ್ ರೋಡಿಗೆ ಹೋಗುವ ಬಸ್ ಹಿಡಿಯಲು ಧಾವಿಸುತ್ತಾರೆ. ಅಲ್ಲಿ ಇಳಿದ ಅವರು ತಮ್ಮ ಬಳಿಯಿರುವ ತೆಂಗಿನಕಾಯಿಗಳನ್ನು ಹೋಟೆಲ್ ಒಂದಕ್ಕೆ ಮಾರುತ್ತಾರೆ.


ಎಡ: ತಂಗಮ್ಮ ನೀರು ಕುಡಿದು ಕೆಲವು ಕ್ಷಣದ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ. ಬಲ: ಎಲ್ಲಾ ಕಾಯಿಗಳನ್ನು ಒಟ್ಟುಗೂಡಿಸಿ ಅವುಗಳನ್ನು ವಿಂಗಡಿಸಿ ಗೋಡೆಯ ಮೇಲಿರಿಸುತ್ತಿರುವುದು


ಎಡ: ತೆಂಗಿನಕಾಯಿಗಳನ್ನು ಸಂಗ್ರಹಿಸಿದ ನಂತರ, ತಂಗಮ್ಮ ತನ್ನ ಕೆಲಸದ ಬಟ್ಟೆಗಳನ್ನು ಪ್ಯಾಕ್ ಮಾಡಿ ಸಮಯಕ್ಕೆ ಸರಿಯಾಗಿ ಬಸ್ ಹಿಡಿಯಲು ಬೇಗನೆ ಸೀರೆಯನ್ನು ಬದಲಾಯಿಸುತ್ತಾರೆ. ಬಲ: ತಾಜಾ ತೆಂಗಿನಕಾಯಿಗಳನ್ನು ವಿಂಗಡಿಸಿ ಮೂಲೆಯಲ್ಲಿರುವ ಸ್ಥಳೀಯ ಹೋಟೆಲ್‌ಗೆ ಅಥವಾ ನೆರೆಹೊರೆಯ ಮನೆಗಳಿಗೆ ಮಾರಾಟ ಮಾಡಲಾಗುತ್ತದೆ
“ನನಗೆ ಯಾವಾಗಲೂ ಹೀಗೆ ತೆಂಗಿನಕಾಯಿ ಸಿಗುವುದಿಲ್ಲ. ಇದು ನಮ್ಮ ನಸೀಬನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆ ಬಹಳಷ್ಟು ಸಿಕ್ಕರೆ ಕೆಲವೊಮ್ಮೆ ಏನೂ ಸಿಗುವುದಿಲ್ಲ” ಎನ್ನುತ್ತಾರೆ ತಂಗಮ್ಮ.
ತೆಂಗಿನ ಮರಗಳನ್ನು ನೋಡುವುದು ಕಷ್ಟವಾಗುತ್ತಿದೆ ಎಂದು ತಂಗಮ್ಮ ಅಳಲು ತೋಡಿಕೊಳ್ಳುತ್ತಾರೆ, "ನನಗೆ ತಲೆ ತಿರುಗುತ್ತದೆ" ಎಂದು ಶ್ರಮದ ಕಾರಣಕ್ಕೆ ದಣಿದ ಅವರು ಮಾತು ನಿಲ್ಲಿಸಿದರು. ಅವರು ತನ್ನ ಆರೋಗ್ಯದ ಕ್ಷಿಪ್ರ ಕುಸಿತಕ್ಕೆ ಮನೆಯ ಹತ್ತಿರದ ಕಾರ್ಖಾನೆಗಳ ಮಾಲಿನ್ಯವನ್ನು ದೂಷಿಸುತ್ತಾರೆ.
ವಿಪರ್ಯಾಸವೆಂದರೆ ತಂಗಮ್ಮ ತನ್ನ ಅಡುಗೆಯಲ್ಲಿ ಅಷ್ಟಾಗಿ ತೆಂಗಿನಕಾಯಿ ಬಳಸಲಾಗುವುದಿಲ್ಲ. “ನನಗೆ ಕಾಯಿ ಹಾಕಿದ ಆಹಾರ ಅಷ್ಟಾಗಿ ಇಷ್ಟವಾಗುವುದಿಲ್ಲ. ನಾನು ಯಾವಾಗಲಾದರೂ ಪುಟ್ಟು ತಯಾರಿಸಿದಾಗ ಅಥವಾ ಆಯಲಾ [ಬಂಗುಡೆ] ಮೀನು ಸಾರು ಮಾಡುವಾಗ ಬಳಸುತ್ತೇನೆ.” ಎನ್ನುತ್ತಾರೆ ಅವರು. ಕಾಯಿ ಸಿಪ್ಪೆಯನ್ನು ಉರುವಲಿಗೆ ಬಳಸುವ ಅವರು ಕೊಬ್ಬರಿಯನ್ನು ಎಣ್ಣೆಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಮೊಳಕೆ ಒಡೆದ ಗಿಡಗಳನ್ನು ಅವರ ಮಗ ಕೃಷ್ಣನ್‌ಗೆ ಬೋನ್ಸಾಯ್ ಕೃಷಿಗಾಗಿ ನೀಡುತ್ತಾರೆ.
ತನ್ನ ಆರೋಗ್ಯ ಚೆನ್ನಾಗಿದ್ದ ದಿನಗಳಲ್ಲಿ ತಂಗಮ್ಮ 40 ದಿನಗಳ ಅಂತರದಲ್ಲಿ ಕಾಯಿ ಹೆಕ್ಕಲು ಹೋಗುತ್ತಿದ್ದರು. ಆಗ ತಾಜಾ ತೆಂಗಿನಕಾಯಿ ಸಿಗುವ ಸಾಧ್ಯತೆ ಹೆಚ್ಚಿತ್ತು. ಈಗ ಅವರ ಈ ಕೆಲಸ ಅನಿಯಮಿತವಾಗಿದೆ. ಏಳೂರಿನ ಅವರ ಮನೆಯಿಂದ ಇಲ್ಲಿಗೆ ಬರಲು ಬಸ್ ಚಾರ್ಜ್ ಖರ್ಚು ಮಾಡಬೇಕು ಮತ್ತು ಪುದಿಯ ರಸ್ತೆಯಲ್ಲಿ ಬಸ್ ಇಳಿದು ನಡೆಯಬೇಕಾಗುತ್ತದೆ. “ನಾನು ಪುದಿಯ ರಸ್ತೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ಎಲ್ಲವೂ ಸರಿಯಿತ್ತು. ಈಗ 20 ನಿಮಿಷಗಳ ಬಸ್ ಪ್ರಯಾಣ ಮತ್ತು ನಂತರದ 15 ನಿಮಿಷಗಳ ನಡಿಗೆ ನನ್ನನ್ನು ಸುಸ್ತು ಮಾಡಿಬಿಡುತ್ತದೆ” ಎಂದು ಅವರು ಹೇಳುತ್ತಾರೆ.
ತಂಗಮ್ಮ ಪುದಿಯ ರಸ್ತೆ ಜಂಕ್ಷನ್ ಸುತ್ತಮುತ್ತಲಿನ ಪ್ರದೇಶದಲ್ಲಿ ತನ್ನ ಐದು ಜನ ಒಡಹುಟ್ಟಿದವರೊನೆ ಹುಟ್ಟಿ ಬೆಳೆದವರು. ಅವರ ಹಿರಿಯರ ಮನೆಯಿದ್ದ ಜಾಗವನ್ನು ಐದು ಜನರ ನಡುವೆ ಪಾಲು ಮಾಡಿ ಹಂಚಲಾಯಿತು. ತಂಗಮ್ಮನ ಪಾಲಿಗೆ ಬಂದಿದ್ದ ಜಾಗವನ್ನು ಅವರ ಗಂಡ ವೇಲಾಯುಧನ್ ಮಾರಿದರು. ಅವರಿಗೆ ಒಂದೆಡೆ ನಿಲ್ಲಲು ಸ್ವಂತ ಮನೆಯಿಲ್ಲದ ಕಾರಣ ಆಗಾಗ ಮನೆ ಬದಲಾಯಿಸುತ್ತಲೇ ಇದ್ದರು. ಕೆಲವೊಮ್ಮೆ ಪುದಿಯ ನಗರದಲ್ಲಿ, ಇನ್ನೊ ಕೆಲವೊಮ್ಮೆ ಸೇತುವೆಯ ಕೆಳಗೆ ವಾಸಿಸುತ್ತಿರುವ ತನ್ನ ಸಹೋದರಿಯೊಡನೆ ವಾಸಿಸುತ್ತಿದ್ದರು. ಅವರ ಪ್ರಸ್ತುತ ಮನೆಯನ್ನು ಏಳೂರಿನ ಎಸ್.ಸಿ ಕಾಲೋನಿಯಲ್ಲಿ ಮೂರು ಸೆಂಟ್ಸ್ ಭೂಮಿಯಲ್ಲಿ (1306.8 ಚದರ ಅಡಿ) ನಿರ್ಮಿಸಲಾಗಿದೆ ಮತ್ತು ಇದು ಮನೆಯಿಲ್ಲದವರಿಗೆ ಸಹಾಯ ಮಾಡಲು ಪಂಚಾಯತ್ ಇದನ್ನು ಪಟ್ಟಾಯಂ (ಭೂ ಪತ್ರ) ಆಗಿ ನೀಡಿದ್ದು.


ಎಡ: ಆಗಾಗ ಕಾಡುವ ತಲೆ ತಿರುಗುವಿಕೆಯಿಂದಾಗಿ ತೆಂಗಿನ ಮರದ ತಲೆಯನ್ನು ನೋಡುವುದು ಕಷ್ಟ ಎನ್ನುತ್ತಾರೆ ತಂಗಮ್ಮ. ʼನನಗೆ ಪ್ರತಿ ಸಲವೂ ತೆಂಗಿನಕಾಯಿ ಸಿಗುವುದಿಲ್ಲ. ಅದು ಅದೃಷ್ಟವನ್ನು ಅವಲಂಬಿಸಿದೆ. ಒಮ್ಮೊಮ್ಮೆ ಬಹಳಷ್ಟು ದೊರಕಿದರೆ ಇನ್ನೊಮ್ಮೆ ಏನೂ ಸಿಗುವುದಿಲ್ಲ


ಎಡಭಾಗ: ಮನೆಯಲ್ಲಿ ತಂಗಮ್ಮರನ್ನು ಮಗಳು ಕಾರ್ತಿಕಾ, ಮೊಮ್ಮಗಳು ವೈಷ್ಣವಿ ಮತ್ತು ಸಾಕು ಗಿಳಿ ತಾತು ಸ್ವಾಗತಿಸುತ್ತಾರೆ. ಬಲ: ತಂಗಮ್ಮ ಮತ್ತು ವೈಷ್ಣವಿ, ಅವಳನ್ನು ಅವರು 'ತಕ್ಕಾಲಿ' (ಟೊಮೆಟೊ) ಎಂದು ಕರೆಯುತ್ತಾರೆ
ಪುದಿಯ ರಸ್ತೆ ಮತ್ತು ಸುತ್ತಮುತ್ತ ತೆಂಗಿನ ಕಾಯಿ ಕೊಯ್ಯುವ ಕೆಲಸ ಮಾಡುತ್ತಿದ್ದ ವೇಲಾಯುಧನ್ ಮತ್ತು ತಂಗಮ್ಮ ದಂಪತಿಗೆ ಕಣ್ಣನ್ (34) ಮತ್ತು ಕಾರ್ತಿಕಾ (36) ಎಂಬ ಇಬ್ಬರು ಮಕ್ಕಳಿದ್ದಾರೆ. ಮೊದಲನೆಯವರು ತ್ರಿಶೂರಿನಲ್ಲಿ ವಾಸಿಸುತ್ತಾ ತನ್ನ ಹೆಂಡತಿಯ ಕುಟುಂಬಕ್ಕೆ ಕೃಷಿಯಲ್ಲಿ ಸಹಾಯ ಮಾಡುತ್ತಾರೆ. ಅವರ ಮಗಳು ಕಾರ್ತಿಕಾ ತನ್ನ ಮೂರು ವರ್ಷದ ಮಗಳು ವೈಷ್ಣವಿಯೊಂದಿಗೆ ಹತ್ತಿರದಲ್ಲೇ ವಾಸಿಸುತ್ತಿದ್ದಾರೆ, ಅವಳನ್ನು ತಂಗಮ್ಮ ಪ್ರೀತಿಯಿಂದ ತಕ್ಕಾಲಿ (ಟೊಮೆಟೊ) ಎಂದು ಕರೆಯುತ್ತಾರೆ. 'ಮಕ್ಕಳೊಂದಿಗೆ ಇರುವುದು ತುಂಬಾ ಮೋಜು, ಅವರು ತುಂಬಾ ಕಾಡುವವರೂ ಆಗಿರುತ್ತಾರೆ' ಎಂದು ಅವರು ಹೇಳುತ್ತಾರೆ.
*****
“ಈಗ ನನಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ. ಇನ್ನು ಮುಂದೆ ನಾನು ಕಾಯಿ ಹೆಕ್ಕಲು ಹೋಗುವುದಿಲ್ಲ” ಎಂದು ರಾಶಿ ಬಿದ್ದಿದ್ದ ಬಟ್ಟೆ ಮತ್ತು ಪತ್ರಿಕೆಗಳನ್ನು ಜೋಡಿಸುತ್ತಾ ಹೇಳಿದರು. ತಂಗಮ್ಮ ತಮ್ಮ ಸಾಕು ಗಿಳಿಯೊಂದಿಗೆ ಒಬ್ಬಂಟಿಯಾಗಿ ವಾಸಿಸುತ್ತಾರೆ. ಅವರ ಸಾಕು ಗಿಳಿ ತಾತುವಿಗೆ ಯಾರಾದರೂ ಮನೆಗೆ ಬಂದರೆ ಕೂಗಿ ಹೇಳುವಂತೆ ತರಬೇತಿ ನೀಡಲಾಗಿದೆ.
"ತನ್ನ ಬದುಕಿನ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಅವರು ಹೇಳುತ್ತಾರೆ, "ಒಮ್ಮೆ ನಾನು ಹತ್ತಿರದಲ್ಲಿ ಹಾವು ಚಲಿಸುತ್ತಿರುವುದನ್ನು ಗಮನಿಸಿ ನಿಶ್ಚಲವಾಗಿ ನಿಂತಿದ್ದೆ. ಅದು ನನ್ನ ಹಾಳಾದ ಚಪ್ಪಲಿಯ ಮೇಲೆಯೇ ಹರಿದು ಹೋಯಿತು. ಈಗ ಹಾವು ಇರಲಿ ತೆಂಗಿನಕಾಯಿಗಳನ್ನು ಸಹ ಗುರುತಿಸಲು ಸಾಧ್ಯವಾಗುವುದಿಲ್ಲ!" ಎಂದು ಅವರು ಹೇಳುತ್ತಾರೆ, ಏಕೆಂದರೆ ಅವರ ದೃಷ್ಟಿ ದುರ್ಬಲಗೊಂಡಿದೆ. ಯಾವುದೇ ಕೆಲಸವನ್ನು ಮಾಡಲಾಗದ ತಂಗಮ್ಮನಿಗೆ ತಮ್ಮ ಕಾಯಿಲೆಗಳಿಗೆ ಔಷಧಿ ಮಾಡಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅವರಿಗೆ ಊಟಕ್ಕೂ ಕಷ್ಟವಿರುತ್ತದೆ.
"ನಾನು ಕೆಲಸ ಮಾಡಿದ ಪ್ರತಿ ಮನೆಯವರು ಈಗಲೂ ನನಗೆ ನಗದು ಮತ್ತು ವಸ್ತುವಿನ ರೂಪದಲ್ಲಿ ಸಹಾಯ ಮಾಡುತ್ತಾರೆ. ಆದರೆ ಅವರನ್ನು ಭೇಟಿಯಾಗಲು ಹೋಗುವುದು ತುಂಬಾ ಕಷ್ಟವಾಗುತ್ತಿದೆ" ಎಂದು ಹಿತೈಷಿಯೊಬ್ಬರನ್ನು ಭೇಟಿ ಮಾಡಲು ಹೋಗುವ ದಾರಿಯಲ್ಲಿ ತಂಗಮ್ಮ ಹೇಳುತ್ತಾರೆ. ಅವರು ಅಂತಹ ಒಂದು ಮನೆಗೆ ನಡೆದು ಹೋಗುವಾಗ ದಣಿವಾದಂತೆನ್ನಿಸಿ ಬಾಯಿ ಒಣಗತೊಡಗಿತು. ಒಂದು ಮಿಠಾಯಿಯನ್ನು ಬಾಯಿಗೆ ಹಾಕಿಕೊಂಡವರು ಸಕ್ಕರೆ ಶಕ್ತಿ ನೀಡಬಹುದೆನ್ನುವ ಭರವಸೆಯೊಡನೆ ಮತ್ತೆ ನಡೆಯತೊಡಗಿದರು.
ಅನುವಾದ: ಶಂಕರ. ಎನ್. ಕೆಂಚನೂರು