"1994ರ ಪ್ಲೇಗ್‍ನ ಅವಧಿಯಲ್ಲಾಗಲಿ, 2006ರ ಚಿಕನ್‍ಗುನ್ಯದ ಅವಧಿಯಲ್ಲಾಗಲಿ, 1993ರ ಭೂಕಂಪದ ಕಾಲದಲ್ಲಾಗಲಿ, ಈ ದೇವಸ್ಥಾನವನ್ನು ಮುಚ್ಚಿದ್ದೇ ಇಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ನಾವಿದನ್ನು ಕಾಣುತ್ತಿದ್ದೇವೆ", ಎನ್ನುತ್ತಾರೆ ವ್ಯಾಕುಲಗೊಂಡಂತೆ ಕಾಣುವ ಸಂಜಯ್‍ ಪೆಂಡೆ. ದಕ್ಷಿಣ ಮಹಾರಾಷ್ಟ್ರದ ತುಲ್ಜಾಪುರ ಊರಿನಲ್ಲಿರುವ ತುಲ್ಜಾ ಭವಾನಿ ದೇವತೆಯ ದೇವಸ್ಥಾನದ ಪ್ರಮುಖ ಅರ್ಚಕರಲ್ಲಿ ಇವರೂ ಒಬ್ಬರು.

ಕೊವಿಡ್‍-19 ಹರಡುವುದನ್ನು ತಡೆಗಟ್ಟಲು ಮಾರ್ಚ್‍ 17ರ ಮಂಗಳವಾರದಂದು ದೇವಸ್ಥಾನದ ಬಾಗಿಲನ್ನು ಭಕ್ತರಿಗೆ ಮುಚ್ಚಲಾಯಿತು. ಇಲ್ಲಿಯ ಜನರಿಗೆ ಇದನ್ನು ನಂಬಲಾಗುತ್ತಿಲ್ಲ. “ಇದೆಂಥ ಖಾಯಿಲೆ? ಬೇರೆ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ. ದೇವಸ್ಥಾನದ ಹೊರಗಿನಿಂದಲೇ ಅವರು ದರ್ಶನವನ್ನು ಪಡೆಯಬೇಕಿದೆ. ಅದೂ ಪೋಲೀಸರೊಂದಿಗೆ ಗುದ್ದಾಡಿದ ನಂತರ”, ಎನ್ನುತ್ತಾರೆ 38 ವರ್ಷದ ಪೆಂಡೆ. ನಿತ್ಯವೂ ಅವರು ಕೈಗೊಳ್ಳುವ 10-15 ವಿಶೇಷ ಪೂಜೆಯ ಮೂಲಕ ದೊರೆಯುತ್ತಿದ್ದ ಸಂಪಾದನೆಗೆ ಧಕ್ಕೆಯೊದಗಿದ ಕಾರಣ ಅವರು ಚಿಂತಿತರಾಗಿದ್ದರು. ತುಲ್ಜಾಪುರದಲ್ಲಿ, ದೇವಸ್ಥಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ದೊರೆಯುವ ಸಂಪಾದನೆಯನ್ನು ಅವಲಂಬಿಸಿದ ಸುಮಾರು 5 ಸಾವಿರ ಪುರೋಹಿತರಿದ್ದಾರೆಂಬುದು ಪೆಂಡೆ ಅವರ ಅಂದಾಜು.

ಮರಾಠವಾಡ ಪ್ರದೇಶದ ಉಸ್ಮಾನಾಬಾದ್‍ ಜಿಲ್ಲೆಯ ಈ ಊರಿನ 34 ಸಾವಿರ ಜನರ (2011ರ ಜನಗಣತಿಯಂತೆ) ಆರ್ಥಿಕ ಸ್ಥಿತಿಯು ಬೆಟ್ಟದ ಮೇಲೆ ನೆಲೆಗೊಂಡಿರುವ 12ನೇ ಶತಮಾನದ್ದೆಂದು ಹೇಳಲಾಗುವ ದೇವಸ್ಥಾನವನ್ನು ಅವಲಂಬಿಸಿದೆ. ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿನ ಅನೇಕ ಜನರು ತುಲ್ಜಾ ಭವಾನಿ ದೇವತೆಯನ್ನು ತಮ್ಮ ಮನೆ ದೇವರೆಂದು ಭಾವಿಸುತ್ತಾರೆ. ರಾಜ್ಯದ ತೀರ್ಥಯಾತ್ರೆಯ ಮಾರ್ಗದಲ್ಲಿನ ಈ ದೇವಸ್ಥಾನವು ದೇವತೆಯರಿಗೆ ಮೀಸಲಾದ ದೇವಸ್ಥಾನಗಳಲ್ಲಿ ಪ್ರಮುಖವೆನಿಸಿದೆ.

'It is first time in the history that we are witnessing this', says Sanjay Pende (left), a priest at the Tulja Bhavani temple, which usually sees a throng of devotees (right)
PHOTO • Medha Kale
'It is first time in the history that we are witnessing this', says Sanjay Pende (left), a priest at the Tulja Bhavani temple, which usually sees a throng of devotees (right)
PHOTO • Medha Kale

ಸದಾ ಭಕ್ತಾದಿಗಳಿಂದ ಕಿಕ್ಕಿರಿದಿರುವ ತುಲ್ಜಾ ಭವಾನಿ ದೇವಸ್ಥಾನದಲ್ಲಿ (ಬಲಕ್ಕೆ), ಪುರೋಹಿತರಾಗಿರುವ ಸಂಜಯ್‍ ಪೆಂಡೆಯವರು (ಎಡಕ್ಕೆ), "ಇತಿಹಾಸದಲ್ಲಿ ನಾವಿದನ್ನು ಮೊದಲ ಬಾರಿಗೆ ಕಾಣುತ್ತಿದ್ದೇವೆ", ಎಂದು ತಿಳಿಸಿದರು

ಆದರೆ ಈ ಊರು ಮಾರ್ಚ್‍ 17ರಿಂದ ಬಹುತೇಕ ಸ್ತಬ್ಧಗೊಂಡಿದೆ. ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿನ ಕಿರಿದಾದ ದಾರಿಗಳೆಲ್ಲವೂ ನಿರ್ಜನವಾಗಿವೆ. ದೇವಸ್ಥಾನದಿಂದ ದಾರಿಯುದ್ದಕ್ಕೂ ಇರುವ ಪಾದರಕ್ಷೆಯ ಅಟ್ಟಣಿಗೆ ಹಾಗೂ ಸಾಮಾನುಗಳ ಕೋಣೆಯು ಖಾಲಿಯಾಗಿದೆ.

ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಂದ ಭಕ್ತರನ್ನು ಹೊತ್ತು ತರುವ ಖಾಸಗಿ ಕಾರು, ಟ್ಯಾಕ್ಸಿ, ಕುಲ್ಜ಼ರ್‍ (ಲ್ಯಾಂಡ್‍ ಕ್ರೂಜ಼ರ್‍) ಹಾಗೂ ಆಟೋರಿಕ್ಷಾಗಳ ಕಿಕ್ಕಿರಿದ ಸಡಗರದ ಬದಲಿಗೆ ವಿಲಕ್ಷಣ ನೀರವತೆಯು ಮನೆಮಾಡಿದೆ.

ಸುಮಾರು ಎರಡು ಕಿ.ಮೀ.ಗಳ ದೂರದಲ್ಲಿರುವ ಬಸ್‍ ನಿಲ್ದಾಣವೂ ಬಹುತೇಕ ನಿಶ್ಶಬ್ದವಾಗಿದೆ. ಇತರೆ ಸಮಯಗಳಲ್ಲಿ ಬಸ್ಸುಗಳು ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನಿಲ್ದಾಣದ ಒಳ ಹೊರಗಿನ ತಮ್ಮ ಚಲನೆಯಿಂದ ಸದ್ದುಮಾಡುತ್ತಾ ಅವಿರತ ಪ್ರವಾಹದೋಪಾದಿಯ ಭಕ್ತರು ಹಾಗೂ ಭೇಟಿಕಾರರನ್ನು ಇಳಿಸಿ ಅಥವ ಹೊತ್ತು ಸಾಗುತ್ತಿದ್ದವು. ರಾಜ್ಯದ ಹಾಗೂ ನೆರೆಯ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಎಲ್ಲ ಪ್ರಮುಖ ನಗರಗಳು ಹಾಗೂ ಊರುಗಳನ್ನು ಇಲ್ಲಿಂದ ಸಂಪರ್ಕಿಸಲಾಗುತ್ತಿದ್ದು, ತುಲ್ಜಾಪುರವು ರಾಜ್ಯ ಸಾರಿಗೆ ಬಸ್ಸುಗಳ ಕೇಂದ್ರೀಕೃತ ನಿಲುಗಡೆಯ ತಾಣವಾಗಿದೆ.

ಪ್ರವಾಸಿಗರು, ರವಾನಾ ಏಜೆನ್ಸಿಗಳು, ವಸತಿ ಗೃಹಗಳನ್ನಷ್ಟೇ ಅಲ್ಲದೆ, ಪೂಜಾ ಪರಿಕರಗಳು, ಪ್ರಸಾದ, ದೇವಿಗೆ ಅರ್ಪಿಸುವ ಸೀರೆ, ಕುಂಕುಮ-ಅರಿಶಿನ, ಕಪ್ಪೆ ಚಿಪ್ಪುಗಳು, ಫೋಟೊ ಫ್ರೇಂಗಳು, ಭಕ್ತಿ ಗೀತೆಗಳ ಕಾಂಪ್ಯಾಕ್ಟ್ ಡಿಸ್ಕ್ ಗಳು, ಬಳೆಗಳು ಮುಂತಾದ ಅನೇಕ ವಸ್ತುಗಳ ಚಿಕ್ಕ ಅಂಗಳಡಿಗಳನ್ನು ಪೋಷಿಸುವ ಈ ಊರಿನ ದೇವಸ್ಥಾನದ ಅರ್ಥವ್ಯವಸ್ಥೆಯು ಆ ಮೂಲಕ ತನ್ನನ್ನೂ ಪೋಷಿಸಿಕೊಂಡಿದೆ. ದೇವಸ್ಥಾನದ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಕನಿಷ್ಟ 550-600 ಅಂಗಡಿಗಳಿವೆಯೆಂಬುದು ಅಂಗಡಿದಾರರ ಅಂದಾಜು. ಅಲ್ಲದೆ ಬೀದಿ ಬದಿಯ ವ್ಯಾಪಾರಿಗಳ ಅಸ್ತಿತ್ವವು ಸಂಪೂರ್ಣವಾಗಿ ಭಕ್ತರೊಂದಿಗಿನ ದಿನನಿತ್ಯದ ವ್ಯಾಪಾರವನ್ನು ಅವಲಂಬಿಸಿದೆ.

ಸುಮಾರು ಅರ್ಧಕ್ಕಿಂತಲೂ ಹೆಚ್ಚಿನ ಅಂಗಡಿಗಳು ಮಾರ್ಚ್‍ 20ರ ಮಧ್ಯಾಹ್ನದ ವೇಳೆಗೆ ತಮ್ಮ ಬಾಗಿಲುಗಳನ್ನು ಮುಚ್ಚಿದ್ದವು. ಉಳಿದವು ಸಹ ತಮ್ಮ ದಿನದ ವ್ಯಾಪಾರವನ್ನು ನಿಲ್ಲಿಸುವುದರಲ್ಲಿದ್ದವು. ಬೀದಿ ಬದಿಯ ವ್ಯಾಪಾರಿಗಳೆಲ್ಲರೂ ವಾಪಸ್ಸು ತೆರಳಿದ್ದರು.

The chappal stand and cloak room opposite the temple are empty (left), the weekly market is silent (middle) and the narrow lanes leading to the temple are all deserted
PHOTO • Medha Kale
The chappal stand and cloak room opposite the temple are empty (left), the weekly market is silent (middle) and the narrow lanes leading to the temple are all deserted
PHOTO • Medha Kale
The chappal stand and cloak room opposite the temple are empty (left), the weekly market is silent (middle) and the narrow lanes leading to the temple are all deserted
PHOTO • Medha Kale

ದೇವಸ್ಥಾನದ ಎದುರಿನ ಚಪ್ಪಲಿಯ ಅಟ್ಟಣಿಗೆ ಮತ್ತು ಸಾಮಾನುಗಳನ್ನಿಡುವ ಕೋಣೆಯು ಖಾಲಿಯಾಗಿದೆ (ಎಡಕ್ಕೆ), ವಾರದ ಸಂತೆಯು (ಮಧ್ಯದಲ್ಲಿ) ನಿಶ್ಶಬ್ದವಾಗಿದ್ದು, ದೇವಸ್ಥಾನವನ್ನು ತಲುಪುವ ಮಾರ್ಗದಲ್ಲಿನ ಕಿರಿದಾದ ಗಲ್ಲಿಗಳೆಲ್ಲವೂ ಜನಶೂನ್ಯವಾಗಿವೆ

"ಇದೆಂತಹ ಖಾಯಿಲೆ? ಎಲ್ಲವನ್ನೂ ಬಂದ್‍ ಮಾಡಲಾಗಿದೆ. ಮಂಗಳವಾರದಿಂದ ಅತ್ಯಂತ ಕಡಿಮೆ ಜನ ಬರುತ್ತಿದ್ದಾರೆ. ಅವರು (ದೇವಸ್ಥಾನದ ಟ್ರಸ್ಟ್ ಕಾರ್ಯಕರ್ತರು ಮತ್ತು ಪೋಲೀಸರು) ನಮಗೆ ಇಲ್ಲಿ ಕುಳಿತುಕೊಳ್ಳಲೂ ಅವಕಾಶ ನೀಡುತ್ತಿಲ್ಲ. ನಮ್ಮ ಹೊಟ್ಟೆಗೇನಾದರೂ ಬೇಕಲ್ಲವೇ?", ಎಂಬುದಾಗಿ ಮುಚ್ಚಿದ್ದ ಅಂಗಡಿಯ ಮುಂದೆ ಕುಳಿತಿದ್ದ ಸುಮಾರು 60 ವರ್ಷದ ಆ ಹೆಂಗಸಿನ ಪ್ರಶ್ನೆ. (ಆಕೆ ಎಷ್ಟೊಂದು ಉದ್ವಿಗ್ನಳಾಗಿದ್ದಳೆಂದರೆ, ತನ್ನ ಹೆಸರನ್ನು ಹೇಳಲು ನಿರಾಕರಿಸಿದ ಆಕೆ, ನಾನು ಆಕೆಯ ಫೋಟೋ ತೆಗೆಯುವುದಕ್ಕೂ ಸಮ್ಮತಿಸಲಿಲ್ಲ. ಆಕೆಯಿಂದ ಒಂದು ಡಜ಼ನ್‍ ಗಾಜಿನ ಬಳೆಗಳನ್ನು ನಾನು ಖರೀದಿಸಿದೆ. ಮಧ್ಯಾಹ್ನ ಮನೆಗೆ ಹಿಂದಿರುಗಲು ಆಕೆ ನಿರ್ಧರಿಸುವ ಮೊದಲು ಈ 20 ರೂ.ಗಳಷ್ಟೇ ಆಕೆಯ ಅಂದಿನ ಸಂಪಾದನೆ)

ಆಕೆಯು ಕುಳಿತಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ 60ರ ವಯಸ್ಸಿನ ಸುರೇಶ್‍ ಸೂರ್ಯವಂಶಿ, "ನಾವು ಬೇಸಿಗೆಯ ಮಾರ್ಚ್‍ ಮತ್ತು ಮೇ ತಿಂಗಳುಗಳಿಗೆ ಎದುರುನೋಡುತ್ತಿದ್ದೆವು. ಚೈತ್ರಿ ಪೂರ್ಣಿಮದಲ್ಲಿ (ಏಪ್ರಿಲ್‍ 8) ಪಡ್ವ (ಹಿಂದೂ ಚಾಂದ್ರಮಾನ ಪಂಚಾಂಗದ ಮೊದಲ ದಿನವಾದ, ಗುಡಿ ಪಡ್ವ) ಚೈತ್ರಿ ಯಾತ್ರೆಗಳು ಪ್ರಾರಂಭವಾದ ನಂತರ ದಿನಾಲೂ ಇಲ್ಲಿಗೆ ಸರಾಸರಿ 30ರಿಂದ 40 ಸಾವಿರದಷ್ಟು ಭಕ್ತರು ಬರುತ್ತಾರೆ", ಎಂದು ತಿಳಿಸಿದರು. ಸೂರ್ಯವಂಶಿ ಅವರ ಅಂಗಡಿಯು ದೇವಸ್ಥಾನದ ಮುಖ್ಯ ದ್ವಾರದ ಪಕ್ಕದಲ್ಲಿದೆ. ಅವರು ಫೇಡ ಹಾಗೂ ಮಂಡಕ್ಕಿ, ಹುರಿದ ಕಡಲೆ ಮುಂತಾದ ಪ್ರಸಾದದ ಪದಾರ್ಥಗಳನ್ನು ಮಾರುತ್ತಾರೆ. ವಾರದ ಕೊನೆಯ ದಿನಗಳಲ್ಲಿ (ಯಾತ್ರೆಯ ಸಮಯದಲ್ಲಿ) ಭಕ್ತರು ಹಾಗೂ ಭೇಟಿಕಾರರ ಸಂಖ್ಯೆಯು ಒಂದು ಲಕ್ಷವನ್ನು ತಲುಪುತ್ತದೆ. ಈಗ ಯಾತ್ರೆಯನ್ನು ರದ್ದುಪಡಿಸಲಾಗಿದೆಯೆಂದು ಹೇಳಲಾಗುತ್ತಿದೆ. ಇದು ಇತಿಹಾಸದಲ್ಲೇ ಮೊದಲ ಬಾರಿ.

ಇದರ ಪಕ್ಕದಲ್ಲಿರುವ ಅನಿಲ್ ಸೊಲಾಪುರೆಯವರ ಅಂಗಡಿಯಲ್ಲಿ ಲೋಹದ ಪ್ರತಿಮೆಗಳು, ಫ್ರೇಮ್ ಗಳು ಮತ್ತು ಇತರೆ ಗೃಹಾಲಂಕಾರದ ವಸ್ತುಗಳನ್ನು ಇಡಲಾಗಿದೆ. ದೇವಳಕ್ಕೆ ದಿನರಾತ್ರಿಯೆಂಬುದರ ಪರಿವೆಯಿಲ್ಲದೆ ಬಂದುಹೋಗುತ್ತಿದ್ದ ಭಕ್ತರಿಂದಾಗಿ ಆತನಿಗೆ ಸಿಗುತ್ತಿದ್ದ 30,000 – 40,000 ರೂಪಾಯಿಗಳ ಮಾಸಿಕ ಸ್ಥಿರ ಆದಾಯಕ್ಕೀಗ ಧಕ್ಕೆಯಾಗಿದೆ. ಆದರೆ ಅಂದು ಮಾತ್ರ ಮಧ್ಯಾಹ್ನವಾದರೂ ಒಂದೇ ಒಂದು ವಸ್ತುವೂ ಮಾರಾಟವಾಗಿರಲಿಲ್ಲ. "ಈ ಅಂಗಡಿಯಲ್ಲಿ ನಾನು 38 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದಿನನಿತ್ಯವೂ ನಾನಿಲ್ಲಿಗೆ ಬರುತ್ತೇನೆ. ಸುಮ್ಮನೆ ನಾನು ಮನೆಯಲ್ಲಿ ಹೇಗೆ ಕುಳಿತುಕೊಳ್ಳಲಿ?", ಎಂದು ಕೇಳುತ್ತಿರುವ ಅವರ ಕಣ್ಣುಗಳು ಮಂಜಾಗಿವೆ.

Left: Suresh Suryavanshi says the temple has been closed for the first time in history. Right: 'How can I just sit at home?' asks Anil Solapure, in tears
PHOTO • Medha Kale
Left: Suresh Suryavanshi says the temple has been closed for the first time in history. Right: 'How can I just sit at home?' asks Anil Solapure, in tears
PHOTO • Medha Kale

ಎಡಕ್ಕೆ: ದೇವಸ್ಥಾನವನ್ನು ಮುಚ್ಚಿರುವುದು ಇತಿಹಾಸದಲ್ಲಿ ಇದೇ ಮೊದಲು ಎನ್ನುತ್ತಾರೆ ಸುರೇಶ್‍ ಸೂರ್ಯವಂಶಿ. ಬಲಕ್ಕೆ: "ನಾನು ಕೆಲಸವಿಲ್ಲದೆ ಮನೆಯಲ್ಲಿ ಕೂರುವುದಾದರೂ ಹೇಗೆ", ಎಂದು ಕಣ್ತುಂಬಿಕೊಂಡ ಅನಿಲ್‍ ಸೋಲಾಪುರೆ ಪ್ರಶ್ನಿಸುತ್ತಾರೆ

ಲಾಕ್‍ಡೌನ್‍ ಸುಮಾರು 60 ವರ್ಷದ ನಾಗುರ್‍ ಬಾಯಿಯನ್ನು ಮೇಲೆ ಸಹ ಪರಿಣಾಮವನ್ನು ಬೀರಿದೆ. ಈಗಲೂ ಆಕೆ ಜೊಗ್ವವನ್ನು (ಭಕ್ತರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಭಿಕ್ಷೆ ಬೇಡುವ ಸಂಪ್ರದಾಯ. ತಮ್ಮ ಜೀವನೋಪಾಯಕ್ಕಾಗಿ ಸಂಪೂರ್ಣವಾಗಿ ಈ ಭಿಕ್ಷೆಯನ್ನೇ ಅವರು ಅವಲಂಬಿಸಿರುತ್ತಾರೆ. ಹಿಟ್ಟು ಹಾಗೂ ಉಪ್ಪನ್ನು ಅವರು ಯಾಚಿಸುತ್ತಾರೆ.) ಯಾಚಿಸಲು ಪ್ರಯತ್ನಿಸುತ್ತಿದ್ದಾರೆ. ವರ್ಷಗಳ ಹಿಂದೆ, ವಿದ್ಯುಚ್ಛಕ್ತಿಯು ಪ್ರವಹಿಸಿದ ಕಾರಣ ನಾಗುರ್‍ ಬಾಯಿಯವರ ಎಡ ಅಂಗೈ ಅಶಕ್ತವಾಗಿದ್ದು, ದಿನಗೂಲಿ ಕಾರ್ಮಿಕರ ಕೆಲಸವನ್ನು ಆಕೆ ನಿರ್ವಹಿಸಲಾರರು. "ಚೈತ್ರಿ ಯಾತ್ರೆಯಿಂದಾಗಿ ನನ್ನ ಜೀವನ ಸಾಗುತ್ತಿತ್ತು. ಈಗ ಯಾರಾದರೂ ಒಂದು ಕಪ್‍ ಚಹ ನೀಡಿದರೆ ಅದು ನನ್ನ ಅದೃಷ್ಟವೇ ಸರಿ", ಎನ್ನುತ್ತಾರೆ ಆಕೆ.

ದೇವಸ್ಥಾನಕ್ಕೆ ಹತ್ತಿರದಲ್ಲೇ ಇರುವ ಮಂಗಳವಾರದ ವಾರದ ಸಂತೆಯು ಹತ್ತಿರದ ಹಳ್ಳಿಗಳಲ್ಲಿನ 450ರಿಂದ 500 ರೈತರಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಅವರಲ್ಲಿನ ಅನೇಕರು ಮಹಿಳೆಯರು. ಮಾರುಕಟ್ಟೆಯು ಈಗ ಮುಚ್ಚಿರುವುದರಿಂದ ತಮ್ಮ ತಾಜಾ ಹಾಗೂ ಶೀಘ್ರವಾಗಿ ಕೆಟ್ಟುಹೋಗುವ ಉತ್ಪನ್ನಗಳನ್ನು ಮಾರುವುದು ಅಲ್ಲಿನ ಅನೇಕ ರೈತಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಇದರಲ್ಲಿನ ಕೆಲವನ್ನು ತಮ್ಮ ಸ್ವಂತ ಹಳ್ಳಿಗಳಲ್ಲಿ ಮಾರಬಹುದಾದರೂ ಅದು ಅವರ ಜೀವನೋಪಾಯಕ್ಕೆ ಸಾಲುವುದಿಲ್ಲ.

ಸುರೇಶ್‍ ರೋಖಡೆ ಎಂಬ ರೈತ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಚಾಲಕನ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಮರಾಠವಾಡದಲ್ಲೀಗ ದ್ರಾಕ್ಷಿಯ ಕಾಲವಾಗಿದ್ದು, ಮಾರುಕಟ್ಟೆಯು ಮುಚ್ಚಿರುವ ಕಾರಣ ದ್ರಾಕ್ಷಿಗಳನ್ನು ಕೀಳುವ ಕೆಲಸವನ್ನು ನಿಲ್ಲಿಸಲಾಗಿದೆ. "ಸೋಮವಾರ, ಮಾರ್ಚ್‍ 23ರಂದು ಮಾರುಕಟ್ಟೆಯು ತೆರೆಯಬಹುದೆಂದು ಭಾವಿಸುತ್ತೇನೆ", ಎಂದು ಅವರು ತಿಳಿಸಿದರು. (ರಾಜ್ಯ ಸರ್ಕಾರವು ಆ ದಿನದಂದು ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿತು.) ಮರಾಠವಾಡದ ನೆರೆಯಲ್ಲಿನ ಕಲಮ್ಬ್‍ ವಿಭಾಗ ಹಾಗೂ ಇತರೆ ಜಿಲ್ಲೆಗಳಲ್ಲಿನ ಮಾರ್ಚ್‍ 17 ಹಾಗೂ 18ರ ಆಲಿಕಲ್ಲು ಮಳೆಯು ಇವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ತುಲ್ಜಾಪುರದಲ್ಲಿ ಇದುವರೆಗೂ ಯಾವುದೇ ಕೊವಿಡ್‍-19 ತಪಾಸಣೆಯ ಸೌಲಭ್ಯಗಳಿಲ್ಲ. ಇಲ್ಲಿ ಯಾವುದಾದರೂ ಪಾಸಿ಼ಟಿವ್‍ ಕೇಸುಗಳಿವೆಯೆ ಎಂಬ ಬಗ್ಗೆ ಅಥವ ಅದರ ವ್ಯಾಪ್ತಿಯ ಸಾಧ್ಯತೆಯ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ವಾರ್ತೆಯ ವರದಿಗಳ ಪ್ರಕಾರ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲ್ಪಡುವ ವಸತಿ ನಿಲಯವನ್ನು 80 ಕೊಠಡಿಗಳ ಐಸೊಲೇಷನ್‍ ಸೌಲಭ್ಯವನ್ನು ಒದಗಿಸುವ ಸ್ಥಳವಾಗಿ ಬದಲಿಸಲಾಗಿದೆ.

ಅನುವಾದ: ಶೈಲಜ ಜಿ. ಪಿ.

Medha Kale
mimedha@gmail.com

Medha Kale is based in Pune and has worked in the field of women and health. She is the Translations Editor, Marathi, at the People’s Archive of Rural India.

Other stories by Medha Kale
Translator : Shailaja G. P.
shailaja1.gp@gmail.com

Shailaja (shailaja1.gp@gmail.com) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.