“ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ನೀನು ನನ್ನ ಫೋಟೊ ತೆಗೆದಿದ್ದೀಯ, ಅದೆಲ್ಲ ಇಟ್ಕೊಂಡು ನೀನೇನು ಮಾಡ್ತೀಯ?” ಎಂದು ಗೋವಿಂದಮ್ಮ ವೇಲು ಅಳುವ ದನಿಯಲ್ಲಿ ಕೇಳಿದರು.ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಮಗನಾದ ಸೆಲ್ಲಯ್ಯನನ್ನು ಕಳೆದುಕೊಂಡು ಕುಸಿದು ಹೋಗಿದ್ದಾರೆ ಅವರು. “ನನಗೆ ಕಣ್ಣು ಪೂರ್ತಿಯಾಗಿ ಕಾಣುತ್ತಿಲ್ಲ. ನನಗೆ ನೀನು ಕಾಣುತ್ತಿಲ್ಲ. ಇನ್ನು ನನ್ನಮ್ಮ ಮತ್ತು ನನ್ನನ್ನು ನೋಡಿಕೊಳ್ಳುವವರು ಯಾರು?”
ಅವರು ತನ್ನ ಕೈಮೇಲೆ ಆಗಿರುವ ಗಾಯಗಳು ಮತ್ತು ಗೀರುಗಳನ್ನು ತೋರಿಸಿದರು. “ದಿನಕ್ಕೆ 200 ರೂಪಾಯಿ ಮನೆಗೆ ಒಂಡು ಹೋಗುವ ಸಲುವಾಗಿ ನಾನು ಬಹಳಷ್ಟು ನೋವನ್ನು ತಿನ್ನಬೇಕಿದೆ. ಈ ವಯಸ್ಸಿನಲ್ಲಿ ನನಗೆ ಬಲೆ ಬೀಸಿ ಮೀನು ಹಿಡಿಯಲು ಸಾಧ್ಯವೆ? ಇಲ್ಲ, ಸಾಧ್ಯವಿಲ್ಲ. ಅದಕ್ಕೇ ನಾನು ಕೈಯಿಂದಲೇ ಮೀನು ಹಿಡಿಯುತ್ತೇನೆ,” ಎನ್ನುತ್ತಾರೆ ಗೋವಿಂದಮ್ಮ. 70 ವಯಸ್ಸಿನ ಈ ಸಣಕಲು ದೇಹದ ಮಹಿಳೆ ತನಗೆ 77 ವರ್ಷವೆಂದು ಅಂದಾಜಿಸುತ್ತಾರೆ. “ಜನರು ಹಾಗೆನ್ನುತ್ತಾರೆ,” ಎನ್ನುತ್ತಾರೆ ಅವರು. “ಮರಳಿನಲ್ಲಿ ಕೈ ಇಳಿಬಿಟ್ಟು ಸೀಗಡಿ ಹಿಡಿಯುವಾಗ ಆಳವಾದ ಗಾಯಗಳಾಗುತ್ತವೆ. ಕೈ ನೀರಿನಲ್ಲಿರುವಾಗ ರಕ್ತ ಹೋಗಿದ್ದು ಕೂಡ ತಿಳಿಯುವುದಿಲ್ಲ.”
2019ರಲ್ಲಿ ಬಕಿಂಗ್ ಹ್ಯಾಮ್ ಕಾಲುವೆ ಪ್ರದೇಶದಲ್ಲಿ ಪ್ರಯಾಣಿಸುವಾಗ ನಾನು ಅವರನ್ನು ಮೊದಲ ಬಾರಿಗೆ ಗಮನಿಸಿದೆ. ಈ ಕಾಲುವೆಯು ಉತ್ತರ ಚೆನ್ನೈಯ ಎನ್ನೋರ್ ಬಳಿಯ ಕೊಸಸ್ಥಲೈಯಾರ್ ನದಿಗೆ ಸಮಾನಾಂತರವಾಗಿ ಹರಿಯುತ್ತಿದ್ದು, ನೆರೆಯ ತಿರುವಳ್ಳೂರು ಜಿಲ್ಲೆಯವರೆಗೆ ವಿಸ್ತರಿಸಿದೆ. ಬಾತುಕೋಳಿಯಂತೆ, ಕಾಲುವೆಯಲ್ಲಿ ಧುಮುಕುವ ಮತ್ತು ನೀರಿನಲ್ಲಿ ಈಜುವ ಅವರ ಕೌಶಲವು ನನ್ನ ಗಮನವನ್ನು ಸೆಳೆಯಿತು. ನದಿಪಾತ್ರದ ಒರಟಾದ ಮರಳಿನಲ್ಲಿ ಕೈಗಳನ್ನು ವೇಗವಾಗಿ ತೂರುತ್ತಾ ಅಲ್ಲಿ ಇತರರಿಗಿಂತ ವೇಗವಾಗಿ ಸೀಗಡಿಗಳನ್ನು ಹಿಡಿಯುತ್ತಿದ್ದರು. ಸೊಂಟಕ್ಕೆ ಕಟ್ಟಿದ್ದ ತಾಳೆ ಬುಟ್ಟಿ ಕಟ್ಟಿಕೊಂಡು, ಸೊಂಟದ ಆಳದ ನೀರಿನಲ್ಲಿ ಅವುಗಳನ್ನು ಹಿಡಿಯುವಾಗ, ಅವರ ಚರ್ಮದ ಬಣ್ಣವು ಕಾಲುವೆಯ ಬಣ್ಣದೊಂದಿಗೆ ವಿಲೀನಗೊಂಡಂತೆ ತೋರುತ್ತಿತ್ತು, ಇದು ಅವರು ಕಾಲುವೆಯ ಒಂದು ಭಾಗವೆನ್ನುವಂತೆ ಭ್ರಮೆ ಹುಟ್ಟಿಸುತ್ತಿತ್ತು.
ಇದು 19ನೇ ಶತಮಾನದಲ್ಲಿ ನಿರ್ಮಿಸಲಾದ ಒಂದು ನೌಕಾಯಾನ ಕಾಲುವೆ, ಬಕಿಂಗ್ಹ್ಯಾಮ್ ಕಾಲುವೆ, ಮತ್ತು ಎನ್ನೋರ್ ಮೂಲಕ ಹರಿಯುವ ಕೊಸಸ್ಥಲೈಯಾರ್ ಮತ್ತು ಅರನಿಯರ್ ನದಿಗಳು ಚೆನ್ನೈ ನಗರಕ್ಕೆ ಜೀವನಾಡಿಯನ್ನು ಒದಗಿಸುವ ಒಂದು ಗಮನಾರ್ಹ ನೀರಿನ ವ್ಯವಸ್ಥೆಯನ್ನು ರೂಪಿಸುತ್ತವೆ.

ಗೋವಿಂದಮ್ಮ ವೇಲು (ಬಲ) ಉತ್ತರ ಚೆನ್ನೈನ ಎನ್ನೋರ್ ನ ಕಾಮರಾಜರ್ ಬಂದರಿನ ಬಳಿ ಕೊಸಸ್ಥಲೈಯಾರ್ ನದಿಯಿಂದ ಸಂಬಂಧಿಕರೊಂದಿಗೆ (ಎಡ) ನಡೆದುಕೊಂಡು ಹೋಗುತ್ತಿದ್ದರು. ಅವರಿಗೆ ಸಾಕಷ್ಟು ಸೀಗಡಿಗಳು ಸಿಗದ ಕಾರಣ, ಅವರು ಕೊಸಾಸ್ಥಲೈಯಾರ್ ನದಿಗೆ ಸಮಾನಾಂತರವಾಗಿ ಹರಿಯುವ ಬಕಿಂಗ್ಹ್ಯಾಮ್ ಕಾಲುವೆಯ ಕಡೆಗೆ ಚಲಿಸುತ್ತಿದ್ದಾರೆ

ಗೋವಿಂದಮ್ಮ (ಎಡ ತುದಿ) ತನ್ನ ಇರುಳ ಸಮುದಾಯದ ಇತರರೊಂದಿಗೆ ಕೊಸಸ್ಥಲೈಯಾರ್ ನದಿಯಲ್ಲಿ ಸೀಗಡಿ ಮೀನು ಹಿಡಿಯುತ್ತಿರುವುದು. ಅವುಗಳನ್ನು ಹಿಡಿಯಲು ಅವರು ನೀರಿನಲ್ಲಿ 2-4 ಕಿಲೋಮೀಟರ್ ದೂರ ಸಾಗುತ್ತಾರೆ
ಕೋಸಸ್ತಲೈಯಾರ್, ಕಾಂಡ್ಲ ಕಾಡುಗಳಿಂದ ಸುತ್ತುವರೆದಿದೆ, ಎನ್ನೂರಿನಿಂದ ಪಳವೆರ್‌ಕಾಡುವರೆಗೆ ಇದರ ವ್ಯಾಪ್ತಿಯಿದೆ. ನದಿಯ 27 ಕಿಲೋಮೀಟರ್ ಉದ್ದಕ್ಕೂ ವಾಸಿಸುವ ಜನರು ಆ ನೀರು ಮತ್ತು ಭೂ ಸಂಪನ್ಮೂಲಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದಾರೆ. ಇಲ್ಲಿ ಪುರುಷರು ಮತ್ತು ಮಹಿಳೆಯರು ಮೀನು ಹಿಡಿಯುವುದನ್ನು ಕಾಣಬಹುದು. ಈ ಪ್ರದೇಶದಲ್ಲಿ ಲಭ್ಯವಿರುವ ವಿವಿಧ ಸೀಗಡಿಗಳು ಉತ್ತಮ ಮೌಲ್ಯವನ್ನು ಹೊಂದಿವೆ.
2019 ರಲ್ಲಿ ನಾವು ಮೊದಲ ಬಾರಿಗೆ ಭೇಟಿಯಾದಾಗ, “ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಮಗ 10 ಮತ್ತು ಮಗಳು ಎಂಟು ವರ್ಷದವರಿದ್ದಾಗ ನನ್ನ ಪತಿ ನಿಧನರಾದರು. ಇದಾಗಿ 24 ವರ್ಷಗಳು ಕಳೆದಿವೆ. ಮಗನಿಗೆ ಮದುವೆಯಾಗಿದ್ದು, ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ನನ್ನ ಮಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬೇರೇನು ಬೇಕು ನನಗೆ? ಮನೆಗೆ ಬಾ, ಮಾತಾಡೋಣ” ಎಂದಿದ್ದರು ಗೋವಿಂದಮ್ಮ. ಹಾಗೆ ಕರೆದ ನಂತರ ಅವರು ತಾವು ಹಿಡಿದ ಸೀಗಡಿಗಳನ್ನು ಎತ್ತಿಕೊಂಡು ವೇಗವಾಗಿ ಆದಿಪಟ್ಟು ಪುದುನಗರದ ಕಡೆಗೆ ನಡೆದರು. ಏಳು ಕಿಲೋಮೀಟರ್ ನಡಿಗೆಯ ಪ್ರದೇಶದ ರಸ್ತೆ ಬದಿಯಲ್ಲಿ ಹಿಡಿದ ಮೀನುಗಳನ್ನು ಮಾರಾಟ ಮಾಡುತ್ತಿದ್ದರು. ಕೋವಿಡ್ ಸೋಂಕು ಮತ್ತು ಲಾಕ್ ಡೌನ್ ಕಾರಣದಿಂದಾಗಿ ನಾನು ಮತ್ತೆ ಅವರನ್ನು ಭೇಟಿಯಾಗಲು ಎರಡು ವರ್ಷಗಳನ್ನು ತೆಗೆದುಕೊಂಡೆ.
ಗೋವಿಂದಮ್ಮ ತಮಿಳುನಾಡಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿರುವ ಇರುಳರ್ ಸಮುದಾಯಕ್ಕೆ ಸೇರಿದವರು. ಅವರು ಕಾಮರಾಜ್ ಬಂದರಿನ ಬಳಿ, ಕೊಸಸ್ಥಲೈಯಾರ್ ಬಳಿ ವಾಸಿಸುತ್ತಿದ್ದರು, ಅಲ್ಲಿ ಅವರು ಸೀಗಡಿ ಹಿಡಿಯುತ್ತಿದ್ದರು. ಆದರೆ 2004ರಲ್ಲಿ ಸುನಾಮಿಯಿಂದ ಅವರ ಗುಡಿಸಲು ನಾಶವಾಯಿತು. ಒಂದು ವರ್ಷದ ನಂತರ, ಅವರು 10 ಕಿಲೋಮೀಟರ್ ದೂರದಲ್ಲಿರುವ ತಿರುವಳ್ಳೂರು ಜಿಲ್ಲೆಯ ಅತ್ತಿಪಟ್ಟುವಿಗೆ ತೆರಳಿದರು. ಅರುಣೋದಯಂ ನಗರ, ನೇಸಾ ನಗರ ಮತ್ತು ಮಾರಿಯಮ್ಮ ನಗರದಲ್ಲಿರುವ ಮೂರು ಕಾಲೋನಿಗಳಿಗೆ ಸುನಾಮಿ ಪೀಡಿತ ಇರುಳ ಜನಾಂಗದ ಬಹುಪಾಲು ಜನರನ್ನು ಸ್ಥಳಾಂತರಿಸಲಾಗಿದೆ.
ಸುನಾಮಿ ನಂತರ, ಅರುಣೋದಯಂ ನಗರದಲ್ಲಿ ಅನೇಕ ಸಾಲು ಮನೆಗಳನ್ನು ನಿರ್ಮಿಸಲಾಗಿದೆ. ಗೋವಿಂದಮ್ಮ ಪ್ರಸ್ತುತ ಅಲ್ಲಿ ವಾಸವಾಗಿದ್ದಾರೆ. ಮನೆಗಳ ಬಣ್ಣಗಳು ಮಸುಕಾಗಿದ್ದವು. ಕೆಲವು ವರ್ಷಗಳ ಹಿಂದೆ ಮೊಮ್ಮಗಳ ಮದುವೆಯಾದಾಗ ಅವಳ ಸಲುವಾಗಿ ಮನೆ ಖಾಲಿ ಮಾಡಿ ಈಗ ಗೋವಿಂದಮ್ಮ ಮನೆಯ ಬಳಿಯ ಬೇವಿನ ಮರದ ಕೆಳಗೆ ವಾಸವಾಗಿದ್ದಾರೆ.


ಎಡ: ಅರುಣೋದಯಂ ನಗರದಲ್ಲಿರುವ ಅವರ ಮನೆಯ ಹೊರಗೆ ಗೋವಿಂದಮ್ಮ (ಹಸಿರು ಸೀರೆಯಲ್ಲಿ) ಮತ್ತು ಅವರ ತಾಯಿ (ಬಲಗಡೆ). ಬಲ: ಗೋವಿಂದಮ್ಮ, ಅವಳ ಮಗ ಸೆಲ್ಲಯ್ಯ (ಮಧ್ಯದಲ್ಲಿ ನೀಲಿ ಬಣ್ಣದ ಲುಂಗಿಯಲ್ಲಿ), ಅವರ ಮೊಮ್ಮಕ್ಕಳು ಮತ್ತು ಸಂಬಂಧಿಕರು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಕೌಟುಂಬಿಕ ಕಲಹದ ಕಾರಣ ಸೆಲ್ಲಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದ ನಂತರ ಗೋವಿಂದಮ್ಮ ರೈಲು ನಿಲ್ದಾಣದ ಕಡೆಗೆ ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿ ಎರಡು ನಿಲ್ದಾಣಗಳನ್ನು ದಾಟಿದ ನಂತರ ಅತಿಪಟ್ಟು ಪುದುನಗರದ ರೈಲನ್ನು ಏರುತ್ತಾರೆ. ಅಲ್ಲಿಂದ ಏಳು ಕಿಲೋಮೀಟರ್ ನಡೆದು ಕಾಮರಾಜ್ ಬಂದರಿನ ಬಳಿ ಇರುವ ಮಾತಾ (ಸಂತ ಮೇರಿ) ಚರ್ಚಿಗೆ ತೆರಳುತ್ತಾರೆ. ಕೆಲವೊಮ್ಮೆ ಶೇರ್ ಆಟೋದಲ್ಲಿಯೂ ಹೋಗುತ್ತಾರೆ. ಬಂದರಿನ ಬಳಿ ಕೆಲವು ಇರುಳರು ಸಣ್ಣ ಗುಡಿಸಲುಗಳಲ್ಲಿ ವಾಸಿಸುತ್ತಾರೆ, ಅಲ್ಲಿ ಅವರು ಸೀಗಡಿಗಳನ್ನು ಹಿಡಿಯುತ್ತಾರೆ. ಗೋವಿಂದಮ್ಮ ಅವರೊಂದಿಗೆ ನದಿಗೆ ಇಳಿದು ಸಿಗಡಿ ಹಿಡಿಯಲು ಆರಂಭಿಸುತ್ತಾರೆ.
ದೃಷ್ಟಿ ಮಂದವಾಗುತ್ತಿರುವುದು ಅವರ ಪ್ರಯಾಣವನ್ನು ಕಷ್ಟಕರವಾಗಿಸುತ್ತಿದೆ. "ಕಾಲ ಮೊದಲಿನಂತೆ ಇಲ್ಲ. ರೈಲು ಅಥವಾ ಆಟೋ ಹತ್ತಲು ಸಹಾಯ ಮಾಡಲು ಮುಂದೆ ಬರುವವರನ್ನು ಹುಡುಕುವುದ ತುಂಬಾ ಕಷ್ಟ, ”ಎಂದು ಅವರು ಹೇಳುತ್ತಾರೆ. ಬರೀ ಪ್ರಯಾಣಕ್ಕೆ 50 ರೂಪಾಯಿಯಾದರೂ ಬೇಕು. “ದಿನಕ್ಕೆ 200 ರೂಪಾಯಿ ಸಂಪಾದಿಸುವ ನಾನು ಸಾರಿಗೆಗೆ 50 ರೂಪಾಯಿ ಹಣ ವ್ಯಯಿಸಿದರೆ ಜೀವನ ನಡೆಸುವುದು ಹೇಗೆ?” ಎಂದು ಕೇಳುತ್ತಾರವರು. ಕೆಲವೊಮ್ಮೆ ಗೋವಿಂದಮ್ಮ 500 ರೂ. ಕೂಡಾ ಸಂಪಾದಿಸುತ್ತಾರೆ. ಆದರೆ ಹೆಚ್ಚಾಗಿ 100 ರೂಪಾಯಿ ಮಾತ್ರ ಸಿಗುತ್ತದೆ. ಆದಾಯವೇ ಇಲ್ಲದ ದಿನಗಳೂ ಇರುತ್ತವೆ.
ಬೆಳಗಿನ ಹೊತ್ತು ನೀರು ಹೆಚ್ಚಿರುವ ದಿನಗಳಲ್ಲಿ ರಾತ್ರಿ ನೀರು ಕಡಿಮೆಯಾದಾಗ ಗೋವಿಂದಮ್ಮ ಅಲ್ಲಿಗೆ ಹೋಗುತ್ತಾರೆ. ದೃಷ್ಟಿಹೀನತೆಯ ಹೊರತಾಗಿಯೂ ಕತ್ತಲೆಯಲ್ಲಿಯೂ ಸೀಗಡಿಗಳನ್ನು ಸುಲಭವಾಗಿ ಹಿಡಿಯುತ್ತಾರೆ. ಆದರೆ ನೀರಿನ ಹಾವುಗಳು ಮತ್ತು ವಿಶೇಷವಾಗಿ ಇರುನ್ ಕೆಳಥಿ ಮೀನುಗಳು ಅವರಿಗೆ ಭಯವನ್ನು ಹುಟ್ಟಿಸುತ್ತವೆ. "ನನಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ... ನನ್ನ ಕಾಲಿನಡಿಯಲ್ಲಿ ಇರುವುದು ಹಾವೋ, ಬಲೆಯೋ ತಿಳಿಯುವುದಿಲ್ಲ" ಎಂದು ಅವರು ಹೇಳುತ್ತಾರೆ.
"ನಾವು ಅವುಗಳಿಂದ ಕಚ್ಚಿಸಿಕೊಳ್ಳದೆ ಮನೆಗೆ ಹೋಗಬೇಕು. ಈ ಕಪ್ಪು ಮೀನು [ಬೂದು ಈಲ್ ಕ್ಯಾಟ್ ಫಿಶ್] ನಮ್ಮ ಕೈಗೆ ಹೊಡೆದರೆ ಮಾಡಿದರೆ, ಏಳೆಂಟು ದಿನಗಳವರೆಗೆ ಎಚ್ಚರಗೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಗೋವಿಂದಮ್ಮ ಹೇಳುತ್ತಾರೆ. ಬೂದು ಬಣ್ಣದ ಈಲ್ ಕ್ಯಾಟ್ ಫಿಶ್ (ಪ್ಲಾಟೋಸಸ್ ಕ್ಯಾನಿಯಸ್) ನ ಪಕ್ಕೆಯ ರೆಕ್ಕೆಗಳನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ, ಮತ್ತು ನೋವಿನ ಗಾಯಗಳನ್ನು ಸಹ ಉಂಟುಮಾಡಬಹುದು. "ಔಷಧಿಗಳು ಸಹ ಆ ನೋವನ್ನು ನಿವಾರಿಸುವುದಿಲ್ಲ. ಯುವಕರ ಕೈಗಳು ಈ ನೋವನ್ನು ತಾಳಿಕೊಳ್ಳಬಲ್ಲವು. ನಾನು ಹೇಗೆ ತಡೆದುಕೊಳ್ಳಲಿ?"

ಬಕಿಂಗ್ ಹ್ಯಾಮ್ ಕಾಲುವೆಯಲ್ಲಿ ಗೋವಿಂದಮ್ಮ ಬಾಯಿಯಲ್ಲಿ ಬುಟ್ಟಿ ಹಿಡಿದು ಸೀಗಡಿ ಹುಡುಕುತ್ತಿರುವುದು

ಗೋವಿಂದಮ್ಮನ ಕೈಯ ಮೇಲಿನ ಗಾಯಗಳು ಮತ್ತು ಒಡಕುಗಳು. 'ಮರಳಿನ ಮೂಲಕ ಕೈ ತೂರಿಸಿ ಸೀಗಡಿಗಳನ್ನು ಹಿಡಿಯುವುದು ಆಳವಾದ ಗಾಯಗಳನ್ನು ಉಂಟು ಮಾಡುತ್ತದೆ'
ನೀರಿನ ಕಾಲುವೆಯಲ್ಲಿ ದಿಬ್ಬಗಳು ಮತ್ತು ಡೆಂಟ್ ಗಳನ್ನು ರೂಪಿಸಿರುವ ಎನ್ನೋರ್ ನ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಹಾರುಬೂದಿ ಮತ್ತು ತ್ಯಾಜ್ಯವನ್ನು ವಿವೇಚನಾರಹಿತವಾಗಿ ವಿಲೇವಾರಿ ಮಾಡಿರುವುದು ಅವರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. "ಅಂದ ಸಗತಿ ಪಾರು (ಆ ಕೆಸರನ್ನು ನೋಡು)" ಎಂದು ನಾನು ಫೋಟೊ ತೆಗೆಯಲು ನೀರಿಗೆ ಇಳಿಯುತ್ತಿದ್ದಂತೆ ತೋರಿಸಿದರು. "ಕಾಲಾ ಎಡುತು ವಚ್ಚು ಪೋಗಾ ನಮಕ್ಕು ಸತ್ತು ಪೊಯಿಡುದು [ಕಾಲು ಎತ್ತಿ ಇಡೋದ್ರಲ್ಲೇ ಇರೋ ಶಕ್ತಿ ಹೋಗಿಬಿಡುತ್ತೆ]."
ಬಕಿಂಗ್ ಹ್ಯಾಮ್ ಕಾಲುವೆ ಪ್ರದೇಶದ ಮನೆಗಳನ್ನು ಸುತ್ತುವರೆದಿರುವ ಎನ್ನೋರ್-ಮನಾಲಿ ಕೈಗಾರಿಕಾ ಪ್ರದೇಶವು ಉಷ್ಣ ವಿದ್ಯುತ್ ಸ್ಥಾವರಗಳು, ಪೆಟ್ರೋಲ್ ಸಂಸ್ಕರಣಾಗಾರಗಳು ಮತ್ತು ರಸಗೊಬ್ಬರ ಕಾರ್ಖಾನೆಗಳಂತಹ ಕನಿಷ್ಠ 34 ಅಪಾಯಕಾರಿ ಕೈಗಾರಿಕಾ ಸ್ಥಾವರಗಳನ್ನು ಹೊಂದಿದೆ. ಮೂರು ಪ್ರಮುಖ ಬಂದರುಗಳು ಸಹ ಅಲ್ಲಿ ನೆಲೆಗೊಂಡಿವೆ. ಕಾರ್ಖಾನೆಯ ತ್ಯಾಜ್ಯವು ಇಲ್ಲಿನ ಜಲಮೂಲಗಳನ್ನು ಕಲುಷಿತಗೊಳಿಸುತ್ತದೆ ಮತ್ತು ಸಮುದ್ರ ಸಂಪನ್ಮೂಲಗಳನ್ನು ನಾಶಪಡಿಸುತ್ತದೆ. 60-70 ವರ್ಷಗಳ ಹಿಂದೆ ಸಿಗುತ್ತಿದ್ದ ಸೀಗಡಿಗೆ ಹೋಲಿಸಿದರೆ ಈಗ 2-3 ಬಗೆಯ ಸಿಗಡಿಗಳು ಮಾತ್ರ ಲಭ್ಯವಿವೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
ಕಳೆದ ಕೆಲವು ವರ್ಷಗಳಿಂದ ಕ್ಷೀಣಿಸುತ್ತಿರುವ ಸೀಗಡಿ ಸಂತತಿಯ ಬಗ್ಗೆ ಗೋವಿಂದಮ್ಮ ಕಳವಳ ವ್ಯಕ್ತಪಡಿಸುತ್ತಾರೆ. “ಭಾರೀ ಮಳೆಯ ಸಮಯದಲ್ಲಿ ಸೀಗಡಿ ಬಹಳಷ್ಟು ಸಿಗುತ್ತಿತ್ತು. ಬೆಳಿಗ್ಗೆ 10 ಗಂಟೆಗೆ ನಾವು ಮನೆಗೆ ಹೋಗುತ್ತಿದ್ದೆವು. ನಮಗೆ ಈಗ ಅಷ್ಟು ಸಿಗುತ್ತಿಲ್ಲ," ಎಂದು ಅವರು ಹೇಳುತ್ತಾರೆ. "ಬೇರೆ ಸಮಯದಲ್ಲಿ, ಅರ್ಧ ಕಿಲೋ ಸೀಗಡಿ ಹಿಡಿಯಲು ಮಧ್ಯಾಹ್ನ 2 ಗಂಟೆಯ ತನಕ ಬೇಕಾಗುತ್ತದೆ." ಸಿಕ್ಕ ಸಿಗಡಿಗಳನ್ನು ಅಂದು ಸಂಜೆ ಮಾರಾಟ ಮಾಡಲಾಗುತ್ತದೆ.
ಹೆಚ್ಚಿನ ದಿನಗಳಲ್ಲಿ, ಸೀಗಡಿಗಳನ್ನು ಮಾರಾಟ ಮಾಡಲು ರಾತ್ರಿ 9 ಅಥವಾ ರಾತ್ರಿ 10 ರವರೆಗೆ ಕಾಯಬೇಕಾಗುತ್ತದೆ. "ನನ್ನಿಂದ ಖರೀದಿಸಲು ಬರುವ ಜನರು ಕಡಿಮೆ ಬೆಲೆಗೆ ಚೌಕಾಶಿ ಮಾಡುತ್ತಾರೆ. ನಾನೇನು ಮಾಡಲಿ? ಇವುಗಳನ್ನು ಮಾರಾಟ ಮಾಡಲು ನಾವು ಸುಡುವ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಜನರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ಎರಡು ರಾಶಿ ಸೀಗಡಿಗಳನ್ನು ಮಾರಾಟ ಮಾಡಲು ನಾವು ಎಷ್ಟು ಕಷ್ಟಪಡಬೇಕು ಎಂದು ನೀವೂ ನೋಡುತ್ತಿದ್ದೀರಿ" ಎಂದು ಗೋವಿಂದಮ್ಮ ಹೇಳುತ್ತಾರೆ. 100ರಿಂದ 150 ರೂ.ಗಳಿಗೆ ಮಾರಾಟವಾಗುವ ಪ್ರತಿಯೊಂದು ರಾಶಿಯಲ್ಲಿ 20-25 ಸೀಗಡಿಗಳು ಇರುತ್ತವೆ, "ನನಗೆ ಬೇರೆ ಯಾವುದೇ ಕೆಲಸವನ್ನು ಮಾಡಲು ತಿಳಿದಿಲ್ಲ, ಇದೇ ನನ್ನ ಜೀವನೋಪಾಯ" ಎಂದು ಅವರು ನಿಟ್ಟುಸಿರು ಬಿಡುತ್ತಾ ಹೇಳುತ್ತಾರೆ.


ಎಡ: ಅವರ ಮೀನುಗಾರಿಕಾ ಸಲಕರಣೆ, ಇದು ಅವರ ಏಕೈಕ ಜೀವನಾಡಿಯಾಗಿದೆ. ಬಲ: ತನ್ನ ಕೆಲಸದ ನಂತರ, ಗೋವಿಂದಮ್ಮ ಬಕಿಂಗ್ ಹ್ಯಾಮ್ ಕಾಲುವೆಯ ಬಳಿ ಒಂದು ಗುಟುಕು ನೀರನ್ನು ಕುಡಿಯಲು ಕುಳಿತಿರುವುದು


ಎಡಕ್ಕೆ: ಕಾಮರಾಜರ್ ಬಂದರಿನ ಬಳಿಯ ಸೇಂಟ್ ಮೇರಿಸ್ ಚರ್ಚ್ ಬಳಿ ಸಾರಿಗೆ ವಾಹನಕ್ಕಾಗಿ ಕಾಯುತ್ತಿರುವುದು. ಬಲ: ಗೋವಿಂದಮ್ಮ ಅವರು ಅತಿಪಟ್ಟು ಪುದುನಗರದ ತಿರುವೊಟ್ಟಿಯೂರ್ ಹೆದ್ದಾರಿಯ ಬಳಿ ರಸ್ತೆ ಬದಿಯಲ್ಲಿ ಸೀಗಡಿಯನ್ನು ಮಾರಾಟ ಮಾಡುತ್ತಾರೆ. ಪ್ರತಿ ರಾಶಿ, 100-150 ರೂ.ಗೆ ಮಾರಾಟವಾಗುತ್ತದೆ, 20-25 ಸೀಗಡಿಯನ್ನು ಹೊಂದಿರುತ್ತದೆ
ಗೋವಿಂದಮ್ಮ ಸೀಗಡಿಗಳನ್ನು ಮಂಜುಗಡ್ಡೆಯಲ್ಲಿಟ್ಟು ಸಂರಕ್ಷಿಸುವುದಿಲ್ಲ, ಆದರೆ ಅವುಗಳನ್ನು ತೇವವಾಗಿ ಮತ್ತು ತಾಜಾವಾಗಿಡಲು ಅವುಗಳನ್ನು ಮರಳಿನಿಂದ ಲೇಪಿಸುತ್ತಾರೆ. "ಜನರು [ಗ್ರಾಹಕರು] ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ಮಾಡುವವರೆಗೆ ಇದು ತಾಜಾವಾಗಿರುತ್ತದೆ. ಬೇಯಿಸಿದಾಗ ಅದು ಎಷ್ಟು ರುಚಿಕರವಾಗಿರುತ್ತದೆ ಗೊತ್ತೆ?" ಎಂದು ಅವರು ನನ್ನನ್ನು ಕೇಳುತ್ತಾರೆ. "ನಾನು ಅದೇ ದಿನ ಹಿಡಿದ ಸೀಗಡಿಯನ್ನು ಮಾರಬೇಕು. ಆಗ ಮಾತ್ರ ನಾನು ಗಂಜಿ (ಗಂಜಿ) ಕುಡಿಯಬಹುದು ಮತ್ತು ನನ್ನ ಮೊಮ್ಮಕ್ಕಳಿಗಾಗಿ ಏನನ್ನಾದರೂ ಖರೀದಿಸಬಹುದು. ಇಲ್ಲದಿದ್ದರೆ, ನಾನು ಹಸಿವಿನಿಂದ ಬಳಲಬೇಕಾಗುತ್ತದೆ."
ಇವರಿಗೆ ಸಿಗಡಿ ಹಿಡಿಯುವ ‘ಕಲೆ’ ಬಹಳ ಹಿಂದೆಯೇ ಪರಿಚಯವಾಗಿತ್ತು. “ನನ್ನ ತಂದೆ ಮತ್ತು ತಾಯಿ ನನ್ನನ್ನು ಶಾಲೆಗೆ ಕಳುಹಿಸಲಿಲ್ಲ. ಒಂದೆಡೆ ಸೇರಿ ಸಿಗಡಿ ಹಿಡಿಯಲು ಕಲಿಸಿದರು,” ಎಂದು ಗೋವಿಂದಮ್ಮ ನೆನಪಿಸಿಕೊಳ್ಳುತ್ತಾರೆ. “ನಾನು ನನ್ನ ಪೂರ್ತಿ ಬದುಕನ್ನು ನೀರಿನಲ್ಲಿ ಕಳೆದಿದ್ದೇನೆ. ಈ ನದಿಯೇ ನನಗೆ ಸರ್ವಸ್ವ. ಅದರ ಬಗ್ಗೆ ನಾನೇನೂ ಮಾಡಲಾರೆ. ಗಂಡನ ಮರಣದ ನಂತರ ನಾನು ನನ್ನ ಮಕ್ಕಳ ಹೊಟ್ಟೆಪಾಡಿಗೆ ಎಷ್ಟು ಕಷ್ಟ ಪಡುತ್ತಿದ್ದೆನೋ ಆ ದೇವರೇ ಬಲ್ಲ. ಸೀಗಡಿ ಹಿಡಿಯುವುದು ಗೊತ್ತಿಲ್ಲದೆ ಹೋಗಿದ್ದರೆ ನಾನು ಬದುಕುತ್ತಲೇ ಇರುತ್ತಿರಲಿಲ್ಲ.”
ಗೋವಿಂದಮ್ಮ ಮತ್ತು ಅವರ ನಾಲ್ವರು ಒಡಹುಟ್ಟಿದವರನ್ನು ಅವರ ತಾಯಿ ಮೀನು ಹಿಡಿಯಲು, ಖರೀದಿಸಲು ಮತ್ತು ಮಾರಾಟ ಮಾಡಲು ಕಲಿಸಿ ಬೆಳೆಸಿದರು. ಗೋವಿಂದಮ್ಮ 10 ವರ್ಷದವರಿದ್ದಾಗ ತಂದೆ ತೀರಿಕೊಂಡರು. “ನನ್ನ ತಾಯಿ ಮತ್ತೆ ಮದುವೆಯಾಗಲಿಲ್ಲ. ಅವರು ತಮ್ಮ ಬದುಕು ಪೂರ್ತಿ ನಮ್ಮನ್ನು ನೋಡಿಕೊಳ್ಳುವುದರಲ್ಲಿ ಕಳೆದರು. ಈಗ ಅವರು ನೂರಕ್ಕೂ ಹೆಚ್ಚು ವರ್ಷ ವಯಸ್ಸಿನವರಾಗಿದ್ದಾರೆ. ಸುನಾಮಿ ಕಾಲೋನಿಯಲ್ಲಿ ಇರುವವರು ಕಾಲೊನಿಯಲ್ಲೇ ಜೀವಂತವಿರುವ ಅತಿ ಹಿರಿಯ ಮಹಿಳೆ ಎನ್ನುತ್ತಾರೆ.”
ಗೋವಿಂದಮ್ಮನ ಮಕ್ಕಳ ಜೀವನವೂ ಈ ನದಿಯ ಮೇಲೆ ಅವಲಂಬಿತವಾಗಿದೆ. "ನನ್ನ ಮಗಳ ಗಂಡ ಮದ್ಯವ್ಯಸನಿ. ಅವನು ಯಾವುದೇ ಸರಿಯಾದ ಕೆಲಸವನ್ನು ಮಾಡುವುದಿಲ್ಲ. ಸೀಗಡಿಗಳನ್ನು ಹಿಡಿದು ಮಾರಾಟ ಮಾಡುವ ಮೂಲಕ ಅವಳ ಅತ್ತೆಯೇ ಆಹಾರವನ್ನು ಒದಗಿಸುತ್ತಾಳೆ" ಎಂದು ಅವರು ಹೇಳುತ್ತಾರೆ.

ಸೆಲ್ಲಯ್ಯ ಕೊಸಸ್ಥಲೈಯಾರ್ ನದಿಯಲ್ಲಿ ಸೀಗಡಿಗಳನ್ನು ಹಿಡಿಯಲು ತಯಾರಿ ನಡೆಸುತ್ತಿರುವುದು. ಈ ಚಿತ್ರವನ್ನು 2021ರಲ್ಲಿ ತೆಗೆದುಕೊಳ್ಳಲಾಗಿದೆ

ಸೆಲ್ಲಯ್ಯ (ಎಡ) ತನ್ನ ಮೀನು ಹಿಡಿಯುವ ಬಲೆಯನ್ನು ಹಿಡಿದುಕೊಂಡು, ಅವರ ಹೆಂಡತಿ ಕೊಸಸ್ಥಲೈಯಾರ್ ದಡದಲ್ಲಿರುವ ತಾತ್ಕಾಲಿಕ ಡೇರೆಯೊಂದರ ಪಕ್ಕದಲ್ಲಿ ತಮ್ಮ ಕುಟುಂಬಕ್ಕಾಗಿ ಅಡುಗೆ ಮಾಡುತ್ತಿದ್ದಾರೆ
ಅವರ ಹಿರಿಯ ಮಗ ಸೆಲ್ಲಯ್ಯ ಕೂಡ ಕುಟುಂಬದ ಆದಾಯಕ್ಕಾಗಿ ಸೀಗಡಿ ಹಿಡಿಯುತ್ತಿದ್ದರು. ಅವರು 45ನೇ ವಯಸ್ಸಿನಲ್ಲಿ ನಿಧನರಾದರು. 2021ರಲ್ಲಿ ನಾನು ಅವರನ್ನು ಭೇಟಿಯಾದಾಗ, "ನಾನು ಚಿಕ್ಕವನಿದ್ದಾಗ, ನನ್ನ ತಂದೆ ಮತ್ತು ತಾಯಿ ಬೆಳಿಗ್ಗೆ 5 ಗಂಟೆಗೆ ಸೀಗಡಿ ಹಿಡಿಯಲು ಹೊಳೆಗೆ ಹೋಗುತ್ತಿದ್ದರು. ಮನೆಗೆ ಬರಲು ರಾತ್ರಿ 9, 10 ಗಂಟೆ ಆಗುತ್ತಿತ್ತು. ತಂಗಿ ಮತ್ತು ನಾನು ಹಸಿದು ಮಲಗುತ್ತಿದ್ದೆವು. ಅಮ್ಮ-ಅಪ್ಪ ಅಕ್ಕಿ ಖರೀದಿಸಿ, ಅಡುಗೆ ಮಾಡಿ ಊಟಕ್ಕೆ ಎಬ್ಬಿಸುತ್ತಿದ್ದರು” ಎಂದು ಹೇಳಿದ್ದರು.
ಹತ್ತನೇ ವಯಸ್ಸಿನಲ್ಲಿ, ಸೆಲ್ಲಯ್ಯ ಆಂಧ್ರಪ್ರದೇಶದ ಕಬ್ಬಿನ ಕಾರ್ಖಾನೆಗೆ ಕೆಲಸಕ್ಕೆ ಹೋದರು. ‘‘ನಾನು ಅಲ್ಲಿದ್ದಾಗ ಸೀಗಡಿ ಹಿಡಿದು ಮನೆಗೆ ವಾಪಸಾಗುತ್ತಿದ್ದಾಗ ಅಪಘಾತದಲ್ಲಿ ನನ್ನ ತಂದೆ ತೀರಿಕೊಂಡರು. ಅಪ್ಪನ ಮುಖ ನೋಡಲೂ ಆಗಲಿಲ್ಲ” ಎಂದ. "ಅವನು ಸತ್ತ ನಂತರ, ತಾಯಿ ಎಲ್ಲವನ್ನೂ ಮಾಡಿದರು. ಅವರು ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ನದಿಯಲ್ಲಿಯೇ ಕಳೆದರು.
ಕಾರ್ಖಾನೆಯವರು ಸರಿಯಾಗಿ ಕೂಲಿ ಕೊಡದ ಕಾರಣ ಸೆಲ್ಲಯ್ಯ ಮನೆಗೆ ಮರಳಿದರು. ಅಮ್ಮನ ಜೊತೆ ಕೆಲಸ ಮಾಡತೊಡಗಿದರು. ಅಮ್ಮನಂತಲ್ಲದೆ, ಸೆಲ್ಲಯ್ಯ ಮತ್ತು ಅವರ ಪತ್ನಿ ಸೀಗಡಿ ಹಿಡಿಯಲು ಬಲೆಗಳನ್ನು ಬಳಸುತ್ತಿದ್ದರು. ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ‘‘ಹಿರಿಯ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದೇನೆ. ಒಬ್ಬ ಹುಡುಗಿ ಬಿಎ ಇಂಗ್ಲಿಷ್ ಓದುತ್ತಿದ್ದಾಳೆ. ಹುಡುಗಿಯರಿಬ್ಬರೂ ಶಾಲೆಗೆ ಹೋಗುತ್ತಿದ್ದಾರೆ. ಸೀಗಡಿ ಮಾರಿ ಸಂಪಾದಿಸಿದ ಹಣದಿಂದ ಅವರನ್ನು ಓದಿಸಲು ಪ್ರಯತ್ನಿಸುತ್ತಿದ್ದೇನೆ,” ಎಂದು ಅವರು ಹೇಳಿದರು. “ಡಿಗ್ರಿ ಓದುತ್ತಿರುವ ಮಗಳು ಮುಂದೆ ಕಾನೂನು ಓದಬೇಕು. ನಾನು ಅವಳಿಗೆ ಓದಲು ಬೆಂಬಲವಾಗಿ ನಿಲ್ಲಬೇಕು.
ಆದಾಗ್ಯೂ, ಅವರ ಆಸೆ ಈಡೇರಿಲ್ಲ. ಮಾರ್ಚ್ 2022ರಲ್ಲಿ, ಸೆಲ್ಲಯ್ಯ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಮಗನ ಅಗಲುವಿಕೆಯಿಂದ ನೊಂದಿರುವ ಗೋವಿಂದಮ್ಮ ಹೇಳುತ್ತಾರೆ, "ನಾನು ನನ್ನ ಗಂಡನನ್ನು ಬೇಗನೆ ಕಳೆದುಕೊಂಡೆ. ಈಗ, ನನ್ನ ಮಗನೂ ಹೋದ. ನಾನು ಸತ್ತಾಗ ನನ್ನ ಚಿತೆಗೆ ಬೆಂಕಿ ಹಚ್ಚಲು ನನಗೆ ಯಾರೂ ಇಲ್ಲ. ನನ್ನ ಮಗನಂತೆ ಯಾರಾದರೂ ನನ್ನನ್ನು ನೋಡಿಕೊಳ್ಳಲು ಸಾಧ್ಯವೆ?"

ಅರುಣೋದಯಂ ನಗರದಲ್ಲಿರುವ ತನ್ನ ಮನೆಯಲ್ಲಿ ಗೋವಿಂದಮ್ಮ ಮಗನಾದ ಸೆಲ್ಲಯ್ಯನ ಚಿತ್ರವನ್ನು ನೋಡಿ ಅಳುತ್ತಿರುವುದು


ಎಡ: ಗೋವಿಂದಮ್ಮ ತನ್ನ ಮಗನ ಸಾವಿನಿಂದ ಜರ್ಜರಿತಳಾಗಿದ್ದಾರೆ. 'ನಾನು ನನ್ನ ಗಂಡನನ್ನು ಬೇಗನೆ ಕಳೆದುಕೊಂಡೆ. ಈಗ, ನನ್ನ ಮಗನೂ ಹೋದ.' ಬಲ: ಅರುಣೋದಯಂ ನಗರದಲ್ಲಿರುವ ತನ್ನ ಮನೆಯ ಮುಂದೆ ಗೋವಿಂದಮ್ಮ ತನ್ನ ಸೀಗಡಿ ಬುಟ್ಟಿಯೊಂದಿಗೆ. ಅವರು ತನ್ನ ಕುಟುಂಬಕ್ಕೆ ಸಹಾಯ ಮಾಡುವ ಸಲುವಾಗಿ ಕೆಲಸವನ್ನು ಮುಂದುವರಿಸಿದ್ದಾರೆ
ಈ ವರದಿಯನ್ನು ಮೂಲತಃ ತಮಿಳಿನಲ್ಲಿ ಮಾಡಲಾಗಿತ್ತು ಮತ್ತು ನಂತರ ಅದನ್ನು ಸೆಂಥಳಿರ್ ಅವರು ಇಂಗ್ಲೀಷ್ ಭಾಷೆಗೆ ಅನುವಾದಿಸಿರುತ್ತಾರೆ. ವರದಿಗಾರರು ಪರಿ ತಮಿಳು ಅನುವಾದಕ ಸಂಪಾದಕರಾದ ರಾಜಸಂಗೀತನ್ ಅವರಿಗೆ ತಮಿಳು ವರದಿಯ ಸಂಪಾದನೆಯಲ್ಲಿ ನೀಡಿದ ಸಹಕಾರಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು