ಲಕ್ಷ್ಮೀಬಾಯಿ ಕೇಲ್ ಪ್ರತಿ ವರ್ಷ ತಮ್ಮ ಬೆಳೆಯ ಒಂದು ಭಾಗವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅತಿಯಾದ ಮಳೆ ಅಥವಾ ಬರ ಅಥವಾ ಕಳಪೆ ಕೃಷಿ ತಂತ್ರಜ್ಞಾನಗಳಲ್ಲ. "ನಮ್ಮ ಬೆಳೆಗಳು ನಾಶವಾಗುತ್ತಿರುವುದಕ್ಕೆ ಕಾರಣವೆಂದರೆ ಪಂಚಾಯತ್ ನನ್ನ ಕೃಷಿ ಭೂಮಿಯಲ್ಲಿ ಪ್ರಾಣಿಗಳನ್ನು ಮೇಯಿಸಲು ಅನುವು ಮಾಡಿಕೊಡುವುದು" ಎನ್ನುತ್ತಾರೆ 60 ವರ್ಷದ ಹಿರಿಯ ಮಹಿಳೆ ಲಕ್ಷ್ಮೀಬಾಯಿ ಕೇಲ್. "ನಾನು ಅನುಭವಿಸಿದ ನಷ್ಟಗಳ ಸಂಖ್ಯೆ ಎಷ್ಟೆನ್ನುವುದೂ ನನಗೆ ನೆನಪಿಲ್ಲ.”
ಲಕ್ಷ್ಮಿಬಾಯಿ ಮತ್ತು ಅವರ ಪತಿ ವಾಮನ್ ಮೂರು ದಶಕಗಳಿಂದ ನಾಸಿಕ್ ಜಿಲ್ಲೆಯ ಮೊಹಾದಿ ಗ್ರಾಮದಲ್ಲಿನ ಐದು ಎಕರೆ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ, ಇವರ ಭೂಮಿಯು ಗಾಯ್‌ರಾನ್ ಎಂದು ಕರೆಯಲಾಗುವ ಜಾಗದ ಭಾಗವಾಗಿದ್ದು (ಗ್ರಾಮದ ಸರ್ಕಾರಿ ನಿಯಂತ್ರಿತ ಸಾರ್ವಜನಿಕ ಭೂಮಿಯನ್ನು ಹುಲ್ಲುಗಾವಲುಗಳಾಗಿ ಬಳಸಲಾಗುತ್ತದೆ. ಅದನ್ನು ಗಾಯ್‌ರಾನ್ ಎಂದು ಕರೆಯುತ್ತಾರೆ) ಅಲ್ಲಿ ಅವರು ತೊಗರಿ, ಸಜ್ಜೆ, ಜೋಳ ಮತ್ತು ಭತ್ತವನ್ನು ಬೆಳೆಯುತ್ತಾರೆ. "ಗ್ರಾಮಸ್ಥರಿಗೆ ಪಂಚಾಯತ್ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲು ಅನುಮತಿಸದಿದ್ದರೆ, ಅವರು ನಮ್ಮ ವಿರುದ್ಧ ಮೊಕದ್ದಮೆ ಹೂಡುತ್ತಾರೆ ಎಂದು ಪಂಚಾಯತ್ ಸದಸ್ಯರು ಹೇಳುತ್ತಾರೆ" ಎಂದು ಲಕ್ಷ್ಮಿಬಾಯಿ ಹೇಳಿದರು.
ಲಕ್ಷ್ಮಿಬಾಯಿ ಮತ್ತು ದಿಂಡೋರಿ ತಾಲ್ಲೂಕಿನ ಅವರ ಗ್ರಾಮದ ಇತರ ರೈತರು 1992ರಿಂದ ತಮ್ಮ ಭೂ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. "ನಾನು ಈ ಭೂಮಿಯನ್ನು ಉಳುತ್ತಿರುವ ಕುಟುಂಬದ ಮೂರನೇ ತಲೆಮಾರಿನವಳು, ಆದರೆ ನಮಗೆ ಇನ್ನೂ ಭೂಮಿಯ ಮೇಲಿನ ಹಕ್ಕು ದೊರೆತಿಲ್ಲ" ಎಂದು ಅವರು ಹೇಳಿದರು. "2002ರಲ್ಲಿ, ನಾವು ನಮ್ಮ ಭೂಮಿಯ ಹಕ್ಕುಗಳಿಗಾಗಿ ಸತ್ಯಾಗ್ರಹ ಮತ್ತು ಜೈಲು ಭರೋ ಆಂದೋಲನವನ್ನು ಪ್ರಾರಂಭಿಸಿದ್ದೆವು." ಆ ಸಮಯದಲ್ಲಿ, ಸುಮಾರು 1,500 ರೈತರು, ಅವರಲ್ಲಿ ಬಹುತೇಕ ಮಹಿಳೆಯರು, ನಾಸಿಕ್ ಕೇಂದ್ರ ಕಾರಾಗೃಹದಲ್ಲಿ 17 ದಿನಗಳನ್ನು ಕಳೆದಿದ್ದೆವು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಭೂ ಮಾಲೀಕತ್ವ ಇಲ್ಲದಿರುವ ಕಾರಣ, ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗವಾಗಿ ಪಟ್ಟಿ ಮಾಡಲಾಗಿರುವ ಲೋಹರ್ ಜಾತಿಗೆ ಸೇರಿದ ಲಕ್ಷ್ಮಿಬಾಯಿಗೆ ಬೆಳೆ ನಷ್ಟವನ್ನು ಸರಿಹೊಂದಿಸಿಕೊಳ್ಳಲು ಯಾವುದೇ ಸಹಾಯ ದೊರೆಯುವುದಿಲ್ಲ. "ಭೂಮಿ ನಮ್ಮ ಹೆಸರಿನಲ್ಲಿಲ್ಲದ ಕಾರಣ ನಮಗೆ ಸಾಲ/ವಿಮೆ (ಬೆಳೆ) ದೊರೆಯುವುದಿಲ್ಲ" ಎಂದು ಅವರು ಹೇಳಿದರು. ಬದಲಾಗಿ, ಅವರು ಕೃಷಿ ಕಾರ್ಮಿಕರಾಗಿ ದುಡಿಯುವ ಮೂಲಕ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಾರೆ, ಕೆಲವೊಮ್ಮೆ ಹೆಚ್ಚು ಸಂಪಾದಿಸುವ ಸಲುವಾಗಿ ದಿನಕ್ಕೆ ಎಂಟು ಗಂಟೆಗಳ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ಭಿಲ್ ಆದಿವಾಸಿ ಸಮುದಾಯದಕ್ಕೆ ಸೇರಿದವರಾದ 55 ವರ್ಷದ ವಿಜಾಬಾಯಿ ಗಂಗುರ್ಡೆ ಕೂಡ ಇಂತಹದೇ ಪರಿಸ್ಥಿತಿಯಲ್ಲಿದ್ದಾರೆ. ಮೊಹಾದಿಯಲ್ಲಿರುವ ಅವರ ಕೃಷಿ ಭೂಮಿ ಅವರ ಜೀವನಕ್ಕೆ ಸಾಲುವುದಿಲ್ಲ. "ಎಂಟು ಗಂಟೆಗಳ ಕಾಲ ನನ್ನ ಎರಡು ಎಕರೆ ಹೊಲದಲ್ಲಿ ಕೆಲಸ ಮಾಡಿದ ನಂತರ ಇನ್ನೊಂದು ಎಂಟು ಗಂಟೆಗಳ ಕಾಲ ಬೇರೆಯವರ ಹೊಲಗಳಲ್ಲಿ ಕೃಷಿ ಕಾರ್ಮಿಕಳಾಗಿ ದುಡಿಯುತ್ತೇನೆ." ಎಂದು ವಿಜಾಬಾಯಿ ಹೇಳಿದರು, ಅವರ ತನ್ನ ಪಾಲಿನ ದಿನವನ್ನು ಎರಡು ಪಾಳಿಗಳಲ್ಲಿ ವಿಂಗಡಿಸಿಕೊಂಡಿದ್ದು ಬೆಳಿಗ್ಗೆ 7 ಗಂಟೆಗೆ ಕೆಲಸ ಪ್ರಾರಂಭಿಸುತ್ತಾರೆ.
"ಆದರೆ ನಾನು ಲೇವಾದೇವಿದಾರರಿಂದ ಹಣವನ್ನು ಸಾಲವಾಗಿ ಪಡೆಯುವುದಿಲ್ಲ"ವೆಂದು ಅವರು ಹೇಳಿದರು. "ಬಡ್ಡಿ ವ್ಯವಹಾರದವರು ತಾವು ನೀಡುವ ಪ್ರತಿ 100 ರೂಪಾಯಿಗೆ 10 ರೂಪಾಯಿ ಬಡ್ಡಿಯನ್ನು ವಿಧಿಸುತ್ತಾರೆ, ಅದನ್ನು ತಿಂಗಳ ಕೊನೆಯಲ್ಲಿ ಮರುಪಾವತಿಸಬೇಕಾಗುತ್ತದೆ." ಲಕ್ಷ್ಮೀಬಾಯಿ ಕೂಡ ಖಾಸಗಿ ಸಾಲದವರಿಂದ ದೂರವಿರುತ್ತಾರೆ. "ಬಡ್ಡಿ ಸಾಲ ನೀಡುವವರು ಹತ್ತಿರದ ಹಳ್ಳಿಗಳಲ್ಲಿ ವಿಧವೆಯರಿಗೆ ಕಿರುಕುಳ ನೀಡಿದ್ದಾರೆ" ಎಂದು ಅವರು ಹೇಳಿದರು.


ಎಡ: ನಾಸಿಕ್ ಜಿಲ್ಲೆಯ ಲಕ್ಷ್ಮಿಬಾಯಿ ಕೇಲ್ (ಎಡ) ಮತ್ತು ವಿಜಾಬಾಯಿ ಗಂಗುರ್ಡೆ (ಬಲ) 1992ರಿಂದ ತಮ್ಮ ಭೂಮಿಯ ಮೇಲಿನ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಬಲ: ಸುವರ್ಣ ಗಂಗುರ್ಡೆ (ಹಸಿರು ಸೀರೆಯಲ್ಲಿ) "ನಾವು ಈ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವ ಮೂರನೇ ತಲೆಮಾರಿನ ರೈತರು" ಎಂದು ಹೇಳುತ್ತಾರೆ
ಮೊಹಾದಿಯಲ್ಲಿ ಮಹಿಳೆಯರು ಯಾವಾಗಲೂ ಹಣದ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಅವರಿಗೆ ಎಂಟು ಗಂಟೆಗಳ ಕೆಲಸಕ್ಕೆ 150 ರೂಪಾಯಿಗಳನ್ನು ನೀಡಲಾಗುತ್ತಿದ್ದರೆ ಅದೇ ಕೆಲಸಕ್ಕೆ ಗಂಡಸರಿಗೆ 250 ರೂ. ನೀಡುತ್ತಾರೆ. "ಇಂದಿಗೂ ಮಹಿಳೆ ಪುರುಷನಿಗಿಂತ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೂ ಅವರಿಗಿಂತ ಕಡಿಮೆ ಸಂಬಳ ನೀಡಲಾಗುತ್ತದೆ. ಹಾಗಾದರೆ ಈ [ಹೊಸ ಕೃಷಿ] ಕಾನೂನುಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಗೆ ಭಾವಿಸುತ್ತದೆ?”
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ಜನವರಿ 24-26ರಂದು ಜಂಟಿ ಶೆಟ್ಕರಿ ಕಾಮಗಾರ್ ಮೋರ್ಚಾ ಆಯೋಜಿಸಿದ್ದ ಧರಣಿಗಾಗಿ ಲಕ್ಷ್ಮಿಬಾಯಿ ಮತ್ತು ವಿಜಾಬಾಯಿ ಇಬ್ಬರೂ ದಕ್ಷಿಣ ಮುಂಬೈನ ಆಜಾದ್ ಮೈದಾನಕ್ಕೆ ಬಂದಿದ್ದರು..
ಜನವರಿ ತಿಂಗಳ 23ರಂದು ನಾಸಿಕ್ ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ 15 ಸಾವಿರಕ್ಕೂ ಹೆಚ್ಚು ರೈತರು ಟೆಂಪೊ, ಜೀಪ್ ಮತ್ತು ಪಿಕ್ ಅಪ್ ಟ್ರಕ್‌ಗಳಲ್ಲಿ ಹೊರಟು ಮರುದಿನ ಮುಂಬೈ ತಲುಪಿ, ಆಜಾದ್ ಮೈದಾನದಲ್ಲಿ ದೆಹಲಿಯ ಗಡಿಯಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಜೊತೆಗೆ ತಮ್ಮ ಭೂಮಿಯ ಹಕ್ಕುಪತ್ರಗಳಿಗಾಗಿಯೂ ಆಗ್ರಹಿಸಿದರು. "ನಾವು ಸರ್ಕಾರಕ್ಕೆ ಹೆದರುವುದಿಲ್ಲ. ನಾಸಿಕ್‌ನಿಂದ ಮುಂಬೈಗೆ ನಡೆದ ಮೆರವಣಿಗೆಯಲ್ಲಿ ನಾವು ಭಾಗವಹಿಸಿದ್ದೇವೆ [2018ರಲ್ಲಿ], ನಾವು ದೆಹಲಿಗೆ ಹೋಗಿದ್ದೆವು, ಹಾಗೂ ನಾಸಿಕ್ ಮತ್ತು ಮುಂಬೈನಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಬಾರಿ ಪ್ರತಿಭಟನೆ ನಡೆಸಿದ್ದೇವೆ,” ಎಂದು ಲಕ್ಷ್ಮೀಬಾಯಿ ಪ್ರತಿಭಟನೆ ಸಂಕೇತವಾಗಿ ಗಾಳಿಯಲ್ಲಿ ಮುಷ್ಟಿಯನ್ನು ಬೀಸುತ್ತಾ ಹೇಳಿದರು.
ಅವರು ಮತ್ತು ರೈತರು ಪ್ರತಿಭಟಿಸುತ್ತಿರುವ ಕೃಷಿ ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಪರಿಚಯಿಸಲಾಯಿತು. ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.
ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಖಾಸಗಿ ಖರೀದಿದಾರರು ಕೃಷಿ ಉತ್ಪನ್ನಗಳನ್ನು ಕನಿಷ್ಠ ಖಾತರಿಯ ಬೆಲೆಗಿಂತಲೂ ಕಡಿಮೆಗೆ ಖರೀದಿಸಿದಾಗ, ಅದು ರೈತ ಮತ್ತು ಕೃಷಿ ಕಾರ್ಮಿಕ ಇಬ್ಬರ ಮೇಲೆಯೂ ಪರಿಣಾಮ ಬೀರುತ್ತದೆ. "ರೈತರಿಗೆ ಉತ್ತಮ ಬೆಲೆ ಸಿಕ್ಕರೆ ಮಾತ್ರ ಅವರು ಕಾರ್ಮಿಕರಿಗೆ ಉತ್ತಮ ವೇತನ ನೀಡಬಹುದು." ಆದರೆ ಈ ಕಾನೂನುಗಳು ಬಂದರೆ, "ಮಾರುಕಟ್ಟೆಯಲ್ಲಿ ಹೆಚ್ಚಿನ ಖಾಸಗಿ ಕಂಪನಿಗಳು ಹೆಚ್ಚಾಗುತ್ತವೆ. ಅಮ್ಹಿ ಭಾವ್ ಕರು ಶಕ್ನರ್ ನಹಿ [ನಮಗೆ ಬೆಲೆ ಚೌಕಾಶಿ ನಡೆಸಲು ಸಾಧ್ಯವಾಗುವುದಿಲ್ಲ].”


ಎಡ: ಆಜಾದ್ ಮೈದಾನದಲ್ಲಿ ಪ್ರತಿಭಟನಾಕಾರರು ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಿರುವುದು. ಬಲ: ಮಥುರಾಬಾಯಿ ಬಾರ್ಡೆ ರೈತರ ಬೇಡಿಕೆಗಳ ಚಾರ್ಟರ್ ಅನ್ನು ಎತ್ತಿ ಹಿಡಿದು ಪ್ರದರ್ಶಿಸುತ್ತಿರುವುದು
ಆಜಾದ್ ಮೈದಾನದಲ್ಲಿ, ದಿಂಡೋರಿ ತಾಲ್ಲೂಕಿನ ಕೊರ್ಹೇಟ್ ಗ್ರಾಮದ 38 ವರ್ಷದ ಸುವರ್ಣ ಗಂಗುರ್ಡೆ ಈ ಕಾನೂನುಗಳು ಮಹಿಳೆಯರ ಮೇಲೆಯೇ ಹೆಚ್ಚು ಪ್ರಭಾವ ಬೀರುತ್ತವೆಯೆನ್ನುವುದನ್ನು ಒಪ್ಪಿಕೊಳ್ಳುತ್ತಾರೆ. "ಸುಮಾರು 70-80 ಪ್ರತಿಶತದಷ್ಟು ಬೇಸಾಯದ ಕೆಲಸವನ್ನು ಮಹಿಳೆಯರು ಮಾಡುತ್ತಾರೆ" ಎಂದು ಕೋಲಿ ಮಹಾದೇವ್ ಬುಡಕಟ್ಟು ಸಮುದಾಯದವರಾದ ಸುವರ್ಣ ಹೇಳಿದರು. “ಆದರೆ ಪಿಎಂ-ಕಿಸಾನ್ ಯೋಜನೆಯನ್ನು ನೋಡಿ. ನಮ್ಮ ಹಳ್ಳಿಯ ಯಾವುದೇ ಮಹಿಳೆಯ ಬ್ಯಾಂಕ್ ಖಾತೆಗೆ ಒಂದು ಪೈಸೆಯೂ ಜಮಾ ಆಗಿಲ್ಲ.” ಈ ಕೇಂದ್ರ ಸರ್ಕಾರದ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪ್ರತಿವರ್ಷ 6,000 ರೂ ಸಹಾಯ ಧನ ನೀಡಲಾಗುತ್ತದೆ.
ಸುವರ್ಣ ಅವರ ಪ್ರಕಾರ, ಕೊರ್ಹೇಟ್ ಗ್ರಾಮದ 64 ಆದಿವಾಸಿ ಕುಟುಂಬಗಳಲ್ಲಿ, ಕೇವಲ 55 ಕುಟುಂಬಗಳಿಗೆ ಮಾತ್ರ 2012ರಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ 2006 ರ ಅಡಿಯಲ್ಲಿ ‘7/12’ (ಭೂಮಿ ಹಕ್ಕುಗಳ ದಾಖಲೆ) ನೀಡಲಾಗಿದೆ. ಆದರೆ ದಾಖಲೆಗಳಲ್ಲಿ - ಪೋಟ್‌ಖರಾಬಾ ಜಮೀನ್ (ಕೃಷಿ ಮಾಡಲಾಗದ ಭೂಮಿ) ಎಂದು ಶೆರಾ(ಷರಾ) ಸೇರಿಸಲಾಗಿದೆ. "ನಾವು ಈ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಮೂರನೇ ತಲೆಮಾರು, ಹೀಗಿರುವಾಗ ಅವರು ಆ ನೆಲವನ್ನು ಪೋಟ್‌ಖರಾಬಾ ಎಂದು ಹೇಗೆ ಕರೆಯುತ್ತಾರೆ?" ಇದು ಅವರ ಪ್ರಶ್ನೆ.
ಸುವರ್ಣ ತಮ್ಮ ಐದು ಎಕರೆ ಭೂಮಿಯಲ್ಲಿ ಟೊಮ್ಯಾಟೊ, ಭೂಯಿಮುಗ್ (ನೆಲಗಡಲೆ), ಕೊತ್ತಂಬರಿ, ಸಬ್ಬಸಿಗೆ ಪಾಲಕ ಮತ್ತು ಇತರ ಸೊಪ್ಪು ತರಕಾರಿಗಳನ್ನು ಬೆಳೆಯುತ್ತಾರೆ. ಅವರು ಐದು ಎಕರೆ ಭೂಮಿಯ ಮಾಲಿಕತ್ವಕ್ಕೆ ಅರ್ಹತೆ ಹೊಂದಿದ್ದರು ಕೇವಲ ಎರಡು ಎಕರೆಗೆ ಮಾತ್ರವೇ ಹಕ್ಕುಪತ್ರ ನೀಡಲಾಗಿದೆ. "ಫಸವ್ನುಕ್ ಕೆಲೆಲಿ ಆಹೇ [ನಮ್ಮನ್ನು ಮೂರ್ಖರನ್ನಾಗಿಸಿದ್ದಾರೆ]" ಎಂದು ಅವರು ಹೇಳಿದರು.
ಅವರ ಹೆಸರಿನಲ್ಲಿ ಭೂಮಿ ನೀಡಬೇಕೆಂಬ ಬೇಡಿಕೆಯಿದ್ದರೂ, ಕೊರ್ಹಟ್ಟೆಯ ಬುಡಕಟ್ಟು ರೈತರಿಗೆ ಜಂಟಿ 7/12 ನೀಡಲಾಯಿತು. “ಶೆರಾದಿಂದಾಗಿ, ನಾವು ಬೆಳೆ ಸಾಲವನ್ನು ಪಡೆಯಲು ಸಾಧ್ಯವಿಲ್ಲ ಅಥವಾ ನಮ್ಮ ಹೊಲಗಳಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಲು ಬಾವಿಗಳು ಅಥವಾ ಬೋರ್‌ವೆಲ್‌ಗಳನ್ನು ಅಗೆಯಲು ಸಾಧ್ಯವಿಲ್ಲ. ಕೃಷಿಗಾಗಿ ನಾವು ಕೆರೆಗಳನ್ನು ಸಹ ನಿರ್ಮಿಸಲು ಸಾಧ್ಯವಿಲ್ಲ” ಎಂದು ಸುವರ್ಣ ಹೇಳಿದರು.
ಕೊರ್ಹೇಟೆಯಿಂದ 50 ಮಂದಿ ರೈತರು ಮತ್ತು ಕೃಷಿ ಕಾರ್ಮಿಕರು ಮುಂಬೈಗೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅವರಲ್ಲಿ 35 ಜನ ಮಹಿಳೆಯರು.
ಪ್ರತಿಭಟನಾ ನಿರತ ರೈತರು ಜನವರಿ 25 ರಂದು ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರದ ರಾಜ್ಯಪಾಲರ ನಿವಾಸವಾದ ರಾಜ್ ಭವನಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಅಲ್ಲಿ ಅವರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಹಸ್ತಾಂತರಿಸಲು ಬಯಸಿದ್ದರು, ಅವರ ಬೇಡಿಕಗಳೆಂದರೆ: ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಕನಿಷ್ಟ ಬೆಂಬಲ ಬೆಲೆಯಡಿ ಬೆಳೆಗಳನ್ನು ಖರೀದಿಸುವುದು; ಅವರ ಹೆಸರಿನಲ್ಲಿ ಭೂಮಿ; ಮತ್ತು 2020ರಲ್ಲಿ ಪರಿಚಯಿಸಲಾದ ನಾಲ್ಕು ಕಾರ್ಮಿಕ ಕಾನೂನುಗಳ ಹಿಂಪಡೆಯುವಿಕೆ.


ಜನವರಿ 24-26ರಂದು ಸಾವಿರಾರು ರೈತರು ಮುಂಬಯಿಯಲ್ಲಿ ಧರಣಿ ಕುಳಿತು ತಮ್ಮ ಭೂಮಿಯ ಹಕ್ಕುಪತ್ರಕ್ಕಾಗಿ ಮತ್ತು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಿಕೆಗಾಗಿ ಆಗ್ರಹಿಸಿದರು.
ರಾಜ್ ಭವನಕ್ಕೆ ಮೆರವಣಿಗೆ ನಡೆಸುವ ಮೊದಲು, ಅಹ್ಮದ್‌ನಗರ ಜಿಲ್ಲೆಯ 45 ವರ್ಷದ ಭಿಲ್ ಬುಡಕಟ್ಟು ರೈತ ಮಥುರಾಬಾಯಿ ಬಾರ್ಡೆ ಹಲವಾರು ಹಳದಿ ಫಾರ್ಮ್‌ಗಳನ್ನು ಪರಿಶೀಲನೆ ಮಾಡುವುದರಲ್ಲಿ ನಿರತರಾಗಿದ್ದರು. ಅದು ಆಜಾದ್ ಮೈದಾನದಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದ ಅಖಿಲ ಭಾರತ ಕಿಸಾನ್ ಸಭಾ ಸಿದ್ಧಪಡಿಸಿದ ಹೊಲಗಳಲ್ಲಿ ರೈತರ ಸಾಮಾನ್ಯ ಸಮಸ್ಯೆಗಳ ಪಟ್ಟಿಯಾಗಿತ್ತು. ಈ ಪಟ್ಟಿಯಲ್ಲಿನ ಕೆಲವು ಸಮಸ್ಯೆಗಳೆಂದರೆ: 'ನಾನು ಕೃಷಿ ಮಾಡುತ್ತಿರುವ 7/12 ಭೂಮಿಯನ್ನು ನನಗೆ ನೀಡಲಾಗಿಲ್ಲ'; 'ನಾನು ಕೃಷಿ ಮಾಡುತ್ತಿರುವ ಭೂಮಿಯ ಒಂದು ನಿರ್ದಿಷ್ಟ ಭಾಗವನ್ನು ಮಾತ್ರ ನೀಡಲಾಗಿದೆ'; "ನನಗೆ ಭೂಮಿಯ ಮಾಲೀಕತ್ವವನ್ನು ನೀಡುವ ಬದಲು, ಅಧಿಕಾರಿಗಳು ಭೂಮಿಯನ್ನು ಖಾಲಿ ಮಾಡುವಂತೆ ಹೇಳುತ್ತಿದ್ದಾರೆ."
ಪ್ರತಿಯೊಬ್ಬ ರೈತ ಪಟ್ಟಿಯಲ್ಲಿ ನೀಡಲಾಗಿರುವ ಸಮಸ್ಯೆಗಳಿಂದ ತಾನು ಎದುರಿಸುತ್ತಿರುವ ಸಮಸ್ಯೆಗಳನ್ನು ಆರಿಸಬೇಕಾಗಿತ್ತು ಮತ್ತು ಪೂರ್ಣಗೊಂಡ ನಮೂನೆಗಳನ್ನು ಬೇಡಿಕೆಗಳ ಪಟ್ಟಿಗೆ ಲಗತ್ತಿಸಿ ರಾಜ್ಯಪಾಲರಿಗೆ ಹಸ್ತಾಂತರಿಸಬೇಕಾಗಿತ್ತು. ಸಂಗುಮ್ನರ್ ತಾಲ್ಲೂಕಿನ ತನ್ನ ಶಿಂಡೋಡಿ ಗ್ರಾಮದ ಎಲ್ಲಾ ರೈತ ಮಹಿಳೆಯರು, ತಮ್ಮ ಅರ್ಜಿಗಳನ್ನು ಸರಿಯಾಗಿ ಭರ್ತಿ ಮಾಡಿರುವುದನ್ನು ಮಥುರಾಬಾಯಿ ಖಚಿತಪಡಿಸಿಕೊಳ್ಳುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ವಿವರಗಳನ್ನು ಸರಿಯಾಗಿ ತುಂಬಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ರೈತರ ಕೈಬರಹದಲ್ಲಿರುವ ಪಟ್ಟಿಯನ್ನು ಪರಿಶೀಲಿಸುತ್ತಿದ್ದರು.
ಮರಳಿ ಅವರ ಊರಿನ ವಿಷಯಕ್ಕೆ ಬರುವುದಾದರೆ, ಮಥುರಾಬಾಯಿ 7.5 ಎಕರೆ ಭೂಮಿಯಲ್ಲಿ ಬೇಸಾಯ ಮಾಡುತ್ತಾರೆ. ಖಾಸಗಿ ವ್ಯಾಪಾರಿಗಳೊಂದಿಗಿನ ಅವರ ಇತ್ತೀಚಿನ ವ್ಯಾಪಾರದ ಅನುಭವವು ಹೊಸ ಕಾನೂನುಗಳ ವಿರುದ್ಧದ ಅವರ ಪ್ರತಿಭಟನೆಗೆ ಇನ್ನಷ್ಟು ಪುಷ್ಟಿ ನೀಡಿದೆ. 2020-2021ರಲ್ಲಿ ಒಂದು ಕ್ವಿಂಟಾಲ್ ರೂ. 1925 ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲಾಗಿತ್ತು. ಆದರೆ ವ್ಯಾಪಾರಿಯು ಅವರಿಂದ ಗೋದಿಯನ್ನು ಕೇವಲ 900 ರೂಪಾಯಿಗಳಿಗೆ ಖರೀದಿಸಿದ್ದಾನೆ. "ಅವರು ಅದೇ ಗೋಧಿಯನ್ನು ಮಾರುಕಟ್ಟೆಯಲ್ಲಿ ನಮಗೆ ಮೂರು ಪಟ್ಟು ಬೆಲೆಗೆ ಮಾರುತ್ತಾರೆ. ಅದನ್ನು ನಾವೇ ಬೆಳೆಯುತ್ತೇವೆ ನಾವು ಬೆಳೆದ ಬೆಳೆಗೆ ಮೂರು ಪಟ್ಟು ಬೆಲೆ ನೀಡಿ ಖರೀದಿಸುವಂತೆ ಮಾಡುತ್ತಾರೆ" ಎಂದು ಮಥುರಾಬಾಯಿ ಹೇಳಿದರು.
ಮುಂಬೈ ಪೊಲೀಸರು ಇದಕ್ಕೆ ಅವಕಾಶ ನೀಡದ ಕಾರಣ ರಾಜ ಭವನದವರೆಗಿನ ಮೆರವಣಿಗೆಯನ್ನು ಜನವರಿ 25ರಂದು ರೈತರು ರದ್ದುಗೊಳಿಸಿದರು. ರಾಜ್ಯಪಾಲರನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದು ಕೋಪಗೊಂಡ ಮಥುರಾಬಾಯಿ, “ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ. ರಾಜ್ಯಪಾಲರು ಮತ್ತು ಪ್ರಧಾನಿ ಸೇರಿದಂತೆ ಎಲ್ಲರಿಗೂ ಆಹಾರಕ್ಕಾಗಿ ಬೆಳೆಗಳನ್ನು ಬೆಳೆಯುವುದು ನಾವೇ” ಎಂದರು.
ಅನುವಾದ - ಶಂಕರ ಎನ್. ಕೆಂಚನೂರು