ʼಪರಿʼಯ ಪ್ರಬುದ್ಧ ಓದುಗರಿಗಾಗಿ ನಾವು 'ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್' ಅನ್ನು ಪರಿಚಯಿಸುತ್ತಿದ್ದೇವೆ. ಈ ವಿಶಿಷ್ಟ ಯೋಜನೆಯಡಿಯಲ್ಲಿ ನೀವು 100,000ಕ್ಕೂ ಹೆಚ್ಚು ಜಾನಪದ ಗೀತೆಗಳನ್ನು ಆಲಿಸಬಹುದು. ಈ ಜಾನಪದ ಗೀತೆಗಳನ್ನು ಮಹಾರಾಷ್ಟ್ರದ ದೂರದ ಹಳ್ಳಿಗಳಲ್ಲಿ ವಾಸಿಸುವ ಶ್ರಮಜೀವಿ ಮಹಿಳೆಯರು ಹಾಡಿದ್ದಾರೆ. ಮೂಲತಃ ಮರಾಠಿಯಲ್ಲಿರುವ, ಈ ಜಾನಪದ ಗೀತೆಗಳ ಸುಮಾರು 30,000 ಹಾಡುಗಳನ್ನು ಡಿಜಿಟಲ್‌ ರೂಪದಲ್ಲಿ ದಾಖಲಿಸಲಾಗಿದ್ದು, 40,000 ಹಾಡುಗಳನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. ಈ ಉತ್ತಮ ದಾಖಲೀಕರಣದಲ್ಲಿ, ನೀವು ಕಾವ್ಯಾತ್ಮಕ ಸಂಗೀತ ಪರಂಪರೆಯನ್ನು ಪರಿಚಯ ಮಾಡಿಕೊಳ್ಳುತ್ತೀರಿ, ಮತ್ತು ಇದರ ಧ್ವನಿ ಮುದ್ರಣದ ಸಮಯದಲ್ಲಿ, 1,000ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 3,302 ಜಾನಪದ ಗಾಯಕರು ತಮ್ಮ ಸುಂದರ ಕಂಠವನ್ನು ಧಾರೆಯೆರೆದಿದ್ದಾರೆ. ʼಪರಿʼಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಬಯಸಿದಾಗಲೆಲ್ಲ ಈ ಹಾಡುಗಳನ್ನು ಆಲಿಸಬಹುದು.

ಹಲವು ತಲೆಮಾರುಗಳಿಂದ ಮಹಾರಾಷ್ಟ್ರದ ಮಹಿಳೆಯರು ಬೀಸು ಕಲ್ಲಿನಲ್ಲಿ ಧಾನ್ಯಗಳನ್ನು ಬೀಸುವಾಗ ಮತ್ತು ಮನೆಯ ಇತರ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ತಾವೇ ಸಂಯೋಜಿಸಿ ಹಾಡಿದ 100,000ಕ್ಕೂ ಹೆಚ್ಚು ಜಾನಪದ ಗೀತೆಗಳ ಸಂಗ್ರಹವಾದ ʼದಿ ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್‌’ಗೆ ಸ್ವಾಗತ.

ಹಲವು ಮಾನವಶಾಸ್ತ್ರಜ್ಞರು ಮತ್ತು ಜಾನಪದ ಸಂಗೀತ ತಜ್ಞರ ದಶಕಗಳ ನಿಖರವಾದ ಕ್ಷೇತ್ರ ಸಂಶೋಧನೆಯ ಫಲಿತಾಂಶವೇ ಈ ದತ್ತಸಂಚಯವಾಗಿದೆ. ಈ ಯೋಜನೆಯ ಹಿಂದಿನ ಪ್ರೇರಣೆಯೆಂದರೆ ಈ ಮಹಿಳೆಯರ ಬೀಸುಕಲ್ಲಿನ ಪದಗಳನ್ನು ದಾಖಲೀಕರಣಗೊಳಿಸಿ ಸಂರಕ್ಷಿಸುವ ಮೂಲಕ ಅವುಗಳ ಪುನರುತ್ಥಾನಗೊಳಿಸುವುದು ಮತ್ತು ಅನುವಾದ ಮಾಡುವುದು. ಈ ಹಾಡುಗಳ ಸಂಪ್ರದಾಯವು ಯಂತ್ರಚಾಲಿತ ಹಿಟ್ಟಿನ ಮಿಲ್ಲುಗಳು ಬಂದ ಕಾರಣ ಕಳೆದ ದಶಕದಿಂದ ಬಹುತೇಕ ಕಣ್ಮರೆಯಾಗತೊಡಗಿದೆ.

ಈ ಸಾಹಿತ್ಯದ ವ್ಯಾಪ್ತಿ ಬಹಳ ದೊಡ್ಡದಾಗಿದೆ. ಈ ಹಾಡುಗಳು ನಮಗೆ ಹಳ್ಳಿಯ ಜೀವನ, ಲಿಂಗ, ಜಾತಿ ಮತ್ತು ವರ್ಗ, ಧರ್ಮ, ತನ್ನ ಮಕ್ಕಳೊಂದಿಗೆ ಮಹಿಳೆಉ ಸಂಬಂಧ, ಪತಿ, ಒಡಹುಟ್ಟಿದವರು ಮತ್ತು ಒಟ್ಟಾರೆಯಾಗಿ ಸಮಾಜದ ಬಗ್ಗೆ ಮಾತ್ರವಲ್ಲದೆ ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆಯೂ ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ.

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಮೂಲಕ ಗ್ರಾಮೀಣ ಮಹಾರಾಷ್ಟ್ರದ ಮಹಿಳೆಯರ ದೃಢತೆ ಮತ್ತು ಕಲಾತ್ಮಕತೆಯನ್ನು ನಮ್ಮ ವೆಬ್‌ಸೈಟ್‌ನಲ್ಲಿ ಅನಾವರಣಗೊಳಿಸಿದ ಹೆಮ್ಮೆ ನಮ್ಮದು. ಈ ಅದ್ಭುತ ಕಾರ್ಯಕ್ರಮದ ಆರಂಭವು ಮಾರ್ಚ್ 8, 2017ರಂದು ಅಂತರರಾಷ್ಟ್ರೀಯ ಮಹಿಳಾ ದಿನದ ಉದ್ದೇಶಕ್ಕೆ ಗೌರವ ಸಲ್ಲಿಸಿದಂತೆ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ.

ಗ್ರೈಂಡ್‌ಮಿಲ್ಸ್ ಹಾಡುಗಳ ದತ್ತಸಂಚಯವನ್ನು ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರಖ್ಯಾತ ವಿದ್ವಾಂಸರೂ ಆಗಿರುವ ದಿವಂಗತ ಹೇಮಾ ರಾಯ್ಕರ್ ಮತ್ತು ಗೈ ಪೊಯಿಟ್ವಿನ್ ರೂಪಿಸಿದ್ದಾರೆ, ಅವರು ಪುಣೆಯಲ್ಲಿನ ಸಾಮಾಜಿಕ ವಿಜ್ಞಾನದ ಸಹಕಾರಿ ಸಂಶೋಧನಾ ಕೇಂದ್ರದ ಸಹ-ಸ್ಥಾಪಕರೂ ಆಗಿದ್ದು. ಒಟ್ಟಾಗಿ ಅವರು 20 ವರ್ಷಗಳ ಅವಧಿಯಲ್ಲಿ ಮಹಾರಾಷ್ಟ್ರದ 110,000ಕ್ಕೂ ಹೆಚ್ಚು ಜಾನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ.

ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್‌ನ ಕಂಪ್ಯೂಟೇಷನಲ್ ಸಂಗೀತಶಾಸ್ತ್ರಜ್ಞ ಮತ್ತು ಮಾಜಿ ಎಂಜಿನಿಯರ್ ಆಗಿರುವ ಬರ್ನಾರ್ಡ್ ಬೆಲ್ 1990ರ ದಶಕದ ಉತ್ತರಾರ್ಧದಲ್ಲಿ ಈ ಯೋಜನೆಯೊಡನೆ ಕೈ ಜೋಡಿಸಿದರು, ಅವರು ಪಠ್ಯಗಳು ಮತ್ತು ಟಿಪ್ಪಣಿಗಳ ಡೇಟಾಬೇಸ್ ಅನ್ನು ವಿನ್ಯಾಸಗೊಳಿಸಿ 120 ಗಂಟೆಗಳಿಗಿಂತ ಹೆಚ್ಚು ಸಂಯೋಜಿತ ಆಡಿಯೊವನ್ನು ರೆಕಾರ್ಡ್ ಮಾಡಿದರು. ಈ ಸಂಗ್ರಹವನ್ನು ಹರಿಯಾಣದ ಗುರ್‌ಗಾಂವ್‌ನಲ್ಲಿರುವ ಆರ್ಕೈವ್ಸ್ ಎಂಡ್ ರಿಸರ್ಚ್ ಸೆಂಟರ್ ಫಾರ್ ಎಥ್ನೊ‌ ಮ್ಯೂಸಿಕಾಲಜಿ ನಿರ್ವಹಿಸುತ್ತಿತ್ತು. ನಂತರ ಇದನ್ನು ನಂತರ ಪ್ರೊ. ಬೆಲ್ ಅವರ ಸೌಜನ್ಯದೊಡನೆ ಫ್ರಾನ್ಸ್‌ನ ಐಕ್ಸ್ ಎನ್ ಪ್ರೊವೆನ್ಸ್‌ನಲ್ಲಿರುವ 'ಸ್ಪೀಚ್ ಅಂಡ್ ಲ್ಯಾಂಗ್ವೇಜ್ ಡಾಟಾ ರೆಪೊಸಿಟರಿಗೆ' ಕಳುಹಿಸಲಾಯಿತು. ನಂತರ, ಈ ಡೇಟಾಬೇಸ್ ಸಾರ್ವಜನಿಕವಾಗಿ ಆರ್ಕೈವ್ ಮಾಡುತ್ತಿರುವ ಅನೇಕ ಮಾಹಿತಿ ವ್ಯವಸ್ಥೆಗಳಿಗೆ ಮಾದರಿಯಾಗಿ ಹೊರಹೊಮ್ಮಿತು. ಅಲ್ಲದೆ, ಈ ಡೇಟಾಬೇಸ್ ಮಾನವಿಕ ಸಂಬಂಧಿತ ವಿಷಯಗಳಲ್ಲಿ ಕೆಲಸ ಮಾಡುವ ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿಯ ಹಾದಿಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಯಿತು.

1993 ಮತ್ತು 1998ರ ನಡುವೆ, 'ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್'ಗೆ ಯುನೆಸ್ಕೋ, ನೆದರ್‌ಲ್ಯಾಂಡ್ಸ್ ಅಭಿವೃದ್ಧಿ ಸಹಕಾರ ಸಚಿವಾಲಯ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ' ಪ್ರೊಗ್ರೆಸ್‌ ಆಫ್‌ ಹುಮನ್‌ ಕೈಂಡ್ ಚಾರ್ಲ್ಸ್ ಲಿಯೋಪೋಲ್ಡ್ ಮೇಯರ್ ಫೌಂಡೇಶನ್' ಧನಸಹಾಯವನ್ನು ನೀಡಿದವು.

ಪ್ರೊ. ಬೆಲ್ ಹೇಳುತ್ತಾರೆ, "ನಾನು ಹೇಮಾ ರಾಯ್ಕರ್ ಮತ್ತು ಗೈ ಪೊಯಿಟ್ವಿನ್ ಅವರೊಂದಿಗೆ ವೈಯಕ್ತಿಕ ಬದ್ಧತೆಯನ್ನು ಹೊಂದಿದ್ದೆ, ಅದರ ಅಡಿಯಲ್ಲಿ ನಾನು '‌ಗ್ರೈಂಡ್‌ ಮಿಲ್ ಸಾಂಗ್ಸ್' ಯೋಜನೆಯ ಪ್ರಕಟಣೆ / ದಾಖಲೀಕರಣ / ಭಾಷಾಂತರ ಮತ್ತು ಈ ಹಾಡುಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕಾಗಿತ್ತು. ಜನವರಿ, 2015ರಲ್ಲಿ, ನಾನು ಅಗತ್ಯವಾದ ಸಾಧನಗಳನ್ನು (ಉಪಕರಣಗಳನ್ನು ಒದಗಿಸಿದೆ ) ಪುಣೆಯಲ್ಲಿನ '‌ಗ್ರೈಂಡ್‌ ಮಿಲ್ ಸಾಂಗ್ಸ್'ನಲ್ಲಿ ಕೆಲಸ ಮಾಡುವ ತಜ್ಞರ ತಂಡಕ್ಕೆ, ಇದು ಯೋಜನೆಗೆ ಹೊಸ ಹುರುಪನ್ನು ನೀಡಿತು. ಹಾಡುಗಳನ್ನು ಪ್ರಕಟಿಸಲು ನಾವು ಆರಂಭಿಕ ಸ್ವರೂಪದಲ್ಲಿಯೂ ಕೆಲಸ ಮಾಡಿದ್ದೇವೆ. ಡೇಟಾಬೇಸ್ ಬದಲಾವಣೆಗಳನ್ನು \ ದೇವನಾಗರಿಯ ಬಹು ಎನ್‌ಕೋಡಿಂಗ್‌ಗಳೊಂದಿಗೆ ಪಠ್ಯವನ್ನು ಮರುರೂಪಿಸಲು ಮತ್ತು ಟ್ರಾನ್ಸ್‌ಕೋಡ್ ಮಾಡಲು ಮಾಡಲು ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಸಂಗ್ರಹಿಸುವ ಅಗತ್ಯವಿತ್ತು”

ಈ ಅಭಿಯಾನದಲ್ಲಿ ʼಪರಿʼಯ ಪಾಲ್ಗೊಳ್ಳುವಿಕೆಯೊಂದಿಗೆ ಹಳೆಯ ಮತ್ತು ಹೊಸ ಸಹಯೋಗಿಗಳ ಸಹಾಯದಿಂದ ಯೋಜನೆ ಮತ್ತೊಮ್ಮೆ ಪ್ರಾರಂಭವಾಯಿತು.‌ ಅನುವಾದವಾಗದಿರುವ 70,000 ಹಾಡುಗಳನ್ನು ಅನುವಾದಿಸುವ ಜವಾಬ್ದಾರಿಯನ್ನು ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್‌ನ ಮಾಜಿ ದಾಖಲೀಕರಣ ಅಧಿಕಾರಿ ಆಶಾ ಒಗಲೆ ಮತ್ತು ಅವರ ಸಹೋದ್ಯೋಗಿಗಳಾದ ರಜನಿ ಖಲಡ್ಕರ್ ಮತ್ತು ಜಿತೇಂದ್ರ ಮೇಡ್ ವಹಿಸಿಕೊಂಡಿದ್ದಾರೆ. ಇವರೆಲ್ಲರ ಮರಾಠಿ ಭಾಷೆಯ ಜ್ಞಾನ ಮತ್ತು ಗ್ರಾಮೀಣ ಜೀವನದ ಬಗೆಗಿನ ಅವರ ತಿಳುವಳಿಕೆ ನಿಸ್ಸಂದೇಹವಾಗಿ ಅನುವಾದ ಪ್ರಯತ್ನದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಲಿವೆ.

2016ರಲ್ಲಿ, ಹರಿಯಾಣದ ಸೋನಿಪತ್‌ನಲ್ಲಿರುವ ಅಶೋಕ್ ವಿಶ್ವವಿದ್ಯಾಲಯದೊಂದಿಗಿನ ನಮ್ಮ ಸಹಭಾಗಿತ್ವವನ್ನು ಸ್ಥಾಪಿಸಲಾಯಿತು. ಈ ಸಹಭಾಗಿತ್ವವನ್ನು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ (ರಾಜಕೀಯ ವಿಜ್ಞಾನ) ಸಹಾಯಕ ಪ್ರಾಧ್ಯಾಪಕರಾದ ಜಿಲ್ ವರ್ನಿಯರ್ಸ್ ವಹಿಸಿದ್ದರು. ಯಂಗ್ ಇಂಡಿಯಾ ಫೆಲೋಶಿಪ್, 2016–17ರ ಮೂರು ಫೆಲೋಗಳಾದ, ಮೆಹರೀಶ್ ದೇವಕಿ, ಸ್ನೇಹ ಮಾಧುರಿ, ಮತ್ತು ಪೂರ್ಣಪ್ರಜ್ಞಾ ಕುಲಕರ್ಣಿ, ಅನುವಾದಗಳನ್ನು ಪರಿಶೀಲಿಸುತ್ತಾರೆ ಮತ್ತು ಆರ್ಕೈವ್ ಮಾಡಲು ಅಗತ್ಯವಾದ ಹೆಚ್ಚುವರಿ ಬೆಂಬಲವನ್ನು ಸಹ ನೀಡುತ್ತಾರೆ. ಪರಿಯ ವ್ಯವಸ್ಥಾಪಕ ಸಂಪಾದಕಿ ನಮಿತಾ ವಾಯ್ಕರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ (ಪರಿ) 'ಗ್ರೈಂಡ್‌‌ಮಿಲ್ ಸಾಂಗ್ಸ್ ಪ್ರಾಜೆಕ್ಟ್'ನ ಮುಖ್ಯಸ್ಥರಾಗಿದ್ದರೆ, ಅಮೆರಿಕನ್ ಇಂಡಿಯಾ ಫೌಂಡೇಶನ್ ಕ್ಲಿಂಟನ್ ಫೆಲೋ ಒಲಿವಿಯಾ ವೇರಿಂಗ್ ಸಹ ಡೇಟಾಬೇಸ್ ಕ್ಯುರೇಷನ್‌ಗೆ ಕೊಡುಗೆ ನೀಡುತ್ತಾರೆ..

ಈ ಯೋಜನೆಯಲ್ಲಿ ದೊಡ್ಡ ಪಾತ್ರ ವಹಿಸಿರುವ ಇನ್ನೂ ಕೆಲವರೆಂದರೆ, ಭೀಮಸೇನ್ ನಾನೆಕರ್ (ಸಂದರ್ಶಕ), ದತ್ತ ಶಿಂಧೆ (ಸಂಶೋಧನಾ ಸಹಯೋಗಿ), ಮಾಳವಿಕಾ ತಾಲ್ಲೂಡ್ಕರ್ (ಛಯಾಗ್ರಾಹಣ), ಲತಾ ಭೋರ್ (ಡೇಟಾ ಇನ್ಪುಟ್) ಮತ್ತು ಗಜ್ರಾಬಾಯಿ ದಾರೇಕರ್ (ಲಿಪ್ಯಂತರ).

ಯೋಜನೆಯ ಪ್ರಮುಖ ಕಲಾವಿದೆಯಾಗಿರುವ ಗಂಗುಬಾಯಿ ಅಂಬೋರ್ ಅವರ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳ ದಾಖಲೀಕರಣ ಆಂಡ್ರೀನ್ ಬೆಲ್ ಅವರದು.

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಈ ಇತ್ತೀಚಿನ ಆವೃತ್ತಿಗೆ ನಿಮ್ಮನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ನೀವು ಇಲ್ಲಿನ ಸಂಗ್ರದಲ್ಲಿನ ಹಾಡುಗಳನ್ನು ಆಸ್ವಾದಿಸಬೇಕೆನ್ನುವುದು ನಮ್ಮ ಬಯಕೆ. ಮುಂಬರುವ ದಿನಗಳಲ್ಲಿ ಈ ಸಂಗ್ರಹಕ್ಕೆ ಮತ್ತಷ್ಟು ಮಗದಷ್ಟು ಹಾಡುಗಳು ಸೇರಲಿವೆ. ಈ ಸಂದರ್ಭದಲ್ಲಿ ʼಪರಿʼ ʼಗ್ರೈಂಡ್‌ಮಿಲ್ ಸಾಂಗ್ಸ್ʼ‌ ಪ್ರಾಜೆಕ್ಟ್‌ನ ಭಾಗವಾಗಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತದೆ. ವಿಶೇಷವಾಗಿ ಗ್ರಾಮೀಣ ಮಹಾರಾಷ್ಟ್ರದ ಸಾವಿರಾರು ಮಹಿಳೆಯರ ಜೀವನ ಮತ್ತು ಸಾಧನೆಗಳನ್ನು ಗೌರವಿಸುತ್ತದೆ. ಅವರು ಇಲ್ಲದೆ ಈ ಹಾಡುಗಳು ಮತ್ತು ಡೇಟಾಬೇಸ್‌ ಅನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.


ಕಲಾವಿದರು/ಹಾಡುಗಾರರು : ಗಂಗೂಬಾಯಿ ಅಂಬೋರೆ

ಊರು : ತಡ್ಕಲಾಸ್‌

ತಾಲೂಕು : ಪೂರ್ಣ

ಜಿಲ್ಲೆ : ಪರ್ಭಾನಿ

ಲಿಂಗ : ಮಹಿಳೆ

ಜಾತಿ : ಮರಾಠ

ವಯಸ್ಸು : 56

ವಿದ್ಯೆ : ಇಲ್ಲ

ಮಕ್ಕಳು : ಒಬ್ಬ ಮಗಳು

ವೃತ್ತಿ : 14 ಎಕರೆಗಳ ಜಮೀನು ಇರುವ ಕುಟಂಬ; ಅವರನ್ನು ಮನೆಯಿಂದ ಹೊರಹಾಕಲ್ಪಟ್ಟ ಕಾರಣ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು

ದಿನಾಂಕ: ಅವರ ಸಂದರ್ಶನ ಮತ್ತು ಹಾಡುಗಳನ್ನು ಏಪ್ರಿಲ್ 7, 1996 ಮತ್ತು ಫೆಬ್ರವರಿ 5, 1997ರಂದು ದಾಖಲಿಸಲಾಗಿದೆ

ಕಾಡಿನಲ್ಲಿ, ಮರಗಳ ನಡುವೆ, ಅಳುತ್ತಿರುವುದು ಯಾರು? ಕೇಳು!
ಬೋರಿ-ಬಾಭಾಲಿ [ಬುಗುರಿ ಮತ್ತು ಅಕೇಶಿಯ ಮರಗಳು] ಸೀತೆಯ ದುಃಖ ಕೇಳುತ್ತಾ ಸಾಂತ್ವನ ಹೇಳುವ ‘ಹೆಂಗಸರು’.


ಟಿಪ್ಪಣಿ: ರಾಮ ಸೀತೆಯನ್ನು ಶಿಕ್ಷೆಯಾಗಿ ಕಾಡಿಗೆ ಕಳುಹಿಸುವ ರಾಮಾಯಣದ ದೃಶ್ಯವನ್ನು ಈ ಹಾಡು ಚಿತ್ರಿಸುತ್ತದೆ ಮತ್ತು ಇಲ್ಲಿ ಸೀತೆ ಅಳುತ್ತಿದ್ದಾಳೆ. ಸೀತಾ ಒಬ್ಬಂಟಿಯಾಗಿ ದುಃಖವನ್ನು ಹಂಚಿಕೊಳ್ಳಲು ಯಾರೂ ಇಲ್ಲದ ಕಾರಣ, ಸೀತೆ ತನ್ನ ದುಃಖಗಳನ್ನು ಬುಗುರಿ ಮತ್ತು ಅಕೇಶಿಯ ಮರಗಳಿಗೆ ಹೇಳುತ್ತಾಳೆ. ಬುಗುರಿ ಮತ್ತು ಅಕೇಶಿಯ ಮರಗಳು ಮುಳ್ಳಿನಿಂದ ಕೂಡಿದ್ದು ಮತ್ತು ಅವುಗಳ ತೊಗಟೆ ಬಿರುಕುಗಳಿಂದ ತುಂಬಿರುತ್ತವೆ. ಮುಳ್ಳುಗಳಿಂದ ಸುತ್ತುವರಿದ ಬುಗುರಿ ಮತ್ತು ಅಕೇಶಿಯದ ಹಣೆಬರಹ ನಮ್ಮ ಸಮಾಜದಲ್ಲಿನ ಹೆಣ್ಣುಗಳದ್ದೂ ಹೌದು. ಇಲ್ಲಿ ಈ ಮರಗಳು ಸೀತೆಯನ್ನು ಸಂತೈಸುತ್ತಿವೆ ತಮ್ಮ ಸ್ಥಿತಿಯೂ ನಿನ್ನಂತೆಯೇ ಇದೆ ಎಂದು ನೋವು ಹಂಚಿಕೊಳ್ಳುತ್ತವೆ. ಒಂಟಿತನ ಮತ್ತು ನಿರ್ಲಕ್ಷ್ಯವನ್ನು ಎದುರಿಸುತ್ತಿರುವ ಗಂಗೂಬಾಯಿ ಅಂಬೋರ್‌ ಆ ಅಳುವ ಸೀತೆಯಲ್ಲಿ ತನ್ನನ್ನು ಕಾಣುತ್ತಾರೆ.


ಪರಭಾಣಿ ಜಿಲ್ಲೆಯ ತಡ್ಕಲಸ್ ತಾಲ್ಲೂಕಿನ ಗಂಗುಬಾಯಿ ಅಂಬೋರ್ ದುಃಖದಲ್ಲಿ ಅದ್ದಿ ತೆಗೆದಂತೆ ಹಾಡುಗಳನ್ನು ಹಾಡಿದ್ದಾರೆ. ಅವರ ಒಂಟಿತನದಲ್ಲಿ ಕಳೆದ ವರ್ಷಗಳು ಅವರ ಧ್ವನಿಯ ಮೂಲಕ ಕೇಳಿಬರುತ್ತವೆ, ಅದು ಕೇಳುವವರ ಆತ್ಮವನ್ನು ತಟ್ಟುತ್ತದೆ.

ಓದಿರಿ , ಗಂಗುಬಾಯಿ: ಹಳ್ಳಿಯ ಧ್ವನಿ, ಮರಾಠಿಯ ಆತ್ಮ .‌ ವರದಿ: ಜಿತೇಂದ್ರ ಮೇಡ್.

ಪೋಸ್ಟರ್: ಆದಿತ್ಯ ದೀಪಂಕರ್, ಶ್ರೇಯಾ ಕಾತ್ಯಾಯಿನಿ, ಸಿಂಚಿತಾ ಮಾಜಿ

ಅನುವಾದ: ಶಂಕರ ಎನ್. ಕೆಂಚನೂರು

PARI GSP Team

PARI Grindmill Songs Project Team: Asha Ogale (translation); Bernard Bel (digitisation, database design, development and maintenance); Jitendra Maid (transcription, translation assistance); Namita Waikar (project lead and curation); Rajani Khaladkar (data entry).

Other stories by PARI GSP Team
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru