ನಿಮ್ಮ ಯೂನಿವರ್ಸಿಟಿಯು, ಅಥವಾ ಅದರ ಒಂದು ಭಾಗವು ಹಲವು ಬಾರಿ ಒಕ್ಕಲೆಬ್ಬಿಸಲ್ಪಟ್ಟ ಊರಿನ ಜನರ ಮನೆಗಳ ಮೇಲೆ ನಿಂತಿದೆ. ಅದಕ್ಕೆ ನೀವು ಕಾರಣಕರ್ತರು ಅಥವಾ ಹೊಣೆಗಾರರಲ್ಲವಾದರೂ, ಅವರ ಕುರಿತು ಗೌರವದ ಭಾವನೆಯನ್ನು ನೀವು ಹೊಂದಿರಬೇಕು. ಎಂದು ನಾನು 2011ರಲ್ಲಿ ಅಲ್ಲಿದ್ದವರಿಗೆ ಹೇಳಿದ್ದೆ.

ಒಡಿಶಾದ ಕೊರಾಪುಟ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಸೂಕ್ಷ್ಮ ಮನೋಭಾವವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ, ಮುಖ್ಯವಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದವರಿಗೆ ಆ ಜನರ ಕುರಿತು ಗೌರವ ಇತ್ತಾದರೂ, ಅವರಿಗೆ ನನ್ನ ಮಾತುಗಳು ಆಘಾತ ನೀಡಿದವು. ಚಿಕಾಪರದ ಕತೆಯು ಅವರನ್ನು ವಿಚಲಿತಗೊಳಿಸಿತ್ತು. ಅದು ಮೂರು ಬಾರಿ ನಿಷ್ಕರುಣೆಯ ಒಕ್ಕಲೆಬ್ಬಿಸಲ್ಪಟ್ಟ ಊರಾಗಿತ್ತು. ಮತ್ತು ಪ್ರತಿಬಾರಿಯೂ ಅವರನ್ನು ʼಅಭಿವೃದ್ಧಿʼಯ  ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗಿತ್ತು.

ಮತ್ತು ನನ್ನ ಮನಸ್ಸು 1993ರ ಕೊನೆಯಲ್ಲಿ - 1994ರ ಆರಂಭದಲ್ಲಿ, ಗದಬ ಆದಿವಾಸಿಯಾದ ಮುಕ್ತಾ ಕದಮ್ (ತನ್ನ ಮೊಮ್ಮಗನೊಂದಿಗೆ ಮೇಲಿನ ಮುಖ್ಯ ಫೋಟೋದಲ್ಲಿ) 1960ರ ದಶಕದಲ್ಲಿ ಬಿರುಸು ಮಳೆಯ ರಾತ್ರಿಯಲ್ಲಿ ತಮ್ಮನ್ನು ಊರಿನಿಂದ, ಮನೆಯಿಂದ ಹೊರಹಾಕಿದ ಸಂದರ್ಭದ ಕರಾಳ ನೆನಪನ್ನು ಹಂಚಿಕೊಂಡಿದ್ದು ನೆನಪಾಯಿತು. ಅಂದು ತನ್ನ ಐದು ಮಕ್ಕಳನ್ನು ಕರೆದುಕೊಂಡು, ಮಕ್ಕಳ ತಲೆಯ ಮೇಲೆ ಮನೆಯ ಸಾಮಾಗ್ರಿಗಳನ್ನು ಹೊರಿಸಿ ಸುರಿವ ಮಳೆಯಲ್ಲೇ ಮಕ್ಕಳಿಗೆ ದಾರಿ ತೋರಿಸುತ್ತಾ ರಾತ್ರಿಯ ದಟ್ಟ ಕತ್ತಲೆಯಲ್ಲಿ ಮನೆಯಿಂದ ಹೊರಬಿದ್ದಿದ್ದರು. "ನಮಗೆ ಎಲ್ಲಿಗೆ ಹೋಗುವುದೆಂದು ತಿಳಿದಿರಲಿಲ್ಲ. ಸಾಬ್‌ ಲೋಗ್‌ಗಳು ತೆರಳುವಂತೆ ಹೇಳಿದ್ದರಿಂದ ನಾವು ಹೊರಟಿದ್ದೆವು. ಆ ರಾತ್ರಿ ಭಯಾನಕವಾಗಿತ್ತು."

ಅವರು ಒಡಿಶಾದಲ್ಲಿ ಎಂದಿಗೂ ಸಂಪೂರ್ಣವಾಗಿ ಬಂದಿಲ್ಲದ ಅಥವಾ ಜಾರಿಗೊಳ್ಳದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಿಗ್ ಫೈಟರ್ ಯೋಜನೆಗೆ ದಾರಿ ಮಾಡಿಕೊಡುತ್ತಿದ್ದರು.‌ ಯೋಜನೆ ಜಾರಿಗೊಳ್ಳದಿದ್ದರೂ ಸರಕಾರ ಭೂಮಿಯನ್ನು ಜನರಿಗೆ ಮರಳಿಸಲಿಲ್ಲ. ಪರಿಹಾರ? "ನನ್ನ ಕುಟುಂಬವು 60 ಎಕರೆ ಭೂಮಿಯನ್ನು ಹೊಂದಿತ್ತು" ಎಂದು ದಲಿತರೂ ಮತ್ತು ಹೋರಾಟಗಾರರೂ ಆಗಿರುವ ಜ್ಯೋತಿರ್ಮಯ್ ಖೋರಾ ಹೇಳುತ್ತಾರೆ, ಅವರು ಸ್ಥಳಾಂತರಗೊಂಡ ಚಿಕಾಪರದ ನಿವಾಸಿಗಳಿಗೆ ನ್ಯಾಯ ಕೊಡಿಸುವ ಹೋರಾಟವನ್ನು ಮುಂದುವರೆಸಿದ್ದರು. “ಮತ್ತು, ಹಲವು, ಹಲವು ವರ್ಷಗಳ ನಂತರ, ನಮಗೆ 60 ಎಕರೆಗೆ ರೂ. 15,000 [ಒಟ್ಟು] ಪರಿಹಾರವಾಗಿ ದೊರಕಿತು.” ಹೀಗೆ ಒಕ್ಕಲೆಬ್ಬಿಸಲ್ಪಟ್ಟ ಜನರು ತಮ್ಮದೇ ಸ್ವಂತ ಭೂಮಿಯಲ್ಲಿ ಸರ್ಕಾರದ ನೆರವಿಲ್ಲದೆ ಹೊಸ ಊರನ್ನು ಕಟ್ಟಿಕೊಂಡರು. ಮತ್ತದಕ್ಕೆ ತಮ್ಮ ಹಳೆಯ ಊರಿನ ನೆನಪಿನಲ್ಲಿ ಚಿಕಪಾರ ಎಂದು ಹೆಸರಿಟ್ಟರು.

The residents of Chikapar were displaced thrice, and each time tried to rebuild their lives. Adivasis made up 7 per cent of India's population in that period, but accounted for more than 40 per cent of displaced persons on all projects
PHOTO • P. Sainath
The residents of Chikapar were displaced thrice, and each time tried to rebuild their lives. Adivasis made up 7 per cent of India's population in that period, but accounted for more than 40 per cent of displaced persons on all projects
PHOTO • P. Sainath

ಚಿಕಾಪರ್ ನಿವಾಸಿಗಳು ಮೂರು ಬಾರಿ ಸ್ಥಳಾಂತರಗೊಂಡರು ಮತ್ತು ಪ್ರತಿ ಬಾರಿಯೂ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಪ್ರಯತ್ನಿಸಿದರು. ಆ ಅವಧಿಯಲ್ಲಿ ಆದಿವಾಸಿಗಳು ಭಾರತದ ಜನಸಂಖ್ಯೆಯ ಶೇಕಡಾ 7ರಷ್ಟಿದ್ದರು, ಆದರೆ ಎಲ್ಲಾ ಯೋಜನೆಗಳಲ್ಲಿ ಸ್ಥಳಾಂತರಗೊಂಡವರಲ್ಲಿ ಆದಿವಾಸಿಗಳ ಸಂಖ್ಯೆ ಶೇಕಡಾ 40ಕ್ಕಿಂತ ಹೆಚ್ಚು

ಚಿಕಾಪರ್‌ನ ಗಡಾಬಾ, ಪಾರೋಜಾ ಮತ್ತು ಡೊಮ್ (ದಲಿತ ಸಮುದಾಯ) ಸಮುದಾಯಗಳು ಬಡವರಾಗಿರಲಿಲ್ಲ. ಅವರು ದೊಡ್ಡ ಪ್ರಮಾಣದ ಭೂಮಿ ಮತ್ತು ಜಾನುವಾರುಗಳ ಸಾಕಷ್ಟು ಸಂಪತ್ತನ್ನು ಹೊಂದಿದ್ದರು. ಆದರೆ ಅವರು ಮುಖ್ಯವಾಗಿ ಆದಿವಾಸಿಗಳು ಮತ್ತು ಕೆಲವರು ದಲಿತರು. ಇದು ಅವರನ್ನು ಅಲ್ಲಿಂದಿಲ್ಲಿಗೆ ಓಡಾಡಿಸುವ ಬಾತುಕೋಳಿಗಳನ್ನಾಗಿ ಮಾಡಿತು. ಅಭಿವೃದ್ಧಿಗಾಗಿ ಬಲವಂತದ ಸ್ಥಳಾಂತರವನ್ನು ಸಹಿಸಿಕೊಂಡವರಲ್ಲಿ ಆದಿವಾಸಿಗಳೇ ಹೆಚ್ಚು. 1951 ಮತ್ತು 1990ರ ನಡುವೆ ಭಾರತದಾದ್ಯಂತ 25 ದಶಲಕ್ಷಕ್ಕೂ ಹೆಚ್ಚು ಮಾನವರನ್ನು 'ಯೋಜನೆಗಳಿಗಾಗಿ' ಸ್ಥಳಾಂತರಿಸಲಾಯಿತು. (ಮತ್ತು 90ರ ದಶಕದಲ್ಲಿ ರಾಷ್ಟ್ರೀಯ ನೀತಿಯ ಕರಡು ಪ್ರತಿಯು ಅವರಲ್ಲಿ ಸುಮಾರು 75 ಪ್ರತಿಶತದಷ್ಟು ಜನರು "ಈಗಲೂ ಪುನರ್ವಸತಿಗಾಗಿ ಕಾಯುತ್ತಿದ್ದಾರೆ" ಎಂದು ಒಪ್ಪಿಕೊಂಡಿತು.)

ಆ ಅವಧಿಯಲ್ಲಿ ಆದಿವಾಸಿಗಳು ರಾಷ್ಟ್ರೀಯ ಜನಸಂಖ್ಯೆಯ ಸುಮಾರು ಶೇಕಡಾ 7ರಷ್ಟಿದ್ದರು ಆದರೆ ಎಲ್ಲಾ ಅಭಿವೃದ್ಧಿ ಯೋಜನೆಗಳಲ್ಲಿ ಸ್ಥಳಾಂತರಗೊಂಡವರಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಇವರೇ ಇದ್ದಾರೆ. ಮುಕ್ತಾ ಕದಮ್ ಮತ್ತು ಇತರ ಚಿಕಾಪರಿಯ ನಿವಾಸಿಗಳು ಮತ್ತೆ ಹಳೆಯ ಕೆಡುಕನ್ನೇ ಎದುರಿಸಬೇಕಾಗಿ ಬಂತು. 1987ರಲ್ಲಿ, ಅವರನ್ನು ಚಿಕಾಪರ್-2ರಿಂದ ಹೊರಹಾಕಲಾಯಿತು - ನೌಕಾ ಶಸ್ತ್ರಾಸ್ತ್ರಗಳ ಡಿಪೋ ಮತ್ತು ಅಪ್ಪರ್ ಕೊಲಾಬ್ ಯೋಜನೆಗಾಗಿ. ಈ ಬಾರಿ, ಮುಕ್ತಾ "ನಾನು ನನ್ನ ಮೊಮ್ಮಕ್ಕಳನ್ನು ಗುಂಪಿನೊಡನೆ ಹೊರಟೆ" ಎಂದು ಹೇಳಿದರು. ನೀವು ಚಿಕಾಪರ್-3 ಎಂದು ಕರೆಯಬಹುದಾದ ಸ್ಥಳದಲ್ಲಿ ಅವರು ಮತ್ತೆ ಊರನ್ನು ಮರುನಿರ್ಮಿಸಿದರು.

1994ರ ಆರಂಭದಲ್ಲಿ ನಾನು ಅಲ್ಲಿಗೆ ಭೇಟಿ ನೀಡಿ ತಂಗಿದ್ದಾಗ, ಅವರಿಗೆ ಮೂರನೇ ಸ್ಥಳಾಂತರದ ನೋಟಿಸ್ ಬಂದಿತ್ತು, ಈ ಬಾರಿ ಬಹುಶಃ ಕೋಳಿ ಫಾರ್ಮ್ ಅಥವಾ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್ ಡಿಪೋಗೆಂದು. ಚಿಕಾಪರ್ ಅಕ್ಷರಶಃ ಅಭಿವೃದ್ಧಿಯಿಂದ ಬೆನ್ನಟ್ಟಲ್ಪಡುತ್ತಿತ್ತು. ಇದು ಸೇನೆ, ವಾಯುಪಡೆ ಮತ್ತು ನೌಕಾಪಡೆ ಮೂರರಿಂದಲು ಸ್ಥಳಾಂತರಿಸಲ್ಪಟ್ಟ ವಿಶ್ವದ ಏಕೈಕ ಗ್ರಾಮವಾಗಿದೆ.

ಎಚ್‌ಎಎಲ್‌ ಸಂಸ್ಥೆಗಾಗಿ ತೆಗೆದುಕೊಂಡ ಬಹುತೇಕ ಜಾಗವನ್ನು ಅಧಿಕೃತ ಮೂಲ ಉದ್ದೇಶಕ್ಕಾಗಿ ಬಳಸಿಕೊಳ್ಳಲೇ ಇಲ್ಲ. ಆ ನೆಲ ಮತ್ತು ಸುತ್ತಮುತ್ತಲಿನ ಒಂದಷ್ಟು ಜಮೀನನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ನೀಡಲಾಯಿತು. ಆದರೆ ಒಂದು ತುಂಡು ಭೂಮಿಯನ್ನೂ ಮೂಲ ಮಾಲಿಕರಿಗೆ ಹಿಂದಿರುಗಿಸಲಿಲ್ಲ. 2011ರಲ್ಲಿ ನನಗೆ ತಿಳಿದುಬಂದಂತೆ ಆ ನೆಲದ ಒಂದಷ್ಟು ಭಾಗವನ್ನು ಒಡಿಶಾದ ಕೇಂದ್ರೀಯ ವಿಶ್ವವಿದ್ಯಾಲಯದ ಸಂಸ್ಥೆಗಳಿಗೆ ನೀಡಲಾಯಿತು. ಜ್ಯೋತಿರ್ಮೊಯ್‌ ಖೋರಾ, ಸ್ಥಳಾಂತರಗೊಂಡ ಕುಟುಂಬಗಳಿಗೆ ಕನಿಷ್ಟ ಎಚ್‌ಎಎಲ್‌ ಕಾರ್ಖಾನೆಯಲ್ಲಿ ಕೆಲಸವನ್ನಾದರೂ ನೀಡುವಂತೆ ಕೋರಿ ಕಾನೂನು ಹೋರಾಟ ಮುಂದುವರೆಸಿದ್ದರು.

ಈ ವರದಿಯ ಹೆಚ್ಚು ವಿವರವಾದ ಆವೃತ್ತಿಯು, ಎರಡು ಭಾಗಗಳಲ್ಲಿ, ನನ್ನ ಪುಸ್ತಕ ಎವೆರಿಬಡಿ ಲವ್ಸ್ ಎ ಡ್ರಾಟ್‌ (ಕನ್ನಡದಲ್ಲಿ -ಬರ ಎಂದರೆ ಎಲ್ಲರಿಗೂ ಇಷ್ಟ) ಬಲ್ಲಿ ಕಾಣಿಸಿಕೊಂಡಿದೆ, ಆದರೆ ಅಲ್ಲಿ ಈ ಕತೆಯು ಇಸವಿ1995ರಲ್ಲಿ ಕೊನೆಗೊಳ್ಳುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru