"ಟಿಕ್ರಿ ಗಡಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕನಿಷ್ಠ 50 ಕಿ.ಮೀ. ದೂರದವರೆಗೆ ಟ್ರಾಕ್ಟರುಗಳ ಕ್ಯೂ ಇದೆ" ಎಂದು ಕಮಲ್ ಬ್ರಾರ್ ಹೇಳುತ್ತಾರೆ. ಅವರು ಮತ್ತು ಹರಿಯಾಣದ ಫತೇಹಾಬಾದ್ ಜಿಲ್ಲೆಯ ಇತರ 20 ರೈತರು ಜನವರಿ 24 ರಂದು ಎರಡು ಟ್ರಾಕ್ಟರುಗಳು ಮತ್ತು ಎರಡು ಟ್ರಾಲಿಯೊಂದಿಗೆ ಟಿಕ್ರಿ ಗಡಿಯನ್ನು ತಲುಪಿದರು.
2020ರ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26ರಿಂದ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹರಿಯಾಣ-ದೆಹಲಿ ಗಡಿಯಲ್ಲಿರುವ ಟಿಕ್ರಿ ಗಡಿ ಅವುಗಳಲ್ಲಿ ಒಂದು.
ಈ ಆಂದೋಲನದ ಭಾಗವಾಗಿ ಜನವರಿ 26ರಂದು ರಾಜಧಾನಿಯಲ್ಲಿ ಅಭೂತಪೂರ್ವ ಟ್ರ್ಯಾಕ್ಟರ್ ರ‍್ಯಾಲಿಯನ್ನು ನಡೆಸಲು ರೈತರು ನಿರ್ಧರಿಸಿದ್ದಾರೆ.
ಈ ರ‍್ಯಾಲಿಯಲ್ಲಿ ಭಾಗವಹಿಸಲು ಅಲ್ಲಿ ಸೇರಿರುವವರಲ್ಲಿ ನಿರ್ಮಲ್ ಸಿಂಗ್ ಕೂಡ ಒಬ್ಬರು. ಪಂಜಾಬ್‌ನ ಫಾಝಿಲ್ಕಾ ಜಿಲ್ಲೆಯ ಅಬೋಹರ್ ಬ್ಲಾಕ್‌ನಲ್ಲಿರುವ ತನ್ನ ಊರಾದ ವಹಾಬ್ವಾಲಾದಿಂದ ನಾಲ್ಕು ಟ್ರಾಕ್ಟರುಗಳೊಂದಿಗೆ ಬಂದ ನಿರ್ಮಲ್ ಸಿಂಗ್‌ಗೆ ಟಿಕ್ರಿಯಲ್ಲಿ ಪಾರ್ಕಿಂಗ್ ಸ್ಥಳಾವಕಾಶ ದೊರೆಯಲು ಹಲವಾರು ಗಂಟೆಗಳ ಸಮಯ ಬೇಕಾಯಿತು. ಕಿಸಾನ್ ಮಜ್ದೂರ್ ಏಕ್ತಾ ಯೂನಿಯನ್ ಬ್ಯಾನರ್ ಅಡಿಯಲ್ಲಿ ವಹಾಬ್ವಾಲಾದ 25 ಜನರೊಂದಿಗೆ ಅವರು ಇಲ್ಲಿಗೆ ಬಂದಿದ್ದಾರೆ. "ಇನ್ನೂ ಅನೇಕ ಜನರು ಬರುತ್ತಿದ್ದಾರೆ. ಟ್ರಾಕ್ಟರುಗಳ ಸಂಖ್ಯೆಯು ಅನೇಕ ಪಟ್ಟು ಹೆಚ್ಚಾಗಲಿದೆ, ನೀವು ನೋಡಲಿದ್ದೀರಿ,” ಎಂದು ಅವರು ಹೇಳಿದರು.



ಎಡ: ಹರಿಯಾಣದ ಸುರೇವಾಲಾ ಗ್ರಾಮದ ಮಹಿಳೆಯರು ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ಪೆರೇಡ್‌ಗೆ ತಯಾರಾಗುತ್ತಿರುವುದು. ಮಧ್ಯ: ಮುಖ್ಯ ವೇದಿಕೆಯಲ್ಲಿ ಭಾಷಣಗಳನ್ನು ಕೇಳುತ್ತಿರುವುದು. ಬಲ: ರಾಜ್ ಕೌರ್ ಬೀಬಿ (ಟಿಕ್ರಿ ಗಡಿಯಲ್ಲಿ ತನ್ನ ಸೊಸೆಯೊಂದಿಗೆ), 'ಸರ್ಕಾರ ಜನವರಿ 26ರಂದು ಮಹಿಳೆಯರ ಬಲವನ್ನು ನೋಡಲಿದೆ '
"ಮೆರವಣಿಗೆಯ ದಿನದಂದು, ಪ್ರತಿ ಟ್ರ್ಯಾಕ್ಟರ್‌ನಲ್ಲಿ 10 ಜನರು ಇರುತ್ತಾರೆ" ಎಂದು ಕಮಲ್ ಬ್ರಾರ್ ಹೇಳುತ್ತಾರೆ. "ಪ್ರತಿಭಟನೆ ಶಾಂತಿಯುತವಾಗಿರುತ್ತದೆ ಮತ್ತು ಪೊಲೀಸರು ನೀಡಿದ ಮಾರ್ಗವನ್ನು ನಾವು ಅನುಸರಿಸುತ್ತೇವೆ. ಮೆರವಣಿಗೆಯಲ್ಲಿ ಅಪಘಾತ ಅಥವಾ ಯಾವುದೇ ರೀತಿಯ ಅಶಿಸ್ತು ಕಂಡುಬಂದ ಸಂದರ್ಭದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ರೈತ ಮುಖಂಡರಿಗೆ ಸ್ವಯಂ ಸೇವಕ ಕಾರ್ಯಕರ್ತರಿಂದ ತರಬೇತಿ ನೀಡಲಾಗುತ್ತಿದೆ.”
ಟ್ರಾಕ್ಟರ್ ಪೆರೇಡ್ ಹೊರಡುವ ಮೊದಲು ಲಂಗರ್‌ಗಳು (ಸಮುದಾಯ ಅಡುಗೆಮನೆಗಳು) ರೈತರಿಗೆ ಚಹಾ ಮತ್ತು ಉಪಹಾರವನ್ನು ನೀಡಲಿದ್ದು, ಮಾರ್ಗದಲ್ಲಿ ಯಾವುದೇ ಆಹಾರವನ್ನು ನೀಡಲಾಗುವುದಿಲ್ಲ
ರ‍್ಯಾಲಿಯಲ್ಲಿ ರೈತ ಮಹಿಳೆಯರು ಮುಂಚೂಣಿಯಲ್ಲಿರುತ್ತಾರೆ ಮತ್ತು ಅವರು ಅದಕ್ಕಾಗಿ ಅಭ್ಯಾವನ್ನೂ ಮಾಡುತ್ತಿದ್ದು - ಜನವರಿ 26ರ ಮೆರವಣಿಗೆಗೆ ಮುಂಚಿತವಾಗಿ, ಮಹಿಳೆಯರ ಕೆಲವು ಗುಂಪುಗಳು ಟಿಕ್ರಿ ರಸ್ತೆಯಲ್ಲಿ ಟ್ರಾಕ್ಟರುಗಳನ್ನು ಅಭ್ಯಾಸ ಮಾಡುತ್ತಿರುವುದು ಕಂಡುಬಂತು.
ರ‍್ಯಾಲಿಯನ್ನು ಮುನ್ನಡೆಸಲಿರುವ ಮಹಿಳೆಯರಲ್ಲಿ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಜಖಾಲ್ ಬ್ಲಾಕ್‌ನ ಹಳ್ಳಿಯ ರೈತ ಮಹಿಳೆ ರಾಜ್ ಕೌರ್ ಬೀಬಿ (65) ಕೂಡ ಒಬ್ಬರು. ಅವರು "ಜನವರಿ 26ರಂದು ಸರ್ಕಾರ ಮಹಿಳೆಯರ ಶಕ್ತಿಯನ್ನು ನೋಡಲಿದೆ" ಎಂದು ಹೇಳಿದರು.
ಜನವರಿ 24ರ ರಾತ್ರಿ, ಭಾರತೀಯ ರೈತ ಸಂಘ (ಏಕ್ತಾ ಉಗ್ರಾಹನ್) ನೇತೃತ್ವದಲ್ಲಿ 20,000 ಟ್ರಾಕ್ಟರುಗಳ ಗುಂಪು ಟಿಕ್ರಿ ತಲುಪಿತು. ಈ ಟ್ರಾಕ್ಟರುಗಳು ಬಟಿಂಡಾ ಜಿಲ್ಲೆಯ ದಬ್ವಾಲಿ ಮತ್ತು ಸಂಗ್ರೂರ್ ಜಿಲ್ಲೆಯ ಖಾನೌರಿ ಗಡಿಯಿಂದ ಇಲ್ಲಿಗೆ ಬಂದಿವೆ.


ಎಡ: ಬಟಿಂಡಾದಿಂದ ಟ್ರಕ್‌ಗಳ ಗುಂಪು ಟಿಕ್ರಿ ಗಡಿಯನ್ನು ತಲುಪಿತು. ಬಲ: ದಲಾಲ್ ಖಾಪ್‌ನ ಪುರುಷ ಸದಸ್ಯರು ಟ್ರ್ಯಾಕ್ಟರ್ ಮೆರವಣಿಗೆಗೆ ಸಿದ್ಧರಾಗಿದ್ದಾರೆ
ತಮ್ಮ ಟ್ರಾಕ್ಟರುಗಳೊಂದಿಗೆ ಕಾಯುತ್ತಿರುವವರಲ್ಲೊಬ್ಬರಾದ 60 ವರ್ಷದ ಜಸ್ಕರನ್ ಸಿಂಗ್ ಅವರು ನವೆಂಬರ್ 27ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಶೇರ್ ಖಾನ್ವಾಲಾ ಗ್ರಾಮದಿಂದ ಐದು ಟ್ರಾಕ್ಟರುಗಳಲ್ಲಿ ರೈತರ ಗುಂಪಿನೊಂದಿಗೆ ನಗರಕ್ಕೆ ಬಂದರು. "ಅಂದಿನಿಂದ ನಾವು ಕೆಟ್ಟ ಕೆಲಸ, ಕಳ್ಳತನ ಅಥವಾ ಅಶಿಸ್ತಿನ ಒಂದು ದೂರು ಇಲ್ಲದೆ ಇಲ್ಲಿ ಕುಳಿತಿದ್ದೇವೆ" ಎಂದು ಅವರು ಹೇಳಿದರು.
ಅಂದಿನಿಂದ, ಅವರು ಟಿಕ್ರಿಯ ಆಂದೋಲನ ಸ್ಥಳದಿಂದ ಪಂಜಾಬ್‌ನ ಮಾನ್ಸಾ ಜಿಲ್ಲೆಯ ತಮ್ಮ ಊರಿಗೆ ಓಡಾಡಿಕೊಂಡಿದ್ದಾರೆ. ಜನವರಿ 23ರಂದು ಅವರು ಇತರ 25 ರೈತರೊಂದಿಗೆ 10 ಟ್ರಾಕ್ಟರುಗಳಲ್ಲಿ ಇಲ್ಲಿಗೆ ಬಂದರು. "ಜನವರಿ 26 ಒಂದು ಐತಿಹಾಸಿಕ ದಿನವಾಗಿದ್ದು, ಈ ದೇಶಕ್ಕೆ ಆಹಾರ ನೀಡುವವರು ದೊಡ್ಡ ಮೆರವಣಿಗೆಯನ್ನು ನಡೆಸಲಿದ್ದಾರೆ. ಈಗ ಇದು 'ಜನರ ಚಳುವಳಿಯಾಗಿ ಮಾರ್ಪಟ್ಟಿದೆ' ಎಂದು ಅವರು ಹೇಳುತ್ತಾರೆ.
ಟಿಕ್ರಿಯಲ್ಲಿ ಗಣರಾಜ್ಯೋತ್ಸವಕ್ಕಾಗಿ ಕಾಯುತ್ತಿರುವವರಲ್ಲಿ 40 ವರ್ಷದ ಕಲಾವಿದ ದೇವರಾಜನ್ ರಾಯ್ ಅವರೂ ಸೇರಿದ್ದಾರೆ, ಅವರು ಪಶ್ಚಿಮ ಬಂಗಾಳದ ಹಲ್ಡಿಯಾದಿಂದ ಮೂವರ ತಂಡದೊಂದಿಗೆ ರೈಲಿನಲ್ಲಿ ಕಳೆದ ವಾರ ಪ್ರತಿಭಟನಾ ಸ್ಥಳಕ್ಕೆ ಬಂದು ತಲುಪಿದರು. ದೇವರಾಜನ್, ತಮ್ಮ ಸಹ ಕಲಾವಿದ ಬಿಜು ಥಾಪರ್ ಅವರೊಂದಿಗೆ ಸರ್ ಛೋಟು ರಾಮ್ ಅವರಂತಹ ಅಪ್ರತಿಮ ಐತಿಹಾಸಿಕ ವ್ಯಕ್ತಿಗಳ ಕಟ್- ಔಟ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. “ನಾವು ರೈತರನ್ನು ಬೆಂಬಲಿಸಲು ಬಂದಿದ್ದೇವೆ. ನಮ್ಮ ಜೇಬಿನಿಂದ ಹಣವನ್ನು ಖರ್ಚು ಮಾಡಿ ನಾವು ಈ ಚಿತ್ರವನ್ನು ತಯಾರಿಸುತ್ತಿದ್ದೇವೆ. ಕಲೆ ಸಮಾಜಕ್ಕಾಗಿ ಧ್ವನಿ ಎತ್ತಬೇಕು ಎಂದು ನಾನು ನಂಬುತ್ತೇನೆ,” ಎಂದು ಅವರು ಹೇಳಿದರು. ಅವುಗಳಲ್ಲಿ ಒಂದು ಡಿಸೆಂಬರ್ 16ರಂದು ಕುಂಡಲಿ ಗಡಿಯಲ್ಲಿ ಗುಂಡು ಹಾರಿಸಿಕೊಂಡರು ಎನ್ನಲಾದ ಬಾಬಾ ರಾಮ್ ಸಿಂಗ್ ಅವರ ಕಟ್ ಔಟ್ ಕೂಡಾ ಸೇರಿದೆ.

ಮೇಲಿನ ಎಡ ಮತ್ತು ಮಧ್ಯ: ಗಣರಾಜ್ಯೋತ್ಸವದ ಮೆರವಣಿಗೆಗಾಗಿ ದೇವರಂಜನ್ ರಾಯ್ ಮತ್ತು ಬಿಜು ಥಾಪರ್ ಅವರು ಸರ್ ಛೋಟು ರಾಮ್‌ರಂತಹ ಐತಿಹಾಸಿಕ ನಾಯಕರ ಕಟೌಟ್‌ಗಳನ್ನು ಮಾಡುತ್ತಾರೆ. ಮೇಲಿನ ಬಲ: ಪಶ್ಚಿಮ ಬಂಗಾಳದ ವಿದ್ಯಾರ್ಥಿನಿ ಇಶಿತಾ, ಕಾನೂನುಗಳು ರೈತರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುವ ಬ್ಯಾನರ್‌ಗಳನ್ನು ಟ್ರಾಕ್ಟರ್‌ಗಳಿಗಾಗಿ ತಯಾರಿಸುತ್ತಿದ್ದಾರೆ. ಕೆಳಗಿನ ಬಲ: ಪೆರೇಡ್‌ಗಾಗಿ ಪೋಸ್ಟರ್
ಟಿಕ್ರಿಗೆ ಬಂದಿರುವ ಬೆಂಬಲಿಗರಲ್ಲಿ ಒಬ್ಬರಾದ ಪಶ್ಚಿಮ ಬಂಗಾಳದ ಹಲ್ಡಿಯಾದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಇಶಿತಾ, ಈ ಕಾನೂನುಗಳು ರೈತರು ಮತ್ತು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುವ ಬ್ಯಾನರ್‌ಗಳನ್ನು ಟ್ರಾಕ್ಟರ್‌ಗಳಿಗಾಗಿ ತಯಾರಿಸುತ್ತಿದ್ದಾರೆ
ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತರಲಾಯಿತು. ಕಾನೂನುಗಳು ಹೀಗಿವೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.
ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಜೊತೆಗೆ ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
"ಮೆರವಣಿಗೆಗೆ ಎಷ್ಟು ರೈತರು ಬರುತ್ತಾರೆ ಎಂಬುದು ಮುಖ್ಯವಲ್ಲ" ಎಂದು ಜಸ್ಪ್ರೀತ್ ಹೇಳುತ್ತಾರೆ. ಅವರು ಜನವರಿ 21ರಂದು ಲುಧಿಯಾನ ಜಿಲ್ಲೆಯ ಭೈನಾ ಸಾಹಿಬ್ ಎನ್ನುವ ಊರಿನಿಂದ ಟಿಕ್ರಿಗೆ ಬಂದರು. ಅವರು ತಮ್ಮ ಹಳ್ಳಿಯಿಂದ ಏಕಾಂಗಿಯಾಗಿ ಇಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರು "ಈ ಮೆರವಣಿಗೆಯನ್ನು ಯಶಸ್ವಿಗೊಳಿಸಲು ಪ್ರತಿ ಹಳ್ಳಿ ಮತ್ತು ಪಟ್ಟಣಗಳು ಕೊಡುಗೆ ನೀಡಬೇಕು ಎಂಬುದು ಮುಖ್ಯ ವಿಷಯ" ಎನ್ನುತ್ತಾರೆ.
ಅನುವಾದ - ಶಂಕರ ಎನ್. ಕೆಂಚನೂರು