ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.

ಉತ್ತರ ಗುಜರಾತಿನ ಬನಸ್ಕಾಂತ ಜಿಲ್ಲೆಯಿಂದ ಕರಭಾಯ್ ಆಲ್ ಅವರು "ನಿಮ್ಮ ಹಳ್ಳಿಯಲ್ಲಿ ಮಳೆಯಾಯಿತೇ?" ಎಂದು ದೂರವಾಣಿಯಲ್ಲಿ ಪ್ರಶ್ನಿಸುತ್ತಿದ್ದರು. "ಈ ವರ್ಷದ ಜುಲೈನ ಕೊನೆಯ ವಾರದಲ್ಲಿ ಮಳೆ ಸುರಿಯಿತಷ್ಟೇ. ಇಲ್ಲಿ ಮಳೆಯೇ ಇಲ್ಲ. ಮಳೆ ಬಂದರೆ ನಾವು ಮನೆಗೆ ತೆರಳುತ್ತೇವೆ", ಎಂದು ಅವರು ಅನುಮಾನಿಸುತ್ತಲೇ ನುಡಿದರು.

ಸಾಕಷ್ಟು ಚಿಂತಿತರಾಗಿದ್ದ ಅವರಿಗೆ 900 ಕಿ.ಮೀ. ದೂರದಲ್ಲಿ ಪುಣೆ ನಗರದಲ್ಲಿನ ರೈತರಲ್ಲದ ವ್ಯಕ್ತಿಯೊಂದಿಗೆ ತಾನು ಸಂಭಾಷಿಸುತ್ತಿರುವ ಬಗ್ಗೆ ಯಾವುದೇ ಗಮನವಿರಲಿಲ್ಲ. ಮಾನ್ಸೂನ್ ಮಳೆಯನ್ನು ಕುರಿತಂತೆ ತಮ್ಮ ಗಮನವೆಲ್ಲವನ್ನು ಕೇಂದ್ರೀಕರಿಸಿದ್ದ ಕರಭಾಯ್ ಅವರಿಗೆ ಅದು ತನ್ನ ಹಾಗೂ ತನ್ನ ಕುಟುಂಬದ ಪ್ರತಿ ವರ್ಷದ ಅಸ್ತಿತ್ವದ ಪ್ರಶ್ನೆಯಾಗಿತ್ತು.

75 ರ ಈ ಪಶುಪಾಲಕ ತನ್ನ ವಾರ್ಷಿಕ ವಲಸೆಯ ನಿಟ್ಟಿನಲ್ಲಿ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು, ಸಹೋದರ ಹಾಗೂ ಆತನ ಪರಿವಾರದೊಂದಿಗೆ ಹಳ್ಳಿಯನ್ನು ತೊರೆದು ಈಗಾಗಲೇ 12 ತಿಂಗಳು ಸಂದಿವೆ. 300 ಕುರಿ, 3 ಒಂಟೆ ಹಾಗೂ ರಾತ್ರಿಯ ಕಾವಲುಗಾರ ವಿಛಿಯೋ ಎಂಬ ನಾಯಿಯೊಂದಿಗೆ ಹೊರಟ ಆ 14 ಸದಸ್ಯರ ಗುಂಪು, 12 ತಿಂಗಳಲ್ಲಿ ತಮ್ಮ ಜಾನುವಾರುಗಳೊಂದಿಗೆ ಕಛ್, ಸುರೇಂದ್ರನಗರ್, ಪಟನ್ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಸುಮಾರು 800 ಕಿ.ಮೀ.ಗಳನ್ನು ಕ್ರಮಿಸಿದೆ.

ಕರಭಾಯ್ ಆಲ್ ತನ್ನ ಪರಿವಾರದೊಂದಿಗೆ ಗುಜರಾತಿನ ಮೂರು ಪ್ರದೇಶಗಳಲ್ಲಿ ವರ್ಷಂಪ್ರತಿ ಪ್ರಯಾಣಿಸುವ 800 ಕಿ.ಮೀ.ನ ಮಾರ್ಗ. ಆಧಾರ: ಗೂಗಲ್ ನಕ್ಷೆ

ಕರಭಾಯ್ ಅವರ ಪತ್ನಿಯು ಶಾಲೆಗೆ ಹೋಗುವ ಚಿಕ್ಕ ಮೊಮ್ಮಕ್ಕಳೊಂದಿಗೆ ಕಛ್ ನ ರಪರ್ ತಾಲ್ಲೂಕಿನಲ್ಲಿನ ಜತವಡ ಜಿಲ್ಲೆಯ ತಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಾರೆ. ರಬರಿ ಸಮುದಾಯಕ್ಕೆ ಸೇರಿದ (ಈ ಜಿಲ್ಲೆಯ ಇತರೆ ಹಿಂದುಳಿದ ವರ್ಗವಾಗಿ ಈ ಸಮುದಾಯವನ್ನು ಪಟ್ಟಿಮಾಡಲಾಗಿದೆ) ಇವರ ಪರಿವಾರವು ಪ್ರತಿ ವರ್ಷ ತಮ್ಮ ಕುರಿಗಳಿಗಾಗಿ ಮೇವುಮಾಳದ ತಲಾಶಿಯಲ್ಲಿ 8 ರಿಂದ 10 ತಿಂಗಳ ಮಟ್ಟಿಗೆ ತಮ್ಮ ಹಳ್ಳಿಯಿಂದ ಹೊರಬೀಳುತ್ತದೆ. ಸಾಮಾನ್ಯವಾಗಿ ಇವರು ವರ್ಷಂಪ್ರತಿ ದೀಪಾವಳಿಯು ಮುಗಿಯುತ್ತಿದ್ದಂತೆಯೇ (ಅಕ್ಟೋಬರ್-ನವೆಂಬರ್) ಹಳ್ಳಿಯಿಂದ ಹೊರಟು, ಮಾನ್ಸೂನ್ ಇನ್ನೇನು ಪ್ರಾರಂಭವಾಗುತ್ತದೆನ್ನುವಾಗ ವಾಪಸ್ಸಾಗುತ್ತಾರೆ.

ಅಂದರೆ ಮಳೆಗಾಲದ ಹೊರತಾಗಿ ಇವರು ವರ್ಷಪೂರ್ತಿ ಪ್ರಯಾಣದಲ್ಲೇ ನಿರತರಾಗಿರುತ್ತಾರೆ. ಇವರು ವಾಪಸ್ಸಾದಾಗಲೂ ಸಹ ಪರಿವಾರದ ಕೆಲ ಸದಸ್ಯರು, ಕುರಿಗಳ ಮೇವಿಗಾಗಿ ಮನೆಯಿಂದ ಹೊರಗೆ, ಜತವಡದ ಹೊರವಲಯದಲ್ಲಿ ತಂಗುತ್ತಾರೆ. ಸ್ಥಳ ಹಾಗೂ ಮೇವಿನ ಅವಶ್ಯಕತೆಯಿಂದಾಗಿ ಅವರ ಜಾನುವಾರುಗಳು ಹಳ್ಳಿಯಲ್ಲಿ ತಂಗುವುದು ಅಸಂಭವ.

"ಹಳ್ಳಿಯ ಪಟೇಲನು ನಮ್ಮನ್ನು ಇಲ್ಲಿಂದ ಓಡಿಸಲು ನಿಮ್ಮನ್ನು ಕಳುಹಿಸಿದ್ದಾನೆಂದು ಊಹಿಸಿದ್ದೆ", ಅಹ್ಮದಾಬಾದ್ ನಗರದಿಂದ ಸುಮಾರು 150 ಕಿ.ಮೀ. ದೂರದ ಸುರೇಂದ್ರನಗರ್ ಜಿಲ್ಲೆಯ ಗವನ ಹಳ್ಳಿಯ ಶುಷ್ಕ ಜಮೀನಿನಲ್ಲಿ ಮಾರ್ಚ್ ತಿಂಗಳ ಪ್ರಾರಂಭದಲ್ಲಿ ಕರಭಾಯ್ ಪಟೇಲ್ ನಮಗೆ ಕಾಣಸಿಕ್ಕಾಗ, ಅವರು ನಮ್ಮನ್ನು ಅಭಿವಂದಿಸಿದ್ದು ಹೀಗೆ.

ಅವರ ಸಂದೇಹಕ್ಕೆ ಕಾರಣವಿತ್ತು. ಕ್ಷಾಮದಲ್ಲಿನ ಪರಿಸ್ಥಿತಿಯ ಗಂಭೀರತೆಯಿಂದಾಗಿ ಭೂ ಮಾಲೀಕರು ಹುಲ್ಲು ಹಾಗೂ ಕೊಯ್ದ ಪೈರಿನ ಕೂಳೆಗಳನ್ನು ತಮ್ಮ ಸ್ವಂತ ಜಾನುವಾರುಗಳಿಗೆಂದು ಸಂರಕ್ಷಿಸುವ ಸಲುವಾಗಿ, ಪಶುಪಾಲಕರು ಹಾಗೂ ಅವರ ಪ್ರಾಣಿಗಳ ಮಂದೆಯನ್ನು ತಮ್ಮ ಜಮೀನಿನಿಂದ ಹೊರಗೆ ಕಳುಹಿಸುತ್ತಿದ್ದರು.

"ಈ ಬಾರಿಯ ದುಷ್ಕಾಲವು (ಕ್ಷಾಮ) ಬಹಳ ಶೋಚನೀಯವಾಗಿದೆ. ಮಳೆಯಿಲ್ಲದ ಕಾರಣ, ನಾವು ಕಳೆದ ವರ್ಷ ಅಖಾದ್‍ನಲ್ಲಿ (ಜೂನ್-ಜುಲೈ) ರಪರ್‍ನಿಂದ ಹೊರಬಿದ್ದೆವು", ಎನ್ನುತ್ತಾರೆ ಕರಭಾಯ್. ಒಣಗಿ ನಿಂತ ಅವರ ಸ್ವಂತ ಜಿಲ್ಲೆಯ ಅವಿರತ ಕ್ಷಾಮದಿಂದಾಗಿ, ತಮ್ಮ ವಾರ್ಷಿಕ ವಲಸೆಯನ್ನು ಅವರು ಮುಂಚಿತವಾಗಿಯೇ ಪ್ರಾರಂಭಿಸಿದ್ದರು.

"ಮಾನ್ಸೂನ್ ಪ್ರಾರಂಭಗೊಳ್ಳುವವರೆಗೂ ನಾವು ನಮ್ಮ ಕುರಿಗಳೊಂದಿಗೆ ಅಲೆದಾಡುತ್ತಿರುತ್ತೇವೆ. ಮಳೆಯಾಗದಿದ್ದಲ್ಲಿ ನಾವು ಮನೆಗೆ ತೆರಳುವುದಿಲ್ಲ. ಇದೇ ಮಲ್ಧರಿಯ ಜೀವನ", ಎಂದು ಅವರು ಅಲವತ್ತುಕೊಂಡರು. ಮಲ್ಧರಿ ಎಂಬ ಪದವು, ಗುಜರಾತಿ ಭಾಷೆಯ ಪದಗಳಾದ ಮಲ್ (ಜಾನುವಾರು) ಮತ್ತು ಧರಿ (ರಕ್ಷಕ) ಎಂಬ ಪದಗಳಿಂದ ವ್ಯುತ್ಪನ್ನಗೊಂಡಿದೆ.

ಪಶುಪಾಲಕ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಹ್ಮದಾಬಾದಿನ ಲಾಭ-ನಿರಪೇಕ್ಷ ಮಲ್ಧರಿ ರೂರಲ್ ಆ್ಯಕ್ಷನ್ ಗ್ರೂಪ್ ನ ಸ್ಥಾಪಕಿಯಾದ ನೀತ ಪಾಂಡ್ಯ ಅವರು ತಿಳಿಸಿದಂತೆ; "ಗುಜರಾತಿನ ಬಂಜರು ಹಾಗೂ ಅರೆ ಬಂಜರು ಪ್ರದೇಶಗಳಲ್ಲಿನ 2018-19 ರ ಕ್ಷಾಮವು ತೀವ್ರ ಸ್ವರೂಪದಲ್ಲಿದ್ದು, ಸುಮಾರು 25 ವರ್ಷಗಳಿಂದಲೂ ತಮ್ಮ ಹಳ್ಳಿಯಲ್ಲಿ ತಳವೂರಿದ್ದ ಪಶುಪಾಲಕರು; ಮೇವುಮಾಳಗಳು, ಮೇವು ಮತ್ತು ಜೀವನೋಪಾಯವನ್ನು ಅರಸುತ್ತ ಮತ್ತೆ ವಲಸೆ ಹೋಗಲು ಪ್ರಾರಂಭಿಸಿದರು".
PHOTO • Namita Waikar
PHOTO • Namita Waikar

ಹಿಂದೊಮ್ಮೆ ಜೀರಿಗೆಯನ್ನು ಬೆಳೆಯುತ್ತಿದ್ದು ಈಗ ಬೆಂಗಾಡಾಗಿರುವ ಜಮೀನಿನಲ್ಲಿ ಚದುರಿ ನಿಂತ ಆಲ್ ಪರಿವಾರದ 300 ಕುರಿಗಳೊಂದಿಗಿರುವ ಕರಭಾಯ್ (ಬಲಕ್ಕೆ); ಜತವಡ ಹಳ್ಳಿಯ ಗೆಳೆಯನೊಂದಿಗೆ, ತನ್ನ ಮನೆಯ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಿದ್ದಾರೆ

ಈ ಮಲ್ಧರಿ ಪರಿವಾರವು ನೆಲೆ ನಿಂತ ಕಛ್ ನಲ್ಲಿ, 2018 ರಲ್ಲಿನ ಮಳೆಯ ಪ್ರಮಾಣವು ಕೇವಲ 131 ಮಿ.ಮೀ.ಗೆ ಹಠಾತ್ತಾಗಿ ಕುಸಿಯಿತು. ಕಛ್ ನ ವಾರ್ಷಿಕ ಮಳೆಯ ಸರಾಸರಿ, 356 ಮಿ.ಮೀ.ನಷ್ಟಿದೆ. ಆದರೆ ಆ ವರ್ಷದಲ್ಲಿನ ಹವಾಮಾನವು ದಾರಿತಪ್ಪಿದ ಸ್ಥಿತಿಯಲ್ಲಿರಲಿಲ್ಲ. ಕಳೆದ ಒಂದು ದಶಕದಿಂದಲೂ ಜಿಲ್ಲೆಯ ಮಾನ್ಸೂನ್ ಹೆಚ್ಚು ಅನಿಯಮಿತ ಗತಿಯಲ್ಲಿದೆ. ಭಾರತೀಯ ಪವನಶಾಸ್ತ್ರ ಇಲಾಖೆಯ ದತ್ತಾಂಶವು 2014 ರಲ್ಲಿನ ಮಳೆಯು 291 ಮಿ.ಮೀ.ಗೆ ಕುಸಿದಿದ್ದು, 2016 ರಲ್ಲಿ ಇದರ ಪ್ರಮಾಣವು 294 ಮಿ.ಮೀ.ನಷ್ಟಿದ್ದು, 2017 ರಲ್ಲಿ 493 ಮಿ.ಮೀ. ನಷ್ಟು ಏರಿಕೆಯಾಯಿತು ಎಂಬುದಾಗಿ ತಿಳಿಸುತ್ತದೆ. ನಾಲ್ಕು ದಶಕಗಳ ಹಿಂದೆ 1974-78 ರಲ್ಲಿನ ವಿನಾಶಕಾರಿಯೆಂದು ಹೆಸರಿಸಬಹುದಾದ ವರ್ಷವೊಂದರಲ್ಲಿ (1974 ರಲ್ಲಿ 88 ಮಿ.ಮೀ.) ಹಾಗೂ ಅನುಕ್ರಮವಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ, ಮಳೆಯ ಪ್ರಮಾಣವು ‘ಸರಾಸರಿ’ಗಿಂತಲೂ ಹೆಚ್ಚಾಗಿತ್ತು.

‘ಅನುಚಿತ ಪ್ರಾಶಸ್ತ್ಯದಿಂದ ಉಂಟಾದ ಗುಜರಾತಿನ ನೀರಿನ ಬಿಕ್ಕಟ್ಟು’ ಎಂಬ ಶೀರ್ಷಿಕೆಯ 2018 ರ ವರದಿಯಲ್ಲಿ; ಅಣೆಕಟ್ಟುಗಳು, ನದಿಗಳು ಮತ್ತು ಜನತೆಯನ್ನು ಕುರಿತ ದಕ್ಷಿಣ ಏಷ್ಯ ಜಾಲ ವ್ಯವಸ್ಥಾಪನೆಯ (South Asia Network on Dams, Rivers and People) ಹಿಮಾಂಶು ಥಕ್ಕರ್ ಹೀಗೆ ಬರೆಯುತ್ತಾರೆ: ಕಳೆದ ಮೂರು ದಶಕಗಳಿಂದಲೂ ಅನುಕ್ರಮಿಕವಾಗಿ ಅಧಿಕಾರದಲ್ಲಿರುವ ಸರ್ಕಾರಗಳು ನರ್ಮದ ಅಣೆಕಟ್ಟನ್ನು ಕಛ್, ಸೌರಾಷ್ಟ್ರ ಮತ್ತು ಉತ್ತರ ಗುಜರಾತಿನ ಕ್ಷಾಮಪೀಡಿತ ಪ್ರದೇಶಗಳ ಜೀವರಕ್ಷಕವೆಂಬಂತೆ ಬಿಂಬಿಸಿವೆಯಾದರೂ, ಈ ಪ್ರದೇಶಗಳಿಗೆ ಕನಿಷ್ಟ ಪ್ರಾಶಸ್ತ್ಯವನ್ನಷ್ಟೇ ನೀಡಲಾಗಿದೆ. ನಗರ ಪ್ರದೇಶಗಳು, ಕಾರ್ಖಾನೆಗಳು ಮತ್ತು ಮಧ್ಯ ಗುಜರಾತಿನ ರೈತರ ಅವಶ್ಯಕತೆಗಳನ್ನು ಪೂರೈಸಿದ ನಂತರದ ಉಳಿಕೆಯ ನೀರಷ್ಟೇ ಇವರಿಗೆ ಲಭ್ಯವಾಗುತ್ತಿದೆ.

ಆಧಾರ: ಮಳೆಯನ್ನು ಕುರಿತ ಭಾರತೀಯ ಪವನಶಾಸ್ತ್ರ ಇಲಾಖೆಯ ವಿಶೇಷ ಮಾಹಿತಿ ವ್ಯವಸ್ಥೆ ಮತ್ತು ಡೌನ್ ಟು ಅರ್ಥ್‍ನ- ಭಾರತದ ಪರಿಸರ ಸಂಬಂಧಿ ಅಂಕಿ ಅಂಶಗಳು- 2018 (Source: IMD’s Customised Rainfall Information System and DownToEarth - Envi Stats India-2018)

"ನರ್ಮದ ನದಿಯ ನೀರನ್ನು ಈ ಪ್ರದೇಶಗಳ ರೈತರು ಹಾಗೂ ಪಶುಪಾಲಕರಿಗಾಗಿ ಬಳಸತಕ್ಕದ್ದು. ಈ ಹಿಂದಿನ ಬಾವಿ ಮತ್ತು ಚೆಕ್ ಡ್ಯಾಮ್‍ ಗಳ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸತಕ್ಕದ್ದು", ಎಂಬುದಾಗಿ ಥಕ್ಕರ್ ದೂರವಾಣಿಯಲ್ಲಿ ನಮಗೆ ತಿಳಿಸಿದರು.

ತಮ್ಮ ಜಾನುವಾರುಗಳ ಮೇವಿಗಾಗಿ ಮಲ್ಧರಿಗಳು ಸಾಮೂಹಿಕ ಮೇವುಮಾಳಗಳು ಮತ್ತು ಹಳ್ಳಿಯ ಗೋಮಾಳಗಳನ್ನು ಅವಲಂಬಿಸಿದ್ದಾರೆ. ಇವರಲ್ಲಿ ಅನೇಕರಿಗೆ ಸ್ವಂತ ಭೂಮಿಯಿಲ್ಲ. ಸ್ವಂತ ಭೂಮಿಯನ್ನು ಹೊಂದಿರುವವರು ತಮ್ಮ ಆಹಾರ ಹಾಗೂ ಜಾನುವಾರುಗಳ ಮೇವಿಗೆ ಸೂಕ್ತವೆನಿಸುವ ಮಳೆಯಾಧಾರಿತ ಬಾಜ್ರಾದಂತಹ ಬೆಳೆಯನ್ನು ಬೆಳೆಯುತ್ತಾರೆ.

ಮಾರ್ಚ್ ತಿಂಗಳಲ್ಲಿ ಕರಭಾಯ್ ಅವರು, ಜೀರಿಗೆಯ ಕೃಷಿಯನ್ನು ಕೈಗೊಳ್ಳಲಾಗುತ್ತಿದ್ದ ಖಾಲಿ ಜಮೀನನ್ನು ಉದ್ದೇಶಿಸುತ್ತ, "ಎರಡು ದಿನಗಳ ಹಿಂದೆ ಇಲ್ಲಿಗೆ ಬಂದ ನಾವು ಇಂದು ವಾಪಸ್ಸಾಗುತ್ತಿದ್ದೇವೆ. ಇಲ್ಲಿ ನಮಗೆ ಹೆಚ್ಚಿನದೇನೂ ಸಿಗುವುದಿಲ್ಲ", ಎಂದು ತಿಳಿಸಿದರು. ಶುಷ್ಕ ಹವಾಮಾನದಲ್ಲಿ ಹೆಚ್ಚಿನ ತಾಪಮಾನವಿತ್ತು. ಕರಭಾಯ್ ವಯಸ್ಕರಾಗಿದ್ದ 1960 ರಲ್ಲಿ, ಸುರೇಂದ್ರನಗರದಲ್ಲಿನ ವರ್ಷವೊಂದರ ಸುಮಾರು 225 ದಿನಗಳ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‍ಅನ್ನು ದಾಟುತ್ತಿತ್ತು. ಇಂದು, ಈ ದಿನಗಳ ಸಂಖ್ಯೆಯು 274 ಅಥವ ಅದಕ್ಕಿಂತಲೂ ಹೆಚ್ಚಾಗಿದ್ದು, 59 ವರ್ಷಗಳಲ್ಲಿ ಕನಿಷ್ಟ 49 ಬೇಸಿಗೆಯ ದಿನಗಳ ಹೆಚ್ಚಳವಾಗಿದೆ ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್‍ನ ಸಂವಾದಾತ್ಮಕ ಉಪಕರಣದ ವತಿಯಿಂದ ಈ ಜುಲೈ ತಿಂಗಳಲ್ಲಿ ಅಂತರ್ಜಾಲದಲ್ಲಿ ಪ್ರಕಟಗೊಂಡ ಹವಾಮಾನ ಮತ್ತು ಜಾಗತಿಕ ತಾಪಮಾನವನ್ನು ಕುರಿತ ಲೆಕ್ಕಾಚಾರದಿಂದ ತಿಳಿದುಬರುತ್ತದೆ.

ನಾವು ಸುರೇಂದ್ರನಗರದಲ್ಲಿ ಭೇಟಿಮಾಡಿದ ಪಶುಪಾಲಕರಲ್ಲಿನ ಶೇ. 63 ರಷ್ಟು ಜನರು ಕೃಷಿನಿರತರು. ಇಡೀ ಗುಜರಾತಿನಲ್ಲಿ ಇವರ ಸಂಖ್ಯೆ ಶೇ. 49.61 ರಷ್ಟಿದೆ. ಹತ್ತಿ, ಜೀರಿಗೆ, ಗೋಧಿ, ಸಿರಿಧಾನ್ಯಗಳು, ಕಾಳುಗಳು, ಕಡಲೆಕಾಯಿ ಹಾಗೂ ಹರಳು ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಕೊಯ್ಲಿನ ನಂತರದ ಕೊಯ್ದ ಪೈರಿನ ಕೂಳೆಯು ಕುರಿಗಳಿಗೆ ಉತ್ತಮ ಮೇವೆನಿಸುತ್ತದೆ.

2012 ರ ಭಾರತದ ಜಾನುವಾರುಗಳ ಗಣತಿಯಂತೆ, ಗುಜರಾತಿನ 33 ಜಿಲ್ಲೆಗಳಲ್ಲಿನ ಒಟ್ಟಾರೆ ಕುರಿಗಳ ಸಂಖ್ಯೆ 1.7 ಮಿಲಿಯನ್. ಕಛ್ ಒಂದರಲ್ಲೇ ಇವುಗಳ ಸಂಖ್ಯೆಯು 570,000 ರಷ್ಟಿದೆ. ಕರಭಾಯ್ ಅವರ ತಂಗುದಾಣವಾದ ಜಿಲ್ಲೆಯ ವಗದ್ ಉಪಪ್ರಾಂತದಲ್ಲಿ ಆತನ ಪರಿವಾರದಂತೆಯೇ ಸುಮಾರು 200 ರಬ್ರಿ ಪರಿವಾರಗಳಿದ್ದು, ಒಟ್ಟು 30,000 ಕುರಿಗಳೊಂದಿಗೆ ಪ್ರತಿ ವರ್ಷವೂ 800 ಕಿ.ಮೀ.ಗಳನ್ನು ಅವು ಕ್ರಮಿಸುತ್ತವೆಯೆಂಬುದಾಗಿ ಸದರಿ ಸಮುದಾಯದೊಂದಿಗೆ ಸಕ್ರಿಯವಾಗಿರುವ MARAG ಸಂಸ್ಥೆಯು ತಿಳಿಸುತ್ತದೆ. ತಮ್ಮ ಮನೆಯಿಂದ ಸುಮಾರು 200 ಕಿ.ಮೀ.ಗಳ ಆವರಣದ ವ್ಯಾಪ್ತಿಯಲ್ಲಿ ಇವರು ಸಂಚರಿಸುತ್ತಾರೆ.

ಕುರಿಗಳ ಹಿಂಡು, ತನ್ನ ಪಿಕ್ಕೆ ಹಾಗೂ ಮೂತ್ರದಿಂದ ಭೂಮಿಗೆ ಕೊಯ್ಲಿನ ನಂತರದ ಗೊಬ್ಬರವನ್ನು ಒದಗಿಸುತ್ತದೆ. ಇದಕ್ಕೆ ಪ್ರತಿಯಾಗಿ ರೈತರು ಬಾಜ್ರಾ, ಸಕ್ಕರೆ ಮತ್ತು ಚಹ ನೀಡುತ್ತಾರೆ. ಶತಮಾನದಷ್ಟು ಹಳೆಯದಾದ ಈ ಸಂಪ್ರದಾಯವು ಹವಾಮಾನದಂತೆಯೇ ಹಲವು ಗಂಭೀರತಮ ಬದಲಾವಣೆಗಳಿಗೆ ಪಕ್ಕಾಗಿದೆ.

‘ನಿಮ್ಮ ಹಳ್ಳಿಯಲ್ಲಿ ಫಸಲಿನ ಕಟಾವು ಮಾಡುತ್ತಾರೆಯೆ? ನಾವು ಆ ಜಮೀನುಗಳಲ್ಲಿ ತಂಗಬಹುದೇ?’, ಎಂಬುದಾಗಿ ಪಟನ್ ಜಿಲ್ಲೆಯ ಗೋವಿಂದ್ ಭರವದ್ ಅವರನ್ನು ಕರಭಾಯ್ ಪ್ರಶ್ನಿಸುತ್ತಿದ್ದಾರೆ

"ನಿಮ್ಮ ಹಳ್ಳಿಯಲ್ಲಿ ಫಸಲಿನ ಕಟಾವು ಮಾಡುತ್ತಾರೆಯೆ? ನಾವು ಆ ಜಮೀನುಗಳಲ್ಲಿ ತಂಗಬಹುದೇ?", ಎಂಬುದಾಗಿ ಪಟನ್ ಜಿಲ್ಲೆಯ ಗೋವಿಂದ್ ಭರವದ್ ಅವರನ್ನು ಕರಭಾಯ್ ಪ್ರಶ್ನಿಸುತ್ತಿದ್ದಾರೆ.

"ಎರಡು ದಿನಗಳ ನಂತರ ಅವರು ಫಸಲಿನ ಕಟಾವು ಪ್ರಾರಂಭಿಸುತ್ತಾರೆ. ಈ ಬಾರಿ ಮಲ್ಧರಿಗಳು ಜಮೀನುಗಳನ್ನು ಹಾದು ಹೋಗಬಹುದಾದರೂ ನೀರು ಮತ್ತು ಮೇವಿನ ತೀವ್ರ ಕೊರತೆಯಿಂದಾಗಿ ಅವರು ಅಲ್ಲಿ ತಂಗುವಂತಿಲ್ಲ. ಇದು ನಮ್ಮ ಪಂಚಾಯತ್ ನ ನಿರ್ಣಯ", ಎಂಬುದಾಗಿ ಪಟನ್ ಜಿಲ್ಲೆಯ ಸಮಿ ತಾಲ್ಲೂಕಿನ ಧನೊರ ಹಳ್ಳಿಯಲ್ಲಿ ಕೃಷಿ ಮತ್ತು ಪಶುಪಾಲನೆಯಲ್ಲಿ ನಿರತರಾಗಿದ್ದು, MARAG ನ ಸದಸ್ಯರೂ ಆದ ಗೋವಿಂದ್ ತಿಳಿಸುತ್ತಾರೆ.

ಪಟನ್ ಕಡೆಗೆ ಕರಭಾಯ್ ಹಾಗೂ ಆತನ ಪರಿವಾರವು ಪ್ರಯಾಣಿಸುತ್ತಿದೆ. ಮನೆಗೆ ವಾಪಸ್ಸಾಗುವ ಹೊತ್ತಿಗೆ, ಮೂರು ಪ್ರದೇಶಗಳಾದ ಕಛ್, ಸೌರಾಷ್ಟ್ರ ಮತ್ತು ಉತ್ತರ ಗುಜರಾತ್ ಅನ್ನು ಅವರು ಕ್ರಮಿಸಿರುತ್ತಾರೆ.

ಬದಲಾಗುತ್ತಿರುವ ವಾತಾವರಣ ಹಾಗೂ ಹವಾಮಾನದ ಪರಿಸ್ಥಿತಿಗಳ ಮಧ್ಯೆಯೂ ಮಾರ್ಗಮಧ್ಯದಲ್ಲಿನ ಇವರ ತಾತ್ಕಾಲಿಕ ಮನೆಯಲ್ಲಿನ ಆದರಾತಿಥ್ಯವಂತೂ ಬದಲಾಗಿಲ್ಲ. ಕರಭಾಯ್ ಅವರ ಸೊಸೆ ಹೀರಾಬೆನ್ ಆಲ್, ಬಾಜ್ರಾ ರೋಟ್ಲಾದ ದೊಡ್ಡ ಹಿಟ್ಟಿನ ಮುದ್ದೆಯೊಂದನ್ನು ತಟ್ಟಿ ಎಲ್ಲರಿಗೂ ರೊಟ್ಟಿ ಹಾಗೂ ಬಿಸಿಯಾದ ಚಹಾ ತಯಾರಿಸಿದರು. "ಎಲ್ಲಿಯವರೆಗೂ ಓದಿದ್ದೀರ" ಎಂಬ ಪ್ರಶ್ನೆಗೆ, "ನಾನು ಶಾಲೆಗೆ ಹೋಗಿಯೇ ಇಲ್ಲ" ಎಂದು ಉತ್ತರಿಸಿದ ಆಕೆ, ಪಾತ್ರೆಗಳನ್ನು ತೊಳೆಯುವುದರಲ್ಲಿ ಮಗ್ನರಾದರು. ಪ್ರತಿ ಬಾರಿ ಎದ್ದು ನಿಂತಾಗಲೆಲ್ಲಾ ಹಿರಿಯ ಗಂಡಸರು ಅಲ್ಲಿ ಉಪಸ್ಥಿತರಿದ್ದ ಕಾರಣಕ್ಕಾಗಿ, ತಮ್ಮ ಕಪ್ಪು ಬಣ್ಣದ ಚುನರಿಯನ್ನು ಮುಖದ ಮುಂದೆ ಎಳೆದುಕೊಳ್ಳುತ್ತಿದ್ದ ಅವರು, ನೆಲದ ಮೇಲೆ ಮುದುರಿ ಕುಳಿತು ಕೆಲಸಕ್ಕೆ ತೊಡಗುತ್ತಿದ್ದಂತೆಯೇ ಅದನ್ನು ಹಿಂದಕ್ಕೆಳೆದುಕೊಳ್ಳುತ್ತಿದ್ದರು.

ಇವರ ಪರಿವಾರದಲ್ಲಿನ ಕುರಿಗಳು ಗುಜರಾತ್ ಹಾಗೂ ರಾಜಾಸ್ತಾನದ ಸ್ಥಳೀಯ ಮಾರ್ವಾರಿ ತಳಿಗೆ ಸೇರಿದವುಗಳಾಗಿವೆ. ಪ್ರತಿ ಟಗರಿಗೆ 2,000 ರೂ. ಗಳಿಂದ 3,000 ರೂ. ಗಳಂತೆ, 25 ರಿಂದ 30 ಟಗರುಗಳನ್ನು ಇವರು ಮಾರುತ್ತಾರೆ. ಇವರ ಕುರಿ ಮಂದೆಯ ಹಾಲಿನ ಉತ್ಪತ್ತಿಯು ಕಡಿಮೆಯಿದ್ದಾಗ್ಯೂ, ಕುರಿಯ ಹಾಲು ಇವರ ಆದಾಯದ ಮೂಲಗಳಲ್ಲೊಂದಾಗಿದೆ. ದಿನಂಪ್ರತಿ 25 ರಿಂದ 30 ಕುರಿಗಳ ಮೂಲಕ 9-10 ಲೀಟರುಗಳಷ್ಟು ಹಾಲು ದೊರೆಯುತ್ತದೆಂದು ಕರಭಾಯ್ ತಿಳಿಸುತ್ತಾರೆ. ಸ್ಥಳೀಯ ಚಿಕ್ಕ ಡೈರಿಗಳಿಂದ ಪ್ರತಿ ಲೀಟರ್ ಹಾಲಿಗೆ 30 ರೂ.ಗಳು ದೊರೆಯುತ್ತದೆ. ಮಾರಾಟವಾಗದ ಹಾಲಿನಿಂದ ಮಜ್ಜಿಗೆಯನ್ನು ತಯಾರಿಸಿ, ಅದರ ಬೆಣ್ಣೆಯಿಂದ ತುಪ್ಪವನ್ನು ಇವರು ತಯಾರಿಸುತ್ತಾರೆ.

"ಘೀ ಪೇಟ್ ಮ ಛೇ! (ತುಪ್ಪವು ಹೊಟ್ಟೆಯಲ್ಲಿದೆ!) ಈ ಬೇಸಿಗೆಯಲ್ಲಿ ನಡೆದಾಡುವಾಗ ಪಾದಗಳಲ್ಲಿ ಉರಿಯೇಳುತ್ತದೆ. ತುಪ್ಪವನ್ನು ತಿನ್ನುವುದರಿಂದ ಇದನ್ನು ನಿಭಾಯಿಸಬಹುದು", ಎನ್ನುತ್ತ ಕರಭಾಯ್ ಮುಗುಳ್ನಕ್ಕರು.

ಕುರಿಯ ಉಣ್ಣೆಯನ್ನು ಮಾರಬಹುದಲ್ಲವೇ? "ಈಗ್ಗೆ ಎರಡು ವರ್ಷಗಳವರೆಗೂ ಜನರು ಒಂದು ಕುರಿಯ ಉಣ್ಣೆಗೆ 2 ರೂ.ಗಳಂತೆ ಖರೀದಿಸುತ್ತಿದ್ದರು. ಈಗ ಇದನ್ನು ಯಾರೂ ಕೊಳ್ಳಬಯಸುವುದಿಲ್ಲ. ಉಣ್ಣೆಯು ನಮಗೆ ಚಿನ್ನಕ್ಕೆ ಸಮಾನ. ಆದರೆ ನಾವು ಅದನ್ನು ಹೊರಗೆಸೆಯಬೇಕಾಗಿದೆ", ಎಂಬುದಾಗಿ ಕರಭಾಯ್ ವ್ಯಥೆಪಡುತ್ತಾರೆ. ಅವರು ಹಾಗೂ ಇಂತಹ ಮಿಲಿಯಾಂತರ ಪಶುಪಾಲಕರು, ಭೂರಹಿತರು, ಚಿಕ್ಕ ಹಾಗೂ ಬಡ ರೈತರಿಗೆ ಕುರಿ ಹಾಗೂ ಮೇಕೆಗಳು ಐಶ್ವರ್ಯವಿದ್ದಂತೆ. ಅವು ಇವರ ಜೀವನೋಪಾಯಕ್ಕೆ ಪ್ರಮುಖವಾದವುಗಳು . ಈಗ ಆ ಸಂಪತ್ತು ಕ್ಷೀಣಿಸುತ್ತಿದೆ.

PHOTO • Namita Waikar

13 ರ ಪ್ರಭುವಲ ಆಲ್ ಮುಂದಿನ ಪ್ರಯಾಣಕ್ಕೆ ಒಂಟೆಯನ್ನು ಅಣಿಗೊಳಿಸುತ್ತಿದ್ದು ಆತನ ತಂದೆ ವಲಭಾಯ್ (ಬಲಕ್ಕೆ) ಕುರಿಗಳ ಸುತ್ತಾಟವನ್ನು ಪ್ರಾರಂಭಿಸುತ್ತಿದ್ದಾರೆ. ಪ್ರಭುವಲನ ತಾಯಿ ಹೀರಾಬೆನ್ (ಕೆಳ ಸಾಲಿನಲ್ಲಿ ಎಡಕ್ಕೆ) ಚಹಾ ಕುಡಿಯುವುದರಲ್ಲಿ ಮಗ್ನರಾಗಿದ್ದು, ಕರಭಾಯ್ (ಬಲ ತುದಿ) ದೀರ್ಘ ಪ್ರಯಾಣಕ್ಕೆ ಜನರನ್ನು ಅಣಿಗೊಳಿಸುತ್ತಿದ್ದಾರೆ

2007 ಮತ್ತು 2012 ರ ಜಾನುವಾರುಗಳ ಗಣತಿಯಂತೆ ಕುರಿಗಳ ಸಂಖ್ಯೆ 5 ವರ್ಷಗಳಲ್ಲಿ ಸುಮಾರು 6 ಮಿಲಿಯನ್‍ಗಳಷ್ಟು ಕ್ಷೀಣಿಸಿದೆ. ಅಂದರೆ, 71.6 ಮಿಲಿಯನ್‍ ನಿಂದ 65.1 ಮಿಲಿಯನ್ ವರೆಗೆ ಕುಂಠಿತಗೊಂಡ ಇದರ ಪ್ರಮಾಣವು ಶೇ. 9 ರಷ್ಟಿದೆ. ಗುಜರಾತಿನಲ್ಲಿಯೂ ಸಹ ಇವು ಸುಮಾರು 300,000 ರಷ್ಟು ಕ್ಷೀಣಿಸಿದ್ದು, ಪ್ರಸ್ತುತದಲ್ಲಿ ಇವುಗಳ ಸಂಖ್ಯೆಯು 1.7 ಮಿಲಿಯನ್ ಗಳಷ್ಟಿದೆ.

ಕಛ್ ನಲ್ಲಿಯೂ ಸಹ ಈ ಕುಸಿತವನ್ನು ಕಾಣಬಹುದಾದರೂ ಪರಿಸ್ಥಿತಿಯು ಸಮಾಧಾನಕರವಾಗಿದೆ. ಮಲ್ಧರಿಗಳ ಕಾಳಜಿಯು ಮೆಚ್ಚುವಂತಿದೆ. 2007 ಕ್ಕೆ ಹೋಲಿಸಿದಲ್ಲಿ ಇಲ್ಲಿ 2012 ರಲ್ಲಿನ ಕುರಿಗಳ ಸಂಖ್ಯೆಯು ಕೇವಲ 4,200 ರಷ್ಟು ಕಡಿಮೆಯಾಗಿದೆ.

2017 ರ ಗಣತಿಯ ದತ್ತಾಂಶಗಳು 6 ತಿಂಗಳವರೆಗೂ ಪ್ರಕಟಗೊಳ್ಳುವುದಿಲ್ಲ. ಆದರೆ ಕರಭಾಯ್ ಕುರಿಗಳ ಸಂಖ್ಯೆಯ ಆಕುಂಚನಕ್ಕೆ ಕಾರಣಗಳ ಪಟ್ಟಿಯನ್ನೇ ಮುಂದೊಡ್ಡುತ್ತಾರೆ. "ನಾನು 30 ವರ್ಷದವನಿದ್ದಾಗ ಬಹಳಷ್ಟು ಹುಲ್ಲು ಹಾಗೂ ಮರಗಳು ಲಭ್ಯವಿದ್ದು ಕುರಿಗಳನ್ನು ಮೇಯಿಸಲು ಯಾವುದೇ ಸಮಸ್ಯೆಯಿರಲಿಲ್ಲ. ಈಗ ಕಾಡು ಹಾಗೂ ಮರಗಳನ್ನು ಕಡಿಯಲಾಗಿದೆ. ಹುಲ್ಲುಗಾವಲುಗಳೆಲ್ಲ ಮುದುಡಿಹೋಗುತ್ತಿವೆ. ತಾಪಮಾನದಲ್ಲೂ ಏರಿಕೆಯಾಗಿದೆ", ಎನ್ನುವ ಅವರು ವಾತಾವರಣ ಹಾಗೂ ಹವಾಮಾನದ ಅನಿಯಮಿತ ಸ್ವರೂಪಗಳಿಗೆ ಮಾನವನ ಚಟುವಟಿಕೆಗಳೇ ಉತ್ತೇಜನ ನೀಡುತ್ತಿವೆ ಎಂದು ತಿಳಿಸುತ್ತಾರೆ.

"ಬರಗಾಲದಲ್ಲಿ ನಮ್ಮಂತೆಯೇ ಕುರಿಗಳೂ ಸಹ ಹೆಣಗಾಡುತ್ತವೆ. ಹುಲ್ಲುಗಾವಲುಗಳು ಕ್ಷೀಣಿಸುತ್ತಿರುವುದರಿಂದ ಅವು ಹುಲ್ಲು ಮತ್ತು ಮೇವನ್ನು ಹುಡುಕಿಕೊಂಡು ಹೆಚ್ಚು ದೂರಕ್ಕೆ ಸಾಗಬೇಕಿದೆ. ಜನರು ತಮ್ಮ ಸಂಪಾದನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅವನ್ನು ಮಾರುತ್ತಿರುವ ಕಾರಣ, ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ", ಎಂದು ಅವರು ತಿಳಿಸುತ್ತಾರೆ.

ಹುಲ್ಲುಗಾವಲುಗಳು ಹಾಗೂ ಮೇವುಮಾಳಗಳು ಕಾಣೆಯಾಗುತ್ತಿರುವುದಕ್ಕೆ ಇವರು ನೀಡುವ ಕಾರಣಗಳು ಸೂಕ್ತವಾಗಿವೆ. ಅಹ್ಮದಾಬಾದಿನ Centre For Development Alternatives ನಲ್ಲಿನ ಪ್ರೊ. ಇಂದಿರ ಹಿರ್ವೆ ಅವರ ಪ್ರಕಾರ, ಗುಜರಾತಿನ ಶೇ. 4.5 ರಷ್ಟು ಭೂಮಿಯು ಮೇವುಮಾಳವಾಗಿದೆ. ಆದರೆ ಈ ಅಧಿಕೃತ ದತ್ತಾಂಶಗಳು ಈ ಭೂಮಿಯಲ್ಲಿನ ಬೃಹತ್ ಪ್ರಮಾಣದ ಕಾನೂನುಬಾಹಿರ ಒತ್ತುವರಿಯನ್ನು ಬಿಂಬಿಸುವುದಿಲ್ಲ. 2018 ರ ಮಾರ್ಚ್‍ನಲ್ಲಿ ರಾಜ್ಯ ವಿಧಾನಸಭೆಯ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ, 33 ಜಿಲ್ಲೆಗಳಲ್ಲಿನ 4,725 ಹೆಕ್ಟೇರ್ ಗೌಛರ್ (ಗೋಮಾಳ) ಭೂಮಿಯನ್ನು ಒತ್ತುವರಿ ಮಾಡಲಾಗಿದೆಯೆಂಬುದಾಗಿ ಸರ್ಕಾರವು ತಿಳಿಯಪಡಿಸುತ್ತದೆ. ಈ ಅಂಕಿಅಂಶದಲ್ಲೂ ನ್ಯೂನತೆಯಿದ್ದು ಒತ್ತುವರಿಯ ಭೂಮಿಯನ್ನು ಕಡಿಮೆ ಪ್ರಮಾಣದಲ್ಲಿ ಅಂದಾಜಿಸಲಾಗಿದೆಯೆಂಬುದಾಗಿ ಕೆಲವು ಶಾಸಕರು ಆಪಾದಿಸಿದ್ದಾರೆ.

ರಾಜ್ಯದ 2,754 ಹಳ್ಳಿಗಳಲ್ಲಿ ಗೋಮಾಳಗಳಿಲ್ಲವೆಂಬುದನ್ನು ಸರ್ಕಾರವೂ ಒಪ್ಪುತ್ತದೆ.

ಸರ್ಕಾರವು ಸ್ವಾಧೀನಪಡಿಸಿಕೊಂಡ ಭೂಮಿಯ ಪ್ರಮಾಣದಲ್ಲೂ ಏರಿಕೆಯಾಗಿದ್ದು, ಗುಜರಾತಿನ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ವತಿಯಿಂದ ಸದರಿ ಜಮೀನುಗಳನ್ನು ಕೈಗಾರಿಕೆಗೆ ನೀಡಲಾಗಿದೆ. ವಿಶೇಷ ಆರ್ಥಿಕ ವಲಯಕ್ಕೆಂದೇ 1990 ರಿಂದ 2001 ರವರೆಗೆ ಕೈಗಾರಿಕೆಗಳಿಗೆ 4,620 ಹೆಕ್ಟೇರ್ ಭೂಮಿಯನ್ನು ಒದಗಿಸಲಾಗಿದೆ. 2001-2011 ರ ಸಾಲಿನ ಕೊನೆಗೆ ಇದರ ಪ್ರಮಾಣವು 21,308 ಹೆಕ್ಟೇರ್‍ಗಳಷ್ಟು ಏರಿಕೆಯಾಗಿದೆ.

PHOTO • Namita Waikar
PHOTO • Namita Waikar

ಜತವಡ ಮಾರ್ಗದಲ್ಲಿ ತೆರಳುತ್ತಿರುವ ಕರಭಾಯ್. ಹಳ್ಳಿಯಲ್ಲಿನ ಆಲ್ ಪರಿವಾರದ ಮನೆಯ ಹೊರಗೆ ತನ್ನ ಪತ್ನಿ ದೊಸಿಬಾಯಿ ಆಲ್ ಮತ್ತು ನೆರೆಯ ರತ್ನಾಭಾಯ್ ಧಗಲ್ ಅವರೊಂದಿಗೆ... (ಬಲಕ್ಕೆ)

ಸುರೇಂದ್ರನಗರದಲ್ಲಿ ಮಾರ್ಚ್ ತಿಂಗಳ ಬಿಸಿಲೇರುತ್ತಿದ್ದಂತೆಯೇ ಕರಭಾಯ್, "ಮಧ್ಯಾಹ್ನವಾಯಿತು. ಬನ್ನಿ ಹೊರಡೋಣ", ಎನ್ನುತ್ತಾ ತನ್ನ ಜನರನ್ನು ಹೊರಡಿಸುತ್ತಿದ್ದಾರೆ. ಜನರು ಮುಂದೆ ಸಾಗುತ್ತಿದ್ದಂತೆಯೇ ಕುರಿಗಳು ಅವರನ್ನು ಹಿಂಬಾಲಿಸುತ್ತವೆ. 7 ನೇ ತರಗತಿಯವರೆಗೂ ಶಾಲೆಯಲ್ಲಿ ಕಲಿತ ಕರಭಾಯ್ ಗುಂಪಿನ ಏಕೈಕ ಸದಸ್ಯನೆಂದರೆ ಆತನ ಮೊಮ್ಮಗ 13ರ ಪ್ರಭುವಾಲ. ಆತನು ಜಮೀನಿನ ಸರಹದ್ದಿನ ಪೊದೆಗಳಲ್ಲಿ ಹುಡುಕಿ ಅಲ್ಲಲ್ಲೇ ಠಳಾಯಿಸುತ್ತಿದ್ದ ಕುರಿಗಳೆಲ್ಲವನ್ನೂ ಮಂದೆಗೆ ಸೇರಿಸಿದ.

ಗುಂಪಿನ ಮೂವರು ಹೆಂಗಸರು ತಮ್ಮ ಹಗ್ಗದ ಮಂಚಗಳು, ಸ್ಟೀಲಿನ ಹಾಲಿನ ಕ್ಯಾನ್‍ಗಳು ಹಾಗೂ ಮತ್ತಿತರೆ ವಸ್ತುಗಳನ್ನು ಮೂಟೆ ಕಟ್ಟಿದರು. ತನ್ನ ತಾಯಿ ಹೀರಾಬೆನ್, ಮನೆಯ ಹಾಗೂ ಅಡಿಗೆಯ ಪರಿಕರಗಳನ್ನು ಮೂಟೆ ಕಟ್ಟಿದ್ದ ಜಾಗಕ್ಕೆ, ದೂರದ ಮರವೊಂದಕ್ಕೆ ಕಟ್ಟಿದ್ದ ಒಂಟೆಯನ್ನು ಕರೆತಂದ ಪ್ರಭುವಲ ಅವೆಲ್ಲವನ್ನೂ ಅದರ ಬೆನ್ನಿಗೆ ಹೇರಿದ.

ರಪರ್ ತಾಲ್ಲೂಕಿನ ಮಾರ್ಗದಲ್ಲಿ ಐದು ತಿಂಗಳ ತರುವಾಯ ಆಗಸ್ಟ್ ಮಧ್ಯಭಾಗದಲ್ಲಿ ನಾವು ಕರಭಾಯ್ ಅವರನ್ನು ಮತ್ತೆ ಸಂಧಿಸಿ, ಜತವಡ ಹಳ್ಳಿಯಲ್ಲಿನ ಅವರ ಮನೆಗೆ ಭೇಟಿಯಿತ್ತವು. ಎಲ್ಲರಿಗೂ ಚಹ ತಯಾರಿಸಿದ ಆತನ ಪತ್ನಿ 70 ರ ದೊಸಿಬಾಯಿ ಆಲ್, "ಹತ್ತು ವರ್ಷಗಳವರೆಗೂ ನಾನೂ ಪರಿವಾರದೊಂದಿಗೆ ಪ್ರಯಾಣಿಸುತ್ತಿದ್ದೆ. ಕುರಿ ಹಾಗೂ ಮಕ್ಕಳೇ ನಮ್ಮ ಆಸ್ತಿ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ನನ್ನ ಆಸೆ", ಎಂದು ತಿಳಿಸಿದರು.

ನೆರೆಯಲ್ಲಿನ ಭೈಯಾಭಾಯ್ ಮಕ್ವನ ಅವರು, ಕ್ಷಾಮವು ಆಗಿಂದಾಗ್ಗೆ ತಲೆದೋರುತ್ತಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತ, "ನೀರಿಲ್ಲದಿದ್ದಲ್ಲಿ ನಾವು ಮನೆಗೆ ವಾಪಸ್ಸಾಗಲು ಸಾಧ್ಯವಾಗುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ನಾನು ಮನೆಗೆ ವಾಪಸ್ಸಾಗಿರುವುದು ಕೇವಲ ಎರಡು ಬಾರಿಯಷ್ಟೇ", ಎಂಬುದಾಗಿ ತಿಳಿಸಿದರು.

ಸಮೀಪದಲ್ಲೇ ನೆಲೆಸಿರುವ ರತ್ನಾಬಾಯ್ ಧಗಲ್ ಎಂಬ ಮತ್ತೊಬ್ಬ ವ್ಯಕ್ತಿಯು, ಇತರೆ ಸವಾಲುಗಳ ಬಗ್ಗೆ ತಿಳಿಸುತ್ತಾ, "ಕ್ಷಾಮದ ಎರಡು ವರ್ಷಗಳ ನಂತರ ನಾನು ಹಿಂದಿರುಗಿದಾಗ, ಸರ್ಕಾರವು ನಮ್ಮ ಗೌಚರ್ ಭೂಮಿಗೆ ಬೇಲಿ ಹಾಕಿರುವುದು ತಿಳಿದು ಬಂದಿತು, ದಿನವೆಲ್ಲ ಸುತ್ತಿದಾಗ್ಯೂ ನಮ್ಮ ಮಲ್‍ಗಳಿಗೆ ಸಾಕಷ್ಟು ಹುಲ್ಲು ದೊರೆಯಲಿಲ್ಲ. ನಾವು ಏನು ತಾನೇ ಮಾಡಲು ಸಾಧ್ಯ? ಅವನ್ನು ಮೇಯಲು ಬಿಡುವುದೋ ಅಥವ ಕಟ್ಟಿ ಹಾಕುವುದೋ? ನಮಗೆ ತಿಳಿದಿರುವುದು ಕೇವಲ ಪಶುಪಾಲನೆಯಷ್ಟೇ. ಅದು ನಮ್ಮ ಜೀವನೋಪಾಯವೂ ಹೌದು", ಎಂದು ಹೇಳಿದರು.

"ಈ ಕ್ಷಾಮಗಳಿಂದಾಗಿ ಬಹಳಷ್ಟು ಹೆಣಗಾಡುವಂತಾಗಿದೆ", ಎನ್ನುವ ಕರಭಾಯ್, ಅನಿಯಮಿತ ವಾತಾವರಣ ಹಾಗೂ ಹವಾಮಾನದ ಸ್ವರೂಪಗಳಿಂದಾಗಿ ಹೈರಾಣಗೊಂಡಿದ್ದಾರೆ. "ಪ್ರಾಣಿಗಳಷ್ಟೇ ಅಲ್ಲದೆ, ಪಕ್ಷಿಗಳಿಗೂ ಸಹ ಆಹಾರ, ಕುಡಿಯಲು ನೀರು ದೊರೆಯುತ್ತಿಲ್ಲ."

ಆಗಸ್ಟ್‍ ನಲ್ಲಿ ಸುರಿದ ಮಳೆಯು ಇವರಿಗೆ ಸ್ವಲ್ಪ ನೆಮ್ಮದಿಯನ್ನು ನೀಡಿತು. ವಿಸ್ತøತ ಆಲ್ ಪರಿವಾರವು ಸಂಯುಕ್ತವಾಗಿ ಸುಮಾರು ಎಂಟು ಎಕರೆಗಳಷ್ಟು ಮಳೆಯಾಧಾರಿತ ಭೂಮಿಯನ್ನು ಹೊಂದಿದ್ದು, ಅದರಲ್ಲಿ ಅವರು ಬಾಜ್ರಾ ಬಿತ್ತಿದ್ದಾರೆ .

ಅಸಮರ್ಪಕ ಮಾನ್ಸೂನ್ ಅಥವ ಮಾನ್ಸೂನ್ ನ ವೈಫಲ್ಯ, ಪುನರಾವೃತ ಕ್ಷಾಮ, ಗೋಮಾಳಗಳ ಆಕುಂಚನ, ತ್ವರಿತಗತಿಯ ಕೈಗಾರೀಕರಣ ಮತ್ತು ರಾಜ್ಯದ ನಗರೀಕರಣ, ಅರಣ್ಯನಾಶ, ಮೇವು ಹಾಗೂ ನೀರಿನ ಅಲಭ್ಯತೆ ಮುಂತಾದ ಅನೇಕ ಸಂಯೋಜಿತ ಸಂಗತಿಗಳಿಂದಾಗಿ ಪಶುಪಾಲಕರ ವಲಸೆ ಹಾಗೂ ಜಾನುವಾರುಗಳ ಮೇಯಿಸುವ ಪ್ರಕ್ರಿಯೆಯು ತೀವ್ರ ಸ್ವರೂಪದ ಪರಿಣಾಮಗಳನ್ನು ಎದುರಿಸುವಂತಾಗಿದೆ: ಮಲ್ಧರಿಗಳ ಅನುಭವದಲ್ಲಿ ಸದರಿ ಸಂಗತಿಗಳ ಅನೇಕ ಅಂಶಗಳು ವಾತಾವರಣ ಹಾಗೂ ಹವಾಮಾನದ ಬದಲಾವಣೆಗಳಿಗೆ ಕಾರಣಗಳಾಗಿವೆ. ಅಂತಿಮವಾಗಿ ಇವರ ಚಲನೆಯನ್ನೂ ಸಹ ಇದು ತೀವ್ರವಾಗಿ ಪ್ರಭಾವಿಸಿದ್ದು, ಶತಮಾನಗಳಿಂದಲೂ ಅವರು ಅನುಸರಿಸುತ್ತಿದ್ದ ನಿಯತಕಾಲಿಕ ವಲಸೆಯ ಅವಧಿಯನ್ನು ಬದಲಿಸಬೇಕಾದ ಅನಿವಾರ್ಯತೆಯು ತಲೆದೋರುತ್ತಿದೆ.

"ನಮ್ಮೆಲ್ಲ ಬವಣೆಗಳ ಬಗ್ಗೆಯೂ ಬರೆಯಿರಿ. ಅದರಿಂದ ಏನಾದರೂ ಬದಲಾಗುವುದೋ ನೋಡೋಣ. ಇಲ್ಲದಿದ್ದಲ್ಲಿ ದೇವರಿದ್ದಾನೆ", ಎನ್ನುತ್ತಾ ಕರಭಾಯ್ ನಮ್ಮನ್ನು ಬೀಳ್ಕೊಟ್ಟರು.

ಈ ಕಥನವನ್ನು ವರದಿ ಮಾಡುವಲ್ಲಿ ನೀಡಲಾದ ಬೆಂಬಲ ಹಾಗು ಕ್ಷೇತ್ರ ಕಾರ್ಯದಲ್ಲಿನ ಸಹಕಾರಕ್ಕಾಗಿ ಲೇಖಕರು ಅಹ್ಮದಾಬಾದ್ ಹಾಗೂ ಭುಜ್‍ನ ಮಲ್ಧರಿ ರೂರಲ್ ಆ್ಯಕ್ಷನ್ ಗ್ರೂಪ್ (MARAG) ತಂಡಕ್ಕೆ ಆಭಾರಿಯಾಗಿದ್ದಾರೆ.

ದೇಶದಾದ್ಯಂತ ಹವಾಮಾನ ವೈಪರೀತ್ಯಗಳ ಬಗೆಗಿನ ಪರಿಯ ವರದಿಗಾರಿಕೆಯು ಪ್ರಾಜೆಕ್ಟ್ ಯು.ಎನ್.ಡಿ.ಪಿ ಯ ಸಹಕಾರದಿಂದ ನಡೆಯಲ್ಪಡುತ್ತಿದ್ದು ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮಗಳನ್ನು ಜನಸಾಮಾನ್ಯರ ಅನುಭವದ ಮಾತುಗಳಲ್ಲಿ ದಾಖಲಿಸುವ ಗುರಿಯನ್ನಿಟ್ಟುಕೊಂಡಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ: zahra@ruralindiaonline.org with a cc to namita@ruralindiaonline.org .

ಅನುವಾದ: ಶೈಲಜ ಜಿ. ಪಿ.

Reporter : Namita Waikar
namita.waikar@gmail.com

Namita Waikar is a writer, translator and Managing Editor at the People's Archive of Rural India. She is the author of the novel 'The Long March', published in 2018.

Other stories by Namita Waikar
Editor : P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Shailaja G. P.
shailaja1.gp@gmail.com

Shailaja (shailaja1.gp@gmail.com) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.