ಅಂತಹದೊಂದು ಶೂಟಿಂಗ್‌ ನಡೆದೇ ಇರಲಿಲ್ಲವಾದರೂ, "ಪೋಲಿಸರು ರೈತನೊಬ್ಬನನ್ನು ಹೊಡೆದುರುಳಿಸಿದ್ದಾರೆ"ನ್ನುವ ಹೆಡ್‌ಲೈನ್‌ಗಳು ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಫ್ಲಾಶ್‌ ಆಗಲು ಪ್ರಾರಂಭಗೊಂಡಿತ್ತು. ಈ "ಕೊಲೆ"ಯನ್ನು ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿ ಮಾಡಲಾಗಿದೆಯೆನ್ನುವ ವದಂತಿ ಎಲ್ಲೆಡೆ  ಹರಡಿತ್ತು. ಈ ನಡೆದೇ ಇರದ "ʼಕೊಲೆ"ಯು ಆಗಿದೆಯೆಂಬ ವದಂತಿಯು ಜನವರಿ 26, ಗಣರಾಜ್ಯೋತ್ಸವದಂದು ದೆಹಲಿಯ ಪ್ರಸಿದ್ಧ ಆದಾಯ ತೆರಿಗೆ ಕಚೇರಿ (ಐಟಿಒ) ಜಂಕ್ಷನ್‌ಗೆ ಬಂದ ಪ್ರತಿಭಟನಾಕಾರರ ಗುಂಪುಗಳಲ್ಲಿ ಅಶಿಸ್ತು ಮತ್ತು ಗೊಂದಲವನ್ನು ಸೃಷ್ಟಿಸಿತು. ಇದೇ ವದಂತಿ ಕೆಂಪುಕೋಟೆಯಲ್ಲಿನ ಗಲಭೆಗೂ ಕಾರಣವೆನ್ನಲಾಗಿದೆ.

ಹರಡಿದ ವದಂತಿಗಳ ಪ್ರಕಾರ ಟ್ರ್ಯಾಕ್ಟರ್‌ ಓಡಿಸುತ್ತಿದ್ದ ಯುವ ರೈತನೊಬ್ಬನನ್ನು ಪಾಯಿಂಟ್‌ ಬ್ಲಾಂಕಿನಲ್ಲಿ ಪೋಲಿಸರು ಶೂಟ್‌ ಮಾಡಿದ್ದರಿಂದ ಅವನು ಸತ್ತಿದ್ದ. ಸೋಷಿಯಲ್‌ ಮೀಡಿಯಾದಲ್ಲಿ ಎಂದಿನಂತೆ ಸುದ್ದಿಯ ಸತ್ಯಾಸತ್ಯತೆ ತಿಳಿಯದೆ ಅದನ್ನು ಎಲ್ಲೆಡೆ ಹರಿಬಿಡಲಾಯಿತು. ಸ್ವಲ್ಪ ಹೊತ್ತಿನಲ್ಲೇ ಅದೇ ಸುದ್ದಿಯನ್ನು ಕೆಲವು ಸುದ್ದಿ ಚಾನಲ್‌ಗಳೂ ಕೈಗೆತ್ತಿಕೊಂಡವು. ಸ್ಥಳದಲ್ಲಿದ್ದ ಜನರು ಈ ʼಗೋಲಿಕಾಂಡ್‌ʼ (ಗುಂಡಿಟ್ಟಿದ್ದನ್ನು) ಖಂಡಿಸುತ್ತಿದ್ದರು ಮತ್ತು ಪೋಲಿಸರ ಮೇಲೆ ದೌರ್ಜನ್ಯದ ಆರೋಪ ಮಾಡುತ್ತಿದ್ದರು. ಮತ್ತು ಐಟಿಒ ಜಂಕ್ಷನ್ ಬಳಿ ಪ್ರತಿಭಟನಾಕಾರರು ಎಲ್ಲೆಂದರಲ್ಲಿ ಚದುರಿ ಹೋಗುತ್ತಿದ್ದರು.

ವಾಸ್ತವದಲ್ಲಿ, ನವನೀತ್‌ ಸಿಂಗ್‌ ಎಂದು ಗುರುತಿಸಲಾಗಿರುವ ವ್ಯಕ್ತಿಯು ಅವರು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಮಗುಚಿಬಿದ್ದು ಸಾವನ್ನಪ್ಪಿದ್ದರು. ಯಾರೂ ಗುಂಡು ಹಾರಿಸಿರಲಿಲ್ಲ. ಇದು ಸ್ಪಷ್ಟವಾಗುವ ಹೊತ್ತಿಗಾಗಲೇ ಕೆಂಪು ಕೋಟೆಯಲ್ಲಿ ಬೇರೆಯವರಿಂದ ಹಿಂಸಾಚಾರ ಭುಗಿಲೆದ್ದು‌ ಸೆಪ್ಟೆಂಬರ್ 2020ರಲ್ಲಿ ಸಂಸತ್ತಿನ ಮೂಲಕ ಅಪ್ಪಳಿಸಿದ ಮೂರು ಕಾನೂನುಗಳನ್ನು ವಿರೋಧಿಸಿ ರೈತರ ನಿಜವಾದ, ಬಹುದೊಡ್ಡ ಟ್ರ್ಯಾಕ್ಟರ್‌ ರ‍್ಯಾಲಿಗೆ ಗ್ರಹಣ ಬಡಿದಾಗಿತ್ತು.

ಆ ದಿನ ಬಹಳ ದುರದೃಷ್ಟಕರ ರೀತಿಯಲ್ಲಿ ಪ್ರಾರಂಭವಾಯಿತು

ಭಾರತದ 72 ನೇ ಗಣರಾಜ್ಯೋತ್ಸವವು ಕತ್ತಲೆ ಮತ್ತು ಚಳಿ ಕಳೆದು ಆಹ್ಲಾದಕರ ಬೆಚ್ಚಗಿನ ಬಿಸಿಲಿನೊಂದಿಗೆ ಪ್ರಾರಂಭವಾಗಿತ್ತು. ಅಂದು ಕಳೆದ ಎರಡು ತಿಂಗಳಿನಿಂದ ದೇಶದ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಗೊತ್ತುಪಡಿಸಿದ ಮಾರ್ಗದಲ್ಲಿ ಶಾಂತಿಯುತ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿ ಇತಿಹಾಸ ನಿರ್ಮಿಸಬೇಕಿತ್ತು. ರಾಜ್‌ಪಥ್‌‌ನಲ್ಲಿ ಸರಕಾರದ ಮೆರವಣಿಗೆ ಮಧ್ಯಾಹ್ನದ ಹೊತ್ತಿಗೆ ಮುಗಿದು,, ನಂತರ ಸಿಂಗು, ಟಿಕ್ರಿ ಮತ್ತು ಗಾಜಿಪುರದಿಂದ ಮೂರು ಮೆರವಣಿಗೆಗಳು ಪ್ರಾರಂಭವಾಗಬೇಕಿತ್ತು.

ಈ ಮೂರು ಮೆರವಣಿಗೆಗಳು ದೇಶವೊಂದರ ನಾಗರಿಕರು ಆಚರಿಸುವ ಅತಿದೊಡ್ಡ, ಭವ್ಯ ಗಣರಾಜ್ಯೋತ್ಸವವಾಗಿ ದಾಖಲಾಗಬೇಕಿತ್ತು - ಮತ್ತು ಅವರು ಅದನ್ನು ಮಾಡಿದ್ದರು ಕೂಡ. ಆದರೆ ಸಂಜೆಯ ಹೊತ್ತಿಗೆ ಜನರ ಗಮನ ಮತ್ತು ಕುತೂಹಲವು ವಿರುದ್ಧ ದಿಕ್ಕಿನತ್ತ ತಿರುಗಿತ್ತು.

PHOTO • Shalini Singh

ಗಣರಾಜ್ಯೋತ್ಸವದ ದಿನ ಬೆಳಿಗ್ಗೆ ಬಿ.ಕೆ.ಯು.ನ ಯೋಗೇಶ್‌ ಪ್ರತಾಪ್‌ ಸಿಂಗ್‌ ಚಿಲ್ಲಾ ಬಾರ್ಡರ್‌ನಲ್ಲಿ ರೈತ ಸಮೂಹವೊಂದನ್ನು ಉದ್ದೇಶಿಸಿ ಮಾತನಾಡುತ್ತಿರುವುದು. (ಮೇಲಿನ ಸಾಲು). ಊಟ ಮುಗಿಸಿದ ರೈತರ ಗುಂಪು ಟ್ರ್ಯಾಕ್ಟರ್ ಪೆರೇಡ್‌ಗೆ ಹೊರಟಿರುವುದು (ಕೆಳಗಿನ ಎಡ ಚಿತ್ರ) ಬಿ.ಕೆ.ಯು.ನ ಯು.ಪಿ ಘಟಕದ ಭಾನು ಪ್ರತಾಪ್‌ ಸಿಂಗ್‌ ʼಪರಿʼಯೊಂದಿಗೆ ಕೃಷಿ ಬೆಲೆಗಳ ಮಾತನಾಡಿದರು

ನಮ್ಮ ದಿನವು ದೆಹಲಿ ಮತ್ತು ಉತ್ತರಪ್ರದೇಶದ ನಡುವವಿನ ಚಿಲ್ಲಾ ಬಾರ್ಡರ್‌ಗೆ (ಗಾಝಿಪುರದ ಸನಿಹ) ಡ್ರೈವ್‌ ಮಾಡುವುದರೊಂದಿಗೆ ಪ್ರಾರಂಭಗೊಂಡಿತು. ಪ್ರವೇಶ ದ್ವಾರದಲ್ಲಿನ ಬ್ಯಾರಿಕೇಡ್‌ ವ್ಯವಸ್ಥೆ ಒಂದಿಷ್ಟು ಅಸಹಜವಾಗಿತ್ತು: ತೈಲ ಸಾಗಣೆ ವಾಹನಗಳು ಮತ್ತು ಡಿ.ಟಿ.ಸಿ. ಬಸ್‌ಗಳನ್ನು ಅರಿಶಿನ ಬಣ್ಣದ ಕಬ್ಬಿಣದ ಗೇಟ್‌ಗಳೊಂದಿಗೆ ಇರಿಸಲಾಗಿತ್ತು. ಚಿಲ್ಲಾ ಗಡಿಯಲ್ಲಿ, ಬಿಳಿ ಮತ್ತು ಹಸಿರು ಬಣ್ಣದ ಒಂದು ದೊಡ್ಡ ಶಿಬಿರವನ್ನು ಸ್ಥಾಪಿಸಲಾಗಿತ್ತು, ಅಲ್ಲಿ ರೈತರ ಗುಂಪೊಂದು ತಮ್ಮ ನಾಯಕರು ಸೂಚಿಸಿದ ಮಾರ್ಗದಲ್ಲಿ ಚಲಿಸುವಂತೆ ಪೊಲೀಸ್ ಪಡೆಗಳ ಸಹಕಾರದೊಂದಿಗೆ ಹೇಳಲಾಗುತ್ತಿತ್ತು.

ಇಲ್ಲಿನ ಹೋರಾಟಗಾರರು ಬೆಳಗಿನ 4 ಘಂಟೆಯಿಂದ ತಯಾರಾಗುತ್ತಿದ್ದ ದಾಲ್‌ ಮತ್ತು ಅನ್ನದ ಸರಳ ಊಟವನ್ನು ಮಾಡಿದರು. ಮಧ್ಯಾಹ್ನದ ಸುಮಾರಿಗೆ ತಂಡಗಳು ಒಂದೇ ಉಸಿರಿನಲ್ಲಿ ʼಭಾರತ್‌ ಮಾತಾ ಕೀ ಜೈ, ಜೈ ಜವಾನ್‌ ಜೈಕಿಸಾನ್‌ʼ ಘೋಷಣೆಗಳನ್ನು ಕೂಗುತ್ತಾ ಟ್ರಾಕ್ಟರ್‌ ಏರಲು ಪ್ರಾರಂಭಿಸಿದರು. ಹಿನ್ನೆಲೆಯಲ್ಲಿ ಜನಪ್ರಿಯ ಸ್ಥಳೀಯ ಹಾಡು ಕೇಳಿ ಬರುತ್ತಿತ್ತು.ಟ್ರಾಕ್ಟರುಗಳು ಗೊತ್ತುಪಡಿಸಿದ ಮಾರ್ಗವಾದ ಚಿಲ್ಲಾ-ದೆಹಲಿ-ನೋಯ್ಡಾ ಡೈರೆಕ್ಟ್ ಫ್ಲೈಓವರ್-ದಾದ್ರಿ-ಚಿಲ್ಲಾ ಮೂಲಕ ಓಡಾಡಲು ಪ್ರಾರಂಭಿಸುತ್ತಿದ್ದಂತೆ ಉದ್ದನೆಯ ಸಾಲಿನ ಪೊಲೀಸ್ ಸಿಬ್ಬಂದಿ ಮತ್ತು ಬಿಳಿ ಬಣ್ಣದ ಡ್ರೋನ್ ಕ್ಯಾಮೆರಾಗಳು ಅವರ ಮೇಲೆ ಕಣ್ಣಿಟ್ಟಿದ್ದರು.

ರೈತರು ಹಿಂಪಡೆಯುವಂತೆ ಒತ್ತಾಯಿಸುತ್ತಿರುವ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ.

ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಚಿಲ್ಲಾದಲ್ಲಿನ ಟ್ರ್ಯಾಕ್ಟರ್‌ ಮೆರವಣಿಗೆಯು ನೀರಸವಾಗಿತ್ತು. ಇದು ಬಹಳ ಬೇಗ ಮುಗಿದಿತ್ತು, ಮೂಲಸ್ಥಳಕ್ಕೆ ಒಂದು ಗಂಟೆಯೊಳಗೆಲ್ಲ ಹಿಂದಿರುಗಿದವು. ನಂತರ ನಾವು ಅಲ್ಲಿಂದ 40 ಕಿಲೋಮೀಟರ್‌ ದೂರದ ಮುಖ್ಯ ಮೆರವಣಿಗೆ ನಡೆಯುತ್ತಿದ್ದ ಸಿಂಘುವಿಗೆ ಹೊರಟಿದ್ದೆವ, ಆಗ ಅಲ್ಲಿದ್ದ ನಮ್ಮ ಸಹೋದ್ಯೋಗಿಗಳು ಕೆಲವು ರೈತರು ಸಿಂಘುವಿನಿಂದ ದೆಹಲಿ ಐ.ಟಿ.ಒ. ಕಡೆ ಹೊರಟಿರುವುದಾಗಿ ಮಾಹಿತಿ ನೀಡಿದರು. ಏನೋ ಅಸಹಜವಾದುದು ನಡೆಯುತ್ತಿತ್ತು. ನಾವು ಅವರನ್ನು ಹಿಂಬಾಲಿಸಲು ನಮ್ಮ ದಾರಿಯನ್ನು ಬದಲಿಸಿದೆವು. ನಾವು ಔಟರ್‌ ರಿಂಗ್‌ ರೋಡ್‌ ಕಡೆ ಡ್ರೈವ್‌ ಮಾಡಿಕೊಂಡು ಹೋಗುತ್ತಿರುವಾಗ ಸಾಕಷ್ಟು ದೆಹಲಿಯ ನಿವಾಸಿಗಳು ರಸ್ತೆ ಬದಿಯಲ್ಲಿ ನಿಂತು ಟ್ರ್ಯಾಕ್ಟರ್‌, ಬೈಕ್‌, ಕಾರುಗಳ ಮೂಲಕ ಸಾಗುತ್ತಿದ್ದ ರೈತರ ಮೆರವಣಿಗೆಯತ್ತ ಕೈಬೀಸುತ್ತಿದ್ದರು. ಒಂದಷ್ಟು ಮರೂನ್‌ ಬಣ್ಣದ ಬಟ್ಟೆಯಲ್ಲಿದ್ದ ಸನ್ಯಾಸಿಗಳು ಸಹ ಮಂಜು ಕಾ ತಿಲಾ ಬಳಿ ಉತ್ಸಾಹದಿಂದ ರೈತರತ್ತ ಕೈಬೀಸುತ್ತಿದ್ದರು. ತನ್ನ ಕುಟುಂಬದೊಂದಿಗೆ ಸಾಗುತ್ತಿದ್ದ ಮಹಿಳೆಯೊಬ್ಬರು ಸಿಗ್ನಲ್ಲಿನಲ್ಲಿ ಟ್ರ್ಯಾಕ್ಟರ್‌ನ ಹಿಂದೆ ಇದ್ದವರಿಗೆ ನೀರಿನ ಬಾಟಲಿಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದರು.

ದೇಶಕ್ಕಾಗಿ ಆಹಾರವನ್ನು ಉತ್ಪಾದಿಸಲು ಸಹಾಯ ಮಾಡುವ ಬೃಹತ್ ಟ್ರಾಕ್ಟರುಗಳ ದೊಡ್ಡ ಚಕ್ರಗಳು ರಾಷ್ಟ್ರದ ರಾಜಧಾನಿಯ ಕಾಂಕ್ರೀಟ್ ರಸ್ತೆಗಳಲ್ಲಿ ಉರುಳುತ್ತಿದ್ದವು - ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗಾಗಿದ್ದು. ಇದೊಂದು ಶಕ್ತಿಯುತ, ಕಟುವಾದ ಸಾಂಕೇತಿಕ ನಡೆಯಾಗಿತ್ತು.

PHOTO • Shalini Singh

ಚಿಲ್ಲಾ ಟ್ರ್ಯಾಕ್ಟರ್‌ ಮೆರವಣಿಗೆಯು ತಮ್ಮ ಗಮ್ಯವಾದ ಚಿಲ್ಲಾ-ದೆಹಲಿ-ನೋಯ್ಡಾ ಡೈರೆಕ್ಟ್ ಫ್ಲೈಓವರ್-ದಾದ್ರಿ-ಚಿಲ್ಲಾ –ದಾರಿಯನ್ನು ಒಂದು ಗಂಟೆಯೊಳಗೆ ಸುತ್ತು ಹಾಕಿ ತಮ್ಮ ಸ್ಥಾನಕ್ಕೆ ಮರಳಿದವು

PHOTO • Shalini Singh

ಐಟಿಒ ಜಂಕ್ಷನ್‌ನಲ್ಲಿ, ಗಾಜಿಪುರ, ಸಿಂಘು ಮತ್ತು ಕೆಂಪು ಕೋಟೆಯ ಟ್ರಾಕ್ಟರುಗಳು ಒಟ್ಟಿಗೆ ಬರಲು ಪ್ರಾರಂಭಿಸಿದವು.

ನಂತರ ಇದ್ದಕ್ಕಿದ್ದಂತೆ, ಎಲ್ಲವೂ ಬದಲಾಗಲು ಪ್ರಾರಂಭಿಸಿತು. ಪ್ರತಿಭಟನಾಕಾರರ ಕೆಲವು ಗುಂಪುಗಳು ಬೇರೆಯಾಗಿ ಕೆಂಪು ಕೋಟೆಯ ಕಡೆಗೆ ಯಾವುದೇ ಮುನ್ಸೂಚನೆಯಿಲ್ಲದೆ ಮೆರವಣಿಗೆ ನಡೆಸಿದವು ಎಂದು ನಾವು ಕೇಳಲ್ಪಟ್ಟೆವು. ಅದಾದ ಸ್ವಲ್ಪ ಹೊತ್ತಿನಲ್ಲೇ ಈ ಐತಿಹಾಸಿಕ ಸ್ಥಳದಲ್ಲಿ ಗಲಭೆಯಾಗುತ್ತಿದೆ ಹಾಗೂ ಧಾರ್ಮಿಕ ಧ್ವಜಗಳನ್ನು ಹಾರಿಸಲಾಗುತ್ತಿದೆ ಎಂಬ ವದಂತಿಗಳು ಹರಡಲು ಪ್ರಾರಂಭವಾಯಿತು. ಈ ನಾಟಕೀಯ ತಿರುವು ಜನರ ಮತ್ತು ಮಾಧ್ಯಮಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಸಾಕಷ್ಟಾಯಿತು.

"ಈ ಸ್ಥಳದಿಂದ ದೂರವಿರಿ" ಎಂದು 3:15ರ ಸುಮಾರಿಗೆ ಕೆಂಪುಕೋಟೆಯಿಂದ ಹೊರ ಬರುತ್ತಿದ್ದ ಸಹೋದ್ಯೋಗಿಯೊಬ್ಬರು ಕರೆ ಮಾಡಿ ತಿಳಿಸಿದರು. ಬಹುಶಃ ವದಂತಿಗಳಿಂದ - ಕೋಪಗೊಂಡಿದ್ದ ಹೋರಾಟಗಾರರ ಆಕ್ರೋಶದಿಂದಾಗಿ ಅಲ್ಲಿ ಗಲಭೆ ನಡೆದು ನಮ್ಮ ಸಹೋದ್ಯೋಗಿಯೂ ಗಾಯಗೊಂಡಿದ್ದರು ಮತ್ತು ಅವರ ದುಬಾರಿ ಕೆಮೆರಾ ಲೆನ್ಸ್‌ ಪುಡಿಯಗಿತ್ತು. ನಾವು ಐಟಿಒ ಕಡೆಗೆ ಸಾಗುತ್ತಿದ್ದೆವು, ಅಲ್ಲಿ ಗಾಜಿಪುರ, ಸಿಂಗ್ ಮತ್ತು ಕೆಂಪು ಕೋಟೆಯಿಂದ ಬರುವ ಕೆಲವು ಟ್ರಾಕ್ಟರುಗಳು ಒಟ್ಟಿಗೆ ಬರುತ್ತಿದ್ದವು. ಮತ್ತು ಅಲ್ಪಾವಧಿಯಲ್ಲಿಯೇ, ಪೊಲೀಸ್ ಪ್ರಧಾನ ಕಚೇರಿಯ ಸುತ್ತಮುತ್ತಲಿನ ಪ್ರದೇಶವನ್ನು ಟ್ರಾಕ್ಟರುಗಳು ಮತ್ತು ಜನರು ಆಕ್ರಮಿಸಿಕೊಂಡರು.

ಪಂಜಾಬಿನ ಗುರುದಾಸ್‌ಪುರದ ಮೂರು ವ್ಯಕ್ತಿಗಳು ಬಹಳ ಕೋಪದಲ್ಲಿದ್ದರು. "ಜನವರಿ 22ರಂದು ನನ್ನ ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ಸಿಂಘುವಿಗೆ ಬಂದಿದ್ದೆ. ಗಣರಾಜ್ಯೋತ್ಸವ ದಿನದಂದು ಬೆಳಿಗ್ಗೆ 4 ಗಂಟೆಗೆ ಎದ್ದು ತಯಾರಿಯಲ್ಲಿ ತೊಡಗಿಕೊಂಡಿದ್ದೆವು. ಈ ಮೆರವಣಿಗೆಯಲ್ಲಿ ಭಾಗವಹಿಸಲು 2 ಲಕ್ಷ ಟ್ರ್ಯಾಕ್ಟರುಗಳು ಬಂದಿವೆ. ನಾವೂ ನಮ್ಮ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. "ಈ ಕಾನೂನುಗಳಿಂದ ಕೇವಲ ಕಾರ್ಪೊರೇಟ್‌ಗಳಿಗೆ  ಮಾತ್ರ ಪ್ರಯೋಜನವಾಗಲಿದೆ ಆದರೆ ರೈತರಿಗೆ ಯಾವ ಪ್ರಯೋಜನವವೂ ಇಲ್ಲ." ಅವರು ತಾವು ದೊಡ್ಡ ಮುಖ್ಯ ಮೆರವಣಿಗೆಯ ಭಾಗವಾಗಿದ್ದೇವೆಂದು ಅವರು ಪ್ರಾಮಾಣಿಕವಾಗಿ ನಂಬಿದಂತಿತ್ತು. ಆದರೆ ನಿಜವಾದ ಮೆರವಣಿಗೆ ತನ್ನ ನಿಗದಿತ ಮಾರ್ಗದಲ್ಲಿ ಶಾಂತಿಯುತವಾಗಿ ಚಲಿಸುತ್ತಿತ್ತು. ಈ ರೀತಿಯ ಗೊಂದಲವನ್ನು ಉಳಿದೆಡೆಯಲ್ಲೂ ಕಾಣಬಹುದಾಗಿತ್ತು.

ಆದರೆ ನಗರದೊಳಗೆ ಪ್ರವೇಶಿಸಿದ ಇತರ ಪ್ರತಿಭಟನಾಕಾರರಲ್ಲಿ ಯಾವ ಗೊಂದಲವೂ ಇದ್ದಂತೆ ಕಾಣುತ್ತಿರಲಿಲ್ಲ. ಅವರು ಏನು ಮಾಡುತ್ತಿದ್ದಾರೆ ಹಾಗೂ ಅವರು ಏಕೆ ಇಲ್ಲಿದ್ದಾರೆನ್ನುವುದರ ಕುರಿತು ಅವರಿಗೆ ಸ್ಪಷ್ಟತೆಯಿದ್ದಂತೆ ಕಾಣುತ್ತಿತ್ತು. ಅವರು ಕಾರ್ಯಕ್ರಮಮವನ್ನು ಹಾಳು ಮಾಡುವ ಕಿಡಿಗೇಡಿತನ ಮತ್ತು ವಿಧ್ವಂಸಕತನವನ್ನು ತಮ್ಮ ಅಜೆಂಡವನ್ನಾಗಿ ಹೊಂದಿದ್ದರು. ಅವರು ಮಾಡು ಕಾರ್ಯದಿಂದ ಲಕ್ಷಾಂತರ ರೈತರು ಭಾಗವಹಿಸುತ್ತಿರುವ ಅಭೂತಪೂರ್ವ ಶಿಸ್ತುಬದ್ಧ ಶಾಂತಿಯುತ ಮೆರವಣಿಗೆಯನ್ನು ಹಾಳುಗೆಡವುತ್ತದೆನ್ನುವ ಬಗ್ಗೆ ಅವರಿಗೆ ಪೂರ್ಣ ಅರಿವಿತ್ತು. ಅಂತಹ ವ್ಯಕ್ತಿಗಳಲ್ಲೊಬ್ಬರು ನನ್ನೊಂದಿಗೆ ಹೀಗೆ ಹೇಳಿದರು - "ಹೌದು, ಕೆಂಪು ಕೋಟೆಯ ಬಾವುಟ ಹಾರಿಸುವುದು ಒಳ್ಳೆಯ ವಿಷಯ, ನಾವು ಅದನ್ನೇ ಮಾಡುವ ಉದ್ದೇಶ ಹೊಂದಿದ್ದೇವೆ" ಎನ್ನುತ್ತಾ ತನ್ನ ಬಳಿಯೂ ಒಂದು ಬಾವುಟವಿರುವುದಾಗಿ ನನಗೆ ತೋರಿಸಿದರು.

PHOTO • Shalini Singh

ಮೇಲಿನ ಎಡ ಚಿತ್ರ: 'ಈ ಕಾನೂನುಗಳು ಕಾರ್ಪೊರೇಟ್‌ಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತವೆ' ಎಂದು ಗುರುದಾಸ್‌ಪುರದ ಮೂವರು ವ್ಯಕ್ತಿಗಳು ಹೇಳಿದರು. ಮೇಲಿನ ಬಲ ಚಿತ್ರ: 'ಇಂದಿನ ಗಣರಾಜ್ಯೋತ್ಸವವು ಇತಿಹಾಸದಲ್ಲಿ ದಾಖಲಾಗಿ ಉಳಿಯಲಿದೆ' ಎಂದು ರಂಜಿತ್ ಸಿಂಗ್ (ಮಧ್ಯದಲ್ಲಿ) ಹೇಳಿದರು. ಕೆಳಗಿನ ಸಾಲು: ಪವನ್‌ದೀಪ್ ಸಿಂಗ್ (ಕಿತ್ತಳೆ ಬಣ್ಣದ ಉಡುಪಿನಲ್ಲಿ) ಸೇರಿದಂತೆ ಟ್ರಾಕ್ಟರುಗಳು ಮತ್ತು ಪ್ರತಿಭಟನಾಕಾರರಿಂದ ಐಟಿಒ ಪ್ರದೇಶವು ತುಂಬಿತ್ತು.

“ಈ ದೇಶದಲ್ಲಿ ಬೇರೆ ಜನರೇ ಇಲ್ಲವೇನೋ ಎಂಬಂತೆ ಸರ್ಕಾರವು ‘ಹಿಂದೂ ರಾಷ್ಟ್ರ’ದ ಕುರಿತು ಮಾತನಾಡುತ್ತಲೇ ಇರುತ್ತದೆ. ಇಂದು ಕೆಂಪು ಕೋಟೆಯಲ್ಲಿ [ಧಾರ್ಮಿಕ] ಧ್ವಜವನ್ನು  ಹಾರಿಸಿದ್ದು ಆ ಕಲ್ಪನೆಗೆ ಒಡ್ಡಿದ ಸವಾಲಾಗಿತ್ತು” ಎಂದು 26 ವರ್ಷದ ಪವನ್‌ದೀಪ್ ಸಿಂಗ್ ಪ್ರತಿಪಾದಿಸಿದರು.

ಕೆಲವರಲ್ಲಿನ ಗೊಂದಲ ಹಾಗೂ ಇತರರಲ್ಲಿನ ಸಂಶಯಾಸ್ಪದ ಬದ್ಧತೆ ಅಲ್ಲಿ ಅವ್ಯವಸ್ಥೆಯ ಹಾದಿಯೊಂದನ್ನು ತೆರೆಯುತ್ತಿತ್ತು.

“ಈ ದಿನದ ಗಣರಾಜ್ಯೋತ್ಸವವು ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿಯಲಿದೆ. ಜನರು ಮುಂದಿನ ದಿನಗಳಲ್ಲೂ ಈ ಟ್ರ್ಯಾಕ್ಟರ್‌ ಮೆರವಣಿಗೆಯನ್ನನು ನೆನಪಿಟ್ಟುಕೊಳ್ಳಲಿದ್ದಾರೆ,” ಎಂದು 45 ವರ್ಷದ ರಂಜಿತ್‌ ಸಿಂಗ್‌ ನಮ್ಮ ಬಳಿ ಹೇಳಿದರು.

ಹೆಚ್ಚು-ಕಡಿಮೆ ಇದೇ ಸಮಯದಲ್ಲಿ ನವನೀತ್‌ ಸಿಂಗ್‌ ಅವರ ಟ್ರ್ಯಾಕ್ಟರ್‌ ಮಗುಚಿ ಬಿದ್ದಿದೆ, ಮರುಕ್ಷಣವೇ ವದಂತಿಗಳಿಗೆ ರೆಕ್ಕೆ ಬಂದು ಹಾರತೊಡಗಿದವು. ಅವರ ಮೃತ ದೇಹವನ್ನು ಸುತ್ತುವರಿದು ಪ್ರತಿಭಟನಾಕಾರರ ದೊಡ್ಡ ಗುಂಪೊಂದು ರಸ್ತೆಯ ಮೇಲೆ ಕುಳಿತು ಶೋಕಿಸುತ್ತಿದ್ದರೆ, ಪೊಲೀಸರು ಕೆಲವು ಮೀಟರ್ ದೂರದಲ್ಲಿ ನಿಂತು ಅವರನ್ನು ಗಮನಿಸುತ್ತಿದ್ದರು.

ಪಂಜಾಬ್‌ನ ಬಿಲಾಸಪುರದ ರವನೀತ್‌ ಸಿಂಗ್‌ (20) ಎನ್ನುವ ಇನ್ನೊಬ್ಬ ಯುವಕನ ಕಾಲಿಗೂ ಗುಂಡು ಹಾರಿಸಲಾಗಿದೆಯೆಂಬ ವದಂತಿ ಹರಡಲಾರಂಭಿಸಿತ್ತು. ನವನೀತ್ ಸಿಂಗ್ ಅವರ ದೇಹವು ಇದ್ದ ಪಕ್ಕದ ರಸ್ತೆಯಲ್ಲ ರವನೀತ್‌ ಸಿಂಗ್‌ ತನ್ನ ಹಿರಿಯ ಗೆಳೆಯರೊಬ್ಬರ ಮಡಿಲಿನಲ್ಲಿ ಮಲಗಿದ್ದರು. ಅವರ ಗಾಯಗಳಿಗೆ ಬ್ಯಾಂಡೇಜ್‌ ಮಾಡಲಾಗುತ್ತಿತ್ತು. ತನಗೆ ಗುಂಡೇಟು ಬಿದ್ದಿಲ್ಲ ಐ.ಟಿ.ಒ. ಬಳಿ ಪೊಲೀಸರು ಅಶ್ರುವಾಯು ಸಿಡಿಸಿದಾಗ ಗೊಂದಲದಲ್ಲಿ ಅವರ ಕಾಲು ಸಿಕ್ಕಿಬಿದ್ದಿದ್ದೆಂದು ಅವರು ಸ್ಪಷ್ಟಪಡಿಸಿದರು. ಆದರೆ ಅವರು ಮಾತನಾಡುತ್ತಿರುವಾಗಲೇ ಮಧ್ಯವಯಸ್ಕ ಪ್ರತಿಭಟನಾಕಾರರೊಬ್ಬರ ದನಿ ಅವರ ದನಿಯನ್ನು ಇಲ್ಲವಾಗಿಸಿತು. ಅವರು ನಮಗೆ ತೊಂದರೆ ಕೊಡಬೇಡಿ ಹಾಗೂ ಸತ್ಯವನ್ನು ಪೂರ್ತಿಯಾಗಿ ಜನರ ಮುಂದಿಡುವ ಬಯಕೆ ನಿಮಗಿಲ್ಲದಿದ್ದರೆ ಇಲ್ಲಿಂದ ಹಿಂದೆ ಸರಿಯಿರಿ ಎಂದು ಕೆಮೆರಾ ಮ್ಯಾನ್‌ಗಳಿಗೆ ಎಚ್ಚರಿಕೆ ನೀಡುತ್ತಿದ್ದರು.

ಐಟಿಒ ಬಳಿ, ವಿಶಿತಾದ ಯುವ ರೈತರ ಮತ್ತೊಂದು ಗುಂಪು ತಮ್ಮ ಟ್ರ್ಯಾಕ್ಟರ್‌ನಲ್ಲಿದ್ದು, ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ತಮ್ಮ ಗುಂಪಿನ ಮುಖಂಡರ ಸೂಚನೆಗಳಿಗಾಗಿ ಕಾಯುತ್ತಿತ್ತು. ಅವರು ನಮ್ಮೊಂದಿಗೆ ಮಾತನಾಡಲು ಸ್ವಲ್ಪ ಹಿಂಜರಿಯುತ್ತಿದ್ದರು. ಕಾರಣ ನಾವು ಐಬಿ ಜನರಿರಬಹುದೆನ್ನುವ ಅನುಮಾನವಾಗಿತ್ತು. "ಇಲ್ಲ, ನಾವು ಇಂಟೆಲಿಜೆನ್ಸ್ ಬ್ಯೂರೋ ವ್ಯಕ್ತಿಗಳಲ್ಲ" ಎಂದು ವಿವರಿಸಿದ ನಂತರ, ಟ್ರ್ಯಾಕ್ಟರ್‌ ಮೆರವಣಿಗೆಯಲ್ಲಿ ಪೋಲಿಸರು ಯಾರೋ ಒಬ್ಬರಿಗೆ ಗುಂಡು ಹೊಡೆದಿದ್ದಾರೆಂದು ಅವರು ಕೇಳಲ್ಪಟ್ಟಿರುವುದಾಗಿಯೂ ಅದು ಶಾಂತಿಯುತ ಹೋರಾಟವನ್ನು ಪ್ರಚೋದನಕಾರಿಯಾಗಿಸುವ ಪ್ರಯತ್ನವೆಂದೂ ಹೇಳಿದರು.

PHOTO • Shalini Singh

ಗುಂಪೊಂದು ಐ.ಟಿ.ಒ. ಕ್ರಾಸಿಂಗ್‌ನಲ್ಲಿ ಟ್ರ್ಯಾಕ್ಟರ್‌ ಉರುಳಿ ಬಿದ್ದು ನವನೀತ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿತು

PHOTO • Shalini Singh

ಶ್ರೀಮತಿ ಆಂಟಿಲ್ (ಎಡ) ಸರ್ಕಾರವು ತಾನು ಹಟವನ್ನು ಬಿಟ್ಟುಕೊಡಬೇಕು. ಅಜಯ್ ಕುಮಾರ್ ಸಿವಾಚ್ (ಬಲಗಡೆ) ಹೇಳಿದರು: 'ನಾನು ಜವಾನ್ ಮತ್ತು ಕಿಸಾನ್ ಎರಡೂ ಆಗಿದ್ದೇನೆ, ಆದರೆ ನಾನು ಯಾವಾಗಲೂ ಕಿಸಾನ್ ಆಗಿಯೇ ಉಳಿಯುತ್ತೇನೆ '

"ಸರ್ಕಾರವು ರೈತರನ್ನು ಕೊಲ್ಲಬಾರದು, ಬದಲಿಗೆ ತನ್ನ ಕಾನೂನುಗಳನ್ನು ಕೊಲ್ಲಬೇಕು" ಎಂದು ಅವರು ನಮಗೆ ಹೇಳುತ್ತಾ, "ಇದು ಬಹುಶಃ ಈ ದೇಶದ ಇತಿಹಾಸದಲ್ಲಿಯೇ ಅತಿ ದೀರ್ಘ ಕಾಲದ ಪ್ರತಿಭಟನೆ" ಎಂದೂ ಅವರು ಹೆಮ್ಮೆಯಿಂದ ಹೇಳಿದರು.

ನವನೀತ್ ಸಿಂಗ್ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಮತ್ತು ಇತರ ಪ್ರತಿಭಟನಾಕಾರರೊಂದಿಗೆ ಮಾತನಾಡಲು ನಾವು ಬಯಸಿದ್ದರಿಂದ ನಾವು ಅಲ್ಲಿಂದ ಮುಂದೆ ಹೋದೆವು. ಅಲ್ಲಿ ನಾವು 45 ವರ್ಷದ ಅಜಯ್ ಕುಮಾರ್ ಶಿವಾಚ್ ಅವರನ್ನು ಭೇಟಿಯಾದೆವು. ಶಿವಾಚ್, ಮೂಲತಃ ಉತ್ತರಾಖಂಡದ ಬಾಜ್‌ಪುರದವರಾಗಿದ್ದು, ಈ ಹಿಂದೆ ಸೇನೆಯಲ್ಲಿದ್ದರು ಮತ್ತು ಈಗ ಉತ್ತರ ಪ್ರದೇಶದ ಮೀರತ್‌ನಲ್ಲಿ ನೆಲೆಸಿದ್ದಾರೆ.

"ಈ ದೇಶದಲ್ಲಿ ಕೃಷಿ ನಿಂತರೆ, ಸರ್ಕಾರ ನಿಂತು ಹೋಗುತ್ತದೆ" ಎಂದು ಸಿವಾಚ್ ಹೇಳಿದರು. "ನಾನು ಪ್ರಸ್ತುತ ಪಿಂಚಣಿದಾರ ಮತ್ತು ಈಗ ಕಬ್ಬು ಮತ್ತು ಗೋಧಿ ಬೆಳೆಯುವ ರೈತ ಕೂಡ ಹೌದು.  ನನ್ನ ಬದುಕಿನ ಸುಮಾರು 20 ವರ್ಷಗಳ ಕಾಲವನ್ನು ಸೈನ್ಯದಲ್ಲಿ ಕಳೆದಿದ್ದೇನೆ, ಕೃಷಿಗೆ ಬರುವ ಮೊದಲು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಲಡಾಖ್‌ಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನಾನು ಜವಾನ್ ಮತ್ತು ಕಿಸಾನ್ ಎರಡೂ ಹೌದು, ಆದರೆ ನಾನು ಯಾವಾಗಲೂ ಕಿಸಾನ್ ಆಗಿಯೇ ಉಳಿಯುತ್ತೇನೆ. ನಮ್ಮೆಲ್ಲರಂತೆ ನನಗೂ ಈ ದಿನ ಪ್ರಮುಖ ದಿನವಾಗಿದೆ. ಪ್ರತಿಭಟನೆಗಾಗಿ ದೆಹಲಿಗೆ ಬರಲು ನಮ್ಮ ಗ್ರಾಮದ ಜನರಿಂದ ರೂ. 60,000 ಸಂಗ್ರಹಿಸಿದ್ದೇವೆ."

ಹರಿಯಾಣದ ಸೋನಿಪತ್‌ನ ಶ್ರೀಮತಿ ಆಂಟಿಲ್ (48) ಅವರ ಕಡು ಹಸಿರು ಪೇಟ ನಮ್ಮ ಗಮನ ಸೆಳೆಯಿತು. ತಮ್ಮ ಊರಿನಲ್ಲಿ ಮೆಕ್ಕೆಜೋಳ, ಸೌತೆಕಾಯಿ, ಆಲೂಗಡ್ಡೆ ಮತ್ತು ಕ್ಯಾರೆಟ್ ಕೃಷಿ ಮಾಡುತ್ತಿರುವ ಶ್ರೀಮತಿ ಆಂಟಿಲ್ ಕಳೆದ ಎರಡು ತಿಂಗಳಿನಿಂದ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ಸಿಂಘುವಿ‌ನಿಂದ ಮನೆಗೆ ಆಗಾಗ ಹೋಗಿ ಬರುತ್ತಿದ್ದಾರೆ. "ನಾನು ಸಿಂಘುವಿಗೆ ಬಂದಾಗ, ನನ್ನ ಪತಿ ನಮ್ಮ 10 ವರ್ಷದ ಮಗ ಮತ್ತು 17 ವರ್ಷದ ಮಗಳನ್ನು ನೋಡಿಕೊಳ್ಳುತ್ತಾರೆ. ಇಂದು ಗಣರಾಜ್ಯೋತ್ಸವದಂದು ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಒಟ್ಟಿಗೆ ಬಂದವು. ನಡೆಯುತ್ತಿರುವ ಪ್ರತಿಯೊಂದೂ ಎಲ್ಲರಿಗೂ ನಷ್ಟವುಂಟು ಮಾಡಲಿದೆ. ಸುಮಾರು 200 ರೈತರು ಪ್ರಾಣ ಕಳೆದುಕೊಂಡಿದ್ದಾರೆ, ಸರ್ಕಾರ ಈಗ ಹಿಂದೆ ಸರಿಯಬೇಕಾಗಿದೆ. ಈ ಎಲ್ಲ ಕೃಷಿ ಕಾನೂನುಗಳಿಂದ ಅಂಬಾನಿ ಮತ್ತು ಅದಾನಿ ಮಾತ್ರ ಪ್ರಯೋಜನ ಪಡೆಯುತ್ತಾರೆ, ನಾವಲ್ಲ.”

ದಿನ ಕಳೆದಂತೆ, ಸೂರ್ಯ ಮುಳುಗಿದನು ಮತ್ತು ಐಟಿಒಗೆ ಬಂದ ಕೆಲವು ಟ್ರಾಕ್ಟರುಗಳು ಅವುಗಳ ಮೂಲ ಗಡಿಗಳಿಗೆ ಹಿಂತಿರುಗಲು ಪ್ರಾರಂಭಿಸಿದವು. ರಾಜಧಾನಿಯು ಇಂದಿನ ನಾಗರಿಕರ ಗಣರಾಜ್ಯ ಆಚರಣೆಯ ಭವ್ಯವಾದ ಮೆರವಣಿಗೆ ಮತ್ತು ದುರಂತ, ದುಷ್ಟತನ ಮತ್ತು ಮಾರಣಾಂತಿಕ ನಾಟಕೀಯ ತಿರುವುಗಳಿಗೆ ಸಾಕ್ಷಿಯಾಯಿತು.

ಅನುವಾದ - ಶಂಕರ ಎನ್. ಕೆಂಚನೂರು

Shalini Singh

Shalini Singh is a journalist based in Delhi, and a member of PARI's founding team.

Other stories by Shalini Singh
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru