ಶಿವಪೂಜನ್ ಪಾಂಡೆ ತನಗೆ ಇನ್ನೊಬ್ಬ ಟ್ಯಾಕ್ಸಿ ಡ್ರೈವರ್‌ನಿಂದ ಪೋನ್ ಕರೆ ಬಂದಾಗ, ತಾನು ತುರ್ತು ತತ್ಕಾಲ್ ರೈಲ್ವೆ ಟಿಕೆಟ್ ಖರೀದಿಸಿ ಜುಲೈ 4ರಂದು ಉತ್ತರ ಪ್ರದೇಶದ ಮಿರ್ಜಾಪುರ ನಿಲ್ದಾಣದಿಂದ ರೈಲು ಹತ್ತಿದರು.
ಮರುದಿನ ಮುಂಬೈ ತಲುಪಿದರು. ಆದರೆ ಅವರು ಅಲ್ಲಿಗೆ ತಕ್ಷಣ ಆಗಮಿಸಿದರೂ ಕೂಡ, 63 ವರ್ಷದ ಶಿವಪೂಜನ್ ಅವರಿಗೆ ತಮ್ಮ ಟ್ಯಾಕ್ಸಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕೊರೊನಾ ಸಾಂಕ್ರಾಮಿಕ-ಲಾಕ್‌ಡೌನ್ ಸಂದರ್ಭದಲ್ಲಿ ಹಲವಾರು ತಿಂಗಳುಗಳಿಂದ ನಗರದ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ 42 ಕ್ಯಾಬ್‌ಗಳಲ್ಲಿ ಒಂದಾಗಿದ್ದ ಕ್ಯಾಬ್ ಅನ್ನು ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಮೂಲಕ ಹರಾಜು ಮಾಡಲಾಗಿತ್ತು.
ಇದರಿಂದಾಗಿ ಶಿವಪೂಜನ್ ಅವರು ತಮ್ಮ ಜೀವನಾದರವನ್ನು ಕಳೆದುಕೊಂಡಿದ್ದಾರೆ-ಅವರು 1987ರಿಂದ ಟ್ಯಾಕ್ಸಿ ಓಡಿಸುತ್ತಿದ್ದರು ಮತ್ತು 2009ರಲ್ಲಿ ತಮ್ಮದೇ ಆದ ಕಪ್ಪು-ಹಳದಿ ಬಣ್ಣದ ಮಾರುತಿ ಓಮ್ನಿ ಕಾರನ್ನು ಸಾಲ ಮಾಡಿ ಖರೀದಿಸಿದ್ದರು.
“ಹಿಂಗ್ ಮಾಡೋದರಿಂದ ಅವರಿಗೆ ಏನ್ ಸಿಗುತ್ತೆ ಹೇಳಿ?” ನನ್ನ ಇಡೀ ಜೀವನವನ್ನು ಈ ಕೆಲ್ಸಾ ಮಾಡುದರಲ್ಲಿಯೇ ನಾನು ಕಳೆದಿದ್ದೇನೆ ಮತ್ತು ನಮ್ಮ ಕಡೆ ಇರುವ ಅಲ್ಪ ಸ್ವಲ್ಪ ದುಡಿಮೆಯನ್ನೆಲ್ಲಾ ಈಗ ಅವರು ಕಸಿದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ನಮಗೆ ಮಾಡಬಹುದಾದ ಕೆಟ್ಟ ಕೆಲಸವೆಂದರೆ ಇದು” ಎಂದು ಮಧ್ಯಾಹ್ನದ ವೇಳೆ ಸಹಾರ್ ವಿಮಾನ ನಿಲ್ದಾಣದ ಪೂಟ್ ಪಾತ್ ಮೇಲೆ ನಿಂತು ಅವರು ಆಕ್ರೋಶದಿಂದ ಪ್ರಶ್ನಿಸಿದರು.
ಸಂಜಯ್ ಮಾಲಿ ಅವರು ಕೂಡ ಇತ್ತೀಚೆಗೆ ಎದುರಿಸಿದ ಅತಿ ಕೆಟ್ಟ ಜುಲ್ಮಾನೆ ಇದಾಗಿದೆ. ಅವರ ವ್ಯಾಗನ್-ಆರ್ 'ಕೂಲ್ ಕ್ಯಾಬ್' ಮಾರ್ಚ್ 2020ರಿಂದ ಉತ್ತರ ಮುಂಬೈನ ಮರೋಲ್ ಪ್ರದೇಶದ ಅನ್ನವಾಡಿಯಲ್ಲಿ ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿತ್ತು, ಇದು ಸಹಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಷ್ಟೇನೂ ದೂರವಿಲ್ಲ.
ಜೂನ್ 29, 2021 ರ ರಾತ್ರಿ, ಅವರ ಕ್ಯಾಬ್ ಅನ್ನು ಪಾರ್ಕಿಂಗ್ ಸ್ಥಳದಿಂದ ತೆರವುಗೊಳಿಸಲಾಯಿತು. ಮರುದಿನ ಸ್ನೇಹಿತರೊಬ್ಬರು ಈ ವಿಚಾರವಾಗಿ ಮಾಹಿತಿ ನೀಡಿದರು. “ಏನಾಯಿತು ಎಂದು ಆಗ ನನಗೆ ಅರ್ಥವಾಗಲಿಲ್ಲ,” ಎಂದು 42 ವರ್ಷದ ಸಂಜಯ್ ಹೇಳುತ್ತಾರೆ.
ಅವರು ಮತ್ತು ಇತರ ಟ್ಯಾಕ್ಸಿ ಚಾಲಕರು 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್ ಪ್ರಾರಂಭವಾಗುವವರೆಗೆ ಸುಮಾರು 1,000 ಕ್ಯಾಬ್‌ಗಳನ್ನು ಇಲ್ಲಿ ಪಾರ್ಕಿಂಗ್ ಮಾಡಿರಬಹುದೆಂದು ಅಂದಾಜಿಸಿದ್ದಾರೆ. “ನಾವು ಕೆಲಸದ ಸಮಯದಲ್ಲಿ ನಮ್ಮ ಟ್ಯಾಕ್ಸಿಗಳನ್ನು ಹೊರಗೆ ತೆಗೆಯುತ್ತಿದ್ದೆವು ಮತ್ತು ನಮ್ಮ ಕೆಲಸ ಮುಗಿದ ನಂತರ ಅವುಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದೆವು” ಎಂದು ವರ್ಷಾನುಗಟ್ಟಲೆ ಅಲ್ಲಿಯೇ ತಮ್ಮ ಕ್ಯಾಬ್ ನಿಲ್ಲಿಸುತ್ತಿದ್ದ ಸಂಜಯ್ ಹೇಳುತ್ತಾರೆ. ತಮ್ಮ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಯೂನಿಯನ್‌ಗಳ ಮೂಲಕ ನಿಗದಿಪಡಿಸಲಾಗಿದೆ ಎಂದು ಚಾಲಕರು ಹೇಳುತ್ತಾರೆ - ವಿಮಾನ ನಿಲ್ದಾಣ ಪ್ರಾಧಿಕಾರವು ಅವರಿಂದ ಯಾವುದೇ ಶುಲ್ಕವನ್ನು ತೆಗೆದುಕೊಂಡಿಲ್ಲ, ಆದರೆ ವಿಮಾನ ನಿಲ್ದಾಣದಿಂದ ಪ್ರಯಾಣಿಕರು ಪಾವತಿಸುವ ದರದಲ್ಲಿ 70 ರೂ ಸೇರಿಸಲಾಗುತ್ತದೆ.
ಮಾರ್ಚ್ 2020ರ ಆರಂಭದಲ್ಲಿ, ಸಂಜಯ್ ಅವರು ತಮ್ಮ ಸಹೋದರಿಯ ಮದುವೆ ತಯಾರಿಗಾಗಿ ಎಲೆಕ್ಟ್ರಿಷಿಯನ್ ಆಗಿರುವ ತಮ್ಮ ಕಿರಿಯ ಸಹೋದರನ ಜೊತೆಗೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಔರೈ ತಾಲೂಕಿನಲ್ಲಿರುವ ತಮ್ಮೂರು ಔರಂಗಾಬಾದ್‌ಗೆ ಹೋಗಿದ್ದರು. ಇದಾದ ನಂತರ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದಾಗಿ ಅವರು ಮುಂಬೈಗೆ ಹಿಂತಿರುಗಲು ಸಾಧ್ಯವಾಗಲಿಲ್ಲ.
ಅವರ ಟ್ಯಾಕ್ಸಿಯನ್ನು ಅನ್ನವಾಡಿ ಪಾರ್ಕಿಂಗ್ ಸ್ಥಳದಲ್ಲಿಯೇ ನಿಲ್ಲಿಸಲಾಗಿತ್ತು. ಅವರು ಅದನ್ನು ಅಲ್ಲಿ ಇಡುವುದು ಸುರಕ್ಷಿತ ಎಂದು ಭಾವಿಸಿದ್ದರು. “ನಾನು ಈ ರೀತಿ ಆಗುತ್ತೆ ಎಂದು ಯಾವತ್ತು ಯೋಚಿಸಿರಲಿಲ್ಲ, “ಇದು ಲಾಕ್‌ಡೌನ್ ಸಮಯವಾಗಿದ್ದರಿಂದ - ಆಗ ನನ್ನ ಮನಸ್ಸು ಇತರ ವಿಷಯಗಳ ಮೇಲೆ ಕೇಂದ್ರಿಕೃತವಾಗಿತ್ತು.” ಎಂದು ಅವರು ಹೇಳುತ್ತಾರೆ.
2020ರ ಜನವರಿಯಲ್ಲಿ ಮದುವೆಗಾಗಿ ಸಂಜಯ್ ತೆಗೆದುಕೊಂಡ 1 ಲಕ್ಷ ರೂ. ಸಾಲಕ್ಕೆ ಸೆಕ್ಯೂರಿಟಿಯ ಭಾಗವಾಗಿ ಟ್ಯಾಕ್ಸಿಯನ್ನು ವಾಗ್ದಾನ ನೀಡಿದ್ದರು. ಲಾಕ್‌ಡೌನ್‌ನಲ್ಲಿ ಬದುಕಲು ಅವರ ಕುಟುಂಬವು ಉಳಿತಾಯ, ತಮ್ಮ ಸಣ್ಣ ಜಮೀನಿನಲ್ಲಿನ ಭತ್ತ ಮತ್ತು ಗೋಧಿ ಬೆಳೆಗಳ ಮೇಲೆ ಅವಲಂಬಿತವಾಗಿದೆ, ಮತ್ತು ಇತರೆಡೆ ಸಣ್ಣ ಸಾಲಗಳನ್ನು ಕೂಡ ತೆಗೆದುಕೊಂಡಿದೆ.
ಸಂಜಯ್ ಅವರ ಸಹೋದರಿಯ ವಿವಾಹವು ಡಿಸೆಂಬರ್ 2020ರವರೆಗೆ ವಿಳಂಬವಾಯಿತು. ಆಗ ಅವರು ತಮ್ಮೂರಿನಲ್ಲಿಯೇ ಇದ್ದರು ಮತ್ತು ಎರಡನೇ ಕೋವಿಡ್ ಅಲೆಯ ಕಾರಣ ಮಾರ್ಚ್ 2021ರ ಅವರ ಮುಂಬಯಿಗೆ ಹಿಂದಿರುಗುವ ಪೂರ್ವಯೋಜಿತ ಯೋಜನೆಯನ್ನು ಮತ್ತೆ ಮುಂದೂಡಲಾಯಿತು. ಸಂಜಯ್ ಮತ್ತು ಅವರ ಕುಟುಂಬ ಮತ್ತೆ ಮುಂಬೈಗೆ ಬರುವ ಹೊತ್ತಿಗೆ ಈ ವರ್ಷದ ಮೇ ಅಂತ್ಯವಾಗಿತ್ತು.
ಅವರು ಜೂನ್ 4ರಂದು ತಮ್ಮ ಕ್ಯಾಬ್ ಪಡೆಯಲು ಹೋದಾಗ ಅನ್ನವಾಡಿ ಪಾರ್ಕಿಂಗ್ ಗೇಟ್ ಮುಚ್ಚಿತ್ತು. ಅಲ್ಲಿನ ಸಿಬ್ಬಂದಿ ಗೇಟ್ ತೆರೆಯಲು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಅನುಮತಿ ಪಡೆಯುವಂತೆ ಕೇಳಿಕೊಂಡರು. ಮರುದಿನ ಜೂನ್ 5ರಂದು, ಸಂಜಯ್ ಅವರು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿರುವ ಕಚೇರಿಗೆ ತಮ್ಮ ಅನುಪಸ್ಥಿತಿಯ ಕುರಿತಾಗಿ ಪತ್ರವನ್ನು ಬರೆಯುವ ಮೂಲಕ ಕ್ಯಾಬ್ ನ್ನು ಹೊರಗೆ ತೆಗೆಯಲು ವಿನಂತಿಸಿಕೊಂಡರು. ಆಗ ಅವರು ಅದನ್ನು ಜೆರಾಕ್ಸ್ ಕೂಡ ಮಾಡಿಸಲಿಲ್ಲ- ಆದರೆ ಅವರು ಕೊನೆಗೂ ತಮ್ಮ ಟ್ಯಾಕ್ಸಿಯನ್ನು ಕಳೆದುಕೊಳ್ಳುತ್ತಾರೆ ಎಂದು ಎಂದಿಗೂ ಊಹಿಸಿರಲಿಲ್ಲ.
ಅವರು 3-4 ಬಾರಿ ವಿಮಾನ ನಿಲ್ದಾಣದ ಕಚೇರಿ ಮತ್ತು ಪಾರ್ಕಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದರು. ಇದಕ್ಕಾಗಿ ಅವರು ರೈಲಿನ ಮೂಲಕ ಸಾಗಬೇಕೆಂದರೆ ಲಾಕ್ ಡೌನ್ ನಿರ್ಬಂಧ ಇದ್ದಿದ್ದರಿಂದಾಗಿ ಅದು ಸಾಧ್ಯವಾಗಲಿಲ್ಲ, ಹಾಗಾಗಿ ಅವರು ಬಸ್ ನಲ್ಲಿ ಪ್ರಯಾಣಿಸಬೇಕಾಗಿತ್ತು. ಆದರೆ ಕೆಲವು ಸೇವೆಗಳು ಮೊಟಕುಗೊಳಿಸಿದ್ದರಿಂದಾಗಿ ಅಧಿಕ ಸಮಯ ಹಿಡಿಯುತ್ತದೆ. ಪ್ರತಿ ಸಾರಿ ಅಲ್ಲಿಗೆ ಹೋದಾಗಲೆಲ್ಲಾ ವಾಪಸ್ ಬರಲು ಹೇಳಲಾಗುತಿತ್ತು. ಕೊನೆಗೆ ಯಾವುದೇ ಸೂಚನೆ ನೀಡದೆ ಅವರ ಟ್ಯಾಕ್ಸಿಯನ್ನು ಹರಾಜು ಮಾಡಲಾಯಿತು ಎಂದು ಅವರು ಹೇಳುತ್ತಾರೆ.
ಸಂಜಯ್ ಅವರು ಮತ್ತು ಇನ್ನೊಬ್ಬ ಕ್ಯಾಬ್ ಚಾಲಕರೊಂದಿಗೆ ಜೂನ್ 30ರಂದು ಸಹಾರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ. “ಇದನ್ನು ಕಾನೂನುಬದ್ಧವಾಗಿ ಮಾಡಲಾಗಿದೆ, ನಿಮಗೆ ನೋಟಿಸ್ ಕಳುಹಿಸಿದಾಗ ನೀವು ನಿಮ್ಮ ವಾಹನವನ್ನು ಅಲ್ಲಿಂದ ತೆಗೆಯಬೇಕಿತ್ತು,” ಎಂದು ಅವರು ಹೇಳಿದರು ಎಂದು ಸಂಜಯ್ ವಿವರಿಸಿದರು. “ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಮುಂಬೈನಲ್ಲಿರುವ ನನ್ನ ನೆರೆಹೊರೆಯವರನ್ನು ಕೂಡ ಈ ಬಗ್ಗೆ ವಿಚಾರಿಸಿದ್ದೇನೆ. ನನಗೆ ಇದರ ಬಗ್ಗೆ ತಿಳಿದಿದ್ದರೆ, ನಾನು ನನ್ನ ಟ್ಯಾಕ್ಸಿ ತೆಗೆದುಕೊಳ್ಳುತ್ತಿರಲಿಲ್ಲವೇ?” ವಿಮಾನ ನಿಲ್ದಾಣದ ಅಧಿಕಾರಿಗಳು ಇಂತಹ ತೀವ್ರ ನಿರ್ಧಾರಕ್ಕೆ ಬರುವ ಮೊದಲು ಲಾಕ್‌ಡೌನ್ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಬಹುದಿತ್ತಲ್ಲವೇ? ಎಂದು ಅವರು ಪ್ರಶ್ನಿಸುತ್ತಾರೆ.
“ನನ್ನ ತಂದೆ ತಮ್ಮ ಸ್ವಂತ ಸಂಪಾದನೆಯಿಂದ ಈ ವಾಹನವನ್ನು ಖರೀದಿಸಿದ್ದಾರೆ. ಅವರು ವರ್ಷಗಳ ಕಾಲ ಕಂತುಗಳಲ್ಲಿ ಇಎಂಐ (EMI) ಗಳನ್ನು ಪಾವತಿಸಿದ್ದಾರೆ,” ಎಂದು ಸಂಜಯ್ ನೆನಪಿಸಿಕೊಳ್ಳುತ್ತಾರೆ, ತಮ್ಮ ತಂದೆಗೆ ವಯಸ್ಸಾದ ಕಾರಣ 2014ರಲ್ಲಿ ಟ್ಯಾಕ್ಸಿ ಓಡಿಸುವವರೆಗೆ ಅವರು ಮೆಕ್ಯಾನಿಕ್ ಕೆಲಸವನ್ನು ಮಾಡುತ್ತಿದ್ದರು.
ಸಂಜಯ್ ಮತ್ತು ಶಿವಪೂಜನ್ ಅವರು ತಮ್ಮ ಟ್ಯಾಕ್ಸಿಗಳನ್ನು ಹರಾಜು ಹಾಕುವುದಕ್ಕಿಂತ ಮೊದಲು ನೋಡದಿದ್ದರು ಸಹಿತ ಉತ್ತರ ಪ್ರದೇಶದಿಂದ ಹಿಂತಿರುಗಲು ರೈಲ್ವೆ ವೇಳಾಪಟ್ಟಿಯನ್ನು ಕಂಡುಹಿಡಿಯಲು ಶಿವಪೂಜನ್ ಅವರಿಗೆ ಕೃಷ್ಣಾ ಕಾಂತ್ ಪಾಂಡೆ ಸಹಾಯ ಮಾಡಿದ್ದರಿಂದಾಗಿ ಅವರು ಆಗ ತಮ್ಮ ಟ್ಯಾಕ್ಸಿಯನ್ನು ತೆಗೆದುಕೊಂಡು ಹೋಗುವುದನ್ನು ನೋಡಲು ಸಾಧ್ಯವಾಯಿತು. ಅವರು 2008ರಲ್ಲಿ ಇಂಡಿಗೋ 'ಕೂಲ್ ಕ್ಯಾಬ್ʼ ನ್ನು 4 ಲಕ್ಷ ರೂಗಳಿಗೆ ಖರೀದಿಸಿದರು ಮತ್ತು ಅದರ ಸಾಲವನ್ನು ತೀರಿಸಲು 54 ತಿಂಗಳ ಕಾಲ ಇಎಂಐ (EMI) ಗಳನ್ನು ಪಾವತಿಸಿದ್ದಾರೆ.
“ನಾನು ರಾತ್ರಿ ಅಲ್ಲಿಯೇ ಇದ್ದೆ ಮತ್ತು ನನ್ನ ಮತ್ತು ಇತರರ ಕ್ಯಾಬ್ ನ್ನು ಒಂದೊಂದಾಗಿ ತೆಗೆದುಕೊಂಡು ಹೋಗುವುದನ್ನು ನೋಡಿದೆ. ಆಗ ನಾನು ನಿಂತು ನೋಡುತ್ತಿದ್ದೆ, ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ,” ಎಂದು 52 ವರ್ಷದ ಕೃಷ್ಣಕಾಂತ್ ಹೇಳುತ್ತಾರೆ, ಜೂನ್ 29ರ ರಾತ್ರಿಯನ್ನು ಉಲ್ಲೇಖಿಸುತ್ತಾ. ನಾವು ಅನ್ನವಾಡಿಯ ಪಾರ್ಕಿಂಗ್ ಸ್ಥಳದಲ್ಲಿ ನಿಂತು ಮಾತನಾಡುತ್ತಿದ್ದೆವು, ಆ ಗೇಟ್ ನಲ್ಲಿನ ದೊಡ್ಡ ಬೋರ್ಡ್ ವೊಂದರಲ್ಲಿ 'ಈ ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ಗೆ ಗುತ್ತಿಗೆ ನೀಡಿದೆ. ಅತಿಕ್ರಮ ಪ್ರವೇಶ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಬರೆಯಲಾಗಿತ್ತು.
ತಮ್ಮ ಕ್ಯಾಬ್ ತೆಗೆದುಕೊಂಡು ಹೋಗಲಾಗಿದೆ ಎಂದು ಕೃಷ್ಣಕಾಂತ್ ಸಹರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಅಲ್ಲಿ ಯಾರೂ ತಮ್ಮ ಮಾತನ್ನು ಕೇಳಲಿಲ್ಲ ಎಂದು ಅವರು ಹೇಳುತ್ತಾರೆ. ಮಾರ್ಚ್ 2021 ರಲ್ಲಿ ಯುಪಿಯ ಜೌನ್‌ಪುರ್ ಜಿಲ್ಲೆಯ ಅವರ ಗ್ರಾಮವಾದ ಲೌಹ್‌ನಿಂದ ಹಿಂದಿರುಗಿದ ನಂತರ, ಅವರು ತಮ್ಮ ಕ್ಯಾಬ್‌ನ ಎಂಜಿನ್ ಅನ್ನು ಪಾರ್ಕಿಂಗ್ ಸ್ಥಳದಿಂದ ಹೊರತೆಗೆಯುವ ಮೊದಲು ದುರಸ್ತಿ ಮಾಡಬೇಕಾಗಿತ್ತು. ಆದರೆ ಅದನ್ನು ಹಾಗೆ ಬಿಟ್ಟಿದ್ದರಿಂದಾಗಿ, ಈಗ ಅದು ಕೆಲಸ ಮಾಡುತ್ತಿಲ್ಲ. ನನ್ನ ಕಡೆ ಎಂಜಿನ್ ರಿಪೇರಿ ಮಾಡಲು ಹಣವಿರಲಿಲ್ಲ. ಹಾಗಾಗಿ ಅದಕ್ಕಾಗಿ ನಾನು ಹಣವನ್ನು ಉಳಿತಾಯ ಮಾಡಬೇಕಾಗಿತ್ತು, ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಸವಾರಿ ದೊರಕಿಲ್ಲ," ಎಂದು ಅವರು ಹೇಳುತ್ತಾರೆ.
2020ರ ಮಾರ್ಚ್‌ನಿಂದ ಅಕ್ಟೋಬರ್‌ವರೆಗೆ ಕೃಷ್ಣಕಾಂತ್ ಮುಂಬೈನಲ್ಲಿಯೇ ಇದ್ದರು. ಅವರು ಕಳೆದ ವರ್ಷ ಜುಲೈ-ಆಗಸ್ಟ್‌ನಿಂದ ಕೆಲಸ ಮಾಡಲು ಪ್ರಯತ್ನಿಸಿದರು, ಆದರೆ ವಿಮಾನ ನಿಲ್ದಾಣದ ಪ್ರದೇಶವು ಹೆಚ್ಚು ನಿರ್ಬಂಧಿತವಾಗಿತ್ತು. ನವೆಂಬರ್‌ನಲ್ಲಿ ಅವರು ಲಾಹ್‌ಗೆ ಹೋದರು ಮತ್ತು ಈ ವರ್ಷದ ಮಾರ್ಚ್‌ನಲ್ಲಿ ಮುಂಬೈಗೆ ಮರಳಿದರು. ಇದಾದ ಸ್ವಲ್ಪ ಸಮಯದ ನಂತರ, ಮತ್ತೆ ಮುಂದಿನ ಲಾಕ್‌ಡೌನ್ ಪ್ರಾರಂಭವಾಯಿತು. ಹೀಗಾಗಿ ಅವರಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅವರ ಟ್ಯಾಕ್ಸಿ ಮಾತ್ರ ಅನ್ನವಾಡಿ ಪಾರ್ಕಿಂಗ್ ಸ್ಥಳದಲ್ಲಿಯೇ ನಿಂತಿತ್ತು.
****
ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (MIAL) ಹರಾಜು ಅನಿವಾರ್ಯವಾಗಿತ್ತು ಎಂದು ಹೇಳುತ್ತದೆ. “ವಿಮಾನ ನಿಲ್ದಾಣವು ಸೂಕ್ಷ್ಮ ಸ್ಥಳವಾಗಿರುವುದರಿಂದ ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಒಬ್ಬರು ತಮ್ಮ ಟ್ಯಾಕ್ಸಿಗಳನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಹಾಗೆ ಇಡಲು ಸಾಧ್ಯವಿಲ್ಲ, ಅದರಲ್ಲಿ ಬೇರೆ ಸರ್ಕಾರಿ ಭೂಮಿಯನ್ನು ವಿಮಾನ ನಿಲ್ದಾಣದಿಂದ ಗುತ್ತಿಗೆಗೆ ತೆಗೆದುಕೊಳ್ಳಲಾಗಿದೆ, ಆದ್ದರಿಂದ ನಮಗೆ ಭದ್ರತೆಯ ಜವಾಬ್ದಾರಿಯೂ ಇದೆ.” ಎಂದು ಎಂಐಎಎಲ್‌ನ ಕಾರ್ಪೊರೇಟ್ ಸಂಬಂಧಗಳ ಸಹಾಯಕ ಉಪಾಧ್ಯಕ್ಷ ಡಾ.ರಣಧೀರ್ ಲಾಂಬಾ ಹೇಳುತ್ತಾರೆ.
ಟ್ಯಾಕ್ಸಿಗಳನ್ನು ದೀರ್ಘಕಾಲ ನಿಲ್ಲಿಸಿದ 216 ಚಾಲಕರಿಗೆ ಮೂರು ಬಾರಿ ನೋಟಿಸ್ ಕಳುಹಿಸಲಾಗಿದೆ ಎಂದು ಲಾಂಬಾ ಹೇಳುತ್ತಾರೆ. ಇವುಗಳಲ್ಲಿ ಎರಡನ್ನು ಅವರ ನೋಂದಾಯಿತ ಮುಂಬೈ ವಿಳಾಸಗಳಿಗೆ ಒಂದನ್ನು ಡಿಸೆಂಬರ್ 2020ರಲ್ಲಿ, ಇನ್ನೊಂದು ಫೆಬ್ರವರಿ 2021ರಲ್ಲಿ ಕಳುಹಿಸಲಾಗಿದೆ ಎಂದು ಹೇಳುತ್ತಾರೆ. “ಟ್ಯಾಕ್ಸಿಗಳು ಯಾರಿಗೆ ಸೇರಿದ್ದು ಮತ್ತು ಅವರ ವಿಳಾಸಗಳನ್ನು ಕಂಡುಹಿಡಿಯಲು ನಾವು RTO [ಪ್ರಾದೇಶಿಕ ಸಾರಿಗೆ ಕಚೇರಿ] ಅನ್ನು ಸಂಪರ್ಕಿಸಿದ್ದೇವೆ. ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಸಹ ನೀಡಲಾಗಿದೆ,”ಎಂದು ಅವರು ಹೇಳುತ್ತಾರೆ.
ಆರ್‌ಟಿಒ, ಪೊಲೀಸ್ ಮತ್ತು ಟ್ಯಾಕ್ಸಿ ಯೂನಿಯನ್‌ಗಳಿಗೆ ಮಾಹಿತಿ ನೀಡಲಾಗಿದೆ ಎಂದು ಡಾ. ಲಾಂಬಾ ಪ್ರತಿಪಾದಿಸುತ್ತಾರೆ. “ನಾವು ಎಲ್ಲರನ್ನೂ ತಲುಪಿದ್ದೇವೆ ಮತ್ತು ಎಲ್ಲಾ ಆದೇಶಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಿದ್ದೇವೆ.” ಎಂದು ಅವರು ಹೇಳಿದರು.
ಹಾಗಿದ್ದಲ್ಲಿ ಸಂಜಯ್ ಕಳುಹಿಸಿದ ಪತ್ರದ ಕಥೆ ಏನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಲಾಂಬಾ "ಕಡೇ ನಿಮಿಷದಲ್ಲಿ ನಮ್ಮ ಬಳಿಗೆ ಬಂದಿರುವ ಎಲ್ಲಾ ಚಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಟ್ಯಾಕ್ಸಿಗಳನ್ನು ಹಿಂದಿರುಗಿಸಿದ್ದೇವೆ. ಬಹುಶಃ ಈ ಡ್ರೈವರ್ ತಪ್ಪಾದ ವ್ಯಕ್ತಿಯ ಕಡೆ ಹೋಗಿರಬಹುದು. ಅವರ ಪತ್ರವನ್ನು ನಾವು ಯಾವತ್ತೂ ಸ್ವೀಕರಿಸಿಲ್ಲ” ಎಂದು ಹೇಳುತ್ತಾರೆ.
****
'ಜೀವನದಲ್ಲಿ ಎಲ್ಲವೂ ನಿಧಾನವಾಗಿ ಸುಧಾರಿಸುತ್ತಿತ್ತು. 2018ರಲ್ಲಿ ನಾವು ವಿಷ್ಣುವಿನ ಕೆಲಸದಿಂದಲೇ ನಲಸೊಪಾರದಲ್ಲಿ ನಮ್ಮದೇ ಆದ ಸಣ್ಣ ಫ್ಲಾಟ್ ಖರೀದಿಸಿದೆವು. ನಾನು ಅವನ ಬಗ್ಗೆ ತುಂಬಾ ಹೆಮ್ಮೆಪಟ್ಟಿದ್ದೆ. ಆದರೆ ನಾನು ನನ್ನ ಮಗನನ್ನು ಕಳೆದುಕೊಂಡ ನಂತರ ಈಗ ಈ ಟ್ಯಾಕ್ಸಿ ಹರಾಜಿನ ಸಂಗತಿಯೊಂದು ಬಂದಿದೆ’ ಎಂದು ಹೇಳಿದರು
ಮಾರ್ಚ್ 2020ರಲ್ಲಿ, ಲಾಕ್‌ಡೌನ್ ಪ್ರಾರಂಭವಾದಾಗ, ಶಿವಪೂಜನ್ ಪಾಂಡೆ ಹೇಗೋ ಮಾಡಿ ಯುಪಿಯ ಸಂತ ರವಿದಾಸ್ ನಗರ (ಭದೋಹಿ) ಜಿಲ್ಲೆಯ ಔರೈ ತಾಲೂಕಿನ ತಮ್ಮ ಗ್ರಾಮವಾದ ಭವಾನಿಪುರ ಉಪರ್ವಾರ್‌ಗೆ ಮರಳಿದರು. ಅವರೊಂದಿಗೆ ಅವರ ಪತ್ನಿ ಪುಷ್ಪಾ, ಗೃಹಿಣಿ ಮತ್ತು ಅವರ ಕಿರಿಯ ಮಗ ವಿಶಾಲ್ ಇದ್ದರು. ಅವರ ಹಿರಿಯ ಮಗ 32 ವರ್ಷದ ವಿಷ್ಣು, ತನ್ನ ಹೆಂಡತಿ ಮತ್ತು ನಾಲ್ಕು ವರ್ಷದ ಮಗಳೊಂದಿಗೆ ಉತ್ತರ ಮುಂಬೈನ ನಲ್ಲಸೊಪಾರಾದಲ್ಲಿರುವ ಕುಟುಂಬದ ಮನೆಯಲ್ಲಿಯೇ ವಾಸಿಸುತ್ತಿದ್ದರು. ಅವರು ಔಷದಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅವರು ಕೆಲಸವನ್ನು ಕಳೆದುಕೊಳ್ಳಬೇಕಾಗಿ ಬಂತು.
ಜುಲೈ 2020ರ ಅಂತ್ಯದ ವೇಳೆಗೆ, ಜೋಲಿ ಹೊಡೆಯುತ್ತಾ ಹಠಾತ್ ಮೂರ್ಚೆ ಹೋಗಿದ್ದರು. ಅವರು ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. "ಅವನು ತುಂಬಾ ಒತ್ತಡದಲ್ಲಿದ್ದ ಎಂದು ವೈದ್ಯರು ಹೇಳುತ್ತಾರೆ. ನಾನು ಆಗ ಊರಲ್ಲಿದ್ದೆ, ನಂಗೆ ಏನು ನಡೆಯುತ್ತಿದೆ ಎಂದು ತಿಳಿದಿರಲಿಲ್ಲ, ಪೋನ್ ಕರೆಗಳಲ್ಲಿ ಅವನು ಯಾವಾಗಲೂ ಚೆನ್ನಾಗಿಯೇ ಮಾತನಾಡುತ್ತಿದ್ದನು. ಇದಾದ ನಂತರ ನಾವು ತಕ್ಷಣ ಮುಂಬೈಗೆ ಧಾವಿಸಿದೆವು.” ಎಂದು ಶಿವಪೂಜನ್ ಹೇಳುತ್ತಾರೆ. ಇದಕ್ಕಾಗಿ 3-4 ಲಕ್ಷ ರೂ.ಗಳು ವ್ಯಯವಾಯಿತು, ಶಿವಪೂಜನ್ ಅವರು ಸ್ಥಳೀಯ ಸಾಲದಾತರಿಂದ ಸಾಲ ಪಡೆದು ಅದಕ್ಕಾಗಿ ಅವರು ತಮ್ಮ ಐದು ಬಿಘಾ ಕೃಷಿಭೂಮಿಯಲ್ಲಿ ಮೂರನ್ನು ಒತ್ತೆಯಾಗಿಟ್ಟಿದ್ದರು.
ಕಳೆದ ವರ್ಷ ಆಗಸ್ಟ್ 1 ರಂದು ವಿಷ್ಣು ನಿಧನರಾದರು.
“ಅವನು ನನಗೆ ಯಾವಾಗಲೂ ನಮ್ಮ ಹಳ್ಳಿಗೆ ಹೋಗಿ ನೆಮ್ಮದಿಯಿಂದ ನಿವೃತ್ತಿ ಜೀವನ ಕಳೆಯಲು ಹೇಳುತ್ತಿದ್ದನು, ತಾನು ಎಲ್ಲವನ್ನೂ ನೋಡಿಕೊಳ್ಳುವುದಾಗಿ ಹೇಳಿದ್ದನು. ವಿಶಾಲ್‌ಗೆ ಕೆಲಸ ಸಿಗುತ್ತದೆ ಎಂದು ನಾನು ಕಾಯುತ್ತಿದ್ದೆ ಮತ್ತು ನಂತರ ನಾನು ವಿಶ್ರಾಂತಿ ಪಡೆಯಬಹುದೆಂಬ ಯೋಚನೆಯಲ್ಲಿದ್ದೆ’ ಎಂದು ಶಿವಪೂಜನ್ ಹೇಳುತ್ತಾರೆ. 25ರ ಹರೆಯದ ವಿಶಾಲ್ ಎಂ.ಕಾಂ ಪದವಿಯನ್ನು ಪಡೆದಿದ್ದು, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. “ಆದರೆ ಇದರ ನಂತರ ನಮಗೆ ಮುಂಬೈಗೆ ಹಿಂತಿರುಗಬೇಕಿನಿಸಲಿಲ್ಲ. ನಿಮ್ಮ ಸ್ವಂತ ಮಗನು ಕಣ್ಣ ಮುಂದೆಯೇ ಮುಂದೆ ಸಾಯುವುದನ್ನು ನೋಡುವುದು ಅತ್ಯಂತ ಕೆಟ್ಟ ಸಂಗತಿ. ನನ್ನ ಪತ್ನಿ ಇನ್ನೂ ಕೂಡ ಆಘಾತದಲ್ಲಿದ್ದಾರೆ,” ಎಂದು ಶಿವಪೂಜನ್ ಹೇಳುತ್ತಾರೆ.
ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬಸ್ಥರು ತಮ್ಮ ಗ್ರಾಮಕ್ಕೆ ತೆರಳಿದರು. ಮತ್ತು ಜುಲೈ 2021ರಲ್ಲಿ, ಕೃಷ್ಣಕಾಂತ್ ತನ್ನ ಟ್ಯಾಕ್ಸಿ ಹರಾಜಿನ ಬಗ್ಗೆ ಹೇಳಿದಾಗ ಶಿವಪೂಜನ್ ಮುಂಬೈಗೆ ಮರಳಿದರು.
"ಜೀವನದಲ್ಲಿ ಎಲ್ಲವೂ ನಿಧಾನವಾಗಿ ಸುಧಾರಿಸುತ್ತಿತ್ತು, ವಿಷ್ಣುವಿನ ಕೆಲಸದಿಂದಾಗಿ 201 ರಲ್ಲಿ ನಾವು ನಲ್ಲಸೊಪಾರದಲ್ಲಿ ನಮ್ಮದೇ ಆದ ಸಣ್ಣ ಫ್ಲಾಟ್ ನ್ನು ಖರೀದಿಸಿದ್ದೆವು. ಹೀಗಾಗಿ ನಾನು ಅವನ ಬಗ್ಗೆ ಹೆಮ್ಮೆಪಟ್ಟಿದ್ದೆ, ಆದರೆ ನನ್ನ ಮಗನನ್ನು ಕಳೆದುಕೊಂಡ ನಂತರ ಈಗ ಈ ಟ್ಯಾಕ್ಸಿ ಹರಾಜಿನ ಸಂಗತಿಯೊಂದು ಬಂದಿದೆ’ ಎಂದು ಹೇಳುತ್ತಿದ್ದರು.
ಲಾಕ್‌ಡೌನ್‌ಗೆ ಮುನ್ನ ಶಿವಪೂಜನ್ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾಡುವ ಕೆಲಸಕ್ಕಾಗಿ ಅವರು ತಿಂಗಳಿಗೆ 10,000-12,000 ರೂ.ಗಳನ್ನು ಸಂಪಾದಿಸುತ್ತಿದ್ದರು. ಅಂತರಾಷ್ಟ್ರೀಯ ವಿಮಾನಗಳಲ್ಲಿ ಬರುವ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು. ನಂತರ ಕ್ಯಾಬ್ ನಿಲ್ಲಿಸಿ ರೈಲಿನಲ್ಲಿ ಮನೆಗೆ ಮರಳುತ್ತಿದ್ದರು. ಲಾಕ್‌ಡೌನ್ ಆರಂಭವಾದಾಗಿನಿಂದ ಅವರು ಮುಂಬೈನಲ್ಲಿ ಕೆಲಸ ಮಾಡಿಲ್ಲ, ಮತ್ತು ಕಳೆದ ತಿಂಗಳು ಹರಾಜಿನ ಸುದ್ದಿ ತಿಳಿದ ನಂತರ ನಗರಕ್ಕೆ ಆಗಮಿಸಿದ ಅವರು, ಪುನಃ ತಮ್ಮೂರಿಗೆ ವಾಪಸ್ಸಾಗಿದ್ದರು.
ಸಂಜಯ್ ಮಾಲಿ ಲಾಕ್‌ಡೌನ್‌ಗೆ ಮೊದಲು ದಿನಕ್ಕೆ 600-800 ರೂ.ಸಂಪಾದಿಸುತ್ತಿದ್ದರು. ಹರಾಜಿನಲ್ಲಿ ತನ್ನ ಕ್ಯಾಬ್ ಅನ್ನು ಕಳೆದುಕೊಂಡ ನಂತರ, ಜುಲೈ 2021ರ ಎರಡನೇ ವಾರದಲ್ಲಿ ಅವರು ವಾರಕ್ಕೆ ಟ್ಯಾಕ್ಸಿ ಬಾಡಿಗೆಗೆ 1,800 ರೂ.ಗಳನ್ನು ನೀಡಿದ್ದರು. ಈಗ ಅವರು ತಮ್ಮ ಸಾಲಗಳ ಬಗ್ಗೆ ಚಿಂತಿತರಾಗಿದ್ದಾರೆ. ಅವರ ತಂಗಿಯ ಮದುವೆಗೆ ತೆಗೆದುಕೊಂಡಿದ್ದ 1 ಲಕ್ಷ ರೂ.ದಲ್ಲಿ ಅರ್ಧದಷ್ಟು ಮಾತ್ರ ಮರುಪಾವತಿ ಮಾಡಲಾಗಿದೆ, ಜೊತೆಗೆ ಅವರ ಮಕ್ಕಳ ಶಾಲಾ ಶುಲ್ಕವೂ ಇದೆ. “ನನ್ನ ಉಳಿತಾಯದ ಹಣವೆಲ್ಲಾ ತೀರಿಹೋಗಿದೆ. ನಾನು ಈಗಾಗಲೇ ಕೆಲಸವನ್ನು ಹುಡುಕಬೇಕಾಗಿತ್ತು,” ಎಂದು ಅವರು ಹೇಳುತ್ತಾರೆ.
ಉತ್ತರ ಮುಂಬೈನ ಪೊಯಿಸರ್ ಪ್ರದೇಶದ ಕೊಳೆಗೇರಿಯ ಕಾಲೋನಿಯಲ್ಲಿರುವ ಅವರ ಮನೆಗೆ ನಾನು ಭೇಟಿ ನೀಡಿದಾಗ, ಮೂರು ದಿನಗಳ ಕಾಲ ಬಾಡಿಗೆ ಟ್ಯಾಕ್ಸಿಯನ್ನು ಓಡಿಸಿದ ನಂತರ ಅವರು ಸುಮಾರು 2 ಗಂಟೆಗೆ ಹಿಂತಿರುಗಿದ್ದರು. ಈ ಕೆಲಸದಿಂದ ಅವರು ಕೇವಲ 850 ರೂ.ಗಳನ್ನು ಸಂಪಾದಿಸಿದ್ದರು. ಮತ್ತೆ ಅವರು ಸಾಯಂಕಾಲದ ಹೊತ್ತಿಗೆ ಮರಳಿ ಕೆಲಸಕ್ಕೆ ಹೋಗುತ್ತಾರೆ.
"ಅವರು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದ ದಿನದಿಂದ, ಅವರು ನೆಮ್ಮದಿಯಿಂದ ಇರುವುದನ್ನು ನೋಡಿಲ್ಲ" ಎಂದು ಅವರ ಪಕ್ಕದಲ್ಲಿ ಕುಳಿತಿದ್ದ ಅವರ ಹೆಂಡತಿ ಸಾಧನಾ ಮಾಲಿ ಆತಂಕದಿಂದ ಹೇಳುತ್ತಿದ್ದರು. “ಅವರಿಗೆ ಸಕ್ಕರೆ ಖಾಯಿಲೆ ಇದೆ (ಮಧುಮೇಹ) ಮತ್ತು ಕೆಲವು ವರ್ಷಗಳ ಅವರಿಗೆ ಹಿಂದೆ ಹೃದಯ ಶಸ್ತ್ರಚಿಕಿತ್ಸೆಯಾಗಿದೆ.ಅವರು ಔಷದಿಗಳಿಗೆ ಖರ್ಚು ಮಾಡುವುದನ್ನು ತಪ್ಪಿಸಲು ಅವುಗಳನ್ನು ತೆಗೆದುಕೊಳ್ಳುವುದನ್ನು ಬಿಡುತ್ತಾರೆ ಇಲ್ಲವೇ ಕೇವಲ ದಿನಕ್ಕೆ ಒಂದು ಹೊತ್ತು ಮಾತ್ರ ಔಷಧಿಯನ್ನು ಸೇವಿಸುತ್ತಾರೆ. ಕ್ಯಾಬ್ ಕಳೆದುಹೋಗಿರುವ ಚಿಂತೆಯಿಂದಾಗಿ ಈಗ ಅವರು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ.” ಎಂದು ಅವರು ಹೇಳುತ್ತಿದ್ದರು.
ಅವರ ಮಗಳು ತಮನ್ನಾ 9ನೇ ತರಗತಿಯಲ್ಲಿದ್ದಾಳೆ ಮತ್ತು ಮಗ ಆಕಾಶ್ 6ನೇ ತರಗತಿಯಲ್ಲಿದ್ದಾನೆ; ಅವರು ತಮ್ಮ ಊರಿನಿಂದಲೇ ಆನ್‌ಲೈನ್ ಅಧ್ಯಯನವನ್ನು ಮುಂದುವರೆಸಿದ್ದರು. ಆದರೆ ಪೊಯಿಸರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅವರ ಖಾಸಗಿ ಶಾಲೆಯು ಈಗ ಕಳೆದ ವರ್ಷ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಶುಲ್ಕವನ್ನು (ಕೆಲವು ರಿಯಾಯಿತಿ ನೀಡಿದ ನಂತರ) ಭರಿಸಲು ಹೇಳಿದೆ. ಕಳೆದ ವರ್ಷ ತಮನ್ನಾಳ ಶುಲ್ಕವನ್ನಷ್ಟೇ ಮಾಲಿ ಕುಟುಂಬಕ್ಕೆ ಭರಿಸಲು ಸಾಧ್ಯವಾಗಿದೆ. “ಆಕಾಶನ 6ನೇ ತರಗತಿಯ ಶುಲ್ಕವನ್ನು ಭರಿಸಲು ನಮಗೆ ಸಾಧ್ಯವಾಗದ ಕಾರಣ, ನಾವು ಈ ಶೈಕ್ಷಣಿಕ ವರ್ಷ ಶಾಲೆ ಬಿಡುವಂತೆ ಮಾಡಬೇಕಾಗಿತ್ತು, ಆದರೆ ಅವನು ಒಂದು ವರ್ಷ ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳುತ್ತಾನೆ. ನಮಗೂ ಕೂಡ ಅದು ಇಷ್ಟವಿಲ್ಲ” ಎಂದು ಸಂಜಯ್ ಹೇಳುತ್ತಾರೆ.
ಕಳೆದ ವರ್ಷ ತಮನ್ನಾಳ ಶುಲ್ಕವನ್ನಷ್ಟೇ ಮಾಲಿ ಕುಟುಂಬ ಭರಿಸಲು ಸಾಧ್ಯವಾಗಿದೆ. “ಆಕಾಶನ 6ನೇ ತರಗತಿಯ ಶುಲ್ಕವನ್ನು ನಮಗೆ ಭರಿಸಲು ಸಾಧ್ಯವಾಗದ ಕಾರಣ, ನಾವು ಈ ಶೈಕ್ಷಣಿಕ ವರ್ಷ ಶಾಲೆ ಬಿಡಿಸಬೇಕಾಗಿತ್ತು, ಆದರೆ ಅವನು ಒಂದು ವರ್ಷ ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳುತ್ತಾನೆ’
ಉತ್ತರ ಮುಂಬೈನ ಮರೋಲ್‌ನ ಸ್ಲಂ ಕಾಲೋನಿಯಲ್ಲಿ ವಾಸಿಸುತ್ತಿರುವ ಕೃಷ್ಣಕಾಂತ್ (ಅವರ ಕುಟುಂಬದ ಹೆಚ್ಚಿನವರು ತಮ್ಮೂರಿಗೆ ಮರಳಿದ್ದಾರೆ) ತಮ್ಮ ರೂಮ್ ಗೆ ನೀಡುವ 4000 ರೂ.ಗಳ ತಿಂಗಳ ಬಾಡಿಗೆಯಲ್ಲಿ ಸ್ವಲ್ಪ ಮಾತ್ರ ಭರಿಸಲು ಸಾಧ್ಯವಾಗುತ್ತದೆ. ಮೇ 2021ರಲ್ಲಿ ಅವರು ತಮ್ಮ ಮೃತ ಕಿರಿಯ ಸಹೋದರನ ಟ್ಯಾಕ್ಸಿಯನ್ನು ನಡೆಸಲು ಪ್ರಾರಂಭಿಸಿದರು, ಈ ಹಳೆಯ ಕಾಲಿ-ಪೀಲಿಗಾಡಿಯನ್ನು ಬಾಡಿಗೆಗೆ ನೀಡಲಾಗುತ್ತಿತ್ತು. “ನಾನು ದಿನಕ್ಕೆ 200-300 ರೂಪಾಯಿಗಳವರೆಗೆ ಗಳಿಸಲು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳುತ್ತಾರೆ.
ಮತ್ತು ಅವರು ತಮ್ಮ ಟ್ಯಾಕ್ಸಿಯ ನಷ್ಟವನ್ನು ಪ್ರಶ್ನಿಸದೆ ಬಿಡದಿರಲು ನಿರ್ಧರಿಸಿದ್ದಾರೆ.
ಟ್ಯಾಕ್ಸಿ ಚಾಲಕರ ಒಕ್ಕೂಟವಾಗಿರುವ ಭಾರತೀಯ ಟ್ಯಾಕ್ಸಿ ಚಾಲಕ ಸಂಘವು ಅವರಿಗೆ ವಕೀಲರನ್ನು ಹುಡುಕಲು ಸಹಾಯ ಮಾಡಿದೆ. ಯೂನಿಯನ್‌ನ ಉಪಾಧ್ಯಕ್ಷ ರಾಕೇಶ್ ಮಿಶ್ರಾ, ಭದ್ರತಾ ಉದ್ದೇಶಗಳಿಗಾಗಿ ಹರಾಜು ನಡೆಸಲಾಗಿದೆ ಎಂದು ಅವರು ಹೇಳುತ್ತಿದ್ದಾರೆ, ಆದರೆ ಅದರ ಸಮಯ ತಪ್ಪಾಗಿದೆ ಎನ್ನುತ್ತಾರೆ.
“ಕೆಲವು ತಿಂಗಳ ಹಿಂದೆ [ಸುಮಾರು ಮಾರ್ಚ್ 2021 ರವರೆಗೆ] ನೋಟಿಸ್ ಬಗ್ಗೆ ನಮಗೂ ತಿಳಿದಿರಲಿಲ್ಲ. ನಮ್ಮ ಕಚೇರಿಗಳು ಮುಚ್ಚಿದ್ದವು. ಇದು ನಮ್ಮ ಗಮನಕ್ಕೆ ಬಂದಾಗ, ನಾವು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪಾರ್ಕಿಂಗ್ ಮಾಡಲು ಬೇರೆ ಪ್ಲಾಟ್ ನೀಡುವಂತೆ ಕೇಳಿದೆವು. ಮತ್ತು ಲಾಕ್‌ಡೌನ್‌ನಲ್ಲಿ ಕ್ಯಾಬ್ ಗಳನ್ನು ಎಲ್ಲಿ ನಿಲ್ಲಿಸಲಾಗಿತ್ತು? ಎಂದು ಅವರನ್ನು ಕೇಳಿದ್ದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ನಾನು ಚಾಲಕರನ್ನು ಕೇಳಲು ಮುಂದಾದೆ. ಆಗ ಅವರ ಮುಂಬೈ ವಿಳಾಸಗಳಿಗೆ ಮಾತ್ರ ನೋಟಿಸ್ ಕಳುಹಿಸಿರುವುದು ಗೊತ್ತಾಯಿತು. ಹೀಗಾದಲ್ಲಿ ತಮ್ಮೂರಿನಲ್ಲಿಯೇ ಉಳಿದಿರುವ ಚಾಲಕರನ್ನು ಇವು ಹೇಗೆ ತಲುಪಬೇಕು ಹೇಳಿ? ಮುಂಬೈನಲ್ಲಿರುವವರು ತಮ್ಮ ಟ್ಯಾಕ್ಸಿಗಳನ್ನು ಪಾರ್ಕಿಂಗ್ ಸ್ಥಳದಿಂದ ಹೊರಕ್ಕೆ ಸ್ಥಳಾಂತರಿಸಲು ಯಶಸ್ವಿಯಾಗಿದ್ದಾರೆ” ಎಂದು ಅವರು ಹೇಳಿದರು.
"ಅವರು ಕಾನೂನು ಕ್ರಮಕ್ಕೆ ಮುಂದಾದಲ್ಲಿ, ಹಾಗೆ ಮಾಡಲು ಅವರಿಗೆ ಎಲ್ಲಾ ಹಕ್ಕುಗಳಿವೆ," ಎಂದು ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (MIAL) ನ ಡಾ. ಲಾಂಬಾ ಹೇಳುತ್ತಾರೆ. ಹರಾಜಾದ ಟ್ಯಾಕ್ಸಿಗಳನ್ನು ನಿಲ್ಲಿಸಿದ ವಿಮಾನ ನಿಲ್ದಾಣವನ್ನು ಪ್ರಸ್ತುತ ಬಳಸಲಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ. “ಟ್ಯಾಕ್ಸಿಗಳಿಗೆ ದೊಡ್ಡ ಜಾಗವನ್ನು ಬಳಸುವುದರಲ್ಲಿ ಅರ್ಥವಿಲ್ಲ. ಕಪ್ಪು-ಹಳದಿ ಬಣ್ಣದ ಟ್ಯಾಕ್ಸಿಗಳಿಗೆ ಈಗ ಬೇಡಿಕೆ ಕಡಿಮೆಯಾಗಿದೆ. ಪ್ರಯಾಣಿಕರು ಈಗ ಓಲಾ ಮತ್ತು ಉಬರ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಮತ್ತು ವಿಮಾನ ನಿಲ್ದಾಣದ ಬಳಿ ಟ್ಯಾಕ್ಸಿಗಳಿಗಾಗಿ ಚಿಕ್ಕದಾದ ಪಾರ್ಕಿಂಗ್ ಸ್ಥಳವಿದೆ, ಅದು ಇನ್ನೂ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು.
ಕೃಷ್ಣಕಾಂತ್ ಅವರು ಹರಾಜಾಗಿರುವ ಎಲ್ಲಾ 42 ಕ್ಯಾಬ್‌ಗಳ ಚಾಲಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. (ಈ ವಿಷಯದಲ್ಲಿ ಸಂಜಯ್ ಮಾಲಿ ಅವರಿಗೆ ಸಹಾಯ ಮಾಡುತ್ತಿದ್ದಾರೆ). “ಕೆಲವರು ಇನ್ನೂ ತಮ್ಮ ಹಳ್ಳಿಗಳಲ್ಲಿರುವುದರಿಂದ ಅವರಿಗೆ ಇನ್ನೂ ಈ ವಿಷಯ ತಿಳಿದಿಲ್ಲ. ನನಗೆ ಅವರೆಲ್ಲರ ಪರಿಚಯವಿಲ್ಲ, ಆದರೆ ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ. ಇದೆಲ್ಲವನ್ನೂ ನಾನೊಬ್ಬನೇ ಹೇಳಲು ಬಯಸುವುದಿಲ್ಲ, ಆದಾಗ್ಯೂ ಇನ್ಯಾರು ಮಾಡಬೇಕು ಹೇಳಿ? ಕೆಲವರ ಬಳಿ ಮುಂಬೈಗೆ ಹಿಂತಿರುಗುವುದಕ್ಕೆ ರೈಲು ಟಿಕೆಟ್‌ಗಳನ್ನು ಖರೀದಿಸಲು ಹಣವಿರುವುದಿಲ್ಲ” ಎಂದು ಹೇಳಿದರು.
ವಕೀಲರೊಬ್ಬರು ಸಿದ್ಧಪಡಿಸಿದ ದೂರು ಪತ್ರದ ಮೇಲೆ ಅವರು ಕೆಲವು ಟ್ಯಾಕ್ಸಿ ಚಾಲಕರ ಸಹಿ ಸಂಗ್ರಹಿಸಿದ್ದಾರೆ. ಜುಲೈ 19ರಂದು ಬರೆದ ಪತ್ರವನ್ನು ಸಹರ್ ಪೊಲೀಸ್ ಠಾಣೆಗೆ ನೀಡಲಾಗಿದೆ. ಇದಕ್ಕೆ ಅವರು "ಅಬ್ ಕ್ಯಾ ಕರೇ?" ಎಂದು ತಿರಸ್ಕಾರದ ಧ್ವನಿಯಲ್ಲಿ ಹೇಳಿದರು. “ನಾನು ಓದಬಲ್ಲೆ, ಆದ್ದರಿಂದ ನಾನು ಈ ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ. 12ನೇ ತರಗತಿ ಪಾಸಾಗಿದ್ದೇನೆ. ಕೊನೆಗೆ ಈಗಲಾದರೂ ನನ್ನ ವಿದ್ಯಾಭ್ಯಾಸ ಉಪಯೋಗಕ್ಕೆ ಬಂತು” ಎಂದು ಹೇಳುವ ಕೃಷ್ಣಕಾಂತ್ ರಾತ್ರಿ ವೇಳೆ ಹಳೆಯ ಟ್ಯಾಕ್ಸಿ ಓಡಿಸುತ್ತಾರೆ. “ನನಗೆ ಬೇರೆ ಆಯ್ಕೆ ಇಲ್ಲ. ನನಗೆ ನ್ಯಾಯವೇನೂ ಗೊತ್ತಿಲ್ಲ, ಆದರೆ ಅವರು ನಮ್ಮ ಹೊಟ್ಟೆಗೆ ಹೊಡೆದಿದ್ದಾರೆ. ಇದು ನನ್ನ ಟ್ಯಾಕ್ಸಿ ಅಷ್ಟೇ ಅಲ್ಲ, ನನ್ನ ಇಡೀ ಜೀವನೋಪಾಯವನ್ನೇ ಅವರು ಕಿತ್ತುಕೊಂಡಿದ್ದಾರೆ,” ಎಂದು ಅವರು ಆಕ್ರೋಶದಿಂದ ಹೇಳುತ್ತಿದ್ದರು.
ಅವರು ಮತ್ತು ಇತರ ಚಾಲಕರು ಇನ್ನೂ ಕೆಲವು ಪರಿಹಾರಕ್ಕಾಗಿ, ಕೆಲವು ಕ್ರಮಕ್ಕಾಗಿ ಕಾಯುತ್ತಿದ್ದಾರೆ. “ಈಗ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ," ಎಂದು ಅವರು ಹೇಳುತ್ತಾರೆ. "ನಾನು ಕಳೆದ ಎರಡು ತಿಂಗಳಿಂದ ಇದಕ್ಕಾಗಿ ಅಲೆದಾಡುತ್ತಿದ್ದೇನೆ. ಈಗ ನಾನು ಈ ಪ್ರಕರಣವನ್ನು ಕೈ ಬಿಡಬೇಕೇ? ಇದರಿಂದ ಏನಾದರೂ ಕೆಲಸ ಆಗುತ್ತಾ? ನಾನಂತೂ ಸುಮ್ಮನಿರಲು ಇಚ್ಚಿಸುವುದಿಲ್ಲ, ಆದರೆ ನಾನು ಈಗ ಭರವಸೆಯನ್ನು ಕಳೆದುಕೊಳ್ಳುತ್ತಿದ್ದೇನೆ.”ಎಂದು ಅವರು ನಿರಾಶಾಭಾವ ವ್ಯಕ್ತಪಡಿಸುತ್ತಿದ್ದರು.
ಅನುವಾದ: ಎನ್.ಮಂಜುನಾಥ್