"ಅದು ಯಾವತ್ತೂ ನೂರು ದಿನಗಳ ಕೆಲಸವಲ್ಲ, ಈ ವರ್ಷ ಕೂಡ ಇದುವರೆಗೆ 50 ದಿನಗಳ ಕೆಲಸ ಮಾತ್ರ ಸಿಕ್ಕಿದೆಯಷ್ಟೇ," ಎಂದು ಆರ್. ವನಜಾ ಹೇಳಿದರು. 2019ರ ಡಿಸೆಂಬರ್ ತಿಂಗಳ ಬೆಳಿಗ್ಗೆ ಅವರು ಮತ್ತು ಸುಮಾರು 18 ಮಹಿಳೆಯರು ಮತ್ತು 2-3 ಪುರುಷರು ವೆಲಿಕಥನ್ (ಬಳ್ಳಾರಿ ಜಾಲಿ) ಮರದ ಕೆಳಗಿನ ತೆಳು ನೆರಳಿನಡಿ ಮಾತನಾಡುತ್ತಾ ಕುಳಿತಿದ್ದರು. ಇವರೆಲ್ಲರೂ ತಮಿಳುನಾಡಿನ ಬಂಗಾಳ ಮೇಡು ಹಾಡಿಗೆ ಸೇರಿದವರು. ಅವರು ʼನೂರು ನಾಳ್ ವೇಲೈʼ ಕುರಿತು ಚರ್ಚಿಸುತ್ತಿದ್ದರು. ನರೇಗಾ ಕೆಲಸವನ್ನು ಅವರು ತಮಿಳಿನಲ್ಲಿ ಹಾಗೆ ಕರೆಯುತ್ತಾರೆ. ಸುಮಾರು ಇಪ್ಪತ್ತು ವರ್ಷ ಪ್ರಾಯದ ವನಜಾ ಈ ಕಾಲೋನಿಯ ಇತರ ವಯಸ್ಕ ಮಹಿಳೆಯರಂತೆಯೇ ದಿನಗೂಲಿಯಾಗಿ ಕೆಲಸ ಮಾಡುತ್ತಾರೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುತ್ತನಿ ಬ್ಲಾಕ್‌ನಲ್ಲಿರುವ ಚೆರುಕ್ಕನೂರ್ ಪಂಚಾಯತ್‌ನ ಒಂದು ಭಾಗವಾಗಿರುವ ಈ ಹಾಡಿಯ ಪುರುಷ ನರೇಗಾ ಹೊರತಾದ ಕೆಲಸಗಳನ್ನು ಹುಡುಕಿಕೊಳ್ಳುತ್ತಾರೆ. ಅವರು ಸಾಮಾನ್ಯವಾಗಿ ಕೃಷಿಭೂಮಿಯಲ್ಲಿ ಕಾಲುವೆ ತೋಡುವ ಕೆಲಸ, ಮಾವಿನ ಗಿಡಗಳಿಗೆ ನೀರು ಹಾಕುವುದು, ಕಟ್ಟಡ ಕೆಲಸ, ಅಟ್ಟಣಿಗೆ, ಪಲ್ಪ್ ಮತ್ತು ಸೌದೆಗಾಗಿ ಸವುಕ್ಕು(ಗಾಳಿ ಮರ) ಮರ ಕತ್ತರಿಸುವುದು ಇತ್ಯಾದಿ ಮಾಡುತ್ತಾರೆ. ಅವರಿಗೆ ಈ ಕೆಲಸಗಳಿಗೆ ದಿನಗೂಲಿಯಾಗಿ ದಿನಕ್ಕೆ 300 ರೂಪಾಯಿಗಳು ದೊರೆಯುತ್ತದೆ.
ಆದರೆ ಅವೆಲ್ಲವೂ ಕಾಲಾನುಗುಣವಾಗಿ ಮತ್ತು ಅನಿರೀಕ್ಷಿತವಾಗಿ ಸಿಗುವ ಕೆಲಸಗಳು. ಮಳೆಗಾಲದಲ್ಲಿ ಯಾವುದೇ ಕೆಲಸ ಇಲ್ಲದ ಸಮಯದಲ್ಲಿ, ತಮಿಳು ನಾಡಿನಲ್ಲಿ ವಿಶೇಷ ದುರ್ಬಲ ಬಡಕಟ್ಟು ಎಂದು ಪಟ್ಟಿ ಮಾಡಲಾಗಿರುವ ಈ ಇರುಳರು ಜೀವನ ನಿರ್ವಹಣೆಗೆ ಹಣವಿಲ್ಲದೆ ಸಮೀಪದ ಕಾಡಿನಲ್ಲಿ ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಾರೆ ಅಥವಾ ಹಣ್ಣು ಮತ್ತು ಗಡ್ಡೆ ಗೆಣಸುಗಳನ್ನು ಹುಡುಕುತ್ತಾರೆ. (ನೋಡಿ,
ಬಂಗಾಳಮೇಡುವಿನಲ್ಲಿ ಅವಿತ ಖಜಾನೆಗಳ ಹುಡುಕಾಟ
ಮತ್ತು
ಬಂಗಾಳಮೇಡುವಿನಲ್ಲಿ ಇಲಿಗಳ ವಿವಿಧ ದಾರಿಗಳು
)
ಮತ್ತು ಇಲ್ಲಿ ಮಹಿಳೆಯರಿಗೂ ಕೆಲಸ ಸಿಗುವುದು ವಿರಳ. ಅವರು ತಮ್ಮ ಗಂಡಂದಿರೊಡನೆ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ. ಜನವರಿ-ಫೆಬ್ರವರಿಯಿಂದ ಮೇ-ಜೂನ್ ವರೆಗೆ ಈ ಕೆಲಸ ಮಾಡುತ್ತಾರೆ. ಇದು ಕೂಡ ಆಗೊಮ್ಮೆ ಈಗೊಮ್ಮೆ ಸಿಗುವ ಕೆಲಸ. ಈ ಕೆಲಸದಿಂದ ದಂಪತಿಗಳಿಗೆ ಒಂದು ಹಂಗಾಮಿಗೆ ಸುಮಾರು 6,000 ರೂಪಾಯಿಗಳ ಸಂಪಾದನೆ ಸಿಗುತ್ತದೆ.


‘ಮಹಿಳೆಯರಿಗೆ ಉದ್ಯೋಗ ಎಲ್ಲಿದೆ?’ ಎಸ್ ಸುಮತಿ ಪ್ರಶ್ನಿಸುತ್ತಾರೆ; ಇಲ್ಲಿ ಅವರು ಒಣಗಿದ ಕೆರೆಯಲ್ಲಿ ಅಗೆದ ಇಂಗು ಗುಂಡಿಯ ಬಳಿ ನಿಂತಿದ್ದಾರೆ, ಮತ್ತು ಆ ಹೊಂಡಗಳಲ್ಲಿ ಚೆರುಕ್ಕನೂರ್ ಪಂಚಾಯತ್‌ನ ನರೇಗಾ ಜಲ ಸಂರಕ್ಷಣಾ ಯೋಜನೆಗಳ ಭಾಗವಾಗಿ ಕೆಲವು ಸಸ್ಯಗಳನ್ನು ನೆಡಲಾಗಿದೆ
ಕೆಲವೊಮ್ಮೆ ಈ ಮಹಿಳೆಯರು ನೆಲಗಡಲೆ ಗಿಡ ಕೀಳುವ ಕೆಲಸಕ್ಕೂ ಹೋಗುತ್ತಾರೆ. ಇಲ್ಲಿ ಅವರಿಗೆ ದಿನವೊಂದಕ್ಕೆ 110-120 ರೂಪಾಯಿಗಳ ಕೂಲಿ ಸಿಗುತ್ತದೆ. ಅಥವಾ ತಮ್ಮ ಗಂಡಂದಿರೊಡನೆ ಕೂಡಿ ನೆಲಗಡಲೆಯ ಬೀಜವನ್ನು ಬೇರ್ಪಡಿಸಿ ಅದನ್ನು ಪ್ಯಾಕ್ ಮಾಡುವ ಕೆಲಸ ಮಾಡುತ್ತಾರೆ. ಈ ಕೆಲಸಕ್ಕೆ ದಿನವೊಂದಕ್ಕೆ ದಂಪತಿಗಳಿಗೆ 400-450 ರೂ ಸಿಗುತ್ತದೆ. ಆದರೆ ಈ ಕೆಲಸ ಕೂಡ ಅಪರೂಪದ್ದು.
ಒಟ್ಟಾರೆಯಾಗಿ ಹೇಳುವುದಾದರೆ ಈ ಮಹಿಳೆಯರು ನರೇಗಾ ಕೆಲಸದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.
"ಮಹಿಳೆಯರಿಗೆ ಇಲ್ಲಿ ಕೆಲಸ ಎಲ್ಲಿವೆ? ನಮಗೆ ಇರುವ ಒಂದೇ ಒಂದು ಕೆಲಸವೆಂದರೆ ನೂರ್ ನಾಳ್ ವೇಲೈ" ಎನ್ನುತ್ತಾರೆ ವನಜಾ ಅವರ ನೆರೆಯವರಾದ ಎಸ್. ಸುಮತಿ (28). ಇವರು ಕೂಲಿಕಾರ್ಮಿಕರಾದ ಅವರ ಪತಿ ಕೆ. ಶ್ರೀರಾಮುಲು, 36, ಅವರೊಂದಿಗೆ ತಮ್ಮ ಮಣ್ಣು ಮತ್ತು ಹುಲ್ಲಿನಿಂದ ನಿರ್ಮಿಸಲಾದ ಮನೆಯಲ್ಲಿ ವಾಸಿಸುತ್ತಾರೆ.
ಎಂಜಿಎನ್‌ಆರ್‌ಇಜಿಎ , ಅಥವಾ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005, ಪ್ರತಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸದ ಖಾತರಿ ನೀಡುತ್ತದೆ.
ಆ ಮರಮ್ (ಪ್ರೊಸೊಪಿಸ್ ಜುಲಿಫ್ಲೋರಾ ಮರ) ಕೆಳಗೆ ಕುಳಿತಿದ್ದ ಗುಂಪು ಹೆಸರು-ಎಣಿಕೆ ಮಾಡಿ, ಬಂಗಾಳಮೇಡುವಿನ 35 ಕುಟುಂಬಗಳಲ್ಲಿ, 25 ಮಹಿಳೆಯರು (ಮತ್ತು 2 ಪುರುಷರು) ಎನ್‌ಆರ್‌ಇಜಿಎ ಜಾಬ್ ಕಾರ್ಡ್‌ಗಳನ್ನು ಹೊಂದಿದ್ದಾರೆಂದು ಹೇಳಿದ್ದರು. "ಅವರು ನಮ್ಮನ್ನು ಏರಿ ವೇಲೈಗೆ [ಕೆರೆಯ ಕೆಲಸ] ಕರೆಯುತ್ತಾರೆ" ಎಂದು ಸುಮತಿ ಹೇಳಿದರು, ಮುಖ್ಯವಾಗಿ, ಕಾಲುವೆಗಳು ಮತ್ತು ಕಂದಕಗಳನ್ನು ಅಗೆಯುವುದು, ಒಣ ಕೆರೆಗಳ ಕಳೆ ತೆಗೆಯುವುದು ಅಥವಾ ಕೆಲವೊಮ್ಮೆ ರಸ್ತೆಗಳಲ್ಲಿ ಸಸಿಗಳನ್ನು ನೆಡುವುದು ಇವುಗಳನ್ನು ಸ್ಥಳೀಯವಾಗಿ ಹಾಗೆ ಕರೆಯುತ್ತಾರೆ.
ಆದರೆ ನರೇಗಾ ಕೆಲಸ ಮತ್ತು ಆದಾಯ ಕೂಡ ಅನಿಯಮಿತವಾಗಿರುತ್ತದೆ. ಚೆರುಕ್ಕನೂರು ಪಂಚಾಯತ್‌ನ ಅಂಕಿ-ಅಂಶವು ಕಳೆದ ಮೂರು ವರ್ಷಗಳಲ್ಲಿ ಸರಾಸರಿ ದಿನಗಳ ಕೆಲಸವು ಸ್ಥಿರವಾಗಿ ಕುಸಿಯುತ್ತಿರುವುದನ್ನು ತೋರಿಸುತ್ತದೆ - ಬಂಗಾಳಮೇಡು ಜನರಿಗೆ ಅದು ಏಕೆಂದು ತಿಳಿದಿಲ್ಲ, ಆದರೆ ಕೆಲವು ಹೊಸ ಯೋಜನೆಗಳನ್ನು ಪಂಚಾಯತ್ ಪ್ರಾರಂಭಿಸುತ್ತಿರುವುದರಿಂದ ಹೀಗಾಗುತ್ತಿರಬಹುದೆಂದು ಭಾವಿಸಿದ್ದಾರೆ. 2019-20ರಲ್ಲಿ (ಹಣಕಾಸು ವರ್ಷ), ಪ್ರತಿ ಕುಟುಂಬಕ್ಕೆ ಕೇವಲ 49.22 ದಿನಗಳು ಮಾತ್ರ ಕೆಲಸ ದೊರೆತಿವೆ, ಈ ಪ್ರಮಾಣ 2016-17ರಲ್ಲಿ 93.48ರಷ್ಟಿತ್ತು.


ಎಡ: ಚೆರುಕ್ಕನೂರು ಪಂಚಾಯತ್‌ನ ಇರುಳ ಕಾಲೋನಿಯ ಬಂಗಾಲಮೇಡು ಮಹಿಳೆಯರು ನರೇಗಾ ವೇತನ ಕುರಿತು ಚರ್ಚಿಸುತ್ತಿರುವುದು. ಬಲ: ಎಸ್ ಸುಮತಿ ಅವರ ಜಾಬ್ ಕಾರ್ಡ್; ಈ ಹಾಡಿಯಲ್ಲಿನ ಹೆಚ್ಚಿನ ಕಾರ್ಡ್‌ಗಳ ಹಾಜರಾತಿ ಮತ್ತು ವೇತನ ವಿವರಗಳು ಕಾರ್ಮಿಕರ ಅಂದಾಜುಗಳೊಂದಿಗೆ ಹೊಂದಿಕೆಯಾಗುವುದಿಲ್ಲ
"ನಾವು ಒಂದು ವರ್ಷದ ಹಿಂದೆ 80-90 ದಿನಗಳು ಕೆಲಸ ಮಾಡಿದ್ದೇವೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ” ಎಂದು ವನಜ ಹೇಳಿದರು. ಅವರ ಮನೆಯಲ್ಲಿರುವ - ಅವರ 21 ವರ್ಷದ ಪತಿ ಆರ್ ಜಾನ್ಸನ್ ಮತ್ತು ಮೂರು ವರ್ಷದ ಮಗ ಶಕ್ತಿವೇಲ್ ಇವರೆಲ್ಲರ ಜೀವನ ಮುಖ್ಯವಾಗಿ ನೂರ್ ನಾಳ್ ವೇಲೈ ವೇತನವನ್ನು ಅವಲಂಬಿಸಿದೆ. ಕಾರ್ಮಿಕನಾಗಿರುವ ಜಾನ್ಸನ್ ಅವರ ಹೆಚ್ಚಿನ ಆದಾಯ ಅವರ ಸೆಕೆಂಡ್‌ಹ್ಯಾಂಡ್ ಮೋಟಾರುಬೈಕಿನ ಕಂತುಗಳನ್ನು ಪಾವತಿಸಲು ಖರ್ಚು ಮಾಡಲಾಗುತ್ತದೆ.
ಆದರೆ 2019ರ ಅಕ್ಟೋಬರ್ ಮಧ್ಯಭಾಗದಿಂದ 2020ರ ಏಪ್ರಿಲ್ ನಡುವೆ ವನಜಾ ಕೇವಲ 13 ದಿನಗಳ ನರೇಗಾ ಕೆಲಸವನ್ನು ಪಡೆದಿದ್ದಾರೆ. ಆ ತಿಂಗಳುಗಳಲ್ಲಿ, ಕುಟುಂಬವು ಜಾನ್ಸನ್ ಅವರ ವೇತನದ ಮೇಲೆ ಅವಲಂಬಿತವಾಗಬೇಕಾಯಿತು. "ಅವರು ಗಳಿಸಿದ್ದೆಲ್ಲವನ್ನು ನಾವು ಮನೆಯ ಅಗತ್ಯಗಳಿಗೆ ಖರ್ಚು ಮಾಡಿದ್ದೇವೆ" ಎಂದು ವನಜಾ ಹೇಳಿದರು.
ಇದೆಲ್ಲದರ ನಡುವೆ
ತಮಿಳುನಾಡಿನಲ್ಲಿ
ನರೇಗಾ ಕೆಲಸಕ್ಕೆ ರೂಪಾಯಿ 229 (2019-20ರಲ್ಲಿ) ಇರುವ ಕೂಲಿಯನ್ನು ಅವರ ಜಾಬ್ ಕಾರ್ಡ್‌ಗಳಲ್ಲಿ 140-170 ರೂಪಾಯಿಗಳನ್ನಷ್ಟೇ ದಾಖಲಿಸಲಾಗಿದೆ. ಚೆರುಕ್ಕನೂರು ಪಂಚಾಯತ್ ನೇತೃತ್ವದ ರಾಮಕೃಷ್ಣಪುರಂ ಹಾಡಿಯ, ಬಂಗಾಳಮೇಡು ಸ್ಥಳೀಯ ಮೇಲ್ವಿಚಾರಕರಾದ ಪನಿಧಲ ಪೊರುಪ್ಪಲಾರ್(ಪಿಪಿ) ಎಸ್.ಎಸ್. ನಿತ್ಯಾ (31), ವೇತನ ನಿಗದಿಪಡಿಸಿರುವುದಕ್ಕಿಂತ ಯಾಕೆ ಕಡಿಮೆಯಿದೆಯೆಂದು ತನಗೆ ತಿಳಿದಿಲ್ಲ ಎಂದು ಹೇಳಿದರು.
"ಓವರ್‌ಗಳು ಪ್ರತಿಯೊಬ್ಬ ವ್ಯಕ್ತಿಯು ಎಷ್ಟು ಕೆಲಸ ಮಾಡಬೇಕೆಂದು ನಿರ್ಧರಿಸುತ್ತಾರೆ ಮತ್ತು ಆ ಕೆಲಸಕ್ಕೆ ಮೊತ್ತವನ್ನು ಪಾವತಿಸಬೇಕಿರುತ್ತದೆ" ಎಂದು ಅವರು ಹೇಳಿದರು. 'ಓವರ್‌ಗಳು' ಎಂದರೆ ಎಂಜಿನಿಯರ್ - ಕೆಲವೊಮ್ಮೆ ಇವರನ್ನು 'ಓವರ್‌ಸಾರ್' ಅಥವಾ 'ಓವರ್ಸ್ ಅಮ್ಮ' ಎಂದು ಕರೆಯಲಾಗುತ್ತದೆ. "ಹೊಂಡಗಳನ್ನು ತೆಗೆಯುವ ಕೆಲಸವಿದ್ದರೆ ಅವರು ಹೊಂಡದ ಅಳತೆ ಸಂಖ್ಯೆ ಮತ್ತು ಆ ಕೆಲಸದ ಮೊತ್ತವನ್ನು ನಿರ್ಧರಿಸುತ್ತಾರೆ. ಅಥವಾ ಕಾಲುವೆ ತೋಡುವ ಕೆಲಸವಿದ್ದರೆ ಓವರ್‌ಗಳು ಅಳತೆ ಮತ್ತು ಪಾವತಿ ಮೊತ್ತವನ್ನು ನಿಗದಿಪಡಿಸುತ್ತಾರೆ."


ಎಡ: ಎಂ ಮರಿಯಮ್ಮಾಳ್, ಯೋಜನೆಯ ಎಲ್ಲಾ ಪ್ರಯೋಜನಗಳು ಸಿಗುವುದರಿಂದ ವಂಚಿತರಾಗದಿರಲು ಎಲ್ಲಾ ದಾಖಲೆಗಳನ್ನು ಸರಿಯಾಗಿ ಇರಿಸಿಕೊಂಡಿದ್ದಾರೆ. ಬಲ: 2017 ರಲ್ಲಿ ಸ್ವೀಕರಿಸಿದ ತಮ್ಮ ನರೇಗಾ ಜಾಬ್ ಕಾರ್ಡ್‌ನೊಂದಿಗೆ ವಿ ಸರೋಜ
ಜಾಬ್ ಕಾರ್ಡ್‌ಗಳು ಕಾರ್ಮಿಕರ ಹಾಜರಾತಿ ಮತ್ತು ವೇತನದ ಬಗ್ಗೆ ನಿಗಾ ಇಡಲು ಸಹಾಯ ಮಾಡುತ್ತದೆ. ಕಾರ್ಮಿಕರು ಈ ಕಾರ್ಡ್‌ಗಳನ್ನು ಸೈಟ್‌ಗಳಿಗೆ ತರುತ್ತಾರೆ, ಮತ್ತು ಪಿಪಿ ಪ್ರತಿದಿನ ಅದರಲ್ಲಿ ಹಾಜರಾತಿಯನ್ನು ದಾಖಲಿಸಬೇಕು. ಆದರೆ ಬಂಗಾಳಮೇಡುವಿನಲ್ಲಿನ ಹೆಚ್ಚಿನ ಜಾಬ್ ಕಾರ್ಡ್‌ಗಳಲ್ಲಿನ ಈ ವಿವರಗಳು ಕಾರ್ಮಿಕರ ಅಂದಾಜುಗಳಿಗೆ ಹೊಂದಿಕೆಯಾಗುವುದಿಲ್ಲ.
ಇದಕ್ಕೆ ಕಾರಣ ಕೆಲಸಗಾರರು ಕಾರ್ಡ್ ತರಲು ಮರೆಯುವುದು ಅಥವಾ ಪಿಪಿ ಅದರಲ್ಲಿ ಮಾಹಿತಿ ತುಂಬಿಸುವುದನ್ನು ಮರೆಯುವುದು ಕಾರಣವಿರಬಹುದು. ಪಿಪಿ ಕೂಡ ಒಂದು ರಿಜಿಸ್ಟರ್ ಮೇಂಟೇನ್ ಮಾಡುತ್ತಾರೆ. ಅದರಲ್ಲಿ ವಿವರಗಳನ್ನು ತುಂಬಿ ಅದನ್ನು ತಿರುತ್ತಣಿಯಲ್ಲಿರುವ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ನ ಕಂಪ್ಯೂಟರ್ ಆಪರೇಟರ್‌ಗೆ ಕಳಿಸಲಾಗುತ್ತದೆ. 2017ರಲ್ಲಿ ಮನರೇಗಾ ಸಂಬಳ ಪಾವತಿ ಡಿಜಿಟಲೀಕರಣವಾದ ನಂತರ (ಸಂಬಳ ನೇರ ಬ್ಯಾಂಕ್ ಖಾತೆಗೆ ಪಾವತಿಸುವುದು) ಈ ಪ್ರಕ್ರಿಯೆ ಪ್ರಾರಂಭವಾಯಿತು.
ಡಿಜಿಲೈಸೇಷನ್‌ಗೂ ಮೊದಲು ಪಿಪಿ ಜಾಬ್ ಕಾರ್ಡಿನಲ್ಲಿ ಸಂಬಳದ ವಿವರವನ್ನೂ ತುಂಬಿಸಿ ಕೊಡುತ್ತಿದ್ದರು. “ನಮ್ಮ ನೂರ್ ನಾಳ್ ವೇಲೈ ಸಂಬಳ ದುಡ್ಡಿನ ರೂಪದಲ್ಲಿ ನೀಡುತ್ತಿದ್ದಾಗ ಪ್ರತಿ ವಾರ ನಮಗೆ ಎಷ್ಟು ಹಣ ಬಂದಿದೆಯೆಂದು ತಿಳಿಯುತ್ತಿತ್ತು. ಈ ಅದು ನೇರ ಬ್ಯಾಂಕಿಗೆ ಬರುತ್ತದೆ. ಒಂದು ವೇಳೆ ನಾವು ಶಾಲೆಗೆ ಹೋಗಿದ್ದರೆ ನಮ್ಮ ಖಾತೆಯಲ್ಲಿ ಎಷ್ಟು ಹಣ ಬಂದಿದೆಯೆಂದು ನಮಗೆ ತಿಳಿಯುತ್ತಿತ್ತು.” ಎನ್ನುತ್ತಾರೆ 43 ವರ್ಷದ ವಿ. ಸರೋಜಾ.
ಈ
ಡಿಜಿಟಲ್ ಆವೃತ್ತಿಯಲ್ಲಿ
ಎಲ್ಲ ಮಾಹಿತಿಯನ್ನು ಬ್ಲಾಕ್ ಡೆವಲಪ್‌ಮೆಂಟ್ ಆಫೀಸಿನಲ್ಲಿ ಕಂಪ್ಯೂಟರ್‌ಗೆ ಫೀಡ್ ಮಾಡಲಾಗುತ್ತದೆ. ಇದರಲ್ಲಿನ ಸಂಬಳ ಮತ್ತು ಹಾಜರಾತಿಯ ವಿವರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆಯಾದರೂ ಅದು ಇರುಳರಿಗೆ ಎಟುಕುವುದಿಲ್ಲ. ಯಾಕೆಂದರೆ ಅವರಲ್ಲಿ ಸಾಕಷ್ಟು ಜನರ ಬಳಿ ಫೋನ್‌ಗಳಿಲ್ಲ ಫೋನ್ ಇದ್ದರೂ ಇಂಟರ್ನೆಟ್ ಸೌಲಭ್ಯವಿಲ್ಲ. ಅಲ್ಲದೆ ಈ ರೀತಿಯ ತಂತ್ರಜ್ಞಾನಗಳ ಕುರಿತಾದ ಕನಿಷ್ಟ ಜ್ಞಾನ ಅವರನ್ನು ಇಂತಹ ಸೌಲಭ್ಯಗಳಿಂದ ದೂರವಿರಿಸಿದೆ. ಅವರಿಗೆ ವೆಬ್‌ಸೈಟ್‌ಗಳ ಸಂಕೀರ್ಣ ಮಾದರಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ.


ಬಲ: ದೊಡ್ಡ ಸಂಖ್ಯೆಯಲ್ಲಿ ಜನರು ಕೆಲಸಗಳನ್ನು ಎದುರು ನೋಡುತ್ತಿದ್ದಲ್ಲಿ 20 ಜನರಿಗಿಂತ ಹೆಚ್ಚು ಜನರಿರುವ ತಂಡಕ್ಕೆ ಅವರ ಸರದಿ ಬರುವಾಗ ತಡವಾಗುತ್ತದೆ. ಕಡಿಮೆ ಕೆಲಸದ ಲಭ್ಯತೆಗೆ ಇದೂ ಕಾರಣವಿರಬಹುದು ಎನ್ನುತ್ತಾರೆ ಈ ಮೊದಲು ಮನರೇಗಾ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ಜಿ. ಸುಮತಿ. ಬಲ: ಎಸ್. ಸುಮತಿ, (ಇವರು ಮೇಲೆ ಹೇಳಿದ ಸುಮತಿಯಲ್ಲ) ಮತ್ತು ಅವರ ಪತಿ ಕೆ. ಶ್ರೀರಾಮುಲು ಅವರೊಂದಿಗೆ. ಸುಮತಿಯವರು ಲಾಕ್‌ಡೌನ್ ತೆರವುಗೊಳಿಸಿದ ನಂತರ ತಾನು ಮನರೇಗಾ ಉದ್ಯೋಗದಲ್ಲಿ ದುಡಿದ ಹಣದಲ್ಲಿ 5,0000 ಉಳಿಸಿ ಮನೆಯ ಮುಂದೆ ಒಂದು ಸಣ್ಣ ಅಂಗಡಿ ಇರಿಸಿಕೊಂಡಿದ್ದಾರೆ
ಆದ್ದರಿಂದ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ನಂತರ, ವಿವರಗಳನ್ನು ಖಚಿತಪಡಿಸಿಕೊಂಡು ಪಿಪಿಗೆ ತಿಳಿಸಿದ ನಂತರವೇ ಜಾಬ್ ಕಾರ್ಡ್‌ಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ. "ವೇತನವನ್ನು ಸ್ವೀಕರಿಸುವ ಮೊದಲು ನಾವು [ಕಾರ್ಡ್‌ನಲ್ಲಿ] ವೇತನ ಮಾಹಿತಿಯನ್ನು ಭರ್ತಿ ಮಾಡಿದರೆ ಅದು ದಾರಿ ತಪ್ಪಿಸಿದಂತಾಗುತ್ತದೆ" ಎಂದು ಎಸ್.ಎಸ್. ನಿತ್ಯ ವಿವರಿಸಿದರು. "ಜನರು ತಮ್ಮ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಎಂಟ್ರಿ ತೋರಿಸುತ್ತದೆ, ಆದರೆ ಆ ಹಣ ಇನ್ನೂ ಬ್ಯಾಂಕಿಗೆ ಬಂದಿರುವುದಿಲ್ಲ. ಜನರು ಇದರ ಬಗ್ಗೆ ದೂರು ನೀಡಿದ್ದಾರೆ.”
ಬಂಗಾಳಮೇಡುವಿನ ಇರುಳರು ತಮ್ಮ ಖಾತೆಯನ್ನು ಪರಿಶೀಲಿಸಲು ಹೋಗಲು ತಮ್ಮ ಕೆಲಸದ ಸಮಯ ಮತ್ತು ಆ ಮೂಲಕ ಕೂಲಿಯನ್ನು ಕಳೆದುಕೊಳ್ಳಬೇಕಾಗುತ್ತದೆ. “ನಮ್ಮ ಬ್ಯಾಂಕ್‌ಗೆ ಹೋಗಲು [ಹಾಡಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕೆ. ಜಿ. ಕಂಡಿಗೈ ಪಂಚಾಯತ್‌ನಲ್ಲಿರುವ ಬ್ಯಾಂಕ್], ನಾವು ಮುಖ್ಯ ರಸ್ತೆ ತಲುಪಲು ಮೂರು ಕಿಲೋಮೀಟರ್ ನಡೆಯಬೇಕು. ಅಲ್ಲಿಂದ ನಾವು ಶೇರ್-ಆಟೋ ಅಥವಾ ಬಸ್ ಹಿಡಿಯುತ್ತೇವೆ ಮತ್ತು ಅದಕ್ಕೆ ಒಬ್ಬರಿಗೆ 10 ರೂಪಾಯಿ ಖರ್ಚಾಗುತ್ತದೆ ”ಎಂದು ಸುಮತಿ ಹೇಳಿದರು. "ಒಂದು ವೇಳೆ ಹಣ ಬಾರದಿದ್ದ ಪಕ್ಷದಲ್ಲಿ ನಾವು ಮತ್ತೆ ಹೋಗಬೇಕಾಗುತ್ತದೆ." ಕೆಲವೊಮ್ಮೆ ಸ್ಥಳೀಯರ ಮೋಟಾರ್ ಬೈಕ್‌ನಲ್ಲಿ ಹೋಗುತ್ತಾರೆ "ಆದರೆ ನಾವು ಅವರಿಗೆ ಪೆಟ್ರೋಲ್‌ಗಾಗಿ 50 ರೂಪಾಯಿಗಳನ್ನು ನೀಡಬೇಕು" ಎಂದು 44 ವರ್ಷದ ವಿ. ಸರೋಜಾ ಹೇಳಿದರು.
ಸೌಲಭ್ಯವನ್ನು ಸುಧಾರಿಸಲು, ಬ್ಯಾಂಕುಗಳು ‘ಮಿನಿ ಬ್ಯಾಂಕುಗಳನ್ನು’ ಪರಿಚಯಿಸಿವೆ. ಇರುಳರು ಬಳಸುವ ಕೆನರಾ ಬ್ಯಾಂಕ್, ಚೆರುಕ್ಕನೂರು ಪಂಚಾಯತ್‌ನಲ್ಲಿ ಒಂದು ‘ಅಲ್ಟ್ರಾ ಸ್ಮಾಲ್ ಬ್ರಾಂಚ್’ ಹೊಂದಿದೆ. ಆದರೆ ಅದೂ ಸರಿಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ, ಮತ್ತು ಮಂಗಳವಾರದಂದು ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಅವರು ತಮ್ಮ ಬಾಕಿ ಮೊತ್ತವನ್ನು ಪರಿಶೀಲಿಸಬಹುದು ಮತ್ತು ರೂ. ಈ ಘಟಕಗಳಿಂದ 10,000 ರೂ ತನಕ ಹಣ ಹಿಂಪಡೆಯಬಹುದು. ಅಲ್ಲದೆ ತಮ್ಮ ಬಾಕಿ ಮೊತ್ತವನ್ನು ಪರಿಶೀಲಿಸಬಹುದು ಮತ್ತು ಈ ಘಟಕಗಳಿಂದ 10,000 ರೂಪಾಯಿಗಿಂತ ಹೆಚ್ಚು ಹಣ ಪಡೆಯಬೇಕಿದ್ದರೆ ಕೆ. ಜಿ. ಕಂಡಿಗೈನಲ್ಲಿರುವ ಮುಖ್ಯ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.


ಕೆಲವೊಮ್ಮೆ ಇರುಳ ಮಹಿಳೆಯರು ತಮ್ಮ ಖಾತೆಗಳಿಂದ ಹಣ ಹಿಂಪಡೆಯುವಾಗ ವೇತನದ ಮೊತ್ತವು ಕಡಿಮೆಯಾಗಿರುವ ಘಟನೆಗಳು ಸಹ ಇವೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿದಾಗ ಕೆ. ಗೋವಿಂದಮ್ಮಾಳ್ (ಎಡ) ಅವರಿಗೆ ಈ ರೀತಿಯ ತೊಂದರೆ ಎದುರಾಗಿತ್ತು. ಮತ್ತು ಈ ಹಾಡಿಯ ಅನೇಕ ಮಹಿಳೆಯರಿಗೂ ಈ ಅನುಭವವಾಗಿದೆ. (ಬಲ)
ಮಿನಿ-ಬ್ಯಾಂಕಿನ ಪಾವತಿ ವ್ಯವಸ್ಥೆಯು ಆಧಾರ್ ಆಧಾರಿತ ಬಯೋಮೆಟ್ರಿಕ್ಸ್‌ನ ಮೂಲಕ ಕಾರ್ಯನಿರ್ವಹಿಸುತ್ತದೆ. "ಯಂತ್ರವು ನನ್ನ ಹೆಬ್ಬೆರಳು ಗುರುತಿಸುವುದೇ ಇಲ್ಲ" ಎಂದು ಸುಮತಿ ಹೇಳಿದರು. "ನಾನು ನನ್ನ ಕೈಯನ್ನು ಒರೆಸಿ ಬಳಸಿದ್ದೇನೆ ಆದರೂ ಅದು ಕೆಲಸ ಮಾಡುವುದಿಲ್ಲ. ಹಾಗಾಗಿ ನಾನು ಕಂಡಿಗೈ ಬ್ಯಾಂಕ್‌ಗೆ ಹೋಗಿ ಎಟಿಎಂ ಕಾರ್ಡ್ ಬಳಸಬೇಕಾಗುತ್ತದೆ.”
ಗ್ರಾಹಕರು ತಮ್ಮ ಕೊನೆಯ ಐದು ವಹಿವಾಟುಗಳನ್ನು ಪರಿಶೀಲಿಸಲು ಬ್ಯಾಂಕ್ ಫೋನ್ ಬ್ಯಾಂಕಿಂಗ್ ಸೌಲಭ್ಯವನ್ನು ಸಹ ನೀಡುತ್ತದೆ. ಆದರೆ ಸುಮತಿ ಮತ್ತು ಇತರರಿಗೆ ಈ ಸೇವೆಯ ಬಗ್ಗೆ ತಿಳಿದಿಲ್ಲ. “ನಮ್ಮ ಫೋನ್‌ನಲ್ಲಿ ಅದನ್ನು ಹೇಗೆ ಮಾಡುವುದೆಂದು ನಮಗೆ ಗೊತ್ತಿಲ್ಲ," ಎಂದು ಅವರು ಹೇಳಿದರು. ಆದರೂ, ನೇರ ಬ್ಯಾಂಕ್ ವರ್ಗಾವಣೆಯು ಸಹ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳುತ್ತಾರೆ. “ಕೈಯಲ್ಲಿ ಹಣವಿದ್ದಾಗ, ಅದು ಹೇಗೆ ಖರ್ಚಾಗುತ್ತದೆ ಎಂಬುದನ್ನು ನಾವು ಲೆಕ್ಕವಿಡಲು ಸಾಧ್ಯವಿಲ್ಲ. ಈಗ ನಾವು ನಮ್ಮ ನೂರ್ ನಾಳ್ ವೇಲೈ ಹಣವನ್ನು ಬ್ಯಾಂಕಿನಲ್ಲಿಯೇ ಬಿಡುತ್ತೇವೆ.”
ಕೆಲವೊಮ್ಮೆ, ಇರುಳ ಮಹಿಳೆಯರು ತಮ್ಮ ಖಾತೆಗಳಿಂದ ಹಿಂಪಡೆಯುವ ಮೊತ್ತವು ಅವರ ಲೆಕ್ಕಾಚಾರಕ್ಕಿಂತ ಕಡಿಮೆಯಾಗಿರುತ್ತದೆ. ಇದು ಕೆ. ಗೋವಿಂದಮ್ಮಾಳ್ ಅವರ ಅನುಭವ. ಈಗ ಸುಮಾರು 40ರ ಹರೆಯದ ಗೋವಿಂದಮ್ಮಾಳ್ 20 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡರು, ಮೂರು ಬೆಳೆದು ನಿಂತಿರುವ ಮಕ್ಕಳನ್ನು ಹೊಂದಿದ್ದಾರೆ ಮತ್ತು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. 2018-19ರಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಅವರು ರೂ. 170,000 ಪಡೆದರು, ಮತ್ತು ಕೆಲಸದ ಸ್ಥಳಕ್ಕೆ ಹೋಗುವ ಬದಲು ತನ್ನ ಸ್ವಂತ ಮನೆಯನ್ನು ನಿರ್ಮಿಸುವಾಗ ಕೆಲಸ ಮಾಡಿದ ದಿನಗಳಷ್ಟು ನರೇಗಾ ವೇತನವನ್ನು ಪಡೆಯಲು ಅರ್ಹತೆ ಹೊಂದಿದ್ದರು. ತನ್ನ ಮನೆಯ ಗಾರೆ ಕೆಲಸದ ಕೂಲಿಯನ್ನು ಸರಿದೂಗಿಸಲು ಅವರು ತನ್ನ ಮನೆ ನಿರ್ಮಾಣದಲ್ಲಿ ತಾನು ಮಾಡಿದ 65 ದಿನಗಳ ಕೂಲಿಯನ್ನು ಬಳಸಲು ನಿರ್ಧರಿಸಿದರು. ಅವರು ತನ್ನ ಖಾತೆಯಲ್ಲಿ 15,000 ರೂಪಾಯಿ ಅವಳು ನಿರೀಕ್ಷಿಸುತ್ತಿದ್ದರು, ಆದರೆ ದೊರೆತಿದ್ದು 14,000 ರೂ. ಇದಲ್ಲದೆ, ಮನೆ ನಿರ್ಮಿಸಲು ನಿಜವಾದ ವೆಚ್ಚವು ಯೋಜನಾ ಮತ್ತು ನರೇಗಾ ವೇತನದ ಮೂಲಕ ನೀಡಲಾಗುವ ಮೊತ್ತಕ್ಕಿಂತ ಹೆಚ್ಚಾಗಿದೆ ಮತ್ತು ಕೆಲವೊಮ್ಮೆ ಕಟ್ಟಡ ಸಾಮಗ್ರಿಗಳ ವೆಚ್ಚವೂ ಹೆಚ್ಚಾಗುತ್ತಿರುತ್ತದೆ. ಇದರಿಂದಾಗಿ ಗೋವಿಂದಮ್ಮಾಳ್ ಅವರ ಹೊಸ ಮನೆಯ ನೆಲಹಾಸು ಹಾಕಿಸುವ ಕೆಲಸ ಅಪೂರ್ಣವಾಗಿ ಉಳಿದಿದೆ. "ಅದನ್ನು ಪೂರ್ಣಗೊಳಿಸಲು ನನ್ನ ಬಳಿ ಹಣವಿಲ್ಲ" ಎಂದು ಅವರು ಹೇಳುತ್ತಾರೆ.
2019ರಲ್ಲಿ ಸರೋಜಾ ಕೂಡ ಏರಿ ವೇಲೈ ಕೆಲಸದ ಬದಲು ತನ್ನ ಸ್ವಂತ ಮನೆಯನ್ನು ಕಟ್ಟುವ ಕೆಲಸ ಮಾಡಲು ಪ್ರಯತ್ನಿಸಿದರು. ವರ್ಷ ಕಳೆದಿದೆ, ಆದರೆ ಅವರ ನರೇಗಾ ವೇತನ ಬರುವ ಲಕ್ಷಣಗಳು ಕಾಣುತ್ತಿಲ್ಲ. “ಅಧಿಕಾರಿ ಸಹಾಯ ಭರವಸೆ ನೀಡಿದ್ದಾರೆ. ನೋಡೋಣ,” ಎಂದು ಸರೋಜಾ ಮೇ ತಿಂಗಳಲ್ಲಿ ಹೇಳಿದ್ದರು. “ಏರಿ ವೇಲೈಯಿಂದ ಹಣ ಬರದಿದ್ದರೆ, ನಾನು ಕೆಲಸದವರಿಗೆ ಹೇಗೆ ಹಣ ನೀಡುವುದು? ನಾನು ನಿಯಮಿತ ಕೆಲಸವನ್ನು ಸಹ ಕಳೆದುಕೊಳ್ಳುತ್ತೇನೆ." ಅಂದಿನಿಂದ, ಅವರು ಕೇವಲ ರೂ. 2,000 ನರೇಗಾ ವೇತನವನ್ನು ಪಡೆದಿದ್ದಾರೆ. ಅವರು ತನ್ನ ಮನೆಯಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದಾರೆಂದು ಅಂದಾಜು ಮಾಡಿದರೂ ಅವರಿಗೆ ಕನಿಷ್ಠ ರೂ. 4,000-5,000 ಬರಬೇಕಿದೆ.


ಎಡ: ಎ. ಎಲ್ಲಮ್ಮ, 23, 2.5 ವರ್ಷಗಳ ಹಿಂದೆ ತನ್ನ ಮಗು ಜನಿಸಿದಾಗ ನರೇಗಾ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರು. ಬಲ: ಎಂ.ಅಂಕಮ್ಮ, 25, ತನ್ನ ಇಬ್ಬರು ಮಕ್ಕಳೊಂದಿಗೆ. ಅವರ ಕೆಲಸದಲ್ಲಿ, ಹಾಜರಾತಿ ಮತ್ತು ವೇತನ ಎರಡರಲ್ಲೂ ಅನೇಕ ಎಂಟ್ರಿಗಳು ಕಾಣೆಯಾಗಿವೆ
ಅಡೆತಡೆಗಳ ಹೊರತಾಗಿಯೂ, ನರೇಗಾ ಬಂಗಾಳಮೇಡು ಮಹಿಳೆಯರಿಗೆ ವರ್ಷಕ್ಕೆ 15,000-18,000 ರೂಪಾಯಿಗಳಷ್ಟು ಸಂಬಳದ ಕೆಲಸ ನೀಡುತ್ತಿದೆ. ಮಾರ್ಚ್ 2020ರಲ್ಲಿ ಲಾಕ್‌ಡೌನ್ ಪ್ರಾರಂಭವಾಗಿ ಇತರ ಜೀವನೋಪಾಯದ ಮೂಲಗಳು ಬರಿದಾದ ನಂತರ, ನರೇಗಾ ಕೆಲಸವು ಈ ಕುಟುಂಬಗಳನ್ನು ಕಾಪಾಡುವ ಜೀವಜಲವಾಯಿತು.
ಮನೆ ರಿಪೇರಿ ಮತ್ತು ವೈದ್ಯಕೀಯ ವೆಚ್ಚಗಳಂತಹ ಆಕಸ್ಮಿಕ ಖರ್ಚುಗಳಿಗಾಗಿ ಸುಮತಿ ಹಲವಾರು ವಾರಗಳ ವೇತನವನ್ನು ಉಳಿಸುತ್ತಿದ್ದರು. ಆದರೆ ಲಾಕ್‌ಡೌನ್ ತೆರವಾದಾಗ, ಮೇ ತಿಂಗಳಲ್ಲಿ, ಆಕೆ ಸೋಪ್, ಮೆಣಸಿನ ಪುಡಿ ಮತ್ತು ಇತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯೊಂದನ್ನು ಮನೆಯ ಹೊರಗೆ ಸ್ಥಾಪಿಸಲು 5,000 ಉಳಿತಾಯದ ಹಣವನ್ನು ಬಳಸಿದರು. (ಲಾಕ್‌ಡೌನ್ ಸಮಯದಲ್ಲಿ, ತಮ್ಮ ಹಾಡಿಯಲ್ಲಿ ಯಾವುದೇ ಅಂಗಡಿಯಿಲ್ಲದೆ, ಇರುಳರು ಸರ್ಕಾರ, ಪಂಚಾಯತ್ ಮುಖಂಡರು, ಎನ್‌ಜಿಒಗಳು ಮತ್ತು ಇತರರು ಒದಗಿಸುವ ಮೂಲ ಪಡಿತರವನ್ನು ಸಂಪೂರ್ಣವಾಗಿ ಅವಲಂಬಿಸಿದ್ದರು).
ಏಪ್ರಿಲ್ ಆರಂಭದಲ್ಲಿ ಇಟ್ಟಿಗೆ ಗೂಡು ಮತ್ತು ಇತರ ಕೆಲಸದ ಸ್ಥಳಗಳು ಮುಚ್ಚಿದ್ದ ಸಂದರ್ಭದಲ್ಲಿ ಸುಮತಿ "ಕೆಲಸವೂ ಇಲ್ಲ ಹಣವೂ ಇಲ್ಲ" ಎಂದು ಹೇಳಿಕೊಂಡಿದ್ದರು. ಆ ತಿಂಗಳ ಕೊನೆಯ ವಾರದ ಹೊತ್ತಿಗೆ, ಹಾಡಿಯ ನರೇಗಾ ಸೈಟುಗಳಲ್ಲಿ ಕೆಲಸವು ಪುನರಾರಂಭಗೊಂಡಿತು. ಇದರಿಂದಾಗಿ ಬಂಗಾಲಮೇಡುವಿನ ಜನರಿಗೆ ಆರ್ಥಿಕ ಸಂಕಷ್ಟಗಳಿಂದ ಒಂದಿಷ್ಟು ಬಿಡುಗಡೆ ಸಿಕ್ಕಿತು.
ಅನುವಾದ: ಶಂಕರ ಎನ್. ಕೆಂಚನೂರು