ಆ ಮಹಿಳೆ ಮಲೇರಿಯಾ ರ‍್ಯಾಪಿಡ್ ಟೆಸ್ಟ್ ಕಿಟ್‌ಗಾಗಿ ತನ್ನ ಬ್ಯಾಗ್ ತಡಕಾಡತೊಡಗಿದರು. ಆ ಚೀಲವು ಔಷಧಿಗಳು, ಸಲೈನ್ ಬಾಟಲಿಗಳು, ಕಬ್ಬಿಣದಂಶದ ಮಾತ್ರೆಗಳು, ಇಂಜೆಕ್ಷನ್ಗಳು, ಬಿಪಿ ಪರೀಕ್ಷಿಸುವ ಯಂತ್ರ ಇತ್ಯಾದಿಗಳಿಂದ ತುಂಬಿತ್ತು.ಪಕ್ಕದಲ್ಲೇ ಮಹಿಳೆಯೊಬ್ಬರು ಮಲಗಿದ್ದರು. ಆಕೆಗೆ ಜ್ವರವು ಏರುತ್ತಲೇ ಇತ್ತು. ಟೆಸ್ಟ್ ಮಾಡಿದಾಗ ಪಾಸಿಟಿವ್ ಎನ್ನುವ ಫಲಿತಾಂಶ ಬಂತು. ಆ ಮಹಿಳೆಗೆ ಜ್ವರ ಬಂದು ಈಗಾಗಲೇ ಎರಡು ದಿನಗಳಾಗಿದ್ದವು. ಮತ್ತು ಕುಟುಂಬವು ಈ ಪರೀಕ್ಷೆ ಮಾಡುವ ಮಹಿಳೆಯನ್ನು ಕರೆತರಲು ಎರಡು ದಿನಗಳಿಂದ ಪ್ರಯತ್ನಿಸುತ್ತಿತ್ತು.
ಆಕೆ ಇನ್ನೊಮ್ಮೆ ತನ್ನ ಬ್ಯಾಗಿನೊಳಗೆ ಕೈಹಾಕಿದರು, ಈ ಬಾರಿ ಅದರೊಳಗಿನಿಂದ ಇಂಟ್ರಾವೆನೌಸ್ (ಐವಿ) 500 ಎಮ್‌ಎಲ್ ಡೆಕ್ಷ್ಟ್ರೋಸ್ ಬಾಟಲ್ ಹೊರತೆಗೆದರು. ರೋಗಿ ಮಹಿಳೆಯ ಮಂಚದ ಮೇಲೆ ಹತ್ತಿ ಮಾಡಿನಿಂದ ತೂಗುಬಿದ್ದಿದ್ದ ಪ್ಲಾಸ್ಟಿಕ್ ಹಗ್ಗಕ್ಕೆ ಆಕರ್ಷಕ ವೇಗದಿಂದ ಆ ಬಾಟಲಿಯನ್ನು ಕಟ್ಟಿದರು.
ಕಳೆದ 10 ವರ್ಷಗಳಿಂದ ಜಾರ್ಖಂಡ್‌ನ ಪಶ್ಚಿಮಿ ಸಿಂಗ್ ಭೂಮ್ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ 35 ವರ್ಷದ ಜ್ಯೋತಿ ಪ್ರಭಾ ಕಿಸ್ಪೊಟ್ಟಾ ಅವರು ಅರ್ಹ ವೈದ್ಯರಲ್ಲ ಅಥವಾ ತರಬೇತಿ ಪಡೆದ ನರ್ಸ್ ಕೂಡಾ ಅಲ್ಲ. ಅವರು ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರದೊಂದಿಗೆ ಸಂಬಂಧ ಹೊಂದಿಲ್ಲ. ಆದರೆ ಒರಾನ್ ಬುಡಕಟ್ಟಿನ ಈ ಯುವತಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯ ಪ್ರತೀಕದಂತಿರುವ ಪಶ್ಚಿಮಿ ಸಿಂಗ್ ಭೂಮ್‌ನ ಆದಿವಾಸಿ ಹಳ್ಳಿಗಳಲ್ಲಿನ ಜನರ ಕೊನೆಯ ಭರವಸೆ.
ಇಲ್ಲಿನ ಪ್ರಾದೇಶಿಕ ಸಮೀಕ್ಷೆಗಳು ಉಲ್ಲೇಖಿಸುವ ಅನೇಕ 'ಆರ್ ಎಂಪಿ'ಗಳಲ್ಲಿ ಜ್ಯೋತಿ ಕೂಡಾ ಒಬ್ಬರು, ಗ್ರಾಮೀಣ ಭಾರತದಲ್ಲಿ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಶೇಕಡಾ 70ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇವರೇ ಇದ್ದಾರೆ . ಇಲ್ಲಿ ಆರ್ ಎಂಪಿ ಎಂದರೆ ನೀವು ಊಹಿಸುವಂತೆ ನೋಂದಾಯಿತ ವೈದ್ಯಕೀಯ ಅಭ್ಯಾಸಿಯಲ್ಲ (Registered Medical Practitioner), ಇದು ರೂರಲ್ ಮೆಡಿಕಲ್ ಪ್ರಾಕ್ಟೀಷನರ್‌ಗಳು ಎನ್ನುವುದರ ದಾರಿ ತಪ್ಪಿಸುವ ಸಂಕ್ಷಿಪ್ತ ರೂಪವಾಗಿದೆ, ಈ ಪದ್ಧತಿಯ ವೈದ್ಯರನ್ನು ಜೋಲಾ ಚಾಪ್ (ಕ್ವಾಕ್) ವೈದ್ಯರು ಎಂದು ಲೇವಡಿ ಮಾಡಲಾಗುತ್ತದೆ. ಗ್ರಾಮೀಣ ಭಾರತದಲ್ಲಿ ಸಮಾನಾಂತರ ಖಾಸಗಿ ಆರೋಗ್ಯ ಸೇವೆಯನ್ನು ನಡೆಸುತ್ತಿರುವ ಈ ಅನರ್ಹ ವೈದ್ಯರನ್ನು ಶೈಕ್ಷಣಿಕ ಸಾಹಿತ್ಯದಲ್ಲಿ 'ಕ್ವಾಕ್' ಎಂದು ಹೀಯಾಳಿಸಲಾಗುತ್ತದೆ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಸರ್ಕಾರವು ತನ್ನ ನೀತಿಗಳಲ್ಲಿ ಹೆಚ್ಚಿನ ದ್ವಂದ್ವವನ್ನು ಹೊಂದಿದೆ.
ಆರ್‌ಎಂಪಿಗಳೆಂದರೆ ಹೆಚ್ಚಾಗಿ ಭಾರತದ ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿಯಾಗದೆ ಇರುವವರು. ಅವರಲ್ಲಿ ಕೆಲವರು ಹೋಮಿಯೋಪತಿ ಅಥವಾ ಯುನಾನಿ ವೈದ್ಯರೆಂದು ನೋಂದಾಯಿಸಿಕೊಂಡಿರಬಹುದು, ಆದರೆ ಅವರು ಅಲೋಪತಿ ಔಷಧಿಗಳನ್ನು ಅಭ್ಯಾಸ ಮಾಡುತ್ತಾರೆ ಅಥವಾ ವಿತರಿಸುತ್ತಾರೆ.
ಬಿಹಾರ ಸರ್ಕಾರದಿಂದ ನೋಂದಾಯಿತವೆಂದು ಎಂದು ಹೇಳಲಾದ ಕೌನ್ಸಿಲ್ ಆಫ್ ಅನ್ ಎಂಪ್ಲಾಯ್ಡ್ ರೂರಲ್ ಮೆಡಿಕಲ್ ಪ್ರಾಕ್ಟೀಷನರ್ಸ್ ಎನ್ನುವ ವೈದ್ಯರ ಖಾಸಗಿ ಸಂಸ್ಥೆಯಿಂದ ಜ್ಯೋತಿ ಅಲೋಪತಿ ಔಷಧ ಪದ್ಧತಿಯಡಿಯಲ್ಲಿ ಆರ್‌ಎಂಪಿ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಅವರು ಅಲ್ಲಿ ಆರು ತಿಂಗಳ ಕೋರ್ಸ್ ಮಾಡಲು, ರೂ. 10,000 ಪಾವತಿಸಿದ್ದರು. ಸಂಸ್ಥೆ ಪ್ರಸ್ತುತ ಅಸ್ತಿತ್ವದಲ್ಲಿಲ್ಲ.
*****
ಆ ಐವಿ ಬಾಟಲಿ ಖಾಲಿಯಾಗುವ ತನಕ ಜ್ಯೋತಿ ಅಲ್ಲೇ ಕಾಯುತ್ತಾರೆ. ನಂತರ ರೋಗಿಯ ಸ್ನೇಹಿತೆಯ ಬಳಿ ಒಂದಷ್ಟು ಔಷಧಿಗಳನ್ನು ನೀಡಿ ಅದನ್ನು ಬಳಸುವ ರೀತಿಯನ್ನು ಹೇಳಿಕೊಟ್ಟು ಹೊರಡುತ್ತಾರೆ. ನಾವು ಅಲ್ಲಿಂದ ಮರಳಿ ಆಕೆಯ ಬೈಕ್ ನಿಂತಿದ್ದ ಸ್ಥಳದತ್ತ ನಡೆಯತೊಡಗಿತ್ತು. ಆ ಸ್ಥಳವು ಅಲ್ಲಿಂದ ಇಪ್ಪತ್ತು ನಿಮಿಷದಷ್ಟು ನಡಿಗೆಯ ದೂರದಲ್ಲಿತ್ತು. ಕೆಟ್ಟ ರಸ್ತೆಯ ಕಾರಣ ಬೈಕ್ ಅಲ್ಲಿ ನಿಂತಿತ್ತು.
ಪಶ್ಚಿಮಿ ಸಿಂಗ್ ಭೂಮ್ ಜಿಲ್ಲೆಯು ಖನಿಜಗಳಿಂದ ಸಮೃದ್ಧವಾಗಿದೆ ಆದರೆ ಮೂಲಸೌಕರ್ಯದ ವಿಷಯದಲ್ಲಿ ಕಳಪೆಯಾಗಿದೆ ಮತ್ತು ಆಸ್ಪತ್ರೆಗಳು, ಶುದ್ಧ ಕುಡಿಯುವ ನೀರು, ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಂತಹ ಮೂಲಭೂತ ಸೌಲಭ್ಯಗಳನ್ನು ಇನ್ನೂ ಕಂಡಿಲ್ಲ. ಇದು ಜ್ಯೋತಿಯವರು ವಾಸವಿರುವ ಪ್ರದೇಶವಾಗಿದೆ. ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ಈ ಪ್ರದೇಶವವು ಸರ್ಕಾರ-ಮಾವೋವಾದಿ ಸಂಘರ್ಷದಿಂದ ಗುರುತಿಸಲ್ಪಟ್ಟಿದೆ. ಇಲ್ಲಿನ ಕೆಲವು ರಸ್ತೆಗಳನ್ನು ಕೆಟ್ಟದಾಗಿ ನಿರ್ವಹಿಸಲಾಗುತ್ತಿದೆ, ಮತ್ತು ಇಲ್ಲಿ ಮೊಬೈಲ್ ಅಥವಾ ಇಂಟರ್ನೆಟ್ ಸಂಪರ್ಕ ಕಡಿಮೆ ಅಥವಾ ಇಲ್ಲವೇ ಇಲ್ಲ. ಕೆಲವೊಮ್ಮೆ, ಅವರಿಗೆ ಮತ್ತೊಂದು ಹಳ್ಳಿಯನ್ನು ತಲುಪಲು ಇರುವ ಏಕೈಕ ಮಾರ್ಗವೆಂದರೆ ನಡೆಯುವುದು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಗ್ರಾಮಸ್ಥರು ಅವರನ್ನು ಕರೆತರಲು ಸೈಕಲ್ಲಿನಲ್ಲಿ ಸಂದೇಶವಾಹಕರನ್ನು ಕಳುಹಿಸುತ್ತಾರೆ.
ಜ್ಯೋತಿ ಪಶ್ಚಿಮಿ ಸಿಂಗ್ ಬೊರೊಟಿಕಾ ಗ್ರಾಮದ ಭೂಮ್ ಜಿಲ್ಲೆಯ ಗೊಯಿಲ್ಕೆರಾ ಬ್ಲಾಕ್‌ಗೆ ಕರೆದೊಯ್ಯುವ ಇಕ್ಕಟ್ಟಾದ ರಸ್ತೆಯಂಚಿನಲ್ಲಿರುವ ಮಣ್ಣಿನ ಮನೆಯಲ್ಲಿ ವಾಸವಿದ್ದಾರೆ. ಈ ವಿಶಿಷ್ಟ ಆದಿವಾಸಿ ಮನೆಯ ಕೇಂದ್ರದಲ್ಲಿರುವ ಒಂದು ಕೋಣೆಯು ಎಲ್ಲಾ ಬದಿಗಳಲ್ಲಿ ಅದರ ಸುತ್ತಲೂ ವರಾಂಡಗಳನ್ನು ಹೊಂದಿದೆ. ವರಾಂಡದ ಒಂದು ಭಾಗವನ್ನು ನವೀಕರಿಸಿ ಅಡುಗೆಮನೆಗೆ ಸ್ಥಳ ಮಾಡಲಾಗಿದೆ. ಇಲ್ಲಿ ವಿದ್ಯುತ್ ಸದಾ ಅನಿಯಮಿತವಾಗಿರುತ್ತದೆ, ಮತ್ತು ಮನೆಯೊಳಗೆ ಕತ್ತಲೆ ತುಂಬಿಕೊಂಡಿರುತ್ತದೆ.
ಈ ಗ್ರಾಮದಲ್ಲಿರುವ ಆದಿವಾಸಿ ಮನೆಗಳಿಗೆ ಹೆಚ್ಚಿನ ಕಿಟಕಿಗಳಿರುವುದಿಲ್ಲ, ಮತ್ತು ಜನರು ಅಗತ್ಯವಿದ್ದಾಗ ಸಣ್ಣ ಟಾರ್ಚ್ ಬಳಸುತ್ತಾರೆ ಅಥವಾ ಹಗಲಿನಲ್ಲಿಯೂ ಮನೆಯ ಮೂಲೆಯಲ್ಲಿ ಲಾಟೀನು ಹಚ್ಚಿಡುತ್ತಾರೆ. ಜ್ಯೋತಿ ತನ್ನ ಪತಿ 38 ವರ್ಷದ ಸಂದೀಪ್ ಧನ್ವರ್, ಆರ್‌ಎಂಪಿ, 71 ವರ್ಷದ ತಾಯಿ ಜುಲಿಯಾನಿ ಕಿಸ್ಪೊಟ್ಟಾ ಮತ್ತು ಅವರ ಸಹೋದರನ ಎಂಟು ವರ್ಷದ ಮಗ ಜಾನ್ಸನ್ ಕಿಸ್ಪೊಟ್ಟಾ ಜೊತೆ ಇಲ್ಲಿ ವಾಸಿಸುತ್ತಿದ್ದಾರೆ.
ನಾವು ಅಲ್ಲಿದ್ದಾಗಲೇ ವ್ಯಕ್ತಿಯೊಬ್ಬ ಸೈಕಲ್ಲಿನಲ್ಲಿ ಜ್ಯೋತಿಯವರನ್ನು ಕರೆಯಲು ಬಂದರು. ಜ್ಯೋತಿ ತನ್ನ ಊಟದ ತಟ್ಟೆಯನ್ನು ಅಲ್ಲೇ ಬಿಟ್ಟು ಹೊರಡಲು ತಯಾರಾಗಿ ತನ್ನ ಚೀಲವವನ್ನು ಕೈಗೆತ್ತಿಕೊಂಡರು. “ಭಾತ್ ಖಾಯ್ ಕೆ ತೊ ಜಾವೋ [ಊಟವನ್ನಾದರೂ ಮಾಡಿ ಹೋಗು],” ಎಂದು ಜ್ಯೋತಿಯವರ ಅಮ್ಮ ಜುಲಿಯಾನಿ ಸದ್ರಿ ಭಾಷೆಯಲ್ಲಿ, ಹೊರಡಲು ತಯಾರಾಗುತ್ತಿದ್ದ ಮಗಳ ಬಳಿ ಹೇಳಿದರು. “ಅವರಿಗೆ ನಾನು ಈಗಲೇ ಹೊರಡಬೇಕಿದೆ. ಊಟ ಎಲ್ಲಾದರೂ ಮಾಡುತ್ತೇನೆ. ಸದ್ಯಕ್ಕೆ ರೋಗಿಗೆ ಚಿಕಿತ್ಸೆ ಮುಖ್ಯು.” ಎಂದು ತನ್ನ ತಾಯಿಯೊಡನೆ ಹೇಳುವಾಗ ಜ್ಯೋತಿಯವರ ಒಂದು ಕಾಲು ಅವರ ಮನೆಯ ಹೊಸಿಲಿನ ಹೊರಗಿತ್ತು.
ಜ್ಯೋತಿ ಬೊರೊಟಿಕಾ, ಹುಟುಟಾ, ರಂಗಮತಿ, ರೋಮಾ, ಕಂಡಿ, ಓಸಂಗಿ ಸೇರಿದಂತೆ ಹರ್ಟಾ ಪಂಚಾಯಿತಿಯ 16 ಹಳ್ಳಿಗಳಲ್ಲಿ ಕೆಲಸ ಮಾಡುತ್ತಾರೆ. ಇವೆಲ್ಲವೂ ಒಟ್ಟಾರೆ 12 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಪ್ರತಿಯೊಂದು ಸಂದರ್ಭದಲ್ಲಿ, ಅವರು ಒಂದಷ್ಟು ದೂಋವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗುತ್ತದೆ. ಇದಲ್ಲದೆ, ಕೆಲವೊಮ್ಮೆ ರುಂಡಿಕೋಚಾ ಮತ್ತು ರಾಬ್ಕೆರಾದಂತಹ ಇತರ ಪಂಚಾಯತ್ ಗಳಲ್ಲಿರುವ ಹಳ್ಳಿಗಳಲ್ಲಿನ ಮಹಿಳೆಯರಿಂದಲೂ ಕರೆಸಲ್ಪಡುತ್ತಾರೆ.
*****
"ಅದು 2009ನೇ ಇಸವಿ, ಆಗ ನಾನು ನನ್ನ ಮೊದಲ ಮಗುವಿನೊಂದಿಗೆ ಗರ್ಭಿಣಿಯಾಗಿದ್ದೆ," ಎಂದು 30ರ ಪ್ರಾಯದ ಗ್ರಾಸಿ ಎಕ್ಕಾ, ಕಷ್ಟದ ಸಮಯದಲ್ಲಿ ಜ್ಯೋತಿ ತನಗೆ ಹೇಗೆ ಸಹಾಯ ಮಾಡಿದರೆನ್ನುವುದನ್ನು ವಿರಿಸುತ್ತಾ ಹೇಳುತ್ತಾರೆ. ಬೊರೊಟಿಕಾದಲ್ಲಿರುವ ತಮ್ಮ ಮನೆಯಲ್ಲಿ ಕುಳಿತು ನಮ್ಮೊಡನೆ ಮಾತನಾಡುತ್ತಿದ್ದ ಅವರು, “ಅಂದು ಮಧ್ಯರಾತ್ರಿಯ ಹೊತ್ತಿಗೆ ಮಗು ಹುಟ್ಟಿತ್ತು. ಆಗ ನನ್ನೊಡನೆ ಇದ್ದಿದ್ದು ನನ್ನ ವಯಸ್ಸಾದ ಅತ್ತೆಯೊಬ್ಬರೇ. ಅವರನ್ನು ಬಿಟ್ಟರೆ ಇದ್ದಿದ್ದು ಜ್ಯೋತಿ. ಹೆರಿಗೆಯ ನಂತರ ನನಗೆ ತೀವ್ರವಾದ ಅತಿಸಾರ ಕಾಡಿತ್ತು. ಇದರಿಂದಾಗಿ ನಾನು ದುರ್ಬಲಳಾಗಿ ಪ್ರಜ್ಞೆ ಕಳೆದುಕೊಂಡಿದ್ದೆ. ಅಂದು ಜ್ಯೋತಿಯೇ ನನ್ನನ್ನು ಎಲ್ಲಾ ವಿಧದಲ್ಲೂ ನೋಡಿಕೊಂಡಿದ್ದು.
ಆ ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಇರಲಿಲ್ಲ, ಗ್ರಾಮಕ್ಕೆ ಬರಲು ಸರಿಯಾದ ರಸ್ತೆಯೂ ಇದ್ದಿರಲಿಲ್ಲ ಎಂದು ಗ್ರೇಸಿ ನೆನಪಿಸಿಕೊಳ್ಳುತ್ತಾರೆ. ಚಿಕಿತ್ಸೆಗಾಗಿ 100 ಕಿ.ಮೀ ದೂರದ ಚೈಬಾಸಾಗೆ ಗ್ರೇಸಿಯವರನ್ನು ಕರೆದೊಯ್ಯಲು ಜ್ಯೋತಿ ಪ್ರಯತ್ನಿಸುತ್ತಿದ್ದರು. ಇದಕ್ಕಾಗಿ ಸರ್ಕಾರಿ ನರ್ಸ್ ಜರಂತಿ ಹೆಬ್ರಾಂ ಅವರನ್ನು ಸಂಪರ್ಕಿಸಲು ಜ್ಯೋತಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಸಂಪರ್ಕ ಪತ್ತೆಯಾಗುವವರೆಗೂ, ಜ್ಯೋತಿ ಸ್ಥಳೀಯ ಗಿಡಮೂಲಿಕೆಗಳನ್ನು ಚಿಕಿತ್ಸೆಗಾಗಿ ಆಶ್ರಯಿಸಿದರು. ಚೊಚ್ಚಲ ಮಗುವಿಗೆ ತಾಯಿಯಾಗಲಿದ್ದ ಗ್ರೇಸಿ ಮೊದಲಿನ ಸ್ಥಿತಿಗೆ ಮರಳಲು ಸುಮಾರು ಒಂದು ವರ್ಷ ತೆಗೆದುಕೊಂಡರು. "ಜ್ಯೋತಿ ನನ್ನ ಮಗುವನ್ನು ಗ್ರಾಮದ ಇತರ ಹಾಲುಣಿಸುವ ಮಹಿಳೆಯರ ಬಳಿಗೆ ಕರೆದೊಯ್ದು ಹಾಲುಣಿಸಿಕೊಂಡು ಬರುತ್ತಿದ್ದಳು, ಅವಳು ಇಲ್ಲದೆ ಹೋಗಿದ್ದರೆ ನನ್ನ ಮಗು ಉಳಿಯುತ್ತಿರಲಿಲ್ಲ" ಎಂದು ಗ್ರೇಸಿ ಹೇಳುತ್ತಾರೆ.
ಗ್ರಾಸಿಯವರ ಪತಿ 38 ವರ್ಷದ ಸಂತೋಷ್ ಕಚ್ಛಾಪ್ ಹೇಳುವಂತೆ, ಎರಡು ವರ್ಷಗಳಿಂದ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ, ಅಲ್ಲಿ ನರ್ಸ್ ವಾರಕ್ಕೊಮ್ಮೆ ಬಂದು ಕೂರುತ್ತಾರೆ. ಈ ಪಿಎಚ್‌ಸಿ ಜ್ಯೋತಿಯವರ ಮನೆಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ, ಮತ್ತು ಇದು ಯಾವುದೇ ಸೌಲಭ್ಯಗಳನ್ನು ನೀಡುವುದಿಲ್ಲ. "ನರ್ಸ್ ಹಳ್ಳಿಯಲ್ಲಿ ಉಳಿಯುವುದಿಲ್ಲ. ಅವಳು ಬಂದು ಜ್ವರದಂತಹ ಸಣ್ಣ-ಪುಟ್ಟ ದೂರುಗಳನ್ನು ಹೊಂದಿರುವ ಜನರನ್ನು ಪರಿಶೀಲಿಸಿ ಹಿಂದಿರುಗುತ್ತಾಳೆ. ನರ್ಸ್ ನಿಯಮಿತವಾಗಿ ವರದಿಯನ್ನು ಕಳುಹಿಸಬೇಕಿರುತ್ತದೆ, ಆದರೆ ಊರಿನಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲ. ಹೀಗಾಗಿ ಅವರು ಇಲ್ಲಿ ಉಳಿಯಲು ಸಾಧ್ಯವಿಲ್ಲ. ಜ್ಯೋತಿ ಊರಿನಲ್ಲೇ ಇರುತ್ತಾರೆ. ಈ ಕಾರಣದಿಂದಲೇ ಜನರಿಗೆ ಜ್ಯೋತಿಯ ಸೇವೆ ಉಪಯುಕ್ತವಾಗಿದೆ" ಎಂದು ಅವರು ಹೇಳುತ್ತಾರೆ. ಗರ್ಭಿಣಿ ಮಹಿಳೆಯರು ಪಿಎಚ್‌ಸಿಗೆ ಭೇಟಿ ನೀಡುವುದಿಲ್ಲ. ಅವರು ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳಲು ಜ್ಯೋತಿಯವರ ಸಹಾಯವನ್ನು ಕೋರುತ್ತಾರೆ.
ಈಗಲೂ ಈ ಜಿಲ್ಲೆಯಾದ್ಯಂತ ಹಳ್ಳಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪಿಎಚ್ ಸಿಗಳಿಲ್ಲ. ಗೊಯಿಲ್ಕೆರಾ ಬ್ಲಾಕಿನಲ್ಲಿರುವ ಆಸ್ಪತ್ರೆ ಬೊರೊಟಿಕಾದಿಂದ 25 ಕಿಲೋಮೀಟರ್ ದೂರದಲ್ಲಿದೆ, ಮತ್ತು ಇತ್ತೀಚೆಗೆ ಆನಂದ್ ಪುರ್ ಬ್ಲಾಕಿನಲ್ಲಿ ಸ್ಥಾಪಿಸಲಾದ ಪಿಎಚ್‌ಸಿ ಸುಮಾರು 18 ಕಿಲೋಮೀಟರ್ ದೂರದಲ್ಲಿದೆ. ಬೊರೊಟಿಕಾದಿಂದ ಸೆರೆಂಗ್ಡಾ ಗ್ರಾಮದ ಮೂಲಕ 12 ಕಿಲೋಮೀಟರ್ ಉದ್ದದ ಒಂದು ಸಣ್ಣ ದಾರಿಯಿದೆ. ಆದರೆ ಅದು ಕೋಯೆಲ್ ನದಿಯೆದುರು ನಿಲ್ಲುತ್ತದೆ. ಬೇಸಿಗೆಯಲ್ಲಿ, ಜನರು ಆನಂದಪುರವನ್ನು ತಲುಪಲು ನೀರು ಕಡಿಮೆಯಿರುವೆಡೆ ನಡೆದುಕೊಂಡು ಹಾದುಹೋಗುತ್ತಾರೆ. ಆದರೆ ಮಳೆಗಾಲದ ಸಮಯದಲ್ಲಿ, ನದಿ ಉಕ್ಕಿ ಹರಿಯುತ್ತದೆ ಮತ್ತು ಈ ದಾರಿ ಮುಚ್ಚಿಹೋಗುತ್ತದೆ, ಇದು ಹರ್ಟಾ ಪಂಚಾಯಿತಿಯ ಹಳ್ಳಿಗಳ ಜನರು ಆನಂದಪುರಕ್ಕೆ ಹೋಗಲು ಸುಮಾರು 4 ಕಿಲೋಮೀಟರ್ ಉದ್ದದ ಪರ್ಯಾಯ ಮಾರ್ಗವನ್ನು ಬಳಸುವಂತೆ ಮಾಡುತ್ತದೆ. ಈ ದಾರಿಯಲ್ಲಿ ನದಿಯಿಂದ ಆನಂದಪುರದವರೆಗೆ, ಕಲ್ಲು ಮಣ್ಣಿನ ಓಣಿ, ಕಿತ್ತು ಹೋಗಿರುವ ಟಾರ್ ರಸ್ತೆಯ ಮೂಲಕ ಸುಮಾರು 10 ಕಿಲೋಮೀಟರ್ ತನಕ ಕಾಡಿನ ಮೂಲಕ ಹೋಗಬೇಕು.
ಮೊದಲು ಚಕ್ರಧರಪುರ ನಗರದವರೆಗೆ ಜನರನ್ನು ಕರೆದೊಯ್ಯುವ ಬಸ್ ಇತ್ತು, ಆದರೆ ಅದು ಅಪಘಾತದ ನಂತರ ತನ್ನ ಸೇವೆಯನ್ನು ನಿಲ್ಲಿಸಿತು. ಜನರು ಸೈಕಲ್ಲುಗಳು ಮತ್ತು ಮೋಟಾರು ಬೈಕುಗಳನ್ನು ಅವಲಂಬಿಸಿದ್ದಾರೆ, ಅಥವಾ ನಡೆದುಕೊಂಡು ಹೋಗುತ್ತಾರೆ. ಆದರೆ ಇದು ಗರ್ಭಿಣಿ ಮಹಿಳೆಯರಿಗೆ ಕೈಗೊಳ್ಳಲು ಸಾಧ್ಯವಿಲ್ಲದ ಪ್ರಯಾಣವಾಗಿದೆ. ಅಲ್ಲದೆ, ಆನಂದಪುರ ಪಿಎಚ್‌ಸಿಯಲ್ಲಿ ಸಹಜ ಹೆರಿಗೆಗಳನ್ನಷ್ಟೇ ಮಾಡಿಸಲಾಗುತ್ತದೆ. ಹೆರಿಗೆಯು ಜಟಿಲವಾಗಿದ್ದರೆ ಅಥವಾ ಆಪರೇಷನ್ ಅಗತ್ಯವಿದ್ದರೆ, ಮಹಿಳೆಯರು ಆನಂದಪುರದಿಂದ ಇನ್ನೂ 15 ಕಿಲೋಮೀಟರ್ ದೂರದಲ್ಲಿರುವ ಮನೋಹರಪುರಕ್ಕೆ ಹೋಗಬೇಕು ಅಥವಾ ಒಡಿಶಾ ರಾಜ್ಯದೊಳಗೆ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ರೂರ್ಕೆಲಾಗೆ ರಾಜ್ಯದ ಗಡಿಯನ್ನು ದಾಟಿ ಹೋಗಬೇಕು.
"ಅನಾರೋಗ್ಯಕ್ಕೆ ಒಳಗಾದಾಗ ಮಹಿಳೆಯರು ಅತ್ಯಂತ ಅಸಹಾಯಕರು ಎನ್ನುವುದನ್ನು ಬಾಲ್ಯದಿಂದಲೂ ನೋಡಿದ್ದೇನೆ" ಎಂದು ಜ್ಯೋತಿ ಹೇಳುತ್ತಾರೆ. "ಪುರುಷರು (ನಗರಗಳು ಮತ್ತು ಪಟ್ಟಣಗಳಲ್ಲಿ) ಸಂಪಾದಿಸಲು ಹೋಗುತ್ತಾರೆ. ಪಟ್ಟಣಗಳು ಮತ್ತು ಆಸ್ಪತ್ರೆಗಳು ಗ್ರಾಮದಿಂದ ಬಹಳ ದೂರದಲ್ಲಿವೆ, ಹಾಗೂ ಬಹುತೇಕ ಸಂದರ್ಭಗಳಲ್ಲಿ ಹೆಂಗಸರು ತಮ್ಮ ಮನೆಯ ಗಂಡಸರು ಮರಳುವುದನ್ನು ಕಾಯುವ ಕಾರಣ, ಅವರು ಬರುವುದರೊಳಗೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿರುತ್ತದೆ. ಅನೇಕ ಮಹಿಳೆಯರಿಗೆ, ಅವರ ಪತಿ ಊರಿನಲ್ಲೇ ವಾಸಿಸುತ್ತಿದ್ದರೂ ಯಾವುದೇ ಪ್ರಯೋಜನವಿಲ್ಲ, ಏಕೆಂದರೆ ಕೆಲವು ಗಂಡಸರು ಕುಡಿದು ತಮ್ಮ ಹೆಂಡತಿಯರನ್ನು ಹೊಡೆಯುತ್ತಾರೆ," ಎಂದು ಅವರು ಹೇಳುತ್ತಾರೆ.
"ಈ ಹಿಂದೆ ಈ ಪ್ರದೇಶದಲ್ಲಿ ದಾಯಿ-ಮಾ (ಸೂಲಗಿತ್ತಿ) ಇದ್ದರು. ಆಕೆ ಇಲ್ಲಿನ ಮಹಿಳೆಯರಿಗೆ ಹೆರಿಗೆಯ ಸಮಯದಲ್ಲಿ ಇದ್ದಂತಹ ಏಕೈಕ ಬೆಂಬಲವಾಗಿದ್ದರು. ಆದರೆ ಹಳ್ಳಿಯ ಜಾತ್ರೆಯಲ್ಲಿ ಯಾರೋ ಅವರನ್ನು ಕೊಂದರು. ಅವರ ನಂತರ, ಆ ಕೌಶಲಗಳನ್ನು ಹೊಂದಿರುವ ಒಬ್ಬ ಮಹಿಳೆಯೂ ಹಳ್ಳಿಯಲ್ಲಿಲ್ಲ" ಎಂದು ಜ್ಯೋತಿ ಹೇಳುತ್ತಾರೆ.
ಪ್ರತಿ ಗ್ರಾಮದಲ್ಲೂ ಅಂಗನವಾಡಿ ಸೇವಿಕಾ ಮತ್ತು ಸಾಹಿಯಾ ಇರುತ್ತಾರೆ. ಸೇವಿಕಾ ಹಳ್ಳಿಯಲ್ಲಿ ಮಕ್ಕಳ ದಾಖಲೆಗಳನ್ನು ಇಡುತ್ತಾರೆ, ಜೊತೆಗೆ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು ಮತ್ತು ಅವರ ಶಿಶುಗಳ ಆರೋಗ್ಯವನ್ನು ಪರಿಶೀಲಿಸುತ್ತಾರೆ. ಸಾಹಿಯಾ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುತ್ತಾರೆ, ಆದರೆ ರೋಗಿಯು ಆಕೆಯ ಆಹಾರ, ಸಾರಿಗೆ ಮತ್ತು ವಸತಿಯ ವೆಚ್ಚವನ್ನು ಭರಿಸಬೇಕು. ಜನರು ಸಾಹಿಯಾಗಿಂತಲೂ ಜ್ಯೋತಿಯವರನ್ನೇ ಸಂಪರ್ಕಿಸಲು ಬಯಸುತ್ತಾರೆ ಏಕೆಂದರೆ ಜ್ಯೋತಿ ಯಾವುದೇ ಕಾರಣಕ್ಕೂ ಮನೆ ಭೇಟಿಗಳಿಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದಿಲ್ಲ, ಕೇವಲ ಔಷಧಿಗಳಿಗೆ ಮಾತ್ರವೇ ಹಣ ಪಡೆಯುತ್ತಾರೆ.
ಆದಾಯಕ್ಕಾಗಿ ಮಳೆಯಾಶ್ರಿತ ಕೃಷಿ ಮತ್ತು ಕೂಲಿ ಕೆಲಸವನ್ನು ಅವಲಂಬಿಸಿರುವ ಈ ಹಳ್ಳಿಗಳ ಕುಟುಂಬಗಳಿಗೆ ಅದು ಸಹ ಜ್ಯೋತಿಯವರ ಬಳಿ ಬರಲು ಒಂದು ಕಾರಣವಾಗಿರಬಹುದು. ಪಶ್ಚಿಮಿ ಸಿಂಗ್ ಭೂಮ್ ನ ಗ್ರಾಮೀಣ ಜನಸಂಖ್ಯೆಯ ಶೇಕಡಾ 80ಕ್ಕೂ ಹೆಚ್ಚು ಜನರು ಸಾಂದರ್ಭಿಕ ಅಥವಾ ಕೃಷಿ ಕೂಲಿ ಕೆಲಸದಲ್ಲಿ ತೊಡಗಿದ್ದಾರೆ (ಜನಗಣತಿ 2011). ಇಲ್ಲಿನ ಬಹುತೇಕ ಮನೆಗಳ ಪುರುಷರು ಕೆಲಸಕ್ಕಾಗಿ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ.
*****
ನೀತಿ ಆಯೋಗದ ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚ್ಯಂಕ ವರದಿಯ ಪ್ರಕಾರ, ಗ್ರಾಮೀಣ ಪಶ್ಚಿಮಿ ಸಿಂಗ್ ಭೂಮ್‌ನ ಸುಮಾರು 64 ಪ್ರತಿಶತ ಜನರು 'ಬಹು ಆಯಾಮದ ಬಡವರಾಗಿ' ಉಳಿದಿದ್ದಾರೆ. ಇದು ಹಣಕಾಸಿಗೆ ಸಂಬಂಧಿಸಿಲ್ಲದ ಸೂಚ್ಯಂಕಂಗಳನ್ನು ಬಳಸಿ ಮಾಡಲಾದ ಬಡತನದ ಕುರಿತಾದ ವರದಿ. ಇಲ್ಲಿಯ ಜನರಿಗೆ ಹೆಚ್ಚಿನ ಸಂದರ್ಭಗಳಲ್ಲಿ ಎರಡು ರೀತಿಯ ಆಯ್ಕೆಯಿರುತ್ತದೆ. ಹೆಚ್ಚಿನ ಹಣ ಖರ್ಚುಮಾಡಿಕೊಂಡು ಹೋಗಿ ಉಚಿತ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಅಥವಾ ಆರ್‌ಎಮ್‌ಪಿ ನೀಡುವ ದುಬಾರಿ ಬೆಲೆಯ ಔಷಧಿಗಳನ್ನು ತೆಗೆದುಕೊಳ್ಳುವುದು. ಜ್ಯೋತಿಯಂತಹ ಆರ್‌ಎಮ್‌ಪಿಗಳು ಸ್ವಲ್ಪ ಕಾಲದ ನಂತರ ಕಂತಿನಲ್ಲಿ ಹಣ ಪಡೆಯಲು ಸಹ ಒಪ್ಪಿಕೊಳ್ಳುತ್ತಾರೆ.
ವಿಳಂಬವನ್ನು ತಡೆಗಟ್ಟಲು, ರಾಜ್ಯ ಸರ್ಕಾರವು ಜಿಲ್ಲಾ ಆಸ್ಪತ್ರೆಗಳ ಕಾಲ್ ಸೆಂಟರ್‌ಗಳ ಜೊತೆಗೆ ಉಚಿತ ಸರ್ಕಾರಿ ಆರೋಗ್ಯ ಸೌಲಭ್ಯಗಳಿಗಾಗಿ 'ಮಮತಾ ವಾಹನ್ ಮತ್ತು ಸಾಹಿಯಾ' ನೆಟ್‌ವರ್ಕ್ ಸ್ಥಾಪಿಸಿದೆ. ಗರ್ಭಿಣಿಯರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಈ ವಾಹನದ ಕುರಿತು ಮಾತನಾಡಿದ ಜ್ಯೋತಿ, ‘ಮಮತಾ ವಾಹನದ ದೂರವಾಣಿ ಸಂಖ್ಯೆಗೆ ಜನರು ಕರೆ ಮಾಡಬಹುದು, ಆದರೆ ಚಾಲಕನಿಗೆ ಗರ್ಭಿಣಿಯ ಪ್ರಾಣಾಪಾಯವಿದೆ ಎಂಬ ಅನುಮಾನ ಬಂದರೆ ಕರೆದುಕೊಂಡು ಹೋಗಲು ನಿರಾಕರಿಸುತ್ತಾನೆ. ಯಾಕೆಂದರೆ ವಾಹನದಲ್ಲೇ ಮಹಿಳೆ ಸತ್ತರೆ ಸ್ಥಳೀಯ ಜನರ ಕೋಪಕ್ಕೆ ಚಾಲಕ ಬಲಿಯಾಗಬೇಕಾಗುತ್ತದೆ.”
ಮತ್ತೊಂದೆಡೆ, ಜ್ಯೋತಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಲು ಮಹಿಳೆಯರಿಗೆ ಸಹಾಯ ಮಾಡುತ್ತಾರೆ ಮತ್ತು ಈ ಸೇವೆಗಾಗಿ ಅವರು 5,000 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ 30 ರೂಪಾಯಿಗೆ ಮಾರಾಟವಾಗುವ ಸಲೈನ್ ಬಾಟಲಿಗೆ 700-800 ರೂ. ಡ್ರಿಪ್ ಇಲ್ಲದೆ ಮಲೇರಿಯಾ ಚಿಕಿತ್ಸೆಗೆ ಕನಿಷ್ಠ 250 ರೂಪಾಯಿ ಮತ್ತು ನ್ಯುಮೋನಿಯಾ ಔಷಧಿಗಳಿಗೆ 500-600 ವೆಚ್ಚವಾಗುತ್ತದೆ. ಇದಲ್ಲದೆ, ಕಾಮಾಲೆ ಅಥವಾ ಟೈಫಾಯಿಡ್ ಚಿಕಿತ್ಸೆಗೆ 2,000-3,000 ವರೆಗೆ ವೆಚ್ಚವಾಗುತ್ತದೆ. ಒಂದು ತಿಂಗಳಲ್ಲಿ ಜ್ಯೋತಿ ಅವರ ಕೈಗೆ ಸುಮಾರು 20,000 ರೂಪಾಯಿಗಳು ಬರುತ್ತವೆ, ಅದರಲ್ಲಿ ಅರ್ಧದಷ್ಟು ಹಣ ಔಷಧಿ ಖರೀದಿಗೆ ಖರ್ಚಾಗುತ್ತದೆ.
ಪ್ರಚೀತಿ (ಇಂಡಿಯಾ) ಟ್ರಸ್ಟ್ ಪ್ರಕಟಿಸಿದ 2005ರ ವರದಿಯು ಗ್ರಾಮೀಣ ಭಾರತದಲ್ಲಿ ಖಾಸಗಿ ವೈದ್ಯರು ಮತ್ತು ಔಷಧೀಯ ಕಂಪನಿಗಳ ನಡುವಿನ ಕಳವಳಕಾರಿ ಸಂಬಂಧದ ಇರುವಿಕೆಯನ್ನು ಗಮನಿಸಿದೆ. ವರದಿಯ ಪ್ರಕಾರ, “ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಆರೋಗ್ಯ ಸೇವಾ ಘಟಕಗಳಲ್ಲಿ ಔಷಧಿಗಳ ತೀವ್ರ ಕೊರತೆ ಉಂಟಾದಾಗ, ಈ ದೊಡ್ಡ ಔಷಧಿ ಮಾರುಕಟ್ಟೆಯಲ್ಲಿನ ವೈದ್ಯರು ಅನೈತಿಕ ಅಭ್ಯಾಸಗಳನ್ನು ಬಳಸುತ್ತಾರೆ ಮತ್ತು ಉತ್ತೇಜಿಸುತ್ತಾರೆ. ಮತ್ತು ಯಾವುದೇ ಒಂದು ಕಾನೂನು ಅಥವಾ ನಿಯಂತ್ರಣ ಸಂಸ್ಥೆಯ ಅನುಪಸ್ಥಿತಿಯ ಕಾರಣದಿಂದಾಗಿ ಜನಸಾಮಾನ್ಯರ ಹಣ ದರೋಡೆಯಾಗುತ್ತಿದೆ.”
2020ರಲ್ಲಿ, ಜಾರ್ಖಂಡ್ ಮುಖ್ಯಮಂತ್ರಿಯಿಂದ ನಿಯೋಜಿತಗೊಂಡ ನಿಯೋಗದಿಂದ 2011ರ ಜನಗಣತಿಯ ಆಧಾರದ ಮೇಲೆ ರಾಜ್ಯದ ಆರೋಗ್ಯ ವ್ಯವಸ್ಥೆಯ ಪರಿಶೀಲನೆ ನಡೆಸಲಾಯಿತು. ಆರೋಗ್ಯ ಸೌಲಭ್ಯದ ಪ್ರವೇಶ ಮತ್ತು ವಿತರಣೆಯ ವಿಷಯದಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆಯ ನೀರಸ ಚಿತ್ರವನ್ನು ವರದಿಯು ಪ್ರಸ್ತುತಪಡಿಸಿದೆ. ಇದು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ ಹೋಲಿಸಿದರೆ 3,130 ಆರೋಗ್ಯ ಉಪ-ಕೇಂದ್ರಗಳು, 769 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 87 ಸಮುದಾಯ ಆರೋಗ್ಯ ಕೇಂದ್ರಗಳ ಕೊರತೆಯನ್ನು ಎತ್ತಿ ತೋರಿಸಿದೆ. ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 6 ವೈದ್ಯರು, 27 ಹಾಸಿಗೆಗಳು, 1 ಲ್ಯಾಬ್ ಟೆಕ್ನಿಷಿಯನ್ ಮತ್ತು ಸುಮಾರು 3 ದಾದಿಯರು ಇದ್ದಾರೆ. ಅಲ್ಲದೆ ಶೇ.85ರಷ್ಟು ತಜ್ಞ ವೈದ್ಯರ ಹುದ್ದೆಗಳು ಖಾಲಿಯಿವೆ.
ಕಳೆದೊಂದು ದಶಕದಲ್ಲಿ ಈ ಪರಿಸ್ಥಿತಿ ಬದಲಾದಂತೆ ಕಾಣುತ್ತಿಲ್ಲ . ಜಾರ್ಖಂಡ್ ಆರ್ಥಿಕ ಸಮೀಕ್ಷೆ 2013-14ರಲ್ಲಿ , ಪಿಎಚ್‌ಸಿಗಳ ಸಂಖ್ಯೆಯಲ್ಲಿ 65 ಶೇಕಡಾ, ಉಪ ಕೇಂದ್ರಗಳ ಸಂಖ್ಯೆಯಲ್ಲಿ 35 ಶೇಕಡಾ ಮತ್ತು ಸಿಎಚ್‌ಸಿಗಳ ಸಂಖ್ಯೆಯಲ್ಲಿ ಶೇಕಡಾ 22ರಷ್ಟು ಇಳಿಕೆ ದಾಖಲಾಗಿದೆ. ತಜ್ಞ ವೈದ್ಯರ ಕೊರತೆ ಅತ್ಯಂತ ಆತಂಕಕಾರಿ ವಿಚಾರ ಎಂದು ವರದಿಯಲ್ಲಿ ಹೇಳಲಾಗಿದೆ. ಸಿಎಚ್‌ಸಿಗಳಲ್ಲಿ ಶುಶ್ರೂಷಕಿಯರು, ಸ್ತ್ರೀರೋಗತಜ್ಞರು ಮತ್ತು ಮಕ್ಕಳ ವೈದ್ಯರ ಕೊರತೆಯು 80ರಿಂದ 90 ಪ್ರತಿಶತದವರೆಗೆ ಇತ್ತು.
ಇಂದಿಗೂ ರಾಜ್ಯದ ಕಾಲು ಭಾಗದಷ್ಟು ಮಹಿಳೆಯರಿಗೆ ಆಸ್ಪತ್ರೆಗೆ ಹೋಗಿ ಮಗುವನ್ನು ಹೆರುವ ಸೌಲಭ್ಯವಿಲ್ಲ. ಮತ್ತು ಅದೇ ಸಮಯದಲ್ಲಿ, 5,258 ವೈದ್ಯರ ಕೊರತೆಯಿದೆ. 3.78 ಕೋಟಿ ಜನಸಂಖ್ಯೆಯ ಈ ರಾಜ್ಯದಲ್ಲಿ ಒಟ್ಟು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೇವಲ 2,306 ವೈದ್ಯರಿದ್ದಾರೆ.
ಇಂತಹ ಅಸಮಾನ ಆರೋಗ್ಯ ವ್ಯವಸ್ಥೆಯ ಹಿನ್ನೆಲೆಯಲ್ಲಿ ಆರ್‌ಎಂಪಿ ಮುಖ್ಯವಾಗುತ್ತಾರೆ. ಜ್ಯೋತಿಯವರು ಮನೆ ಹೆರಿಗೆಗಳನ್ನು ನಡೆಸುತ್ತಾರೆ ಮತ್ತು ಹೆರಿಗೆಯ ನಂತರದ ಆರೈಕೆಯನ್ನು ನೀಡುತ್ತಾರೆ ಮತ್ತು ಗರ್ಭಿಣಿಯರಿಗೆ ಕಬ್ಬಿಣಾಂಶ ಮತ್ತು ವಿಟಮಿನ್ ಪೂರಕಗಳನ್ನು ಒದಗಿಸುತ್ತಾರೆ. ಅವರು ಸೋಂಕುಗಳು ಮತ್ತು ಸಣ್ಣ ಗಾಯಗಳ ಪ್ರಕರಣಗಳನ್ನು ಸಹ ನಿಭಾಯಿಸುತ್ತಾರೆ ಮತ್ತು ತಕ್ಷಣದ ವೈದ್ಯಕೀಯ ಸಹಾಯವನ್ನು ನೀಡುತ್ತಾರೆ. ಸಂಕೀರ್ಣ ಸಂದರ್ಭಗಳಲ್ಲಿ, ಅವರು ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡುತ್ತಾರೆ ಮತ್ತು ವಾಹನದ ವ್ಯವಸ್ಥೆ ಮಾಡುತ್ತಾರೆ ಅಥವಾ ಸರ್ಕಾರಿ ದಾದಿಯರನ್ನು ಸಂಪರ್ಕಿಸುತ್ತಾರೆ.
*****
'ಜಾರ್ಖಂಡ್ ರೂರಲ್ ಮೆಡಿಕಲ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್'ನ ಸದಸ್ಯ ವೀರೇಂದ್ರ ಸಿಂಗ್, ಕೇವಲ ಪಶ್ಚಿಮ ಸಿಂಗ್‌ಭೂಮ್ ಒಂದರಲ್ಲೇ ಅಂದಾಜು 10,000 ಆರ್‌ಎಮ್‌ಪಿಗಳಿದ್ದಾರೆಂದು ಹೇಳುತ್ತಾರೆ. ಇವರಲ್ಲಿ 700 ಮಂದಿ ಮಹಿಳೆಯರು. ಆನಂದಪುರದಂತಹ ಹೊಸ ಪಿಎಚ್‌ಸಿಗಳಿಗೆ ವೈದ್ಯರೇ ಇಲ್ಲವೆನ್ನುತ್ತಾರವರು. ಅವರು ಕೇಳುತ್ತಾರೆ, "ಆ ಇಡೀ ಆಸ್ಪತ್ರೆಯನ್ನು ನರ್ಸ್‌ಗಳು ನಡೆಸುತ್ತಾರೆ, ಇತ್ತ ಜ್ಯೋತಿಯಂತಹ ಆರ್‌ಎಂಪಿಗಳು ತಮ್ಮ ಹಳ್ಳಿಗಳನ್ನು ನೋಡಿಕೊಳ್ಳುತ್ತಾರೆ, ಆದರೆ ಅವರು ಸರ್ಕಾರದಿಂದ ಯಾವುದೇ ಬೆಂಬಲವನ್ನು ಪಡೆಯುವುದಿಲ್ಲ. ಆದರೆ ಅವರು ಆ ಪ್ರದೇಶದ ಜನರನ್ನು ಅರ್ಥಮಾಡಿಕೊಳ್ಳುತ್ತಾರೆ. ಏಕೆಂದರೆ ಅವರು ಅವರೊಂದಿಗೆ ವಾಸಿಸುತ್ತಾರೆ. ಅವರು ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಿರುವಾಗ ಅವರ ಕೆಲಸವನ್ನು ನೀವು ಹೇಗೆ ನಿರ್ಲಕ್ಷಿಸಲು ಸಾಧ್ಯ?"
ಹರ್ತಾ ಗ್ರಾಮದ 30 ವರ್ಷದ ಸುಸ್ರಿ ಟೊಪ್ಪೊ ಅವರು 2013ರಲ್ಲಿ ತನ್ನ ಮೊದಲ ಮಗುವಿನ ಗರ್ಭಿಣಿಯಾಗಿದ್ದಾಗ ತನ್ನ ಮಗು ತನ್ನ ಹೊಟ್ಟೆಯಲ್ಲಿ ಚಲಿಸುವುದನ್ನು ನಿಲ್ಲಿಸಿತು ಎಂದು ಹೇಳುತ್ತಾರೆ. “ನನಗೆ ಭಯಂಕರವಾದ ಹೊಟ್ಟೆನೋವು ಮತ್ತು ರಕ್ತಸ್ರಾವವಾಗಿತ್ತು, ನಾವು ತಕ್ಷಣ ಜ್ಯೋತಿಗೆ ಕರೆ ಮಾಡಿದೆವು, ಅವಳು ರಾತ್ರಿಯಿಡೀ ಮತ್ತು ಮರುದಿನ ನಮ್ಮೊಂದಿಗೆ ಇದ್ದಳು, ಆ ಎರಡು ದಿನಗಳಲ್ಲಿ, ಅವಳು 6 ಬಾಟಲ್ ಸಲೈನ್ ಹಾಕಿದಳು, ದಿನಕ್ಕೆ ಮೂರು, ಕೊನೆಗೆ ಮರುದಿನ ನನಗೆ ಸಹಜ ಹೆರಿಗೆಯಾಯಿತು" ಮಗು ಆರೋಗ್ಯವಾಗಿದ್ದು, 3.5 ಕೆಜಿ ತೂಕವಿತ್ತು. ಜ್ಯೋತಿಗೆ 5,500 ರೂ. ಕೊಡಬೇಕಾಗಿತ್ತು, ಆದರೆ ಕುಟುಂಬದ ಬಳಿ ಕೇವಲ 3,000 ರೂ. ಇತ್ತು. ಉಳಿದ ಹಣವನ್ನು ನಂತರ ತೆಗೆದುಕೊಳ್ಳಲು ಜ್ಯೋತಿ ಒಪ್ಪಿಕೊಂಡರು ಎಂದು ಸುಸಾರಿ ಹೇಳುತ್ತಾರೆ.
ಹರ್ತಾದವರಾದ, ಎಲಿಸ್ಬಾ ಟೊಪ್ಪೊ, (30), ಸುಮಾರು ಮೂರು ವರ್ಷಗಳ ಹಿಂದಿನ ತನ್ನ ಅನುಭವವನ್ನು ವಿವರಿಸುತ್ತಾರೆ. "ಆ ಸಮಯದಲ್ಲಿ ನಾನು ನನ್ನ ಅವಳಿ ಮಕ್ಕಳ ಗರ್ಭಿಣಿಯಾಗಿದ್ದೆ. ನನ್ನ ಪತಿ ಎಂದಿನಂತೆ ಕುಡಿದಿದ್ದರು. ನಾನು ಆಸ್ಪತ್ರೆಗೆ ಹೋಗಲು ಬಯಸಲಿಲ್ಲ, ಏಕೆಂದರೆ ರಸ್ತೆಗಳು ಕೆಟ್ಟದಾಗಿರುವುದು ನನಗೆ ತಿಳಿದಿತ್ತು." ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮುಖ್ಯರಸ್ತೆಗೆ ಬರಲು ಕೂಡ ಗದ್ದೆ ಮತ್ತು ಚರಂಡಿಗಳ ಮೂಲಕ ಹಾದು ಹೋಗಬೇಕು ಎಂದು ಅವರು ಹೇಳುತ್ತಾರೆ.
ಅಂದು ರಾತ್ರಿ ಮಲವಿಸರ್ಜನೆಗೆಂದು ಜಮೀನಿಗೆ ಹೋಗಿದ್ದಾಗ ಎಲಿಸ್ಬಾಗೆ ನೋವು ಶುರುವಾಯಿತು. ಅರ್ಧ ಗಂಟೆಯ ನಂತರ ಮನೆಗೆ ಮರಳಿದ ಆಕೆಗೆ ಅತ್ತೆ ಮಸಾಜ್ ಮಾಡಿದರೂ ನೋವು ಮುಂದುವರಿದಿತ್ತು. ಅವರು ಹೇಳುತ್ತಾರೆ, “ಆಗ ನಾವು ಜ್ಯೋತಿಗೆ ಕರೆ ಕಳಿಸಿದೆವು, ಅವಳು ಬಂದು ಔಷಧಿಗಳನ್ನು ಕೊಟ್ಟಳು ಮತ್ತು ಅವಳಿಂದಾಗಿ, ನನ್ನ ಅವಳಿ ಮಕ್ಕಳು ಮನೆಯಲ್ಲಿಯೇ ಜನಿಸಿದರು, ಸಹಜ ಹೆರಿಗೆಯಾಯಿತು, ಅವಳು ನಮಗೆ ಸಹಾಯ ಮಾಡಲೆಂದು ಮಧ್ಯರಾತ್ರಿಯಲ್ಲಿಯೂ ಇಷ್ಟು ದೂರ ಬಂದಿದ್ದಳು."
ಆರ್‌ಎಮ್‌ಪಿಗಳು ವಿವೇಚನಾರಹಿತ ಐವಿ ಬಳಕೆಗೆ ಹೆಸರುವಾಸಿಯಾಗಿದ್ದಾರೆ. ಪ್ರತೀಚಿ ವರದಿಯಲ್ಲಿ ಜಾರ್ಖಂಡ್ ಮತ್ತು ಬಿಹಾರದಲ್ಲಿ ಆರ್.ಎಂ.ಪಿಗಳಿಂದ ಪ್ರತಿಯೊಂದು ರೀತಿಯ ಕಾಯಿಲೆಗೂ ಪರಿಹಾರವಾಗಿ ಐವಿ (ಸಲೈನ್) ಬಳಸಲಾಗುತ್ತದೆ. ಇದು ಅನಗತ್ಯ ಮಾತ್ರವಲ್ಲ, ದುಬಾರಿಯೂ ಆಗಿದೆ. ಕೆಲವು ಸಂದರ್ಭಗಳಲ್ಲಿ, ಅದರ ಬಳಕೆಯು ಪ್ರತಿಕೂಲ ಪರಿಣಾಮವನ್ನೂ ಬೀರುತ್ತದೆ. "ಸಲೈನ್ ಇಲ್ಲದೆ ಯಾವುದೇ ಚಿಕಿತ್ಸೆಯನ್ನು ಮಾಡಲಾಗುವುದಿಲ್ಲ ಎಂದು ಸಂದರ್ಶನದಲ್ಲಿ ಭಾಗವಹಿಸಿದ 'ವೈದ್ಯರು' ಬಲವಾಗಿ ಪ್ರತಿಪಾದಿಸಿದ್ದಾರೆ, ಏಕೆಂದರೆ ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಪೋಷಣೆ ಮತ್ತು ತ್ವರಿತ ಪರಿಹಾರವನ್ನು ನೀಡುತ್ತದೆ," ಎಂದು ವರದಿ ಹೇಳುತ್ತದೆ.
ಈ ಕೆಲಸ ಅಪಾಯಕಾರಿಯಾದುದು, ಆದರೆ ಜ್ಯೋತಿಯವರಿಗೆ ಅದೃಷ್ಟ ಒಲಿದಿದೆ. ಕಳೆದ 15 ವರ್ಷಗಳಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳುತ್ತಾರೆ. "ನಾನು ಯಾವುದೇ ರೋಗಿಯ ವಿಷಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆನ್ನಿಸಿದರೆ ಕೂಡಲೇ ಅವರನ್ನು ಮನೋಹರಪುರ ಬ್ಲಾಕ್ ಆಸ್ಪತ್ರೆಗೆ ಕಳುಹಿಸುತ್ತೇನೆ. ಅಥವಾ ನಾನು ಮಮತಾ ವಾಹನಕ್ಕೆ ಕರೆ ಮಾಡಲು ಅಥವಾ ಸರ್ಕಾರಿ ದಾದಿಯರನ್ನು ಸಂಪರ್ಕಿಸಲು ಸಹಾಯ ಮಾಡುತ್ತೇನೆ."
ಜ್ಯೋತಿ ತನ್ನ ದೃಢಸಂಕಲ್ಪದಿಂದಲೇ ಎಲ್ಲವನ್ನೂ ಕಲಿತಿದ್ದಾರೆ. ಸೆರ್ಗೆಂಡಾದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾಗ ಆಕೆಯ ತಂದೆ ತೀರಿಕೊಂಡರು. ಇದರಿಂದ ಜ್ಯೋತಿಯವರ ವ್ಯಾಸಂಗಕ್ಕೆ ದೊಡ್ಡ ಅಡ್ಡಿ ಉಂಟಾಗಿತ್ತು. ಜ್ಯೋತಿ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ, "ಆ ದಿನಗಳಲ್ಲಿ, ನಗರದಿಂದ ಬಂದಿದ್ದ ಮಹಿಳೆಯೊಬ್ಬರು ಕೆಲಸ ಕೊಡಿಸುವುದಾಗಿ ಹೇಳಿ ನನ್ನನ್ನು ಪಾಟ್ನಾಗೆ ಕರೆದೊಯ್ದು ವೈದ್ಯ ದಂಪತಿಗಳ ಬಳಿ ಬಿಟ್ಟರು, ಅವರು ಅವರು ನನ್ನಿಂದ ಮನೆಗೆಲಸ ಮಾಡಿಸತೊಡಗಿದರು. ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಹಳ್ಳಿಗೆ ಓಡಿಬಂದೆ."
ನಂತರ, ಜ್ಯೋತಿ ಚಾರ್ಬಂಡಿಯಾ ಗ್ರಾಮದ ಕಾನ್ವೆಂಟ್ ಶಾಲೆಯಲ್ಲಿ ತನ್ನ ಓದನ್ನು ಪುನರಾರಂಭಿಸಿದರು. ಅವರು ಹೇಳುತ್ತಾರೆ, "ಅಲ್ಲಿನ ಸನ್ಯಾಸಿನಿಯು ದವಾಖಾನೆಯಲ್ಲಿ ಕೆಲಸ ಮಾಡುವುದನ್ನು ನೋಡಿ, ನಾನು ಮೊದಲ ಬಾರಿಗೆ ನರ್ಸಿಂಗ್ ಕೆಲಸದ ತೃಪ್ತಿ ಮತ್ತು ಸಂತೋಷವನ್ನು ಅರ್ಥಮಾಡಿಕೊಂಡೆ, ನಂತರ ನನಗೆ ಓದಲು ಸಾಧ್ಯವಾಗಲಿಲ್ಲ, ನನ್ನ ಸಹೋದರ ಹೇಗೋ 10,000 ರೂ ಸೇರಿಸಿಕೊಟ್ಟರು. ನಾನು ಅದನ್ನು ಬಳಸಿ ಖಾಸಗಿ ಸಂಸ್ಥೆಗೆ ಸೇರಿಕೊಂಡೆ. ಅಲೋಪತಿ ಮೆಡಿಸಿನ್ಸ್‌ನಲ್ಲಿ ಮೆಡಿಕಲ್ ಪ್ರಾಕ್ಟೀಷನರ್ ಕೋರ್ಸ್ ಮಾಡಿದೆ. ಜ್ಯೋತಿ ನಂತರ ಕಿರಿಬೂರು, ಚೈಬಸ, ಮತ್ತು ಗುಮ್ಲಾದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಹಲವಾರು ವೈದ್ಯರೊಂದಿಗೆ ಎರಡು ಮೂರು ತಿಂಗಳು ಸಹಾಯಕರಾಗಿ ಕೆಲಸ ಮಾಡಿದರು. ಇದಾದ ನಂತರ ಅವರು 'ಜಾರ್ಖಂಡ್ ರೂರಲ್ ಮೆಡಿಕಲ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್'ನಿಂದ ಪ್ರಮಾಣಪತ್ರ ಪಡೆದರು. ನಂತರ ಅವರು ತನ್ನ ಸ್ವಂತ ಪ್ರಾಕ್ಟೀಸ್ ಪ್ರಾರಂಭಿಸಲು ತನ್ನ ಹಳ್ಳಿಗೆ ಮರಳಿದರು.
"ನೀವು ಹೊರಗಿನವರಾಗಿದ್ದರೆ, ನೀವು ಪ್ರದೇಶದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ" ಎಂದು ಹರ್ತಾ ಪಂಚಾಯತ್‌ನಲ್ಲಿ ಕೆಲಸ ಮಾಡುವ ಸರ್ಕಾರಿ ನರ್ಸ್ ಜರಂತಿ ಹೆಬ್ರಾಮ್ ಹೇಳುತ್ತಾರೆ. ಜ್ಯೋತಿ ಪ್ರಭಾ ಗ್ರಾಮದಲ್ಲೇ ಪ್ರಾಕ್ಟೀಸ್ ಮಾಡುತ್ತಾರೆ, ಹೀಗಾಗಿ ಜನರಿಗೆ ಸಹಾಯವಾಗುತ್ತಿದೆ.
ಜ್ಯೋತಿ ಹೇಳುತ್ತಾರೆ, “ಸರ್ಕಾರಿ ನರ್ಸ್‌ಗಳು ತಿಂಗಳಿಗೊಮ್ಮೆ ಗ್ರಾಮಕ್ಕೆ ಬರುತ್ತಾರೆ, ಆದರೆ ಗ್ರಾಮದ ಜನರು ಅವರ ಬಳಿಗೆ ಹೋಗುವುದಿಲ್ಲ, ಏಕೆಂದರೆ ಅವರಿಗೆ ಅವರ ಮೇಲೆ ನಂಬಿಕೆಯಿಲ್ಲ, ಇಲ್ಲಿ ಜನರು ಶಿಕ್ಷಿತರಲ್ಲ, ಆದ್ದರಿಂದ ಅವರಿಗೆ ಔಷಧಿಗಿಂತ ನಂಬಿಕೆ ಮತ್ತು ನಡವಳಿಕೆ ಬಹಳ ಮುಖ್ಯವಾದುದು."
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು , ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ . ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ .
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ- ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳಿಸಿ
ಅನುವಾದ: ಶಂಕರ ಎನ್ ಕೆಂಚನೂರು