ಆಕೆಗಿನ್ನೂ 18 ವರ್ಷ ಆದರೆ, ಶಿವಾನಿ ಕುಮಾರಿ ತನ್ನ ಮದುವೆ ವಯಸ್ಸು ಮುಗಿಯುತ್ತಿದೆಯೆನ್ನುವ ಕಳವಳದಲ್ಲಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ತನ್ನ ಕುಟುಂಬವು ತನಗೆ ಮದುವೆ ಮಾಡಿಸದಂತೆ ತಡೆಯುವಲ್ಲಿ ಯಶಶ್ವಿಯಾಗಿದ್ದಾರೆ. ಆದರೆ ಈ ರೀತಿ ತನ್ನ ವಿವಾಹವನ್ನು ಬಹಳ ದಿನಗಳ ಕಾಳ ಮುಂದೂಡಲು ಸಾಧ್ಯವಿಲ್ಲವೆನ್ನುವುದು ಆಕೆ ಅಭಿಪ್ರಾಯ. "ಎಷ್ಟು ದಿನ ಹೀಗೇ ಮುಂದೂಡುತ್ತಾ ಹೋಗಲು ಸಾಧ್ಯ? ಒಂದು ದಿನ ಇದು ಕೊನೆಯಾಗಲೇಬೇಕು." ಎಂದು ಅವರು ಹೇಳುತ್ತಾರೆ.

ಬಿಹಾರದ ಸಮಸ್ತಿಪುರ ಜಿಲ್ಲೆಯ ಆಕೆಯ ಗ್ರಾಮವಾದ ಗಂಗಸಾರದಲ್ಲಿ, ಹುಡುಗಿಯರು 10ನೇ ತರಗತಿ ತಲುಪುವ ಮೊದಲು ಅಥವಾ 17-18 ವರ್ಷದವರಾಗುವಷ್ಟರಲ್ಲಿ ಮದುವೆ ಮಾಡಲಾಗುತ್ತದೆ.

ಪ್ರಸ್ತುತ ಎರಡನೇ ವರ್ಷದ ಬಿಕಾಂ ಓದುತ್ತಿರುವ ಶಿವಾನಿ (ಈ ಲೇಖನದಲ್ಲಿ ಬರುವ ವ್ಯಕ್ತಿಗಳ ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ) ಮದುವೆಯಿಂದ ತಪ್ಪಿಸಿಕೊಂಡು ಓದುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿಗೆ ಹೋಗುವುದು ಆಕೆಯ ಬಹಳ ಕಾಲದ ಆಸೆಯಾಗಿತ್ತು. ಆದರೆ ತಾನು ಕಾಲೇಜಿಗೆ ಹೋಗುವುದೆಂದರೆ ಏಕಾಂಗಿಯಾಗುವುದೆಂದು ಆಕೆ ಊಹಿಸಿರಲಿಲ್ಲ. “ಊರಿನ ಎಲ್ಲ ಸ್ನೇಹಿತೆಯರೂ ಮದುವೆಯಾಗಿದ್ದಾರೆ. ನನ್ನೊಂದಿಗೆ ಬೆಳೆದ ಮತ್ತು ಓದುತ್ತಿದ್ದ ಎಲ್ಲರೂ ಶಾಲೆ ಬಿಟ್ಟಿದ್ದಾರೆ.” ಎಂದು ಆಕೆ ಹೇಳುತ್ತಾರೆ. ಆಕೆ ಇದಿಷ್ಟನ್ನೂ ತನ್ನ ಪಕ್ಕದ ಮನೆಯ ಕುರಿಗಳನ್ನು ಕಟ್ಟುವ ಹಿತ್ತಲಿನಲ್ಲಿ ನಿಂತು ಹೇಳಿದ್ದು. ಏಕೆಂದರೆ ಆಕೆಗೆ ತನ್ನದೇ ಮನೆಯಲ್ಲಿ ಮುಕ್ತವಾಗಿ ಮಾತನಾಡುವುದು ಸಾಧ್ಯವಿರಲಿಲ್ಲ. “ಕೊರೋನಾ ಸಮಯದಲ್ಲಿ ನನಗಿದ್ದ ಒಬ್ಬಳೇ ಒಬ್ಬಳು ಸ್ನೇಹಿತೆ ಕೂಡ ಮದುವೆಯಾಗಿ ಹೋದಳು.” ಎಂದು ಆಕೆ ಮುಂದುವರೆದು ಹೇಳುತ್ತಾರೆ.

ತನ್ನ ಸಮುದಾಯದಲ್ಲಿ, ಹುಡುಗಿಯರು ಕಾಲೇಜಿಗೆ ಹೋಗುವ ಅವಕಾಶವನ್ನು ಅಪರೂಪವಾಗಿ ಪಡೆಯುತ್ತಾರೆ ಎಂದು ಅವರು ವಿವರಿಸುತ್ತಾರೆ. ಶಿವಾನಿ ರವಿದಾಸ್ ಸಮುದಾಯಕ್ಕೆ ಸೇರಿದವರು ( ಚಮರ್ ಜಾತಿಯ ಉಪ-ಗುಂಪು ), ಇದು ಮಹಾದಲಿತ್ ವರ್ಗಕ್ಕೆ ಸೇರುತ್ತದೆ. 2007ರಲ್ಲಿ ಬಿಹಾರ ಸರ್ಕಾರದಿಂದ 21 ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಸಮುದಾಯಗಳಿಗೆ ನೀಡಲಾದ ಒಂದು ಸಾಮೂಹಿಕ ಪದವಾಗಿದೆ.

ಅವಿವಾಹಿತರಾಗಿರುವ ಕಾರಣಕ್ಕೆ ಎದುರಾಗುವ ಸಾಮಾಜಿಕ ಕಳಂಕ ಮತ್ತು ಮದುವೆಯಾಗುವಂತೆ ಕುಟುಂಬ, ನೆರೆಹೊರೆಯವರು ಮತ್ತು ಸಂಬಂಧಿಕರಿಂದ ನಿರಂತರ ಒತ್ತಡವು ಆಕೆಯ ಒಂಟಿತನವನ್ನು ಇನ್ನಷ್ಟು ಹೆಚ್ಚಿಸಿದೆ. "ಅಪ್ಪ ಶಿಕ್ಷಣ ಸಾಕು ಎನ್ನುತ್ತಾರೆ. ಆದರೆ ನನಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸಿದೆ. ನಾನು ಅಷ್ಟು ದೊಡ್ಡ ಕನಸು ಕಾಣಬಾರದೆನ್ನುವುದು ಅವರ ಅಭಿಪ್ರಾಯ. ನಾನು ಓದುವುದನ್ನು ಮುಂದುವರೆಸಿದರೆ ನನ್ನನ್ನು ಯಾರು ಮದುವೆಯಾಗುತ್ತಾರೆಂದು ಕೇಳುತ್ತಾರೆ" ಎಂದು ಅವರು ಹೇಳಿದರು. "ನಮ್ಮಲ್ಲಿ ಗಂಡು ಮಕ್ಕಳು ಕೂಡ ಬೇಗನೆ ಮದುವೆಯಾಗುತ್ತಾರೆ. ಕೆಲವೊಮ್ಮೆ ನಾನು ಕೂಡ ಮದುವೆಗೆ ಒಪ್ಪಿಕೊಳ್ಳುವುದೇ ಸರಿಯೇನೋ ಎನ್ನಿಸುತ್ತದೆ, ಆದರೆ ನಾನು ಇಲ್ಲಿಯವರೆಗೆ ಬಂದಾಗಿದೆ ಮತ್ತು ನನ್ನ ಕನಸನ್ನು ಈಡೇರಿಸಿಕೊಳ್ಳಲು ಹೋರಾಡಲು ಬಯಸುತ್ತೇನೆ."

Shivani Kumari (left, with her mother, Meena Devi), says: 'Sometimes I wonder if I should give up...'
PHOTO • Amruta Byatnal
Shivani Kumari (left, with her mother, Meena Devi), says: 'Sometimes I wonder if I should give up...'
PHOTO • Antara Raman

ಶಿವಾನಿ ಕುಮಾರಿ (ಎಡ, ತಾಯಿ ಮೀನಾ ದೇವಿ ಅವರೊಂದಿಗೆ) ಹೇಳುತ್ತಾರೆ: 'ಕೆಲವೊಮ್ಮೆ ನಾನು ಓದುವುದನ್ನು ನಿಲ್ಲಿಸುವುದೇ ಸರಿಯೇನೋ ಎನ್ನಿಸುತ್ತದೆ...'

ಶಿವಾನಿ ಓದುತ್ತಿರುವ ಸಮಸ್ತಿಪುರದ ಕೆಎಸ್‌ಆರ್ ಕಾಲೇಜು ಆಕೆಯ ಹಳ್ಳಿಯಿಂದ ಸರಿಸುಮಾರು ಏಳು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ತಲುಪಲು ಶಿವಾನಿ ಒಂದಿಷ್ಟು ನಡೆಯಬೇಕು, ನಂತರ ಬಸ್‌ ಹಿಡಿಯಬೇಕು ಕೊನೆಗೆ ಶೇರ್‌ ಆಟೋದಲ್ಲಿಯೂ ಹೋಗಬೇಕು. ಕೆಲವೊಮ್ಮೆ, ಅವರ ಕಾಲೇಜಿನ ಹುಡುಗರು ಅವರನ್ನು ತಮ್ಮ ಮೋಟರ್ ಸೈಕಲ್‌ಗಳಲ್ಲಿ ಕರೆದೊಯ್ಯಲು ಮುಂದಾಗುತ್ತಾರೆ, ಆದರೆ ಅವರು ಯಾವಾಗಲೂ ನಿರಾಕರಿಸುತ್ತಾರೆ, ಒಬ್ಬ ವ್ಯಕ್ತಿಯೊಂದಿಗೆ ಕಾಣಿಸಿಕೊಳ್ಳುವುದರಿಂದ ಎದುರಾಗುವ ಪರಿಣಾಮಗಳಿಗೆ ಹೆದರುತ್ತಾರೆ. "ವದಂತಿಗಳ ವಿಷಯದಲ್ಲಿ ನನ್ನ ಊರಿನವರು ಬಹಳ ನಿರ್ದಯವಾಗಿ ನಡೆದುಕೊಳ್ಳುತ್ತಾರೆ. ನನ್ನ ಆತ್ಮೀಯ ಗೆಳತಿಯೊಬ್ಬಳು ಅವಳ ಶಾಲೆಯ ಗೆಳೆಯನ ಜೊತೆ ಕಾಣಿಸಿಕೊಡಿದ್ದಕ್ಕಾಗಿ ಮದುವೆ ಮಾಡಿಸಿಬಿಟ್ಟಿದ್ದರು. ಕಾಲೇಜು ಮುಗಿಸಿ ಪೋಲಿಸ್‌ ಅಧಿಕಾರಿಯಾಗುವ ಕನಸಿನಲ್ಲಿರುವ ನನ್ನ ದಾರಿಯಲ್ಲಿ ಅಂತಹ ಅಡೆತಡೆಗಳು ಎದುರಾಗುವುದು ಬೇಡ." ಎನ್ನುತ್ತಾರೆ.

ಶಿವಾನಿಯ ಪೋಷಕರು ಕೃಷಿ ಕಾರ್ಮಿಕರಾಗಿದ್ದು, ತಿಂಗಳಿಗೆ ಸುಮಾರು 10,000 ರೂ. ಸಂಪಾದಿಸುತ್ತಾರೆ. ಅವರ ತಾಯಿ, 42 ವರ್ಷದ ಮೀನಾ ದೇವಿ, ತಮ್ಮ ಐದು ಮಕ್ಕಳ ಬಗ್ಗೆ-13 ಮತ್ತು 17 ವರ್ಷ ವಯಸ್ಸಿನ ಇಬ್ಬರು ಗಂಡುಮಕ್ಕಳು, ಮತ್ತು 10, 15 ವರ್ಷ ವಯಸ್ಸಿನ ಮೂವರು ಪುತ್ರಿಯರು ಮತ್ತು 19 ವರ್ಷದ ಶಿವಾನಿ ಬಗ್ಗೆ ಚಿಂತಿತರಾಗಿದ್ದಾರೆ. “ನಾನು ಇಡೀ ದಿನ ನನ್ನ ಮಕ್ಕಳ ಬಗ್ಗೆ ಚಿಂತೆ ಮಾಡುತ್ತೇನೆ. ನನ್ನ ಹೆಣ್ಣುಮಕ್ಕಳಿಗೆ ನಾನು ವರದಕ್ಷಿಣೆ ವ್ಯವಸ್ಥೆ ಮಾಡಬೇಕು ”ಎಂದು ಮೀನಾ ದೇವಿ ಹೇಳುತ್ತಾರೆ. ಅವರು ದೊಡ್ಡ ಮನೆಯನ್ನು ನಿರ್ಮಿಸುವ ಕನಸನ್ನು ಹೊಂದಿದ್ದಾರೆ- ಶೀಟ್‌ ಹೊದ್ದಿಸಿದ ಮೇಲ್ಛಾವಣಿಯನ್ನು ಹೊಂದಿರುವ ಅವರ ಇಟ್ಟಿಗೆ ಮನೆಯಲ್ಲಿ ಕೇವಲ ಒಂದು ಮಲಗುವ ಕೋಣೆಯಿದೆ ಮತ್ತು ಕುಟುಂಬವು ಮೂರು ನೆರೆಯ ಕುಟುಂಬಗಳೊಂದಿಗೆ ಶೌಚಾಲಯವನ್ನು ಹಂಚಿಕೊಳ್ಳುತ್ತದೆ. "ನನ್ನ ಮನೆಗೆ ಬರುವ ಹುಡುಗಿಯರು [ಸೊಸೆ] ಇಲ್ಲಿಯೂ ಆರಾಮದಾಯಕವಾಗಿ ಮತ್ತು ಸಂತೋಷವಾಗಿರುವುದನ್ನು ಎಂದು ನಾನು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳುತ್ತಾರೆ. ಈ ಕಳವಳಗಳ ಮಧ್ಯೆ, ಶಿವಾನಿ ಕಾಲೇಜಿಗೆ ಹೋಗಲು ನಿರ್ಧರಿಸದಿದ್ದರೆ ಶಿಕ್ಷಣಕ್ಕೆ ಕಡಿಮೆ ಆದ್ಯತೆ ನೀಡಲಾಗುತ್ತಿತ್ತು.

ಸ್ವತಃ ಅನಕ್ಷರಸ್ತರಾಗಿರುವ ಮೀನಾ ದೇವಿ, ಶಿವಾನಿಯ ಯೋಜನೆಗಳನ್ನು ಬೆಂಬಲಿಸಿದ ಏಕೈಕ ಕುಟುಂಬ ಸದಸ್ಯೆ. "ಅವಳು ಇತರ ಮಹಿಳಾ ಪೊಲೀಸರನ್ನು ನೋಡಿ ತಾನೂ ಅವರಂತೆ ಆಗಬೇಕೆಂದು ಬಯಸುತ್ತಾಳೆ. ನಾನು ಅವಳನ್ನು ಹೇಗೆ ತಡೆಯಲಿ?" ಎಂದು ಅವರು ಕೇಳುತ್ತಾರೆ. "ತಾಯಿಯಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ [ಅವಳು ಪೋಲೀಸ್ ಆದರೆ]. ಆದರೆ ಎಲ್ಲರೂ ಅವಳನ್ನು ಗೇಲಿ ಮಾಡುತ್ತಾರೆ, ಅದು ನನಗೆ ಬೇಸರ ಮೂಡಿಸುತ್ತದೆ"

ಹಳ್ಳಿಯ ಕೆಲವು ಹುಡುಗಿಯರು ಮತ್ತು ಮಹಿಳೆಯರ ಪಾಲಿಗೆ ಇದು ಕೇವಲ ಅಪಹಾಸ್ಯದೊಂದಿಗೆ ಮುಗಿಯುವುದಿಲ್ಲ.

ಹದಿನೇಳು ವರ್ಷದ ನೇಹಾ ಕುಮಾರಿಯ ಕುಟುಂಬದಲ್ಲಿ, ಮದುವೆಯನ್ನು ವಿರೋಧಿಸುವುದೆಂದರೆ ಹೊಡೆತಗಳನ್ನು ತಿನ್ನುವುದು. “ಹೊಸ ವಿವಾಹ ಪ್ರಸ್ತಾಪ ಬಂದಾಗ ನಾನು ಅದನ್ನು ನಿರಾಕರಿಸಿದರೆ ನನ್ನ ತಂದೆ ಕೋಪಗೊಂಡು ನನ್ನ ತಾಯಿಯನ್ನು ಹೊಡೆಯಲು ಪ್ರಾರಂಭಿಸುತ್ತಾನೆ. ನನ್ನ ತಾಯಿಯಿಂದ ನಾನು ಬಹಳಷ್ಟು ಬಯಸುತ್ತಿದ್ದೇನೆನ್ನುವುದು ನನಗೆ ತಿಳಿದಿದೆ,” ಎಂದ ಆಕೆ ತನ್ನ ಒಡಹುಟ್ಟಿದವರೊಂದಿಗೆ ಹಂಚಿಕೊಂಡಿರುವ ಸಣ್ಣ ಕೋಣೆಯಲ್ಲಿ ಕುಳಿತು ಮಾತನಾಡುತ್ತಿದ್ದಳು. ಆ ಕೋಣೆ ಆಕೆಯ ಅಪ್ಪ ಮಧ್ಯಾಹ್ನದ ವಿಶ್ರಾಂತಿ ಪಡೆಯುತ್ತಿದ್ದ ನಡುಮನೆಯಿಂದ ಒಂದಿಷ್ಟು ದೂರವಿತ್ತು. ಕೋಣೆಯ ಒಂದು ಮೂಲೆಯಲ್ಲಿ ನೇಹಾಳಿಗಾಗಿ ಓದಲು ಮೀಸಲಿಡಲಾಗಿದೆ. ಮತ್ತು ಅವಳ ಪಠ್ಯಪುಸ್ತಕಗಳನ್ನು ಮುಟ್ಟಲು ಯಾರಿಗೂ ಅವಕಾಶವಿಲ್ಲ ಎಂದು ಅವಳು ನಗುವಿನೊಂದಿಗೆ ಹೇಳುತ್ತಾಳೆ.

ಮಗಳ ಓದಿಗಾಗಿ ತನ್ನ ಚಿನ್ನಾಭರಣಗಳನ್ನು ಮಾರುವುದನ್ನೂ ಪರಿಗಣಿಸಿರುವ ನೇಹಾಳ ತಾಯಿ ನೈನಾ ದೇವಿ ತನಗೆ ಬೀಳುವ ಹೊಡೆತಗಳು ಅಂತಹ ದೊಡ್ಡ ವಿಷಯವೇನಲ್ಲ ಎನ್ನುತ್ತಾರೆ. "ನನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದರೆ, ಓದಲು ಬಿಡದಿದ್ದರೆ ವಿಷ ಕುಡಿದು ಸಾಯುತ್ತೇನೆ ಎನ್ನುತ್ತಾಳೆ. ಒಂದು ವೇಳೆ ಅದು ನಡೆದರೆ ಅದನ್ನು ಹೇಗೆ ಸಹಿಸುವುದು?" ಅವರು ಕೇಳುತ್ತಾರೆ. ಕೃಷಿ ಕಾರ್ಮಿಕರಾಗಿದ್ದ ಪತಿ 2017ರಲ್ಲಿ ಕೆಲಸ ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ಕೆಲಸ ಮಾಡುವುದನ್ನು ನಿಲ್ಲಿಸಿದರು. ಅಂದಿನಿಂದ 39 ವರ್ಷದ ನೈನಾ ದೇವಿ ತನ್ನ ಮನೆಯ ಏಕೈಕ ಹಣ ಸಂಪಾದನೆಯಿರುವ ಸದಸ್ಯೆ. ಈ ಕುಟುಂಬವು ಮಹಾದಲಿತ್ ಜಾತಿಯ ಭುಯಿಯಾ ಸಮುದಾಯಕ್ಕೆ ಸೇರಿದೆ. ಕಾರ್ಮಿಕರಾಗಿ 5,000 ಸಂಪಾದಿಸುವ ನೈನಾ ದೇವಿ ಅದು ಕುಟುಂಬದ ನಿರ್ವಹಣೆಗೆ ಸಾಲುವುದಿಲ್ಲ ಎನ್ನುತ್ತಾರೆ. ತಮ್ಮ ಸಂಬಂದಿಕರ ನೆರವಿನಿಂದ ಸಂಸಾರವನ್ನು ತೂಗಿಸುತ್ತಿರುವುದಾಗಿ ಅವರು ಹೇಳುತ್ತಾರೆ.

In Neha Kumari and Naina Devi's family, resistance to marriage brings a beating
PHOTO • Amruta Byatnal

ನೇಹಾ ಕುಮಾರಿ ಮತ್ತು ನೈನಾ ದೇವಿಯವರ ಕುಟುಂಬದಲ್ಲಿ ಮದುವೆಯನ್ನು ವಿರೋಧಿಸುವುದೆಂದರೆ ಪೆಟ್ಟು ತಿನ್ನುವುದು

ಮಗಳ ಓದಿಗಾಗಿ ತನ್ನ ಚಿನ್ನಾಭರಣಗಳನ್ನು ಮಾರುವುದನ್ನೂ ಪರಿಗಣಿಸಿರುವ ನೇಹಾಳ ತಾಯಿ ನೈನಾ ದೇವಿ ತನಗೆ ಬೀಳುವ ಹೊಡೆತಗಳು ಅಂತಹ ದೊಡ್ಡ ವಿಷಯವೇನಲ್ಲ ಎನ್ನುತ್ತಾರೆ. "ನನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದರೆ, ಓದಲು ಬಿಡದಿದ್ದರೆ ವಿಷ ಕುಡಿದು ಸಾಯುತ್ತೇನೆ ಎನ್ನುತ್ತಾಳೆ. ಒಂದು ವೇಳೆ ಅದು ನಡೆದರೆ ಅದನ್ನು ಹೇಗೆ ಸಹಿಸುವುದು?" ಅವರು ಕೇಳುತ್ತಾರೆ.

ನೇಹಾ 12ನೇ ತರಗತಿಯಲ್ಲಿ ಓದುತ್ತಿದ್ದು ಪಾಟ್ನಾದ ಆಫೀಸಿನಲ್ಲಿ ಕೆಲಸ ಮಾಡುವ ಕನಸನ್ನು ಹೊಂದಿದ್ದಾರೆ. "ನನ್ನ ಕುಟುಂಬದ ಯಾರೂ ಇದುವರೆಗೆ ಆಫೀಸ್ ಕೆಲಸ ಮಾಡಿಲ್ಲ - ನಮ್ಮ ಕುಟುಂಬದಲ್ಲಿ ಆಫೀಸ್‌ ಕೆಲಸ ಮಾಡಿದ ಮೊದಲಿಗಳಾಗುವುದು ನನ್ನ ಗುರಿ" ಎಂದು ಅವರು ಹೇಳುತ್ತಾರೆ. ಅವರ ಅಕ್ಕ 17ನೇ ವಯಸ್ಸಿನಲ್ಲಿ ಮದುವೆಯಾದರು ಮತ್ತು 22ರ ಹೊತ್ತಿಗೆ ಮೂರು ಮಕ್ಕಳ ತಾಯಿಯಾಗಿದ್ದಾರೆ. ಆಕೆಯ ಸಹೋದರರಿಗೆ 19 ಮತ್ತು 15 ವರ್ಷ. "ನಾನು ನನ್ನ ಅಕ್ಕನನ್ನು ಪ್ರೀತಿಸುತ್ತೇನೆ, ಆದರೆ ನಾನು ಅವಳು ಬದುಕುತ್ತಿರುವ ಬದುಕನ್ನು ಬಯಸುವುದಿಲ್ಲ" ಎಂದು ನೇಹಾ ಹೇಳುತ್ತಾರೆ.

6,868 (ಜನಗಣತಿ 2011) ಜನಸಂಖ್ಯೆಯನ್ನು ಹೊಂದಿರುವ ಸರಾಯಿರಂಜನ್ ತಹಸಿಲ್‌ನ ಗಂಗಸರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನೇಹಾ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ ತರಗತಿಗೆ ಕೇವಲ ಆರು ಹುಡುಗಿಯರು ಮತ್ತು 12 ಹುಡುಗರು ಮಾತ್ರ ದಾಖಲಾಗಿದ್ದಾರೆ ಎಂದು ಅವರು ಹೇಳುತ್ತಾರೆ. "8 ನೇ ತರಗತಿಯ ನಂತರ, ಶಾಲೆಯಲ್ಲಿ ಹುಡುಗಿಯರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತದೆ" ಎಂದು ನೇಹಾ ಅವರ ಶಾಲಾ ಶಿಕ್ಷಕ ಅನಿಲ್ ಕುಮಾರ್ ಹೇಳುತ್ತಾರೆ. "ಇದಕ್ಕೆ ಕೆಲವೊಮ್ಮೆ ಅವರು ಕೆಲಸಕ್ಕೆ ಕಳುಹಿಸಲ್ಪಡಲಾಗುತ್ತದೆ, ಕೆಲವೊಮ್ಮೆ ಅವರಿಗೆ ಮದುವೆಯಾಗುತ್ತದೆ."

ಬಿಹಾರದಲ್ಲಿ, 42.5 ಪ್ರತಿಶತದಷ್ಟು ಹುಡುಗಿಯರಿಗೆ 18 ವರ್ಷಕ್ಕಿಂತ ಮೊದಲೇ ವಿವಾಹವಾಗುತ್ತದೆ-ಅಂದರೆ, ದೇಶದಲ್ಲಿ ವಿವಾಹಕ್ಕೆ ನಿಗದಿಪಡಿಸಲಾಗಿರುವ ಕಾನೂನುಬದ್ಧ ವಯಸ್ಸಿಗಿಂತ ಮೊದಲು ( ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಪ್ರಕಾರ). ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( ಎನ್‌ಎಫ್‌ಎಚ್‌ಎಸ್ -4, 2015-16 ) ಪ್ರಕಾರ ಈ ಸಂಖ್ಯೆ ಅಖಿಲ ಭಾರತ ಮಟ್ಟಕ್ಕಿಂತ ಶೇ 26.8ರಷ್ಟು ಹೆಚ್ಚಾಗಿದೆ. ಸಮಸ್ತಿಪುರದಲ್ಲಿ ಈ ಸಂಖ್ಯೆ 52.3ರಷ್ಟು ಅಂದರೆ ಎಲ್ಲೆಡೆಗಿಂತ ಹೆಚ್ಚು.

ಇದು ನೇಹಾ ಮತ್ತು ಶಿವಾನಿಯಂತಹ ಹುಡುಗಿಯರ ಶಿಕ್ಷಣದ ಮೇಲೆ ಪರಿಣಾಮ ಬೀರುವುದರ ಹೊರತಾಗಿ, ಇದು ಇನ್ನೂ ಇತರ ಅನೇಕ ಪರಿಣಾಮಗಳನ್ನು ಬೀರುತ್ತಿದೆ. “ಬಿಹಾರದಲ್ಲಿ ಫಲವತ್ತತೆ ಕಡಿಮೆಯಾಗಿದೆಯೆಂದು ನಾವು ನೋಡಬಹುದಾದರೂ [2005-06ರಲ್ಲಿ 4ರಿಂದ 2015-16ರಲ್ಲಿ 3.4 ಮತ್ತು ಎನ್‌ಎಫ್‌ಎಚ್‌ಎಸ್ 2019-20ರಲ್ಲಿ 3ಕ್ಕೆ ಇಳಿದಿದೆ], ಅಲ್ಲಿ ಸಣ್ಣ ವಯಸ್ಸಿನಲ್ಲಿ ಮದುವೆಯಾಗಿ ಅಪೌಷ್ಟಿಕತೆ ಎದುರಿಸುತ್ತಿರುವ ಬಡ ಹೆಣ್ಣುಮಕ್ಕಳೂ ಸಹ ಇದ್ದಾರೆನ್ನುವುದು ನಮಗೆ ತಿಳಿಯುತ್ತದೆ." ಎಂದು ನವದೆಹಲಿಯ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಹಿರಿಯ ಸಂಶೋಧನಾ ಸಹವರ್ತಿ ಪೂರ್ಣಿಮಾ ಮೆನನ್ ಹೇಳುತ್ತಾರೆ. ಇವರು ಹೆಣ್ಣುಮಕ್ಕಳ ಬಾಲ್ಯ ವಿವಾಹ ಮತ್ತು ಮತ್ತು ಮಹಿಳೆಯರು ಮತ್ತು ಯುವತಿಯರ ಆರೋಗ್ಯದ ನಡುವೆ ಇರುವ ಸಂಬಂಧದ ಕುರಿತು ಇವರು ಸಂಶೋಧನೆ ಮಾಡಿದ್ದಾರೆ.

ಶಾಲೆ ಮತ್ತು ವಿವಾಹದ ನಡುವಿನ ಅಂತರ, ಗರ್ಭಧಾರಣೆಯ ನಡುವಿನ ಅಂತರ ಹೀಗೆ ಬದುಕಿನ ಹಂತಗಳ ಪರಿವರ್ತನೆಗೆ ಸಾಕಷ್ಟು ಸಮಯವನ್ನು ನೀಡುವುದು ಮುಖ್ಯ ಎಂದು ಮೆನನ್‌ ಹೇಳುತ್ತಾರೆ. "ನಾವು ಹುಡುಗಿಯರ ಬದುಕಿನ ಪ್ರಮುಖ ಘಟ್ಟಗಳ  ಬದಲಾವಣೆಯ ನಡುವಿನ ಸಮಯವನ್ನು ಹೆಚ್ಚಿಸಬೇಕು" ಎಂದು ಅವರು ಹೇಳುತ್ತಾರೆ. "ಮತ್ತು ಅದನ್ನು ಹೆಣ್ಣುಮಕ್ಕಳು ಹುಡುಗಿಯರಾಗಿದ್ದಾಗ ನಾವು ಅದನ್ನು ಪ್ರಾರಂಭಿಸುವ ಅವಶ್ಯಕತೆಯಿದೆ." ನಗದು ವರ್ಗಾವಣೆ ಕಾರ್ಯಕ್ರಮಗಳು ಮತ್ತು ಕುಟುಂಬ ಯೋಜನೆ ಪ್ರೋತ್ಸಾಹದಂತಹ ಬೆಂಬಲಗಳು ಅಗತ್ಯವಾದ ವಿಳಂಬಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಹುಡುಗಿಯರು ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎನ್ನುವುದು ಮೆನನ್ ನಂಬಿಕೆ.

"ಹುಡುಗಿಯರ ಮದುವೆಯಲ್ಲಿ ವಿಳಂಬವಾದರೆ, ಅವರು ಉತ್ತಮ ಶಿಕ್ಷಣದ ಜೊತೆಗೆ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ನಾವು ನಂಬುತ್ತೇವೆ" ಎಂದು ಸಮಸ್ತಿಪುರದ ಸರೈಂಜನ್ ತೆಹಸಿಲ್ನಲ್ಲಿ ಕೆಲಸ ಮಾಡುವ ಎನ್‌ಜಿಒ ಜವಾಹರ್ ಜ್ಯೋತಿ ಬಾಲ್ ವಿಕಾಸ್ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕರಾದ ಕಿರಣ್ ಕುಮಾರಿ ಹೇಳುತ್ತಾರೆ. ಕುಮಾರಿ ಅನೇಕ ಬಾಲ್ಯವಿವಾಹಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಹುಡುಗಿ ಬಯಸಿದರೆ ಅವಳ ಮದುವೆ ವಿಳಂಬವಾಗಬೇಕು ಎಂದು ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಿಕೊಡುತ್ತಾರೆ. "ನಮ್ಮ ಕೆಲಸವು ಬಾಲ್ಯ ವಿವಾಹಗಳನ್ನು ನಿಲ್ಲಿಸುವ ಪ್ರಯತ್ನಗಳೊಂದಿಗೆ ಕೊನೆಗೊಳ್ಳುವುದಿಲ್ಲ" ಎಂದು ಅವರು ಹೇಳುತ್ತಾರೆ. "ನಮ್ಮ ಗುರಿ ಹೆಣ್ಣುಮಕ್ಕಳನ್ನು ಶಿಕ್ಷಣ ಮುಂದುವರೆಸಲು ಮತ್ತು ಅವರು ಬಯಸುವ ಜೀವನವನ್ನು ನಡೆಸಲು ಪ್ರೇರೇಪಿಸುವುದು."

Every time, Gauri had succeeded in convincing her parents to wait. But in May 2020, she wasn’t so lucky
PHOTO • Amruta Byatnal
Every time, Gauri had succeeded in convincing her parents to wait. But in May 2020, she wasn’t so lucky
PHOTO • Antara Raman

ಪ್ರತಿ ಬಾರಿಯೂ ಗೌರಿ ತನ್ನ ಹೆತ್ತವರನ್ನು ಕಾಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮೇ 2020ರಲ್ಲಿ, ಅದೃಷ್ಟ ಆಕೆಯ ಪರವಾಗಿರಲಿಲ್ಲ.

ಆದರೆ ಮಾರ್ಚ್ 2020ರಲ್ಲಿ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ, ಪೋಷಕರನ್ನು ಮನವೊಲಿಸುವುದು ಕಷ್ಟಕರವಾಗಿದೆ ಎಂದು ಕುಮಾರಿ ಹೇಳುತ್ತಾರೆ. “ಪೋಷಕರು ನಮಗೆ ಹೇಳುತ್ತಾರೆ: ‘ನಾವು ನಮ್ಮ ಆದಾಯವನ್ನು ಕಳೆದುಕೊಳ್ಳುತ್ತಿದ್ದೇವೆ [ಮತ್ತು ಭವಿಷ್ಯದ ಗಳಿಕೆಯ ಬಗ್ಗೆ ಖಚಿತವಿಲ್ಲ], ಕನಿಷ್ಠ ಹುಡುಗಿಯರ ಮದುವೆ ಮಾಡುವ ಮೂಲಕ ನಾವು ಜವಾಬ್ದಾರಿಯನ್ನು ಪೂರೈಸಲು ಬಯಸುತ್ತೇವೆ’. ನಾವು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ ಮತ್ತು ಹುಡುಗಿಯರು ಹೊರೆಯಲ್ಲ, ಅವರು ನಿಮಗೆ ಸಹಾಯ ಮಾಡುತ್ತಾರೆ ಎಂದು ಹೇಳುತ್ತೇವೆ."

ಕೆಲವು ದಿನಗಳವರೆಗೆ, 16 ವರ್ಷದ ಗೌರಿ ಕುಮಾರಿ ತನಗಾಗಿ ಸಮಯವನ್ನು ಮೀಸಲಿಡಲು ಸಾಧ್ಯವಾಯಿತು. 9ರಿಂದ 24 ವರ್ಷದೊಳಗಿನ ಏಳು ಒಡಹುಟ್ಟಿದವರಲ್ಲಿ ಹಿರಿಯಳಾಗಿ, ಆಕೆಯ ಪೋಷಕರು - ಕುಟುಂಬವು ಭೂಯಾ ಜಾತಿಯವರು-ಅವರಿಗೆ ಹಲವಾರು ಬಾರಿ ಮದುವೆ ಮಾಡಿಸಲು ಪ್ರಯತ್ನಿಸಿದರು. ಪ್ರತಿ ಬಾರಿಯೂ ಅವರು ಕಾಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ ಮೇ 2020ರಲ್ಲಿ ಅವರು ಅಷ್ಟು ಅದೃಷ್ಟಶಾಲಿಯಾಗಿರಲಿಲ್ಲ.

ಸಮಸ್ತಿಪುರದ ತನ್ನ ಹಳ್ಳಿಯಾದ ಮಾಹುಲಿ ದಾಮೋದರ್ ಹೊರಗಿನ ಬಸ್ ನಿಲ್ದಾಣದ ಬಳಿಯಿರುವ ಜನಸಂದಣಿಯ ಮಾರುಕಟ್ಟೆಯಲ್ಲಿ ಒಂದು ಬೆಳಿಗ್ಗೆ ಮಾತನಾಡುತ್ತಾ, ಗೌರಿ ತನ್ನ ಮದುವೆಗೆ ಕಾರಣವಾದ ಘಟನೆಗಳನ್ನು ನೆನಪಿಸಿಕೊಂಡರು: “ಈ ಮೊದಲು ನನ್ನ ತಾಯಿ ನಾನು ಬೇಗುಸರಾಯ್‌ನ ಅನಕ್ಷರಸ್ಥ ವ್ಯಕ್ತಿಯನ್ನು ಮದುವೆಯಾಗಬೇಕೆಂದು ಬಯಸಿದ್ದರು, ಆದರೆ ನಾನು ನನ್ನಂತಹ ವಿದ್ಯಾವಂತ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದೆ,” ಎಂದು ಅವರು ಹೇಳುತ್ತಾರೆ. "ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ನಂತರ ಮತ್ತು ಜವಾಹರ್ ಜ್ಯೋತಿಯಿಂದ ಬಂದ ಸರ್ ಮತ್ತು ಮೇಡಂಗಳನ್ನು ಕರೆದ ನಂತರವೇ ಅವರು ಆ ಯೋಚನೆಯನ್ನು ತ್ಯಜಿಸಿದರು."

ಆದರೆ ಗೌರಿಯ ಪೊಲೀಸರನ್ನು ಕರೆಯುವುದಾಗಿ ಹೇಳಿ ಬೆದರಿಸುತ್ತಾ ಮದುವೆ ಮುಂದೂಡುವ ಪ್ರಯತ್ನ ಹೆಚ್ಚು ದಿನ ಕೆಲಸ ಮಾಡಲಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ, ಆಕೆಯ ಕುಟುಂಬವು ಕಾಲೇಜಿನಲ್ಲಿ ಓದುತ್ತಿದ್ದ ಹುಡುಗನನ್ನು ಹುಡುಕಿ ನಿಗದಿಪಡಿಸಿತು ಮತ್ತು ಗೌರಿ ಕೆಲವೇ ಜನರ ಸಮ್ಮುಖದಲ್ಲಿ ಅವರನ್ನು ವಿವಾಹವಾದರು. ಮುಂಬೈನ ಸಗಟು ಮಾರುಕಟ್ಟೆಗಳಲ್ಲಿ ದೈನಂದಿನ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಆಕೆಯ ತಂದೆ ಕೂಡ ಲಾಕ್‌ ಡೌನ್‌ ಕಾರಣದಿಂದ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.

"ನಾನು ಈ ಪರಿಸ್ಥಿತಿಯಲ್ಲಿರುವುದಕ್ಕೆ ವಿಷಾದಿಸುತ್ತೇನೆ. ನಾನು ನಿಜವಾಗಿಯೂ ಯೋಚಿಸಿದ್ದೇನೆಂದರೆ ನಾನು ಓದುತ್ತೇನೆ ಮತ್ತು ಒಬ್ಬಳು ಮಹತ್ವಪೂರ್ಣ ವ್ಯಕ್ತಿಯಾಗುತ್ತೇನೆಂದು. ಆದರೆ ಈಗ ಕೂಡ ನಾನು ಬಿಟ್ಟುಕೊಡಲು ಬಯಸುವುದಿಲ್ಲ. ಒಂದು ದಿನ ಶಿಕ್ಷಕಿಯಾಗುತ್ತೇನೆ, "ಆ ಮೂಲಕ ಯುವತಿಯರಿಗೆ ಅವರ ಭವಿಷ್ಯವು ಅವರ ಕೈಯಲ್ಲಿದೆ ಎಂದು ನಾನು ಹೇಳಬಲ್ಲೆ" ಎಂದು ಅವರು ಹೇಳುತ್ತಾರೆ.

ಪರಿ ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಬೆಂಬಲದೊಂದಿಗೆ, ಗ್ರಾಮೀಣ ಭಾರತದ ಹದಿಹರೆಯದವರು ಮತ್ತು ಯುವತಿಯರ ಬಗ್ಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದೊಂದು ಪ್ರಮುಖ ಆದರೆ ಸಮಾಜದ ಅಂಚಿನಲ್ಲಿರುವ ಗುಂಪಿನ ಪರಿಸ್ಥಿತಿಯನ್ನು ಅವರದೇ ಆದ ನಿರೂಪಣೆ ಮತ್ತು ಅನುಭವದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ.

ಲೇಖನವನ್ನು ಮರುಪ್ರಕಟಿಸಲು ಬಯಸುವಿರಾ? ದಯವಿಟ್ಟು zahra@ruralindiaonline.org ಗೆ ಇ- ಮೇಲ್‌ ಬರೆಯಿರಿ. cc ಯನ್ನು namita@ruralindiaonline.org ವಿಳಾಸಕ್ಕೆ ಸೇರಿಸಿ

ಅನುವಾದ: ಶಂಕರ ಎನ್. ಕೆಂಚನೂರು

Amruta Byatnal

Amruta Byatnal is an independent journalist based in New Delhi. Her work focuses on health, gender and citizenship.

Other stories by Amruta Byatnal
Illustration : Antara Raman

Antara Raman is an illustrator and website designer with an interest in social processes and mythological imagery. A graduate of the Srishti Institute of Art, Design and Technology, Bengaluru, she believes that the world of storytelling and illustration are symbiotic.

Other stories by Antara Raman
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru