ತನುಬಾಯಿಯ ಕೌಶಲದಲ್ಲಿ ತಿದ್ದುಪಡಿಗೆ ಅವಕಾಶವಿಲ್ಲ. ಅವರು ಶ್ರಮವಹಿಸಿ ಕೆಲಸ ಮಾಡಿದ ಉತ್ತಮ ಕೈ ಹೊಲಿಗೆಯಲ್ಲಿನ ಸಣ್ಣ ದೋಷವನ್ನು ಸರಿಪಡಿಸಲು ಒಂದೇ ಒಂದು ಮಾರ್ಗವಿದೆ - ಇಡೀ ಪ್ರಕ್ರಿಯೆಯನ್ನು ಮತ್ತೆ ಮಾಡುವುದು. ಅಂದರೆ ಸುಮಾರು 97,800 ಹೊಲಿಗೆಗಳನ್ನು ಬಿಚ್ಚಿ ಮತ್ತೆ ಹೊಲಿಯುವುದು.
“ನೀವು ಒಂದು ತಪ್ಪು ಮಾಡಿದರೂ ವಕಾಲ್ [ರಜಾಯಿ]ಯನ್ನು ಸರಿಪಡಿಸಲು ಸಾಧ್ಯವಿಲ್ಲ,” ಎಂದು 74 ವರ್ಷದ ದುರ್ಬಲ ಮಹಿಳೆ ತನ್ನ ಕೆಲಸದಲ್ಲಿನ ಬೇಕಾದ ಸೂಕ್ಷ್ಮತೆಯನ್ನು ವಿವರಿಸುತ್ತ ಹೇಳುತ್ತಾರೆ. ಆದರೂ ಇದುವರೆಗೆ ಅಲ್ಲಿನ ಮಹಿಳೆಯರು ರಜಾಯಿ ಹೊಲಿದ ನಂತರ ಮತ್ತೆ ಬಿಚ್ಚಿ ಹೊಲಿದಿದ್ದು ನೋಡಿಲ್ಲ ಎನ್ನುತ್ತಾರವರು. "ಏಕ್ದಾ ಶಿಕ್ಲಾನ್ ಕಿ ಚಕ್ ಹೋತಾ ನಹೀ [ಒಮ್ಮೆ ಕಲಿತರೆ, ಮತ್ತೆ ತಪ್ಪು ಮಾಡುವುದಿಲ್ಲ],” ಎಂದು ನಗುತ್ತಾ ಹೇಳುತ್ತಾರವರು.
ಈ ಸೂಕ್ಷ್ಮ ಕಲೆಯನ್ನು ಕಲಿಯುವ ಉದ್ದೇಶ ಅವರಿಗೆ ಎಂದಿಗೂ ಇದ್ದಿರಲಿಲ್ಲ, ಬದುಕಿನ ಅನಿವಾರ್ಯತೆ ಅವರನ್ನು ಸೂಜಿ-ದಾರ ಹಿಡಿಯುವಂತೆ ಮಾಡಿತು. “ಪೋಟನೆ ಶಿಕಾವ ಮಲಾ [ಬಡತನ ಈ ಕೆಲಸವನ್ನು ಕಲಿಸಿತು],” ಎನ್ನುತ್ತಾ ತನ್ನ 1960ನೇ ಇಸವಿಯ ಬದುಕಿನ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ. ಆಗ ಅವರು 15 ವರ್ಷದ ನವವಿವಾಹಿತೆ.
“ಶಾಲೆಗೆ ಹೋಗಬೇಕಾದ ಪ್ರಾಯದಲ್ಲಿ, ನನ್ನ ಕೈಯಲ್ಲಿ ಪೆನ್ ಪೆನ್ಸಿಲ್ ಬದಲು ಸೂಜಿ-ದಾರ ಹಿಡಿಯಬೇಕಾದ ಅನಿವಾರ್ಯತೆಯಿತ್ತು. ನಾನು ಶಾಲೆಗೆ ಹೋಗಿದ್ದರೆ ಇದನ್ನು ಕಲಿಯಲು ಸಾಧ್ಯವಿತ್ತೆ?” ಎಂದು ಕೇಳುತ್ತಾರೆ ತನುಬಾಯಿ. ಅವರನ್ನು ಆಜಿ (ಅಜ್ಜಿ) ಎಂದೂ ಪ್ರೀತಿಯಿಂದ ಕರೆಯಲಾಗುತ್ತದೆ.

ತನುಬಾಯಿ ಗೋವಿಲ್ಕರ್, ಪ್ರೀತಿಯಿಂದ ಆಜಿ (ಅಜ್ಜಿ) ಎಂದು ಕರೆಯಲ್ಪಡುತ್ತಾರೆ, ಅವರು ವಾಕಲ್ ಹೊಲಿಯುವ ಕೆಲಸ ಮಾಡುತ್ತಾರೆ. ರಜಾಯಿಯ ಪ್ರತಿಯೊಂದು ಹೊಲಿಗೆಗೂ ತೋಳುಗಳ ಚುರುಕಾದ ಚಲನೆಯ ಅಗತ್ಯವಿದೆ

ಠಿಘಲ್, ಅಂದರೆ ಸೀರೆಯಿಂದ ಕತ್ತರಿಸಿದ ಸಣ್ಣ ತುಂಡನ್ನು ಹೊಲಿಯಲು ಸಾಕಷ್ಟು ಕೌಶಲ ಬೇಕಾಗುತ್ತದೆ. ತನುಬಾಯಿ ಅವುಗಳನ್ನು ಒಂದೊಂದಾಗಿ ಮೇಲಿನ ಪದರದ ಮೇಲೆ ಹೊಲಿದು, ವರ್ಣರಂಜಿತ, ಸಮ್ಮಿತೀಯ ಮಾದರಿಯನ್ನು ರಚಿಸುತ್ತಾರೆ. 'ಒಂದು ನಿಮಿಷದ ತಪ್ಪು ರಜಾಯಿಯ ಬಾಳಿಕೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು'
ಅವರು ಮತ್ತು ಅವರ ದಿವಂಗತ ಪತಿ ಧನಾಜಿ ಮರಾಠ ಸಮುದಾಯಕ್ಕೆ ಸೇರಿದವರು ಮತ್ತು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಕೂಲಿಯನ್ನು ಅವಲಂಬಿಸಿದ್ದರು. ಚಳಿಗಾಲದಲ್ಲಿ ಹೊದ್ದುಕೊಳ್ಳಲು ರಗ್ಗು ಖರೀದಿಸಬಲ್ಲ ಶ್ರೀಮಂತಿಕೆಯಿರಲಿ, ತನ್ನ ಎರಡು ಬಾರಿಯ ಊಟದ ಅವಶ್ಯಕತೆಗಳನ್ನು ಪೂರೈಸುವುದು ಅವರಿಗೆ ಕಷ್ಟಕರವಾದ ಕೆಲಸವಾಗಿತ್ತು. ಅವರು ತಮ್ಮ ಬದುಕಿನ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ, “ಆ ಸಮಯದಲ್ಲಿ ನಾವು ಗಾದಿಗಳನ್ನು ಖರೀದಿಸುವ ಕನಸು ಕಾಣುತ್ತಿರಲಿಲ್ಲ. ಹಾಗಾಗಿ ಆ ಕಾಲದಲ್ಲಿ ಹೆಂಗಸರು ತಮ್ಮ ಹಳೆಯ ಸೀರೆಗಳನ್ನು ಹೊಲಿದು, ಅದರಿಂದ ತಮಗಾಗಿ ಗಾದಿಗಳನ್ನು ಮಾಡಿಕೊಳ್ಳುತ್ತಿದ್ದರು.” ಹೀಗಾಗಿ, ದಿನವಿಡೀ ಗದ್ದೆಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ನಂತರ, ತನುಬಾಯಿಯ ಸಂಜೆಗಳು ಅಪೂರ್ಣ ವಕಾಲ್ ಹೊಲಿಗೆಯನ್ನು ಪೂರ್ಣಗೊಳಿಸುವುದರಲ್ಲಿ ಕಳೆಯುತ್ತಿತ್ತು.
ಅವಳು ಹೇಳುತ್ತಾಳೆ, “ಶೇತತ್ ಖುರ್ಪ ಘೇವೂನ್ ಭಂಗಲೆಲಾ ಬಾರಾ, ಪನ್ ಹ ದಂಡ ನಕ್ಕೋ [ಈ ಕೆಲಸಕ್ಕೆ ಹೋಲಿಸಿದರೆ ಇಡೀ ದಿನ ಹೊಲದಲ್ಲಿ ಕುಡುಗೋಲು ಹಿಡಿದು ಕೆಲಸ ಮಾಡುವುದೇ ಸುಲಭವಾಗಿತ್ತು].” ಕಾರಣ ಸರಳವಾಗಿತ್ತು: ಒಂದು ವಕಾಲ್‌ಗೆ ಅಂತಹ ಸೂಕ್ಷ್ಮವಾದ ಸೂಜಿಯ ಕೆಲಸ ಬೇಕಾಗಿದ್ದು, ಅದು ಪೂರ್ಣಗೊಳ್ಳಲು ಸುಮಾರು 120 ದಿನಗಳು ಅಥವಾ 600 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಬೆನ್ನು ನೋವಿನಿಂದ ಸಿಡಿಯುತ್ತಿತ್ತು ಮತ್ತು ಕಣ್ಣುಗಳು ಉರಿಯಲಾರಂಭಿಸುತ್ತಿತ್ತು. ತನುಬಾಯಿಯವರು ಸೂಜಿಗಿಂತ ಕುಡುಗೋಲು ಕೆಲಸ ಮಾಡುವುದು ಸುಲಭ ಎನ್ನುವುದನ್ನು ತಮ್ಮ ಅನುಭವದಿಂದ ಕಂಡುಕೊಂಡಿದ್ದಾರೆ.
ಇದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಜಂಭಾಲಿ ಗ್ರಾಮದ 4,963 ನಿವಾಸಿಗಳಲ್ಲಿ (ಜನಗಣತಿ 2011) ಇವರೊಬ್ಬರೇ ವಾಕಲ್ ಕರಕುಶಲತೆಯ ಅಭ್ಯಾಸಿ ಏಕೆ ಎನ್ನುವುದನ್ನು ವಿವರಿಸುತ್ತದೆ.
*****
ವಾಕಲ್ ಮಾಡುವ ಮೊದಲ ಹಂತದಲ್ಲಿ, ಸೀರೆಗಳನ್ನು ಒಂದರ ಮೇಲೊಂದು ತುಂಬಾ ಅಂದವಾಗಿ ಇರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಸ್ಥಳೀಯ ಮರಾಠಿಯಲ್ಲಿ ಲೇವಾ ಎಂದು ಕರೆಯಲಾಗುತ್ತದೆ. ವಕಾಲ್‌ನಲ್ಲಿ ಎಷ್ಟು ಸೀರೆಗಳನ್ನು ಸೇರಿಸಲಾಗುವುದೆನ್ನುವುದು ಕುಶಲಕರ್ಮಿಗಳ ನಿರ್ಧಾರವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಮಹಿಳೆಯರು ತಮ್ಮ ಬಿಡುವಿನ ವೇಳೆಗೆ ಅನುಗುಣವಾಗಿ ಸೀರೆಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ. ತನುಬಾಯಿ ತನ್ನ ಇತ್ತೀಚಿನ ವಕಾಲ್‌ನಲ್ಲಿ ಒಂಬತ್ತು ಸುಟಿ (ಹತ್ತಿ) ಅಥವಾ ನೌವರಿ (ಒಂಬತ್ತು ಗಜ ಉದ್ದ) ಸೀರೆಗಳನ್ನು ಬಳಸುತ್ತಿದ್ದಾರೆ.
ಇದರ ತಯಾರಿಕೆಯ ಹಂತದಲ್ಲಿ ಮೊದಲು ಸೀರೆಯನ್ನು ಎರಡು ಸಮಾನ ಭಾಗಗಳಾಗಿ ಕತ್ತರಿಸಿ ನೆಲದ ಮೇಲೆ ಇಡುತ್ತಾರೆ. ನಂತರ ಎರಡು ಸೀರೆಗಳನ್ನು ಚೆನ್ನಾಗಿ ಮಡಚಿ ಅವುಗಳ ಮೇಲೆ ಹರಡಲಾಗುತ್ತದೆ. ಹೀಗೆ ಒಟ್ಟು ಎಂಟು ಸೀರೆಗಳ ಮಡಿಕೆಗಳನ್ನು ಸರಿಯಾಗಿ ಜೋಡಿಸಿ ಇಡಲಾಗುತ್ತದೆ. ಅದರ ನಂತರ ಆ ಮಡಿಕೆಗಳನ್ನು ಹೊಲಿಯಲಾಗುತ್ತದೆ. ಇವು ತಾತ್ಕಾಲಿಕ ಹೊಲಿಗೆಗಳು, ಇದು ಎಲ್ಲಾ ಒಂಬತ್ತು ಸೀರೆಗಳ ಮಡಿಕೆಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತದೆ. ಈ ಅನುಕ್ರಮದಲ್ಲಿ, ಹೊಲಿಗೆಗಳಿಂದ ಯಾವುದೇ ಪದರ ತಪ್ಪಿ ಹೋಗದಂತೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. "ನಂತರ ನೀವು ವಕಾಲ್ ಮೇಲೆ ಸರಿಯಾದ ಹೊಲಿಗೆಗಳನ್ನು ಹಾಕುವಾಗ, ಮೊದಲಿನ ಕಚ್ಚಾ ಹೊಲಿಗೆಗಳನ್ನು ತೆಗೆದುಹಾಕಲಾಗುತ್ತದೆ" ಎಂದು ಅವರು ವಿವರಿಸುತ್ತಾರೆ.


ಎಡ: ಆಜಿ ವಾಕಲ್ ತಯಾರಿಸಲು ಬಳಸುವ ಹಳೆಯ ಸೀರೆಗಳನ್ನು ಕತ್ತರಿಸುವಾಗ ಎಂದೂ ಅಳತೆ ಟೇಪ್ ಬಳಸಿಲ್ಲ; ಅವರು ತನ್ನ ಕೈಗಳಿಂದ ಬಟ್ಟೆಯ ಉದ್ದವನ್ನು ಸ್ಥೂಲವಾಗಿ ಅಳೆಯುತ್ತಾರೆ. ಬಲ: ಒಂದು ಸೀರೆಯನ್ನು ಕತ್ತರಿಯಿಂದ ಅರ್ಧಕ್ಕೆ ಕತ್ತರಿಸಲಾಗುತ್ತದೆ, ಮತ್ತು ನಂತರ ತನುಬಾಯಿ ಲೇವಾ ಎಂದು ಕರೆಯಲ್ಪಡುವ ಒಂದು ಜೋಡಣೆಯನ್ನು ತಯಾರಿಸುತ್ತಾರೆ, ಇದನ್ನು ಕತ್ತರಿಸಿದ ಬಟ್ಟೆಯ ಐದು ಪದರಗಳೊಂದಿಗೆ ತಯಾರಿಸುತ್ತಾರೆ

ಅಶ್ವಿನಿ ಬಿರಂಜೆ (ಎಡಕ್ಕೆ), ಆಜಿಯ ಮೊಮ್ಮಗಳು, ವಕಾಲ್‌ಗಳನ್ನು ತಯಾರಿಸಲು ಸಹಾಯ ಮಾಡುತ್ತಾ ರೆ
ಆಜಿ ನಂತರ ಇನ್ನಷ್ಟು ಸೀರೆಗಳನ್ನು ಠಿಘಲ್ ಎಂದು ಕರೆಯಲಾಗುವ ಸಣ್ಣ ತುಂಡುಗಳಾಗಿ ಕತ್ತರಿಸುತ್ತಾರೆ, ನಂತರ ಅದನ್ನು ಮೇಲಿನ ಸೀರೆಯ ಮೇಲೆ ಒಂದೊಂದಾಗಿ ಹೊಲಿಯುತ್ತಾರೆ, ಅಂತಿಮವಾಗಿ ವರ್ಣರಂಜಿತ, ಸಮ್ಮಿತೀಯ ಮಾದರಿಯನ್ನು ರಚಿಸುತ್ತಾರೆ. "ಇದಕ್ಕೆ ಯಾವುದೇ ಯೋಜನೆ ಅಥವಾ ರೇಖಾಚಿತ್ರ ಅಗತ್ಯವಿಲ್ಲ" ಎಂದು ಅವರು ಹೇಳುತ್ತಾರೆ. "ಠಿಘಲ್ ಎತ್ತಿಕೊಂಡು ಹೊಲಿಯುವುದನ್ನು ಮುಂದುವರಿಸಿದರಾಯಿತು."
ಅವರ ಕೈಚಳಕದ ಉತ್ತಮ ಹೊಲಿಗೆಗಳು ತಲಾ 5 ಮಿಮೀ ಅಳತೆಯನ್ನು ಹೊಂದಿವೆ ಮತ್ತು ಬಾಹ್ಯ ಅಂಚಿನಿಂದ ಪ್ರಾರಂಭವಾಗುತ್ತವೆ; ಪ್ರತಿಯೊಂದು ಹೊಲಿಗೆಯೊಂದಿಗೆ, ವಾಕಲ್ ಭಾರವಾಗುತ್ತದೆ, ಅದಕ್ಕೆ ಆಕಾರ ನೀಡುವ ಕೈಗಳನ್ನು ಸುಸ್ತು ಮಾಡುತ್ತದೆ. ಅವರು 30 ರೀಲುಗಳು, ಅಥವಾ 150 ಮೀಟರ್ (ಸುಮಾರು 492 ಅಡಿಗಳು), ಬಿಳಿ ಹತ್ತಿ ದಾರ ಮತ್ತು ಹಲವಾರು ಸೂಜಿಗಳನ್ನು ವಾಕಲ್ ಅನ್ನು ಹೊಲಿಯಲು ಬಳಸುತ್ತಾರೆ. ಜಂಭಾಲಿಯಿಂದ 12 ಕಿಲೋಮೀಟರ್ ದೂರದಲ್ಲಿರುವ ಇಚಲಕರಂಜಿ ಪಟ್ಟಣದಿಂದ ಅವರು ಒಂದು ರೀಲಿಗೆ 10 ರೂ.ಗಳಂತೆ ದಾರವನ್ನು ಖರೀದಿಸುತ್ತಾರೆ. "ಈ ಹಿಂದೆ, ವಾಕಲ್ ಹೊಲಿಯಲು ಕೇವಲ 10 ರೂಪಾಯಿ ಮೌಲ್ಯದ ದಾರ ಸಾಲುತ್ತಿತ್ತು; ಇಂದು ವೆಚ್ಚವು 300 ರೂ.ಗೆ ಏರಿದೆ" ಎಂದು ಅವರು ಸೌಮ್ಯವಾಗಿ ದೂರುತ್ತಾರೆ.
ವಾಕಲ್ ಹೊಲಿಗೆಯ ಕೊನೆಯ ಹಂತದಲ್ಲಿ ಆಜಿ ಅದರ ಮಡಿಕೆಯ ಮಧ್ಯದಲ್ಲಿ ಅಥವಾ ಅದರ ಹೊಟ್ಟೆಯಲ್ಲಿ ಒಂದು ತುಂಡು ಭಕ್ರಿ ಇರಿಸುತ್ತಾರೆ. ಇದು ಆ ಕೌದಿಯು ನೀಡುವ ಬೆಚ್ಚಗಿನ ಅನುಭವಕ್ಕೆ ಪ್ರತಿಯಾಗಿ ನೀಡುವ ಕಾಣಿಕೆಯಾಗಿದೆ. “ತ್ಯಾಲಾ ಪಣ್ ಪೊಟ್ ಆಹೆ ಕಿರೇ ಬಾಲಾ[ ಅದಕ್ಕೂ ಕೂಡ ಹೊಟ್ಟೆಯಿದೆ ಮಗು],” ಎನ್ನುತ್ತಾರವರು.
ನಾಲ್ಕು ತ್ರಿಕೋನಾಕಾರದ ಕಟೌಟ್‌ಗಳನ್ನು ಅದರ ಮೂಲೆಗಳಿಗೆ ಜೋಡಿಸಿದ ನಂತರ ವಾಕಲ್ ಸಿದ್ಧವಾಗುತ್ತದೆ, ಈ ವಿನ್ಯಾಸವು ಈ ರಜಾಯಿಗಳ ಗುಣಲಕ್ಷಣ ಮಾತ್ರವಲ್ಲ, ಪ್ರಮುಖ ಪಾತ್ರವನ್ನು ಸಹ ಹೊಂದಿದೆ - ನಾಲ್ಕು ಮೂಲೆಗಳು ಭಾರವಾದ ರಜಾಯಿಯನ್ನು ಎತ್ತಲು ಸುಲಭವಾದ ಹಿಡಿತವನ್ನು ಒದಗಿಸುತ್ತವೆ. 9 ಸೀರೆಗಳು, 216 ಠಿಘಲ್‌ಗಳು ಮತ್ತು 97,800 ಹೊಲಿಗೆಗಳು 7 ಕೆಜಿಗಿಂತಲೂ ಹೆಚ್ಚು ತೂಕವನ್ನು ರಜಾಯಿಯೊಂದಕ್ಕೆ ಸೇರಿಸುತ್ತವೆ.


ಸುಮಾರು 30 ರೀಲುಗಳಷ್ಟು (150 ಮೀಟರ್ ಗಳು) ಬಿಳಿ ಹತ್ತಿಯ ದಾರ ಮತ್ತು ಹಲವಾರು ಸೂಜಿಗಳನ್ನು ತನುಬಾಯಿ ರಜಾಯಿ ತಯಾರಿಸಲು ಬಳಸುತ್ತಾರೆ


ಎಡ: ಅತ್ಯಂತ ಹೊರ ಅಂಚುಗಳನ್ನು ಬಿಗಿಯಾಗಿ ಹೊಲಿಯುವ ಮೂಲಕ ಕೆಲಸ ಆರಂಭಿಸುತ್ತಾರೆ. ಇದು ವಾಕಲ್‌ಗೆ ಬಲ ನೀಡುತ್ತದೆ. ಬಲ: ವಾಕಲ್ ಹೊಲಿಗೆಯನ್ನು ಪೂರ್ಣಗೊಳಿಸುವ ಮೊದಲು ಆಜಿ ಅದರ ಕೇಂದ್ರ ಭಾಗದಲ್ಲಿ ಒಂದು ತುಂಡು ಭಕ್ರಿ ಇರಿಸುತ್ತಾರೆ. ಇದು ನೀಡುವ ಬೆಚ್ಚನೆ ಅನುಭೂತಿಗಾಗಿ ನೀಡು ಕಾಣಕೆಯಾಗಿದೆ
"ಈ ವಾಕಲ್ ತಯಾರಿಸಲು ನಾಲ್ಕು ತಿಂಗಳು ಹಿಡಿಯಿತು" ಎಂದು ಆಜಿ ಹೆಮ್ಮೆಯಿಂದ ತನ್ನ ಹೊಸದಾಗಿ ತಯಾರಿಸಿದ ವಾಕಲ್ ತೋರಿಸುತ್ತಾ ಹೇಳುತ್ತಾರೆ. ಇದು ನಿಸ್ಸಂದೇಹವಾಗಿ 6.8 X 6.5 ಗಾತ್ರದ ಅದ್ಭುತವಾದ ಕೆಲಸಗಾರಿಕೆಯ ಪ್ರತಿರೂಪ ಎಂದು ಹೇಳಬಹುದು. ಅವರು ತನ್ನ ಗೊತ್ತುಪಡಿಸಿದ ಕೆಲಸದ ಸ್ಥಳದಲ್ಲಿ ಕುಳಿತಿದ್ದರು, ಅದು ಅವರ ಹಿರಿಯ ಮಗ ಪ್ರಭಾಕರನ ಪಕ್ಕಾ ಮನೆಯ ಹೊರಗಿನ ಜಗುಲಿ. ವರ್ಷಗಳ ಪರಿಶ್ರಮದಿಂದ ಈ ಜಾಗವನ್ನು ಸುಗಂಧರಾಜ, ಕೋಲಿಯಸ್ ಮುಂತಾದ ಗಿಡಗಳಿಂದ ಅಲಂಕರಿಸಿದ್ದಾರೆ. ಒಂದು ಕಾಲದಲ್ಲಿ ಈ ನೆಲವನ್ನು ಸೆಗಣಿಯಿಂದ ಸಾರಿಸಿ ಆಜಿ ಒಪ್ಪಗೊಳಿಸಿ ಇಟ್ಟುಕೊಳ್ಳುತ್ತಿದ್ದರು, ಅವರು ಇಲ್ಲಿ ಸಾವಿರಾರು ಗಂಟೆಗಳ ಕಾಲ ಅಸಂಖ್ಯಾತ ಬಟ್ಟೆಗಳನ್ನು ಒಂದರ ಮೇಲೊಂದು ರಾಶಿ ಹಾಕುತ್ತಾ ಕಳೆದಿದ್ದಕ್ಕೆ ಈ ನೆಲ ಸಾಕ್ಷಿಯಾಗಿದೆ.
"ಈ ವಾಕಲ್ ಅನ್ನು ಒಗೆದು ಸ್ವಚ್ಛಗೊಳಿಸಲು ಕನಿಷ್ಠ ನಾಲ್ಕು ಜನರು ಬೇಕಾಗುತ್ತಾರೆ. ಇದು ತುಂಬಾ ಭಾರ" ಎಂದು ಅವರು ಹೇಳುತ್ತಾರೆ, ಈ ರಜಾಯಿಯನ್ನು ವರ್ಷಕ್ಕೆ ಮೂರು ಬಾರಿ ತೊಳೆಯಲಾಗುತ್ತದೆ - ದಸರಾ, ನವ್ಯಾಚಿ ಪೂನಂ (ಸಂಕ್ರಾಂತಿ ಹಬ್ಬದ ನಂತರದ ಮೊದಲ ಹುಣ್ಣಿಮೆ) ಮತ್ತು ವಾರ್ಷಿಕ ಊರಹಬ್ಬ. "ಈ ಮೂರು ದಿನಗಳನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ಅದು ಸಂಪ್ರದಾಯ."
ತನ್ನ ಬದುಕಿನುದ್ದಕ್ಕೂ, ತನುಬಾಯಿ ಮೂವತ್ತಕ್ಕೂ ಹೆಚ್ಚು ವಕಾಲ್‌ಗಳನ್ನು ರಚಿಸಿದ್ದಾರೆ ಮತ್ತು ತಮ್ಮ ಜೀವನದ 18,000 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಈ ಉತ್ತಮ ಮತ್ತು ಶ್ರಮದಾಯಕ ಕಲೆಗೆಂದು ಮೀಸಲಿಟ್ಟಿದ್ದಾರೆ. ಮತ್ತು, ಅವರು ಅಲ್ಪಾವಧಿಯ ಕೆಲಸವಾಗಿ ಇದೆಲ್ಲವನ್ನೂ ಮಾಡಿದ್ದಾರೆ. ಅವರು ತಮ್ಮ ಜೀವನದ ಸುಮಾರು ಅರವತ್ತು ವರ್ಷಗಳನ್ನು ಪೂರ್ಣಾವಧಿ ಕೃಷಿ ಕೂಲಿಯಾಗಿ ಕಳೆದಿದ್ದಾರೆ, ದಿನಕ್ಕೆ ಸರಾಸರಿ 10 ಗಂಟೆಗಳ ಕಾಲ ಗದ್ದೆಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ.
“ಇಷ್ಟೆಲ್ಲಾ ದುಡಿದೂ ಅವರು ದಣಿದಿಲ್ಲ. ಈಗಲೂ ಸಮಯ ಸಿಕ್ಕಿದಾಗಲೆಲ್ಲ ಇನ್ನೊಂದು ವಾಕಲ್ ತಯಾರಿಯಲ್ಲಿ ತೊಡಗುತ್ತಾರೆ,” ಎನ್ನುತ್ತಾರೆ ಅವರ ಮಗಳಾದ ಸಿಂಧೂ ಬಿರಾಂಜೆ. ಆದರೆ ಅವರಿಗೆ ಈ ಕಲೆ ಕರಗತವಾಗಿಲ್ಲ. “ನಮ್ಮ ಬದುಕು ಪೂರ್ತಿ ಕಲಿತರೂ ಅವರ ಸಮಕ್ಕೆ ಒಂದು ವಾಕಲ್ ತಯಾರಿಸಲು ಸಾಧ್ಯವಿಲ್ಲ. ಅವರ ಈ ಕರಕುಶಲತೆಯನ್ನು ಇಂದಿಗೂ ಕಾಣುತ್ತಿರುವ ನಾವೇ ಅದೃಷ್ಟವಂತರು,” ಎನ್ನುತ್ತಾರೆ ತನುಬಾಯಿಯವರ ಹಿರಿಯ ಸೊಸೆ ಲತಾ.

ತಾನು ನಿದ್ರೆಯಲ್ಲೂ ಸೂಜಿಗೆ ದಾರ ಪೋಣಿಸಬಲ್ಲೆ ಎನ್ನುತ್ತಾರೆ


ಎಡ: ಸಂಕೀರ್ಣವಾದ ಸೂಜಿ-ಹೊಲಿಗೆ ಕೆಲಸವು ಅವರ ತೋಳುಗಳು ಮತ್ತು ಭುಜಗಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ʼನನ್ನ ಕೈಗಳು ಉಕ್ಕಿನಂತಿವೆ, ಸೂಜಿಗಳು ನನಗೆ ತೊಂದರೆ ಕೊಡುವುದಿಲ್ಲ.ʼ ಬಲ: ಸಮಾನ ಅಂತರದಲ್ಲಿನ ಸೂಕ್ಷ್ಮ ಹೊಲಿಗೆಗಳು ಐದು ಮಿಲಿಮೀಟರ್‌ಗಳಿಗಿಂತ ದೊಡ್ಡದಾಗಿರುವುದಿಲ್ಲ. ಇವುಗಳು ಎಲ್ಲಾ ಪದರಗಳನ್ನು ಒಟ್ಟಿಗೆ ಸೇರಿಸುತ್ತವೆ ಮತ್ತು ಪ್ರತಿ ಹೊಲಿಗೆಯೊಂದಿಗೆ ವಾಕಲ್ ದಪ್ಪವಾಗುತ್ತವೆ ಮತ್ತು ಭಾರವಾಗುತ್ತವೆ
ಸಿಂಧು ಅವರ ಸೊಸೆ, 23 ವರ್ಷದ ಅಶ್ವಿನಿ ಬಿರಂಜೆ ಟೈಲರಿಂಗ್ ಕೋರ್ಸ್ ಪೂರ್ಣಗೊಳಿಸಿದ್ದಾರೆ ಮತ್ತು ವಾಕಲ್ ತಯಾರಿಕೆ ಕೂಡಾ ಕಲಿತಿದ್ದಾರೆ. "ಆದರೆ ನಾನು ಯಂತ್ರವನ್ನು ಬಳಸಿ ವಾಕಲ್ ತಯಾರಿಸುತ್ತೇನೆ. ಈ ಸಾಂಪ್ರದಾಯಿಕ ಕಲೆಗೆ ಸಾಕಷ್ಟು ತಾಳ್ಮೆ ಮತ್ತು ಸಮಯ ಬೇಕಾಗುತ್ತದೆ" ಎಂದು ಅವರು ಹೇಳುತ್ತಾರೆ. ಅವರು ಹೇಳದಿದ್ದ ವಿಷಯವೆಂದರೆ, ಇದು ಬೆನ್ನು ಮತ್ತು ಕಣ್ಣುಗಳನ್ನು ನೋಯಿಸುವ ದೈಹಿಕ ಶ್ರಮದಾಯಕ ಕೆಲಸವಾಗಿದೆ, ಮತ್ತು ಬೆರಳುಗಳನ್ನು ಗಾಯಗೊಳಿಸಿ ನೋಯುವಂತೆ ಮಾಡುತ್ತದೆ.
ಆದರೆ, ಈ ಕಷ್ಟಗಳು ತನುಬಾಯಿಗೆ ಈ ತೊಂದರೆಗಳು ಕಾಡುವುದಿಲ್ಲ. ಅವರು ನಗುತ್ತಾ ಹೇಳುತ್ತಾರೆ, “ನನ್ನ ಕೈಗಳು ಈಗ ಅದಕ್ಕೆ ಒಗ್ಗಿಕೊಂಡಿವೆ. ಈ ಕೈಗಳು ಉಕ್ಕಿನಂತೆ ಗಟ್ಟಿಯಾಗಿವೆ, ಹೀಗಾಗಿ ನಾನು ಈಗ ಸೂಜಿಗೆ ಹೆದರುವುದಿಲ್ಲ.” ಕೆಲಸದ ನಡುವೆ ಯಾರಾದರೂ ಮಾತಿಗೆ ಕುಳಿತರೆ ಅವರು ತನ್ನ ಸೂಜಿಯನ್ನು ತುರುಬಿಗೆ ಚುಚ್ಚಿಕೊಳ್ಳುತ್ತಾರೆ. ಈಗಲೂ ಹಾಗೆ ಚುಚ್ಚಿಕೊಳ್ಳುತ್ತಾ "ಸೂಜಿ ಇಡೋದಕ್ಕೆ ಇದ್ದಕ್ಕಿಂತ ಒಳ್ಳೆ ಜಾಗ ಬೇರೆ ಇಲ್ಲ,” ಎಂದರು ನಗುತ್ತಾ.
ಹೊಸ ಪೀಳಿಗೆಯ ಹುಡುಗಿಯರು ಮತ್ತು ಮಹಿಳೆಯರು ಈ ಕಲೆಯನ್ನು ಕಲಿಯಲು ಏಕೆ ಆಸಕ್ತಿ ವಹಿಸುವುದಿಲ್ಲ ಎಂದು ಕೇಳಿದಾಗ, ಅವರು ಸ್ವಲ್ಪ ವ್ಯಂಗ್ಯವಾಗಿ ಉತ್ತರಿಸುತ್ತಾರೆ, “ಚಿಂಧ್ಯಾ ಫಡಯಾಲಾ ಕೋನ್ ಯೇನಾರ್? ಕಿತಿ ಪಗಾರ್ ದೇನಾರ್? [ಇಲ್ಲಿ ಸೀರೆಗಳನ್ನು ಹರಿಯಲು ಯಾರು ಬರುತ್ತಾರೆ? ಮತ್ತು, ಈ ಕೆಲಸಕ್ಕೆ ಅವರು ಎಷ್ಟು ಸಂಬಳ ಪಡೆಯಲು ಸಾಧ್ಯ?]”
ಯುವಜನರು ಮಾರುಕಟ್ಟೆಯಿಂದ ಅಗ್ಗದ, ಯಂತ್ರದಿಂದ ತಯಾರಿಸಿದ ರಗ್ಗುಗಳನ್ನು ಖರೀದಿಸಲು ಬಯಸುತ್ತಾರೆ ಎಂದು ಅವರು ವಿವರಿಸುತ್ತಾರೆ. "ದುರದೃಷ್ಟವಶಾತ್, ಕೆಲವು ಮಹಿಳೆಯರಿಗಷ್ಟೇ ಕೈಯಿಂದ ವಾಕಲ್ ತಯಾರಿಸುವುದು ಹೇಗೆಂದು ತಿಳಿದಿದೆ. ಕಲೆಯ ಬಗ್ಗೆ ಇನ್ನೂ ಭಯಭೀತರಾಗಿರುವವರು ಅದನ್ನು ಯಂತ್ರ ಬಳಸಿ ಹೊಲಿಯುತ್ತಾರೆ" ಎಂದು ತನುಬಾಯಿ ಹೇಳುತ್ತಾರೆ. "ಇದು ವಾಕಲ್‌ಗಳನ್ನು ಹಿಂದೆ ಏಕೆ ತಯಾರಿಸಲಾಯಿತು ಎಂಬುದಕ್ಕೆ ಇರುವ ಕಾರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ, ಆದರೆ ನಂತರ ಸಮಯದೊಂದಿಗೆ ವಿಷಯಗಳು ಬದಲಾಗುತ್ತವೆ" ಎಂದು ಅವರು ಹೇಳುತ್ತಾರೆ. ಮಹಿಳೆಯರು ಹಳೆಯ ಸೀರೆಗಳ ಬದಲು ವಾಕಲ್‌ಗಳನ್ನು ತಯಾರಿಸಲು ಹೊಸ ಸೀರೆಗಳನ್ನು ಬಳಸಲು ಬಯಸುತ್ತಾರೆ ಎಂದು ಅವರು ಹೇಳುತ್ತಾರೆ.


ಎಡಕ್ಕೆ: ತನುಬಾಯಿ ಹೊಲಿಗೆಗೆ ವ್ಯವಸ್ಥೆ ಮಾಡುವ ಮೊದಲು ಠಿಗಲ್‌ಗಳನ್ನು ತನ್ನ ಕೈಯಿಂದ ಅಳೆಯುತ್ತಿರುವುದು. ಬಲ: ಅವರು ತನ್ನ ಜೀವಿತಾವಧಿಯಲ್ಲಿ 30 ವಾಕಲ್‌ಗಳನ್ನು ತಯಾರಿಸಿದ್ದಾರೆ, ಈ ಕಲೆಗೆಂದು ತಮ್ಮ ಬದುಕಿನ 18,000 ಗಂಟೆಗಳಿಗೂ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾ ರೆ
ತನ್ನ ಬದುಕಿನುದ್ದಕ್ಕೂ ನೂರಾರು ಸಾವಿರ ಉತ್ತಮವಾದ ಮತ್ತು ಅದ್ಭುತವಾದ ಕೈ ಹೊಲಿಗೆಗಳ ನಂತರ, ಅವರು ಈಗ ತನ್ನ ನೆರೆಯ ಟೈಲರ್ ನಾಯಕ್ (ಆಜಿಗೆ ಅವರ ಮೊದಲ ಹೆಸರು ನೆನಪಿಲ್ಲ) ಸ್ನೇಹಪರ ಸಲಹೆಯನ್ನು ತೆಗೆದುಕೊಳ್ಳದೆ ಹೋಗಿದ್ದಕ್ಕಾಗಿ ವಿಷಾದಿಸುತ್ತಾರೆ. ಅವರು ನೆನಪಿಸಿಕೊಳ್ಳುತ್ತಾರೆ, “ಹೊಲಿಗೆ ಕಲಿಯುವಂತೆ ಆಗಾಗ್ಗೆ ನನ್ನನ್ನು ಕೇಳುತ್ತಿದ್ದ. ನಾನು ಹೊಲಿಗೆ ಕಲಿತಿದ್ದರೆ ಇಂದು ನನ್ನ ಜೀವನವೇ ಬೇರೆಯಾಗುತ್ತಿತ್ತು." ಈ ವಿಷಾದದ ನಂತರವೂ, ಕಠಿಣ ಪರಿಶ್ರಮದ ಕಾರಣಕ್ಕೆ, ಅವರ ಈ ಕೌಶಲದ ಮೇಲಿನ ಪ್ರೀತಿ ಒಂದಿಷ್ಟೂ ಕಡಿಮೆಯಾಗಿಲ್ಲ.
ಕುತೂಹಲಕಾರಿಯಾಗಿ, ತನುಬಾಯಿ ತನ್ನ ಜೀವಿತಾವಧಿಯಲ್ಲಿ ಎಂದಿಗೂ ತಾನು ಹೊಲಿದ ವಾಕಲ್ ಅನ್ನು ಮಾರಾಟ ಮಾಡಿಲ್ಲ. "ಕಶಾಲ ರೆ ಮಿ ವಿಕು ವಾಕಲ್, ಬಾಲಾ [ಮಗೂ, ನಾನ್ಯಾಕೆ ಇದನ್ನು ಮಾರಲಿ]? ಮಾರಿದರೂ ಎಷ್ಟು ಹಣ ಕೊಡಬಲ್ಲರು?"
*****
ವಾಕಲ್ ತಯಾರಿಸಲು ಯಾವುದೇ ನಿಗದಿತ ಋತುಗಳಿಲ್ಲದಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಇದು ಕೃಷಿ ಚಕ್ರದ ಮೇಲೆ ಅವಲಂಬಿತವಾಗಿದೆ. ಹೊಲಗಳಲ್ಲಿ ಕೆಲಸ ಕಡಿಮೆ ಇರುವ ಋತುವಿನಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೊಲಿಗೆ ಮತ್ತು ಕಸೂತಿಗೆ ಆದ್ಯತೆ ನೀಡುತ್ತಾರೆ. ಈ ದೃಷ್ಟಿಕೋನದಿಂದ, ಫೆಬ್ರವರಿ ಆರಂಭದಿಂದ ಜೂನ್ ತಿಂಗಳವರೆಗಿನ ಸಮಯವು ಹೆಚ್ಚು ಅನುಕೂಲಕರವಾಗಿದೆ. “ಮನಲಾ ಯೆಯಿಲ್ ತೇವ ಕರಾಯ್ಚ [ಮನಸು ಬಂದಾಗಲೆಲ್ಲ ಮಾಡುತ್ತೇವೆ],” ಎಂದು ತನುಬಾಯಿ ಹೇಳುತ್ತಾರೆ.
1960ರ ದಶಕದವರೆಗೂ ಕೊಲ್ಹಾಪುರದ ಗಾಧಿಂಗ್ಲಾಜ್ ತಾಲೂಕಿನ ತಮ್ಮ ಹಿಂದಿನ ಊರಿನಲ್ಲಿ ಮನೆ-ಮನೆಯಲ್ಲೂ ವಾಕಲ್ ಹೊಲಿಯುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಇದನ್ನು ಗೋಧಾಡಿ ಎಂದು ಕರೆಯಲಾಗುತ್ತದೆ. "ಹಿಂದಿನ ಮಹಿಳೆಯರು ತಮ್ಮ ನೆರೆಹೊರೆಯವರನ್ನು ವಾಕಲ್ ಹೊಲಿಗೆಗೆ ಸಹಾಯ ಮಾಡಲು ಆಹ್ವಾನಿಸುತ್ತಿದ್ದರು ಮತ್ತು ದಿನದ ಹೊಲಿಗೆಗಾಗಿ ಮೂರು ಆಣೆಗಳನ್ನು (ಆ ದಿನಗಳಲ್ಲಿ ಹಣದ ಒಂದು ಘಟಕ) ಪಾವತಿಸುತ್ತಿದ್ದರು." ನಾಲ್ವರು ಮಹಿಳೆಯರು ನಿರಂತರವಾಗಿ ಕೆಲಸ ಮಾಡಿದರೂ ಒಂದು ಗಾದಿ ಪೂರ್ಣಗೊಳ್ಳಲು ಎರಡು ತಿಂಗಳು ಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.

ಕೊನೆಯ ಸುತ್ತಿನಲ್ಲಿ ವಾಕಲ್‌ಗೆ ಹೊಲಿಗೆ ಹಾಕುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಅದು ಬಹಳ ಭಾರವಿರುತ್ತದೆ
ಆಗ ಸೀರೆಗಳು ದುಬಾರಿಯಾಗಿದ್ದವು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಒಂದು ಕಾಟನ್ ಸೀರೆಯ ಬೆಲೆ 8 ರೂಪಾಯಿ ಮತ್ತು ಒಳ್ಳೆಯ ಸೀರೆಯ ಬೆಲೆ 16 ರೂಪಾಯಿ. ಆಗ ಒಂದು ಕಿಲೋ ಮಸೂರಿ ದಾಲ್ (ಕೆಂಪು ಬೇಳೆ) ಬೆಲೆ 12 ಆಣೆ ಮತ್ತು ಅವರು ಸ್ವತಃ ಹೊಲಗಳಲ್ಲಿ ದುಡಿಯುತ್ತಾ ದಿನಕ್ಕೆ 6 ಆಣೆ ಸಂಪಾದಿಸುತ್ತಿದ್ದರು. ಅಂತಹ ಹದಿನಾರು ಆಣೆಗೆ ಒಂದು ರೂಪಾಯಿ.
"ನಾವು ಒಂದು ವರ್ಷದಲ್ಲಿ ಕೇವಲ ಎರಡು ಸೀರೆಗಳು ಮತ್ತು ನಾಲ್ಕು ಜಂಪರ್ [ಕುಪ್ಪಸಗಳು] ಖರೀದಿಸುತ್ತಿದ್ದೆವು." ಸೀರೆಗಳು ಅಷ್ಟು ವಿರಳವಾಗಿರುವುದರಿಂದ, ವಾಕಲ್ ಹೆಚ್ಚು ಬಾಳಿಕೆಯನ್ನು ಹೊಂದಬೇಕಾಗಿತ್ತು. ತನುಬಾಯಿ ತನ್ನ ವಾಕಲ್‌ಗಳು ಕನಿಷ್ಠ 30 ವರ್ಷಗಳ ಕಾಲ ಬಾಳಿಕೆ ಬರುತ್ತವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇದರ ಹಿಂದಿರುವುದು ಕಲೆಯ ಸೂಕ್ಷ್ಮ ವಿವರಗಳನ್ನು ಕರಗತ ಮಾಡಿಕೊಳ್ಳುವಲ್ಲಿ ತೀವ್ರ ಅಭ್ಯಾಸದ ಮೂಲಕ ಸಾಧಿಸಿದ ಉತ್ಕೃಷ್ಟತೆ.
ಸುಮಾರು ಎರಡು ಕೋಟಿ ಜನರು [ಮಹಾರಾಷ್ಟ್ರದ ಗ್ರಾಮೀಣ ಜನಸಂಖ್ಯೆಯ 57 ಪ್ರತಿಶತ] 1972-73ರ ಭೀಕರ ಬರಗಾಲದಿಂದ ಬಾಧಿತರಾಗಿದ್ದರು. ಈ ಕ್ಷಾಮವು ನೌಕುಡ್‌ನ ಗೋವಿಲ್ಕರ್ ಜನರನ್ನು ಅಲ್ಲಿಂದ 90 ಕಿಮೀ ದೂರದಲ್ಲಿರುವ ಕೊಲ್ಲಾಪುರದ ಶಿರೋಲ್ ತಾಲೂಕಿನ ಜಾಂಭಲಿ ಗ್ರಾಮದಲ್ಲಿ ನೆಲೆಸುವಂತೆ ಮಾಡಿತು. ಆ ಭಯಾನಕತೆಯನ್ನು ನೆನಪಿಸಿಕೊಳ್ಳುತ್ತಾ, ಅವರ ಕಣ್ಣುಗಳು ನೀರಾಗುತ್ತವೆ, “ಈ ಬರಗಾಲವು ಎಷ್ಟು ಭೀಕರವಾಗಿತ್ತು ಎಂದರೆ ಇಂದು ಯಾರೂ ಅದನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ನಾವು ಅನೇಕ ರಾತ್ರಿಗಳವರೆಗೆ ಹಸಿದ ಹೊಟ್ಟೆಯೊಡನೆ ಹಾಸಿಗೆಗೆ ಹೋಗುತ್ತಿದ್ದೆವು.
ಅವರು ಹೇಳುತ್ತಾರೆ, “ನೌಕುಡ್‌ನ ಒಬ್ಬ ವ್ಯಕ್ತಿಗೆ ಜಾಂಬಲಿಯಲ್ಲಿ ಒಂದಷ್ಟು ಕೆಲಸ ಸಿಕ್ಕಿತು. ಈ ಸುದ್ದಿಯನ್ನು ಕೇಳಿದ ಬಹುತೇಕ ಇಡೀ ಹಳ್ಳಿಯು ನೌಕುಡದಿಂದ ಜಾಂಭಲಿಗೆ ಧಾವಿಸಿತು.ಜಾಂಭಲಿಗೆ ತೆರಳುವ ಮೊದಲು, ಆಕೆಯ ಪತಿ ಧನಾಜಿ ರಸ್ತೆ ನಿರ್ಮಾಣ ಮತ್ತು ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಸಂಬಂಧಿಸಿದಂತೆ ಅವರು ನೌಕುಡ್‌ನಿಂದ 160 ಕಿ.ಮೀ ದೂರದ ಗೋವಾಕ್ಕೆ ಪ್ರಯಾಣ ಬೆಳೆಸುತ್ತಿದ್ದರು.
ಸರಕಾರದ ಕ್ಷಾಮ ಪರಿಹಾರ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಕೂಲಿ ಕೆಲಸ ಪಡೆದಿದ್ದ ಜಾಂಭಲಿಯಲ್ಲಿದ್ದ 40 ಕೂಲಿ ಕಾರ್ಮಿಕರಲ್ಲಿ ಆಜಿ ಕೂಡ ಒಬ್ಬರು. "12 ಗಂಟೆಗಳ ಕಾಲ ಕೆಲಸ ಮಾಡಿದರೆ ಕೇವಲ 1.5 ರೂಪಾಯಿಗಳನ್ನಷ್ಟೇ ಕೂಲಿಯಾಗಿ ಕೊಡುತ್ತಿದ್ದರು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಗ್ರಾಮದ ಪ್ರಬಲ ಮತ್ತು ಶ್ರೀಮಂತ ರೈತ ತನ್ನ ತನ್ನ 16 ಎಕರೆ ಜಮೀನಿನಲ್ಲಿ ಕೆಲಸ ಮಾಡಿದರೆ ದಿನಕ್ಕೆ ರೂ.3 ದರದಲ್ಲಿ ಕೂಲಿ ನೀಡುವುದಾಗಿ ಹೇಳಿದ. ಅಂದಿನಿಂದ, ತನುಬಾಯಿ ಕೃಷಿ ಕೂಲಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು, ಅಲ್ಲಿ ಕಡಲೆಕಾಯಿ, ಜೋಳ, ಗೋಧಿ, ಅಕ್ಕಿ ಜೊತೆಗೆ ಹಣ್ಣುಗಳಾದ ಚಿಕ್ಕು, ಮಾವು, ದ್ರಾಕ್ಷಿ, ದಾಳಿಂಬೆ ಮತ್ತು ಸೀತಾಫಲವನ್ನು ಬೆಳೆಯುತ್ತಿದ್ದರು.


ಎಡ: ಈ ದಾರವನ್ನು ಕತ್ತರಿಸಿದ ನಂತರ, ಆಜಿಯ ವಾಕಲ್ ಕೆಲಸ ಮುಗಿಯುತ್ತದೆ. ಬಲ: ಬಲ ಭುಜದ ಮೇಲೆ ಎರಡು ಶಸ್ತ್ರಚಿಕಿತ್ಸೆಗಳು ಮತ್ತು ನಿರಂತರ ನೋವಿನ ನಡುವೆಯೂ ಅವರು ಈ ರಜಾಯಿ ಹೊಲಿಯುವ ಕೆಲಸ ನಿಲ್ಲಿಸಿಲ್ಲ
2000ದ ದಶಕದ ಆರಂಭದಲ್ಲಿ ಅವರು ಮೂವತ್ತು ವರ್ಷಗಳ ಕಠಿಣ ಪರಿಶ್ರಮದ ನಂತರ ತೋಟದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಹೆಚ್ಚಳದ ನಂತರವೂ 10 ಗಂಟೆಗಳ ಕೆಲಸಕ್ಕೆ ದಿನಕ್ಕೆ ಕೇವಲ 160 ರೂ. ಕೂಲಿ ದೊರೆಯುತ್ತಿತ್ತು. ತನ್ನ ಕಠಿಣ ಪರಿಶ್ರಮ ಮತ್ತು ಬಡತನದ ದಿನಗಳನ್ನು ನೆನಪಿಸಿಕೊಳ್ಳುತ್ತಾ, "ಕೊಂಡಾಚಾ ಧೋಂಡಾ ಖಲಾ ಪನಾ ಮುಲಾನಾ ಕಧಿ ಮಗಾ ಥೇವ್ಲೋ ನಹೀ [ನಾವು ಹೊಟ್ಟು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು, ಆದರೆ ಮಕ್ಕಳಿಗೆ ಕಷ್ಟ ಸೋಕಲು ಬಿಡಲಿಲ್ಲ]." ಅವರ ಹೋರಾಟ ಮತ್ತು ತ್ಯಾಗ ವ್ಯರ್ಥವಾಗಲಿಲ್ಲ. ಇಂದು ಅವರ ಹಿರಿಯ ಮಗ ಪ್ರಭಾಕರ್ ಹತ್ತಿರದ ಪಟ್ಟಣವಾದ ಜೈಸಿಂಗ್‌ಪುರದಲ್ಲಿ ರಸಗೊಬ್ಬರ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಕಿರಿಯ ಮಗ ಬಾಪುಸೋ ಜಂಭಾಲಿಯ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ, ಮನೆಯಲ್ಲಿ ಬೇಸರ ಕಾಡತೊಡಗಿತು. ಆಗ ಮತ್ತೆ ಕೃಷಿ ಕೂಲಿ ಕೆಲಸಕ್ಕೆ ಹೋಗತೊಡಗಿದರು. ಮೂರು ವರ್ಷಗಳ ಹಿಂದೆ, ಮನೆಯಲ್ಲಿ ಬಿದ್ದು ಉಂಟಾದ ಗಾಯಗಳು ಅವರನ್ನು ಕೃಷಿ ಕೆಲಸದಿಂದ ನಿವೃತ್ತರಾಗುವಂತೆ ಮಾಡಿದವು. "ನನ್ನ ಬಲಭುಜಕ್ಕೆ ಎರಡು ಶಸ್ತ್ರಚಿಕಿತ್ಸೆಗಳು ಮತ್ತು ಆರು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾದರೂ, ನೋವು ಮುಂದುವರೆದಿದೆ" ಎಂದು ಅವರು ವಿವರಿಸುತ್ತಾರೆ. ಆದಾಗ್ಯೂ, ತನ್ನ ಮೊಮ್ಮಗ ಸಂಪತ್ ಬಿರಂಜೆಗಾಗಿ ಮತ್ತೊಂದು ವಾಕಲ್ ಮಾಡುವುದನ್ನು ಈ ನೋವಿಗೆ ತಡೆಯಲು ಸಾಧ್ಯವಾಗಿಲ್ಲ.
ತನ್ನ ಭುಜದ ನೋವಿನ ಹೊರತಾಗಿಯೂ, ತನುಬಾಯಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಹೊಲಿಗೆಯನ್ನು ಪ್ರಾರಂಭಿಸುತ್ತಾರೆ ಮತ್ತು ಸಂಜೆ 6 ಗಂಟೆಯವರೆಗೆ ಮುಂದುವರಿಸುತ್ತಾರೆ, ಹೊರಗೆ ಒಣಗಿಸಲು ಹಾಕಲಾದ ಜೋಳವನ್ನು ತಿನ್ನಲು ಬರುವ ಕೋತಿಗಳನ್ನು ಓಡಿಸಲು ಸಾಂದರ್ಭಿಕವಾಗಿ ನಿಲ್ಲುತ್ತಾರೆ. "ಕೋತಿಗಳೊಂದಿಗೆ ಅದನ್ನು ಹಂಚಿಕೊಳ್ಳಲು ನನಗೆ ಯಾವುದೇ ಅಭ್ಯಂತರವಿಲ್ಲ, ಆದರೆ ನನ್ನ ಮೊಮ್ಮಗ, ರುದ್ರನಿಗೆ ಜೋಳವೆಂದರೆ ಇಷ್ಟ," ಎಂದು ಅವರು ಹೇಳುತ್ತಾರೆ. ತನ್ನ ಉತ್ಸಾಹವನ್ನು ಬೆಂಬಲಿಸಿದ್ದಕ್ಕಾಗಿ ಅವರು ತನ್ನ ಇಬ್ಬರು ಸೊಸೆಯಂದಿರಿಗೆ ಸಾಕಷ್ಟು ಋಣಿಯಾಗಿರುವುದಾಗಿ ಅವರು ಹೇಳುತ್ತಾರೆ. "ಅವರ ಕಾರಣದಿಂದಾಗಿ ನಾನು ಮನೆಯ ಜವಾಬ್ದಾರಿಗಳಿಂದ ಮುಕ್ತಳಾಗಿದ್ದೇನೆ."
74ರ ಹರೆಯದಲ್ಲೂ ತನುಬಾಯಿ ಸೂಜಿ ಹಿಡಿದು ಹೊಲಿಯುತ್ತಾ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರು ಒಂದೇ ಒಂದು ತಪ್ಪು ಹೊಲಿಗೆಯನ್ನು ಹೊಲಿದಿಲ್ಲ. ಅವರ ತೀಕ್ಷ್ಣ ದೃಷ್ಟಿ ಮತ್ತು ಬೆರಳುಗಳ ಮಾಂತ್ರಿಕತೆ ಇಂದಿಗೂ ಜೀವಂತವಾಗಿದೆ. ಅವರು ನಮ್ರತೆಯಿಂದ ಹೇಳುತ್ತಾರೆ, “ತ್ಯಾತ್ ಕಾಯ ವಿಸಾರನಾರ್ ಬಾಲಾ? ತ್ಯಾತ್ ಕಾಯ್ ವಿದ್ಯಾ ಆಹೆ? [ಇದರಲ್ಲಿ ಮರೆಯುವಂತಹದ್ದು ಏನಿದೆ? ಇದಕ್ಕೆ ಯಾವ ದೊಡ್ಡ ಕೌಶಲ ಬೇಕು]"
ಇತರರಿಗೆ, ತನುಬಾಯಿ ಈ ಒಂದು ಸಲಹೆಯನ್ನು ಮಾತ್ರ ನೀಡಿದ್ದಾರೆ: "ಏನೇ ಆಗಲಿ, ನೆಹ್ಮಿ ಪ್ರಮಾಣಿಕ್ ರಹಾವ [ಜೀವನವನ್ನು ಪ್ರಾಮಾಣಿಕವಾಗಿ ಜೀವಿಸಿ]." ಉತ್ತಮವಾದ ಹೊಲಿಗೆಯು ಅನೇಕ ಮಡಿಕೆಗಳನ್ನು ಒಟ್ಟಿಗೆ ಇರಿಸುತ್ತದೆ, ಅವರು ತಮ್ಮ ಇಡೀ ಜೀವನವನ್ನು ಕುಟುಂಬವನ್ನು ಒಟ್ಟಿಗೆ ಇರಿಸುವಲ್ಲಿ ಕಳೆದರು. "ಪೂರ್ಣ ಆಯುಷ್ಯ ಮೇ ಶಿವತ್ ಗೆಲೆ [ನಾನು ನನ್ನ ಇಡೀ ಜೀವನವನ್ನು ಕೇವಲ ಹೊಲಿಗೆಯಲ್ಲಿ ಕಳೆದಿದ್ದೇನೆ]."

ತನುಬಾಯಿ ಈ ಕೌದಿಯನ್ನು ಎರಡು ತಿಂಗಳಲ್ಲಿ ಹೊಲಿದಿದ್ದಾರೆ, ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ

9 ಸೀರೆಗಳು, 216 ಠಿಘಲ್‌ಗಳು ಮತ್ತು 97,800 ಹೊಲಿಗೆಗಳಿಂದ ಮಾಡಲ್ಪಟ್ಟಿರುವ ಈ ಸುಂದರವಾದ 6.8 x 6.5 ಅಡಿಯ ವಾಕಲ್ 7 ಕಿಲೋ ತೂಕವಿದೆ
ಈ ಸ್ಟೋರಿ ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಕುರಿತ ಸರಣಿಯ ಭಾಗವಾಗಿದೆ, ಮತ್ತು ಇದು ಮೃಣಾಲಿನಿ ಮುಖರ್ಜಿ ಫೌಂಡೇಶನ್ ಬೆಂಬಲಿತವಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು