ತನ್ನ ತಂದೆಯ ವರ್ಷದ ದಿನದಂದು ಈ ಬಾರಿ ತಿರು ಸ್ವಲ್ಪ ಬೇರೆ ಮಾದರಿಯ ವಸ್ತುಗಳನ್ನು ಎಡೆಯಾಗಿ ಇಟ್ಟಿದ್ದರು. ಅವುಗಳಲ್ಲಿ ಹತ್ತು ಬಗೆಯ ಸಾಬೂನು, ಬೇರೆ ಬೇರೆ ಬಗೆಯ ತೆಂಗಿನೆಣ್ಣೆಗಳು ಮತ್ತು ಅವರ ಸ್ಟಾರ್‌ ಪ್ರೊಡಕ್ಟ್‌ ಆಗಿರುವ ಅರಿಶಿನ ಪುಡಿ ಸೇರಿದ್ದವು. ಇದರೊಂದಿಗೆ ಒಂದು ಚಿಪ್ಪು ಬಾಳೆಹಣ್ಣು, ಹೂವುಗಳು, ತೆಂಗಿನಕಾಯಿ ಇಟ್ಟು ಹಾರ ಹಾಕಿದ ತಂದೆ ಸುಂದರಮೂರ್ತಿಯವರ ಚಿತ್ರಕ್ಕೆ ಕರ್ಪೂರ ಬೆಳಗಿ ಅರ್ಪಿಸಿದ್ದರು.

“ಅಪ್ಪನಿಗೆ ಇದಕ್ಕಿಂತಲೂ ಒಳ್ಳೆಯ ಮರ್ಯಾದೆ ಇನ್ಯಾವುದಿದ್ದೀತು?” ಎನ್ನುವ ಪ್ರಶ್ನೆಯೊಡನೆ ಫೇಸ್‌ಬುಕ್ಕಿನಲ್ಲಿ ಅಪ್ಪನ ಫೋಟೊ ಹಾಕಿದ್ದರು. ತಿರುಮೂರ್ತಿಯವರ ಅಪ್ಪ ಈ ಮಂಜಲ್‌ (ಅರಿಶಿನ) ಕೃಷಿ ಸಾಕೆಂದು ಕೈಬಿಟ್ಟಿದ್ದರು. ಆದರೆ ತಿರುಮೂರ್ತಿ ಎಲ್ಲರೂ ಬೇಡವೆಂದರೂ ಹಟ ಕಟ್ಟಿ ಮಂಜಲ್‌ ಬೇಸಾಯ ಶುರು ಮಾಡಿದ್ದರು. “ಜನರು ಮಲ್ಲಿ[ಗೆ] ಬೆಳೆದರೆ ದಿನವೂ ಹಣ ಸಿಗುತ್ತದೆನ್ನುವ ಸಲಹೆ ಕೊಟ್ಟಿದ್ದರು. ಆದರೆ ನಾನು ಅವರುಗಳ ಮಾತು ಕೇಳದೆ ಅರಿಶಿನ ನೆಟ್ಟಾಗ ನನ್ನನ್ನು ನೋಡಿ ನಕ್ಕಿದ್ದರು.” ಎಂದು ನಗುತ್ತಾರೆ. ತಿರುಮೂರ್ತಿ ಜನರು ಹೇಳಿದ್ದ ಮಾತು ತಪ್ಪೆಂದು ಸಾಬೀತುಪಡಿಸಿದರು. ಅವರದು ಬಹಳ ಅಪರೂಪದ ಕತೆ. ಆ ಕತೆಯೇ ʼತಿರು ಮೂರ್ತಿಯ ಅರಿಶಿನ ವಿಜಯ.ʼ

43 ವರ್ಷದ ತಿರು ಮೂರ್ತಿಯವರು ತಮಿಳುನಾಡಿನ ಈರೋಡ್ ಜಿಲ್ಲೆಯ ಭವಾನಿಸಾಗರ್ ಬ್ಲಾಕ್‌ನ ಉಪ್ಪುಪಳ್ಳಮ್ ಕುಗ್ರಾಮದಲ್ಲಿ ತಮ್ಮ ಅಣ್ಣನೊಂದಿಗೆ ಜಂಟಿಯಾಗಿ ಹೊಂದಿರುವ 12 ಎಕರೆ ನೆಲದಲ್ಲಿ ಬೇಸಾಯ ಕಾಯಕ ಮಾಡಿಕೊಂಡಿದ್ದಾರೆ. ಅವರು ಅಲ್ಲಿ ಅರಿಶಿನ, ಬಾಳೆ ಮತ್ತು ತೆಂಗಿನಕಾಯಿ ಹೀಗೆ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಅವರು ಅವುಗಳನ್ನು ಸಗಟು ಮಾರಾಟ ಮಾಡುವುದಿಲ್ಲ. ಬೆಲೆಗಳ ಮೇಲೆ ತನಗೆ ನಿಯಂತ್ರಣವಿಲ್ಲದಿದ್ದಾಗ ಹಾಗೆ ಮಾರುವುದು ಅರ್ಥಹೀನವೆಂದು ಅವರು ಹೇಳುತ್ತಾರೆ. ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ, ದೊಡ್ಡ ವ್ಯಾಪಾರಿಗಳು, ಕಾರ್ಪೊರೇಟ್‌ಗಳು ಮತ್ತು ಸರ್ಕಾರಗಳು ಬೆಳೆಗಳ ದರಗಳನ್ನು ನಿಗದಿಪಡಿಸುತ್ತವೆ.

ಅಭಿವೃದ್ಧಿ ಹೊಂದುತ್ತಿರುವ ಅರಿಶಿನ ಮಾರುಕಟ್ಟೆಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಪಾಲುದಾರ ರಾಷ್ಟ್ರವಾಗಿದೆ. 2019ರಲ್ಲಿ ಬಾರತದ ರಫ್ತು $190 ಮಿಲಿಯನ್ ಮುಟ್ಟಿತು - ಅದು ಜಾಗತಿಕ ವ್ಯಾಪಾರದ ಶೇಕಡಾ 62.6ರಷ್ಟು. ಜೊತೆಗೆ ಭಾರತವು ಆಮದುದಾರ ರಾಷ್ಟ್ರ ಕೂಡಾ ಹೌದು. 11.3ರಷ್ಟು ಆಮದು ಮಾಡಿಕೊಳ್ಳುವ ಮೂಲಕ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಆಮದಿನ ಈ ಬಹುದೊಡ್ಡ ಏರಿಕೆಯು ಭಾರತೀಯ ಅರಿಶಿನ ಬೆಳೆಗಾರರ ಹಿತಾಸಕ್ತಿಗೆ ಧಕ್ಕೆ ತಂದಿದೆ .

ಈರೋಡಿನ ಸ್ಥಳಿಯ ಮಂಡಿಗಳು ಈಗಾಗಲೇ ಈ ಬೆಳೆಗಾರರ ಜೀವ ಹಿಂಡುತ್ತಿದ್ದಾರೆ. ದೊಡ್ಡ ವ್ಯಾಪಾರಿಗಳು ಮತ್ತು ಖರೀದಿದಾರರು ಇದರ ಬೆಲೆಯನ್ನು ನಿಗದಿಪಡಿಸುತ್ತಾರೆ. ಸಾವಯವ ಬೆಳೆಗಳಿಗೆಂದು ಬೇರೆ ಆದ್ಯತೆಯ ಬೆಲೆಯೇನೂ ಸಿಗುವುದಿಲ್ಲ. ಇವೆಲ್ಲದರ ಜೊತೆಗೆ ವರ್ಷದಿಂದ ವರ್ಷಕ್ಕೆ ಬೆಲೆಯ ಅಸ್ಥಿರತೆಯೂ ಬೆಳೇಗಾರರನ್ನು ಪೀಡಿಸುತ್ತಿದೆ. 2011ರಲ್ಲಿ ಈ ಬೆಳೆಯ ಬೆಲೆ ಕ್ವಿಂಟಾಲಿಗೆ 17,000 ರೂ. ಇದ್ದರೆ, ಮುಂದಿನ ವರ್ಷ, ಅದು ಆ ಬೆಲೆಯ ನಾಲ್ಕನೇ ಒಂದು ಭಾಗದಷ್ಟು ಕುಸಿಯಿತು . 2021ರ ಸರಾಸರಿ ಕ್ವಿಂಟಾಲ್ ಗೆ ಸುಮಾರು 7,000 ರೂ.

ಜಾಣ್ಮೆ, ಪರಿಶ್ರಮ ಮತ್ತು ಸೋಷಿಯಲ್‌ ಮೀಡಿಯಾ ಅಕೌಂಟ್‌ ಬಳಸಿಕೊಂಡು ತಿರು ಈ ಸಮಸ್ಯೆಗಳಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಮೌಲ್ಯವರ್ಧನೆಯ ಪ್ರಯತ್ನವು ಸಮಸ್ಯೆಗೆ ವ್ಯಾಪಕವಾದ ಉತ್ತರವಲ್ಲದಿದ್ದರೂ ಅವರಮಟ್ಟಿಗೆ ಇದು ದೊಡ್ಡ ಸಾಧನೆಯೇ ಹೌದು. 10 ರೂಪಾಯಿಗಳಿಗೆ ಮಾರಾಟವಾಗಬಹುದಾದ ಒಂದು ತೆಂಗಿನಕಾಯಿ ನನಗೆ ಅದರ ಮೂರು ಪಟ್ಟು ತಂದುಕೊಡುತ್ತದೆ. ಯಾಕೆಂದರೆ ನಾನು ಅದರಿಂದ ಎಣ್ಣೆ ತೆಗೆದು ಸಾಬೂನು ತಯಾರಿಸಿ ಮಾರುತ್ತೇನೆ. ಅರಶಿನದ ಕತೆಯೂ ಹೀಗೆಯೇ. ಅದನ್ನು ನಾನು ಒಂದೂವರೆ ಎಕರೆಯಲ್ಲಿ ಬೆಳೆಯುತ್ತೇನೆ. ಮಂಡಿಯಲ್ಲಿ 3,000 ಕಿಲೋ ಮಾರಿದರೆ ನನಗೆ ಸಾವಯವ ಅರಿಶಿನ ಕಿಲೋ ಒಂದಕ್ಕೆ ಸುಮಾರು 50 ರೂಪಾಯಿಗಳಷ್ಟು ನಷ್ಟವಾಗುತ್ತದೆ.”

Two types of turmeric grow in Thiru Murthy's fields at the foothills of the Sathyamangalam hills in Erode.
PHOTO • M. Palani Kumar
Thiru at home with his children and a relative’s son
PHOTO • M. Palani Kumar

ಎಡಕ್ಕೆ: ಈರೋಡಿನ ಸತ್ಯಮಂಗಲಂ ಬೆಟ್ಟಗಳ ತಪ್ಪಲಿನಲ್ಲಿರುವ ತಿರು ಮೂರ್ತಿಯವರ ಹೊಲಗಳಲ್ಲಿ ಎರಡು ರೀತಿಯ ಅರಿಶಿನ ಬೆಳೆಯಲಾಗುತ್ತದೆ. ಬಲ: ತಿರು ತನ್ನ ಮಕ್ಕಳು ಮತ್ತು ಸಂಬಂಧಿಯೊಬ್ಬರ ಮಗನೊಂದಿಗೆ ಮನೆಯಲ್ಲಿ

ಬೇಸಾಯಕ್ಕಾಗಿ ಸಾವಯವ ಮಾರ್ಗವನ್ನು ಆಯದುಕೊಳ್ಳುವುದು ಎಂದರೆ ರಾಸಾಯನಿಕ ವಿಧಾನದ ಬೇಸಾಯಕ್ಕಿಂತ ಹೆಚ್ಚಿನ ಖರ್ಚು ಎಂದರ್ಥ. ಆದರೂ ಅವರು ತನ್ನ ನೆರೆಹೊರೆಯ ಬೇಸಾಯಗಾರರಿಗಿಂತಲೂ ಸುಖವಾಗಿದ್ದಾರೆ.

ಈರೋಡ್ ನ ಸತ್ಯಮಂಗಲಂ ಶ್ರೇಣಿಯ ತಪ್ಪಲಿನಲ್ಲಿರುವ ಅವರ ಹೊಲವು ದೈವಿಕ ವಾತಾವರಣದ ಉದಾಹರಣೆಯಂತಿದೆ: ನೇರಳೆ ಬೆಟ್ಟಗಳ ಸಾಲು, ಅವುಗಳಲ್ಲಿ ಪ್ರತಿಯೊಂದೂ ಮಳೆ ಮೋಡಗಳ ರುಮಾಲೆಯನ್ನು ಧರಿಸಿ, ಪಚ್ಚೆ ಹೊಲಗಳ ಹಿಂದೆ ಎತ್ತರಕ್ಕೆ ಎದೆಯೆತ್ತಿ ನಿಂತಿವೆ. ಅವರ ಹೊಲದ ಅರಿಶಿನ ಸಸ್ಯಗಳು ಎತ್ತರಕ್ಕೆ ಬೆಳೆದು ನಿಂತಿದ್ದವು, ಅವುಗಳ ಅಗಲವಾದ ಎಲೆಗಳು ಹನಿಯುವ ಮಳೆ ಮತ್ತು ಅಕ್ಟೋಬರ್ ಸೂರ್ಯ ಎರಡರಲ್ಲೂ ತೊಯ್ದು ಹೊಳೆಯುತ್ತಿದ್ದವು. ಹೊಲದಲ್ಲಿ ಸಾಲಾಗಿ ನಿಂತ ತೆಂಗಿನ ಮರಗಳ ಮೇಲೆ ಸಿಂಪಿಗನ ಹಕ್ಕು ಗೂಡು ಕಟ್ಟುತ್ತವೆ; ಅವರು ಜೋರಾಗಿ ಚಿಲಿಪಿಲಿಗುಟ್ಟುತ್ತಾ, ಗರಿಗಳ ಮೇಲೆಲ್ಲಾ ಓಡಾಡುತ್ತಿರುವುದನ್ನು ನೋಡವುದು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಈ ಪರಿಸರದಲ್ಲಿ ಅವರು ಓರ್ವ ಬೇಸಾಯಗಾರನಾಗಿ ತನ್ನ ಕಷ್ಟಗಳನ್ನೆಲ್ಲ ಮರೆಯುತ್ತಾರೆ. ನಂತರ, ಅವರ ಗುಲಾಬಿ ಬಣ್ಣ ಬಳಿದ ಗೋಡೆ ಹೊಂದಿರುವ ಮನೆಯ ಬೂದು ಬಣ್ಣದ ಸಿಮೆಂಟ್‌ ನೆಲದ ಮೇಲೆ ಕುಳಿತು ತಮ್ಮ ಬದುಕಿನ ಕತೆಯನ್ನು ಹಂಚಿಕೊಳ್ಳಲಾರಂಭಿಸಿದರು, ಅವರ ತೊಡೆಯ ಮೇಲೆ ಕುಳಿತ ಅವರ ನಾಲ್ಕು ವರ್ಷದ ಮಗಳ ಕಾಲ್ಗೆಜ್ಜೆಯ ಘಲ್‌, ಘಲ್‌, ಘಲ್‌ ದನಿ ಅವರ ಕತೆಗೆ ಸಂಗೀತವನ್ನೊದಗಿಸುತ್ತಿತ್ತು...

“ನಾನು ಅದನ್ನು ಅರ್ಧ ಮತ್ತು ಒಂದು ಕೇಜಿ ಪೊಟ್ಟಣಗಳನ್ನಾಗಿ ಗಿರಾಕಿಗಳಿಗೆ ಮಾರಿದರೆ ಮಾತ್ರವೇ ಲಾಭ ನೋಡಬಹುದು, ಮತ್ತೆ ಸೋಪ್‌, ಎಣ್ಣೆ ಮತ್ತು‌ ಮಿಲ್ಕ್ ಡ್ರಿಂಕ್‌ಗಳು.” ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಅವರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡುತ್ತಾರೆ. ಇತರ ಅರಿಶಿನ ಬೆಳೆಗಾರರಂತೆ ಅವರೂ ತನ್ನ ಅರಿಶಿನವನ್ನು ಬೇಯಿಸಿ, ಒಣಗಿಸಿ ಪಾಲಿಶ್‌ ಮಾಡುತ್ತಾರೆ. ಆದರೆ ಉಳಿದ ರೈತರು ತಮ್ಮ ಉತ್ಪನ್ನಗಳಿಗೆ ಒಳ್ಳೆಯ ಬೆಲೆಗಾಗಿ ಕಾಯುತ್ತಾ ಸಂಗ್ರಹಿಸತೊಡಗುವಾಗ ಅಥವಾ ಮಂಡಿಯಲ್ಲಿ ಮಾರುವಾಗ ತಿರು ತಮ್ಮ ಫಸಲನ್ನು ಅವರ ಗೋದಾಮಿಗೆ ಸಾಗಿಸುತ್ತಾರೆ.

ನಂತರ ಅವರ ಅರಿಶಿನದ ʼಬಲ್ಬ್‌ʼ(ತಾಯಿ ಕಾಂಡ) ʼಫಿಂಗರ್ಸ್‌ʼ(ಕವಲುಗಳು/ಕೊಂಬುಗಳು) ಗಳನ್ನು ಸಣ್ಣ ಸಣ್ಣ ಬ್ಯಾಚುಗಳಲ್ಲಿ ಪುಡಿಯಾಗಿಸುತ್ತಾರೆ. ಅದರೊಡನೆ ಇನ್ನೊಂದಿಷ್ಟು ಉಪಾಯ ಬಳಸಿ ಅವರು ಅದರಿಂದ ಸೌಂದರ್ವರ್ಧಕಗಳು ಮತ್ತು ಮಾಲ್ಟ್‌ ಡ್ರಿಂಕ್ಸ್‌ ತಯಾರಿಸಿ ಮಾರುವ ಮೂಲಕ ಕಿಲೋವೊಂದಕ್ಕೆ 150 ರೂಪಾಯಿಗಳನ್ನು ಗಳಿಸುತ್ತಾರೆ.

“ಆದರೆ ನಾನು ಹಣವೆಲ್ಲವನ್ನೂ ಇರಿಸಿಕೊ‍ಳ್ಳುವುದಿಲ್ಲ,” ಎನ್ನುತ್ತಾರೆ. ಅದನ್ನು ಅವರು ತಾನು ಪ್ರೀತಿಸುವ ನೆಲದ ಮೇಲೆ ಹೂಡಿಕೆ ಮಾಡುತ್ತಾರೆ. ಅವರ ಹೊಲವು ಅವರ ಕುಟುಂಬವನ್ನಷ್ಟೇ ಸಲಹುವುದಿಲ್ಲ, ಜೊತಗೆ ಊರಿನ ಕೆಲವರಿಗೂ ಉದ್ಯೋಗವನ್ನು ಒದಗಿಸುತ್ತದೆ. “ಹೆಚ್ಚಿನ ಬೇಸಾಯದ ಕೆಲಸಗಳಿರುವ ಸಮಯದಲ್ಲಿ ಐದು ಪುರುಷರು ಮತ್ತು ಮೂವರು ಮಹಿಳೆಯರಿಗೆ ನನ್ನ ಹೊಲದಲ್ಲಿ ಕೆಲಸವಿರುತ್ತದೆ. ಅವರಿಗೆ 400 ಮತ್ತು 300 ರೂ. ಸಂಬಳ ಕೊಡುತ್ತೇನೆ. ಜೊತೆಗೆ ಟೀ ಮತ್ತು ಬೋಂಡಾ ಕೂಡಾ ಕೊಡುತ್ತೇವೆ. ಈಗಿನ ಎಕರೆಯ ಬೆಳೆ ವೆಚ್ಚವಾದ 40,000 ರೂಪಾಯಿಗಳು ಒಂದು ಕಾಲದಲ್ಲಿ ಇದರ ಹತ್ತನೇ ಒಂದು ಭಾಗದಷ್ಟಿದ್ದಿದ್ದು ನನಗೆ ನೆನಪಿದೆ. ಕಲೆಸದವರ ಬಳಿ ಹೇಳಿದರೆ ಅವರು ಪೆಟ್ರೋಲ್‌ ಲೀಟರಿಗೆ 100 ರೂಪಾಯಿ, ಕ್ವಾರ್ಟರ್‌ ಮದ್ಯ 140 ರೂಪಾಯಿಗಳಾಗಿವೆ ಎನ್ನುತ್ತಾರೆ..” ಎಂದು ಅವರು ನಗುತ್ತಾರೆ. ಆದರೆ ಇದೆಲ್ಲದರಿಂದ ಅರಿಶಿನದ ಬೆಲೆಯೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ.

*****

ರಾಗಿ ಹಸನು ಮಾಡುವ ಹೆಂಗಸರ ಹಾಡು
ಮೇವಿಗೆಂದು ಬರುವ ಹಂದಿ ಓಡಿಸಲೆಂದು
ಡೋಲು ಬಡಿಯುವ ಮರಗೆಣಸು, ಅರಿಶಿನದ ರೈತರು
ಈ ಎಲ್ಲ ಸದ್ದು ಮೊಳಗುತ್ತಿದೆ ಬೆಟ್ಟದೆಡೆಗಳಿಂದ

- ಸಂಗಮ ಕಾಲದ, ಮಲೈಪಾಡು ಕದಮ್‌ ನ ಹಾಡು

Trays with the lots of turmeric fingers and bulbs displayed at an auction in the regulated market in Perundurai, near Erode
PHOTO • M. Palani Kumar
Trays with the lots of turmeric fingers and bulbs displayed at an auction in the regulated market in Perundurai, near Erode
PHOTO • M. Palani Kumar

ಈರೋಡ್ ಬಳಿಯ ಪೆರುಂದುರೈನ ನಿಯಂತ್ರಿತ ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ ಪ್ರದರ್ಶಿಸಲಾದ ಸಾಕಷ್ಟು ಅರಿಶಿನ ಫಿಂಗರ್‌ಗಳು ಮತ್ತು ಬಲ್ಬ್‌ಗಳಿಂದ ತುಂಬಿರುವ ಟ್ರೇಗಳು

ತಮಿಳುನಾಡು ಮತ್ತು ಅರಿಶಿನದ ಸಂಬಂಧವು 2,000 ವರ್ಷಗಳಷ್ಟು ಹಿಂದಿನದು ಎಂದು ತಮ್ಮ OldTamilPoetry.com ಬ್ಲಾಗಿನಲ್ಲಿ ಆ ಸಾಲುಗಳನ್ನು ಅನುವಾದಿಸಿರುವ ಬರಹಗಾರ ಚೆಂದಿಲ್ ನಾಥನ್ ಹೇಳುತ್ತಾರೆ. "ಸಂಗಮ್ ಸಾಹಿತ್ಯದಲ್ಲಿನ 10 ಸುದೀರ್ಘ ಕವಿತೆಗಳಲ್ಲಿ ಮಲೈಪಾಡು ಕದಮ್ ಒಂದಾಗಿದೆ " ಎಂದು ಅವರು ಹೇಳುತ್ತಾರೆ.

ಭಾರತೀಯ ಅಡುಗೆಮನೆಯ ಹೀರೊ ಆಗಿರುವ ಅರಿಶಿನ (Curcuma longa) ಶುಂಠಿಯೊಡನೆ ನಿಕಟ ಸಂಬಂಧ ಹೊಂದಿದೆ. ಮಧ್ಯದ 'ಬಲ್ಬ್' ಮತ್ತು ಕವಲೊಡೆಯುವ 'ಫಿಂಗರ್‌ಗಳು' ಒಳಗೊಂಡ ನೆಲದಡಿಯ ಇದರ ಕಾಂಡವನ್ನು (ರೈಜೋಮ್) ವಾಣಿಜ್ಯಿಕವಾಗಿ ಬಳಸಲಾಗುತ್ತದೆ. ಬಲ್ಬ್ ಗಳು ಮತ್ತು ಫಿಂಗರ್‌ಗಳನ್ನು ಕಟಾವಿನಲ್ಲಿ ಬೇರ್ಪಡಿಸಲಾಗುತ್ತದೆ ಮತ್ತು ಸಂಸ್ಕರಿಸಲಾಗುತ್ತದೆ. ಅವುಗಳನ್ನು ಮಾರಾಟ ಮಾಡುವ ಮೊದಲು ಕುದಿಸಿ, ಒಣಗಿಸಿ, ಸ್ವಚ್ಛಗೊಳಿಸಿ ನಂತರ ಹೊಳಪು ನೀಡಲಾಗುತ್ತದೆ. ಹರಾಜಿನಲ್ಲಿ ಫಿಂಗರ್‌ಗಳು ಹೆಚ್ಚಿನ ಬೆಲೆಯನ್ನು ಪಡೆಯುತ್ತವೆ.

ಅರಿಶಿನವು ಬಹುಶಃ ದೇಶದ ಸ್ಥಳೀಯ ಬೆಳೆ ಎಂದು ಆಹಾರ ಇತಿಹಾಸಕಾರ ಕೆ.ಟಿ. ಅಚಾಯಾ ತಮ್ಮ ಪುಸ್ತಕವಾದ ಇಂಡಿಯನ್ ಫುಡ್: ಎ ಹಿಸ್ಟಾರಿಕಲ್ ಕಂಪ್ಯಾನಿಯನ್‌ನಲ್ಲಿ ಹೇಳುತ್ತಾರೆ. "ಅದರ ಕಣ್ಸೆಳೆಯುವ ಬಣ್ಣ ಮತ್ತು ಬಣ್ಣ ನೀಡುವ ಸಾಮರ್ಥ್ಯವು ದೇಶದಲ್ಲಿ ಹರಿದ್ರಾಗೆ (ಅದರ ಸಂಸ್ಕೃತ ಹೆಸರು) ತಂತ್ರ ಮತ್ತು ಆಚರಣೆಯಲ್ಲಿ ಪ್ರಮುಖ ಸ್ಥಾನವನ್ನು ನೀಡಿತು" ಎಂದು ಅವರು ಹೇಳುತ್ತಾರೆ. ದೈನಂದಿನ ಮಸಾಲೆ ಪದಾರ್ಥವಾದ ಮಂಜಲ್ ಅನ್ನು ಭಾರತದಾದ್ಯಂತ ಪಾಕಪದ್ಧತಿಗಳು ಮತ್ತು ಸಂಸ್ಕೃತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಒಂದೇ ಒಂದು ಚಿಟಿಕೆ ಅರಿಶಿನ ಪುಡಿ ಆಹಾರವನ್ನು ಸೂಕ್ಷ್ಮವಾಗಿ ಬಣ್ಣಗೊಳಿಸುತ್ತದೆ, ಆಹಾರಕ್ಕೆ ರುಚಿ ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಕರ್ಕುಮಿನ್ ಎಂಬ ಪ್ರಕಾಶಮಾನವಾದ ಹಳದಿ ವರ್ಣದ್ರವ್ಯವನ್ನು ಅದರ ಔಷಧೀಯ ಗುಣಗಳಿಗಾಗಿ, ಮುಖ್ಯವಾಗಿ antioxidant ಮತ್ತು ಉರಿಯೂತ ನಿರೋಧಕಕ್ಕಾಗಿ ಹೊರತೆಗೆಯಲಾಗುತ್ತದೆ .

ವಿಜ್ಞಾನಿಗಳು  ಈ ಕುರಿತು ಕೆಲಸ ಮಾಡುವ ಬಹಳ ಮೊದಲೇ ಅದು ಹೇಗೆ ಕೆಲಸ ಮಾಡುತ್ತದೆ ಎಂದು ಅಜ್ಜಿಯರು ಕಂಡುಹಿಡಿದಿದ್ದರು. ಅವರು ಅರಿಶಿನ ಮತ್ತು ಕಾಳುಮೆಣಸುಗಳನ್ನು ಬಿಸಿಮಾಡಿ ಅದರ ಪುಡಿಯನ್ನು ಹಾಲಿಗೆ ಬೆರೆಸಿ ಮನೆಯಲ್ಲಿ ಆರೋಗ್ಯ ಸರಿಯಿಲ್ಲದವರಿಗೆ ಕೊಡುತ್ತಿದ್ದರು. ಇದು ಕುರ್ಕುಮಿನ್‌ನ ಜೈವಿಕ ಲಭ್ಯತೆಯನ್ನು ಸುಧಾರಿಸುತ್ತಿತ್ತು. ಸ್ಟಾರ್ ಬಕ್ಸ್ ಈಗ 'ಗೋಲ್ಡನ್‌ ಟರ್ಮೆರಿಕ್ ಲ್ಯಾಟ್ಟೆ'ಯ ಪಾಕವಿಧಾನವನ್ನು ಹೊಂದಿದೆ, ಇದನ್ನು ನನ್ನ ಅಜ್ಜಿ ಒಪ್ಪಬಹುದು ಅಥವಾ ಒಪ್ಪದಿರಬಹುದು. ಇದು ಓಟ್ ಹಾಲು ಮತ್ತು ಅಲಂಕಾರಿಕ ನೊರೆ ಮತ್ತು ವೆನಿಲ್ಲಾವನ್ನು ಒಳಗೊಂಡಿರುತ್ತದೆ.

ಅರಿಶಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ದಕ್ಷಿಣದ ವಿವಾಹಿತ ಮಹಿಳೆಯರು ತಮ್ಮ ಕುತ್ತಿಗೆಗೆ ಅರಿಶಿನದ ಬಣ್ಣ ಹಚ್ಚಿದ ದಾರವನ್ನು ಧರಿಸುತ್ತಾರೆ. ಮಂಜಲ್ ನೀರತು ವಿಳ ('ಅರಿಶಿನ ಸ್ನಾನ ಸಮಾರಂಭ') ಎಂಬುದು ಪ್ರೌಢಾವಸ್ಥೆಯ ಆಚರಣೆಯಾಗಿದ್ದು, ಇದನ್ನು ಹೆಣ್ಣು ಮುಟ್ಟಾದ ವಿಷಯವನ್ನು ತಿಳಿಸಲು (ಕೆಲವೊಮ್ಮೆ ದೊಡ್ಡ ಫ್ಲೆಕ್ಸ್ ಬೋರ್ಡ್ ಗಳು ಮತ್ತು ದೊಡ್ಡ ಜನಸಂದಣಿಯೊಂದಿಗೆ) ಆಚರಿಸಲಾಗುತ್ತದೆ. ಮಂಜಲ್ ಕೂಡ ಪ್ರಸಿದ್ಧ ಆಂಟಿಸೆಪ್ಟಿಕ್ ಆಗಿತ್ತು, ಮತ್ತು ತೆರೆದ ಗಾಯಗಳು ಮತ್ತು ಚರ್ಮದ ಗಾಯಗಳ ಮೇಲೆ ಅದನ್ನು ಅರೆದು ಹಚ್ಚಲಾಗುತ್ತಿತ್ತು. ಪೆಟ್ ಕೇರ್ ಬ್ರಾಂಡ್‌ಗಳು ಇದೇ ಕಾರಣಕ್ಕಾಗಿ ತಮ್ಮ ಉತ್ಪನ್ನಗಳಲ್ಲಿ ಅರಿಶಿನವನ್ನು ಬಳಸುತ್ತವೆ.

ಯುಎಸ್ ಸಂಶೋಧಕರು ಅರಿಶಿನಕ್ಕೆ ಪೇಟೆಂಟ್ ಪಡೆದಾಗ, ಇಂಡಿಯನ್ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) 1997ರಲ್ಲಿ 15,000 ಡಾಲರ್ ಬೆಲೆಗೆ ವಕೀಲರನ್ನು ನೇಮಿಸಿಕೊಂಡಿತು ಮತ್ತು ಗಾಯವನ್ನು ಗುಣಪಡಿಸಲು ದೇಶದಲ್ಲಿ ಶತಮಾನಗಳಿಂದ ಬಳಸಲಾಗುತ್ತಿದ್ದುದರಿಂದ, ಅದು "ಪೇಟೆಂಟ್ ಪಡೆಯಲು ಅಗತ್ಯವಿರುವ ' ಹೊಸತನದ ' ಮಾನದಂಡವನ್ನು ಹೊಂದಿಲ್ಲ" ಎಂದು ವಾದಿಸಿತು. ಅರಿಶಿನದ ಮೇಲಿನ "ವಿವಾದಾಸ್ಪದ ಪೇಟೆಂಟ್" ಅನ್ನು ಹಿಂತೆಗೆದುಕೊಳ್ಳಲು ಸಿಎಸ್ಐಆರ್ ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಕಚೇರಿಗೆ ನಿರ್ದೇಶಿಸಿತು.

ಸರಕಾರದ ಈ ವಾದವನ್ನು ಶಿವಾಜಿ ಗಣೇಶನ್‌ ಕೂಡಾ ಒಪ್ಪುತ್ತಿದ್ದರು. ಪ್ರಸಿದ್ಧ ಚಲನಚಿತ್ರ ನಟರಾದ ಇವರು ವೀರ ಪಾಂಡಿಯಾ ಕಟ್ಟಬೊಮ್ಮನ್‌ ಎನ್ನುವ ತಮಿಳು ಚಿತ್ರದಲ್ಲಿ ಅದೇ ಹೆಸರಿನ ವಸಾಹತುಶಾಹಿ ವಿರೋಧಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ - ಇದು ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಟನೆಗಾಗಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ತಮಿಳು ಚಲನಚಿತ್ರವಾಗಿದೆ. ಬ್ರಿಟಿಷರಿಗೆ ತೆರಿಗೆ ಪಾವತಿಸಲು ನಿರಾಕರಿಸುವ ಕಟ್ಟ ಬೊಮ್ಮನ್ ಮಾತುಗಳು ಗಮನಾರ್ಹವಾಗಿವೆ: “ಯಾಕೆ ಕಟ್ಟಬೇಕು ತೆರಿಗೆ? ನನ್ನ ಸಮುದಾಯದ ಮಹಿಳೆಯರಿಗೆ ಅರಿಶಿನ ಅರೆದುಕೊಟ್ಟು ಸೇವೆ ಮಾಡಿದ್ದೀರಾ?”

*****

"ನಾನು ನನ್ನ ತಂದೆಯ ಕಠಿಣ ಪರಿಶ್ರಮವನ್ನು ಕೊಯ್ಲು ಮಾಡುತ್ತಿದ್ದೇನೆ."
ತಿರು ಮೂರ್ತಿ, ಈರೋಡಿನ ಅರಿಶಿನ ಬೆಳೆಗಾರ

Thiru inspecting the turmeric plants in his farm, in Uppupallam hamlet of Erode's Bhavanisagar block
PHOTO • M. Palani Kumar

ಈರೋಡ್‌ನ ಭವಾನಿಸಾಗರ್ ಬ್ಲಾಕ್‌ನ ಉಪ್ಪುಪಳ್ಳಮ್ ಕುಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿಅರಿಶಿನ ಸಸ್ಯಗಳನ್ನು ಪರಿಶೀಲಿಸುತ್ತಿರುವ ತಿರು

ಅವರು ತನ್ನ 18ನೇ ವಯಸ್ಸಿನಿಂದ ಬದುಕಿಗಾಗಿ ಬೇಸಾಯ ಮಾಡುತ್ತಿದ್ದಾರೆಂದು ಅಕ್ಟೋಬರ್‌ 2020ರಂದು ಪರಿ ಅವರನ್ನು ಎರಡನೇ ಬಾರಿ ಸತ್ಯಮಂಗಲದಲ್ಲಿ ಭೇಟಿಯಾದಾಗ ತಿಳಿಸಿದರು. ನಮ್ಮ ಮೊದಲ ಭೇಟಿ ಅದೇ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಆಗಿತ್ತು. ಆಗ ಅರಿಶಿನದ ಕೊಯ್ಲು ನಡೆಯುತ್ತಿತ್ತು. ತೊನೆಯುತ್ತಿರುವ ಅರಿಶಿನ ಗಿಡಗಳ ನಡುವೆ ತನ್ನ ಪಂಚೆಯ ತುದಿಯನ್ನು ಕೈಯಲ್ಲಿ ಹಿಡಿದು ನಡೆಯುತ್ತಾ ತನ್ನ ಬದುಕಿನ ಕತೆಯನ್ನು ಹಂಚಿಕೊಳ್ಳಲು ಆರಂಭಿಸಿದ್ದರು.

“ಇದು ಅಮ್ಮನ ಊರು, ಇಲ್ಲಿಗೆ ಬಂದ ಅಪ್ಪ 70ರ ದಶಕದಲ್ಲಿ ಎಕರೆಗೆ ಹತ್ತು ಅಥವಾ ಇಪ್ಪತ್ತು ಸಾವಿರದಂತೆ ಈ ನೆಲವನ್ನು ಕೊಂಡರು. ಈಗ ಅದೇ ನೆಲಕ್ಕೆ 40 ಲಕ್ಷದಷ್ಟಿದೆ. ಈಗೆಲ್ಲ ಹತ್ತು ಎಕರೆ ಭೂಮಿಯ ಕನಸು ಕಾಣುವುದು ಕೂಡಾ ಕಷ್ಟ!” ಹತ್ತನೇ ತರಗತಿಗೆ ಶಾಲೆಬಿಟ್ಟ ತಿರು 2009ರಲ್ಲಿ ಇಡಿಯಾಗಿ ಸಾವಯವ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗ ಅವರಿಗೆ 31 ವರ್ಷ.

ಆದರೂ ಇದೇನೂ ಅವರ ಮೊದಲ ಆಯ್ಕೆಯಾಗಿರಲಿಲ್ಲ. ಮೊದಲಿಗೆ ಮನೆಯಲ್ಲಿಯೇ ಮಳಿಗೈ ಕಡೈ (ಕಿರಾಣಿ ಅಂಗಡಿ) ಇರಿಸಿದ್ದರು. ಅಲ್ಲಿ ಅವರು ಎಳಂದ ವಡೈ (ಹುಳಿ ಮತ್ತು ಸಿಹಿಯಾದ ಬುಗುರಿ ಹಣ್ಣಿನ ತಿಂಡಿ), ತಿನ್‌ಪಂಡಮ್‌, (ತಿಂಡಿ), ಅಕ್ಕಿ, ಬೀಡಿ, ಸಿಗರೇಟು, ಮತ್ತು ದೀಪಾವಳಿ ಸಮಯದಲ್ಲಿ ಪಟಾಕಿಗಳನ್ನು ಮಾರುತ್ತಿದ್ದರು. ವ್ಯಾಪಾರದೆಡೆಗಿನ ಅವರ ಆಸಕ್ತಿ ಅವರನ್ನು ಹಲವು ದಾರಿಗಳಲ್ಲಿ ತಿರುಗಾಡಿಸಿದೆ. ಅವರು ಕೇಬಲ್‌ ಕನೆಕ್ಷನ್‌ ಕೊಡುವ ವ್ಯವಹಾರ ಮಾಡಿದ್ದರು, ಹಾಲು ಮಾರಿದ್ದರು, ನಂತರ ತನ್ನ ಅಕ್ಕ ವಾಸವಿರುವ ಬೆಂಗಳೂರಿಗೆ ಹೋದರು. ಅಲ್ಲಿ ಎರಡು ಚಕ್ರದ ಗಾಡಿಗಳ ಸರ್ವೀಸ್‌ ಸ್ಟೇಷನ್‌ ಓಪನ್‌ ಮಾಡಿದರು, ಸಣ್ಣದೊಂದು ಫೈನಾನ್ಸ್‌ ಕಂಪನಿ ಸೇರಿ ಸಾಲ ಕೊಡಿಸುವ ಕೆಲಸ ಮಾಡಿದರು. ಕೊನೆಯದಾಗಿ ಕಾರೊಂದನ್ನು ಕೊಂಡು ಮಾರಿದರು. “ಹದಿನಾಲ್ಕು ವರ್ಷಗಳಲ್ಲಿ ಆರು ಕೆಲಸಗಳನ್ನು ಮಾಡಿ ಬಿಟ್ಟಿದ್ದೆ. ಎಲ್ಲದರಲ್ಲೂ ಒದ್ದಾಡಿ ಕೈ ಸುಟ್ಟುಕೊಂಡೆದ್ದೇ ಲಾಭ.”

ತನ್ನ ಹಿಂದಿನ ದಿನಗಳಿಗೆ ಹೋಲಿಸಿದರೆ ಅವರು ತನ್ನ ಬೆಂಗಳೂರು ದಿನಗಳನ್ನು ನಾಯಿಪಾಡಿನ ದಿನಗಳೆಂದು ನೆನಪಿಸಿಕೊಳ್ಳುತ್ತಾರೆ. “ನಾಯಿ ಪಾಡದ ಪಾಡು,” ಅಲ್ಲಿ ತೀರ ಅಲ್ಪ ಮೊತ್ತವನ್ನು ಸಂಪಾದಿಸುತ್ತಿದ್ದ ಅವರು ತನ್ನ ಸ್ನೇಹಿತನೊಡನೆ 6X10 ಅಡಿ ಅಗಲದ ಕೋಣೆಯಲ್ಲಿ ತಂಗಿದ್ದರು. ಅಷ್ಟು ಸಣ್ಣ ಜಾಗಕ್ಕೆ 2,500 ಬಾಡಿಗೆ ಕಟ್ಟುತ್ತಿದ್ದರು.

“2009ರಲ್ಲಿ ಸತ್ಯಮಂಗಲಕ್ಕೆ ಹಿಂತಿರುಗುವ ಹೊತ್ತಿಗೆ ನನಗೆ ಬೇಸಾಯದ ಹುಚ್ಚು ಹಿಡಿದಿತ್ತು.” ಅವರು ತನ್ನ ತಂದೆ ಬೆಳೆಯುತ್ತಿದ್ದ ಕಬ್ಬಿನೊಡನೆ ತನ್ನ ಬೇಸಾಯದ ಕೆಲಸವನ್ನು ಆರಂಭಿಸಿದರು. ಜೊತೆಗೆ ಮರಗೆಣಸು ಮತ್ತು ಈರುಳ್ಳಿಯನ್ನು ಕೂಡಾ ತಮ್ಮ ಗದ್ದೆಗಳಲ್ಲಿ ಬೆಳೆಯುತ್ತಿದ್ದರು.

“ಬೇಸಾಯದಲ್ಲಿ ತಪ್ಪುಗಳನ್ನು ಮಾಡುತ್ತಾ ಅದರಿಂದ ಕಲಿಯುತ್ತಾ ಹೋದೆ. 2010ರಲ್ಲಿ ನೀರುಳ್ಳಿ ಕೇಜಿಯೊಂದಕ್ಕೆ 80 ರೂಪಾಯಿಗಳಷ್ಟಿತ್ತು. ಅದು ಕೊಯ್ಲಿನ ಸಮಯಕ್ಕೆ 11 ರೂಪಾಯಿಗೆ ಬಂದು ನಿಂತಿತ್ತು. ಮರಣ ಅಡಿ [ಸಾವಿನ ಏಟು] ಆಗಿತ್ತದು” ಎಂದು ನಿಟ್ಟುಸಿರಿಟ್ಟರು. ಆಗ ಜೊತೆಗೆ ಇತರ ಬೆಳೆಗಳೂ ಇದ್ದಿದ್ದರಿಂದಾಗಿ ನಷ್ಟವನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಯಿತು. ಅವರ ತಂದೆ ತೀರಿಕೊಂಡ ಎರಡು ವರ್ಷಗಳ ನಂತರ, 2014ರಲ್ಲಿ ಅವರು ತನ್ನ ಕುಟುಂಬವು ಒಂಬತ್ತು ವರ್ಷಗಳ ಹಿಂದೆ ನಿಲ್ಲಿಸಿದ್ದ ಮಂಜಲ್‌ ಬೆಳೆಯನ್ನು ಬೆಳೆಯಲಾರಂಭಿಸಿದರು.

*****

ಅರಿಶಿನದಿಂದ ಯಾರೋ ಒಬ್ಬರು ಹಣ ಮಾಡಿಕೊಳ್ಳುತ್ತಾರೆ, ಆದರೆ ಅದು ರೈತನೇ ಆಗಿರುವುದಿಲ್ಲ...
ಈರೋಡಿನ ಅರಿಶಿನ ಬೆಳೆಗಾರರು

In his banana field, Thiru has planted the red variety this time.
PHOTO • M. Palani Kumar
The wooden chekku in which coconut oil is cold-pressed to make fragrant hair oils
PHOTO • M. Palani Kumar

ಎಡ: ತನ್ನ ಬಾಳೆ ತೋಟದಲ್ಲಿ, ತಿರು ಈ ಬಾರಿ ಕೆಂಪು ತಳಿಯನ್ನು ನೆಟ್ಟಿದ್ದಾರೆ. ಬಲ: ತೆಂಗಿನ ಎಣ್ಣೆಯಿಂದ ಪರಿಮಳಯುಕ್ತ ಕೂದಲಿನ ಎಣ್ಣೆಗಳನ್ನು ತಯಾರಿಸಲು ಕೊಬ್ಬರಿ ಅರೆಯುವ ಮರದ ಚೆಕ್ಕು

ತಮಿಳುನಾಡಿನಲ್ಲಿ ಒಟ್ಟು 51,000 ಎಕರೆ ಪ್ರದೇಶದಲ್ಲಿ ಅರಿಶಿನವನ್ನು ಬೆಳೆಯಲಾಗುತ್ತಿದ್ದು, ಇದರಿಂದ ಒಟ್ಟು 86,000 ಟನ್‌ಗಳಿಗಿಂತ ಹೆಚ್ಚು ಉತ್ಪಾದನೆ ಗಳಿಸಲಾಗುತ್ತದೆ. ಇದು ದೇಶದಲ್ಲೇ ನಾಲ್ಕನೇ ಅತಿಹೆಚ್ಚು ಅರಿಶಿನ ಬೆಳೆಯುವ ರಾಜ್ಯ ಮತ್ತು ಈರೋಡ್‌ ಜಿಲ್ಲೆ 12,570 ಎಕರೆ ಮಂಜಲ್ ಬೆಳೆಯುವ ಮೂಲಕ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.

ತಿರು ಅವರು ಬೇಸಾಯ ಮಾಡುತ್ತಿರುವ 1.5 ಎಕರೆ ಆ ಸಾಗರದಲ್ಲಿ ಕೇವಲ ಒಂದು ಹನಿಯಷ್ಟೆ. ಅವರು ಜೂನ್ 2014ರಲ್ಲಿ ಅರ್ಧ ಎಕರೆಯಷ್ಟು ಸಣ್ಣ ಜಾಗದಲ್ಲಿ ಮಂಜಲ್ ಬೆಳೆಯಲು ಪ್ರಾರಂಭಿಸಿದರು ಮತ್ತು ತಮ್ಮ ಉಳಿದ ಕೃಷಿಭೂಮಿಯಲ್ಲಿ ತೆಂಗು ಮತ್ತು ಬಾಳೆ ನೆಟ್ಟರು. ಅವರು ತಾನು ಬೆಳೆದ ಒಂದು ಟನ್ ಅರಿಶಿನದ ಸುಮಾರು ಮೂರನೇ ಒಂದು ಭಾಗದಷ್ಟು, ಎಂದರೆ 300 ಕಿಲೋ ಅರಿಶಿನವನ್ನು ಪುಡಿ ಮಾಡಿ 10 ದಿನಗಳಲ್ಲಿ ತನ್ನ ಫೇಸ್ ಬುಕ್ ಸಂಪರ್ಕಗಳ ಮೂಲಕ ಚಿಲ್ಲರೆ ಮಾರಾಟ ಮಾಡುವಲ್ಲಿ ಯಶಸ್ವಿಯಾದರು. ಇದು ಅವರಿಗೆ ತಮ್ಮ ಕೆಲಸವನ್ನು ಮುಂದುವರೆಸಲು ಉತ್ತೇಜನ ನೀಡಿತು. ಅವರು ತನ್ನ ಈ ಸಾಹಸಕ್ಕೆ 'ಯೆರ್ ಮುಣೈ' ಎಂದು ಹೆಸರಿಟ್ಟನು, ಅಂದರೆ ನೇಗಿಲ ಹಂಚಿಕೆ, "ಏಕೆಂದರೆ ಆ ಉಪಕರಣವು ಅಪ್ರತಿಮವಾದುದು." ಉತ್ಪನ್ನದ ಲಾಂಛನವು ಕ್ಲಾಸಿಕ್ ಚಿತ್ರವಾಗಿದೆ: ಒಬ್ಬ ಮನುಷ್ಯ, ನೇಗಿಲು ಮತ್ತು ಎರಡು ಎತ್ತುಗಳು. ಅದು ಯಶಸ್ವಿಯಾಯಿತು.

ಇದರಿಂದ ಉತ್ತೇಜಿತರಾದ ಅವರು ಮುಂದಿನ ವರ್ಷ ಎರಡೂವರೆ ಎಕರೆಯಲ್ಲಿ ಮಂಜಲ್‌ ಬೆಳೆದರು.  ಸುಮಾರು ಐದು ಸಾವಿರ ಕೇಜಿಯಷ್ಟು ಉತ್ತಮ ಇಳುವರಿಯನ್ನೂ ಪಡೆದರು. ಈ ಬಾರಿ ಅವರು ಬೆಳೆದ ಬೆಳೆಯಲ್ಲಿ ಐದನೇ ನಾಲ್ಕರಷ್ಟು ಫಸಲು ಅವರ ಬಳಿಯೇ ಸಿಕ್ಕಿಕೊಂಡಿತು. ಪ್ರಯತ್ನಗಳ ಹೊರತಾಗಿಯೂ ಅವರಿಗೆ ತನ್ನ ಉತ್ಪನ್ನಕ್ಕೆ ಆರ್ಗಾನಿಕ್‌ ಸರ್ಟಿಫಿಕೇಟ್‌ ಪಡೆಯಲು ಸಾಧ್ಯವಾಗಲಿಲ್ಲ. ಈ ಸರ್ಟಿಫಿಕೇಟ್‌ ಪಡೆಯುವುದು ನಿಜಕ್ಕೂ ದುಬಾರಿ ಮತ್ತು ಪ್ರಯಾಸಕರ ಪ್ರಕ್ರಿಯೆ. ಕೊನೆಗೆ ಇದೆಲ್ಲದರಿಂದ ಬೇಸತ್ತ ಅವರು ತನ್ನ ಅರಿಶಿನವನ್ನು ಈರೋಡ್‌ ಮೂಲದ ದೊಡ್ಡ ಮಸಾಲೆ ಕಂಪನಿಯೊಂದಕ್ಕೆ ಮಾರಿದರು. ಕಂಪನಿಯು ಅವರಿಗೊಂದು ತುಂಡು ಚೀಟಿಯನ್ನು ನೀಡಿತು. ಅದರಲ್ಲಿ ವ್ಯವಹಾರದ ವಿವರಗಳನ್ನು ಬರಯಲಾಗಿತ್ತು. 8,100 ರೂಪಾಯಿಯಂತೆ ಕ್ವಿಂಟಾಲ್‌ ಒಂದಕ್ಕೆ ಖರೀದಿ ಮಾಡಲಾಗಿತ್ತು. ಆ ಹಣಕ್ಕಾಗಿ ಹೊರರಾಜ್ಯದ ಚೆಕ್‌ ಒಂದನ್ನು ನೀಡಲಾಯಿತು. ಅದು ಕೂಡಾ 15 ದಿನಗಳ ಪೋಸ್ಟ್‌ ಡೇಟೆಡ್‌ ಚೆಕ್‌ ಆಗಿತ್ತು.

ಆ ಚೆಕ್‌ ನಗದುಗೊಳಿಸಲು ತಿರು ಅವರಿಗೆ ಕೆಲವು ವಾರಗಳೇ ಬೇಕಾದವು. ಅದು ನೋಟು ಬ್ಯಾನ್‌ ಆಗಿದ್ದ ಸಮಯವಾಗಿತ್ತು. “2017ರಿಂದ ನಾನು ಅಂದಿನಿಂದ ಎಚ್ಚರಿಕೆಯಿಂದ ಒಂದರಿಂದ ಒಂದೂವರೆ ಎಕರೆಯೊಳಗೆ ಅರಿಶಿನ ಬೇಸಾಯ ಮಾಡಲಾರಂಭಿಸಿದೆ. ವರ್ಷ ಬಿಟ್ಟು ವರ್ಷ ಭೂಮಿಯನ್ನು ಖಾಲಿ ಬಿಟ್ಟು ಅದಕ್ಕೆ ʼವಿರಾಮʼ ನೀಡಲಾರಂಭಿಸಿದೆ.” ಎನ್ನುತ್ತಾರೆ.

ಜನವರಿಯಲ್ಲಿ ಅವರು ಹೊಲವನ್ನು ಹೊಸ ಬೆಳೆಗೆ ಸಜ್ಜುಗೊಳಿಸಲು ಆರಂಭಿಸುತ್ತಾರೆ ಮೊದಲಿಗೆ ಎರಡು ಬಾರಿ 45 ದಿನಗಳಿಗೊಮ್ಮೆ ಕಿರುಧಾನ್ಯ ಬೆಳೆದು ಅದನ್ನು ಹೊಲದಲ್ಲೇ ಉಳುಮೆ ಮಾಡಿ ನೆಲಕ್ಕೆ ಮಣ್ಣಿನ ಸಾರಜನಕ ಮತ್ತು ಇತರ ಪೋಷಕಾಂಶಗಳನ್ನು ಸರಿದೂಗಿಸುತ್ತಾರೆ. ಇದಕ್ಕೆ ಸುಮಾರು 15,000 ರೂ. ವೆಚ್ಚವಾಗುತ್ತದೆಂದು ಅವರು ಹೇಳುತ್ತಾರೆ. ನಂತರ ಹನಿ ನೀರಾವರಿ ಮತ್ತು ಅರಿಶಿನ ಬೆಳೆಗೆ ಬೇಕಾಗುವ ಪಾತಿಯನ್ನು ಸಿದ್ಧಗೊಳಿಸುತ್ತಾರೆ. ಇದಕ್ಕೆ ಮತ್ತೆ 15,000 ರೂ. ಬೇಕಾಗುತ್ತದೆ. 40 ರೂ. ಬೆಲೆ ಬಾಳುವ ಬೀಜದಂತೆ ಬಳಸಲಾಗುವ ಬಲ್ಬ್‌ (ಮುಖ್ಯ ಕಾಂಡ) ಒಂದು ಎಕರೆಗೆ 800 ಕಿಲೋ ಬೇಕಾಗುತ್ತದೆ. ಇದರ ಬೆಲೆ ಕಿಲೋ ಒಂದಕ್ಕೆ 40 ರೂಪಾಯಿಗಳು. ಎಂದರೆ 24,000 ಸಾವಿರ ರೂಪಾಯಿಗಳ ಖರ್ಚು. ಒಂದು ಎಕರೆಗೆ ಕೆಲಸಗಾರರ ಕೂಲಿ ರೂ. 5,000. ನಾಟಿ ಮಾಡಿದ ತಿಂಗಳ ನಂತರ ಬೀಜ ಮೊಳಕೆಯೊಡೆಯುವ ಸಮಯದಲ್ಲಿ ಬೆಳೆಗೆ ಎರಡು ಟನ್‌ಗಳಷ್ಟು ಕುರಿ ಗೊಬ್ಬರವನ್ನೂ ಹಾಕುತ್ತಾರೆ. ಎರಡು ಟನ್‌ ಗೊಬ್ಬರಕ್ಕೆ 14,000 ರೂ. ಕೊಟ್ಟು ಖರೀದಿಸುವ ಅವರು ಈ ಗೊಬ್ಬರವು ದನದ ಸಗಣಿಯ ಗೊಬ್ಬರಕ್ಕಿಂತಲೂ ಹೆಚ್ಚು ಫಲವತ್ತಾದುದು ಎಂದು ಒತ್ತಿ ಹೇಳುತ್ತಾರೆ.

ಇದೆಲ್ಲ ಆದ ನಂತರ ಒಟ್ಟು ಆರು ಸುತ್ತಿನ ಕಳೆ ತೆಗೆಯುವ ಕೆಲಸದ ಖರ್ಚಿರುತ್ತದೆ. ಒಮ್ಮೆಗೆ 10,000 ರೂಪಾಯಿಗಳಂತೆ (ಪ್ರತಿ ಎಕರೆಗೆ 30 ಅಥವಾ 35 ಮಹಿಳೆಯರಿಗೆ 300 ರೂಪಾಯಿಗಳ ಕೂಲಿ). ಮಾರ್ಚಿಯಲ್ಲಿ ಕೊಯ್ಲು ನಡೆಸಲು ಸುಮಾರು 40,000 ರೂ.ಗಳಷ್ಟು ವೆಚ್ಚವಾಗುತ್ತದೆ. ಮತ್ತು ಇದು “ಒಪ್ಪಂದದ ಗುತ್ತಿಗೆಯಾಗಿರುತ್ತದೆ. ಸಾಮಾನ್ಯವಾಗಿ 20 ಪುರುಷರು ಮತ್ತು 50 ಮಹಿಳೆಯರ ತಂಡವು ಕಟಾವಿನ ಕೆಲಸಕ್ಕಾಗಿ ಬರುತ್ತದೆ. ಅವರು ಕೊಯ್ಲನ್ನು ಒಂದು ದಿನದಲ್ಲಿ ಮುಗಿಸಿಬಿಡುತ್ತಾರೆ. ಇಳುವರಿ ತುಂಬಾ ಚೆನ್ನಾಗಿ ಬಂದಿದ್ದಲ್ಲಿ ಅವರು ಇನ್ನೊಂದು 5,000 ಹೆಚ್ಚಿಗೆ ಕೇಳುತ್ತಾರೆ.”

Fresh turmeric fingers, which are processed by Thiru Murthy to make beauty products and malted drinks.
PHOTO • Aparna Karthikeyan
The purpose-built pit for boiling the turmeric
PHOTO • Aparna Karthikeyan

ಎಡ: ತಾಜಾ ಅರಿಶಿನ ಕೊಂಬುಗಳು, ಸೌಂದರ್ಯ ಉತ್ಪನ್ನಗಳು ಮತ್ತು ಮಾಲ್ಟ್ ಡ್ರಿಂಕ್ಸ್ ತಯಾರಿಸಲು ತಿರು ಮೂರ್ತಿ ಇದನ್ನು ಸಂಸ್ಕರಿಸುತ್ತಾರೆ. ಬಲ: ಅರಿಶಿನವನ್ನು ಬೇಯಿಸುವ ಉದ್ದೇಶಕ್ಕಾಗಿ ಮಾಡಲಾಗಿರುವ ಗುಂಡಿ

ಇದೆಲ್ಲ ಮುಗಿದ ನಂತರ ತಾಜಾ ಅರಿಶಿನವನ್ನು ಬೇಯಿಸಿ, ಒಣಗಿಸಿ ಪಾಲಿಶ್‌ ಮಾಡಲಾಗುತ್ತದೆ. ಈ ಪ್ರಕ್ರಿಯೆ ಬರವಣಿಗೆಯಲ್ಲಿ ಒಂದೇ ಸಾಲಿನಲ್ಲಿ ಮುಗಿದು ಹೋಯಿತಾದರೂ ಬೆಳೆಗಾರರಿಗೆ ಇದೊಂದು ಅನುಭವ ಬೇಡುವ, ಕೌಶಲಯುಕ್ತ ಕೆಲಸವಾಗಿದೆ. ಇದು ಅರಿಶಿನ ಬೆಳೆಯ ಒಟ್ಟು ಖರ್ಚಿಗೆ ತನ್ನ ಪಾಲಿನ 65,000 ರೂಪಾಯಿಗಳನ್ನು ಸೇರಿಸುತ್ತದೆ. ಅತ್ತ ಖರ್ಚು ಹೆಚ್ಚುತ್ತಾ ಹೋದಂತೆ ಇತ್ತ ಅರಿಶಿನದ ತೂಕ ಬಹುತೇಕ ಅರ್ಧದಷ್ಟು ಇಳಿದಿರುತ್ತದೆ.

ಹತ್ತು ತಿಂಗಳು ಮತ್ತು 236,000 ರೂಪಾಯಿಗಳಷ್ಟು ಖರ್ಚು ಮಾಡಿದ ನಂತರ, ಸುಮಾರು 2,000 ಕಿಲೋಗ್ರಾಂಗಳಷ್ಟು ಒಣಗಿದ ಅರಿಶಿನ (ಒಂದು ಎಕರೆಗೆ) ಮಾರಾಟಕ್ಕೆ ಸಿಗುತ್ತದೆ. ಉತ್ಪಾದನಾ ವೆಚ್ಚ ಕೆಜಿಗೆ 119 ರೂ. (ಇನ್ನೋರ್ವ ಸಾವಯವ ಕೃಷಿಕರಾದ ಕೊಡುಮುಡಿಯ ಕೆ.ಎನ್. ಸೆಲ್ಲಮುತ್ತು ಅವರು ಕಡಿಮೆ ಸಮಯ ಮತ್ತು ಕೌಶಲ ಅಗತ್ಯವಿರುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಇಳುವರಿಯನ್ನು ಉತ್ಪಾದಿಸುವ ಬೀಜಗಳನ್ನು ನೆಟ್ಟರೆ, ಕೆಜಿಗೆ ಸುಮಾರು 80 ರೂ. ಖರ್ಚು ಬೀಳುತ್ತದೆ ಎನ್ನುತ್ತಾರೆ.)

ತಿರುಮೂರ್ತಿ ತನ್ನ ಅರಿಶಿನ ಪುಡಿಗೆ ಬೆಲೆಯನ್ನು ತಂತ್ರಗಾರಿಕೆಯೊಡನೆ ನಿಗದಿಪಡಿಸುತ್ತಾರೆ. ಅವರು 40 ರೂಪಾಯಿಗಳನ್ನು ಪುಡಿ ಮಾಡಲು ಖರ್ಚು ಮಾಡಿದರೆ, ಪ್ಯಾಕೇಜಿಂಗ್‌ ಮತ್ತು ಕೊರಿಯರ್‌ ಶುಲ್ಕವಾಗಿ 40 ರೂಪಾಯಿಗಳನ್ನು ವಿಧಿಸುತ್ತಾರೆ.

ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ (ಎಂದರೆ 20 ಕಿಲೋ) 300 ರೂಪಾಯಿಗೆ ಒಂದು ಕಿಲೋ ಸಿಗುತ್ತದೆ. ತೋಟದಲ್ಲಿ ಕಿಲೋವೊಂದಕ್ಕೆ 400 ರೂಪಾಯಿ. ಭಾರತದ ಒಳಗೆ ಎಲ್ಲಿಗೆ ಕಳುಹಿಸಿದರೂ ಕಿಲೋ ಒಂದಕ್ಕೆ 500 ರೂಪಾಯಿ. ಇತರ ಸಾವಯವ ಕಂಪನಿಗಳು ಒಂದು ಕೆಜಿಗೆ 375ರಿಂದ 1,000 ರೂ.ಗಳ ತನಕ ಮಾರುತ್ತವೆ. ವ್ಯಾಪಾರಿಗಳು ಒಂದು ಕಿಲೋ ಒಣ ಅರಿಶಿನವನ್ನು 70 ಊಪಾಯಿಗಳಿಗೆ ಖರೀದಿಸುತ್ತಾರೆ. ಇದನ್ನು ಪುಡಿ ಮಾಡಿದಾಗ 950 ಗ್ರಾಮ್‌ಗಳಷ್ಟಿರುತ್ತದೆ. ಅವರು ಇದನ್ನು ಇದರ ಮೂರು ಪಟ್ಟು ಬೆಲೆಗೆ ಮಾರುತ್ತಾರೆ.

*****

"ಕುಡುಗೋಲು, ಬಂದೂಕು ಅಥವಾ ಲಾಠಿ ಏನನ್ನೂ ಬಳಸದೆ ಕಾರ್ಪೊರೇಟ್‌ಗಳು ರೈತರನ್ನು ಹೊಡೆದುರುಳಿಸಿವೆ."
ಪಿ.ಕೆ.ದೈವಸಿಗಾಮಣಿ, ಅಧ್ಯಕ್ಷರು, ಟರ್ಮೆರಿಕ್‌ ಫಾರ್ಮರ್ಸ್‌ ಅಸೋಸಿಯೇಷನ್‌ ಆಫ್ ಇಂಡಿಯಾ‌

"ನಾನು ಸಾಕಷ್ಟು ಪ್ರಯತ್ನಿಸಿದೆ, ಹೋರಾಡಿದೆ, ಆದರೆ ಅರಿಶಿನಕ್ಕೆ ನ್ಯಾಯೋಚಿತ ಬೆಲೆಯನ್ನು ನಿಗದಿಪಡಿಸಲು ನನ್ನಿಂದ ಸಾಧ್ಯವಾಗಲಿಲ್ಲ" ಎಂದು ಟಿಎಫ್‌ಎಐ ಅಧ್ಯಕ್ಷ ದೈಸಿಗಾಮಣಿ ಹೇಳುತ್ತಾರೆ. ಪರಿ ಅವರನ್ನು ಅಕ್ಟೋಬರ್ ತಿಂಗಳ ಮಳೆಗಾಲದ ಸಂಜೆ ಈರೋಡ್ ಬಳಿಯ ಅವರ ಮನೆಯಲ್ಲಿ ಭೇಟಿಯಾಯಿತು. "ಸರ್ಕಾರಗಳು ಕಾರ್ಪೊರೇಟ್‌ಗಳತ್ತ ಸಾಗುತ್ತಿವೆ, ಮತ್ತು ಕಾರ್ಪೊರೇಟ್‌ಗಳು ಸರ್ಕಾರಗಳನ್ನು ರಚಿಸುತ್ತಿವೆ. ಅದು ಬದಲಾಗುವವರೆಗೆ, ರೈತರು - ಕೇವಲ ಸಣ್ಣ, ಅರಿಶಿನ ಬೆಳೆಯುವ ರೈತರು ಮಾತ್ರವಲ್ಲ - ಯಾರಿಗೂ ಭವಿಷ್ಯವಿಲ್ಲ... ಅಮೆರಿಕದಲ್ಲಿಯೂ ಪರಿಸ್ಥಿತಿ ಇದೇ ರೀತಿಯಿದೆ. ಕೃಷಿ ಲಾಭದಾಯಕವಲ್ಲ. ಅವರು ಅಲ್ಲಿ ಇದನ್ನು ನಿಮಗೆ ಇಂಗ್ಲಿಷಿನಲ್ಲಿ ಹೇಳುತ್ತಾರೆ, ನಾವು  ಇಲ್ಲಿ ತಮಿಳಿನಲ್ಲಿ ಹೇಳುತ್ತೇವೆ. ಅಷ್ಟೇ ವ್ಯತ್ಯಾಸ," ಎಂದು ಅವರು ಹೇಳುತ್ತಾರೆ.

Inside the storage yard of the Perundurai regulated market.
PHOTO • M. Palani Kumar
Buyers at the auction inspect the turmeric lots
PHOTO • M. Palani Kumar

ಎಡ: ಪೆರುಂದುರೈ ನಿಯಂತ್ರಿತ ಮಾರುಕಟ್ಟೆಯ ಕಾಳು-ಕಡಿಗಳನ್ನು ಒಟ್ಟುವ ಸ್ಥಳ. ಬಲ: ಹರಾಜಿನಲ್ಲಿ ಖರೀದಿದಾರರು ಅರಿಶಿನದ ರಾಶಿಗಳನ್ನು ನೋಡುತ್ತಿರುವುದು

"ಕಾರ್ಪೊರೇಟ್ ಗಳು ಊಳಿಗಮಾನ್ಯ ವ್ಯವಸ್ಥೆಯನ್ನು ಬದಲಿಸಿವೆ ಮತ್ತು ಅವರು ಹೊಸ ದೈತ್ಯ ಭೂಮಾಲೀಕರಾಗಿ ಬದಲಾಗಿದ್ದಾರೆ. ಅವರು ನೂರಾರು ಟನ್‌ಗಳನ್ನು ಒಮ್ಮೆಲೆ ಸಂಸ್ಕರಿಸಬಲ್ಲರು. ಕೆಲವು ಟನ್‌ಗಳನ್ನು ಹೊಂದಿರುವ ಸಣ್ಣ ರೈತನು ಬೆಲೆ ವಿಷಯದಲ್ಲಿ ಅವರೊಂದಿಗೆ ಹೇಗೆ ಸ್ಪರ್ಧಿಸುತ್ತಾನೆ?"

ಈರೋಡ್‌ ಬಳಿಯ ಪೆರುಂದುರೈನಲ್ಲಿರುವ ನಿಯಂತ್ರಿತ ಮಾರುಕಟ್ಟೆ ಸಂಕೀರ್ಣವು ಅರಿಶಿನ ಬೆಳೆಗಾರರ ಹಣೆಬರಹವನ್ನು ನಿರ್ಧರಿಸುತ್ತದೆ. ಇದು ಕೇವಲ ಅರಿಶಿನ ಬೆಳೆಯೊಂದಿಗೆ ಮಾತ್ರವೇ ವ್ಯವಹರಿಸುತ್ತದೆ ಮತ್ತು ಇದು ಹತ್ತಾರು ಸಾವಿ ಚೀಲಗಳನ್ನು ಸಂಗ್ರಹಿಸಿಡಬಲ್ಲ ಗೋದಾಮು ಮತ್ತು ಹರಾಜು ಕೇಂದ್ರವನ್ನು ಹೊಂದಿದೆ. ಪರಿ ಅಕ್ಟೋಬರ್‌ 11ರಂದು ಹರಾಜು ಪ್ರಕ್ರಿಯೆಯನ್ನು ನೋಡಲು ಹೋಗಿತ್ತು. ಆ ದಿನ ಅರಿಶಿನದ ಕೊಂಬಿಗೆ ಗರಿಷ್ಟ ಬೆಲೆ 7,499 ರೂಪಾಯಿಗಳಷ್ಟಿದ್ದರೆ, ಮುಖ್ಯ ಕಾಂಡ ಅಂದರೆ ಬಲ್ಬ್‌ನ ಬೆಲೆಯು 6,669ರಷ್ಟಿತ್ತು. ಅಲ್ಲಿನ ವ್ಯಾಪಾರಿಗಳು ಯಾವಾಗಲೂ ಬೆಲೆಯನ್ನು ʼ9ʼ ಅಂಕಿಯೊಡನೆ ಕೊನೆಗೊಳಿಸುತ್ತಾರೆ. ಇದಕ್ಕೆ ಕಾರಣ ಸಂಖ್ಯಾಶಾಸ್ತ್ರದ ಮೇಲಿನ ಅವರ ನಂಬಿಕೆಯೆಂದು ಮಾರ್ಕೆಟ್ಟಿನ ಸೂಪರ್‌ವೈಸರ್‌ ಅರವಿಂದ್‌ ಪಳನಿಸ್ವಾಮಿ ಹೇಳಿದರು.

ಸುಮಾರು 50 ಲಾಟ್‌ಗಳ ಸ್ಯಾಂಪಲ್‌ ಅರಿಶಿನವನ್ನು ತಟ್ಟೆಗಳಲ್ಲಿ ಸಾಲಾಗಿ ಇರಿಸಲಾಗಿರುತ್ತದೆ. ವ್ಯಾಪಾರಿಗಳು ಅವುಗಳನ್ನು ಮೂಸಿ, ಮುರಿದು ನೋಡುತ್ತಾರೆ. ಕೆಲವೊಮ್ಮೆ ಮಾದರಿಯನ್ನು ನೆಲದ ಮೇಲೆ ಬೌನ್ಸ್‌ ಮಾಡಿಯೂ ನೋಡುತ್ತಾರೆ! ಅದರ ತೂಕ ನೋಡಿ ಬೆರಳುಗಳ ನಡುವಿನಿಂದ ಬೀಳಿಸುತ್ತಾರೆ. ಟಿಪ್ಪಣಿಗಳನ್ನು ಮಾಡಿಕೊಂಡು ನಂತರ ಬಿಡ್‌ ಮಾಡುತ್ತಾರೆ. ಅಂದು ದೊಡ್ಡ ಮಸಾಲೆ ಕಂಪನಿಯೊಂದರ ಖರೀದಿ ವಿಭಾಗದ ಪ್ರತಿನಿಧಿಯಾಗಿ ಅಲ್ಲಿಗೆ ಬಂದಿದ್ದ ಸಿ. ಆನಂದ್‌ ಕುಮಾರ್‌ ಅವರು ತಾನು “ಕೇವಲ ಫಸ್ಟ್‌ ಕ್ವಾಲಿಟಿ” ಅರಿಶಿನ ಖರೀದಿ ಮಾಡಿದ್ದಾಗಿ ತಿಳಿಸಿದರು. 459 ಚೀಲಗಳಷ್ಟು ಅರಿಶಿನವನ್ನು ಪ್ರತಿನಿಧಿಸುತ್ತಿದ್ದ ಸ್ಯಾಂಪಲ್‌ನಿಂದ ಅವರು 23 ಚೀಲಗಳಷ್ಟು ಅರಿಶಿವನ್ನು ಖರೀದಿಸಿದ್ದರು.

ಮಾರುಕಟ್ಟೆಯ ವಾರ್ಷಿಕ ವಹಿವಾಟು 40 ಕೋಟಿ ರೂ. ಎಂದು ಅರವಿಂದ್ ಮಂಡಿಯ ಪಕ್ಕದಲ್ಲಿರುವ ತಮ್ಮ ಕಚೇರಿಯಲ್ಲಿ ನನಗೆ ಹೇಳಿದರು. ಕೊಡುಮುಡಿಯಿಂದ ಎಲ್. ರಸೀನಾ ಶೆಡ್‌ನ ಸಿಮೆಂಟ್ ಮೆಟ್ಟಿಲುಗಳ ಮೇಲೆ ಕುಳಿತಿದ್ದರು. ಅವರು ತಂದ 30 ಕ್ವಿಂಟಾಲ್ ಅರಿಶಿನಕ್ಕೆ ಕ್ವಿಂಟಾಲಿಗೆ ಕೇವಲ 5,489 ರೂ. ಬೆಲೆಗೆ ಖರೀದಿಸಲಾಗಿತ್ತು.

ತನ್ನದೇ ಆದ ಸಂಗ್ರಹ ವ್ಯವಸ್ಥೆಯಿಲ್ಲದಿರುವ ಅವರು, ಸರಕಾರಿ ಗೋದಾಮಿಗೆ ತಂದು ಸಂಗ್ರಹಿಸುತ್ತಾರೆ. ಇಲ್ಲಿ ದಿನವೊಂದಕ್ಕೆ ಒಂದು ಕ್ವಿಂಟಾಲಿಗೆ 20 ಪೈಸೆಗಳ ಬಾಡಿಗೆ ಪಡೆಯಲಾಗುತ್ತದೆ. ಕೆಲವು ರೈತರು ಉತ್ತಮ ಬೆಲೆಗಾಗಿ ನಾಲ್ಕು ವರ್ಷಗಳ ತನಕ ಕಾಯುತ್ತಾರೆ. ಏಳು ತಿಂಗಳು ಕಾಯ್ದು ಮತ್ತು ಇಲ್ಲಿಗೆ ಐದು ಬಾರಿ ಬಂದು ಹೋದ ನಂತರ ರಸೀನಾ ನಷ್ಟದ ಬೆಲೆಗೇ ಮಾರಲು ತೀರ್ಮಾನಿಸಿದರು.

ಈರೋಡ್, ಕೊಯಮತ್ತೂರು ಮತ್ತು ಸೇಲಂ ಜಿಲ್ಲೆಗಳನ್ನು ಒಳಗೊಂಡಿರುವ ಕೊಂಗು ವಲಯದ ಅನೇಕ ರೈತರು ಕೃಷಿಯನ್ನು ಹೆಚ್ಚುವರಿ ಉದ್ಯೋಗವೆಂದು ಪರಿಗಣಿಸುತ್ತಾರೆ ಎಂದು ದೈವಸಿಗಾಮಣಿ ಹೇಳುತ್ತಾರೆ. "ಅವರು ಕೃಷಿಯ ಮೇಲೆ ಪೂರ್ತಿಯಾಗಿ ಅವಲಂಬಿತರಾದರೆ ಬದುಕಲು ಪರದಾಡಬೇಕಾಗುತ್ತದೆ."

P.K. Deivasigamani, president of the turmeric farmers' association.
PHOTO • M. Palani Kumar
Labels on the samples exhibited at the turmeric auction
PHOTO • M. Palani Kumar
Labels on the samples exhibited at the turmeric auction
PHOTO • M. Palani Kumar

ಎಡ: ಅರಿಶಿನ ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ದೈವಸಿಗಾಮಣಿ. ನಡುವೆ ಮತ್ತು ಬಲ: ಅರಿಶಿನ ಹರಾಜಿನಲ್ಲಿ ಪ್ರದರ್ಶಿಸಲಾದ ಮಾದರಿಗಳ ಮೇಲಿನ ಲೇಬಲ್ ಗಳು

ಬೆಲೆಯನ್ನು ಅವಲಂಬಿಸಿ ತಮಿಳುನಾಡಿನಲ್ಲಿ ಅರಿಶಿನವನ್ನು ಬಿತ್ತುವ 25,000ದಿಂದ 50,000 ರೈತರಿದ್ದಾರೆ ಎಂದು ಅವರು ಅಂದಾಜಿಸುತ್ತಾರೆ. ಒಂದು ಕ್ವಿಂಟಾಲ್ 17,000 ರೂ.ಗಳಿಗೆ (ಒಂದು ಕಾಲದಲ್ಲಿದ್ದಂತೆ) ಮಾರಾಟವಾಗುವಂತಿದ್ದರೆ, "5 ಕೋಟಿ ಅರಿಶಿನ ರೈತರು" ಇರುತ್ತಿದ್ದರು ಎಂದು ಅವರು ನಗುತ್ತಾರೆ. "ಅದೇ ಕ್ವಿಂಟಾಲ್ ಬೆಲೆ 5,000ಕ್ಕೆ ಕುಸಿದಾಗ, ನೀವು ಕೇವಲ 10,000 ರೈತರನ್ನಷ್ಟೇ ನೋಡುತ್ತೀರಿ."

ದೈವಸಿಗಾಮಣಿ ಒಂದು ಸಲಹೆ ಕೊಡುತ್ತಾರೆ: ವಿವಿಧ ಬೆಳೆಗಳನ್ನು ಬೆಳೆಯಿರಿ. "ಅರಿಶಿನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದನ್ನು ನಿಲ್ಲಿಸಿ" ಎಂದು ಅವರು ಹೇಳುತ್ತಾರೆ. "ಉತ್ಪಾದನೆ ಕಡಿಮೆಯಿದ್ದರೆ, ನಮಗೆ ಉತ್ತಮ ಬೆಲೆ ಸಿಗಬಹುದು."

*****

"ದೊಡ್ಡ ಇಳುವರಿ ಕೊಡುವ ಹೈಬ್ರಿಡ್ ಗಳ ಬದಲಿಗೆ ಸ್ಥಳೀಯ ತಳಿಗಳನ್ನು ಆಯ್ದುಕೊಳ್ಳಿ."
ತಿರು ಮೂರ್ತಿ, ಈರೋಡ್ ಮೂಲದ ಅರಿಶಿನ ಬೆಳೆಗಾರ

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ, ಅವರು ತಮ್ಮ ಎರಡು ಟನ್ ಬೆಳೆಯನ್ನು ಕೊಯ್ಲು ಮಾಡಿದ್ದರು - ಬಾಡಿದ ಅರಿಶಿನ ಎಲೆಗಳಿಂದ ಆವೃತವಾದ ಕಂದು ಬೆಟ್ಟದಂತಿದ್ದ ಅದನ್ನು ಕುದಿಸಿ ಒಣಗಿಸುವ ತಂಡಕ್ಕಾಗಿ ಕಾಯುತ್ತಿದ್ದರು. ತಿರು ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಹಿಂಜರಿದವರಲ್ಲ: ಅವರು ಸೌರ ಶಕ್ತಿಯನ್ನು ಬಳಸುತ್ತಾರೆ ಮತ್ತು ಅದನ್ನು ಪಳಗಿಸಿಕೊಂಡಿದ್ದಾರೆ. ಅವರು ಪಾರಂಪರಿಕ ತಳಿಗಳನ್ನು ನಂಬುತ್ತಾರೆ ಮತ್ತು 'ಈರೋಡ್ ಸ್ಥಳೀಯ ಅರಿಶಿನ' ತಳಿಗಾಗಿ ಗ್ಲೋಬಲ್‌ ಇಂಡಿಕೇಷನ್ ನೀಡಿರುವುದು ಅವರಿಗೆ ಸಂತೋಷ ತಂದಿದೆ.

ಇಳುವರಿ ಬಗ್ಗೆ ಮಾತ್ರ ಕಾಳಜಿ ವಹಿಸುವ ಸಂಶೋಧನಾ ಸಂಸ್ಥೆಗಳ ಕುರಿತು ಅವರು ಅಸಮಾಧಾನ ವ್ಯಕ್ತಡಿಸುತ್ತಾರೆ. ದೊಡ್ಡ ಇಳುವರಿಗೆ ಮಾತ್ರವೇ ಒತ್ತು ನೀಡುವುದರಿಂದ ರಾಸಾಯನಿಕ ಗೊಬ್ಬರದ ಬೆಲೆ ಹೆಚ್ಚಾಗುತ್ತದೆ. "ನಮ್ಮ ಉತ್ಪನ್ನಗಳನ್ನು ಸಮಂಜಸವಾದ ಬೆಲೆಗೆ ಮಾರಾಟ ಮಾಡಲು ಸರ್ಕಾರ ನಮಗೆ ಏಕೆ ಸಹಾಯ ಮಾಡುವುದಿಲ್ಲ?" ನೀತಿ ನಿರೂಪಕರಿಗೆ ನೇರ ಜ್ಞಾನ ಬೇಕು ಎಂದು ಅವರು ವಾದಿಸುತ್ತಾರೆ. ಅವರ ಪತ್ನಿ ಮತ್ತು ವ್ಯವಹಾರದ ಪಾಲುದಾರರಾದ ಗೋಮತಿ ಕೂಡ ಇದನ್ನು ಒಪ್ಪುತ್ತಾರೆ. “ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಮ್ಮ ಜಮೀನಿನಲ್ಲಿ ಕೆಲಸ ಮಾಡಲಿ” ಎಂದು ಇಬ್ಬರೂ ಸಲಹೆ ನೀಡಿದರು. "ಅವರು ನೈಜ ಪ್ರಪಂಚದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಅವರು ಮಿಶ್ರತಳಿಗಳನ್ನು ಹುಡುಕುವ ಕೆಲಸವನ್ನಷ್ಟೇ ಮಾಡುತ್ತಾರೆ." ಅವರ ಆಕ್ರೋಶದಲ್ಲೂ ಅರ್ಥವಿದೆ. ದೊಡ್ಡ ಮತ್ತು ಹೊಳಪಿನ ಮಿಶ್ರತಳಿಗಳ ಬೆಳೆಗೆ ರೂ. 200 ಬೆಲೆ  ಹೆಚ್ಚು ಸಿಗುತ್ತದೆ - ಆದರೆ ಇವುಗಳನ್ನು ಬಹಳಷ್ಟು ರಾಸಾಯನಿಕಗಳನ್ನು ಬಳಸಿ ಬೆಳೆಯಲಾಗುತ್ತದೆ.

ವ್ಯವಸಾಯ ಆರಂಭಿಸಿದಾಗ ಹಣ ಹೊಂದಿಸುವುದು ಬಹಳ ಕಷ್ಟವಾಗಿತ್ತು. ಅರಿಶಿನದಂತಹ ವಾರ್ಷಿಕ ಬೆಳೆಗಳ ಹಣ ಕೈ ಸೇರಲು ಒಂದು ವರ್ಷ ಬೇಕಿರುತ್ತದೆ. ತಿರು ಅವರಿಗೆ ಬ್ಯಾಂಕಿನಲ್ಲಿ ಸಾಲ ಸಿಗುವುದಿಲ್ಲ; ಅವರ ಮೃತ ತಂದೆ ಮಗನ ಜಾಮೀನಿನ ಮೇಲೆ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಅವರು ಈಗಲೂ ಆ 14 ಲಕ್ಷ ರೂಪಾಯಿಗಳ ಸಾಲವನ್ನು ತೀರಿಸುತ್ತಿದ್ದಾರೆ. ಈ ಸಾಲವನ್ನು ಕಟ್ಟಲು, ಅವರು ಅನೌಪಚಾರಿಕ ಮೂಲದಿಂದ "ಎರಡು ರೂಪಾಯಿ ಬಡ್ಡಿ ಸಾಲ" (ನೂರಕ್ಕೆ ಎರಡು ರೂಪಾಯಿಗಳ ಬಡ್ಡಿ - ತಿಂಗಳಿಗೆ). ಅಥವಾ ವರ್ಷಕ್ಕೆ 24 ಶೇ. ಬಡ್ಡಿಯ ಸಾಲವನ್ನು ಪಡೆದರು.

The harvested turmeric is covered with dried leaves, waiting to be boiled, dried and polished.
PHOTO • Aparna Karthikeyan
Thiru uses solar power and champions it
PHOTO • M. Palani Kumar

ಎಡ: ಕುದಿಸಿ, ಒಣಗಿಸಿ ಮತ್ತು ಹೊಳಪು ಮಾಡಲು ಒಣಗಿದ ಎಲೆಗಳಿಂದ ಅರಿಶಿನ ಬೆಳೆಯನ್ನು ಮುಚ್ಚಲಾಗುತ್ತದೆ. ಬಲ: ತಿರು ಸೌರ ಶಕ್ತಿಯನ್ನು ಬಳಸುತ್ತಾರೆ ಮತ್ತು ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ

"ಕೆಲವು ಫೇಸ್‌ಬುಕ್ ಸ್ನೇಹಿತರು ನನಗೆ ಆರು ತಿಂಗಳವರೆಗೆ ಹಣವನ್ನು ಬಡ್ಡಿಯಿಲ್ಲದೆ ಸಾಲವಾಗಿ ನೀಡಿದರು. ಇದರಿಂದಾಗಿ ನನಗೆ ಸಾಲ ಮಾಡುವುದು ತಪ್ಪಿತು. ನಾನು ಅದನ್ನು ನನ್ನ ಸ್ನೇಹಿತರಿಗೆ ಹಿಂದಿರುಗಿಸಿದೆ. ಆದರೆ ನಾನು ಇನ್ನೂ ನನ್ನ ತಂದೆಯ ಬ್ಯಾಂಕ್ ಸಾಲವನ್ನು ತೀರಿಸುತ್ತಿದ್ದೇನೆ.” ಅವರು ಈಗ ತಿಂಗಳಿಗೆ ರೂ. 50,000 ಗಳಿಸುತ್ತಾರೆ, ಇದಕ್ಕಾಗಿ ಮೂವರು ವಯಸ್ಕರು (ತಿರು, ಅವರ ತಾಯಿ, ಗೋಮತಿ) ದಿನಕ್ಕೆ 12 ಗಂಟೆಗಳವರೆಗೆ ಕೆಲಸ ಮಾಡುತ್ತಾರೆ - ಆದರೆ ಅವರ ದುಡಿಮೆಯನ್ನು ಬೆಳೆ ವೆಚ್ಚದ ಭಾಗವಾಗಿ ನೋಡುವುದಿಲ್ಲ.

ಮಂಜಲ್ ಪುಡಿ ಮಾಡುವ ಕೋಣೆಯಲ್ಲಿ, ತಿರು ಒಂದು ಹಿಡಿ ಬಲ್ಬ್ ಕೊಂಬುಗಳನ್ನು ಎತ್ತಿಕೊಂಡರು. ಅವು ಹೊಳೆಯುವ ಕಿತ್ತಳೆ-ಹಳದಿ ಬಣ್ಣದಲ್ಲಿದ್ದವು ಮತ್ತು ಕಲ್ಲಿನಂತೆ ಗಟ್ಟಿಯೂ. ಅವುಗಳನ್ನು ಗ್ರೈಂಡಿಂಗ್ ಯಂತ್ರಕ್ಕೆ ಹಾಕುವ ಮೊದಲು ಕಲ್ಲಿನ ಒರಳಿನಲ್ಲಿ ಪುಡಿ ಮಾಡಬೇಕು. ಇಲ್ಲವಾದರೆ ಅವು ಗ್ರೈಂಡರ್‌ನ ಮೆಟಲ್‌ ಹಲ್ಲುಗಳನ್ನು ತುಂಡು ಮಾಡಿಬಿಡುತ್ತವೆ.

ಕೋಣೆಯೊಳಗೆ ಹೊಕ್ಕ ಕೂಡಲೇ ಅರಿಶಿನದ ಘಮ್ಮೆನ್ನುವ ವಾಸನೆ ಒಮ್ಮೆ ಮೈಮನವನ್ನು ಆವರಿಸಿ ಉಲ್ಲಸಿತಗೊಳಿಸುತ್ತದೆ. ಚಿನ್ನದ ಬಣ್ಣ ಕೋಣೆಯ ಪ್ರತಿಯೊಂದು ವಸ್ತುವಿನ ಮೇಲೂ ಆವರಿಸಿದೆ: ಎಲೆಕ್ಟ್ರಿಕ್‌ ಗ್ರೈಂಡಿಂಗ್‌ ಮಿಲ್‌, ಸ್ವಿಚ್‌ ಬೋರ್ಡ್:‌ ಅಲ್ಲಿರುವ ಜೇಡರ ಬಲೆ ಕೂಡಾ ಅರಿಶಿನದ ಧೂಳಿನಿಂದ ಅಲಂಕೃತಗೊಂಡು ಚಿನ್ನದ ಹಾರದಂತೆ ಹೊಳೆಯುತ್ತಿತ್ತು.

ಮರುಧನಿ (ಗೋರಂಟಿ) ಅವರ ಅಂಗೈಯನ್ನು ದೊಡ್ಡ ವೃತ್ತದ ಸುತ್ತಲೂ ಇಟ್ಟ ಚುಕ್ಕೆಗಳ ರೂಪದಲ್ಲಿ ಅಲಂಕರಿಸಿವೆ. ಅವರ ಮುಂದೋಳುಗಳು ಕಠಿಣ, ದೈಹಿಕ ಪರಿಶ್ರಮದ ಕಥೆಯನ್ನು ಹೇಳುತ್ತವೆ. ಆ ಕೈಗಳ ಹಿಂದಿರುವ ತಮ್ಮ ಬೆಳೆಯ ಮೌಲ್ಯವರ್ಧನೆಗಾಗಿ ಅವರು ಮಾಡುವ ಅಸಾಮಾನ್ಯ ಪ್ರಯತ್ನಗಳು ಮತ್ತು ವಿಫಲವಾದ ಕೆಲವು ದುಬಾರಿ ಪ್ರಯೋಗಗಳು ನಮಗೆ ಕಾಣುವುದಿಲ್ಲ. ಕಳೆದ ವರ್ಷವೂ ಇದೇ ರೀತಿ ಶುಂಠಿ ಬೆಳೆ ನಷ್ಟ ಎದುರಾಗಿತ್ತು. ಆದರೆ ಅವರು ಕಳೆದುಕೊಂಡ 40,000 ರೂ.ಗಳನ್ನು "ಪಾಠ"ವೆಂದು ನೋಡುತ್ತಾರೆ. ಗೋಮತಿ ನಮಗಾಗಿ ಬಿಸಿ ಬಿಸಿ ಬಜ್ಜಿ, ಚಹಾ ಮಾಡುತ್ತಿದ್ದಾಗ ಈ ನಷ್ಟದ ಕುರಿತಾಗಿ ಹೇಳಿದರು.

*****

"ಅರಿಶಿನದ ಪ್ರಾಮುಖ್ಯತೆಯನ್ನು ಪರಿಗಣಿಸಿ, ಸುಮಾರು 100 ಎಕರೆ ಪ್ರದೇಶದಲ್ಲಿ ಈರೋಡ್ ಜಿಲ್ಲೆಯ ಭವಾನಿಸಾಗರದಲ್ಲಿ ಅರಿಶಿನಕ್ಕಾಗಿ ಹೊಸ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಯೋಜಿಸಲಾಗಿದೆ."
ಎಂ.ಆರ್.ಕೆ. ಪನೀರ್ ಸೆಲ್ವಂ, ಕೃಷಿ ಸಚಿವರು, ತಮಿಳುನಾಡು

ಭಾರತವು ತನ್ನ ಉತ್ತಮ ಗುಣಮಟ್ಟದ ಅರಿಶಿನನ್ನು ರೂ. 93.5 ಕೆಜಿಯಂತೆ ರಫ್ತು ಮಾಡಿ ಮತ್ತೆ 86 ರೂಪಾಯಿಗಳಿಗೆ ಆಮದು ಮಾಡಿಕೊಂಡರೆ ರೈತ ಹೇಗೆ ಯಶಸ್ವಿಯಾಗುತ್ತಾನೆ? ಈ ಆಮದು ನಾಲ್ಕು ವರ್ಷಗಳ ಹಿಂದೆ ಇದ್ದಿದ್ದಕ್ಕಿಂತಲೂ ಎರಡು ಪಟ್ಟು ಹೆಚ್ಚಾಗಿದೆ. ಈ 7 ರೂಪಾಯಿ ವ್ಯತ್ಯಾಸವು ಭಾರತೀಯ ರೈತನನ್ನು ದುರ್ಬಲಗೊಳಿಸುವುದಲ್ಲದೆ, ವೇಗವಾಗಿ ಬೆಳೆಯುತ್ತಿರುವ ಆಮದುಗಳ ಸರಣಿಯು ಭವಿಷ್ಯದಲ್ಲಿ ನ್ಯಾಯಯುತ ಬೆಲೆಯ ಖಾತರಿಯನ್ನು ಇಲ್ಲವಾಗಿಸುತ್ತದೆ.

A small batch of turmeric waiting to be cleaned
PHOTO • M. Palani Kumar
Thiru Murthy and T. Gomathy with their electric grinding mill
PHOTO • M. Palani Kumar

ಎಡ: ಸ್ವಚ್ಛಗೊಳ್ಳಲು ಕಾಯುತ್ತಿರುವ ಅರಿಶಿನದ ಒಂದು ಸಣ್ಣ ಬ್ಯಾಚ್. ಬಲ: ತಿರು ಮೂರ್ತಿ ಮತ್ತು ಟಿ. ಗೋಮತಿ ತಮ್ಮ ಎಲೆಕ್ಟ್ರಿಕ್ ಗ್ರೈಂಡಿಂಗ್ ಮಿಲ್ ಎದುರು

ತಮಿಳುನಾಡು ಸರ್ಕಾರ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ : ಕೃಷಿ ಸಚಿವ ಪನೀರ್ ಸೆಲ್ವಂ ಅವರು ಭಾರತವು ಅರಿಶಿನದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿರುವಾಗಲೇ, ಅದು ಇತರ ದೇಶಗಳಿಂದ "ಕರ್ಕ್ಯುಮಿನ್ ಅಂಶವಿರುವ ತಳಿಗಳನ್ನು" ಆಮದು ಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ವಿಶೇಷ ಕೃಷಿ ಬಜೆಟ್ ಮಂಡಿಸುವಾಗ, ಅರಿಶಿನಕ್ಕಾಗಿ ಹೊಸ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರವನ್ನು ಪನ್ನೀರ್‌ ಸೆಲ್ವಂ ಘೋಷಿಸಿದರು , ಇದಕ್ಕಾಗಿ ರಾಜ್ಯ ಸರ್ಕಾರ ರೂ. 2 ಕೋಟಿ ಅನುದಾನ ನೀಡಲಿದೆ. "ರೈತರು ತಮ್ಮ ಬೆಳೆಗಳನ್ನು ಬೇರೆ ಬೆಳೆಗೆ ಬದಲಾಯಿಸಬೇಕಾಗಿಲ್ಲ" ಎಂದು ರಾಜ್ಯವು ಉತ್ತಮ ತಳಿಗಳು, ಮೌಲ್ಯವರ್ಧನೆ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡುವ ಭರವಸೆಯನ್ನು ಪರಿಣಾಮಕಾರಿಯಾಗಿ ನೀಡಿದೆ.

ತಿರು ಮೂರ್ತಿಯವರ ಫಿಲಾಸಫಿ ಬಹಳ ಸರಳವಾದುದು, ಅದು ಗ್ರಾಹಕರಿಗೆ ಉತ್ತಮ ಉತ್ಪನ್ನವನ್ನು ತಲುಪಿಸಿ ಎನ್ನುವುದು. “ನನ್ನ ಉತ್ಪನ್ನ ಒಳ್ಳೆಯ ಗುಣಮಟ್ಟವನ್ನು ಹೊಂದಿದ್ದರೆ, 300 ಜನರು ಖರೀದಿಸುತ್ತಾರೆ ಮತ್ತು 3,000 ಜನರಿಗೆ ಅದರ ಕುರಿತು ಹೇಳುತ್ತಾರೆ. ಆದರೆ ನಮ್ಮ ಉತ್ಪನ್ನ ಕಳಪೆಯಾಗಿದ್ದರೆ , ಅದೇ 300 ಜನರು ಇನ್ನೂ 30,000 ಜನರಿಗೆ ಕೆಟ್ಟದಾಗಿದೆಯೆಂದು ಹೇಳಿಕೊಂಡು ಬರುತ್ತಾರೆ.” ಸಾಮಾಜಿಕ ಮಾಧ್ಯಮ ಮತ್ತು ಬಾಯಿಮಾತಿನ ಪ್ರಚಾರವನ್ನು ಬಳಸಿಕೊಂಡು - ಅವರು 10 ತಿಂಗಳಲ್ಲಿ 3 ಟನ್-ಮಂಜಲ್ ಬೆಳೆಯನ್ನು ಮಾರಾಟ ಮಾಡುತ್ತಾರೆ, ಎಂದರೆ ತಿಂಗಳಿಗೆ ಸರಾಸರಿ 300 ಕೆ.ಜಿ. ಆಗ ಅವರು ಕೆಲವು ಪ್ರಮುಖ ಪಾಠಗಳನ್ನು ಕಲಿತಿದ್ದರು. ಒಂದು, ಸಗಟು ಮಾರುಕಟ್ಟೆಯಲ್ಲಿ ಸಾವಯವ ಅರಿಶಿನಕ್ಕೆ ಆದ್ಯತೆಯಿಲ್ಲ. ಎರಡನೆಯದಾಗಿ, ಒಬ್ಬ ರೈತ ನೇರವಾಗಿ ಮಾರಾಟ ಮಾಡದ ಹೊರತು, ಅವನು ಅಥವಾ ಅವಳು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಸಾಧ್ಯವಿಲ್ಲ.

ತಿರು ಅರಿಶಿನವನ್ನು ಎರಡು ರೀತಿಯಲ್ಲಿ ಸಂಸ್ಕರಿಸುತ್ತಾರೆ. ಒಂದು ಕೊಂಬುಗಳನ್ನು ಕುದಿಸುವುದು, ಒಣಗಿಸುವುದು ಮತ್ತು ಪುಡಿ ಮಾಡುವುದು. ಇದು ಸಾಂಪ್ರದಾಯಿಕ ವಿಧಾನವಾಗಿದೆ. ಅವರು ಲ್ಯಾಬ್ ಫಲಿತಾಂಶಗಳನ್ನು ನನಗೆ ತೋರಿಸಿದರು. ಈ ವಿಧಾನದಲ್ಲಿ ಪುಡಿ ಮಾಡಿದ ಅರಿಶಿನದಲ್ಲಿ ಕರ್ಕುಮಿನ್ ಅಂಶವು ಶೇಕಡಾ 3.6 ಇತ್ತು. ಎರಡನೆಯ ವಿಧಾನವು ಅಸಾಂಪ್ರದಾಯಿಕವಾದುದು, ಅಲ್ಲಿ ಕೊಂಬುಗಳನ್ನು ಕತ್ತರಿಸಿ, ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಲಾಗುತ್ತದೆ. ಇದು ಕರ್ಕುಮಿನ್ ಅಂಶವನ್ನು ಶೇಕಡಾ 8.6ರಷ್ಟು ದಾಖಲಿಸುತ್ತದೆ. ಹೆಚ್ಚಿನ ಕರ್ಕ್ಯುಮಿನ್ ಅಂಶದ ಕುರಿತ ಚರ್ಚೆಯು ಅರ್ಥಹೀನ ಎಂದು ಅವರು ಹೇಳುತ್ತಾರೆ. "ಆದಾಗ್ಯೂ, ಫಾರ್ಮಾ ಉದ್ಯಮಕ್ಕೆ ಇದು ಅರ್ಥಪೂರ್ಣವಾಗಿದೆ. ಆದರೆ ಈ ಹೆಚ್ಚಿನ ಶೇಕಡಾವಾರು ಅಂಶವನ್ನು ಆಹಾರದಲ್ಲೂ ಏಕೆ ಹೊಂದಿರಬೇಕು?" ಎಂದು ಅವರು ವಾದಿಸುತ್ತಾರೆ.

ಅವರು ತಾಜಾ ಕೊಯ್ಲು ಮಾಡಿದ ಅರಿಶಿನವನ್ನೂ ಮಾರುತ್ತಾರೆ. ಇದರ ಬೆಲೆ ರೂ. ಪ್ರತಿ ಕೆಜಿಗೆ 40 (ಪ್ಯಾಕೇಜಿಂಗ್ ಮತ್ತು ಅಂಚೆ ವೆಚ್ಚ ರೂ. 70). ಇದಲ್ಲದೆ, ಗೋಮತಿ ಮತ್ತು ತಿರು ಸೇರಿ ಪ್ರತಿ ತಿಂಗಳು 3,000 ಸಾಬೂನು ಬಿಲ್ಲೆಗಳನ್ನು ತಯಾರಿಸುತ್ತಾರೆ. ಅವರು ಅನೇಕ ಗಿಡಮೂಲಿಕೆಗಳನ್ನು ಸಂಸ್ಕರಿಸಿ ಒಂಬತ್ತು ವಿವಿಧ ರೀತಿಯ ಸೋಪ್ ತಯಾರಿಸುತ್ತಾರೆ. ಅವುಗಳಲ್ಲಿ ಎರಡು ಬಗೆಯ ಅರಿಶಿನ ಹೊಂದಿರುವವು, ಅಲೋವೆರಾ, ಕುಪ್ಪಮೇನಿ, ಅರಪು, ಸೀಗೆ ಮತ್ತು ಬೇವು ಕೂಡಾ ಸೇರಿವೆ.

ಅವರ ಹೆಂಡತಿ ಗಂಡನನ್ನು ರೇಗಿಸುತ್ತಾ ಹೇಳುತ್ತಾರೆ, “ಜನರು ನಿಮ್ಮ ಉತ್ಪನ್ನಗಳಿಗೆ ಬಳಸುವ ವಸ್ತುಗಳನ್ನು ಸಾರ್ವಜನಿಕವಾಗಿ ಹೇಳಬೇಡಿ ಎನ್ನುತ್ತಾರೆ. ಆದರೆ ಇವರು ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಾರೆ ಜೊತಗೆ ಮಾಡುವ ವಿಧಾನವನ್ನು ಕೂಡಾ ಹೇಳುತ್ತಾರೆ.” ತಿರು ಅರಿಶಿನದಿಂದ ಹೇರ್‌ ಡೈ ತಯಾರಿಸುವ ವಿಧಾನವನ್ನು ಸಹ ಫೇಸ್ಬುಕ್ಕಿನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅವರು ತಯಾರಿಸುವ ವಿಧಾನಗಳನ್ನು ಬಹಿರಂಗಪಡಿಸುವ ತಮ್ಮ ನಿರ್ಧಾರದ ಕುರಿತು ದೃಢವಾಗಿದ್ದಾರೆ. “ಇತರರೂ ಇದನ್ನು ಪ್ರಯತ್ನಿಸಿ ನೋಡಲಿ, ಆದರೆ ಆರಂಭಿಕ ಉತ್ಸಾಹವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ,” ಎನ್ನುತ್ತಾರವರು.

*****

“ರೈತನು ತನ್ನ ಅತ್ಯುತ್ತಮ ಉತ್ಪನ್ನಗಳನ್ನು ಎಂದಿಗೂ ತಾನೇ ತಿನ್ನುವುದಿಲ್ಲ. ಅವನು ಮಾರಲು ಸಾಧ್ಯವಿಲ್ಲದ್ದನ್ನೇ ತಿನ್ನುತ್ತಾನೆ. ನಮ್ಮ ಉತ್ಪನ್ನಗಳ ವಿಷಯದಲ್ಲೂ ಹೀಗೆ ನಡೆಯುತ್ತದೆ. ನಾವು ಮಾರಲು ಸಾಧ್ಯವಿಲ್ಲದ ಬಾಳೆಹಣ್ಣುಗಳನ್ನು ತಿನ್ನುತ್ತೇವೆ; ಮುರಿದ ಸಾಬೂನುಗಳನ್ನು ಬಳಸುತ್ತೇವೆ ..."
ಟಿ.ಗೋಮತಿ, ಅರಿಶಿನ ಬೆಳೆಗಾರರು, ಈರೋಡ್

Thiru and Gomathy with their children in the workshop, behind their living room.
PHOTO • M. Palani Kumar
Gomathy and her daughter shelving soaps in the workshop
PHOTO • M. Palani Kumar

ಎಡ: ತಮ್ಮ ವಾಸದ ಕೋಣೆಯ ಹಿಂದಿರುವ ವರ್ಕ್‌ಶಾಪಿನಲ್ಲಿ ತಿರು ಮತ್ತು ಗೋಮತಿ ತಮ್ಮ ಮಕ್ಕಳೊಂದಿಗೆ. ಬಲ: ವರ್ಕ್‌ಶಾಪಿನಲ್ಲಿ ಗೋಮತಿ ಮತ್ತು ಅವರ ಮಗಳು ಸಾಬೂನುಗಳನ್ನು ಜೋಡಿಸುತ್ತಿರುವುದು

ತಿರು ಮೂರ್ತಿ ಮತ್ತು ಗೋಮತಿ 2011ರಲ್ಲಿ ಮನೆಯಲ್ಲಿ ನಿಶ್ಚಯಿಸಿದಂತೆ ವಿವಾಹವಾದರು. ಅವರು ಾ ಹೊತ್ತಿಗಾಗಲೇ ಸಾವಯವ ಕೃಷಿಕರಾಗಿದ್ದರು - ಆದರೆ ಮೌಲ್ಯವರ್ಧನೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. 2013ರಲ್ಲಿ, ಫೇಸ್ ಬುಕ್ ಸಂಪರ್ಕಕ್ಕೆ ಬಂದರು. ಅವರು ಅಲ್ಲಿ ಹಂಚಿಕೊಂಡ ಪೋಸ್ಟ್ ಸಾಮಾಜಿಕ ಮಾಧ್ಯಮದ ಶಕ್ತಿ, ಗ್ರಾಮೀಣ-ನಗರ ಸಂಪರ್ಕ ರಾಹಿತ್ಯತೆ ಮತ್ತು ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಯೋಚಿಸುವಂತೆ ಮಾಡಿತು.

ಈ ಆಲೋಚನೆಗಳಿಗೆ ಸ್ಫೂರ್ತಿ ನೀಡಿದ್ದು ಅವರ ಬೆಳಗಿನ ತಿಂಡಿಯ ಫೋಟೋ. ತೀರಾ ಸಾಮಾನ್ಯ ಆಹಾರವಾಗಿ ಕಾಣುವ ರಾಗಿ ಕಳಿ (ಮುದ್ದೆ)ಯನ್ನು ಜನರು ಮೆಚ್ಚಿಕೊಂಡಿದ್ದರು ಮತ್ತು ತಮ್ಮ ಪೋಸ್ಟಿಗೆ ಬಂದ ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ನೋಡಿ ಅವರು ಉತ್ಸುಕರಾಗಿದ್ದರು. ನಂತರ ಅವರು ನಿಯಮಿತವಾಗಿ ಜಮೀನಿನ ವಿವರಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು. ಎಲ್ಲವನ್ನೂ ಆನ್‌ಲೈನ್‌ನಲ್ಲಿ ರೆಕಾರ್ಡ್ ಮಾಡಲು ಪ್ರಾರಂಭಿಸಿದೆ: ಕಳೆ ಕೀಳುವುದು, ಸಾವಯವ ಗೊಬ್ಬರ ಹಾಕುವುದು ಇತ್ಯಾದಿ.

ತನ್ನ ಹೊಲದ ಮೊದಲ ಅರಿಶಿನ ಬೆಳೆಯ ಫಸಲನ್ನು ಕೊಯ್ಲು ಮಾಡಿದಾಗ, ಅದನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಿದನು. ಗೋಮತಿ ಕೂಡಲೇ ಗಂಡನೊಡನೆ ಕೆಲಸ ಮಾಡಲು ಆರಂಭಿಸಿದರು. "ಸಾಬೂನುಗಳು, ಎಣ್ಣೆಗಳು ಮತ್ತು ಪೌಡರ್‌ಗಳ ಆರ್ಡರ್‌ಗಳು ನನ್ನ ಫೋನ್‌ಗೆ WhatsApp ನಲ್ಲಿ ಬರುತ್ತವೆ. ನಾನು ಆ ವಿವರಗಳನ್ನು ಅವಳಿಗೆ ಕಳುಹಿಸುತ್ತೇನೆ." ಗೋಮತಿ ತಮ್ಮ ಹತ್ತು ವರ್ಷದ ಮಗ ನಿತುಲನ್ ಮತ್ತು ನಾಲ್ಕು ವರ್ಷದ ಮಗಳು ನಿಗಾಳಿನಿಯನ್ನು ನೋಡಿಕೊಂಡು, ಮನೆಗೆಲಸವನ್ನು ಸಹ ನೋಡಿಕೊಳ್ಳುತ್ತಾ ಇಡೀ ಪ್ಯಾಕಿಂಗ್ ಮತ್ತು ಶಿಪ್ಪಿಂಗ್ ವಿಭಾಗವನ್ನು ನಿರ್ವಹಿಸುತ್ತಾರೆ.

ಕೋವಿಡ್ ಲಾಕ್‌ಡೌನ್‌ಗಳು, ಮಗನ ಆನ್‌ಲೈನ್ ತರಗತಿಗಳು ಜೀವನವನ್ನು ಕಷ್ಟಕರವಾಗಿಸಿದೆ. ಒಮ್ಮೆ ನಾವು ಹೋದಾಗ ಮಕ್ಕಳು ಗಾಜಿನ ಬಾಟಲಿಗಳಲ್ಲಿ ಕಪ್ಪೆಗಳೊಂದಿಗೆ ಆಟವಾಡುತ್ತಿದ್ದರೆ ಅವರ ನಾಯಿ ಅವುಗಳನ್ನು ಕುತೂಹಲದಿಂದ ನೋಡುತ್ತಿತ್ತು. ಮತ್ತೊಂದು ಬಾರಿ, ಅವರು ಸ್ಟೀಲ್ ಪೈಪ್ ಅನ್ನು ಹತ್ತುತ್ತಿದ್ದರು. "ಇತ್ತೀಚೆಗೆ ಇದೇ ಅವರು ಕಲಿತದ್ದು" ಎಂದು ಗೋಮತಿ ನಿಟ್ಟುಸಿರು ಬಿಟ್ಟರು.

ಗ್ರಾಮದ ಮಹಿಳೆಯೊಬ್ಬರು ಗೋಮತಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.“ನಮ್ಮ ಗ್ರಾಹಕರು ನಮ್ಮ ಕ್ಯಾಟಲಾಗ್‌ನಲ್ಲಿರುವ 22 ಉತ್ಪನ್ನಗಳಲ್ಲಿ ಯಾವುದನ್ನಾದರೂ ಕೇಳಬಹುದು. ಆದರೆ ಅದನ್ನು ತಯಾರಿಸುವುದು ಸುಲಭವಲ್ಲ,” ಎಂದು ಗೋಮತಿ ಹೇಳಿದರು. ಅವರು ಮನೆಯನ್ನು ನಡೆಸುತ್ತಾರೆ; ಈ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ. ಮಾತನಾಡುವುದಕ್ಕಿಂತ ಹೆಚ್ಚಾಗಿ ನಗುತ್ತಾರೆ.

ದಿನವಿಡೀ ಕನಿಷ್ಠ 10 ಗ್ರಾಹಕರಿಗೆ ತಿರು, ಸ್ಥಳೀಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಬೆಲೆಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ತನ್ನ ಅರಿಶಿನ ಪುಡಿಯನ್ನು ಏಕೆ ಮಾರಾಟ ಮಾಡುತ್ತಾರೆನ್ನುವುದನ್ನು ವಿವರಿಸುತ್ತಾರೆ. ಸಾವಯವ ಕೃಷಿ ಮತ್ತು ಕೀಟನಾಶಕಗಳ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ನಾನು ದಿನಕ್ಕೆ ಕನಿಷ್ಠ ಎರಡು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ - ಅಲ್ಲಿ ಅವರಿಗೆ 30,000 ಅನುಯಾಯಿಗಳಿದ್ದಾರೆ - ಸುಮಾರು 1,000 ಜನರು ಅದನ್ನು 'ಲೈಕ್' ಮಾಡುತ್ತಾರೆ ಮತ್ತು 200 ಜನರು ಕಾಮೆಂಟ್ ಮಾಡುತ್ತಾರೆ. ಅವರು ಪ್ರಶ್ನೆಗಳನ್ನು ಕೇಳುತ್ತಾರೆ. “ಅವರಿಗೆ ಉತ್ತರ ನೀಡದಿದ್ದರೆ ಅವರ ದೃಷ್ಟಿಯಲ್ಲಿ ನಾನು ‘ನಕಲಿ ರೈತʼ ಆಗುತ್ತೇನೆ. ಎನ್ನುತ್ತಾರೆ” ತಿರು.

Weighed and packed turmeric powder, which Thiru sells directly through social media.
PHOTO • M. Palani Kumar
Soaps and bottles of hair oil, ready to be sold
PHOTO • M. Palani Kumar
Soaps and bottles of hair oil, ready to be sold
PHOTO • M. Palani Kumar

ಎಡಕ್ಕೆ: ತೂಕ ಮತ್ತು ಪ್ಯಾಕ್ ಮಾಡಿದ ಅರಿಶಿನ ಪುಡಿ, ಇದನ್ನು ತಿರು ಸಾಮಾಜಿಕ ಮಾಧ್ಯಮದ ಮೂಲಕ ನೇರವಾಗಿ ಮಾರಾಟ ಮಾಡುತ್ತಾರೆ. ನಡುವೆ ಮತ್ತು ಬಲ: ಮಾರಾಟಕ್ಕೆ ಸಿದ್ಧವಿರುವ ಸಾಬೂನುಗಳು ಮತ್ತು ಹೇರ್ ಆಯಿಲ್ ಬಾಟಲಿಗಳು

ಜಮೀನಿನಲ್ಲಿ ಅವರ ಕೆಲಸ, ಅವರ ಇ-ಬಿಸಿನೆಸ್ ("ಕಳೆದ ತಿಂಗಳವರೆಗೆ ಇದನ್ನು ಇ-ಬಿಸಿನೆಸ್ ಎನ್ನುತ್ತಾರೆಂದು ನನಗೆ ತಿಳಿದಿರಲಿಲ್ಲ!") ಅವರು ಐದು ವರ್ಷಗಳಿಂದ ರಜೆಯ ಮೇಲೆ ಎಲ್ಲೂ ಹೋಗದಂತೆ ತಡೆದಿವೆ "ಇನ್ನೂ ಬಹಳ ಸಮಯ ಬೇಕಾಗಬಹುದು" ಎಂದು ಗೋಮತಿ ನಕ್ಕರು. "ಅವರು ಆರು ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗೆ ಇರಲು ಸಾಧ್ಯವಿಲ್ಲ, ಅವರು ತನ್ನ ಹಸುಗಳು, ಬೆಳೆ ಇತ್ಯಾದಿಗಳನ್ನು ನೋಡಿಕೊಳ್ಳಲು ಮನೆಗೆ ಮರಳಲೇಬೇಕು."

ಸಂಬಂಧಿಕರ ಮನೆಗಳಲ್ಲಿ ಮದುವೆಯಿದ್ದರೆ, ಅವರ ತಾಯಿ ಹಾಜರಾಗುತ್ತಾರೆ ಮತ್ತು ಅವರ ಅಣ್ಣ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ತಿರುವಿಗೆ ಹಾಜರಾಗಲು ಸಮಯಾವಕಾಶವಿರುವುದಿಲ್ಲ. "COVID-19 ನಂತರ, ನಾವು ಸ್ವಲ್ಪ ಹಣವನ್ನು ಉಳಿಸಿದ್ದೇವೆ" ಎಂದು ಅವರು ತಮಾಷೆಯಾಗಿ ಹೇಳಿದರು. “ಸಾಮಾನ್ಯವಾಗಿ, ನಾವು ಕಾರ್ಯಕ್ರಮಗಳಿಗೆ ಕೊಯಮತ್ತೂರ್‌ ಹೋಗಬೇಕಿರುತ್ತದೆ. ಈಗ ನಾವು ಆ 1,000 ರೂಪಾಯಿ ಪೆಟ್ರೋಲ್‌ ಹಣ ಉಳಿಸುತ್ತಿದ್ದೇವೆ. ಈಗ ಕಾರ್ಯಕ್ರಮಗಳು ನಡೆಯುತ್ತಿಲ್ಲ.”

ಕೂಲಿಕಾರರು ಜಮೀನಿಗೆ ಬಂದಾಗ, “ಅಮ್ಮ ಅವರೊಂದಿಗೆ ಕೆಲಸ ಮಾಡುತ್ತಾರೆ. ನಾನು ನನ್ನ ಹೆಚ್ಚಿನ ಸಮಯವನ್ನು ಈ ಕೆಲಸದಲ್ಲಿ ಕಳೆಯುತ್ತೇನೆ.” ನಾನು ಎರಡು ಬಾರಿ ಬಂದಾಗಲೂ, ಗೋಮತಿ ಅಡುಗೆಮನೆಯಲ್ಲಿ ಅಥವಾ ಅವರ ವರ್ಕ್‌ಶಾಪ್‌ನಲ್ಲಿದ್ದರು. ವರ್ಕ್‌ಶಾಪ್ ಲಿವಿಂಗ್ ರೂಮಿನ ಹಿಂದೆ ಎತ್ತರದ ಸೀಲಿಂಗ್ ಹೊಂದಿರುವ ವಿಶಾಲವಾದ ಜಾಗದಲ್ಲಿದೆ. ಕ್ಯಾಬಿನೆಟ್‌ಗಳು ವೈವಿಧ್ಯಮಯವಾದ ಸಾಬೂನುಗಳಿಂದ ತುಂಬಿವೆ, ದಿನಾಂಕದ ಪ್ರಕಾರ ಅಂದವಾಗಿ ಲೇಬಲ್ ಮಾಡಲಾಗಿದೆ. ತಿರು ಮತ್ತು ಗೋಮತಿ ಬೆಳಿಗ್ಗೆ 5:30ರಿಂದ ದಿನಕ್ಕೆ ಕನಿಷ್ಠ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.

ಅವರು ಗಿಡಮೂಲಿಕೆಗಳು ಮತ್ತು ಅವುಗಳ ಗುಣಲಕ್ಷಣಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಆ ಹೆಸರುಗಳನ್ನು ತಮಿಳಿನಲ್ಲಿ ನಿರರ್ಗಳವಾಗಿ ಹೇಳಬಲ್ಲರು. ಗೋಮತಿಯು ಪರಿಮಳವುಳ್ಳ ಕೂದಲಿಗೆ ಹಚ್ಚುವ ಎಣ್ಣೆಗಳನ್ನು ತಯಾರಿಸುತ್ತಾರೆ, ಕೋಲ್ಡ್‌ ಪ್ರೆಸ್‌ ಮಾಡಿ ತೆಗೆದ ತೆಂಗಿನ ಎಣ್ಣೆಯಲ್ಲಿ ಹೂವುಗಳು ಮತ್ತು ಗಿಡಮೂಲಿಕೆಗಳನ್ನು ನೆನೆಸಿ ಬಿಸಿಲಿನಲ್ಲಿ ಬಿಸಿಮಾಡುತ್ತಾರೆ. "ಗ್ರಾಹಕರಿಗೆ ಕಳುಹಿಸುವ ಮೊದಲು ನಾವು ಪ್ರತಿ ಉತ್ಪನ್ನವನ್ನು ಪರೀಕ್ಷಿಸುತ್ತೇವೆ" ಎಂದು ಅವರು ನನಗೆ ಹೇಳಿದರು.

ಇಡೀ ಕುಟುಂಬವು ಈಗ ವ್ಯವಹಾರದಲ್ಲಿ ತೊಡಗಿದೆ ಎಂದು ತಿರು ಹೇಳುತ್ತಾರೆ. ಅವರೆಲ್ಲರ ಸಂಬಳವಿಲ್ಲದ ದುಡಿಮೆಯೇ ಅವರ ಉತ್ಪನ್ನಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ.

*****

"ಅಮುಲ್ ಹಾಲು ಉತ್ಪಾದಕರು ಗ್ರಾಹಕರ ಖರೀದಿ ಬೆಲೆಯ 80 ಪ್ರತಿಶತದಷ್ಟು ಹಣವನ್ನು ಪಡೆಯುತ್ತಾರೆ. ಜಗತ್ತಿನಲ್ಲಿ ಅಂತಹ ಮಾದರಿ ಇನ್ನೊಂದಿಲ್ಲ.”
ಬಾಲಸುಬ್ರಮಣಿಯನ್ ಮುತ್ತುಸಾಮಿ, ಅಂಕಣಕಾರ

Thiru spends at least two hours a day educating others about organic farming.
PHOTO • Aparna Karthikeyan
Gomathy and Thiru with an award they received for organic farming
PHOTO • Aparna Karthikeyan

ಎಡ: ತಿರು ದಿನಕ್ಕೆ ಕನಿಷ್ಠ ಎರಡು ಗಂಟೆಗಳ ಕಾಲ ಸಾವಯವ ಕೃಷಿಯ ಕುರಿತು ಇತರರಿಗೆ ಶಿಕ್ಷಣ ನೀಡುತ್ತಾರೆ. ಬಲ: ಸಾವಯವ ಕೃಷಿಗಾಗಿ ಪಡೆದ ಪ್ರಶಸ್ತಿಯೊಂದಿಗೆ ಗೋಮತಿ ಮತ್ತು ತಿರು

ಭೂಮಿಯನ್ನು ಗುತ್ತಿಗೆ ಪಡೆದಿರುವ ಅಥವಾ ಕಡಿಮೆ ಜಮೀನು ಹೊಂದಿರುವ (ಸಾಮಾನ್ಯವಾಗಿ ಎರಡು ಎಕರೆಗಿಂತ ಕಡಿಮೆ) ಸಾಮಾನ್ಯ ಸಣ್ಣ ರೈತರಿಗೆ ತಿರು ಅವರ ಮಾದರಿಯನ್ನು ಅನುಸರಿಸುವುದು ಕಷ್ಟಕರವಾಗಿರುತ್ತದೆ. ಇವರಂತೆ ಅವರಿಗೆ ಯಶಸ್ಸಿನ ಅವಕಾಶವೇ ಇಲ್ಲ. ಈರೋಡ್ ಜಿಲ್ಲೆಯ ರೈತ ಕುಟುಂಬದಿಂದ ಬಂದಿರುವ, ಆನ್‌ಲೈನ್ ತಮಿಳು ಸುದ್ದಿ ವೇದಿಕೆ ಅರುಂಚೋಲ್‌ನ ಅಂಕಣಕಾರ ಬಾಲಸುಬ್ರಮಣ್ಯಂ ಮುತ್ತುಸಾಮಿ, ಇಂತಹ ಸಮಸ್ಯೆಗೆ ಸಹಕಾರಿ ಮಾದರಿಯು ಏಕೈಕ ಕಾರ್ಯಸಾಧ್ಯವಾದ ಪರಿಹಾರವಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಉತ್ಪನ್ನಕ್ಕೆ ಅಂತಿಮ ಗ್ರಾಹಕರು ಪಾವತಿಸುವ ಬೆಲೆಯ ಶೇಕಡಾವಾರು ಮೊತ್ತವಾಗಿ ರೈತನಿಗೆ ಪಾವತಿಸುವ ಅಂತಿಮ ಬೆಲೆಯನ್ನು ಅವನು ನೋಡುತ್ತಾರೆ. ಈ ವಿಷಯದಲ್ಲಿ ಡೈರಿ ಉತ್ಪನ್ನಗಳು ಮಾದರಿಯಾಗಿವೆ. ಅಮುಲ್ ಮಾದರಿಯನ್ನು ಉಲ್ಲೇಖಿಸಿದ ಅವರು, ಗ್ರಾಹಕರು ರೂ. 240 ಪಾವತಿಸಿದರೆ ಅರಿಶಿನ ಬೆಳೆದ ರೈತರಿಗೆ ಅದರಲ್ಲಿ ಶೇ.29ರಷ್ಟು ಸಿಗುತ್ತದೆ. ಅದೇ ಅಮುಲ್ ಹಾಲಿನ ಮಾದರಿಯಲ್ಲಿ ಶೇ.80ರಷ್ಟು ರೈತರಿಗೆ ಹೋಗುತ್ತದೆ ಎಂದರು.

ದೊಡ್ಡ ಪ್ರಮಾಣದಲ್ಲಿ ರೈತರನ್ನು ಸಂಘಟಿಸುವುದು ಯಶಸ್ಸಿನ ಕೀಲಿಕೈ ಎಂದು ಬಾಲಸುಬ್ರಮಣ್ಯಂ ಹೇಳುತ್ತಾರೆ. "ವ್ಯಾಪಾರ ಪೂರೈಕೆ ಸರಪಳಿಯನ್ನು ಹೊಂದುವುದು ಮತ್ತು ಮಧ್ಯವರ್ತಿಗಳನ್ನು ಕತ್ತರಿಸುವುದು." ಸಹಕಾರಿ ಸಂಸ್ಥೆಗಳು ಮತ್ತು ರೈತ ಸಂಘಟನೆಗಳಲ್ಲಿ ಸಮಸ್ಯೆಗಳಿವೆ ಎನ್ನುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. "ಅವುಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಮತ್ತು ಅದು ಪ್ರಸ್ತುತ ಮುಂದಿರುವ ಏಕೈಕ ಮಾರ್ಗವಾಗಿದೆ."

ಅರಿಶಿನ ಕೃಷಿಯಿಂದ ಉತ್ತಮ ಲಾಭ ಗಳಿಸಲು ಸಾಧ್ಯ ಆದರೆ ಅದರ ಮೌಲ್ಯವರ್ಧನೆ ಮಾಡಬೇಕು ಎಂದು ತಿರು ಒತ್ತಿ ಹೇಳಿದರು. ಕಳೆದ ಏಳು ವರ್ಷಗಳಲ್ಲಿ ಅವರು 4,300 ಕೆಜಿ ಅರಿಶಿನ ಪುಡಿ, ತೆಂಗಿನ ಎಣ್ಣೆ, ಬಾಳೆಹಣ್ಣಿನ ಪುಡಿ, ಕುಂಕುಮ (ಅರಿಶಿನದಿಂದ), ಸಾಬೂನುಗಳನ್ನು ಮಾರಾಟ ಮಾಡಿದ್ದಾರೆ. ಜಮೀನು ಇಲ್ಲದಿದ್ದರೆ ಇದೆಲ್ಲ ಅಸಾಧ್ಯ ಎನ್ನುತ್ತಾತರವರು. (ಅವರ ಮಾದರಿಯನ್ನು ಸಣ್ಣ ರೈತರು ಏಕೆ ಅನುಸರಿಸಲಿಲ್ಲ ಎಂಬುದನ್ನು ಇದು ವಿವರಿಸುತ್ತದೆ.) “ಹತ್ತು ಎಕರೆಯ ಬೆಲೆ ನಾಲ್ಕು ಕೋಟಿ! ಇದಕ್ಕೆ ಯಾರು ಹಣ ನೀಡುತ್ತಾರೆ?" ಅವರ ಸಂಪೂರ್ಣ ವ್ಯವಹಾರವು ಆನ್‌ಲೈನ್‌ನಲ್ಲಿದೆ. ಅವರು GST ಸಂಖ್ಯೆಯನ್ನು ಹೊಂದಿದ್ದಾರೆ ಮತ್ತು Gpay, Phone Pe, Paytm, BHIM ಮತ್ತು ಇತರ ಬ್ಯಾಂಕ್ ಖಾತೆಗಳ ಮೂಲಕ ಖರೀದಿದಾರರಿಂದ ಹಣವನ್ನು ತೆಗೆದುಕೊಳ್ಳುತ್ತಾರೆ.

2020 ರಲ್ಲಿ, ನಟ ಕಾರ್ತಿಕ್ ಶಿವಕುಮಾರ್ ಅವರ ಉಳವನ್ ಫೌಂಡೇಶನ್ ಅವರಿಗೆ ಪ್ರಶಸ್ತಿ ಮತ್ತು 1 ಲಕ್ಷ ರೂಪಾಯಿ ಬಹುಮಾನವನ್ನು ಅವರ ಸಾವಯವ ಕೃಷಿಗಾಗಿ ನೀಡಿತು. ಇದಲ್ಲದೆ ತಿರು ತಮ್ಮ ಬೆಳೆಯನ್ನು ಮೌಲ್ಯವರ್ಧನೆ ಮಾಡಿ, ನೇರವಾಗಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಕ್ಕಾಗಿ, ಅದೇ ಕೊಂಗು ಪ್ರದೇಶದ ತಮಿಳು ನಟ ಸತ್ಯರಾಜ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಪ್ರತಿ ವರ್ಷ, ಪ್ರತಿ ಸಣ್ಣ ಯಶಸ್ಸಿನೊಂದಿಗೆ, ತಿರು ಹೆಚ್ಚು ದೃಢವಾಗುತ್ತಾ ಸಾಗುತ್ತಿದ್ದಾರೆ. ಅವರನ್ನು ಸೋಲಿಸಲು ಸಾಧ್ಯವಿಲ್ಲ. "ʼನಷ್ಟʼ ಎಂಬ ಪದವನ್ನು ರೈತನಿಂದ ಕೇಳಲು ನಾನು ಬಯಸುವುದಿಲ್ಲ" ಎಂದು ತಿರು ಹೇಳುತ್ತಾರೆ. "ಅದಕ್ಕಾಗಿ ನಾನು ಕೆಲಸ ಮಾಡಬೇಕು."

ಈ ಲೇಖನವನ್ನು ತಯಾರು ಮಾಡುವಲ್ಲಿ ಮಾಡಿದ ಸಹಾಯಕ್ಕಾಗಿ ಮತ್ತು ಆತಿಥ್ಯಕ್ಕಾಗಿ ಲೇಖಕರು ಕೃಷಿ ಜನನಿ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಉಷಾದೇವಿ ವೆಂಕಟಾಚಲಂ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ.

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ನಿಧಿ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯವನ್ನು ನೀಡಿರುತ್ತದೆ.

ಮುಖ್ಯ ವಿತ್ರ: ಎಮ್‌. ಪಳನಿ ಕುಮಾರ್‌

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan
aparna.m.karthikeyan@gmail.com

Aparna Karthikeyan is an independent journalist, author and Senior Fellow, PARI. Her non-fiction book 'Nine Rupees an Hour' documents the disappearing livelihoods of Tamil Nadu. She has written five books for children. Aparna lives in Chennai with her family and dogs.

Other stories by Aparna Karthikeyan
Photographs : M. Palani Kumar

M. Palani Kumar is PARI's Staff Photographer and documents the lives of the marginalised. He was earlier a 2019 PARI Fellow. Palani was the cinematographer for ‘Kakoos’, a documentary on manual scavengers in Tamil Nadu, by filmmaker Divya Bharathi.

Other stories by M. Palani Kumar
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru