"ನೀವು ಇಲ್ಲಿಗೆ ಬಹಳ ಬೇಗ ಬಂದಿದ್ದೀರಿ. ಭಾನುವಾರಗಳಂದು ಅವರು ಈ ಸಮಯದಲ್ಲಿ ಬರುವುದಿಲ್ಲ, ಸಂಜೆ 4 ಗಂಟೆಯ ನಂತರ ಬರುತ್ತಾರೆ. ನಾನು ಹಾರ್ಮೋನಿಯಂ ನುಡಿಸಲು ಕಲಿಯುತ್ತಿರುವುದರಿಂದ ಇಲ್ಲಿದ್ದೇನೆ” ಎಂದು ಬ್ಯೂಟಿ ಹೇಳುತ್ತಾರೆ.
ಮೇಲಿನ ಸಾಲಿನಲ್ಲಿ ʼಇಲ್ಲಿಗೆʼ ಎಂದರೆ ಬಿಹಾರದ ಮುಝಾಪರ್‌ಪುರ ಜಿಲ್ಲೆಯ ಮುಸಾಹ್ರಿ ಬ್ಲಾಕ್‌ನಲ್ಲಿರುವ ಹಳೆಯ ವೇಶ್ಯಾಗೃಹವಾದ ಚತುರ್ಭುಜ್ ಸ್ತಾನ್. ʼಈ ಸಮಯʼವೆಂದರೆ ನಾನು ಅಲ್ಲಿಗೆ ಹೋಗಿದ್ದ ಬೆಳಗಿನ ಸುಮಾರು 10 ಗಂಟೆಯ ಸಮಯ. ನಾನು ಮತ್ತು ಬ್ಯೂಟಿ ಭೇಟಿಯಾದ ಸಮಯದಲ್ಲಿ ಅಲ್ಲಿ ಇಲ್ಲದಿದ್ದ ʼಅವರುʼ ಎಂದರೆ ಅಲ್ಲಿನ ಗ್ರಾಹಕರು. ಬ್ಯೂಟಿ ಎನ್ನುವುದು ಆಕೆ ವ್ಯವಹಾರಕ್ಕಾಗಿ ಇಟ್ಟುಕೊಂಡಿರುವ ಹೆಸರು. ಅವರು ಒಬ್ಬ ಲೈಂಗಿಕ ಕಾರ್ಯಕರ್ತೆಯಾಗಿದ್ದು ತನ್ನ 19ನೇ ವರ್ಷದಲ್ಲೇ ಈಕೆ ಈ ʼವ್ಯವಹಾರದಲ್ಲಿʼ ಐದು ವರ್ಷಗಳ ಅನುಭವ ಪಡೆದಿದ್ದಾರೆ. ಅವರು ಮೂರು ತಿಂಗಳ ಗರ್ಭಿಣಿಯೂ ಹೌದು.
ಮತ್ತು ಆಕೆ ಈ ಪರಿಸ್ಥಿತಿಯಲ್ಲೂ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹಾರ್ಮೋನಿಯಂ ನುಡಿಸಲು ಸಹ ಕಲಿಯುತ್ತಿದ್ದಾರೆ ಏಕೆಂದರೆ "ಸಂಗೀತವು ನನ್ನ ಮಗುವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಅಮ್ಮಿ [ಅವಳ ತಾಯಿ] ಹೇಳುತ್ತಾರೆ."
ಅವರು ಮಾತನಾಡುತ್ತಲೇ ಹಾರ್ಮೋನಿಯಂ ಕೀಲಿಗಳ ಮೇಲೆ ಬೆರಳುಗಳನ್ನು ಆಡಿಸುತ್ತಿದ್ದರು. ಬ್ಯೂಟಿ ಮುಂದುವರೆದು ಹೇಳುತ್ತಾರೆ, "ಇದು ನನ್ನ ಎರಡನೇ ಮಗು. ನನಗೆ ಈಗಾಗಲೇ ಒಬ್ಬ ಎರಡು ವರ್ಷದ ಮಗನಿದ್ದಾನೆ.”
ನಾವು ಭೇಟಿಯಾದ ಕೋಣೆಯ ಅರ್ಧ ಭಾಗವನ್ನು ಹಾಸಿಗೆಯೊಂದು ಆಕ್ರಮಿಸಿತ್ತು. ಅದರ ಹಿಂದೆ 4 - 6 ಅಡಿ ಅಳತೆಯ ಕನ್ನಡಿಯನ್ನು ಗೋಡೆಯ ಮೇಲೆ ಅಡ್ಡಲಾಗಿ ಕೂರಿಸಲಾಗಿತ್ತು. ಬಹುಶಃ ಕೋಣೆಯ ಅಳತೆ 15-25 ಅಡಿಗಳ ಅಳತೆಯಲ್ಲಿದ್ದಿರಬಹುದು. ಈ ಕೋಣೆ ಬೇರೆ ಸಮಯದಲ್ಲಿ ಆಕೆಯ ಕಾರ್ಯ ಕ್ಷೇತ್ರವಾಗಿರುತ್ತದೆ. ವಸಾಹತುಶಾಹಿ ಪೂರ್ವ ಭಾರತದಲ್ಲಿ ಹೊರಹೊಮ್ಮಿದೆ ಎಂದು ಭಾವಿಸಲಾಗಿರುವ ನೃತ್ಯ ಪ್ರಕಾರವಾದ ಮುಜ್ರಾವನ್ನು ಹುಡುಗಿಯರು ಪ್ರದರ್ಶಿಸುವುದನ್ನು ನೋಡುವಾಗ ಗ್ರಾಹಕರಿಗೆ ಕುಳಿತುಕೊಳ್ಳಲು ಅಥವಾ ಒರಗಿ ಕೂರಲು ಹಾಸಿಗೆಯನ್ನು ಮೆತ್ತೆಗಳು ಮತ್ತು ದಿಂಬುಗಳಿಂದ ಅಲಂಕರಿಸಲಾಗಿತ್ತು. ಚತುರ್ಭುಜ್ ಸ್ತಾನ್ ಸ್ವತಃ ಮೊಘಲ್ ಕಾಲದಿಂದಲೂ ಅಸ್ತಿತ್ವದಲ್ಲಿದೆಯೆಂದು ಹೇಳಲಾಗುತ್ತದೆ. ಈ ವೇಶ್ಯಾಗೃಹದಲ್ಲಿರುವ ಎಲ್ಲಾ ಹುಡುಗಿಯರು ಮತ್ತು ಮಹಿಳೆಯರು ಮುಜ್ರಾವನ್ನು ತಿಳಿದಿರಬೇಕು ಮತ್ತು ಪ್ರದರ್ಶಿಸಬೇಕು. ಖಂಡಿತವಾಗಿಯೂ ಸೌಂದರ್ಯವತಿಯರಾಗಿರಬೇಕು.
ಇಲ್ಲಿಗೆ ಬರುವ ದಾರಿಯು ಮುಜಾಫರ್‌ಪುರದ ಮುಖ್ಯ ಮಾರುಕಟ್ಟೆಯ ಮಾರ್ಗದಲ್ಲಿದೆ. ಇಲ್ಲಿಗೆ ತಲುಪಲು ಅಲ್ಲಿನ ಅಂಗಡಿಯವರು ಮತ್ತು ರಿಕ್ಷಾ ಚಾಲಕರು ದಾರಿ ತೋರಿಸಿ ಸಹಾಯ ಮಾಡುತ್ತಾರೆ. ವೇಶ್ಯಾಗೃಹ ಎಲ್ಲಿದೆಯೆನ್ನುವುದು ಇಲ್ಲಿನ ಎಲ್ಲರಿಗೂ ತಿಳಿದಿದೆ. ಚತುರ್ಭುಜ್ ಸ್ತಾನ್ ಸಂಕೀರ್ಣವು ರಸ್ತೆಯ ಎರಡೂ ಬದಿಗಳಲ್ಲಿ ತಲಾ 2ರಿಂದ 3 ಮಹಡಿಗಳನ್ನು ಹೊಂದಿರುವ ಒಂದೇ ರೀತಿಯ ಮನೆಗಳನ್ನು ಒಳಗೊಂಡಿದೆ. ಇಲ್ಲಿ ಗ್ರಾಹಕರಿಗಾಗಿ ಕಾಯುತ್ತಾ ವಿವಿಧ ವಯಸ್ಸಿನ ಮಹಿಳೆಯರು ಈ ಮನೆಗಳ ಹೊರಗೆ ನಿಂತಿರುತ್ತಾರೆ, ಇನ್ನೂ ಕೆಲವರು ಕುರ್ಚಿಗಳ ಮೇಲೆ ಕುಳಿತಿರುತ್ತಾರೆ. ಹೊಳಪಿನ ಮತ್ತು ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸಿ ಗಾಢ ಮೇಕಪ್ ಹಚ್ಚಿದ ಇವರು ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ದಾರಿ ಹೋಕರ ಮೇಲೊಂದು ಕುತೂಹಲದ ಕಣ್ಣಿಟ್ಟಿರುತ್ತಾರೆ.
ಅದೇನೇ ಇದ್ದರೂ, ಬ್ಯೂಟಿ ಹೇಳುವಂತೆ ಅಂದು ನಾವು ನೋಡಿದ್ದು ವೇಶ್ಯಾಗೃಹದ ಒಟ್ಟು ಲೈಂಗಿಕ ಕಾರ್ಯಕರ್ತೆಯರ ಶೇಕಡಾ 5ರಷ್ಟು ಮಾತ್ರ. “ನೋಡಿ, ಎಲ್ಲರಂತೆ, ನಾವು ಕೂಡ ವಾರದಲ್ಲಿ ಒಂದು ದಿನ ರಜೆ ತೆಗೆದುಕೊಳ್ಳುತ್ತೇವೆ. ಆದರೂ, ಇದು ಕೇವಲ ಅರ್ಧ ದಿನ ರಜೆ. ನಾವು ಸಂಜೆ 4-5ರ ಹೊತ್ತಿಗೆ ಕೆಲಸಕ್ಕೆ ಬಂದು ರಾತ್ರಿ 9ರವರೆಗೆ ಇರುತ್ತೇವೆ. ಇತರ ದಿನಗಳಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಇರುತ್ತೇವೆ.”
*****
ಈ ಕುರಿತು ಯಾವುದೇ ಅಧಿಕೃತ ಅಂಕಿಅಂಶಗಳು ಲಭ್ಯವಿಲ್ಲ, ಆದರೆ ಎಲ್ಲಾ ಚತುರ್ಭುಜ್ ಸ್ತಾನಿನಲ್ಲಿರುವ ಒಟ್ಟು ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ - ಒಂದು ಕಿಲೋಮೀಟರ್ ಉದ್ದದವರೆಗೆ ವ್ಯಾಪಿಸಿದೆ - 2,500ಕ್ಕಿಂತ ಹೆಚ್ಚಿರಬಹುದು. ಬ್ಯೂಟಿ ಮತ್ತು ನಾನು ಇಲ್ಲಿ ಮಾತನಾಡಿದ ಇತರರು ಸೇರಿ ಸುಮಾರು 200 ಮಹಿಳೆಯರು ನಾವು ಇರುವ ಬೀದಿಯ ವಿಭಾಗದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಇದೇ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು 50 ಮಹಿಳೆಯರು ಈ ಪ್ರದೇಶದ ಹೊರಗಿನಿಂದ ಬರುತ್ತಾರೆ. ಬ್ಯೂಟಿ ಮುಝಾಫರ್‌ಪುರ ನಗರದ ʼಹೊರಗಿನಿಂದʼ ಬರುವವರಲ್ಲಿ ಒಬ್ಬರು.
ಚತುರ್ಭುಜ್ ಸ್ತಾನ್‌ನಲ್ಲಿರುವ ಹೆಚ್ಚಿನ ಮನೆಗಳು, ಅವಳು ಮತ್ತು ಇಲ್ಲಿರುವ ಇತರರು ನಮಗೆ ಹೇಳುವಂತೆ, ಮೂರು ತಲೆಮಾರುಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಈ ಕೆಲಸದಲ್ಲಿ ತೊಡಗಿರುವ ಮಹಿಳೆಯರ ಒಡೆತನದಲ್ಲಿದೆ. ಅಮೀರಾ ಅವರಿಗೂ ಹೀಗೆಯೇ, ಅವರ ತಾಯಿ, ಚಿಕ್ಕಮ್ಮ ಮತ್ತು ಅಜ್ಜಿ ವ್ಯವಹಾರವನ್ನು ಅವರಿಗೆ ಹಸ್ತಾಂತರಿಸಿದರು. “ಅದು ಇಲ್ಲಿ ಹೀಗೆಯೇ ನಡೆಯುತ್ತಿದೆ. ಉಳಿದವರು ಇಲ್ಲಿನವರ ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ ಮತ್ತು ನಮ್ಮಂತಲ್ಲದೆ ಕೆಲಸಕ್ಕಾಗಿ ಮಾತ್ರ ಇಲ್ಲಿಗೆ ಬರುತ್ತಾರೆ ” ಎಂದು 31 ವರ್ಷದ ಅಮೀರಾ ಹೇಳುತ್ತಾರೆ. “ನಮಗೆ, ಇದು ನಮ್ಮ ಮನೆ. ಹೊರಗಿನ ಮಹಿಳೆಯರು ಕೊಳೆಗೇರಿಗಳಿಂದ ಅಥವಾ ರಿಕ್ಷಾ ಎಳೆಯುವವರ ಅಥವಾ ಮನೆಗೆಲಸದ ಕುಟುಂಬಗಳಿಂದ ಬಂದವರು. ಕೆಲವರನ್ನು ಇಲ್ಲಿಗೆ [ಮಾನವ ಕಳ್ಳಸಾಗಣೆ ಅಥವಾ ಅಪಹರಣದ ಮೂಲಕ] ತರಲಾಗುತ್ತದೆ,” ಎಂದು ಅವರು ಹೇಳುತ್ತಾರೆ.
ಅಪಹರಣ, ಬಡತನ ಅಥವಾ ಅದೇ ವೃತ್ತಿಯಲ್ಲಿರುವ ಕುಟುಂಬದಲ್ಲಿ ಜನಿಸುವುದು ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಲು ಕಾರಣ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಬಂಧದಲ್ಲಿ ತಿಳಿಸಲಾಗಿದೆ. ಪುರುಷರು ಮಹಿಳೆಯರ ಮೇಲೆ ಸಾಮಾಜಿಕ ಮತ್ತು ಆರ್ಥಿಕ ದಬ್ಬಾಳಿಕೆ ನಡೆಸುವುದು ಇದರ ಹಿಂದಿನ ದೊಡ್ಡ ಕಾರಣವಾಗಿದೆ ಎಂದು ಅದು ಹೇಳುತ್ತದೆ.
ಬ್ಯೂಟಿ ಈ ಕೆಲಸ ಮಾಡುತ್ತಿರುವುದು ಆಕೆ ಪೋಷಕರಿಗೆ ತಿಳಿದಿದೆಯೇ?
"ನನ್ನ ಪ್ರಕಾರ ಎಲ್ಲರಿಗೂ ತಿಳಿದಿದೆ. ಈ ಮಗು ಇನ್ನೂ ನನ್ನ ಗರ್ಭದಲ್ಲಿದೆಯೆಂದರೆ ಅದಕ್ಕೆ ನನ್ನ ತಾಯಿಯೇ ಕಾರಣ." ಎಂದು ಅವರು ಹೇಳುತ್ತಾರೆ. "ಇನ್ನು ಮುಂದೆ ತಂದೆಯಿಲ್ಲದ ಮಗುವನ್ನು ಬೆಳೆಸುವುದು ಬೇಡವೆಂದು ಗರ್ಭಪಾತಕ್ಕಾಗಿ ಅನುಮತಿ ಕೇಳಿದಾಗ ಅವರು ʼನಮ್ಮ ಧರ್ಮದಲ್ಲಿ, ಈ ಪಾಪವನ್ನು [ಗರ್ಭಪಾತವನ್ನು] ಅನುಮತಿಸಲಾಗುವುದಿಲ್ಲʼ ಎಂದು ಹೇಳಿದರು."
ಇಲ್ಲಿ ಬ್ಯೂಟಿಗಿಂತಲೂ ಕಿರಿಯ ಹಲವಾರು ಹುಡುಗಿಯರಿದ್ದಾರೆ, ಅವರು ಗರ್ಭಿಣಿಯರು ಅಥವಾ ಈಗಾಗಲೇ ಮಕ್ಕಳನ್ನು ಹೊಂದಿದ್ದಾರೆ.
ಹದಿಹರೆಯದ ಗರ್ಭಧಾರಣೆಯನ್ನು ಕಡಿಮೆ ಮಾಡುವುದು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಯುಎನ್‌ನ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ . ನಿರ್ದಿಷ್ಟವಾಗಿ, ಎಸ್‌ಡಿಜಿಗಳು 3 ಮತ್ತು 5 ಗುರಿಗಳನ್ನು ಒಳಗೊಂಡಿದೆ, 'ಉತ್ತಮ ಆರೋಗ್ಯ ಮತ್ತು ಸ್ವಾಸ್ಥ್ಯ' ಮತ್ತು 'ಲಿಂಗ ಸಮಾನತೆ'. 2025ರ ವೇಳೆಗೆ ಎಂದರೆ ಮುಂದಿನ 40 ತಿಂಗಳಲ್ಲಿ ಈ ಗುರಿಗಳನ್ನು ಸಾಧಿಸಬೇಕೆಂದು ಆಶಿಸಲಾಗಿದೆ. ಆದರೆ ವಾಸ್ತವದಲ್ಲಿ, ಸಾಧಿಸುವುದು ತುಂಬಾ ಕಷ್ಟ.
ವಿಶ್ವಸಂಸ್ಥೆಯ ಎಚ್‌ಐವಿ / ಏಡ್ಸ್ ಕಾರ್ಯಕರ್ಮ (ಯುಎನ್‌ಐಐಡಿಎಸ್) ಪ್ರಕಟಿಸಿದ 2016ರ ಪ್ರಮುಖ ಜನಸಂಖ್ಯಾ ಅಟ್ಲಾಸ್ ಪ್ರಕಾರ, ಭಾರತದಲ್ಲಿ ವೇಶ್ಯಾವಾಟಿಕೆಯಲ್ಲಿ ಸುಮಾರು 657,800 ಮಹಿಳೆಯರಿದ್ದಾರೆ. ಆದಾಗ್ಯೂ, ಆಗಸ್ಟ್ 2020ರಲ್ಲಿ, ನ್ಯಾಷನಲ್ ನೆಟ್ವರ್ಕ್ ಆಫ್ ಸೆಕ್ಸ್ ವರ್ಕರ್ಸ್ (ಎನ್ಎನ್ಎಸ್ಡಬ್ಲ್ಯೂ) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೇಶದಲ್ಲಿ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರ ಸಂಖ್ಯೆ ಸುಮಾರು 1.2 ಮಿಲಿಯನ್ ಎಂದು ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ. ಈ ಪೈಕಿ 6.8 ಲಕ್ಷ ಮಂದಿ (ಯುಎನ್‌ಐಐಡಿಎಸ್ ಉಲ್ಲೇಖಿಸಿದ ಸಂಖ್ಯೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಸೇವೆಗಳನ್ನು ಪಡೆಯುವ ನೋಂದಾಯಿತ ಮಹಿಳಾ ಲೈಂಗಿಕ ಕಾರ್ಯಕರ್ತೆಯರು. 1997ರಲ್ಲಿ ಸ್ಥಾಪನೆಯಾದ ಎನ್‌ಎನ್‌ಎಸ್‌ಡಬ್ಲ್ಯು ಭಾರತದಲ್ಲಿ ಸ್ತ್ರೀ, ಲಿಂಗಾಂತರಿ ಮತ್ತು ಪುರುಷ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳನ್ನು ಉತ್ತೇಜಿಸುವ ಲೈಂಗಿಕ ಕಾರ್ಯಕರ್ತರ ನೇತೃತ್ವದ ಸಂಸ್ಥೆಗಳ ರಾಷ್ಟ್ರೀಯ ಜಾಲವಾಗಿದೆ.
ನಾವು ಮಾತನಾಡುತ್ತಿರುವ ಹೊತ್ತು, ಬ್ಯೂಟಿಯ ವಯಸ್ಸಿನ ಹುಡುಗನೊಬ್ಬ ಬಂದು, ನಾವು ಏನು ಮಾತನಾಡುತ್ತಿದ್ದೇವೆಂದು ಆಲಿಸಿ, ನಂತರ ನಮ್ಮೊಂದಿಗೆ ಮಾತನಾಡಲು ಪ್ರಾರಂಭಿಸಿದ. "ನನ್ನ ಹೆಸರು ರಾಹುಲ್. ನಾನು ಚಿಕ್ಕವನಿದ್ದಾಗಿನಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಬ್ಯೂಟಿ ಮತ್ತು ಇತರ ಕೆಲವು ಹುಡುಗಿಯರಿಗಾಗಿ ಗ್ರಾಹಕರನ್ನು ತರುತ್ತೇನೆ,” ಎಂದು ಹೇಳಿದ. ನಂತರ ಅವನು ಮೌನವಾದ. ಅವನ ಬಗ್ಗೆ ಹೆಚ್ಚು ತಿಳಿಯಲಿಲ್ಲ ಮತ್ತು ನಂತರ ಬ್ಯೂಟಿ ಮತ್ತು ನಾನು ಮತ್ತೆ ಮಾತನಾಡಿಸಲು ಪ್ರಾರಂಭಿಸಿದೆವು.
“ನಾನು ನನ್ನ ಮಗ, ತಾಯಿ, ಇಬ್ಬರು ಹಿರಿಯ ಸಹೋದರರು ಮತ್ತು ತಂದೆಯೊಂದಿಗೆ ವಾಸಿಸುತ್ತಿದ್ದೇನೆ. ನಾನು 5 ನೇ ತರಗತಿಯವರೆಗೆ ಶಾಲೆಗೆ ಹೋಗಿದ್ದೆ ನಂತರ ನಾನು ನಿಲ್ಲಿಸಿದೆ. ನನಗೆ ಶಾಲೆ ಎಂದೂ ಇಷ್ಟವಾಗಿಲ್ಲ. ನನ್ನ ತಂದೆಗೆ ನಗರದಲ್ಲಿ ಡಿಬ್ಬಾ [ಸಿಗರೇಟ್, ಪಂದ್ಯಗಳು, ಚಹಾ, ಪ್ಯಾನ್ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುವ ಒಂದು ಸಣ್ಣ ಅಂಗಡಿ] ನಡೆಸುತ್ತಿದ್ದರು. ಅಷ್ಟೇ. ನಾನು ಮದುವೆಯಾಗಿಲ್ಲ” ಎಂದು ಬ್ಯೂಟಿ ಹೇಳುತ್ತಾರೆ.
"ನನ್ನ ಮೊದಲ ಮಗುವನ್ನು ನಾನು ಪ್ರೀತಿಸುವ ವ್ಯಕ್ತಿಯಿಂದ ಪಡೆದೆ. ಅವನು ನನ್ನನ್ನು ಕೂಡ ಪ್ರೀತಿಸುತ್ತಾನೆ. ಅಥವಾ ಕನಿಷ್ಠ ಹಾಗೆ ಹೇಳುತ್ತಾನೆ,” ಎಂದು ಬ್ಯೂಟಿ ನಗುತ್ತಾರೆ. "ಅವರು ನನ್ನ ಶಾಶ್ವತ ಗ್ರಾಹಕರಲ್ಲಿ ಒಬ್ಬರು." ನಿಯಮಿತ, ದೀರ್ಘಕಾಲೀನ ಗ್ರಾಹಕರನ್ನು ಸೂಚಿಸಲು ಇಲ್ಲಿ ಅನೇಕ ಮಹಿಳೆಯರು ‘ಪರ್ಮನೆಂಟ್’ ಎಂಬ ಇಂಗ್ಲಿಷ್ ಪದವನ್ನು ಬಳಸುತ್ತಾರೆ. ಕೆಲವೊಮ್ಮೆ, ಅವರನ್ನು ‘ಪಾರ್ಟ್ನರ್’ ಎಂದು ಕರೆಯುತ್ತಾರೆ. “ನೋಡಿ, ನನ್ನ ಮೊದಲ ಮಗುವನ್ನು ನಾನು ಯೋಜಿಸಿರಲಿಲ್ಲ. ಈ ಗರ್ಭಧಾರಣೆಯೂ ಯೋಜಿತವಲ್ಲ. ಆದರೆ ಅವರು ನನ್ನನ್ನು ಕೇಳಿದ ಕಾರಣ ನಾನು ಎರಡೂ ಬಾರಿ ಗರ್ಭವನ್ನು ಉಳಿಸಿಕೊಂಡೆ. ಅವರು ಮಗುವಿನ ಎಲ್ಲಾ ಖರ್ಚುಗಳನ್ನು ಭರಿಸುವುದಾಗಿ ಹೇಳಿದ್ದರು ಮತ್ತು ಅವರು ಅದರ ಬಗ್ಗೆ ತಮ್ಮ ಮಾತನ್ನು ಉಳಿಸಿಕೊಂಡರು. ಈ ಸಮಯದಲ್ಲಿ, ಅವರು ನನ್ನ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ,” ಎಂದು ಅವರು ಹೇಳುತ್ತಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ರ ಪ್ರಕಾರ, ಭಾರತದಲ್ಲಿ 15-19 ವರ್ಷದೊಳಗಿನ 8% ಹುಡುಗಿಯರು ಗರ್ಭಿಣಿಯರು ಅಥವಾ ಮಗುವನ್ನು ಹೆತ್ತಿದ್ದಾರೆ. ಈ ಪೈಕಿ 5% ಜನರು ಕನಿಷ್ಠ ಒಂದು ಮಗುವನ್ನು ಹೊಂದಿದ್ದಾರೆ ಮತ್ತು 3 ಪ್ರತಿಶತದಷ್ಟು ಹುಡುಗಿಯರು ತಮ್ಮ ಮೊದಲ ಮಗುವಿನೊಂದಿಗೆ ಗರ್ಭಿಣಿಯಾಗಿದ್ದಾರೆ.
ಇಲ್ಲಿರುವ ಕೆಲವೇ ಕೆಲವು ಲೈಂಗಿಕ ಕಾರ್ಯಕರ್ತೆಯರು ತಮ್ಮ ‘ಶಾಶ್ವತ’ ಗ್ರಾಹಕರೊಂದಿಗೆ ಇರುವಾಗ ಯಾವುದೇ ರೀತಿಯ ಗರ್ಭನಿರೋಧಕವನ್ನು ಬಳಸುವುದನ್ನು ತಪ್ಪಿಸುತ್ತಾರೆ ಎಂದು ರಾಹುಲ್ ಹೇಳುತ್ತಾರೆ. ಗರ್ಭಧರಿಸಿದಲ್ಲಿ ಗರ್ಭಪಾತ ಮಾಡಿಸುತ್ತಾರೆ- ಅಥವಾ ಬ್ಯೂಟಿಯ ಹಾಗೆ, ಮಗುವನ್ನು ಹೊಂದುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವರೊಂದಿಗೆ ದೀರ್ಘಕಾಲೀನ ಸಂಬಂಧವನ್ನು ಕಾಪಾಡಿಕೊಳ್ಳುವುದು, ಅವರು ಸಂಬಂಧ ಹೊಂದಿರುವ ಪುರುಷನನ್ನು ಮೆಚ್ಚಿಸುವುದು.
"ಹೆಚ್ಚಿನ ಗ್ರಾಹಕರು ಕಾಂಡೋಮ್‌ನೊಂದಿಗೆ ಇಲ್ಲಿಗೆ ಬರುವುದಿಲ್ಲ" ಎಂದು ರಾಹುಲ್ ಹೇಳುತ್ತಾರೆ. “ನಂತರ ನಾವು [ಮಧ್ಯವರ್ತಿಗಳು] ಓಡಿ ಹೋಗಿ ಅಂಗಡಿಯಿಂದ ತರಬೇಕಾಗುತ್ತದೆ. ಆದರೆ ಕೆಲವೊಮ್ಮೆ ಈ ಹುಡುಗಿಯರು ತಮ್ಮ ಶಾಶ್ವತ ಪಾರ್ಟ್ನರ್ ಜೊತೆ ರಕ್ಷಣೆ ಇಲ್ಲದೆ ಮುಂದುವರಿಯಲು ಒಪ್ಪುತ್ತಾರೆ. ಅಂತಹ ಸಂದರ್ಭದಲ್ಲಿ, ನಾವು ನಡುವೆ ಹೋಗುವುದಿಲ್ಲ.”
ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ವರದಿಯ ಪ್ರಕಾರ, ದೇಶಾದ್ಯಂತ ಪುರುಷರಲ್ಲಿ ಗರ್ಭನಿರೋಧಕ ಬಳಕೆ ತುಂಬಾ ಕಡಿಮೆ. 2015-16ರಲ್ಲಿ, ಸ್ಟೆರಿಲೈಸೇಷನ್ ಮತ್ತು ಗರ್ಭನಿರೋಧಕ ಬಳಕೆಯ ಒಟ್ಟು ದರವು ಶೇಕಡಾ 6ರಷ್ಟಿತ್ತು ಮತ್ತು ಇದು 90ರ ದಶಕದಿಂದಲೂ ಹಾಗೆಯೇ ಉಳಿದಿದೆ. 2015-16ರಲ್ಲಿ ಗರ್ಭನಿರೋಧಕಗಳನ್ನು ಬಳಸುವ ಮಹಿಳೆಯರ ಪ್ರಮಾಣ ಬಿಹಾರದಲ್ಲಿ ಶೇ 23ರಿಂದ ಆಂಧ್ರಪ್ರದೇಶದಲ್ಲಿ ಶೇ 70ರಷ್ಟಿತ್ತು.
"ನಾವು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ" ಎಂದು ಬ್ಯೂಟಿ ಹೇಳುತ್ತಾರೆ. “ಆದರೆ ಇತ್ತೀಚೆಗೆ ಅವರ ಕುಟುಂಬದ ಒತ್ತಡದಿಂದಾಗಿ ಅವರು ವಿವಾಹವಾದರು. ನನ್ನ ಅನುಮತಿಯೊಂದಿಗೆ ಮಾಡಿಕೊಂಡಿದ್ದಾರೆ. ನಾನು ಒಪ್ಪಿಗೆ ನೀಡಿದೆ. ಏನು ಮಾಡೋದು? ನಾನು ಮದುವೆಯಾಗಿಲ್ಲ ಮತ್ತು ಅವರು ನನ್ನನ್ನು ಮದುವೆಯಾಗುವುದಾಗಿ ಹೇಳಲಿಲ್ಲ. ನನ್ನ ಮಕ್ಕಳು ಉತ್ತಮ ಜೀವನವನ್ನು ನಡೆಸಲು ಸಾಧ್ಯವಾದರೆ, ಅಷ್ಟೇ ನನಗೆ ಸಾಕು.”
“ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಚೆಕಪ್‌ಗೆಂದು ಹೋಗುತ್ತೇನೆ. ನಾನು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸುತ್ತೇನೆ, ಖಾಸಗಿ ಚಿಕಿತ್ಸಾಲಯಗಳಿಗೆ ಹೋಗುತ್ತೇನೆ. ಎರಡನೆಯ ಗರ್ಭ ನಿಂತಿದ್ದು ತಿಳಿದಾಗ, ನಾನು ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು (ಎಚ್‌ಐವಿ ಸೇರಿದಂತೆ) ಮಾಡಿಸಿದ್ದೇನೆ. ಎಲ್ಲವೂ ಸರಿಯಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ನಮ್ಮನ್ನು ಬೇರೆ ರೀತಿಯಲ್ಲಿ ನೋಡುತ್ತಾರೆ. ಅವರು ನಿಂದನೀಯವಾಗಿ ಮಾತನಾಡುತ್ತಾರೆ ಮತ್ತು ನಮ್ಮ ವಿರುದ್ಧ ತಾರತಮ್ಯ ಮಾಡುತ್ತಾರೆ” ಎಂದು ಬ್ಯೂಟಿ ಹೇಳುತ್ತಾರೆ.
*****
ರಾಹುಲ್ ಬಾಗಿಲಿಗೆ ಬಂದ ವ್ಯಕ್ತಿಯೊಂದಿಗೆ ಮಾತನಾಡಲು ಹೋಗುತ್ತಾನೆ. “ಈ ತಿಂಗಳ ಬಾಡಿಗೆಯನ್ನು ಪಾವತಿಸಲು ನನಗೆ ಇನ್ನೊಂದು ವಾರ ಕಾಲಾವಕಾಶ ನೀಡುವಂತೆ ನಾನು ಮನೆ ಮಾಲೀಕರನ್ನು ಕೇಳಿದೆ. ಅವರು ಬಾಡಿಗೆ ಕೇಳಲು ಬಂದಿದ್ದರು,” ಎಂದು ಹಿಂದಿರುಗಿದ ರಾಹುಲ್ ಹೇಳಿದರು. "ಈ ಸ್ಥಳದ ಬಾಡಿಗೆ ತಿಂಗಳಿಗೆ 15,000 ರೂ." ಚತುರ್ಭುಜದಲ್ಲಿರುವ ಹೆಚ್ಚಿನ ಮನೆಗಳು ಹಳೆಯ ವೃತ್ತಿ ಮಹಿಳೆಯರ, ಕೆಲವೊಮ್ಮೆ ವಯಸ್ಸಾದ ಮಹಿಳೆಯರ ಒಡೆತನದಲ್ಲಿದೆ ಎಂದು ರಾಹುಲ್ ಹೇಳುತ್ತಾರೆ.
ಅವರಲ್ಲಿ ಹೆಚ್ಚಿನವರು ಪ್ರಸ್ತುತ ವೃತ್ತಿಯಲ್ಲಿಲ್ಲ ಮತ್ತು ತಮ್ಮ ಮನೆಗಳನ್ನು ಮಧ್ಯವರ್ತಿಗಳು (pimps) ಮತ್ತೆ ಕಿರಿಯ ಲೈಂಗಿಕ ಕಾರ್ಯಕರ್ತೆಯರಿಗೆ ಬಾಡಿಗೆಗೆ ನೀಡಿದ್ದಾರೆ. ಕೆಲವೊಮ್ಮೆ ಒಂದೊಂದು ಗುಂಪಿಗೆ ಬಾಡಿಗೆ ನೀಡಿರುತ್ತಾರೆ. ಅವರು ನೆಲಮಹಡಿಯನ್ನು ಬಾಡಿಗೆಗೆ ನೀಡಿ ಮೊದಲ ಅಥವಾ ಎರಡನೇ ಮಹಡಿಯಲ್ಲಿ ವಾಸಿಸುತ್ತಾರೆ. "ಅವರಲ್ಲಿ ಕೆಲವರು ತಮ್ಮ ಮುಂದಿನ ಪೀಳಿಗೆಗೆ, ಅವರ ಹೆಣ್ಣುಮಕ್ಕಳಿಗೆ, ಸೊಸೆಯರಿಗೆ ಅಥವಾ ಮೊಮ್ಮಕ್ಕಳಿಗೆ ಕೆಲಸವನ್ನು ವರ್ಗಾಯಿಸಿ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ" ಎಂದು ರಾಹುಲ್ ಹೇಳುತ್ತಾರೆ.
ಎನ್‌ಎನ್‌ಎಸ್‌ಡಬ್ಲ್ಯೂ ಪ್ರಕಾರ , ಲೈಂಗಿಕ ಕಾರ್ಯಕರ್ತೆಯರಲ್ಲಿ (ಪುರುಷ, ಸ್ತ್ರೀ ಮತ್ತು ಟ್ರಾನ್ಸ್) ಗಮನಾರ್ಹ ಪ್ರಮಾಣದ ಮಹಿಳೆಯರು ಮನೆಯಿಂದಲೇ ಕೆಲಸ ಮಾಡುತ್ತಾರೆ ಮತ್ತು ಗ್ರಾಹಕರನ್ನು ಮೊಬೈಲ್ ಫೋನ್‌ಗಳ ಮೂಲಕ, ಸ್ವತಂತ್ರವಾಗಿ ಅಥವಾ ಏಜೆಂಟರ ಮೂಲಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಚತುರ್ಭುಜ್ ಸ್ತಾನ್‌ನಲ್ಲಿರುವ ಅನೇಕರು ಈ ಕೆಲಸಕ್ಕೆ ಮನೆಯಿಂದ ಬರುವವರಂತೆ ಕಾಣುತ್ತಾರೆ.
ಇಲ್ಲಿನ ಎಲ್ಲಾ ಮನೆಗಳು ಒಂದೇ ರೀತಿ ಕಾಣುತ್ತವೆ. ಮುಖ್ಯ ಬಾಗಿಲುಗಳು ಮರದ ನಾಮಫಲಕಗಳೊಂದಿಗೆ ಕಬ್ಬಿಣದ ಗ್ರಿಲ್‌ಗಳನ್ನು ಹೊಂದಿವೆ. ಇವು ಆ ಮನೆಯ ಮಾಲೀಕರ ಹೆಸರು ಅಥವಾ ಮುಖ್ಯ ಮಹಿಳೆಯ ಹೆಸರನ್ನು ಹೊಂದಿರುತ್ತವೆ. ಹೆಸರುಗಳನ್ನು ಹುದ್ದೆಗಳು ಅನುಸರಿಸುತ್ತವೆ - ಉದಾಹರಣೆಗೆ ನರ್ತಕಿ ಏವಮ್ ಗಾಯಿಕಾ (ನರ್ತಕಿ ಮತ್ತು ಗಾಯಕಿ). ಮತ್ತು ಇವುಗಳ ಕೆಳಗೆ ಅವರ ಪ್ರದರ್ಶನದ ಸಮಯಗಳು - ಸಾಮಾನ್ಯವಾಗಿ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಇರುತ್ತವೆ. ಕೆಲವು ಬೋರ್ಡ್‌ಗಳು ‘ಬೆಳಿಗ್ಗೆ11 ರಿಂದ ರಾತ್ರಿ 11ರವರೆಗೆ’. ಇನ್ನೂ ಕೆಲವು ಬೋರ್ಡ್‌ಗಳು ‘ರಾತ್ರಿ 11 ಗಂಟೆಯವರೆಗೆ’ ಎನ್ನುವ ಅಕ್ಷರಗಳನ್ನು ಹೊಂದಿರುತ್ತವೆ.
ಒಂದೇ ರೀತಿ ಕಾಣುವ ಈ ಮನೆಗಳಲ್ಲಿ ಪ್ರತಿ ಮಹಡಿಯಲ್ಲಿ 2-3 ಕೊಠಡಿಗಳಿವೆ. ಬ್ಯೂಟಿಯ ಮನೆಯ ಪ್ರತಿಯೊಂದು ಕೋಣೆಯಲ್ಲಿ ನೆಲದ ಮೇಲೆ ದೊಡ್ಡ ಹಾಸಿಗೆಯಿದೆ. ಕೋಣೆಯಲ್ಲಿ ಬಹುತೇಕ ಎಲ್ಲಾ ಜಾಗಕ್ಕೆ ಹಾಸಿ ಹಾಸಿರಲಾಗುತ್ತದೆ. ಮತ್ತು ಆ ಹಾಸಿಗೆಯ ಹಿಂಭಾಗದ ಗೋಡೆಯ ಮೇಲೆ ದೊಡ್ಡ ಕನ್ನಡಿಯಿದೆ. ಉಳಿದ ಸಣ್ಣ ಜಾಗ ಮುಜ್ರಾ ಪ್ರದರ್ಶನಕ್ಕೆ ಮೀಸಲಿಟ್ಟಿರಲಾಗುತ್ತದೆ. ಈ ಕೊಠಡಿ ನೃತ್ಯಗಾರ್ತಿ ಮತ್ತು ಹಾಡುವವರಿಗೆ ಮಾತ್ರ ಮೀಸಲು. ಇಲ್ಲಿನ ಯುವತಿಯರು ಹಿಂದಿನ ತಲೆಮಾರಿನ ಮಹಿಳೆಯರಿಂದ ಕೆಲವೊಮ್ಮೆ ಗಮನಿಸುವುದರ ಮೂಲಕ ಮತ್ತು ಕೆಲವೊಮ್ಮೆ ಅವರಿಂದ ಪಾಠಗಳನ್ನು ತೆಗೆದುಕೊಳ್ಳುವ ಮೂಲಕ ಮುಜ್ರಾವನ್ನು ಕಲಿಯುತ್ತಾರೆ. ಒಳಗೆ ಸಣ್ಣ 10ರಿಂದ 12 ಅಡಿ ಕೋಣೆ ಇದೆ. ಅದು ಮಲಗುವ ಕೋಣೆ.ಜೊತೆಗೆ ಒಂದು ಸಣ್ಣ ಅಡುಗೆ ಮನೆಯಿರುತ್ತದೆ.
"ಕೆಲವೊಮ್ಮೆ ನಮ್ಮಲ್ಲಿ ಕೆಲವು ಹಿರಿಯ ಗ್ರಾಹಕರು ಮುಜ್ರಾ ಪ್ರದರ್ಶನವೊಂದಕ್ಕೆ 80,000 ರೂಗಳ ತನಕ ಪಾವತಿಸುವುದೂ ಇರುತ್ತದೆ" ಎಂದು ರಾಹುಲ್ ಹೇಳುತ್ತಾರೆ. "ಆ ಹಣವನ್ನು, ಅಥವಾ ಯಾವುದೇ ಮೊತ್ತವನ್ನು ಅವರು ಪಾವತಿಸಿದರೂ, ನಮ್ಮಲ್ಲಿರುವ ಮೂರು ಉಸ್ತಾದ್‌ಗಳು [ನುರಿತ ಸಂಗೀತಗಾರರು] - ತಬಲಾ, ಸಾರಂಗಿ ಮತ್ತು ಹಾರ್ಮೋನಿಯಂ ವಾದಕರು -- ನರ್ತಕರು ಮತ್ತು ದಲ್ಲಾಳಿಗಳ ನಡುವೆ ನಡುವೆ ಅದನ್ನು ಹಂಚಲಾಗುತ್ತದೆ." ಆದರೆ ಆಗಲೂ ಅಪರೂಪವಾಗಿದ್ದ ಅಂತಹ ದೊಡ್ಡ ಉಡುಗೊರೆ ಈಗ ಕೇವಲ ಒಂದು ನೆನಪು ಮಾತ್ರ
ಈ ಕಠಿಣ ಕಾಲದಲ್ಲಿ ಬ್ಯೂಟಿ ಸಾಕಷ್ಟು ಸಂಪಾದಿಸುತ್ತಿದ್ದಾರೆಯೇ? 'ಅದೃಷ್ಟವಿರುವ ದಿನಗಳಲ್ಲಿ, ಹೌದು, ಆದರೆ ಹೆಚ್ಚಾಗಿ ಇಲ್ಲ. ಈ ಕಳೆದ ವರ್ಷ ನಮ್ಮ ಪಾಲಿಗೆ ಭಯಾನಕವಾಗಿತ್ತು. ನಮ್ಮ ಸಾಮಾನ್ಯ ಗ್ರಾಹಕರು ಸಹ ಈ ಅವಧಿಯಲ್ಲಿ ಭೇಟಿಗಳನ್ನು ತಪ್ಪಿಸುತ್ತಿದ್ದಾರೆ. ಮತ್ತು ಬಂದವರು ಸಣ್ಣ ಮೊತ್ತವನ್ನು ಮಾತ್ರ ನೀಡುತ್ತಿದ್ದರು'
ಬ್ಯೂಟಿ ಈ ಕಷ್ಟ ಕಾಲದಲ್ಲಿ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆಯೇ?
"ಹೌದು, ಆ ದಿನ ಅದೃಷ್ಟ ಅವರ ಪರವಾಗಿದ್ದರೆ, ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಈ ಕಳೆದ ವರ್ಷ ನಮ್ಮ ಪಾಲಿಗೆ ತುಂಬಾ ಭಯಾನಕವಾಗಿದೆ. ಈ ಅವಧಿಯಲ್ಲಿ ನಿಯಮಿತವಾಗಿ ನಮ್ಮ ಬಳಿಗೆ ಬರುತ್ತಿದ್ದ ಗ್ರಾಹಕರು ಸಹ ಈಗ ಬರುವುದನ್ನು ತಪ್ಪಿಸುತ್ತಿದ್ದಾರೆ. ಮತ್ತು ಬಂದವರು ಈಗ ಹೆಚ್ಚು ಪಾವತಿಸಲು ಹಿಂಜರಿಯುತ್ತಾರೆ. ಆದರೆ ಏನು ಮಾಡುವದು, ನಮಗೆ ದೊರಕಿದ್ದನ್ನು ಪಡೆಯವುದು ಬಿಟ್ಟು ಬೇರೆ ದಾರಿಯಿಲ್ಲ. ಅವರಲ್ಲಿ ಯಾರಿಗಾದರೂ ಕೋವಿಡ್ ಸೋಂಕು ತಗುಲಿರಬಹುದು. ಆದರೆ ನಾವು ಆ ಅಪಾಯವನ್ನು ಎದುರಿಸಲೇಬೇಕಾಗಿದೆ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ: ಈ ಗುಂಪಿನಲ್ಲಿ, ಯಾರಾದರೂ ವೈರಸ್ ಸೋಂಕಿಗೆ ಒಳಗಾಗಿದ್ದರೂ, ಪ್ರತಿಯೊಬ್ಬರ ಜೀವವೂ ಅಪಾಯಕ್ಕೊಳಗಾಗುತ್ತದೆ.”
ಬ್ಯೂಟಿ ಹೇಳುವಂತೆ, ಕೊರೋನಾದ ಎರಡನೇ ಅಲೆ ಭಾರತದ ಮೇಲೆ ದಾಳಿಯಿಡುವ ಮೊದಲು ಅವರು ತಿಂಗಳಿಗೆ 25-30,000 ರೂ. ಸಂಪಾದಿಸುತ್ತಿದ್ದರು. ಎರಡನೇ ಅೆಯೊಂದಿಗೆ ಬಂದ ಲಾಕ್‌ಡೌನ್ ಅವರ ಮತ್ತು ಅವರಂತಹ ಇತರರಿಗೆ ಜೀವನವನ್ನು ಕಷ್ಟಕರವಾಗಿಸಿದೆ. ಜೊತೆಗ ವೈರಸ್ ಭಯವೂ ಕಾಡುತ್ತಿದೆ.
*****
ಕಳೆದ ಮಾರ್ಚಿಯಲ್ಲಿ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯನ್ನು ಘೋಷಿಸಿತ್ತು, ಆದರೆ ಚತುರ್ಭುಜ್‌ನ ಮಹಿಳೆಯರಿಗೆ ಅದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯಡಿ, 20 ಕೋಟಿ ಬಡ ಮಹಿಳೆಯರಿಗೆ ಮೂರು ತಿಂಗಳವರೆಗೆ ತಿಂಗಳಿಗೆ 500 ರೂ ನೀಡಲಾಗುತ್ತದೆ. ಆದರೆ ಅದಕ್ಕಾಗಿ ಅವರು ಜನ್‌ಧನ್ ಖಾತೆಯನ್ನು ಹೊಂದಿರಬೇಕಾಗಿತ್ತು. ಆದರೆ ಅವರು ಜನ ಧನ್ ಖಾತೆದಾರರಾಗಿರಬೇಕು. ಈ ವೇಶ್ಯಾಗೃಹದಲ್ಲಿ ನಾನು ಮಾತನಾಡಿದ ಹಲವಾರು ಮಹಿಳೆಯರಲ್ಲಿ ಒಬ್ಬರಿಗೆ ಸಹ ಜನ್ಧನ್ ಖಾತೆ ಇರಲಿಲ್ಲ. ಬ್ಯೂಟಿ ಕೇಳುತ್ತಾರೆ: “ಮೇಡಂ, ನಾವು 500 ರೂಪಾಯಿಗಳಿಂದ ಏನು ಮಾಡಲು ಸಾಧ್ಯ?”
ಮತದಾರರ ಗುರುತಿನ ಚೀಟಿ , ಆಧಾರ್, ಪಡಿತರ ಚೀಟಿ ಅಥವಾ ಜಾತಿ ಪ್ರಮಾಣಪತ್ರ - ಯಾವುದೇ ಗುರುತಿನ ಚೀಟಿ ಪಡೆಯಲು ಈ ವೃತ್ತಿಯಲ್ಲಿರುವವರು ಯಾವಾಗಲೂ ಅಡೆತಡೆಗಳನ್ನು ದಾಟಬೇಕಾಗುತ್ತದೆ ಎಂದು ಎನ್‌ಎನ್‌ಎಸ್‌ಡಬ್ಲ್ಯೂ ಹೇಳುತ್ತದೆ . ಅನೇಕರು ಒಂಟಿಯಾಗಿರುತ್ತಾರೆ ಮತ್ತು ಮಕ್ಕಳನ್ನು ಹೊಂದಿರುತ್ತಾರೆ. ವಾಸಸ್ಥಳದ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲು ಅವರಿಗೆ ಸಾಧ್ಯವಿಲ್ಲ. ಜಾತಿ ಪ್ರಮಾಣಪತ್ರ ಪಡೆಯಲೂ ಅವರ ಬಳಿ ಅಗತ್ಯ ದಾಖಲೆಗಳಿರುವುದಿಲ್ಲ . ರಾಜ್ಯ ಸರ್ಕಾರ ಘೋಷಿಸಿದ ಪಡಿತರ ಸಹಾಯವನ್ನು ಸಹ ಅವರಿಗೆ ಹೆಚ್ಚಿನ ಸಮಯ ನಿರಾಕರಿಸಲಾಗುತ್ತದೆ.
"ರಾಷ್ಟ್ರ ರಾಜಧಾನಿ, ದೆಹಲಿಯಲ್ಲಿಯೇ ಸರ್ಕಾರವು ಜನರಿಗೆ ಸಹಾಯ ಮಾಡದಿರುವಾಗ, " ಯೋಜನೆಗಳು ತಡವಾಗಿ ತಲುಪುವ ಅಥವಾ ತಲುಪುವುದೇ ದುಸ್ತರವಾಗಿರುವ ದೇಶದ ಗ್ರಾಮೀಣ ಭಾಗಗಳಲ್ಲಿನ ಪರಿಸ್ಥಿತಿಯನ್ನು ನೀವೇ ಊಹಿಸಿ" ಎಂದು ಹೊಸ-ದೆಹಲಿಯ ಕುಸುಮ್ ಹೇಳುತ್ತಾರೆ. ಇವರು ಆಲ್ ಇಂಡಿಯಾ ನೆಟ್‌ವರ್ಕ್ ಆಫ್ ಸೆಕ್ಸ್ ವರ್ಕರ್ಸ್‌ನ ಅಧ್ಯಕ್ಷರು. "ಈ ಲಾಕ್‌ಡೌನ್ ಸಮಯದಲ್ಲಿ, ಜೀವನ ಸಾಗಿಸಲು ಈ ವೃತ್ತಿಯಲ್ಲಿರುವ ಅನೇಕರು ಒಂದರ ನಂತರ ಒಂದು ಸಾಲವನ್ನು ತೆಗೆದುಕೊಳ್ಳುತ್ತಿದ್ದಾರೆ."
ಬ್ಯೂಟಿಯ ಹಾರ್ಮೋನಿಯಮ್ ಅಭ್ಯಾಸ ಮುಗಿಯುತ್ತಾ ಬಂದಿತ್ತು. “ಯುವ ಗ್ರಾಹಕರು ಬಂದರೆ, ಅವರು ಮುಜ್ರಾ ನೋಡಲು ಇಷ್ಟಪಡುವುದಿಲ್ಲ. ಅವರು ನೇರವಾಗಿ ಮಲಗುವ ಕೋಣೆಗೆ ಹೋಗಲು ಬಯಸುತ್ತಾರೆ. ಆದರೆ ನಾವು ಸ್ವಲ್ಪ ಸಮಯದವರೆಗೆ [30ರಿಂದ 60 ನಿಮಿಷಗಳು] ನೃತ್ಯವನ್ನು ನೋಡಬೇಕು ಎಂದು ಅವರಿಗೆ ಹೇಳುತ್ತೇವೆ. ಇಲ್ಲದಿದ್ದರೆ, ನಮ್ಮ ಕಲಾವಿದರಿಗೆ ನಾವು ಎಲ್ಲಿಂದ ಹಣ ನೀಡುವುದು? ಅಂತಹ ಯುವಕರಿಂದ ನಾವು ಕನಿಷ್ಠ 1,000 ರೂ. ಪಡೆಯುತ್ತೇವೆ. ದೈಹಿಕ ಸಂಪರ್ಕಕ್ಕೆ ಬೇರೆಯಾಗಿ ಶುಲ್ಕ ವಿಧಿಸುತ್ತೇವೆ," ಎಂದು ಅವರು ಹೇಳುತ್ತಾರೆ. "ಅದಕ್ಕೆ ನಾವು ಗಂಟೆಯ ಲೆಕ್ಕದಲ್ಲಿ ಹಣ ಪಡೆಯುತ್ತೇವೆ. ಪಡೆಯುವ ಮೊತ್ತ ಗ್ರಾಹಕರಿಂದ ಗ್ರಾಹಕರಿಗೆ ಬದಲಾಗುತ್ತದೆ.”
ಆಗ ಬೆಳಗಿನ11:40 ಮತ್ತು ಬ್ಯೂಟಿ ಹಾರ್ಮೋನಿಯಂ ದೂರವಿಟ್ಟು ತನ್ನ ಚೀಲದಿಂದ “ನಾನು ನನ್ನ ಔಷಧಿಗಳನ್ನು [ಮಲ್ಟಿವಿಟಾಮಿನ್ ಮತ್ತು ಫೋಲಿಕ್ ಆಸಿಡ್] ತೆಗೆದುಕೊಳ್ಳಬೇಕಾಗಿದೆ, ಹೀಗಾಗಿ ನಾನು ಈಗ ನನ್ನ ಉಪಾಹಾರ ಮಾಡುತ್ತೇನೆ,” ಎಂದರು. "ನಾನು ಕೆಲಸಕ್ಕೆ ಬರುವಾಗಲೆಲ್ಲಾ ನನ್ನ ತಾಯಿ ಅಡುಗೆ ಮಾಡಿ ತಿಂಡಿ ಕಟ್ಟಿ ಕೊಡುತ್ತಾರೆ."
"ಈ ಸಂಜೆ ಗ್ರಾಹಕರು ಸಿಗಬಹುದು ಎಂದು ನಾನು ಭಾವಿಸಿದ್ದೇನೆ" ಎಂದು ಮೂರು ತಿಂಗಳ ಗರ್ಭಿಣಿಯಾಗಿರುವ ಬ್ಯೂಟಿ ಹೇಳುತ್ತಾರೆ. “ಭಾನುವಾರ ಸಂಜೆ ಶ್ರೀಮಂತ ಗ್ರಾಹಕರನ್ನು ಹುಡುಕುವುದು ಕಷ್ಟ. ಸ್ಪರ್ಧೆ ತೀವ್ರವಾಗಿರುತ್ತದೆ.”
ಪರಿ ಮತ್ತು ಕೌಂಟರ್‌ಮೀಡಿಯಾ ಟ್ರಸ್ಟ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಬೆಂಬಲದೊಂದಿಗೆ, ಗ್ರಾಮೀಣ ಭಾರತದ ಹದಿಹರೆಯದವರು ಮತ್ತು ಯುವತಿಯರ ಬಗ್ಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದೊಂದು ಈ ಪ್ರಮುಖ ಆದರೆ ಸಮಾಜದ ಅಂಚಿನಲ್ಲಿರುವ ಗುಂಪಿನ ಪರಿಸ್ಥಿತಿಯನ್ನು ಅವರದೇ ಆದ ನಿರೂಪಣೆ ಮತ್ತು ಅನುಭವದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ.
ಈ ಲೇಖನವನ್ನು ಮರುಪ್ರಕಟಿಸಲು ಬಯಸುವಿರಾ? ದಯವಿಟ್ಟು zahra@ruralindiaonline.org ಗೆ ಇ-ಮೇಲ್ ಬರೆಯಿರಿ. ccಯನ್ನು namita@ruralindiaonline.org ruralindiaonline.orgಈ ವಿಳಾಸಕ್ಕೆ ಸೇರಿಸಿ
ಜಿಗ್ಯಾಸಾ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.
ಅನುವಾದ: ಶಂಕರ ಎನ್. ಕೆಂಚನೂರು