ಕೋವಿಡ್ -19 ದೃಢಪಟ್ಟ ಎಂಟು ದಿನಗಳ ನಂತರ, ರಾಮ್‌ಲಿಂಗ್ ಸನಾಪ್ ಅವರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ನಿಧನರಾದರು. ಆದರೆ ಅವರನ್ನು ಕೊಂದಿದ್ದು ವೈರಸ್ ಅಲ್ಲ.

40 ವರ್ಷದ ರಾಮ್‌ಲಿಂಗ್ ಸಾಯುವ ಕೆಲವೇ ಗಂಟೆಗಳ ಮೊದಲು, ಆಸ್ಪತ್ರೆಯಿಂದ ಪತ್ನಿ ರಾಜುಬಾಯಿಗೆ ಫೋನ್ ಮಾಡಿದ್ದರು. "ಅವರ ಚಿಕಿತ್ಸೆಗೆ ಎಷ್ಟು ವೆಚ್ಚವಾಗುತ್ತಿದೆ‌ ಎನ್ನುವುದು ತಿಳಿದಾಗ ಅವರು ಕಣ್ಣೀರು ಹಾಕಿದರು" ಎಂದು ಅವರ ಸೋದರಳಿಯ, 23 ವರ್ಷದ ರವಿ ಮೊರಾಳೆ ಹೇಳುತ್ತಾರೆ. "ಆಸ್ಪತ್ರೆಯ ಬಿಲ್ ಪಾವತಿಸಲು ಅವರು ತನ್ನ ಎರಡು ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಬೇಕಾಗಬಹುದೆಂದು ಅವರ ಎಣಿಸಿದ್ದರು."

ಮೇ 13ರಂದು ಮಹಾರಾಷ್ಟ್ರದ ಬೀಡ್ ನಗರದ ದೀಪ್‌ ಹಾಸ್ಪಿಟಲ್‌ಗೆ ಸೇರಿದ್ದ ರಾಮಲಿಂಗ್‌ ಅವರ ಚಿಕಿತ್ಸೆಗೆ ಆಸ್ಪತ್ರೆ 1.6 ಲಕ್ಷ ರೂಪಾಯಿಗಳಷ್ಟು ಶುಲ್ಕ ವಿಧಿಸಿತ್ತು ಎಂದು ರಾಜುಬಾಯಿಯ ಸಹೋದರ ಪ್ರಮೋದ್ ಮೊರಾಳೆ ಹೇಳುತ್ತಾರೆ. ನಾವು ಅದನ್ನು ಹೇಗೋ ಎರಡು ಕಂತುಗಳಲ್ಲಿ ಪಾವತಿಸಿದ್ದೆವು, ಆದರೆ ಆಸ್ಪತ್ರೆಯು ಇನ್ನೂ 2 ಲಕ್ಷ ರೂಪಾಯಿಗಳನ್ನು ಕೇಳುತ್ತಿತ್ತು" ಎಂದು ಅವರು ಹೇಳುತ್ತಾರೆ. “ಆಸ್ಪತ್ರೆಯವರು ರೋಗಿಯ ಕುಟುಂಬದವರ ಬಳಿ ಇದನ್ನು ಹೇಳುವ ಬದಲು, ರೋಗಿಯ ಬಳಿಯೇ ಹೇಳಿದರು. ಅವರಿದ್ದ ಪರಿಸ್ಥಿತಿಯಲ್ಲಿ ಅವರಿಗೆ ಇದನ್ನು ಹೇಳುವ ಅಗತ್ಯವೇನಿತ್ತು?”

ಕುಟುಂಬದ ವಾರ್ಷಿಕ ಆದಾಯಕ್ಕಿಂತ ದುಪ್ಪಟ್ಟಾದ ಆಸ್ಪತ್ರೆಯ ಬಿಲ್ಲಿನ ಯೋಚನೆ ರಾಮ್‌ಲಿಂಗ್‌ ಅವರಿಗೆ ಅಘಾತ ತಂದಿತ್ತು. ಮೇ 21ರ ಮುಂಜಾನೆ ಅವರು ಕೋವಿಡ್ ವಾರ್ಡ್‌ನಿಂದ ಹೊರನಡೆದು ಆಸ್ಪತ್ರೆಯ ಕಾರಿಡಾರ್‌ನಲ್ಲಿ ನೇಣು ಹಾಕಿಕೊಂಡರು.

ಮೇ 20ರ ರಾತ್ರಿ ಕರೆ ಮಾಡಿದಾಗ 35 ವರ್ಷದ ರಾಜುಬಾಯಿ ತನ್ನ ದುಃಖಿತ ಗಂಡನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಅವರು ತಮ್ಮ ಗಂಡನ ಬಳಿ ಮೋಟಾರ್ ಸೈಕಲ್ ಮಾರೋಣ ಅಥವಾ ಪಶ್ಚಿಮ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯಿಂದ ಹಣವನ್ನು ಮುಂಗಡ ಪಡೆಯಬಹುದು ಎಂದು ಅವರು ಹೇಳಿ ಸಂತೈಸಿದ್ದರು. ಅವರ ಚೇತರಿಕೆ ತನಗೆ ಎಲ್ಲಕ್ಕಿಂತ ಮುಖ್ಯವಾದುದು ಎಂದು ಅವರು ಹೇಳಿದ್ದರು. ಆದರೆ ಬಹುಶಃ ರಾಮ್‌ಲಿಂಗ್‌ಗೆ ಹಣ ಮರಳಿಸುವ ಕುರಿತು ಭರವಸೆಯಿರಲಿಲ್ಲ.

ಪ್ರತಿ ವರ್ಷ, ರಾಮ್‌ಲಿಂಗ್ ಮತ್ತು ರಾಜುಬಾಯಿ ಬೀಡ್ ಜಿಲ್ಲೆಯ ಕೈಜ್ ತಾಲ್ಲೂಕಿನಲ್ಲಿರುವ ತಮ್ಮ ಹಳ್ಳಿಯಿಂದ ಪಶ್ಚಿಮ ಮಹಾರಾಷ್ಟ್ರದ ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಿದ್ದರು. ಅವರು ನವೆಂಬರ್ ನಿಂದ ಏಪ್ರಿಲ್ ವರೆಗೆ 180 ದಿನಗಳ ಕಠಿಣ ಶ್ರಮಕ್ಕೆ ಸುಮಾರು  60,000 ಇಬ್ಬರು ಸೇರಿ ದುಡಿಯುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ, 8ರಿಂದ 16 ವರ್ಷ ವಯಸ್ಸಿನ ಅವರ ಮೂರು ಮಕ್ಕಳನ್ನು ರಾಮ್‌ಲಿಂಗ್ ಅವರ ವಿಧುರ ತಂದೆಯ ಬಳಿ ಬಿಡುತ್ತಿದ್ದರು.

Ravi Morale says they took his uncle Ramling Sanap to a private hospital in Beed because there were no beds in the Civil Hospital
PHOTO • Parth M.N.

ಸಿವಿಲ್ ಆಸ್ಪತ್ರೆಯಲ್ಲಿ ಹಾಸಿಗೆಗಳಿಲ್ಲದ ಕಾರಣ ತಮ್ಮ ಮಾವ ರಾಮ್‌ಲಿಂಗ್ ಸನಾಪ್ ಅವರನ್ನು ಬೀಡ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದುದಾಗಿ ರವಿ ಮೊರಾಳೆ ಹೇಳುತ್ತಾರೆ

ಕೆಲಸ ಮುಗಿಸಿ ಬೀಡ್ ನಗರದಿಂದ 50 ಕಿಲೋಮೀಟರ್ ದೂರದಲ್ಲಿರುವ ತಾಂಡಲಚಿವಾಡಿಯ ತಮ್ಮ ಹಳ್ಳಿಗೆ ಹಿಂದಿರುಗಿದ ನಂತರ, ರಾಮಲಿಂಗ್ ಮತ್ತು ರಾಜುಬಾಯಿ ತಮ್ಮ ಭೂಮಿಯಲ್ಲಿ ಜೋಳ, ಸಜ್ಜೆ ಮತ್ತು ಸೋಯಾಬೀನ್ ಕೃಷಿ ಮಾಡುತ್ತಿದ್ದರು. ಜೊತೆಗೆ ರಾಮಲಿಂಗ್‌ ದೊಡ್ಡ ಹೊಲಗಳಲ್ಲಿ ಟ್ರಾಕ್ಟರ್‌ ಓಡಿಸುವ ಮೂಲಕ ವಾರದಲ್ಲಿ ಮೂರು ದಿನ ದಿನಕ್ಕೆ ರೂಪಾಯಿ 300ರ ತನಕ ದುಡಿಯುತ್ತಿದ್ದರು.

ತನ್ನ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸದಾ ಒದ್ದಾಡುವ ಕುಟುಂಬದವರಾದ ರಾಮಲಿಂಗ್ ಅನಾರೋಗ್ಯಕ್ಕೆ ಒಳಗಾದಾಗ ಅವರ ಮೊದಲ ಆಯ್ಕೆ ಬೀಡ್‌ನ ಸಿವಿಲ್ ಆಸ್ಪತ್ರೆಗೆ ಹೋಗುವುದು. "ಆದರೆ ಅಲ್ಲಿ ಯಾವುದೇ ಹಾಸಿಗೆಗಳು ಲಭ್ಯವಿರಲಿಲ್ಲ" ಎಂದು ರವಿ ಹೇಳುತ್ತಾರೆ. "ಆದ್ದರಿಂದ ನಾವು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು."

ಕೊರೋನ ವೈರಸ್ ಎರಡನೇ ಅಲೆ ವೇಗವಾಗಿ ಹರಡುವ ಮೂಲಕ ಗ್ರಾಮೀಣ ಭಾರತದಲ್ಲಿನ ಕಳಪೆ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಎತ್ತಿ ತೋರಿಸಿದೆ. ಉದಾಹರಣೆಗೆ, ಬೀಡ್‌ನಲ್ಲಿನ ಕೇವಲ ಎರಡು ಪ್ರಮುಖ ಸರ್ಕಾರಿ ಆಸ್ಪತ್ರೆಗಳು ಜಿಲ್ಲೆಯ 26 ಲಕ್ಷ ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿವೆ.

ಸಾರ್ವಜನಿಕ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿ ತುಳುಕುತ್ತಿರುವುದರಿಂದ, ಜನರು ಅವುಗಳ ವೆಚ್ಚಗಳನ್ನು ಭರಿಸಲು ಸಾಧ್ಯವಾಗದಿದ್ದರೂ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾಯಿತು.

ಅನೇಕರ ಪಾಲಿಗೆ, ಒಂದು ಬಾರಿಯ ಆರೋಗ್ಯದ ತುರ್ತು ಪರಿಸ್ಥಿತಿಯೆನ್ನುವುದು ದೀರ್ಘಕಾಲೀನ ಸಾಲವಾಗಿ ಮಾರ್ಪಟ್ಟಿದೆ.

ಮಾರ್ಚ್ 2021ರಲ್ಲಿ ಯುಎಸ್ ಮೂಲದ ಪಿವ್ ರಿಸರ್ಚ್ ಸೆಂಟರ್ ಪ್ರಕಟಿಸಿದ ವರದಿಯಲ್ಲಿ , "ಭಾರತದಲ್ಲಿ ಕೋವಿಡ್ -19 ಆರ್ಥಿಕ ಹಿಂಜರಿತದ ಕಾರಣದಿಂದಾಗಿ ಬಡವರ ಸಂಖ್ಯೆ (ದಿನಕ್ಕೆ 2 ಡಾಲರ್‌ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂಡದಿರುವವರು) 7.5 ಕೋಟಿಯಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ ." ಜೊತೆಗೆ  2020ರಲ್ಲಿ ಭಾರತದ ಮಧ್ಯಮ ವರ್ಗದ ಸಂಖ್ಯೆಯು ಅಂದಾಜು 32 ದಶಲಕ್ಷದಷ್ಟು ಕುಗ್ಗುತ್ತಿದ್ದು ಇದು ಜಾಗತಿಕ ಬಡತನದ 60 ಪ್ರತಿಶತದಷ್ಟು ಎಂದು ವರದಿ ಹೇಳುತ್ತದೆ.

ಈ ಸರ್ವವ್ಯಾಪಿ ಪಿಡುಗಿನ ಪರಿಣಾಮವು ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ನೆರೆಯ ಜಿಲ್ಲೆಗಳಾದ ಬೀಡ್ ಮತ್ತು ಉಸ್ಮಾನಾಬಾದ್ಗಳಲ್ಲಿ ಎದ್ದು ಕಾಣುತ್ತಿದೆ. ಈಗಾಗಲೇ ಹವಾಮಾನ ಬದಲಾವಣೆ, ನೀರಿನ ಕೊರತೆ ಮತ್ತು ಕೃಷಿ ತೊಂದರೆಗಳಿಂದ ಬಳಲುತ್ತಿರುವ ಈ ಜಿಲ್ಲೆಗಳು ಈಗ ತಮ್ಮ ಸಂಕಷ್ಟಗಳಿಗೆ ಇನ್ನೊಂದು ಸೇರ್ಪಡೆಯೆಂಬಂತೆ ಕೋವಿಡ್‌ ಎದುರಿಸುತ್ತಿವೆ. ಜೂನ್ 20, 2021ರ ಹೊತ್ತಿಗೆ, ಬೀಡ್ ಜಿಲ್ಲೆ 91,600 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಮತ್ತು 2,450 ಸಾವುಗಳನ್ನು ದಾಖಲಿಸಿದೆ, ಮತ್ತು ಉಸ್ಮಾನಾಬಾದ್ ಸುಮಾರು 61,000 ಪ್ರಕರಣಗಳು ಮತ್ತು 1,500ಕ್ಕೂ ಹೆಚ್ಚು ಸಾವುಗಳನ್ನು ಕಂಡಿದೆ.

Left: A framed photo of Vinod Gangawane. Right: Suresh Gangawane fought the hospital's high charges when his brother was refused treatment under MJPJAY
PHOTO • Parth M.N.
Suvarna Gangawane (centre) with her children, Kalyani (right) and Samvidhan

ಎಡ: ವಿನೋದ್ ಗಂಗಾವಣೆ ಅವರ ಚೌಕಟ್ಟು ಹಾಕಿಸಲಾದ ಫೋಟೋ. ಬಲ: ಸುವರ್ಣ ಗಂಗಾವಣೆ (ಮಧ್ಯ) ತನ್ನ ಮಕ್ಕಳಾದ ಕಲ್ಯಾಣಿ (ಬಲ) ಮತ್ತು ಸಂವಿಧಾನ್ ಅವರೊಂದಿಗೆ

ಆದರೂ, ಇಲ್ಲಿ ಬಡ ಜನರನ್ನು ಕಾಗದ ಪತ್ರಗಳ ಮೇಲೆ ಬಹಳ ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ.

ಕೋವಿಡ್ ರೋಗಿಗಳು ತಮ್ಮ ಉಳಿತಾಯದ ಹಣವನ್ನೆಲ್ಲ ಕಳೆದುಕೊಳ್ಳದಂತೆ ನೋಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರವು ಖಾಸಗಿ ಆಸ್ಪತ್ರೆಯ ಶುಲ್ಕಗಳಿಗೆ ಮಿತಿಯನ್ನು ವಿಧಿಸಿದೆ. ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್ ಹಾಸಿಗೆಗೆ ದಿನಕ್ಕೆ 4,000 ರೂ. ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗೆ 7,500 ರೂ. ವೆಂಟಿಲೇಟರ್ ಹೊಂದಿರುವ ಐಸಿಯು ಹಾಸಿಗೆಗೆ 9,000 ರೂಪಾಯಿಗಳ ಬೆಲೆ ನಿಗದಿಪಡಿಸಿದೆ.

ರಾಜ್ಯದ ಪ್ರಮುಖ ಆರೋಗ್ಯ ವಿಮಾ ಯೋಜನೆ - ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆ (ಎಂಜೆಪಿಜೆಎವೈ) - ವೈದ್ಯಕೀಯ ವೆಚ್ಚಗಳನ್ನು (ರೂ. 2.5 ಲಕ್ಷದವರೆಗೆ) ಭರಿಸುತ್ತದೆ. ಬೀಡ್ ಮತ್ತು ಉಸ್ಮಾನಾಬಾದ್‌ನಂತಹ ಕೃಷಿ ಸಂಕಷ್ಟ ಪೀಡಿತ 14 ಜಿಲ್ಲೆಗಳಲ್ಲಿ 1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಮತ್ತು ಕೃಷಿ ಕುಟುಂಬಗಳು ಈ ಯೋಜನೆಗೆ ಅರ್ಹರು. ಸಾರ್ವಜನಿಕ ಮತ್ತು ಖಾಸಗಿ 447 ಸಂಪರ್ಕಿತ ಆಸ್ಪತ್ರೆಗಳ ಎಂಜೆಪಿಜೆವೈ ಜಾಲ, ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆಗಳಿಗೆ ನಗದು ರಹಿತ ಚಿಕಿತ್ಸೆಯನ್ನು ಈ ಯೋಜನೆಯಡಿ ಒದಗಿಸುತ್ತವೆ

ಆದರೆ ಉಸ್ಮಾನಾಬಾದ್‌ನ ಚಿರಾಯು ಆಸ್ಪತ್ರೆ ಏಪ್ರಿಲ್‌ ತಿಂಗಳಿನಲ್ಲಿ ಎಂಜೆಪಿಜೆಎ ಅಡಿಯಲ್ಲಿ 48 ವರ್ಷದ ವಿನೋದ್ ಗಂಗಾವಣೆ ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿತು. “ಅದು ಏಪ್ರಿಲ್ ಮೊದಲ ವಾರ ಆಗ ಉಸ್ಮಾನಾಬಾದ್‌ನಲ್ಲಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಎಲ್ಲಿಯೂ ಹಾಸಿಗೆ ಸಿಗುವುದು ಕಷ್ಟವಾಗಿತ್ತು”  ಎಂದು ವಿನೋದ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದ 50 ವರ್ಷದ ಅವರ ಸಹೋದರ ಸುರೇಶ್ ಗಂಗಾವಣೆ ಹೇಳುತ್ತಾರೆ. “ಚಿರಾಯು ಆಸ್ಪತ್ರೆಯ ವೈದ್ಯರೊಬ್ಬರು, ‘ನಮ್ಮಲ್ಲಿ ಯೋಜನೆ ಲಭ್ಯವಿಲ್ಲ, ನಿಮಗೆ ಹಾಸಿಗೆ ಬೇಕೋ ಬೇಡವೋ ಹೇಳಿ ’ ಎಂದು ಕೇಳಿದರು. ಆ ಸಮಯದಲ್ಲಿ, ನಾವು ಭಯಭೀತರಾಗಿದ್ದೆವು ಹೀಗಾಗಿ ನಾವು ಅವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲು ಹೇಳಿದೆವು.”

ಉಸ್ಮಾನಾಬಾದ್ ಜಿಲ್ಲಾ ಪರಿಷತ್‌ನ ಆರೋಗ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಸ್ವತಂತ್ರ ವಿಚಾರಣೆ ನಡೆಸಿದಾಗ, ಆಸ್ಪತ್ರೆಯನ್ನು ಎಂಜೆಪಿಜೆಎ ಯೋಜನೆಯಡಿ ಸಂಯೋಜಿಸಲಾಗಿದೆಯೆಂದು ತಿಳಿದುಬಂದಿದೆ. "ನಾನು ಈ ಬಗ್ಗೆ ಆಸ್ಪತ್ರೆಯಲ್ಲಿ ಹೇಳಿದಾಗ ನಿಮಗೆ ನಿಮ್ಮ ಸಹೋದರಬೇಕೋ ಯೋಜನೆಯ ಲಭ್ಯತೆ ಬೇಕೋ ಎಂದು ಕೇಳಿದರು" ಎಂದು ಅವರು ಹೇಳುತ್ತಾರೆ. "ನಾವು ನಿಯಮಿತವಾಗಿ ನಮ್ಮ ಬಿಲ್‌ಗಳನ್ನು ಪಾವತಿಸದಿದ್ದರೆ ಅವರ ಚಿಕಿತ್ಸೆಯನ್ನು ನಿಲ್ಲಿಸುವುದಾಗಿ ಹೇಳಿದರು."

Left: A framed photo of Vinod Gangawane. Right: Suresh Gangawane fought the hospital's high charges when his brother was refused treatment under MJPJAY
PHOTO • Parth M.N.

ಸುರೇಶ್ ಗಂಗಾವಣೆಯವರ ಸಹೋದರನಿಗೆ ಎಂಜೆಪಿಜೆಎವೈ ಅಡಿಯಲ್ಲಿ ಚಿಕಿತ್ಸೆ ನಿರಾಕರಿಸಿದಾಗ ಆಸ್ಪತ್ರೆಯ ವಿರುದ್ಧ ಹೋರಾಡಿದರು

ಉಸ್ಮಾನಾಬಾದ್ ನಗರದ ಹೊರವಲಯದಲ್ಲಿ ನಾಲ್ಕು ಎಕರೆ ಕೃಷಿಭೂಮಿಯನ್ನು ಹೊಂದಿರುವ ಗಂಗಾವಣೆ ಕುಟುಂಬವು ವಿನೋದ್‌ ಆಸ್ಪತ್ರೆಯಲ್ಲಿದ್ದ 20 ದಿನಗಳವರೆಗೆ ಔಷಧಿಗಳು, ಲ್ಯಾಬ್ ಪರೀಕ್ಷೆಗಳು ಮತ್ತು ಆಸ್ಪತ್ರೆಯ ಹಾಸಿಗೆ ಇವುಗಳಿಗೆ 3.5 ಲಕ್ಷ ರೂ ಪಾವತಿಸಿತ್ತು. ಏಪ್ರಿಲ್ 26ರಂದು ಅವರು ನಿಧನರಾದಾಗ ಆಸ್ಪತ್ರೆಯು ಹೆಚ್ಚುವರಿ 2 ಲಕ್ಷ ರೂ.ಗಳ ಬೇಡಿಕೆ ಇಟ್ಟಿತ್ತೆಂದು ಆ ಮೊತ್ತವನ್ನು ನೀಡಲು ನಿರಾಕರಿಸಿದ ಸುರೇಶ್ ಹೇಳುತ್ತಾರೆ. ಅವರ ಮತ್ತು ಆಸ್ಪತ್ರೆಯ ಅಧಿಕಾರಿಗಳ ನಡುವೆ ಈ ಕುರಿತು ವಾಗ್ವಾದ ನಡೆಯಿತು. "ನಾನು ದೇಹವನ್ನು ಪಡೆಯುವುದಿಲ್ಲವೆಂದು ಹೇಳಿದೆ" ಎಂದು ಅವರು ಹೇಳುತ್ತಾರೆ. ಆಸ್ಪತ್ರೆಯು ಹೆಚ್ಚಿನ ಹಣದ ಬೇಡಿಕೆಯನ್ನು ಕೈಬಿಡುವವರೆಗೂ ವಿನೋದ್ ಅವರ ದೇಹವು ಇಡೀ ದಿನ ಆಸ್ಪತ್ರೆಯಲ್ಲೇ ಇತ್ತು.

ಸುರೇಶ್ ತನ್ನ ಆಧಾರ್ ಕಾರ್ಡ್ ಸಲ್ಲಿಸದ ಕಾರಣ ವಿನೋದ್ ಅವರನ್ನು ಆರೋಗ್ಯ ವಿಮಾ ಯೋಜನೆಯಡಿ ದಾಖಲಿಸಲಾಗಿಲ್ಲ ಎಂದು ಚಿರಾಯು ಆಸ್ಪತ್ರೆಯ ಮಾಲೀಕ ಡಾ. ವಿರೇಂದ್ರ ಗಾವ್ಳಿ ಹೇಳುತ್ತಾರೆ. ಅದು ನಿಜವಲ್ಲ ಎಂದು ಹೇಳುವ ಸುರೇಶ್: "ಆಸ್ಪತ್ರೆಯು ಎಂಜೆಪಿಜೆಎವೈ ಕುರಿತ ಯಾವುದೇ ಪ್ರಶ್ನೆಗಳಿಗೂ ಆಸ್ಪದವನ್ನೇ ನೀಡಿರಲಿಲ್ಲ." ಎನ್ನುತ್ತಾರೆ.

ಚಿರಾಯು ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳಷ್ಟೇ ಲಭ್ಯವಿವೆ ಎಂದು ಡಾ. ಗಾವ್ಳಿ ಹೇಳುತ್ತಾರೆ. "ಆದರೆ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ, [ಜಿಲ್ಲಾ] ಆಡಳಿತವು ಕೋವಿಡ್ ರೋಗಿಗಳನ್ನು ಸೇರಿಸಿಕೊಳ್ಳುವಂತೆ ವಿನಂತಿಸಿತು. ಅವರ ಆರೈಕೆ ಮಾಡುವಂತೆ ನನಗೆ ಮಾತಿನ ಮೂಲಕ ಹೇಳಲಾಯಿತು, ಮತ್ತು ಕಷ್ಟವಾದರೆ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸುವಂತೆಯೂ ಹೇಳಲಾಗಿತ್ತು,” ಎಂದು ಅವರು ಹೇಳುತ್ತಾರೆ.

ಆಸ್ಪತ್ರೆಗೆ ದಾಖಲಾದ 12-15 ದಿನಗಳ ನಂತರ ವಿನೋದ್ ಉಸಿರಾಟದ ತೊಂದರೆಗಳನ್ನು ಎದುರಿಸತೊಡಗಿದಾಗ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಸಲಹೆ ನೀಡಿದ್ದಾಗಿ ಡಾ. ಗಾವ್ಳಿ ಹೇಳುತ್ತಾರೆ. “ಅವರು ನಿರಾಕರಿಸಿದರು. ಅವರನ್ನು ಉಳಿಸಲು ನಾವು ನಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡಿದ್ದೇವೆ. ಆದರೆ ಏಪ್ರಿಲ್ 25ರಂದು ಅವರಿಗೆ ಹೃದಯಾಘಾತವಾಯಿತು ಮತ್ತು ಅದರ ಮರುದಿನ ನಿಧನರಾದರು.”

ವಿನೋದ್‌ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವುದೆಂದರೆ ಆ ಸಮಯದಲ್ಲಿ ಉಸ್ಮಾನಾಬಾದ್‌ನಲ್ಲಿ ಮತ್ತೊಂದು ಆಮ್ಲಜನಕ ವ್ಯವಸ್ಥೆಯಿರುವ ಹಾಸಿಗೆ ಹುಡುಕುವುದು ಎಂದು ಸುರೇಶ್ ಹೇಳುತ್ತಾರೆ. ಕುಟುಂಬವು ಅದಾಗಲೇ ಆಘಾತಕಾರಿ ವಾರವನ್ನು ಎದುರಿಸುತ್ತಿತ್ತು. ವಿನೋದ್ ಮತ್ತು ಸುರೇಶ್ ಅವರ 75 ವರ್ಷದ ತಂದೆ ವಿಠ್ಠಲ್ ಗಂಗಾವಣೆಯವರು ಕೊವಿಡ್ -19ರಿಂದ ಕೆಲವೇ ದಿನಗಳ ಹಿಂದೆ ನಿಧನರಾಗಿದ್ದರು. ಆದರೆ ಕುಟುಂಬ ವಿನೋದ್‌ ಅವರಿಗೆ ಈ ವಿಷಯವನ್ನು ಹೇಳಿರಲಿಲ್ಲ. ವಿನೋದ್ ಅವರ ಪತ್ನಿ 40 ವರ್ಷದ ಸುವರ್ಣ ಹೇಳುತ್ತಾರೆ, “ಅವರು ಆಗಲೇ ಹೆದರುತ್ತಿದ್ದರು ತನ್ನ ವಾರ್ಡ್‌ನಲ್ಲಿ ರೋಗಿ ತೀರಿಕೊಂಡಾಗಲೆಲ್ಲ ಆತಂಕಕ್ಕೊಳಗಾಗುತ್ತಿದ್ದರು."

The Gangawane family at home in Osmanabad. From the left: Suvarna, Kalyani, Lilawati and Suresh with their relatives
PHOTO • Parth M.N.

ಉಸ್ಮಾನಾಬಾದ್ ಮನೆಯಲ್ಲಿ ಗಂಗಾವಣೆ ಕುಟುಂಬ. ಎಡದಿಂದ: ಸುವರ್ಣ, ಕಲ್ಯಾಣಿ, ಲೀಲಾವತಿ, ಸುರೇಶ್, ಸಂವಿದಾನ್ ಮತ್ತು ಕುಟುಂಬ ಸ್ನೇಹಿತರು

ವಿನೋದ್ ತನ್ನ ತಂದೆಯನ್ನು ನೋಡಬೇಕೆಂದು ಆಸೆ ವ್ಯಕ್ತಪಡಿಸುತ್ತಲೇ ಇದ್ದರೆಂದು ಅವರ 15 ವರ್ಷದ ಮಗಳು ಕಲ್ಯಾಣಿ ಹೇಳುತ್ತಾಳೆ. "ಆದರೆ ನಾವು ಪ್ರತಿ ಬಾರಿಯೂ ಏನಾದರೊಂದು ನೆಪ ಹೇಳುತ್ತಿದ್ದೆವು. ಅವರು ಸಾಯುವ ಎರಡು ದಿನಗಳ ಮೊದಲು, ನಾವು ನನ್ನ ಅಜ್ಜಿಯನ್ನು [ವಿನೋದ್ ಅವರ ತಾಯಿ ಲೀಲಾವತಿ] ಆಸ್ಪತ್ರೆಗೆ ಕರೆದೊಯ್ದಿದ್ದೆವು, ಅವರನ್ನಾದರೂ ನೋಡಲಿ ಎನ್ನುವ ಕಾರಣದಿಂದ."

ಅಂದಿನ ಭೇಟಿಗಾಗಿ, ಲೀಲಾವತಿ ತನ್ನ ಹಣೆಯ ಮೇಲೆ  ಹಿಂದೂ ವಿಧವೆಗೆ ಷಿದ್ಧವೆಂದು ಪರಿಗಣಿಸಲಾಗುವ ಕುಂಕುಮವನ್ನು ಧರಿಸಿ ಹೋಗಿದ್ದರು. "ಅವರಿಗೆ ಯಾವುದೇ ರೀತಿಯಲ್ಲಿ ಅನುಮಾನ ಬರಬಾರದೆನ್ನುವುದು ನಮ್ಮ ಬಯಕೆಯಾಗಿತ್ತು" ಎಂದು ಅವರು ಹೇಳುತ್ತಾರೆ, ಕೆಲವು ದಿನಗಳ ಅವಧಿಯಲ್ಲಿ ತನ್ನ ಗಂಡ ಮತ್ತು ಮಗನನ್ನು ಕಳೆದುಕೊಂಡಿದ್ದರಿಂದ ಅವರು ಸಂಪೂರ್ಣವಾಗಿ ಕುಸಿದು ಹೋಗಿದ್ದರು.

ಆರ್ಥಿಕ ತೊಂದರೆಯಿಂದ ಚೇತರಿಸಿಕೊಳ್ಳಲು ಕುಟುಂಬವು ಬಹಳ ಕಷ್ಟಪಡಬೇಕಾಗುತ್ತದೆ ಎಂದು ಗೃಹಿಣಿ ಸುವರ್ಣ ಹೇಳುತ್ತಾರೆ. "ಆಸ್ಪತ್ರೆಯ ಬಿಲ್ ಪಾವತಿಸಲು ನಾನು ನನ್ನ ಆಭರಣವನ್ನು ಅಡವಿಟ್ಟಿದ್ದೇನೆ ಮತ್ತು ನಾವು ಕುಟುಂಬದ ಎಲ್ಲ ಉಳಿತಾಯವನ್ನು ಖರ್ಚು ಮಾಡಿದ್ದೇವೆ." ಕಲ್ಯಾಣಿ ವೈದ್ಯಳಾಗಲು ಬಯಸುತ್ತಾಳೆ ಎಂದು ಅವರು ಹೇಳುತ್ತಾರೆ. “ನಾನು ಅವಳ ಕನಸುಗಳನ್ನು ಹೇಗೆ ನನಸು ಮಾಡುವುದು? ಆಸ್ಪತ್ರೆಯು ನಮಗೆ ಯೋಜನೆಯ ಪ್ರಯೋಜನವನ್ನು ನೀಡಿದ್ದರೆ, ನನ್ನ ಮಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿರಲಿಲ್ಲ.”

ಉಸ್ಮಾನಾಬಾದ್‌ನ ಖಾಸಗಿ ಆಸ್ಪತ್ರೆಗಳಲ್ಲಿ, ಏಪ್ರಿಲ್ 1 ಮತ್ತು ಮೇ 12ರ ನಡುವೆ ಕೇವಲ 82 ಕೋವಿಡ್ -19 ರೋಗಿಗಳಿಗೆ ಎಂಜೆಪಿಜೆಎವೈ ಅಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಯೋಜನೆಯ ಜಿಲ್ಲಾ ಸಂಯೋಜಕ ವಿಜಯ್ ಭೂತೇಕರ್ ಹೇಳುತ್ತಾರೆ. ಏಪ್ರಿಲ್ 17ರಿಂದ ಮೇ 27ರವರೆಗೆ ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ 179 ರೋಗಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಬೀಡ್ ಜಿಲ್ಲೆಯ ಸಂಯೋಜಕರಾದ ಅಶೋಕ್ ಗಾಯಕವಾಡ್ ಹೇಳುತ್ತಾರೆ. ಈ ಅಂಕಿಅಂಶಗಳು ಒಟ್ಟು ಆಸ್ಪತ್ರೆ ದಾಖಲಾತಿಗಳ ಒಂದು ಭಾಗವಾಗಿದೆ.‌

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕು, ಹೀಗೆ ಮಾಡಿದಲ್ಲಿ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅವಶ್ಯಕತೆಯಿರುವುದಿಲ್ಲ ಎಂದು ಎಂದು ಬೀಡ್‌ನ ಅಂಬೆಜೋಗೈ ಪಟ್ಟಣದ ಗ್ರಾಮೀಣಾಭಿವೃದ್ಧಿ ಸಂಸ್ಥೆಯಾದ ಮಾನವ್‌ ಲೋಕ್‌ನ ಕಾರ್ಯದರ್ಶಿ ಅನಿಕೇತ್ ಲೋಹಿಯಾ ಹೇಳುತ್ತಾರೆ. "ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಹಳ್ಳಿಯ ಉಪ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆಯಿದೆ, ಇದರಿಂದಾಗಿ ಜನರಿಗೆ ಅಲ್ಲಿ ಯೋಗ್ಯ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.

Ever since the outbreak of coronavirus in March 2020, the MJPJAY office in Mumbai has received 813 complaints from across Maharashtra – most of them against private hospitals. So far, 186 complaints have been resolved and the hospitals have returned a total of Rs. 15 lakhs to the patients
PHOTO • Parth M.N.

ರಾಗಿಣಿ ಫಡ್ಕೆ ಮತ್ತು ಮುಕುಂದರಾಜ್

ಮಾರ್ಚ್ 2020ರಲ್ಲಿ ಕರೋನವೈರಸ್ ಆಸ್ಫೋಟಗೊಂಡ ದಿನದಿಂದ, ಮುಂಬೈನ ಎಮ್ಜೆಪಿಜೆಎವೈ ಕಚೇರಿಗೆ ಮಹಾರಾಷ್ಟ್ರದೆಲ್ಲೆಡೆಯಿಂದ 813 ದೂರುಗಳು ಬಂದಿವೆ - ಅವುಗಳಲ್ಲಿ ಹೆಚ್ಚಿನವು ಖಾಸಗಿ ಆಸ್ಪತ್ರೆಗಳ ವಿರುದ್ಧ. ಇಲ್ಲಿಯವರೆಗೆ, ಅವುಗಳಲ್ಲಿ 186 ದೂರುಗಳನ್ನು ಪರಿಹರಿಸಲಾಗಿದೆ ಮತ್ತು ಆಸ್ಪತ್ರೆಗಳು ರೋಗಿಗಳಿಗೆ ಒಟ್ಟು 15 ಲಕ್ಷ ರೂಗಳನ್ನು ಮರಳಿ ನೀಡಿವೆ.

"ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಲ್ಲಿಯೂ ಸಹ  ಸಿಬ್ಬಂದಿಗಳ ಕೊರತೆಯಿದೆ ಮತ್ತು ವೈದ್ಯರು ಮತ್ತು ದಾದಿಯರು ರೋಗಿಗಳಿಗೆ ಅವರಿಗ ಅಗತ್ಯವಿರುವಷ್ಟು ಗಮನವನ್ನು ನೀಡಲು ಸಾಧ್ಯವಾಗುತ್ತಿಲ್ಲ" ಎಂದು ಲೋಹಿಯಾ ಹೇಳುತ್ತಾರೆ. “ಅನೇಕ ಸಂದರ್ಭಗಳಲ್ಲಿ, ಸರ್ಕಾರಿ ಆಸ್ಪತ್ರೆಗಳು ವಿಶ್ವಾಸವನ್ನು ಮೂಡಿಸದ ಕಾರಣ ಜನರು ಭರಿಸಲಾಗದಿದ್ದರೂ ಸಹ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ”

ಅದಕ್ಕಾಗಿಯೇ, ಮೇ ತಿಂಗಳಲ್ಲಿ, ವಿಠ್ಠಲ್ ಫಡ್ಕೆ ಅವರು ಕೋವಿಡ್ ರೋಗಲಕ್ಷಣಗಳಿಂದ ಅನಾರೋಗ್ಯಕ್ಕೊಳಗಾದಾಗ, ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಹುಡುಕುವ ಸಲುವಾಗಿ ತಲೆಕೆಡಿಸಿಕೊಳ್ಳಲಿಲ್ಲ. ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರ ಸಹೋದರ ಲಕ್ಷ್ಮಣ್ ಎರಡು ದಿನಗಳ ಮೊದಲು ಅಲ್ಲಿಯೇ ಮೃತಪಟ್ಟಿದ್ದರು.

2021ರ ಏಪ್ರಿಲ್ ಕೊನೆಯ ವಾರದಲ್ಲಿ ಲಕ್ಷ್ಮಣ್ ಅವರಲ್ಲಿ ರೋಗಲಕ್ಷಣಗಳು ಕಾಣಿಸಲು ಪ್ರಾರಂಭವಾಯಿತು. ಅವರ ಆರೋಗ್ಯವು ಕ್ರಿಪ್ರವಾಗಿ ಕ್ಷೀಣಿಸಲು ಪ್ರಾರಂಭಿಸಿದಾಗ, ವಿಠ್ಠಲ್ ತಮ್ಮ ಊರಾದ ಪಾರ್ಲಿಯಿಂದ 25 ಕಿಲೋಮೀಟರ್ ದೂರದಲ್ಲಿರುವ ಅಂಬೆಜೋಗೈ (ಎಸ್‌ಆರ್‌ಟಿಆರ್‌ಎಂಸಿಎ)ಯ ಸ್ವಾಮಿ ರಮಾನಂದ್ ತೀರ್ಥ್ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಲಕ್ಷ್ಮಣ್ ಕೇವಲ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು.‌

ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಸಹೋದರನ ಸಾವಿನಿಂದ ಗಾಬರಿಗೊಂಡ ವಿಠ್ಠಲ್ ಉಸಿರಾಟದ ತೊಂದರೆ ಎದುರಾದಾಗ ಖಾಸಗಿ ಆಸ್ಪತ್ರೆಗೆ ಸೇರಿಕೊಂಡರು. “ಆ ಆಸ್ಪತ್ರೆ [ಎಸ್‌ಆರ್‌ಟಿಆರ್‌ಎಂಸಿಎ] ಪ್ರತಿದಿನ ಆಮ್ಲಜನಕಕ್ಕಾಗಿ ಪರದಾಡುತ್ತಿತ್ತು. ನೀವು ಅನೇಕ ಬಾರಿ ಕೂಗದ ಹೊರತು ವೈದ್ಯರು ಮತ್ತು ಸಿಬ್ಬಂದಿ ಗಮನ ಹರಿಸುತ್ತಿರಲಿಲ್ಲ. ಅವರು ಒಂದೇ ಸಮಯದಲ್ಲಿ ಹಲವಾರು ರೋಗಿಗಳನ್ನು ನೋಡಿಕೊಳ್ಳುತ್ತಿದ್ದರು” ಎಂದು ಲಕ್ಷ್ಮಣ ಅವರ 28 ವರ್ಷದ ಪತ್ನಿ ರಾಗಿಣಿ ಹೇಳುತ್ತಾರೆ. “ಜನರು ಈ ವೈರಸ್‌ಗೆ ಹೆದರುತ್ತಾರೆ ಮತ್ತು ಅವರಿಗೆ ಕಾಳಜಿ ಬೇಕು. ಅವರಿಗೆ ಧೈರ್ಯ ತುಂಬಲು ವೈದ್ಯರ ಅಗತ್ಯವಿದೆ. ಆದ್ದರಿಂದಲೇ ವಿಠ್ಠಲ್ [ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ] ಹಣದ ಬಗ್ಗೆ ಯೋಚಿಸಲಿಲ್ಲ.”

ವಿಠ್ಠಲ್ ಚೇತರಿಸಿಕೊಂಡರು ಮತ್ತು ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡರು, ಆದರೆ ಆ ನೆಮ್ಮದಿ ಹೆಚ್ಚು ದಿನ ಉಳಿಯಲಿಲ್ಲ.

ಆಸ್ಪತ್ರೆ ಅವರಿಗೆ ರೂ. 41,000 ಶುಲ್ಕ ವಿಧಿಸಿತ್ತು. ಅದರ ಜೊತೆಗೆ ಅವರು ಔಷಧಿಗಳಿಗಾಗಿ 56,000 ರೂ. ಖರ್ಚು ಮಾಡಿದ್ದರು. ಈ ಮೊತ್ತವು ಅವರು ಅಥವಾ ಲಕ್ಷ್ಮಣ್‌ ಅವರ 280 ದಿನಗಳ ಆದಾಯಕ್ಕೆ ಸರಿಸಮಾನದ ಮೊತ್ತವಾಗಿತ್ತು. ಅವರು ಆಸ್ಪತ್ರೆಯಲ್ಲಿ ರಿಯಾಯಿತಿಗಾಗಿ ಮಾಡಿದ ಮನವಿ ಯಾವುದೇ ಪ್ರಯೋಜನ ನೀಡಲಿಲ್ಲ. "ನಾವು ಬಿಲ್ ಪಾವತಿಸಲು ಹಣವನ್ನು ಸಾಲವಾಗಿ ಪಡೆದಿದ್ದೇವೆ" ಎಂದು ರಾಗಿಣಿ ಹೇಳುತ್ತಾರೆ.

Ragini Phadke with her children outside their one-room home in Parli. The autorickshaw is the family's only source of income
PHOTO • Parth M.N.

ಪಾರ್ಲಿಯಲ್ಲಿರುವ ತಮ್ಮ ಒಂದು ಕೋಣೆಯ ಮನೆಯ ಹೊರಗೆ ತನ್ನ ಮಕ್ಕಳೊಂದಿಗೆ ರಾಗಿಣಿ ಫಡ್ಕೆ. ಆಟೋರಿಕ್ಷಾ ಕುಟುಂಬದ ಏಕೈಕ ಆದಾಯದ ಮೂಲವಾಗಿದೆ

ವಿಠ್ಠಲ್ ಮತ್ತು ಲಕ್ಷ್ಮಣ್ ಅವರು ಪಾರ್ಲಿಯಲ್ಲಿ ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದರು. "ಲಕ್ಷ್ಮಣ ಹಗಲಿನಲ್ಲಿ ಅದನ್ನು ಓಡಿಸಿದರೆ, ರಾತ್ರಿ ವಿಠ್ಠಲ್ ಓಡಿಸುತ್ತಿದ್ದರು" ಎಂದು ರಾಗಿಣಿ ಹೇಳುತ್ತಾರೆ. “ಅವರು ಸಾಮಾನ್ಯವಾಗಿ ದಿನಕ್ಕೆ 300-350 ರೂ. ಸಂಪಾದಿಸುತ್ತಿದ್ದರು ಆದರೆ ಮಾರ್ಚ್ 2020ರಲ್ಲಿ ಲಾಕ್‌ಡೌನ್ ಆದ ನಂತರ ಅವರು ಏನನ್ನೂ ಸಂಪಾದಿಸಿಲ್ಲ. ಯಾರೊಬ್ಬರೂ ಆಟೋರಿಕ್ಷಾಗಳನ್ನು ಬಳಸುತ್ತಿರಲಿಲ್ಲ. ನಾವು ಹೇಗೆ ಬದುಕುತ್ತಿದ್ದೇವೆನ್ನುವುದು ನಮಗೆ ಮಾತ್ರ ತಿಳಿದಿದೆ.”

ಎಂಎ ಪದವಿಯನ್ನು ಹೊಂದಿರುವ ರಾಗಿಣಿ ಗೃಹಿಣಿ. ಅವರಿಗೆ ಮುಂದಿನ ದಿನಗಳಲ್ಲಿ ತನ್ನ ಇಬ್ಬರು ಮಕ್ಕಳನ್ನು ಹೇಗೆ ಬೆಳೆಸುವುದೆನ್ನುವ ಕುರಿತು ಖಚಿತತೆಯಿಲ್ಲ -  ಅವರ ಮಕ್ಕಳಲ್ಲಿ ಕಾರ್ತಿಕಿಗೆ ಏಳು ವರ್ಷ ಮತ್ತು ಮುಕುಂದರಾಜ್, ಪುಟ್ಟ ಮಗು. “ನಾನು ಲಕ್ಷ್ಮಣ್ ಇಲ್ಲದೆ ಅವರನ್ನು ಹೇಗೆ ನೋಡಿಕೊಳ್ಳುವುದೆಂದು ಭಯವಾಗುತ್ತಿದೆ. ನಮ್ಮ ಬಳಿ ಹಣವೇ ಇಲ್ಲ. ಅಂತ್ಯ ಕ್ರಿಯೆಯನ್ನೂ ಸಾಲ ಮಾಡಿ ಮಾಡಿದೆವು"

ಸಹೋದರರ ಆಟೊರಿಕ್ಷಾವನ್ನು ಕುಟುಂಬದ ಒಂದು ಕೋಣೆಯ ಮನೆಯ ಪಕ್ಕದಲ್ಲಿ ಮರದ ಕೆಳಗೆ ನಿಲ್ಲಿಸಲಾಗಿದೆ. ಅಲ್ಲಿ ಅವರು ತಮ್ಮ ಹೆತ್ತವರೊಂದಿಗೆ ಒಟ್ಟಿಗೆ ವಾಸಿಸುತ್ತಾರೆ ಅವರ ಸಾಲವನ್ನು ಮರುಪಾವತಿಸಲು ಕುಟುಂಬಕ್ಕೆ ಇರುವ ಸಂಪಾದನೆಯ ಮೂಲವೆಂದರೆ ಆಟೊರಿಕ್ಷಾ. ಆದರೆ ಸಾಲದಿಂದ ಮುಕ್ತಿ ಬಹಳ ದೂರದ ಮಾತು. ಕುಟುಂಬದ ಆರ್ಥಿಕ ಸ್ಥಿತಿ ಬಹಳ ಹದಗೆಟ್ಟಿದೆ ಜೊತೆಗೆ ಒಬ್ಬ ದುಡಿಯುವ ಸದಸ್ಯನನ್ನೂ ಅದು ಕಳೆದುಕೊಂಡಿದೆ.

ಈ ನಡುವೆ, ಉಸ್ಮಾನಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಸ್ತುಭ್ ದಿವೆಗಾಂವ್ಕರ್ ಅವರು ಖಾಸಗಿ ಆಸ್ಪತ್ರೆಗಳಲ್ಲಿನ ಹೆಚ್ಚಿನ ಶುಲ್ಕ ವಿಧಿಸುವ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ. ಮೇ 9ರಂದು ಉಸ್ಮಾನಾಬಾದ್ ನಗರದ ಸಹ್ಯಾದ್ರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅವರು ನೀಡಿದ ನೋಟಿಸ್‌ನಲ್ಲಿ ಏಪ್ರಿಲ್ 1ರಿಂದ ಮೇ 6ರವರೆಗೆ 486 ರೋಗಿಗಳು ದಾಖಲಾಗಿದ್ದರೂ ಕೇವಲ 19 ಕೋವಿಡ್ ರೋಗಿಗಳು ಮಾತ್ರ ಎಂಜೆಪಿಜೆಎವೈ ಅಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.‌

ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಹ್ಯಾದ್ರಿ ಆಸ್ಪತ್ರೆಯ ನಿರ್ದೇಶಕ ಡಾ.ದಿಗ್ಗಾಜ್ ಡಪ್ಕೆ-ದೇಶಮುಖ್ ಅವರು ತಮ್ಮ ಕಾನೂನು ತಂಡವು ಮ್ಯಾಜಿಸ್ಟ್ರೇಟ್ ನೋಟಿಸಿನ ವಿಷಯವನ್ನು ಗಮನಿಸುತ್ತಿದೆ ಎಂದು ಹೇಳಿದರು.

Pramod Morale
PHOTO • Parth M.N.

ಪ್ರಮೋದ್‌ ಮೊರಾಳೆ

ಡಿಸೆಂಬರ್ 2020ರಲ್ಲಿ, ದಿವೆಗಾಂವ್ಕರ್ ಅವರು ರಾಜ್ಯ ಆರೋಗ್ಯ ವಿಮಾ ಸೊಸೈಟಿಗೆ ಶೆಂಡ್ಗೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ  ಎಂಜೆಪಿಜೆಎ ಸಹಯೋಗವನ್ನುರದ್ದು ಗೊಳಿಸುವಂತೆ ಪತ್ರ ಬರೆದಿದ್ದರು. ಅವರ ಪತ್ರದಲ್ಲಿ ಉಸ್ಮಾನಾಬಾದ್ ನಗರದಿಂದ ಸುಮಾರು 100 ಕಿಲೋಮೀಟರ್ ದೂರದ ಉಮರ್ಗಾದಲ್ಲಿರುವ ಆಸ್ಪತ್ರೆಯ ವಿರುದ್ಧ ರೋಗಿಗಳ ದೂರುಗಳ ಪಟ್ಟಿಯೂ ಸೇರಿತ್ತು.

ನಕಲಿ ಬ್ಲಡ್‌ ಆರ್ಟೆರಿಯಲ್‌ ಗ್ಯಾಸ್‌ ಟೆಸ್ಟ್‌ ಮತ್ತು ರೋಗಿಯೊಬ್ಬರ ಹೆಸರಲ್ಲಿ ಮೋಸದಿಂದ ಆಸ್ಪತ್ರೆಯು ವೆಂಟಿಲೇಟರ್‌ ಬೆಡ್‌ ಬಳಕೆಯ ಬಿಲ್‌ ಮಾಡಿರುವುದರ ಆರೋಪ ಶೆಂಡ್ಗೆ ಆಸ್ಪತ್ರೆಯ ವಿರುದ್ಧ ಬಂದಿರುವ ದೂರುಗಳಲ್ಲಿ ಸೇರಿವೆ.

ಮ್ಯಾಜಿಸ್ಟ್ರೇಟ್‌ ಅವರ ಕ್ರಮದಿಂದಾಗಿ, ಆಸ್ಪತ್ರೆ ಇನ್ನು ಮುಂದೆ ಎಂಜೆಪಿಜೆಎ ಜಾಲದ ಭಾಗವಾಗಿರುವುದಿಲ್ಲ. ಆದಾಗ್ಯೂ, ಅದರ ಮಾಲೀಕ ಡಾ. ಆರ್.ಡಿ.ಶೆಂಡ್ಗೆಯವರು ತಮ್ಮ ವಯಸ್ಸಿನ ಕಾರಣದಿಂದಾಗಿ ಎರಡನೇ ಅಲೆಯ ಸಮಯದಲ್ಲಿ ಹೊರಗುಳಿದ್ದೇವೆ ಎಂದು ಹೇಳುತ್ತಾರೆ. "ನನಗೆ ಮಧುಮೇಹವೂ ಇದೆ" ಎಂದು ಅವರು ಹೇಳುತ್ತಾರೆ, ಅವರ ಆಸ್ಪತ್ರೆಯ ವಿರುದ್ಧದ ದೂರುಗಳ ಕುರಿತು ತಮಗೆ ತಿಳಿದಿಲ್ಲವೆನ್ನುತ್ತಾರೆ.

ಖಾಸಗಿ ಆಸ್ಪತ್ರೆಗಳ ಮಾಲೀಕರು ಎಂಜೆಪಿಜೆಎ ಆರ್ಥಿಕವಾಗಿ ಲಾಭದಾಯಕ ಯೋಜನೆಯಲ್ಲ ಎಂದು ಹೇಳುತ್ತಾರೆ. “ಪ್ರತಿಯೊಂದು ಕಾರ್ಯಕಾರಿ ಯೋಜನೆಯನ್ನೂ ಕಾಲದೊಂದಿಗೆ ನವೀಕರಿಸಬೇಕಾಗುತ್ತದೆ. ಇದನ್ನು ಪರಿಚಯಿಸಿ ಒಂಬತ್ತು ವರ್ಷಗಳಾಗಿವೆ, ಪ್ಯಾಕೇಜ್ ವೆಚ್ಚವನ್ನು ರಾಜ್ಯ ಸರ್ಕಾರವು [2012ರಲ್ಲಿ] ಮೊದಲ ಬಾರಿ ರೂಪಿಸಿದ ನಂತರ ನವೀಕರಿಸಿಲ್ಲ” ಎಂದು ನಾಂದೇಡ್ ಮೂಲದ ಪ್ಲಾಸ್ಟಿಕ್ ಸರ್ಜನ್ ಡಾ. ಸಂಜಯ್ ಕದಮ್ ಹೇಳುತ್ತಾರೆ. ಅವರು ಆಸ್ಪತ್ರೆಗಳ ವೆಲ್‌ಫೇರ್‌ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ, ರಾಜ್ಯದ ಖಾಸಗಿ ಆಸ್ಪತ್ರೆಗಳನ್ನು ಪ್ರತಿನಿಧಿಸಲೆಂದು ಇದನ್ನು ಇತ್ತೀಚೆಗೆ ರಚಿಸಲಾಗಿದೆ. "ನೀವು 2012ರಿಂದ ಹಣದುಬ್ಬರವನ್ನು ಪರಿಗಣಿಸಿದರೆ, ಎಂಜೆಪಿಜೆಎ ಪ್ಯಾಕೇಜುಗಳ ಶುಲ್ಕಗಳು ತೀರಾ ಕಡಿಮೆಯಿದೆ - ಸಾಮಾನ್ಯ ಶುಲ್ಕಕ್ಕಿಂತ ಅರ್ಧಕ್ಕಿಂತಲೂ ಕಡಿಮೆಯಿದೆ" ಎಂದು ಅವರು ವಿವರಿಸುತ್ತಾರೆ.

ಸಹಯೋಗಿ ಆಸ್ಪತ್ರೆಯು ತನ್ನ ಹಾಸಿಗೆಗಳಲ್ಲಿ 25 ಪ್ರತಿಶತವನ್ನು ಎಂಜೆಪಿಜೆಎವೈ ಅಡಿಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಕಾಯ್ದಿರಿಸಬೇಕು. "ಶೇಕಡಾ 25ರಷ್ಟು ಕೋಟಾ ತುಂಬಿದ್ದರೆ, ಆಸ್ಪತ್ರೆಗಳು ಯೋಜನೆಯಡಿಯಲ್ಲಿ ರೋಗಿಯನ್ನು ಸೇರಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಡಾ. ಕದಮ್ ಹೇಳುತ್ತಾರೆ.

ಎಂಜೆಪಿಜೆಎಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಧಾಕರ್ ಶಿಂಧೆ, “ಖಾಸಗಿ ಆಸ್ಪತ್ರೆಗಳಿಂದ ಹಲವಾರು ದುಷ್ಕೃತ್ಯ ಮತ್ತು ಅಕ್ರಮಗಳ ಪ್ರಕರಣಗಳು ಕಂಡುಬಂದಿದ್ದು ನಾವು ಅವುಗಳನ್ನು ಪರಿಶೀಲಿಸುತ್ತಿದ್ದೇವೆ."

ಮಾರ್ಚ್ 2020ರಲ್ಲಿ ಕೊರೋನವೈರಸ್ ಕಾಯಿಲೆ ಹರಡಿದಾಗಿನಿಂದ, ಮುಂಬೈನ ಎಂಜೆಪಿಜೆಎಐ ಕಚೇರಿಗೆ ಮಹಾರಾಷ್ಟ್ರದಾದ್ಯಂತ 813 ದೂರುಗಳು ಬಂದಿವೆ - ಅವುಗಳಲ್ಲಿ ಹೆಚ್ಚಿನವು ಖಾಸಗಿ ಆಸ್ಪತ್ರೆಗಳ ವಿರುದ್ಧ. ಇಲ್ಲಿಯವರೆಗೆ, 186 ದೂರುಗಳನ್ನು ಪರಿಹರಿಸಲಾಗಿದೆ ಮತ್ತು ಆಸ್ಪತ್ರೆಗಳು ರೋಗಿಗಳಿಗೆ ಒಟ್ಟು 15 ಲಕ್ಷ ರೂಗಳನ್ನು ಮರಳಿಸಿವೆ.

ಸಾಮಾನ್ಯವಾಗಿ ಯೋಚಿಸಿದರೆ, ಅಕ್ರಮಗಳನ್ನು ನಡೆಸುವ ಮತ್ತು ಅತಿಯಾದ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿ ಪ್ರಭಾವಶಾಲಿಗಳ ಬೆಂಬಲವನ್ನು ಹೊಂದಿರುತ್ತವೆ ಎಂದು ಮಾನವ್‌ ಲೋಕ್‌ನ ಲೋಹಿಯಾ ಹೇಳುತ್ತಾರೆ. "ಇಂತಹ ಬೆಂಬಲಗಳು ಸಾಮಾನ್ಯ ಜನರಿಗೆ ಅವರ ವಿರುದ್ಧ ಹೋರಾಡುವುದನ್ನು ಕಷ್ಟಕರವಾಗಿಸುತ್ತವೆ."

ಆದರೆ ರಾಮಲಿಂಗ್ ಸನಾಪ್ ಆತ್ಮಹತ್ಯೆಯಿಂದ ಮರಣ ಹೊಂದಿದ‌ ದಿನ ಬೆಳಿಗ್ಗೆ, ಅವರ ಆಕ್ರೋಶಿತ ಕುಟುಂಬ ಸದಸ್ಯರು ದೀಪ್ ಆಸ್ಪತ್ರೆಯನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಬಯಸಿದ್ದರು. ಅವರು ಆ ದಿನ ಅಲ್ಲಿಗೆ ತಲುಪಿದಾಗ ಅಲ್ಲಿ ವೈದ್ಯರಿರಲಿಲ್ಲ. "ಶವವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಿಬ್ಬಂದಿ ನಮಗೆ ತಿಳಿಸಿದರು" ಎಂದು ರವಿ ಹೇಳುತ್ತಾರೆ.

Ramling Sanap's extended family outside the superintendent of police's office in Beed on May 21
PHOTO • Parth M.N.

ಮೇ 21ರಂದು ಬೀಡ್ ನಗರದ ಪೊಲೀಸ್ ಅಧೀಕ್ಷಕರ ಕಚೇರಿಯ ಹೊರಗೆ ರಾಮಲಿಂಗ್‌ ಸನಾಪ್‌ ಅವರ ಕುಟುಂಬ ವರ್ಗದವರು ಕಾಯುತ್ತಿರುವುದು

ಕುಟುಂಬವು ನೇರವಾಗಿ ಪೊಲೀಸ್ ಅಧೀಕ್ಷಕರ ಬಳಿಗೆ ಹೋಗಿ ಆಸ್ಪತ್ರೆಯು ರಾಮ್‌ಲಿಂಗ್‌ ಅವರ ಬಳಿ ಹಣದ ವಿಷಯವನ್ನು ಮಾತನಾಡುವ ಮೂಲಕ ಅವರ ಸಾವಿಗೆ ಕಾರಣವಾಗಿದೆ. ಮತ್ತು ಅವರ ದುರಂತ ಮರಣಕ್ಕೆ ಆಸ್ಪತ್ರೆಯ ಅಜಾಗರೂಕತೆಯೂ ಕಾರಣ, ಆ ಸಮಯದಲ್ಲಿ ಯಾವುದೇ ಆಸ್ಪತ್ರೆಯ ಸಿಬ್ಬಂದಿ ವಾರ್ಡ್‌ನಲ್ಲಿ ಇದ್ದಿರಲಿಲ್ಲ ಎಂದು ದೂರು ನೀಡಿತು.

ದೀಪ್ ಹಾಸ್ಪಿಟಲ್, ಪತ್ರಿಕಾ ಹೇಳಿಕೆಯಲ್ಲಿ, ರಾಮಲಿಂಗ್ ವಾರ್ಡ್ ಸಹಾಯಕರು ಅವರನ್ನು ನೋಡಲು ಸಾಧ್ಯವಾಗದ ಸ್ಥಳಕ್ಕೆ ಹೋಗಿದ್ದರು ಎಂದು ಹೇಳಿದೆ. "ಆಸ್ಪತ್ರೆಯು ಪದೇ ಪದೇ ಹಣ ಕೇಳಿದೆ ಎಂಬ ಆರೋಪ ಸುಳ್ಳು. ಆಸ್ಪತ್ರೆಯು ಕುಟುಂಬದಿಂದ ಕೇವಲ 10,000 ರೂಗಳನ್ನು ಮಾತ್ರ ತೆಗೆದುಕೊಂಡಿದೆ. ಅವರ ಆತ್ಮಹತ್ಯೆ ದುರಂತ. ಅವರ ಮಾನಸಿಕ ಸ್ಥಿತಿಯನ್ನು ಅಳೆಯಲು ನಮಗೆ ಸಾಧ್ಯವಾಗಲಿಲ್ಲ" ಎಂದು ಹೇಳಿಕೆ ತಿಳಿಸಿದೆ.

ಆಸ್ಪತ್ರೆಯು ರೂ. 10,000ದ ಬಿಲ್‌ ನೀಡಿದ್ದು ನಿಜವೆಂದು ಪ್ರಮೋದ್‌ ಮೊರಾಳೆ ಒಪ್ಪುತ್ತಾರೆ . "ಆದರೆ ಅವರು ನಮ್ಮಿಂದ 1.6 ಲಕ್ಷ ರೂ. ವಸೂಲಿ ಮಾಡಿದ್ದರು."

ರಾಮಲಿಂಗ್ ಒ‍ಳ್ಳೆಯ ಉತ್ಸಾಹದಲ್ಲಿದ್ದರು ಎಂದು ರಾಜುಬಾಯ್ ಹೇಳುತ್ತಾರೆ. "ಅವರು ಸಾಯುವ ಒಂದು ಅಥವಾ ಎರಡು ದಿನಗಳ ಮೊದಲು, ಅವರು ಮೊಟ್ಟೆ ಮತ್ತು ಮಟನ್ ತಿಂದೆ ಎಂದು ಫೋನ್‌ನಲ್ಲಿ ಹೇಳಿದ್ದರು. ಅವರು ಮಕ್ಕಳ ಬಗ್ಗೆಯೂ ಕೇಳಿದ್ದರು." ನಂತರ ಅವರು ಖರ್ಚುಗಳ ಬಗ್ಗೆ ಕೇಳಿದರು. ಅವರು ತನ್ನ ಕೊನೆಯ ಫೋನ್ ಕರೆಯಲ್ಲಿ ತನ್ನ ಭೀತಿಯನ್ನು ಅವರಿಗೆ ತಿಳಿಸಿದ್ದರು.

"ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು ಆದರೆ ಆಸ್ಪತ್ರೆಯ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಪ್ರಮೋದ್ ಹೇಳುತ್ತಾರೆ. " ಇದುಬಡವರಿಗೆ ಆರೋಗ್ಯ ರಕ್ಷಣೆಯ ಹಕ್ಕಿಲ್ಲ ಎಂಬಂತೆ ಕಾಣುತ್ತಿದೆ."

ಅನುವಾದ: ಶಂಕರ ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru