ಸಮೀರುದ್ದೀನ್ ಶೇಖ್ ಪ್ರಾಚೀನ ಅಹಮದಾಬಾದ್ ನಗರದ ಜನನಿಬಿಡ ಇಕ್ಕಟ್ಟಿನ ರಸ್ತೆಗಳಲ್ಲಿ ದಿನಕ್ಕೆ ಎರಡು ತನ್ನ ಬೈಸಿಕಲ್ ನಲ್ಲಿ ಓಡಾಡುತ್ತಾರೆ. ಜುಹಾಪುರದ ಫತೇವಾಡಿಯಲ್ಲಿರುವ ಅವರ ಮನೆಯಿಂದ ಅವರು ಕೆಲಸ ಮಾಡುವ ತಾಜ್ ಎನ್ವಲಪ್ಸ್ ಗೆ ಹೋಗಲು 13 ಕಿಲೋಮೀಟರ್ ದೂರ ಸೈಕಲ್ ತುಳಿಯುತ್ತಾರೆ. ಅವರು ಪ್ರತಿ ದಾರಿಯಲ್ಲಿ ಬೈಸಿಕಲ್ ಓಡಿಸಲು ಸುಮಾರು ಒಂದು ಗಂಟೆ ತೆಗೆದುಕೊಳ್ಳಬೇಕು. “બાઇક હૈ પર નહીં લે જાતા, ક્યોંકિ પેટ્રોલ નહીં પોસાતા ( ಪೆಟ್ರೋಲ್ ಖರೀದಿಸಲು ಸಾಧ್ಯವಿಲ್ಲದ ಕಾರಣ ನನ್ನಲ್ಲಿರುವ ಮೋಟಾರ್ ಬೈಕನ್ನು ನಾನು ಬಳಸುವುದೇ ಇಲ್ಲ],” ಎನ್ನುತ್ತಾ ಮೆದು ಮಾತಿನ 36 ವರ್ಷ ವಯಸ್ಸಿನ ಸಮೀರುದ್ದೀನ್ ತನ್ನ ಬೈಸಿಕಲ್ ನಿಲ್ಲಿಸುತ್ತಾರೆ.
ಅವರ ದಿನಗೆಲಸ ಖಾಡಿಯಾ ಎಂಬ ಹಳೆಯ ಪಟ್ಟಣದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಒಂದರ ನೆಲಮಾಳಿಗೆಯಲ್ಲಿರುವ 10 x 20 ಕೋಣೆಯಲ್ಲಿ ಆರಂಭವಾಗಿ ಅಲ್ಲೇ ಕೊನೆಗೊಳ್ಳುತ್ತದೆ. ಅವರು ತನ್ನಂತೆಯೇ ಇರುವ ಸುಮಾರು 10 ಮಂದಿಯೊಂದಿಗೆ ಲಕೋಟೆಗಳನ್ನು ತಯಾರಿಸುತ್ತಾರೆ. ಒಂದೇ ದಿನದಲ್ಲಿ 6,000 ರಿಂದ 7,000 ಲಕೋಟೆ ತಯಾರಿಸುವುದು ವೈಯಕ್ತಿಕವಾಗಿ ಅವರ ದೊಡ್ಡ ಸಾಧನೆಯಾಗಿದೆ.
ಈ ಎನ್ವಲಪ್ ಲಕೋಟೆ ತಯಾರಿಕೆಯು ಹೇಳುವಷ್ಟು ಸುಲಭವಲ್ಲ. "ಈ ಕೌಶಲ್ಯವನ್ನು ಕಲಿಯಲು ಒಂದೂವರೆಯಿಂದ ಎರಡು ವರ್ಷಗಳು ಬೇಕಾಗುತ್ತದೆ" ಎಂದು ಸಮೀರುದ್ದೀನ್ ಹೇಳುತ್ತಾರೆ. "ಉಸ್ತಾದ್ (ಹಿರಿಯ ಕುಶಲಕರ್ಮಿ ಮತ್ತು ಮಾರ್ಗದರ್ಶಕ) ನಿಮ್ಮ ಕೆಲಸದ ಗುಣಮಟ್ಟವನ್ನು ಅನುಮೋದಿಸುವವರೆಗೆ ಮತ್ತು ಅದರ ಮೇಲೆ ಅವರ ಮುದ್ರೆಯನ್ನು ಬೀಳುವವರೆಗೆ ಸ್ವತಂತ್ರ ವೇತನಕ್ಕೆ ಅರ್ಹರಾಗಿರುವ ಸ್ವಉದ್ಯೋಗಿಯಾಗಲು ನೀವು ಅರ್ಹರಲ್ಲ" ಎಂದು ಅವರು ವಿವರಿಸುತ್ತಾರೆ.
ಇಲ್ಲಿ ಗುಣಮಟ್ಟದ ಜೊತೆಗೆ ವೇಗ, ನಿಖರತೆ, ಕೌಶಲ್ಯ ಮತ್ತು ಪರಿಕರಗಳ ಬಗ್ಗೆ ಇರುವ ಅರಿವು ಕೂಡ ಸೇರಿಕೊಳ್ಳುತ್ತದೆ. ಪ್ರತೀ ವರ್ಕ್‌ಶಾಪ್‌ನಲ್ಲಿ ಕತ್ತರಿಸಲು ಮತ್ತು ಪಂಚಿಂಗ್ ಮಾಡಲು ಎರಡು ಯಂತ್ರಗಳನ್ನು ಬಳಸುವುದರ ಹೊರತಾಗಿ, ಎಲ್ಲಾ ಕೆಲಸಗಳನ್ನು ಕೈಯಿಂದಲೇ ಮಾಡಲಾಗುತ್ತದೆ.
ಈ ಯಂತ್ರಗಳನ್ನು ಹೆಚ್ಚಾಗಿ ವರ್ಕ್‌ಶಾಪ್‌ನ ಮಾಲೀಕರು ನಿರ್ವಹಿಸುತ್ತಾರೆ. ಇವನ್ನು ಬಳಸಿ ಕಾಗದದ ದೊಡ್ಡ ಹಾಳೆಗಳನ್ನು ಚಿಕ್ಕದಾದ ಪೂರ್ವ-ನಿರ್ಧರಿತ ಗಾತ್ರಗಳಿಗೆ ಕತ್ತರಿಸಲಾಗುತ್ತದೆ ಮತ್ತು ಎನ್ವಲಪ್ ಕಾಗದಗಳನ್ನು ವಿವಿಧ ಗಾತ್ರಗಳಲ್ಲಿ ಅಚ್ಚು ಹಾಕಲು ವಿಶೇಷ ಡೈಯೊಂದನ್ನು ಬಳಸಲಾಗುತ್ತದೆ. ಕೆಲಸಗಾರರು ಕಾಗದಗಳನ್ನು ಎಣಿಸುತ್ತಾ ಮಡಚುವುದು, ಅಂಟಿಸುವುದು, ಸೀಲಿಂಗ್ ಮತ್ತು ಪ್ಯಾಕಿಂಗ್ ಸೇರಿದಂತೆ ಒಂದೇ ಬಾರಿಗೆ ನೂರು ಕೆಲಸಗಳನ್ನು ಮಾಡುತ್ತಾರೆ.


ಎಡ: ಸಮೀರುದ್ದೀನ್ ಶೇಖ್ ಹಳೆಯ ನಗರದ ಮೂಲಕ ಖಾಡಿಯಾದಲ್ಲಿರುವ ತಾಜ್ ಎನ್ವಲಪ್ಸ್ ಗೆ ಸೈಕಲ್ ತುಳಿಯುತ್ತಾ ಪ್ರಯಾಣಿಸುತ್ತಿರುವುದು. ಬಲ: ಶಾಪಿಂಗ್ ಕಾಂಪ್ಲೆಕ್ಸ್‌ನ ನೆಲಮಾಳಿಗೆಯಲ್ಲಿರುವ ತಾಜ್ ಎನ್ವಲಪ್ಸ್ ವರ್ಕ್‌ಶಾಪ್‌ನ ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿರುವ ಕುಶಲಕರ್ಮಿಗಳು
ಪ್ರತೀ ಪ್ರಕ್ರಿಯೆಯಲ್ಲೂ ನಿಖರವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ಲಕೋಟೆಯ ಪ್ರತಿಯೊಂದು ಭಾಗಕ್ಕೂ ಪ್ರತ್ಯೇಕ ಹೆಸರಿಡಲಾಗುತ್ತದೆ - ಮತು (ಮೇಲಿನ ತುದಿ), ಪೆಂಡಿ (ಕೆಳಗಿನ ಫ್ಲಾಪ್), ಧಾಪಾ (ಗೋಂದು ಅಂಟಿಸುವ ಬದಿಯ ಫ್ಲಾಪ್), ಖೋಲಾ (ಅಂಟು ಹಾಕಿರುವ ಫ್ಲಾಪ್ ಮೇಲೆ ಅಂಟಿಸಲಾದ ಬದಿಯ ಫ್ಲಾಪ್). ಅಲ್ಲದೇ ಪ್ರಕ್ರಿಯೆಯ ಪ್ರತಿಯೊಂದು ಹಂತಕ್ಕೂ ಸ್ಪಷ್ಟವಾದ ಹೆಸರಿಡಲಾಗಿದ್ದು ಕಟ್ಟುನಿಟ್ಟಾಗಿ ಅನುಸರಿಸಬೇಕು; ಉಪಕರಣಗಳನ್ನು ಎಚ್ಚರಿಕೆಯಿಂದ ಮತ್ತು ಅರಿವಿನಿಂದ ಬಳಸಬೇಕು. ಇಲ್ಲದಿದ್ದರೆ ಅಪಾಯಕಾರಿ ಗಾಯವಾಗಬಹದು.
ಸೈಡ್ ಫ್ಲಾಪ್‌ಗಳು ಮಡಿಚಿದಾಗ ಕೆಲಸಗಾರರು ತಮ್ಮ ಮುಷ್ಟಿಯನ್ನು ಬಳಸುತ್ತಾರೆ ಮತ್ತು ನಂತರ ಅಚ್ಚುಕಟ್ಟಾಗಿ ಚೂಪಾದ ನೆರಿಗೆಗಳನ್ನು ರಚಿಸಲು ಪತ್ತರ್ (ಕಲ್ಲು) ಎಂಬ ಸಾಧನವನ್ನು ಬಳಸುತ್ತಾರೆ. ಈ ‘ಮಡಚುವ ಕಲ್ಲುಗಳನ್ನು’ ಒಂದು ಕಾಲದಲ್ಲಿ ರುಬ್ಬುವ ಕಲ್ಲಿನಿಂದ ಮಾಡಲಾಗುತ್ತಿತ್ತು. ಆದರೆ ಈಗ ಅದರ ಬದಲಿಗೆ ಭಾರವಾದ ಕಬ್ಬಿಣದ ಚಪ್ಪಡಿಯನ್ನು ಬಳಸಲಾಗಿದೆ. "ನಾನು ಈ ಪ್ರಕ್ರಿಯೆಯನ್ನು ಕಲಿಯುತ್ತಿದ್ದಾಗ ಪತ್ತರ್ ನನ್ನ ಬೆರಳಿಗೆ ಬಡಿದಿತ್ತು" ಎಂದು 51 ವರ್ಷ ಪ್ರಾಯದ ಅಬ್ದುಲ್ ಮುತ್ತಲಿಬ್ ಅನ್ಸಾರಿ ಹೇಳುತ್ತಾರೆ. "ನನ್ನ ಬೆರಳಿನಿಂದ ರಕ್ತವು ಉಕ್ಕಿ ನನ್ನ ಹತ್ತಿರ ಇದ್ದ ಗೋಡೆಯ ಮೇಲೆ ಚಿಮ್ಮಿತು. ಆಗ ಉಸ್ತಾದರು, ನಾನು ನಿಪುಣ ಕುಶಲಕರ್ಮಿಯಾಗಬೇಕಾದರೆ ದೈಹಿಕ ಬಲಕ್ಕಿಂತ ಟೆಕ್ನಿಕ್ ಗಳನ್ನು ಬಳಸುವುದನ್ನು ಕಲಿಯಬೇಕು ಎಂದು ಹೇಳಿದ್ದರು," ಎಂದು ಅವರು ಹೇಳುತ್ತಾರೆ.
ಈ 'ಕಲ್ಲು' ಸುಮಾರು ಒಂದು ಕಿಲೋಗ್ರಾಂ ತೂಗುತ್ತದೆ. "ಸಾಮಾನ್ಯ ಎನ್ವಲಪ್ ತಯಾರಿಸಲು ನೀವು ಅದನ್ನು ನಾಲ್ಕರಿಂದ ಐದು ಬಾರಿ ಬಳಸಬೇಕಾಗುತ್ತದೆ" ಎಂದು ಅಬ್ದುಲ್ ಮುತ್ತಬಿಲ್ ಅನ್ಸಾರಿ ವಿವರಿಸುತ್ತಾರೆ. "ಕಾಗದದ ದಪ್ಪದ ಮೇಲೆ ನಿಮ್ಮ ಟೆಕ್ನಿಕ್ ಕೂಡ ಬದಲಾಗಬೇಕು. ನೀವು ಕಲ್ಲನ್ನು ಅನ್ನು ಎಷ್ಟು ಎತ್ತರಕ್ಕೆ ಎತ್ತುತ್ತೀರಿ, ನೀವು ಎಷ್ಟು ಬಲವಾಗಿ ಹೊಡೆಯುತ್ತೀರಿ ಮತ್ತು ಎಷ್ಟು ಬಾರಿ ಹೊಡೆದಿದ್ದೀರಿ ಎಂಬೆಲ್ಲವನ್ನೂ ಮಾಡುವುದರ ಮೂಲಕ ಮಾತ್ರ ನೀವು ಕಲಿಯಬಹುದು,” ಎಂದು 52 ವರ್ಷದ ಅಬ್ದುಲ್ ಗಫರ್ ಅನ್ಸಾರಿ ಹೇಳುತ್ತಾರೆ. “ಒಂದು ಎನ್ವಲಪ್ ಇಡೀ ಪ್ರಕ್ರಿಯೆಯಲ್ಲಿ 16 ರಿಂದ 17 ಬಾರಿ ನಮ್ಮ ಕೈಗಳ ಮೂಲಕ ಹಾದುಹೋಗುತ್ತದೆ. ಪ್ರತಿದಿನವೂ ನಮ್ಮ ಬೆರಳುಗಳು ತುಂಡು ಆಗುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ಅಂಟು ನಿಮ್ಮ ಕಿತ್ತುಹೋಗಿರುವ ಬೆರಳುಗಳನ್ನು ಮುಟ್ಟಿದರೆ, ಅದು ಉರಿಯುತ್ತದೆ,” ಅವರು ಹೇಳುತ್ತಾರೆ.
ಹೊದಿಕೆ ತಯಾರಕ 64 ವರ್ಷ ಪ್ರಾಯದ ಮುಸ್ತಾನ್‌ಸಿರ್ ಉಜ್ಜೈನಿ ಅವರು ತಮ್ಮ ಬೆರಳ ಗಾಯದ ಮೇಲೆ ಬಿಸಿ ಕೋಕಮ್ ಎಣ್ಣೆಯನ್ನು ಹಚ್ಚುತ್ತಾರೆ. ಇನ್ನು ಕೆಲವರು ನೋವು ಕಡಿಮೆಯಾಗಲು ವ್ಯಾಸಲೀನ್ ಅಥವಾ ತೆಂಗಿನೆಣ್ಣೆಯನ್ನು ಬಳಸುತ್ತಾರೆ. ಒಬ್ಬರು ಕೆಲಸ ಮಾಡುವ ಕಾಗದದ ವಿಧವನ್ನು ಆಧರಿಸಿ ಕೆಲಸದ ಸವಾಲು ಕೂಡ ಬದಲಾಗುತ್ತದೆ. “ಕೆಲವೊಮ್ಮೆ ನಮಗೆ ಕಡಕ್ ಮಾಲ್ [120 GSM ನ ಆರ್ಟ್ ಪೇಪರ್] ಸಿಕ್ಕಿದರೆ, ನಮ್ಮ ಕೈಗಳು ನೋಯುತ್ತವೆ. ನಂತರ ನಾನು ಅವುಗಳನ್ನು ಏಳು-ಎಂಟು ನಿಮಿಷಗಳ ಕಾಲ ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಮುಳುಗಿಸುತ್ತೇನೆ,” ಎಂದು ಸೋನಾಲ್ ಎನ್ವಲಪ್ಸ್‌ನ ಮಹಮ್ಮದ್ ಆಸಿಫ್ ಹೇಳುತ್ತಾರೆ. "ವಾತಾವರಣ ತಣ್ಣಗಾದಾಗ ನಮ್ಮ ಕೈಗಳೂ ನೋಯುತ್ತವೆ. ನಂತರ ನೋವು ಕಡಿಮೆ ಮಾಡಲು ನಾನು ಬಿಸಿನೀರನ್ನು ಬಳಸುತ್ತೇನೆ,” ಎಂದು ಸಮೀರುದ್ದೀನ್ ಶೇಖ್ ಹೇಳುತ್ತಾರೆ.


ಎಡ: ಮೊಹಮ್ಮದ್ ಆಸಿಫ್ ಶೇಖ್ ಸೋನಾಲ್ ಎನ್ವಲಪ್ ಗಳಲ್ಲಿ ಮಡಿಕೆಯನ್ನು ರಚಿಸಲು ಧಾಪಾ ಮೇಲೆ ಕಲ್ಲಿನಿಂದ ಹೊಡೆಯುತ್ತಿರುವುದು. ಬಲ: ಮುಸ್ತಾನ್ಸೀರ್ ಉಜ್ಜೈನಿ ತನ್ನ ನೋಯುತ್ತಿರುವ ಕೈಗಳ ಮೇಲೆ ಬೆಚ್ಚಗಿನ ಕೋಕಮ್ ಎಣ್ಣೆಯನ್ನು ಹಚ್ಚುತ್ತಿರುವುದು
ಕೆಲಸ ಮಾಡುವಾಗ ಕುಶಲಕರ್ಮಿಗಳು ತುಂಬಾ ಗಂಟೆಗಳ ಕಾಲ ನೆಲದ ಮೇಲೆ ಕುಳಿತುಕೊಳ್ಳಬೇಕು. "ನಾವು 9:30 ಕ್ಕೆ ಕೆಲಸಕ್ಕೆ ಕುಳಿತುಕೊಳ್ಳುತ್ತೇವೆ ಮತ್ತು ಊಟದ ಸಮಯ ಒಂದು ಗಂಟೆಯಾಗುವ ವರೆಗೆ ಎದ್ದೇಳುವುದಿಲ್ಲ. ನಾನು ಸಂಜೆ ಎದ್ದಾಗ ನನ್ನ ಬೆನ್ನು ನೋಯುತ್ತಿರುತ್ತದೆ," ಎಂದು ಸಮೀರುದ್ದೀನ್ ಹೇಳುತ್ತಾರೆ. ಅವರು ಹೀಗೆ ಒಂದೇ ಭಂಗಿಯಲ್ಲಿ ಕುಳಿತು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವ ಕಾರಣ ಕಾಲುಗಳ ಮಂಡಿಗಳ ಚರ್ಮ ದಪ್ಪವಾಗಿದೆ. "ಎಲ್ಲರಿಗೂ ಹೀಗಾಗುತ್ತದೆ," ಎಂದು ಅವರು ಹೇಳುತ್ತಾರೆ, ಏಕೆಂದರೆ ಅವರೆಲ್ಲರೂ ನೆಲದ ಮೇಲೆ ಹೀಗೆ ಕಾಲುಗಳನ್ನು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. "ನಾನು ನನ್ನ ಕಾಲು ನೋವು ಕಡಿಮೆ ಮಾಡಲು ಪ್ರಯತ್ನಿಸಿದರೆ ಬೆನ್ನು ನೋವು ಶುರುವಾಗುತ್ತದೆ," ಎಂದು ಅವರು ಹೇಳುತ್ತಾರೆ.
ಗಾಯ ಮತ್ತು ಸುಟ್ಟಗಾಯಗಳ ಹೊರತಾಗಿಯೂ ಈ ಕೆಲಸದಿಂದ ಕಡಿಮೆ ಆದಾಯ ಬರುತ್ತದೆ. 33 ವರ್ಷದ ಮೊಹಸೀನ್ ಖಾನ್ ಪಠಾಣ್‌ಗೆ ಆತಂಕ ಉಂಟಾಗಲು ಅವರೇ ಹೇಳುವ ಕಾರಣ ಏನೆಂದರೆ, “ನನ್ನ ಕುಟುಂಬವು ನನ್ನ [ನನ್ನ ಆದಾಯ] ಮೇಲೆ ಮಾತ್ರ ಅವಲಂಬಿತವಾಗಿದೆ. ಮನೆ ಬಾಡಿಗೆ 6,000 ರೂ. ನಾನು ದಿನಕ್ಕೆ 50 ರೂಪಾಯಿಗಳನ್ನು ಚಹಾ ಮತ್ತು ತಿಂಡಿಗಳಿಗೆ ಮತ್ತು ಇನ್ನೊಂದು 60 ರೂಪಾಯಿಗಳನ್ನು ಬಸ್ ಮತ್ತು ಆಟೋಗಾಗಿ ಖರ್ಚು ಮಾಡುತ್ತೇನೆ." ಅವರ ನಾಲ್ಕು ವರ್ಷದ ಮಗಳು ಇತ್ತೀಚೆಗೆ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ್ದಾಳೆ. "ಶಾಲಾಶುಲ್ಕವು ವರ್ಷಕ್ಕೆ 10,000 ರೂಪಾಯಿ," ಎಂದು ಅವರು ಲಕೋಟೆಗಳನ್ನು ತಯಾರಿಸುತ್ತಾ ಚಿಂತೆಯಿಂದ ಹೇಳುತ್ತಾರೆ.
ಸಮೀರುದ್ದೀನ್ ಅವರ ಕುಟುಂಬದಲ್ಲಿ ಅವರ ಹೆಂಡತಿ, ಮೂರು ಮಕ್ಕಳು ಮತ್ತು ಅವನ ವಯಸ್ಸಾದ ತಂದೆ ಸೇರಿ ಆರು ಜನ ಇದ್ದಾರೆ. "ಮಕ್ಕಳು ಬೆಳೆಯುತ್ತಿದ್ದಾರೆ, ಮತ್ತು ಈ ಎನ್ವಲಪ್ ತಯಾರಿಕೆಯಿಂದ ಬರುವ ಆದಾಯ ಏನಕ್ಕೂ ಸಾಕಾಗುವುದಿಲ್ಲ. ನಾನು ಮನೆಯನ್ನು ನಡೆಸಬಲ್ಲೆ ಆದರೆ ಹಣ ಉಳಿಸಲು ಸಾಧ್ಯವೇ ಇಲ್ಲ," ಎನ್ನುತ್ತಾರೆ. ಆಟೊರಿಕ್ಷಾ ಖರೀದಿಸಿದರೆ ಒಳ್ಳೆಯ ಆದಾಯ ಬರುತ್ತದೆ ಎಂದು ಭಾವಿಸಿ ಪರ್ಯಾಯ ಉದ್ಯೋಗಗಳ ಬಗ್ಗೆ ಯೋಚನೆ ಮಾಡಿ ಆಟೋ ಪರವಾನಗಿಗೆ ಪ್ರಯತ್ನಿಸುತ್ತಿದ್ದಾರೆ. “ಲಕೋಟೆ ತಯಾರಿಸುವ ಕೆಲಸದಿಂದ ಬರುವ ಆದಾಯಕ್ಕೆ ಒಂದು ಸ್ಥಿರತೆ ಇಲ್ಲ. ಕೆಲಸ ಇಲ್ಲದ ಕೆಲವು ದಿನ ಮಧ್ಯಾಹ್ನ ಎರಡ್ಮೂರು ಗಂಟೆಗೆ ಕೆಲಸ ಮುಗಿಸುತ್ತೇವೆ. ನೀವೇ ನೋಡಿ, ನಾವೆಲ್ಲರೂ ಕಮಿಷನ್ ಮೇಲೆ ಕೆಲಸ ಮಾಡುತ್ತೇವೆ. ನಮಗೆ ಯಾವುದೇ ನಿಗದಿತ ಸಂಬಳವಿಲ್ಲ, ”ಎಂದು ಅವರು ಹೇಳುತ್ತಾರೆ.


ಕೆಲಸಗಾರರು ತಮ್ಮ ಹೆಚ್ಚಿನ ಕೆಲಸದ ಸಮಯದಲ್ಲಿ ಇದೇ ರೀತಿಯಲ್ಲಿ ಕುಳಿತುಕೊಳ್ಳುತ್ತಾರೆ. (ಎಡ) ಸಮೀರುದ್ದೀನ್ ಶೇಖ್ ತನ್ನ ಒಂದು ಕಾಲನ್ನು ಮಡಚಿ ತುಂಬಾ ಹೊತ್ತು ಕುಳಿತುಕೊಳ್ಳುವ ಕಾರಣ ಅವರ ಎಡ ಪಾದದ ಮೇಲೆ ಕಾಲ್ಯುಸ್, ಹುಣ್ಣುಗಳಾಗಿವೆ.. (ಬಲ) ಮುಸ್ತಾನ್ಸೀರ್ ಉಜ್ಜೈನಿ ಮತ್ತು ಇಬ್ಬರು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿರುವುದು
ಎನ್ವಲಪ್ ಕೆಲಸಗಾರರ ಒಕ್ಕೂಟವನ್ನು 1988 ರಲ್ಲಿ ಸ್ಥಾಪಿಸಲಾಯಿತು. ಇದು ಕೆಲ ಸಮಯದ ವರೆಗೆ ಸಕ್ರಿಯವಾಗಿತ್ತು, ಮತ್ತೆ ನಿಷ್ಕ್ರಿಯವಾಗಿ ಕೊನೆಗೆ ಬಿದ್ದೇ ಹೋಯಿತು. ಕಾರ್ಮಿಕರಿಗೆ ಒಕ್ಕೂಟ ಕೆಲಸ ನಿಲ್ಲಿಸಿದ ನಿಖರವಾದ ದಿನಾಂಕ ತಿಳಿದಿಲ್ಲ. ಆದರೆ ಕೆಲವು ವರ್ಷಗಳ ನಂತರ ಅವರಲ್ಲಿ ಕೆಲವರು ಸಂಸ್ಥೆಯನ್ನು ಪುನರುಜ್ಜೀವನಗೊಳಿಸಿದರು. ವರ್ಕ್ ಶಾಪ್ ನ ಮಾಲೀಕರೊಂದಿಗೆ ಸೇರಿಕೊಂಡು ಹಣದುಬ್ಬರದ ಸಮಯದಲ್ಲಿ ಕಾರ್ಮಿಕರಿಗೆ ಶೇಕಡಾ 10 ವೇತನ ಹೆಚ್ಚಳ, ಬೋನಸ್ ಮತ್ತು ಕೆಲಸಕ್ಕೆ ಅನುಗುಣವಾಗಿ ರಜೆ ನೀಡಲು ಹಾಗೂ ವಾರ್ಷಿಕವಾಗಿ ವೇತನ ಹೆಚ್ಚಿಸಲು ನಿರ್ಧರಿಸಲಾಗಿತ್ತು.
ಅಹಮದಾಬಾದ್‌ನಲ್ಲಿರುವ ಈ ಉದ್ದಿಮೆಯಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಿದೆ. ಇಲ್ಲಿ ಒಬ್ಬ ಮಹಿಳೆ ಮಾತ್ರ ಎನ್ವಲಪ್ ತಯಾರಿಸುವ ಕುಶಲಕರ್ಮಿಯಾಗಿ ಕೆಲಸ ಮಾಡುತ್ತಾರೆ.
ತಯಾರಿಸಿದ ಲಕೋಟೆಗಳ ಸಂಖ್ಯೆ ಮತ್ತು ಅವುಗಳ ಗಾತ್ರ ಹಾಗೂ ದಪ್ಪವನ್ನು ಅವಲಂಸಿ ವೇತನವನ್ನು ವಾರಕ್ಕೊಮ್ಮೆ ಪಾವತಿಸಲಾಗುತ್ತದೆ. ಸಾಮಾನ್ಯ ಕಾಗದದಿಂದ ಮಾಡಿದ 1,000 ಲಕೋಟೆಗಳಿಗೆ ಸುಮಾರು ರೂ. 350, ಮತ್ತು ಆರ್ಟ್ ಪೇಪರ್‌ನಿಂದ ತಯಾರಿಸಿದ ಲಕೋಟೆಗೆ ರೂ. 489 ನೀಡಲಾಗುತ್ತಿದೆ. ಎನ್ವಲಪ್ ನ ಪ್ರಕಾರ, ಅವುಗಳನ್ನು ತಯಾರಿಸುವ ವೇಗ ಮತ್ತು ಸೀಸನ್ ಗಳಲ್ಲಿ ಬರುವ ಬೇಡಿಕೆಗಳನ್ನು ಅವಲಂಬಿಸಿ ಕೆಲಸಗಾರನು ದಿನಕ್ಕೆ 2,000 ರಿಂದ 6,000 ಲಕೋಟೆಗಳನ್ನು ತಯಾರಿಸಬಹುದು.
ಕಛೇರಿಗಳಲ್ಲಿ ಬಳಸುವ 11 x 5 ಇಂಚುಗಳ 100 GSM (ಗ್ರಾಂ ಪ್ರತಿ ಚದರ ಮೀಟರ್) ತೂಕದ ಲಕೋಟೆ ಐದು ರೂಪಾಯಿಗೆ ಮಾರಾಟವಾಗುತ್ತದೆ.
100 GSM ಗುಣಮಟ್ಟದ 1,000 ಲಕೋಟೆಗಳನ್ನು ತಯಾರಿಸುವ ಕೆಲಸಗಾರನಿಗೆ ಸುಮಾರು ರೂ. 100 ವೇತನ ನೀಡಲಾಗುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ ಅವನು ಮಾರಾಟದ ಬೆಲೆಯ ಐವತ್ತನೇ ಒಂದು ಭಾಗವನ್ನು ಪಡೆಯುತ್ತಾನೆ.
ಒಬ್ಬ ಕುಶಲಕರ್ಮಿ ನೂರು ರೂಪಾಯಿ ಗಳಿಸಲು ಸುಮಾರು ಎರಡು ಗಂಟೆ ಕೆಲಸ ಮಾಡಬೇಕಾಗುತ್ತದೆ.

ತಾಜ್ ಎನ್ವಲಪ್ಸ್ ನ ಮಾಲೀಕ ಎಸ್.ಕೆ.ಶೇಖ್ ಅವರು ಯಂತ್ರದಲ್ಲಿ ಕಾಗದವನ್ನು ಕತ್ತರಿಸುವ ಮೊದಲು ಆಯತಾಕಾರದ ಹಾಳೆಗಳ ಮೇಲೆ ಡೈಯನ್ನು ಜೋಡಿಸುತ್ತಿರುವುದು

ಮಕ್ಬುಲ್ ಅಹ್ಮದ್ ಜಮಾಲುದ್ದೀನ್ ಶೇಖ್ ಅವರು ಓಂ ಟ್ರೇಡರ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಅವರು ಫೋಲ್ಡಿಂಗ್ ಗೆ ಸಿದ್ಧವಾಗಿರುವ ಕಾಗದದ ಹಾಳೆಗಳನ್ನು ಬೇಕಾದ ಗಾತ್ರ ಮತ್ತು ಆಕಾರಕ್ಕೆ ಕತ್ತರಿಸುವ ಪಂಚಿಂಗ್ ಯಂತ್ರವನ್ನು ನಿರ್ವಹಿಸುತ್ತಾರೆ. ಹೆಚ್ಚಿನ ವರ್ಕ್ ಶಾಪ್ ಗಳ ಮಾಲೀಕರು ಕತ್ತರಿಸುವ ಮತ್ತು ಪಂಚ್ ಮಾಡುವ ಯಂತ್ರಗಳನ್ನು ಸ್ವತಃ ತಾವೇ ನಿರ್ವಹಿಸುತ್ತಾರೆ

ವಿವಿಧ ಆಕಾರಗಳು ಮತ್ತು ಗಾತ್ರಗಳ ಡೈ ಎಂದು ಕರೆಯಲಾಗುವ ಲೋಹದ ಚೌಕಟ್ಟುಗಳನ್ನು ಪಂಚಿಂಗ್ ಯಂತ್ರಗಳಲ್ಲಿ ಬಳಸಲಾಗುತ್ತದೆ

ಹಾಳೆಗಳನ್ನು ಎಣಿಸುತ್ತಿರುವ ಮತ್ತು ಮಡಚಲು ಸಿದ್ಧವಾದ 100 ಎನ್ವಲಪ್ ಗಳ ರಾಶಿಗಳೊಂದಿಗೆ ಓಂ ಟ್ರೇಡರ್ಸ್‌ನ ಕುಶಲಕರ್ಮಿಗಳು

ಕೆಲಸಗಾರರು ಎನ್ವಲಪ್ ಹಾಳೆಗಳಿಗೆ ಆಕಾರವನ್ನು ನೀಡುವುದನ್ನು ಮಡಚುವುದರೊಂದಿಗೆ ಆರಂಭಿಸುತ್ತಾರೆ. ಪ್ರತಿಯೊಂದು ಬಡಿತವನ್ನು ವಿಶಿಷ್ಟ ಹೆಸರಿನಿಂದ ಕರೆಯಲಾಗುತ್ತದೆ - ಮಾಥು (ಮೇಲ್ಭಾಗದ ಫ್ಲಾಪ್) , ಪೆಂಡಿ (ಕೆಳಗಿನ ಫ್ಲಾಪ್) , ಧಾಪಾ (ಬಲ ಫ್ಲಾಪ್ , ಅಲ್ಲಿ ಅಂಟು ಹಚ್ಚಲಾಗುತ್ತದೆ) , ಖೋಲಾ (ಫ್ಲಾಪ್ ಮಾಡುವುದು). ತಾಜ್ ಎನ್ವಲಪ್ಸ್‌ನ ಭಿಕ್‌ಭಾಯ್ ರಾವಲ್ ಕ್ಷ-ಕಿರಣವನ್ನು ಹಿಡಿದಿಡಲು ದೊಡ್ಡ ಲಕೋಟೆಯ ಪೆಂಡಿಯನ್ನು ಮಡಚುತ್ತಿರುವುದು

ಸಮೀರ್ ಎನ್ವಲಪ್ಸ್ ನ ಅಬ್ದುಲ್ ಮಜೀದ್ ಅಬ್ದುಲ್ ಕರೀಮ್ ಶೇಖ್ (ಎಡ) ಮತ್ತು ಯೂಸುಫ್ ಖಾನ್ ಚೋಟುಖಾನ್ ಪಠಾಣ್ ಅವರು ತಮ್ಮ ಅಂಗೈಗಳ ಬದಿಯನ್ನು ಮಡಚಿದ ಧಾಪಾ ಮತ್ತು ಪೆಂಡಿಯ ಮೇಲೆ ತೀಕ್ಷ್ಣವಾದ ನೆರಿಗೆ ಮಾಡಲು ಬಳಸುತ್ತಿದ್ದಾರೆ

ಧ್ರುವ್ ಎನ್ವಲಪ್ಸ್‌ನ ಮೊಹಮ್ಮದ್ ಇಲ್ಯಾಸ್ ಶೇಖ್ , ಸೈಡ್ ಫ್ಲಾಪ್‌ನಲ್ಲಿ ತನ್ನ ಮುಷ್ಟಿಯನ್ನು ಬಳಸುತ್ತಿದ್ದಾರೆ. ಅವರು ಏಕಕಾಲದಲ್ಲಿ 100 ಲಕೋಟೆಗಳ ಮೇಲೆ ಕೆಲಸ ಮಾಡುತ್ತಾರೆ. ಅವರ ಹುಣ್ಣಾಗಿರುವ ಅಂಗೈಯ ಭಾಗವನ್ನು ಬಿಟ್ಟು 16 ಬಾರಿ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕಾಗುತ್ತದೆ

ತಾಜ್ ಎನ್ವಲಪ್ ನಲ್ಲಿ ಅಬ್ದುಲ್ ಗಫಾರ್ ಗುಲಾಭಾಯಿ ಮನ್ಸೂರಿ ಅವರು ಕೆಳಭಾಗದ ಫ್ಲಾಪ್‌ನಲ್ಲಿ ಮಾಲ್ ತೊಡ್ವಾನೋ ಪತ್ತರ್ (ಒಂದು ರೀತಿಯ ಮಡಚುವ ಕಲ್ಲು) ಅನ್ನು ಬಳಸುತ್ತಾರೆ. ಈ ' ಕಲ್ಲು ' ವಾಸ್ತವವಾಗಿ ಸುಮಾರು ಒಂದೂವರೆ ಕಿಲೋಗ್ರಾಂ ತೂಕದ ಕಬ್ಬಿಣದ ತುಂಡು ಮತ್ತು ಈ ಪ್ರಕ್ರಿಯೆಯಲ್ಲಿ ಇದು ಅತ್ಯಗತ್ಯ ಸಾಧನವಾಗಿದೆ

ಕುಶಲಕರ್ಮಿಗಳು ಲಕೋಟೆಗಳ ಸ್ಟಾಕ್ನ ಬಲಭಾಗವನ್ನು ಒಂದು ಬದಿಗೆ ಎಳೆಯಲು , ಅಂಟು ಹಚ್ಚಲು ಸುಲಭವಾಗುವ ಸಿಲಾಸ್ ಎಂದು ಕರೆಯಲ್ಪಡುವ ಮರದ ಉಪಕರಣವನ್ನು ಬಳಸುತ್ತಾರೆ

ತಾಜ್ ಎನ್ವಲಪ್ಸ್‌ನಲ್ಲಿರುವ ಅಬ್ದುಲ್ ಮುತ್ತಲಿಬ್ ಮೊಹಮ್ಮದ್ ಇಬ್ರಾಹಿಂ ಅನ್ಸಾರಿ ಅವರು ರೆಕ್ಸಿನ್ ತುಂಡೊಂದರ ಒಳಗೆ ಕಟ್ಟಲಾಗಿರುವ ತೆಳುವಾದ ಬಟ್ಟೆಯ ಪಟ್ಟಿಗಳನ್ನು ಬಳಸಿ ತಯಾರಿಸಿದ ಬಂಡಲ್ ತರಹದ ಉಪಕರಣ ಪುಟ್ಲೋವನ್ನು ಬಳಸಿಕೊಂಡು ಕವರ್‌ಗಳ ಮೇಲೆ ಲೈ (ಸಂಸ್ಕರಿಸಿದ ಹಿಟ್ಟು ಅಥವಾ ಹುಣಸೆ ಬೀಜದಿಂದ ಮಾಡಿದ ಅಂಟು) ಅನ್ನು ಹಚ್ಚುತ್ತಿದ್ದಾರೆ

ಸಮೀರುದ್ದೀನ್ ಶೇಖ್ ಲಕೋಟೆಯ ಕಾಗದದ ಬಲ ಫ್ಲಾಪ್ ಧಾಪಾಕ್ಕೆ ಅಂಟನ್ನು ಹಚ್ಚುತ್ತಿದ್ದಾರೆ. ಅವರು ಏಕಕಾಲದಲ್ಲಿ 100 ಲಕೋಟೆಗಳ ಕೆಲಸ ಮಾಡುತ್ತಾರೆ

ತಾಜ್ ಎನ್ವಲಪ್ಸ್ ನಲ್ಲಿ ಭಿಖಾಭಾಯಿ ರಾವಲ್ ಅವರು ಅಂಟಿಕೊಂಡಿರುವ ಬಲ ಫ್ಲಾಪ್ ಅನ್ನು ಖೋಲಾ ಮೇಲೆ ಅಂಟಿಸಲು ಎಡ ಫ್ಲಾಪ್ ನ ಕಾಗದಗಳನ್ನು ಮಡಚುತ್ತಿದ್ದಾರೆ

ಧ್ರುವ್ ಎನ್ವಲಪ್‌ನಲ್ಲಿ ಮೊಹಮ್ಮದ್ ಇಲ್ಯಾಸ್ ಶೇಖ್ ಅಂಟು ಹಾಕಿರುವ ಪೆಂಡಿಯನ್ನು ಸರಿಪಡಿಸುವ ಮೂಲಕ ಕವರ್‌ನ ಕೆಳಭಾಗವನ್ನು ಮುಚ್ಚುತ್ತಾರೆ

ಓಂ ಟ್ರೇಡರ್ಸ್‌ನಲ್ಲಿ ಕುಶಲಕರ್ಮಿಗಳು ಊಟಕ್ಕೆ ವಿರಾಮ ತೆಗೆದುಕೊಳ್ಳುತ್ತಿರುವುದು. ಈ ಸಮಯದಲ್ಲಿ ಮಾತ್ರ ಅವರು ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ

ಅಬ್ದುಲ್ ಮುತ್ತಲಿಬ್ ಮೊಹಮ್ಮದ್ ಇಬ್ರಾಹಿಂ ಅನ್ಸಾರಿ ಅವರು ತಾಜ್ ಎನ್ವಲಪ್ಸ್‌ನಲ್ಲಿ ತಯಾರಿಸುತ್ತಿರುವ ದೊಡ್ಡ ಗಾತ್ರದ ಲ್ಯಾಮಿನೇಶನ್ ಕವರ್ ಅನ್ನು ತೋರಿಸುತ್ತಿರುವುದು

ಸರಾಸರಿ ಒಬ್ಬ ಕೆಲಸಗಾರ 100 ಲಕೋಟೆಗಳನ್ನು ಸಿದ್ಧಪಡಿಸಲು ಆರರಿಂದ ಏಳು ನಿಮಿಷಗಳನ್ನು ತೆಗೆದುಕೊಳ್ಳುತ್ತಾನೆ. ಶಾರದಾಬೆನ್ ರಾವಲ್ (ಎಡ) ಕಳೆದ 34 ವರ್ಷಗಳಿಂದ ಲಕೋಟೆಗಳನ್ನು ತಯಾರಿಸುತ್ತಿದ್ದಾರೆ. ತನ್ನ ಪತಿ ಮಂಗಳದಾಸ್ ರಾವಲ್ ಜೊತೆ ಕೆಲಸ ಮಾಡುವಾಗ ಅವರು ಅದನ್ನು ಕಲಿತರು (ಬಲ)

ಇಡೀ ಪ್ರಕ್ರಿಯೆಯಲ್ಲಿ ಒಂದು ಕವರ್ ಕೆಲಸಗಾರನ ಕೈಯಲ್ಲಿ 16 ಬಾರಿ ಬಂದು ಹೋಗುತ್ತದೆ. ಅವರ ಬೆರಳುಗಳು ಕತ್ತರಿಸಿ ಹೋಗುವ ಸಾಧ್ಯತೆಗಳು ಹೆಚ್ಚಿವೆ. ತನ್ನ ಗಾಯಗೊಂಡ ಹೆಬ್ಬೆರಳನ್ನು ತೋರಿಸುತ್ತಿರುವ ಕಲೀಮ್ ಶೇಖ್

ಲೈ (ಕೈಯಿಂದ ತಯಾರಿಸಿದ ಅಂಟು) ಗಾಯಗೊಂಡ ಬೆರಳುಗಳನ್ನು ಸ್ಪರ್ಶಿಸಿದಾಗ ಗಾಯ ಉರಿಯುತ್ತದೆ ಮತ್ತು ನೋವಾಗುತ್ತದೆ. ಇತ್ತೀಚಿನ ಗಾಯಗಳನ್ನು ತೋರಿಸುತ್ತಿರುವ ಧ್ರುವ್ ಎನ್ವಲಪ್ಸ್‌ನ ಕಲೀಮ್ ಶೇಖ್

ತಾಜ್ ಎನ್ವಲಪ್ಸ್‌ನಲ್ಲಿರುವ ಹನೀಫ್ ಖಾನ್ ಬಿಸ್ಮಿಲ್ಲಾ ಖಾನ್ ಪಠಾಣ್ ಕವರ್‌ಗಳನ್ನು ಅವುಗಳ ಗಾತ್ರಕ್ಕೆ ಅನುಗುಣವಾಗಿ ತೆರೆದ ಫ್ಲಾಪ್‌ಗಳೊಂದಿಗೆ ಜೋಡಿಸುತ್ತಿರುವುದು

ಮೊಹಮ್ಮದ್ ಹನೀಫ್ ನೂರ್ಗಾನಿ ಶೇಖ್ ಮೇಲ್ಭಾಗದ ಫ್ಲಾಪ್ ಅನ್ನು ಮಡಚುವ ಮೂಲಕ ಲಕೋಟೆಯ ಬಾಯಿಯನ್ನು ಮುಚ್ಚುತ್ತಾರೆ. ಅವರು ಎನ್ವಲಪ್ ಕಾರ್ಮಿಕರ ಸಂಘದ ಸದ್ಯದ ಅಧ್ಯಕ್ಷರು

ಸಿದ್ಧಪಡಿಸಿದ ಲಕೋಟೆಗಳನ್ನು ಹನೀಫ್ ಪಠಾಣ್ ಅವರು ನೂರರ ಕಟ್ಟುಗಳಲ್ಲಿ ಪ್ಯಾಕ್ ಮಾಡುತ್ತಿರುವುದು

ಪೆಟ್ಟಿಗೆಗಳಲ್ಲಿ ಲಕೋಟೆಗಳನ್ನು ಜೋಡಿಸುತ್ತಿರುವ ಶಾರದಾಬೆನ್ ರಾವಲ್. ಅಹಮದಾಬಾದ್‌ನ 35 ಎನ್ವಲಪ್ ವರ್ಕ್ ಶಾಪ್ ಗಳಲ್ಲಿ ಅವರನ್ನು ಹೊರತುಪಡಿಸಿ ಒಬ್ಬರೂ ಮಹಿಳಾ ಕಾರ್ಮಿಕರಿಲ್ಲ

ರಾವಲ್ ದಂಪತಿಗಳು ಧ್ರುವ್ ಎನ್ವಲಪ್ಸ್ ಮಾಲೀಕ ಜಿತೇಂದ್ರ ರಾವಲ್‌ಗೆ ತಮ್ಮ ಕೆಲಸದ ವರದಿಯನ್ನು ನೀಡುತ್ತಿರುವುದು. ಅವರಿಗೆ ಶನಿವಾರ ವಾರದ ವೇತನ ನೀಡಲಾಗುತ್ತದೆ

ಅಹಮದಾಬಾದ್‌ನ ಕಾರ್ಮಿಕರು ಒಕ್ಕೂಟ ಮತ್ತು ತಯಾರಕರ ಒಕ್ಕೂಟಗಳ ನಡುವಿನ ಚರ್ಚೆಯ ನಂತರ ಸಿದ್ಧಪಡಿಸಲಾಗಿರುವ ಜನವರಿ 1, 2022 ರಿಂದ ಡಿಸೆಂಬರ್ 31, 2023 ರ ನಡುವಿನ ಕುಶಲಕರ್ಮಿ ಕಾರ್ಮಿಕರ ವೇತನ ಹೆಚ್ಚಳದ ಪಟ್ಟಿ. 2022 ರಲ್ಲಿ , ಕವರ್-ಕ್ರಾಫ್ಟ್ ಬೆಲೆಗಳನ್ನು ಶೇಕಡಾ 6 ರಷ್ಟು ಹೆಚ್ಚಿಸಲಾಗಿತ್ತು
ಲೇಖಕರು ಹೊಝೆಫಾ ಉಜ್ಜಯಿನಿಯವರಿಗೆ ಈ ಕಥನ ಲೇಖನದ ವರದಿಯ ಸಮಯದಲ್ಲಿ ನೀಡಿದ ಸಹಾಯಕ್ಕಾಗಿ ಕೃತಜ್ಞತೆಯನ್ನು ಅರ್ಪಿಸುತ್ತಾರೆ.
ಅನುವಾದ: ಚರಣ್ ಐವರ್ನಾಡು