ರಾಣಿ ಮಹತೋ ಒಂದೆಡೆ ಸುಸೂತ್ರವಾಗಿ ಹೆರಿಗೆ ನಡೆದ ಕುರಿತು ನಿರಾಳರಾಗಿದ್ದರೆ, ಇನ್ನೊಂದೆಡೆ ಮನೆಗೆ ಮರಳುವುದು ಮತ್ತು ಅಲ್ಲಿಗೆ ಹೋದ ನಂತರ ಇನ್ನೊಂದು ಮಗುವೂ ಹೆಣ್ಣಾಗಿದೆಯೆಂದು ಹೇಗೆ ತಿಳಿಸುವುದೆಂಬ ಚಿಂತೆಯಲ್ಲಿದ್ದರು. ಅವರ ಮನಸ್ಸು ಇವೆರಡು ವಿಷಯಗಳ ನಡುವೆ ತೂಗುಯ್ಯಾಲೆಯಾಡುತ್ತಿತ್ತು.
“ಅವರು ಈ ಬಾರಿ ಗಂಡು ಮಗುವನ್ನು ಎದುರು ನೋಡುತ್ತಿದ್ದರು,” ಎಂದು ಆಕೆ ತಗ್ಗಿದ ದನಿಯಲ್ಲಿ ಹೇಳುತ್ತಿದ್ದರು. “ಈಗ ಅವರಿಗೆ ಎರಡನೇ ಮಗುವೂ ಹೆಣ್ಣಾಗಿದೆಯೆಂದು ಹೇಳಿದರೆ ಅವರು ಹೇಗೆ ಪ್ರತಿಕ್ರಿಯಿಸಬಹುದೆನ್ನುವ ಕುರಿತು ಭಯವಾಗತೊಡಗಿದೆ.” ಎಂದು ಬಿಹಾರದ ಪಾಟ್ನಾ ಜಿಲ್ಲೆಯ ದಾನಾಪುರ ಉಪ ವಿಭಾಗ ಆಸ್ಪತ್ರೆಯಲ್ಲಿ ತನ್ನ ಎರಡು ದಿನದ ಮಗುವಿಗೆ ಹಾಲುಣಿಸುತ್ತಿದ್ದ ರಾಣಿ ಆತಂಕದಿಂದ ಹೇಳಿದರು.
2017ರಲ್ಲಿ ಮದುವೆಯಾದ ರಾಣಿ ಮದುವೆಯಾದ ಒಂದು ವರ್ಷದಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು. ಅವರ ಗಂಡ ಪ್ರಕಾಶ್ ಕುಮಾರ್ ಮಹತೋ ಆಗ 20 ವರ್ಷದವರಾಗಿದ್ದರು. ಅವರು ತನ್ನ ಪತಿ ಮತ್ತು ಅತ್ತೆಯೊಡನೆ ಅದೇ ಜಿಲ್ಲೆಯ ಫುಲ್ವಾರಿ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದಾರೆ. (ಅವರು ತಮ್ಮ ಊರಿನ ಹೆಸರನ್ನು ಹೇಳಲು ಬಯಸಲಿಲ್ಲ.) ಮಹತೋಗಳು ಸಂಪ್ರದಾಯವಾದಿ ಒಬಿಸಿ ಸಮುದಾಯಕ್ಕೆ ಸೇರಿದವರು.
“ನಮ್ಮ ಊರಿನಲ್ಲಿ ಹೆಣ್ಣು ಮಕ್ಕಳಿಗೆ 16ನೇ ವಯಸ್ಸಿಗೆಲ್ಲ ಮದುವೆ ಮಾಡಿಬಿಡುತ್ತಾರೆ,” ಎಂದು ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಹೊಂದಿರುವ ರಾಣಿ ಹೇಳುತ್ತಾರೆ. “ನನಗೊಬ್ಬಳು ತಂಗಿಯೂ ಇದ್ದಾಳೆ, ಈಗ ನನ್ನ ತಂದೆ ತಾಯಿಗಳು ಅವಳಿಗೂ ಆದಷ್ಟು ಬೇಗ ಮದುವೆ ಮಾಡಿಸುವ ಅವಸರದಲ್ಲಿದ್ದಾರೆ.” ಎನ್ನುತ್ತಾರವರು. ರಾಣಿಯೊಂದಿಗೆ ಅವರ ಅತ್ತೆ ಗಂಗಾ ಮಹತೋ ಕೂಡಾ ಬಂದು ಸೇರಿಕೊಂಡರು. ಅವರು ಚುಟ್ಟಿವಾಲೇ ಸರ್ಟಿಫಿಕೇಟ್‌ಗಾಗಿ (ಬಿಡುಗಡೆ ಪ್ರಮಾಣಪತ್ರ) ಕಾಯುತ್ತಿದ್ದರು.
ರಾಣಿ ಮತ್ತು ಆಕೆಯ ಸಹೋದರಿಯದೇನೂ ವಿಶೇಷ ಪ್ರಕರಣವಲ್ಲ. ಚೈಲ್ಡ್ ರೈಟ್ಸ್ ಎಂಡ್ ಯೂ (ಕ್ರೈ) ಎನ್ನುವ ಎನ್‌ಜಿಒ ಪ್ರಕಾರ, ದೇಶದ ಶೇಕಡಾ 55ರಷ್ಟು ಬಾಲ್ಯ ವಿವಾಹಗಳು ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ನಡೆಯುತ್ತವೆ. ಜನಗಣತಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮತ್ತು ಇತರ ಸರ್ಕಾರಿ ಅಂಕಿಅಂಶಗಳ ವಿಶ್ಲೇಷಣೆಯ ಆಧಾರದ ಮೇಲೆ ಇದನ್ನು ಹೇಳಲಾಗಿದೆ.
“ಚುಟ್ಟಿವಾಲೇ ಪೇಪರ್ ಸಿಕ್ಕಿದ ತಕ್ಷಣ ಬಾಡಿಗೆ ರಿಕ್ಷಾದಲ್ಲಿ ಮನೆಗೆ ಹೋಗುತ್ತೇವೆ.” ಎನ್ನುತ್ತಾರೆ ರಾಣಿ. ಅವರು ಈಗಾಗಲೇ ಅಗತ್ಯಕ್ಕಿಂತಲೂ ಹೆಚ್ಚಾಗಿ ಎರಡು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಏಕೆಂದರೆ ಅವರಿಗೆ ಚಿಕಿತ್ಸೆ ಪಡೆಯಲೇ ಬೇಕಿದ್ದ ಇತರ ಸಮಸ್ಯೆಗಳಿದ್ದವು. “ನನಗೆ ರಕ್ತದ ಕೊರತೆಯಿದೆ (ಅನಿಮೀಯಾ),” ಎನ್ನುತ್ತಾರೆ ರಾಣಿ.
ನಮ್ಮ ದೇಶದಲ್ಲಿ ರಕ್ತಹೀನತೆಯು ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ, ವಿಶೇಷವಾಗಿ ಮಹಿಳೆಯರು, ಹದಿಹರೆಯದ ಹುಡುಗಿಯರು ಮತ್ತು ಚಿಕ್ಕ ಮಕ್ಕಳಲ್ಲಿ. ಹಲವಾರು ಸಂಶೋಧನೆಗಳು, ಸರ್ಕಾರಿ ಮತ್ತು ಸ್ವತಂತ್ರ ಅಧ್ಯಯನಗಳು ಬಾಲ್ಯದಲ್ಲಿ ಮದುವೆಯಾಗುವ ಹುಡುಗಿಯರು ಅಪೌಷ್ಟಿಕತೆ, ಆಹಾರ ಕೊರತೆ ಮತ್ತು ರಕ್ತಹೀನತೆಯ ಅಪಾಯವನ್ನು ಹೊಂದಿರುತ್ತಾರೆ ಎಂದು ತೋರಿಸಿವೆ. ಬಾಲ್ಯ ವಿವಾಹ ಮತ್ತು ಕಡಿಮೆ ಶಿಕ್ಷಣ ಮತ್ತು ಆದಾಯಕ್ಕೂ ನಿಕಟ ಸಂಬಂಧವಿದೆ. ಆಹಾರದ ಕೊರತೆಯಿರುವ ಬಡ ಕುಟುಂಬಗಳಿಗೆ, ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವುದು ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ಒಂದು ಮಾರ್ಗವಾಗಿದೆ.
ಸಣ್ಣ ವಯಸ್ಸಿನಲ್ಲೇ ಮದುವೆಯಾಗುವ ಹುಡುಗಿಯರು ತಮ್ಮ ಆರೋಗ್ಯ ಮತ್ತು ಆಹಾರದ ಬಗ್ಗೆ ಹೆಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಪ್ರಕ್ರಿಯೆಯು ಅನಾರೋಗ್ಯ, ಅಪೌಷ್ಟಿಕತೆ, ರಕ್ತಹೀನತೆ ಮತ್ತು ಕಡಿಮೆ ತೂಕದ ಶಿಶುಗಳ ಜನನದ ಸಮಸ್ಯೆಗೆ ಕಾರಣವಾಗುತ್ತದೆ. ಈ ಎಲ್ಲದಕ್ಕೂ ಕಾರಣವಾದ ಬಾಲ್ಯ ವಿವಾಹವು ಈ ವಿಷವರ್ತುಲದ ಪರಿಣಾಮಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಯಾವುದೇ ನೀತಿಯನ್ನು ರೂಪಿಸಬೇಕಾದರೆ, ಅಲ್ಲಿ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ. ಭಾರತದಲ್ಲಿ ಮಗು ಎಂದರೆ ಯಾರು?
1989ರ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಘೋಷಣೆಯ ಪ್ರಕಾರ, 18 ವರ್ಷದೊಳಗಿನವರನ್ನು ಬಾಲಕಿ/ಕ (Child) ಎಂದು ಪರಿಗಣಿಸಲಾಗುತ್ತದೆ. ಭಾರತವು 1992ರಲ್ಲಿ ಈ ಘೋಷಣೆಗೆ ಸಹಿ ಹಾಕಿತು. ಭಾರತದಲ್ಲಿ, ಕನಿಷ್ಠ ವಯಸ್ಸಿನ ವ್ಯಾಖ್ಯಾನವು ಬಾಲ ಕಾರ್ಮಿಕ, ಮದುವೆ, ವೇಶ್ಯಾವಾಟಿಕೆ ಮತ್ತು ಬಾಲ ನ್ಯಾಯಗಳಲ್ಲಿ ವಿಷಯದಿಂದ ವಿಷಯಕ್ಕೆ ಬದಲಾಗುತ್ತದೆ. ಬಾಲ ಕಾರ್ಮಿಕ ವಿರೋಧಿ ಕಾನೂನುಗಳಲ್ಲಿ, ವಯೋಮಿತಿ 14ಇದ್ದರೆ. ಮದುವೆಯ ಕಾನೂನಿನ ಪ್ರಕಾರ, ಹುಡುಗಿಗೆ 18 ವರ್ಷ ತುಂಬಿರಬೇಕು ಎಂದು ಹೇಳಲಾಗಿದೆ. ಭಾರತದಲ್ಲಿ, ವಿವಿಧ ಕಾನೂನುಗಳು 'ಮಗು' ಮತ್ತು 'ಅಪ್ರಾಪ್ತ'ರ ನಡುವೆ ವ್ಯತ್ಯಾಸವನ್ನು ಹೊಂದಿವೆ. ಇದರಿಂದಾಗಿಯೇ 15-18 ವಯಸ್ಸಿನ ಬಾಲಕರು ಮತ್ತು ಬಾಲಕಿಯರು ಯಾವುದೇ ಆಡಳಿತಾತ್ಮಕ ಕ್ರಮದಿಂದ ತಪ್ಪಿಸಿಕೊಳ್ಳುತ್ತಾರೆ.
ಆದಾಗ್ಯೂ, ರಾಣಿ ಮಹತೋ ಪ್ರಕರಣದಲ್ಲಿ, ಸಾಮಾಜಿಕ ಮೂಢನಂಬಿಕೆಗಳು ಮತ್ತು ಲಿಂಗ ಪೂರ್ವಾಗ್ರಹಗಳು ಕಾನೂನು ಮತ್ತು ಕಾನೂನು ನಿಯಮಗಳಿಗಿಂತ ಹೆಚ್ಚಿನ ಬಲವನ್ನು ಹೊಂದಿವೆ.
ರಾಣಿ ಹೇಳುತ್ತಾಳೆ. "ರಾಖಿ (ಅವಳ ಹಿರಿಯ ಮಗಳು) ಜನಿಸಿದಾಗ, ನನ್ನ ಗಂಡ ವಾರಗಟ್ಟಲೆ ನನ್ನೊಂದಿಗೆ ಮಾತನಾಡಿರಲಿಲ್ಲ. ಅವನು ವಾರದಲ್ಲಿ ಎರಡು-ಮೂರು ಬಾರಿ ತನ್ನ ಸ್ನೇಹಿತರ ಮನೆಗೆ ಹೋಗುತ್ತಿದ್ದನು ಮತ್ತು ಅವನು ಹಿಂದಿರುಗಿದಾಗ ಅವನು ಕುಡಿದು ಬರುತ್ತಿದ್ದನು. ಪ್ರಕಾಶ್ ತಾಯಿ ಗಂಗಾ ದುಃಖದಿಂದ ಹೇಳುತ್ತಾರೆ, "ಅವನು ತಿಂಗಳಲ್ಲಿ 15 ದಿನ ಕೆಲಸ ಮಾಡುತ್ತಾನೆ, ಆದರೆ ಏನನ್ನು ಸಂಪಾದಿಸಿದರೂ, ಮುಂದಿನ 15 ದಿನಗಳ ಕಾಲ ತಾನೇ ಅದನ್ನು ಕಳೆಯುತ್ತಾನೆ. ಮದ್ಯ ಅವನ ಜೀವನವನ್ನು ಮಾತ್ರವಲ್ಲ, ನಮ್ಮ ಜೀವನವನ್ನು ಕೂಡ ನಾಶಪಡಿಸುತ್ತಿದೆ."
ರಾಣಿಯವರ ಗ್ರಾಮದ ಆಶಾ ಕಾರ್ಯಕರ್ತೆ ಎರಡನೇ ಮಗುವಿನ ನಂತರ ವ್ಯಾಸೆಕ್ಟಮಿ ಮಾಡಿಸುವಂತೆ ಸಲಹೆ ನೀಡಿದರು. ಆದರೆ ರಾಣಿಯ ಪತಿ ಇದಕ್ಕೆ ಒಪ್ಪುವುದಿಲ್ಲ. ರಾಣಿ ಹೇಳುತ್ತಾಳೆ, "ಆಶಾ ದೀದಿ ನನಗೆ ಎರಡು ಮಕ್ಕಳನ್ನು ಮೀರದಂತೆ ಸಲಹೆ ನೀಡಿದಳು. ರಕ್ತಹೀನತೆಯಿಂದಾಗಿ ನನ್ನ ದೇಹವು ತುಂಬಾ ದುರ್ಬಲವಾಗಿದೆ, ಮೂರನೇ ಬಾರಿಗೆ ಗರ್ಭಧರಿಸಲು ಸಾಧ್ಯವಿಲ್ಲದ ಕಾರಣ ಅವಳು ಇದನ್ನು ಹೇಳಿದಳು. ಹಾಗಾಗಿ, ನನ್ನ ಗರ್ಭಧಾರಣೆಯ ನಾಲ್ಕನೇ ತಿಂಗಳು ನಡೆಯುತ್ತಿದ್ದಾಗ, ನಾನು ಪ್ರಕಾಶ್ ಜೊತೆ ಹೆರಿಗೆಯ ನಂತರದ ಆಪರೇಷನ್ ಬಗ್ಗೆ ಮಾತನಾಡಿದೆ. ಆದರೆ ಈ ವಿಷಯ ನನಗೆ ಒಂದು ದುಃಸ್ವಪ್ನ ಎಂದು ಸಾಬೀತಾಯಿತು. ನಾನು ಈ ಮನೆಯಲ್ಲಿ ವಾಸಿಸಬೇಕಾದರೆ, ನಾನು ಎಷ್ಟು ಬಾರಿ ಗರ್ಭಿಣಿಯಾದರೂ ಸರಿ ಗಂಡು ಮಗನಿಗೆ ಜನ್ಮ ನೀಡುವ ತನಕ ಮಗುವನ್ನು ಹೆರುತ್ತಿರಬೇಕೆಂದು ಎಂದು ಪ್ರಕಾಶ್ ನನಗೆ ಹೇಳಿದರು. ಅವನು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಿಲ್ಲ, ನಾನು ಅದಕ್ಕಾಗಿ ಒತ್ತಾಯಿಸಿದರೆ ಹೊಡೆಯಲು ಬರುತ್ತಾನೆ. ಆಪರೇಷನ್ ಮಾಡಿಸಬಾರದೆನ್ನುವುದು ಮತ್ತು ಗಂಡು ಮಗುವಾಗುವ ತನಕ ಮಕ್ಕಳನ್ನು ಹೆರಬೇಕೆನ್ನುವುದನ್ನು ಅತ್ತೆಯೂ ಒಪ್ಪುತ್ತಾರೆ.
ರಾಣಿ ತನ್ನ ಅತ್ತೆಯ ಮುಂದೆ ಈ ಕುರಿತು ಬಹಿರಂಗವಾಗಿ ಮಾತನಾಡುವುದು ಇಬ್ಬರ ನಡುವಿನ ಸಂಬಂಧವು ಹುಳಿಯಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ರಾಣಿಯ ಕುರಿತು ಸಹಾನುಭೂತಿ ಹೊಂದಿದ ನಂತರವೂ ಗಂಗಾ ಈ ರೀತಿಯ ಪಿತೃಪ್ರಧಾನ ಮನಸ್ಥಿತಿಯನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ಪಟ್ನಾ (ಗ್ರಾಮೀಣ)ದಲ್ಲಿ ಕೇವಲ ಶೇ .34.9ರಷ್ಟು ಜನರು ಮಾತ್ರ ಯಾವುದೇ ರೀತಿಯ ಕುಟುಂಬ ಯೋಜನಾ ವಿಧಾನಗಳನ್ನು ಬಳಸುತ್ತಾರೆ ಎಂದು ಹೇಳುತ್ತದೆ. ಪಟ್ಟಿ ಮಾಡಲಾದ ವಿಧಾನಗಳಲ್ಲಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಾಸ್ತವವಾಗಿ ಪುರುಷ ಸಂತಾನಹರಣವು ಶೂನ್ಯ ಶೇಕಡ. ಬಿಹಾರದಲ್ಲಿ 15-49 ವಯೋಮಾನದ 58% ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಎನ್‌ಎಫ್‌ಎಚ್‌ಎಸ್-4 ಸೂಚಿಸುತ್ತದೆ.
ರಾಣಿ ಮತ್ತಷ್ಟು ಹೇಳುತ್ತಾರೆ, "20ನೇ ವಯಸ್ಸಿನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ ನಂತರ, ನಾನು ಒಂದು ವಿಷಯದ ಬಗ್ಗೆ ಯೋಚಿಸಿದೆ. ಏನೆಂದರೆ, ನನ್ನ ಹೆಣ್ಣುಮಕ್ಕಳಿಗೆ ಕನಿಷ್ಠ 20 ವರ್ಷ ತುಂಬುವವರೆಗೂ ಯಾವುದೇ ಕಾರಣಕ್ಕೂ ಮದುವೆ ಮಾಡಿಸಲು ನಾನು ಅನುಮತಿಸುವುದಿಲ್ಲ. ನಾನಂತೂ ಗಂಡು ಮಗುವಿಗೆ ಜನ್ಮ ನೀಡುವವರೆಗೂ ಮಕ್ಕಳನ್ನು ಹೆರಲೇಬೇಕು."
ರಾಣಿ ನಿಟ್ಟುಸಿರಿನೊಂದಿಗೆ ಆದರೆ ಒಂದಷ್ಟು ತಾಳ್ಮೆಯಿಂದ, "ನಮ್ಮಂತಹ ಮಹಿಳೆಯರಿಗೆ ಬೇರೆ ದಾರಿಯಿಲ್ಲ, ನಮ್ಮ ಗಂಡಂದಿರು ಹೇಳುವಂತೆ ನಾವು ಮಾಡಬೇಕು. ನನ್ನ ಹಾಸಿಗೆಯಿಂದ ಮೂರು ಹಾಸಿಗೆಗಳ ದೂರದಲ್ಲಿರುವ ಆ ಮಹಿಳೆಯನ್ನು ನೋಡಿ, ಅವಳು ನಗ್ಮಾ. ನಿನ್ನೆ ಅವಳ ನಾಲ್ಕನೇ ಹೆರಿಗೆಯಾಗಿತ್ತು. ಆಕೆಯ ಮನೆಯಲ್ಲಿ ಬಚ್ಚೇದಾನಿ(ಗರ್ಭಕೋಶ) ತೆಗೆಯುವ ಮಾತನ್ನು ಕೂಡ ಸಂಪೂರ್ಣವಾಗಿ ತಿರಸ್ಕರಿಸಲಾಯಿತು. ಆದರೆ, ಈಗ ಅವಳು ತನ್ನ ಹೆತ್ತವರೊಂದಿಗೆ ಇದ್ದಾಳೆ ಅತ್ತೆ ಮನೆಯಲ್ಲಿಲ್ಲ, ಎರಡು ದಿನಗಳ ನಂತರ ಅವಳು ಅದನ್ನು ಮಾಡಿಸಿಕೊಳ್ಳುತ್ತಾಳೆ. ಅವಳು ಬಹಳ ಧೈರ್ಯಶಾಲಿ. ತನ್ನ ಗಂಡನೊಂದಿಗೆ ಹೇಗೆ ವ್ಯವಹರಿಸಬೇಕೆಂದು ತನಗೆ ತಿಳಿದಿದೆ ಎಂದು ಅವಳು ಹೇಳುತ್ತಾಳೆ.” ರಾಣಿ ಇದನ್ನು ಹೇಳುತ್ತಾ ನಗುತ್ತಾರೆ.
ಯುನಿಸೆಫ್ ವರದಿಯು , ರಾಣಿಯಂತೆಯೇ, ಬಾಲ್ಯವಿವಾಹವಾಗುವ ಹುಡುಗಿಯರು ಅಪ್ರಾಪ್ತ ವಯಸ್ಸಿನಲ್ಲೇ ಮಗುವನ್ನು ಹೆರುತ್ತಾರೆ ಮತ್ತು ತಡವಾಗಿ ಮದುವೆಯಾಗುವ ಹುಡುಗಿಯರಿಗೆ ಹೋಲಿಸಿದರೆ ಅವರ ಕುಟುಂಬಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಮತ್ತು ಈ ಸಾಂಕ್ರಾಮಿಕ ಪಿಡುಗಿನಿಂದಾಗಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಕನಿಕಾ ಸರಾಫ್ ಹೇಳುತ್ತಾರೆ, "2030 ರ ವೇಳೆಗೆ ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡುವ ಗುರಿಯು ಸವಾಲಿನಂತೆ ಕಾಣುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು, ನೀವು ದೇಶದ ಯಾವುದೇ ರಾಜ್ಯದ ಗ್ರಾಮೀಣ ಪ್ರದೇಶಗಳನ್ನು ನೋಡಬೇಕು." ಕನಿಕಾ ಸರಾಫ್ ಬಿಹಾರದ ಆಂಗನ್ ಟ್ರಸ್ಟ್‌ನ ಮಕ್ಕಳ ಸುರಕ್ಷತೆ ವ್ಯವಸ್ಥೆಗಳ ಮುಖ್ಯಸ್ಥರಾಗಿದ್ದಾರೆ, ಇದು ಕೇವಲ ಮಕ್ಕಳ ಸುರಕ್ಷತೆಯನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತದೆ. ಅವರು ಹೇಳುತ್ತಾರೆ, "ಆದರೆ ಸಾಂಕ್ರಾಮಿಕ ಪಿಡುಗು ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಈ ಸಮಯದಲ್ಲಿ, ನಾವು ಪಾಟ್ನಾ ಒಂದರಲ್ಲೇ 200 ಬಾಲ್ಯ ವಿವಾಹಗಳನ್ನು ನಿಲ್ಲಿಸಲು ಸಾಧ್ಯವಾಯಿತು. ಉಳಿದ ಜಿಲ್ಲೆಗಳು ಮತ್ತು ಅಲ್ಲಿನ ಗ್ರಾಮಗಳ ಸ್ಥಿತಿಯನ್ನು ನೀವು ಊಹಿಸಬಹುದು."
ನೀತಿ ಆಯೋಗದ ಪ್ರಕಾರ ಜನನ ಸಮಯದ ಲಿಂಗಾನುಪಾತವು 2013-15ರಲ್ಲಿ ಪ್ರತಿ 1,000 ಗಂಡಿಗೆ 916 ಹೆಣ್ಣಿದ್ದವು. ಇದು 2005-07ರ 909ಕ್ಕೆ ಹೋಲಿಸಿದರೆ ಸುಧಾರಣೆಯಾಗಿದೆ ಎಂಬಂತೆ ಕಾಣುತ್ತದೆಯಾದರೂ ಇದು ಆಶ್ವಾಸನೆ ಹುಟ್ಟಿಸುವಂತಿಲ್ಲ, ಏಕೆಂದರೆ ಏಕೆಂದರೆ ಗಂಡು ಮಕ್ಕಳಿಗಿಂತಲೂ ಹೆಚ್ಚಿನ ಹೆಣ್ಣು ಮಕ್ಕಳು ಐದು ವರ್ಷಕ್ಕಿಂತ ಮುಂಚೆಯೇ ಸಾಯುವ ಕಾರಣ ಲೈಂಗಿಕ ಅನುಪಾತವು ಇನ್ನಷ್ಟು ಹದಗೆಡುತ್ತದೆ. ಅಂದರೆ, 5 ವರ್ಷದೊಳಗಿನ ಮರಣ ಪ್ರಮಾಣ (ಪ್ರತಿ 1,000 ನೇರ ಜನನಗಳಿಗೆ 5 ವರ್ಷ ವಯಸ್ಸಿನ ಮಕ್ಕಳ ಸಾವಿನ ಸಂಭವನೀಯತೆ) ರಾಜ್ಯದಲ್ಲಿ 43 ಹೆಣ್ಣು ಮಕ್ಕಳಾದರೆ 39 ಗಂಡು ಮಕ್ಕಳು. ಯುಎನ್ ಏಜೆನ್ಸಿಗಳ ಅಂದಾಜಿನ ಪ್ರಕಾರ , 2019ರಲ್ಲಿ ಅಖಿಲ ಭಾರತ ಅಂಕಿ ಅಂಶವು 35 ಹೆಣ್ಣು 34 ಗಂಡು ಇದ್ದವು.
ತನ್ನ ಮಗ ತರಲಾಗದ ಸುಖ, ಸಂತೋಷವನ್ನು ಮೊಮ್ಮಗ ಕುಟುಂಬಕ್ಕೆ ತರುತ್ತಾನೆ ಎಂದು ಗಂಗಾ ನಂಬಿದ್ದಾರೆ. ಅವರು ಹೇಳುತ್ತಾರೆ, "ಪ್ರಕಾಶನಿಂದ ಯಾವುದೇ ಪ್ರಯೋಜನವಿಲ್ಲ. ಐದನೇ ತರಗತಿಯ ನಂತರ ಅವನು ಶಾಲೆಗೇ ಹೋಗಲಿಲ್ಲ. ಅದಕ್ಕಾಗಿಯೇ ನಾನು ಮೊಮ್ಮಗನನ್ನು ಹೊಂದಲು ಬಯಸುತ್ತೇನೆ. ಅವನು ಕುಟುಂಬ ಮತ್ತು ಅವನ ತಾಯಿಯನ್ನು ನೋಡಿಕೊಳ್ಳುತ್ತಾನೆ. ರಾಣಿಗೆ ಗರ್ಭಿಣಿ ಮಹಿಳೆಗೆ ಅಗತ್ಯವಿರುವ ಪೌಷ್ಟಿಕ ಆಹಾರ ಸಿಗಲಿಲ್ಲ. ದೌರ್ಬಲ್ಯದಿಂದಾಗಿ ಆಕೆಗೆ ಕಳೆದ ಎರಡು ದಿನಗಳಿಂದ ಮಾತನಾಡಲು ಸಹ ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾನು ಅವಳೊಂದಿಗೆ ಆಸ್ಪತ್ರೆಯಲ್ಲಿ ಉಳಿದು ನನ್ನ ಮಗನಿಗೆ ಮನೆಗೆ ಹೊರಡುವಂತೆ ಹೇಳಿದೆ."
ಗಂಗಾ ಹೇಳುತ್ತಾರೆ, "ಅವನು ಕುಡಿದು ಮನೆಗೆ ಬಂದಾಗ ನನ್ನ ಸೊಸೆ ಅವನನ್ನು ಪ್ರಶ್ನಿಸಿದರೆ, ಅವಳನ್ನು ಹೊಡೆದು ಮನೆಯಲ್ಲಿರುವ ವಸ್ತುಗಳನ್ನು ಒಡೆಯಲು ಪ್ರಾರಂಭಿಸುತ್ತಾನೆ." ಆದರೆ ಇಲ್ಲಿ ಯೋಚಿಸಬೇಕಾದ ವಿಷಯವೆಂದರೆ ಬಿಹಾರದಲ್ಲಿ ಮದ್ಯ ನಿಷೇಧ ಇದೆಯಲ್ಲವೇ? ಎನ್‌ಎಫ್‌ಎಚ್‌ಎಸ್-4 ಪ್ರಕಾರ , ನಿಷೇಧದ ಘೋಷಣೆಯ ನಂತರವೂ, ಬಿಹಾರದಲ್ಲಿ 29% ಪುರುಷರು ಮದ್ಯಪಾನ ಮಾಡುತ್ತಾರೆ. ಗ್ರಾಮೀಣ ಪುರುಷರಲ್ಲಿ, ಈ ಅಂಕಿ ಅಂಶವು ಸುಮಾರು 30%.
ರಾಣಿಯ ಗರ್ಭಾವಸ್ಥೆಯಲ್ಲಿ, ಗಂಗಾ ತನ್ನ ಹಳ್ಳಿಯ ಹೊರಗೆ ಮನೆಗೆಲ ಕೆಲಸ ಹುಡುಕಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ. "ನನ್ನ ಆರೋಗ್ಯದ ಸ್ಥಿತಿ ಹಾಗಿತ್ತು ಮತ್ತು ಆಗಾಗ ನಾನು ಕಾಯಿಲೆ ಬೀಳುತ್ತಿದ್ದೆ" ಎಂದು ರಾಣಿ ಹೇಳುತ್ತಾರೆ, "ನನ್ನ ಅತ್ತೆ ಕೊನೆಗೆ ಸಾಂದರ್ಭಿಕವಾಗಿ ನನಗೆ ಹಣ್ಣು ಮತ್ತು ಹಾಲು ತರಲು ಸಂಬಂಧಿಕರಿಂದ ಸುಮಾರು ಐದು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದರು."
ತನ್ನ ಜೀವನ ಮತ್ತು ದೇಹವು ನಿಯಂತ್ರಣದಲ್ಲಿಲ್ಲದ ಕಥೆಯನ್ನು ವಿವರಿಸಿದ ರಾಣಿ ದುಃಖದದಿಂದ ಹೇಳುತ್ತಾರೆ, “ಅವರು ನನ್ನನ್ನು ಹೆರುವ ಯಂತ್ರದಂತೆ ಬಳಸಿಕೊಂಡರೆ, ಮುಂದಿನ ದಿನಗಳಲ್ಲಿ ನನಗೆ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ, ನಾನು ಬದುಕಲು ಸಾಧ್ಯವಾದರೆ, ನನ್ನ ಹೆಣ್ಣುಮಕ್ಕಳಿಗೆ ಅವರು ಬಯಸಿದಷ್ಟು ಶಿಕ್ಷಣ ಕೊಡಿಸಲು ಪ್ರಯತ್ನಿಸುತ್ತೇನೆ."
"ನನ್ನ ಹೆಣ್ಣು ಮಕ್ಕಳ ಬದುಕು ನನ್ನಂತಾಗುವುದು ಬೇಡ."
ಈ ಲೇಖನದಲ್ಲಿನ ಕೆಲವು ವ್ಯಕ್ತಿಗಳ ಮತ್ತು ಸ್ಥಳಗಳ ಹೆಸರುಗಳನ್ನು ಅವರ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ ಬದಲಾಯಿಸಲಾಗಿದೆ.
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳುಹಿಸಿ
ಜಿಗ್ಯಾಸ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು