“ನನ್ನ ಮಗ ಸುಮಾರು ನಾಲ್ಕು ವರ್ಷಗಳ ಹಿಂದೆ ತೀರಿಕೊಂಡ. ಒಂದು ವರ್ಷದ ನಂತರ, ನನ್ನ ಪತಿ ಕೂಡ ನಿಧನರಾದರು” ಎಂದು 70 ವರ್ಷದ ಭೀಮಾ ತಾಂಡಲೆ ಹೇಳುತ್ತಾರೆ. ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಸುಡುವ ಬಿಸಿಲಿನಲ್ಲಿ ಕುಳಿತು, ಒಂದು ವರ್ಷದೊಳಗೆ ಎದುರಾದ ಈ ಎರಡು ವಿನಾಶಕಾರಿ ನಷ್ಟಗಳ ಬಗ್ಗೆ ಹೇಳುತ್ತಿದ್ದರು. ಪತಿ ಮತ್ತು ಮಗ ಇಬ್ಬರು ಕೂಡ ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಭೀಮಾ ಅವರ ಮಗ ದತ್ತು ಅವರು ಸಾಯುವಾಗ ಅವರಿಗೆ ಕೇವಲ 30 ವರ್ಷ, ಮತ್ತು ಅವರ ಪತಿ ಉತ್ತಮ್ ಅವರ 60ರ ದಶಕದ ಮಧ್ಯದಲ್ಲಿದ್ದರು. "ಅಂದಿನಿಂದ, ನಾನು ನನ್ನ ಸೊಸೆ ಸಂಗಿತಾಳೊಂದಿಗೆ ಮನೆಯೊಂದನ್ನು ನಿರ್ವಹಿಸುತ್ತಿದ್ದೇನೆ" ಎಂದು ಕೃಷಿ ಕಾರ್ಮಿಕರಾಗಿ ದುಡಿಮೆ ಮಾಡುತ್ತಿರುವ ಭೀಮಾ ಹೇಳುತ್ತಾರೆ. "ನನ್ನ ಮೊಮ್ಮಗ, ಸುಮಿತ್‌ಗೆ ಈಗ14 ವರ್ಷ. ನಾವು ಅವನನ್ನು ನೋಡಿಕೊಳ್ಳಬೇಕು."

ಇದೆಲ್ಲದರ ನಡುವೆಯೂ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಜನವರಿ 25-26ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಭೀಮಾ ಮುಂಬೈಗೆ ಬಂದಿದ್ದಾರೆ. ದೆಹಲಿಯ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಲು ಸಮುಕ್ತಾ ಶೆಟ್ಕರಿ ಕಮಗರ್ ಮೋರ್ಚಾ ಈ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ. ಅಖಿಲ ಭಾರತ ಕಿಸಾನ್ ಸಭೆಯಿಂದ ಸಂಘಟಿಸಲಾಗಿರುವ ಮಹಾರಾಷ್ಟ್ರದ 21 ಜಿಲ್ಲೆಗಳ ರೈತರು ಇದಕ್ಕಾಗಿ ಮುಂಬೈಗೆ ಬಂದಿದ್ದಾರೆ.

ಜನವರಿ 23ರ ಬೆಳಿಗ್ಗೆ ಹೊರಟು ಮರುದಿನ ಮುಂಬೈ ತಲುಪಿದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನ ಅಂಬೆವಾನಿ ಎಂಬ ತನ್ನ ಹಳ್ಳಿಯ 12-15 ಮಹಿಳೆಯರಲ್ಲಿ ಭೀಮಾ ಕೂಡ ಒಬ್ಬರು. ಅವರಲ್ಲಿ ಮೂವರು ಕೃಷಿಕ ವಿಧವೆಯರು.

ಸುಮನ್ ಬೊಂಬಲೆ ಅವರ ಪತಿ ಒಂದು ದಶಕದ ಹಿಂದೆ ನಿಧನರಾದರು. "ಅವರು ಬಳಲಿಕೆ ಮತ್ತು ಮಾನಸಿಕ ಒತ್ತಡದಿಂದಾಗಿ ನಿಧನರಾದರು" ಎಂದು ಸುಮನ್ ಹೇಳುತ್ತಾರೆ, ಅವರ ಪತಿ ಮೋತಿರಾಮ್‌ಗೆ ಆಗ 50 ವರ್ಷ ವಯಸ್ಸಾಗಿತ್ತು. “ನಾವು ಹಲವು ವರ್ಷಗಳಿಂದ ಐದು ಎಕರೆ ಅರಣ್ಯ ಭೂಮಿಯನ್ನು ಕೃಷಿ ಮಾಡುತ್ತಿದ್ದೇವೆ. ಆದರೆ ಅದು ಈಗಲೂ ನಮ್ಮ ಹೆಸರಿನಲ್ಲಿಲ್ಲ. ಅರಣ್ಯ ಅಧಿಕಾರಿಗಳು ನಮಗೆ ಕಿರುಕುಳ ನೀಡುತ್ತಲೇ ಇರುತ್ತಾರೆ. ನನ್ನ ಪತಿ ಯಾವಾಗಲೂ ಈ ಕುರಿತು ಚಿಂತಿತರಾಗಿರುತ್ತಿದ್ದರು." ಉತ್ತಮ್ ಅವರಂತೆಯೇ, ಮೋತಿರಾಮ್ ಕೂಡ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಕುಸಿದುಬಿದ್ದರು.

Left: Bhima Tandale at Azad Maidan. Right: Lakshmi Gaikwad (front) and Suman Bombale (behind, right) and Bhima came together from Ambevani village
PHOTO • Riya Behl
Left: Bhima Tandale at Azad Maidan. Right: Lakshmi Gaikwad (front) and Suman Bombale (behind, right) and Bhima came together from Ambevani village
PHOTO • Riya Behl

ಎಡ: ಆಜಾದ್ ಮೈದಾನದಲ್ಲಿ ಭೀಮಾ ತಾಂಡಲೆ. ಬಲ: ಲಕ್ಷ್ಮಿ ಗಾಯಕ್‌ವಾಡ್ (ಮುಂಭಾಗ) ಮತ್ತು ಸುಮನ್ ಬೊಂಬಲೆ (ಹಿಂದೆ, ಬಲ) ಮತ್ತು ಭೀಮಾ ಅಂಬೇವಾನಿ ಗ್ರಾಮದಿಂದ ಜೊತೆಯಾಗಿ ಬಂದರು

ಆ ಭೂಮಿಯಲ್ಲಿ, “ನಾನು ಸೋಯಾಬೀನ್, ಸಜ್ಜೆ ಮತ್ತು ತೊಗರಿ ಬೆಳೆಯುತ್ತೇನೆ. ಆದರೆ ಅದು ಮಳೆಗಾಲದಲ್ಲಿ ಮಾತ್ರ ಏಕೆಂದರೆ ಉಳಿದ ಸಮಯದಲ್ಲಿ ನೀರಿನ ಲಭ್ಯತೆಯಿರುವುದಿಲ್ಲ. ವಿದ್ಯುತ್ ಕೂಡ ಇರುವುದಿಲ್ಲ.” ಎಂದು 60 ವರ್ಷದ ಸುಮನ್ ಹೇಳುತ್ತಾರೆ. ಅವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಅದರಿಂದ ದಿನಕ್ಕೆ 150-200 ರೂಪಾಯಿಗಳ ಕೂಲಿ ದೊರೆಯುತ್ತದೆ. ಎಂಎನ್‌ಆರ್‌ಇಜಿಎ ಅಡಿಯಲ್ಲಿ ಹೆಚ್ಚಿನ ಕೆಲಸಗಳು ಲಭ್ಯವಾಗುವಂತೆ ಮಾಡಬೇಕೆನ್ನುವುದು ನಮ್ಮ ಬೇಡಿಕೆಗಳಲ್ಲಿ ಒಂದು, ಇದರಿಂದ ನಾವು ನಿಯಮಿತ ಆದಾಯವನ್ನು ಪಡೆಯಬಹುದು" ಎಂದು ಅವರು ಹೇಳುತ್ತಾರೆ.

ಮುಂಬೈ ಪ್ರತಿಭಟನೆಯಲ್ಲಿ ಭಾಗವಹಿಸಲು ಕನಿಷ್ಠ ನಾಲ್ಕು ದಿನಗಳಾದರೂ ಕೆಲಸದಿಂದ ದೂರವಿರುವುದರಿಂದ ಸುಮನ್ ಅವವರಿಗಾಗುವ ದಿನಗೂಲಿಯ ನಷ್ಟ 600–800 ರೂ. "ನಮಗೆ ಬೇರೆ ಆಯ್ಕೆ ಏನಿದೆ?" ಅವರು ಪ್ರಶ್ನಿಸುತ್ತಾರೆ. “ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರಬೇಕು. ನಮ್ಮ ಹಳ್ಳಿಯ ತಲತಿ ಅವರು ನನ್ನ ಜಮೀನಿನ ಮಾಲೀಕತ್ವವನ್ನು ಕೊಡಿಸುತ್ತೇನೆಂದು ಹೇಳುತ್ತಲೇ ಇರುತ್ತಾರೆ, ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ. ನನ್ನಲ್ಲಿ ಒಂದು ಎಕರೆ ಕೃಷಿಭೂಮಿ ಕೂಡ ಇಲ್ಲ. ನನಗೆ ಮಕ್ಕಳಿಲ್ಲ. ನಾನು ಒಬ್ಬಳೇ ಇಷ್ಟು ಮಾತ್ರ ಮಾಡಲು ಸಾಧ್ಯ. ನಾನು ಒಬ್ಬಂಟಿ."

ಆದರೆ 65 ರ ಹರೆಯದ ಲಕ್ಷ್ಮಿ ಗಾಯಕವಾಡ್ ಅವರು ಒಂದು ಎಕರೆ ಭೂಮಿಯನ್ನು ಹೊಂದಿದ್ದಾರೆ - ಆಕೆಗೆ ಇನ್ನೂ ಹೆಚ್ಚಿನ ಭೂಮಿಯ ಅರ್ಹತೆ ಇದೆ ಎಂದು ಅವರು ಹೇಳುತ್ತಾರೆ. "ನಾವು ಐದು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದೆವು, ಆದರೆ ಅರಣ್ಯ ಇಲಾಖೆಯು ನಾವು ಕೃಷಿ ಮಾಡುವ ಸ್ಥಳದಲ್ಲಿ ಚೆಕ್ ಡ್ಯಾಮ್ಗಳನ್ನು ನಿರ್ಮಿಸಿದೆ. ಅದರಿಂದಾಗಿ ನಾವು ಎರಡು ಎಕರೆ ಕಳೆದುಕೊಂಡಿದ್ದೇವೆ. ಮತ್ತು ಅವರು ನನಗೆ ಭೂಮಿ ಮಾಲಿಕತ್ವವನ್ನು ನೀಡಿದಾಗ, ನನಗೆ ಒಂದು ಎಕರೆ ಮಾತ್ರ ಸಿಕ್ಕಿತು.”

ಲಕ್ಷ್ಮಿ ಅವರ ಪತಿ ಹಿರಮಾನ್ ಸುಮಾರು 55 ವರ್ಷಗಳಿದ್ದಾಗ ಸುಮಾರು 12 ವರ್ಷಗಳ ಹಿಂದೆ ನಿಧನರಾದರು. ಅವರುತನ್ನ ಹೊಲದಲ್ಲಿನ ಕಲ್ಲುಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿ ಬಿದ್ದರು. "ಅವರು ಮತ್ತೆ ಎಂದಿಗೂ ಎದ್ದೇಳಲಿಲ್ಲ" ಎಂದು ಅವರು ಹೇಳುತ್ತಾರೆ. ಆದರೆ 32 ಮತ್ತು 27 ವರ್ಷ ವಯಸ್ಸಿನ ತನ್ನ ಇಬ್ಬರು ಗಂಡು ಮಕ್ಕಳ ಸಹಾಯದಿಂದ, ಲಕ್ಷ್ಮಿ ತನ್ನ ಭೂ ಹಕ್ಕುಗಳಿಗಾಗಿ ಅಧಿಕಾರಿಗಳ ಬಳಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಯಿತು.

ಲಕ್ಷ್ಮಿ, ಸುಮನ್ ಮತ್ತು ಭೀಮಾ ಕೋಲಿ ಮಹಾದೇವ್ ಆದಿವಾಸಿ ಸಮುದಾಯಕ್ಕೆ ಸೇರಿದವರು. 2006ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಜಾರಿಗೆ ಬಂದಾಗಿನಿಂದ ಅವರು ತಮ್ಮ ಜಮೀನಿನ ಹಕ್ಕುಗಳಿಗಾಗಿ ಆಗ್ರಹಿಸುತ್ತಿದ್ದಾರೆ. ಕಾಯಿದೆಯ ಕಳಪೆ ಅನುಷ್ಠಾನವು ತಮ್ಮ ಗಂಡಂದಿರ ಸಾವಿಗೆ ಕಾರಣವಾಗಿದೆ ಎನ್ನುವುದು ಅವರ ನಂಬಿಕೆ.

ಅವರ ಮುಖ್ಯ ಕಾಳಜಿ ಭೂ ಮಾಲೀಕತ್ವದ ಬೇಡಿಕೆಯಾಗಿದೆ, ಆದರೆ ಇದರ ಹೊರತಾಗಿಯೂ ಅವರು ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಮತ್ತು ಸುತ್ತಮುತ್ತಲಿನ ರೈತರಿಗೆ ಬೆಂಬಲವನ್ನು ತೋರಿಸಲು ಮುಂಬೈಗೆ ಬಂದಿದ್ದಾರೆ. ಈ ಕಾನೂನುಗಳು ಭವಿಷ್ಯದಲ್ಲಿ ಭಾರತದ ಎಲ್ಲ ರೈತರ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ನಂಬುತ್ತಾರೆ.

Lakshmi Gaikwad (left) and the other protestors carried blankets to Mumbai to get through the nights under the open sky in Azad Maidan
PHOTO • Riya Behl
Lakshmi Gaikwad (left) and the other protestors carried blankets to Mumbai to get through the nights under the open sky in Azad Maidan
PHOTO • Riya Behl

ಲಕ್ಷ್ಮಿ ಗಾಯಕ್‌ವಾಡ್ (ಎಡ) ಮತ್ತು ಇತರ ಪ್ರತಿಭಟನಾಕಾರರು ಆಜಾದ್ ಮೈದಾನದಲ್ಲಿ ತೆರೆದ ಆಕಾಶದಡಿ ರಾತ್ರಿಗಳನ್ನು ಕಳೆಯಲು ಮುಂಬೈಗೆ ಕಂಬಳಿಗಳನ್ನು ಕೊಂಡೊಯ್ದಿದ್ದರು

ಅವರು ತಮ್ಮೊಂದಿಗೆ ತಿನ್ನಲು ಭಕ್ರಿ ಮತ್ತು ಚಟ್ನಿ ಹಾಗೂ ಆಜಾದ್ ಮೈದಾನದಲ್ಲಿ ತೆರೆದ ಆಕಾಶದಡಿ ರಾತ್ರಿ ಕಳೆಯಲು ಕಂಬಳಿಗಳನ್ನು ತಂದಿದ್ದಾರೆ. "ಭಾರತದ ಎಲ್ಲಾ ಭಾಗಗಳ ರೈತರು ಈ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆಂದು ಸರ್ಕಾರ ತಿಳಿದುಕೊಳ್ಳಬೇಕು" ಎಂದು ಭೀಮಾ ಹೇಳುತ್ತಾರೆ, ಅವರು ಸುಡುವ ನೆಲದ ಮೇಲೆ ಬರಿಗಾಲಿನಲ್ಲಿ ಕುಳಿತಿದ್ದರು.

ರೈತರು ವಿರೋಧಿಸುತ್ತಿರುವ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ.

ರೈತರು ಈ ಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ದೆಹಲಿಯ ಸುತ್ತಮುತ್ತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಏಕೆಂದರೆ ಎರಡೂ ರಾಜ್ಯಗಳು ಬೆಂಬಲ ಬೆಲೆಯಡಿ ರಾಜ್ಯ ಸರ್ಕಾರಿ ಸಂಸ್ಥೆಗಳು ಸಂಗ್ರಹಿಸುವ ಅಕ್ಕಿ ಮತ್ತು ಗೋಧಿಯನ್ನು ಅತಿ ಹೆಚ್ಚು ಉತ್ಪಾದಿಸುತ್ತವೆ.

ಆದರೆ ಹೋರಾಟ ಸಂಪೂರ್ಣ ಕೃಷಿ ಸಮುದಾಯದವರದೂ ಆಗಿದೆ ಎಂದು ಆಜಾದ್ ಮೈದಾನದಲ್ಲಿರುವ ಮಹಾರಾಷ್ಟ್ರದ ರೈತರು ಹೇಳುತ್ತಾರೆ. "ಇದು (ಕಾನೂನು) ತಕ್ಷಣ ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಲಕ್ಷ್ಮಿ ಹೇಳುತ್ತಾರೆ. "ಆದರೆ ಇದು ದೇಶದ ರೈತರಿಗೆ ಹಾನಿ ಮಾಡಿದರೆ ಅದು ಕಾಲ ಕಳೆದಂತೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ನಾವೆಲ್ಲರೂ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ. ರೈತರು ನಮಗೆ ಕೆಲಸ ನೀಡದಿದ್ದರೆ ನಾವು ಎಲ್ಲಿಂದ ಹಣ ಗಳಿಸಲು ಸಾಧ್ಯ? ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು. ದೊಡ್ಡ ಕಂಪನಿಗಳು ನಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತದೆಂದು ನಂಬಬೇಡಿ."

ಸರ್ಕಾರವು ನಿಜವಾಗಿಯೂ ರೈತರ ಪರಿಸ್ಥಿತಿಯನ್ನು ಸುಧಾರಿಸಲು ಬಯಸಿದ್ದರೆ ಮತ್ತು ಖಾಸಗಿ ಕಂಪನಿಗಳ ಪರವಾಗಿ ನಿಲ್ಲದೇಹೋಗಿದ್ದರೆ, ಬುಡಕಟ್ಟು ರೈತರಿಗೆ ಭೂ ಮಾಲೀಕತ್ವವನ್ನು ಪಡೆಯುವುದು ಅಷ್ಟು ಕಷ್ಟವಾಗುತ್ತಿರಲಿಲ್ಲ ಎಂದು ಸುಮನ್ ಹೇಳುತ್ತಾರೆ. "ನಾವು 2018ರಲ್ಲಿ ಒಂದು ವಾರ ನಾಸಿಕ್‌ನಿಂದ ಮುಂಬೈಗೆ ಬಂದಿದ್ದೇವೆ. ನಮ್ಮಲ್ಲಿ ಕೆಲವರು ದೆಹಲಿಗೆ ಹೋಗಿದ್ದರು" ಎಂದು ಅವರು ಹೇಳುತ್ತಾರೆ. "ನಮ್ಮ ಜನರು ಹೊಲಗಳಲ್ಲಿ ಕೆಲಸ ಮಾಡುತ್ತಾ ಅಲ್ಲಿಯೇ ಸತ್ತಿದ್ದಾರೆ. ಆದರೆ ನಾವು ಕೃಷಿ ಮಾಡುವ ಭೂಮಿಯ ಮಾಲಿಕತ್ವ ಈಗಲೂ ನಮ್ಮದಾಗಿಲ್ಲ."

ಅನುವಾದ: ಶಂಕರ ಎನ್. ಕೆಂಚನೂರು

Reporter : Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Photographer : Riya Behl

Riya Behl is a journalist and photographer with the People’s Archive of Rural India (PARI). As Content Editor at PARI Education, she works with students to document the lives of people from marginalised communities.

Other stories by Riya Behl
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru