ತಮಿಳು ನಾಡಿನ ಅನೇಕ ಭಾಗಗಳಂತೆಯೇ ತೂಥುಕುಡಿ ಪಟ್ಟಣದ ಬೀದಿಗಳಲ್ಲಿ ಜನರು ಗುಂಪು ಸೇರತೊಡಗಿದಾಗ – ಚಿಕ್ಕ ಹುಡುಗನೊಬ್ಬ ಓಡೋಡಿ ಬಂದು ಆ ಗುಂಪನ್ನು ಸೇರಿದ. ಕೆಲವೇ ಕ್ಷಣಗಳಲ್ಲಿ ಆತ ಪ್ರಜಾತಂತ್ರವಾದಿ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆಯ ಭಾಗವೆನಿಸಿದ. "ಇಂದು ನಿಮಗೆ ಇದು ಅರ್ಥವಾಗಲಾರದು. ಭಗತ್‍ ಸಿಂಗ್‍ ಅವರ ಮರಣದಂಡನೆಯು ತಮಿಳು ನಾಡಿನ ಸ್ವಾತಂತ್ರ್ಯ ಹೋರಾಟದ ಸಂಕ್ರಮಣ ಕಾಲವೆನ್ನಬಹುದು. ಸ್ತಂಭೀಭೂತರಾಗಿದ್ದ ಜನರ ಕಣ್ಣುಗಳು ಹನಿಗೂಡಿದ್ದವು", ಎಂದು ಅವರು ತಿಳಿಸಿದರು.

"ನನಗಾಗ ಕೇವಲ ಒಂಭತ್ತು ವರ್ಷ", ಎನ್ನುತ್ತಾ ಅವರು ಮುಸಿನಕ್ಕರು.

1947ರ ಆಗಸ್ಟ್‍ 14ರಂದು ಬ್ರಿಟಿಷರ ಜೈಲಿನಿಂದ ಹೊರಬಂದ ವ್ಯಕ್ತಿ ಇವರು. "ಅಂದು, ನ್ಯಾಯಾಧೀಶರು ಕೇಂದ್ರೀಯ ಕಾರಾಗೃಹಕ್ಕೆ ಬಂದು ನಮ್ಮನ್ನು ಬಿಡುಗಡೆಗೊಳಿಸಿದರು. ಮಧುರೈ ಒಳಸಂಚಿನ ಮೊಕದ್ದಮೆಯಲ್ಲಿ ನಮ್ಮನ್ನು ಬಿಡುಗಡೆಗೊಳಿಸಲಾಗಿತ್ತು. ಮಧುರೈ ಕೇಂದ್ರೀಯ ಕಾರಾಗೃಹದಿಂದ ಹೊರಬರುತ್ತಲೇ ಸ್ವಾತಂತ್ರ್ಯದ ಮೆರವಣಿಗೆಯಲ್ಲಿ ನಾನು ಭಾಗಿಯಾದೆ", ಎನ್ನುವ ಅವರಿಗೆ ಇಂದು 99 ವರ್ಷಗಳು ತುಂಬುತ್ತವೆಯಾದರೂ, (ಜುಲೈ 15, 2020) ತಮ್ಮನ್ನು ಸ್ವಾತಂತ್ರ್ಯ ಹೋರಾಟಗಾರ, ಭೂಗತ ಕ್ರಾಂತಿಕಾರಿ, ಬರಹಗಾರ, ವಾಗ್ಮಿ ಹಾಗೂ ಪ್ರಜಾತಂತ್ರವಾದಿ ಬುದ್ಧಿಜೀವಿಯನ್ನಾಗಿ ರೂಪಿಸಿದ ಕಿಚ್ಚು ಹಾಗೂ ಹುಮ್ಮಸ್ಸನ್ನು ಅವರು ಹಾಗೆಯೇ ಉಳಿಸಿಕೊಂಡಿದ್ದಾರೆ.

ತಮ್ಮ ನೂರನೇ ವಯಸ್ಸಿಗೆ ಕಾಲಿಟ್ಟಿರುವ ಎನ್‍. ಶಂಕರಯ್ಯ ಈಗಲೂ ಉಪನ್ಯಾಸ ಹಾಗೂ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತ ಬೌದ್ಧಿಕವಾಗಿ ಸಕ್ರಿಯರಾಗಿದ್ದಾರೆ. ಈಗ ನಾವು ಇವರ ಸಂದರ್ಶನವನ್ನು ನಡೆಸುತ್ತಿರುವ ಚೆನ್ನೈ ಉಪನಗರ, ಕ್ರೊಂಪೇಟ್‍ನಲ್ಲಿನ ಅವರ ಮನೆಯಿಂದ 2018ರ ಅಂತಿಮ ಭಾಗದಲ್ಲಿ, ತಮಿಳು ನಾಡು ಪ್ರಗತಿಶೀಲ ಬರಹಗಾರರು ಮತ್ತು ಕಲಾವಿದರ ಸಭೆಯನ್ನುದ್ದೇಶಿಸಿ ಮಾತನಾಡಲು ಇವರು ಮಧುರೈಗೆ ತೆರಳಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಕಾರಣದಿಂದಾಗಿ, ತಮ್ಮ ಪದವಿಯನ್ನೆಂದಿಗೂ ಪೂರೈಸಲು ಸಾಧ್ಯವಾಗದ ಇವರು ಅನೇಕ ರಾಜಕೀಯ ಕಿರುಹೊತ್ತಿಗೆಗಳು, ಪುಸ್ತಿಕೆಗಳು, ಕರಪತ್ರಗಳು ಹಾಗೂ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುತ್ತಾರೆ.

ನರಸಿಂಹಲು ಶಂಕರಯ್ಯನವರು ಮಧುರೈನ ದಿ ಅಮೆರಿಕನ್‍ ಕಾಲೇಜಿನಲ್ಲಿ ಇತಿಹಾಸದಲ್ಲಿ ಬಿ.ಎ. ಪದವಿಯನ್ನು ಪಡೆಯುವ ದಿನಗಳು ಹತ್ತಿರವಾಗುತ್ತಿದ್ದವು. ಆದರೆ 1941ರಲ್ಲಿ, ಕೇವಲ ಎರಡು ವಾರಗಳ ಅಂತರದಲ್ಲಿ ಅಂತಿಮ ವರ್ಷದ ಪರೀಕ್ಷೆಯನ್ನು ತಪ್ಪಿಸಿಕೊಂಡರು. "ಕಾಲೇಜಿನ ವಿದ್ಯಾರ್ಥಿ ಸಂಘದಲ್ಲಿ ನಾನು ಜಂಟಿ ಕಾರ್ಯದರ್ಶಿಯಾಗಿದ್ದೆ", ಎಂದು ತಿಳಿಸಿದ ಇವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರಲ್ಲದೆ, ಕಾಲೇಜಿನ ಆವರಣದಲ್ಲಿ ಕವನ ಸಮಾಜವನ್ನು ಸ್ಥಾಪಿಸಿದ್ದರು. ಫುಟ್‍ಬಾಲ್‍ ಕ್ರೀಡೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದೂ ಹೌದು. ಅಂದಿನ ದಿನಗಳಲ್ಲಿ ಬ್ರಿಟಿಷ್‍ ರಾಜ್‍ ವಿರೋಧಿ ಆಂದೋಳನಗಳಲ್ಲಿ ಇವರು ಬಹಳ ಸಕ್ರಿಯರಾಗಿದ್ದರು. "ನನ್ನ ಕಾಲೇಜು ದಿನಗಳಲ್ಲಿ ವಾಮ ಪಂಥೀಯ ವಿಚಾರಧಾರೆಯನ್ನುಳ್ಳ ಅನೇಕರೊಂದಿಗೆ ಗೆಳೆತನವಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಗದ ಹೊರತು, ಸಾಮಾಜಿಕ ಸುಧಾರಣೆಯು ಸಂಪೂರ್ಣವೆನಿಸುವುದಿಲ್ಲವೆಂಬುದನ್ನು ನಾನು ಅರ್ಥೈಸಿಕೊಂಡಿದ್ದೆ", ಎಂದು ಸಹ ಅವರು ತಿಳಿಸಿದರು. ತಮ್ಮ 17ನೇ ವಯಸ್ಸಿಗಾಗಲೇ ಇವರು ಭಾರತೀಯ ಕಮ್ಯೂನಿಸ್ಟ್ ಪಕ್ಷದ (ಆಗ ಈ ಪಕ್ಷವನ್ನು ನಿಷೇಧಿಸಲಾಗಿದ್ದು ಭೂಗತವಾಗಿತ್ತು) ಸದಸ್ಯರಾಗಿದ್ದರು.

ಅಮೆರಿಕನ್‍ ಕಾಲೇಜಿನ ಸಕಾರಾತ್ಮಕ ನಿಲುವನ್ನು ನೆನಪಿಸಿಕೊಂಡ ಅವರು, "ನಿರ್ದೇಶಕರು ಹಾಗೂ ಶಿಕ್ಷಕ ವರ್ಗದ ಕೆಲವರು ಅಮೆರಿಕನ್ನರಾಗಿದ್ದು, ಉಳಿದವರು ತಮಿಳರಾಗಿದ್ದರು. ಇವರಿಂದ ತಟಸ್ಥ ನಿಲುವನ್ನು ನಿರೀಕ್ಷಿಸಲಾಗಿತ್ತಾದರೂ ಅವರು ಬ್ರಿಟಿಷರ ಪರವಾಗಿರಲಿಲ್ಲ. ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಅಲ್ಲಿ ಅವಕಾಶವಿತ್ತು...", ಎನ್ನುತ್ತಾರೆ. ಬ್ರಿಟಿಷರ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ, ಅನ್ನಾಮಲೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಬಂಧಿಸಿದ ಕಾರಣ 1941ರಲ್ಲಿ ಮಧುರೈನಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. "ನಾವು ಕರಪತ್ರವೊಂದನ್ನು ಹೊರಡಿಸಿದೆವು. ನಮ್ಮ ಹಾಸ್ಟೆಲ್‍ ಕೊಠಡಿಗಳನ್ನು ಶೋಧಿಸಲಾಯಿತು. ಕರಪತ್ರವನ್ನು ಹೊಂದಿದ್ದ ಕಾರಣಕ್ಕಾಗಿ ನಾರಾಯಣಸ್ವಾಮಿಯನ್ನು (ನನ್ನ ಸ್ನೇಹಿತ) ಬಂಧಿಸಲಾಯಿತು. ನಂತರ ನಾವು ಪ್ರತಿಭಟನಾ ಸಭೆಯನ್ನು ಆಯೋಜಿಸಿ, ಆತನ ಬಂಧನವನ್ನು ಖಂಡಿಸಿದೆವು..."

ಶಂಕರಯ್ಯ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ

"ಇದರ ನಂತರ 1941ನೇ ಫೆಬ್ರುವರಿ 28ರಂದು ಬ್ರಿಟಿಷರು ನನ್ನನ್ನು ಬಂಧಿಸಿದರು. ಅಂತಿಮ ಪರೀಕ್ಷೆಗೆ 15 ದಿನಗಳು ಉಳಿದಿದ್ದವು. ನಾನು ವಾಪಸ್ಸು ಬರಲೇ ಇಲ್ಲ. ಬಿ.ಎ. ಮುಗಿಸಲೇ ಇಲ್ಲ." ತಾವು ಬಂಧನಕ್ಕೊಳಗಾದ ಸಂದರ್ಭವನ್ನು ಅವರು ವಿವರಿಸುತ್ತಿದ್ದರು - ದಶಕಗಳ ನಂತರ, "ಭಾರತದ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಲು, ಸ್ವಾತಂತ್ರ್ಯ ಹೋರಾಟದ ಭಾಗವೆನಿಸಲು ನನಗೆ ಹೆಮ್ಮೆಯೆನಿಸಿತು". ಇದೊಂದೇ ಅವರ ಮನಸ್ಸಿನಲ್ಲಿದ್ದ ವಿಚಾರವಾಗಿತ್ತು. ಬದುಕಿನ ಹಾದಿ ಹಾಳಾಯಿತೆಂಬ ಯಾವುದೇ ಯೋಚನೆಯಿರಲಿಲ್ಲ. "ನಾವು ಸ್ವಾತಂತ್ರ್ಯವನ್ನು ಅರಸುತ್ತೇವೆಯೇ ಹೊರತು, ಉದ್ಯೋಗವನ್ನಲ್ಲ", ಎಂಬುದು ಅಂದಿನ ಪ್ರಜಾತಂತ್ರವಾದಿ ಯುವಜನತೆಯ ಅಚ್ಚುಮೆಚ್ಚಿನ ಘೋಷಣೆಯಾಗಿದ್ದು, ಅವರ ಈ ನಡೆಯು ಘೋಷಣೆಗೆ ತಕ್ಕುದಾಗಿತ್ತು..

"ಮಧುರೈ ಜೈಲಿನಲ್ಲಿ 15 ದಿನಗಳನ್ನು ಕಳೆದ ನಂತರ ವಲ್ಲೋರ್‍ ಜೈಲಿಗೆ ನನ್ನನ್ನು ಕಳುಹಿಸಲಾಯಿತು. ಆ ಸಮಯದಲ್ಲಿ ತಮಿಳು ನಾಡು, ಆಂಧ್ರ ಪ್ರದೇಶ, ಕೇರಳದ ಅನೇಕರನ್ನು ಸಹ ಬಂಧಿಸಲಾಗಿತ್ತು"

"ಕಾಮ್ರೇಡ್‍ ಎ.ಕೆ. ಗೋಪಾಲನ್‍ (ಕೇರಳದ ಕಮ್ಯುನಿಸ್ಟ್‍ ಪಕ್ಷದ ಪ್ರಖ್ಯಾತ ನಾಯಕ) ಅವರನ್ನು ತಿರುಚಿರಾಪಳ್ಳಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾರಣಕ್ಕಾಗಿ ಬಂಧಿಸಲಾಯಿತು. ಕೇರಳದ ಕಾಮ್ರೇಡ್‍ ಇಂಬಿಚಿ ಬವ, ವಿ. ಸುಬ್ಬಯ್ಯ, ಜೀವನಂಧಂ ಅವರನ್ನು ಸಹ ಕಾರ್ಯಕ್ರಮದಲ್ಲಿ ಬಂಧಿಸಲಾಯಿತು. ಇವರೆಲ್ಲರೂ ವೆಲ್ಲೋರ್‍ ಜೈಲಿನಲ್ಲಿದ್ದರು. ಮದ್ರಾಸ್‍ ಸರ್ಕಾರವು ನಮ್ಮನ್ನು ಎರಡು ಗುಂಪುಗಳಾಗಿ ವಿಭಜಿಸಲು ಬಯಸಿತ್ತು. ಇದರಲ್ಲಿನ ಒಂದು ಗುಂಪಿಗೆ ‘ಸಿ’ ಮಾದರಿಯ ಪಡಿತರವು ದೊರೆಯುತ್ತದೆ. ಇದನ್ನು ಕೇವಲ ದಂಡಾರ್ಹ ಕೈದಿಗಳಿಗೆ ಮಾತ್ರವೇ ನೀಡಲಾಗುತ್ತದೆ. ನಾವು ಈ ವ್ಯವಸ್ಥೆಯ ವಿರುದ್ಧ 19 ದಿನಗಳ ಉಪವಾಸ ಮುಷ್ಕರವನ್ನು ಹೂಡಿದೆವು. 10ನೇ ದಿನದಂದು ಅವರು ನಮ್ಮನ್ನು ಎರಡು ಗುಂಪುಗಳಾಗಿ ವಿಭಜಿಸಿದರು. ನಾನು ಆಗ ಕೇವಲ ಒಬ್ಬ ವಿದ್ಯಾರ್ಥಿಯಾಗಿದ್ದೆ."

ಶಂಕರಯ್ಯ ಅವರನ್ನು ಇರಿಸಿದ್ದ ಚಿಕ್ಕ ಕೋಣೆಗೆ ಬಂದಿದ್ದ ಬಂದೀಖಾನೆಗಳ ಮಹಾ ನಿರೀಕ್ಷಕರು, ಮಾಕ್ಸಿಂ ಗೋರ್ಕಿಯ ಮದರ್‍ ಪುಸ್ತಕವನ್ನು ಓದುತ್ತಿದ್ದ ಅವರನ್ನು ಕಂಡು ಆಶ್ಚರ್ಯಚಕಿತರಾದರು. "ಉಪವಾಸ ಮುಷ್ಕರದ 10ನೇ ದಿನದಂದು ಗೋರ್ಕಿಯ ಮದರ್‍ ಓದುತ್ತಿರುವೆಯಲ್ಲ?", ಎಂದರವರು. ಈ ಘಟನೆಯನ್ನು ನೆನಪಿಸಿಕೊಂಡ ಶಂಕರಯ್ಯನವರ ಕಣ್ಣುಗಳು ಉಲ್ಲಾಸದಿಂದ ಮಿನುಗುತ್ತಿದ್ದವು.

"ಕಾಮರಾಜರ್ (ತರುವಾಯ 1954-63ರ ಅವಧಿಯಲ್ಲಿ ಮದ್ರಾಸ್‍ ರಾಜ್ಯದ (ಇಂದಿನ ತಮಿಳು ನಾಡು) ಮುಖ್ಯಮಂತ್ರಿ ಪದವಿಯನ್ನಲಂಕರಿಸಿದವರು), ಪಟ್ಟಾಭಿ ಸೀತಾರಾಮಯ್ಯ (ಸ್ವಾತಂತ್ರ್ಯ ದೊರೆತ ಒಡನೆಯೇ ಕಾಂಗ್ರೆಸ್‍ ಅಧ್ಯಕ್ಷ ಪದವಿಯನ್ನು ಪಡೆದವರು) ಹಾಗೂ ಇತರೆ ಅನೇಕ ಪ್ರಮುಖ ವ್ಯಕ್ತಿಗಳನ್ನು ಅಲ್ಲಿನ ಪ್ರತ್ಯೇಕ ಜೈಲಿನಲ್ಲಿರಿಸಲಾಗಿತ್ತು."

PHOTO • S. Gavaskar

ಮೇಲಿನ ಸಾಲಿನಲ್ಲಿ ಎಡಕ್ಕೆ: 90ರ ದಶಕದ ಮಧ್ಯ ಭಾಗದಲ್ಲಿ ತಮ್ಮ ಪಕ್ಷದ ರಾಜ್ಯ ಸಮಿತಿಯ ಕಛೇರಿಯಲ್ಲಿ ಶಂಕರಯ್ಯ. ಮೇಲಿನ ಸಾಲಿನಲ್ಲಿ ಬಲಕ್ಕೆ: 1980ರ ದಶಕದಲ್ಲಿ ಇವರ ಹಳೆಯ ಕಾಮ್ರೇಡ್‍ ಪಿ. ರಾಮಮೂರ್ತಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭ (ಮುಂದಿನ ಸಾಲಿನ ಮೂಲೆಯಲ್ಲಿನ ಮೊದಲ ವ್ಯಕ್ತಿ). ಕೆಳಗಿನ ಸಾಲಿನಲ್ಲಿ: 2011ರಲ್ಲಿ ಚೆನ್ನೈನಲ್ಲಿ  ಭ್ರಷ್ಟಾಚಾರ ವಿರೋಧಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಸಂದರ್ಭ

ಮಹತ್ವದ ವಿಷಯಗಳನ್ನು ಕುರಿತಂತೆ ತಮ್ಮಲ್ಲಿನ ಭಿನ್ನಾಭಿಪ್ರಾಯದ ಹೊರತಾಗಿಯೂ, "ಕಾಮರಾಜ್‍ ಅವರು ಕಮ್ಯುನಿಸ್ಟರ ಉತ್ತಮ ಗೆಳೆಯರಾಗಿದ್ದರು. ಜೈಲಿನಲ್ಲಿ ಕೋಣೆಯನ್ನು ಹಂಚಿಕೊಂಡಿದ್ದ ಮಧುರೈ ಹಾಗೂ ತಿರುನಲ್ವೇಲಿಯ ಅವರ ಸಹಚರರೂ ಕಮ್ಯುನಿಸ್ಟರಾಗಿದ್ದರು. ಕಾಮರಾಜರ್‍ ಅವರಿಗೆ ನಾನು ಬಹಳ ಆಪ್ತನಾಗಿದ್ದೆ. ಒಂದಕ್ಕಿಂತ ಹೆಚ್ಚು ಬಾರಿ ಅವರು ಮಧ್ಯಪ್ರವೇಶಿಸಿ, ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಜೈಲಿನಲ್ಲಿ, ಅದರಲ್ಲೂ ವಿಶೇಷವಾಗಿ ಜರ್ಮನ್‍-ಸೋವಿಯತ್‍ ಯುದ್ಧವು ಪ್ರಾರಂಭಗೊಂಡ ಸಂದರ್ಭದಲ್ಲಿ, ಭಾರಿ ವಾದವಿವಾದಗಳು (ಕಾಂಗ್ರೆಸ್ಸಿಗರು ಹಾಗೂ ಕಮ್ಯುನಿಸ್ಟರ ನಡುವೆ) ನಡೆಯುತ್ತಿದ್ದುದೂ ಹೌದು"

"ಸ್ವಲ್ಪ ಕಾಲದ ನಂತರ, ನಮ್ಮಲ್ಲಿನ ಎಂಟು ಜನರನ್ನು ರಾಜಮುಂಡ್ರಿ (ಈಗ ಆಂಧ್ರಪ್ರದೇಶಕ್ಕೆ ಸೇರಿದೆ) ಜೈಲಿಗೆ ವರ್ಗಾಯಿಸಿ ಅಲ್ಲಿನ ಪ್ರತ್ಯೇಕ ಪ್ರಾಂಗಣದಲ್ಲಿರಿಸಲಾಯಿತು."

"1942ರ ಏಪ್ರಿಲ್ ಹೊತ್ತಿಗೆ ಸರ್ಕಾರವು ನನ್ನನ್ನು ಹೊರತುಪಡಿಸಿ ಎಲ್ಲ ವಿದ್ಯಾರ್ಥಿಗಳನ್ನೂ ಬಿಡುಗಡೆಗೊಳಿಸಿತು. ಮೇಲ್ವಿಚಾರಕರ ಮುಖ್ಯಸ್ಥರು ಬಂದು ‘ಯಾರು ಶಂಕರಯ್ಯ?’ ಎಂದು ವಿಚಾರಿಸಿ, ನನ್ನನ್ನು ಹೊರತುಪಡಿಸಿ ಎಲ್ಲರನ್ನೂ ಬಿಡುಗಡೆಗೊಳಿಸಲಾಗಿದೆಯೆಂಬ ಮಾಹಿತಿ ನೀಡಿದರು. ಒಂದು ತಿಂಗಳವರೆಗೂ ನಾನು ಏಕಾಂತ ಕಾರಾವಾಸದಲ್ಲಿದ್ದ ಇಡೀ ಪ್ರಾಂಗಣವು ನನ್ನದಾಗಿತ್ತು."

ಇವರ ಹಾಗೂ ಇತರರ ಮೇಲಿನ ಆರೋಪಗಳೇನು? "ಯಾವುದೇ ವಿಧ್ಯುಕ್ತ ಆರೋಪಗಳಿರಲಿಲ್ಲ. ಕೇವಲ ಸೆರೆವಾಸವಷ್ಟೇ. ಪ್ರತಿ ಆರು ತಿಂಗಳಿಗೊಮ್ಮೆ ಅವರು ನಮ್ಮ ಸೆರೆವಾಸದ ಕಾರಣಗಳನ್ನು ತಿಳಿಸಿ ಲಿಖಿತ ನೋಟೀಸೊಂದನ್ನು ಕಳುಹಿಸುತ್ತಿದ್ದರು. ಸರ್ಕಾರ ವಿರೋಧಿ ಚಳುವಳಿ, ಕಮ್ಯುನಿಸ್ಟ್‍ ಪಕ್ಷದ ಚಟುವಟಿಕೆಗಳು ಇತ್ಯಾದಿ ಕಾರಣಗಳಿರುತ್ತಿದ್ದವು. ನಾವು ಸಮಿತಿಯೊಂದಕ್ಕೆ ನಮ್ಮ ಪ್ರತ್ಯುತ್ತರವನ್ನು ಸಲ್ಲಿಸುತ್ತಿದ್ದೆವು. ಸಮಿತಿಯು ಅದನ್ನು ತಿರಸ್ಕರಿಸುತ್ತಿತ್ತು."

"ರಾಜಮುಂಡ್ರಿ ಜೈಲಿನಿಂದ ಬಿಡುಗಡೆಗೊಂಡ ನನ್ನ ಸ್ನೇಹಿತರು, ಕಲ್ಕತ್ತದಿಂದ (ಕೋಲ್ಕತ) ಹಿಂದಿರುಗುತ್ತಿದ್ದ ಕಾಮರಾಜರ್‍ ಅವರನ್ನು ರಾಜಮುಂಡ್ರಿ ಸ್ಟೇಶನ್ನಿನಲ್ಲಿ ಭೇಟಿಯಾದರು. ನಾನು ಬಿಡುಗಡೆಗೊಂಡಿಲ್ಲವೆಂಬುದನ್ನು ಅರಿತ  ಅವರು ಮದ್ರಾಸಿನ ಮುಖ್ಯ ಕಾರ್ಯದರ್ಶಿಗಳಿಗೆ, ನನ್ನನ್ನು ವೆಲ್ಲೋರ್‍ ಜೈಲಿಗೆ ಮರು ವರ್ಗಾವಣೆ ಮಾಡಬೇಕೆಂಬುದಾಗಿ ಪತ್ರವನ್ನು ಬರೆದರು. ನನಗೂ ಸಹ ಅವರು ಪತ್ರ ಬರೆದರು. ಒಂದು ತಿಂಗಳ ನಂತರ ನನ್ನನ್ನು ವೆಲ್ಲೋರ್‍ ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿ ನನ್ನೊಂದಿಗೆ 200 ಜನ  ಸಹಕೈದಿಗಳಿದ್ದರು."

ಅನೇಕ ಜೈಲುಗಳ ತಮ್ಮ ಯಾತ್ರೆಯಲ್ಲಿ ಶಂಕರಯ್ಯನವರು ಭಾರತದ ಭಾವೀ ರಾಷ್ಟ್ರಪತಿ ಆರ್‍. ವೆಂಕಟರಾಮನ್‍ ಅವರನ್ನು ಸಹ ಭೇಟಿಯಾದರು. "ಜೈಲಿನಲ್ಲಿ ಅವರು ಭಾರತೀಯ ಕಮ್ಯುನಿಸ್ಟ್‍ ಪಕ್ಷದೊಂದಿಗಿದ್ದರು. 1943ರಲ್ಲಿ ಅದರ ಸದಸ್ಯರಾಗಿದ್ದ ಅವರು, ನಂತರ ಕಾಂಗ್ರೆಸ್‍ ಪಕ್ಷಕ್ಕೆ ಸೇರಿದರು. ಆದಾಗ್ಯೂ ಅನೇಕ ವರ್ಷಗಳವರೆಗೂ ನಾವು ಜೊತೆಗೂಡಿ ಕೆಲಸಮಾಡಿದೆವು."

PHOTO • M. Palani Kumar ,  Surya Art Photography

ಶಂಕರಯ್ಯನವರು ತಮ್ಮ ಐದನೇ ವಯಸ್ಸಿನವರೆಗೂ ವಿದ್ಯಾಭ್ಯಾಸವನ್ನು ನಡೆಸಿದ ತೂಥುಕುಡಿ ಊರಿನ ಶಾಲೆ (ಎಡಕ್ಕೆ). ನಂತರ ಅವರು ಮಧುರೈನ ಸೈಂಟ್‍ ಮೇರೀಸ್‍ (ಮಧ್ಯ ಭಾಗದಲ್ಲಿರುವ) ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿದರು. ನಂತರ ಅವರು ಮಧುರೈನ ದಿ ಅಮೆರಿಕನ್‍ ಕಾಲೇಜಿನಲ್ಲಿ (ಬಲಕ್ಕೆ) ಬಿ.ಎ ವ್ಯಾಸಂಗಕ್ಕೆ ತೊಡಗಿದರಾದರೂ ಅದನ್ನು ಪೂರೈಸಲಿಲ್ಲ. ಪರೀಕ್ಷೆಗೆ 15 ದಿನಗಳಿರುವಂತೆ ಅವರನ್ನು ಜೈಲಿಗೆ ಕಳುಹಿಸಲಾಯಿತು

ಅಮೆರಿಕನ್‍ ಕಾಲೇಜಿನಲ್ಲಿ ಶಂಕರಯ್ಯನವರ ಸಮಕಾಲೀನರಾಗಿದ್ದ ಹಾಗೂ ವಿದ್ಯಾರ್ಥಿಗಳ ಬೃಹತ್‍ ಚಳುವಳಿಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದ ಅನೇಕರು ಪದವಿಯ ನಂತರ ಪ್ರಮುಖ ವ್ಯಕ್ತಿಗಳಾದರು. ಅವರಲ್ಲೊಬ್ಬರು ತಮಿಳು ನಾಡಿನ ಮುಖ್ಯ ಕಾರ್ಯದರ್ಶಿಗಳಾಗಿದ್ದರು. ಮತ್ತೊಬ್ಬರು ನ್ಯಾಯಾಧೀಶರು. ಐ.ಎ.ಎಸ್ ಅಧಿಕಾರಿಯಾಗಿದ್ದ ಮಗದೊಬ್ಬರು ದಶಕಗಳ ನಂತರ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾದರು. ಶಂಕರಯ್ಯನವರು ಸ್ವಾತಂತ್ರ್ಯದ ನಂತರವೂ ಅನೇಕ ಜೈಲುವಾಸಗಳನ್ನು ಅನುಭವಿಸುತ್ತ ಬಂದೀಖಾನೆಗಳನ್ನು ಎಡತಾಕುತ್ತಿದ್ದರು. 1947ರ ಮೊದಲಿಗೆ ಶಂಕರಯ್ಯನವರು ನೋಡಿದ ಜೈಲುಗಳಲ್ಲಿ ಮಧುರೈ, ವೆಲ್ಲೋರ್‍, ರಾಜಮುಂಡ್ರಿ, ಕನ್ನೂರ್‍, ಸೇಲಂ ಹಾಗೂ ತಂಜಾವೂರ್.... ಜೈಲುಗಳೂ ಸೇರಿವೆ.

1948ರಲ್ಲಿ ಕಮ್ಯುನಿಸ್ಟ್‍ ಪಕ್ಷವನ್ನು ನಿಷೇಧಿಸಲಾಗಿ ಅವರು ಮತ್ತೊಮ್ಮೆ ಭೂಗತರಾದರು. ಇವರನ್ನು 1950ರಲ್ಲಿ ಬಂಧಿಸಿ ಒಂದು ವರ್ಷದ ನಂತರ ಬಿಡುಗಡೆಗೊಳಿಸಲಾಯಿತು. ಭಾರತ-ಚೀನಾ ಯುದ್ಧದ ಸಮಯದಲ್ಲಿ ಬಂಧಿಸಲ್ಪಟ್ಟ ಅನೇಕ ಕಮ್ಯುನಿಸ್ಟರಲ್ಲಿ ಇವರೂ ಒಬ್ಬರಾಗಿದ್ದರು. ಇವರ ಪ್ರಕರಣದಲ್ಲಿ ಏಳು ತಿಂಗಳ ಕಾರಾಗೃಹವಾಸವನ್ನು ವಿಧಿಸಲಾಗಿತ್ತು. 1965ರಲ್ಲಿ ಕಮ್ಯುನಿಸ್ಟ್‍ ಚಳುವಳಿಯ ನಿಟ್ಟಿನ ಮತ್ತೊಂದು ಕಾನೂನು ಕ್ರಮದ ಪರಿಣಾಮವಾಗಿ ಇವರು ಮತ್ತೊಮ್ಮೆ 17 ತಿಂಗಳ ಸೆರೆವಾಸವನ್ನು ಅನುಭವಿಸಿದರು.

ಸ್ವಾತಂತ್ರ್ಯದ ನಂತರ ತಮ್ಮನ್ನು ಗುರಿಯನ್ನಾಗಿಸಿದವರ ಬಗ್ಗೆ ಇವರಿಗೆ ಯಾವುದೇ ರೀತಿಯ ದ್ವೇಷವಿಲ್ಲವೆಂಬುದು ಗಮನಾರ್ಹ. ಇವರ ಪ್ರಕಾರ ಅವೆಲ್ಲವೂ ರಾಜನೈತಿಕ ಹೋರಾಟಗಳೇ ಹೊರತು ವೈಯಕ್ತಿಕವಾದುವಲ್ಲ. ಪ್ರಪಂಚದಲ್ಲಿನ ಅನಿಷ್ಟಗಳನ್ನು ಕುರಿತಂತೆ ಇವರ ಹೋರಾಟವು ಹಾಗೆಯೇ ಮುಂದುವರಿಯಿತು. ವೈಯಕ್ತಿಕ ಲಾಭವು ಇವರ ಉದ್ದೇಶವಾಗಿರಲಿಲ್ಲ.

ಸ್ವಾತಂತ್ರ್ಯ ಹೋರಾಟದಲ್ಲಿನ ಇವರ ಸಂಧಿಕಾಲಗಳಾವುವು? ಅಥವ ಇವರನ್ನು ಪ್ರಭಾವಿಸಿದ ಸಂದರ್ಭಗಳಾವುವು?

"ಬ್ರಿಟಿಷರು ಭಗತ್‍ ಸಿಂಗ್‍ ಅವರನ್ನು 1931ರ ಮಾರ್ಚ್‍ 23ರಂದು ಗಲ್ಲಿಗೇರಿಸಿದ ಘಟನೆ. 1945ರಲ್ಲಿ ಪ್ರಾರಂಭಗೊಂಡ ಇಂಡಿಯನ್‍ ನ್ಯಾಶನಲ್‍ ಆರ್ಮಿಯ ವಿಚಾರಣೆ ಹಾಗೂ ರಾಯಲ್‍ ಇಂಡಿಯನ್‍ ನೇವಿಯ 1946ರ ಬಂಡಾಯಗಳು ಬ್ರಿಟಿಷ್‍ ಸಾಮ್ರಾಜ್ಯಶಾಹಿಯ ವಿರುದ್ಧ ನಡೆದ ಹೋರಾಟಕ್ಕೆ ಹೆಚ್ಚಿನ ವೇಗವನ್ನಿತ್ತ ಪ್ರಮುಖ ಸಂಗತಿಗಳಲ್ಲಿ ಕೆಲವು."

ದಶಕಗಳುರುಳಿದಂತೆ ಎಡ ಪಕ್ಷದೊಂದಿಗಿನ ಅವರ ತೊಡಗಿಸಿಕೊಳ್ಳುವಿಕೆ ಹಾಗೂ ಬದ್ಧತೆಯು ಮತ್ತಷ್ಟು ಆಳವಾಗತೊಡಗಿತು. ನಿರಂತರವಾಗಿ ಅವರು ಪಕ್ಷದಲ್ಲಿ ತಮ್ಮನ್ನು ಪೂರ್ಣಕಾಲಿಕವಾಗಿ ತೊಡಗಿಸಿಕೊಂಡಿದ್ದರು.

1944ರಲ್ಲಿ ತಂಜಾವೂರಿನ ಜೈಲಿನಿಂದ ಬಿಡುಗಡೆಗೊಂಡ ನನ್ನನ್ನು ಭಾರತೀಯ ಕಮ್ಯುನಿಸ್ಟ್‍ ಪಕ್ಷದ ಮಧುರೈ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಆರಿಸಲಾಯಿತು. 22 ವರ್ಷಗಳವರೆಗೂ ಪಕ್ಷದ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ನಾನು ಚುನಾಯಿತನಾದೆ.

Left: Sankariah in his party office library in 2013 – he had just inaugurated it. Right: With his wife S. Navamani Ammal in 2014 on his 93rd birthday. Navamani Ammal passed away in 2016
PHOTO • S. Gavaskar
Left: Sankariah in his party office library in 2013 – he had just inaugurated it. Right: With his wife S. Navamani Ammal in 2014 on his 93rd birthday. Navamani Ammal passed away in 2016
PHOTO • S. Gavaskar

ಎಡಕ್ಕೆ: ತಾವು ಆಗಷ್ಟೇ ಉದ್ಘಾಟಿಸಿದ ಪಕ್ಷದ ಕಛೇರಿಯಲ್ಲಿನ ಗ್ರಂಥಾಲಯದಲ್ಲಿ ಶಂಕರಯ್ಯನವರು. ಬಲಕ್ಕೆ: 2014ರಲ್ಲಿ ತಮ್ಮ 93ನೇ ಹುಟ್ಟುಹಬ್ಬದಂದು, ತಮ್ಮ ಪತ್ನಿ ನಮವಣಿ ಅಮ್ಮಾಳ್‍ ಅವರೊಂದಿಗೆ. ನವಮಣಿ ಅಮ್ಮಾಳ್‍ 2016ರಲ್ಲಿ ಕಾಲವಾದರು

ಜನರನ್ನು ಸಂಘಟಿಸುವುದರಲ್ಲಿ ಶಂಕರಯ್ಯನವರು ಸಿದ್ಧಹಸ್ತರು. 1940ರ ಮಧ್ಯಭಾಗದಲ್ಲಿ ಮಧುರೈ ಎಡ ಪಕ್ಷದ ಪ್ರಮುಖ ನೆಲೆಯಾಗಿತ್ತು. "ಪಿ.ಸಿ. ಜೋಶಿಯವರು (ಸಿ.ಪಿ.ಐ ಪ್ರಧಾನ ಕಾರ್ಯದರ್ಶಿ) 1946ರಲ್ಲಿ ಮಧುರೈಗೆ ಬಂದಾಗ, ಒಂದು ಲಕ್ಷ ಜನರು ಸಭೆಯಲ್ಲಿ ಭಾಗವಹಿಸಿದ್ದರು. ನಮ್ಮ ಅನೇಕ ಸಭೆಗಳು ಬೃಹತ್‍ ಜನಸಮೂಹವನ್ನು ಆಕರ್ಷಿಸುತ್ತಿದ್ದವು."

ಇವರ ಜನಪ್ರಿಯತೆಯು ಹೆಚ್ಚಾಗುತ್ತಿದ್ದ ಕಾರಣ, ಬ್ರಿಟಿಷರು ಪಿ. ರಾಮಮೂರ್ತಿಯವರ ವಿರುದ್ಧ (ತಮಿಳು ನಾಡಿನ ಕಮ್ಯುನಿಸ್ಟ್ ಪಕ್ಷದ ಪ್ರಖ್ಯಾತ ನಾಯಕರು) ‘ಮಧುರೈ ಷಡ್ಯಂತ್ರದ ಪ್ರಕರಣ’ಎಂದು ಹೆಸರಿಸಲ್ಪಟ್ಟ ಮೊಕದ್ದಮೆಯನ್ನು ದಾಖಲಿಸಿ, ಅವರನ್ನು ಮೊದಲನೆ ಆರೋಪಿಯನ್ನಾಗಿಸಿದರು. ಶಂಕರಯ್ಯನವರನ್ನು ಎರಡನೆ ಆರೋಪಿಯನ್ನಾಗಿಸಿದ್ದಲ್ಲದೆ ಅನೇಕ ಇತರೆ ಸಿ.ಪಿ.ಐ ನಾಯಕರು ಮತ್ತು ಕಾರ್ಯಕರ್ತರನ್ನು ಸಹ ಆರೋಪಕ್ಕೆ ಒಳಪಡಿಸಲಾಯಿತು. ಇತರೆ ಕಾರ್ಮಿಕ ಸಂಘಗಳ ನಾಯಕರನ್ನು ಕೊಲೆಗೈಯುವ ಸಂಚಿನ ಆರೋಪವನ್ನು ಇವರ ಮೇಲೆ ಹೊರಿಸಲಾಯಿತು. ಗಾಡಿ ಎಳೆಯುವವನು ಪ್ರಮುಖ ಸಾಕ್ಷಿಯಾಗಿದ್ದು, ಆರೋಪಿಗಳ ಮಾತನ್ನು ಕದ್ದು ಕೇಳಿಸಿಕೊಂಡ ಆತ ತನ್ನ ಕರ್ತವ್ಯವನ್ನು ನಿಭಾಯಿಸುವ ನಿಟ್ಟಿನಲ್ಲಿ, ಅಧಿಕಾರಿಗಳಿಗೆ ಇದರ ಸುಳಿವು ನೀಡಿದನೆಂದು ಪೊಲೀಸರು ತಿಳಿಸಿದರು.

ಎನ್‍. ರಾಮಕೃಷ್ಣನ್‍ (ಶಂಕರಯ್ಯನವರ ಕಿರಿಯ ಸಹೋದರ) 2008ರಲ್ಲಿ ರಚಿಸಿದ ಪಿ. ರಾಮಮೂರ್ತಿ – ಎ ಸೆಂಟೆನರಿ ಟ್ರಿಬ್ಯುಟ್‍ ಎಂಬ ಜೀವನಚರಿತ್ರೆಯಲ್ಲಿ, "ವಿಚಾರಣೆಯಲ್ಲಿ ರಾಮಮೂರ್ತಿಯವರು (ಇವರು ತಮ್ಮ ಮೊಕದ್ದಮೆಯಲ್ಲಿ ಸ್ವತಃ ವಾದವನ್ನು ಮಂಡಿಸಿದರು) ಪ್ರಮುಖ ಸಾಕ್ಷಿಯು ಮೋಸಗಾರನಾಗಿದ್ದು, ಸಣ್ಣಪುಟ್ಟ ಕಳ್ಳತನಗಳಲ್ಲಿ ತೊಡಗಿರುವ ಆತನು ಅನೇಕ ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿರುವುದನ್ನು ಸಾಬೀತುಪಡಿಸಿದರು.” ಈ ಮೊಕದ್ದಮೆಯನ್ನು ಆಲಿಸಿದ ವಿಶೇಷ ನ್ಯಾಯಮೂರ್ತಿಯವರು, “1947ರ ಆಗಸ್ಟ್‍ 14ರಂದು ಜೈಲಿನ ಆವರಣಕ್ಕೆ ಬಂದು ಈ ಮೊಕದ್ದಮೆಗೆ ಸಂಬಂಧಿಸಿದ ಎಲ್ಲರನ್ನೂ ಬಿಡುಗಡೆಗೊಳಿಸಿ, ಕಾರ್ಮಿಕರ ಗೌರವಾನ್ವಿತ ನಾಯಕರ ವಿರುದ್ಧ ಈ ಮೊಕದ್ದಮೆಯನ್ನು ದಾಖಲಿಸಿದ ಸರ್ಕಾರವನ್ನು ಖಂಡಿಸಿದರು."

ಇತ್ತೀಚಿನ ವರ್ಷಗಳಲ್ಲಿ ಈ ಹಿಂದಿನ ಘಟನೆಯ ಪುನರಾವರ್ತನೆಗಳು ವಿಚಿತ್ರ ರೀತಿಯಲ್ಲಿ ಘಟಿಸತೊಡಗಿವೆ. ಈಗಿನ ದಿನಗಳಲ್ಲಿ ಮುಗ್ಧರನ್ನು ಬಿಡುಗಡೆಗೊಳಿಸಲು ವಿಶೇಷ ನ್ಯಾಯಾಧೀಶರು ಜೈಲಿಗೆ ತೆರಳುವ ಹಾಗೂ ಈ ಬಗ್ಗೆ ಸರ್ಕಾರವನ್ನು ಖಂಡಿಸುವ ಘಟನೆಗಳು ನಮಗೆಲ್ಲೂ ಕಂಡುಬರದು.

1948ರಲ್ಲಿ ಸಿಪಿಐ ಪಕ್ಷವನ್ನು ನಿಷೇಧಿಸಿದ ನಂತರ ರಾಮಮೂರ್ತಿ ಹಾಗೂ ಇತರರನ್ನು ಮತ್ತೊಮ್ಮೆ ಜೈಲಿಗೆ ದೂಡಲಾಯಿತು. ಇದು ಸ್ವತಂತ್ರ ಭಾರತದಲ್ಲಿ ಘಟಿಸಿದ ವಿದ್ಯಮಾನ. ಚುನಾವಣೆಗಳು ಹತ್ತಿರದಲ್ಲಿದ್ದು, ಎಡ ಪಂಥೀಯರ ಜನಪ್ರಿಯತೆಯು ಮದ್ರಾಸ್‍ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‍ ಪಕ್ಷಕ್ಕೆ ಭೀತಿಯನ್ನುಂಟುಮಾಡಿತ್ತು.

Left: DMK leader M.K. Stalin greeting Sankariah on his 98th birthday in 2019. Right: Sankariah and V.S. Achuthanandan, the last living members of the 32 who walked out of the CPI National Council meeting in 1964, being felicitated at that party’s 22nd congress in 2018 by party General Secretary Sitaram Yechury
PHOTO • S. Gavaskar
Left: DMK leader M.K. Stalin greeting Sankariah on his 98th birthday in 2019. Right: Sankariah and V.S. Achuthanandan, the last living members of the 32 who walked out of the CPI National Council meeting in 1964, being felicitated at that party’s 22nd congress in 2018 by party General Secretary Sitaram Yechury

ಎಡಕ್ಕೆ: 2019ರಲ್ಲಿ ಡಿಎಂಕೆ ನಾಯಕರಾದ ಎಂ.ಕೆ. ಸ್ಟಾಲಿನ್‍, ಶಂಕರಯ್ಯನವರ 98ನೇ ಹುಟ್ಟುಹಬ್ಬದಂದು ಅವರನ್ನು ಅಭಿನಂದಿಸುತ್ತಿರುವುದು. ಬಲಕ್ಕೆ: 1964ರಲ್ಲಿ ಸಿಪಿಐ ರಾಷ್ಟ್ರೀಯ ಪರಿಷತ್‍ ಸಭೆಯಿಂದ ಹೊರಬಂದ 32 ಸದಸ್ಯರ ಪೈಕಿ ಈಗಲೂ ನಮ್ಮೊಂದಿಗಿರುವ ಶಂಕರಯ್ಯ ಮತ್ತು ವಿ.ಎಸ್‍. ಅಚ್ಯುತಾನಂದನ್‍ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ, ಸೀತಾರಾಮ ಯೆಚೂರಿಯವರು 2018ರಲ್ಲಿ ಆಯೋಜಿಸಲ್ಪಟ್ಟ ಪಕ್ಷದ 22ನೇ ಸಮ್ಮೇಳನದಲ್ಲಿ ಅಭಿನಂದಿಸುತ್ತಿರುವುದು

"ರಾಮಮೂರ್ತಿಯವರು ಬಂಧನದಲ್ಲಿರುವಾಗಲೇ ಕೇಂದ್ರೀಯ ಕಾರಾಗೃಹದ ಅಧೀಕ್ಷಕರ ಮುಂದೆ, ಚುನಾವಣೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಮದ್ರಾಸ್‍ ವಿಧಾನಸಭಾ ಕ್ಷೇತ್ರದ ಮಧುರೈ ಉತ್ತರ ಭಾಗದ ಚುನಾವಣಾ ಕ್ಷೇತ್ರದಿಂದ 1952ರ ಚುನಾವಣೆಗೆ ಅವರು ಸ್ಪರ್ಧಿಸಿದರು. ನನಗೆ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅನುಭವಿ ಕಾಂಗ್ರೆಸ್ಸಿಗರಾದ ಚಿದಂಬರಂ ಭಾರತಿ ಹಾಗೂ ಜಸ್ಟಿಸ್‍ ಪಕ್ಷದ ಪಿ.ಟಿ. ರಾಜನ್ ಸಹ ಚುನಾವಣಾ ಅಭ್ಯರ್ಥಿಗಳಾಗಿದ್ದರು. ರಾಮಮೂರ್ತಿಯವರು ಭರ್ಜರಿ ವಿಜಯವನ್ನು ಗಳಿಸಿದರು. ಅವರಿನ್ನೂ ಜೈಲಿನಲ್ಲಿದ್ದಾಗಲೇ ಫಲಿತಾಂಶವನ್ನು ಘೋಷಿಸಲಾಯಿತು. ಭಾರತಿಯವರು ಎರಡನೇ ಸ್ಥಾನವನ್ನು ಗಳಿಸಿದರು. ರಾಜನ್‍ ತಮ್ಮ ಠೇವಣಿಯನ್ನು ಕಳೆದುಕೊಂಡರು. ವಿಜಯೋತ್ಸವದಲ್ಲಿ ಮೂರು ಲಕ್ಷ ಜನರು ಈ ಗೆಲುವನ್ನು ಸಂಭ್ರಮಿಸಿದರು." ರಾಮಮೂರ್ತಿಯವರು ಸ್ವಾತಂತ್ರ್ಯದ ನಂತರದಲ್ಲಿ ತಮಿಳು ನಾಡು ವಿಧಾನಸಭೆಯ ಮೊದಲ ಪ್ರತಿಪಕ್ಷದ ನಾಯಕನೆನಿಸಿದರು.

1964ರಲ್ಲಿ ಕಮ್ಯುನಿಸ್ಟ್‍ ಪಕ್ಷವು ಇಬ್ಭಾಗವಾದಾಗ ಶಂಕರಯ್ಯನವರು ಹೊಸದಾಗಿ ರಚಿತಗೊಂಡ ಸಿಪಿಐ-ಎಂ ಜೊತೆಗೆ ತಮ್ಮನ್ನು ಗುರುತಿಸಿಕೊಂಡರು. "1964ರ ಸಿಪಿಐ ರಾಷ್ಟ್ರೀಯ ಪರಿಷತ್ತಿನಿಂದ ಹೊರನಡೆದ 32 ಸದಸ್ಯರ ಪೈಕಿ ನಾನು ಹಾಗೂ ವಿ.ಎಸ್‍. ಅಚ್ಯುತಾನಂದನ್‍ ಇಂದಿಗೂ ಜೀವಂತವಾಗಿದ್ದೇವೆ." ಶಂಕರಯ್ಯನವರು ಅಖಿಲ ಭಾರತೀಯ ಕಿಸಾನ್‍ ಸಭಾದ ಪ್ರಧಾನ ಕಾರ್ಯದರ್ಶಿಯಾಗಿ, ನಂತರದಲ್ಲಿ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಹದಿನೈದು ಮಿಲಿಯನ್‍ ಸದಸ್ಯರನ್ನೊಳಗೊಂಡ ಇದು ಭಾರತದ ಅತಿ ದೊಡ್ಡ ರೈತಸಂಘವೆನಿಸಿದೆ. ಸಿಪಿಐ-ಎಂ ಪಕ್ಷದ ತಮಿಳು ನಾಡು ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರು ಪಕ್ಷದ ಕೇಂದ್ರೀಯ ಸಮಿತಿಯಲ್ಲಿ ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿದರು.

"ತಮಿಳು ನಾಡು ವಿಧಾನಸಭೆಯಲ್ಲಿ ತಮಿಳನ್ನು ಪರಿಚಯಿಸಿದವರಲ್ಲಿ ತಾವೇ ಮೊದಲಿಗರು", ಎಂಬ ಬಗ್ಗೆ ಇವರಿಗೆ ಹೆಮ್ಮೆಯಿದೆ. 1952ರಲ್ಲಿ ವಿಧಾನಸಭೆಯಲ್ಲಿ ತಮಿಳಿನಲ್ಲಿ ಮಾತನಾಡುವ ಅವಕಾಶವಿರಲಿಲ್ಲ. ಕೇವಲ ಇಂಗ್ಲಿಷ್ ಭಾಷೆಗೆ ಮಾತ್ರವೇ ಅವಕಾಶವಿದ್ದಿತು. 6 ಅಥವ 7 ವರ್ಷಗಳ ನಂತರ ತಮಿಳಿಗೆ ಅವಕಾಶವನ್ನು ನೀಡಲಾಯಿತಾದರೂ, ನಮ್ಮ ವಿಧಾನಸಭಾ ಸದಸ್ಯರಾದ ಜೀವನಂದಂ ಹಾಗೂ ರಾಮಮುರ್ತಿಯವರು ತಮಿಳಿನಲ್ಲೇ ಮಾತನಾಡುತ್ತಿದ್ದರು.

ಶ್ರಮಿಕ ವರ್ಗ ಹಾಗೂ ರೈತಾಪಿ ಜನರನ್ನು ಕುರಿತ ಶಂಕರಯ್ಯನವರ ಬದ್ಧತೆಯು ಇಂದಿಗೂ ಕ್ಷೀಣಿಸಿಲ್ಲ. "ಚುನಾವಣಾ ಸಂಬಂಧಿತ ರಾಜಕೀಯಕ್ಕೆ ಕಮ್ಯುನಿಸ್ಟರು ಸೂಕ್ತ ಉತ್ತರವನ್ನು ಶೋಧಿಸುತ್ತಾರೆ ಹಾಗೂ ಬೃಹತ್‍ ಪ್ರಮಾಣದ ಜನಾಂದೋಳನವನ್ನು ಆಯೋಜಿಸುತ್ತಾರೆಂಬುದು" ಶಂಕರಯ್ಯನವರ ನಂಬಿಕೆ. ಸಂದರ್ಶನದ ಒಂದೂವರೆ ತಾಸಿನ ನಂತರವೂ 99 ವರ್ಷದ ಅವರಲ್ಲಿ ಪ್ರಾರಂಭದ ಉತ್ಸಾಹ ಹಾಗೂ ಚೈತನ್ಯವು ಹಾಗೆಯೇ ಉಳಿದಿತ್ತು. ಭಗತ್‍ ಸಿಂಗ್‍ನ ಬಲಿದಾನದಿಂದ ಉತ್ತೇಜಿತನಾಗಿ ಬೀದಿಗಿಳಿದಿದ್ದ ಒಂಭತ್ತರ ಪೋರನ ಚೈತನ್ಯವಿನ್ನೂ ಅವರಲ್ಲಿ ಬತ್ತಿಲ್ಲ.

ಗಮನಿಸಿ: ಈ ಕಥೆಯನ್ನು ರಚಿಸುವ ನಿಟ್ಟಿನಲ್ಲಿ, ಒದಗಿಸಲಾದ ಅಮೂಲ್ಯ ಮಾಹಿತಿಗಳಿಗಾಗಿ ಕವಿತ ಮುರಳೀಧರನ್‍ ಅವರಿಗೆ ನನ್ನ ಧನ್ಯವಾದಗಳು.

ಅನುವಾದ: ಶೈಲಜ ಜಿ. ಪಿ.

P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Shailaja G. P.
shailaja1.gp@gmail.com

Shailaja (shailaja1.gp@gmail.com) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.