ಭಾರತದ ಕೃಷಿ ಸಮಸ್ಯೆ ಈಗ ಕೇವಲ ಕೃಷಿ ಸಮಸ್ಯೆ ಆಗಿ ಉಳಿದಿಲ್ಲ.

ಅದೀಗ ಇಡಿಯ ಸಮಾಜದ ಸಂಕಟ ಅಥವಾ ಇಡಿಯ ನಾಗರಿಕತೆಯ ಸಂಕಟವೂ ಅಗಿರಬಹುದು, ಯಾಕೆಂದರೆ ಈ  ನೆಲದ ಅತಿದೊಡ್ಡ ಗುಂಪಾಗಿರುವ ಸಣ್ಣ ರೈತರು ಮತ್ತು ಕಾರ್ಮಿಕರು ತಮ್ಮ ಬದುಕಿಗಾಗಿ ಹೋರಾಟ ಆರಂಭಿಸಿದ್ದಾರೆ.  ಕೃಷಿ ಸಮಸ್ಯೆ ಎಂಬುದು ಇನ್ನೂ ಎಷ್ಟು ಭೂಮಿಯಲ್ಲಿ ಕೃಷಿ ಕಡಿಮೆ ಆಗುತ್ತಾ ಬಂದಿದೆ ಎಂಬುದರ ಅಳತೆ ಆಗಿ ಉಳಿದಿಲ್ಲ; ಅಥವಾ ಮನುಷ್ಯ ಜೀವ, ಉದ್ಯೋಗ ಅಥವಾ ಉತ್ಪಾದಕತೆ ನಷ್ಟದ ಅಂದಾಜಾಗಿಯೂ ಉಳಿದಿಲ್ಲ. ಅಸಲಿಗೆ ಅದು ನಮ್ಮದೇ ಮನುಷ್ಯತ್ವದ ನಷ್ಟದ ಅಳತೆ ಆಗಿ ಎದುರು ಬಂದು ನಿಂತಿದೆ. ಮಾನವೀಯತೆಯ ಪರಿಧಿ ಕುಸಿಯುತ್ತಿರುವುದರ ದ್ಯೋತಕವೂ ಹೌದದು. ಕಳೆದ 20 ವರ್ಷಗಳಲ್ಲಿ ನಾವು ನಮ್ಮ ಕಣ್ಣೆದುರೇ 3,00,000 ರೈತರು ಆತ್ಮಹತ್ಯೆ ಮಾಡಿಕೊಂಡದ್ದನ್ನು ಮತ್ತು ಈ ಇಲ್ಲದವರ ದಯನೀಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದನ್ನು ಕಂಡಿದ್ದೇವೆ. ಆದರೆ ಕೆಲ – ‘ಮಹಾ ಅರ್ಥಶಾಸ್ತ್ರಜ್ಞರು’ – ನಮ್ಮ ಸುತ್ತಲೇ ನಡೆದಿರುವ ಈ ದುರಂತವನ್ನು ಕುರಿತು ಕುಹಕವಾಡಿದ್ದನ್ನೂ, ಇಂತಹದೊಂದು ಸಂಕಟ ಇದೆ ಎಂಬುದನ್ನೇ ನಿರಾಕರಿಸಿದ್ದನ್ನೂ ಕೂಡ ನಾವು ಕಂಡಿದ್ದೇವೆ.

ಈಗ ಕಳೆದೆರಡು ವರ್ಷಗಳಿಂದ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೊ (NCRB) ರೈತರ ಆತ್ಮಹತ್ಯೆಯ ಅಂಕಿಅಂಶಗಳನ್ನೇ ಬಿಡುಗಡೆ ಮಾಡಿಲ್ಲ. ಕಳೆದ ಕೆಲವು ವರ್ಷಗಳಿಂದ ಕೆಲವು ಪ್ರಮುಖ ರಾಜ್ಯಗಳು ಒದಗಿಸಿದ ತಿರುಚಲಾದ ಅಂಕಿ-ಅಂಶಗಳ ಕಾರಣದಿಂದಾಗಿ ಏಜನ್ಸಿಯ ಲೆಕ್ಕಾಚಾರಗಳೂ ಹಾದಿ ತಪ್ಪಿವೆ. ಉದಾಹರಣೆಗೆ ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಲದಂತಹ ಕೆಲವು ರಾಜ್ಯಗಳು ತಮ್ಮಲ್ಲಿ ‘ರೈತರ ಆತ್ಮಹತ್ಯೆ ಶೂನ್ಯ’ ಎಂದು ದಾಖಲಿಸಿಕೊಂಡಿವೆ. 2014ರಲ್ಲಿ 12 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿ ‘ರೈತರ ಆತ್ಮಹತ್ಯೆ ಶೂನ್ಯ’ ಎಂದು ಹೇಳಿವೆ. 2014 ರ NCRB ವರದಿಯಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆಗಳನ್ನು ಕಡಿಮೆ ತೋರಿಸಬೇಕೆಂಬ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಂಕಿಸಂಖ್ಯೆಗಳ ಆಟ ಆಡುವ ನಾಚಿಕೆಗೇಡು ಸಂಗತಿ ನಿರಾತಂಕವಾಗಿ ನಡೆದಿದೆ.

ಇಷ್ಟಿದ್ದರೂ ಆತ್ಮಹತ್ಯೆಗಳೇನೂ ಕಮ್ಮಿಯಾಗಿಲ್ಲ.

ಇನ್ನು ಇದೇ ವೇಳೆ ರೈತರು ಮತ್ತು ಕಾರ್ಮಿಕರ ಪ್ರತಿಭಟನೆಗಳೂ ಕಾವು ಪಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ರೈತರಿಗೆ ಗುಂಡಿಕ್ಕಲಾಗಿದೆ. ಮಹಾರಾಷ್ಟ್ರದಲ್ಲಿ ರೈತರನ್ನು ವಂಚಿಸಿ ಮೂದಲಿಸಲಾಗಿದೆ. ನೋಟುರದ್ಧತಿಯಂತೂ ದೇಶದಾದ್ಯಂತ ರೈತರ ಧೃತಿಗೆಡಿಸಿದೆ. ಗ್ರಾಮೀಣ ಭಾಗಗಳಲ್ಲಿ ಸಿಟ್ಟು ಮತ್ತು ನೋವು ಮಡುಗಟ್ಟುತ್ತಿದೆ. ರೈತರು ಮಾತ್ರವಲ್ಲದೆ ಕಾರ್ಮಿಕರೂ ಕೂಡ MNREGA ವಿನ್ಯಾಸದಲ್ಲಿ ಆಗಿರುವ ಬದಲಾವಣೆಗಳು ತಮಗೆ ಹಾನಿಕರ ಎಂದು ಕಂಡುಕೊಂಡಿದ್ದಾರೆ.  ಮೀನುಗಾರರು, ಅರಣ್ಯವಾಸಿಗಳು, ಕುಶಲಕಾರ್ಮಿಕರು, ಶೋಷಣೆಗೊಳಗಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಅಲ್ಲದೇ ತಮ್ಮ ಮಕ್ಕಳು ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಕೊಲ್ಲುತ್ತಿರುವ ಪರಿಗೆ ದಿಗ್ಭ್ರಮೆ ಹೊಂದಿರುವ ಹೆತ್ತವರು, ತಮ್ಮ ಉದ್ಯೋಗಗಳು ಅಪಾಯದಲ್ಲಿರುವ ಸರ್ಕಾರದ ಸಣ್ಣಪುಟ್ಟ ಹುದ್ದೆಗಳಲ್ಲಿರುವ, ಸಂಚಾರ ಮತ್ತು ಸಾರ್ವಜನಿಕ ವಲಯದ ಸಿಬ್ಬಂದಿಗಳಿಂದ ಪ್ರತಿರೋಧಗಳು ಕಂಡುಬರುತ್ತಿದೆ.

Vishwanath Khule, a marginal farmer, lost his entire crop during the drought year. His son, Vishla Khule, consumed a bottle of weedicide that Vishwanath had bought
PHOTO • Jaideep Hardikar

ವಿದರ್ಭಾದ ಅಕೋಲಾ ಜಿಲ್ಲೆಯ ವಿಶ್ವನಾಥ ಕುಲೆ. ಕುಲೆಯವರ ಮಗನಾದ ವಿಶಾಲ್ ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಸರಕಾರಗಳು ಮಾತ್ರ ಈ ಅಂಕಿಅಂಶಗಳನ್ನು ತಿರುಚುವುದರಲ್ಲಿ ನಿರತವಾಗಿವೆ.

ಗ್ರಾಮೀಣರ ಸಂಕಟಗಳು ಈಗ ಕೇವಲ ಗ್ರಾಮೀಣ ಸಂಕಟಗಳಾಗಿ ಉಳಿದಿಲ್ಲ. 2013-14, 2015-16 ಅವಧಿಯಲ್ಲಿ ದೇಶದಲ್ಲಿ ಉದ್ಯೋಗಗಳು ತೀವ್ರ ಇಳಿಕೆ ಕಂಡಿವೆ ಎಂದು ಅಧ್ಯಯನಗಳು ಬೊಟ್ಟು ಮಾಡುತ್ತಿವೆ.

ಭಾರತ ಸ್ವತಂತ್ರಗೊಂಡ ಬಳಿಕ ಅತಿ ದೊಡ್ಡ ಪ್ರಮಾಣದಲ್ಲಿ ನಗರದತ್ತ ಗ್ರಾಮೀಣ ಹತಾಶರ ವಲಸೆ ಕಾಣಿಸಿದ್ದು 2011 ರ ಜನಗಣತಿಯಲ್ಲಿ . ಲಕ್ಷಾಂತರ ಮಂದಿ ಬಡವರು ತಮ್ಮ ಹಳ್ಳಿಗಳು, ಗ್ರಾಮೀಣ ನಗರಗಳು, ನಗರ ಹೊರವಲಯಗಳು ಮತ್ತು ಮಹಾನಗರಗಳಲ್ಲಿ ನಷ್ಟವಾಗಿರುವ ತಮ್ಮ ಬದುಕಿನ ಹಾದಿಗೆ ಪರ್ಯಾಯವಾಗಿ ಇಲ್ಲದ ಉದ್ಯೋಗವನ್ನರಸುತ್ತಾ ವಲಸೆ ಹೊರಟಿದ್ದಾರೆ. 1991 ಕ್ಕೆ ಹೋಲಿಸಿದರೆ ರೈತರ ಸಂಖ್ಯೆಯಲ್ಲಿ (‘ಮುಖ್ಯ ಬೆಳೆಗಾರರು’) ಒಂದೂವರೆ ಕೋಟಿ ಇಳಿಕೆ ಆಗಿದೆ ಎಂದು 2011 ರ ಜನಗಣತಿ ಬೊಟ್ಟು ಮಾಡುತ್ತದೆ. ಅಂತಹ ಹಲವು ಮಂದಿ ಅನ್ನದಾತರು ಈಗ ನಗರದ ಮನೆಗಳಲ್ಲಿ ಕೆಲಸದಾಳುಗಳಾಗಿ ದುಡಿಯುತ್ತಿರುವುದನ್ನು ನೀವು ಕಂಡಿದ್ದೀರಿ. ಹೀಗೆ ನಗರಗಳ ಮತ್ತು ಗ್ರಾಮೀಣ ಸಿರಿವಂತರಿಬ್ಬರೂ ಈ ಬಡಪಾಯಿಗಳನ್ನು ತಮ್ಮ ಆನಿಕೆಯಲ್ಲಿ ಕುಣಿಸಲಾರಂಭಿಸಿದ್ದಾರೆ.

ಸರಕಾರವು ಈ ನಿಟ್ಟಿನಲ್ಲಿ ತನ್ನ ಕಿವಿಗಳು ಕಿವುಡಾದಂತೆ ಬಿಂಬಿಸಲು ಹರಸಾಹಸ ನಡೆಸಿದೆ. ಇತ್ತ ಸುದ್ದಿ ಮಾಧ್ಯಮಗಳದೂ ಇದೇ ಕಥೆ.

ಮಾಧ್ಯಮಗಳವರು ರೈತರ ಸಮಸ್ಯೆಗಳೆಂದರೆ ಕೇವಲ ’ಸಾಲ ಮನ್ನಾ’ ಬೇಡಿಕೆ ಅಂದುಕೊಂಡುಬಿಟ್ಟಿದ್ದಾರೆ. ಇತ್ತೀಚೆಗೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಅಂದರೆ ಉತ್ಪಾದನಾ ವೆಚ್ಚ (CoP2) + 50% ಎಂಬುದೂ ಮಾಧ್ಯಮಗಳಿಗೆ ಜ್ನಾನೋದಯವಾಗಿದೆ. ಆದರೆ ಸರ್ಕಾರಗಳು ತಾವಿದನ್ನು ಈಗಾಗಲೇ ಮಾಡಿದ್ದೇವೆ ಎಂದು ಹೇಳುತ್ತಿರುವುದನ್ನು ಪ್ರಶ್ನಿಸಲು ಮಾಧ್ಯಮಗಳು ತಯಾರಿಲ್ಲ. ಜೊತೆಗೆ ರಾಷ್ಟ್ರೀಯ ರೈತರ ಆಯೋಗ (NCF ಅಥವಾ ಸ್ವಾಮಿನಾಥನ್ ಆಯೋಗ) ಗುರುತಿಸಿರುವ ಬೇರೆ ಕೆಲವು ಅಷ್ಟೇ ಗಂಭೀರ ವಿಚಾರಗಳನ್ನೂ ಪರಿಗಣಿಸಲೂ ಅವರು ತಯಾರಿಲ್ಲ. NCF ಸಲ್ಲಿಸಿರುವ ಹಲವು ವರದಿಗಳು ಕಳೆದ 12 ವರ್ಷಗಳಿಂದ ಸಂಸತ್ತಿನಲ್ಲಿ ಯಾವುದೇ ಚರ್ಚೆಯಾಗದೇ ನೆನೆಗುದಿಗೆ ಬಿದ್ದಿವೆ. ರೈತರ ಸಾಲಮನ್ನಾ ಕೋರಿಕೆಯನ್ನು ಟೀಕಿಸಿವ ಮಾಧ್ಯಮಗಳು ಅದೇ ಬಾಯಿಯಲ್ಲಿ ಬ್ಯಾಂಕುಗಳ ಅನುತ್ಪಾದಕ ಸಾಲದಲ್ಲಿ ಅತಿದೊಡ್ಡ ಪಾಲು ಇರುವುದು ಕಾರ್ಪೋರೇಟ್ ಗಳದ್ದು ಮತ್ತು ವ್ಯವಹಾರಸ್ಥರದ್ದು ಎಂಬುದನ್ನು ಹೇಳಲು ಸಿದ್ಧರಿಲ್ಲ.

ಹಾಗಾಗಿ ದೊಡ್ಡ ಪ್ರಮಾಣದಲ್ಲಿ, ಪ್ರಜಾತಾಂತ್ರಿಕವಾಗಿ ಪ್ರತಿಭಟನೆಗಳನ್ನು ನಡೆಸುವುದು ಮತ್ತು ಸಂಸತ್ತು ತನ್ನ ಉಭಯ ಸದನಗಳ ಅಧಿವೇಶನ ಕರೆದು 21 ದಿನಗಳು ಅಥವಾ ಮೂರು ವಾರಗಳ ಕಾಲ ಈ ಸಮಸ್ಯೆಗಳನ್ನೇ ಸೋದಾಹರಣ ಚರ್ಚೆ ನಡೆಸಬೇಕು ಎಂದು ಹಕ್ಕೊತ್ತಾಯ ಮಂಡಿಸುವುದು ಸದ್ಯದ ಅನಿವಾರ್ಯವಾಗಿದೆ.

Two women sitting at Azad maidanIn Mumbai, covering their heads with cardboard boxes in the blistering heat.
PHOTO • Binaifer Bharucha

ಮಹಿಳಾ ಕೃಷಿಕರ ಹಕ್ಕುಗಳ ಮತ್ತು ಸಮಸ್ಯೆಗಳ ಬಗ್ಗೆ ಗಟ್ಟಿದನಿಯೆತ್ತದ ಹೊರತು ಕೃಷಿ ಸಮಸ್ಯೆಗಳ ಪರಿಹಾರಗಳು ಸಾಧ್ಯವೇ ಇಲ್ಲ.

ಈ ರೀತಿಯ ಅಧಿವೇಶನಕ್ಕೆ ತಳಹದಿಯೇನು? ಎಂದು ಕೇಳಿದರೆ ಅದಕ್ಕೆ ಉತ್ತರ: ಭಾರತದ ಸಂವಿಧಾನ, ಅದರಲ್ಲೂ ಆಡಳಿತ ನೀತಿಯ ನಿರ್ದೇಶಕ ತತ್ವಗಳು.  ಸಂವಿಧಾನದ ಈ ಭಾಗದಲ್ಲಿ  “ಆದಾಯದಲ್ಲಿ ತಾರತಮ್ಯಗಳನ್ನು ಕನಿಷ್ಠಗೊಳಿಸುವುದು” ಮತ್ತು “ಸ್ಥಿತಿಗಳು, ಸೌಲಭ್ಯಗಳು ಹಾಗೂ ಅವಕಾಶಗಳಲ್ಲಿ ಇರುವ ಅಸಮಾನತೆಗಳನ್ನು ಹೋಗಲಾಡಿಸುವುದು” ಇತ್ಯಾದಿಗಳ ಬಗ್ಗೆ ವಿವರಿಸಲಾಗಿದೆ.  ಈ ತತ್ವಗಳು “ದೇಶದ ಬದುಕಿನ ಎಲ್ಲ ಅಂಗಗಳಲ್ಲೂ  ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಗುವ ಸಾಮಾಜಿಕ ಶಿಸ್ತು” ಇರಬೇಕೆಂದು ಸೂಚಿಸುತ್ತವೆ.

ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕು, ಸಾಮಾಜಿಕ ಭದ್ರತೆಯ ಹಕ್ಕು. ಸಾರ್ವಜನಿಕ ಆರೋಗ್ಯ ಮತ್ತು ಪೋಷಕಾಂಶಗಳ ಮಟ್ಟದಲ್ಲಿ ಸುಧಾರಣೆ. ಜೀವನ ಗುಣಮಟ್ಟದಲ್ಲಿ ಸುಧಾರಣೆಯ ಹಕ್ಕು. ಸ್ತ್ರೀ-ಪುರುಷರಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ. ಕೆಲಸದ ಸ್ಥಳ ಕಾನೂನುಬದ್ಧ ಮತ್ತು ಮಾನವೀಯವಾಗಿರುವುದು – ಇವೆಲ್ಲ ಪ್ರಮುಖ ನಿರ್ದೇಶಕ ತತ್ವಗಳು. ಈ ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳಷ್ಟೇ ಮಹತ್ವದವು ಎಂದು ದೇಶದ ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಒಂದಕ್ಕಿಂತ ಹೆಚ್ಚು ಬಾರಿ ಪುನರುಚ್ಛರಿಸಿದೆ.

ಈ ವಿಶೇಷ ಅಧಿವೇಶನಕ್ಕೆ ಅಜೆಂಡಾ ಏನು? ಕೆಲವು ಸಲಹೆಗಳು ಇಲ್ಲಿವೆ. ಈ ಬಗ್ಗೆ ಕಳಕಳಿಯಿರುವವರು ಇದಕ್ಕೆ ಸೇರ್ಪಡೆ ಅಥವಾ ತಿದ್ದುಪಡಿಗಳನ್ನು ಮಾಡಬಹುದು.

ಮೂರು ದಿನಗಳು : ಸ್ವಾಮಿನಾಥನ್ ಆಯೋಗದ ವರದಿಯ ಚರ್ಚೆ 12 ವರ್ಷಗಳಿಂದ ಚರ್ಚೆಗಾಗಿ ಕಾದಿರುವ ಸಂಗತಿ ಇದು. ಡಿಸೆಂಬರ್ 2004 ಮತ್ತು ಅಕ್ಬರ್ 2006 ನಡುವೆ 5 ವರದಿಗಳನ್ನು ಈ ಆಯೋಗ ಸಲ್ಲಿಸಿದೆ. ವರದಿಯಲ್ಲಿ ಕನಿಷ್ಠ ಬೆಂಬಲಬೆಲೆ ಮಾತ್ರವಲ್ಲದೇ ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸಲಾಗಿದೆ. ಉತ್ಪಾದಕತೆ, ಲಾಭ, ಸಹನೀಯತೆ, ತಂತ್ರಜ್ಞಾನ, ತಂತ್ರಜ್ಞಾನದ ಅತಿ, ಒಣಭೂಮಿ ಕೃಷಿ, ಬೆಲೆ ಆಘಾತಗಳು ಮತ್ತು ಸ್ಥಿರತೆ – ಇತ್ಯಾದಿ. ಕೃಷಿ ಸಂಶೋಧನೆ ಮತ್ತು ತಂತ್ರಜ್ಞಾನಗಳನ್ನು ಖಾಸಗಿ ರಂಗಕ್ಕೆ ಬಿಟ್ಟುಕೊಡುವ ಹುನ್ನಾರವನ್ನೂ ನಾವು ತಡೆಯಬೇಕಾಗಿದೆ. ಜೊತೆಗೇ ಪರಿಸರ ವಿನಾಶದತ್ತಲೂ ಗಮನ ಹರಿಸಬೇಕಿದೆ.

ಮೂರು ದಿನಗಳು : ಜನಾಭಿಪ್ರಾಯ . ಈ ಸಂಕಟವನ್ನು ಅನುಭವಿಸುತ್ತಿರುವ ದೇಶದ ಬಡಪಾಯಿಗಳು ಸಂಸತ್ತಿನ ಸೆಂಟ್ರಲ್ ಹಾಲ್ ನಿಂದ ತಾವು ಅನುಭವಿಸುತ್ತಿರುವುದು ಏನೆಂಬುದನ್ನು, ಈ ಸಂಕಟದಿಂದ ಅವರಿಗೆ ಏನೆಲ್ಲ ಆಗಿದೆ ಎಂಬುದನ್ನು ದೇಶದ ಮಹಾಜನತೆಯ ಮುಂದೆ ಬಿಚ್ಚಿಡಲಿ. ಇಲ್ಲಿಂದ ಬರಿಯ ರೈತರು ಮಾತ್ರವಲ್ಲ ಬೇರೆಯವರ ಸಂಕಟಗಳೂ ಹೊರಬರಬೇಕು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣದಿಂದಾಗಿ ಗ್ರಾಮೀಣ ಬಡವರು ಮತ್ತು ಎಲ್ಲ ಬಡವರು  ಹೇಗೆ ಸಂಕಷ್ಟಕ್ಕೀಡಾಗಿದ್ದಾರೆ, ಆರೋಗ್ಯ ಸಂಬಂಧಿ ವೆಚ್ಚದಿಂದಾಗಿ ತೀವ್ರವಾಗಿ ಏರುತ್ತಿರುವ ಗ್ರಾಮೀಣ ಕುಟುಂಬಗಳ ಸಾಲದ ಹೊರೆ… ಈ ಎಲ್ಲ ವಿಚಾರಗಳು ಲೋಕಕ್ಕೆ ಕೇಳಿಸಲಿ.

ಮೂರು ದಿನಗಳು : ಸಾಲದ ಸಂಕಟ. ಎಡೆಬಿಡದೆ ಏರುತ್ತಿರುವ ಸಾಲದ ಹೊರೆ. ರೈತರು ಮತ್ತು ಇತರರನ್ನು ಅಕಾಲಿಕ ಸಾವಿನ ದವಡೆಗೆ ದೂಡುತ್ತಿರುವ ಮಹಾ ವಿನಾಶ ಪ್ರೇರಣೆ ಈ ಸಾಲದ ಹೊರೆ. ಇದರಿಂದಾಗಿ ಜನರು ತಮ್ಮ ಭೂಮಿಯನ್ನು ಬಹುತೇಕ ಕಳೆದುಕೊಳ್ಳುತ್ತಿದ್ದಾರೆ. ಸಾಂಸ್ಥಿಕ ಸಾಲದ ನೀತಿಯಲ್ಲಿ ಬದಲಾವಣೆಗಳಾಗಿರುವುದರಿಂದ ಖಾಸಗಿ ಚಕ್ರಬಡ್ಡಿ ಸಾಲದವರು ಮತ್ತೆ ತಲೆಯೆತ್ತಿದ್ದಾರೆ.

ಮೂರು ದಿನಗಳು : ದೇಶದ ನೀರಿನ ಮಹಾಸಂಕಟ. ಇದು ಬರಿಯ ಬರವಲ್ಲ. ಸರ್ಕಾರವು ‘ಸಕಾರಣ ಬೆಲೆ’ ಯ ಹೆಸರಿನಲ್ಲಿ ನೀರನ್ನು ಖಾಸಗೀಕರಣಗೊಳಿಸುವತ್ತ ಹೆಜ್ಜೆ ಹಾಕುತ್ತಿದೆ.  ಕುಡಿಯುವ ನೀರಿನ ಹಕ್ಕು ಪ್ರಜೆಯ ಮೂಲಭೂತ ಹಕ್ಕುಗಳಲ್ಲಿ ಒಂದಾಗಬೇಕು ಮತ್ತು ಯಾವುದೇ ರಂಗದಲ್ಲಿ  ಜೀವದಾಯಿ  ಅಂಶಗಳು ಖಾಸಗೀಕರಣಗೊಳ್ಳುವುದು ನಿಲ್ಲಬೇಕು. ಭೂರಹಿತರಿಗೂ ಸೇರಿದಂತೆ ಎಲ್ಲರಿಗೂ ನೀರಿನಂತಹ ವಿಚಾರಗಳಲ್ಲಿ ಸಾಮಾಜಿಕ ನಿಯಂತ್ರಣ ಮತ್ತು ಸಮಾನಾವಕಾಶ ಸಿಗಬೇಕು.

ಮೂರು ದಿನಗಳು : ಮಹಿಳಾ ರೈತರ ಹಕ್ಕುಗಳು . ಗದ್ದೆ ತೋಟಗಳಲ್ಲಿ ಬಹುಪಾಲು ದುಡಿಯುವ ಜನರ ಹಕ್ಕುಗಳು – ಮಾಲಕತ್ವದ ಹಕ್ಕೂ ಸೇರಿದಂತೆ – ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯದೆ ಕೃಷಿ ಸಂಕಟಕ್ಕೆ ಸಮಾಧಾನ ಸಾಧ್ಯವಿಲ್ಲ. ರಾಜ್ಯಸಭೆಯಲ್ಲಿ ಪ್ರೊ. ಸ್ವಾಮಿನಾಥನ್ ಅವರು ಮಂಡಿಸಿದ್ದ ಮಹಿಳಾ ರೈತರ ಹಕ್ಕುಬಾಧ್ಯತೆಗಳ ಮಸೂದೆ – 2011 (2013 ರಲ್ಲಿ ರದ್ದಾಗಿತ್ತು), ಈ ನಿಟ್ಟಿನಲ್ಲಿ ಚರ್ಚೆಗೆ ಒಂದು ಒಳ್ಳೆಯ ಆರಂಭವನ್ನು ಒದಗಿಸುವ ಸಾಧ್ಯತೆಗಳಿವೆ..

ಮೂರು ದಿನಗಳು : ಸ್ತ್ರೀ ಮತ್ತು ಪುರುಷ ಭೂರಹಿತ ಕಾರ್ಮಿಕರ ಹಕ್ಕುಗಳು . ಒತ್ತಡದ ವಲಸೆಗಳು ಹಲವು ದಿಕ್ಕುಗಳಲ್ಲಿ ಸಂಭವಿಸುತ್ತಿರುವುದರಿಂದಾಗಿ ಈ ಸಮಸ್ಯೆಯು ಈಗ ಕೇವಲ ಗ್ರಾಮೀಣ ಸಮಸ್ಯೆಯಾಗಿಯಷ್ಟೇ ಉಳಿದಿಲ್ಲ. ಈ ತೊಂದರೆ ಇರುವಲ್ಲಿ, ಕೃಷಿಗೆ ಮಾಡಲಾಗಿರುವ ಸಾರ್ವಜನಿಕ ಹೂಡಿಕೆಯು ಅವರ ಆವಶ್ಯಕತೆಗಳು, ಹಕ್ಕುಗಳು, ದೃಷ್ಟಿಕೋನಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

ಮೂರು ದಿನಗಳು : ಕೃಷಿ ಬಗ್ಗೆ ಚರ್ಚೆ . ಇನ್ನು ಇಪ್ಪತ್ತು ವರ್ಷಗಳಲ್ಲಿ ನಮ್ಮ ಕೃಷಿರಂಗ ಹೇಗಿರಬೇಕು? ಅದು ಕಾರ್ಪೋರೇಟ್ ಲಾಭಕ್ಕಾಗಿರಬೇಕೆ? ಅಥವಾ ಜನಸಮುದಾಯಗಳು ಮತ್ತು ಕುಟುಂಬಗಳ ಬದುಕಿನ ಮೂಲವಾಗಿ ಉಳಿಯಬೇಕೆ? ಹೀಗೆ ಬೇರೆ ರೀತಿಯ ಕೃಷಿ ಮಾಲಕತ್ವ- ನಿಯಂತ್ರಣಗಳ ಬಗ್ಗೆ ಕೂಡ ಚರ್ಚೆಗಳು ಆಗಬೇಕಿವೆ. ಕೇರಳದಲ್ಲಿ “ಕುಟುಂಬಶ್ರೀ” ಮಾದರಿಯಲ್ಲಿ ನಡೆದಿರುವ ಗುಂಪು ಕೃಷಿ ಚಳವಳಿ ಈ ಮಾದರಿಯದು. ಜೊತೆಗೆ ಭೂಸುಧಾರಣೆಯ ಅಪೂರ್ಣ ಅಜೆಂಡಾ ಪೂರ್ಣಗೊಳ್ಳುವ ಅಗತ್ಯವಿದೆ.  ಈ ಎಲ್ಲ ಚರ್ಚೆಗಳು ನಿಜವಾಗಿಯೂ ಅರ್ಥಪೂರ್ಣವಾಗಬೇಕಾಗಿದ್ದರೆ – ಅವೆಲ್ಲವೂ ಆದಿವಾಸಿ ಮತ್ತು ದಲಿತ ರೈತರು ಹಾಗೂ ಕಾರ್ಮಿಕರ ಹಕ್ಕುಗಳ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಾಗಿರುವುದು ಬಹಳ   ಮುಖ್ಯ.

ಯಾವುದೇ ರಾಜಕೀಯ ಪಕ್ಷ ಈ ರೀತಿಯ ಅಧಿವೇಶನವೊಂದನ್ನು ರಾಜಕೀಯವಾಗಿ ವಿರೋಧಿಸಲಾರದು, ಹೀಗಾಗಿ ಇದನ್ನು ಸಂಭವಿಸುವಂತೆ ಮಾಡಬಲ್ಲವರಾರು? ಸ್ವತಃ ಇಲ್ಲದವರೇ.

Midnight walk to Azad Maidan
PHOTO • Shrirang Swarge

ಮಾರ್ಚ್ನಲ್ಲಿ ನಾಸಿಕ್ ನಿಂದ ಮುಂಬೈವರೆಗೆ ನಡೆದಿದ್ದ ರೈತರ ಮೋರ್ಚಾ ಇಂದು ರಾಷ್ಟ್ರೀಯ ಮಟ್ಟದವರೆಗೆ ಬೆಳೆಯಬೇಕಿದೆ. ಇದರಲ್ಲಿ ರೈತರು ಮತ್ತು ಕಾರ್ಮಿಕರಲ್ಲದೆ ಈ ಸಮಸ್ಯೆಗಳಿಂದ ಬಳಲುತ್ತಿರುವವರೆಲ್ಲರೂ ಜೊತೆಗೂಡಿ ಹೋರಾಡಬೇಕಿದೆ.

ಇದೇ ಮಾರ್ಚ್ ತಿಂಗಳಲ್ಲಿ ಸುಮಾರು 40,000 ರೈತರು ಬಹುತೇಕ ಇವೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಸಿಕ್ ನಿಂದ ಮುಂಬಯಿಗೆ ಕಾಲ್ನಡಿಗೆಯಲ್ಲಿ ಬಂದರು. ಆದರೆ ಉದ್ಧಟತನ ತೋರಿದ ಮುಂಬಯಿ ಸರಕಾರ ಇದು ನಗರಗಳ ಮಾವೋಯಿಸ್ಟರ ಚಿತಾವಣೆ ಎಂದು ತಳ್ಳಿಹಾಕಿದ್ದಲ್ಲದೆ ಅವರ ಜೊತೆ ಮಾತನಾಡುವುದಿಲ್ಲ ಎಂದುಬಿಟ್ಟಿತು. ಆದರೆ, ಜನಸಮೂಹವು ರಾಜ್ಯ ವಿಧಾನಸಭೆಗೆ ಅಭೂತಪೂರ್ವ ಸಂಖ್ಯೆಯಲ್ಲಿ ಲಗ್ಗೆಯಿಟ್ಟಾಗ ಸರಕಾರಕ್ಕೆ ಬೇರೆ ದಾರಿಯೇ ಉಳಿದಿರಲಿಲ್ಲ. ಗ್ರಾಮೀಣ ಬಡವರು ತಮ್ಮ ಸರ್ಕಾರವನ್ನು ಮಣಿಸಿದ ಪರಿ ಇದು.

ಇತ್ತ ಕಾಲ್ನಡಿಗೆಯಲ್ಲಿ ಶಿಸ್ತಿನಿಂದ ಬಂದ ಹೋರಾಟಗಾರರು ಮುಂಬಯಿಯ ಜನಮನವನ್ನೂ ಗೆದ್ದರು.  ಮಹಾನಗರದ ಕಾರ್ಮಿಕರು, ಮಧ್ಯಮವರ್ಗದವರು ಮಾತ್ರವಲ್ಲದೇ ಮೇಲ್ಮಧ್ಯಮ ವರ್ಗದಿಂದಲೂ ಅವರಿಗೆ ಕಾರುಣ್ಯಲಾಭ, ಬೆಂಬಲಗಳು ಸಿಕ್ಕವು.

ಈಗ ಇದು ರಾಷ್ಟ್ರೀಯ ಮಟ್ಟದಲ್ಲಿ ಪುನರಾವರ್ತನೆಗೊಳ್ಳಬೇಕಿದೆ – 25 ಪಟ್ಟು ದೊಡ್ಡದಾಗಿ. ಇಲ್ಲದವರ ದಂಡಯಾತ್ರೆಯ ರೂಪದಲ್ಲಿ.  ರೈತರು ಮತ್ತು ಕಾರ್ಮಿಕರು ಮಾತ್ರವಲ್ಲ, ಈ ಸಂಕಟದಿಂದ ಹೊಡೆತ ಅನುಭವಿಸಿರುವವರೆಲ್ಲ ಇದಕ್ಕೆ ಕೈ ಜೋಡಿಸಬೇಕು.  ಮುಖ್ಯವಾಗಿ ಈ ಹೊಡೆತ ಬೀಳದಿರುವವರೂ, ಈ ಸಂಕಟಗಳ ಬಗ್ಗೆ ಮಾನವೀಯ ಸ್ಪಂದನ ಹೊಂದಿದ್ದಲ್ಲಿ ಇವರೊಂದಿಗೆ ಸೇರಬೇಕು. ನ್ಯಾಯ ಮತ್ತು ಪ್ರಜಾತಂತ್ರದಲ್ಲಿ ನಂಬಿಕೆ ಇರುವವರೆಲ್ಲರ ದಂಡಯಾತ್ರೆ ಇದಾಗಬೇಕು. ಇದು ದೇಶದೆಲ್ಲೆಡೆಯಿಂದ ಆರಂಭವಾಗಿ ದಿಲ್ಲಿಯಲ್ಲಿ ಒಟ್ಟುಸೇರಬೇಕು. ಕೆಂಪುಕೋಟೆಯಲ್ಲಿ ರ್ಯಾಲಿಗಳು ಬೇಡ. ಜಂತರ್ ಮಂತರ್ ಸತ್ಯಾಗ್ರಹವೂ ಬೇಡ. ದಂಡಯಾತ್ರೆ ನೇರವಾಗಿ ಸಂಸತ್ತನ್ನು ಸುತ್ತುವರಿಯಬೇಕು.  ನಮ್ಮ ಮಾತನ್ನು ಕೇಳಲು, ಆ ನಿಟ್ಟಿನಲ್ಲಿ ಕಾರ್ಯಾಚರಿಸಲು ಆರಂಭಿಸುವುದು ಸಂಸತ್ತಿಗೆ ಅನಿವಾರ್ಯವಾಗಬೇಕು.  ಹೌದು ಇದು ಅಕ್ಷರಶಃ ದಿಲ್ಲಿಗೆ ದಂಡಯಾತ್ರೆ.

ಈ ಚಳುವಳಿ ಎದ್ದು ಹೊರಡಲು ತಿಂಗಳುಗಳು ಬೇಕಾಗಬಹುದು, ಇದರ ಲಾಜಿಸ್ಟಿಕ್ ಸವಾಲುಗಳೂ ಅಗಾಧ.  ಆದರೆ ದೇಶದ ರೈತರು, ಕಾರ್ಮಿಕರು ಮತ್ತಿತರ ಸಂಘಟನೆಗಳು ಸೇರಿದರೆ ಸಾಧ್ಯವಾಗದ್ದಲ್ಲ. ಆಳುವವರು – ಮತ್ತವರ ಮಾಧ್ಯಮಗಳು – ಈ ಚಳುವಳಿಗೆ ಪ್ರತಿರೋಧ ತೋರಿಸಲಿದ್ದಾರೆ ಮತ್ತು ಎಲ್ಲ ಹಂತಗಳಲ್ಲೂ ಇದನ್ನು ಕ್ಷುಲ್ಲಕಗೊಳಿಸಲು ಹಪಾಹಪಿ ತೋರಲಿದ್ದಾರೆ.

ಆದರೂ ಇದನ್ನು ಸಾಧಿಸಬಹುದು, ಸಾಧಿಸಬೇಕು. ಬಡವರನ್ನು ಕಡೆಗಣಿಸಬೇಡಿ – ಇಂದು ದೇಶದಲ್ಲಿ ಪ್ರಜಾತಂತ್ರವನ್ನು ಜೀವಂತವಾಗಿಟ್ಟಿರುವುದು ಈ ಬಡಜನಸಮುದಾಯಗಳೇ ಹೊರತು ಬಾಯಿಪಟಾಕಿ ವರ್ಗಗಳಲ್ಲ.

ಇದು ನಿಸ್ಸಂದೇಹವಾಗಿಯೂ ಅತ್ಯುನ್ನತ ಪ್ರಜಾತಾಂತ್ರಿಕ ಪ್ರತಿಭಟನೆಯಾಗಲಿದೆ – ಲಕ್ಷಾಂತರ ಮಂದಿ ನಾಗರಿಕರು ತಮ್ಮ ಜನಪ್ರತಿನಿಧಿಗಳಲ್ಲಿ ಕೆಲಸ ಮಾಡಿ ತೋರಿಸುವಂತೆ ಹಕ್ಕೊತ್ತಾಯ ಮಂಡಿಸಲಿದ್ದಾರೆ. ಭಗತ್ ಇಂದು ಬದುಕಿರುತ್ತಿದ್ದರೆ ಇದನ್ನು ಹೀಗೆ ಹೇಳುತ್ತಿದ್ದರೇನೋ: ಕಿವುಡು ಕಿವಿಗಳಿಗೆ ಕೇಳಿಸುವಂತಹ, ಕುರುಡು ಕಣ್ಣುಗಳಿಗೆ ಕಾಣಿಸುವಂತಹ ಮತ್ತು ಮೂಕ ಬಾಯಿಗಳಲ್ಲಿ ಧ್ವನಿ ಹೊರಡಿಸುವ ಮಹಾ ಚಳುವಳಿ ಇದು.

ಅನುವಾದ : ರಾಜಾರಾಂ ತಲ್ಲೂರು

P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

Other stories by Rajaram Tallur