ಹಸಿರು ಬೆಟ್ಟಗಳು, ಸಣ್ಣ ಜಲಪಾತಗಳು ಮತ್ತು ಶುದ್ಧ ಗಾಳಿಯ ಹಿನ್ನೆಲೆಯಲ್ಲಿ, ಯುವಕನೊಬ್ಬ ತನ್ನ ಎಮ್ಮೆಗಳು ಮೇಯುವುದನ್ನು ನೋಡುತ್ತಿದ್ದ.

“ನೀವು ಯಾವುದಾದರೂ ಸರ್ವೇ ಮಾಡುತ್ತಿದ್ದೀರಾ?” ನಾನು ಆತನ ಬಳಿ ಹೋದಾಗ ನನಗೆ ಎದುರಾದ ಮೊದಲ ಪ್ರಶ್ನೆಯಿದು.

ನಾನು “ಇಲ್ಲ,” ಎನ್ನುತ್ತಾ, ನಾನಿಲ್ಲಿ ಅಪೌಷ್ಟಿಕತೆಯ ಕುರಿತು ವರದಿ ಮಾಡಲು ಬಂದಿದ್ದೇನೆ ಎಂದು ಹೇಳಿದೆ.

ನಾವು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ಮೊಖಾಡಾ ತಾಲೂಕಿನಲ್ಲಿದ್ದು, ಅಲ್ಲಿ 5,221 ಮಕ್ಕಳನ್ನು ತೀವ್ರ ಕಡಿಮೆ ತೂಕದ ಮಕ್ಕಳು ಎಂದು ಗುರುತಿಸಲಾಗಿದೆ – ಇದು ಈ ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಎಂದು ಈ ವರದಿ ತಿಳಿಸಿದೆ.

ನಾವಿದ್ದ ಸ್ಥಳದಿಂದ ಈ ರಾಜ್ಯದ ರಾಜಧಾನಿ ಮುಂಬಯಿಗೆ ಕೇವಲ 157 ಕಿಲೋಮೀಟರ್‌ ದೂರವಿದೆ ಆದರೆ ಇಲ್ಲಿನ ಪರಿಸರಕ್ಕೂ ಅಲ್ಲಿನ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ರೋಹಿದಾಸ್ ಕಾ ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ. ಪಾಲ್ಘರ್ ಜಿಲ್ಲೆಯಲ್ಲಿ ಶೇ.38ರಷ್ಟು ಜನರು ಬುಡಕಟ್ಟು ಜನಾಂಗದವರು. ಎಮ್ಮೆ ಮೇಯಿಸುತ್ತಿದ್ದ ಈ ಯುವಕ ತನ್ನ ಸರಿಯಾದ ವಯಸ್ಸನ್ನು ನನಗೆ ತಿಳಿಸಲು ವಿಫಲನಾದ, ಆದರೆ ಅವನು 20ರ ದಶಕದ ಉತ್ತರಾರ್ಧದಲ್ಲಿರುವಂತೆ ತೋರುತ್ತಿತ್ತು. ಆತ ತನ್ನ ಭುಜಕ್ಕೆ ಕೊಡೆಯೊಂದನ್ನು ನೇತುಹಾಕಿಕೊಂಡಿದ್ದ, ಕೈಯಲ್ಲಿ ಕೋಲು ಹಿಡಿದಿದ್ದ ಆತ ಕೊರಳ ಸುತ್ತ ಒಂದು ಟವೆಲ್‌ ಸುತ್ತಿಕೊಂಡಿದ್ದ. ತನ್ನ ಎರಡು ಎಮ್ಮೆಗಳನ್ನು ಮೇಯಿಸುತ್ತಾ ಅಲ್ಲಿ ನಿಂತಿದ್ದ. "ಮಳೆಗಾಲದ ದಿನಗಳಲ್ಲಿ ಮಾತ್ರ ಅವುಗಳಿಗೆ ಹೊಟ್ಟೆ ತುಂಬಾ ತಿನ್ನಲು ದೊರೆಯುತ್ತದೆ," ಎಂದು ಅವರು ಹೇಳುತ್ತಾರೆ. "ಬೇಸಿಗೆಯಲ್ಲಿ ಅವು [ಆಹಾರವನ್ನು ಹುಡುಕಲು] ಸಾಕಷ್ಟು ಅಲೆದಾಡಬೇಕಾಗುತ್ತದೆ."

Rohidas is a young buffalo herder in Palghar district's Mokhada taluka.
PHOTO • Jyoti Shinoli
One of his buffaloes is seen grazing not too far away from his watch
PHOTO • Jyoti Shinoli

ಎಡ: ಪಾಲ್ಘರ್ ಜಿಲ್ಲೆಯ ಮೊಖಾಡಾ ತಾಲ್ಲೂಕಿನವರಾದ ರೋಹಿದಾಸ್ ಒಬ್ಬ ಎಮ್ಮೆ ಸಾಕಾಣಿಕೆದಾರ. ಬಲಕ್ಕೆ: ಅವರ ಎಮ್ಮೆಗಳಲ್ಲಿ ಒಂದು ಅವರ ಕಣ್ಣಳತೆಯಿಂದ ತುಂಬಾ ದೂರದಲ್ಲಿ ಮೇಯುತ್ತಿರುವುದನ್ನು ಕಾಣಬಹುದು

"ನನ್ನ ಮನೆ ಅಲ್ಲಿದೆ," ಎಂದು ರೋಹಿದಾಸ್ ಎದುರಿನ ಬೆಟ್ಟದ ಮೇಲಿರುವ ಒಂದು ಕುಗ್ರಾಮವನ್ನು ತೋರಿಸುತ್ತಾ ಹೇಳುತ್ತಾರೆ, "ದಮ್ತೆಪಾಡದಲ್ಲಿ." ಅಲ್ಲಿ 20-25 ಕುಟುಂಬಗಳು ಮರಗಳ ತೋಪಿನಲ್ಲಿ  ಗುಡಿಸಲು ಕಟ್ಟಿರುವುದನ್ನು ನಾನು ನೋಡಿದೆ. ತಮ್ಮ ಮನೆಗಳನ್ನು ಪ್ರವೇಶಿಸಲು, ನಿವಾಸಿಗಳು ವಾಘ್ ನದಿಯಿಂದ ಬರುವ ತೊರೆಯ ಮೇಲೆ ಒಂದು ಸಣ್ಣ ಸೇತುವೆಯನ್ನು ದಾಟಬೇಕಾಗುತ್ತದೆ. "ನಾವು ಈ ನೀರನ್ನು [ಹೊಳೆಯಿಂದ] ಕುಡಿಯುತ್ತೇವೆ ಮತ್ತು ಅದನ್ನು ಮನೆಯಲ್ಲಿ ಬಳಸುತ್ತೇವೆ; ಪ್ರಾಣಿಗಳು ಸಹ ಅದನ್ನು ಕುಡಿಯುತ್ತವೆ" ಎಂದು ಅವರು ಹೇಳುತ್ತಾರೆ.

ಬೇಸಗೆಯ ದಿನಗಳಲ್ಲಿ ವಾಘ್‌ ನದಿ ಬತ್ತುತ್ತದೆಯಾದ್ದರಿಂದ ಆ ಸಮಯದಲ್ಲಿ ಸಮುದಾಯಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎನ್ನುತ್ತಾರವರು.

"ಈ ತಿಂಗಳು [ಜುಲೈ] ಸೇತುವೆ ನೀರಿನಡಿಯಲ್ಲಿ ಮುಳುಗಿತ್ತು. ಇದರಿಂದಾಗಿ ಅತ್ತಿಂದಿತ್ತ ಸಂಪರ್ಕವೇ ಕಡಿದುಹೋಗಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಈ ಸಮಯದಲ್ಲಿ ದಮ್ತೆಪಾಡದಲ್ಲಿ ಬದುಕುವುದು ಬಹಳ ಕಷ್ಟವೆಂದು ರೋಹಿದಾಸ್‌ ಹೇಳುತ್ತಾರೆ. “ರಸ್ತೆಯಾಗಲೀ, ಗಾಡಿಯಾಗಲಿ ಇರುವುದಿಲ್ಲ. ಶೇರ್‌ ಜೀಪುಗಳು ಕೂಡ ಬಹಳ ವಿರಳ. ಆರೋಗ್ಯ ಸಂಬಂಧಿ ತುರ್ತು ಸಂದರ್ಭಗಳಲ್ಲಿ ಇಲ್ಲಿ ಬಹಳ ಕಷ್ಟವಾಗುತ್ತದೆ,” ಎಂದು ಅವರು ಹೇಳುತ್ತಾರೆ, ಏಕೆಂದರೆ ಮೊಖಡಾ ಸರ್ಕಾರಿ ಆಸ್ಪತ್ರೆ ಇಲ್ಲಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದೆ.

ಅಂತಹ ಸಮಯದಲ್ಲಿ, ನಿವಾಸಿಗಳು ಗರ್ಭಿಣಿಯರು ಮತ್ತು ಇತರ ರೋಗಿಗಳನ್ನು ಡೋಲಿ ಮೇಲೆ ಸಾಗಿಸಬೇಕಾಗುತ್ತದೆ. ಈ ಪ್ರದೇಶದಲ್ಲಿ ಫೋನ್‌ ನೆಟ್ವರ್ಕ್‌ ಕೂಡಾ ದುರ್ಬಲವಾಗಿರುವುದರಿಂದಾಗಿ ಇಲ್ಲಿನ ಜನರಿಗೆ ಸಮಯಕ್ಕೆ ಆಂಬುಲೆನ್ಸ್‌ ವಾಹನಕ್ಕೆ ಕರೆ ಮಾಡಲು ಕೂಡ ಸಾಧ್ಯವಿಲ್ಲ.

Rohidas lives with his family in a small hamlet called Damtepada on a hill in Mokhada.
PHOTO • Jyoti Shinoli
He and other villagers must cross this stream everyday to get home
PHOTO • Jyoti Shinoli

ಎಡ: ರೋಹಿದಾಸ್ ತನ್ನ ಕುಟುಂಬದೊಂದಿಗೆ ಮೊಖಡಾದ ಬೆಟ್ಟದ ಮೇಲಿರುವ ದಮ್ತೆಪಾಡಾ ಎಂಬ ಸಣ್ಣ ಕುಗ್ರಾಮದಲ್ಲಿ ವಾಸಿಸುತ್ತಾರೆ. ಬಲ: ಅವರು ಮತ್ತು ಇತರ ಗ್ರಾಮಸ್ಥರು ಮನೆಗೆ ಹೋಗಲು ಪ್ರತಿದಿನವೂ ಈ ತೊರೆಯನ್ನು ದಾಟಬೇಕು

ರೋಹಿದಾಸ್‌ ಎಂದೂ ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಅವರ ಮೂವರು ಸಹೋದರರು ಕೂಡಾ ಶಾಲೆಯ ಮುಖ ಕಂಡಿಲ್ಲ. ಈ ವರದಿಯ ಪ್ರಕಾರ ಕಾ ಠಾಕೂರ್ ಸಮುದಾಯದ ಪುರುಷರು ಶೇಕಡಾ 71.9 ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದಾರೆ , ಆದರೆ ರೋಹಿದಾಸ್ ಹೇಳುತ್ತಾರೆ, "ಪಾಡ [ಕುಗ್ರಾಮ] ದಲ್ಲಿನ ಕೆಲವು ಹುಡುಗರು 10ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ, ಆದರೆ ಅವರೆಲ್ಲರದೂ ನನ್ನದೇ ಪಾಡು. ಹೀಗಿರುವಾಗ ಓದಿದ್ದರಿಂದ ಆದ ವ್ಯತ್ಯಾಸವೇನು?" ಎಂದು ಅವರು ಕೇಳುತ್ತಾರೆ.

ರೋಹಿದಾಸ್ ಅವರಿಗೆ ಕೆಲವು ತಿಂಗಳ ಹಿಂದೆ ಮದುವೆಯಾಗಿದೆ. ಅವರ ಪತ್ನಿ ಬೋಜಿ, ಅವರ ಪೋಷಕರು, ಮೂವರು ಒಡಹುಟ್ಟಿದವರು, ಅವರ ಹೆಂಡತಿಯರು ಮತ್ತು ಮಕ್ಕಳು ಒಟ್ಟಿಗೆ ತಮ್ಮ ಮನೆಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಎರಡು ಎಕರೆ ಅರಣ್ಯ ಭೂಮಿಯಲ್ಲಿ ಖಾರಿಫ್ ಬೆಳಯಾಗಿ ಭತ್ತವನ್ನು ಬೆಳೆಯುತ್ತಾರೆ. "ಭೂಮಿ ನಮ್ಮ ಹೆಸರಿನಲ್ಲಿಲ್ಲ" ಎಂದು ಅವರು ಹೇಳುತ್ತಾರೆ.

ಅಕ್ಟೋಬರ್ ಮತ್ತು ನವೆಂಬರ್ ನಡುವಿನ ಕೊಯ್ಲಿನ ನಂತರ, ಇಡೀ ಕುಟುಂಬವು ನೂರು ಕಿ.ಮೀ ದೂರದಲ್ಲಿರುವ ಥಾಣೆ ಜಿಲ್ಲೆಯ ಭಿವಾಂಡಿ ತಾಲ್ಲೂಕಿನಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತದೆ. "ಇಟ್ಟಿಗೆ ಗೂಡಿನಿಂದ ನಾವು ಗಳಿಸಿದ್ದನ್ನು ಕೃಷಿಗಾಗಿ ಖರ್ಚು ಮಾಡುತ್ತೇವೆ," ಎಂದು ಅವರು ಹೇಳುತ್ತಾರೆ. ಅವರ ಕುಟುಂಬದ ಅನುಭವವು ಪಾಲ್ಘರ್‌ನ ಅನೇಕ ಬುಡಕಟ್ಟು ಕುಟುಂಬಗಳ ಅನುಭವವೂ ಹೌದು, ಅವರು ಖಾರಿಫ್ ಕೃಷಿ, ಕೊಯ್ಲು ಮತ್ತು ವಲಸೆಯ ನಡುವೆ ವಾರ್ಷಿಕವಾಗಿ ಚಲಿಸುತ್ತಾರೆ.

ಜುಲೈ 21, 2022ರಂದು, ದ್ರೌಪದಿ ಮುರ್ಮು ಅವರು ಭಾರತದ ಮೊದಲ ಆದಿವಾಸಿ ಅಧ್ಯಕ್ಷರಾಗುವ ಮೂಲಕ ಇತಿಹಾಸ ಬರೆದರು. ಮುರ್ಮು ಒಡಿಶಾದ ಸಂತಾಲಿ ಆದಿವಾಸಿ ಸಮುದಾಯಕ್ಕೆ ಸೇರಿದವರು ಮತ್ತು ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆಯಾಗಿದ್ದಾರೆ.

“ನಮ್ಮ ಈಗಿನ ರಾಷ್ಟ್ರಪತಿಯವರು ಬುಡಕಟ್ಟು ಸಮುದಾಯಕ್ಕೆ ಸೇರಿದವರೆನ್ನುವುದು ನಿಮಗೆ ಗೊತ್ತೇ?” ಎಂದು ಕೇಳಿ ಅವರ ಉತ್ತರಕ್ಕಾಗಿ ಕಾದೆ.

“ಯಾರಿಗೆ ಗೊತ್ತು? ಅದರಿಂದ ಆಗೋ ವ್ಯತ್ಯಾಸ ಆದ್ರೂ ಏನು?” ಎಂದು ಕೇಳಿದರವರು. “मला गुरंच राखायचीत [ಇದರಿಂದ ನನಗೆ ಎಮ್ಮೆ ಮೇಯಿಸುವುದು ತಪ್ಪೋದಿಲ್ಲ].”

ಅನುವಾದ: ಶಂಕರ. ಎನ್. ಕೆಂಚನೂರು

Jyoti Shinoli is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti Shinoli
Editor : Vishaka George

Vishaka George is a Bengaluru-based Senior Reporter at the People’s Archive of Rural India and PARI’s Social Media Editor. She is also a member of the PARI Education team which works with schools and colleges to bring rural issues into the classroom and curriculum.

Other stories by Vishaka George
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru