ಇದು ಸಿ.ವೆಂಕಟ ಸುಬ್ಬಾ ರೆಡ್ಡಿಯವರು ಹಾಜರಾಗುತ್ತಿದ್ದ ಆರನೇ ಧರಣಿಯಾಗಿತ್ತು. ಅವರಿಗೆ ಬರಬೇಕಿರುವ ಹಣಕ್ಕಾಗಿ18 ತಿಂಗಳಿಗಿಂತ ಹೆಚ್ಚು ಕಾಲದಿಂದ ಧರಣಿಗಳನ್ನು ಆಯೋಜಿಸುತ್ತಿದ್ದಾರೆ, ಆಂಧ್ರಪ್ರದೇಶದ ವೈಎಸ್‌ಆರ್ ಜಿಲ್ಲೆಯ ರೈತರಾದ ಇವರಿಗೆ ಕಬ್ಬಿನ ಬಾಕಿಯನ್ನು ಪಾವತಿಸಲಾಗಿಲ್ಲ.

ಫೆಬ್ರವರಿ 2, 2020ರಂದು, ಸುಬ್ಬಾ ರೆಡ್ಡಿ ಆಂಧ್ರಪ್ರದೇಶದ ಕಬ್ಬು ಬೆಳೆಗಾರರ ಸಂಘ ಆಯೋಜಿಸಿದ್ದ ಧರಣಿಯಲ್ಲಿ (ಮುಷ್ಕರ) ಭಾವಹಿಸಲು ಚಿತ್ತೂರು ಜಿಲ್ಲೆಯ ತಿರುಪತಿ ನಗರಕ್ಕೆ ಸುಮಾರು 170 ಕಿಲೋಮೀಟರ್ ದೂರ ಪ್ರಯಾಣಿಸಿದರು.

ಕಮಲಾಪುರಂ ಮಂಡಲದ ವಿಭಾರಾಮಪುರಂ ಗ್ರಾಮದಲ್ಲಿ 4.5 ಎಕರೆ ಜಮೀನು ಹೊಂದಿರುವ ಸುಬ್ಬಾ ರೆಡ್ಡಿ "ಮಯೂರ ಸಕ್ಕರೆ ಕಾರ್ಖಾನೆ ನನಗೆ 2018ರಲ್ಲಿ ಸರಬರಾಜು ಮಾಡಿದ ಕಬ್ಬಿನ ಹಣ 1.46 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ." ಎಂದು ಹೇಳಿದರು. ಮಯೂರ ಶುಗರ್ಸ್ ಅವರಿಗೆ ರೂ. 2018-19ರ ಹಂಗಾಮಿನಲ್ಲಿ ಪ್ರತಿ ಟನ್‌ಗೆ 2,500 ರೂ. ನೀಡುವುದಾಗಿ ಹೇಳಿತ್ತು. "ಆದರೆ ಕಂಪನಿ ದರವನ್ನು ಪ್ರತಿ ಟನ್‌ಗೆ 2,300 ರೂಪಾಯಿಗಳಿಗೆ ಇಳಿಸಿತು. ಇದರಿಂದ ನನಗೆ ಮೋಸವಾಯಿತು."

ಧರಣಿಯಲ್ಲಿ ಭಾಗವಹಿಸಿದ್ದ ಆರ್.ಬಾಬು ನಾಯ್ಡು ಅವರಿಗೂ ಸಕ್ಕರೆ ಕಾರ್ಖಾನೆಯಿಂದ 4.5 ಲಕ್ಷ ರೂ. ಬರಬೇಕಿದೆ. ಅವರು ಚಿತ್ತೂರಿನ ರಾಮಚಂದ್ರಪುರಂ ಮಂಡಲದಲ್ಲಿರುವ ಗಣೇಶಪುರಂ ಗ್ರಾಮದಲ್ಲಿ ಕಬ್ಬನ್ನು ಬೆಳೆಯುತ್ತಾರೆ, ಅಲ್ಲಿ ಅವರು ತಮ್ಮ ಸಂಬಂಧಿಕರಿಂದ ಎಂಟು ಎಕರೆ ಜಮೀನು ಬಾಡಿಗೆಗೆ ಪಡೆದಿದ್ದಾರೆ. ಅವರ ಸ್ವಂತ ಜಮೀನಿನ ಬೋರ್‌ ಒಣಗಿದ್ದರಿಂದಾಗಿ ಅವರು  ಬಾಡಿಗೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವುದಾಗಿ ಹೇಳುತ್ತಾರೆ. "ನಾನು ಸಂಬಂಧಿಕರಿಂದ ಕೃಷಿ ಮಾಡಲು ಭೂಮಿಯನ್ನು 80,000 [2019-20ರಲ್ಲಿ] ಸಾವಿರ ಬಾಡಿಗೆಗೆ ಪಡೆದಿದ್ದೆ. ಸಾಮಾನ್ಯವಾಗಿ ಎಕರೆಗೆ 20,000 ರೂ. ಬಾಡಿಗೆ ವಿಧಿಸಲಾಗುತ್ತದೆ. ಆದರೆ ನನ್ನ ಸಂಬಂಧಿಕರು ನನಗೆ ಕಡಿಮೆ ಬಾಡಿಗೆ ವಿಧಿಸಿದರು."

ಮಯೂರ ಶುಗರ್ಸ್ ಬಾಬು ನಾಯ್ಡು ಅವರಿಗೆ ನೀಡಬೇಕಿದ್ದ ಒಟ್ಟು ಮೊತ್ತ 8.5 ಲಕ್ಷ ರೂಪಾಯಿಗಳಲ್ಲಿ  ಕೇವಲ ರೂ. 4 ಲಕ್ಷ ರೂಪಾಯಿಗಳನ್ನು ನೀಡಿದೆ. "ಬಾಕಿ ಹಣ ಹಾಗೆಯೇ ಉಳಿದಿದೆ. ರೈತರಿಗೆ ತಮ್ಮ ಬೇಸಾಯ ಮುಂದುವರೆಸಲು ಹಣ ಬೇಕಿದೆ."

ಚಿತ್ತೂರು ಮತ್ತು ವೈಎಸ್ಆರ್ ಜಿಲ್ಲೆಯ (ಕಡಪಾ ಎಂದೂ ಕರೆಯಲಾಗುತ್ತದೆ), ಕಬ್ಬು ಬೆಳೆಗಾರು ಮಯೂರ ಶುಗರ್ಸ್‌ ಪಾವತಿಸಬೇಕಿರುವ ಬಾಕಿ ಮೊತ್ತಕ್ಕಾಗಿ ಈಗಲೂ ಕಾಯುತ್ತಿದ್ದಾರೆ. "ನಾವು ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ಬಯಸಿದ್ದೆವು ಆದರೆ ಅದು ಸಾಧ್ಯವಾಗುತ್ತಿಲ್ಲ" ಎಂದು ಸುಬ್ಬಾ ರೆಡ್ಡಿ ಹೇಳುತ್ತಾರೆ, ಮಾರ್ಚ್ 2020ರಲ್ಲಿ ವಿಧಿಸಲಾದ ಕೋವಿಡ್ -19 ಲಾಕ್‌ಡೌನ್ ಹೆಚ್ಚಿನ ಪ್ರತಿಭಟನೆಗಳನ್ನು ಆಯೋಜಿಸುವುದಂತೆ ತಡೆಯಿತು.

Left: A. Rambabu Naidu grows sugarcane in his 15 acres of land in Chittoor district. Right: Farm leader P. Hemalatha speaking at a dharna in Tirupati
PHOTO • G. Ram Mohan
Left: A. Rambabu Naidu grows sugarcane in his 15 acres of land in Chittoor district. Right: Farm leader P. Hemalatha speaking at a dharna in Tirupati
PHOTO • G. Ram Mohan

ಎಡ: ಎ.ರಾಮಬಾಬು ನಾಯ್ಡು ಅವರು ಚಿತ್ತೂರು ಜಿಲ್ಲೆಯ ತಮ್ಮ 15 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಾರೆ. ಬಲ: ರೈತ ನಾಯಕಿ ಪಿ.ಹೇಮಲತಾ ತಿರುಪತಿಯಲ್ಲಿ ಆಯೋಜಿಸಲಾಗಿದ್ದ ಧರಣಿಯಲ್ಲಿ ಮಾತನಾಡುತ್ತಿರುವುದು

ನಿಯಮದ ಪ್ರಕಾರ ರೈತರು ಕಾರ್ಖಾನೆಗೆ ಕಬ್ಬನ್ನು ಪೂರೈಸಿದ 14 ದಿನಗಳಲ್ಲಿ ಅವರ ಬಾಕಿ ಹಣವನ್ನು ನೀಡಬೇಕು. 1966ರ ಕಬ್ಬಿನ (ನಿಯಂತ್ರಣ) ಆದೇಶವು ಒಂದು ಕಬ್ಬಿನ ಕಾರ್ಖಾನೆಯು 14 ದಿನಗಳಲ್ಲಿ ರೈತರಿಗೆ ಹಣ ಪಾವತಿಸಲು ವಿಫಲವಾದರೆ, ಅದು ನಂತರ ಅವರಿಗೆ ಬಡ್ಡಿಯೊಂದಿಗೆ ಪಾವತಿಸಬೇಕು. ಅದೂ ಆಗದಿದ್ದರೆ, ಕಬ್ಬಿನ ಆಯುಕ್ತರು ಕಾರ್ಖಾನೆಯ ಆಸ್ತಿಗಳನ್ನು ಆಂಧ್ರಪ್ರದೇಶದ ಕಂದಾಯ ಮರುಪಡೆಯುವಿಕೆ ಕಾಯ್ದೆ, 1864ರ ಅಡಿಯಲ್ಲಿ ಹರಾಜು ಮಾಡಬಹುದು.

ಆದರೆ ಚಿತ್ತೂರಿನ ಬುಚ್ಚಿನಾಯ್ಡು ಕಂಡ್ರಿಗಾ ಮಂಡಲದಲ್ಲಿ ನೆಲೆಗೊಂಡಿರುವ ಮಯೂರ ಸಕ್ಕರೆ ಕಾರ್ಖಾನೆ 2018ರಲ್ಲಿ ಲಾಕ್‌ಔಟ್‌ ಆಯಿತು ಮತ್ತು ಫೆಬ್ರವರಿ 2019ರಲ್ಲಿ ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಕಾರ್ಖಾನೆಯ ಆಡಳಿತ ರೈತರಿಗೆ 2019ರ ಆಗಸ್ಟ್‌ವರೆಗೆ ಹಣವನ್ನು ಪಾವತಿಸಿದ್ದರೂ ಸಹ, ಕಂಪನಿಯು ರೂ. 36 ಕೋಟಿ ಬಾಕಿಯುಳಿಸಿಕೊಂಡಿದೆ.

ಈ ಕಾರಣಕ್ಕಾಗಿ ಬಾಕಿ ಹಣವನ್ನು ವಸೂಲಿ ಮಾಡಲೆಂದು, ರಾಜ್ಯ ಸರ್ಕಾರವು ಕಾರ್ಖಾನೆಯ 160 ಎಕರೆ ಭೂಮಿಯನ್ನು ಅಟ್ಯಾಚ್‌ ಮಾಡಿದೆ, ಇದರ ಮೌಲ್ಯ ರೂ. 50 ಕೋಟಿ ಎಂದು ಚಿತ್ತೂರು ಜಿಲ್ಲೆಯ ಸಹಾಯಕ ಕಬ್ಬಿನ ಆಯುಕ್ತ ಜಾನ್ ವಿಕ್ಟರ್ ಹೇಳುತ್ತಾರೆ. ನವೆಂಬರ್ 4, 2020ರಂದು ಅದರ ಆಸ್ತಿಗಳನ್ನು ಹರಾಜಿಗೆ ಹಾಕುವ ಮೊದಲು ಏಳು ನೋಟಿಸ್‌ಗಳನ್ನು ಮಯೂರ ಶುಗರ್ಸ್‌ಗೆ ಕಳುಹಿಸಲಾಗಿದೆ. ಆದರೆ ಕೇವಲ ಒಂದು ಬಿಡ್ ಮಾತ್ರ ಬಂದಿದ್ದು, ಅದು ತುಂಬಾ ಕಡಿಮೆ ಮೊತ್ತದಲ್ಲಿತ್ತು ಎಂದು ವಿಕ್ಟರ್ ಹೇಳುತ್ತಾರೆ. ಮಯೂರ ಶುಗರ್ಸ್ ನಂತರ ಬ್ಯಾಂಕರ್ ಚೆಕ್ಕನ್ನು ಕಬ್ಬಿನ ಆಯುಕ್ತರಿಗೆ ಸಲ್ಲಿಸಿತು. "ಮಯೂರ ಶುಗರ್ಸ್ ಆಡಳಿತ ಮಂಡಳಿಯು ನನಗೆ ಡಿಸೆಂಬರ್ 31, 2020ರ ದಿನಾಂಕಕ್ಕೆ ಚೆಕ್ ನೀಡಿತು" ಎಂದು ವಿಕ್ಟರ್ ಹೇಳುತ್ತಾರೆ. "ಆದರೆ ನಾವು ಅದನ್ನು ಡೆಪಾಸಿಟ್ ಮಾಡಿದಾಗ ಬೌನ್ಸ್‌ ಆಯಿತು."

ಚೆಕ್ ಮೌಲ್ಯ ರೂ. 10 ಕೋಟಿಯಾಗಿತ್ತು. “ಆದರೆ ಮಯೂರ ಶುಗರ್ಸ್ ರೈತರಿಗೆ ರೂ. 36 ಕೋಟಿ ನೀಡಬೇಕಿದೆ”‌ ಎಂದು ಅಖಿಲ ಭಾರತ ಕಬ್ಬು ಬೆಳೆಗಾರರ ಒಕ್ಕೂಟದ ಸಮಿತಿ ಸದಸ್ಯರಾದ ಪಿ.ಹೇಮಲತಾ ಹೇಳುತ್ತಾರೆ. "ಕಂಪನಿಯ ಆಸ್ತಿಗಳನ್ನು ಮಾರಾಟ ಮಾಡಿದ ನಂತರ ಕಂಪನಿಯ ಆಡಳಿತವು ಜನವರಿ 18 [2021]ರೊಳಗೆ ಬಾಕಿ ಪಾವತಿಸುತ್ತದೆ ಎಂದು ನಮಗೆ ತಿಳಿಸಲಾಯಿತು, ಆದರೆ ರೈತರಿಗೆ ಯಾವುದೇ ಹಣ ಸಂದಾಯವಾಗಿಲ್ಲ."

ರೈತರ ಹಣವನ್ನು ಬಾಕಿಯಿರಿಸಿಕೊಂಡಿರುವುದು ಚಿತ್ತೂರಿನಲ್ಲಿರುವ ಸಕ್ಕರೆ ಕಾರ್ಖಾನೆಯಾದ ಮಯೂರ ಮಾತ್ರವಲ್ಲ. ನಿಂದ್ರ ಮಂಡಲದ ನೇಟೆಮ್ಸ್ ಶುಗರ್ ಪ್ರೈವೇಟ್ ಲಿಮಿಟೆಡ್ ಒಡೆತನದ ಕಾರ್ಖಾನೆಯೂ  2019-20ರಲ್ಲಿ ಖರೀದಿಸಿದ ಕಬ್ಬಿಗೆ ರೈತರಿಗೆ ಹಣ ನೀಡಿಲ್ಲ.

ನೇಟಮ್ಸ್ ಸಕ್ಕರೆ ಕಾರ್ಖಾನೆ ರೈತ ಸಂಘದ ಕಾರ್ಯದರ್ಶಿ ದಾಸರಿ ಜನಾರ್ಧನ್ ಅವರ ಪ್ರಕಾರ, ನಾಟೆಮ್ಸ್ ಆಡಳಿತವು ರೈತರಿಗೆ ಹಣ ನೀಡುವುದಾಗಿ ಭರವಸೆ ನೀಡಿತ್ತು. “ಆದರೆ ಲಾಕ್‌ಡೌನ್ [2020ರಲ್ಲಿ] ನಮಗೆ ತಡೆಯಾಗಿ ನಿಂತಿತು. ವ್ಯವಸ್ಥಾಪಕ ನಿರ್ದೇಶಕರು ಲಂಡನ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಬಾಕಿ ಪಾವತಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದರು."

Left: Entrance of Natems' sugar factory in Chittoor's Nindra mandal. Right: Farmers demanding their dues at the factory
PHOTO • G. Ram Mohan
Left: Entrance of Natems' sugar factory in Chittoor's Nindra mandal. Right: Farmers demanding their dues at the factory
PHOTO • G. Ram Mohan

ಎಡ: ಚಿತ್ತೂರಿನ ನಿಂದ್ರ ಮಂಡಲದ ನೇಟಮ್ಸ್ ಸಕ್ಕರೆ ಕಾರ್ಖಾನೆಯ ಪ್ರವೇಶ ದ್ವಾರ. ಬಲ: ಕಾರ್ಖಾನೆಯಲ್ಲಿ ಬಾಕಿಗಾಗಿ ಒತ್ತಾಯಿಸುತ್ತಿರುವ ರೈತರು

ಸೆಪ್ಟೆಂಬರ್ 2020ರ ಹೊತ್ತಿಗೆ, ನೇಟಮ್ಸ್ ರೈತರಿಗೆ ರೂ. 37.67 ಕೋಟಿ ಬಾಕಿಯಾಗಿತ್ತು ಎಂದು ವಿಕ್ಟರ್ ಹೇಳುತ್ತಾರೆ. ಕಾರ್ಖಾನೆಯ ಯಂತ್ರೋಪಕರಣಗಳನ್ನು ಸೆಪ್ಟೆಂಬರ್ 19, 2020ರಂದು ಹರಾಜು ಮಾಡಬೇಕಾಗಿತ್ತು. "ಆದರೆ ಕಂಪನಿಯು ಹೈಕೋರ್ಟ್‌ನಿಂದ ಮಧ್ಯಂತರ ತಡೆ ಆದೇಶವನ್ನು ಪಡೆಯಿತು."

ಜನವರಿ 2021ರ ವೇಳೆಗೆ ಕೆಲವು ಬಾಕಿಗಳನ್ನು ನೇಟಮ್ಸ್ ಪಾವತಿಸಿದೆ. “ನಾವು ಪ್ರಸ್ತುತ ರೈತರಿಗೆ 32 ಕೋಟಿ ರೂ ಬಾಕಿ ನೀಡಬೇಕಿದೆ.” ಎಂದು ಕಂಪನಿಯ ನಿರ್ದೇಶಕ ಆರ್. ನಂದ ಕುಮಾರ್ ಆ ತಿಂಗಳು ಹೇಳಿದ್ದರು. “ನಾನು ಹಣವನ್ನು ವ್ಯವಸ್ಥೆ ಮಾಡುತ್ತಿದ್ದೇನೆ. ನಾವು ತಿಂಗಳ ಕೊನೆಯಲ್ಲಿ [ಜನವರಿ] ರೈತರಿಗೆ ಪಾವತಿಸುತ್ತೇವೆ ಮತ್ತು ಕಬ್ಬು ಅರೆಯಲು ಪ್ರಾರಂಭಿಸುತ್ತೇವೆ. ಕಂಪನಿಯನ್ನು ಉಳಿಸಲು ನಾನು ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದೇನೆ." ಆದರೆ ರೈತರಿಗೆ ಯಾವುದೇ ಮೊತ್ತದ ಹಣ ದೊರಕಿಲ್ಲ.

ಆಂಧ್ರಪ್ರದೇಶದ ಸಕ್ಕರೆ ಕಾರ್ಖಾನೆಗಳ ಸ್ಥಿತಿ ಉತ್ತಮವಾಗಿಲ್ಲ ಎಂದು ನಂದ ಕುಮಾರ್ ಹೇಳುತ್ತಾರೆ. ಅವರು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ (ಐಎಸ್‌ಎಂಎ) ಎಪಿ ವಿಭಾಗದ ಅಧ್ಯಕ್ಷರೂ ಹೌದು. "ಒಂದು ಕಾಲದಲ್ಲಿ  27 ಸಕ್ಕರೆ ಕಾರ್ಖಾನೆಗಳಿದ್ದವು. ಈಗ ರಾಜ್ಯದಲ್ಲಿ ಕೇವಲ ಏಳು ಕಾರ್ಖಾನೆಗಳಷ್ಟೇ ಕೆಲಸ ಮಾಡುತ್ತಿವೆ."

ಸಮಸ್ಯೆಯ ಮೂಲ ತಪ್ಪಾದ ನೀತಿಗಳಲ್ಲಿವೆ ಎಂದು ಕೃಷಿ ಮುಖಂಡರು ಹೇಳುತ್ತಾರೆ. ಸಕ್ಕರೆಯ ಚಿಲ್ಲರೆ ಬೆಲೆ ಮತ್ತು ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯ ನಡುವಿನ ಹೊಂದಾಣಿಕೆ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದೆ.

2019ರಲ್ಲಿ ಕಬ್ಬು ಮತ್ತು ಸಕ್ಕರೆ ಉದ್ಯಮದ ಕುರಿತು ನೀತಿ ಆಯೋಗದ ಕಾರ್ಯಪಡೆಗೆ ನೀಡಲಾದ ಪ್ರೆಸಂಟೇಷನ್ನಿನಲ್ಲಿ, ಸಕ್ಕರೆ ಉತ್ಪಾದನೆಯ ವೆಚ್ಚವು ಅದರ ಮಾರಾಟದ ಬೆಲೆಗಿಂತ ಹೆಚ್ಚಾಗಿದೆಯೆಂದು ಐಎಸ್‌ಎಮ್‌ಎ  ಹೇಳಿದೆ “ಒಂದು ಕಿಲೋ ಸಕ್ಕರೆ ಉತ್ಪಾದಿಸಲು 37-38 ರೂಪಾಯಿಗಳಷ್ಟು ಖರ್ಚಾಗುತ್ತದೆ. ಆದರೆ ಸಕ್ಕರೆಯನ್ನು ಚೆನ್ನೈಯಲ್ಲಿ ರೂ. 32 ಮತ್ತು ಹೈದರಾಬಾದ್‌ನಲ್ಲಿ ರೂ. 31ಕ್ಕೆ ಮಾರಲಾಗುತ್ತಿದೆ”ಎಂದು ನಂದ ಕುಮಾರ್ ವಿವರಿಸುತ್ತಾರೆ. “ನಾವು  ಕಳೆದ ವರ್ಷ [2019-20] 50 ಕೋಟಿ ಮತ್ತು ಹಿಂದಿನ ವರ್ಷ 30 ಕೋಟಿ ರೂ. ನಷ್ಟ ಅನುಭವಿಸಿದೆವು”

ನಿಂದ್ರ ಮಂಡಲದ ಗುರಪ್ಪ ನಾಯ್ಡು ಕಂಡ್ರಿಗ ಗ್ರಾಮದಲ್ಲಿ ತನ್ನ 15 ಎಕರೆ ಭೂಮಿಯಲ್ಲಿ ಕೇವಲ ಕಬ್ಬು ಮಾತ್ರವೇ ಬೆಳೆಯುವ ಎ.ರಾಮಬಾಬು ನಾಯ್ಡು, ಸಕ್ಕರೆಯ ಚಿಲ್ಲರೆ ಬೆಲೆಯನ್ನು ನಿರ್ಧರಿಸಲು ಉದ್ಯಮಕ್ಕೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಡುತ್ತಾರೆ. “ಸಕ್ಕರೆಯನ್ನು ಏಕೆ  ಪ್ರತಿ ಕಿಲೋಗೆ 50 ರೂಪಾಯಿಯಂತೆ ಮಾರಲು ಸಾಧ್ಯವಿಲ್ಲ? ಇತರ ಕೈಗಾರಿಕೆಗಳು ತಮ್ಮ ಉತ್ಪನ್ನಗಳ ದರವನ್ನು ನಿರ್ಧರಿಸುತ್ತವೆ, ಹೀಗಿರುವಾಗ ಸಕ್ಕರೆ ಉದ್ಯಮಕ್ಕೆ ಮಾತ್ರ ಏಕೆ ಸಾಧ್ಯವಿಲ್ಲ?”

Left: K. Venkatesulu and K. Doravelu making the rounds of Natems to collect their payment. Right: V. Kannaiah, a tenant farmer, could not repay a loan because the factory had not paid the full amount that was his due
PHOTO • G. Ram Mohan
Left: K. Venkatesulu and K. Doravelu making the rounds of Natems to collect their payment. Right: V. Kannaiah, a tenant farmer, could not repay a loan because the factory had not paid the full amount that was his due
PHOTO • G. Ram Mohan

ಎಡ: ಕೆ. ವೆಂಕಟೇಸುಲು ಮತ್ತು ಕೆ. ದೊರವೇಲು ಅವರು ತಮ್ಮ ಹಣಕ್ಕಾಗಿ ನೇಟಮ್‌ ಕಾರ್ಖಾನೆಗೆ ಅಲೆಯುತ್ತಿದ್ದಾರೆ. ಬಲ: ಗೇಣಿ ರೈತ ವಿ.ಕನ್ನಯ್ಯ ಅವರಿಗೆ ಕಾರ್ಖನೆಯು ಪೂರ್ತಿ ಹಣವನ್ನು ಪಾವತಿ ಮಾಡದ ಕಾರಣ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ.

ಸಕ್ಕರೆ ಉದ್ಯಮವೂ ಹಣವಿಲ್ಲದೆ ಬಿಕ್ಕಟ್ಟಿನಲ್ಲಿದೆ. "ಶೆಡ್ಯೂಲ್ಡ್‌ ಬ್ಯಾಂಕುಗಳಿಂದ ಹಣಕಾಸು ದೊರಕುತ್ತಿಲ್ಲ" ಎಂದು ನಂದಕುಮಾರ್ ಹೇಳುತ್ತಾರೆ. "ತೊಡಗಿಸಿದ ಬಂಡವಾಳಕ್ಕೂ ಕ್ರೆಡಿಟ್ ಲಭ್ಯವಿಲ್ಲ."

ತಮ್ಮ ಅಗತ್ಯಗಳಿಗಾಗಿ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳಹುದಾದ ರೈತರಿಗೆ ಅಲ್ಪ ಸಾಂಸ್ಥಿಕ ಸಾಲ ಲಭ್ಯವಿದೆ. "ನಮ್ಮ ಇತರ ಬೆಳೆಗಳಿಗಾಗಿ ಸಾಲ ಮಾಡಿ ರಸಗೊಬ್ಬರಗಳನ್ನು ಖರೀದಿಸಬೇಕಾಗಿತ್ತು" ಎಂದು ಜನಾರ್ಧನ್ ಹೇಳುತ್ತಾರೆ, ಅವರು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವುದಕ್ಕೂ ಸಾಲ ಮಾಡಿದ್ದಾರೆ. "ಸಕ್ಕರೆ ಕಾರ್ಖಾನೆ ಸಾಮಾನ್ಯವಾಗಿ ರೈತರಿಗೆ ಕಾರ್ಮಿಕರ ಶುಲ್ಕವನ್ನು ಪಾವತಿಸುತ್ತದೆ ೀ ಮೂಲಕ ಅವರು ಕಾರ್ಮಿಕರಿಗೆ ಪಾವತಿಸಬಹುದು. ಆದರೆ ನಾನು ಕೂಲಿ ನೀಡಲು 50,000 ಸಾಲ ಮಾಡಿದ್ದೇನೆ.ಈಗ ಆ ಹಣಕ್ಕೆ ಬಡ್ಡಿ ಕಟ್ಟುತ್ತಿದ್ದೇನೆ.”

ಸಕ್ಕರೆ ಬೆಲೆಯ ಕುಸಿತದ ಲಾಭ ಪ್ಯಾಕೇಜ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಸಿಗುತ್ತಿದೆಯೆಂದು ಫೆಡರೇಶನ್ ಆಫ್ ಫಾರ್ಮರ್ಸ್ ಅಸೋಸಿಯೇಶನ್‌ನ ರಾಜ್ಯ ಅಧ್ಯಕ್ಷ ಮಂಗತಿ ಗೋಪಾಲ್ ರೆಡ್ಡಿ ಹೇಳುತ್ತಾರೆ. "ಬೆಲೆಗಳು ದೊಡ್ಡ ಕಂಪನಿಗಳ ಆಸಕ್ತಿಯನ್ನು ಪೂರೈಸುತ್ತವೆ." ತಂಪು ಪಾನೀಯಗಳು ಮತ್ತು ಮಿಠಾಯಿಗಳನ್ನು ಉತ್ಪಾದಿಸುವ ಕಂಪನಿಗಳು ದೇಶದಲ್ಲಿ ಕಳೆದ ಮೂರು ದಶಕಗಳಲ್ಲಿ ಬೆಳೆದು ನಿಂತು ಸಕ್ಕರೆ ಸೇವನೆಯ ಮಾದರಿಯನ್ನು ಬದಲಾಯಿಸಿವೆ. ಈ ಬೃಹತ್ ಬಳಕೆದಾರರು ಒಟ್ಟು ಉತ್ಪಾದನೆಯಾಗುವ ಸಕ್ಕರೆಯ ಶೇಕಡಾ 65ರಷ್ಟನ್ನು ಬಳಸುತ್ತಾರೆ ಎಂದು ಐಎಸ್‌ಎಮ್‌ಎ ತಾನು ಕಾರ್ಯಪಡೆಗೆ ನೀಡಿದ ವರದಿಯಲ್ಲಿ ತಿಳಿಸಿದೆ.

ನಂದ ಕುಮಾರ್ ಅವರ ಪ್ರಕಾರ ಭಾರತವು ಹೆಚ್ಚುವರಿ ಸಕ್ಕರೆಯನ್ನು ಉತ್ಪಾದಿಸುತ್ತದೆ. “ಇದನ್ನು ಕಡಿಮೆ ಮಾಡಬೇಕು. ಅದರಲ್ಲಿ ಒಂದಷ್ಟನ್ನು ರಫ್ತು ಮಾಡಲಾಗುತ್ತಿದೆ ಮತ್ತೊಂದಷ್ಟನ್ನು ಈಗ ಎಥೆನಾಲ್ ಉತ್ಪಾದಿಸಲು ಬಳಸಲಾಗುತ್ತಿದೆ. ಈ ಪ್ರವೃತ್ತಿ ಮುಂದುವರಿದರೆ ಮಾರುಕಟ್ಟೆ ಸ್ಥಿರಗೊಳ್ಳುತ್ತದೆ.”

ಕೈಗಾರಿಕೋದ್ಯಮಿ ಕೇಂದ್ರ ಸರ್ಕಾರದ ಎಥೆನಾಲ್ ಬ್ಲೆಂಡೆಡ್ ಪೆಟ್ರೋಲ್ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಮಾಡುತ್ತಿದ್ದಾರೆ, ಇದರ ಮೂಲಕ ಖಾಸಗಿ ಸಕ್ಕರೆ ಕಾರ್ಖಾನೆಗಳು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಸಕ್ಕರೆ ಉತ್ಪಾದನೆಯ ಉಪಉತ್ಪನ್ನವಾದ ಮೊಲಾಸ್‌ಗಳನ್ನು ಪೂರೈಸಬಹುದು. "ಎಥೆನಾಲ್ ಉತ್ಪಾದನೆಯೆಡೆಗೆ ಕಬ್ಬನ್ನು ತಿರುಗಿಸುವುದರಿಂದ ಮಾರುಕಟ್ಟೆಯಲ್ಲಿನ ಅತಿಯಾದ ಲಭ್ಯತೆ ಕಡಿಮೆಯಾಗುತ್ತದೆ" ಎಂದು ನಂದ ಕುಮಾರ್ ಹೇಳುತ್ತಾರೆ.

ಅಕ್ಟೋಬರ್ 2020ರಲ್ಲಿ, ರೈತರಿಗೆ ಪಾವತಿಸಲು ಅನುವಾಗುವಂತೆ ಸಕ್ಕರೆ ಉದ್ಯಮದ ಸಾಮರ್ಥ್ಯವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಉತ್ಪತ್ತಿಯಾದ ಎಥೆನಾಲ್‌ಗೆ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಿದೆ ,

ಆದರೆ ಕೃಷಿ ಮುಖಂಡ ಜನಾರ್ಧನ್ ಒಪ್ಪುವುದಿಲ್ಲ. "ಸಕ್ಕರೆ ಕಾರ್ಖಾನೆಯ ಅಡಳಿತವು ಇತರ ಉದ್ದೇಶಗಳಿಗಾಗಿ ಹಣವನ್ನು ಬೇರೆಡೆಗೆ ತಿರುಗಿಸುವುದು ವಿಷಯವನ್ನು ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ" ಎಂದು ಅವರು ಹೇಳುತ್ತಾರೆ.

Sugarcane farmers protesting in Tirupati in April 2021, seeking the arrears of payments from Mayura Sugars
PHOTO • K. Kumar Reddy
Sugarcane farmers protesting in Tirupati in April 2021, seeking the arrears of payments from Mayura Sugars
PHOTO • K. Kumar Reddy

2021ರ ಏಪ್ರಿಲ್‌ನಲ್ಲಿ ಮಯೂರ ಶುಗರ್ಸ್‌ ಕಾರ್ಖಾನೆ ಬಾಕಿ ಪಾವತಿಸಬೇಕೆಂದು ಆಗ್ರಹಿಸಿ ತಿರುಪತಿಯಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು

ಕೋಜೆನರೇಶನ್ ಪ್ಲಾಂಟ್‌ಗೆ ನೇಟಮ್ಸ್ ಹೂಡಿಕೆ ಮಾಡಿರುವ 500 ಕೋಟಿ ರೂ. ಆಡಳಿತಕ್ಕೂ ತಲೆನೋವಾಗಿದೆ. ಸಕ್ಕರೆ ಕಾರ್ಖಾನೆಯಿಂದ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಗ್ರಿಡ್‌ಗೆ ಕಳುಹಿಸಬೇಕಾಗಿತ್ತು. "ನಾವು ಕಾರ್ಖಾನೆಯಲ್ಲಿ 7.5 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದ್ದೇವೆ, ಆದರೆ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಏಕೆಂದರೆ ನಮ್ಮ ದರದಲ್ಲಿ ವಿದ್ಯುತ್ ಖರೀದಿಸಲು [ರಾಜ್ಯ] ಸರ್ಕಾರ ಸಿದ್ಧವಿಲ್ಲ ಮತ್ತು ವಿದ್ಯುತ್ ವಿನಿಮಯದ ದರಗಳು ರೂ. 2.50 ರಿಂದ 3.00 ರೂ. ಇವೆ. ಈ ದರಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಿವೆಯೆಂದು ಕಂಪನಿಯ ನಿರ್ದೇಶಕರು ಹೇಳುತ್ತಾರೆ.

ಅನೇಕ ಸಕ್ಕರೆ ಕಾರ್ಖಾನೆಗಳ ಕೋಜೆನರೇಷನ್ ಪ್ಲಾಂಟ್‌ಗಳು ಅನುತ್ಪಾದಕ ಆಸ್ತಿಗಳಾಗಿವೆಯೆಂದು ನಂದ ಕುಮಾರ್ ವಿವರಿಸುತ್ತಾರೆ. “ಅದರಲ್ಲಿ ಹೂಡಿಕೆ ಮಾಡಿದ ನಂತರ, ನಮಗೆ ಪರ್ಯಾಯ ವ್ಯವಸ್ಥೆಯಿಲ್ಲ. ಸರ್ಕಾರದ ನೀತಿಯಿಂದಾಗಿ 20 ಮೆಗಾವ್ಯಾಟ್ ಸ್ಥಾವರವನ್ನು ಸ್ಥಾಪಿಸುವ ನಮ್ಮ ಯೋಜನೆಯನ್ನು ನಾವು ಕಡಿಮೆಗೊಳಿಸಿದ್ದೇವೆ. ನೀತಿ ಬದಲಾಗುವವರೆಗೆ ಮತ್ತು ಪರಿಸ್ಥಿತಿ ಸುಧಾರಿಸುವವರೆಗೆ ನಾವು ಉದ್ಯಮವಾಗಿ ಉಳಿಯಬೇಕಿದೆ”

ಆದರೆ ಆಂಧ್ರಪ್ರದೇಶದ ಎರಡನೇ ಅತಿದೊಡ್ಡ ಕಬ್ಬು ಉತ್ಪಾದಿಸುವ ಜಿಲ್ಲೆಯಾದ ಚಿತ್ತೂರಿನಲ್ಲಿ ಪರಿಸ್ಥಿತಿ ಬಹುದೊಡ್ಡ ಪರಿಣಾಮಗಳನ್ನು ಬೀರಿದೆ. ಎಂಟು ವರ್ಷಗಳಲ್ಲಿ ಚಿತ್ತೂರಿನ 66 ಮ್ಯಾನುವಲ್‌ಗಳಲ್ಲಿ ಸಾಗುವಳಿ ಅರ್ಧದಷ್ಟು ಕಡಿಮೆಯಾಗಿದೆ ಎಂದು ಜಿಲ್ಲಾಡಳಿತದ ದಾಖಲೆಗಳು ತೋರಿಸುತ್ತವೆ.  2011ರಲ್ಲಿ ಜಿಲ್ಲೆಯಾದ್ಯಂತ ಸುಮಾರು 28,400 ಹೆಕ್ಟೇರ್ ಭೂಮಿ ಕಬ್ಬು ಸಾಗುವಳಿ ಹೊಂದಿತ್ತು, ಮತ್ತು 2019ರ ಹೊತ್ತಿಗೆ ಕೇವಲ 14,500 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.

ಕಬ್ಬಿನ ಮಾರಾಟದ ಹಣದ ಪಾವತಿಯ ವಿಳಂಬ ಮತ್ತು ನಿಗದಿಪಡಿಸಿದ ಕಾರ್ಖಾಗೇ ಮಾರಬೇಕೆನ್ನುವ ಶರತ್ತುಗಳ ಕಾರಣಕ್ಕೆ ರೈತರು ಇತರ ಬೆಳೆಗಳನ್ನು ಪ್ರಯತ್ನಿಸುತ್ತಿದ್ದಾರೆ, ಆದರೆ ಹೆಚ್ಚಿನ ಯಶಸ್ಸನ್ನು ಪಡೆಯಲಿಲ್ಲ. ಬೆಳೆ ಸಾಗುವಳಿ ವೆಚ್ಚವು ರೈತರಿಗೆ ಲಾಭ ನೀಡದಂತೆ ತೊಡಕಾಗಿದೆ ಎಂದು ಸುಬ್ಬಾ ರೆಡ್ಡಿ ಹೇಳುತ್ತಾರೆ.

ಬಾಬು ನಾಯ್ಡು ಅವರಿಗೆ, ಈ ಪರಿಸ್ಥಿತಿಯು ತನ್ನ ಕುಟುಂಬ ವರ್ಗದಿಂದ ಸಹಾಯ ಪಡೆಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. "ನನ್ನ ಮಗಳಿಗೆ ಚೆನ್ನೈನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನನ್ನ ಸಂಬಂಧಿಕರು ಸಹಾಯ ಮಾಡಬೇಕಾಯಿತು" ಎಂದು ಅವರು ಹೇಳುತ್ತಾರೆ. "ನನಗೆ ಬರಬೇಕಿರುವ ಬಾಕಿ ಪಾವತಿಯಾಗಿದ್ದರೆ ಅವರಿಂದ ಸಹಾಯ ಪಡೆಯಬೇಕಿರಲಿಲ್ಲ"

ಸಕ್ಕರೆ ಕಾರ್ಖಾನೆಗಳ ವರ್ತನೆಯ ಕುರಿತು ರೈತರಿಗೆ ಹೆಚ್ಚಿನ ಆಯ್ಕೆಗಳಿಲ್ಲವೆಂದು ಸುಬ್ಬಾ ರೆಡ್ಡಿ ಅಭಿಪ್ರಾಯಡುತ್ತಾರೆ. ಅವರು ಹೇಳುತ್ತಾರೆ, “ಆದರೆ ಶುಲ್ಕವನ್ನು ಪಾವತಿಸದ ಕಾರಣ ನಮ್ಮ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ, ರೈತರು ಆತ್ಮಹತ್ಯೆಯ ಬಗ್ಗೆ ಯೋಚಿಸುವುದಿಲ್ಲವೇ?”

ಅನುವಾದ: ಶಂಕರ ಎನ್. ಕೆಂಚನೂರು

G. Ram Mohan

G. Ram Mohan is a freelance journalist based in Tirupati, Andhra Pradesh. He focuses on education, agriculture and health.

Other stories by G. Ram Mohan
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru