ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ಕುದುರೆಯ ಲಗಾಮು ಹಿಡಿದಿದ್ದ ರಾಣಿ ವೇಲು ನಾಚಿಯಾರ್‌ ಸ್ಥಬ್ಧಚಿತ್ರವು ಈ ಬಾರಿ ಚೆನ್ನೈನಲ್ಲಿ ನಡೆದ ತಮಿಳುನಾಡಿನ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಫೋಟೊ ತೆಗೆಯಲ್ಪಟ್ಟ ಮತ್ತು ಮಾತನಾಡಲ್ಪಟ್ಟ ಐತಿಹಾಸಿಕ ವ್ಯಕ್ತಿಗಳ ಸ್ಥಬ್ಧಚಿತ್ರಗಳಲ್ಲಿ ಒಂದಾಗಿತ್ತು. ತಮಿಳುನಾಡಿನ ಖ್ಯಾತ ಐತಿಹಾಸಿಕ ವ್ಯಕ್ತಿಗಳಾದ ವಿ.ಓ. ಚಿದಂಬರಂ ಪಿಳ್ಳೈ, ಸುಬ್ರಮಣ್ಯ ಭಾರತಿ ಮತ್ತು ಮರುಟ್ಟು ಸಹೋದರರಂತಹ ಇತರ ತಮಿಳು ದಂತಕತೆಗಳ ಟ್ಯಾಬ್ಲೋದಲ್ಲಿ ಈ ರಾಣಿಯೂ ಸ್ಥಾನ ಪಡೆದಿದ್ದಳು.

'ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳುನಾಡು' ಎನ್ನುವ ವಿಷಯದಡಿ ಇದೇ ಟಾಬ್ಲೋವನ್ನು, ತಮಿಳುನಾಡಿನ ಪ್ರತಿನಿಧಿಯಾಗಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಲು ಪ್ರಸ್ತಾಪ ಕಳುಹಿಸಲಾಗಿತ್ತಾದರೂ ಕೇಂದ್ರ ಸರಕಾರದ ʼ ತಜ್ಞರ ʼ ಸಮಿತಿಯು ಅದನ್ನು ತಿರಸ್ಕರಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಪ್ರಧಾನಿಯವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿಕೊಂಡರಾದರೂ ಅವರು ಅದನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಕೊನೆಗೆ ಇದನ್ನು ಚೆನೈನಲ್ಲಿ ನಡೆದ ರಾಜ್ಯ ಸರ್ಕಾರದ ಗಣರಾಜ್ಯೋತ್ಸವದ ಪರೇಡಿನಲ್ಲಿ ಪ್ರದರ್ಶಿಸಲಾಯಿತು ಮತ್ತು ಈ ಬಾರಿ ಈ ಟ್ಯಾಬ್ಲೋ ಜನಾಕರ್ಷಣೆಯ ಕೇಂದ್ರವಾಗಿತ್ತು.

ಕೇಂದ್ರದ ʼತಜ್ಞರʼ ಸಮಿತಿಯು ಇತರ ವಿಷಯಗಳ ಟಿಪ್ಪಣಿಯೊಡನೆ, ಈ ಟ್ಯಾಬ್ಲೋದಲ್ಲಿರುವ ಕೆಲವು ವ್ಯಕ್ತಿಗಳು “ರಾಷ್ಟ್ರೀಯ ವೀಕ್ಷಕರಿಗೆ ಅಪರಿಚಿತ,” ಎಂದು ಹೇಳಿತ್ತು. ಆದರೆ ಅಕ್ಷಯ ಕೃಷ್ಣಮೂರ್ತಿಯವರು ಖಂಡಿತಾ ತಜ್ಞರ ಈ ಮಾತುಗಳನ್ನು ಒಪ್ಪಲಿಕ್ಕಿಲ್ಲ. ಅವರು ಹೇಳುವಂತೆ ಟ್ಯಾಬ್ಲೋದಲ್ಲಿದ್ದ ಒಬ್ಬರು ವ್ಯಕ್ತಿಯೊಡನೆ ತೀರಾ ವೈಯಕ್ತಿಕ ಎನ್ನಿಸುವಂತಹ ಬಂಧವಿದೆ. ಅವರೆಂದರೆ: ವೇಲು ನಾಚಿಯಾರ್‌, ಈಕೆ ತಮಿಳುನಾಡಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಶಿವಗಂಗೈ ಪ್ರ್ಯಾಂತ್ಯವನ್ನು (ಪ್ರಸ್ತುತ ತಮಿಳುನಾಡಿನ ಒಂದು ಜಿಲ್ಲೆ) ಆಳಿದವರು.

“11ನೇ ತರಗತಿಯಲ್ಲಿದ್ದಾಗ ಸಂಗೀತ ನಾಟಕದಲ್ಲಿ ವೇಲು ನಾಚಿಯಾರ್‌ ಪಾತ್ರ ಮಾಡಿದ್ದು ನನ್ನ ಬದುಕಿನ ಟರ್ನಿಂಗ್‌ ಪಾಯಿಂಟ್‌ ಆಗಿತ್ತು,” ಎನ್ನುತ್ತಾರಾಕೆ.

“ಅದು ನನ್ನ ಪಾಲಿಗೆ ನಟಿಸುವುದು ಮತ್ತು ಕುಣಿಯುವುದಷ್ಟೇ ಆಗಿರಲಿಲ್ಲ,” ಎಂದು ವಿವರಿಸುತ್ತಾರೆ ಅಕ್ಷಯ, ಆ ನೃತ್ಯನಾಟಕದ ಉದ್ದಕ್ಕೂ ಬಂದ ರಾಣಿಯ ಬದುಕಿನ ವಿವರಗಳು, ಆಕೆಯ ಶೌರ್ಯ ಅವರ  ಅನುಭವಕ್ಕೆ ದಕ್ಕಿತ್ತು. ಅಂದು ಅಂತರ ಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತರಬೇತಿ ಹೊಂದಿರುವ ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವ ಅಕ್ಷಯರಿಗೆ ಆರೋಗ್ಯ ಸರಿಯಿರಲಿಲ್ಲ. ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತು ಖಾತರಿಯಿರಲಿಲ್ಲ. ಅಷ್ಟು ಬಳಲಿದ್ದ ಅವರು ಅಂದು ತನ್ನ ಜೀವಮಾನದ ಶ್ರೇಷ್ಟ ಪ್ರದರ್ಶನಗಳಲ್ಲೊಂದನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸಿದ್ದರು.

ವೇದಿಕೆಯಿಂದ ಕೆಳಗಿಳಿಯುವ ಹೊತ್ತಿಗೆ ಅಕ್ಷಯಗೆ ಜ್ಞಾನ ತಪ್ಪಿತ್ತು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸಲೈನ್‌ ಡ್ರಿಪ್‌ ಹಾಕಲಾಗಿತ್ತು. “ಅಂದು ನಾವು ಎರಡನೇ ಸ್ಥಾನವನ್ನು ಪಡೆದಿದ್ದೆವು, ನಾನು ಕೈಯಲ್ಲಿನ ಐವಿ ಲೈನ್ಸ್‌ ಜೊತೆಯಲ್ಲೇ ವೇದಿಕೆಗೆ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದೆ. ಈ ಘಟನೆಯು ಅವರಿಗೆ ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಡುವುದನ್ನು ಕಲಿಸಿತ್ತು. ಅಂದಿನಿಂದ ಆಕೆ “ಧೈರ್ಯಶಾಲಿಯಾಗಿ” ಹೊರಹೊಮ್ಮಿದರು. ನಂತರ ಕಾರು ಮತ್ತು ಬೈಕ್‌ ಚಲಾಯಿಸುವುದನ್ನೂ ಕಲಿತರು.

Tamil Nadu's tableau for the Republic Day parade, with Rani Velu Nachiyar (left), among others. The queen is an inspiration for Akshaya Krishnamoorthi
PHOTO • Shabbir Ahmed
Tamil Nadu's tableau for the Republic Day parade, with Rani Velu Nachiyar (left), among others. The queen is an inspiration for Akshaya Krishnamoorthi
PHOTO • Shabbir Ahmed

ಗಣರಾಜ್ಯೋತ್ಸವ ಮೆರವಣಿಗೆಗೆಂದು ತಯಾರಿಸಲಾದ ತಮಿಳುನಾಡಿನ ಟ್ಯಾಬ್ಲೋ, ಇದರಲ್ಲಿ ರಾಣಿ ವೇಲು ನಾಚಿಯಾರ್ (ಎಡಕ್ಕೆ) ಹಾಗೂ ಇತರರ ಪ್ರತಿಕೃತಿಗಳಿದ್ದವು. ಇವರಲ್ಲಿ ರಾಣಿ ವೇಲು ನಾಚಿಯಾರ್ ಅಕ್ಷಯ ಕೃಷ್ಣಮೂರ್ತಿಯವರಿಗೆ ಸ್ಫೂರ್ತಿ

ಅಕ್ಷಯ ಅವರ ಕುಟುಂಬದಲ್ಲೇ ಮೊದಲ ಪದವೀಧರೆ, ಮತ್ತು ಅವರು ಉದ್ಯಮಿ, ಪರಿವರ್ತನಕಾರರು ಹಾಗೂ ಮೋಟಿವೇಷನಲ್‌ ಸ್ಪೀಕರ್‌ ಕೂಡಾ ಹೌದು.

ಮತ್ತು ಇದೆಲ್ಲವೂ ಆಗಿರುವ ಅವರಿಗೆ ಕೇವಲ 21 ವರ್ಷ.

ಅಕ್ಷಯ ಪ್ರಸ್ತುತ ತಮಿಳುನಾಡಿನ ಈ ರೋಡ್‌ ಜಿಲ್ಲೆಯ ಸತ್ಯಮಂಗಲಮ್ ಬಳಿಯ ಅರಿಯಪ್ಪಮ್‌ ಪಾಳ್ಯದಲ್ಲಿ ತನ್ನ ಪೋಷಕರು, ತಮ್ಮ, ಚಿಕ್ಕಮ್ಮ, ಒಂದು ನಾಯಿ ಮತ್ತು ಹಲವಾರು ಗಿಳಿಗಳೊಡನೆ (budgerigars or common parakeets, ಉದ್ದ ತೋಕೆಯ ಸಣ್ಣ ಗಿಳಿ) ಬದುಕುತ್ತಿದ್ದಾರೆ. ತಮಿಳು ನಾಡಿನಲ್ಲಿ ಸಣ್ಣ ಚುಕ್ಕಿಯಂತಿರುವ ಈ ಊರನ್ನು ಒಂದು ಭಾರತದ ಭೂಪಟದಲ್ಲಿ ಎದ್ದು ಕಾಣುವ ಊರನ್ನಾಗಿ ಮಾಡಿಸುವುದು ಈ ಬ್ಯಾಚುಲರ್‌ ಆಫ್‌ ಬ್ಯುಸಿನೆಸ್‌ ಅಡ್ಮಿನಿಸ್ಸಟ್ರೇಷನ್‌ (ಬಿಬಿಎ) ಪದವೀಧರೆಯ ಕನಸು.

ಕೊಯಮತ್ತೂರು, ಕರೂರು ಮತ್ತು ತಿರುಪ್ಪೂರು ಸೇರಿದಂತೆ ತಮಿಳುನಾಡಿನ ಈ ಇಡೀ ವಲಯವು ಮೊದಲಿನಿಂದಲೂ ಉದ್ಯಮಶೀಲತೆಯ ಪ್ರಭಾವಶಾಲಿ ಇತಿಹಾಸವನ್ನು ಹೊಂದಿದೆ. ಇಂತಹ ಐತಿಹಾಸಿಕ ವಲಯಕ್ಕೆ ಸೇರಿದ ಅಕ್ಷಯರ ತಂದೆ ತಾಯಿ 10ನೇ ತರಗತಿಗೆ ಶಾಲೆ ಬಿಟ್ಟಿದ್ದರಾದರೂ ಅವರ ಮಗಳು ಇಂದು ಉದಯೋನ್ಮುಖ ಯುವ ಉದ್ಯಮಿಯಾಗುವ ಮೂಲಕ ಇಲ್ಲಿನ ಇತಿಹಾಸದ ಜೊತೆ ಹೆಜ್ಜೆಯಿಡತೊಡಗಿದ್ದಾರೆ.

"ನನ್ನ ವಯಸ್ಸೇ ನನಗಿರುವ ಅನುಕೂಲ ಮತ್ತು ಅನಾನುಕೂಲವಾಗಿದೆ," ಎಂದು ಅಕ್ಷಯ ನಕ್ಕರು, ಅಕ್ಟೋಬರ್ 2021ರಲ್ಲಿ ʼಪರಿʼಯ ಪರವಾಗಿ ಅವರ ಭೇಟಿಗೆಂದು ಅರಿಶಿನ ಬೆಳೆಗಾರ ತಿರು ಮೂರ್ತಿ ಅವರ ಹೊಲಕ್ಕೆ ಭೇಟಿ ನೀಡಿದ ನಂತರ ನಾವು ಅವರ ಕೋಣೆಯಲ್ಲಿ ಕುಳಿತು ಚಹಾ ಹೀರುತ್ತಾ ಮತ್ತು ಬಜ್ಜಿ ತಿನ್ನುತ್ತಾ ಮಾತನಾಡುತ್ತಿದ್ದೆವು. ಅಂದಿನ ಭೇಟಿ ಅವಿಸ್ಮರಣೀಯವಾಗಿತ್ತು. ಅಕ್ಷಯ ತನ್ನ ಸಣ್ಣ ಕೂದಲನ್ನು ಮುಖದಿಂದ ಸರಿಸುತ್ತಾ, ತನ್ನ ದೊಡ್ಡ, ಸುಂದರವಾದ ಕನಸುಗಳನ್ನು ನಮ್ಮೊಡನೆ ವಿವರವಾಗಿ ಹಂಚಿಕೊಳ್ಳುತ್ತಿದ್ದರು.

ಅವರ ನೆಚ್ಚಿನ ಉಕ್ತಿಯೊಂದು ಕೂಡಾ ಅದನ್ನೇ ಧ್ವನಿಸುತ್ತದೆ: “ನಿಮ್ಮ ನಾಳಿನ ಕನಸುಗಳನ್ನು ಇಂದೇ ಬದುಕಲು ಅದರ ಕೆಲಸವನ್ನು ಈಗಲೇ ಆರಂಭಿಸಿ.” ಅವರು ಈ ಮಾತನ್ನು ತಾನು ಪ್ರೇರಕ ಭಾಷಣ ಮಾಡಲು ಹೋಗುವ ಕಾಲೇಜುಗಳಲ್ಲಿ ತಪ್ಪದೆ ಹೇಳುತ್ತಾರೆ. ಅವರು ಇದನ್ನು ತಮ್ಮ ಬದುಕಿಗೂ, ವ್ಯವಹಾರಕ್ಕೂ ಆಳವಡಿಸಿಕೊಂಡಿದ್ದಾರೆ. ತಮ್ಮ ಹೊಸ ಬ್ರಾಂಡ್‌ ಆರಂಭಿಸುವಾಗ ಅದಕ್ಕೆ ʼಸುರುಕುಪೈ ಫುಡ್ಸ್‌ʼ ಎಂದು ಹೆಸರಿಟ್ಟಿದ್ದರು. ಸುರುಕುಪೈ ಎನ್ನುವುದು ಎಲೆಸಂಚಿಗೆ ತಮಿಳಿನಲ್ಲಿ ಇರುವ ಹೆಸರು. ಇದು ಹಳೆಯ ಮಧುರ ನೆನಪು, ಮಿತವ್ಯಯ ಮತ್ತು ಸುಸ್ಥಿರತೆಯನ್ನು ಒಂದೇ ಪದದಲ್ಲಿ ಸೆರೆಹಿಡಿದಿಡುತ್ತದೆ.

ಏನನ್ನಾದರೂ  ಸಾಧಿಸಲೇಬೇಕೆನ್ನುವ ಅವರ ಈ ಅದಮ್ಯ ಛಲ ಇಂದು ನಿನ್ನೆಯದೇನಲ್ಲ, ಹಾಗೆಯೇ ತೀರಾ ಅನೀರಿಕ್ಷಿತವೂ ಅಲ್ಲ. “ನಾನೂ, ನನ್ನ ಸ್ನೇಹಿತರೂ ಸೇರಿ ಉಳಿಯಿನ್‌ ಒರುವಮ್ (ಶಿಲ್ಪಿ ಬಳಸುವ ಉಳಿ) ಎನ್ನುವ ಟ್ರಸ್ಟ್‌ ಒಂದನ್ನು ಕಾಲೇಜಿನಲ್ಲಿದ್ದಾಗಲೇ ಆರಂಭಿಸಿದ್ದೆವು. ಇದೊಂದು ವಿದ್ಯಾರ್ಥಿಗಳಿಂದ ನಡೆಸಲ್ಪಡುವ ಟ್ರಸ್ಟ್‌ ಆಗಿದ್ದು ನಮ್ಮಂತೆಯೇ ಸಣ್ಣ ಪಟ್ಟಣಗಳಿಂದ ಬರುವ ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಮುಂದೆ ಬರಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. 2025ರ ಒಳಗೆ 2,025 ನಾಯಕರನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ.” ಇದು ಮಹಾತ್ವಾಕಾಂಕ್ಷೆಯಂತೆ ಕಾಣಬಹುದು, ಆದರೆ ಅಕ್ಷಯ ಎಂದರೇನೇ ಮಹಾತ್ವಾಕಾಂಕ್ಷೆ. ಅವರು ಇರುವುದೇ ಹಾಗೆ.

Akshaya in Thiru Murthy's farm in Sathyamangalam. She repackages and resells the turmeric he grows
PHOTO • M. Palani Kumar

ಸತ್ಯಮಂಗಲಂನಲ್ಲಿರುವ ತಿರು ಮೂರ್ತಿ ಅವರ ಹೊಲದಲ್ಲಿ ಅಕ್ಷಯ. ಅವರು, ತಿರುಮೂರ್ತಿ ಬೆಳೆಯುವ ಅರಿಶಿನವನ್ನು ಪುನಃ ಪ್ಯಾಕೇಜಿಂಗ್‌ ಮಾಡಿ ಮಾರಾಟ ಮಾಡುತ್ತಾರೆ

ಅಕ್ಷಯಗೆ ತಾನು ಉದ್ಯಮಿಯಾಗಬೇಕೆಂಬ ಕುರಿತು ಸ್ಪಷ್ಟತೆಯಿತ್ತಾದರೂ, ಅವರ ಪದವಿ ಮುಗಿಯಲು ಕೆಲ ದಿನಗಳಿರುವಾಗ, 2020ರಲ್ಲಿ ಆರಂಭಗೊಂಡ ಲಾಕ್‌ಡೌನ್‌ ಅವರ ಆಯ್ಕೆಗಳನ್ನು ತೀವ್ರವಾಗಿ ಸೀಮಿತಗೊಳಿಸಿತು. ಅದೇ ಸಮಯದಲ್ಲಿ ಅವರು ಉಪ್ಪುಪಳ್ಳಂ ಎನ್ನುವ ಊರಿನ ಸಾವಯವ ಬೇಸಾಯಗಾರ ತಿರುಮೂರ್ತಿಯವರನ್ನು ಭೇಟಿಯಾಗಿದ್ದು. ತಿರುಮೂರ್ತಿ ಅಕ್ಷಯರ ಪೋಷಕರ ಮನೆಬಳಕೆಯ ವಸ್ತುಗಳ ಅಂಗಡಿಯ ಗ್ರಾಹಕರು ಮತ್ತು ಅವರ ಸ್ನೇಹಿತರೂ ಆಗಿದ್ದರು. “ಅಪ್ಪ ಕೆಸೆಟ್‌ ಅಂಗಡಿ ಇಟ್ಟಿದ್ದ ಕಾಲದಿಂದಲೂ ಅವರು ಪರಸ್ಪರ ಪರಿಚಿತರಾಗಿದ್ದರು” ಎಂದು ಅಕ್ಷಯ ನೆನಪಿಸಿಕೊಳ್ಳುತ್ತಾರೆ.

ತಾನು ʼಅಂಕಲ್‌ʼ ಎಂದು ಕರೆಯುವ ತಿರು ಲಾಭದಾಯಕ ಅರಿಶಿನ ವ್ಯವಹಾರವನ್ನು ನಡೆಸುತ್ತಿದ್ದರು.  ಅವರು ತನ್ನ ಬೆಳೆಯ ಮೌಲ್ಯವರ್ಧನೆ ಮಾಡಿ, ನೇರವಾಗಿ ಗ್ರಾಹಕರಿಗೆ ಮಾರುತ್ತಿದ್ದರು. ಅಕ್ಷಯರಿಗೆ ಅದನ್ನು ತಾನು ಪುನಃ ಪ್ಯಾಕ್‌ ಮಾಡಿ ಮಾರಿದರೆ ಹೇಗೆನ್ನುವ ಯೋಚನೆ ಮೂಡಿತು. ಇದಕ್ಕೆ ತಿರುವವರೂ “ಎಡುತು ಪಣ್ಣುಂಗ” (ತೆಗೆದುಕೊಂಡು ಮಾಡಿ) ಎಂದು ಹುರಿದುಂಬಿಸಿದರು. “ಅಂಕಲ್‌ ತುಂಬಾ ಸಕಾರತ್ಮವಾಗಿ ಬೆಂಬಲಿಸಿದ್ದರು,” ಎಂದು ಅಕ್ಷಯ ನಗುತ್ತಾರೆ. ಮತ್ತು ಇದರೊಂದಿಗೆ ಸುರುಕ್ಕು ಪೈ ಫೂಡ್ಸ್‌ ಸಂಸ್ಥೆಯು ಜನಿಸಿತು.

ತನ್ನ ಹೊಸ ಕಂಪನಿಯೊಂದಿಗೆ ಭಾಗವಹಿಸಿದ ಮೊದಲ ಪ್ರದರ್ಶನವು ಭರವಸೆದಾಯಕವಾಗಿತ್ತು. ಟ್ಯಾನ್ ಫುಡ್ '21 ಎಕ್ಸ್ ಪೋ' ಎಂದು ಕರೆಯಲ್ಪಡುವ ಇದು ಫೆಬ್ರವರಿ 2021ರಲ್ಲಿ ಮಧುರೈಯಲ್ಲಿ ನಡೆದ ಭವ್ಯ ಕಾರ್ಯಕ್ರಮವಾಗಿತ್ತು. ಎರಡು ಸಾವಿರಕ್ಕೂ ಹೆಚ್ಚು ಜನರು ಅವರ ಅಂಗಡಿಗೆ ಭೇಟಿ ನೀಡಿದರು. ಜನರ  ಈ ಪ್ರತಿಕ್ರಿಯೆಯಿಂದ ಮತ್ತು ನಂತರ ಮಾರುಕಟ್ಟೆ ಸಂಶೋಧನೆಯ ಮೂಲಕ - ಬ್ರಾಂಡಿಂಗ್ ಮತ್ತು ಪ್ಯಾಕೇಜಿಂಗ್ ನ ಪ್ರಾಮುಖ್ಯತೆಯನ್ನು ಅಕ್ಷಯ ಅರ್ಥಮಾಡಿಕೊಂಡರು.

"ಗ್ರಾಹಕರು ನಮ್ಮ ಬ್ರಾಂಡ್ ಹೆಸರಿನೊಂದಿಗೆ ವೈಯಕ್ತಿಕವೆನ್ನಿಸುವಂತಹ ಬಾಂಧವ್ಯವನ್ನು ಹೊಂದಿದ್ದರು, ಜೊತೆಗೆ ಇದು ನವೀನವಾಗಿತ್ತು" ಎಂದು ಅಕ್ಷಯ ಹೇಳುತ್ತಾರೆ. ಅಲ್ಲಿಯವರೆಗೆ, ಅರಿಶಿನವನ್ನು ಪ್ಲಾಸ್ಟಿಕ್ ಪ್ಯಾಕೇಟುಗಳಲ್ಲಿ ಮಾತ್ರವೇ ಮಾರಾಟ ಮಾಡಲಾಗುತ್ತಿತ್ತು. ಕಾಗದದ ಚೀಲದಲ್ಲಿ, ಎಲೆಯಡಿಕೆ ಸಂಚಿಯಂತಹ ಚೀಲದಲ್ಲಿ ಯಾರೂ ಅದನ್ನು ನೋಡಿರಲಿಲ್ಲ!" ಎಫ್‌ಎಂಸಿಜಿ ದೈತ್ಯರು ಅಥವಾ ಬೊಟಿಕ್ ಸಾವಯವ ಅಂಗಡಿಗಳು ಇವರ ಸರಳ ಕಲ್ಪನೆಯ ಬಗ್ಗೆ ಯೋಚಿಸಿರಲಿಲ್ಲ. ಅಕ್ಷಯ ಇಲ್ಲಿ ಗೆದ್ದಿದ್ದರು ಮತ್ತು ಅವರಿಗೆ ಇನ್ನಷ್ಟು ಗೆಲುವಿನ ಹಂಬಲವಿತ್ತು.

ತನ್ನ ವ್ಯವಹಾರವನ್ನು ಬೆಳೆಸಲು, ಅಕ್ಷಯ ಅನೇಕ ಜನರು ಮತ್ತು ಸಂಸ್ಥೆಗಳ ಸಲಹೆಯನ್ನು ಪಡೆದಿದ್ದಾರೆ. ಅವರಲ್ಲಿ, ಅವರ ಮಾರ್ಗದರ್ಶಕರಾದ ಡಾ.ಎಮ್‌. ನಾಚ್ಚಿಮುತ್ತು ಮತ್ತು ಪೋಟನ್ ಸೂಪರ್ ಫುಡ್ಸ್‌ನ ಷಣ್ಮುಗ ಸುಂದರಂ ಪ್ರಮುಖರು. ಮತ್ತು ಮಧುರೈ ಅಗ್ರಿ ಬಿಸಿನೆಸ್ ಇನ್ ಕ್ಯುಬೇಶನ್ ಫೋರಂ (ಎಂಎಬಿಐಎಫ್) ಟ್ರೇಡ್ ಮಾರ್ಕ್ ಮತ್ತು ಎಫ್ಎಸ್ಎಸ್ಎಐ ಪ್ರಮಾಣೀಕರಣವನ್ನು ಪಡೆಯುವ ವಿಷಯದಲ್ಲಿ ಸಹಾಯ ಮಾಡಿತು.ಅಂದಹಾಗೆ, ಅಕ್ಷಯ ತನಗೆ ಬಿಡುವಿದ್ದಾಗಲೆಲ್ಲ ಸ್ವಯಂಸ್ಫೂರ್ತಿ ನೀಡಬಲ್ಲ ಪುಸ್ತಕಗಳನ್ನು ಕೂಡಾ ಓದುತ್ತಾರೆ. ಅವರು ಹಾಗೆ ಓದಿದ ಇತ್ತೀಚಿನ ಪುಸ್ತಕದ ಹೆಸರು: ಅಟಿಟ್ಯೂಡ್‌ ಈಸ್‌ ಎವೆರಿಥಿಂಗ್.

Akshaya's Surukupai Foods products on display in Akshaya Home Appliances, the store owned by her parents
PHOTO • M. Palani Kumar

ಅಕ್ಷಯ ಅವರ ಸುರುಕುಪೈ ಫುಡ್ಸ್ ಉತ್ಪನ್ನಗಳು‌, ಅವರ ಹೆತ್ತವರ ಒಡೆತನದ ಅಂಗಡಿಯಾದ ಅಕ್ಷಯ ಹೋಮ್‌ ಅಪ್ಲೈನ್ಸಸ್‌ನಲ್ಲಿ ಪ್ರದರ್ಶನಕ್ಕಿಟ್ಟಿರುವುದು

"ನನ್ನ ಬಿಬಿಎ ಕೋರ್ಸ್ ನನಗೆ ವ್ಯವಹಾರವನ್ನು ಆರಂಭಿಸಲು ಮತ್ತು ನಡೆಸಲು ಜ್ಞಾನ ಅಥವಾ ಹೊಸ ಸಾಧ್ಯತೆಗಳನ್ನು ಎದುರಿಗಿಡಲಿಲ್ಲ" ಎಂದು ಅವರು ಹೇಳುತ್ತಾರೆ. ಅವರು ಶಿಕ್ಷಣ ವ್ಯವಸ್ಥೆಯ ಕುರಿತು ದೊಡ್ಡ ಮಟ್ಟದಲ್ಲೇ ಬೇಸರವನ್ನು ವ್ಯಕ್ತಪಡಿಸುತ್ತಾರೆ. "ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಬ್ಯಾಂಕ್ ವಹಿವಾಟುಗಳನ್ನು ನಡೆಸುವ ಕುರಿತು ಏಕೆ ಕಲಿಸುವುದಿಲ್ಲ? ಬಿಬಿಎಯಲ್ಲಿ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಹೇಳಿಕೊಡಬಹುದಲ್ಲವೆ? ಎಚ್‌ಒಡಿ ಮತ್ತು ಶಿಕ್ಷಕರಿಗೆ ಸಹ ನೈಜ ಪ್ರಪಂಚದ ಅನುಭವವಿಲ್ಲದೆ ಹೋದರೆ ಹೇಗೆ?"

ಈಗ ಅವರು ಶಿಕ್ಷಣದಿಂದ ದೊರೆಯದೆ ಹೋದ ಕಲಿಕೆಯನ್ನು ಸ್ವಯಂ ಕಲಿಯುತ್ತಿದ್ದಾರೆ. “ನಾನು ಕಲಿಯಬೇಕಿರುವುದು ಬಹಳವಿದೆ.”

ಅದನ್ನು ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ, ಅವರು ಪ್ರತಿದಿನ ಮಾಡಬೇಕಿರುವ ಕೆಲಸಗಳ ಪಟ್ಟಿಯನ್ನು ಬರೆದಿಟ್ಟುಕೊಳ್ಳುತ್ತಾರೆ. ಆ ಕೆಲಸಗಳು ಒಂದೊಂದೇ ಮುಗಿದಂತೆ ಹೊಡೆದುಹಾಕುತ್ತಾರೆ. "ನಾನು ಒಂದು ಸಣ್ಣ ದಿನಚರಿಯಲ್ಲಿ ವಿಷಯಗಳನ್ನು ಬರೆದಿಟ್ಟುಕೊಳ್ಳುತ್ತೇನೆ. ದಿನದ ಅಂತ್ಯದ ವೇಳೆಗೆ ನಾನು 'ಹೊಡೆದು ಹಾಕದೆ' ಉಳಿಸಿದ ಕೆಲಸವನ್ನು ನಾನು ಮುಂದಿನ ದಿನದ ಪುಟದಲ್ಲಿ ಮತ್ತೆ ಗುರುತಿಸುತ್ತೇನೆ." ಇದು ಅವರಲ್ಲಿ ಕೆಲಸ ಮುಗಿಸದ "ಅಪರಾಧದ ಭಾವನೆ"ಯನ್ನು ಹುಟ್ಟಿಹಾಕುತ್ತದೆ ಮತ್ತು ಈ ಮೂಲಕ ಆ ಕುರಿತು ಪ್ರಯತ್ನ ಮಾಡುತ್ತಾರೆ.

ಅವರ ವ್ಯಾವಹಾರಿಕ ಪ್ರಯತ್ನಗಳು ಅವರ ಸ್ನಾತಕೋತ್ತರ ಪದವಿಯ ಮೂರು ಸೆಮಿಸ್ಟರ್‌ಗಳಿಗೆ ಬೇಕಾಗುವಷ್ಟು ಹಣವನ್ನು ದುಡಿದುಕೊಟ್ಟವು. ಅವರು ಆಯ್ದುಕೊಂಡಿರುವ ಕೋರ್ಸ್‌ ಕೂಡಾ ಆಸಕ್ತಿದಾಯಕವಾಗಿದೆ. "ನಾನು ದೂರ ಶಿಕ್ಷಣದ ಮೂಲಕ ನನ್ನ ಸ್ನಾತಕೋತ್ತರ ಪದವಿನ್ನು ಸಾಮಾಜಿಕ ಕಾರ್ಯದ ವಿಷಯದಲ್ಲಿ ಮಾಡುತ್ತಿದ್ದೇನೆ. ಪ್ರತಿ ಸೆಮಿಸ್ಟರ್‌ನ ಶುಲ್ಕವು 10,000 ರೂಪಾಯಿಗಳು ಮತ್ತು ಅದರೊಡನೆ ಪರೀಕ್ಷಾ ಶುಲ್ಕವಾಗಿ ಇನ್ನೂ 5,000 ಸೇರಿಕೊಳ್ಳುತ್ತದೆ. ಅಪ್ಪ ಆರಂಭದಲ್ಲಿ ನನಗೆ 5,000 ನೀಡಿದರು. ಉಳಿದಂತೆ ಎಲ್ಲವೂ ನನ್ನ ಸ್ವಂತ ಹಣ," ಎಂದು ಅವರು ವಿವರಿಸುತ್ತಾರೆ, ಇದನ್ನು ಹೇಳುವಾಗ ಅವರ ದನಿಯಲ್ಲಿ ಶಾಂತವಾದ ಹೆಮ್ಮೆಯಿತ್ತು.  ಈ ಉಳಿದ ಹಣವು ಅವರು 10,000 ಸಾವಿರ ಬಂಡವಾಳದೊಡನೆ ಆರಂಭಿಸಿದ ವ್ಯವಹಾರವು 40,000 ರೂಪಾಯಿಗಳ ಲಾಭವನ್ನು ತಂದುಕೊಟ್ಟಿತ್ತು.

ಗ್ರಾಹಕರು ಅವರಿಂದ ಉತ್ಪನ್ನಗಳನ್ನು 'ಬಲ್ಕ್' ಆಗಿ ಖರೀದಿಸುತ್ತಾರೆ. ಮತ್ತು ಅಕ್ಷಯ ಗ್ರಾಹಕರು ಬಯಸಿದಂತೆ ಉತ್ಪನ್ನವನ್ನು ವಿನ್ಯಾಸಗೊಳಿಸಿ ನೀಡುತ್ತಾರೆ. ಅವರ ಕಂಪನಿಯ ಬಹುಬೇಡಿಕೆಯ ಉತ್ಪನ್ನವಾಗಿರುವ ಸಾವಯವ ಅರಿಶಿನ ಉತ್ಪನ್ನಗಳಿಂದ ತುಂಬಿದ ಗಿಫ್ಟ್‌ ಹ್ಯಾಂಪರ್ ಮದುವೆಯ ಆಹ್ವಾನದೊಡನೆ ನೀಡುವ ಉಡುಗೊರೆಯಾಗಿ ಮಾರ್ಪಟ್ಟಿದೆ. ಗ್ರಾಹಕರಿಗೆ ಇಂತಹ ಅನುಕೂಲ ಒದಗಿಸುತ್ತಿರುವವರಲ್ಲಿ ತಾನೇ ಮೊದಲಿಗಳು ಎನ್ನುವುದು ಅವರ ನಂಬಿಕೆ. "ನಾನು ಅವುಗಳಿಗೆ 50ರಿಂದ 100 ರೂಪಾಯಿಗಳ ತನಕ ಬೆಲೆ ಇಡುತ್ತೇನೆ. ಪ್ರತಿಯೊಂದು ಹ್ಯಾಂಪರ್‌ನಲ್ಲಿ ಸಂಚಿ, ಅರಿಶಿನ ಪುಡಿಯ ಸ್ಯಾಶೆಗಳು, 5 ಗ್ರಾಂ ಬೀಜಗಳ ಪ್ಯಾಕೆಟ್ ಗಳು (ಸ್ಥಳೀಯ ತಳಿಯ ಬದನೆಕಾಯಿ, ಟೊಮೆಟೊ, ಬೆಂಡೆಕಾಯಿ, ಮೆಣಸಿನಕಾಯಿ ಮತ್ತು ಪಾಲಕ್) ಮತ್ತು ಧನ್ಯವಾದ ತಿಳಿಸುವ ಕಾರ್ಡ್ ಇರುತ್ತದೆ.

"ಜನರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಮದುವೆಗೆ ಆಹ್ವಾನಿಸಲೆಂದು ಹೋದಾಗ, ಅವರು ಆಹ್ವಾನದ ಜೊತೆಗೆ ಈ ಗಿಫ್ಟ್‌ ಹ್ಯಾಂಪರ್‌ ಅನ್ನು ಸಹ ನೀಡುತ್ತಾರೆ. ಇದು ಶುಭಕರವಾದು, ಆರೋಗ್ಯಕರ ಮತ್ತು ಪರಿಸರ ಸ್ನೇಹಿ" ಎಂದು ಅಕ್ಷಯ ಹೇಳುತ್ತಾರೆ. ಗ್ರಾಹಕರು ಅಲಂಕಾರಿಕ ಹ್ಯಾಂಪರ್ ಬಯಸಿದಾಗ, ಮತ್ತು ಅದಕ್ಕಾಗಿ ಅವರು ಪಾವತಿಸಲು ಸಿದ್ಧರಿದ್ದಾಗ, ಸೊಗಸಾದ ಗಾಜಿನ ಬಾಟಲಿಗಳಲ್ಲಿ ಹೆಚ್ಚಿನ ಪ್ರಮಾಣದ ಅರಿಶಿನ ಪುಡಿಯನ್ನು ಪ್ಯಾಕ್ ಮಾಡಿ ಕೊಡುತ್ತಾರೆ. ಜೊತೆಗೆ ಕೆಲವು ಮದುವೆಗಳಿಗೆ ಈ ದೊಡ್ಡ ಪ್ಯಾಕೇಜ್ ಅನ್ನು ಪೂರೈಸಿದ್ದಾರೆ, ಬಾಯಿಮಾತಿನ ಪ್ರಚಾರದ ಮೂಲಕವೇ ಅವರಿಗೆ ಹೆಚ್ಚಿನ ಗ್ರಾಹಕರು ದೊರೆಯುತ್ತಿದ್ದಾರೆ. "ಇತ್ತೀಚೆಗೆ ಕೊನೆಯದಾಗಿ ಪೂರೈಸಿದ ಆರ್ಡರ್‌ ಎಂದರೆ 400 ರೂಪಾಯಿಗಳಿಗೊಂದರಂತೆ 200 ಇನ್ನೂರು ಹ್ಯಾಂಪರುಗಳು."

Left: Akshaya with a surukupai, or drawstring pouch, made of cotton cloth. Right: The Surukupai Foods product range
PHOTO • M. Palani Kumar
Left: Akshaya with a surukupai, or drawstring pouch, made of cotton cloth. Right: The Surukupai Foods product range
PHOTO • M. Palani Kumar

ಎಡಕ್ಕೆ: ಹತ್ತಿಬಟ್ಟೆಯಿಂದ ಮಾಡಿದ ಸುರುಕ್ಕುಪೈ ಅಥವಾ ಸಂಚಿಯೊಡನೆ ಅಕ್ಷಯ. ಬಲ: ಸುರುಕ್ಕು ಪೈ ಫುಡ್ಸ್‌ನ ಉತ್ಪನ್ನ ಶ್ರೇಣಿ

ಸತ್ಯಮಂಗಲಂಗೆ ಭೇಟಿ ನೀಡಿದ ತಿಂಗಳುಗಳ ನಂತರ, ಅಕ್ಷಯ ಮತ್ತು ನಾನು ಫೋನ್‌ ಮೂಲಕ ಮಾತನಾಡುತ್ತಿದ್ದೆವು. ಆಗ ಕರೆಯನ್ನು ಅರ್ಧದಲ್ಲೇ ಕಡಿತಗೊಳಿಸುತ್ತಾ: "ಬ್ಯಾಂಕ್ ಮ್ಯಾನೇಜರ್ ಕರೆ ಮಾಡುತ್ತಿದ್ದಾರೆ," ಎಂದಿದ್ದರು. ಒಂದು ಗಂಟೆಯ ನಂತರ ಮತ್ತೆ ಕರೆ ಮಾಡಿ, ಅವರು ತಪಾಸಣಾ ಭೇಟಿಗೆ ಬಂದಿದ್ದಾಗಿ ವಿವರಿಸಿದ್ದರು. ಪ್ರಸ್ತುತ ಅಕ್ಷಯರಿಗೆ ಸಾರ್ವಜನಿಕ ವಲಯದ ಬ್ಯಾಂಕೊಂದು 10 ಲಕ್ಷ ರೂ. ಸಾಲ ಮಂಜೂರು ಮಾಡಿದೆ. ಇದಕ್ಕಾಗಿ ಅವರು ಸ್ವತಃ ಅರ್ಜಿ ಸಲ್ಲಿಸಿ, ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿದ್ದರು. ಮತ್ತು ಈಗ ಶೇಕಡಾ ಒಂಬತ್ತರ ಬಡ್ಡಿ ದರದಲ್ಲಿ ಪೂರಕ ಅಡಮಾನಗಳಿಲ್ಲದೆ ಸಾಲವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅರಿಶಿನ ಪುಡಿಯನ್ನು ಆರೋಗ್ಯಕರವಾಗಿ ಪುಡಿ ಮಾಡುವ ಮತ್ತು ಪ್ಯಾಕ್ ಮಾಡುವ ಯಂತ್ರವನ್ನು ಹೊಂದಿರುವ ಘಟಕವೊಂದನ್ನು ಸ್ಥಾಪಿಸಲು ಹಣವನ್ನು ಬಳಸಿಕೊಂಡಿದ್ದಾರೆ. ಅವರು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಅದೂ ಆದಷ್ಟು ಬೇಗನೆ.

“ಈಗಾಗಲೇ ನನ್ನ ಬಳಿ ಒಂದು ಟನ್‌ ಅರಿಶಿನ ಪುಡಿಗೆ ಬೇಡಿಕೆಯಿದೆ. ಹೀಗಾಗಿ ನಾನು ಕಮರ್ಷಿಯಲ್‌ ವ್ಯಾಪಾರಿಗಳಿಂದ ಅರಿಶಿನ ಖರೀದಿಸಿದ್ದೇನೆ.” ಎನ್ನುತ್ತಾರೆ ಅಕ್ಷಯ. ಇದನ್ನು ತಯಾರಿಸುವ ಯಂತ್ರವೂ ಒಂದಷ್ಟು ಜಟಿಲವಾಗಿದೆ. “ನಾನು ಕಾಲೇಜಿನಲ್ಲಿ ಜಾಹಿರಾತು ಮಾಡುವುದನ್ನು ಕಲಿತಿದ್ದೆ. ಆದರೆ ಸೆನ್ಸಾರ್‌ ಹೊಂದಿರುವ ಪೂರ್ಣ ಸ್ವಯಂಚಾಲಿತ ಯಂತ್ರಗಳು ಮತ್ತು ಪೇಪರ್‌ ಪುಲ್ಲಿಂಗ್‌ ಹಾಗೂ ರೋಲ್‌ ಪ್ಲೇಸಿಂಗ್‌ ಕುರಿತು ಏನೂ ತಿಳಿದಿರಲಿಲ್ಲ. ಅದನ್ನು ಸರಿಯಾಗಿ ಮಾಡದೆ ಹೋದರೆ ಒಂದಿಡೀ ಬ್ಯಾಚ್‌ ವ್ಯರ್ಥವಾಗಿಬಿಡುತ್ತದೆ.”

ನಮ್ಮ ಎಣಿಕೆಗಳೇ ತಪ್ಪಾಗಿಬಿಡಬಹುದಾದಂತಹ ವಿಷಯಗಳನ್ನೂಅವರು ತಿಳಿಸುತ್ತಾರೆ. ಆದರೆ ರಿಸ್ಕ್‌ ತೆಗೆದುಕೊಳ್ಳದೆ ಏನನ್ನಾದರೂ ಸಾಧಿಸಲು ಸಾಧ್ಯವಿಲ್ಲವೆನ್ನುವುದು ಅವರ ನಂಬಿಕೆ. ಅವರ ಪ್ರಕಾರ ಅವರು ಪ್ರಸ್ತುತ ಹೊಂದಿರುವ ಯಂತ್ರ ಮತ್ತು ಇಬ್ಬರು ಅರೆಕಾಲಿಕ ನೌಕರರೊಡನೆ ಸೇರಿ ಮುಂದಿನ ದಿನಗಳಲ್ಲಿ ತಿಂಗಳಿಗೆ 2 ಲಕ್ಷ ರೂಪಾಯಿಗಳ ವಹಿವಾಟು ನಡೆಸುವ ನಂಬಿಕೆಯನ್ನು ಹೊಂದಿದ್ದಾರೆ. ಇದು ಅವರು ತನ್ನ ಕಾಲೇಜು ದಿನಗಳಲ್ಲಿ ನೋಡಿದ ನೋಡಿದ ಆದಾಯಕ್ಕಿಂತಲೂ ಬಹಳ ದೊಡ್ಡ ಮೊತ್ತ.

ಆದರೂ, ಅಕ್ಷಯ ಮಾಡುತ್ತಿರುವ ಕೆಲಸವು ಅವರ ವೈಯಕ್ತಿಕ ಲಾಭವನ್ನು ಮೀರಿದ್ದು. ಅವರ ಪ್ರಯತ್ನವು ಕೃಷಿ ವ್ಯವಹಾರದಲ್ಲಿರುವ ಪಾರಂಪರಿಕ ರಚನೆಯನ್ನು ಒಡೆದು ಕಟ್ಟುತ್ತದೆ. ಪ್ರಸ್ತುತ ಈ ಕ್ಷೇತ್ರದಲ್ಲಿ ಪುರುಷ ಮತ್ತು ಕಾರ್ಪೊರೇಟ್‌ ಪ್ರಾಬಲ್ಯವು ಉತ್ತುಂಗದಲ್ಲಿದೆ.

"ಬೆಳೆ ಬೆಳೆಯುವ ಸ್ಥಳದ ಪಕ್ಕದಲ್ಲೇ, ಹೈಪರ್ ಲೋಕಲ್ ಮಟ್ಟದಲ್ಲಿ ಅರಿಶಿನ ಸಂಸ್ಕರಣೆ ನಡೆಯುತ್ತಿದೆಯೆನ್ನುವುದೇ ದೊಡ್ಡ ಸುದ್ದಿ" ಎಂದು ಕೃಷಿ ಜನನಿ (ಲಾಭದಾಯಕ ಮತ್ತು ಪುನರುತ್ಪಾದಕ ಕೃಷಿ ವಿಜ್ಞಾನಕ್ಕಾಗಿ ಕೆಲಸ ಮಾಡುವ ಕಂಗಾಯಂ ಮೂಲದ ಸಾಮಾಜಿಕ ಉದ್ಯಮ) ಸ್ಥಾಪಕಿ ಮತ್ತು ಸಿಇಒ ಉಷಾ ದೇವಿ ವೆಂಕಟಾಚಲಂ ಹೇಳುತ್ತಾರೆ. "ಜೊತೆಗೆ, ಕೃಷಿ ಸಂಸ್ಕರಣಾ ಕಂಪನಿಗಳಲ್ಲಿ ಯುವತಿಯರು ಅಷ್ಟಾಗಿ ಮುಂಚೂಣಿಯಲ್ಲಿಲ್ಲ. ವಿಶೇಷವಾಗಿ ಕೊಯ್ಲಿನ ನಂತರದ ಸಂಸ್ಕರಣೆಯಲ್ಲಿ ಮಹಿಳೆಯರ ಪಾತ್ರವನ್ನು ಯಾಂತ್ರೀಕರಣ ಮತ್ತು ಕೇಂದ್ರೀಕರಣದ ಹೆಸರಿನಲ್ಲಿ ನಿಧಾನವಾಗಿ ಇಲ್ಲವಾಗಿಸಲಾಗಿದೆ."

ಆಹಾರ ಸರಬರಾಜು ಸರಪಳಿಗಳ ಸಮಸ್ಯೆಗಳಲ್ಲಿ ಒಂದೆಂದರೆ, ಉಷಾ ಮುಂದುವರಿದು ಹೇಳುತ್ತಾರೆ, "ಅವು ಎಷ್ಟು ಕೇಂದ್ರೀಕೃತವಾಗಿವೆ ಮತ್ತು ಅನೇಕ ಹುಚ್ಚು ಸಂಸ್ಕರಣಾ ನಿರ್ಧಾರಗಳನ್ನು ತೆಗೆದುಕೊಂಡಿವೆಯೆಂದರೆ, ಯುಎಸ್‌ನಲ್ಲಿ ಬೆಳೆದ ಸೇಬುಗಳು ಬಳಕೆಗಾಗಿ ಭಾರತಕ್ಕೆ ಹೋಗುವ ಮೊದಲು ಹೊಳಪು ನೀಡಲು ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತವೆ. ಮಹಾಮಾರಿಯ ನಂತರದ ಜಗತ್ತಿನಲ್ಲಿ ಇದು ಅಸಮರ್ಥನೀಯವಾಗಿದೆ. ಮತ್ತು ಈ ಸಾರಿಗೆಯು ಹವಾಮಾನ ಬಿಕ್ಕಟ್ಟಿಗೆ ಎಷ್ಟು ಕೊಡುಗೆ ನೀಡುತ್ತಿದೆಯೆನ್ನುವುದನ್ನು ಎನ್ನುವುದನ್ನು ಯೋಚಿಸಿದರೆ ವಿಷಯ ಇನ್ನೂ ಗಂಭೀರವಾಗಿದೆ." ಉದಾಹರಣೆಗೆ ವಿದ್ಯುತ್ ಮತ್ತು ಇಂಧನಗಳ ಬಳಕೆಯಲ್ಲಿ.

The biodegradable sachets in which Akshaya sells turmeric under her Surukupai Foods brand. She says she learnt the importance of branding and packaging early in her entrepreneurial journey
PHOTO • Akshaya Krishnamoorthi
The biodegradable sachets in which Akshaya sells turmeric under her Surukupai Foods brand. She says she learnt the importance of branding and packaging early in her entrepreneurial journey
PHOTO • Akshaya Krishnamoorthi
The biodegradable sachets in which Akshaya sells turmeric under her Surukupai Foods brand. She says she learnt the importance of branding and packaging early in her entrepreneurial journey
PHOTO • Akshaya Krishnamoorthi

ಅಕ್ಷಯ ತನ್ನ ಸುರುಕ್ಕು ಪೈ ಫುಡ್ಸ್ ಬ್ರಾಂಡ್ ಅಡಿಯಲ್ಲಿ ಅರಿಶಿನವನ್ನು ಮಾರಾಟ ಮಾಡುವ ಮಣ್ಣಿನಲ್ಲಿ ಕರಗಬಲ್ಲ ಸ್ಯಾಶೆಗಳು. ತನ್ನ ಉದ್ಯಮಶೀಲ ಪ್ರಯಾಣದ ಆರಂಭದಲ್ಲಿ ಬ್ರಾಂಡಿಂಗ್ ಮತ್ತು ಪ್ಯಾಕೇಜಿಂಗ್ ನ ಪ್ರಾಮುಖ್ಯತೆಯನ್ನು ಕಲಿತಿದ್ದೇನೆ ಎಂದು ಅವರು ಹೇಳುತ್ತಾ ರೆ

ಅಕ್ಷಯ ಹೊಂದಿರುವ ದೀರ್ಘಕಾಲೀನ ಯೋಜನೆಗಳು ಅದೆಲ್ಲವನ್ನು ಪರಿಹರಿಸದಿರಬಹುದು. ಆದರೆ ಅರಿಶಿನ ಚಾಕೊಲೇಟುಗಳು ಮತ್ತು ಅರಿಶಿನ ಚಿಪ್ಸ್ ತಯಾರಿಸುವ ಅವರ ವಿಭಿನ್ನ ಕಲ್ಪನೆಯು ಸಾಂಪ್ರದಾಯಿಕ ಮಾರುಕಟ್ಟೆಯನ್ನು ಅಲುಗಾಡಿಸುವುದು ಖಚಿತವಾಗಿದೆ. ಕನಿಷ್ಠ ಸ್ಥಳೀಯವಾಗಿಯಾದರೂ ಪ್ರಭಾವಶಾಲಿಯಾಗಬಹುದೆಂದು ಅವರು ನಂಬಿದ್ದಾರೆ.

ಇದು ಯಶಸ್ವಿ ಉತ್ಪನ್ನವಾಗಬಹುದೇ, ಇದರ ರುಚಿ ಜನರಿಗೆ ಹಿಡಿಸಬಹುದೇ ಎಂದು ನಾನು ಕೇಳಿದಾಗ, “ನನಗನ್ನಿಸುವಂತೆ ಗ್ರಾಹಕರು ಇದನ್ನು ಮೆಚ್ಚಿಕೊಳ್ಳಲಿದ್ದಾರೆ. ಈಗ ಜನರು ಪೆಪ್ಸಿ, ಕೋಕ್‌ ಕುಡಿಯುತ್ತಾರೆ ಜೊತೆಗೆ ನನ್ನಾರಿ ಶರ್ಬತ್‌ ಮತ್ತು ಪನೀರ್‌ ಸೋಡಾವನ್ನೂ ಬಯಸಿ ಕುಡಿಯುತ್ತಾರೆ. ಅರಿಶಿನದ ಉತ್ಪನ್ನಗಳು ಗಮನ ಸೆಳೆಯುತ್ತವೆ ಮತ್ತು ಅವು ಆರೋಗ್ಯಕ್ಕೂ ಒಳ್ಳೆಯದು” ಎಂದು ಅವರು ದೃಢವಿಶ್ವಾಸದಿಂದ ಹೇಳುತ್ತಾರೆ.

2025ರ ವೇಳೆಗೆ ವ್ಯಾಪಕವಾಗಿ ಹಿಗ್ಗುವ ನಿರೀಕ್ಷೆಯಲ್ಲಿರುವ ಗ್ರಾಮೀಣ ಮಾರುಕಟ್ಟೆಗಳ ಮೇಲೆ ತಮ್ಮ ಹಿಡಿತವನ್ನೂ ಸಾಧಿಸುವ ಗುರಿಯನ್ನು ಹೊಂದಿದ್ದಾರೆ. “ಅದಕ್ಕಾಗಿ ಉತ್ಪನ್ನಗಳು ಕೈಗೆಟುಕುವ ದರದಲ್ಲಿರಬೇಕು, ಹಾಗೂ ಸಣ್ಣ ಪ್ರಮಾಣದಲ್ಲಿರಬೇಕು. ದೊಡ್ಡ ಪ್ರಮಾಣದ ಸಾವಯವ ಅರಿಶಿನವನ್ನು ಹೊಂದಿರುವ ಪೊಟ್ಟಣಗಳು ದುಬಾರಿಯಾಗುತ್ತವೆ - 250 ಗ್ರಾಂ ಒಂದಕ್ಕೆ 165 ರೂಪಾಯಿಗಳಷ್ಟು ಖರ್ಚು ಬರುತ್ತದೆ. ಹೀಗಾಗಿ ನಾನು ಇದನ್ನು ಒಂದು ಬಳಕೆಯ ಪೊಟ್ಟಣವನ್ನಾಗಿ ಮಾಡಿದ್ದೇನೆ."

ಅವರು ಮೇಲೆ ವಿವರಿಸಿದ್ದು, ತನ್ನ ಪೋಷಕರ ಅಂಗಡಿಯಲ್ಲಿಟ್ಟಿದ್ದ 6 ಗ್ರಾಮ್‌ ತೂಕದ ಅರಿಶಿನದ ಫೇಸ್‌ಪ್ಯಾಕ್‌ ಪೊಟ್ಟಣದ 12 ಪೇಪರ್‌ ಸ್ಯಾಶೆಗಳನ್ನು ತೋರಿಸುತ್ತಾ. ಇದರ ಬೆಲೆ ಪ್ರತಿ ಶ್ಯಾಸೆಗೆ 10 ರೂಪಾಯಿಗಳು. ಗಿರಾಕಿಗಳು ಬಯಸಿದಲ್ಲಿ ಈ 12ರ ಸೆಟ್‌ ಒಂದನ್ನು 120 ರೂಪಾಯಿಗಳಿಗೆ ಖರೀದಿಸಬಹುದು. ಅಥವಾ ಒಂದೇ ಪೊಟ್ಟಣವನ್ನು ಕೂಡಾ 10 ರೂಪಾಯಿಗಳಿಗೆ ಖರೀದಿಸಬಹುದು.” ದೊಡ್ಡ ಸಂಚಿಯನ್ನು ಒರಟಾದ ಹತ್ತಿ ಬಟ್ಟೆ ಬಳಸಿ ಮಾಡಲಾಗಿದ್ದು. ಸಣ್ಣ ಪೊಟ್ಟಣಗಳನ್ನು ಕಾಗದಿಂದ ತಯಾರಿಸಲಾಗಿದ್ದು, ತೇವಾಂಶದ ಮಟ್ಟವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ತೆಳುವಾದ ಪ್ಲಾಸ್ಟಿಕ್‌ ಲೇಯರ್ ಹಾಕಲಾಗಿದ್ದು ಇವು ಮಣ್ಣಿನಲ್ಲಿ ಕರಗುವ ಗುಣ ಹೊಂದಿವೆ.

ಇವುಗಳ ಉತ್ಪಾದನೆ ಮತ್ತು ಉತ್ಪನ್ನಗಳ ಫಾರ್ಮುಲಾ ತಿರು ಅವರದ್ದು. ಅವುಗಳಿಗೆ ವೈಟ್‌ ಲೇಬಲಿಂಗ್‌ ಮಾಡುವುದು ಅಕ್ಷಯ. ಅವರು ಇದರಿಂದ ಆಗುವ ಉಪಯೋಗಗಳನ್ನು ವಿವರಿಸುತ್ತಾರೆ. “ಇದರಿಂದ ವೇಸ್ಟೇಜ್‌ ಕಡಿಮೆಯಾಗುತ್ತದೆ, ತೇವಾಂಶ ನಷ್ಟಗೊಳ್ಳುವುದಿಲ್ಲ. ಮತ್ತು ಬೆಲೆ 10 ರೂಪಾಯಿಯಾಗಿರುವುದರಿಂದ ಜನರು ಬಳಸಿ ನೋಡೋಣವೆಂದು ಕೊಳ್ಳುತ್ತಾರೆ.” ಅಕ್ಷಯ ನಿರಂತರ ಮಾತನಾಡುತ್ತಲೇ ಇರುತ್ತಾರೆ. “ನಾನು ದಣಿಯುವುದೇ ಇಲ್ಲ,” ಎನ್ನುತ್ತಾ ನಗುತ್ತಾರವರು.

ಅವರು ತನ್ನ ಪ್ರಯತ್ನಗಳಿಗೆ ಪೋಷಕರ ಬೆಂಬಲವನ್ನೂ ಹೊಂದಿದ್ದಾರೆ. ಅವರ ಮಧ್ಯಮ ಗಾತ್ರದ ಎರಡು ಮನೆಬಳಕೆಯ ವಸ್ತುಗಳ ಅಂಗಡಿಗಳೇ ಅವರ ಉತ್ಪನ್ನಗಳ ಮೊದಲ ಮಾರುಕಟ್ಟೆ. ಮತ್ತು ಅವರು ತಮ್ಮ ಮಗಳ ನಿರ್ಧಾರವನ್ನು ಮತ್ತು ಆಕೆಯ ಪ್ರಯತ್ನಗಳನ್ನು ಗೌರವಿಸುತ್ತಾರೆ. ಅಕ್ಷಯ ಮೊದಲ ಬಾರಿ ತನ್ನದೇ ವ್ಯವಹಾರದ ಪ್ರಯತ್ನದಲ್ಲಿದ್ದಾಗಲೇ ಅವರು ಬೆಂಬಲವಾಗಿ ನಿಂತಿದ್ದರು.

“I always have energy,” she says, laughing
PHOTO • M. Palani Kumar

'ನನ್ನ ಸದಾ ಉತ್ಸಾಹವಿರುತ್ತದೆ,' ಎಂದು ನಗುತ್ತಾರೆ ಅಕ್ಷಯ

ಒಂದೆರಡು ವರ್ಷಗಳ ಹಿಂದೆ ತನ್ನ ಮನೆದೇವರಿಗೆ ಮುಡಿ ಕೊಟಿದ್ದರಿಂದಾಗಿ ಜನರು ಆಕೆಯ ಕುರಿತು ಆಡಿಕೊಂಡಿದ್ದರು. ಆದರೆ ಅಕ್ಷಯರ ಹೆತ್ತವರು ಮಗಳೊಡನೆ ನಿಂತಿದ್ದರು ಮತ್ತು ಮತ್ತು ನೀನು ಸುಂದರವಾಗಿರುವೆ ಎಂದು ಹೇಳಿದ್ದರು. “ಪದೇಪದೇ ಆರೋಗ್ಯ ಕೆಡುತ್ತಿದ್ದ ಕಾರಣ ನಾನು ಕೂದಲನ್ನು ತೆಗೆಸಿದ್ದೆ. ನನಗೆ ಕೂದಲು ಕತ್ತರಿಸಿ ಅದನ್ನು ಕ್ಯಾನ್ಸರ್‌ ರೋಗಿಗಳೊಡನೆ ಹಂಚಿಕೊಳ್ಳುವ ಬಯಕೆಯಿತ್ತು. ಆದರೆ ನಂತರ ಅದು ಸಾಧ್ಯವಾಗಲಿಲ್ಲ. “ತಲೆ ಬೋಳಿಸಿಕೊಂಡಿದ್ದು ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು,” ಎನ್ನುತ್ತಾರವರು. “ನನ್ನ ಸೌಂದರ್ಯವೆನ್ನುವುದು ನನ್ನ ಕೂದಲಿನಲ್ಲಿಲ್ಲವೆನ್ನುವುದು ನನಗೆ ಅರಿವಾಯಿತು. ಮತ್ತು ನನ್ನ ಹೆತ್ತವರು ನನ್ನನ್ನು ಪ್ರೀತಿಸುತ್ತಾರೆನ್ನುವುದು ನನಗೆ ಇನ್ನಷ್ಟು ಖುಷಿ ಕೊಟ್ಟಿತು.”

ಮತ್ತು ಅವರು ಆಕೆಯ ಕನಸುಗಳಿಗೂ ಬೆಂಬಲವಾಗಿ ನಿಂತಿದ್ದಾರೆ. ಅವರ ಪದವಿ ಕಾಲೇಜಿನ 60 ಸಹಪಾಠಿಗಳಲ್ಲಿ ಬಹುತೇಕರಿಗೆ ಈಗಾಗಲೇ ಮದುವೆಯಾಗಿದೆ. “ಲಾಕ್‌ಡೌನ್‌ ಕಾರಣದಿಂದಾಗಿ ಅವರಲ್ಲಿ ಹೆಚ್ಚಿನವರಿಗೆ ಮದುವೆ ಮಾಡಿಸಲಾಗಿದೆ. ಕೆಲವರು ಕೆಲಸಕ್ಕೆ ಹೋಗುತ್ತಾರೆ. ಆದರೆ ಯಾರೂ ವ್ಯವಹಾರವನ್ನು ಪ್ರಾರಂಭಿಸಿಲ್ಲ.”

ಅಕ್ಷಯರ ಸಾಹಸಗಳು ಈ ಪರಿಸ್ಥಿತಿಯನ್ನು ಬದಲಿಸಬಹುದೆನ್ನುವುದು ಉಷಾದೇವಿ ವೆಂಕಟಾಚಲಮ್‌ ಅವರ ನಂಬಿಕೆ. “ವಾಸ್ತವವೆಂದರೆ ಈ ಪ್ರದೇಶದಲ್ಲಿ ಜನಿಸಿದ ಸಣ್ಣ ವಯಸ್ಸಿನ ಯುವತಿಯೊಬ್ಬಳು ಸ್ಥಳೀಯವಾಗಿ ಸಂಸ್ಕರಣಾ ಘಟಕವೊಂದನ್ನು ಸ್ಥಾಪಿಸಿ, ರಾಷ್ಟ್ರೀಯವಾಗಿ, ಜಾಗತಿವಾಗಿ ಬೆಳೆಯುವ ಮಹತ್ವಾಕಾಂಕ್ಷೆಯನ್ನು ಹೊಂದಿರುವುದೇ ನಿಜಕ್ಕೂ ಸ್ಫೂರ್ತಿದಾಯಕ ವಿಚಾರ,” ಎಂದು ಅವರು ಹೆಮ್ಮೆಯಿಂದ ವಿವರಿಸುತ್ತಾರೆ. “ಮತ್ತಿದು ಅವಳ ಗೆಳೆಯರಿಗೆ ಹೊಸ ಉಪಾಯಗಳು ಮತ್ತು ಸ್ಫೂರ್ತಿಯನ್ನು ನೀಡುತ್ತದೆ.”

ಪ್ರಸ್ತುತ ಅಕ್ಷಯರ ಮುಂದಿನ ಗುರಿ ಎಮ್‌ಬಿಎ ಪದವಿ ಗಳಿಸುವುದು. “ಹಲವರು ಮೊದಲು ಪದವಿ ಗಳಿಸಿ ವ್ಯವಹಾರ ಶುರು ಮಾಡುತ್ತಾರೆ ಆದರೆ ನನ್ನದು ಅದಕ್ಕೆ ವಿರುದ್ಧವಾದ ಪ್ರಯತ್ನ.” ಮತ್ತು ಅದು ತನಗೆ ಉಪಯೋಗಕ್ಕೂ ಬಂದಿದೆಯೆನ್ನುವುದು ಅವರ ನಂಬಿಕೆ. ಅವರು ತಮ್ಮ ಊರಿನಲ್ಲೇ ಉಳಿದು ಇಲ್ಲಿಯೇ ಬ್ರಾಂಡ್‌ ಅನ್ನು ಕಟ್ಟಿ ಬೆಳೆಸಬೇಕೆನ್ನುವ ಕನಸನ್ನು ಹೊಂದಿದ್ದಾರೆ. ಅವರು ವೆಬ್‌ಸೈಟ್‌ ಹೊಂದಿದ್ದು ಇನ್ಸ್ಟಾಗ್ರಾಂ ಮತ್ತು ಲಿಂಕ್ಡ್‌ಇನ್‌ಗಳಲ್ಲೂ ಸಕ್ರಿಯರಾಗಿದ್ದರೆ. ಅಲ್ಲಿ ರೆಸಿಪಿ ಪೋಸ್ಟ್‌ ಮಾಡುತ್ತಾರೆ. ಅಲ್ಲಿ ಅವರು ತಮ್ಮ ಪೋಸ್ಟ್‌ಗಳಲ್ಲಿ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುತ್ತಾರೆ. (ನಿರಂತರವಾಗಿ #turmericlatte ಎನ್ನುವುದನ್ನು ಬಳಸುವುದ ಜೊತೆ ಬೇರೆಯವುಗಳನ್ನೂ ಬಳಸುತ್ತಾರೆ). ಅವರು ಮುಂದಿನ ದಿನಗಳಲ್ಲಿ ಎಫ್‌ಪಿಒ ಮತ್ತು ರಫ್ತುದಾರರ ಜೊತೆಗೂ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದ್ದಾರೆ. “ರೈತರು ತಮ್ಮ ಹೊಲಗಳನ್ನು ನೋಡಿಕೊಂಡರೆ ಸಾಕು. ನಮ್ಮಂತವರು ಅವರೊಡನೆ ಸೇರಿ ಮಾರಾಟದ ವ್ಯವಸ್ಥೆಯನ್ನು ಬಲಪಡಿಸುತ್ತೇವೆ.” ಎನ್ನುತ್ತಾರೆ ಹೊಲ, ಮಾರುಕಟ್ಟೆ ಮತ್ತು ಮನೆಯ ನಡುವೆ ಇರುವ ಅತಿ ದೊಡ್ಡ ಕಂದರವನ್ನು ಇಲ್ಲವಾಗಿಸುತ್ತಿರುವ ಅಕ್ಷಯ.

ಅವರು ಗಟ್ಟಿಯಾದ ನಂಬಿಕೆಯೊಡನೆ ಹೇಳುತ್ತಾರೆ, “ಇಂದು ಯಶಸ್ಸೆನ್ನುವುದು ನೀವು ನಿಮ್ಮ ಕತೆಯನ್ನು ಹೇಗೆ ನಿರೂಪಿಸುತ್ತೀರಿ ಎನ್ನುವುದರ ಮೇಲೆ ನಿಂತಿದೆ.” ಜನರು ನಮ್ಮ ಉತ್ಪನ್ನವನ್ನು ಕೊಂಡಾಗ ಅದರೊಡನೆ ಸಿಗುವ ಸಂಚಿಯನ್ನು ಅವರು ಹಣ ಉಳಿಸಿಡಲು ಬಳಸುತ್ತಾರೆ. ಆ ಸಂಚಿಗಳು ಜನರಿಗೆ ನಮ್ಮ ಬ್ರಾಂಡಿನ ನೆನಪನ್ನು ಮತ್ತೆ ಮತ್ತೆ ತರುತ್ತವೆ ಹಾಗೂ ಅವರು ಅದನ್ನು ಖರೀದಿಸಲು ನಮ್ಮ ಬಳಿಗೆ ಮರಳುತ್ತಾರೆ.” ಹಾಗೂ ಇದೇ ರೀತಿಯಾಗಿ ತಮಿಳುನಾಡಿನ ಅರಿಶಿನವೆನ್ನುವುದು ದೂರ ದೂರದವರೆಗೂ ಪಯಣಿಸುತ್ತದೆ...

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ನಿಧಿ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯವನ್ನು ನೀಡಿರುತ್ತದೆ.

ಮುಖ್ಯ ಚಿತ್ರ: ಎಮ್‌. ಪಳನಿ ಕುಮಾರ್‌

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan
aparna.m.karthikeyan@gmail.com

Aparna Karthikeyan is an independent journalist, author and Senior Fellow, PARI. Her non-fiction book 'Nine Rupees an Hour' documents the disappearing livelihoods of Tamil Nadu. She has written five books for children. Aparna lives in Chennai with her family and dogs.

Other stories by Aparna Karthikeyan
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru