ಅವರು ಮೊದಲಿಗೆ ತಾನು ಅಂಗಡಿಯ ಮಾಲಿಕನಲ್ಲ ಎಂದು ಹೇಳಿದರು, ಕೇವಲ ಅಂಗಡಿ ಮಾಲಿಕನ ಸ್ನೇಹಿತ ತಾನು ಎಂದರು. ನಂತರ ತನ್ನನ್ನು ತಾನು “ಮಾಲಿಕರ ಸ್ನೇಹಿತನನ್ನಾಗಿ” ಪರಿಚಯಿಸಿಕೊಂಡರು. ಮತ್ತು ಅದಾದ ಸ್ವಲ್ಪ ಹೊತ್ತಿನ ನಂತರ ಆತ “ಆ ಅಂಗಡಿಯಲ್ಲಿ ಕೆಲಸ ಮಾಡುವ ಮಾಲಿಕರ ಸ್ನೇಹಿತ” ಆದರು. ಬಹುಶಃ ನಾವು ಈ ಪ್ರಶ್ನೆಯನ್ನು ಇನ್ನಷ್ಟು ಹಿಗ್ಗಿಸಿದಿದ್ದರೆ ಅವರು ಅಂಗಡಿಯ ಮಾಲಿಕರೂ ಆಗಿಯೇಬಿಡುತ್ತಿದ್ದರೇನೋ.

ಅವರ ಫೋಟೊ ತೆಗೆಸಿಕೊಳ್ಳಲು ಅವರು ಒಪ್ಪಲಿಲ್ಲ. ಅಂಗಡಿಯ ಒಳಗೆ ಫೋಟೊ ತೆಗೆಯುವುದಕ್ಕೂ ಅವರಿಗೆ ಒಪ್ಪಿಗೆಯಿರಲಿಲ್ಲ. ಆದರೂ, ಹೊರಗೆ ಹಾಕಲಾಗಿದ್ದ ಬೋರ್ಡಿನ ಫೋಟೊ ತೆಗೆಯಲು ಅವರಿಗೆ ಒಪ್ಪಿಗೆಯಿತ್ತು.

ಅಂಗಡಿಯಿಂದ ಒಂದಷ್ಟು ದೂರದಲ್ಲಿ – ವಿದೇಶಿ ಶರಾಬ್‌ ದುಕಾನ್‌‌, (ವಿದೇಶಿ ಸಾರಾಬು ಅಂಗಡಿ) ಲೆಸೆನ್ಸ್:‌ ರಮೇಶ್ ಪ್ರಸಾದ್, ಎಂದು ಬರೆಯಲಾಗಿದ್ದ ಬೋರ್ಡ್‌ ಇತ್ತು. ಈ ಅಂಗಡಿಯು ಈಗಿನ ಛತ್ತೀಸಗಢದ (ಆಗಿನ ಮಧ್ಯಪ್ರದೇಶ ರಾಜ್ಯದಲ್ಲಿ) ಸುರ್ಗುಜಾ ಜಿಲ್ಲೆಯ ಕಟ್ಘೋರಾ ಪಟ್ಟಣದ ತುದಿಯಲ್ಲಿತ್ತು. ಆದರೆ ನಮ್ಮೊಡನೆ ಕ್ಷಣಕ್ಷಣಕ್ಕೂ ಪರಿಚಯ ಬದಲಿಸಿಕೊಳ್ಳುತ್ತಿದ್ದ ವ್ಯಕ್ತಿ ರಮೇಶ್‌ ಪ್ರಸಾದ್‌ ಆಗಿರಲಿಲ್ಲ. ಈ ವ್ಯಕ್ತಿಗೆ ಈ ವಿದೇಶಿ ಮದ್ಯದಂಗಡಿಯೊಡನೆ ಇರುವ ಸಂಬಂಧವೆಂದರ ಆತ ಇಲ್ಲಿನ ಗ್ರಾಹಕ ಮಾತ್ರವೆನ್ನುವ ನಂಬಿಕೆ ನಮಗೆ ಬರತೊಡಗಿತು.

ಅದು ನಿಜವಾಗಿಯು ವಿದೇಶಿ ಮದ್ಯವಾಗಿತ್ತೆ? ಹಾಗೆ ನೋಡಿದರೆ ಅಲ್ಲ. ಐಎಮ್‌ಎಫ್‌ಎಲ್‌ ಎನ್ನುವ ಪದವನ್ನು ನಾನು ಕೊನೆಯ ಬಾರಿ ಯಾವಾಗ ಕೇಳಿದ್ದೆನ್ನುವುದು ನನಗೂ ನೆನಪಿಲ್ಲ. ಇದರ ಅರ್ಥ ಇಂಡಿಯನ್‌ ಮೇಡ್‌ ಫಾರಿನ್‌ ಲಿಕ್ಕರ್‌. (ಭಾರತದಲ್ಲಿ ಉತ್ಪಾದಿಸಲಾದ ವಿದೇಶಿ ಮದ್ಯ) 1994ರಲ್ಲಿ ಈ ಚಿತ್ರ ತೆಗೆದುಕೊಂಡ ಸಮಯದಲ್ಲಿ ಐಎಂಎಫ್ ಎಲ್ ಮತ್ತು ದೇಸಿ ಮದ್ಯದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿತ್ತು.

ಲಾ ಇನ್ ಸೈಡರ್ ವೆಬ್ ಸೈಟ್ ಮೂಲಕ ನಾನು ತಿಳಿದಂತೆ, "ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಜಿನ್, ಬ್ರಾಂಡಿ, ವಿಸ್ಕಿ ಅಥವಾ ರಮ್‌ನ ವಿಧಾನದ ನಂತರ ಭಾರತದಲ್ಲಿ ಉತ್ಪಾದಿಸಲಾದ, ತಯಾರಿಸಿದ ಅಥವಾ ಸಂಯುಕ್ತಗೊಳಿಸಿದ ಮದ್ಯ ಎಂದರ್ಥ ಮತ್ತು ಅಂತಹ ಯಾವುದೇ ಸ್ಪಿರಿಟ್‌ಗಳನ್ನು ಒಳಗೊಂಡ ಅಥವಾ ಒಳಗೊಂಡಿರುವ ಮಿಲ್ಕ್ ಪಂಚ್ ಮತ್ತು ಇತರ ಮದ್ಯಗಳನ್ನು ಒಳಗೊಂಡಿದೆ, ಆದರೆ ಬಿಯರ್, ವೈನ್ ಮತ್ತು ವಿದೇಶಿ ಮದ್ಯವನ್ನು ಒಳಗೊಂಡಿಲ್ಲ." ಗಮನಿಸಿ ಇದು "ಬಿಯರ್, ವೈನ್ ಮತ್ತು ವಿದೇಶಿಮದ್ಯ"‌ವನ್ನು ತನ್ನ ಪಟ್ಟಿಯಿಂದ ಹೊರಗಿಡುತ್ತದೆ.

ಐಎಂಎಫ್ಎಲ್ ಆಮದು ಮಾಡಿದ ಮದ್ಯ ಮತ್ತು ಕಡ್ಡಾಯ ದೇಶೀಯ ಘಟಕ (ಬಹುಶಃ ಕಾಕಂಬಿ ಅಥವಾ ಬಹುಶಃ ಆಮದು ಮಾಡಿದ ವಸ್ತುಗಳ ಸ್ಥಳೀಯ ಮಿಶ್ರಣ ಅಥವಾ ಬಾಟ್ಲಿಂಗ್) ಎರಡನ್ನೂ ಒಳಗೊಂಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಮಗೆ ನಿಜವಾಗಿಯೂ ತಿಳಿದಿಲ್ಲ.

PHOTO • P. Sainath

ಈ ವಿಷಯದಲ್ಲಿ ದೇಸಿ ಮದ್ಯ ತಯಾರಕರ ಕೋಪವು ಸಮರ್ಥನೀಯವಾಗಿತ್ತು.  ಶೇಂದಿ, ಸಾರಾಯಿ, ಇತರ ದೇಸಿ ವಸ್ತುಗಳನ್ನು ನಿರಂತರವಾಗಿ ಒಂದಲ್ಲ ಒಂದು ರಾಜ್ಯದಲ್ಲಿ ನಿಷೇಧಿಸಲಾಗುತ್ತಿತ್ತು. ಆದರೆ ಐಎಂಎಫ್ಎಲ್ ಅನ್ನು ಪ್ರೋತ್ಸಾಹಿಸಲಾಗುತ್ತಿತ್ತು. ನಾವು ವಿದೇಶಿ ಶರಬ್ ದುಕಾನ್ ಅನ್ನು ನೋಡುತ್ತಾ ನಿಂತ ಘಳಿಗೆ, 1993ರಲ್ಲಿ ತಮಿಳುನಾಡಿನ ಪುದುಕೋಟೈಯಲ್ಲಿ ನಾನು ನೋಡಿದ್ದನ್ನು ನಾನು ನೆನಪಿಸಿಕೊಂಡೆ – ಅದು ಇಲ್ಲಿಂದ 1,700 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ, ನಾನು ಭೇಟಿಯಾಗಲು ಹೋಗಿದ್ದ ಸಾರಾಯಿ ನಿರೋಧಕ ಅಧಿಕಾರಿಗಳು ದಕ್ಷಿಣ ತಮಿಳುನಾಡಿನಲ್ಲಿ ಐಎಂಎಫ್ಎಲ್ ಮಳಿಗೆಗಳನ್ನು ಕರೆಯುತ್ತಿದ್ದಂತೆ 'ಬ್ರಾಂಡಿ ಅಂಗಡಿಗಳನ್ನು' ಹರಾಜು ಮಾಡುವಲ್ಲಿ ನಿರತರಾಗಿದ್ದರು. ಕಾನೂನುಬದ್ಧ ಆಲ್ಕೋಹಾಲ್ ಮಾರಾಟದಿಂದ ಅಬಕಾರಿ ಆದಾಯದ ಮೇಲೆ ಪರಿಣಾಮ ಬೀರಿದ್ದರಿಂದ ಸಾರಾಯಿ ಅವರ ಪಾಲಿಗೆ ಕೆಡುಕಾಗಿ ಕಂಡಿತ್ತು.

ಒಂದು ಸಾರ್ವಜನಿಕ ಸಭೆಯಲ್ಲಿ, ನಿಷೇಧವನ್ನು ಅಧಿಕಾರಿಗಳು ಪ್ರಚಾರ ಮಾಡುತ್ತಿದ್ದಾಗ ಡಿಎಂಕೆ ಕಾರ್ಯಕರ್ತರೊಬ್ಬರು ಪ್ರಮುಖ ಕಂದಾಯ ಅಧಿಕಾರಿಗೆ 5 ರೂ.ಗಳನ್ನು ನೀಡಿ ಮುಜುಗರ ಹುಟ್ಟಿಸಿದ್ದರು. ಇದು ಬ್ರಾಂಡಿ ಅಂಗಡಿಗಳನ್ನು ಉತ್ತೇಜಿಸುತ್ತಾ ಕುಡಿತದ ದುಷ್ಪರಿಣಾಮಗಳ ವಿರುದ್ಧದ ನೀವು ಹೋರಾಟಕ್ಕೆ ನಾವು ಸಲ್ಲಿಸುತ್ತಿರುವ ಗೌರವ ಎಂದು ಅವರು ಹೇಳಿದ್ದರು.

ಮತ್ತೆ 1994ರ ಕಟ್ಘೋರಾಕ್ಕೆ ಮರಳುವುದಾದರೆ, ನಾವು ಅಲ್ಲಿಗೆ ಹೋಗಿದ್ದು ಬಹಳ ತಡವಾಗಿತ್ತು ಎನ್ನುವುದು ನಮ್ಮ ಅರಿವಿಗೆ ಬಂತು. ತನಗೆ ತಾನೇ ನಮಗೆ ಮಾರ್ಗದರ್ಶಿಯಾಗಿ ಒದಗಿದ್ದ ವ್ಯಕ್ತಿಯನ್ನು ನಾವು ಒಂದಿಷ್ಟು ಅಲುಗಾಡಿಸಿ ಮಾತಿಗೆಳೆದೆವಾದರೂ ಅವರು ಈಗಾಗಲೇ ವಿದೇಶಿ ಪ್ರಭಾವಕ್ಕೆ ಒಳಗಾಗಿದ್ದರು. ಕೊನೆಗೂ ನಮಗೆ ವಿದೇಶ್‌ ಶರಾಬ್‌ ದುಖಾನಿನ ರಮೇಶ್‌ ಪ್ರಸಾದ್‌ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಾವು ಮೂರು ಗಂಟೆ ಹೊತ್ತಿನಲ್ಲಿ ಅಂಬಿಕಾಪುರಕ್ಕೆ ಹೋಗಬೇಕಿದ್ದರಿಂದ ದೇಸಿ ಹೆದ್ದಾರಿ ಹಿಡಿದು ಹೊರಟೆವು.

ಈ ಡಿಸೆಂಬರ್ 22ರ ಸಂದರ್ಭದಲ್ಲಿ ಮಧ್ಯಪ್ರದೇಶದ ಅಬಕಾರಿ ಸಚಿವ ಜಗದೀಶ್ ದೇವ್ಡಾ ಅವರು ರಾಜ್ಯ ವಿಧಾನಸಭೆಗೆ (ಒಂದು ರೀತಿಯ ಹೆಮ್ಮೆಯಿಂದ) "2020-21ರಲ್ಲಿ ಐಎಂಎಫ್‌ಎಲ್ ನ ಸೇವನೆ 420.65 ಲಕ್ಷ ಪ್ರೂಫ್ ಲೀಟರುಗಳಿಗೆ ಏರಿಕೆಯಾಗಿದ್ದು, 2010-11ರಲ್ಲಿನ 341.86 ಲಕ್ಷ ಪ್ರೂಫ್ ಲೀಟರುಗಳಿಗೆ ಹೋಲಿಸಿದರೆ ಶೇ.23.05ರಷ್ಟು ಹೆಚ್ಚಳವನ್ನು ದಾಖಲಿಸಿದೆ" ಎಂದು ಹೇಳಿದಾಗ ನನಗೆ ಐಎಂಎಫ್‌ಎಲ್ ನೆನಪಾಯಿತು.

ಹಾಗೆಯೇ ಪ್ರೂಫ್ ಲೀಟರುಗಳಲ್ಲಿನ 'ಪ್ರೂಫ್' ಎಂದರೇನು? ಇದು ಶತಮಾನಗಳ ಹಿಂದೆ ಇಂಗ್ಲೆಂಡಿನಲ್ಲಿ ಮದ್ಯದಲ್ಲಿನ ಮದ್ಯಸಾರದ ಪ್ರಮಾಣ ಅಥವಾ ಮಟ್ಟವನ್ನು ಪರಿಶೀಲಿಸಲು ಮಾಡುವ ಪರೀಕ್ಷೆಯಾಗಿ ಹುಟ್ಟಿಕೊಂಡಿತು. ಆಲ್ಕೋಹಾಲ್ ಅಂಶದ ಅಳತೆಯಾಗಿ ಈ ರೀತಿಯ 'ಪ್ರೂಫ್' ಈಗ ಬುತೇಕ ಐತಿಹಾಸಿಕವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆಹ್, ಸರಿ, ಮಧ್ಯಪ್ರದೇಶ - ಸಚಿವ ದೇವ್ಡಾ ವಾದಿಸಬಹುದು – ಈಗಲೂ ಇದು ಇತಿಹಾಸವನ್ನು ರಚಿಸುತ್ತಿದೆ ಎಂದು. ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಶೇಕಡಾ 23ರಷ್ಟು ಏರಿದ ಅದೇ ದಶಕದಲ್ಲಿ, ದೇಸಿ ಮದ್ಯವು ಶೇಕಡಾ 8.2ರಷ್ಟು ಏರಿಕೆ ಕಂಡಿತು - ಅದರ ಒಟ್ಟು ಬಳಕೆಯ ಸಂಖ್ಯೆ ಈಗಲೂ ಐಎಂಎಫ್ಎಲ್‌ಗಿಂತ ಎರಡು ಪಟ್ಟು ಹೆಚ್ಚಾಗಿದೆ. ಆದ್ದರಿಂದ ದೇಸಿ ಹೆಚ್ಚು ಉಳಿದಿದೆ, ಆದರೆ ವಿದೇಶಿ ಅದರ ಬೆಳವಣಿಗೆಯ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಸ್ವಾಭಿಮಾನಿ ದೇಶಭಕ್ತರನ್ನು ಗೊಂದಲಕ್ಕೀಡು ಮಾಡುವಂತಹ ವಿರೋಧಾಭಾಸವಿದು.

ಅನುವಾದ: ಶಂಕರ. ಎನ್. ಕೆಂಚನೂರು

P. Sainath
psainath@gmail.com

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought'.

Other stories by P. Sainath
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru