ಆಕೆಗೆ ಈಗಿನ್ನೂ 22 ವರ್ಷ. ಆದರೆ ಈಗಲೇ ದೇಹ ಮೂರ್ನಾಲ್ಕು ವರ್ಷಗಳ ಅನಾರೋಗ್ಯದಿಂದಾಗಿ ಜರ್ಜರಿತಗೊಂಡಿದೆ. 2021ರ ಬೇಸಗೆಯ ಬೆಳಗಿನ ಹೊತ್ತು ನೀರಿಗೆಂದು ಹೋಗಿದ್ದ ಮೀನು ಸರ್ದಾರ್‌ಗೆ ಮುಂದೆ ಬರಬಹುದಾದ ಅಪಾಯದ ಅರಿವೇ ಇದ್ದಿರಲಿಲ್ಲ. ಅಂದು ಅವರ ಊರಾದ ದಯಾಪುರದ ಕೆರೆಯ ಮುರಿದ ಮೆಟ್ಟಿಲಿನ ದಾರಿಯಲ್ಲಿ ನಡೆಯುವಾಗ ಆಕೆ ಮುಖ ಅಡಿಯಾಗಿ ಜಾರಿ ಬಿದ್ದಿದ್ದರು.

“ನನ್ನ ಎದೆ ಮತ್ತು ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು,” ಎಂದು ಆಕೆ ಬೆಂಗಾಲಿಯಲ್ಲಿ ನೆನಪಿಸಿಕೊಂಡರು. “ಯೋನಿಯಿಂದ ರಕ್ತ ಸೋರತೊಡಗಿತು. ಬಾತ್‌ರೂಮ್‌ ಹೋದಾಗ ಒಳಗಿನಿಂದ ಏನೊ ನೆಲದ ಮೇಲೆ ಬಿತ್ತು. ನನ್ನ ದೇಹದಿಂದ ಮಾಂಸದ ತುಣುಕಿನಂತಹದ್ದು ಹೊರಬಂದಿತ್ತು. ಅದನ್ನು ಹೊರತೆಗೆಯಲು ಪ್ರಯತ್ನಿಸಿದೆ ಆದರೆ ಪೂರ್ತಿಯಾಗಿ ತೆಗೆಯಲು ಸಾಧ್ಯವಾಗಲಿಲ್ಲ.”

ಹತ್ತಿರದ ಹಳ್ಳಿಯ ಖಾಸಗಿ ಕ್ಲಿನಿಕ್ಕಿಗೆ ಹೋದಾಗ ಗರ್ಭಪಾತವಾಗಿರುವುದನ್ನು ದೃಢಪಡಿಸಿದರು. ತನ್ನೆಲ್ಲ ನೋವುಗಳ ನಡುವೆಯೂ ತೆಳ್ಳಗೆ, ಉದ್ದಕ್ಕಿದ್ದ ಮೀನು ತನ್ನ ಮುಖದಲ್ಲೊಂದು ನಗುವನ್ನು ಧರಿಸಿದ್ದರು. ಅಂದಿನಿಂದಲೂ ಅವರು ಅನಿಯಮಿತ ಋತುಚಕ್ರದ ಸಮಸ್ಯೆ ಹಾಗೂ ದೈಹಿಕ ಮತ್ತು ಮಾನಸಿಕ ಸಂಕಟಗಳನ್ನು ಅನುಭವಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗೋಸಬಾ ಬ್ಲಾಕಿನಲ್ಲಿರುವ ಮೀನು ಅವರ ಊರು ಸುಮಾರು 5,000 ಜನಸಂಖ್ಯೆಯನ್ನು ಹೊಂದಿದೆ. ವಿಸ್ತಾರವಾದ ಭತ್ತದ ಗದ್ದೆಗಳು ಮತ್ತು ಸುಂದರಬನದ ಮ್ಯಾಂಗ್ರೋವ್ ಕಾಡುಗಳಿಂದ ಸಮೃದ್ಧವಾಗಿರುವ ಇದು ಗೋಸಬಾದ ಬೆರಳೆಣಿಕೆಯಷ್ಟು ಒಳಾಂಗಣ ಹಳ್ಳಿಗಳು ಮಾತ್ರ ರಸ್ತೆ ಸಂಪರ್ಕ ಹೊಂದಿವೆ.

ಮೀನು ಜಾರಿಬಿದ್ದ ನಂತರ ತಿಂಗಳಿಗೂ ಹೆಚ್ಚು ಕಾಲ ರಕ್ತಸ್ರಾವವಾಗುತ್ತಿತ್ತು. ಜೊತೆಗೆ ಅವರ ನೋವಿನ ದಾರಿ ಅಲ್ಲಿಗೇ ಮುಗಿಯಲಿಲ್ಲ. “ಶಶ್ರಿಕ್‌ ಶಂಪೊರ್ಕೋ ಎಟೊ ಬಾತಾ ಕೋರೆ [ಸಂಭೋಗದ ಸಮಯದಲ್ಲಿ ಬಹಳ ನೋವಾಗುತ್ತದೆ].” ಎನ್ನುತ್ತಾರಾಕೆ. “ದೇಹವೇ ಪುಡಿಯಾದಂತೆ ಅನ್ನಿಸುತ್ತಿರುತ್ತದೆ. ಮಲವಿಸರ್ಜೆನೆಗೆಂದು ಒತ್ತಡ ಹಾಕಿದಾಗ ಅಥವಾ ಭಾರ ಎತ್ತುವಾಗ ಗರ್ಭಕೋಶ ಕೆಳಜಾರುವುದು ಅನುಭವಕ್ಕೆ ಬರುತ್ತದೆ.”

Meenu Sardar was bleeding for over a month after a miscarriage
PHOTO • Ritayan Mukherjee

ಗರ್ಭಪಾತವಾದ ಒಂದು ತಿಂಗಳ ನಂತರವೂ ಮೀನು ಅವರಿಗೆ ರಕ್ತಸ್ರಾವವಾಗುತ್ತಲೇ ಇತ್ತು

ಅನುಕೂಲನ ಮತ್ತು ಪರಿಸ್ಥಿತಿ ಅವರ ಪಾಲಿನ ಸಂಕಟವನ್ನು ಇನ್ನಷ್ಟು ಆಳವಾಗಿಸಿತು. ಹತ್ತನೇ ತರಗತಿಗಿಂತ ಹೆಚ್ಚು ಓದಿರದ ಮೀನು ತಾನು ಬಿದ್ದು ರಕ್ತಸ್ರಾವವಾದ ದಿನ ದಯಾಪುರದ ಆಶಾ ಕಾರ್ಯಕರ್ತೆ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತ) ಯನ್ನು ಸಂಪರ್ಕಿಸದಿರಲು ನಿರ್ಧರಿಸಿದರು. “ನನಗೆ ಗರ್ಭಪಾತವಾಗಿರುವುದು ಆಕೆಗೆ ತಿಳಿಯುವುದು ನನಗೆ ಇಷ್ಟವಿರಲಿಲ್ಲ. ಏಕೆಂದರೆ ಅದು ನಂತರ ಊರಿಗೆಲ್ಲ ಗೊತ್ತಾಗುವ ಸಾಧ್ಯತೆಯಿತ್ತು. ಅಲ್ಲದೆ ಈ ಬಗ್ಗೆ ಪರಿಹಾರವೂ ಆಕೆಗೆ ತಿಳಿದಿರುತ್ತದೆಂದು ನನಗೆ ಅನ್ನಿಸಿರಲಿಲ್ಲ.”

ಮೀನು ಮತ್ತು ಅವರ ಪತಿ ಬಪ್ಪಾ ಸರ್ದಾರ್ ಮಗುವನ್ನು ಹೊಂದುವ ಯೋಚನೆಯಲ್ಲಿದ್ದಿರಲಿಲ್ಲ, ಆದರೆ ಆ ಸಮಯದಲ್ಲಿ ಾವರು ಯಾವುದೇ ಗರ್ಭನಿರೋಧಕವನ್ನು ಬಳಸುತ್ತಿರಲಿಲ್ಲ. "ನಾನು ಮದುವೆಯಾದಾಗ ಕುಟುಂಬ ಯೋಜನಾ ವಿಧಾನಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಯಾರೂ ನನಗೆ ಆ ಕುರಿತು ಹೇಳಲಿಲ್ಲ. ಗರ್ಭಪಾತದ ನಂತರವೇ ನಾನು ಅದರ ಬಗ್ಗೆ ತಿಳಿದುಕೊಂಡೆ."

ದಯಾಪುರದಿಂದ 12 ಕಿಲೋಮೀಟರ್ ದೂರದಲ್ಲಿರುವ ಗೋಸಾಬಾ ಗ್ರಾಮೀಣ ಆಸ್ಪತ್ರೆಯಲ್ಲಿ ನೇಮಕಗೊಂಡಿರುವ ಏಕೈಕ ಮಹಿಳಾ ಸ್ತ್ರೀರೋಗ ತಜ್ಞರ ಬಗ್ಗೆ ಮೀನುವಿಗೆ ತಿಳಿದಿದೆ, ಆದರೆ ಡಾಕ್ಟರ್ ಎಂದಿಗೂ ಲಭ್ಯವಿರಲಿಲ್ಲ. ಅವರ ಹಳ್ಳಿಯಲ್ಲಿ ಪರವಾನಗಿ ರಹಿತ ಆರೋಗ್ಯ ಆರೈಕೆ ಪೂರೈಕೆದಾರರಾದ ಇಬ್ಬರು ಗ್ರಾಮೀಣ ವೈದ್ಯಕೀಯ ವೈದ್ಯರು (ಆರ್‌ಎಂಪಿಗಳು) ಇದ್ದಾರೆ.

ದಯಾಪುರದ ಆರ್‌ಎಂಪಿಗಳಲ್ಲಿ ಇಬ್ಬರೂ ಪುರುಷರು.

"ನನ್ನ ಸಮಸ್ಯೆಯನ್ನು ಒಬ್ಬ ಗಂಡಸಿನೆದುರು ಹೇಳಿಕೊಳ್ಳಲು ನನಗೆ ಸರಿಯಾಗುತ್ತಿರಲಿಲ್ಲ. ಅಲ್ಲದೆ, ಅವರಿಗೆ ಪರಿಣತಿ ಇಲ್ಲ," ಎಂದು ಅವರು ಹೇಳುತ್ತಾರೆ.

ಮೀನು ಮತ್ತು ಬಪ್ಪಾ ಜಿಲ್ಲೆಯ ಹಲವಾರು ಖಾಸಗಿ ವೈದ್ಯರನ್ನು ಭೇಟಿ ಮಾಡಿದರು, ಮತ್ತು ಕೋಲ್ಕತ್ತಾದಲ್ಲಿ ಒಬ್ಬರ ಬಳಿ ರೂ. 10,000ಕ್ಕಿಂತ ಹೆಚ್ಚು ಖರ್ಚು ಮಾಡಿದರು, ಆದರೆ ದುರದೃಷ್ಟವಶಾತ್ ಈ ದಂಪತಿಗಳ ಏಕೈಕ ಆದಾಯದ ಮೂಲವೆಂದರೆ ಬಪ್ಪಾ ಅವರು ಕೆಲಸ ಮಾಡುವ ಸಣ್ಣ ಕಿರಾಣಿ ಅಂಗಡಿಯಿಂದ 5,000 ರೂ. ಸಂಬಳ. ವೈದ್ಯಕೀಯ ಸಮಾಲೋಚನೆಗಳಿಗೆ ಪಾವತಿಸಲು ಅವರು ಸ್ನೇಹಿತರಿಂದ ಸಾಲ ಪಡೆದರು.

A number of women in the Sundarbans have had hysterectomy, travelling to hospitals 4-5 hours away for the surgery
PHOTO • Ritayan Mukherjee
A number of women in the Sundarbans have had hysterectomy, travelling to hospitals 4-5 hours away for the surgery
PHOTO • Ritayan Mukherjee

ಸುಂದರ್ ಬನದ ಹಲವಾರು ಮಹಿಳೆಯರು ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಗೆ 4-5 ಗಂಟೆಗಳ ದೂರದಲ್ಲಿರುವ ಆಸ್ಪತ್ರೆಗಳಿಗೆ ಪ್ರಯಾಣಿ ಸಿದ್ದಾರೆ

ದಯಾಪುರದ ಹೋಮಿಯೋಪತಿಯಿಂದ ಮಾತ್ರೆಗಳ ಕೋರ್ಸ್ ಅಂತಿಮವಾಗಿ ಅವರ ಋತುಚಕ್ರವನ್ನು ಸರಿಯಾದ ಸ್ಥಿತಿಗೆ ತಂದಿತು. ತನ್ನ ಗರ್ಭಪಾತದ ಬಗ್ಗೆ ಚರ್ಚಿಸಲು ಆರಾಮದಾಯಕವಾಗಿದ್ದ ಏಕೈಕ ಪುರುಷ ವೈದ್ಯ ಅವರಾಗಿದ್ದರು ಎಂದು ಆಕೆ ಹೇಳುತ್ತಾರೆ. ಅವರ ನಿರಂತರ ಯೋನಿ ಸ್ರಾವ ಮತ್ತು ತೀವ್ರ ಅಸ್ವಸ್ಥತೆಗೆ ಕಾರಣ ಪತ್ತೆಹಚ್ಚಲು ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಮಾಡಿಸುವಂತೆ ಹೇಳಲಾಗಿದೆಯಾದರೂ, ಅದನ್ನು ಮಾಡಿಸಲುಮೀನು ಸಾಕಷ್ಟು ಹಣವನ್ನು ಒಟ್ಟುಮಾಡುವ ತನಕ ಇದಕ್ಕಾಗಿ ಕಾಯಬೇಕಾಗುತ್ತದೆ.

ಅಲ್ಲಿಯವರೆಗೆ, ಆಕೆ ಭಾರವಾದ ವಸ್ತುಗಳನ್ನು ಎತ್ತಲು ಸಾಧ್ಯವಿಲ್ಲ, ಮತ್ತು ಆಗಾಗ ವಿಶ್ರಾಂತಿ ಪಡೆಯಬೇಕಾಗುತ್ತದೆ.

ಆರೋಗ್ಯ ರಕ್ಷಣೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ಮೀನು ಅವರ ಸವೆಸಿದ ಈ ಸುತ್ತುಬಳಸಿನ ದಾರಿ ಸುಂದರಬನದಲ್ಲಿನ ಎಲ್ಲ ಹೆಂಗಸರ ದಾರಿಯೂ ಹೌದು. ಭಾರತದ ಸುಂದರಬನದಲ್ಲಿ ಆರೋಗ್ಯ ವ್ಯವಸ್ಥೆಯ ಆಯ್ಕೆಗಳ ಕುರಿತ 2016ರ ಅಧ್ಯಯನವು ಇಲ್ಲಿನ ನಿವಾಸಿಗಳಿಗೆ ಆರೋಗ್ಯ ರಕ್ಷಣೆಯಲ್ಲಿ ಆಯ್ಕೆಗಳ ಕೊರತೆಯಿದೆ ಎಂದು ಹೇಳುತ್ತದೆ. ಸಾರ್ವಜನಿಕವಾಗಿ ಹೂಡಿಕೆ ಮಾಡಲಾದ ಸೌಲಭ್ಯಗಳು "ಅಸ್ತಿತ್ವದಲ್ಲಿಲ್ಲ ಅಥವಾ ಕಾರ್ಯನಿರ್ವಹಿಸುತ್ತಿಲ್ಲ", ಮತ್ತು ಭೂಪ್ರದೇಶದಿಂದಾಗಿ ಕ್ರಿಯಾತ್ಮಕ ಸೌಲಭ್ಯಗಳಿಗೆ ಭೌತಿಕವಾಗಿ ಪ್ರವೇಶಿಸಲು ಸಾಧ್ಯವಿಲ್ಲ. ಈ ಅಂತರವನ್ನು ತುಂಬುವುದು ಅನೌಪಚಾರಿಕ ಆರೋಗ್ಯ ಆರೈಕೆ ಪೂರೈಕೆದಾರರ ಸೈನ್ಯವಾಗಿದೆ, "ಹವಾಮಾನ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಸಾಮಾನ್ಯ ಸಮಯದಲ್ಲಿ ಇದು ಏಕೈಕ ಆಶ್ರಯವಾಗಿದೆ," ಎಂದು ಅಧ್ಯಯನವು ಸೂಚಿಸುತ್ತದೆ, ಇದು ಆರ್‌ಎಂಪಿಗಳ ಸಾಮಾಜಿಕ ಜಾಲವನ್ನು ಪರಿಶೀಲಿಸುತ್ತದೆ.

*****

ಇದು ಮೀನು ಎದುರಿಸಿದ ಮೊದಲ ಆರೋಗ್ಯ ಸಮಸ್ಯೆಯಾಗಿರಲಿಲ್ಲ. 2018ರಲ್ಲಿ, ದೇಹದಾದ್ಯಂತ ತುರಿಕೆ ದದ್ದಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಕೆಂಪು ದದ್ದು ತೋಳುಗಳು, ಕಾಲುಗಳು, ಎದೆ ಮತ್ತು ಮುಖವನ್ನು ಆವರಿಸಿತು. ಮೀನುವಿಗೆ ತೋಳು ಮತ್ತು ಕಾಲುಗಳು ಊದಿಕೊಳ್ಳುತ್ತಿರುವುದು ಅನುಭವಕ್ಕೆ ಬರತೊಡಗಿತ್ತು. ಸೆಕೆಯು ತುರಿಕೆಯನ್ನು ಉಲ್ಬಣಗೊಳಿಸಿತು. ಕುಟುಂಬವು ಆಗ ವೈದ್ಯರ ಸಲಹೆ ಮತ್ತು ಔಷಧಿಗಳ ಮೇಲೆ ಸುಮಾರು 20,000 ರೂ. ಖರ್ಚು ಮಾಡಿತ್ತು.

“ಆಗ ಒಂದು ವರ್ಷಕ್ಕೂ ಹೆಚ್ಚು ಕಾಲ ಆಸ್ಪತ್ರೆಗೆ ಹೋಗುವುದೇ ನನ್ನ ಬದುಕಾಗಿತ್ತು.” ಎನ್ನುತ್ತಾರವರು. ಬಹಳ ನಿಧಾನವಾಗಿ ವಾಸಿಯಾಗಿತ್ತು. ಅದು ಮತ್ತೆ ಬರಬಹುದೆನ್ನುವ ಭಯ ಅವರನ್ನು ಕಾಡುತ್ತಲೇ ಇತ್ತು.

The high salinity of water is one of the major causes of gynaecological problems in these low-lying islands in the Bay of Bengal
PHOTO • Ritayan Mukherjee

ಬಂಗಾಳ ಕೊಲ್ಲಿಯಲ್ಲಿರುವ ಈ ತಗ್ಗು ದ್ವೀಪಗಳಲ್ಲಿ ಸ್ತ್ರೀರೋಗ ಸಮಸ್ಯೆಗಳಿಗೆ ನೀರಿನಲ್ಲಿ ಹೆಚ್ಚಿನ ಉಪ್ಪಿನಂಶವಿರುವುದು ಪ್ರಮುಖ ಕಾರಣವಾಗಿದೆ

ಮೀನು ವಾಸಿಸುವ ಸ್ಥಳದಿಂದ 10 ಕಿಲೋಮೀಟರಿಗಿಂತ ಕಡಿಮೆ ದೂರದಲ್ಲಿ, ರಜತ್ ಜುಬಿಲಿ ಗ್ರಾಮದ 51 ವರ್ಷದ ಆಲಾಪಿ ಮೊಂಡಲ್, ಇದೇ ರೀತಿಯ ಕಥೆಯನ್ನು ವಿವರಿಸುತ್ತಾರೆ. “ಮೂರು ಅಥವಾ ನಾಲ್ಕು ವರ್ಷಗಳ ಹಿಂದೆ, ನನ್ನ ಚರ್ಮದ ಮೇಲೆ ತೀವ್ರವಾದ ತುರಿಕೆ ಅನುಭವಿಸಿದ್ದೆ, ಕೆಲವೊಮ್ಮೆ ಕೀವು ಹೊರಹೋಗುವಷ್ಟು ತೀವ್ರವಾಗಿರುತ್ತಿತ್ತು. ಇದೇ ಸಮಸ್ಯೆಯನ್ನು ಅನುಭವಿಸಿರುವ ಇತರ ಅನೇಕ ಮಹಿಳೆಯರನ್ನು ನಾನು ಕಂಡಿದ್ದೇನೆ. ಒಂದು ಹಂತದಲ್ಲಿ, ನಮ್ಮ ಹಳ್ಳಿ ಮತ್ತು ಅಕ್ಕಪಕ್ಕದ ಹಳ್ಳಿಗಳ ಪ್ರತಿ ಕುಟುಂಬದಲ್ಲೂ ಚರ್ಮದ ಸೋಂಕು ಕಂಡುಬಂದಿತ್ತು. ಇದು ಒಂದು ರೀತಿಯ ವೈರಸ್ ಎಂದು ವೈದ್ಯರು ನನಗೆ ಹೇಳಿದರು.

ಮೀನುಗಾರ ಮಹಿಳೆ ಆಲಾಪಿ ಸುಮಾರು ಒಂದು ವರ್ಷದಿಂದ ಔಷಧಿ ಸೇವಿಸಿ ಈಗ ಗುಣಮುಖರಾಗಿದ್ದಾರೆ. ಆಕೆ ಸೋನಾರ್‌ಪುರ ಬ್ಲಾಕ್‌ನಲ್ಲಿರುವ ಚಾರಿಟಬಲ್ ಖಾಸಗಿ ಕ್ಲಿನಿಕ್‌ನಲ್ಲಿ ಕೇವಲ ಪ್ರತಿ ಭೇಟಿಗೆ 2 ರೂಪಾಯಿಯಂತೆ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಯಿತು. ಆದರೆ ಔಷಧಿಗಳು ದುಬಾರಿಯಾಗಿದ್ದವು. ಆಕೆಯ ಕುಟುಂಬ ಆಕೆಯ ಚಿಕಿತ್ಸೆಗೆ 13,000 ರೂ. ಖರ್ಚು ಮಾಡಿದೆ. ಕ್ಲಿನಿಕ್ ಭೇಟಿ 4-5 ಗಂಟೆಗಳ ಪ್ರಯಾಣ ಒಳಗೊಂಡಿತ್ತು. ಅವರ ಹಳ್ಳಿಯಲ್ಲಿ ಸಣ್ಣ ಸರ್ಕಾರಿ ಕ್ಲಿನಿಕ್ ಇದೆ, ಆದರೆ ಅದರ ಅಸ್ತಿತ್ವದ ಬಗ್ಗೆ ಆಕೆಗೆ ತಿಳಿದಿರಲಿಲ್ಲ.

"ನನ್ನ ಚರ್ಮದ ಸಮಸ್ಯೆಗಳು ಉಲ್ಬಣಗೊಂಡ ನಂತರ, ನಾನು ಮೀನು ಹಿಡಿಯುವುದನ್ನು ನಿಲ್ಲಿಸಿದೆ" ಎಂದು ಅವರು ಹೇಳುತ್ತಾರೆ. ಮೊದಲು, ಅವರು ನದಿ ತೀರದಿಂದ ದೂರ ಹೋಗುತ್ತಿದ್ದರು, ಆಗಾಗ್ಗೆ ಗಂಟೆಗಟ್ಟಲೆ ನೀರಿನಲ್ಲಿ ಕುತ್ತಿಗೆ-ಆಳದ ನೀರಿನಲ್ಲಿ ನಿಂತು, ಟೈಗರ್‌ ಪ್ರಾವ್ನ್ಸ್‌ ಹಿಡಿಯಲು ಬಲೆ ಹಾಕುತ್ತಿದ್ದರು. ಅವರು ಮತ್ತೆಂದೂ ಮೀನುಗಾರಿಕೆಗೆ ಇಳಿಯಲಿಲ್ಲ.

ರಜತ್ ಜುಬಿಲಿಯಲ್ಲಿ ಹಲವಾರು ಮಹಿಳೆಯರು ಚರ್ಮದ ಕಾಯಿಲೆಗಳನ್ನು ಅನುಭವಿಸಿದ್ದಾರೆ, ಇದಕ್ಕೆ ಲವಣಯುಕ್ತ ನೀರು ಕಾರಣ ಎನ್ನುವುದು ಅವರ ದೂರು.

PHOTO • Labani Jangi

ಇದು ಮೀನು ಎದುರಿಸಿದ ಮೊದಲ ಆರೋಗ್ಯ ಸಮಸ್ಯೆಯಾಗಿರಲಿಲ್ಲ. 2018ರಲ್ಲಿ, ದೇಹದಾದ್ಯಂತ ತುರಿಕೆ ದದ್ದಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಕೆಂಪು ದದ್ದು ತೋಳುಗಳು, ಕಾಲುಗಳು, ಎದೆ ಮತ್ತು ಮುಖವನ್ನು ಆವರಿಸಿತು

ʼಪಾಂಡ್ ಇಕೋಸಿಸ್ಟಮ್ಸ್ ಆಫ್ ದಿ ಇಂಡಿಯನ್ ಸುಂದರಬನ್ಸ್ʼ ಪುಸ್ತಕದಲ್ಲಿನ ಪ್ರಕಟವಾದ ಸ್ಥಳೀಯ ಜೀವನೋಪಾಯದ ಮೇಲೆ ನೀರಿನ ಗುಣಮಟ್ಟದ ಪ್ರಭಾವದ ಕುರಿತಾದ ಪ್ರಬಂಧದಲ್ಲಿ, ಲೇಖಕ ಸೌರವ್ ದಾಸ್ ಅವರು ಜನರು ಅಡುಗೆ, ಸ್ನಾನ ಮತ್ತು ತೊಳೆಯಲು ಲವಣಯುಕ್ತ ಕೊಳದ ನೀರನ್ನು ಬಳಸುವುದರಿಂದ ಚರ್ಮ ರೋಗಗಳಿಗೆ ಒಳಗಾಗುತ್ತಾರೆ ಎಂದು ಬರೆದಿದ್ದಾರೆ. ಸೀಗಡಿ ಮರಿ ರೈತರು ದಿನಕ್ಕೆ 4-6 ಗಂಟೆಗಳ ಕಾಲ ಲವಣಯುಕ್ತ ನದಿ ನೀರಿನಲ್ಲಿ ಕಳೆಯುತ್ತಾರೆ. "ಅವರು ಲವಣಯುಕ್ತ ನೀರಿನ ಬಳಕೆಯಿಂದ ಸಂತಾನೋತ್ಪತ್ತಿ ಪ್ರದೇಶದ ಸೋಂಕಿನಿಂದ ಬಳಲುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ.

ಏರುತ್ತಿರುವ ಸಮುದ್ರ ಮಟ್ಟಗಳು, ಚಂಡಮಾರುತಗಳು ಮತ್ತು ಚಂಡಮಾರುತದ ಏರಿಳಿತಗಳು - ಹವಾಮಾನ ಬದಲಾವಣೆಯ ಎಲ್ಲಾ ಸೂಚನೆಗಳು - ಸೀಗಡಿ ಸಾಕಾಣಿಕೆ ಮತ್ತು ಕಡಿಮೆಯಾದ ಮ್ಯಾಂಗ್ರೋವ್ ಹೊದಿಕೆಯ ಕಾರಣ ಸುಂದರಬನದಲ್ಲಿನ ನೀರಿನ ಹೆಚ್ಚಿನ ಅಸಹಜ ಲವಣಾಂಶಕ್ಕೆ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ಕುಡಿಯುವ ನೀರು ಸೇರಿದಂತೆ ಎಲ್ಲಾ ನೀರಿನ ಸಂಪನ್ಮೂಲಗಳ ಉಪ್ಪುನೀರಿನ ಮಾಲಿನ್ಯವು ಏಷ್ಯಾದ ದೊಡ್ಡ ನದಿ ಮುಖಗಳಿಗೆ ವಿಶಿಷ್ಟವಾಗಿದೆ.

ಕೋಲ್ಕತ್ತಾದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿರುವ ಮತ್ತು ಸುಂದರಬನ್ಸ್ ಪ್ರದೇಶದೆಲ್ಲೆಡೆ ವೈದ್ಯಕೀಯ ಶಿಬಿರಗಳನ್ನು ನಡೆಸಿರುವ ಡಾ. ಶ್ಯಾಮೋಲ್ ಚಕ್ರವರ್ತಿ ಹೇಳುವಂತೆ, "ಸುಂದರಬನದಲ್ಲಿ, ನೀರಿನಲ್ಲಿ ಹೆಚ್ಚಿನ ಲವಣಾಂಶವು ಸ್ತ್ರೀರೋಗ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ವಿಶೇಷವಾಗಿ ಸೊಂಟದ ಉರಿಯೂತದ ಕಾಯಿಲೆಯ ಹೆಚ್ಚಿನ ಪ್ರಮಾಣವಾಗಿದೆ." "ಆದರೆ ಉಪ್ಪು ನೀರು ಮಾತ್ರ ಕಾರಣವಲ್ಲ. ಸಾಮಾಜಿಕ-ಆರ್ಥಿಕ ಸ್ಥಿತಿ, ಪರಿಸರ ಸ್ಥಿತಿ, ಪ್ಲಾಸ್ಟಿಕ್ ಬಳಕೆ, ನೈರ್ಮಲ್ಯ, ಪೌಷ್ಟಿಕತೆ ಮತ್ತು ಆರೋಗ್ಯ ಆರೈಕೆ ವಿತರಣಾ ವ್ಯವಸ್ಥೆಗಳು ಎಲ್ಲವೂ ಪ್ರಮುಖ ಪಾತ್ರ ವಹಿಸುತ್ತವೆ."

ಅಂತಾರಾಷ್ಟ್ರೀಯ ಮಾಧ್ಯಮ ಬೆಂಬಲ ಸಂಸ್ಥೆಯಾದ ಇಂಟರ್ ನ್ಯೂಸ್‌ನ ಹಿರಿಯ ಆರೋಗ್ಯ ಮಾಧ್ಯಮ ಸಲಹೆಗಾರರಾದ ಡಾ. ಜಯಾ ಶ್ರೀಧರ್ ಅವರ ಪ್ರಕಾರ, ಈ ಪ್ರದೇಶದ ಮಹಿಳೆಯರು ದಿನಕ್ಕೆ 4-7 ಗಂಟೆಗಳ ಕಾಲ ಉಪ್ಪು ನೀರಿಗೆ ಒಡ್ಡಿಕೊಳ್ಳುತ್ತಾರೆ, ವಿಶೇಷವಾಗಿ ಸೀಗಡಿ ರೈತರು. ಅವರು ಭೇದಿ, ಅತಿಸಾರ, ಚರ್ಮ ರೋಗಗಳು, ಹೃದಯ ಸಂಬಂಧಿ ಕಾಯಿಲೆಗಳು, ಕಿಬ್ಬೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್ ಹುಣ್ಣುಗಳು ಸೇರಿದಂತೆ ಹಲವಾರು ತೊಂದರೆಗಳಿಗೆ ಒಳಗಾಗುತ್ತಾರೆ. ಉಪ್ಪು ನೀರು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು, ವಿಶೇಷವಾಗಿ ಮಹಿಳೆಯರಲ್ಲಿ, ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಕೆಲವೊಮ್ಮೆ ಗರ್ಭಪಾತಕ್ಕೆ ಕಾರಣವಾಗಬಹುದು.

Saline water in sundarbans
PHOTO • Urvashi Sarkar
Sundarbans
PHOTO • Urvashi Sarkar

ಸುಂದರಬನದ ನೀರಿನಲ್ಲಿನ ಹೆಚ್ಚಿನ ಮಟ್ಟದ ಉಪ್ಪಿನ ಅಂಶವು ಮಹಿಳೆಯರನ್ನು ಚರ್ಮದ ಕಾಯಿಲೆಗಳಿಗೆ ಒಳಗಾಗುವಂತೆ ಮಾಡುತ್ತದೆ

*****

ಸುಂದರಬನದ 15-59 ವಯೋಮಾನದ ಜನರಲ್ಲಿ, ಮಹಿಳೆಯರು ಪುರುಷರಿಗಿಂತ ಅಸಮಾನವಾಗಿ ಹೆಚ್ಚಿನ ಕಾಯಿಲೆಗಳ ಹೊರೆಯನ್ನು ಹೊಂದಿದ್ದಾರೆ ಎಂದು ಕೋಲ್ಕತ್ತಾ ಮೂಲದ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್ಮೆಂಟ್ ರಿಸರ್ಚ್ 2010ರ ಅಧ್ಯಯನವು ಹೇಳುತ್ತದೆ.

ದಕ್ಷಿಣ 24 ಪರಗಣದಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ದಕ್ಷಿಣ 24 ಪರಗಣದ ಎನ್‌ಜಿಒ ಸದರ್ನ್ ಹೆಲ್ತ್ ಇಂಪ್ರೂವ್‌ಮೆಂಟ್ ಸಮಿತಿ ನಡೆಸುತ್ತಿರುವ ಮೊಬೈಲ್ ವೈದ್ಯಕೀಯ ಘಟಕದ ಸಂಯೋಜಕ ಅನ್ವರುಲ್ ಆಲಂ, ತಮ್ಮ ಪ್ರಯಾಣದ ವೈದ್ಯಕೀಯ ಘಟಕವು ಸುಂದರಬನದಲ್ಲಿ ವಾರಕ್ಕೆ 400-450 ರೋಗಿಗಳನ್ನು ಕಾಣುತ್ತದೆ ಎಂದು ಹೇಳುತ್ತಾರೆ. ಸುಮಾರು 60 ಪ್ರತಿಶತ ಮಹಿಳೆಯರು, ಇವರಲ್ಲಿ ಅನೇಕರು ಚರ್ಮದ ದೂರುಗಳು, ಲ್ಯೂಕೊರೋವಾ (ಯೋನಿ ವಿಸರ್ಜನೆ), ರಕ್ತಹೀನತೆ ಮತ್ತು ಅಮೆನೋರಿಯಾ (ಅನಿಯಮಿತ ಮಟ್ಟು ಅಥವಾ ಮುಟ್ಟಿನ ಅನುಪಸ್ಥಿತಿ) ಹೊಂದಿರುತ್ತಾರೆ.

ಮಹಿಳಾ ರೋಗಿಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂದು ಆಲಂ ಹೇಳುತ್ತಾರೆ. "ಹೆಚ್ಚಿನ ಹಣ್ಣುಗಳು ಮತ್ತು ತರಕಾರಿಗಳನ್ನು ದೋಣಿಯ ಮೂಲಕ ದ್ವೀಪಗಳಿಗೆ ತರಲಾಗುತ್ತದೆ ಮತ್ತು ಸ್ಥಳೀಯವಾಗಿ ಬೆಳೆಯುವುದಿಲ್ಲ. ಪ್ರತಿಯೊಬ್ಬರೂ ಅವುಗಳನ್ನು ಭರಿಸಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ಹೆಚ್ಚುತ್ತಿರುವ ಶಾಖ ಮತ್ತು ಶುದ್ಧ ನೀರಿನ ಕೊರತೆಯೂ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ" ಎಂದು ಅವರು ಹೇಳುತ್ತಾರೆ.

ಮೀನು ಮತ್ತು ಆಲಾಪಿ ಹೆಚ್ಚಿನ ದಿನಗಳಲ್ಲಿ ಅಕ್ಕಿ, ಬೇಳೆ, ಆಲೂಗಡ್ಡೆ ಮತ್ತು ಮೀನನ್ನು ಆಹಾರವಾಗಿ ತಿನ್ನುತ್ತಾರೆ. ಅವರು ತಾವು ಬೆಳೆಯದ ಕಾರಣ ಸ್ವಲ್ಪವೇ ಹಣ್ಣು ಮತ್ತು ತರಕಾರಿಗಳನ್ನು ತಿನ್ನುತ್ತಾರೆ. ಮೀನು ಅವರಂತೆಯೇ ಆಲಾಪಿ ಕೂಡ ಅನೇಕ ಕಾಯಿಲೆಗಳನ್ನು ಹೊಂದಿದ್ದಾರೆ.

PHOTO • Labani Jangi

ಏರುತ್ತಿರುವ ಸಮುದ್ರ ಮಟ್ಟಗಳು, ಚಂಡಮಾರುತಗಳು ಮತ್ತು ಚಂಡಮಾರುತದ ಏರಿಳಿತಗಳು - ಹವಾಮಾನ ಬದಲಾವಣೆಯ ಎಲ್ಲಾ ಸೂಚನೆಗಳು ಎಂದು ಅಧ್ಯಯನಗಳು ಹೇಳುತ್ತವೆ

ಸುಮಾರು ಐದು ವರ್ಷಗಳ ಹಿಂದೆ, ಆಲಾಪಿಗೆ ಅತಿಯಾದ ರಕ್ತಸ್ರಾವದ ಅನುಭವವಾಗಿತ್ತು. "ಸೋನೋಗ್ರಫಿಯಲ್ಲಿ ಗೆಡ್ಡೆ ಕಾಣಿಸಿಕೊಂಡ ನಂತರ ನನ್ನ ಜರಾಯು (ಗರ್ಭಾಶಯ) ತೆಗೆದುಹಾಕಲು ನಾನು ಮೂರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ನನ್ನ ಕುಟುಂಬವು 50,000 ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿರಬೇಕು" ಎಂದು ಅವರು ಹೇಳುತ್ತಾರೆ. ಮೊದಲ ಶಸ್ತ್ರಚಿಕಿತ್ಸೆಯಿಂದ ಅಪೆಂಡಿಕ್ಸ್ ತೆಗೆದುಹಾಕಲಾಯಿತು, ಮತ್ತು ಉಳಿದ ಎರಡು ಗರ್ಭಾಶಯ ತೆಗೆಯುವಿಕೆಯನ್ನು ಪೂರ್ಣಗೊಳಿಸಿತು.

ಇದು ನೆರೆಯ ಬಾಸಂತಿ ಬ್ಲಾಕ್‌ ನ ಸೋನಾಖಾಲಿ ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಗೆ ದೀರ್ಘ ಪ್ರಯಾಣವಾಗಿತ್ತು, ಅಲ್ಲಿ ಆಲಾಪಿಯ ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಲಾಪಿ ರಜತ್ ಜ್ಯುಬಿಲಿಯಿಂದ ಗೋಸಬಾದ ದೋಣಿ ಘಾಟ್ ಗೆ ದೋಣಿಯಲ್ಲಿ ಹೋಗಬೇಕಾಗಿತ್ತು, ಗಧ್ಖಾಲಿ ಗ್ರಾಮದ ದೋಣಿ ಘಾಟ್ ಗೆ ಮತ್ತೊಂದು ದೋಣಿ, ಮತ್ತು ಅಲ್ಲಿಂದ ಸೋನಾಖಾಲಿಗೆ ಬಸ್ ಅಥವಾ ಶೇರ್ ವ್ಯಾನ್ - ಇಡೀ ಪ್ರಯಾಣವು ಒಂದು ದಾರಿಯಲ್ಲಿ 2-3 ಗಂಟೆಗಳನ್ನು ತೆಗೆದುಕೊಂಡಿತು.

ಇಬ್ಬರು ಮಕ್ಕಳು, ಒಬ್ಬ ಮಗ ಮತ್ತು ಒಬ್ಬ ಮಗಳನ್ನು ಹೊಂದಿರುವ ಆಲಾಪಿಗೆ ರಜತ್ ಜ್ಯುಬಿಲಿಯಲ್ಲಿ ಹಿಸ್ಟೆರೆಕ್ಟೋಮಿ ಒಳಗಾಗಿರುವ ಕನಿಷ್ಠ ನಾಲ್ಕು ಅಥವಾ ಐದು ಇತರ ಮಹಿಳೆಯರು ತಿಳಿದಿದ್ದಾರೆ.

ಅವರಲ್ಲಿ 40 ವರ್ಷದ ಮೀನುಗಾರ ಮಹಿಳೆ ಬಾಸಂತೀ ಮಂಡಲ್ ಒಬ್ಬರು. "ನನ್ನ ಗರ್ಭಾಶಯದಲ್ಲಿ ಗಡ್ಡೆ ಇದೆಯೆಂದು ವೈದ್ಯರು ಹೇಳಿದರು. ಈ ಮೊದಲು, ಮೀನುಗಾರಿಕೆಗೆ ಹೋಗಲು ನನಗೆ ಸಾಕಷ್ಟು ಶಕ್ತಿ ಇತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬಲ್ಲೆ" ಎಂದು ಮೂರು ಮಕ್ಕಳ ತಾಯಿ ಹೇಳುತ್ತಾರೆ. "ಆದರೆ ನನ್ನ ಗರ್ಭಾಶಯವನ್ನು ತೆಗೆದ ನಂತರ ಈಗ ನನಗೆ ಅಷ್ಟು ಶಕ್ತಿಯಿಲ್ಲ." ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಅವಳು 40,000 ರೂ. ಪಾವತಿಸಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 (2015-16) ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ 15 ರಿಂದ 49 ವರ್ಷ ವಯಸ್ಸಿನ ಶೇಕಡಾ 2.1 ರಷ್ಟು ಮಹಿಳೆಯರು ಹಿಸ್ಟೆರೆಕ್ಟೋಮಿಗಳಿಗೆ ಒಳಗಾಗಿದ್ದಾರೆ - ಇದು ನಗರ ಪಶ್ಚಿಮ ಬಂಗಾಳದ ದರವಾದ ಶೇಕಡಾ 1.9ಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಿದೆ. (ಅಖಿಲ ಭಾರತ ದರವು ಶೇಕಡಾ 3.2 ಆಗಿತ್ತು.)

For women in the Sundarbans, their multiple health problems are compounded by the difficulties in accessing healthcare
PHOTO • Urvashi Sarkar

ಸುಂದರ್‌ಬನ್‌ನ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಇದಕ್ಕೆ ಮುಖ್ಯ ಕಾರಣವೆಂದರೆ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಪಡೆಯಲು ಇರುವ ತೊಂದರೆಗಳು

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಂಗಾಳಿ ದೈನಿಕ ಆನಂದಬಜಾರ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, ಪತ್ರಕರ್ತೆ ಸ್ವಾತಿ ಭಟ್ಟಾಚಾರ್ಜಿ ಅವರು ಸುಂದರಬನದಲ್ಲಿ, ಯೋನಿ ಸೋಂಕು, ಅತಿಯಾದ ಅಥವಾ ಅನಿಯಮಿತ ರಕ್ತಸ್ರಾವ, ನೋವಿನಿಂದ ಕೂಡಿದ ಲೈಂಗಿಕ ಸಂಭೋಗ ಅಥವಾ ಸೊಂಟದ ಉರಿಯೂತದ ದೂರಿನೊಂದಿಗೆ ಆಸ್ಪತ್ರೆಗೆ ಬಂದ 26-36 ವರ್ಷ ವಯಸ್ಸಿನ ಮಹಿಳೆಯರು ಗರ್ಭಾಶಯ ತೆಗೆದುಹಾಕುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಬರೆದಿದ್ದಾರೆ.

ಅನರ್ಹ ವೈದ್ಯರು ಈ ಮಹಿಳೆಯರನ್ನು ನೀವು ಗರ್ಭಾಶಯದ ಗಡ್ಡೆಗಳನ್ನು ಹೊಂದಿರುವುದಾಗಿ ಹೆದರಿಸುತ್ತಾರೆ ಮತ್ತು ನಂತರ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಹೇಳುತ್ತಾರೆ. ಭಟ್ಟಾಚಾರ್ಜಿ ಅವರ ಪ್ರಕಾರ, ಲಾಭಕೋರ ಖಾಸಗಿ ಕ್ಲಿನಿಕ್ಕುಗಳು ರಾಜ್ಯ ಸರ್ಕಾರದ ಸ್ವಾಸ್ತ್ಯ ಸಾತಿ ವಿಮಾ ಯೋಜನೆಯ ಲಾಭವನ್ನು ಪಡೆಯುತ್ತವೆ, ಇದು ಫಲಾನುಭವಿ ಕುಟುಂಬಗಳಿಗೆ ವಾರ್ಷಿಕವಾಗಿ 5 ಲಕ್ಷ ರೂ.ಗಳವರೆಗೆ ರಕ್ಷಣೆ ನೀಡುತ್ತದೆ.

ಮೀನು, ಆಲಾಪಿ, ಬಾಸಂತಿ ಮತ್ತು ಸುಂದರ್ ಬನದ ಲಕ್ಷಾಂತರ ಇತರ ಮಹಿಳೆಯರಿಗೆ, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು ಆರೋಗ್ಯ ಆರೈಕೆಯನ್ನು ಪಡೆಯುವಲ್ಲಿನ ತೊಂದರೆಗಳಿಂದ ಹೆಚ್ಚಿವೆ.

ಬಾಸಂತಿ ತನ್ನ ಗರ್ಭಾಶಯ ತೆಗೆಯುವುದಕ್ಕಾಗಿ ಗೋಸಬಾ ಬ್ಲಾಕ್‌ನಲ್ಲಿರುವ ತನ್ನ ಮನೆಯಿಂದ ಐದು ಗಂಟೆಗಳ ಕಾಲ ಪ್ರಯಾಣಿಸಿದರು. "ಸರ್ಕಾರಕ್ಕೆ ಹೆಚ್ಚಿನ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳನ್ನು ನಿರ್ಮಿಸಲು ಏಕೆ ಸಾಧ್ಯವಿಲ್ಲ? ಅಥವಾ ಇನ್ನೂ ಹೆಚ್ಚಿನ ಸ್ತ್ರೀರೋಗ ತಜ್ಞರನ್ನು?" ಎಂದು ಅವರು ಕೇಳುತ್ತಾರೆ. "ನಾವು ಬಡವರಾಗಿದ್ದರೂ, ಸಾಯಲು ಬಯಸುವುದಿಲ್ಲ."

ಗೌಪ್ಯತೆ ಕಾಪಾಡುವ ಉದ್ದೇಶದಿಂದ ಮೀನು ಮತ್ತು ಬಪ್ಪಾ ಸರ್ದಾರ್ ಅವರ ಹೆಸರುಗಳು ಮತ್ತು ಅವರ ಸ್ಥಳವನ್ನು ಬದಲಾಯಿಸಲಾಗಿದೆ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಶಂಕರ. ಎನ್. ಕೆಂಚನೂರು

Urvashi Sarkar
urvashisarkar@gmail.com

Urvashi Sarkar is an independent journalist and a 2016 PARI Fellow.

Other stories by Urvashi Sarkar
Illustrations : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Photographs : Ritayan Mukherjee

Ritayan Mukherjee is a Kolkata-based photographer and a PARI Senior Fellow. He is working on a long-term project that documents the lives of pastoral and nomadic communities in India.

Other stories by Ritayan Mukherjee
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru