2020ರಲ್ಲಿ, ಕೊರೋನಾ ಕಾರಣದಿಂದಾಗಿ ಲಾಕ್‌ಡೌನ್ ಘೋಷಿಸಲಾಯಿತು. ದಾದಾ ಬಿದ್ದು ಕಾಲು ಮುರಿದುಕೊಂಡಿದ್ದಾರೆನ್ನುವ ಸುದ್ದಿ ಊರಿಂದ ಬಂದಿತ್ತು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಬಂದಿರಲಿಲ್ಲ, ಕೊರೋನಾದಿಂದಾಗಿ ಹತ್ತಿರದ ಎಲ್ಲಾ ಖಾಸಗಿ ಕ್ಲಿನಿಕ್‌ಗಳನ್ನು ಮುಚ್ಚಲಾಗಿತ್ತು. ಹೇಗೋ ಮನೆಯವರು ಅಜ್ಜನ ಮುರಿದ ಕಾಲಿಗೆ ಪ್ಲಾಸ್ಟರ್ ಮಾಡಿ ಮನೆಯಲ್ಲಿಯೇ ಆರೈಕೆ ಮಾಡತೊಡಗಿದರು. ಆದರೆ, ಕೆಲವೊಮ್ಮೆ ಜ್ವರದ ಭಾದೆ ತಡೆಯಲಾಗದೆ ಕಿರುಚುತ್ತಿದ್ದರು ಮತ್ತು ಕೆಲವೊಮ್ಮೆ ಅವನ ಕಾಲುಗಳಲ್ಲಿ ಸಹಿಸಲಾಗದ ನೋವಿನ ಕಾರಣಕ್ಕೆ ಕೂಗಾಡುತ್ತಿದ್ದರು. ದಿನಕಳೆದಂತೆ ಅವರ ದೇಹವು ದುರ್ಬಲವಾಗತೊಡಗಿತು, ಕೊನೆಗೆ ಮೇ ತಿಂಗಳ ಕೊನೆಯ ವಾರದಲ್ಲಿ ಅವರು ಕೊನೆಯುಸಿರೆಳೆದರು.

ಈ ಘಟನೆ ನಡೆದಾಗ ನಾನು ಮುಂಬೈಯಲ್ಲಿದ್ದೆ. ಏಕಾಏಕಿ ಎಲ್ಲವೂ ಬಂದ್ ಆಗಿದ್ದರಿಂದ ಜನಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಒಂದೆಡೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದರೆ, ಮತ್ತೊಂದೆಡೆ ಪೊಲೀಸರು ಬೀದಿಗಿಳಿದು ಲಾಠಿ ಪ್ರಹಾರ ನಡೆಸುತ್ತಿದ್ದರು. ಕೆಲಸ ಸ್ಥಗಿತಗೊಂಡಿತ್ತು, ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಲು ಪ್ರಾರಂಭಿಸಿದ್ದರು. ನಾನು ತರಕಾರಿ ವ್ಯಾಪಾರ ಮಾಡುತ್ತಿದ್ದ ಕಾರಣ ಮುಂಬಯಿಯಲ್ಲಿಯೇ ಉಳಿದುಕೊಂಡೆ, ಈ ವ್ಯಾಪಾರ ನಡೆಸಲು ಅವಕಾಶ ಇತ್ತು. ಆದರೆ, ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ನನ್ನ ಹಳ್ಳಿಯಿಂದ ದಾದಾ ನಿಧನರಾದ ಸುದ್ದಿ ಬಂದಾಗ, ತಕ್ಷಣ ಮನೆಗೆ ಹೋಗಬೇಕೆನ್ನುವ ಆಸೆ ಹುಟ್ಟಿತು. ನನಗೆ ಅವರೊಂದಿಗೆ ಭಾವನಾತ್ಮಕ ಬಾಂಧವ್ಯವಿತ್ತು. ಅಲ್ಲದೆ ಅಮ್ಮನನ್ನು ಬಿಟ್ಟರೆ ಬೇರೆ ಜವಾಬ್ದಾರಿ ಹೊರಬಲ್ಲ ವ್ಯಕ್ತಿ ಊರಿನಲಿರಲಿಲ್ಲ.

ಒಳಗೊಳಗೆ ಅನೇಕ ಸುದ್ದಿಗಳು ಓಡಾಡುತ್ತಿದ್ದ ಕಾಲವಿದು. ಕೆಲವು ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಹೋಗುತ್ತಿದ್ದರು ಮತ್ತು ಬಳಲಿಕೆಯಿಂದಾಗಿ ರಾತ್ರಿ ರೈಲು ಹಳಿಗಳ ಮೇಲೆ ಜನರು ಮಲಗುತ್ತಿದ್ದರು . ರೈಲು ಹರಿದು ಹಲವರು ಸತ್ತರು. ತಾಯಿಯೊಬ್ಬಳು ಧಾನ್ಯ ಮತ್ತು ನೀರಿಲ್ಲದೆ ತನ್ನ ಸೊಂಟದಲ್ಲಿ ಹಾಲು ಕುಡಿಯುವ ಮಗುವನ್ನು ಎತ್ತಿಕೊಂಡು ನಡೆಯುತ್ತಿದ್ದಳು. ದಾದಾ ಮರಣದ ನಂತರ ನಾನು ನನ್ನ ವಸ್ತುಗಳನ್ನು ಕಟ್ಟಿಕೊಂಡು ರೈಲು ಹುಡುಕಲು ಮುಂಬೈನ ಅಂಧೇರಿ (ಪಶ್ಚಿಮ)ದಲ್ಲಿರುವ ಹತ್ತಿರದ ನಿಲ್ದಾಣಕ್ಕೆ ಹೋದೆ. ಆದರೆ ಅಲ್ಲಿಗೆ ಹೋದಾಗ ಅಲಹಾಬಾದ್‌ಗೆ ಹೋಗುವ ರೈಲು ತನ್ನ ಓಡಾಟ ನಿಲ್ಲಿಸಿರುವುದು ತಿಳಿದುಬಂತು. ಇದೇ ವೇಳೆ ವಾರಣಾಸಿಯಲ್ಲಿ ರೈಲಿನೊಳಗೆ ಎರಡು ಮೃತದೇಹಗಳು ಪತ್ತೆಯಾಗಿರುವ ಸುದ್ದಿಯೂ ಬಂತು. ಅದು ಒಡಿಶಾದಿಂದ ಉತ್ತರ ಪ್ರದೇಶಕ್ಕೆ ತೆರಳಬೇಕಿದ್ದ ರೈಲು. ಮತ್ತು ನಾನು ಹಳ್ಳಿಯನ್ನು ತಲುಪಲು ಅಲಹಾಬಾದ್ (ಪ್ರಯಾಗ್ರಾಜ್)ನಿಂದ ಇನ್ನೂ 70 ಕಿಮೀ ದೂರ ಹೋಗಬೇಕಾಗಿತ್ತು, ಹೀಗಾಗಿ ಈ ಸುದ್ದಿಯು ಮತ್ತಷ್ಟು ಖಿನ್ನತೆಯನ್ನು ಹುಟ್ಟಿಸಿತು. ಟ್ಯಾಕ್ಸಿ ಬುಕ್ ಮಾಡಿ ಹೋಗಬೇಕೆಂದಿದ್ದರೆ ಹೋಗಬಹುದಿತ್ತು, ಆದರೆ ಅದಕ್ಕೆ 40-50,000 ರೂ. ಬೇಕಿತ್ತು. ಅದು ನನ್ನಿಂದ ಸಾಧ್ಯವಾಗುವ ಮಾತಾಗಿರಲಿಲ್ಲ, ಕೊನೆಗೆ ನಾನು ಹಳ್ಳಿಗೆ ಹೋಗುವ ಆಲೋಚನೆಯನ್ನು ಬಿಟ್ಟುಬಿಟ್ಟೆ. ಅದನ್ನು ಬಿಟ್ಟು ನನಗೂ ಇನ್ನೊಂದು ಆಯ್ಕೆ ಇದ್ದಿರಲಿಲ್ಲ ಎನ್ನಿ.

Mithun Kumar (facing the camera) in a BEST bus, on his way to the vegetable market
PHOTO • Sumer Singh Rathore
Inspecting lemons at the mandi in Dadar, Mumbai
PHOTO • Sumer Singh Rathore

ಎಡ: ತರಕಾರಿ ಮಾರುಕಟ್ಟೆಗೆ ಹೋಗುವ ಮಾರ್ಗಮಧ್ಯೆ ಮಿಥುನ್ ಕುಮಾರ್ (ಕ್ಯಾಮೆರಾ ಎದುರು) ಬೆಸ್ಟ್ ಬಸ್ಸಿನಲ್ಲಿ. ಬಲಗಡೆ: ಮುಂಬೈನ ದಾದರ್ ಮಂಡಿಯಲ್ಲಿ ನಿಂಬೆಹಣ್ಣುಗಳನ್ನು ಪರಿಶೀಲಿಸು ತ್ತಿರು ವುದು

ಅಂತಿಮ ಸಂಸ್ಕಾರಕ್ಕಾಗಿ ದಾದಾ ಕಳೇಬರವನ್ನು ಅಲಹಾಬಾದ್‌ನ ಜುನ್ಸಿ ಪಟ್ಟಣಕ್ಕೆ ಕೊಂಡೊಯ್ಯಲಾಯಿತು. ವಾಹನಗಳು ಹೋಗಲು ಬಿಡುತ್ತಿಲ್ಲ ಎಂದು ಮಾ ಹೇಳುತ್ತಿದ್ದರು. ಪೊಲೀಸರು ವಿವಿಧ ಬಗೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಹಲವೆಡೆ ಘಾಟ್‌ಗಳಲ್ಲಿ ಅಂತಿಮ ಸಂಸ್ಕಾರ ನಡೆಸದಂತೆ ನಿರ್ಬಂಧ ಹೇರಲಾಗಿತ್ತು. ಅಂತೂ ಹೇಗೋ ಭಯದ ನೆರಳಿನಲ್ಲಿ ದಾದಾ ಅಂತ್ಯಸಂಸ್ಕಾರ ಮಾಡಿ ಮುಗಿಸಿದರು.

ಅಂದಹಾಗೆ, ನಾನು ಹುಟ್ಟಿದ್ದು ಮುಂಬೈಯಲ್ಲಿಯೇ. ಆದರೆ ಬಾಲ್ಯವು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಕಳೆದು ಅಲ್ಲಿಯೇ ಶಿಕ್ಷಣ ನಡೆಯಿತು. ಪಾಪಾ (ಅಪ್ಪ) 1975ರ ಸುಮಾರಿಗೆ ತನ್ನ 15ನೇ ವಯಸ್ಸಿನಲ್ಲಿ ಜೌನ್‌ಪುರದಿಂದ ಮುಂಬೈಗೆ ಬಂದರು. ಆದರೆ, ಮುಂಬೈಗೆ ಬರುವುದು ಅಷ್ಟು ಸುಲಭವಾಗಿರಲಿಲ್ಲ. ಅವರು ಹುಟ್ಟುವಾಗಲೇ ಅವರ ಅಮ್ಮ ತೀರಿಹೋಗಿದ್ದರು. ದಾದಾಗೆ ಬೇರೆಯವರ ಹೊಲಗಳಲ್ಲಿ ಕೆಲಸ ಮಾಡುವುದು, ಮಣ್ಣಿನ ಮಡಕೆಗಳು ಮತ್ತು ಛಾವಣಿಯ ಹೆಂಚುಗಳನ್ನು ಮಾಡುವುದು ಬಿಟ್ಟರೆ ಉದ್ಯೋಗದ ಹೆಸರಿನಲ್ಲಿ ಬೇರೆ ಯಾವುದೇ ಕೆಲಸವಿದ್ದಿರಲಿಲ್ಲ. ಬೇರೆಯವರ ಹೊಲದಲ್ಲಿ ಉಳುಮೆ, ಗುದ್ದಲಿ ಕೆಲಸ ಮಾಡಿದರೆ ಎಲ್ಲರ ಹೊಟ್ಟೆಪಾಡಿಗೆ ಸಾಲುವಷ್ಟು ಕೂಲಿ ಸಿಗುತ್ತಿರಲಿಲ್ಲ. ಬಟ್ಟೆಯ ಹೆಸರಿನಲ್ಲಿ, ಕುಟುಂಬದ ಪುರುಷರು ಧೋತಿಯಂತಹ ಸಣ್ಣ ಬಟ್ಟೆಗಳನ್ನು ಹೊಂದಿದ್ದರು, ಅದನ್ನು ಭಾಗಾಯಿ ಎಂದು ಕರೆಯುತ್ತಾರೆ ಮತ್ತು ಅದರಿಂದ ಜನನಾಂಗಗಳನ್ನು ಮಾತ್ರವೇ ಮುಚ್ಚಿಕೊಳ್ಳಬಹುದಿತ್ತಷ್ಟೇ. ಆಹಾರದಲ್ಲಿ ಗೋಧಿ ಅಥವಾ ಅಕ್ಕಿಯಿಂದ ತಯಾರಿಸಿದ ಖಾದ್ಯಗಳಿರುತ್ತಿರಲಿಲ್ಲ. ಸುತ್ತಮುತ್ತಲಿನ ಹೊಲಗಳಲ್ಲಿ ಬೆಳೆಯುತ್ತಿದ್ದ ನವಣೆ, ಜೋಳ, ಆಲೂಗಡ್ಡೆ, ಮಹುವಾ ಆಹಾರದ ಮುಖ್ಯ ಮೂಲಗಳಾಗಿದ್ದವು.

*****

ಬಹುಶಃ ಇಲ್ಲಿ ದಾದಾ ಯಾರ ಬಳಿ ಕೃಷಿ ಕೂಲಿಯಾಗಿ ದುಡಿಯುತ್ತಿದ್ದರು, ಭೂಮಿ ಯಾರದ್ದಾಗಿತ್ತು ಎಂದು ವಿವರಿಸುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ

ಎಷ್ಟೋ ಸಲ ದಾದಾ ತನ್ನ ದುಡಿಮೆಗೆ ಕೂಲಿ ಕೇಳಿದಾಗ, ನಿಮ್ಮ ಪೂರ್ವಜರು ಮಾಡಿರುವ ಸಾಕಷ್ಟು ಸಾಲವಿದೆ, ನಿಮ್ಮ ಅಜ್ಜ ತುಂಬಾ ತೆಗೆದುಕೊಂಡಿದ್ದಾರೆ, ಮುತ್ತಜ್ಜನಿಂದ ತುಂಬಾ ಉಳಿದಿದೆ ಎಂದು ಹೇಳಲಾಗುತ್ತಿತ್ತು. ಬಹುಶಃ ಯಾವ ಜನರ ಬಳಿ ಅಜ್ಜ ಕೂಲಿ ಮಾಡುತ್ತಿದ್ದರು ಎಂದು ಹೇಳಬೇಕಿಲ್ಲ. ಯಾರದು ಭೂಮಿ ಮತ್ತು ಯಾರು ಕಾರ್ಮಿಕರು ಎನ್ನುವುದು ನಿಮಗೇ ತಿಳಿದಿದೆ. ಅಪ್ಪ ಸ್ವಲ್ಪ ದೊಡ್ಡವರಾದ ನಂತರ, ದಾದಾ ಹರವಾಹಿ (ಕೂಲಿ/ಜೀತ) ಮಾಡುತ್ತಿದ್ದ ಜನರೊಂದಿಗೆ ವಾಸಿಸಲು ಪ್ರಾರಂಭಿಸಿದರು. ತಾಯಿ ಇರಲಿಲ್ಲ ಮತ್ತು ದಾದಾಗೆ ಅವರದೇ ಕಷ್ಟಗಳಿದ್ದವು, ಹೀಗಿರುವಾಗ ಆದ್ದರಿಂದ ತಂದೆ ಮತ್ತು ಅವರ ಅಣ್ಣನನ್ನು ಯಾರು ನೋಡಿಕೊಳ್ಳುತ್ತಾರೆ? ಅಪ್ಪ ಇಡೀ ದಿನ ಅದೇ ಜನರೊಂದಿಗೆ ಕಳೆಯುತ್ತಿದ್ದರು, ಗದ್ದೆಯಿಂದ ಹಿಡಿದು ಮನೆವರೆಗೆ ಏನೇ ಕೆಲಸ ಹೇಳಿದರೂ ಮಾಡುತ್ತಿದ್ದರು. ಕೆಲಸವಿಲ್ಲದಿದ್ದಾಗ ಅವರ ಹಸು, ಎಮ್ಮೆಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದರು. ಇದಕ್ಕೆಲ್ಲ ಪ್ರತಿಯಾಗಿ ತಿನ್ನಲು ಏನಾದರೂ ಸಿಗುತ್ತಿತ್ತು. ಅದೇ ಅವರ ಪಾಲಿನ ಸಂಬಳವಾಗಿತ್ತು. ಕೆಲಸ ಬಿಡಲು ಸಾಧ್ಯವೇ ಇರಲಿಲ್ಲ ಎಂದು ಪಾಪಾ ಹೇಳುತ್ತಾರೆ.

PHOTO • Courtesy: Mithun Kumar
PHOTO • Courtesy: Mithun Kumar

ಮಿಥುನ್ ಅವರ ತಾಯಿ ಉತ್ತರ ಪ್ರದೇಶದ ಜೌನ್ಪುರ್ ಜಿಲ್ಲೆಯ ತಮ್ಮ ಹಳ್ಳಿಯ ಹೊಲಗಳಲ್ಲಿ ಕೆಲಸ ಮಾಡುತ್ತಿ ರುವುದು . ಸುಮಾರು 30 ವರ್ಷಗಳ ಹಿಂದೆ, ಪತಿ ನಗರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಕಾಲದಲ್ಲಿ ಅವ ರು ಹಳ್ಳಿ ಮತ್ತು ಮುಂಬೈ ನಡುವೆ ಓಡಾಡಿಕೊಂಡಿದ್ದರು

1970ರಲ್ಲಿ, ಹಳ್ಳಿಯ ನೆರೆಹೊರೆಯವರು ಮುಂಬೈಗೆ ತೆರಳಿ ಬಾಳೆಹಣ್ಣುಗಳ ವ್ಯಾಪಾರ ಮಾಡಲು ಆರಂಭಿಸಿದರು. ಕೆಲವು ವರ್ಷಗಳ ನಂತರ, ಬಡೇ ಪಾಪಾ (ಅಪ್ಪನ ಅಣ್ಣ) ಅದೇ ಜನರ ಸಹಾಯದಿಂದ ಮುಂಬೈ ಬಂದು ತಲುಪಿಕೊಂಡು ಅವರೊಡನೆ ಬಾಳೆಹಣ್ಣು ವ್ಯಾಪಾರವನ್ನು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ತನ್ನದೇ ಆದ ಸ್ವಂತ ವ್ಯವಹಾರವನ್ನು ಶುರು ಮಾಡಿದರು. ಕೆಲವು ಕಾಲದ ನಂತರ ದೊಡ್ಡಪ್ಪ ಊರಿಗೆ ಬಂದಾಗ ಅವರು ತಂದ ಒಂದಿಷ್ಟು ಹಣದಿಂದ ಮನೆ ಬೆಳಗಿತ್ತು. ಮತ್ತೆ ಮುಂಬೈಗೆ ಹೊರಡುವಾಗ ಈ ಸಲ ಅಪ್ಪನನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಈ ವಿಷಯ ತಿಳಿದ ಜನರು, ಅವರ ತಂದೆ ದಿನವಿಡೀ ದುಡಿಯುತ್ತಿದ್ದ ಮನೆಯವರು ಬಂದು ಮನೆಯ ನೆರೆಹೊರೆಯವರೊಂದಿಗೆ ಜಗಳವಾಡಿದರು. ಅವರೆಲ್ಲರು ತಮ್ಮ ಕೆಲದವನನ್ನು ಕೆಡಿಸುತ್ತಿದ್ದಾರೆಂಬುದು ಅವರ ದೂರಾಗಿತ್ತು. ಮಾತಿಗೆ ಮಾತು ಬೆಳೆದು ವಿಷಯ ಸಾಕಷ್ಟು ಬಿಗಡಾಯಿಸಿತು, ಜಗಳದ ಹಂತಕ್ಕೆ ಬಂದಿತ್ತು. ಎರಡೂ ಕುಟುಂಬಗಳಿಗೆ ಸಾಕಷ್ಟು ಬೆದರಿಕೆಗಳು ಬಂದವು, ಆದರೆ ಎಲ್ಲರೂ ಧೈರ್ಯ ತಂದುಕೊಂಡು ಮುಂಬೈಗೆ ತೆರಳಿದರು. ಇದು ಹಲವು ಕಾಲದ ಗುಲಾಮಗಿರಿಯ ಸರಪಳಿಯನ್ನು ಮುರಿಯುವ ಮೊದಲ ಹೆಜ್ಜೆಯಾಗಿತ್ತು. ಇದೆಲ್ಲ ಕೇವಲ 40-45 ವರ್ಷಗಳ ಹಿಂದೆ, ಸ್ವತಂತ್ರ ದೇಶದಲ್ಲಿ ನಡೆಯುತ್ತಿತ್ತು ಎಂದು ಅನೇಕ ಬಾರಿ ನಂಬಲು ಸಾಧ್ಯವಾಗುವುದಿಲ್ಲ.

ಮುಂಬೈನಲ್ಲಿ ದೊಡ್ಡಪ್ಪನ ಜೊತೆ ಕೆಲಕಾಲ ಕೆಲಸ ಮಾಡಿದ ನಂತರ ಪಾಪಾ ತನ್ನದೇ ಆದ ಹಣ್ಣಿನ ಅಂಗಡಿಯನ್ನು ನಡೆಸತೊಡಗಿದರು. ಪರಿಸ್ಥಿತಿ ಸ್ವಲ್ಪ ಸುಧಾರಿಸಿದಾಗ, ಅವರು ಹಳ್ಳಿಗೆ ಬಂದು ಮದುವೆಯಾದರು. ಮದುವೆಯ ನಂತರ ಸ್ವಲ್ಪ ಕಾಲ ಹಳ್ಳಿಯಲ್ಲಿದ್ದು ನಂತರ, ಅಮ್ಮ ತಂದೆಯೊಂದಿಗೆ ಮುಂಬೈಗೆ ಹೋಗಲು ಆರಂಭಿಸಿದರು. ವರ್ಷದಲ್ಲಿ ಕೆಲವು ತಿಂಗಳು, ಅವರು ಅಪ್ಪನೊಡನೆ ಇರುತ್ತಿದ್ದರು, ನಂತರ ಹಳ್ಳಿಗೆ ಹಿಂತಿರುಗುತ್ತಿದ್ದರು. ಇದು ಹೀಗೇ ಸಾಗುತ್ತಿರುವಾಗ, 1990ರಲ್ಲಿ, ನಾನು ಮುಂಬೈನ ಜುಹು ಪ್ರದೇಶದಲ್ಲಿರುವ ಕೂಪರ್ ಆಸ್ಪತ್ರೆಯಲ್ಲಿ ಜನಿಸಿದೆ.

ಅಮ್ಮನ ತವರು ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ನಾನಾ (ಅಜ್ಜ) ಬಳಿ ತಕ್ಕಮಟ್ಟಿಗೆ ಬೇಸಾಯವಿತ್ತು. ಇಬ್ಬರೂ ಶಿಕ್ಷಣ ಪಡೆದವರಾಗಿದ್ದರು ಮತ್ತು ಮಾವಂದಿರಬ್ಬರೂ [ಅಮ್ಮನ ಸಹೋದರು] ಚೆನ್ನಾಗಿ ಓದಿ ಕಲಿತಿದ್ದರು. ಇಂದಿಗೆ ಸುಮಾರು 40 ವರ್ಷಗಳ ಹಿಂದೆ ಹನ್ನೆರಡನೇ ತರಗತಿಯವರೆಗೆ ಓದುವುದೇ ದೊಡ್ಡ ವಿಷಯವಾಗಿತ್ತು. ಇದರ ಹೊರತಾಗಿ ಅವರ ರಾಜಕೀಯ ಒಲವು, ತಿಳುವಳಿಕೆ, ಸಾಮಾಜಿಕ ದೃಷ್ಟಿಕೋನ ಆಧುನಿಕವಾಗಿತ್ತು. ಆದರೆ, ಈ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಸ್ಥಿತಿ ಎಷ್ಟೇ ಉತ್ತಮವಾಗಿದ್ದರೂ ಮಹಿಳೆಯರ ಪಾಲಿನ ಹೋರಾಟ ಕೊನೆಯಾಗುತ್ತಿರಲಿಲ್ಲ. ನನ್ನ ತಾಯಿ, ಚಿಕ್ಕಮ್ಮ ಮತ್ತು ಅತ್ತೆಯರು ತಮ್ಮ ಜೀವನವನ್ನು ಹೊಲಗಳಲ್ಲಿ ಕಳೆಯುತ್ತಿದ್ದರು.

ಇದೇ ರೀತಿಯ ಆರ್ಥಿಕ ಸ್ಥಿತಿಯ ಕುಟುಂಬಕ್ಕೆ ಅಮ್ಮನನ್ನು ಕೊಡಲಾಯಿತು. ಅದು ಅಮ್ಮನ ಮೊದಲ ಮದುವೆಯಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಅಮ್ಮ ತವರಿಗೆ ಮರಳಿದರು. ನಿಖರವಾದ ಕಾರಣ ನನಗೆ ತಿಳಿದಿಲ್ಲ, ಆದರೆ ನಾನು ಕೇಳಿದ ಮಟ್ಟಿಗೆ ಇದು ಬಹುಶಃ ತಾಯಿಯ ಚರ್ಮದ ಕಾಯಿಲೆಯ ಕಾರಣದಿಂದ ಉಂಟಾಗಿರಬಹುದು ಎಂದು ಕಾಣುತ್ತದೆ. ನಾನು ಆ ಕುರಿತು ಹೆಚ್ಚು ತಿಳಿಯಲು ಪ್ರಯತ್ನಿಸಲಿಲ್ಲ. ಕೆಲವು ವರ್ಷಗಳ ಕಾಲ, ತಾಯಿ ಅಜ್ಜ ಅಜ್ಜಿಯೊಡನೆ ಇದ್ದರು. ಇದರ ನಂತರ, ಅವರು ಮತ್ತೆ ಮದುವೆಯಾದರು. ಅವರ ಎರಡನೇ ಮದುವೆ ಪಾಪಾ ನಡೆಯಿತು. ವಿಷಯ ಸರಳವಾಗಿತ್ತು, ಪಾಪಾ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ, ಹೀಗಾಗಿ ಸ್ವಲ್ಪ ಉತ್ತಮವಾದ ಮನೆಯಿಂದ ಬಂದಂತಹ ಸಂಬಂಧವನ್ನು ನಿರಾಕರಿಸಲು ಯಾವುದೇ ಅವರಿಗ ಕಾರಣವಿದ್ದಿರಲಿಲ್ಲ.

PHOTO • Devesh
PHOTO • Sumer Singh Rathore

ಮಿಥುನ್ ಪ್ರತಿದಿನ ಬೆಳಿಗ್ಗೆ 4:30ಕ್ಕೆ ದಾದರ್ ತರಕಾರಿ ಮಾರುಕಟ್ಟೆಗೆ ಹೋ ಗಿ, ಅಲ್ಲಿ ಖರೀದಿಸಿದ ತರಕಾರಿಗಳನ್ನು ಟೆಂಪೋದಲ್ಲಿ (ಬಲಕ್ಕೆ) ಲೋಡ್ ಮಾಡುತ್ತಾ ರೆ , ಅದು ತರಕಾರಿಗಳನ್ನು ಅವರ ಅಂಗಡಿಗೆ ತಲುಪಿಸುತ್ತದೆ

ನಾನು ಹುಟ್ಟುವವರೆಗೂ ಅಪ್ಪನ ಅಂಗಡಿ ವ್ಯವಹಾರ ಚೆನ್ನಾಗಿಯೇ ನಡೆಯುತ್ತಿತ್ತು. ನಂತರ ಕೆಲವು ತೊಂದರೆಗಳು ಅಂಗಡಿಯನ್ನು ಬಿಡುವಂತೆ ಮಾಡಿದವು ಮತ್ತು ಪಾಪಾ ಬಾಡಿಗೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಬೇಕಾಯಿತು. ಅದೇ ಸಮಯಕ್ಕೆ ನಾವು ಐವರ ಜನನದ ನಂತರ ಅಮ್ಮನ ಮುಂಬೈ ಭೇಟಿ ಬಹುತೇಕ ನಿಂತು ಹೋಗಿತ್ತು. ಊರಲ್ಲಿ ಅಜ್ಜನ ಮೂಲಕ ಪಡೆದಿದ್ದ ಭೂಮಿಯನ್ನು ಅಮ್ಮ ಬೇಸಾಯ ಮಾಡುತ್ತಿದ್ದರು, ಉಳಿದ ಸಮಯದಲ್ಲಿ ಮಣ್ಣಿನ ಮಡಕೆಗಳನ್ನು ತಯಾರಿಸುತ್ತಿದ್ದರು. ಆದರೆ, ಆರ್ಥಿಕ ಕಾರಣಗಳಿಂದ ಸಂಸಾರದಲ್ಲಿ ಆಂತರಿಕ ಕಲಹಗಳು ಹೆಚ್ಚಾಗಿ ನಾವು ಐವರು ಒಡಹುಟ್ಟಿದವರ ಕಾರಣದಿಂದ ಅಮ್ಮ ಕುಟುಂಬದಿಂದ ಬೇರ್ಪಟ್ಟರು. ಮನೆಯಿಂದ ಹೊರಬಂದ ಮೇಲೆ ಕಚ್ಚಾ ಮನೆ, ಒಂದಿಷ್ಟು ಪಾತ್ರೆಗಳು ಮತು ಸ್ವಲ್ಪ ಧಾನ್ಯವನ್ನು ಬಿಟ್ಟರೆ ಕೈಯಲ್ಲಿ ಬೇರೇನೂ ಇದ್ದಿರಲಿಲ್ಲ. ಆದರೆ, ನಂತರ ಮಾವಂದಿರು ಸ್ವಲ್ಪ ಆರ್ಥಿಕ ಸಹಾಯವನ್ನು ನೀಡಿದ್ದರು ಮತ್ತು ಮೊದಲಿಗೆ ಒಂದಷ್ಟು ಧವಸ ಧಾನ್ಯಗಳನ್ನೂ ಸಹಾಯವಾಗಿ ನೀಡಿದ್ದರು. ನಂತರ ತಾಯಿ ಗ್ರಾಮದ ಮೇಲ್ವರ್ಗದವರ ಹೊಲಗಳನ್ನು ಬಾಡಿಗೆಗೆ ತೆಗೆದುಕೊಂಡು ಕೃಷಿ ಆರಂಭಿಸಿದರು. ಅಮ್ಮನ ಶ್ರಮದ ಪರಿಣಾಮ ಒಂದೆರೆಡು ವರ್ಷದಲ್ಲಿ ಮನೆಯಲ್ಲಿ ಬೇಕಾದಷ್ಟು ಧಾನ್ಯ ಬಂದಿತ್ತು. ಅಮ್ಮ ಇತರರ ಮನೆಗಳಲ್ಲಿಯೂ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಶ್ರಮದ ಫಲದಿಂದಾಗಿ ನಾವು ಆಹಾರ ಮತ್ತು ಉಡುಗೆಗಳ ವಿಷಯದಲ್ಲಿ ನೆಮ್ಮದಿ ಕಾಣತೊಡಗಿದೆವು.

ಅಪ್ಪ ಮುಂದಿನ ಸಲ ಊರಿಗೆ ಬಂದಾಗ ಅಪ್ಪನೊಡನೆ ನನ್ನನ್ನೂ ಅಮ್ಮ ಮುಂಬಯಿಗೆ ಕಳುಹಿಸಿದರು. ಬಹುಶಃ ಆಗ 1998 – 99ನೇ ಇಸವಿ ಇದ್ದಿರಬಹುದು. ಆಗ ನನಗೆ 8 – 9 ವಯಸ್ಸು. ನನ್ನ ಅಲೆಮಾರಿತನವನನ್ನು ಇಲ್ಲವಾಗಿಸುವ ಜೊತೆಗೆ ಅಪ್ಪನ ವ್ಯವಹಾರದಲ್ಲಿ ಸಹಾಯಕ್ಕೂ ಆಗುತ್ತದೆ ಎಂದು ನನ್ನನ್ನು ಮುಂಬಯಿಗೆ ಕಳುಹಿಸಲಾಗಿತ್ತು. ಅಪ್ಪ ಅಷ್ಟರೊಳಗೆ ವ್ಯಾಪಾರವಿಲ್ಲದ ಕಾರಣ ಹಲವು ಸ್ಥಳಗಳಿಗೆ ತನ್ನ ವ್ಯಾಪಾರವನ್ನು ಬದಲಿಸಿದ್ದರು. ಆಗ ಬಿಎಮ್‌ಸಿ [ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್] ಕೂಡ ಅಂಗಡಿಗಳನ್ನು ತೆಗೆಸುತ್ತಿತು. ಅವರ ವ್ಯವಹಾರಕ್ಕೊಂದು ಶಾಶ್ವತ ವಿಳಾಸ ಇರುತ್ತಿರಲಿಲ್ಲ. ಕೆಲವರ ಒತ್ತಾಯದ ಮೇರೆಗೆ ಅಪ್ಪ ನನ್ನನ್ನು ಬಿಎಂಸಿ ಶಾಲೆಗೆ ಸೇರಿಸಿದರು. ನನ್ನ ವಯಸ್ಸಿನ ಆಧಾರದಲ್ಲಿ ನನ್ನನ್ನು ಮೂರನೇ ತರಗತಿಗೆ ಸೇರಿಸಲಾಯಿತು. ಅಲ್ಲಿ ಹೊಸ ಮಕ್ಕಳನ್ನು ಭೇಟಿಯಾದ ಹಾಗೆ ನನಗೆ ಶಾಲೆಯತ್ತ ಹೆಚ್ಚಿನ ಆಸಕ್ತಿ ಮೂಡತೊಡಗಿತು.

*****

ಆಗಿನ ಪರಿಸ್ಥಿತಿಯಲ್ಲಿ ಓದಲೆಂದು ನಾಲ್ಕೈದು ವರ್ಷಗಳು ಸಿಗುವುದು ಕಷ್ಟವಿತ್ತು, ಹೀಗಾಗಿ ಓದುವ ಕನಸನ್ನು ಅರ್ಧದಲ್ಲೇ ಕೈಬಿಟ್ಟೆ

ಅಪ್ಪ ಬೆಳಗ್ಗೆ ಎದ್ದವರೇ ಮಾರುಕಟ್ಟೆಗೆ ಹೋಗುತ್ತಿದ್ದರು. ಬೆಳಗ್ಗೆ ಏಳಕ್ಕೆ ಹಾಲು, ಬಿಸ್ಕತ್ತು ತಿಂದು ಒಂದಷ್ಟು ಹಣ ತೆಗೆದುಕೊಂಡು ಶಾಲೆಗೆ ಹೋಗುತ್ತಿದ್ದೆ. ಹತ್ತು ಗಂಟೆಯ ಸುಮಾರಿಗೆ ಊಟಕ್ಕೆ ಬಿಟ್ಟಾಗ ಶಾಲೆಯ ಕ್ಯಾಂಟೀನಲ್ಲಿ ಸಮೋಸಾ, ವಡಾ ಏನೇ ಸಿಕ್ಕರೂ ತಿನ್ನುತ್ತಿದ್ದೆ. ಹನ್ನೆರಡು ಗಂಟೆಗೆ ಮನೆಗೆ ಹಿಂತಿರುಗಿ, ನಾನು ನನ್ನ ತಂದೆಯ ಸೂಚನೆಯಂತೆ ಸೀಮೆಎಣ್ಣೆ ಸ್ಟೌ ಬಳಸಿ ಅಡುಗೆ ಮಾಡುತ್ತಿದ್ದೆ. ಅವರು ಖಿಚಡಿ ಅಥವಾ ದಾಲ್ ಮತ್ತು ಅನ್ನವನ್ನು ಹೇಗೆ ಮಾಡಬೇಕೆಂದು ಹೇಳಿಕೊಡುತ್ತಿದ್ದರು. ಒಂಬತ್ತನೇ ವಯಸ್ಸಿನಲ್ಲಿ ಮೆದುಳು ಎಷ್ಟು ಕೆಲಸ ಮಾಡುತ್ತಿತ್ತೋ, ಅದಕ್ಕನುಗುಣವಾಗಿ ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೆ. ಅಕ್ಕಿಯನ್ನು ಎಷ್ಟು ಎಷ್ಟು ಕಡಿಮೆ ಬೇಯಿಸಿದರೂ, ಅದು ತಳಹಿಡಿದಿರುತ್ತಿತ್ತು ಅಥವಾ ಹಸಿಯಾಗಿ ಉಳಿದಿರುತ್ತಿತ್ತು. ಅಡುಗೆ ಮಾಡಿದ ನಂತರ, ನಾನು ಟಿಫಿನ್ ಪ್ಯಾಕ್ ಮಾಡಿಕೊಂಡು ಕೋಣೆಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಅಪ್ಪನ ಅಂಗಡಿಗೆ ಬೆಸ್ಟ್ [ಸಾರ್ವಜನಿಕ ಸಾರಿಗೆ] ಬಸ್ ಮೂಲಕ ಹೋಗುತ್ತಿದ್ದೆ. ಅಪ್ಪ ಆಗಾಗ ತಿಂಡಿ ತಿನ್ನುವಾಗ ಕಿರುಚಾಡುತ್ತಿದ್ದರು, ಇದು ಏನು ಮಾಡಿದ್ದೀಯ? ಎಲ್ಲ ಸತ್ಯನಾಶ್... ಇತ್ಯಾದಿ-ಇತ್ಯಾದಿಯಾಗಿ ಬಯ್ಯುತ್ತಿದ್ದರು.

PHOTO • Sumer Singh Rathore
PHOTO • Devesh

ಎಡ: ಮಿಥುನ್ ತನ್ನ ರಸ್ತೆ ಬದಿಯ ತರಕಾರಿ ಅಂಗಡಿಯನ್ನು ಬೆಳಿಗ್ಗೆ 6:30ಕ್ಕೆ ತೆರೆಯುತ್ತಾ ರೆ . ಬಲ: ನಂತರ ಅದರ ಮುಂಭಾಗದ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾ ರೆ

ಮಧ್ಯಾಹ್ನದ ಹೊತ್ತಿಗೆ ಅಪ್ಪ ಗಾಡಿಯ ಕೆಳಗಿನ ನೆಲದ ಮೇಲೆ ಮಲಗುತ್ತಿದ್ದರು ಮತ್ತು ನಾನು ಅಂಗಡಿಯನ್ನು ನಿರ್ವಹಿಸುತ್ತಿದ್ದೆ. ನನ್ನ ಕೆಲಸ ಇಲ್ಲಿಗೆ ಮುಗಿಯಲಿಲ್ಲ. ಸಾಯಂಕಾಲ ಅವರು ಎದ್ದ ನಂತರ ಸುತ್ತಮುತ್ತಲಿನ ಬೀದಿಗಳಲ್ಲಿ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು ಮಾರಲು ಹೋಗುತ್ತಿದ್ದೆ. ಎಡಗೈ ಮಣಿಕಟ್ಟಿನ ಮೇಲೆ ಕೊತ್ತಂಬರಿ ಸೊಪ್ಪಿನ ಕಟ್ಟು ಇಟ್ಟು, ಎರಡು ಅಂಗೈಯಲ್ಲಿ ನಿಂಬೆಹಣ್ಣು ಹಿಡಿದು ದಾರಿಹೋಕರಿಗೆ ಮಾರುವ ಕಲೆ ಆಗಲೇ ಕಲಿತೆ. ನಿಂಬೆಹಣ್ಣು-ಕೊತ್ತಂಬರಿ ಸೊಪ್ಪು ಮಾರುವುದರಿಂದ ಪ್ರತಿದಿನ 50ರಿಂದ 80 ರೂಪಾಯಿ ಆದಾಯ ಬರುತ್ತಿತ್ತು. ಇದು ಸುಮಾರು ಎರಡೂವರೆ ವರ್ಷಗಳ ಕಾಲ ನಡೆಯಿತು. ಆಗ ಇದ್ದಕ್ಕಿದ್ದಂತೆ ಯಾವುದೋ ಕಾರಣಕ್ಕೆ ನನ್ನ ತಂದೆ ಊರಿಗೆ ಹೋಗಿದ್ದರಿಂದ ನಾನೂ ಜೊತೆಯಲ್ಲಿ ಹೋಗಬೇಕಾಯಿತು. ಇದರಿಂದಾಗಿ ನನ್ನ ಐದನೇ ತರಗತಿಯ ಓದು ಅಪೂರ್ಣವಾಗಿಯೇ ಉಳಿಯಿತು.

ಈ ಬಾರಿ ಮಾ ನನ್ನನ್ನು ಊರಿನಲ್ಲೇ ಉಳಿಸಿಕೊಂಡರು. ಅವರಿಗೆ ಶಿಕ್ಷಣ ಮುಖ್ಯವೆಂದು ತಿಳಿದಿತ್ತು ಹೀಗಾಗಿ ಅವರು ಮನೆಯ ಪ್ರತಿ ಮಗುವೂ ಓದು-ಬರಹ ಕಲಿತಿರಬೇಕೆಂದು ಬಯಸಿದ್ದರು. ಅಥವಾ ಮುಂಬೈಯಲ್ಲಿನ ನನ್ನ ಕಷ್ಟವನ್ನು ನೋಡಿ ಊರಿನಲ್ಲೇ ಉಳಿಸಿಕೊಂಡಿರಬಹುದು. ಆ ಕುರಿತು ನಾನು ಹೆಚ್ಚು ತಿಳಿಯಲು ಹೋಗಲಿಲ್ಲ. ಅವರೂ ನನಗೆ ಯಾವುದು ಇಷ್ಟವೆಂದು ಕೇಳಲೂ ಇಲ್ಲ. ಅವರಿಗೆ ನನಗೆ ಯಾವುದು ಒಳ್ಳೆಯದು ಎನ್ನುವ ಭಾವನೆಯಿತ್ತೋ ಅದನ್ನು ಮಾಡಿದರು.

ಮಾಮಾನ ಮನೆಯಲ್ಲಿ ಮನೆಯಲ್ಲಿ ಉತ್ತಮ ಓದಿನ ವಾತಾವರಣವಿತ್ತು, ಹೀಗಾಗಿ ಅಮ್ಮ ಅವರೊಡನೆ ಮಾತನಾಡಿದರು. ಹೀಗೆ ನಾನು ಹನ್ನೊಂದನೇ ವಯಸ್ಸಿನಲ್ಲಿ ತಾಯಿಯ ಚಿಕ್ಕಪ್ಪನ ಮನೆಗೆ ಓದಲು ಹೋದೆ. ಅಲ್ಲಿ ಮನೆಯ ಮಕ್ಕಳೆಲ್ಲ ಶಾಲೆಗೆ ಹೋಗುತ್ತಿದ್ದರು. ಇದೇ ಮೊದಲ ಬಾರಿಗೆ ನನಗೆ ಇಂತಹ ಓದಿನ ವಾತಾವರಣ ಸಿಕ್ಕಿತು. ಮಾವಂದಿರು ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು, ಹೀಗಾಗಿ ಮನೆಯ ವಾತಾವರಣವು ರಾಜಕೀಯವಾಗಿಯೂ ಇರುತ್ತಿತ್ತು. ಮೊದಲ ಬಾರಿಗೆ ಇಲ್ಲಿ ದೇಶದ ರಾಜಕೀಯ ಪಕ್ಷಗಳ ಹೆಸರು, ಪ್ರಾದೇಶಿಕ ನಾಯಕರ ಹೆಸರು ಕೇಳಿದೆ. ಒಂದು ಮಧ್ಯಾಹ್ನ ನಾನು ನೆರೆಹೊರೆಯ ವ್ಯಕ್ತಿಯನ್ನು ನೋಡಿದೆ, ಅವರನ್ನು ನಾವು ಮಾಮಾ ಎಂದು ಕರೆಯುತ್ತಿದ್ದೆವು ಮತ್ತು ಜನರು ಕಾಮ್ರೇಡ್ ಎಂದು ಕರೆಯುತ್ತಿದ್ದರು, ಅನೇಕರು ಕೆಂಪು ಧ್ವಜಗಳೊಂದಿಗೆ ಬಾಗಿಲಲ್ಲಿ ನಿಂತಿದ್ದರು. ಸ್ವಲ್ಪ ವಿಚಾರಿಸಿದಾಗ ತಿಳಿಯಿತು ಇದು ಕಮ್ಯುನಿಸ್ಟ್ ಪಕ್ಷದ ಬಾವುಟ, ರೈತರ ಮತ್ತು ಕೂಲಿಕಾರರ ಬಾವುಟ ಎಂದು. ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಸರ್ಕಾರದ ವಿರುದ್ಧವು ಹೋರಾಟ ಮಾಡಬಹುದು ಎಂಬುದು ನನಗೆ ಮೊದಲ ಸಲ ತಿಳಿಯಿತು.

2008ರಲ್ಲಿ 12ನೇ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ, ನನ್ನ ಮಾವ ನನ್ನ ಬಳಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಪದವಿಗೆ ಸೇರಲು ಪ್ರವೇಶ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಸೂಚಿಸಿದರು. ಈ ಬಗ್ಗೆ ಅಮ್ಮನ ಬಳಿ ಚರ್ಚಿಸಿದಾಗ ಅಮ್ಮ ಹೇಳಿದ್ದು ಈಗ ಮೊದಲಿನ ಸ್ಥಿತಿ ಇಲ್ಲ ಎಂದಿದ್ದರು. ಈ ರೀತಿ ನಿರಾಕರಿಸಿದ ನಂತರವೂ ಅಮ್ಮ ಪಾಲಿಟೆಕ್ನಿಕ್ ಅರ್ಜಿ ಹಾಕಿದ್ದರು.‌ ನನ್ನಿಂದ ಮೊದಲ ಬಾರಿಗೆ ಸರಿಯಾದ ರ‍್ಯಾಂಕ್ ಪಡೆಯಲಾಗಲಿಲ್ಲ. ಮರುವರ್ಷ ಮತ್ತೆ ಪ್ರಯತ್ನಪಟ್ಟು ಒಂದು ವರ್ಷದ ಪರಿಶ್ರಮದಿಂದ ಒಳ್ಳೆ ರ‍್ಯಾಂಕ್ ಪಡೆದು ಈ ಬಾರಿ ಸರ್ಕಾರಿ ಕಾಲೇಜು ಸಿಕ್ಕಿತು. ಕೌನ್ಸೆಲಿಂಗ್ ಪತ್ರವೂ ಬಂದಿದ್ದು, ಒಂದು ವರ್ಷದ ಶುಲ್ಕ 6 ಸಾವಿರ ರೂ. ಇತ್ತು. ನಾನು ಮತ್ತೆ ನನ್ನ ತಾಯಿಯನ್ನು ಕೇಳಿದೆ, ಆದರೆ ಅವರು ಕೈ ಎತ್ತಿಬಿಟ್ಟರು. “ನೋಡೋಣ” ಎಂದು ಮಾಮಾ ಹೇಳಿದರು. ಆದರೆ ಅಕ್ಕ ತಂಗಿಯರು ಬೆಳೆಯುತ್ತಿದ್ದಾರೆ, ತಂದೆಗೆ ಈಗ ಅಷ್ಟು ಸಂಪಾದಿಸಲು ಸಾಧ್ಯವಾಗುತ್ತಿಲ್ಲ, ಮುಂದೆ ಏನು ಮಾಡುವುದು? ಎಂದು ಮಾ ಮತ್ತೆ ಕೇಳಿದರು. ಅಮ್ಮ ಹೇಳಿದ್ದು ಸರಿಯಿತ್ತು. ವಿದ್ಯಾಭ್ಯಾಸಕ್ಕೆ ಮೂರ್ನಾಲ್ಕು ವರ್ಷ ಕಾಲಾವಕಾಶ ಸಿಗುವಂಥ ಪರಿಸ್ಥಿತಿ ಆಗ ಇದ್ದಿರಲಿಲ್ಲ. ನಾನು ಆ ಕನಸನ್ನು ಅಲ್ಲಿಗೇ ಬಿಟ್ಟೆ.

PHOTO • Sumer Singh Rathore
PHOTO • Sumer Singh Rathore

ಎಡ: ತನ್ನ ಗ್ರಾಹಕರು ಬರುವ ಮೊದಲು ತರಕಾರಿಗಳನ್ನು ಜೋಡಿಸು ತ್ತಿರುವುದು . ಬಲ: ಪಾಲಕ್ ಸೊಪ್ಪಿನ ಕಟ್ಟನ್ನು ಮಾರಾಟಕ್ಕೆ ಇಡುವ ಮೊದಲು ಅದರ ತುದಿಗಳನ್ನು ಕತ್ತರಿ ಸುತ್ತಿರುವುದು

ಇದರ ನಂತರ, ನಾನು ಹಲವಾರು ಬಾರಿ ನನ್ನ ಸೈಕಲ್ ತೆಗೆದುಕೊಂಡು ಹಳ್ಳಿಯಿಂದ ದೂರದಲ್ಲಿರುವ ಮಾರುಕಟ್ಟೆಗಳಿಗೆ ಹೋಗಿ ಕೆಲಸ ಹುಡುಕಲು ಪ್ರಯತ್ನಿಸಿದೆ, ಅಲ್ಲಿ ಯಾರೂ ನನಗೆ ತಿಳಿದಿರಲಿಲ್ಲ. ಗೊತ್ತಿದ್ದವರ ಬಳಿ ಕೆಲಸ ಕೇಳಲು ಹಿಂದೇಟು ಹಾಕುತ್ತಿದ್ದೆ. ಕೊನೆಗೆ ಕೆಲಸ ಹುಡುಕುವ ಪ್ರಯತ್ನದ ಫಲವಾಗಿ ಒಂದು ಕಡೆ ಟ್ಯೂಷನ್ ಕಲಿಸುವ ಕೆಲಸ ಸಿಕ್ಕಿತು. ಆದರೆ, ಎರಡು-ಮೂರು ತಿಂಗಳು ಪಾಠ ಮಾಡಿದರೂ ಪೂರ್ತಿ ಹಣ ಸಿಗದೇ ಇರುವುದನ್ನು ಕಂಡು ಮನಸ್ಸು ಒಡೆದಿತ್ತು. ನಾನು ಮುಂಬೈಗೆ ಹೊರಡುತ್ತೇನೆ ಎಂದುಕೊಂಡೆ; ಪಾಪಾ ಕೂಡ ಇದ್ದಿದ್ದರಿಂದ ಒಂದಿಷ್ಟು ಕೆಲಸ ಸಿಗಬಹುದು ಅನ್ನಿಸಿತು. ಮಾ ಕೂಡಾ ಇದಕ್ಕೆ ಒಪ್ಪಿದರು. ನಂತರ ಒಂದು ದಿನ ಒಮ್ಮೆ ನನ್ನ ಪಾಪಾ ಮೊದಲ ಬಾರಿಗೆ ಯಾರೊಂದಿಗೆ ಮುಂಬೈಗೆ ಬಂದಿದ್ದರೋ ಅದೇ ಪಕ್ಕದ ಮನೆಯವರ ಮಗನೊಂದಿಗೆ ನಾನು ಮುಂಬೈಗೆ ಬಂದೆ.

*****

ಕೆಲಸದ ಹುಡುಕಾಟ ಮತ್ತೆ ಶುರುವಾಯಿತು. ವಾಸಿಸುವ ಸ್ಥಳವೂ ಅನಿಶ್ಚಿತವಾಗಿತ್ತು. ನಾನು ದಿನವಿಡೀ ಕೆಲಸ ಹುಡುಕಿ ಅಲೆಯುತ್ತಿದ್ದೆ...

ಮುಂಬೈನ ಅಂಧೇರಿ (ಪಶ್ಚಿಮ) ಪ್ರದೇಶದಲ್ಲಿ, ಪಾಪಾ ತರಕಾರಿ ಗಾಡಿಯನ್ನು ಇಡುತ್ತಿದ್ದರು, ಅವರು ಫುಟ್‌ಪಾತ್‌ನ ಮೂಲೆಯಲ್ಲಿ ಅಡುಗೆ ಮಾಡಿ ತಿನ್ನುತ್ತಿದ್ದರು ಮತ್ತು ಅಲ್ಲೇ ಮಲಗುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಬದುಕುವುದು ಕಷ್ಟಕರವಾಗಿತ್ತು. ನನಗೆ ಹಾಲಿನ ಅಂಗಡಿಯಲ್ಲಿ ಕೆಲಸ ಸಿಕ್ಕಿತು. ಮಾಲಿಕರು ಅಂಗಡಿ ನೋಡಿಕೊಳ್ಳುವ ಕೆಲಸ ಎಂದಿದ್ದರು, ಕೆಲವೊಮ್ಮೆ ಅಲ್ಲಿ ಇಲ್ಲಿ ಸಾಮಾನು ತಲುಪಿಸಿ ಬರಬೇಕಿತ್ತು, ಊಟ ಮತ್ತು ವಸತಿ ಅಲ್ಲಿಯೇ ಇತ್ತು, ತಿಂಗಳ ಮೂವತ್ತು ದಿನ ಕೆಲಸ ಇರುತ್ತಿತ್ತು, ರಜೆ ಇದ್ದಿರಲಿಲ್ಲ, 1,800 ರೂ. ಸಂಬಳ ಕೊಡುವುದಾಗಿ ಮಾಲೀಕರು ಹೇಳಿದರು. ನಾನು ಕೆಲಸ ಒಪ್ಪಿಕೊಂಡಿದ್ದೆ. ಆದರೆ, ಒಂದು ವಾರದಲ್ಲಿ ಇದ್ದಕ್ಕಿದ್ದಂತೆ ಎರಡೂ ಕಾಲುಗಳು ಊದಿಕೊಂಡವು. ಭಯಾನಕ ನೋವು ಬರುತ್ತಿತ್ತು ಮತ್ತು ಕುಳಿತಾಗ ಸ್ವಲ್ಪ ಆರಾಮವೆನ್ನಿಸುತ್ತಿತ್ತು. ಇಪ್ಪತ್ತೆರಡು ದಿನ ಕೆಲಸ ಮಾಡಿ, ಈ ತಿಂಗಳು ಮುಗಿದ ಮೇಲೆ ಕೆಲಸ ಮಾಡಲು ಆಗುವುದಿಲ್ಲ ಎಂದು ಸೇಠ್ ಬಳಿ ಹೇಳಿದ್ದೆ.

ಮತ್ತೆ ಕೆಲಸದ ಹುಡುಕಾಟ ಶುರುವಾಯಿತು. ವಾಸಿಸುವ ಸ್ಥಳವೂ ಅನಿಶ್ಚಿತವಾಗಿತ್ತು. ದಿನವಿಡೀ ಕೆಲಸ ಹುಡುಕುತ್ತಿದ್ದ ನಾನು, ಕೆಲವೊಮ್ಮೆ ಬಸ್ ನಿಲ್ದಾಣದ ಮುಂದೆ ಅಥವಾ ಯಾವುದಾದರೂ ಅಂಗಡಿ ಮುಂದೆ ಮಲಗುತ್ತಿದ್ದೆ. ಕೊನೆಗೆ ಆನ್‌ಲೈನ್ ಲಾಟರಿ ಶಾಪ್‌ ಒಂದರಲ್ಲಿ ಕೆಲಸ ಸಿಕ್ಕಿತು, ಅಲ್ಲಿ ಜನರು ಬಾಜಿ ಕಟ್ಟಲು ಬರುತ್ತಿದ್ದರು. ಇಲ್ಲಿ ಲಾಟರಿ ನಂಬರುಗಳನ್ನು ಬೋರ್ಡಿನ ಮೇಲೆ ಬರೆಯುವುದು ನನ್ನ ಕೆಲಸವಾಗಿತ್ತು, ಅದಕ್ಕೆ ದಿನಕ್ಕೆ 80 ರೂಪಾಯಿ ಸಿಗುತ್ತಿತ್ತು. ನನ್ನ ಸೇಠ್ ಒಂದು ದಿನ ತಾನೇ ಬೆಟ್ಟಿಂಗ್ ಮಾಡಲು ಪ್ರಾರಂಭಿಸಿದನು, ಅದರಲ್ಲಿ ಅವನು ಸುಮಾರು ಏಳು-ಎಂಟು ಲಕ್ಷ ರೂಪಾಯಿಗಳು ಮುಳುಗಿಹೋಯಿತು. ಈ ಘಟನೆಯ ನಂತರ ಎರಡು ದಿನ ಅಂಗಡಿ ತೆರೆಯಲಿಲ್ಲ. ಮೂರನೆ ದಿನ ಯಾರೋ ಸೇಠ್‌ನ ಸೇಠ್ ಹೊಡೆಯುತ್ತಿದ್ದಾರೆಂದು ಹೇಳಿದರು. ಇನ್ನು ಇನ್ನೊಬ್ಬ ಸೇಠ್ ಬರುವ ತನಕ ಅಂಗಡಿ ತೆರೆಯುವಂತಿರಲಿಲ್ಲ. ಆದರೆ ಎರಡನೇ ಸೇಠ್ ಬರಲೇ ಇಲ್ಲ. ನನಗೆ ಸುಮಾರು ಒಂದು ಸಾವಿರ ಬರುವುದಿತ್ತು, ಅದೂ ಹೋಯಿತು. ಮತ್ತೊಮ್ಮೆ ಕೆಲಸ ಹುಡುಕಿಕೊಂಡು ಅಲೆದಾಡತೊಡಗಿದೆ.

PHOTO • Devesh
PHOTO • Devesh

ಮಿಥುನ್ ಅವರ ಅನೇಕ ಗ್ರಾಹಕರು ಖಾಯಂ ಗ್ರಾಹಕರಾಗಿದ್ದಾರೆ ಮತ್ತು ಕೆಲವರು ಸ್ನೇಹಿತರಾಗಿದ್ದಾರೆ. ಅವರು ಸುಮಾರು 2008ರಿಂದ ಮುಂಬೈನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ

ಅಷ್ಟರಲ್ಲಿ ಪಾಪಾ ಕಾಲಿನಲ್ಲಿ ಸಮಸ್ಯೆ ಶುರುವಾಗಿತ್ತು. ನಾನು ಅಪ್ಪನ ಬಳಿ ಇನ್ನು ನಾನು ಅಂಗಡಿ ನೋಡಿಕೊಳ್ಳುತ್ತೇನೆ, ಇನ್ನು ನೀವು ಊರಿಗೆ ತೆರಳಿ ಎಂದೆ. ಆರಂಭದಲ್ಲಿ, ಪಾಪಾ ನಿನಗೆ ಇದನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು, ರಸ್ತೆಯಲ್ಲಿ ಜಗತ್ತಿನ ಅಷ್ಟೂ ಸಮಸ್ಯೆಗಳಿರುತ್ತವೆ ಎನ್ನುವುದು ಅವರ ಕಾಳಜಿಯಾಗಿತ್ತು. ಆದರೆ, ಅವರಿಗೂ ಊರಿಗೆ ಹೋಗುವ ಮನಸ್ಸಿತ್ತು. ಕೊನೆಗೂ ನಾನು ಅವರ ಮನವೊಲಿಸುವಲ್ಲಿ ಯಶಸ್ವಿಯಾದೆ.

ಒಂದು ವಾರ ಸ್ವಂತವಾಗಿ ಅಂಗಡಿ ನಡೆಸಿ ಸುಮಾರು ಒಂದೂವರೆ ಸಾವಿರ ರೂಪಾಯಿ ಉಳಿಸಿದ್ದೆ. ಇದು ನನ್ನ ಪಾಲಿಗೆ ದೊಡ್ಡ ಮೊತ್ತವಾಗಿತ್ತು. ಈ ಗಳಿಕೆಯು ಕೆಲಸದ ಕಡೆಗೆ ಸಮರ್ಪಣಾ ಭಾವವನ್ನು ಮೂಡಿಸಿತು ಮತ್ತು ಒಂದು ತಿಂಗಳ ಪರಿಶ್ರಮದ ನಂತರ ನಾನು ಐದು ಸಾವಿರ ರೂಪಾಯಿಗಳನ್ನು ಉಳಿಸಿದೆ. ನಾನು ಮೊದಲ ಬಾರಿಗೆ ಮನೆಗೆ ಅಂಚೆ ಮೂಲಕ ಹಣವನ್ನು ಕಳುಹಿಸಿದಾಗ, ನನ್ನ ತಾಯಿ ಬಹಳ ಸಂತೋಷಪಟ್ಟರು. ಏನನ್ನೂ ಉಳಿಸಲು ಸಾಧ್ಯವಾಗದ ಅಂಗಡಿಯಲ್ಲಿ ನಾನು ತುಂಬಾ ಹಣವನ್ನು ಉಳಿಸಿದ್ದೇನೆ ಎಂದು ಪಾಪಾ ಆಶ್ಚರ್ಯಚಕಿತರಾಗಿದ್ದರು.

ನಾನು ಗಾಡಿಯಿಡುತ್ತಿದ್ದ ರಸ್ತೆಯ ಇನ್ನೊಂದು ಬದಿಯಲ್ಲಿ ತರಕಾರಿ ಅಂಗಡಿ ಇತ್ತು, ಅದನ್ನು ನನ್ನ ವಯಸ್ಸಿನ ಹುಡುಗನೊಬ್ಬ ನಡೆಸಲು ಬಂದಿದ್ದ. ಕ್ರಮೇಣ ನಾವು ಒಳ್ಳೆಯ ಸ್ನೇಹಿತರಾದೆವು. ಅವನು ಮೊದಲ ಬಾರಿಗೆ ಆಹಾರದ ತಟ್ಟೆಯನ್ನು ನನ್ನತ್ತ ಸರಿಸಿದ್ದು ನನಗೆ ನೆನಪಿದೆ. ಅವನ ಹೆಸರು ಅಮೀರ್. ಅಮೀರ್ ನನ್ನ ಬದುಕಿನಲ್ಲಿ ಬರುವುದರ ಮೂಲಕ ನನ್ನ ಊಟ ಮತ್ತು ತಿಂಡಿಯ ಟೆನ್ಷನ್ ದೂರವಾಯಿತು. ಈಗ ಅಮೀರ್ ಇಂದು ಅಡುಗೆ ಏನು ಮಾಡಬೇಕೆಂದು ಕೇಳುತ್ತಿದ್ದ. ನನಗೆ ಅಡುಗೆ ಮಾಡುವುದು ಗೊತ್ತಿರಲಿಲ್ಲ, ಹಾಗಾಗಿ ಆಗಾಗ್ಗೆ ನಾನು ಊಟದ ನಂತರ ಎಲ್ಲಾ ಪಾತ್ರೆಗಳನ್ನು ತೊಳೆಯುತ್ತಿದ್ದೆ. ನಾವು ಮಲಗುವ ತೆರೆದ ಜಾಗದಲ್ಲಿ ನಮ್ಮ ಜೇಬಿನಿಂದ ಹಣ ಕಳ್ಳತನವಾಗತೊಡಗಿತು. ಒಮ್ಮೆ ಯಾರೋ ಜೇಬಿನಿಂದ ಮೊಬೈಲ್ ತೆಗೆದಿದ್ದರು. ಹಾಗಾಗಿ, ಕೆಲವು ದಿನಗಳ ನಂತರ, ನಾನು ಮತ್ತು ಅಮೀರ್ ಒಟ್ಟಿಗೆ ಬಾಡಿಗೆ ಮನೆ ತೆಗೆದುಕೊಳ್ಳಲು ನಿರ್ಧರಿಸಿದೆವು. ಪರಿಚಿತರೊಬ್ಬರ ಸಹಾಯದಿಂದ ಮನೆಯೂ ಸಿಕ್ಕಿತು. ಅಡ್ವಾನ್ಸ್‌ ಆಗಿ ಒಂದಿಷ್ಟು ಹಣ ಕಟ್ಟಬೇಕಿತ್ತು ಮತ್ತು ತಿಂಗಳ ಬಾಡಿಗೆ ಮೂರು ಸಾವಿರ, ಅದನ್ನು ನಾನು ಮತ್ತು ಅಮೀರ್ ಹಂಚಿಕೊಳ್ಳುತ್ತಿದ್ದೆವು.

ಊರಿನಲ್ಲಿರುವ ನಮ್ಮ ಮನೆ ಕಚ್ಚಾ ರಚನೆಯಾಗಿದ್ದು, ಕೆಲವು ಸಮಯದ ಹಿಂದೆ ಬೆಂಕಿಗೂ ಆಹುತಿಯಾಗಿತ್ತು. ದುರಸ್ತಿ ಮಾಡಿಸಿದ್ದರೂ ಅದು ದುಸ್ಥಿತಿಯಲ್ಲಿತ್ತು. ಹೀಗಾಗಿ ಕಚ್ಚಾ ಮನೆ ಕೆಡವಿ ಅದೇ ಜಾಗದಲ್ಲಿ ಪಕ್ಕಾ ಮನೆ ಕಟ್ಟಲು ಆರಂಭಿಸಿದೆವು. ಅದೇ ಸಮಯಕ್ಕೆ 2013ರ ಮೇ ತಿಂಗಳಿನಲ್ಲಿ ನನ್ನ ಎರಡೂ ಕಾಲುಗಳಲ್ಲಿ ವಿಚಿತ್ರ ನೋವು ಶುರುವಾಯಿತು. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರನ್ನು ಭೇಟಿಯಾದಾಗ ಕ್ಯಾಲ್ಸಿಯಂ ಕೊರತೆಯ ಬಗ್ಗೆ ತಿಳಿಸಿದರು. ಸರಿ ಹೋಗದಿದ್ದಾಗ ವೈದ್ಯರು ಎಲ್ಲಾ ಪರೀಕ್ಷೆಗಳನ್ನು ಬರೆದರು. ವರದಿ ಬಂದ ಮೇಲೆ ಜಾಂಡೀಸ್ ಇರುವುದು ಪತ್ತೆಯಾಯಿತು. ಚಿಕಿತ್ಸೆ ನೀಡಿದರೂ ನನ್ನ ಸ್ಥಿತಿ ಹದಗೆಡುತ್ತಿತ್ತು. ಪರಿಹಾರ ಸಿಗದ ಕಾರಣ ಕುಟುಂಬಸ್ಥರು ಹೆಚ್ಚಾಗಿ ಭೂತ ಬಿಡಿಸುವವರ ಮೊರೆ ಹೋಗುತ್ತಿದ್ದರು. ಔಷಧಿ ಮತ್ತು ಪೂಜೆಗಾಗಿ ಹಣವು ಎರಡೂ ಕಡೆಯಿಂದ ಹೋಗುತ್ತಿತ್ತು. ಆದರೆ ಎಲ್ಲಿಯೂ ಪರಿಹಾರ ಸಿಗಲಿಲ್ಲ. ನನ್ನ ಹಣವು ಸಂಪೂರ್ಣವಾಗಿ ಖಾಲಿಯಾಯಿತು. ನನ್ನ ಸ್ಥಿತಿ ನೋಡಿ ಸಂಬಂಧಿಕರು ಸಹಾಯ ಮಾಡಿದರು. ನಾನು ಮತ್ತೆ ಮುಂಬೈಗೆ ತೆರಳಿದೆ.

PHOTO • Sumer Singh Rathore
PHOTO • Sumer Singh Rathore

ಎಡಕ್ಕೆ: ಅವರು ಜಿ ಮ್‌ ನಲ್ಲಿ ನಿಯಮಿತವಾಗಿ ವರ್ಕೌಟ್ ಮಾಡುತ್ತಾರೆ, ಇದು ಅನೇಕ ಜನರನ್ನು ಆಶ್ಚರ್ಯಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ. ʼತರಕಾರಿ ಮಾರಾಟಗಾರರಿಗೆ ಆರೋಗ್ಯವಾಗಿರಲು ಹಕ್ಕಿಲ್ಲವೇ?ʼ ಬಲ: ಮನೆಯಲ್ಲಿ ಅಡುಗೆ ತಯಾರಿ

ನನ್ನ ಮನಸ್ಸಿನಲ್ಲಿ ವಿವಿಧ ಆಲೋಚನೆಗಳು ಗಿರಕಿ ಹೊಡೆಯುತ್ತಿದ್ದವು. ಕೆಲವೊಮ್ಮೆ ನಾನು ಹಳ್ಳಿಯಲ್ಲಿದ್ದಂತೆ, ಕೆಲವೊಮ್ಮೆ ಮುಂಬೈಯಲ್ಲಿದ್ದಂತೆ ಅನ್ನಿಸುತ್ತಿತ್ತು. ನನ್ನ ವ್ಯವಹಾರದ ಗ್ರಾಹಕಿ ಮತ್ತು ಆಪ್ತ ಗೆಳತಿಯಾಗಿದ್ದ ಕವಿತಾ ಮಲ್ಹೋತ್ರಾ ನನ್ನ ಬಗ್ಗೆ ತಿಳಿದು ನೊಂದುಕೊಂಡಳು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕವಿತಾ ಮಲ್ಹೋತ್ರಾ ನನ್ನನ್ನು ತಜ್ಞ ವೈದ್ಯರ ಬಳಿಗೆ ಕರೆದೊಯ್ಯಲು ಪ್ರಾರಂಭಿಸಿದಳು. ಅವಳೇ ಎಲ್ಲ ಖರ್ಚು ಭರಿಸುತ್ತಿದ್ದಳು. ಜನರ ಒತ್ತಾಯದ ಮೇರೆಗೆ ಅಮೀರ್ ನನ್ನನ್ನು ದರ್ಗಾಕ್ಕೆ ಕರೆದೊಯ್ದ. ಕೆಲವೊಮ್ಮೆ ನಾನು ದೇಹದ ಮೇಲಿನ ಬಟ್ಟೆಗಳನ್ನು ಸಂಪೂರ್ಣ ಕಳಚಿ ಎಸೆಯುತ್ತಿದ್ದೆ ಎಂದು ಜನರು ಹೇಳುತ್ತಾರೆ, ಕೆಲವೊಮ್ಮೆ ನಾನು ಅಲ್ಲಿ ಇಲ್ಲಿ ಓಡಲು ಪ್ರಾರಂಭಿಸಿದೆ. ಒಂದು ದಿನ, ಪಾಪಾ ನನ್ನನ್ನು ರೈಲಿನಲ್ಲಿ ಕರೆದೊಯ್ದು ಯಾರೋ ಪರಿಚಯದ ವ್ಯಕ್ತಿಯ ಸಹಾಯದಿಂದ ಮತ್ತೆ ಹಳ್ಳಿಗೆ ಕರೆತಂದರು. ಊರಿನಲ್ಲಿ ವೈದ್ಯರು, ಭೂತ ಬಿಡಿಸುವವರಿಗೆ ತೋರಿಸುವ ಪ್ರಕ್ರಿಯೆ ಮತ್ತೊಮ್ಮೆ ಆರಂಭವಾಗಿತ್ತು. ಆಗಾಗ ಜನರು ಅಲಹಾಬಾದ್‌ನ ಬೇರೆ ಬೇರೆ ವೈದ್ಯರಿಗೆ ತೋರಿಸುವಂತೆ ಸಲಹೆಗಳನ್ನು ನೀಡುತ್ತಿದ್ದರು, ಅದಕ್ಕಾಗಿ ಬೊಲೆರೋವನ್ನು ಬುಕ್ ಮಾಡುತ್ತಿದ್ದರು, ಅದರಲ್ಲಿ ತಾಯಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ತಾಯಿಯ ಬಳಿ ಹಣವೇ ಇರಲಿಲ್ಲ, ಆದರೆ ಸಂಬಂಧಿಕರು ಆರ್ಥಿಕ ಸಹಾಯ ಮಾಡುತ್ತಿದ್ದರು. ನನ್ನ ತೂಕ ನಲವತ್ತು ಕೆಜಿಗೆ ಇಳಿದಿತ್ತು. ನಾನು ಹಾಸಿಗೆಯ ಮೇಲೆ ಮಲಗಿದರೆ, ಅಸ್ಥಿಪಂಜರದಂತೆ ಕಾಣುತ್ತಿದ್ದೆ. ಜನರು ಬುದುಕುವ ಭರವಸೆಯಿಲ್ಲ ಎನ್ನುತ್ತಿದ್ದರು. ಆದರೆ ನನ್ನೊಂದಿಗೆ ಛಲ ಬಿಡದ ಅಮ್ಮ ಇದ್ದರು. ಅಮ್ಮ ಚಿಕಿತ್ಸೆಗಾಗಿ ತಮ್ಮ ಆಭರಣಗಳನ್ನು ಒಂದೊಂದಾಗಿ ಮಾರಾಟ ಮಾಡಲು ಪ್ರಾರಂಭಿಸಿದರು.

ಅಷ್ಟರಲ್ಲಿ ಯಾರದೋ ಸಲಹೆಯ ಮೇರೆಗೆ ಅಲಹಾಬಾದ್‌ನ ಮನೋವೈದ್ಯಕೀಯ ತಜ್ಞ ಡಾ.ಟಂಡನ್ ಅವರ ಬಳಿ ನನ್ನ ಚಿಕಿತ್ಸೆ ಆರಂಭಿಸಲಾಯಿತು. ಅವರು 15 ಆಗಸ್ಟ್ 2013ರಂದು ಭೇಟಿಗೆ ಸಮಯವನ್ನು ನೀಡಿದರು. ನಾವು ಹೊರಟ ಬಸ್ ಒಂದಷ್ಟು ದೂರ ಹೋದ ಮೇಲೆ ಕೆಟ್ಟು ನಿಂತಿತು. ಅಲಹಾಬಾದ್‌ಗೆ ಬಸ್ಸುಗಳು ಲಭ್ಯವಿದ್ದ ಸ್ಥಳದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಒಂದು ಅಡ್ಡರಸ್ತೆ ಇತ್ತು. ನಾನು ಧೈರ್ಯವನ್ನು ಒಟ್ಟುಗೂಡಿಸಿ ನಡೆಯಲು ಪ್ರಾರಂಭಿಸಿದೆ, ಆದರೆ ಸ್ವಲ್ಪ ದೂರ ಹೋದ ನಂತರ ನಡೆಯಲಾಗದೆ ರಸ್ತೆಯ ಬದಿಯಲ್ಲಿ ಕುಳಿತುಕೊಂಡೆ. ಅಮ್ಮ ಬಾ, ನಿನ್ನನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತೇನೆ ಎಂದರಿ. ಆ ಮಾತನ್ನು ಕೇಳಿ ನನಗೆ ಅಳುವೇ ಬಂದಂತಾಯಿತು. ನಂತರ ಅಮ್ಮ ಅಲ್ಲೇ ಹೋಗುತ್ತಿದ್ದ ಟೆಂಪೋವೊಂದಕ್ಕೆ ಅಡ್ಡ ಹಾಕಿ ನಿಲ್ಲಿಸಿದರು. ಟೆಂಪೋ ಚಾಲಕ ನಮ್ಮನ್ನು ಬಸ್‌ ನಿಲ್ದಾಣದವರೆಗೆ ತಲುಪಿಸಿ ಅದಕ್ಕೆ ಹಣವನ್ನೂ ತೆಗೆದುಕೊಳ್ಳಲಿಲ್ಲ. ನನ್ನ ಅನಾರೋಗ್ಯದ ಸಮಯದಿಂದ ನಡೆದ ಯಾವ ಘಟನೆಯೂ ನೆನಪಿಲ್ಲ, ಆದರೆ ಈ ಘಟನೆ ನೆನಪಿದೆ. ಮತ್ತು ಇಲ್ಲಿಂದ ನನ್ನ ಆರೋಗ್ಯವು ಸುಧಾರಿಸಲು ಪ್ರಾರಂಭಿಸಿತು. ಕ್ರಮೇಣ ತೂಕವೂ ಹೆಚ್ಚಾಯಿತು. ಆದರೆ ದೌರ್ಬಲ್ಯ ಇನ್ನೂ ಇತ್ತು. ಹೆಚ್ಚು ಭಾರ ಎತ್ತಲಾಗುತ್ತಿರಲಿಲ್ಲ. ಆದರೆ ಧೈರ್ಯದಿಂದ ಕೆಲಸ ಮಾಡಲು ಪ್ರಾರಂಭಿಸಿ ಮತ್ತೆ ಮುಂಬೈಗೆ ಬಂದು ತಲುಪಿದೆ. ಕೆಲಸವು ಮತ್ತೊಮ್ಮೆ ವೇಗವನ್ನು ಪಡೆದುಕೊಂಡಿತು ಮತ್ತು ಮುಂದಿನ ಎರಡು ವರ್ಷಗಳಲ್ಲಿ, ಎಲ್ಲವೂ ಒಂದು ಹಂತಕ್ಕೆ ಬಂದಿತು. ನಂತರ 2016ರಲ್ಲಿ, ನೋಟು ಅಮಾನ್ಯೀಕರಣವನ್ನು ಘೋಷಿಸಲಾಯಿತು, ಅದು ನನ್ನ ವ್ಯವಹಾರವನ್ನು ಹಾಳುಮಾಡಿತು.

*****

ಮುನ್ಷಿ ಪ್ರೇಮಚಂದ್ ಅವರ ಪುಸ್ತಕಗಳನ್ನು ಓದುವಾಗ ನನಗೆ ನನ್ನ ಜೀವನ ಚರಿತ್ರೆ, ನನ್ನ ಜನರು ಮತ್ತು ನನ್ನ ಸಮಾಜವನ್ನು ನೋಡುತ್ತಿರುವಂತೆ ಭಾಸವಾಯಿತು

ಇತ್ತೀಚಿನ ವರ್ಷಗಳಲ್ಲಿ ನಾನು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸಲಾರಂಭಿಸಿದ್ದೆ. ಮುಂದೆ ವಾಟ್ಸಾಪ್ ಓದುತ್ತಾ, ಮನಸ್ಸು ಸಂಪೂರ್ಣವಾಗಿ ಬಲಪಂಥದ ಕಡೆಗೆ ವಾಲುತ್ತಿತ್ತು. ಒಂದು - ಒಂದೂವರೆ ವರ್ಷದೊಳಗೆ ಸಾಮಾಜಿಕ ಮಾಧ್ಯಮದ ಜಾಲದಲ್ಲಿ ಸಿಲುಕಿ ಮುಸ್ಲಿಂ ಕುಟುಂಬದೊಂದಿಗೆ ವಾಸಿಸುತ್ತಿದ್ದಾಗಲೂ ಮುಸ್ಲಿಮರನ್ನು ದ್ವೇಷಿಸಲು ಪ್ರಾರಂಭಿಸಿದೆ. ನನ್ನ ಮಾತುಗಳನ್ನು ಅಮೀರ್ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ದೇಶದ ಉಳಿದ ಮುಸ್ಲಿಮರೊಂದಿಗೆ ನನಗೆ ಸಮಸ್ಯೆ ಇತ್ತು. ಪಾಕಿಸ್ತಾನ, ಕಾಶ್ಮೀರ, ಈಶಾನ್ಯ ಭಾಗದ ಜನರೊಂದಿಗೆ ನನಗೆ ಸಮಸ್ಯೆ ಇತ್ತು. ನಾನು ಹುಟ್ಟಿದ ಧರ್ಮವನ್ನು ಅನುಸರಿಸದವರೊಡನೆ ನನಗೆ ಸಮಸ್ಯೆ ಇತ್ತು. ಜೀನ್ಸ್ ತೊಟ್ಟಿರುವ ಮಹಿಳೆಯನ್ನು ನೋಡಿದರೆ ಇವರು ಸಮಾಜವನ್ನು ಕೆಡಿಸುತ್ತಿದ್ದಾರೆ ಎನಿಸುತ್ತಿತ್ತು. ಪ್ರಧಾನಿಯವರ ಟೀಕೆಯನ್ನು ಕೇಳಿದಾಗ ಯಾರೋ ನನ್ನ ದೇವರನ್ನು ನಿಂದಿಸುತ್ತಿರುವಂತೆ ಕಾಣುತ್ತಿತ್ತು.

ನಾನು ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕೆಂದು ಎನ್ನಿಸತೊಡಗಿತು, ಮತ್ತು ನನ್ನ ಸ್ವಂತ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಥೆಗಳಾಗಿ ಬರೆಯಲು ಪ್ರಾರಂಭಿಸಿದೆ. ಓದುಗರು ನನ್ನೊಂದಿಗೆ ಸಂಪರ್ಕ ಸಾಧಿಸಲು ಪ್ರಾರಂಭಿಸಿದರು

ವೀಡಿಯೊ ನೋಡಿ: ತರಕಾರಿ ವ್ಯಾಪಾರ ಮತ್ತು ಸಮಾನತೆಯ ಕನಸಿನ ನಡುವೆ

ಒಂದು ದಿನ ಅಮೀರ್ ಒಬ್ಬ ಪತ್ರಕರ್ತನ ಹೆಸರನ್ನು ಪ್ರಸ್ತಾಪಿಸಿದ, ಅವರ ಹೆಸರು ಮಯಾಂಕ್ ಸಕ್ಸೇನಾ. ಅಮೀರ್ ಫೇಸ್ ಬುಕ್‌ನಲ್ಲಿ ಅವರ ಹಲವು ಪೋಸ್ಟುಗಳನ್ನು ತೋರಿಸಿದ. ಎಂತಹ ಕ್ರೂರ ಮನುಷ್ಯ, ದೇಶ ವಿರೋಧಿ ಎಂದು ಅನ್ನಿಸಿತು. ಪ್ರಧಾನಿಯನ್ನು ಟೀಕಿಸಿ ಬರೆದ ವ್ಯಕ್ತಿಯನ್ನು ಅಮೀರ್ ಹೊಗಳಿದ್ದು ನನಗೆ ಸಹಿಸಲಾಗಿರಲಿಲ್ಲ. ಆದರೆ ನಾನು ಅಮೀರ್‌ಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ನಂತರ ಒಂದು ದಿನ ಇದ್ದಕ್ಕಿದ್ದಂತೆ ನಾನು ಕೂಡ ಅವರನ್ನು ಭೇಟಿಯಾದೆ. ಸಣ್ಣ ಎತ್ತರದ ಮತ್ತು ದೊಡ್ಡ ಕೂದಲಿನ ಈ ವ್ಯಕ್ತಿ ನನ್ನನ್ನು ನಗುವಿನೊಂದಿಗೆ ಭೇಟಿಯಾದರು. ಆ ವ್ಯಕ್ತಿಯ ಮೇಲಿನ ದ್ವೇಷ ಇನ್ನೂ ನನ್ನ ಮನಸ್ಸಿನಲ್ಲಿತ್ತು.

ಮಯಾಂಕ್ ಅವರ ಇತರ ಸ್ನೇಹಿತರು ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದರು, ಅವರು ಭೇಟಿಯಾಗುತ್ತಲೇ ಇದ್ದರು. ಅವರು ವಾದಿಸುವುದನ್ನು ನಾನು ನೋಡುತ್ತಿದ್ದೆ. ನಾನು ಕೇಳಿರದ ಎಷ್ಟೋ ವ್ಯಕ್ತಿಗಳು, ಪುಸ್ತಕಗಳು, ಸ್ಥಳಗಳು, ಜನರನ್ನು ಅವರು ಹೆಸರಿಸುತ್ತಿದ್ದರು. ಮಯಾಂಕ್ ಉಡುಗೊರೆಯಾಗಿ ನನಗೊಂದು ಪುಸ್ತಕವನ್ನು ನೀಡಿದರು. ಅದು ʼಸತ್ಯ ಕೇ ಸಾತ್‌ ಮೇರೆ ಪ್ರಯೋಗ್‌ʼ [ಸತ್ಯದೊಂದಿಗೆ ನನ್ನ ಪ್ರಯೋಗಗಳು]. ಇದು ಗಾಂಧಿ ಬರೆದ ಪುಸ್ತಕ. ಗಾಂಧಿ-ನೆಹರೂ ಬಗ್ಗೆ ನನಗೆ ಇನ್ನೂ ಮನಸ್ಸಿನಲ್ಲಿ ವಿಷವಿತ್ತು. ನನಗೆ ಆ ಪುಸ್ತಕ ನೀರಸವಾಗಿ ಕಂಡರೂ ಓದುತ್ತಲೇ ಇದ್ದೆ. ಮೊಟ್ಟಮೊದಲ ಬಾರಿಗೆ ನಾನು ಗಾಂಧಿಯ ಬಗ್ಗೆ ತುಂಬಾ ತಿಳಿದುಕೊಂಡೆ. ಆದರೆ ಓದಲು ಮತ್ತು ಕಲಿಯಲು ಇನ್ನೂ ಬಹಳಷ್ಟು ಇತ್ತು. ಮನದಲ್ಲಿ ತುಂಬಿಕೊಂಡಿದ್ದ ಕಸ ನಿಧಾನವಾಗಿ ಹೊರಬರತೊಡಗಿತು.

ಒಮ್ಮೆ ದಾದರ್‌ನಲ್ಲಿ ಧರಣಿ ಪ್ರತಿಭಟನೆ ನಡೆಯುತ್ತಿತ್ತು. ಮಯಾಂಕ್ ಅಲ್ಲಿಗೆ ಹೊರಟಿದ್ದರು. ಬಾ ಎಂದಾಗ ನಾನೂ ಸೇರಿಕೊಂಡೆ. ದಾದರ್ ಸ್ಟೇಷನ್‌ನ ಹೊರಗೆ ಅನೇಕ ಜನರು ಧರಣಿ ನಡೆಸಿ, ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ದಮನಕಾರಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಬಹಳ ವರ್ಷಗಳ ನಂತರ, ನಾನು ಮತ್ತೆ ಕೆಂಪು ಬಾವುಟವನ್ನು ನೋಡಿದೆ. ಮಯಾಂಕ್ ಅಲ್ಲಿ ದಫಲಿ ತೆಗೆದುಕೊಂಡು ಜನರೊಂದಿಗೆ ಪ್ರಜಾಪ್ರಭುತ್ವದ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಇದು ನನ್ನ ಮೊದಲ ಪ್ರತಿಭಟನೆಯ ಅನುಭವ ಮತ್ತು ಇದೆಲ್ಲವನ್ನೂ ನೋಡಿದಾಗ ಆಶ್ಚರ್ಯವಾಗದೆ ಇರಲಿಲ್ಲ. ಬಿಡುವಿನ ವೇಳೆಯಲ್ಲಿ ಮಯಾಂಕ್ ಬಂದಾಗ, ಇಲ್ಲಿಗೆ ಬರಲು ಹಣ ಯಾರು ಕೊಡುತ್ತಾರೆ ಎಂದು ಕೇಳಿದೆ. ಮಯಾಂಕ್ ತಿರುಗಿ ನನ್ನನ್ನು ಕೇಳಿದರು, ಇಲ್ಲಿಗೆ ಬರಲು ನಿಮಗೆ ಯಾರು ಹಣ ಕೊಟ್ಟರು? ಈ ಪ್ರಶ್ನೆಯಲ್ಲಿಯೇ ನನಗೆ ಉತ್ತರ ಸಿಕ್ಕಿತು.

PHOTO • Devesh
PHOTO • Devesh

ಮಿಥುನ್ ತನ್ನ ಗ್ರಾಹಕರನ್ನು ನೋಡಿಕೊಳ್ಳುವುದರ ನಡುವೆ ಓದುತ್ತಾ ರೆ . 'ಬಹಳಷ್ಟು ಓದು ವುದರಿಂಧ ಆದ ಅನುಕೂಲವೆಂದರೆ ನಾನು ಬರೆಯಲು ಬಯಸಲು ಪ್ರಾರಂಭಿಸಿದೆ.'
ಅವರು ಏಳು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಬರೆಯುತ್ತಿದ್ದಾರೆ ಮತ್ತು ನಿಷ್ಠಾವಂತ ಓದುಗ ಅನುಯಾಯಿಗಳನ್ನು ಹೊಂದಿದ್ದಾರೆ

ಈ ಪ್ರದರ್ಶನದಲ್ಲಿ ನಾನು ಅನ್ವರ್ ಹುಸೇನ್ ಅವರನ್ನು ಭೇಟಿಯಾದೆ. ಈಗ ಅವರು ಆಗಾಗ ಬಂದು ಅಂಗಡಿಯಿಂದ ತರಕಾರಿ ತೆಗೆದುಕೊಂಡು ಹೋಗುತ್ತಾರೆ. ನನಗೆ ಪುಸ್ತಕ ಓದುವುದರಲ್ಲಿ ಒಲವಿದೆ ಎಂದು ತಿಳಿದ ಅವರು ಕೆಲವು ಪುಸ್ತಕಗಳನ್ನು ಕೊಟ್ಟರು. ಅವುಗಳಲ್ಲಿ ಮಾಂಟೋ, ಭಗತ್ ಸಿಂಗ್, ಮುನ್ಷಿ ಪ್ರೇಮಚಂದ್ ಅವರ ಪುಸ್ತಕಗಳು ಹೆಚ್ಚು ಇದ್ದವು. ಮಾಂಟೊ ನನ್ನನ್ನು ತುಂಬಾ ಬೆಚ್ಚಿಬೀಳಿಸಿದನು, ಹೆಣ್ಣಿನ ಬಗ್ಗೆ ವಿಭಿನ್ನ ಅಭಿಪ್ರಾಯ ಹುಟ್ಟಲು ಪ್ರಾರಂಭಿಸಿತು. ಭಗತ್ ಸಿಂಗ್ ಓದಿದ ನಂತರ, ಅವರು ಭಾರತ ಹೀಗಿರಬೇಕಂದು ಕನಸು ಕಂಡಿದ್ದರೇ ಎನ್ನಿಸತೊಡಗಿತು? ಮುನ್ಷಿ ಪ್ರೇಮಚಂದ್ ಓದಿದ ನಂತರ ನನ್ನ ಜೀವನ ಚರಿತ್ರೆ, ನನ್ನ ಜನರು, ನನ್ನ ಸಮಾಜವನ್ನು ನೋಡುತ್ತಿರುವಂತೆ ಭಾಸವಾಯಿತು. ನಂತರ ನಾನು ಹರಿಶಂಕರ್ ಪರಸಾಯಿಯವರನ್ನು ಓದಲು ಪ್ರಾರಂಭಿಸಿದೆ. ಪರಸಾಯಿಯವರನ್ನು ಓದಿದ ನಂತರ ಸಮಾಜದಲ್ಲಿ ತನ್ನನ್ನು ತಾನು ನೋಡಿಕೊಳ್ಳುವ, ಬದಲಾಯಿಸಿಕೊಳ್ಳುವಂತಹ ತಲ್ಲಣ ಹುಟ್ಟುತ್ತಿತ್ತು, ಈಗಿನ ಕಾಲದಲ್ಲಿ ಈ ವ್ಯಕ್ತಿ ಇರಬೇಕಿತ್ತು ಎನಿಸಿತು. ಇದ್ದಿದ್ದರೆ ಎಲ್ಲರನ್ನೂ ಬೆತ್ತಲೆಯಾಗಿಸುತ್ತಿದ್ದರು.

ಈಗ ನನ್ನೊಳಗಿನ ಯಾವುದೇ ಸಮುದಾಯ, ಲಿಂಗ, ಪ್ರದೇಶ, ಜನಾಂಗದ ಬಗ್ಗೆ ಇದ್ದ ದ್ವೇಷ ಕಡಿಮೆಯಾಗುತ್ತಲೇ ಇತ್ತು. ನಿರಂತರ ಓದಿನಿಂದಾದ ಪ್ರಯೋಜನವೆಂದರೆ ನನಗೆ ಬರೆಯುವ ಹಂಬಲ ಪ್ರಾರಂಭವಾಯಿತು. ಅದೇನೇ ಇದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಶ್ರೇಷ್ಠ ಬರಹಗಾರರನ್ನು ಓದಿದ ನಂತರ, ನನಗೆ ಅವರ ಬರವಣಿಗೆ ಬಹಳ ಕೃತಕವಾಗಿ ಕಾಣತೊಡಗಿತು ಮತ್ತು ನನ್ನ ಅಭಿಪ್ರಾಯವನ್ನು ನಾನು ಹೇಳಬೇಕು ಎನ್ನಿಸತೊಡಗಿತು. ದಿನ ಕಳೆದಂತೆ ನಾನು ಆಗಾಗ್ಗೆ ನನ್ನ ಸ್ವಂತ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಥೆಯಂತೆ ಬರೆಯತೊಡಗಿದೆ, ನಂತರ ಜನರು ನನ್ನೊಂದಿಗೆ ಸಂಪರ್ಕ ಹೊಂದಲು ಪ್ರಾರಂಭಿಸಿದರು. ನಾನು ಕೂಡ ಒಳ್ಳೆಯ ಬರಹಗಾರರನ್ನು ಹಿಂಬಾಲಿಸತೊಡಗಿದೆ. ಕಲಿಕೆಯ ಪ್ರಕ್ರಿಯೆಯು ನಿರಂತರವಾಗಿ ಸಾಗಿತು.

*****

ನಮ್ಮ ಮದುವೆಯಲ್ಲಿ ಮಂಗಲಸೂತ್ರ, ವರದಕ್ಷಿಣೆ, ಕನ್ಯಾದಾನವಾಗಲಿ ಇದ್ದಿರಲಿಲ್ಲ. ನಾನು ಮತ್ತು ಡಾಲಿ ಪರಸ್ಪರ ಸಿಂಧೂರ ಹಚ್ಚಿಕೊಂಡೆವು

ನನ್ನದು ರಸ್ತೆ ಬದಿಯ ವ್ಯಾಪಾರ, ಹೀಗಾಗಿ ಈ ಹಿನ್ನೆಲೆಯಲ್ಲಿ ಪೊಲೀಸರ ಶೋಷಣೆಯ ಅನೇಕ ಅನುಭವಗಳಿವೆ. ವಾರದ ವಸೂಲಿ, ಕೆಟ್ಟ ಬಯ್ಗುಳಗಳು, ಠಾಣೆಗೆ ಕರೆದೊಯ್ದು ಗಂಟೆಗಟ್ಟಲೆ ಕೂರಿಸುವುದು, ಆಗೊಮ್ಮೆ ಈಗೊಮ್ಮೆ 1250 ರೂ. ದಂಡ ಕಟ್ಟುವುದು ಹೀಗೆಲ್ಲಾ ನಡೆದಿದ್ದು ಬರೆಯಲು ಕುಳಿತರೆ ದಪ್ಪ ಪುಸ್ತಕವಾಗುತ್ತದೆ. ಎಷ್ಟು ಪೊಲೀಸರು ಹೊಡೆದಿದ್ದಾರೋ ಲೆಕ್ಕವಿಲ್ಲ. ಹೊಡೆಯುವುದಾಗಿ ಬೆದರಿಸಿದವರು, ಒಂದು ವಾರ ಹಣ ನೀಡದಿದ್ದಕ್ಕೆ ಕಾರಿನಲ್ಲಿ ಹಲವು ಗಂಟೆಗಳ ಕಾಲ ನಗರದಲ್ಲಿ ಸುತ್ತಾಡಿಸಿದ್ದು. ಹೇಗೆ ಇಂತಹ ಅನುಭವಗಳೆಲ್ಲ ಮಾಮೂಲಿಯಾಗಿತ್ತು. ಈ ಅನುಭವಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುವುದಕ್ಕೂ ಹೆದರಿಕೆಯಾಗುತ್ತಿತ್ತು. ಆದರೆ ಯಾವುದೇ ಪೋಲೀಸರ ಹೆಸರಾಗಲಿ ಅಥವಾ ನಗರ-ರಾಜ್ಯಗಳ ಹೆಸರಾಗಲಿ ನಮೂದಿಸದ ರೀತಿಯಲ್ಲಿ ಬರೆಯುತ್ತಿದ್ದೆ. ನೋಟು ಅಮಾನ್ಯೀಕರಣದ ನಂತರದ ಯುಗದಲ್ಲಿ ಒಂದು ದಿನ, ಹಿರಿಯ ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕ ರುಕ್ಮಿಣಿ ಸೇನ್ ಅವರು ನನ್ನನ್ನು ಗಮನಿಸಿದರು ಮತ್ತು ಸಬ್ರಂಗ್ ಇಂಡಿಯಾಕ್ಕೆ ಬರೆಯಲು ಕೇಳಿಕೊಂಡರು, ಇದು ಇಲ್ಲಿಯವರೆಗೆ ಮುಂದುವರೆದಿದೆ.

PHOTO • Courtesy: Mithun Kumar
PHOTO • Sumer Singh Rathore

2019ರಲ್ಲಿ ಅವರ ಮದುವೆಯಲ್ಲಿ ಮಿಥುನ್ ಅವರ ಹಣೆಗೆ (ಎಡಕ್ಕೆ) ಸಿಂಧೂರವನ್ನು ಹಚ್ಚಿದ ಡಾಲಿ. ತಮ್ಮ ಮದುವೆಯ ಪ್ರತಿಜ್ಞೆಗಳಲ್ಲಿ, ದಂಪತಿಗಳು ತಮ್ಮ ನಡುವೆ ಸಮಾನತೆ ಹೊಂದುವ ಭರವಸೆ ನೀಡಿದರು

ಏತನ್ಮಧ್ಯೆ, 2017ರಲ್ಲಿ ನನ್ನ ಎರಡನೇ ತಂಗಿಗೂ ಮದುವೆಯಾಯಿತು. ಆಗ ನನಗೂ ಮದುವೆಯಾಗುವಂತೆ ಒತ್ತಡ ಶುರುವಾಯಿತು. ಆದರೆ ಮದುವೆಯಂತಹ ಮಹತ್ವದ ನಿರ್ಧಾರಗಳನ್ನು ಸಾಮಾಜಿಕ ಒತ್ತಡಕ್ಕೆ ಮಣಿದು ತೆಗೆದುಕೊಳ್ಳಬಾರದು ಎಂಬುದು ನನಗೆ ಇಷ್ಟೊತ್ತಿಗೆ ಅರ್ಥವಾಗಿತ್ತು. ಈ ಸಮಯದಲ್ಲಿ ನನ್ನ ಜೀವನದಲ್ಲಿ ಡಾಲಿ ಬಂದಳು, ಆದರೆ ನಾವು ಹಾಗೆಯೇ ಒಟ್ಟಿಗೆ ಓಡಾಡುತ್ತಿದ್ದರೆ, ಬದುಕುತ್ತಿದ್ದರೆ ನೀವು ಯಾವ ಊರು, ಯಾವ ಜಾತಿ ಇತ್ಯಾದಿ ಪ್ರಶ್ನೆಗಳನ್ನು ಜನರು ಕೇಳುತ್ತಾರೆ. ನನ್ನ ಜಾತಿಯಲ್ಲಿ ಹುಟ್ಟಿದವರಿಗೆ ಹುಡುಗಿ ಯಾವ ಜಾತಿಗೆ ಸೇರಿದವಳು ಎಂದು ತಿಳಿದುಕೊಳ್ಳುವ ಕುತೂಹಲ ಜಾಸ್ತಿ ಇತ್ತು. ಬೇರೆ ಜಾತಿಯವಳಾದರೆ ಅವರೆಲ್ಲರಿಗೂ ತಮ್ಮ ಜಾತಿ ಅಪಾಯದಲ್ಲಿದೆ ಎನ್ನುವ ತಳಮಳ ಕಾಡುತ್ತಿತ್ತು. ಆದರೆ ನಾನು ಇದೆಲ್ಲವನ್ನೂ ಮೀರಿ ಬೆಳೆದಿದ್ದೆ.

ಡಾಲಿ ತನ್ನ ಮನೆಯಲ್ಲಿ ನನ್ನ ಬಗ್ಗೆ ಹೇಳಿದಳು. ಕೆಲವು ದಿನಗಳ ನಂತರ, ನಾನು ಒಮ್ಮೆ ಡಾಲಿಯ ಪೋಷಕರನ್ನು ಭೇಟಿಯಾಗಲು ಹೋದೆ. ಆದಷ್ಟು ಬೇಗ ನನಗೆ ಮದುವೆ ಮಾಡಬೇಕೆಂದು ನನ್ನ ಕುಟುಂಬದವರು ಬಯಸಿದ್ದರು. ಡಾಲಿ ಮತ್ತು ನಾನು ಕೂಡ ಮದುವೆಯಾಗಲು ಬಯಸಿದ್ದೆವು, ಆದರೆ ಮೊದಲು ಸೆಟ್ಲ್ ಆಗೋಣ ಎಂದುಕೊಂಡೆವು. ಹೀಗೆ ಎರಡೂವರೆ ವರ್ಷ ಕಳೆದು ಈಗ ಡಾಲಿಯ ಪೋಷಕರಿಂದ ಒತ್ತಡ ಬಂದಿತ್ತು. ಅವರು ಹೆಣ್ಣಿನ‍ ಪೋಷಕರು, ಅವರ ಮೇಲಿನ ಸಾಮಾಜಿಕ ಒತ್ತಡವು ಭಿನ್ನವಾಗಿತ್ತು. ಅವರು ಸಾಂಪ್ರದಾಯಿಕವಾಗಿ ಮದುವೆ ಮಾಡಿಸಲು ಬಯಸಿದ್ದರು. ನನ್ನ ಕುಟುಂಬದ ಸದಸ್ಯರೂ ಇದೇ ಉದ್ದೇಶ ಹೊಂದಿದ್ದರು. ಆದರೆ ನಾನು ರಿಜಿಸ್ಟರ್‌ ಮದುವೆಯಾಗಲು ಬಯಸಿದ್ದೆ. ಡಾಲಿಗೆ ಅದೇ ಬೇಕಿತ್ತು. ಮಗಳನ್ನು ಬಿಟ್ಟು ನಾನು ಓಡಿ ಹೋಗಬಾರದು ಎಂದು ಡಾಲಿಯ ಮನೆಯವರು ಅಂದುಕೊಂಡಿದ್ದರು. ಮಗನಿಗೆ ಮದುವೆಯಾಗಿದೆ ಎಂದು ನಾಲ್ಕು ಜನರಿಗೆ ತಿಳಿಯಬೇಕೆಂದು ನನ್ನ ತಂದೆ-ತಾಯಿ ಹೇಳುತ್ತಿದ್ದರು. ಒತ್ತಡದ ನಡುವೆಯೇ ನಿರ್ಧಾರ ಕೈಗೊಳ್ಳಬೇಕಾಯಿತು. ಡಾಲಿಯ ಮನೆಯವರು ಮದುವೆಯನ್ನು ಚಿಕ್ಕ ಹಾಲ್‌ನಲ್ಲಿ ನಡೆಸಿದ್ದರು.

ಆದರೆ, ನಮ್ಮ ಕುಟುಂಬಗಳು ನಮ್ಮ ಒತ್ತಾಯಕ್ಕೆ ಮಣಿಯಬೇಕಾಯಿತು. ಮದುವೆಯಲ್ಲಿ ಮಂಗಳ ಸೂತ್ರವಾಗಲೀ, ಕನ್ಯಾದಾನವಾಗಲಿ, ವರದಕ್ಷಿಣೆಯಾಗಲೀ ಇದ್ದಿರಲಿಲ್ಲ. ನಾನು ಡಾಲಿ ಪರಸ್ಪರ ಸಿಂಧೂರ ಹಚ್ಚಿಕೊಂಡೆವು. ಏಳು ಹೆಜ್ಜೆಗಳಿದ್ದವು. ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದರು ಮತ್ತು ಪ್ರತಿ ಹೆಜ್ಜೆಯ ನಂತರ ಮಾಯಾಂಕ್ ಸಮಾನತೆಯ ಬಗ್ಗೆ ವಚನಗಳನ್ನು ಮಾತುಗಳನ್ನು ಓದುತ್ತಿದ್ದರು. ಸಭಾಂಗಣದಲ್ಲಿ ನೆರೆದಿದ್ದ ಜನರು ನಕ್ಕರು, ಆದರೆ ಇಲ್ಲಿ ಏನೋ ವಿಭಿನ್ನವಾಗಿದೆ ಮತ್ತು ಸಂಕೋಲೆಗಳು ಕಿತ್ತು ಹೋಗುತ್ತಿವೆಯೆನ್ನುವುದು ಅವರಿಗೆ ಅರ್ಥವಾಗುತ್ತಿತ್ತು. ಕೆಲವರು ಕೋಪಗೊಂಡರು. ಆದರೆ ಅವರ ಅಸಮಾಧಾನಕ್ಕಿಂತ ಮುಖ್ಯವಾಗಿ ನಾವಿಬ್ಬರೂ ಹಳೆಯ ಅಸಮಾನತೆ, ಬ್ರಾಹ್ಮಣ ಮತ್ತು ಸ್ತ್ರೀ ವಿರೋಧಿ ಸ್ಟೀರಿಯೊಟೈಪ್‌ಗಳನ್ನು ಮುರಿಯುವುದು ನಮಗೆ ಮುಖ್ಯವಾಗಿತ್ತು. ಮದುವೆಯ ನಂತರ ನಾನು ಮತ್ತು ಡಾಲಿ ಹೊಸ ಮನೆಗೆ ಶಿಫ್ಟ್ ಆದೆವು. ಮಾರ್ಚ್ 2019ರಲ್ಲಿ ನಾವು ಮದುವೆಯಾದಾಗ, ಮನೆಯಲ್ಲಿ ಏನೂ ಇದ್ದಿರಲಿಲ್ಲ. ನಿಧಾನವಾಗಿ ಮನೆಯಲ್ಲಿ ಒಂದೊಂದಾಗಿ ಮೂಲಭೂತ ವಸ್ತುಗಳು ಬರಲಾರಂಭಿಸಿದವು. ಸೂಜಿಯಿಂದ ಹಿಡಿದು ಅಲ್ಮೆರಾ ತನಕ ಹೇಗೋ ದುಡಿದ ದುಡ್ಡಿಗೆ ದುಡ್ಡು ಸೇರಿಸಿ ಹೊಂದಿಸಿಕೊಂಡಿದ್ದೇವೆ.

PHOTO • Sumer Singh Rathore
PHOTO • Sumer Singh Rathore
PHOTO • Devesh

ಎಡಕ್ಕೆ: ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಮಿಥುನ್ ಮತ್ತು ಡಾಲಿ ಮುಂಬೈನಲ್ಲಿಯೇ ಇದ್ದರು. ನಡುವೆ : "ನಾವು ಬದುಕಿನೊಡನೆ ಹೋರಾಡುತ್ತೇವೆ" ಎಂದು ಮಿಥುನ್ ಹೇಳುತ್ತಾರೆ. ಬಲಗಡೆ: ಅವ ಸಹೋದರ ರವಿ

2020ರ ಮಾರ್ಚ್ ತಿಂಗಳಲ್ಲಿ, ಕೊರೋನಾ ಉತ್ತುಂಗಕ್ಕೆ ತಲುಪಿತು ಮತ್ತು ಎಲ್ಲೆಡೆ ಲಾಕ್‌ಡೌನ್‌ ಘೋಷಿಸಲಾಯಿತು. ಸರಕುಗಳನ್ನು ಖರೀದಿಸಲು ಜನರ ನಡುವೆ ಪೈಪೋಟಿಯಿತ್ತು. ಕೆಲವೇ ನಿಮಿಷಗಳಲ್ಲಿ ಅಂಗಡಿಯಲ್ಲಿದ್ದ ತರಕಾರಿಗಳೆಲ್ಲ ಖಾಲಿಯಾದವು. ಕೆಲವರು ಲೂಟಿಮಾಡಿದರು. ಕೆಲವರು ಮಾತ್ರವೇ ಹಣ ನೀಡಿದರು. ಎಲ್ಲ ಅಂಗಡಿಗಳಲ್ಲಿಯೂ ಇದೇ ನಡೆಯಿತು. ಕೆಲ ಕ್ಷಣಗಳ ನಂತರ ಪೊಲೀಸರು ಎಲ್ಲ ಅಂಗಡಿಗಳನ್ನು ಮುಚ್ಚಿಸಿದರು. ಅಂಗಡಿಗಳು ಮತ್ತೆ ಯಾವಾಗ ತೆರೆಯಬೇಕೆನ್ನವುದನ್ನೂ ತಿಳಿಸಲಿಲ್ಲ. ಜನರು ಹಳ್ಳಿಗೆ ಓಡಲಾರಂಭಿಸಿದರು. ಎರಡು ದಿನಗಳಲ್ಲಿ ನಾವಿದ್ದ ಕಟ್ಟಡ ಖಾಲಿಯಾಯಿತು. ಕೊರೋನಾ ಭಯದಿಂದಾಗಿ ಎಲ್ಲರೂ ಊರಿಗೆ ಹೋಗಿದ್ದರು. ಹೀಗೆ ಎಲ್ಲವನ್ನೂ ಮುಚ್ಚಿದರೆ ತಿನ್ನುವುದಾದರೂ ಏನನ್ನು? ಡಾಲಿ ಟ್ರೆಕ್ಕಿಂಗ್ ಜಾಕೆಟ್‌ಗಳನ್ನು ತಯಾರಿಸುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದನ್ನೂ ಮಾರ್ಚ್ 15, 2020 ರಂದು ಮುಚ್ಚಲಾಯಿತು.

ಈಗ ಊರಿಗೆ ಬಾ, ಆಮೇಲೆ ಎಲ್ಲವೂ ಸರಿಯಾದರೆ ನೋಡೋಣ ಎಂದು ಮನೆಯವರು ಹೇಳುತ್ತಿದ್ದರು. ಆದರೆ ಕೈಯಲ್ಲಿ ಒಂದು ರೂಪಾಯಿಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಇಲ್ಲೇ ಉಳಿಯುವುದೇ ಸೂಕ್ತವಾಗಿತ್ತು. ತರಕಾರಿಗೆ ಸಂಬಂಧಿಸಿದ ಕೆಲಸ, ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ತರಕಾರಿ ತರುವುದೇ ದೊಡ್ಡ ಕಷ್ಟವಾಗಿತ್ತು. ದಾದರ್ ಮುಖ್ಯ ಮಾರುಕಟ್ಟೆಗೆ ಬೀಗ ಹಾಕಲಾಗಿತ್ತು. ಚುನಾ ಭಟ್ಟಿ, ಸುಮಯ್ಯ ಗ್ರೌಂಡ್ ಮುಂತಾದ ಹೆದ್ದಾರಿ ಸ್ಥಳಗಳಲ್ಲಿ ತರಕಾರಿಗಳು ಹೆಚ್ಚಾಗಿ ಸಿಗುತ್ತವೆ. ಈ ಸ್ಥಳಗಳು ಹಿಂದೆ ತುಂಬಾ ಜನಸಂದಣಿಯಿಂದ ಕೂಡಿರುತ್ತಿದ್ದವು. ನನಗೆ ಎಲ್ಲಿ ಕೊರೋನಾ ತಗುಲುತ್ತದೆಯೋ ಎನ್ನುವ ಭಯ ಕಾಡುತ್ತಿತ್ತು. ಮತ್ತು ನನ್ನಿಂದ ಡಾಲಿಗೂ ತಗಲುವ ಭಯವಿತ್ತು. ಆದರೆ ಜನಸಂದಣಿಯಿರುವಲ್ಲಿ ಹೋಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಇದರಿಂದ ಮನೆ ಖರ್ಚಿಗೆ ಹಣ ಸಿಗುತ್ತಿತ್ತತು. ಮೇ ತಿಂಗಳಲ್ಲಿ, ಬಿಎಮ್‌ಸಿ ಅಂಗಡಿಯ ತೆರೆಯುವ ಸಮಯವನ್ನು ಕೇವಲ ಮೂರು ಗಂಟೆಗಳವರೆಗೆ, ಎಂದರೆ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಇಳಿಸಿತು. ಕೊಟ್ಟ ಸಮಯಕ್ಕಿಂತ ಸ್ವಲ್ಪ ತಡವಾದರೆ ಪೋಲೀಸರ ಲಾಠಿಯೇಟು ಬೀಳತೊಡಗಿತು. ತರಕಾರಿ ಆರ್ಡರ್ ಮಾಡುವ ಎಲ್ಲಾ ಆನ್‌ಲೈನ್ ಪೋರ್ಟಲ್‌ಗಳು ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ತೆರೆದಿದ್ದವು. ಆ ಸಮಯದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಹೆಚ್ಚು ಸೂಕ್ತವೆಂದು ಜನರು ಭಾವಿಸಿದ್ದರು. ಇದು ವ್ಯಾಪಾರಕ್ಕೆ ದೊಡ್ಡ ವ್ಯತ್ಯಾಸವನ್ನುಂಟುಮಾಡಿತು. ಅದೇ ಸಮಯದಲ್ಲಿ, ಅಜ್ಜ ತನ್ನ ಕಾಲು ಮುರಿದು ಕೊರೋನಾ ಸಮಯದಲ್ಲಿ ಅವರು ಹೇಗೆ ಇಹಲೋಕ ತ್ಯಜಿಸಿದರು ಎನ್ನುವುದನ್ನು ನಾನು ಈಗಾಗಲೇ ಹೇಳಿದ್ದೇನೆ.

ಕೆಲವು ತಿಂಗಳ ನಂತರ, ಕೆಲಸದ ಸಮಯವನ್ನು ಸಂಜೆ 7 ಗಂಟೆಯವರೆಗೆ ವಿಸ್ತರಿಸಲಾಯಿತು. ಒಂದು ಸಂಜೆ ಏಳು ಗಂಟೆಯ ನಂತರ ನನ್ನ ಚಿಕ್ಕಣ್ಣ ರವಿ ಗಾಡಿಯಲ್ಲಿ ಇಟ್ಟಿದ್ದ ಹಣ್ಣುಗಳಿಂದ ಕೊಳೆತ ಮಾವಿನ ಹಣ್ಣನ್ನು ಬೇರ್ಪಡಿಸುತ್ತಿದ್ದ. ಒಬ್ಬ ಪೋಲೀಸ್ ಬಂದು ವಿಡಿಯೋ ಮಾಡತೊಡಗಿದ. ಭಯದಿಂದ ರವಿ ಅವರಿಗೆ ಸ್ವಲ್ಪ ಹಣ ಕೊಡಲು ಮುಂದಾದರು, ಆದರೆ ಅವರು ದೊಡ್ಡ ಮೊತ್ತವನ್ನು ಕೇಳಿದರು, ಇಲ್ಲದಿದ್ದರೆ ಕೇಸು ಹಾಕುವುದಾಗಿ ಬೆದರಿಕೆ ಹಾಕಿದರು. ಆತನನ್ನು ಠಾಣೆಗೆ ಕರೆದೊಯ್ಯಲಾಯಿತು. ರಾತ್ರಿ ಒಂದೂವರೆ ವೇಳೆಗೆ ಪೊಲೀಸ್ ಪೇದೆಯೊಬ್ಬ ರವಿಯ ಜೇಬಿನಲ್ಲಿದ್ದ ಸುಮಾರು ಆರು ಸಾವಿರ ರೂಪಾಯಿ ತೆಗೆದುಕೊಂಡು ಆತನನ್ನು ಬಿಟ್ಟು ಹೋದ. ಈ ಮೊತ್ತ ಅವರ ಒಟ್ಟು ಉಳಿತಾಯಯಾಗಿತ್ತು. ಆದರೆ, ಎರಡು-ಮೂರು ದಿನಗಳ ನಂತರ, ಗುರುತಿನ ವ್ಯಕ್ತಿಯ ಮೂಲಕ, ಉನ್ನತ ಸ್ಥಾನದಲ್ಲಿ ಕುಳಿತಿದ್ದ ಪೊಲೀಸರೊಂದಿಗೆ ಮಾತುಕತೆ ನಡೆಯಿತು. ಎರಡು ದಿನಗಳ ನಂತರ ಹಣ ತೆಗೆದುಕೊಂಡಿದ್ದ ಪೊಲೀಸರು ರವಿಯನ್ನು ಹುಡುಕಿಕೊಂಡು ಬಂದು ಪೂರ್ತಿ ಹಣವನ್ನು ಕೊಟ್ಟರು.

ಕರೋನದ ಆರಂಭಿಕ ಹಂತದಿಂದ ವ್ಯಾಪಾರದ ಸ್ಥಿತಿ ಸುಧಾರಿಸಿಲ್ಲ. ಜಗತ್ತಿನೊಂದಿಗೆ ಬಡಿದಾಡುತ್ತಿರುವ ನಾವು ಈಗಲೂ ಬದುಕನ್ನು ಅದರ ಹಳಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಈ ಲೇಖನವನ್ನು ಬರೆಯುತ್ತಿರುವ ಕ್ಷಣದಲ್ಲಿ, ನಾನು ಕೊರೋನಾ ಪಾಸಿಟಿವ್ ಆಗಿದ್ದೇನೆ. ಡಾಲಿ ಕೂಡ ಸೋಂಕಿತಳಾಗಿದ್ದಾಳೆ. ನಾವಿಬ್ಬರೂ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದೇವೆ. ಗಾಡಿಯಲ್ಲಿ ಇಟ್ಟಿದ್ದ ತರಕಾರಿಯನ್ನು ಅಕ್ಕಪಕ್ಕದವರ ಸಹಕಾರದಿಂದ ಮಾರಾಟ ಮಾಡಿದ್ದೇವೆ. ಉಳಿತಾಯದ ಮೊತ್ತವು ಕೆಲವು ದಿನಗಳ ಔಷಧಿ ಮತ್ತು ಕೊರೋನಾ ಪರೀಕ್ಷೆಗೆ ಖಾಲಿಯಾಗಿದೆ. ಆದರೆ ಸರಿ. ಟೆಸ್ಟ್‌ ನೆಗೆಟಿವ್‌ ಬಂದರೆ ಮನೆಯಿಂದ ಹೊರಗೆ ಬರಬಹುದು. ಹಾಗೆ ಹೊರಗೆ ಬಂದ ದಿನ ಮತ್ತೆ ಬದುಕಿನ ನೊಗಕ್ಕೆ ಕತ್ತು ಕೊಟ್ಟು ದುಡಿಯಲಾರಂಭಿಸುತ್ತೇನೆ. ಅದಲ್ಲದೇ ಬೇರೆ ಆಯ್ಕೆಯಾದರೂ ಏನಿದೆ…?

ಗೌಪ್ಯತೆಯನ್ನು ಕಾಪಾಡುವ ಸಲುವಾಗಿ ಕೆಲವು ವ್ಯಕ್ತಿಗಳು ಮತ್ತು ಸ್ಥಳಗಳನ್ನು ಹೆಸರಿಸಲಾಗಿಲ್ಲ.

ಈ ಕಥೆಯನ್ನು ಮೂಲತಃ ಲೇಖಕರು ಹಿಂದಿಯಲ್ಲಿ ಬರೆ ದಿದ್ದು, ದೇವೇಶ್ ಅದನ್ನು ಸಂಪಾದ ನೆ ಮಾಡಿದ್ದಾರೆ .

ಕವರ್ ಫೋಟೋ. : ಸುಮೇರ್ ಸಿಂಗ್ ರಾಥೋಡ್

ಅನುವಾದ: ಶಂಕರ ಎನ್. ಕೆಂಚನೂರು

Mithun Kumar

Mithun Kumar runs a vegetable shop in Mumbai and writes about social issues on various online media platforms.

Other stories by Mithun Kumar
Photographs : Devesh
vairagidev@gmail.com

Devesh is a poet, journalist, filmmaker and translator. He is the Translations Editor, Hindi, at the People’s Archive of Rural India.

Other stories by Devesh
Photographs : Sumer Singh Rathore

Sumer is a visual storyteller, writer and journalist from Jaisalmer, Rajasthan.

Other stories by Sumer Singh Rathore
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru