ಪ್ರತಿ ತಿಂಗಳೂ ಮೂರುದಿನಗಳ ಕಾಲ ಗಾಯತ್ರಿ ಕಚ್ಚರಬಿಯವರನ್ನು ಹೊಟ್ಟೆನೋವು ಬಿಡದಂತೆ ಕಾಡುತ್ತದೆ. ಈ ಮೂರು ದಿನಗಳ ನೋವು ಅವರ ಮುಟ್ಟಿನ ಸಂಕೇತವಾಗಿದೆ. ಅವರಿಗೆ ಮುಟ್ಟಾಗುವುದು ನಿಂತು ವರ್ಷಕ್ಕೂ ಹೆಚ್ಚು ಕಾಲವಾಗಿದೆ.
“ಒಂದು ವರ್ಷದ ಮೇಲೆ ಅಯ್ತ್ರಿ… ತಿಂಗ್ಳ ತಿಂಗ್ಳ ಹೊಟ್ಟೆ ಕೊರಿತಾ, ಸೊಂಟ ನೋವು….ಹಂಗೆ ಗೊತ್ತಾಗ್ತಾದ್ರಿ… ಡೇಟ್ ಅಂತ… ಆದ್ರೂ ಮುಟ್ಟಾಗೋದಿಲ್ಲ… ನಮ್ಗು ಮಕ್ಳಾದಾಗ ನೋವಾಗುತ್ತಲ್ರಿ ಹಂಗ್ ನೋಯ್ತೈತ್ರಿ…” ಎನ್ನುತ್ತಾರೆ ಗಾಯತ್ರಿ. “ಬಹುಶಃ ಮೂರು ಮಕ್ಕಳಿಗೆ ಜನ್ಮ ನೀಡಿದ ಕಾರಣ ನನ್ನ ಮೈಯಲ್ಲಿ ರಕ್ತವಿಲ್ಲದಿರುವುದು ಈ ಸಮಸ್ಯೆಗೆ ಕಾರಣವಿರಬಹುದು,” ಎನ್ನುತ್ತಾರೆ ಈ 28 ವರ್ಷದ ಮಹಿಳೆ. ಅಮೆನೊರಿಯಾ (ಋತುಸ್ರಾವದ ಕೊರತೆ) ಎನ್ನುವ ಮಾಸಿಕ ಋತುಚಕ್ರದ ಅನುಪಸ್ಥಿತಿಯು ಮಾಸಿಕ ಹೊಟ್ಟೆನೋವು ಮತ್ತು ಬೆನ್ನುನೋವನ್ನು ಕೂಡಾ ತರುತ್ತಿದೆ. ಹೆರಿಗೆಯ ನೋವಿನಂತೆ ಕಾಡುವ ಇದು ಬಹಳ ನೋವು ನೀಡುತ್ತದೆ ಎನ್ನುವ ಗಾಯತ್ರಿ, “ಮಕ್ಕೊಂಡ್ರೂ ಏಳಕ್ಕಾಗಲ್ರಿ ಅಷ್ಟು ತ್ರಾಸ್ ಆಗ್ತೈತಿ…” ಎನ್ನುತ್ತಾರೆ.
ಗಾಯತ್ರಿ ಎತ್ತರಕ್ಕೆ ತೆಳ್ಳಗಿನ ದೇಹಪ್ರಕೃತಿ ಹೊಂದಿರುವ ಪಟಪಟನೆ ಮಾತನಾಡುವ ಮಹಿಳೆ. ಅವರು ಓರ್ವ ಕೃಷಿ ಕೂಲಿಯಾಗಿದ್ದು, ಅಸುಂಡಿ ಗ್ರಾಮದ ಹೊರ ಅಂಚಿನ ಮಾದಿಗರ ಕೇರಿ ನಿವಾಸಿಯಾಗಿದ್ದು, ಅವರೂ ಕೂಡಾ ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಊರು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿದೆ. ಅವರೊಬ್ಬ ಪಳಗಿದ ಕೃತಕ ಪರಾಗಸ್ಪರ್ಶ (ಹ್ಯಾಂಡ್ ಪಾಲಿನೇಷನ್) ಕೆಲಸಗಾರ್ತಿಯೂ ಹೌದು.
ಸುಮಾರು ಒಂದು ವರ್ಷದ ಹಿಂದೆ ಮೂತ್ರವಿಸರ್ಜಿಸುವಾಗ ನೋವಿನ ಅನುಭವವಾದ ಕಾರಣ, ಅವರು ವೈದ್ಯಕೀಯ ನೆರವು ಬಯಸಿ ತಮ್ಮ ಊರಿನಿಂದ ಸುಮಾರು 10 ದೂರದಲ್ಲಿರುವ ಬ್ಯಾಡಗಿಯ ಖಾಸಗಿ ಕ್ಲಿನಿಕ್ ಒಂದಕ್ಕೆ ಹೋದರು.
“ಸರ್ಕಾರಿ ಆಸ್ಪತ್ರೆಗಳಲ್ಲಿ ನಮ್ಮನ್ನು ಸರಿಯಾಗಿ ಗಮನಿಸುವುದಿಲ್ಲ,” ಎನ್ನುತ್ತಾರಾಕೆ. “ಅಲ್ಲಿಗೆ ಹೋಗಿಲ್ರೀ… ಅವು ಕಾರ್ಡ್ ಮಾಡಿಸಿಲ್ರಿ. ಆಸ್ಪತ್ರಿಗೆ ಫ್ರೀ ಮಾಡಸ್ತಾರಲ್ರಿ… ಆ ಕಾರ್ಡ್ ರೀ… ಪ್ರೈವೇಟ್ ಆಸ್ಪತ್ರಿಗೆ ತೋರಿಸ್ಕೊತಿವಿ.” ಎಂದು ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವಿಮಾ ಕಾರ್ಯಕ್ರಮವಾದ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ. ಈ ಯೋಜನೆಯಡಿ ದ್ವಿತೀಯ ಮತ್ತು ತೃತೀಯ ಹಂತದ ಆರೈಕೆ ಆಸ್ಪತ್ರೆಗೆ ದಾಖಲಾಗಲು ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ 5 ಲಕ್ಷ ರೂ.ಗಳ ವೈದ್ಯಕೀಯ ರಕ್ಷಣೆಯನ್ನು ಒದಗಿಸುತ್ತದೆ.
ಖಾಸಗಿ ಕ್ಲಿನಿಕ್ಕಿನಲ್ಲಿ, ವೈದ್ಯರು ರಕ್ತ ಪರೀಕ್ಷೆ ಮತ್ತು ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಲು ಸಲಹೆ ನೀಡಿದರು.
ಒಂದು ವರ್ಷದ ನಂತರವೂ, ಗಾಯತ್ರಿ ರೋಗನಿರ್ಣಯ ಪರೀಕ್ಷೆಗಳಿಗೆ ಒಳಗಾಗಿಲ್ಲ. ಕನಿಷ್ಠ 2,000 ರೂ.ಗಳಷ್ಟಿದ್ದ ವೆಚ್ಚವು ಅವರ ಪಾಲಿಗೆ ವಿಪರೀತವಾಗಿ ಕಾಣುತ್ತಿತ್ತು. "ಹಂಗಾಗಿ ಪ್ರೈವೇಟ್ ಹಾಸ್ಪಿಟಲ್‌ಗೆ ಹೋಗ್ತೀವ್ರೀ. ಅವ್ರು ರಕ್ತ ಚೆಕ್ ಮಾಡ್ಸಿ, ಸ್ಕ್ಯಾನಿಂಗ್ ಮಾಡ್ಸಿ ಅಂತ ಬರ್ಕೊಡ್ತಾರ್ರೀ… ಚೀಟಿ ಇಲ್ಲೇ ಅದಾವು ನಾವು ಮಾಡ್ಸೇ ಇಲ್ರೀ… ನಾನ್ ಮಾಡ್ಸಿಲ್ಲ ಮತ್ತೆ ಹೋದ್ರೆ ಏನಾದರೂ ಅಂತಾರೇನೊ ಅಂತ ನಾನು ಅಲ್ಲಿಗೆ ಹೋಗಿಲ್ರೀ," ಎಂದು ಅವರು ಹೇಳುತ್ತಾರೆ.
ಆಸ್ಪತ್ರೆಗೆ ಹೋಗುವುದರ ಬದಲಾಗಿ ಅವರು ನೋವಿಗೆ ಮೆಡಿಕಲ್ ಸ್ಟೋರ್‌ನಿಂದ ಮಾತ್ರೆಗಳನ್ನು ತಂದು ನುಂಗಲಾರಂಭಿಸಿದರು. ಇದು ಅವರಿಗೆ ಲಭ್ಯವಿದ್ದ ಅತ್ಯಂತ ಕಡಿಮೆ ಬೆಲೆಯ ಪರಿಹಾರವಾಗಿತ್ತು. “ಎಂತಾ ಗುಳಿಗೆ ಅದಾವೋ ಗೊತ್ತಿಲ್ಲ,” ಎನ್ನುತ್ತಾರೆ. “ಸುಮ್ನೆ ಹೊಟ್ನೋವು ಅಂದ್ರೆ ಗುಳಿಗೆ ಕೊಡ್ತಾರೀ... ಅಂಗಡಿಯಾಗ…”
ಪ್ರಸ್ತುತ ಅಸುಂಡಿಯಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರಿ ವೈದ್ಯಕೀಯ ಸೇವೆಗಳು 3,808 ಜನಸಂಖ್ಯೆಗೆ ಅಸಮರ್ಪಕವಾಗಿವೆ. ಗ್ರಾಮದ ಯಾವುದೇ ವೈದ್ಯರು ಎಂಬಿಬಿಎಸ್ ಪದವಿಯನ್ನು ಹೊಂದಿಲ್ಲ, ಮತ್ತು ಅಲ್ಲಿ ಯಾವುದೇ ಖಾಸಗಿ ಆಸ್ಪತ್ರೆ ಅಥವಾ ನರ್ಸಿಂಗ್ ಹೋಂ ಇಲ್ಲ.
ಗ್ರಾಮದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ರಾಣಿಬೆನ್ನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಕೇವಲ ಒಬ್ಬ ಪ್ರಸೂತಿ-ಸ್ತ್ರೀರೋಗ ತಜ್ಞ (ಒಬಿಜಿ) ತಜ್ಞರನ್ನು ಹೊಂದಿದೆ, ಆದರೆ ಎರಡು ಹುದ್ದೆಗಳು ಮಂಜೂರಾಗಿವೆ. ಅಸುಂಡಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಹಿರೇಕೆರೂರಿನಲ್ಲಿ ಮತ್ತೊಂದು ಸರ್ಕಾರಿ ಆಸ್ಪತ್ರೆಯಿದೆ. ಮಂಜೂರಾದ ಒಂದು ಹುದ್ದೆಯನ್ನು ಹೊಂದಿದ್ದರೂ ಈ ಆಸ್ಪತ್ರೆಯಲ್ಲಿ ಒಬಿಜಿ ತಜ್ಞರಿಲ್ಲ. ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಒಬಿಜಿ ತಜ್ಞರಿದ್ದಾರೆ – ಆರು ಮಂದಿ. ಇಲ್ಲಿ ಸಾಮಾನ್ಯ ವೈದ್ಯಾಧಿಕಾರಿಗಳ ಎಲ್ಲಾ 20 ಹುದ್ದೆಗಳು ಮತ್ತು ನರ್ಸಿಂಗ್ ಅಧೀಕ್ಷಕರ ಆರು ಹುದ್ದೆಗಳು ಖಾಲಿಯಿವೆ.
ಇಲ್ಲಿಯವರೆಗೆ, ಗಾಯತ್ರಿಗೆ ತನ್ನ ಋತುಚಕ್ರವು ಏಕೆ ನಿಂತಿತು ಅಥವಾ ಪದೇ ಪದೇ ಹೊಟ್ಟೆ ನೋವಿನಿಂದ ಏಕೆ ಬಳಲುತ್ತಾರೆನ್ನುವುದು ತಿಳಿದಿಲ್ಲ. "ಮೈಯೆಲ್ಲ ಭಾರವೆನ್ನಿಸುತ್ತದೆ," ಎಂದು ಅವರು ಹೇಳುತ್ತಾರೆ. "ಒಂದಾ ಕುರ್ಚಿಯಾಗಿನಿಂದ ಬಿದ್ದು ಇಲ್ಲಿ ನೋವೈತಿ ಆ ನೋವು ಅಂತಾನೂ ಗೊತ್ತಿಲ್ಲ, ಹರಳ್ ನೋವಾ… ಈ ಡೇಟ್ ಆಗ್ದಿದ್ದು ಒಂದು ನೋವು. ಈ ಮೂರು… ಒಂದೂ ಗೊತ್ತಾಗವಲ್ಲದು… ಎದರಿಂದ ನೋವಾಗತೈತಿ… ಎದರಿಂದ ತ್ರಾಸಾಗತೈತಿ ಅಂತ."
ಗಾಯತ್ರಿ ಹಿರೇಕೆರೂರು ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮದಲ್ಲಿ ಬೆಳೆದರು, ಅಲ್ಲಿ ಅವರು ಐದನೇ ತರಗತಿಯ ನಂತರ ಶಾಲೆಯಿಂದ ಹೊರಗುಳಿದರು. ನಂತರ ಕೃತಕ ಪರಾಗಸ್ಪರ್ಶದ ಕೆಲಸವನ್ನು ಆಯ್ದುಕೊಂಡರು, ಇದು ಪ್ರತಿ ಆರು ತಿಂಗಳಿಗೊಮ್ಮೆ ಕನಿಷ್ಠ 15 ಅಥವಾ 20 ದಿನಗಳವರೆಗೆ ಖಚಿತ ಪಾವತಿ ಮತ್ತು ಸ್ಥಿರವಾದ ಕೆಲಸವನ್ನು ತರುತ್ತದೆ. "ಕ್ರಾಸಿಂಗ್ [ಕೃತಕ ಪರಾಗಸ್ಪರ್ಶ] ಕೆಲಸಕ್ಕೆ ಸಿಗುವ ಕೂಲಿ 250 ರೂಪಾಯಿಗಳು" ಎಂದು ಅವರು ಹೇಳುತ್ತಾರೆ.
16ನೇ ವಯಸ್ಸಿನಲ್ಲಿ ಮದುವೆಯಾದ ಅವರು ಮಾಡುವ ಕೃಷಿ ಕೂಲಿ ಕೆಲಸವು ಯಾವಾಗಲೂ ಅನಿಶ್ಚಿತವಾಗಿರುತ್ತದೆ. ಹತ್ತಿರದ ಹಳ್ಳಿಗಳಲ್ಲಿರುವ ಭೂಮಾಲೀಕ ಸಮುದಾಯಗಳಿಗೆ, ವಿಶೇಷವಾಗಿ ಲಿಂಗಾಯತ ಸಮುದಾಯಕ್ಕೆ ಜೋಳ, ಬೆಳ್ಳುಳ್ಳಿ ಅಥವಾ ಹತ್ತಿಯನ್ನು ಕಟಾವು ಮಾಡಲು ಕಾರ್ಮಿಕರ ಅಗತ್ಯವಿದ್ದಾಗ ಮಾತ್ರ ಕೆಲಸ ದೊರೆಯುತ್ತದೆ. "ನಮ್ಮ ಕೂಲಿ ದಿನಕ್ಕೆ 200 ರೂಪಾಯಿಗಳು" ಎಂದು ಅವರು ಹೇಳುತ್ತಾರೆ. ಮೂರು ತಿಂಗಳ ಅವಧಿಯಲ್ಲಿ, ಅವರು 30 ಅಥವಾ 36 ದಿನಗಳವರೆಗೆ ಕೃಷಿ ಕೆಲಸವನ್ನು ಪಡೆಯುತ್ತಾರೆ. "ಭೂಮಾಲೀಕರು ನಮ್ಮನ್ನು ಕರೆದರೆ, ನಮಗೆ ಕೆಲಸವಿದೆ. ಇಲ್ಲವಾದರೆ ಇಲ್ಲ."
ಕೃಷಿ ಕೂಲಿ ಮತ್ತು ಕೃತಕ ಪರಾಗಸ್ಪರ್ಶದ ಕೆಲಸ ಮಾಡುವ ಅವರು ತಿಂಗಳಿಗೆ 2,400-3,750 ರೂ.ಗಳನ್ನು ಗಳಿಸುತ್ತಾರೆ, ಇದು ಅವರ ವೈದ್ಯಕೀಯ ಆರೈಕೆಯ ಅಗತ್ಯಗಳಿಗೆ ಸಾಕಾಗುವುದಿಲ್ಲ. ನಿಯಮಿತ ಕೆಲಸವು ಇಲ್ಲದಿರುವಾಗ, ಬೇಸಿಗೆಯಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚು ತೀವ್ರವಾಗಿರುತ್ತದೆ.
ಕೃಷಿ ಕಾರ್ಮಿಕರಾಗಿರುವ ಅವರ ಪತಿ ಮದ್ಯದ ವ್ಯಸನಿಯಾಗಿದ್ದಾರೆ ಮತ್ತು ಮನೆಯ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುವುದಿಲ್ಲ. ಅಲ್ಲದೆ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಕಳೆದ ವರ್ಷ, ಟೈಫಾಯಿಡ್ ಮತ್ತು ಆಯಾಸದಿಂದಾಗಿ ಅವರು ಆರು ತಿಂಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಸಾಧ್ಯವಾಗಲಿಲ್ಲ. 2022ರ ಬೇಸಿಗೆಯಲ್ಲಿ, ಅವರು ಅಪಘಾತಕ್ಕೆ ಒಳಗಾದರು ಮತ್ತು ಅದರಿಂದಾಗಿ ಒಂದು ತೋಳು ಮುರಿಯಿತು. ಗಾಯತ್ರಿ ಪತಿಯನ್ನು ನೋಡಿಕೊಳ್ಳಲು ಮೂರು ತಿಂಗಳ ಕಾಲ ಮನೆಯಲ್ಲಿಯೇ ಇದ್ದರು. ಅವರ ವೈದ್ಯಕೀಯ ವೆಚ್ಚವು ಸುಮಾರು 20,000 ರೂ.ಗಳಷ್ಟಿತ್ತು.
ಖಾಸಗಿ ಲೇವಾದೇವಿದಾರರಿಂದ ಶೇಕಡಾ 10ರ ಬಡ್ಡಿದರದಲ್ಲಿ ಹಣವನ್ನು ಸಾಲವಾಗಿ ಪಡೆದಿದ್ದ ಗಾಯತ್ರಿ, ನಂತರ ಆ ಬಡ್ಡಿಯನ್ನು ಪಾವತಿಸಲು ಮತ್ತೆ ಸಾಲ ಮಾಡಿದರು. ಅವರು ಮೂರು ಬೇರೆ ಬೇರೆ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸುಮಾರು 1 ಲಕ್ಷ ರೂ.ಗಳ ಇತರ ಮೂರು ಬಾಕಿ ಸಾಲಗಳನ್ನು ಹೊಂದಿದ್ದಾರೆ. ಪ್ರತಿ ತಿಂಗಳು, ಅವರು ಈ ಸಾಲಗಳಿಗಾಗಿ 10,000 ರೂ.ಗಳನ್ನು ಪಾವತಿಸುತ್ತಾರೆ…
“ಕೂಲಿ ಮಾಡಿದ್ರಾಗೆ ಜೀವನ ಆಗೊಲ್ರಿ ಮತ್ತೆ,” ಎಂದು ಒತ್ತಿ ಹೇಳುತ್ತಾರವರು. “ಆರಾಮ್ ಇಲ್ದಾಗ ಸಾಲ ಈಸ್ಕೊಂಡು ಸಂಘ ತಿಕ್ಕೊಂಡು (ಮೈಕ್ರೋ ಫೈನಾನ್ಸ್) ಇದಾ ಒಂದು ಸಮಸ್ಯೆ. ಒಂದ್ ಪಕ್ಷ ನಾವ್ ಉಣ್ಣಾಕೆ ಇಲ್ದಿದ್ರೆ… ನಾವ್ ವಾರ ಸಂತೆ ಮಾಡಲ್ರೀ… ಒಟ್ಟು ಸಂಘ ಮಾತ್ರ ತಪ್ಸಲ್ಲ… ವಾರ… ವಾರ… ಬರೀ ಸಂಘಕ್ಕ ಕಟ್ಟೋದು, ಕಟ್ಲೇಬೇಕು… ಇದ್ದಾಗಷ್ಟೇ ಸಂತೆ ನಮ್ದು.”
ಗಾಯತ್ರಿಯವರ ದೈನಂದಿನ ಆಹಾರವು ಬಹುತೇಕ ಬೇಳೆಕಾಳುಗಳು ಅಥವಾ ತರಕಾರಿಗಳಿಂದ ವಂಚಿತವಾಗಿದೆ. ಹಣವೇ ಇಲ್ಲದಿದ್ದಾಗ, ಅವರು ನೆರೆಹೊರೆಯವರಿಂದ ಟೊಮೆಟೊ ಮತ್ತು ಮೆಣಸಿನಕಾಯಿಗಳನ್ನು ಎರವಲು ಪಡೆದು ಸಾರು ಮಾಡುತ್ತಾರೆ.
ಇದು "ಹಸಿದುಳಿಯುವಂತೆ ಮಾಡುವ ಆಹಾರ ಪದ್ಧತಿ (starvation diet)", ಎಂದು ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಶೈಬಿಯಾ ಸಲ್ಡಾನ್ಹಾ ಹೇಳುತ್ತಾರೆ, "ಉತ್ತರ ಕರ್ನಾಟಕದ ಹೆಚ್ಚಿನ ಮಹಿಳಾ ಕೃಷಿ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ. ಅವರು ಅನ್ನ ಮತ್ತು ತೆಳುವಾದ ಬೇಳೆ ಸಾರು ತಿನ್ನುತ್ತಾರೆ, ಇದು ಹೆಚ್ಚು ನೀರು ಮತ್ತು ಮೆಣಸಿನ ಪುಡಿಯನ್ನು ಹೊಂದಿರುತ್ತದೆ. ದೀರ್ಘಕಾಲದ ಇಂತಹ ಆಹಾರ ಪದ್ಧತಿ ದೀರ್ಘಕಾಲದ ರಕ್ತಹೀನತೆಗೆ ಕಾರಣವಾಗುತ್ತದೆ, ಇದು ಅವರನ್ನು ಬಳಲುವಂತೆ ಮಾಡುತ್ತದೆ", ಎಂದು ಹದಿಹರೆಯದ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುವ ಎನ್ಫೋಲ್ಡ್ ಇಂಡಿಯಾದ ಸಹ-ಸಂಸ್ಥಾಪಕರಾದ ಡಾ. ಸಲ್ಡಾನ್ಹಾ ಹೇಳುತ್ತಾರೆ. ಇವರು ಈ ಪ್ರದೇಶದಲ್ಲಿ ಅನಗತ್ಯ ಹಿಸ್ಟೆರೆಕ್ಟಮಿಗಳನ್ನು ಪರಿಶೀಲಿಸಲು ಕರ್ನಾಟಕ ರಾಜ್ಯ ಮಹಿಳಾ ಆಯೋಗವು 2015ರಲ್ಲಿ ರಚಿಸಿದ ಸಮಿತಿಯಲ್ಲಿದ್ದರು.
ತಲೆತಿರುಗುವಿಕೆ, ತೋಳುಗಳು ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ, ಬೆನ್ನು ನೋವು ಮತ್ತು ಆಯಾಸದ ಬಗ್ಗೆ ಗಾಯತ್ರಿ ದೂರುತ್ತಾರೆ. ಈ ರೋಗಲಕ್ಷಣಗಳು ದೀರ್ಘಕಾಲದ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಸೂಚಿಸುತ್ತವೆ ಎಂದು ಡಾ. ಸಲ್ಡಾನ್ಹಾ ಹೇಳುತ್ತಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( ಎನ್ಎಫ್ಎಚ್ಎಸ್-5 ) ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ, ಕರ್ನಾಟಕದಲ್ಲಿ, ರಕ್ತಹೀನತೆಯಿಂದ ಬಳಲುತ್ತಿರುವ 15-49 ವರ್ಷ ವಯಸ್ಸಿನ ಮಹಿಳೆಯರ ಶೇಕಡಾವಾರು ಪ್ರಮಾಣವು 2015-16ರಲ್ಲಿನ 46.2ರಿಂದ 2019-20ರಲ್ಲಿ ಶೇಕಡಾ 50.3ಕ್ಕೆ ಏರಿದೆ. ಹಾವೇರಿ ಜಿಲ್ಲೆಯಲ್ಲಿ, ಈ ವಯೋಮಾನದ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ರಕ್ತಹೀನತೆ ಹೊಂದಿರುವುದು ಕಂಡುಬಂದಿದೆ.
ಗಾಯತ್ರಿಯವರ ದುರ್ಬಲ ಆರೋಗ್ಯವು ಅವರ ಸಂಬಳದ ಮೇಲೂ ಪರಿಣಾಮ ಬೀರುತ್ತದೆ. "ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಒಂದು ದಿನ ಕೆಲಸಕ್ಕೆ ಹೋದರೆ, ಮರುದಿನ ಹೋಗುವುದಿಲ್ಲ" ಎಂದು ನಿಟ್ಟುಸಿರಿಡುತ್ತಾ ಹೇಳುತ್ತಾರೆ.
25 ವರ್ಷದ ಮಂಜುಳಾ ಮಹಾದೇವಪ್ಪ ಕಚ್ಚರಬಿ ಕೂಡ ನೋವಿನಲ್ಲಿದ್ದಾರೆ. ಅವರು ತನ್ನ ಋತುಚಕ್ರದ ಸಮಯದಲ್ಲಿ ತೀವ್ರವಾದ ಹೊಟ್ಟೆಯ ನೋವಿನಿಂದ ಬಳಲುತ್ತಾರೆ, ಮತ್ತು ಕಿಬ್ಬೊಟ್ಟೆ ನೋವು ಮತ್ತು ನಂತರದ ಯೋನಿ ಸ್ರಾವದಿಂದ ಬಳಲುತ್ತಾರೆ.
"ಋತುಸ್ರಾವದ ಐದು ದಿನಗಳು ಅತ್ಯಂತ ನೋವಿನಿಂದ ಕೂಡಿರುತ್ತವೆ" ಎಂದು ದಿನಕ್ಕೆ 200 ರೂ.ಗಳಿಗೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವ ಮಂಜುಳಾ ಹೇಳುತ್ತಾರೆ. "ಭಾಳ ತೊಂದ್ರೆ ಆಗ್ತೈತ್ರೀ 2 ದಿನ 3 ದಿನ ಮಟ್ಟ ಮಕ್ಕೊತೇನ್ರಿ. ಮತ್ತೆ ನಡಿಯಂಗಿಲ್ರಿ. ಭಾಳಾ ತ್ರಾಸ್ ಆಗ್ತೈತ್ರಿ. ಹೊಟ್ಟೆ ನೋವು ಬರ್ತೈತ್ರಿ. ಸುಮ್ನೆ ಮಕ್ಕೊಂಬಿಡ್ತಿನ್ರೀ. ಊಟ ಮಾಡಲ್ಲ ಏನಿಲ್ಲ ಸುಮ್ನೆ ಮಕ್ಕೊತೀನ್ರೀ. ಡೇಟ್ ಆದಾಗ ಹೋಗಲ್ರೀ… ಕೆಲಸಕ್ಕ."
ನೋವಿನ ಹೊರತಾಗಿ, ಗಾಯತ್ರಿ ಮತ್ತು ಮಂಜುಳಾ ಸಾಮಾನ್ಯವಾದ ಮತ್ತೊಂದು ಸಮಸ್ಯೆಯನ್ನು ಹಂಚಿಕೊಳ್ಳುತ್ತಾರೆ: ಸುರಕ್ಷಿತ ಮತ್ತು ನೈರ್ಮಲ್ಯವಿರುವ ಶೌಚಾಲಯದ ಕೊರತೆ.
12 ವರ್ಷಗಳ ಹಿಂದೆ ಮದುವೆಯಾದ ನಂತರ ಗಾಯತ್ರಿ ಅಸುಂಡಿಯ ದಲಿತ ಕಾಲೋನಿಯಲ್ಲಿ 7.5 x 10 ಅಡಿಯ ಕಿಟಕಿಯಿಲ್ಲದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆಯು ಟೆನ್ನಿಸ್ ಅಂಕಣದ ಪ್ರದೇಶದ ಕಾಲುಭಾಗಕ್ಕಿಂತ ಸ್ವಲ್ಪ ದೊಡ್ಡದು. ಅಲ್ಲಿನ ಎರಡು ಗೋಡೆಗಳು ಅದನ್ನು ಅಡುಗೆಮನೆ, ವಾಸಿಸುವ ಮತ್ತು ಸ್ನಾನ ಮಾಡುವ ಪ್ರದೇಶಗಳಾಗಿ ವಿಭಜಿಸುತ್ತವೆ. ಶೌಚಾಲಯಕ್ಕೆ ಸ್ಥಳಾವಕಾಶವಿಲ್ಲ.
ಮಂಜುಳಾ ತನ್ನ ಪತಿ ಮತ್ತು ಇತರ 18 ಕುಟುಂಬ ಸದಸ್ಯರೊಂದಿಗೆ ಅದೇ ಕಾಲೋನಿಯ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಣ್ಣಿನ ಗೋಡೆಗಳು ಮತ್ತು ಹಳೆಯ ಸೀರೆಗಳಿಂದ ತಯಾರಿಸಿದ ಪರದೆಗಳು ಕೋಣೆಗಳನ್ನು ಆರು ವಿಭಾಗಗಳಾಗಿ ವಿಂಗಡಿಸುತ್ತವೆ. "ಏನುಕ್ಕು ಇಂಬಿಲ್ರೀ [ಯಾವುದಕ್ಕೂ ಜಾಗವಿಲ್ಲ]" ಎಂದು ಅವರು ಹೇಳುತ್ತಾರೆ. "ಮನ್ಯಾಗಿನ ಎಲ್ರೂ ಒಟ್ಟುಗೂಡಿದ್ರಂದ್ರ ಏನ್ ಕುಂದ್ರಾಕ್ ಜಾಗ ಇರಂಗಿಲ್ರಿ. ಹಬ್ಬ ಹುಣ್ಣಿಮಿ ಬಂತಪ್ಪ ಅಂದ್ರೆ, ನಮ್ಮ ಬೀಗರೆಲ್ಲ ಸೇರಿದ್ವಪ್ಪ ಅಂದ್ರೆ ನಾವ್ ಗುಡೀಗ್ ಹೋಗ್ತೀವಿ." ಅಂತಹ ದಿನಗಳಲ್ಲಿ ಮಲಗಲು ಪುರುಷರನ್ನು ಸಮುದಾಯ ಭವನಕ್ಕೆ ಕಳುಹಿಸಲಾಗುತ್ತದೆ.
ಅವರ ಮನೆಯ ಹೊರಗಿನ ಸಣ್ಣ ಸ್ನಾನದ ಪ್ರದೇಶದ ಪ್ರವೇಶದ್ವಾರವನ್ನು ಸೀರೆಯಿಂದ ಮುಚ್ಚಲಾಗಿದೆ. ಮಂಜುಳಾರ ಮನೆಯ ಮಹಿಳೆಯರು ಈ ಜಾಗವನ್ನು ಮೂತ್ರವಿಸರ್ಜನೆಗೆ ಬಳಸುತ್ತಾರೆ, ಆದರೆ ಮನೆಯಲ್ಲಿ ಸಾಕಷ್ಟು ಜನರಿದ್ದರೆ ಹಾಗೆ ಮಾಡಲು ಸಾಧ್ಯವಿರುವುದಿಲ್ಲ. ಇತ್ತೀಚೆಗೆ, ಇಲ್ಲಿಂದ ಕೆಟ್ಟ ವಾಸನೆ ಹೊರಹೊಮ್ಮಲು ಪ್ರಾರಂಭಿಸಿದೆ. ಕಾಲೋನಿಯ ಕಿರಿದಾದ ಓಣಿಗಳನ್ನು ಕೊಳವೆಗಳನ್ನು ಹಾಕಲು ಅಗೆದಾಗ, ಇಲ್ಲಿ ನೀರು ನಿಂತು ಗೋಡೆಗಳ ಮೇಲೆ ಶಿಲೀಂಧ್ರ ಬೆಳೆಯಿತು. ಇಲ್ಲಿಯೇ ಮಂಜುಳಾ ಋತುಚಕ್ರದ ಸಮಯದಲ್ಲಿ ತನ್ನ ಸ್ಯಾನಿಟರಿ ಪ್ಯಾಡುಗಳನ್ನು ಬದಲಾಯಿಸುತ್ತಾರೆ. "ನಾನು ದಿನಕ್ಕೆ ಎರಡು ಬಾರಿ ಮಾತ್ರ ಪ್ಯಾಡುಗಳನ್ನು ಬದಲಾಯಿಸುತ್ತೇನೆ - ಬೆಳಿಗ್ಗೆ ಕೆಲಸಕ್ಕೆ ಹೋಗುವ ಮೊದಲು ಒಮ್ಮೆ, ಮತ್ತು ಸಂಜೆ ಮನೆಗೆ ಬಂದ ನಂತರ." ಅವರು ಕೆಲಸ ಮಾಡುವ ಹೊಲಗಳಲ್ಲಿ ಅವರು ಬಳಸಬಹುದಾದ ಯಾವುದೇ ರೀತಿಯ ಶೌಚಾಲಯಗಳಿಲ್ಲ.
ಎಲ್ಲ ಪ್ರತ್ಯೇಕ ದಲಿತ ಕಾಲೋನಿಗಳಂತೆ ಅಸುಂಡಿಯ ಮಾದಿಗರ ಕೇರಿಯೂ ಸಹ ಗ್ರಾಮದ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿನ 67 ಮನೆಗಳಲ್ಲಿ ಸುಮಾರು 600 ಜನರು ವಾಸಿಸುತ್ತಿದ್ದಾರೆ, ಮತ್ತು ಅರ್ಧದಷ್ಟು ಮನೆಗಳಲ್ಲಿ ತಲಾ ಮೂರಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತವೆ.
60 ವರ್ಷಗಳ ಹಿಂದೆ ಅಸುಂಡಿಯ ಮಾದಿಗ ಸಮುದಾಯಕ್ಕೆ ಮಂಜೂರು ಮಾಡಿದ 1.5 ಎಕರೆ ಭೂಮಿಯಲ್ಲಿರುವ ಈ ಕಾಲೋನಿ ಜನಸಂಖ್ಯೆಯಲ್ಲಿ ಬೆಳೆಯುತ್ತಿದೆ. ಆದರೆ ಹೆಚ್ಚಿನ ವಸತಿಗಾಗಿ ಒತ್ತಾಯಿಸಿ ನಡೆಸಿದ ಹಲವಾರು ಪ್ರತಿಭಟನೆಗಳು ಈ ಜನರ ಕೂಗನ್ನು ಎಲ್ಲಿಗೂ ತಲುಪಿಸಿಲ್ಲ. ಯುವ ಪೀಳಿಗೆಗಳು ಮತ್ತು ಅವರ ಬೆಳೆಯುತ್ತಿರುವ ಕುಟುಂಬಗಳಿಗೆ ಸ್ಥಳಾವಕಾಶ ಕಲ್ಪಿಸಲು, ಇಲ್ಲಿನ ಜನರು ಲಭ್ಯವಿರುವ ಸ್ಥಳವನ್ನು ಗೋಡೆಗಳು ಅಥವಾ ಸೀರೆ-ಪರದೆಗಳೊಂದಿಗೆ ವಿಂಗಡಿಸಿದ್ದಾರೆ.
ಗಾಯತ್ರಿಯವರ ಮನೆ 22.5 x 30 ಅಡಿಗಳ ಒಂದು ದೊಡ್ಡ ಕೋಣೆಯಿಂದ ಮೂರು ಸಣ್ಣ ಮನೆಗಳಾಗಿದ್ದು ಕೂಡಾ ಹೀಗೆಯೇ. ಅವರು, ಅವರ ಪತಿ, ಅವರ ಇಬ್ಬರು ಗಂಡುಮಕ್ಕಳು ಮತ್ತು ಅವರ ಗಂಡನ ಹೆತ್ತವರು ಅವರಲ್ಲಿ ಒಂದನ್ನು ಆಕ್ರಮಿಸಿಕೊಂಡಿದ್ದಾರೆ. ಅವರ ಗಂಡನ ವಿಸ್ತೃತ ಕುಟುಂಬವು ಇತರ ಎರಡರಲ್ಲಿ ವಾಸಿಸುತ್ತದೆ. ಮನೆಯ ಮುಂದಿನ ಕಿರಿದಾದ ಮಾರ್ಗವು ಇಕ್ಕಟ್ಟಾದ ಮನೆಗೆ ಹೊಂದಿಕೊಳ್ಳಲಾಗದ ಕೆಲಸಗಳನ್ನು ಮಾಡಲು ಲಭ್ಯವಿರುವ ಏಕೈಕ ಸ್ಥಳವಾಗಿದೆ - ಬಟ್ಟೆಗಳನ್ನು ಒಗೆಯುವುದು, ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಮತ್ತು 7 ಮತ್ತು 10 ವರ್ಷ ವಯಸ್ಸಿನ ತನ್ನ ಇಬ್ಬರು ಗಂಡುಮಕ್ಕಳಿಗೆ ಸ್ನಾನ ಮಾಡಿಸುವುದ ಇದೇ ಸ್ಥಳದಲ್ಲಿ. ಅವರ ಮನೆ ತುಂಬಾ ಚಿಕ್ಕದಾಗಿರುವುದರಿಂದ, ಗಾಯತ್ರಿ ತನ್ನ 6 ವರ್ಷದ ಮಗಳನ್ನು ಚಿನ್ನಮುಳಗುಂದ ಗ್ರಾಮದಲ್ಲಿ ಮಗುವಿನ ಅಜ್ಜ-ಅಜ್ಜಿಯೊಂದಿಗೆ ವಾಸಿಸಲು ಕಳುಹಿಸಿದ್ದಾರೆ.
ಎನ್ಎಫ್ಎಚ್ಎಸ್ 2019-20ರ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಶೇಕಡಾ 74.6ರಷ್ಟು ಕುಟುಂಬಗಳು 'ಸುಧಾರಿತ ನೈರ್ಮಲ್ಯ ಸೌಲಭ್ಯ'ವನ್ನು ಬಳಸುತ್ತಿದ್ದರೆ, ಹಾವೇರಿ ಜಿಲ್ಲೆಯಲ್ಲಿ ಕೇವಲ 68.9 ಪ್ರತಿಶತದಷ್ಟು ಕುಟುಂಬಗಳು ಮಾತ್ರ 'ಸುಧಾರಿತ ನೈರ್ಮಲ್ಯ ಸೌಲಭ್ಯ'ವನ್ನು ಬಳಸುತ್ತವೆ. ಎನ್ಎಫ್ಎಚ್ಎಸ್ ಪ್ರಕಾರ, ಸುಧಾರಿತ ನೈರ್ಮಲ್ಯ ಸೌಲಭ್ಯವು "ಕೊಳವೆ ಒಳಚರಂಡಿ ವ್ಯವಸ್ಥೆಗೆ ಫ್ಲಶ್ ಮಾಡಬಹುದಾದ ಅಥವಾ ನೀರು ಸುರಿಯುವ (ಸೆಪ್ಟಿಕ್ ಟ್ಯಾಂಕ್ ಅಥವಾ ಪಿಟ್ ಲ್ಯಾಟ್ರಿನ್), ವಾತಾಯನ ಸುಧಾರಿತ ಪಿಟ್ ಶೌಚಾಲಯ, ಸ್ಲ್ಯಾಬ್ ಹೊಂದಿರುವ ಪಿಟ್ ಶೌಚಾಲಯ, ಅಥವಾ ಕಾಂಪೋಸ್ಟಿಂಗ್ ಟಾಯ್ಲೆಟ್ ಒಳಗೊಂಡಿದೆ." ಅಸುಂಡಿಯ ಮಾದಿಗರ ಕೇರಿಯಲ್ಲಿ ಅಂತಹ ಯಾವುದೇ ಸೌಲಭ್ಯವಿಲ್ಲ. "ಹೊಲದಾಗ ಹೋಗ್ಬೆಕ್ರಿ," ಎಂದು ಗಾಯತ್ರಿ ಹೇಳುತ್ತಾರೆ. "ಎಲ್ಲಾ ಅವ್ರವ್ರ ಜಾಗಕ್ಕೆ ತಂತಿ ಬೇಲಿ ಗೇಟ್ ಎಲ್ಲ ಹಾಕಂಡ್ ಅದಾರ್ರೀ… ಅವರ ಹತ್ರ ಬೈಸ್ಕೊಂಡ್ ಬರ್ಬೇಕ್ರಿ," ಎಂದು ಅವರು ಹೇಳುತ್ತಾರೆ. ಆದ್ದರಿಂದ ಕಾಲೋನಿಯ ನಿವಾಸಿಗಳು ಮುಂಜಾನೆಗೂ ಮೊದಲು ಬೇಗನೆ ಹೊರಗೆ ಹೋಗುತ್ತಾರೆ.
ಗಾಯತ್ರಿ ಈ ಸಮಸ್ಯೆಗೆ ಪರಿಹಾರವಾಗಿ ತನ್ನ ನೀರಿನ ಸೇವನೆಯನ್ನು ಕಡಿಮೆ ಮಾಡಿದರು. ಮತ್ತು ಈಗ, ಭೂಮಾಲೀಕರು ಹೊಲದಲ್ಲೇ ಇರುವ ಕಾರಣ ಮೂತ್ರವಿಸರ್ಜನೆ ಮಾಡದೆ ಮನೆಗೆ ಹಿಂದಿರುಗಿದಾಗ, ತೀವ್ರವಾದ ಕಿಬ್ಬೊಟ್ಟೆಯ ನೋವನ್ನು ಅನುಭವಿಸುತ್ತಾರೆ. "ಸ್ವಲ್ಪ ಸಮಯದ ನಂತರ ವಿಸರ್ಜನೆಗೆಂದು ಹೋದರೆ, ಮೂತ್ರ ವಿಸರ್ಜಿಸಲು ನನಗೆ ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ. ಈ ಪ್ರಕ್ರಿಯೆ ತುಂಬಾ ನೋವಿನಿಂದ ಕೂಡಿರುತ್ತದೆ."
ಮತ್ತೊಂದೆಡೆ, ಮಂಜುಳಾ ಯೋನಿ ಸೋಂಕಿನಿಂದಾಗಿ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಪ್ರತಿ ತಿಂಗಳು ಋತುಚಕ್ರವು ಕೊನೆಗೊಂಡಾಗ, ಯೋನಿ ವಿಸರ್ಜನೆಯು ಪ್ರಾರಂಭವಾಗುತ್ತದೆ. "ಭಾಳಾ ತ್ರಾಸ್ ಆಗ್ತೈತ್ರಿ. ಸೊಂಟ ನೋವು ಈಗ ಸ್ಟಾರ್ಟ್ ಆಗಿ ಡೇಟ್ ಬರೋ ಮಟಾನೂ ನೋವ್ ಇರ್ತೈತ್ರೀ… ಕೈಕಾಲ್ದಾಗ ಶಕ್ತೀನ ಇಲ್ದಂಗ ಆಗತೈತ್ರೀ."
ಅವರು ಇಲ್ಲಿಯವರೆಗೆ 4-5 ಖಾಸಗಿ ಕ್ಲಿನಿಕ್ಕುಗಳಿಗೆ ಭೇಟಿ ನೀಡಿದ್ದಾರೆ. ಅವರ ಸ್ಕ್ಯಾನ್ ಫಲಿತಾಂಶಗಳು ಸಾಮಾನ್ಯ ಸ್ಥಿತಿಗೆ ಬಂದವು. "ಇನ್ನು ಒಂದು ಪಾಪು ಆಗೋ ಮಟಾ ಹಂಗೇ ಮಾ ಇನ್ನು ಎಲ್ಲೂ ತೋರಿಸಾಕ ಹೋಗಬೇಡ್ರಿ. ಪಾಪು ಆದಮೇಲೆ ಹೊಟ್ಟೆ ಮುರಿತ ಬಿಡತೈತಮ್ಮ. ಹಂಗಾಗಿ ಇಲ್ಲಿ ಎಲ್ಲೂ ತೋರಿಸಿಲ್ರೀ. ರಕ್ತ ಪಕ್ತ ಏನೂ ಮಾಡಿಸಿಲ್ರೀ,” ಎಂದು ಹೇಳುತ್ತಾರೆ.
ವೈದ್ಯರ ಸಲಹೆಯಿಂದ ತೃಪ್ತರಾಗದ ಅವರು ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು ಮತ್ತು ಸ್ಥಳೀಯ ದೇವಾಲಯದ ಅರ್ಚಕರ ಮೊರೆಹೋದರು. ಆದರೆ ನೋವು ಮತ್ತು ಸ್ರಾವ ನಿಂತಿಲ್ಲ.
ಅಪೌಷ್ಟಿಕತೆ, ಕ್ಯಾಲ್ಸಿಯಂ ಕೊರತೆ ಮತ್ತು ದೀರ್ಘಕಾಲದ ದೈಹಿಕ ಶ್ರಮ - ಅಶುದ್ಧ ನೀರು ಮತ್ತು ಬಯಲು ಮಲವಿಸರ್ಜನೆ - ದೀರ್ಘಕಾಲದ ಬೆನ್ನುನೋವು, ಕಿಬ್ಬೊಟ್ಟೆಯ ನೋವು ಮತ್ತು ಶ್ರೋಣಿಯ ಉರಿಯೂತದೊಂದಿಗೆ ಯೋನಿ ವಿಸರ್ಜನೆಗೆ ಕಾರಣವಾಗಬಹುದು ಎಂದು ಡಾ. ಸಲ್ಡಾನ್ಹಾ ಹೇಳುತ್ತಾರೆ.
"ಇದು ಹಾವೇರಿ ಅಥವಾ ಕೆಲವು ಊರುಗಳ ಸಂಗತಿಯಷ್ಟೇ ಅಲ್ಲ" ಎಂದು 2019ರಲ್ಲಿ ಈ ಪ್ರದೇಶದಲ್ಲಿ ತಾಯಂದಿರ ಸಾವಿನ ಬಗ್ಗೆ ಕರ್ನಾಟಕ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ಕರ್ನಾಟಕ ಜನಾರೋಗ್ಯ ಚಳವಳಿ (ಕೆಜೆಎಸ್) ಸಂಘಟನೆಯ ಭಾಗವಾಗಿದ್ದ ಉತ್ತರ ಕರ್ನಾಟಕದ ಕಾರ್ಯಕರ್ತೆ ಟೀನಾ ಕ್ಸೇವಿಯರ್ ಒತ್ತಿಹೇಳುತ್ತಾರೆ. "ದುರ್ಬಲ ಮಹಿಳೆಯರೆಲ್ಲರೂ ಖಾಸಗಿ ಆರೋಗ್ಯ ಕ್ಷೇತ್ರಕ್ಕೆ ಬಲಿಯಾಗುತ್ತಾರೆ."
ಕರ್ನಾಟಕದ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಕೊರತೆಯು ಗಾಯತ್ರಿ ಮತ್ತು ಮಂಜುಳಾ ಅವರಂತಹ ಮಹಿಳೆಯರನ್ನು ಖಾಸಗಿ ಆರೋಗ್ಯ ಆರೈಕೆ ಆಯ್ಕೆಗಳನ್ನು ಹುಡುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ 2017ರಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯದ ಲೆಕ್ಕಪರಿಶೋಧನಾ ವರದಿಯು ದೇಶದ ಆಯ್ದ ಆರೋಗ್ಯ ಆರೈಕೆ ಸೌಲಭ್ಯಗಳನ್ನು ಸಮೀಕ್ಷೆ ಮಾಡಿತು, ಇದು ಕರ್ನಾಟಕದಲ್ಲಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯಲ್ಲಿ ಭಾರಿ ಕೊರತೆಯಿರುವುದನ್ನು ಸೂಚಿಸುತ್ತದೆ.
ಈ ರಚನಾತ್ಮಕ ಸಮಸ್ಯೆಗಳ ಬಗ್ಗೆ ಅರಿವಿಲ್ಲದ, ಆತಂಕಗೊಂಡ ಗಾಯತ್ರಿ ತನ್ನ ಸಮಸ್ಯೆಯನ್ನು ಒಂದಲ್ಲ ಒಂದು ದಿನ ಪತ್ತೆಹಚ್ಚುವ ಭರವಸೆಯಲ್ಲಿದ್ದಾರೆ. ಅವರು ನೋವಿನಿಂದ ಬಳಲುತ್ತಿರುವ ದಿನಗಳಲ್ಲಿ ಆತಂಕದಿಂದ, ಹೇಳುತ್ತಾರೆ "ನನಗೆ ಏನಾಗುತ್ತದೆ? ನಾನು ಯಾವುದೇ ರಕ್ತ ಪರೀಕ್ಷೆಗಳನ್ನು ಮಾಡಿಲ್ಲ. ಮಾಡಿಸಿದ್ದರೆ, ಬಹುಶಃ ಸಮಸ್ಯೆ ಏನು ಎಂದು ನನಗೆ ತಿಳಿದಿರುತ್ತಿತ್ತು. ಆದರೆ ಅದಕ್ಕೂ ಸಾಲ ಮಾಡಬೇಕಿತ್ತು. ಹೇಗಾದರೂ ಹಣವನ್ನು ಸಾಲ ಪಡೆದು ರೋಗನಿರ್ಣಯಕ್ಕೆ ಒಳಗಾಗಬೇಕು. ಕನಿಷ್ಠ ನನ್ನ ಆರೋಗ್ಯದಲ್ಲಿ ಏನು ತೊಂದರೆಯಿದೆ ಎಂದು ತಿಳಿದುಕೊಳ್ಳಬೇಕು."
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org. ಈ ವಿಳಾಸಕ್ಕೆ ಕಳುಹಿಸಿ
ಅನುವಾದ : ಶಂಕರ. ಎನ್. ಕೆಂಚನೂರು