“ನನಗೆ ಅಂತಹ ದಿನ ವರ್ಷಕ್ಕೊಮ್ಮೆ ಸಿಕ್ಕಿದರೆ ಹೆಚ್ಚು.”
ಸ್ವಪ್ನಾಲಿ ದತ್ತಾತ್ರೇಯ ಜಾಧವ್ ಅವರ ಪಾಲಿಗೆ ಸಿಗುವ ವರ್ಷದ ಎರಡು ರಜೆಗಳ ಕುರಿತು ಮಾತನಾಡುತ್ತಿದ್ದರು. ಡಿಸೆಂಬರ್ 31, 2022ರಂದು ಅವರು ಒಂದು ರಜೆಯನ್ನು ಪಡೆದಿದ್ದರು. ಆ ರಜೆಯ ದಿನ ಆಗಷ್ಟೇ ಬಿಡುಗಡೆಯಾಗಿದ್ದ, ಕೆಲವು ಪರಿಚಿತ ಮುಖಗಳನ್ನು ಹೊಂದಿದ್ದರೂ ಅಷ್ಟೇನೂ ಸದ್ದು ಮಾಡದ ವೇದ್ ಚಿತ್ರವನ್ನು ನೋಡಲು ತೀರ್ಮಾನಿಸಿದ್ದರು.
“ಅಂದು ಹೊಸ ವರ್ಷ ಹಾಗಾಗಿ ಊಟ ಕೂಡಾ ಹೊರಗೆ ಮಾಡಿದೆವು. ಗೋರೇಗಾಂವ್ ಹತ್ತಿರ” ಎಂದರು 23 ವರ್ಷದ ಯುವತಿ ತಮ್ಮ ಅಂದಿನ ರಜೆಯ ದಿನವನ್ನು ಖುಷಿಯಿಂದ ನೆನಪಿಸಿಕೊಳ್ಳುತ್ತಾ.
ಮುಂಬೈನ ಆರು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು ಮತ್ತು ಇತರ ಮನೆಕೆಲಸಗಳನ್ನು ಮಾಡುವ ಸ್ವಪ್ನಾಲಿಯವರ ಪಾಲಿಗೆ ವರ್ಷದ ಉಳಿದ ದಿನಗಳು ಕೆಟ್ಟ ಕನಸಿನಂತೆ ಕಾಡುತ್ತವೆ. ಒಂದು ಮನೆಯಿಂದ ಇನ್ನೊಂದು ಮನೆಗೆ ತೆರಳುವ ಮೊದಲು ಸಿಗುವ 10-15 ನಿಮಿಷಗಳನ್ನು ಅವರು ಮರಾಠಿ ಹಾಡುಗಳನ್ನು ಕೇಳುವುದರಲ್ಲಿ ಕಳೆಯುತ್ತಾರೆ. “ಕನಿಷ್ಠ ಇಷ್ಟು ಹೊತ್ತಾದರೂ ಇವುಗಳನ್ನು ಕೇಳಲು ಸಿಗುತ್ತದೆ” ಎನ್ನುತ್ತಾರೆ ಆ ಕ್ಷಣಗಳು ನೀಡುವ ಸಂತಸವನ್ನು ಮೆಲುಕುಹಾಕುತ್ತಾ.
ಫೋನ್ ಬಳಕೆಯು ಮನಸ್ಸಿಗೆ ಒಂದಷ್ಟು ಉಲ್ಲಾಸ ತರುತ್ತದೆ ಎನ್ನುತ್ತಾರೆ ನೀಲಮ್ ದೇವಿ. “ನನಗೆ ಸಾಧ್ಯವಿದ್ದಾಗಲೆಲ್ಲ ಮೊಬೈಲ್ ಫೋನಿನಲ್ಲಿ ಭೋಜ್ಪುರಿ ಅಥವಾ ಹಿಂದಿ ಚಲನಚಿತ್ರಗಳನ್ನು ನೋಡುವುದೆಂದರೆ ಇಷ್ಟ” ಎನ್ನುತ್ತಾರೆ ಈ 25 ವರ್ಷದ ಯುವತಿ. ವಲಸೆ ಕೃಷಿ ಕಾರ್ಮಿಕರಾಗಿರುವ ಇವರು ಬಿಹಾರದ ಮೊಹಮದ್‌ಪುರದ ಬಲ್ಲಿಯಾ ಎನ್ನುವ ಊರಿನವರು. ಪ್ರಸ್ತುತ ತಮ್ಮ ಊರಿನಿಂದ 150 ಕಿಮೀ ದೂರದ ಮೊಕಾಮೆ ತಾಲ್ ಎನ್ನುವಲ್ಲಿಗೆ ಒಂದು ತಿಂಗಳ ಕಾಲದ ಕೊಯ್ಲಿನ ಕೆಲಸಕ್ಕಾಗಿ ಬಂದಿದ್ದಾರೆ.
ಅವರು ಇಲ್ಲಿಗೆ ಇತರ 15 ಮಹಿಳೆಯರೊಡನೆ ಬಂದಿದ್ದು, ಕೊಯ್ಲು ಮಾಡಿದ ಧಾನ್ಯಗಳ ಪೈರಿನ ಕಟ್ಟನ್ನು ಕಣ ಒಯ್ಯುವುದು ಅವರೆಲ್ಲರ ಕೆಲಸ. ಅವರಿಗೆ 12 ಕಟ್ಟುಗಳನ್ನು ಕತ್ತರಿಸಿ ಸಾಗಿಸಿದರೆ ಒಂದು ಕಟ್ಟನ್ನು ಸಂಬಳವಾಗಿ ನೀಡಲಾಗುತ್ತದೆ. ಸುಹಾಜಿನಿ ಸೊರೇನ್ ಹೇಳುವಂತೆ ಬೇಳೆಗಳು ಹೆಚ್ಚಿನ ಬೆಲೆಯ ವಸ್ತುಗಳಾಗಿದ್ದು ಅವು ವರ್ಷವಿಡೀ ಬಾಳಿಕೆ ಬರುತ್ತವೆ. “ನಾವಿದನ್ನು ವರ್ಷ ಪೂರ್ತಿ ತಿನ್ನಬಹುದು ಮತ್ತು ಹತ್ತಿರದ ಸಂಬಂಧಿಗಳಿಗೂ ಕೊಡಬಹುದು.” ಎನ್ನುತ್ತಾರೆ.
ಅವರ ಗಂಡಂದಿರೂ ಇನ್ನೂ ದೂರದ ಸ್ಥಳಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ. ಮಕ್ಕಳು ಊರಿನಲ್ಲೇ ಸಂಬಂಧಿಕರೊಡನೆ ಉಳಿಯುತ್ತಾರೆ. ತೀರಾ ಸಣ್ಣ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಾರೆ.
ಧಾನ್ಯದ ಪೈರನ್ನು ಕಟ್ಟುತ್ತಾ ಪರಿಯೊಡನೆ ಮಾತನಾಡುತ್ತಿದ್ದ ಅವರಿಗೆ ಈ ಊರಿನಲ್ಲಿ ಹೀಗೆ ಸಿನೆಮಾ ನೋಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, “ಊರಿನಲ್ಲಿ ಮೊಬೈಲ್ ಚಾರ್ಜ್ ಮಾಡಲು ಕರೆಂಟ್ ಇಲ್ಲ” ಹಾಗೆ ನೋಡಿದರೆ ನೀಲಮ್ ಫೋನ್ ಹೊಂದಿರುವುದೇ ವಿಶೇಷ. ಡಿಜಿಟಲ್ ಅಸಮಾನತೆ ಕುರಿತಾದ ಆಕ್ಸ್‌ಫಾಮ್ ವರದಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 61 ಶೇಕಡಾದಷ್ಟು ಗಂಡಸರು ಮೊಬೈಲ್ ಹೊಂದಿದ್ದರೆ, ಕೇವಲ 31 ಶೇಕಡಾದಷ್ಟು ಮಹಿಳೆಯರು ಮೊಬೈಲ್ ಫೋನುಗಳನ್ನು ಹೊಂದಿದ್ದಾರೆ.
ಆದರೆ ನೀಲಮ್ ಅದಕ್ಕೊಂದು ದಾರಿ ಕಂಡುಕೊಂಡಿದ್ದಾರೆ. ಹೆಚ್ಚಿನ ಟ್ರಾಕ್ಟರುಗಳನ್ನು ಕೆಲಸದವರ ತಾತ್ಕಾಲಿಕ ಗುಡಿಸಲುಗಳ ಬಳಿಯೇ ನಿಲ್ಲಿಸಲಾಗಿರುತ್ತದೆಯಾದ್ದರಿಂದ “ಟ್ರಾಕ್ಟರ್ ಮೂಲಕ ನಾವು ಫೋನ್ ಚಾರ್ಜ್ ಮಾಡಿಕೊಂಡು ಮುಖ್ಯ ಫೋನ್ ಕರೆಗಳನ್ನು ಫೋನ್ ಪಕ್ಕಕ್ಕೆ ಇಡುತ್ತೇವೆ. ಸರಿಯಾದ ಕರೆಂಟ್ ಸೌಲಭ್ಯ ಇದ್ದಿದ್ದರೆ ಖಂಡಿತಾ ನಾವು ಸಿನೆಮಾ ನೋಡುತ್ತಿದ್ದೆವು.”
ಮೊಕಾಮೆ ತಾಲ್‌ನಲ್ಲಿ ಕೆಲಸ ಮಾಡುವ ಈ ಮಹಿಳೆಯರು ಬೆಳಗಿನ 6 ಗಂಟೆಗೆ ತಮ್ಮ ಕೆಲಸ ಆರಂಭಿಸುತ್ತಾರೆ. ಮಧ್ಯಾಹ್ನ ಬಿಸಿಲು ಹೆಚ್ಚಾಗುತ್ತಿದ್ದಂತೆ ತಮ್ಮ ಕುಡುಗೋಲುಗಳನ್ನು ಕೆಳಗಿಡುತ್ತಾರೆ. ನಂತರ ಬೋರ್‌ವೆಲ್ ಒಂದರಿಂದ ತಮ್ಮ ಮನೆ ಬಳಕೆಗಾಗಿ ನೀರು ತರಲು ಹೊರಡುತ್ತಾರೆ. ಅದರ ನಂತರ ಎಲ್ಲರೂ ಒಂದಿಷ್ಟು ಸಮಯ ವಿರಾಮ ಪಡೆಯುತ್ತಾರೆ. “ಎಲ್ಲರೂ ತಮಗಾಗಿ ಒಂದಷ್ಟು ಸಮಯ ಎತ್ತಿಟ್ಟುಕೊಳ್ಳಬೇಕು” ಎನ್ನುವುದು ಅನಿತಾರ ಅಭಿಪ್ರಾಯ.
ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯ ನರೈನ್ಪುರ ಗ್ರಾಮದ ಸಂತಾಲ್ ಆದಿವಾಸಿ ಸಮುದಾಯದವರಾದ ಅವರು, “ನಾನು ಮಧ್ಯಾಹ್ನದ ಹೊತ್ತು ಬಿಸಿಲಿರುತ್ತದೆಯಾದ್ದರಿಂದ ಆ ಸಮಯದಲ್ಲಿ ಮಲಗುತ್ತೇನೆ. ಆ ಬಿಸಿಲಿನಲ್ಲಿ ಕೆಲಸ ಮಾಡುವುದು ಕಷ್ಟ” ದಿನಗೂಲಿ ಕೃಷಿ ಕಾರ್ಮಿಕರಾದ ಅವರು ಮೊಕಾಮ್ ತಾಲ್‌ಗೆ ಮಾರ್ಚ್ ತಿಂಗಳಿನಲ್ಲಿ ಧಾನ್ಯ ಮತ್ತು ಇತರ ಬೆಳೆಗಳ ಕೊಯ್ಲು ಕೆಲಸಕ್ಕೆ ಬಂದಿದ್ದಾರೆ.
ಅರೆ ಕಟಾವು ಮಾಡಿದ ಹೊಲದಲ್ಲಿ ಒಂದು ಡಜನ್ ಹೆಂಗಸರು ದಣಿದ ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಂಡಿದ್ದರು, ಮುಸ್ಸಂಜೆಯ ಸಮಯ ಸಮೀಪಿಸುತ್ತಿತ್ತು.
ದಣಿದಿದ್ದರೂ ಈ ಮಹಿಳೆಯರ ಕೈಗಳು ಧಾನ್ಯಗಳನ್ನು ಬಿಡಿಸುವಲ್ಲಿ, ಸ್ವಚ್ಛಗೊಳಿಸುವಲ್ಲಿ ನಿರತವಾಗಿದ್ದವು. ಇನ್ನು ಕೆಲವರು ನಾಳಿನ ದಿನ ಧಾನ್ಯದ ಪೈರು ಸಾಗಿಸಲು ಬೇಕಾಗುವ ಹಗ್ಗವನ್ನು ಹುಲ್ಲಿನಿಂದ ನೇಯುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಧಾನ್ಯಗಳ ಹುಲ್ಲಿನಿಂದ ತಯಾರಿಸಲಾದ ಮೂರು ಅಡಿಯ ಗೋಡೆ ಮತ್ತು ಟಾರ್ಪಲಿನ್ ಹೊದಿಕೆಯ ಗುಡಿಸಲುಗಳಿದ್ದವು. ಸಂಜೆಯಾಗುತ್ತಿದ್ದ ಹಾಗೆ ಒಲೆಗಳು ರಾತ್ರಿಯ ಊಟಕ್ಕಾಗಿ ಉರಿಯತೊಡಗುತ್ತವೆ ಮತ್ತು ಅವರ ಮಾತುಕತೆ ಮರುದಿನದ ಬೆಳಗಿನ ತನಕ ವಿರಾಮ ಪಡೆಯುತ್ತದೆ.
2019ರ ಎನ್ಎಸ್ಒ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಹಿಳೆಯರು ಪ್ರತಿದಿನ ಸರಾಸರಿ 280 ನಿಮಿಷಗಳನ್ನು ಪಾವತಿ ರಹಿತವಾಗಿ ಮನೆಯ ಸದಸ್ಯರಿಗಾಗಿ ಮನೆ ಮತ್ತು ಆರೈಕೆ ಸೇವೆಗಳಲ್ಲಿ ಕಳೆಯುತ್ತಾರೆ. ಪುರುಷರು ಈ ವಿಷಯದಲ್ಲಿ ಕೇವಲ 36 ನಿಮಿಷಗಳನ್ನು ಕಳೆಯುತ್ತಾರೆ.
*****
ಸಂತಾಲ್ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಆರತಿ ಸೊರೇನ್ ಮತ್ತು ಮಂಗಲಿ ಮುರ್ಮು ಒಟ್ಟಿಗೆ ಯೋಜಿತವಲ್ಲದ ದಿನಗಳನ್ನು ಒಟ್ಟಿಗೆ ಕಳೆಯುವುದನ್ನು ಎದರು ನೋಡುತ್ತಿದ್ದಾರೆ. ಹದಿನೈದು ವರ್ಷ ಪ್ರಾಯದ ಈ ಅಕ್ಕ ತಂಗಿಯರು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳು. ಪ್ರಸ್ತುತ ಪಶ್ಚಿಮಬಂಗಾಳದ ಪಾರುಲ್‌ದಂಗದಲ್ಲಿರುವ ಇವರು, “ನನಗೆ ಇಲ್ಲಿಗೆ ಬರುವುದೆಂದರೆ ಇಷ್ಟ. ಇಲ್ಲಿನ ಹಕ್ಕಿಗಳನ್ನು ನೋಡಲು ಬಹಳ ಖುಷಿಯಾಗುತ್ತದೆ. ಕೆಲವೊಮ್ಮೆ ನಾವಿಬ್ಬರೂ ಸೇರಿ ಹಣ್ಣು ಕಿತ್ತು ಒಟ್ಟಿಗೆ ತಿನ್ನುತ್ತೇವೆ” ಎನ್ನುತ್ತಾರೆ.
ಈ ಸಮಯದಲ್ಲಿ [ಕೊಯ್ಲಿನ ಸಮಯದಲ್ಲಿ] ಜಾನುವಾರುಗಳು ಗದ್ದೆಯಲ್ಲಿನ ಬೆಳೆಯ ಪಳೆಯುಳಿಕೆಗಳನ್ನು ಮೇಯಬಹುದಾದ ಕಾರಣ ಅವುಗಳನ್ನು ಹೊಡೆದುಕೊಂಡು ಬಹಳ ದೂರ ಹೋಗಬೇಕಿಲ್ಲ. ಇದರಿಂದಾಗಿ ನಮಗೆ ಮರದ ನೆರಳಿನಲ್ಲಿ ಕೂರಲು ಸಮಯ ದೊರಕುತ್ತದೆ.
ಪರಿ ಅವರನ್ನು ಭೇಟಿಯಾದ ದಿನ ಭಾನುವಾರವಾಗಿತ್ತು. ಅಂದು ಈ ಮಕ್ಕಳ ತಾಯಂದಿರು ಭಿರ್ಭುಮ್ ಜಿಲ್ಲೆಯಲ್ಲೇ ಇರುವ ಪಕ್ಕದ ಊರಿನ ನೆಂಟರ ಮನೆಗೆ ಹೋಗಿದ್ದ ಕಾರಣ ಇವರು ದನ ಮೇಯಿಸಲು ಬಂದಿದ್ದರು. “ಸಾಮಾನ್ಯವಾಗಿ ನನ್ನ ಅಮ್ಮ ದನಗಳನ್ನು ಮೇಯಿಸಿಕೊಂಡು ಬರುತ್ತಾರೆ. ಭಾನುವಾರಗಳಂದು ಮಾತ್ರ ನಾನು ದನಗಳನ್ನು ಹೊಡೆದುಕೊಂಡು ಬರುತ್ತೇನೆ. ಇಲ್ಲಿ ಬಂದು ಮಂಗಲಿಯೊಡನೆ ಸಮಯ ಕಳೆಯುವುದೆಂದರೆ ನನಗೆ ಇಷ್ಟ. ಅವಳು ನನ್ನ ಸ್ನೇಹಿತೆಯೂ ಹೌದು” ಎನ್ನುತ್ತಾಳೆ ತನ್ನ ಚಿಕ್ಕಮ್ಮನ ಮಗಳ ಕಡೆ ನೋಡಿ ನಗುತ್ತಾ.
ಮಂಗಲಿಯ ಪಾಲಿಗೆ ಈ ದನ ಮೇಯಿಸುವ ಕೆಲಸ ದೈನಂದಿನ ಉದ್ಯೋಗವಾಗಿದೆ. ಅವಳು 5ನೇ ತರಗತಿಯವರೆಗೆ ಓದಿದ್ದು, ಪೋಷಕರಿಗೆ ಅವಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗದ ಕಾರಣ ಅವಳು ಶಾಲೆ ಬಿಡಬೇಕಾಯಿತು. “ನಂತರ ಲಾಕ್ ಡೌನ್ ಬಂದ ಕಾರಣ ನನ್ನನ್ನು ಶಾಲೆಗೆ ಕಳುಹಿಸುವುದು ಅವರಿಗೆ ಮತ್ತಷ್ಟು ಕಷ್ಟವಾಯಿತು.” ಎನ್ನುತ್ತಾಳೆ ಮಂಗಲಿ. ಮನೆಯಲ್ಲಿ ಅಡುಗೆ ಮಾಡುವುದು ಕೂಡಾ ಅವಳದೇ ಕೆಲಸ. ಈ ಶುಷ್ಕ ಪ್ರಸ್ಥಭೂಮಿ ಪ್ರದೇಶದಲ್ಲಿ ಜಾನುವಾರುಗಳನ್ನು ಸಾಕುವುದು ಮಾತ್ರ ಸ್ಥಿರವಾದ ಆದಾಯವಾಗಿರುವುದರಿಂದ ಜಾನುವಾರುಗಳನ್ನು ಮೇಯಿಸುವಲ್ಲಿ ಅವಳ ಪಾತ್ರವು ನಿರ್ಣಾಯಕವಾಗಿದೆ.
ಡಿಜಿಟಲ್ ಅಸಮಾನತೆ ಕುರಿತಾದ ಆಕ್ಸ್‌ಫಾಮ್ ವರದಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 61 ಶೇಕಡಾದಷ್ಟು ಗಂಡಸರು ಮೊಬೈಲ್ ಹೊಂದಿದ್ದರೆ, ಕೇವಲ 31 ಶೇಕಡಾದಷ್ಟು ಮಹಿಳೆಯರು ಮೊಬೈಲ್ ಫೋನುಗಳನ್ನು ಹೊಂದಿದ್ದಾರೆ
"ನಮ್ಮ ಪೋಷಕರು ಸಾಧಾರಣ ಫೋನ್‌ಗಳನ್ನು ಹೊಂದಿದ್ದಾರೆ. ನಾವು ಒಟ್ಟಿಗೆ ಇರುವಾಗ ಕೆಲವೊಮ್ಮೆ ಈ ವಿಷಯಗಳ ಬಗ್ಗೆ ಮಾತನಾಡುತ್ತೇವೆ [ಫೋನ್ ಹೊಂದುವುದರ ಕುರಿತು] "ಎಂದು ಆರತಿ ಹೇಳುತ್ತಾಳೆ. ಡಿಜಿಟಲ್ ಡಿವೈಡ್ ಅಸಮಾನತೆ ವರದಿ 2022 ರ ಪ್ರಕಾರ, ಭಾರತದಲ್ಲಿ ಸುಮಾರು 40 ಪ್ರತಿಶತದಷ್ಟು ಮೊಬೈಲ್ ಚಂದಾದಾರರು ಸ್ಮಾರ್ಟ್ ಫೋನುಗಳನ್ನು ಹೊಂದಿಲ್ಲ ಎನ್ನುತ್ತದೆ. ಹೀಗಾಗಿ ಅವರು ಹೇಳುತ್ತಿರುವುದು ತೀರಾ ಅಪರೂಪದ ಸಂಗತಿಯೇನೂ ಅಲ್ಲ.
ಬಿಡುವಿನ ಸಮಯದ ಕುರಿತಾದ ಮಾತಿನಲ್ಲಿ ಈ ಫೋನ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಕೆಲವೊಮ್ಮೆ ಕೆಲಸದ ನಡುವೆಯೂ. ಕೃಷಿ ಕಾರ್ಮಿಕರಾದ ಸುನೀತಾ ಪಟೇಲ್ ಈ ವಿಷಯದಲ್ಲಿ ತಮ್ಮ ಸಿಟ್ಟನ್ನು ಹೊರಹಾಕುತ್ತಾರೆ: “ನಾವು ಸಂತೆಗೆ ತರಾಕಾರಿ ಕೊಂಡು ಹೋಗಿ ಕೊಳ್ಳುವಂತೆ ಜನರನ್ನು ಕೂಗಿ ಕರೆಯುವಾಗ ಅವರು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕನಿಷ್ಟ ಪ್ರತಿಕ್ರಿಯೆ ಕೂಡಾ ನೀಡದೆ ತಮ್ಮ ಪೋನುಗಳಲ್ಲಿ ಮುಳುಗಿರುತ್ತಾರೆ. ಜನರ ಇಂತಹ ನಿರ್ಲಕ್ಷ್ಯ ಬಹಳ ನೋವು ತರುತ್ತದೆ.”
ಛತ್ತೀಸ್ಗಢದ ರಾಜನಂದಗಾಂವ್ ಜಿಲ್ಲೆಯ ರಾಕಾ ಗ್ರಾಮದ ಭತ್ತದ ಗದ್ದೆಯಲ್ಲಿ ಮಧ್ಯಾಹ್ನದ ಊಟದ ನಂತರ ಮಹಿಳಾ ಕಾರ್ಮಿಕರ ಗುಂಪಿನೊಂದಿಗೆ ಸುನೀತಾ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲಿದ್ದವರಲ್ಲಿ ಕೆಲವರು ಕುಳಿತಿದ್ದರು ಮತ್ತು ಉಳಿದವರು ಹುಸಿ ನಿದ್ದೆಗೆ ಜಾರಿದ್ದರು.
"ನಾವು ವರ್ಷವಿಡೀ ಹೊಲದಲ್ಲಿ ಕೆಲಸ ಮಾಡುತ್ತೇವೆ. ನಮಗೆ ವಿರಾಮ ಸಿಗುವುದಿಲ್ಲ" ಎಂದು ದುಗ್ಗಿ ಬಾಯಿ ನೇತಮ್ ಹೇಳುತ್ತಾರೆ. ಹಿರಿಯ ಆದಿವಾಸಿ ಮಹಿಳೆಯಾದ ಅವರು ವಿಧವಾ ಪಿಂಚಣಿಯನ್ನು ಪಡೆಯುತ್ತಾರೆ ಆದರೆ ದಿನಗೂಲಿ ಕೆಲಸವನ್ನು ಸಹ ಮಾಡಬೇಕಾಗಿದೆ. "ಈಗ ಭತ್ತದ ಗದ್ದೆಯಲ್ಲಿನ ಕಳೆ ಕೀಳುತ್ತಿದ್ದೇವೆ; ನಾವು ವರ್ಷವಿಡೀ ಕೆಲಸ ಮಾಡುತ್ತೇವೆ."
ಮತ್ತೆ ಬಿಡುವಿನ ಸಮಯದತ್ತ ಮಾತು ಹೊರಳಿದಾಗ ಅವರು ಹೇಳಿದ್ದು, “ನಮಗೆ ಬಿಡುವೆನ್ನುವುದು ಸಿಗುವುದಿಲ್ಲ. ಬಿಡುವು ಎನ್ನುವುದು ಪೇಟೆಯ ಹೆಂಗಸರು ಮಾತ್ರವೇ ಹೊಂದಬಹುದಾದ ಅನುಕೂಲ.” ಅವರ ಪ್ರಕಾರ ಒಳ್ಳೆಯ ಊಟವೇ ನಿಜವಾದ ವಿಹಾರ. ಅವರು ಹೇಳುತ್ತಾರೆ, “ಎಲ್ಲಾದರೂ ತಿರುಗಾಡಲು ಹೋಗಿ ಒಳ್ಳೆಯ ಊಟ ಮಾಡಬೇಕೆಂದು ನನಗೂ ಅನ್ನಿಸುತ್ತದೆ. ಆದರೆ ಹಣದ ಕೊರತೆ ಅದಕ್ಕೆಲ್ಲ ಆಸ್ಪದ ನೀಡುವುದಿಲ್ಲ.”
*****
ಯಲ್ಲೂಬಾಯಿ ನಂದಿವಾಲೆ ಅವರು ತಮ್ಮ ವಿರಾಮದ ನಡುವೆ ಜೈನಾಪುರ ಗ್ರಾಮದ ಬಳಿ ಕೊಲ್ಹಾಪುರ-ಸಾಂಗ್ಲಿ ಹೆದ್ದಾರಿಯಲ್ಲಿ ಸಂಚಾರವನ್ನು ವೀಕ್ಷಿಸುತ್ತಿದ್ದರು. ಬಾಚಣಿಗೆಗಳು, ಕೂದಲಿನ ಪರಿಕರಗಳು, ಕೃತಕ ಆಭರಣಗಳು, ಅಲ್ಯೂಮಿನಿಯಂ ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಅವರು ಬಿದಿರಿನ ಬುಟ್ಟಿ ಮತ್ತು ಟಾರ್ಪಾಲಿನ್ ಚೀಲದಲ್ಲಿ ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಾರೆ ಮತ್ತು ಅದು ಸುಮಾರು 6-7 ಕೆಜಿ ತೂಕವಿದೆ.
ಮುಂದಿನ ವರ್ಷ ಅವರಿಗೆ 70 ವರ್ಷ ವಯಸ್ಸಾಗಲಿದ್ದು, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯವರಾದ ಅವರು ನಿಂತಿರುವಾಗ ಅಥವಾ ನಡೆದಾಡುವಾಗ ಮೊಣಕಾಲುಗಳು ನೋಯುತ್ತವೆ ಎನ್ನುತ್ತಾರೆ. ಆದರೆ ನಿಲ್ಲುವುದು ಮತ್ತು ನಡೆಯವುದು ಎರಡನ್ನೂ ಅವರು ಮಾಡಲೇಬೇಕು. ಇಲ್ಲವಾದಲ್ಲಿ ಅವರ ಪಾಲಿಗೆ ಆ ದಿನದ ಆದಾಯ ಸಿಗುವುದಿಲ್ಲ. “ನೂರು ಸಂಪಾದಿಸುವುದೂ ಕಷ್ಟ, ಕೆಲವೊಮ್ಮೆ ಒಂದು ರೂಪಾಯಿಯೂ ಹುಟ್ಟದ ದಿನಗಳಿವೆ” ಎಂದು ತಮ್ಮ ನೋಯುತ್ತಿರುವ ಮೊಣಕಾಲುಗಳನ್ನು ಕೈಗಳಿಂದ ಒತ್ತುತ್ತಾ ಹೇಳುತ್ತಾರೆ.
ಈ ಹಿರಿಯ ಮಹಿಳೆ ಶಿರೋಳ ತಾಲ್ಲೂಕಿನ ದಾನೋಲಿ ಗ್ರಾಮದಲ್ಲಿ ಪತಿ ಯಲ್ಲಪ್ಪ ಅವರೊಂದಿಗೆ ವಾಸಿಸುತ್ತಿದ್ದಾರೆ. ಅವರು ಭೂರಹಿತರು ಮತ್ತು ಅಲೆಮಾರಿ ನಂದಿವಾಲೆ ಸಮುದಾಯಕ್ಕೆ ಸೇರಿದವರು.
“ಹವ್ಯಾಸ, ಆಸಕ್ತಿ, ವಿರಾಮ ಇವೆಲ್ಲವೂ ಮದುವೆ ಮೊದಲು ಇದ್ದವು” ಎಂದು ತಮ್ಮ ಮದುವೆಗೂ ಮೊದಲಿನ ದಿನಗಳ ಸಂಭ್ರಮವನ್ನು ನೆನಪ್ಸಿಕೊಳ್ಳುತ್ತಾ ಹೇಳುತ್ತಾರೆ. “ಆಗ ನಾನು ಮನೆಯಲ್ಲೇ ಇರುತ್ತಿರಲಿಲ್ಲ…ಹೊಲ, ನದಿ ಅಂತ ತಿರುಗಾಡುತ್ತಿರುತ್ತಿದ್ದೆ. ಮದುವೆಯ ನಂತರ ಅದೆಲ್ಲ ಉಳಿಯಲಿಲ್ಲ. ಅಡುಗೆ, ಮನೆ, ಮಕ್ಕಳು ಇದರಲ್ಲೇ ದಿನ ಕಳೆಯಿತು.”
ದೇಶಾದ್ಯಂತ, ಗ್ರಾಮೀಣ ಮಹಿಳೆಯರು ತಮ್ಮ ದಿನದ ಸರಿಸುಮಾರು 20 ಪ್ರತಿಶತವನ್ನು ವೇತನರಹಿತ ಮನೆಕೆಲಸ ಮತ್ತು ಆರೈಕೆ ಮಾಡುವ ಚಟುವಟಿಕೆಗಳಲ್ಲಿ ಕಳೆಯುತ್ತಾರೆ ಎಂದು ಈ ವಿಷಯದ ಕುರಿತ ಮೊದಲ ಸಮೀಕ್ಷೆ ಹೇಳುತ್ತದೆ. ಭಾರತದಲ್ಲಿ ಸಮಯ ಬಳಕೆ-2019 ಎಂಬ ಶೀರ್ಷಿಕೆಯ ಈ ವರದಿಯನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂಒಎಸ್‌ಪಿಐ) ಹೊರತಂದಿದೆ.
ಗ್ರಾಮೀಣ ಭಾರತದ ಅನೇಕ ಮಹಿಳೆಯರು ಕಾರ್ಮಿಕರು, ತಾಯಂದಿರು, ಹೆಂಡತಿಯರು, ಹೆಣ್ಣುಮಕ್ಕಳು ಮತ್ತು ಸೊಸೆಯಂದಿರಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾ ಬಿಡುವಿನ ಸಮಯವನ್ನು ಉಪ್ಪಿನಕಾಯಿ, ಹಪ್ಪಳ ತಯಾರಿಕೆ ಮತ್ತು ಹೊಲಿಗೆಯಂತಹ ಮನೆಕೆಲಸಗಳಲ್ಲಿ ಕಳೆಯಬೇಕಾಗುತ್ತದೆ. "ಯಾವುದೇ ರೀತಿಯ ಕೈ ಹೊಲಿಗೆ ಕೆಲಸವು ನಮಗೆ ವಿಶ್ರಾಂತಿ ನೀಡುತ್ತದೆ. ಕೆಲವು ಹಳೆಯ ಸೀರೆಗಳನ್ನು ಆರಿಸಿಕೊಂಡು ಕುಟುಂಬಕ್ಕೆ ಕಠಾರಿ [ಹೊದಿಕೆ] ತಯಾರಿಸಲು ಅವುಗಳನ್ನು ಕತ್ತರಿಸಿ ಹೊಲಿಗೆ ಹಾಕುತ್ತೇವೆ" ಎಂದು ಉತ್ತರ ಪ್ರದೇಶದ ಬೈತಕ್ವಾ ಎನ್ನುವ ಕುಗ್ರಾಮದಲ್ಲಿ ವಾಸಿಸುವ ಊರ್ಮಿಳಾ ದೇವಿ ಹೇಳುತ್ತಾರೆ.
ಊರಿನ ಇತರ ಮಹಿಳೆರೊಡನೆ ಮನೆ ಎಮ್ಮೆಗಳನ್ನು ಈಜಲು ಕರೆದುಕೊಂಡು ಹೋಗುವುದು ತನಗೆ ಸಂತಸ ಕೊಡುವ ಬಿಡುವಿನ ಸಮಯ ಎನ್ನುತ್ತಾರೆ ಈ 50 ವರ್ಷ ಪ್ರಾಯದ ಅಂಗನವಾಡಿ ಕಾರ್ಯಕರ್ತೆ. “ನಮ್ಮ ಮಕ್ಕಳು ಬೆಲಾನ್ ನದಿಯಲ್ಲಿ ಆಡುತ್ತಿರುವಾಗ ನಮಗೆ ಊರಿನ ಸುದ್ದಿಗಳನ್ನು ತಿಳಿದುಕೊಳ್ಳಲು ಒಂದಷ್ಟು ಸಮಯ ಸಿಗುತ್ತದೆ.” ಎನ್ನುತ್ತಾ ತಟ್ಟನರ ಏನೋ ನೆನಪಾದವರಂತೆ, ನದಿಯೆಂದರೆ ಅದೇನು ಅಷ್ಟು ದೊಡ್ಡ ನದಿಯಲ್ಲ. ಸಣ್ಣ ತೊರೆಯಂತಹದ್ದು. ಹೀಗಾಗಿ ಮಕ್ಕಳ ಸುರಕ್ಷತೆಯ ಕುರಿತು ಯೋಚಿಸಬೇಕಿಲ್ಲ ಎಂದು ಹೇಳಿದರು.
ಕೊರಾನ್ ಜಿಲ್ಲೆಯ ದಿಯೋಘಾಟ್ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ, ಊರ್ಮಿಳಾ ವಾರವಿಡೀ ಯುವ ತಾಯಂದಿರು ಮತ್ತು ಅವರ ಮಕ್ಕಳನ್ನು ನೋಡಿಕೊಳ್ಳುವಲ್ಲಿ ನಿರತರಾಗಿರುತ್ತಾರೆ ಮತ್ತು ರೋಗನಿರೋಧಕಗಳು ಮತ್ತು ಪ್ರಸವ ಪೂರ್ವ ಮತ್ತು ನಂತರದ ಪರೀಕ್ಷೆಗಳ ಸುದೀರ್ಘ ಪಟ್ಟಿಯನ್ನು ಸಹ ಬರೆಯುತ್ತಾರೆ.
ನಾಲ್ಕು ವಯಸ್ಕ ಮಕ್ಕಳ ತಾಯಿ ಮತ್ತು ಮೂರು ವರ್ಷದ ಕುಂಜ್ ಕುಮಾರನ ಅಜ್ಜಿಯಾಗಿರುವ ಅವರು 2000-2005ರವರೆಗೆ ದಿಯೋಘಾಟ್‌ನ ಗ್ರಾಮ ಪ್ರಧಾನ್ ಆಗಿ ಚುನಾಯಿತರಾಗಿದ್ದರು. ಹೆಚ್ಚು ದಲಿತರೇ ಇರುವ ಈ ಕುಗ್ರಾಮದ ಬೆರಳೆಣಿಕೆಯಷ್ಟು ವಿದ್ಯಾವಂತ ಮಹಿಳೆಯರಲ್ಲಿ ಅವರೂ ಒಬ್ಬರು. "ಶಾಲೆಯನ್ನು ತೊರೆದು ಮದುವೆಯಾಗುವ ಯುವತಿಯರನ್ನು ನಾನು ವಾಡಿಕೆಯಂತೆ ಗುರುತಿಸಿ ಮಾತನಾಡುತ್ತೇನೆ. ಆದರೆ ಅವರು ಮತ್ತು ಅವರ ಕುಟುಂಬಗಳು ನಮ್ಮ ಮಾತು ಕೇಳುವುದಿಲ್ಲ" ಎಂದು ಅವರು ಅಸಹಾಯಕತೆಯಿಂದ ಹೇಳುತ್ತಾರೆ.
ಮದುವೆಗಳು ಮತ್ತು ನಿಶ್ಚಿತಾರ್ಥಗಳು ಮಹಿಳೆಯರಿಗೆ ತಮ್ಮದೇ ಎಂದು ಹೇಳಿಕೊಳ್ಳಬಹುದಾದ ಒಂದಷ್ಟು ಸಮಯವನ್ನು ನೀಡುತ್ತವೆ, "ಆ ಸಂದರ್ಭದಲ್ಲಿ ನಾವು ಒಟ್ಟಿಗೆ ಹಾಡುತ್ತೇವೆ, ಒಟ್ಟಿಗೆ ನಗುತ್ತೇವೆ" ಎಂದು ಊರ್ಮಿಳಾ ಹೇಳುತ್ತಾರೆ. ಹಾಡುಗಳು ವೈವಾಹಿಕ ಮತ್ತು ಕೌಟುಂಬಿಕ ಸಂಬಂಧಗಳ ಸುತ್ತ ಕೇಂದ್ರೀಕೃತವಾಗಿವೆ ಮತ್ತು ಹಾಸ್ಯಮಯವಾರುತ್ತವೆ ಅವರು ನಗುತ್ತಾ ಹೇಳುತ್ತಾರೆ.
ವಾಸ್ತವವಾಗಿ, ಕೇವಲ ಮದುವೆಗಳು ಮಾತ್ರವಲ್ಲ, ಹಬ್ಬಗಳು ಸಹ ಮಹಿಳೆಯರಿಗೆ, ವಿಶೇಷವಾಗಿ ಯುವತಿಯರಿಗೆ ಒಂದಷ್ಟು ಸಮಯವನ್ನು ನೀಡುತ್ತವೆ.
ಜನವರಿಯಲ್ಲಿ ಬಿರ್ಭುಮ್‌ನ ಸಂತಾಲ್ ಆದಿವಾಸಿಗಳು ಆಚರಿಸುವ ಬಾಂಡ್ನಾ ಹಬ್ಬವನ್ನು ತಾವು ಹೆಚ್ಚು ಆನಂದಿಸುವುದಾಗಿ ಆರತಿ ಮತ್ತು ಮಂಗಲಿ ಪರಿಗೆ ಹೇಳುತ್ತಾರೆ. "ನಾವು ಹಬ್ಬಕ್ಕೆ ಹೊಸ ಉಡುಪು ಧರಿಸುತ್ತೇವೆ, ನೃತ್ಯ ಮಾಡುತ್ತೇವೆ ಮತ್ತು ಹಾಡುತ್ತೇವೆ. ನಮ್ಮ ತಾಯಂದಿರು ಮನೆಯಲ್ಲಿರುವುದರಿಂದ ಹೆಚ್ಚಿನ ಕೆಲಸವಿರುವುದಿಲ್ಲ ಮತ್ತು ನಮ್ಮ ಸ್ನೇಹಿತರೊಂದಿಗೆ ಇರಲು ನಮಗೆ ಸಮಯ ಸಿಗುತ್ತದೆ. ಆ ಸಮಯದಲ್ಲಿ ಯಾರೂ ನಮ್ಮನ್ನು ಬೈಯುವುದಿಲ್ಲ ಮತ್ತು ನಮಗೆ ಇಷ್ಟವಾದದ್ದನ್ನು ನಾವು ಮಾಡುತ್ತೇವೆ" ಎಂದು ಆರತಿ ಹೇಳುತ್ತಾಳೆ. ಈ ಸಮಯದಲ್ಲಿ ಜಾನುವಾರುಗಳನ್ನು ಅವರ ಅಪ್ಪಂದಿರು ನೋಡಿಕೊಳ್ಳುತ್ತಾರೆ ಏಕೆಂದರೆ ಹಬ್ಬದ ಸಮಯದಲ್ಲಿ ಅವುಗಳನ್ನು ಪೂಜಿಸಲಾಗುತ್ತದೆ. "ಆ ಸಮಯದಲ್ಲಿ ನನಗೆ ಯಾವುದೇ ಕೆಲಸವಿರುವುದಿಲ್ಲ" ಎಂದು ಮಂಗಲಿ ಮುಗುಳ್ನಗೆಯೊಂದಿಗೆ ಹೇಳುತ್ತಾರೆ.
ಧಮ್ತಾರಿ ನಿವಾಸಿಯಾದ 49 ವರ್ಷದ ಚಿತ್ರೇಖಾ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಹೋಗುವ ತೀರ್ಥಯಾತ್ರೆಗಳನ್ನು ವಿರಾಮವೆಂದು ಪರಿಗಣಿಸುತ್ತಾರೆ: "ನಾನು ನನ್ನ ಕುಟುಂಬದೊಂದಿಗೆ ಸೆಹೋರ್ ಜಿಲ್ಲೆಯ [ಮಧ್ಯಪ್ರದೇಶದ] ಶಿವ ದೇವಾಲಯಕ್ಕೆ ಎರಡು ಮೂರು ದಿನಗಳ ಕಾಲ ಹೋಗಲು ಬಯಸುತ್ತೇನೆ, ರಜೆ ತೆಗೆದುಕೊಂಡು ಒಂದು ದಿನ ಹೋಗುತ್ತೇನೆ."
ಛತ್ತೀಸಗಢದಲ್ಲಿ ಮನೆಕೆಲಸ ಮಾಡುವ ಅವರು ತಾವು ಕೆಲಸ ಮಾಡುವ ನಾಲ್ಕು ಮನೆಗೆ ಹೋಗುವ ಮೊದಲು ಬೆಳಗಿನ 6 ಗಂಟೆಗೆ ಎದ್ದು ತಮ್ಮ ಮನೆಗೆಲಸಗಳನ್ನು ಮುಗಿಸಿ ನಂತರ ಕೆಲಸಕ್ಕೆ ಹೊರಡುವ ಅವರು ಮತ್ತೆ ಮನೆಗೆ ಮರಳುವುದು ಸಂಜೆ 6ಕ್ಕೆ. ಈ ದುಡಿಮೆಯು ತಿಂಗಳಿಗೆ 7,500 ರೂ.ಗಳನ್ನು ತರುತ್ತದೆ ಮತ್ತು ಅವರ ಇಬ್ಬರು ಮಕ್ಕಳು ಮತ್ತು ಅತ್ತೆ ಸೇರಿದಂತೆ ಐದು ಸದಸ್ಯರ ಕುಟುಂಬಕ್ಕೆ ಅವರ ಸಂಪಾದನೆ ನಿರ್ಣಾಯಕವಾಗಿದೆ.
*****
ಮನೆಗೆಲಸಕ್ಕೆ ಹೋಗುವ ಸ್ವಪ್ನಾಲಿಯವರ ಪಾಲಿಗೆ (ವೇತನ ಸಹಿತ) ರಜೆಯೆನ್ನುವುದು ಅಪರೂಪದ ಸಂಗತಿ. “ನನಗೆ ತಿಂಗಳಿಗೆ ಎರಡು ರಜೆ ಮಾತ್ರ ಸಿಗುತ್ತದೆ. ಎಲ್ಲರೂ [ಉದ್ಯೋಗದಾತರು] ಆ ದಿನಗಳಲ್ಲಿ ಮನೆಯಲ್ಲಿರುತ್ತಾರಾದ ಕಾರಣ ನಾನು ಶನಿವಾರ ಮತ್ತು ಭಾನುವಾರಗಳಂದೂ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಈ ದಿನಗಳಂದು ನನಗೆ ರಜೆ ಸಿಗುವ ಪ್ರಶ್ನೆಯೇ ಇಲ್ಲ” ಎಂದು ವಿವರಿಸುತ್ತಾರೆ ಅವರು. ತಮ್ಮ ಸ್ವಂತ ಅಗತ್ಯಗಳಿಗಾಗಿ ಸಮಯ ಹೊಂದುವುದನ್ನು ಅವರೇ ಪರಿಗಣಿಸುವುದಿಲ್ಲ.
“ನನ್ನ ಪತಿ ಭಾನುವಾರದಂದು ಕೆಲಸಕ್ಕೆ ಹೋಗುವುದಿಲ್ಲ. ಕೆಲವೊಮ್ಮೆ ಅವರು ತಡರಾತ್ರಿ ಸಿನೆಮಾ ನೋಡಲು ಹೋಗವುದುಕ್ಕೆ ಕರೆಯುತ್ತಾರೆ. ಆದರೆ ಮರುದಿನ ಎದ್ದು ಕೆಲಸಕ್ಕೆ ಹೋಗಬೇಕಿರುವ ಕಾರಣ ನನಗೆ ಹೋಗಲು ಧೈರ್ಯ ಸಾಲುವುದಿಲ್ಲ.” ಎನ್ನುತ್ತಾರೆ.
ಮಹಿಳೆಯರು ತಮ್ಮ ಕುಟುಂಬಗಳನ್ನು ಉಳಿಸಿಕೊಳ್ಳಲು ವಿವಿಧ ಉದ್ಯೋಗಗಳನ್ನು ಮಾಡುವ ಮನೆಗಳಲ್ಲಿ, ಅವರಿಗೆ ಸಂತಸ ಕೊಡುವ ಕೆಲಸವನ್ನು ಅವರು ವಿರಾಮವೆಂದು ಭಾವಿಸುತ್ತಾರೆ. “ನಾನು ಮನೆಗೆ ಹೋದ ನಂತರ ಅಡುಗೆ, ಮನೆ ಚೊಕ್ಕ ಮಾಡುವುದು, ಮಕ್ಕಳಿಗೆ ತಿನ್ನಿಸುವುದು ಇಂತಹ ಕೆಲಸಗಳನ್ನು ಮುಗಿಸಿಕೊಂಡು ಬ್ಲೌಸ್ ಪೀಸ್ ಅಥವಾ ಶಾಲ್ ಮೇಲೆ ಕಾಂತಾ ಕಸೂತಿ ಕೆಲಸವನ್ನು ಮಾಡುತ್ತೇನೆ.” ಎನ್ನುತ್ತಾರೆ ರೂಮಾ ಲೋಹರ್ (ಹೆಸರು ಬದಲಾಯಿಸಲಾಗಿದೆ)
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಆದಿತ್ಯಪುರ ಗ್ರಾಮದ 28 ವರ್ಷದ ಈ ಮಹಿಳೆ ಇತರ ನಾಲ್ವರು ಮಹಿಳೆಯರೊಂದಿಗೆ ತಮ್ಮ ಜಾನುವಾರುಗಳು ಮೇಯುತ್ತಿರುವ ಹುಲ್ಲುಗಾವಲಿನ ಬಳಿ ಕುಳಿತಿದ್ದರು. 28ರಿಂದ 65 ವರ್ಷ ವಯಸ್ಸಿನವರಾಗಿದ್ದ ಈ ಮಹಿಳೆಯರೆಲ್ಲರೂ ಭೂರಹಿತರು ಮತ್ತು ಇತರರ ಹೊಲಗಳಲ್ಲಿ ಕೆಲಸ ಮಾಡುವವರು. ಇವರು ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಎಂದು ಪಟ್ಟಿ ಮಾಡಲಾದ ಲೋಹರ್ ಸಮುದಾಯಕ್ಕೆ ಸೇರಿದವರು.
"ನಾವು ಬೆಳಗ್ಗೆ ಎದ್ದು ಎಲ್ಲಾ ಮನೆಕೆಲಸಗಳನ್ನು ಮುಗಿಸಿ ಬಂದಿದ್ದೇವೆ. ಈಗ ನಮ್ಮ ಹಸುಗಳು ಮತ್ತು ಆಡುಗಳನ್ನು ಮೇಯಲು ಇಲ್ಲಿಗೆ ಕರೆತಂದಿದ್ದೇವೆ" ಎಂದು ಅವರು ಹೇಳುತ್ತಾರೆ.
“ನಮಗೆ ನಮಗಾಗಿ ಹೇಗೆ ಸಮಯವನ್ನು ಹೊಂದ್ಸಿಕೊಳ್ಳುವುದೆನ್ನುವುದು ಗೊತ್ತು. ಆದರೆ ಅದನ್ನು ನಾವು ಯಾರಿಗೂ ಹೇಳುವುದಿಲ್ಲ.” ಎನ್ನುತ್ತಾರವರು.
“ಬಿಡುವಿನ ಸಮಯ ಸಿಕ್ಕಾಗ ಏನು ಮಾಡುತ್ತೀರಿ?”
“ಬಹುತೇಕ ಏನೂ ಇಲ್ಲ. ನಾನು ನನ್ನ ನೆಚ್ಚಿನ ಮಹಿಳೆಯರೊಡನೆ ಮಾತನಾಡುತ್ತೇನೆ.” ಎಂದು ತನ್ನ ಸುತ್ತ ಇದ್ದ ಮಹಿಳೆಯರತ್ತ ಅರ್ಥಪೂರ್ಣವಾಗಿ ನೋಡತೊಡಗಿದರು. ಆಗ ಉಳಿದ ಮಹಿಳೆಯರು ನಗತೊಡಗಿದರು.
“ಯಾರಿಗೂ ನಾವು ಕೆಲಸ ಮಾಡುತ್ತೇವೆ ಎನ್ನಿಸುವುದೇ ಇಲ್ಲ! ಎಲ್ಲರೂ ನಾವು [ಮಹಿಳೆಯರು] ಸಮಯ ಹಾಳುಮಾಡುತ್ತೇವೆ ಎಂದೇ ಭಾವಿಸುತ್ತಾರೆ.”
ಈ ವರದಿಯನ್ನು ಮಹಾರಾಷ್ಟ್ರದ ದೇವೇಶ್ ಮತ್ತು ಜ್ಯೋತಿ ಶಿನೋಲಿ ; ಛತ್ತೀಸಗಢದ ಪುರುಷೋತ್ತಮ ಠಾಕೂರ್ ; ಬಿಹಾರದ ಉಮೇಶ್ ಕುಮಾರ್ ರೇ ; ಪಶ್ಚಿಮ ಬಂಗಾಳದ ಸ್ಮಿತಾ ಖಾಟೋ ರ್ ; ಉತ್ತರ ಪ್ರದೇಶದ ಪ್ರೀತಿ ಡೇವಿಡ್ ವರದಿ ಮಾಡಿರುತ್ತಾರೆ, ರಿಯಾ ಬೆಹ್ಲ್, ಸಾನ್ವಿ ತಿ ಅಯ್ಯರ್, ಜೋಶುವಾ ಬೋಧಿನೇತ್ರ ಮತ್ತು ವಿಶಾಖಾ ಜಾರ್ಜ್ ಅವರ ಸಂಪಾದಕೀಯ ಬೆಂಬಲದೊಂದಿಗೆ ಬಿನೈಫರ್ ಭರೂಚಾ ಅವರ ಫೋಟೋ ಎಡಿಟಿಂಗ್ ಈ ವರದಿಗಿದೆ.
ಮುಖಪುಟ ಚಿತ್ರ:
ಸ್ಮಿತಾ ಖಾಟೋರ್
ಅನುವಾದ: ಶಂಕರ. ಎನ್. ಕೆಂಚನೂರು