ಕೆಲಸದ ಅವಧಿಯು ಮುಗಿಯದಿದ್ದಾಗ್ಯೂ, ಮೊದಲ ಮಹಡಿಯ ಕೊಠಡಿಗೆ ಬೀಗ ಹಾಕಿದ್ದು, ನಿಶ್ಶಬ್ದವಾಗಿತ್ತು. ತಗಡು ಹಾಗೂ ಮರದಿಂದ ನಿರ್ಮಿಸಲಾದ ಪಕ್ಕದ ಗುಡಿಸಲಿನಲ್ಲಿ ಕುರ್ಚಿ, ಮೇಜು, ಲೋಹದ ಬೆಂಚು, ಕಬ್ಬಿಣಾಂಶದ ಸಿರಪ್‌ ಮತ್ತು ಫೋಲಿಕ್‌ ಆಸಿಡ್‌ ಮಾತ್ರೆಗಳ ರಟ್ಟಿನ ಪಟ್ಟಿಗೆಗಳು ಹಾಗೂ ಬಿಸಾಡಿದ ಹೊದಿಕೆಗಳ ರಾಶಿಯ ಹೊರತಾಗಿ ಯಾರೊಬ್ಬರೂ ಇರಲಿಲ್ಲ. ತುಕ್ಕುಹಿಡಿದ ಹಳೆಯ ಬೋರ್ಡ್‌ ಸಹ ಅಲ್ಲಿಯೇ ಬಿದ್ದಿತ್ತಲ್ಲದೆ, ಬೀಗ ಜಡಿದ ಕೊಠಡಿಯ ಕಟ್ಟಡದ ಪ್ರವೇಶದ್ವಾರದಲ್ಲಿದ್ದ ಹೊಸ ಬೋರ್ಡಿನ ಮೇಲೆ, ಹೀಗೆ ಬರೆಯಲಾಗಿತ್ತು: ‘Govt. New Type Primary Health Centre, Shabri Mohalla, Dal SGR [Srinagar]’. ‘(ನೂತನ ಮಾದರಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಬ್ರಿ ಮೊಹಲ್ಲ, ದಾಲ್‌ ಎಸ್‌ಜಿಆರ್‌ [ಶ್ರೀನಗರ್‌])’

ಇಲ್ಲಿಂದ 10 ನಿಮಿಷಗಳ ದೋಣಿ ಪ್ರಯಾಣವು, ಸದಾ ಗಿಜಿಗುಡುತ್ತಿದ್ದು, ಸಾಮಾನ್ಯವಾಗಿ ತೆರೆದೇ ಇರುವ ನಜಿ಼ರ್‌ ಅಹ್ಮದ್‌ ಭಟ್‌ ಚಿಕಿತ್ಸಾಲಯಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ತಣ್ಣನೆಯ ಚಳಿಗಾಲದ ಮಧ್ಯಾಹ್ನ ಆತ, ತಮ್ಮ ಮರದ ಕಂಬಗಳ ಮೇಲಿನ ಮರದ ಚಿಕ್ಕ ಅಂಗಡಿಯಲ್ಲಿ, ಮಧ್ಯಾಹ್ನದ ಕೊನೆಯ ಗ್ರಾಹಕ-ರೋಗಿಯನ್ನು ನೋಡುತ್ತಿದ್ದಾರೆ (ಮತ್ತಷ್ಟು ಜನರ ಚಿಕಿತ್ಸೆಗಾಗಿ ಸಂಜೆ ಇಲ್ಲಿಗೆ ಮರಳುತ್ತಾರೆ). ಚುಚ್ಚುಮದ್ದುಗಳನ್ನು ನೀಡುವ ಒಳಕೋಣೆಯನ್ನು ಸಹ ಇದು ಒಳಗೊಂಡಿದೆ. ಹೊರಭಾಗದಲ್ಲಿನ ಬೋರ್ಡಿನ ಮೇಲೆ ‘Bhat Medicate Chemist and Druggist’ ಎಂದು ಬರೆಯಲಾಗಿದೆ.

ಸುಮಾರು 60ರ ವಯಸ್ಸಿನ ಹಫೀಜ಼ ದರ್‌ ಇಲ್ಲಿ ಬೆಂಚೊಂದರ ಮೇಲೆ ಕುಳಿತಿದ್ದಾರೆ. ನಝೀರ್‌ ‘ವೈದ್ಯರನ್ನು’ದೋಣಿಯಲ್ಲಿ ಕರೆದೊಯ್ಯಲು ಬಂದಿರುವ ಆಕೆಯ ಮೊಹಲ್ಲಾ, 10 ನಿಮಿಷಗಳ ದೋಣಿ ಪ್ರಯಾಣದಷ್ಟು ದೂರವಿದೆ. “ನನ್ನ ಅತ್ತೆಯವರು ಕೆಲವು ಚುಚ್ಚುಮದ್ದುಗಳನ್ನು (ಸಕ್ಕರೆ ಖಾಯಿಲೆಗಾಗಿ) ತೆಗೆದುಕೊಳ್ಳುವ ಅವಶ್ಯಕತೆಯಿದ್ದು, ಅವರಿಗೆ ವಯಸ್ಸಾಗಿರುವುದರಿಂದ ಇಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ. ನಝೀರ್‌ ಸಾಬ್‌ ಅನುಕಂಪದಿಂದ ನಮ್ಮ ಮನೆಯಲ್ಲೇ ಅದನ್ನು ಒದಗಿಸುತ್ತಾರೆ”ಎಂದ ಆಕೆ, ಆತನಿಗೆ ಒಳ್ಳೆಯದಾಗಲೆಂದು ಹಾರೈಸಿದರು. ಈ ರೈತಾಪಿ ಮಹಿಳೆ ಹಾಗೂ ಗೃಹಿಣಿಯ ಪತಿ, ಕೃಷಿಕರಾಗಿದ್ದು, ಅವರೂ ಸಹ ದಾಲ್‌ ಸರೋವರದಲ್ಲಿ ಶಿಕಾರ ಚಲಾಯಿಸುತ್ತಾರೆ. “ಅಲ್ಲಿ [NTPHC (ನೂತನ ಮಾದರಿಯ ಪ್ರಾಥಮಿಕ ಆರೋಗ್ಯ ಕೇಂದ್ರ)], ನಮಗೆ ವೈದ್ಯರು ಸಿಗುವುದಿಲ್ಲ. ಅವರು ಕೇವಲ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಮಾತ್ರ ಹಾಕುತ್ತಾರಲ್ಲದೆ, ಮಧ್ಯಾಹ್ನ ೪ರ ನಂತರ ಅಲ್ಲಿ ಯಾರೂ ಇರುವುದಿಲ್ಲ,” ಎಂಬುದಾಗಿಯೂ ಆಕೆ ತಿಳಿಸಿದರು.

ಕಾಶ್ಮೀರದಲ್ಲಿ ಆಗಸ್ಟ್‌ ೨೦೧೯ರಲ್ಲಿ, ಒಂದರ ನಂತರ ಮತ್ತೊಂದರಂತೆ ಜಾರಿಗೊಳಿಸಲಾದ ಕರ್ಫ್ಯೂ ಮತ್ತು ಲಾಕ್‌ಡೌನ್‌ಗಳ ಅವಧಿಯಾದ್ಯಂತ, ಸರೋವರದ ಮೇಲಿನ ದ್ವೀಪಗಳಲ್ಲಿ ವಾಸಿಸುತ್ತಿರುವ ಜನರಿಗೆ, ಸುಮಾರು ೨ ವರ್ಷಗಳ ಕಾಲ NTPHCಯಲ್ಲಿ, ವೈದ್ಯರನ್ನು ನೋಡಿದ ನೆನಪೇ ಇಲ್ಲ. ಇದಕ್ಕೆ ಹತ್ತಿರದಲ್ಲಿ ವಾಸಿಸುತ್ತಿದ್ದು, ಪ್ರವಾಸಿಗಳ ಛಾಯಾಚಿತ್ರಗ್ರಾಹಕರಾಗಿರುವ ೪೦ರ ವಯಸ್ಸಿನ ಮೊಹಮ್ಮದ್‌ ರಫೀಕ್‌ ಮಲ್ಲ ಎಂಬುವವರು, “ಕೆಲವು ವರ್ಷಗಳ ಹಿಂದೆ ಅಲ್ಲಿ ವೈದ್ಯರೊಬ್ಬರಿದ್ದು, ಉತ್ತಮವಾಗಿ ಕೆಲಸವನ್ನು ನಿರ್ವಹಿಸಿದ್ದರಾದರೂ, ಅವರನ್ನು ವರ್ಗಾಯಿಸಲಾಯಿತು. ೨೦೧೯ರಿಂದಲೂ ನಾವು ಯಾವುದೇ ವೈದ್ಯರನ್ನು ನೋಡಿರುವುದಿಲ್ಲ. ಅವರು (ಸಿಬ್ಬಂದಿಗಳು) ನಿಯಮಿತವಾಗಿ ಬರುವುದಿಲ್ಲವಷ್ಟೇ ಅಲ್ಲ, ಸಾಕಷ್ಟು ಸಮಯ ಅಲ್ಲಿರುವುದೂ ಇಲ್ಲ”ಎಂಬುದಾಗಿ ತಿಳಿಸಿದರು.

ಶ್ರೀನಗರದ ಮುಖ್ಯ ಆರೋಗ್ಯಾಧಿಕಾರಿಯವರ ಸಹಾಯಕ ನಿರ್ದೇಶಕರ, ಯೋಜನಾ ಇಲಾಖಾ ಕಛೇರಿಯ ಪ್ರಕಾರ, ಎಲ್ಲ ಹೊಸ ಮಾದರಿಯ ಪ್ರಾಥಮಿಕ ಕೇಂದ್ರಗಳಲ್ಲೂ, (ಕಾಶ್ಮೀರದಲ್ಲಿನ ‘ಉನ್ನತೀಕರಿಸಲಾದ’ ಉಪ-ಕೇಂದ್ರಗಳು) ವೈದ್ಯಾಧಿಕಾರಿಯಾಗಿ ಕನಿಷ್ಠ ಒಬ್ಬರು ಎಂ.ಬಿ.ಬಿ.ಎಸ್‌ ವೈದ್ಯರು, ಒಬ್ಬ ಔಷಧಿಕಾರರು, ಒಬ್ಬ ವಿವಿಧೋದ್ದೇಶಿತ ಮಹಿಳಾ ಆರೋಗ್ಯ ಕಾರ್ಯಕರ್ತೆ (FMPHW) ಮತ್ತು ಒಬ್ಬ ಶುಶ್ರೂಷಾ ಪರಿಚಾರಕರನ್ನು ಆರೋಗ್ಯ ಸೇವೆಗಳ ನಿರ್ದೇಶನಾಲಯವು ನಿಯೋಜಿತಗೊಳಿಸತಕ್ಕದ್ದು.

Lake residents can’t recall seeing a doctor at the primary health centre (NTPHC) for two years; an adjacent shed has some medical supplies and discarded furniture
PHOTO • Adil Rashid
Lake residents can’t recall seeing a doctor at the primary health centre (NTPHC) for two years; an adjacent shed has some medical supplies and discarded furniture
PHOTO • Adil Rashid

ಎರಡು ವರ್ಷಗಳಿಂದಲೂ ಸರೋವರದ ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (NTPHC) ವೈದ್ಯರನ್ನು ನೋಡಿದ ನೆನಪೇ ಇಲ್ಲ; ಪಕ್ಕದ ಶೆಡ್ಡಿನಲ್ಲಿ ಕೆಲವು ವೈದ್ಯಕೀಯ ಸರಬರಾಜುಗಳು ಮತ್ತು ಬಿಸಾಡಿದ ಪೀಠೋಪಕರಣಗಳಿವೆ

NTPHC (ಇದರ ಬೋರ್ಡಿನಲ್ಲಿ ಪಕ್ಕದ ಸ್ಥಳದ ಹೆಸರಿದ್ದಾಗ್ಯೂ, ಇದು, ವಾಸ್ತವವಾಗಿ ಕೂಲಿ ಮೊಹಲ್ಲಾದಲ್ಲಿದೆ.) ಇರುವ ಮೊಹಲ್ಲಾದಲ್ಲಿ ವಾಸಿಸುತ್ತಿದ್ದು, ಪ್ರವಾಸಿಗರ ದೋಣಿಯಲ್ಲಿ ಛಾಯಾಚಿತ್ರಗ್ರಾಹಕರಾಗಿ ಕೆಲಸವನ್ನು ನಿರ್ವಹಿಸುವ 25ರ ವಯಸ್ಸಿನ ವಸೀಂ ರಾಜ ಎಂಬುವವರು, “ಆದರೆ, ಪೋಲಿಯೋ ಪ್ರತಿರಕ್ಷಣಾ ಆಂದೋಲನದ ಸಂದರ್ಭದಲ್ಲಿ, ಧ್ವನಿವರ್ಧಕದಲ್ಲಿ ಪ್ರಸಾರಮಾಡಿದಾಗ ಮಾತ್ರ ಈ ಕೇಂದ್ರಕ್ಕೆ ಜೀವಕಳೆ ಬರುತ್ತದೆ. ಔಷಧಿಕಾರನು, ತನಗೆ ಸಾಧ್ಯವಾದಾಗಲೆಲ್ಲ, ಮನೆಗೆ ಬಂದು ನಮ್ಮ ತಂದೆಗೆ ಡ್ರಿಪ್ಸ್‌ ಹಾಕುತ್ತಾನೆ. ಆದರೆ ನಮಗೆ ಈ ದವಾಖಾನೆಯ ಹೆಚ್ಚಿನ ಅವಶ್ಯಕತೆಯಿದ್ದಾಗ, ಅದು ತೆರೆದಿರುವುದಿಲ್ಲ. ಆಗ ನಾವು ನಜಿ಼ರ್‌ ಅಥವಾ ಬಿಲಾಲ್‌ (ಮತ್ತೊಬ್ಬ ಔಷಧಿಕಾರ-ವೈದ್ಯ) ಅವರ ಬಳಿಗೆ ಅಥವಾ ಆಸ್ಪತ್ರೆಗೆ ತೆರಳಲು ರಸ್ತೆಯನ್ನು ತಲುಪುವ ಪ್ರಯತ್ನವನ್ನು ನಡೆಸಬೇಕಾಗುತ್ತದೆ. ಇದಕ್ಕಾಗಿ ಸಮಯವನ್ನು ವ್ಯಯಿಸಬೇಕಾಗುತ್ತದೆಯಲ್ಲದೆ, ತುರ್ತುಪರಿಸ್ಥಿತಿಗಳಲ್ಲಿ ಇದು ಅತ್ಯಂತ ಕಷ್ಟಕರವೂ ಹೌದು”ಎಂಬುದಾಗಿ ತಿಳಿಸಿದರು.

ಶ್ರೀನಗರದ ರೈನಾವರಿ ಪ್ರದೇಶದಲ್ಲಿ ರಾಜ್ಯದಿಂದ ನಿರ್ವಹಿಸಲ್ಪಡುವ ಸಾರ್ವಜನಿಕ ಆಸ್ಪತ್ರೆಯಾದ ಜವಹರ್‌ಲಾಲ್‌ ನೆಹರು ಸ್ಮಾರಕ ಆಸ್ಪತ್ರೆಯು ಇವರಿಗೆ ಎಲ್ಲಕ್ಕಿಂತಲೂ ಹತ್ತಿರದಲ್ಲಿದ್ದು, ಅದನ್ನು ತಲುಪಲು ಕೂಲಿ ಮೊಹಲ್ಲಾದಿಂದ ಬುಲವಾರ್ಡ್‌ ರಸ್ತೆಗೆ 15 ನಿಮಿಷಗಳ ದೋಣಿ ಪ್ರಯಾಣದ ನಂತರ ಎರಡು ಬಸ್ಸುಗಳಲ್ಲಿ ಪ್ರಯಾಣಿಸಬೇಕು. ಅಥವಾ ಸರೋವರದ ನಿವಾಸಿಗಳು 40 ನಿಮಿಷಗಳ ದೋಣಿ ಪ್ರಯಾಣದ ನಂತರ ಮತ್ತೊಂದು ಸ್ಥಳವನ್ನು ತಲುಪಿ, 15 ನಿಮಿಷಗಳ ಕಾಲ್ನಡಿಗೆಯಲ್ಲಿ ಆಸ್ಪತ್ರೆಯನ್ನು ತಲುಪಬೇಕು. ಕಾಶ್ಮೀರದ ತೀವ್ರ ಶೀತದಿಂದ ಕೂಡಿದ ಚಳಿಗಾಲದಲ್ಲಿ ಈ ಪ್ರಯಾಣಗಳು ಬಹಳ ತ್ರಾಸದಾಯಕ.

ನಾಮಮಾತ್ರಕ್ಕೆಂಬಂತೆ ಕೆಲಸವನ್ನು ನಿರ್ವಹಿಸುವ NTPHCಯಿಂದಾಗಿ, ದಾಲ್‌ ಸರೋವರದ 18-20 ಚದರ ಕಿಲೋಮೀಟರ್‌ ಪ್ರದೇಶದಲ್ಲಿನ ಅನೇಕ ದ್ವೀಪಗಳಲ್ಲಿ ವಾಸಿಸುವ ಸುಮಾರು 50,000-60,000 ಜನರಿಗೆ ಲಭ್ಯವಿರುವ ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವ ಮತ್ತೊಂದು ಆರೋಗ್ಯ ಸೌಲಭ್ಯವೆಂದರೆ, ನಂದ್‌ಪೊರದಲ್ಲಿನ ಭಾರತೀಯ ಚಿಕಿತ್ಸಾ ಪದ್ಧತಿಯ ಚಿಕಿತ್ಸಾಲಯ, ISM (Indian system of medicines). ದೊಡ್ಡ ಜಲಾವೃತ ಪ್ರದೇಶದ ಮೂಲೆಯೊಂದರಲ್ಲಿರುವ ಈ ಚಿಕಿತ್ಸಾಲಯದಲ್ಲಿಯೂ ಆರೋಗ್ಯ ಕಾರ್ಯಕರ್ತರು ಸದಾ ಲಭ್ಯವಿರುವುದಿಲ್ಲ. ದಡದ ಮೇಲೆ, ಬುಲವಾರ್ಡ್‌ ರಸ್ತೆಯಲ್ಲಿ ಉಪ-ಕೇಂದ್ರವೊಂದಿದೆ (ಕೋವಿಡ್‌-19 ಲಸಿಕೆ ಹಾಗೂ ತಪಾಸಣೆಗಾಗಿ ಇದೂ ಸಹ ದ್ವೀಪದ ನಿವಾಸಿಗಳಿಗೆ ಅತ್ಯಂತ ಹತ್ತಿರದಲ್ಲಿದೆ).

ಸರೋವರದ ನಿವಾಸಿಗಳಿಗೆ ಅದರಲ್ಲೂ ವಿಶೇಷವಾಗಿ, ಅದರ ಒಳಭಾಗದ ದ್ವೀಪಗಳಲ್ಲಿ ವಾಸಿಸುತ್ತಿರುವವರಿಗೆ, ನಜಿ಼ರ್‌ ಮತ್ತು ಇಂಥದ್ದೇ ಔಷಧಾಲಯಗಳನ್ನು ನಿರ್ವಹಿಸುತ್ತಿದ್ದು, ‘ವೈದ್ಯರ’ಅಥವಾ ವೈದ್ಯಕೀಯ ಸಲಹೆಗಾರರ ಪಾತ್ರವನ್ನೂ ನಿರ್ವಹಿಸುತ್ತಿರುವ ಕನಿಷ್ಠ ಇತರ ಮೂವರು ಅನೇಕ ಬಾರಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉಪಲಬ್ಧವಿರುವ ಏಕೈಕ ಆಯ್ಕೆಯಾಗಿದ್ದಾರೆ.

15-20 ವರ್ಷಗಳಿಂದಲೂ ದಾಲ್‌ ಸರೋವರದಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ 50ರ ನಜಿ಼ರ್‌ ಅಹ್ಮದ್‌ ಭಟ್‌, ತಮ್ಮ ಅಂಗಡಿ, ಅರ್ಥಾತ್‌ ಚಿಕಿತ್ಸಾಲಯದಲ್ಲಿ ಮಧ್ಯಾಹ್ನದ ವಿರಾಮವನ್ನು ಹೊರತುಪಡಿಸಿ, ಮುಂಜಾನೆ ಹತ್ತರಿಂದ ರಾತ್ರಿ ಹತ್ತರವರೆಗೆ ಎರಡು ಪಾಳಿಗಳಲ್ಲಿ ಲಭ್ಯವಿರುತ್ತಾರೆ. ದಿನವೊಂದಕ್ಕೆ 15-20 ರೋಗಿಗಳನ್ನು ನೋಡುತ್ತಾರೆ. ರೋಗಿಗಳಲ್ಲಿ, ಸಾಮಾನ್ಯ ಜ್ವರ, ಕೆಮ್ಮು, ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು, ಎಡೆಬಿಡದ ನೋವು ಹಾಗೂ ಬ್ಯಾಂಡೇಜು ಕಟ್ಟಿ, ಸ್ವಚ್ಛಗೊಳಿಸುವ ಅಗತ್ಯವಿರುವ ಸಣ್ಣಪುಟ್ಟ ಗಾಯಗಳು ಸಾಮಾನ್ಯವಾಗಿ ಕಂಡುಬರುತ್ತವೆ (ಇವರು ತಮ್ಮ ವೈದ್ಯಕೀಯ ಅಥವಾ ಔಷಧಿಕಾರನ ವಿದ್ಯಾರ್ಹತೆಯನ್ನು ಹೊಂದಿರುವ ಬಗ್ಗೆ ನನಗೆ ತಿಳಿಸಲಿಲ್ಲ). ನಜೀ಼ರ್‌, ತಮ್ಮ ವೈದ್ಯಕೀಯ ಸಮಲೋಚನೆಗಾಗಿ (consultation) ಶುಲ್ಕವನ್ನು ಪಡೆಯುವುದಿಲ್ಲವಾದರೂ, ಚಿಲ್ಲರೆ ದರದಲ್ಲಿ ಔಷಧಿಗೆ ಹಣವನ್ನು ಪಡೆಯುತ್ತಾರಲ್ಲದೆ (ಇದರಿಂದ ಇವರ ಜೀವನೋಪಾಯಕ್ಕೆ ದಾರಿಯಾಗಿದೆ), ಜನರಿಗೆ ನಿಯತವಾಗಿ ಅಗತ್ಯವಿರುವ ಔಷಧಿಗಳ ದಾಸ್ತಾನನ್ನು ಹೊಂದಿರುತ್ತಾರೆ.

Left: Mohammad Sidiq Chachoo, who sells leather goods to tourists, says, 'We prefer these clinics because they are nearby and have medicines readily available'. Right: The chemist-clinic he is visiting is run by Bilal Ahmad Bhat
PHOTO • Adil Rashid
Left: Mohammad Sidiq Chachoo, who sells leather goods to tourists, says, 'We prefer these clinics because they are nearby and have medicines readily available'. Right: The chemist-clinic he is visiting is run by Bilal Ahmad Bhat
PHOTO • Adil Rashid

ಎಡಕ್ಕೆ: ಪ್ರವಾಸಿಗರಿಗೆ ಚರ್ಮದ ವಸ್ತುಗಳನ್ನು ಮಾರುವ ಮೊಹಮ್ಮದ್‌ ಸಿದ್ದಿಕ್‌ ಚಾಚೂ, ‘ಈ ಚಿಕಿತ್ಸಾಲಯಗಳು ಹತ್ತಿರದಲ್ಲಿದ್ದು, ಔಷಧಿಗಳು ಸದಾ ಲಭ್ಯವಿರುವ ಕಾರಣ, ನಾವು ಈ ಔಷಧಿಗಳನ್ನು ಮಾರುವ ಚಿಕಿತ್ಸಾಲಯಗಳಿಗೆ ಆದ್ಯತೆ ನೀಡುತ್ತೇವೆ’ ಎಂದು ತಿಳಿಸಿದರು. ಬಲಕ್ಕೆ: ಇವರು ಭೇಟಿ ನೀಡುತ್ತಿರುವ ಈ ಚಿಕಿತ್ಸಾಲಯವು ಬಿಲಾಲ್‌ ಅಹ್ಮದ್‌ ಭಟ್‌ ಅವರ ಒಡೆತನದಲ್ಲಿದೆ

ಹತ್ತಿರದಲ್ಲಿನ ಮತ್ತೊಂದು ಔಷಧಿಗಳ ಮಾರಾಟದ ಚಿಕಿತ್ಸಾಲಯದಲ್ಲಿ, ಚರ್ಮದ ವಸ್ತುಗಳನ್ನು ಪ್ರವಾಸಿಗರಿಗೆ ಮಾರುವ 65ರ ವಯಸ್ಸಿನ ಮೊಹಮ್ಮದ್‌ ಸಿದ್ದಿಕ್‌ ಚಾಚೂ, ತಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಶ್ರೀನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ, ಪಿತ್ತಕೋಶವನ್ನು ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. “ಆ ದವಾಖಾನೆಯಿಂದ (NTPHC) ಉಪಯೋಗವಿಲ್ಲ. ಅಲ್ಲಿಗೆ ಯಾರೂ ಹೋಗುವುದಿಲ್ಲ. ನಾವು ಈ ಚಿಕಿತ್ಸಾಲಯಗಳಿಗೆ ಆದ್ಯತೆ ನೀಡುತ್ತೇವೆ. ಏಕೆಂದರೆ ಅವು ಹತ್ತಿರದಲ್ಲಿದ್ದು, ಔಷಧಿಗಳು ಸದಾ ಲಭ್ಯವಿರುತ್ತವೆ,” ಎಂಬುದಾಗಿ ಅವರು ತಿಳಿಸಿದರು.

ಚಾಚೂ ಅವರು ಭೇಟಿ ನೀಡುತ್ತಿರುವುದು, ಶ್ರೀನಗರದ ದಕ್ಷಿಣ ಹೊರವಲಯದಲ್ಲಿನ ನೌಗಮ್‌ ನಿವಾಸಿಯಾದ ಬಿಲಾಲ್‌ ಅಹ್ಮದ್‌ ಭಟ್‌ ಅವರ ಚಿಕಿತ್ಸಾಲಯಕ್ಕೆ. ಜಮ್ಮು ಮತ್ತು ಕಾಶ್ಮೀರ್‌ ಫಾರ್ಮಸಿ ಕೌನ್ಸಿಲ್‌ ವತಿಯಿಂದ ನೀಡಲಾದ ಪ್ರಮಾಣ ಪತ್ರವನ್ನು ಹೊರತೆಗೆದ ಇವರು ಔಷಧಿಯ ವ್ಯಾಪಾರಕ್ಕೆ ಪರವಾನಗಿಯನ್ನು ಪಡೆದಿದ್ದೇನೆಂಬುದಾಗಿ ನನಗೆ ತಿಳಿಸಿದರು.

ತಮ್ಮ ಅಂಗಡಿಯ ಪ್ಲೈವುಡ್‌ ಕಪಾಟುಗಳಲ್ಲಿ ಔಷಧಿಯನ್ನು ಸಂಗ್ರಹಿಸಿರುವ ಭಟ್‌ ಅವರು, ಮುಂಜಾನೆ 11ರಿಂದ ಸಂಜೆ 7ರವರೆಗೆ, ಬಹುತೇಕವಾಗಿ, ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳನ್ನು ಹೊಂದಿರುವ ಸುಮಾರು 10ರಿಂದ 25 ರೋಗಿಗಳನ್ನು ನೋಡುತ್ತೇನೆಂಬುದಾಗಿ ತಿಳಿಸಿದರು. ಇವರು ಸಹ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಾಲೋಚನೆಗಾಗಿ ಶುಲ್ಕವನ್ನು ಪಡೆಯುವುದಿಲ್ಲ. ಔಷಧಿಗಳನ್ನೂ ಸಹ ಎಂಆರ್‌ಪಿ ದರದಲ್ಲೇ ಮಾರುತ್ತಾರೆ.

“ಕನಿಷ್ಟಪಕ್ಷ ಅಲ್ಲಿ ಪ್ರಸೂತಿತಜ್ಞರು ಲಭ್ಯವಿದ್ದು, ಸ್ತ್ರೀಯರು ತಮಗೆ ಅಗತ್ಯವಿರುವ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾದ ಚಿಕ್ಕ ಹೆರಿಗೆ ಆಸ್ಪತ್ರೆಯಾದರೂ ಇರತಕ್ಕದ್ದು. ವೈದ್ಯಕೀಯ ಪರೀಕ್ಷೆಗಳಿಗೆ ಇಲ್ಲಿ ಸೌಲಭ್ಯವೇ ಇಲ್ಲ. ಏನಿಲ್ಲವೆಂದರೂ ಜನರಿಗೆ ತಮ್ಮ ರಕ್ತದಲ್ಲಿನ ಸಕ್ಕರೆ ಮತ್ತು ಸಿಬಿಸಿ (complete blood count) ತಪಾಸಣೆಯ ಸೌಲಭ್ಯವಾದರೂ ದೊರೆಯಬೇಕು. ಇಲ್ಲಿನ ಬಹುತೇಕರು ಬಡವರು. ಅವರಿಗೆ NTPC ಚಿಕಿತ್ಸಾಲಯದಲ್ಲಿ ಈ ಸೌಲಭ್ಯಗಳು ದೊರೆತಲ್ಲಿ, ನಡುಗುವ ಚಳಿಯಲ್ಲಿ ಕೇವಲ 5 ರೂ.ಗಳ ಮಾತ್ರೆಗಾಗಿ   ನನ್ನಲ್ಲಿಗೆ ಬರುವುದು ತಪ್ಪುತ್ತದೆ”ಎಂದು ತಿಳಿಸಿದ ಅವರು, ದಾಲ್‌ ಸರೋವರಕ್ಕೆ ಆಸ್ಪತ್ರೆಯೊಂದರ ಅವಶ್ಯಕತೆಯ ಬಗ್ಗೆ ಒತ್ತು ನೀಡಿದರು.

ಅಂದು ಬೆಳಕು ಹರಿಯುತ್ತಲೇ, ಬಿಲಾಲ್‌ ಅವರು ಕೂಲಿ ಮೊಹಲ್ಲಾದಲ್ಲಿನ ಕ್ಯಾನ್ಸರ್‌ ರೋಗಿಯೊಬ್ಬರ ತಪಾಸಣೆಗೆ ತೆರಳಬೇಕಿತ್ತು. ಸರೋವರದ ಪೂರ್ವ ಭಾಗದ ದಂಡೆಯಲ್ಲಿನ ನೆಹರು ಪಾರ್ಕ್‌ ಘಾಟ್‌ನಿಂದ ಸುಮಾರು 10 ಕಿ.ಮೀ. ದೂರದ ಶ್ರೀನಗರದಲ್ಲಿನ ಶೇರ್‌-ಇ—ಕಾ‍ಶ್ಮೀರ್‌ ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆಸ್ಪತ್ರೆಯನ್ನು ಉಲ್ಲೇಖಿಸುತ್ತಾ, “ಅವರು ಎಸ್‌ಕೆಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಅವರಿಗೆ ಡ್ರಿಪ್ಸ್‌ ಹಾಕಬೇಕು. ಹೀಗಾಗಿ, ಆ ಅವಧಿಯಲ್ಲಿ ಅಂಗಡಿಯನ್ನು ಮುಚ್ಚುವುದು ಅನಿವಾರ್ಯ. ಅವರು ಶಿಕಾರ ಚಲಾಯಿಸುತ್ತಿದ್ದು, ಬಡವರಾದ್ದರಿಂದ ಅವರಿಂದ ಶುಲ್ಕವನ್ನು ವಸೂಲಿ ಮಾಡುವುದಿಲ್ಲ” ಎಂಬುದಾಗಿ ತಿಳಿಸಿದರು.

For people living in the Lake's mohallas, the services offered by Nazir and at least three others who run similar pharmacies – and double up as ‘doctors’ or medical advisers – are often their only accessible healthcare option
PHOTO • Adil Rashid
For people living in the Lake's mohallas, the services offered by Nazir and at least three others who run similar pharmacies – and double up as ‘doctors’ or medical advisers – are often their only accessible healthcare option
PHOTO • Adil Rashid

ಸರೋವರದ ಮೊಹಲ್ಲಾಗಳಲ್ಲಿ ವಾಸಿಸುವ ಜನರಿಗೆ, ನಜೀ಼ರ್‌ ಅವರು ಒದಗಿಸುವ ಸೇವೆಗಳು ಹಾಗೂ ಇಂಥದ್ದೇ ಔಷಧಾಲಯವನ್ನು ನಡೆಸುತ್ತ, ‘ವೈದ್ಯರು ಹಾಗೂ ವೈದ್ಯಕೀಯ ಸಲಹೆಗಾರರ’ಪಾತ್ರವನ್ನೂ ನಿರ್ವಹಿಸುವ, ಕನಿಷ್ಠ ಇತರೆ ಮೂವರು ಮಾತ್ರವೇ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಗಾಗ್ಗೆ ಉಪಲಬ್ಧವಿರುವ ಏಕೈಕ ಆಯ್ಕೆಯಾಗಿದ್ದಾರೆ

ಸಂಜೆಯ ತರುವಾಯ, ಔಷಧಿ ವ್ಯಾಪಾರಿಗಳು ಹಾಗೂ ಪ್ರಾಯೋಗಿಕ ಚಿಕಿತ್ಸಕರ ಅವಲಂಬನೆಯು ಸರೋವರದ ನಿವಾಸಿಗಳಿಗೆ ಮತ್ತಷ್ಟು ಹೆಚ್ಚಾಗುತ್ತದೆ. “ನಾನು ಮನೆಯಲ್ಲಿರುವಾಗ ರಾತ್ರಿಯ ಸಮಯದಲ್ಲಿ ನನಗೆ ಕರೆಗಳು ಬರುತ್ತವೆ”ಎಂದು ತಿಳಿಸಿದ ಬಿಲಾಲ್‌, ಹಿರಿಯ ಮಹಿಳೆಯೊಬ್ಬರ ಕುಟುಂಬವು ತಮಗೆ ಕರೆಮಾಡಿ, ಆಕೆಗೆ ಉಸಿರುಕಟ್ಟಿದೆಯೆಂದು ತಿಳಿಸಿದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ. ಸಕ್ಕರೆ ಖಾಯಿಲೆ ಹಾಗೂ ಹೃದಯ ಸಂಬಂಧಿ ಖಾಯಿಲೆಯಿದ್ದ ಆಕೆಗೆ, ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. “ಮಧ್ಯರಾತ್ರಿಯ ನಂತರ ಅವರು ನನಗೆ ಕರೆಮಾಡಿದಾಗ, ಆಕೆಯು ಹೃದಯಾಘಾತಕ್ಕೆ ಒಳಗಾಗಿರಬಹುದೆಂದು ಊಹಿಸಿದ ನಾನು, ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದೆ (ದೂರವಾಣಿಯಲ್ಲಿ). ಆಸ್ಪತ್ರೆಗೆ ತೆರಳಿದ ಅವರಿಗೆ, ಅದು ಪಾರ್ಶ್ವವಾಯುವಿನ ಹೊಡೆತವೆಂಬುದನ್ನು ಪತ್ತೆಹಚ್ಚಲಾಯಿತು. ಅದೃಷ್ಟವಶಾತ್‌, ಆಕೆ ಬದುಕುಳಿದರು”ಎಂದು ಸಹ ಅವರು ತಿಳಿಸಿದರು.

ಪತ್ರಿಕಾ ವರದಿಗಳು ಮತ್ತು ಆಕರ್ಷಕ ಛಾಯಾಚಿತ್ರಗಳಲ್ಲಿ ಕಾಣಸಿಗದ ಸರೋವರದ ಆಳವಾದ ಒಳಭಾಗಗಳಲ್ಲಿನ ಸಮಸ್ಯೆಗಳು ಹೆಚ್ಚು ತೀಕ್ಷ್ಣಗೊಳ್ಳುವ ಸಾಧ್ಯತೆಯಿರುತ್ತದೆ. ದೋಣಿಗಳಲ್ಲಿ ಕೆಲವು ಅಡಿಗಳಷ್ಟು ಮುಂದಕ್ಕೆ ಸಾಗಬೇಕಾದಾಗ್ಯೂ, ಶೀತದಿಂದ ಕೂಡಿದ ಚಳಿಗಾಲದ ತಿಂಗಳುಗಳಲ್ಲಿ 6 ಇಂಚು ದಪ್ಪದ ಹಿಮದ ಹಾಳೆಗಳನ್ನು ಕತ್ತರಿಸಬೇಕಾಗುತ್ತದೆ. ಬೇಸಿಗೆಯಲ್ಲಿ 30 ನಿಮಿಷಗಳ ಅವಧಿಯ ಪ್ರಯಾಣವು, ಸರೋವರವು ಹೆಪ್ಪುಗಟ್ಟಿದಾಗ, 3 ಗಂಟೆಗಳಿಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳಬಹುದು.

ಈ ಒಳಭಾಗದ ಪ್ರದೇಶಗಳಲ್ಲಿನ ಟಿಂಡ್‌ ಮೊಹಲ್ಲಾದ ನಿವಾಸಿಯಾದ 24ರ ವಯಸ್ಸಿನ ಹದಿಸ ಭಟ್‌, ಗೃಹಿಣಿ. ಇವರ ನಾಲ್ಕು ಸಹೋದರರು ಕೃಷಿಕರಷ್ಟೇ ಅಲ್ಲದೆ, ಋತುಮಾನಕ್ಕಗುಣವಾಗಿ ಸರೋವರದಲ್ಲಿ ಶಿಕಾರವಾಲಾ ಕೆಲಸದಲ್ಲಿಯೂ ತೊಡಗುತ್ತಾರೆ. “ಹಗಲೂ ರಾತ್ರಿ ವೈದ್ಯರ ಸೌಲಭ್ಯವು ನಮಗೆ ಅವಶ್ಯ.  ತಪಾಸಣೆಯ ಸೌಲಭ್ಯವೂ ಅಗತ್ಯವಿದೆ. ದಿನದಲ್ಲಿ ಹಾಗೂ ಸಂಜೆಯ ಬಹು ಹೊತ್ತಿನವರೆಗೂ ನಾವು ನಜೀ಼ರ್‌ ಅವರ ಔಷಧಾಲಯಕ್ಕೆ ಹೋಗುತ್ತಿರುತ್ತೇವೆ. ಆದರೆ, ರಾತ್ರಿಯ ಸಮಯದಲ್ಲಿ ಯಾರಾದರೂ ಅಸ್ವಸ್ಥಗೊಂಡಲ್ಲಿ, ನಾವು ದೋಣಿ ಮತ್ತು ಹುಟ್ಟನ್ನು ಅರಸಿ, ಅದನ್ನು ರೈನವರಿಗೆ (Rainawari) ಕೊಂಡೊಯ್ಯಬೇಕು. ವಯಸ್ಕರು ಬೆಳಗಾಗುವುದನ್ನು ಕಾಯುತ್ತಾರಾದರೂ, ಮಗುವಿಗೆ ಇದು ಸಾಧ್ಯವಾಗುವುದಿಲ್ಲ” ಎಂಬುದಾಗಿ ಹದಿಸ ನಮಗೆ ತಿಳಿಸಿದರು.

ಮಾರ್ಚ್‌ 2021ರಲ್ಲಿ ಇವರ ತಾಯಿಯು ಕೆಳಗೆ ಬಿದ್ದಾಗ, ಮೂಳೆ ಮುರಿದಿಎಬಹುದಾದ ಸಾಧ್ಯತೆಯಿದ್ದ ಕಾರಣ ಅವರನ್ನು ನೆಹರು ಉದ್ಯಾನವನದಿಂದ ಸುಮಾರು ೮ ಕಿ.ಮೀ. ದೂರದ ದಕ್ಷಿಣ ಶ್ರೀನಗರದಲ್ಲಿನ ಬರ್ಜು಼ಲ್ಲದಲ್ಲಿರುವ ಸರ್ಕಾರಿ ಮೂಳೆ ಮತ್ತು ಕೀಲಿನ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. “ಅವರ ಗಾಯವು ತೀವ್ರವಾಗಿರಲಿಲ್ಲವಾದರೂ, ಕೇವಲ ಅಲ್ಲಿಗೆ ತಲುಪಲು ನಮಗೆ 2 ಗಂಟೆಗಳು ಬೇಕಾಯಿತು (ಆಟೋರಿಕ್ಷಾ ಮತ್ತು ಟ್ಯಾಕ್ಸಿ ಬಾಡಿಗೆಯನ್ನೂ ಭರಿಸಬೇಕಾಯಿತು). ಅವರಿಗೆ ಚಿಕಿತ್ಸೆಯನ್ನು ಒದಗಿಸುವ ಸೌಲಭ್ಯವು ಹತ್ತಿರದಲ್ಲೆಲ್ಲೂ ಲಭ್ಯವಿರದ ಕಾರಣ, ನಾವು ಮತ್ತೆ ಎರಡು ಬಾರಿ ಆಸ್ಪತ್ರೆಗೆ ತೆರಳಬೇಕಾಯಿತು” ಎಂಬುದಾಗಿ, ಹದಿಸ ಅವರ ಸಹೋದರ, ಅಬಿದ್‌ ಹುಸೇನ್‌ ಭಟ್‌ ಅವರು ತಿಳಿಸಿದರು.

ಸರೋವರದಿಂದ ಜನರನ್ನು ದೋಣಿಯಲ್ಲಿ ಸಾಗಿಸುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನ ಪ್ರಯತ್ನವಾಗಿ, ದೋಣಿಮನೆಯ (houseboat) ರಿಖ್‌ ಅಹ್ಮದ್‌ ಪಟ್ಲೂ ಎಂಬುವವರು ಡಿಸೆಂಬರ್‌ 2020ರಲ್ಲಿ, ಶಿಕಾರವನ್ನು ನೀರಿನಲ್ಲಿ ಸಾಗುವ ಅಂಬುಲನ್ಸ್‌ ಆಗಿ ಪರಿವರ್ತಿಸಿದರು. ಇವರ ಚಿಕ್ಕಮ್ಮನ ಪ್ರಾಣಾಂತಿಕ ಹೃದಯಾಘಾತ ಮತ್ತು ಇವರ ಕೋವಿಡ್-19 ಸೋಂಕು, ಇದನ್ನು ಸಾಧ್ಯವಾಗಿಸಿದ ಕಾರಣಗಳೆಂಬುದಾಗಿ ಮಾಧ್ಯಮದಲ್ಲಿನ ವರದಿಗಳು ತಿಳಿಸುತ್ತವೆ. ಇವರು ಟ್ರಸ್ಟ್‌ವೊಂದರಿಂದ ಆರ್ಥಿಕ ಸಹಾಯವನ್ನು ಪಡೆದಿದ್ದಾರೆ. ಈಗ ಅಂಬುಲನ್ಸಿನಲ್ಲಿ ಕೈಮಂಚ (strecher), ಗಾಲಿ ಕುರ್ಚಿ, ಒಂದು ಆಮ್ಲಜನಕದ ಸಿಲಿಂಡರ್‌, ಪ್ರಥಮ ಚಿಕಿತ್ಸೆಯ ಕಿಟ್‌, ಮುಖಗವಸುಗಳು, ಗ್ಲುಕೋಮೀಟರ್‌ ಮತ್ತು ರಕ್ತದ ಒತ್ತಡವನ್ನು ಲಕ್ಷ್ಯದಲ್ಲಿಡುವ ಉಪಕರಣಗಳಿವೆ. ವೈದ್ಯ ಸಹಾಯಕ ಮತ್ತು ವೈದ್ಯರನ್ನು ಇದರಲ್ಲಿ ವ್ಯವಸ್ಥೆಗೊಳಿಸುವ ಯೋಚನೆಯದಲ್ಲಿದ್ದೇನೆಂದು ತಿಳಿಸಿದ ೫೦ರ ವಯಸ್ಸಿನ ಪಟ್ಲೂ ಅವರು, ಅಂಬುಲನ್ಸ್‌ ಇದುವರೆಗೆ 30 ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ದಿದೆಯೆಂದು ಅಂದಾಜಿಸಿದರು. ಸರೋವರದಾದ್ಯಂತ ಶವಗಳನ್ನು ಸಾಗಿಸುವುದಕ್ಕೂ ಇದು ನೆರವನ್ನು ನೀಡಿದೆ.

Tariq Ahmad Patloo, houseboat owner who turned a shikara into a 'lake ambulance'
PHOTO • Adil Rashid
Tariq Ahmad Patloo, houseboat owner who turned a shikara into a 'lake ambulance'
PHOTO • Adil Rashid

ಶಿಕಾರವನ್ನು ‘ಸರೋವರದ ಅಂಬುಲನ್ಸ್‌ನಂತೆ ಪರಿವರ್ತಿಸಿದ ದೋಣಿ ಮನೆಯ (houseboat) ಮಾಲೀಕರಾದ ತಾರಿಖ್‌ ಅಹ್ಮದ್‌ ಪಟ್ಲುʼ

ಶ್ರೀನಗರದ ಆರೋಗ್ಯಾಧಿಕಾರಿಗಳೂ ತಮ್ಮ ಪಾತ್ರ ನಿರ್ವಹಣೆಯಲ್ಲಿ ಹೆಣಗುತ್ತಿದ್ದಾರೆ. ದಾಲ್‌ ಸರೋವರದಲ್ಲಿನ ನಿಕೃಷ್ಟ ಸೌಲಭ್ಯಗಳ ಬಗ್ಗೆ ಹಿರಿಯ ನೌಕರರೊಬ್ಬರನ್ನು ಕೇಳಿದಾಗ, ಶ್ರೀನಗರದಲ್ಲಿನ ತಮ್ಮ ಖನ್ಯಾರ್‌ ಆಸ್ಪತ್ರೆಯ ಸಿಬ್ಬಂದಿಗಳ ಕೊರತೆಯತ್ತ ಬೊಟ್ಟುಮಾಡಿದರು. ಮಾರ್ಚ್‌ 2020ರಲ್ಲಿ ಜಿಲ್ಲಾ ಆಸ್ಪತ್ರೆಯನ್ನು (ರೈನ್‌ವರಿಯಲ್ಲಿನ ಜವಹರಲಾಲ್‌ ಸ್ಮಾರಕ ಆಸ್ಪತ್ರೆ) ಕೋವಿಡ್‌-19 ಸೌಲಭ್ಯಗಳಿಗಾಗಿ ಮೀಸಲಿರಿಸಿದಾಗ, ಇವರ ಆಸ್ಪತ್ರೆಗೆ ಅನೇಕ ಕೋವಿಡ್‌ರಹಿತ ರೋಗಿಗಳನ್ನು ಅದು ಕರೆತಂದಿತು. ರೋಗಿಗಳ ಸಂಖ್ಯೆಯಲ್ಲಿನ ಈ ಬೃಹತ್‌ ಹೆಚ್ಚಳವನ್ನು ನಿಭಾಯಿಸಲು ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಿರಲಿಲ್ಲ. “ಸಾಮಾನ್ಯವಾಗಿ 300 ರೋಗಿಗಳನ್ನು ನಿಭಾಯಿಸುತ್ತಿದ್ದ ನಮಗೀಗ 800-900 ರೋಗಿಗಳನ್ನು ನಿಭಾಯಿಸಬೇಕಿದೆ. ಕೆಲವು ದಿನಗಳಲ್ಲಿ ಈ ಸಂಖ್ಯೆಯು 1,500ನ್ನು ತಲುಪುತ್ತದೆ”ಎಂಬುದಾಗಿ ಅವರು ಈ ವರ್ಷದ ಜನವರಿಯಲ್ಲಿ ನನಗೆ ತಿಳಿಸಿದರು.

ಸರೋವರದ ನಿವಾಸಿಗಳ ಸಣ್ಣಪುಟ್ಟ ಅವಶ್ಯಕತೆಗಳ ಬದಲಿಗೆ ಗಹನವಾದ ಕಾಯಿಲೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, NTPHC ಹಾಗೂ ಉಪ-ಕೇಂದ್ರಗಳ ಸಿಬ್ಬಂದಿಗಳು ರಾತ್ರಿಯ ಪಾಳಿಯಲ್ಲಿ ಕರ್ತವ್ಯವನ್ನು ನಿರ್ವಹಿಸುವಂತೆ ಹಲವಾರು ಬಾರಿ, ನಿರಂತರವಾಗಿ ತಿಳಿಸಲಾಗುತ್ತಿತ್ತು. ಈ ಕಾರಣದಿಂದಾಗಿ, ಕೂಲಿ ಮೊಹಲ್ಲಾದ NTPHCಯಲ್ಲಿನ ಔಷಧಿಕಾರನು (Pharmacist) ಆಗಾಗ ಲಭ್ಯವಿರುತ್ತಿರಲಿಲ್ಲ. ವಿವಿಧೋದ್ದೇಶಿತ ಮಹಿಳಾ ಆರೋಗ್ಯ ಕಾರ್ಯಕರ್ತೆರು (FMPHW), ಆರೋಗ್ಯ ಕೇಂದ್ರಗಳಲ್ಲಿನ ತಮ್ಮ ಕೆಲಸದ ಜೊತೆಗೆ ಕೋವಿಡ್‌-19 ಸಮಯಯಲ್ಲಿ ಸಂಪರ್ಕವನ್ನು ಪತ್ತೆಹಚ್ಚುವಲ್ಲಿಯೂ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಕಾರಣ, ಅವರಿಗೂ ಕೆಲಸದ ಹೊರೆಯು ಹೆಚ್ಚಾಗಿತ್ತು.

ಕೂಲಿ ಮೊಹಲ್ಲಾದ NTPHCಯಲ್ಲಿ, ಸುಮಾರು ೧೦ ವರ್ಷಗಳಿಂದಲೂ ಔಷಧಿಕಾರರಾಗಿರುವ 50 ವರ್ಷದ ಇಫ್ತಿಖರ್‌ ಅಹ್ಮದ್‌ ವಫಾಯಿ ಅವರಿಗೆ, ಖನ್ಯಾರ್‌ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯವನ್ನು ನಿರ್ವಹಿಸುವಂತೆ ತಿಂಗಳಿಗೆ ಐದು ಬಾರಿ ಕರೆನೀಡಲಾಗಿದ್ದು, ಬೆಳಗಿನ ಹೊತ್ತಿನಲ್ಲಿ NTPHCಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲವೆಂಬುದಾಗಿ ತಿಳಿಸಿದರು. “ನಮಗೆ ಇದಕ್ಕಾಗಿ ಹೆಚ್ಚುವರಿ ಹಣವನ್ನು ನೀಡುವುದಿಲ್ಲವಾದರೂ, ನಾವು ಈ ಕೆಲಸವನ್ನು ನಿರ್ವಹಿಸುತ್ತೇವೆ. ಎಲ್ಲ ಸೌಲಭ್ಯಗಳಲ್ಲೂ ಸಿಬ್ಬಂದಿಗಳ ಕೊರತೆಯಿರುವುದು ನಮಗೆ ತಿಳಿದಿದೆ. ಈ ಸರ್ವವ್ಯಾಪಿ ವ್ಯಾಧಿಯು ಎಲ್ಲೆಗಳನ್ನು ಮೀರುತ್ತಿದೆ” ಎಂದರವರು.

ಪ್ರಾಯಶಃ ಮೂರು ವರ್ಷಗಳಿಂದಲೂ NTPHC ವತಿಯಿಂದ ವೈದ್ಯರನ್ನು ನಿಯುಕ್ತಿಗೊಳಿಸಿರುವುದಿಲ್ಲ.  ಇವರು ಸಿಬ್ಬಂದಿ ಕೊರತೆಯ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರಲು ಪ್ರಯತ್ನಿಸಿದಾಗ, ‘ಅನುಸರಿಸಿಕೊಳ್ಳುವಂತೆ’ ತಿಳಿಸಲಾಯಿತು. “ಈ ಕೇಂದ್ರವನ್ನು ನಾನೇ ಸ್ವಚ್ಛಗೊಳಿಸುತ್ತೇನೆ. ರೋಗಿಗಳಿಗೆ ಕೆಲವೊಮ್ಮೆ ಚುಚ್ಚುಮದ್ದುಗಳನ್ನು ಸಹ ನೀಡುತ್ತೇನೆ. ಒಮ್ಮೊಮ್ಮೆ ಅವರು ಒತ್ತಾಯಿಸಿದಲ್ಲಿ, ರಕ್ತದೊತ್ತಡವನ್ನು ಪರೀಕ್ಷಿಸುತ್ತೇನೆ”ಎಂಬುದಾಗಿ ವಫಾಯ್‌ ತಿಳಿಸಿದರು. ಇದು ಅವರ ಕೆಲಸವಲ್ಲವಾದರೂ, ರೋಗಿಗಳಿಗೆ ಅದು ಅರ್ಥವಾಗದಿರಬಹುದು. ತಾವು ಸಹ ಅವರಿಗೆ ಹೇಗಾದರೂ ಸಹಾಯಮಾಡಬೇಕೆಂದು ಬಯಸುತ್ತೀರಲ್ಲವೇ.

ವಫಾಯ್‌ ಅವರು ಆಗಾಗ ದೊರೆಯುವುದಿಲ್ಲವಾದ ಕಾರಣ, ಸಾಮಾನ್ಯವಾಗಿ ದಾಲ್‌ ಸರೋವರದ ನಿವಾಸಿಗಳು, ಹೆಚ್ಚಿನ ಅವಶ್ಯಕತೆಯಿದ್ದಾಗ, ಮುಚ್ಚಿದ NTPHCಗಿಂತಲೂ ಮುಂದಕ್ಕೆ ಸಾಗಿ, ಹೆಚ್ಚಿನ ಅವಶ್ಯಕತೆಯಿದ್ದಾಗ ತಮ್ಮ ಸಹಾಯಕ್ಕೆ ಒದಗುವ ಔಷಧ ವ್ಯಾಪಾರಿ-ಚಿಕಿತ್ಸಾಲಯಗಳಿಗೆ ತೆರಳುತ್ತಾರೆ.

ಅನುವಾದ: ಶೈಲಜಾ ಜಿ.ಪಿ.

Adil Rashid

Adil Rashid is an independent journalist based in Srinagar, Kashmir. He has previously worked with ‘Outlook’ magazine in Delhi.

Other stories by Adil Rashid
Translator : Shailaja G. P.
shailaja1.gp@gmail.com

Shailaja (shailaja1.gp@gmail.com) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.