ಸುನೀತಾ ದೇವಿ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗಡ್ಡೆಯ ಕುರಿತು ಚಿಂತಿತರಾಗಿದ್ದರು. ಆ ಸಮಯದಲ್ಲಿ ಅವರಿಗೆ ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಹೊಟ್ಟೆ ಉಬ್ಬರಿಸದ ಅನುಭವವಾಗುತ್ತಿತ್ತು. ಎರಡು ತಿಂಗಳ ಕಾಲ ಅದನ್ನು ನಿರ್ಲಕ್ಷಿಸಿದ ನಂತರ, ತನ್ನ ಮನೆಯ ಹತ್ತಿರದ ಖಾಸಗಿ ಆಸ್ಪತ್ರೆಯ ವೈದ್ಯರನ್ನು ನೋಡಲು ಹೋದರು. ಡಾಕ್ಟರು ಹೇಳಿದ್ದನ್ನು ನಂಬಲು ಅವರಿಗೆ ಸಾಧ್ಯವಾಗಲಿಲ್ಲ: "ಆಪ್ಕೋ ಬಚ್ಚಾ ಠಹರ್ ಗಯಾ ಹೈ [ನೀವು ಗರ್ಭಿಣಿಯಾಗಿದ್ದೀರಿ]."

ಅವರಿಗೆ ಅದು ಹೇಗೆ ಸಾಧ್ಯ ಎಂದು ಅರ್ಥವಾಗಲಿಲ್ಲ - ಗರ್ಭಧಾರಣೆಯನ್ನು ತಡೆಯಲು ಕಾಪರ್-ಟಿ ಹಾಕಿಸಿಕೊಂಡು ಆರು ಕೂಡಾ ತಿಂಗಳು ಕಳೆದಿರಲಿಲ್ಲ.

2019 ರ ಘಟನೆಯನ್ನು ಈಗ ನೆನಪಿಸಿಕೊಳ್ಳುತ್ತಾ, ಅವರ ಕಳಾಹೀನ, ತೆಳ್ಳಗಿನ ಮುಖವು ಇನ್ನಷ್ಟು ಕಳೆಗುಂದಿತು. ತಲೆಗೂದಲನ್ನು ನೀಟಾಗಿ ತುರುಬು ಕಟ್ಟಿದ್ದ ಅವರ ಆಳಕ್ಕಿಳಿದ ಕಣ್ಣುಗಳು ಬಹಳ ದಣಿದಿದ್ದವು. ಹಣೆಯ ಮೇಲಿನ ಕೆಂಪು ಬಿಂದಿ ಮಾತ್ರ ಪ್ರಕಾಶಮಾನವಾದ ಚುಕ್ಕೆಯಾಗಿತ್ತು.

ಸುನೀತಾ (ಹೆಸರು ಬದಲಾಯಿಸಲಾಗಿದೆ) 30 ವರ್ಷದ ನಾಲ್ಕು ಮಕ್ಕಳ ತಾಯಿ. ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು, ಅವರು 4 ರಿಂದ 10 ವರ್ಷ ವಯಸ್ಸಿನವರು. ಮೇ 2019ರಲ್ಲಿ, ತನ್ನ ಕಿರಿಯ ಮಗು 2 ವರ್ಷದವಳಿದ್ದಾಗ, ಸುನೀತಾ ಇನ್ನು ಮುಂದೆ ಮಕ್ಕಳನ್ನು ಹೊಂದದಿರಲು ನಿರ್ಧರಿಸಿದರು. ಆ ಪ್ರದೇಶಕ್ಕೆ ಭೇಟಿ ನೀಡಿದ ಆಶಾ ಕಾರ್ಯಕರ್ತೆಯಿಂದ ಅವರು ಕುಟುಂಬ ಯೋಜನಾ ವಿಧಾನಗಳ ಕುರಿತು ತಿಳಿದುಕೊಂಡರು. ಆಯ್ಕೆಗಳನ್ನು ಪರಿಗಣಿಸಿದ ನಂತರ, ಅವರು ಮೂರು ತಿಂಗಳವರೆಗೆ ಗರ್ಭಧಾರಣೆಯನ್ನು ತಡೆಗಟ್ಟುವುದಾಗಿ ಹೇಳಿಕೊಳ್ಳುವ ಚುಚ್ಚುಮದ್ದು ನೀಡುವ ಗರ್ಭನಿರೋಧಕ ಅಂತರಾವನ್ನು ಆಯ್ಕೆ ಮಾಡಿದ್ದರು. "ನಾನು ಇಂಜೆಕ್ಷನ್ ಪ್ರಯತ್ನಿಸಬೇಕೆಂದು ಅಂದುಕೊಂಡಿದ್ದೆ" ಎಂದು ಅವರು ಹೇಳುತ್ತಾರೆ.

ನಾವು ಅವರ 8*10 ಅಡಿ ಕೋಣೆಯ ನೆಲದ ಮೇಲೆ ಚಾಪೆಯ ಮೇಲೆ ಕುಳಿತಿದ್ದೇವೆ, ಮತ್ತು ಒಂದು ಮೂಲೆಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ ಮೇಲೆ ಹೆಚ್ಚು ಚಾಪೆಗಳನ್ನು ಜೋಡಿಸಲಾಗಿದೆ. ಸುನೀತಾರ ಮೈದುನನ ಕುಟುಂಬವು ಪಕ್ಕದ ಕೋಣೆಯಲ್ಲಿ ವಾಸಿಸುತ್ತದೆ, ಮತ್ತು ಇನ್ನೊಬ್ಬ ಮೈದುನನಿಗೆ ಸೇರಿದ ಮೂರನೇ ಕೋಣೆಯನ್ನು ಸಹ ನೋಡಬಹುದು. ನೈಋತ್ಯ ದೆಹಲಿ ಜಿಲ್ಲೆಯ ನಜಫ್ ಗಢದ ಮಹೇಶ್ ಗಾರ್ಡನ್ ಪ್ರದೇಶದಲ್ಲಿ ಈ ಮನೆಯಿದೆ.

ಗೋಪಾಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು (ಪಿಎಚ್‌ಸಿ) ಸುನೀತಾ ಅವರ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಯೇ ಆಶಾ ಕಾರ್ಯಕರ್ತೆಯೊಂದಿಗೆ ಅಂತರಾ ಚುಚ್ಚುಮದ್ದನ್ನು ಪಡೆಯಲು ಹೋಗಿದ್ದರು. ಆದರೆ ಅಲ್ಲಿ ಪಿ.ಎಚ್.ಸಿ.ಯ ವೈದ್ಯರು ಬೇರೆಯೇ ಯೋಜನೆಯನ್ನು ಸೂಚಿಸಿದರು. "ವೈದ್ಯರು ನನಗೆ ಕಾಪರ್-ಟಿ ಬಗ್ಗೆ ಹೇಳಲು ಪ್ರಾರಂಭಿಸಿದರು. ಅದು ಸುರಕ್ಷಿತವಾಗಿರುವುದರಿಂದ ಅದನ್ನು ಹಾಕಿಸಿಕೊಳ್ಳುವಂತೆ ಆಕೆ ಹೇಳಿದರು" ಎಂದು ಸುನೀತಾ ಹೇಳುತ್ತಾರೆ. "ನಾನು ಎಂದಿಗೂ ಕಾಪರ್-ಟಿ ಬೇಕೆಂದು ವೈದ್ಯರನ್ನು ಕೇಳಿರಲಿಲ್ಲ" ಎಂದು ಅವರು ಹೇಳುತ್ತಾಳೆ, ಅವರ ಧ್ವನಿ ದೃಢವಾಗಿತ್ತು. "ಆದರೆ ಡಾಕ್ಟರರು ಅದು ಸರಿಹೋಗುತ್ತದೆ ಎಂದು ಒತ್ತಾಯಿಸುತ್ತಲೇ ಇದ್ದರು." ನೀವು ಹೆಚ್ಚು ಮಕ್ಕಳನ್ನು ಹೊಂದುವುದನ್ನು ನಿಲ್ಲಿಸಲು ಬಯಸುವುದಿಲ್ಲವೇ?' ಎಂದು ವೈದ್ಯೆ ನನ್ನನ್ನು ಕೇಳಿದ್ದರು."

Patients waiting outside the Gopal Nagar primary health centre in Delhi, where Sunita got the copper-T inserted
PHOTO • Sanskriti Talwar

ದೆಹಲಿಯ ಗೋಪಾಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರಗೆ ಕಾಯುತ್ತಿರುವ ರೋಗಿಗಳು, ಇಲ್ಲಿಯೇ ಸುನೀತಾರಿಗೆ ಕಾಪರ್-ಟಿ ಆಳವಡಿಸಲಾಯಿತು

ಆ ಸಮಯದಲ್ಲಿ, ನಜಾಫಗಢದಲ್ಲಿ ಹಣ್ಣುಗಳನ್ನು ಮಾರಾಟ ಮಾಡುವ ಸುನೀತಾ ಅವರ ಪತಿ (ಅವರ ಹೆಸರನ್ನು ಬಹಿರಂಗಪಡಿಸಲು ಬಯಸಲಿಲ್ಲ) ಬಿಹಾರದ ದರ್ಭಾಂಗಾ ಜಿಲ್ಲೆಯ ಕೊಲ್ಹಂತ ಪಟೋರಿ ಎಂಬ ಹಳ್ಳಿಗೆ ಭೇಟಿ ನೀಡುತ್ತಿದ್ದರು. ಡಾಕ್ಟರರು ಪಟ್ಟುಹಿಡಿದು ಹೇಳಿದರು: 'ನಿಮ್ಮ ಗಂಡನಿಗೂ ದಕ್ಕೂ ಏನು ಸಂಬಂಧ? ಅದು ನಿಮ್ಮ ಕೈಯಲ್ಲಿದೆ. ಇದನ್ನು ಬಳಸಿ ನೀವು ಐದು ವರ್ಷಗಳವರೆಗೆ ಗರ್ಭಿಣಿಯಾಗುವುದಿಲ್ಲ" ಎಂದು ಸುನೀತಾ ನೆನಪಿಸಿಕೊಳ್ಳುತ್ತಾರೆ.

ಆದ್ದರಿಂದ ಸುನೀತಾ ಚುಚ್ಚುಮದ್ದಿನ ಗರ್ಭನಿರೋಧಕ (ಅಂತರಾ) ಬದಲಿಗೆ ಇಂಟೆರಾಯುಟೆರೀನ್ ಗರ್ಭನಿರೋಧಕ ಸಾಧನ ಅಥವಾ ಕಾಪರ್-ಟಿ ಆಳವಡಿಸಿಕೊಳ್ಳಲು ನಿರ್ಧರಿಸಿದರು. ಈ ಪ್ರಕ್ರಿಯೆ ನಡೆದು 10 ದಿನಗಳ ನಂತರ ಊರಿನಿಂದ ವಾಪಸ್ಸು ಬರುವವರೆಗೂ ತನ್ನ ಗಂಡನಿಗೆ ಅವರು ಈ ವಿಷಯ ತಿಳಿಸಲಿಲ್ಲ. "ನಾನು ಅವರಿಗೆ ಹೇಳದೆ ರಹಸ್ಯವಾಗಿ ಅದನ್ನು ಮಾಡಿದ್ದೆ. ಅವರು ನನ್ನ ಮೇಲೆ ತುಂಬಾ ಕೋಪಗೊಂಡಿದ್ದರು. ನನ್ನನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಕ್ಕಾಗಿ ಅವರು ಆಶಾ ಕಾರ್ಯಕರ್ತೆಯನ್ನು ಗದರಿಸಿದರು.”

ಆದಾಗ್ಯೂ, ಆಳವಡಿಕೆಯ ನಂತರ, ಸುನೀತಾ ಮುಂದಿನ ಎರಡು ತಿಂಗಳುಗಳಲ್ಲಿ ತನ್ನ ಋತುಚಕ್ರದ ಸಮಯದಲ್ಲಿ ತೀವ್ರ ರಕ್ತಸ್ರಾವವನ್ನು ಅನುಭವಿಸಿದರು . ಕಾಪರ್-ಟಿ ಯಿಂದಾಗಿ ತೀವ್ರ ರಕ್ತಸ್ರಾವವಾಗಿದೆ ಎಂದು ಭಾವಿಸಿ, ಅವರು ಜುಲೈ 2019ರಲ್ಲಿ ಗೋಪಾಲ್ ನಗರ ಆರೋಗ್ಯ ಕೇಂದ್ರಕ್ಕೆ ಎರಡು ಬಾರಿ ಭೇಟಿ ನೀಡಿ ಅದನ್ನು ತೆಗೆಯುವಂತೆ ಕೇಳಿಕೊಂಡರು. ಆದರೆ, ಪ್ರತಿ ಬಾರಿಯೂ, ರಕ್ತಸ್ರಾವವನ್ನು ನಿಯಂತ್ರಿಸಲು ಔಷಧಿಗಳನ್ನು ನೀಡಲಾಗುತ್ತಿತ್ತು.

ನವೆಂಬರ್ 2019ರ ಸುಮಾರಿಗೆ ಅವರು ಮುಟ್ಟಾಗಲಿಲ್ಲ ಮತ್ತು ಹೊಟ್ಟೆಯಲ್ಲಿ ಗಡ್ಡೆಯಿರುವಂತೆ ಭಾಸವಾಗತೊಡಗಿತು. ನಜಾಫ ಗಢದ ವಿಕಾಸ್ ಆಸ್ಪತ್ರೆಯಲ್ಲಿ ಗರ್ಭಧಾರಣೆಯ ಸ್ಟಿಕ್ ಪರೀಕ್ಷೆ ಎಂದು ಅರ್ಥೈಸುವ "ಬಾತ್ ರೂಮ್ ಜಾಂಚ್" ಆಕೆ ಗರ್ಭಿಣಿಯಾಗಿದ್ದಾರೆ ಮತ್ತು ಗರ್ಭಾಶಯ ಗರ್ಭನಿರೋಧಕ ಸಾಧನ (ಐಯುಸಿಡಿ) ವಿಫಲವಾಗಿದೆ ಎಂದು ದೃಢಪಡಿಸಿತು.

ಕಾಪರ್-ಟಿ ಬಳಸುವ ಮಹಿಳೆ ಗರ್ಭಿಣಿಯಾಗುವುದು ಸಾಮಾನ್ಯವಲ್ಲ ಎಂದು ಪಶ್ಚಿಮ ದೆಹಲಿ ಜಿಲ್ಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಸ್ತ್ರೀರೋಗ ತಜ್ಞೆ ಡಾ. ಪೂನಮ್ ಚಡ್ಡಾ ಹೇಳುತ್ತಾರೆ, "ಈ ರೀತಿಯ ಘಟನೆಗಳು ಸಂಭವಿಸುವ ಸಾಧ್ಯತೆಗಳು 100ರಲ್ಲಿ 1. ಇದಕ್ಕೆ ಉಲ್ಲೇಖಿಸಬಹುದಾದ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಯಾವುದೇ [ಗರ್ಭನಿರೋಧಕ] ವಿಧಾನವು ವೈಫಲ್ಯದ ಸಾಧ್ಯತೆಗಳನ್ನು ಹೊಂದಿದೆ" ಎಂದು ಅವರು ವಿವರಿಸುತ್ತಾರೆ. ಐಯುಸಿಡಿಯನ್ನು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದ್ದರೂ, ಅದರ ವೈಫಲ್ಯವು ಅನಗತ್ಯ ಗರ್ಭಧಾರಣೆಗಳು ಮತ್ತು ಪ್ರಚೋದಿತ ಗರ್ಭಪಾತಗಳಿಗೆ ಕಾರಣವಾಗಿದೆ.

"ಮೇ ತೋ ಇಸೀ ಭರೋಸೆ ಬೈಠಿ ಹುಯೀ ಥೀ [ನಾನು ಇದನ್ನು ಅವಲಂಬಿಸಿದ್ದೆ]," ಎಂದು ಸುನೀತಾ ಹೇಳುತ್ತಾರೆ." ನಾನು ಕಾಪರ್-ಟಿ ಆಳವಡಿಸಿಕೊಂಡಿರುವುದರಿಂದ ಗರ್ಭಿಣಿಯಾಗುವುದಿಲ್ಲ ಎಂದು ನನಗೆ ಖಚಿತವಾಗಿತ್ತು. ಡಿಸ್ಪೆನ್ಸರಿಯಲ್ಲಿ [ಪಿಎಚ್‌ಸಿ] ವೈದ್ಯರು ಇದು ಐದು ವರ್ಷಗಳ ಕಾಲ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಇದು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿತು" ಎಂದು ಅವರು ಹೇಳುತ್ತಾರೆ.

The room used by Sunita and her husband in the house
PHOTO • Sanskriti Talwar
PHOTO • Sanskriti Talwar

ಎಡ: ನೈರುತ್ಯ ದೆಹಲಿ ಜಿಲ್ಲೆಯಲ್ಲಿನ ಓಣಿಯೊಂದರಲ್ಲಿ ಸುನೀತಾ ಮತ್ತು ಅವರ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬಲ: ಸುನೀತಾ ಮತ್ತು ಆಕೆಯ ಪತಿ ಮನೆಯಲ್ಲಿ ಬಳಸುತ್ತಿದ್ದ ಕೋಣೆ

ಭಾರತದಲ್ಲಿ, 15-49 ವಯೋಮಾನದ ವಿವಾಹಿತ ಮಹಿಳೆಯರಲ್ಲಿ ಕೇವಲ 2.1 ಪ್ರತಿಶತದಷ್ಟು ಮಹಿಳೆಯರು ಮಾತ್ರ ಕಾಪರ್-ಟಿ ಮಾದರಿಯ ಐಯುಸಿಡಿಗಳನ್ನು ಬಳಸುತ್ತಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( ಎನ್ಎಫ್ಎಚ್ಎಸ್ -5 ) ಹೇಳುತ್ತದೆ. ಗರ್ಭಧಾರಣೆಯನ್ನು ತಡೆಗಟ್ಟಲು ಅತ್ಯಂತ ಸಾಮಾನ್ಯ ಗರ್ಭನಿರೋಧಕ ವಿಧಾನವೆಂದರೆ ಸ್ತ್ರೀ ಸಂತಾನಹರಣ ಶಸ್ತ್ರಚಿಕಿತ್ಸೆ - 38 ಪ್ರತಿಶತದಷ್ಟು ವಿವಾಹಿತ ಮಹಿಳೆಯರು ಬಳಸುತ್ತಾರೆ. ವಿವಾಹಿತ ಮಹಿಳೆಯರಲ್ಲಿ ಗರ್ಭನಿರೋಧಕ ಬಳಕೆಯು 2-3 ಮಕ್ಕಳನ್ನು ಪಡೆದ ನಂತರ ಹೆಚ್ಚಾಗುತ್ತದೆ ಎಂದು ಸಮೀಕ್ಷೆಯು ವರದಿ ಮಾಡಿದೆ. ಸುನೀತಾರಿಗೆ ಐದನೇ ಮಗು ಬೇಕಿರಲಿಲ್ಲ.

ಆದರೆ ವಿಕಾಸ್ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಲು ಅವರಿಗೆ ಸಾಧ್ಯವಾಗಲಿಲ್ಲ, ಅಲ್ಲಿ ಇದಕ್ಕೆ 30,000 ರೂ. ಖರ್ಚು ಮಾಡಬೇಕಿತ್ತು.

ಸುನೀತಾ ಗೃಹಿಣಿಯಾಗಿದ್ದು, ಅವರ 34 ವರ್ಷದ ಪತಿ ಹಣ್ಣುಗಳನ್ನು ಮಾರಾಟ ಮಾಡಿ ತಿಂಗಳಿಗೆ ಸುಮಾರು 10,000 ರೂಪಾಯಿಗಳನ್ನು ಗಳಿಸುತ್ತಾರೆ. ಪತಿಯ ಇಬ್ಬರು ಸಹೋದರರು, ಅವರ ಕುಟುಂಬಗಳೊಂದಿಗೆ ಅವರು ತಮ್ಮ ಮೂರು ಮಲಗುವ ಕೋಣೆಗಳ ಬಾಡಿಗೆ ಮನೆಯನ್ನು ಹಂಚಿಕೊಂಡಿದ್ದಾರೆ, ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬ ಸಹೋದರನು ತಮ್ಮ ಪಾಲಿನ ಬಾಡಿಗೆಯಾಗಿ ತಿಂಗಳಿಗೆ ಸುಮಾರು 2,300 ರೂ.ಗಳನ್ನು ಪಾವತಿಸುತ್ತಾರೆ.

ಕೆಂಪು ಬಣ್ಣದ ಮೇಲೆ ಹಸಿರು ಮತ್ತು ಹಳದಿ ತ್ರಿಕೋನಗಳ ಪ್ರಿಂಟೆಡ್‌ ಸಲ್ವಾರ್‌ ಧರಿಸಿದ್ದ ಅವರು ಉಡುಪಿಗೆ ಹೊಂದಿಕೆಯಾಗುವಂತೆ ತನ್ನ ಸಪೂರ ಕೈಗಳಿಗೆ ಬಣ್ಣ ಬಣ್ಣದ ಬಳೆಗಳನ್ನು ತೊಟ್ಟಿದ್ದರು. ಮಸುಕಾದ ಕಾಲ್ಗೆಜ್ಜೆಗಳ ಕೆಳಗೆ ಪಾದಗಳ ಬದಿಗೆ ಬಳಿದಿದ್ದ ಕೆಂಪು ಆಲ್ಟಾದ ಬಣ್ಣವು ಕಡುಗೆಂಪು ಬಣ್ಣಕ್ಕೆ ತಿರುಗಿತ್ತು. ಸ್ವತಃ ಉಪವಾಸವನ್ನು ಆಚರಿಸುತ್ತಿದ್ದರೂ, ಕುಟುಂಬಕ್ಕಾಗಿ ಊಟವನ್ನು ತಯಾರಿಸುತ್ತಾ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು. “ಮದುವೆಯಾದ ಆರೇ ತಿಂಗಳಿಗೆ ನನ್ನ ಮುಖ ಹೊಳಪನ್ನು ಕಳೆದುಕೊಂಡಿತು” ಎಂದು ಅವರು ಹೇಳಿದರು. ಅವರಿಗೆ ಮದುವೆಯಾದ ಸಮಯದಲ್ಲಿ 18 ವಯಸ್ಸಿನ ಯುವತಿಯಾಗಿದ್ದರು. ಆಗ ಅವರು ತಾನು ದುಂಡು ಮುಖ ಹೊಂದಿದ್ದೆ ಎಂದು ನೆನಪಸಿಕೊಳ್ಳುತ್ತಾರೆ. ಆಗ ಸುಮಾರು 50 ಕೆ.ಜಿ. ತೂಗುತ್ತಿದ್ದ ಅವರು ಈಗ 40 ಕೆ.ಜಿ.ಯಷ್ಟು ತೂಕವನ್ನು ಹೊಂದಿದ್ದು, 5 ಅಡಿ 1 ಇಂಚು ಎತ್ತರವಿದ್ದಾರೆ.

ಸುನೀತಾಗೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಬಹುಶಃ ಅದರಿಂದಾಗಿಯೇ ಅವರ ಮುಖವು ಬಿಳಿಚಿಕೊಂಡಿದೆ, ಮತ್ತು ಅವರು ದಣಿದಿದ್ದಾಳೆ. ಭಾರತದಲ್ಲಿ 15-49 ವರ್ಷ ವಯಸ್ಸಿನ ಶೇ.57ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸುನೀತಾ ಅವರು ಸೆಪ್ಟೆಂಬರ್ 2021ರಿಂದ ಪ್ರತಿ 10 ದಿನಗಳಿಗೊಮ್ಮೆ ನಜಾಫಗಢದ ಖಾಸಗಿ ಕ್ಲಿನಿಕ್ಕಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಾಲೋಚನೆ ಮತ್ತು ಔಷಧಿಗಳಿಗೆ ಪ್ರತಿ ಬಾರಿಯೂ ಸುಮಾರು 500 ರೂ. ವೆಚ್ಚವಾಗುತ್ತದೆ. ಕೋವಿಡ್ -19ರ ಭಯವು ಅವರನ್ನು ಸರ್ಕಾರಿ ಆಸ್ಪತ್ರೆಗೆ ಹೋಗದಂತೆ ತಡೆಯುತ್ತದೆ. ಇದಲ್ಲದೆ, ಅವರಿಗೆ ಕ್ಲಿನಿಕ್ಕಿಗೆ ಆದ್ಯತೆ ನೀಡಲು ಮತ್ತೊಂದು ಕಾರಣವೂ ಇದೆ. ಅದು ಮನೆಕೆಲಸವನ್ನು ಮುಗಿಸಿದ ನಂತರ ಸಂಜೆಗಳಲ್ಲಿ ಹೋಗಬಹುದು, ಮತ್ತು ಅಲ್ಲಿ ಉದ್ದನೆಯ ಸರದಿಯಲ್ಲಿ ನಿಲ್ಲಬೇಕಾಗಿಲ್ಲ.

ಇನ್ನೊಂದು ಕೋಣೆಯ ಮಕ್ಕಳ ಜೋರಾದ ಕಿರುಚಾಟಗಳು ನಮ್ಮ ಮಾತುಕತೆಗೆ ಅಡ್ಡಿಪಡಿಸುತ್ತಿದ್ದವು. "ನನ್ನ ಇಡೀ ದಿನವು ಹೀಗೆಯೇ ಸಾಗುತ್ತದೆ" ಎಂದು ಸುನೀತಾ ಹೇಳುತ್ತಾರೆ, ಮಕ್ಕಳ ನಡುವಿನ ಸಂಭಾವ್ಯ ಜಗಳವನ್ನು ಉಲ್ಲೇಖಿಸಿ, ತಾನು ಕೆಲವೊಮ್ಮೆ ಮಧ್ಯಪ್ರವೇಶಿಸಬೇಕಾಗುತ್ತದೆ ಎನ್ನುತ್ತಾರವರು. "ನನ್ನ ಗರ್ಭಧಾರಣೆಯ ಬಗ್ಗೆ ತಿಳಿದಾಗ ನಾನು ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ನನ್ನ ಪತಿ ಮಗುವನ್ನು ಉಳಿಸಿಕೊಳ್ಳಲು ಹೇಳಿದರು. 'ಜೋ ಹೋರಾಹಾ ಹೈ ಹೋನೆ ದೋ'. ಆದರೆ ಯಾತನೆಯನ್ನು ಅನುಭವಿಸುವುದು ನಾನಲ್ಲವೆ?  ಈ ಮಗುವನ್ನು ಬೆಳೆಸಲು ಮತ್ತು ಎಲ್ಲವನ್ನೂ ಮಾಡಲು ನಾನು ಒಬ್ಬಳೇ" ಎಂದು ಅವರು ಕೋಪೋದ್ರಿಕ್ತ ಧ್ವನಿಯಲ್ಲಿ ಹೇಳುತ್ತಾರೆ.

The wooden cart that belongs to Sunita's husband, who is a fruit and vegetable seller.
PHOTO • Sanskriti Talwar
Sunita's sewing machine, which she used before for tailoring clothes to earn a little money. She now uses it only to stitch clothes for her family
PHOTO • Sanskriti Talwar

ಎಡ: ಹಣ್ಣು ಮತ್ತು ತರಕಾರಿ ಮಾರುವ ಸುನಿತಾಳ ಪತಿಗೆ ಸೇರಿದ ಮರದ ಗಾಡಿ. ಬಲ: ಸುನೀತಾ ಅವರ ಹೊಲಿಗೆ ಯಂತ್ರ, ಸ್ವಲ್ಪ ಹಣವನ್ನು ಸಂಪಾದಿಸಲು ಬಟ್ಟೆಗಳನ್ನು ಹೊಲಿಯಲು ಮೊದಲು ಬಳಸುತ್ತಿದ್ದರು. ಈಗ ಅದನ್ನು ತನ್ನ ಕುಟುಂಬಕ್ಕೆ ಬಟ್ಟೆಗಳನ್ನು ಹೊಲಿಯಲು ಮಾತ್ರ ಬಳಸುತ್ತಾರೆ

ತಾನು ಗರ್ಭಿಣಿ ಎಂದು ತಿಳಿದ ಕೆಲವು ದಿನಗಳ ನಂತರ, ಸುನೀತಾ ಅವರು ನಜಾಫ ಗಢ-ಧನ್ಸಾ ರಸ್ತೆಯಲ್ಲಿರುವ ಖಾಸಗಿ ಕ್ಲಿನಿಕ್ಕಿನಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲು 1,000 ರೂ.ಗಳನ್ನು ಖರ್ಚು ಮಾಡಿದರು. ಅಲ್ಲಿ ಅವರೊಂದಿಗೆ ಬಂದಿದ್ದ ಆಶಾ ಕಾರ್ಯಕರ್ತೆಯೊಬ್ಬರು ನಂತರ ಅವರನ್ನು ಮನೆಯಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಜಾಫರ್‌ಪುರದ ಸರ್ಕಾರಿ ಸ್ವಾಮ್ಯದ ರಾವ್ ತುಲಾ ರಾಮ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದರು. ಸುನೀತಾ ಕಾಪರ್-ಟಿ ಯನ್ನು ತೆಗೆದುಹಾಕಲು ಮತ್ತು ಗರ್ಭಪಾತವನ್ನು ಮಾಡಿಸುವಂತೆ ಕೇಳಲು ಬಯಸಿದರು. ಸಾರ್ವಜನಿಕ ಆರೋಗ್ಯ ಸೌಲಭ್ಯದಲ್ಲಿ ಈ ಪ್ರಕ್ರಿಯೆಗಳು ಉಚಿತವಾಗಿದೆ.

"ಜಾಫರ್‌ಪುರದಲ್ಲಿ, ಅವರು [ವೈದ್ಯರು] ಕಾಪರ್-ಟಿ ಯನ್ನು ಸದ್ಯ ತೆಗೆದುಹಾಕಲು ಸಾಧ್ಯವಿಲ್ಲ ಮತ್ತು ಅದು ಹೆರಿಗೆ ಸಮಯದಲ್ಲಿ ಮಗುವಿನೊಂದಿಗೆ ಹೊರಬರುತ್ತದೆ ಎಂದು ಹೇಳಿದರು." ಭ್ರೂಣಕ್ಕೆ ಸುಮಾರು ಮೂರು ತಿಂಗಳ ಅವಧಿಯಾಗಿರುವುದರಿಂದ ಗರ್ಭಪಾತವು ಕಷ್ಟಕರವಾಗಿರುವುದು ಮಾತ್ರವಲ್ಲದೆ ಮಾರಣಾಂತಿಕವೂ ಆಗಬಹುದು ಎಂದು ವೈದ್ಯರು ಸುನೀತಾರಿಗೆ ಹೇಳಿದರು. "ಅವರು [ವೈದ್ಯರು]  ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ" ಎಂದು ಸುನೀತಾ ಹೇಳುತ್ತಾರೆ.

"ನನ್ನ ಜೀವಕ್ಕೆ ಎದುರಾಗುವ ಅಪಾಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ನಾನು ಇನ್ನೊಂದು ಮಗುವನ್ನು ಹೊಂದುವುದು ಬೇಕಿರಲಿಲ್ಲ" ಎಂದು ಅವರು ನನಗೆ ಹೇಳಿದರು. ಅವರೊಬ್ಬರೇ ಅಲ್ಲ. ಎನ್ಎಫ್ಎಚ್ಎಸ್ -5ರ ಪ್ರಕಾರ ವಿವಾಹಿತ ಮಹಿಳೆಯರಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಎರಡನೇ (ಜೀವಂತ) ಮಗುವಿನ ನಂತರ ಮಕ್ಕಳನ್ನು ಹೊಂದುವುದನ್ನು ನಿಲ್ಲಿಸಲು ಬಯಸುತ್ತಾರೆ.

ಸುನಿತಾ ಗರ್ಭಧಾರಣೆಯನ್ನು ಕೊನೆಗೊಳಿಸಲು ಮತ್ತೊಂದು ಸಾರ್ವಜನಿಕ ಆಸ್ಪತ್ರೆಯನ್ನು ಸಂಪರ್ಕಿಸಲು ನಿರ್ಧರಿಸಿದರು. ಫೆಬ್ರವರಿ 2020ರಲ್ಲಿ ಅವರು ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು, ಆಗ ಇನ್ನೊಬ್ಬ ಆಶಾ ಕಾರ್ಯಕರ್ತೆ ಅವರನ್ನು ನಜಾಫಗಢದಿಂದ 30 ಕಿಲೋಮೀಟರ್ ದೂರದಲ್ಲಿರುವ ಮಧ್ಯ ದೆಹಲಿ ಜಿಲ್ಲೆಯ ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ಕರೆದೊಯ್ದರು. ಇಬ್ಬರೂ ಮಹಿಳೆಯರು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು, ಆ ದಿನ ತಲಾ 120 ರೂಪಾಯಿಗಳನ್ನು ಖರ್ಚು ಮಾಡಿದರು. ಗೋಪಾಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಂದಿಗೆ ಪ್ರಕರಣದ ಬಗ್ಗೆ ಚರ್ಚಿಸಿದ ನಂತರ ಲೇಡಿ ಹಾರ್ಡಿಂಜ್ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲು ನಿರ್ಧರಿಸಿದರು.

"ಅವರು ಏನು ಮಾತನಾಡಿದರೆಂದು ನನಗೆ ತಿಳಿದಿಲ್ಲ. ವೈದ್ಯರು ಮಾತ್ರ ಮಾತನಾಡಿದರು, ಮತ್ತು ನಂತರ ಅವರು ಶಸ್ತ್ರಚಿಕಿತ್ಸೆ ಮಾಡಲು ತೀರ್ಮಾನಿಸಿದರು" ಎಂದು ಸುನೀತಾ ಹೇಳುತ್ತಾರೆ. ಅವರು ಮೊದಲು ಕೆಲವು ರಕ್ತ ಪರೀಕ್ಷೆಗಳನ್ನು ನಡೆಸಿದರು ಮತ್ತು ನಂತರ ಕೆಲವು ಔಷಧಿಗಳನ್ನು ಹಚ್ಚಿದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಯಾವ ರೀತಿಯ ಔಷಧಿ ಎಂದು ನನಗೆ ನೆನಪಿಲ್ಲ. ಉನ್ಹೋನೆ ಕುಚ್ ದವಾಯಿ ಅಂದರ್ ದಾಲ್ಕರ್ ಸಫಾಯಿ ಕಿಯಾ ಥಾ [ಅವರು ಒಳಗೆ ಕೆಲವು ಔಷಧಿಗಳನ್ನು ಹಚ್ಚಿ ಸ್ವಚ್ಛಗೊಳಿಸಿದರು]. ಒಳಗೆ ಉರಿಯುತ್ತಿತ್ತು ಮತ್ತು ನನಗೆ ತಲೆತಿರುಗುತ್ತಿತ್ತು" ಎಂದು ಅವರು ಹೇಳುತ್ತಾರೆ. ಇದಕ್ಕಾಗಿ ಪತಿ ಅವರೊಂದಿಗೆ ಬಂದಿದ್ದರೂ, "ಅವರು ಈ ವಿಷಯದಲ್ಲಿ ಹೆಚ್ಚು ಸಮ್ಮತಿ ಹೊಂದಿರಲಿಲ್ಲ" ಎಂದು ಮುಂದುವರೆದು ಹೇಳುತ್ತಾರೆ.

ವೈದ್ಯರು ಸುನೀತಾರಿಗೆ ತಾವು ಹೊರತೆಗೆದಿದ್ದ ಮುರಿದ ಕಾಪರ್-ಟಿಯನ್ನು ತೋರಿಸಿದರು. ಗರ್ಭಪಾತವಾದ ಭ್ರೂಣವು ಸುಮಾರು ನಾಲ್ಕು ತಿಂಗಳಾಗಿತ್ತು ಎಂದು ಅವರೊಂದಿಗೆ ಆಸ್ಪತ್ರೆಗೆ ಹೋಗಿದ್ದ ಆಶಾ ಕಾರ್ಯಕರ್ತೆ ಸೋನಿ ಝಾ ದೃಢಪಡಿಸಿದ್ದಾರೆ. "ಆಕೆಯ ಪ್ರಕರಣವು ಸೂಕ್ಷ್ಮವಾಗಿರುವುದರಿಂದ ಅದನ್ನು 'ಸಾಮಾನ್ಯ ಹೆರಿಗೆ'ಯ ಮೂಲಕ ತೆಗೆದುಹಾಕಬೇಕಾಯಿತು" ಎಂದು ಅವರು ಹೇಳುತ್ತಾರೆ.

Sunita remained determined to get the tubal ligation done, but Covid-19 struck in March 2020.  It was a year before she could undergo the procedure – in Bihar this time
PHOTO • Priyanka Borar

ಸುನಿತಾ ಟ್ಯೂಬಲ್ ಲಿಗೇಶನ್ ಮಾಡಿಸಿಕೊಳ್ಳಲು ದೃಢಸಂಕಲ್ಪ ಮಾಡಿದ್ದರು, ಆದರೆ ಮಾರ್ಚ್ 2020ರಲ್ಲಿ ಕೋವಿಡ್-19 ಅಪ್ಪಳಿಸಿತು. ಅವರಿಗೆ ಈ ಪ್ರಕ್ರಿಯೆಗೆ ಒಳಗಾಗಲು ಒಂದು ವರ್ಷ ಹಿಡಿದಿತ್ತು – ಈ ಬಾರಿ ಬಿಹಾರದಲ್ಲಿ

ಗರ್ಭಪಾತವು ಕೇವಲ ಅವರ ಹೋರಾಟದ ಅರ್ಧಭಾಗವಷ್ಟೇ. ಸ್ಟೆರಿಲೈಸೇಶನ್ ಅಥವಾ ಟ್ಯೂಬಲ್ ಲಿಗೇಶನ್, ಫಾಲೋಪಿಯನ್ ಟ್ಯೂಬ್‌ಗಳನ್ನು ನಿರ್ಬಂಧಿಸುವ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟುವ ಒಂದು ಆಪರೇಷನ್‌ ಎಂದು ಸುನೀತಾ ಭಾವಿಸಿದ್ದರು. ಗರ್ಭಪಾತವಾದ ಒಂದು ದಿನದ ನಂತರ ಅದೇ ಆಸ್ಪತ್ರೆಯಲ್ಲಿ ಅದನ್ನು ಮಾಡಿಸಲು ಅವರು ಬಯಸಿದರು, ಆದರೆ ವೈದ್ಯರು ಆ ದಿನ ಅದನ್ನು ಪರಿಶೀಲಿಸಲಿಲ್ಲ. "ನಾನು ಕೆಮ್ಮಲು ಪ್ರಾರಂಭಿಸಿದಾಗ ಆಗಲೇ ಆಪರೇಷನ್‌ ಸಲುವಾಗಿ ಬಟ್ಟೆ ಬದಲಾಯಸಿದ್ದೆ" ಎಂದು ಅವರು ಹೇಳುತ್ತಾರೆ. "ಅವರು [ವೈದ್ಯರು] ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ." ಗರ್ಭಪಾತವಾದ ನಾಲ್ಕು ದಿನಗಳ ನಂತರ, ಆಕೆಗೆ ಅಂತರಾ ಚುಚ್ಚುಮದ್ದನ್ನು ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಸುನಿತಾ ಟ್ಯೂಬಲ್ ಲಿಗೇಶನ್ ಮಾಡಲು ದೃಢಸಂಕಲ್ಪ ಮಾಡಿದ್ದರು, ಆದರೆ ಮಾರ್ಚ್ 2020 ರಲ್ಲಿ ಕೋವಿಡ್ -19 ಅಪ್ಪಳಿಸಿತು.  ಈ ಬಾರಿ ಬಿಹಾರದಲ್ಲಿ ಅವರು ಈ ಪ್ರಕ್ರಿಯೆಗೆ ಒಳಗಾಗುವಾಗ ಒಂದು ವರ್ಷವಾಗಿತ್ತು. ಫೆಬ್ರವರಿ 2021ರಲ್ಲಿ, ಸುನೀತಾ ಮತ್ತು ಅವರ ಕುಟುಂಬವು ತನ್ನ ಮೈದುನನ ಮದುವೆಗಾಗಿ ಹನುಮಾನ್ ನಗರ ಬ್ಲಾಕಿನಲ್ಲಿರುವ ತಮ್ಮ ಗ್ರಾಮ ಕೊಲ್ಹಂತ ಪಟೋರಿಗೆ ಹೋಗಿದ್ದರು. ಅಲ್ಲಿದ್ದಾಗ, ಅವರು ಆಶಾ ಕಾರ್ಯಕರ್ತೆಯನ್ನು ಸಂಪರ್ಕಿಸಿದರು, ಅವರು ಸುನಿತಾರನ್ನು ದರ್ಭಾಂಗಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. "ಆಶಾ ಕಾರ್ಯಕರ್ತೆಯು ಈಗಲೂ ನನಗೆ ಕರೆ ಮಾಡಿ ನನ್ನ ಆರೋಗ್ಯದ ಕುರಿತು ವಿಚಾರಿಸುತ್ತಾರೆ" ಎಂದು ಅವರು ಹೇಳುತ್ತಾರೆ.

"ಅಲ್ಲಿ [ದರ್ಭಾಂಗದಲ್ಲಿ] ಅವರು ನಿಮ್ಮನ್ನು ಸಂಪೂರ್ಣವಾಗಿ ಪ್ರಜ್ಞಾಹೀನರನ್ನಾಗಿ ಮಾಡುವುದಿಲ್ಲ. ನೀವು ಕಿರುಚಿಕೊಂಡರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸುನೀತಾ ಅವರು ಸರ್ಕಾರದಿಂದ 2,000 ರೂ.ಗಳನ್ನು ಪರಿಹಾರವಾಗಿ ಪಡೆಯಲು ಅರ್ಹರಾಗಿದ್ದಾರೆ. "ಆದರೆ ಅದು ನನ್ನ [ಬ್ಯಾಂಕ್] ಖಾತೆಗೆ ಬಂದಿದೆಯೇ ಎಂದು ನನಗೆ ತಿಳಿದಿಲ್ಲ. ಪರಿಶೀಲಿಸುವಂತೆ ನಾನು ಯಾರನ್ನೂ ಕೇಳಿಲ್ಲ" ಎಂದು ಅವರು ಹೇಳುತ್ತಾರೆ.

ಸಮಾಧಾನದ ನೋಟವು ಅವರ ಮುಖದಲ್ಲಿ ಕಾಣುತ್ತಿತ್ತು, ಅವರು ಮಾತು ಮುಗಿಸಿ, "ನಾನು ಕೊನೆಗೂ ಆಪರೇಷನ್‌ ಮಾಡಿಸಿಕೊಂಡಿದ್ದು ಒಳ್ಳೆಯದೇ ಆಯಿತು, ಇಲ್ಲದಿದ್ದರೆ ಆಗಾಗ್ಗೆ ಸಮಸ್ಯೆ ಉಂಟಾಗುತ್ತಿತ್ತು. ಈಗ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಮತ್ತು ನಾನು ಎಲ್ಲಾ ಸರಿಯಾಗಿದ್ದೇನೆ. ಇನ್ನೂ ಒಂದೆರಡು ಮಕ್ಕಳಾಗಿದ್ದರೆ ನಾನು ಇಲ್ಲವಾಗುತ್ತಿದ್ದೆ." ಆದರೆ ಅವರು ಅಸಮಾಧಾನವನ್ನೂ ವ್ಯಕ್ತಪಡಿಸುತ್ತಾರೆ. "ಇದಕ್ಕಾಗಿ ನಾನು ವಿವಿಧ ಆಸ್ಪತ್ರೆಗಳು ಮತ್ತು ಕ್ಲಿನಿಕ್ಕುಗಳ ಅನೇಕ ವೈದ್ಯರನ್ನು ಭೇಟಿಯಾಗಬೇಕಾಯಿತು. ಹೇಳಿ, ಇದರಿಂದಾಗಿ ನಾನು ನನ್ನ ಘನತೆಯನ್ನು ಕಳೆದುಕೊಳ್ಳಲಿಲ್ಲವೇ?"

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org. ಈ ವಿಳಾಸಕ್ಕೆ ಕಳುಹಿಸಿ.

ಅನುವಾದ: ಶಂಕರ. ಎನ್. ಕೆಂಚನೂರು

Sanskriti Talwar

Sanskriti Talwar is an independent journalist based in New Delhi. She reports on gender issues.

Other stories by Sanskriti Talwar
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru