ರಕ್ತ ಹೊರತೆಗೆಯುವುದು ಸುಮಾರು 3,000 ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯಾಗಿದೆ.
ಈ ಕಲ್ಪನೆಯ ಮೂಲವು ಮೂಲತಃ ಹಿಪೊಕ್ರೆಟಿಸ್‌ನಿಂದ ಪ್ರಾರಂಭವಾಯಿತು ಮತ್ತು ಮಧ್ಯಯುಗದಲ್ಲಿ ಯುರೋಪಿನಲ್ಲಿ ಬಹಳ ಜನಪ್ರಿಯವಾಗಿತ್ತು: ದೇಹದ ನಾಲ್ಕು ಬಗೆಯ ದೋಷಗಳಿವೆ - ರಕ್ತ, ಕಫ, ಕಪ್ಪು ಪಿತ್ತರಸ ಮತ್ತು ಹಳದಿ ಪಿತ್ತರಸ - ಇವುಗಳ ಸಮತೋಲನವು ತೊಂದರೆಗೊಳಗಾದಾಗ, ರೋಗವು ಸಂಭವಿಸುತ್ತದೆ. ಹಿಪೊಕ್ರೆಟಿಸ್‌ನ ಸುಮಾರು 500 ವರ್ಷಗಳ ನಂತರ, ಇವುಗಳಲ್ಲಿ ಪ್ರಮುಖವಾದದ್ದು ರಕ್ತ ಎಂದು ಗ್ಯಾಲೆನ್ ಘೋಷಿಸಿದರು. ಈ ಆಲೋಚನೆ ಮತ್ತು ಶಸ್ತ್ರಚಿಕಿತ್ಸೆಯಲ್ಲಿನ ವಿವಿಧ ಪ್ರಯೋಗಗಳು, ಮತ್ತು ಕೆಲವೊಮ್ಮೆ ಮೂಢನಂಬಿಕೆ, ರೋಗಿಯ ಜೀವವನ್ನು ಉಳಿಸಲು ದೇಹದಿಂದ ರಕ್ತವನ್ನು ತೆಗೆದುಹಾಕುವ ಅಥವಾ ಕೆಟ್ಟ ರಕ್ತ ಬಸಿದು ತೆಗೆಯುವ ಅಭ್ಯಾಸಕ್ಕೆ ಕಾರಣವಾಯಿತು.
ಹಿರುಡೋ ಮೆಡಿಸಿನಾಲಿಸ್ ಲೀಚ್ ಸೇರಿದಂತೆ ರಕ್ತ ಹೊರತೆಗೆಯುವುದಕ್ಕಾಗಿ ಜಿಗಣೆಗಳನ್ನು ಬಳಸಲಾಗುತ್ತಿತ್ತು. ಈ ಚಿಕಿತ್ಸೆಗೆ 3,000 ವರ್ಷಗಳಲ್ಲಿ ಎಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು, ಎಷ್ಟು ಮಾನವರು ಶವಗಳಾಗಿ ಬದಲಾದರು, ಅವರ ವೈದ್ಯರ ಔಷಧೀಯ-ಸೈದ್ಧಾಂತಿಕ ಭ್ರಮೆಗಳಿಂದ ರಕ್ತಸ್ರಾವಕ್ಕೊಳಗಾಗಿ ಸಾವನ್ನಪ್ಪಿದರು ಎನ್ನುವ ಲೆಕ್ಕ ನಮಗೆ ಸಿಗುವುದಿಲ್ಲ. ಇಂಗ್ಲೆಂಡ್‌ನ ರಾಜ ಚಾರ್ಲ್ಸ್ II ಅವರು ಸಾಯುವ ಮುನ್ನ ಅವರ ದೇಹದಿಂದ 24 ಔನ್ಸ್ ರಕ್ತವನ್ನು ತೆಗೆಯಲಾಗಿತ್ತು ಎನ್ನುವುದು ನಮಗೆ ತಿಳಿದಿದೆ. ಜಾರ್ಜ್ ವಾಷಿಂಗ್ಟನ್‌ನ ಮೂವರು ವೈದ್ಯರು ಆತನ ಗಂಟಲಿನ ಸೋಂಕನ್ನು ಗುಣಪಡಿಸಲು ಸಾಕಷ್ಟು ಪ್ರಮಾಣದ ರಕ್ತವನ್ನು (ಅವರ ಸ್ವಂತ ಕೋರಿಕೆಯ ಮೇರೆಗೆ) ಹರಿಸಿದರು - ಇದರ ಪರಿಣಾಮವಾಗಿ ಆತ ಶೀಘ್ರದಲ್ಲೇ ನಿಧನ ಹೊಂದಿದನು.
ಕೋವಿಡ್ -19 ನಮ್ಮೆದುರು ನವ ಉದಾರೀಕರಣದ ಅದ್ಭುತವೆನ್ನಿಸುವ, ಸಂಪೂರ್ಣ ಶವಪರೀಕ್ಷೆಯ ವರದಿಯನ್ನು ನಮ್ಮೆದುರಿಗಿಟ್ಟಿತು, ಅದು ವಾಸ್ತವದಲ್ಲಿ ಹೇಳಿರುವುದು ಬಂಡವಾಳಶಾಹಿಯ ಬಗ್ಗೆ. ಈಗ ಬಂಡವಾಳಶಾಹಿಯ ದೇಹವು ಮೇಜಿನ ಮೇಲೆ, ಬೆರಗುಗೊಳಿಸುವ ಬೆಳಕಿನಡಿ ಮಲಗಿದೆ, ಅದರ ಪ್ರತಿಯೊಂದು ರಕ್ತನಾಳ, ಅಪಧಮನಿ, ಅಂಗ ಮತ್ತು ಮೂಳೆ ನಮ್ಮ ಮುಖವನ್ನು ದಿಟ್ಟಿಸುತ್ತಿದೆ. ಖಾಸಗೀಕರಣ, ಸಾಂಸ್ಥಿಕ ಜಾಗತಿಕತೆ, ಸಂಪತ್ತಿನ ಅತಿಯಾದ ಸಂಗ್ರಹಣೆ, ಇತ್ತೀಚಿನ ಸ್ಮರಣೆಯಲ್ಲಿ ಎಂದಿಗೂ ಕಾಣದ ಅಸಮಾನತೆಯ ಮಟ್ಟವನ್ನು ನೀವು ಅದರಲ್ಲಿ ನೋಡಬಹುದು. ಸಾಮಾಜಿಕ ಮತ್ತು ಆರ್ಥಿಕ ದುಷ್ಕೃತ್ಯಗಳಿಗೆ ರಕ್ತ ಬಸಿಯುವ ಸಿದ್ಧಾಂತ, ಸಮಾಜಗಳು ತಮ್ಮ ಸುಸಂಸ್ಕೃತ ಮತ್ತು ಘನತೆಯ ಮಾನವ ಅಸ್ತಿತ್ವವನ್ನು ದುಡಿಯುವ ಜನರಿಂದ ಕಸಿದುಕೊಳ್ಳುತ್ತಿರುವುದು ಈ ಶವಪರೀಕ್ಷೆಯಲ್ಲಿ ಎದ್ದು ಕಂಡಿದೆ.
3,000 ವರ್ಷಗಳಷ್ಟು ಹಳೆಯದಾದ ಈ ಚಿಕಿತ್ಸೆಯು ಯುರೋಪಿನಲ್ಲಿ 7ನೇ ಶತಮಾನದಲ್ಲಿ ಉತ್ತುಂಗಕ್ಕೇರಿತು. 7 ಮತ್ತು 8ನೇ ಶತಮಾನಗಳ ಕೊನೆಯಲ್ಲಿ ಇದರ ಬಳಕೆ ಕ್ಷೀಣಿಸಲು ಪ್ರಾರಂಭಿಸಿತು - ಆದರೆ ಇದರ ತತ್ವಗಳು ಮತ್ತು ಅಭ್ಯಾಸಗಳು ಈಗಲೂ ಅರ್ಥಶಾಸ್ತ್ರ, ತತ್ವಶಾಸ್ತ್ರ, ವ್ಯಾಪಾರ ಮತ್ತು ಸಮಾಜದಲ್ಲಿ ಪ್ರಾಬಲ್ಯ ಹೊಂದಿವೆ.
ಬಹುಶ ನಮ್ಮ ಸುತ್ತಮುತ್ತಲಿನ ಕೆಲವು ಶಕ್ತಿಶಾಲಿ ಸಾಮಾಜಿಕ ಮತ್ತು ಆರ್ಥಿಕ ವೈದ್ಯರು ಮಧ್ಯಕಾಲೀನ ಯುರೋಪಿನ ವೈದ್ಯರಂತೆಯೇ ವ್ಯಾಖ್ಯಾನಿಸುತ್ತಾರೆ. ಕೌಂಟರ್ ಪಂಚ್‌ನ ಸ್ಥಾಪಕ ಸಂಪಾದಕ ದಿವಂಗತ ಅಲೆಕ್ಸಾಂಡರ್ ಕಾಕ್‌ಬರ್ನ್ ಒಮ್ಮೆ ಹೇಳಿದಂತೆ, ಮಧ್ಯಕಾಲೀನ ವೈದ್ಯರು ತಮ್ಮ ರೋಗಿಗಳನ್ನು ಕಳೆದುಕೊಂಡಾಗ, ಅವರು ದುಃಖದಿಂದ ತಲೆ ಅಲ್ಲಾಡಿಸಿ ಹೀಗೆ ಹೇಳುತ್ತಿದ್ದರು: "ನಾವು ಅವನಿಂದ ಸಾಕಷ್ಟು ರಕ್ತ ಹೊರತೆಗೆಯಲಿಲ್ಲ." ಅಂತೆಯೇ, ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ತಮ್ಮ ಅದ್ಭುತ ಮತ್ತು ಬೆರಗುಗೊಳಿಸುವ ಚಿಕಿತ್ಸಾ ವಿಧಾನಗಳಿಂದ ಉಂಟಾಗುವ ಭೀಕರ ಹಾನಿಯನ್ನು ಅನೇಕ ವರ್ಷಗಳಿಂದ ಸಾರುತ್ತಿವೆ, ನಿಖರವಾಗಿ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯು ದಶಕಗಳಿಂದ ಅವರ ಆಘಾತ ಮತ್ತು ವಿಸ್ಮಯ ಚಿಕಿತ್ಸೆಯ ಭೀಕರ ಹಾನಿ, ಕೆಲವೊಮ್ಮೆ ಜನಾಂಗೀಯ ಹತ್ಯೆಯ ರಚನಾತ್ಮಕ ಹೊಂದಾಣಿಕೆಗೆ ಕಾರಣವಾಗಿದೆ - ಅವರ 'ಸುಧಾರಣೆಗಳು' ತುಂಬಾ ದೂರ ಹೋಗಿದ್ದು ಇದಕ್ಕೆ ಕಾರಣವಲ್ಲ, ಆದರೆ ಅವರ ಸುಧಾರಣೆಗಳು, ಸಾಕಷ್ಟು ದೂರ ಹೋಗದಿರುವುದಕ್ಕೆ ಕಾರಣ, ಗಲಭೆಕೋರರು ಮತ್ತು ಕೊಳಕು ಜನರು ಅದನ್ನು ಜಾರಿಗೊಳಿಸಲು ಅನುಮತಿಸಲಿಲ್ಲ.
ಅಸಮಾನತೆಯು ಅಂತಹ ಅಪಾಯಕಾರಿ ವಿಷಯವಲ್ಲ. ಇದನ್ನು ಸೈದ್ಧಾಂತಿಕ ಹುಚ್ಚರು ವಾದಿಸುತ್ತಾರೆ. ಇದು ಸ್ಪರ್ಧೆ ಮತ್ತು ವೈಯಕ್ತಿಕ ಉಪಕ್ರಮವನ್ನು ಬೆಳೆಸಿತು. ಮತ್ತು ನಮಗೆ ಅದರ ಹೆಚ್ಚಿನ ಅಗತ್ಯವಿತ್ತು ಎನ್ನಲಾಗುತ್ತದೆ.
ಮಾನವೀಯತೆಯ ಭವಿಷ್ಯದ ಬಗ್ಗೆ ನಾವು ನಡೆಸುವ ಯಾವುದೇ ಚರ್ಚೆಗೆ ಅಸಮಾನತೆಯೇ ಈಗ ಕೇಂದ್ರವಾಗಿದೆ. ಆಳುವವರಿಗೆ ಇದು ತಿಳಿದಿದೆ.
ಕಳೆದ ಇಪ್ಪತ್ತು ವರ್ಷಗಳಿಂದ, ಯಾವುದೇ ಮಾನವ ಜನಾಂಗ ಸಂಬಂಧಿ ಸಮಸ್ಯೆ ಅಸಮಾನತೆಯೊಂದಿಗೆ ಸಂಬಂಧ ಹೊಂದಿದೆಯೆನ್ನುವ ಎಂಬ ಪ್ರತಿ ವಾದವನ್ನೂ ಅವರು ತೀವ್ರವಾಗಿ ನಿರಾಕರಿಸುತ್ತಾ ಬಂದಿದ್ದಾರೆ. ಹಿಂದಿನ ಸಹಸ್ರಮಾನದಲ್ಲಿ, ಬ್ರೂಕಿಂಗ್ಸ್ ಸಂಸ್ಥೆ ಅಸಮಾನತೆಯ ಮಾರಕ ಮಾತುಕತೆಯ ಬಗ್ಗೆ ಎಲ್ಲರಿಗೂ ಎಚ್ಚರಿಕೆ ನೀಡಿತ್ತು. ಕೋವಿಡ್ -19 ವಿಶ್ವಾದ್ಯಂತ ಹರಡುವ 90 ದಿನಗಳ ಮೊದಲು, ನವ ಉದಾರೀಕರಣದ ಪ್ರವಾದಿ ಎಂದು ಕರೆಯಲ್ಪಡುವ ದಿ ಎಕನಾಮಿಸ್ಟ್ ನಿಯತಕಾಲಿಕವು ಕೆಲವು ಮುನ್ಸೂಚನೆಗಳನ್ನು ನೀಡಿದೆ ಮತ್ತು ಕಹಿ ಲೇಖನವನ್ನು ಬರೆದಿದೆ:
ಇನ್‌ಈಕ್ವಾಲಿಟಿ ಇಲ್ಯೂಷನ್ಸ್:
ವೈ ವೆಲ್ತ್ ಎಂಡ್ ಇನ್‌ಕಮ್ ಗ್ಯಾಪ್ಸ್ ಆರ್ ನಾಟ್ ವಾಟ್ ದೇ ಅಪೀಯರ್ (ಅಸಮಾನತೆಯ ಭ್ರಮೆಗಳು: ಸಂಪತ್ತು ಮತ್ತು ಆದಾಯದ ಅಂತರಗಳು ಏಕೆ ಅವುಗಳು ಕಾಣಿಸುವಂತೆ ಅಲ್ಲ)
ಟಾರ್ಜನ್‌ನ ನಂತರದ ಅತ್ಯಂತ ಪ್ರಸಿದ್ಧವಾದ ಕೊನೆಯ ಪದಗಳಂತೆ ಇದನ್ನೂ ಬಳಸಬಹುದು - "ಈ ದ್ರಾಕ್ಷಿ ಬಳ್ಳಿಯನ್ನು ಇಷ್ಟು ಜಾರುವಂತೆ ಮಾಡಿದವರು ಯಾರು?"
ನಂತರ ಅದು ಆದಾಯ ಮತ್ತು ಸಂಪತ್ತಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಟೀಕಿಸುತ್ತದೆ, ಆ ವ್ಯಕ್ತಿಗಳ ಮೂಲಗಳನ್ನು ಪ್ರಶ್ನಿಸಲು ಪ್ರಯತ್ನಿಸುತ್ತದೆ; ಈ ಹಾಸ್ಯಾಸ್ಪದ ನಂಬಿಕೆಗಳು "ಧ್ರುವೀಕರಣ, ಸುಳ್ಳು ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ" ಮುಂದುವರಿಯುತ್ತದೆ ಎಂದು ಅದು ಹೇಳಿದೆ.
ನವ-ಉದಾರವಾದಿ ಮಂತ್ರ ವೈದ್ಯರ ಮಾತಿನ ಮಂತ್ರದ ನಡುವೆಯೂ ಕೋವಿಡ್ -19 ನಮ್ಮ ಕಣ್ಣುಗಳ ಮುಂದೆ ನಿಜವಾದ ಶವಪರೀಕ್ಷೆಯ ಫಲಿತಾಂಶವನ್ನು ತಂದಿರಿಸಿದೆ. ಆದರೂ ಅವರ ಸಿದ್ಧಾಂತವು ಇನ್ನೂ ಜೀವಂತವಾಗಿದೆ, ಮತ್ತು ಕಳೆದ ಮೂರು ತಿಂಗಳುಗಳಲ್ಲಿ ಈ ಬಿಕ್ಕಟಿನೊಂದಿಗೆ ಬಂಡವಾಳಶಾಹಿಗೆ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸಲು ಕಾರ್ಪೊರೇಟ್ ಮಾಧ್ಯಮಗಳು ಪ್ರಯತ್ನಿಸುತ್ತಲೇ ಇವೆ.
ಸಾಂಕ್ರಾಮಿಕ ಮಹಾಮಾರಿ ಮತ್ತು ಮಾನವೀಯತೆಯ ಸಂಭವನೀಯ ಅಂತ್ಯವನ್ನು ಚರ್ಚಿಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಆದರೆ ನವ ಉದಾರೀಕರಣ ಮತ್ತು ಬಂಡವಾಳಶಾಹಿಯ ಅಂತ್ಯವನ್ನು ಚರ್ಚಿಸಲು ನಾವು ಹಿಂಜರಿಯುತ್ತೇವೆ.
ಈ ಸಮಸ್ಯೆಯನ್ನು ನಾವು ಎಷ್ಟು ಬೇಗನೆ ನಿವಾರಿಸಬಹುದು ಮತ್ತು "ಸಹಜ(ನಾರ್ಮಲ್) ಸ್ಥಿತಿಗೆ ಮರಳಬಹುದು" ಎನ್ನುವುದರ ಹುಡುಕಾಟ ನಡೆಯುತ್ತಿದೆ. ಆದರೆ ಸಮಸ್ಯೆ ನಾರ್ಮಲ್ ಆಗುವ ಕುರಿತಾಗಿ ಅಲ್ಲ.
ಹಿಂದೆ ಯಾವುದನ್ನು ʼನಾರ್ಮಲ್ʼ ಎನ್ನಲಾಗುತ್ತಿತ್ತೋ ಆ ಸಹಜತೆಯೇ ಸಮಸ್ಯೆಯಾಗಿತ್ತು. (ಆಳುವ ವರ್ಗದ ಪಂಜರದ ಹಕ್ಕಿಗಳು ಈಗ ಹೊಸ ನುಡಿಗಟ್ಟು 'ನ್ಯೂ ನಾರ್ಮಲ್' ಅಥವಾ ಹೊಸ ಸಹಜತೆಯನ್ನು ವ್ಯಾಖ್ಯಾನಿಸುವಲ್ಲಿ ನಿರತರಾಗಿದ್ದಾರೆ).
ಕೋವಿಡ್ ಪೂರ್ವ ಸಹಜ ಕಾಲದಲ್ಲಿ - ಆಕ್ಸ್‌ಫ್ಯಾಮ್‌ನ ಜನವರಿ 2020ರ ವರದಿ ವಿಶ್ವದ 22 ಶ್ರೀಮಂತ ಪುರುಷರು ಆಫ್ರಿಕಾದ ಎಲ್ಲ ಮಹಿಳೆಯರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆಂದು ದಾಖಲಿಸಿತ್ತು.
ವಿಶ್ವದ 2,153 ಶತಕೋಟ್ಯಾಧಿಪತಿಗಳು ವಿಶ್ವದ ಜನಸಂಖ್ಯೆಯ 60 ಪ್ರತಿಶತದ ಒಟ್ಟು ಸಂಪತ್ತುಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ.
ಹೊಸ ನಾರ್ಮಲ್ ಎಂದರೆ: ವಾಷಿಂಗ್ಟನ್, ಡಿ.ಸಿ. ಇನ್‌ಸ್ಟಿಟ್ಯೂಟ್ ಆಫ್ ಪಾಲಿಸಿ ಸ್ಟಡೀಸ್ ಪ್ರಕಾರ, ಅಮೆರಿಕದ ಬಿಲಿಯನೇರ್‌ಗಳು ಸಾಂಕ್ರಾಮಿಕ ಮಹಾಮಾರಿಯ ಕೇವಲ ಮೂರು ವಾರಗಳಲ್ಲಿ - $282 ಬಿಲಿಯನ್ - 1990ರಲ್ಲಿ ಅವರು ಹೊಂದಿದ್ದ ಒಟ್ಟು ಸಂಪತ್ತಿಗಿಂತ ($240 ಬಿಲಿಯನ್) ಹೆಚ್ಚಿನ ಸಂಪತ್ತನ್ನು ಅವರ ಆಸ್ತಿಗೆ ಸೇರಿಸಿದೆ ಎಂದು ಹೇಳುತ್ತದೆ.
ಆಹಾರದ ಸಮೃದ್ಧಿಯ ಹೊರತಾಗಿಯೂ ಶತಕೋಟಿ ಜನರು ಹಸಿವಿನಿಂದ ಬಳಲುತ್ತಿರುವುದು ಭಾರತದ ಹಳೆಯ ನಾರ್ಮಲ್. ಭಾರತದಲ್ಲಿ, ಜುಲೈ 7ರ ಹೊತ್ತಿಗೆ, ಸರ್ಕಾರವು 91 ಮಿಲಿಯನ್ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಆಹಾರವನ್ನು ಹೊಂದಿತ್ತು - ಅಥವಾ ವಿಶ್ವದ ಅತ್ಯಂತ ಹಸಿದ ಜನರು. ಹೊಸ ನಾರ್ಮಲ್‌ನಲ್ಲಿ? ಸರ್ಕಾರವು ಆ ಧಾನ್ಯವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಉಚಿತವಾಗಿ ವಿತರಿಸುತ್ತದೆ, ಆದರೆ ದೊಡ್ಡ ಪ್ರಮಾಣದ ಅಕ್ಕಿಯನ್ನು ಎಥೆನಾಲ್ ಆಗಿ ಪರಿವರ್ತಿಸಲು ಅನುಮೋದನೆ ನೀಡುತ್ತದೆ - ಅದು ಹ್ಯಾಂಡ್ ಸ್ಯಾನಿಟೈಜರ್ ತಯಾರಿಕೆಗಾಗಿ .
ಹಳೆಯ ನಾರ್ಮಲ್ ಇದ್ದ ಕಾಲದಲ್ಲಿ ನಮ್ಮಲ್ಲಿ ಸುಮಾರು 50 ದಶಲಕ್ಷ ಟನ್‌ಗಳಷ್ಟು ಗೋದಾಮಿನಲ್ಲಿ ಬಿದ್ದಿತ್ತು. ಪ್ರೊ. ಜೀನ್ ಡ್ರೆಜ್ ಅವರು 2001ರಲ್ಲಿ ಇದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಿದ್ದರು; "ನಮ್ಮಲ್ಲಿರುವ ಧಾನ್ಯದ ಚೀಲಗಳನ್ನು ಸಾಲಾಗಿ ನಿಲ್ಲಿಸಿದರೆ ಒಂದು ಮಿಲಿಯನ್ ಕಿಲೋಮೀಟರ್ ಉದ್ದದ ಸಾಲಾಗುತ್ತದೆ, ಎಂದರೆ ಭೂಮಿಯಿಂದ ಚಂದ್ರನಲ್ಲಿಗೆ ಎರಡು ದಾರಿ ಮಾಡುವಷ್ಟು. ಈಗ ಹೊಸ ನಾರ್ಮಲ್‌ನಲ್ಲಿ ಆ ದಾಸ್ತಾನು ಸಂಖ್ಯೆ 104 ಮಿಲಿಯನ್ ಟನ್ ತಲುಪಿದೆ. ಹೌದು, ಚಂದ್ರನಲ್ಲಿಗೆ ಈಗಲೂ ಎರಡು ರಸ್ತೆಯಿದೆ ಒಂದು ಸೂಪರ್ ಶ್ರೀಮಂತರಿಗಾಗಿ ಇರುವ ಸೂಪರ್ ಹೈವೇ, ಇನ್ನೊಂದು ಆ ಶ್ರೀಮಂತರ ಸೇವೆ ಮಾಡಲು ಅಲ್ಲಿಗೆ ಹೋಗುವ ವಲಸಿಗರಿಗಾಗಿ ಇರುವ ಮಣ್ಣು, ಧೂಳಿನಿಂದ ಕೂಡಿದ ರಸ್ತೆ.
ಭಾರತದಲ್ಲಿ ʼನಾರ್ಮಲ್ʼ ಎಂದರೆ, 1991 ಮತ್ತು 2011ರ ನಡುವೆ 20 ವರ್ಷಗಳ ಅವಧಿಯಲ್ಲಿ ಪ್ರತಿ 24 ಗಂಟೆಗಳಿಗೆ 2,000ದ ದರದಲ್ಲಿ ಪೂರ್ಣಾವಧಿ ರೈತರು ತಮ್ಮ ವೃತ್ತಿಯಿಂದ ಹೊರಗುಳಿಯುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ಅವಧಿಯಲ್ಲಿ ರೈತರ ಸಂಖ್ಯೆಯಲ್ಲಿ 15 ಮಿಲಿಯನ್‌ನಷ್ಟು ಕಡಿಮೆಯಾಗಿದೆ .
ಇದಲ್ಲದೆ, 2 ರಿಂದ 3 ಮಿಲಿಯನ್ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ ಅಂಶಗಳು ತಿಳಿಸಿವೆ (ತೀರಾ ಕಡಿಮೆ ಅಂದಾಜಿನಂತೆ). ಲಕ್ಷಾಂತರ ಜನರು ಕೃಷಿ ಕಾರ್ಮಿಕರಾದರು ಅಥವಾ ಉದ್ಯೋಗ ಹುಡುಕಿಕೊಂಡು ತಮ್ಮ ಹಳ್ಳಿಗಳಿಂದ ವಲಸೆ ಬಂದರು - ಏಕೆಂದರೆ ಅನೇಕ ಕೃಷಿ ಸಂಬಂಧಿತ ವ್ಯವಹಾರಗಳು ಕಳೆದುಹೋಗಿವೆ.
ಹೊಸ ನಾರ್ಮಲ್: 1.3 ಬಿಲಿಯನ್ ಜನಸಂಖ್ಯೆಯಿರುವ ದೇಶವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಮೊದಲು ಈ ದೇಶದ ಪ್ರಧಾನಿ ಇಲ್ಲಿನ ಜನರಿಗೆ ನೀಡಿದ್ದು ಕೇವಲ ನಾಲ್ಕು ಗಂಟೆಗಳ ಸಮಯ. ಈ ನಡುವೆ ಹತ್ತಾರು ಮಿಲಿಯನ್ ವಲಸೆ ಕಾರ್ಮಿಕರು ತಮಗೆ ಬದುಕುಳಿಯಲು ಸಾಧ್ಯವಿರುವ ಏಕೈಕ ಸಾಧ್ಯತೆಯಾದ ತಮ್ಮ ಹಳ್ಳಿಗಳನ್ನು ತಲುಪಲು ಸಾವಿರಾರು ಕಿಲೋಮೀಟರ್ ನಡೆದೇ ಹೊರಟರು. ಅವರು ಹಾಗೆ ನಡೆದು ಹೊರಟಿದ್ದು ಮೇ ತಿಂಗಳ 43-47 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ.
ಕಳೆದ ಮೂರು ದಶಕಗಳಲ್ಲಿ ನಾವು ಹಾಳುಗೆಡವಿದ್ದ ಜೀವನೋಪಾಯದ ಮಾರ್ಗಗಳನ್ನು ಹುಡುಕುತ್ತಾ ಲಕ್ಷಾಂತರ ಜನರು ಮರಳುತ್ತಿದ್ದಾರೆ ಎನ್ನುವುದು ಹೊಸ ನಾರ್ಮಲ್.
ಮೇ ತಿಂಗಳು ಒಂದರಲ್ಲೇ ಸುಮಾರು 10 ಮಿಲಿಯನ್ ಜನರು ತಮ್ಮ ಊರುಗಳಿಗೆ ರೈಲಿನಲ್ಲಿ ಮರಳಿದರು . ಅದೂ ಈ ರೈಲುಗಳನ್ನು ಲಾಕ್‌ಡೌನ್ ಘೋಷಿಸಿದ ಒಂದು ತಿಂಗಳ ನಂತರ ಒಲ್ಲದ ಮನಸಿನಿಂದ ಸರಕಾರ ಓಡಿಸಿತು. ಈಗಾಗಲೇ ಹಸಿವಿನಿಂದ ಪರದಾಡುತ್ತಿದ್ದ ಜನರು ಬದುಕು ಉಳಿಸಿಕೊಳ್ಳಲು ಊರಿಗೆ ಹೊರಟಿದ್ದರೆ ಅವರಿಂದ ಸರಕಾರಿ ಸ್ವಾಮ್ಯದ ರೈಲು ಟಿಕೇಟ್ ಹಣವನ್ನು ವಸೂಲು ಮಾಡಿತು.
ನಾರ್ಮಲ್ ಎಂದರೆ ಅಗಾಧವಾದ ಖಾಸಗಿ ಆರೋಗ್ಯ ಕ್ಷೇತ್ರಗಳಾಗಿದ್ದವು. ಅವು ಎಷ್ಟು ದುಬಾರಿಯೆಂದರೆ ಯುನೈಟೆಡ್ ಸ್ಟೇಟ್‌ನ ಹೆಚ್ಚಿನ ಸಂಖ್ಯೆಯ ವೈಯಕ್ತಿಕ ಆರ್ಥಿಕ ದಿವಾಳಿಗೆ ಕಾರಣ ಅವರ ಆರೋಗ್ಯ ಸಂಬಂಧಿ ವೆಚ್ಚಗಳು. ಈ ದಶಕದಲ್ಲಿ ಒಂದೇ ವರ್ಷದಲ್ಲಿ ಆರೋಗ್ಯ ವೆಚ್ಚದ ಕಾರಣದಿಂದಾಗಿ 55 ದಶಲಕ್ಷ ಜನರು ಬಡತನ ರೇಖೆಗಿಂತ ಕೆಳಗಿಳಿದಿದ್ದಾರೆ .
ಹೊಸ ನಾರ್ಮಲ್: ಆರೋಗ್ಯ ರಕ್ಷಣೆಯ ಮೇಲೆ ಇನ್ನೂ ಹೆಚ್ಚಿನ ಕಾರ್ಪೊರೇಟ್ ನಿಯಂತ್ರಣ. ಮತ್ತು ಖಾಸಗಿ ಆಸ್ಪತ್ರೆಗಳು ಭಾರತದಂದತಹ ದೇಶಗಳಲ್ಲಿ ಇನ್ನಷ್ಟು ಲಾಭ ಗಳಿಸುವುದು . ಅದು ಅನೇಕ ವಿಷಯಗಳೊಂದಿಗೆ ಕೊವಿಡ್ ಟೆಸ್ಟ್‌ಗಳಿಂದ ಹಣ ಗಳಿಸುವುದೂ ಒಳಗೊಂಡಿದೆ . ಸ್ಪೇನ್ ಮತ್ತು ಐರ್ಲೆಂಡ್‌ನಂತಹ ಕೆಲವು ಬಂಡವಾಳಶಾಹಿ ರಾಷ್ಟ್ರಗಳು ಎಲ್ಲಾ ಖಾಸಗಿ ಆರೋಗ್ಯ ಸೌಲಭ್ಯಗಳನ್ನು ರಾಷ್ಟ್ರೀಕರಣಗೊಳಿಸಿದಂತೆಯೇ ಹೆಚ್ಚಿನ ಖಾಸಗಿ ನಿಯಂತ್ರಣದತ್ತ ಸಾಗುವುದು. ಹಿಂದೆ 90ರ ದಶಕದಲ್ಲಿ ಹೀಗೆಯೇ ಸ್ವೀಡನ್ ತನ್ನ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಿ ಅವುಗಳನ್ನು ಆರೈಕೆ ಮಾಡಿ ದಷ್ಟಪುಷ್ಟಗೊಳಿಸಿ ಮತ್ತೆ ಖಾಸಗಿ ಮಾಲಿಕತ್ವದ ಕೈಗೊಪ್ಪಿಸಿತ್ತು. ಸ್ಪೇನ್ ಮತ್ತು ಐರ್ಲೆಂಡ್ ಆರೋಗ್ಯ ಕ್ಷೇತ್ರದಲ್ಲೂ ಅದೇ ರೀತಿ ಮಾಡಲಿವೆ.
ವ್ಯಕ್ತಿಗಳು ಮತ್ತು ರಾಷ್ಟ್ರಗಳ ಋಣಭಾರವು ಬೆಳೆಯುತ್ತಲೇ ಹೋಗುವುದು ಹಳೆಯ ನಾರ್ಮಲ್ ಆಗಿತ್ತು. ಹೊಸ ನಾರ್ಮಲ್ ಯಾವುದೆಂದು ಊಹಿಸಿ?
ದೈನಂದಿನ ಆಚರಣೆಯಲ್ಲಿ, ಅನೇಕ ವಿಧಗಳಲ್ಲಿ, ಭಾರತದಲ್ಲಿ ಹೊಸ ನಾರ್ಮಲ್ ಹಳೆಯ ನಾರ್ಮಲ್‌ನಂತೆಯೇ ಇರುತ್ತದೆ. ನಾವು ಈಗಲೂ ಬಡವರನ್ನು ಸಾಂಕ್ರಾಮಿಕ ಹರಡುವ ವಾಹಕಗಳನ್ನಾಗಿಯೇ ನೋಡುತ್ತಿದ್ದೇವೆ. ಆದರೆ ವಿಮಾನದಲ್ಲಿ ಓಡಾಡುತ್ತಾ ಎರಡು ದಶಕಗಳ ಹಿಂದೆ ಕಾಯಿಲೆ ತಂದ ಮೇಲ್ವರ್ಗವನ್ನು ಮರೆತುಬಿಡುತ್ತೇವೆ.
ಕೌಟುಂಬಿಕ ಹಿಂಸಾಚಾರವು ಹತ್ತು ಲಕ್ಷ ಭಾರತೀಯ ಕುಟುಂಬಗಳಲ್ಲಿ ಯಾವಾಗಲೂ ‘ನಾರ್ಮಲ್’ ಆಗಿತ್ತು.
ಹೊಸ ನಾರ್ಮಲ್? ಕೆಲವು ರಾಜ್ಯಗಳಲ್ಲಿನ ಪುರುಷ ಪೊಲೀಸ್ ಮುಖ್ಯಸ್ಥರು ಸಹ ಇಂತಹ ಹಿಂಸಾಚಾರದ ಹೆಚ್ಚಳದ ಭೀತಿ ವ್ಯಕ್ತಪಡಿಸುತ್ತಿದ್ದಾರೆ ಜೊತೆಗೆ ಇಂತಹ ಪ್ರಕರಣಗಳು ಮೊದಲಿಗಿಂತಲೂ ಹೆಚ್ಚು ತೀವ್ರವಾಗಿ ವರದಿಯಾಗುತ್ತಿದೆ , ಏಕೆಂದರೆ ಲಾಕ್‌ಡೌನ್‌ನಿಂದಾಗಿ ‘ಅಪರಾಧಿ ಈಗ [ಹೆಚ್ಚುಕಾಲ] ಮನೆಯಲ್ಲಿರುತ್ತಾನೆ’.
ನವದೆಹಲಿಯಲ್ಲಿ ನಾರ್ಮಲ್ ಎನಿಸಿದ್ದ ಸಂಗತಿಯೆಂದರೆ, ಇದು ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗುವ ಓಟದಲ್ಲಿ ಬಹಳ ಹಿಂದೆಯೇ ಬೀಜಿಂಗ್ ಅನ್ನು ಸೋಲಿಸಿತ್ತು. ನಮ್ಮ ಪ್ರಸ್ತುತ ಬಿಕ್ಕಟ್ಟಿನ ಒಂದು ಆಹ್ಲಾದಕರ ಪರಿಣಾಮವೆಂದರೆ, ದೆಹಲಿಯ ಮೇಲಿನ ಆಕಾಶವು ಅನೇಕ ದಶಕಗಳ ಹಿಂದಿದ್ದಂತೆ ಸ್ವಚ್ಛವಾಗಿದೆ, ಅತ್ಯಂತ ಕೊಳಕು ಮತ್ತು ಅಪಾಯಕಾರಿ ಕೈಗಾರಿಕಾ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿವೆ.
ಹೊಸ ನಾರ್ಮಲ್: ಈ ಶುದ್ಧ ಗಾಳಿಯ ಕೂಗುಗಳನ್ನು ಬದಿಗಿರಿಸಿ. ಈ ಸಾಂಕ್ರಾಮಿಕ ಮಹಾಮಾರಿಯ ನಡುವೆ, ಕಲ್ಲಿದ್ದಲು ಉತ್ಪಾದನೆಯನ್ನು ಮಹತ್ತರವಾಗಿ ಹೆಚ್ಚಿಸುವ ಉದ್ದೇಶದಿಂದ ಹರಾಜಿನಲ್ಲಿ ಖಾಸಗಿ ವಲಯಕ್ಕೆ ಕಲ್ಲಿದ್ದಲು ಗಣಿಗಳನ್ನು ತೆರೆಯುವ ಮೂಲಕ ನಮ್ಮ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.
ಆದಾಗ್ಯೂ, ಹವಾಮಾನ ಬದಲಾವಣೆ ಎಂಬ ಪದವನ್ನು ಸಾರ್ವಜನಿಕ ಅಥವಾ ರಾಜಕೀಯ ಚರ್ಚೆಗಳಲ್ಲಿ ಬಳಸದಿರುವುದು ನಾರ್ಮಲ್ ಆಗಿತ್ತು. ಮಾನವ ಹಸ್ತಕ್ಷೇಪದಿಂದ ಉಂಟಾಗುವ ಈ ಹವಾಮಾನ ಬದಲಾವಣೆಗಳು ಭಾರತದ ಕೃಷಿಯನ್ನು ನಾಶಗೊಳಿಸುತ್ತಿವೆ.
ಹೊಸ ನಾರ್ಮಲ್ ಕೂಡ ಕೆಲವೊಮ್ಮೆ ಸ್ಟಿರಾಯ್ಡ್ ನೀಡಲಾದ ಹಳೆಯ ನಾರ್ಮಲ್ ಮಾತ್ರ.
ಭಾರತದ ವಿವಿಧ ರಾಜ್ಯಗಳು ಒಂದರ ನಂತರ ಒಂದರಂತೆ ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸಿವೆ ಅಥವಾ ಉಲ್ಲಂಘಿಸಿವೆ. ಎಂಟು ಗಂಟೆಗಳ ಪಾಳಿಗಳು ಕಾರ್ಮಿಕ ಕಾನೂನಿನ ಬೆನ್ನೆಲುಬು. ಈಗ ಅದನ್ನು 12 ಗಂಟೆಗಳ ಕಾಲಕ್ಕೆ ವಿಸ್ತರಿಸಲಾಗಿದೆ. ಮತ್ತು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ನಾಲ್ಕು ಗಂಟೆಗಳವರೆಗಿನ ದುಡಿತಕ್ಕೆ ಯಾವುದೇ ಹೆಚ್ಚುವರಿ ಭತ್ಯೆ ಇರುವುದಿಲ್ಲ. ಯಾವುದೇ ರೀತಿಯ ಸಂಘಟಿತ ಅಥವಾ ವೈಯಕ್ತಿಕ ಆಂದೋಲನದಲ್ಲಿ ಭಾಗವಹಿಸದಿರುವುದನ್ನು ಸೇರಿದಂತೆ ಉತ್ತರ ಪ್ರದೇಶ ಸರ್ಕಾರ ಅಸ್ತಿತ್ವದಲ್ಲಿರುವ 38 ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸಿದೆ.
1914ರಲ್ಲಿ ಎಂಟು ಗಂಟೆಗಳ ಶಿಫ್ಟ್ ಪ್ರಾರಂಭಿಸಿದ ಮೊದಲ ಬಂಡವಾಳಶಾಹಿಗಳಲ್ಲಿ ಹೆನ್ರಿ ಫೋರ್ಡ್ ಒಬ್ಬರು. ಇದನ್ನು ಪ್ರಾರಂಭಿಸಿದ ನಂತರದ ಎರಡು ವರ್ಷಗಳಲ್ಲಿ, ಫೋರ್ಡ್ ಮೋಟಾರ್ ಕಂಪನಿಯ ಲಾಭ ದ್ವಿಗುಣಗೊಂಡಿದೆ. ಈ ಸ್ಮಾರ್ಟ್ ಜನರು ಎಂಟು ಗಂಟೆಗಳ ನಂತರ, ಉತ್ಪಾದಕತೆ ತೀವ್ರವಾಗಿ ಇಳಿಯುತ್ತದೆ ಎಂದು ಕಂಡುಕೊಂಡರು. ಆದರೆ ಭಾರತದಲ್ಲಿ ಹೊಸ ನಾರ್ಮಲ್ ಏನೆಂದರೆ: ಭಾರತದ ಬಂಡವಾಳಶಾಹಿಗಳು ಸುಗ್ರೀವಾಜ್ಞೆಯ ಮೂಲಕವೂ ಕೆಲಸ ಮಾಡಲು ಒತ್ತಾಯಿಸಬೇಕೆಂದು ಬಯಸುತ್ತಾರೆ. ಮತ್ತು ಅವರ ತೇರನ್ನು ಅವರ ಹಿಂದೆ ನಿಂತು ಎಳೆಯುತ್ತಿರುವ ಮಾಧ್ಯಮಗಳು "ಉತ್ತಮ ಬಿಕ್ಕಟ್ಟನ್ನು ವ್ಯರ್ಥ ಮಾಡಬೇಡಿ" ಎನ್ನುವ ಮೂಲಕ ಈ ಅವಕಾಶವನ್ನು ವ್ಯರ್ಥ ಮಾಡದಂತೆ ನಮಗೆ ಪಾಠ ಹೇಳುತ್ತಿವೆ. ಕೊನೆಗೂ ಅವರು ಬಯಸುವುದೆಂದರೆ ಈಗಾಗಲೇ ಮೊಣಕಾಲೂರಿ ನಿಂತಿರುವ ಕಾರ್ಮಿಕರ ಮೇಲೆ ಹೊಸ ʼಕಾನೂನು ತಿದ್ದುಪಡಿಗಳನ್ನುʼ ತಂದು ಅವರ ರಕ್ತ ಹೀರಲು ಇನ್ನಷ್ಟು ಜಿಗಣೆಗಳನ್ನು ಕಾರ್ಮಿಕರ ಮೇಲೆ ಹಾಕುವುದು.
ಕೃಷಿ ಕ್ಷೇತ್ರದ ಸ್ಥಿತಿ ಕ್ಷೀಣಿಸುತ್ತಿದೆ. ಕಳೆದ 3-4 ದಶಕಗಳಲ್ಲಿ, ಲಕ್ಷಾಂತರ ತೃತೀಯ ಜಗತ್ತಿನ ಬಡ ರೈತರು ನಗದು ಬೆಳೆಗಳತ್ತ ಮುಖ ಮಾಡಿದ್ದಾರೆ. ಇದಕ್ಕೆ ಕಾರಣ ವಿಶ್ವಬ್ಯಾಂಕ್ ಮತ್ತು ಐಎಂಎಫ್ ದಮನಕಾರಿ ಶಕ್ತಿ ಮತ್ತು ದಬ್ಬಾಳಿಕೆ. ಇದಕ್ಕೆ ಬಳಸಲಾದ ಮಂತ್ರ: ನಗದು ಬೆಳೆಗಳನ್ನು ರಫ್ತು ಮಾಡುವುದು, ನಗದು ಸಂಪಾದಿಸುವುದು, ಡಾಲರ್ ದೇಶಕ್ಕೆ ಬಂದಾಗ ಬಡತನದಿಂದ ಹೊರಬರಬಹುದು ಎನ್ನುವುದು.
ಇದರ ಪರಿಣಾಮ ಏನಾಯಿತೆನ್ನುವುದು ನಮಗೆಲ್ಲ ತಿಳಿದೇ ಇದೆ. ಸಣ್ಣ ವಾಣಿಜ್ಯ ಬೆಳೆಗಾರರು ಅದರಲ್ಲೂ ಹತ್ತಿ ಬೆಳೆಗಾರರು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಲ್ಲಿ ದೊಡ್ಡ ಸಂಖ್ಯೆಯನ್ನು ಹೊಂದಿದ್ದಾರೆ. ಮತ್ತು ಹೆಚ್ಚು ಸಾಲವನ್ನು ಹೊಂದಿರುವ ಗುಂಪು ಕೂಡ ಇದೇ ಆಗಿದೆ.
ಈಗ ಅದು ಇನ್ನಷ್ಟು ಹದಗೆಟ್ಟಿದೆ. ರಬಿಯ ಹೆಚ್ಚಿನ ಬೆಳೆಗಳನ್ನು ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ಕೊಯ್ಲು ಮಾಡಲಾಗಿದೆ - ಆದರೆ ಅವು ಇನ್ನೂ ಮಾರಾಟವಾಗಿಲ್ಲ. ಮತ್ತು ಲಾಕ್‌ಡೌನ್ ಕಾರಣದಿಂದ ಬೇಗನೆ ಹಾಳಾಗುವ ಸರಕುಗಳು ಹೊಲಗಳಲ್ಲಿ ಕೊಳೆತು ಹೋಗಿವೆ. ಸಾವಿರಾರು ಕ್ವಿಂಟಾಲ್ ಹತ್ತಿ, ಕಬ್ಬು ಮತ್ತು ಇತರ ಬೆಳೆಗಳು (ಹತ್ತಿ, ಸಹಜವಾಗಿ) ಸೇರಿದಂತೆ
ಲಕ್ಷಾಂತರ ಕ್ವಿಂಟಾಲ್ ವಾಣಿಜ್ಯ ಬೆಳೆಗಳು ರೈತರ ಮನೆಗಳ ಛಾವಣಿಯ ಮೇಲೆ ಬಿದ್ದಿವೆ.
ಹಳೆಯ ನಾರ್ಮಲ್: ಮಾರಕ ಬೆಲೆ ಏರಿಳಿತಗಳು ಭಾರತ ಮತ್ತು ತೃತೀಯ ಜಗತ್ತಿನ ಸಣ್ಣ ನಗದು ಬೆಳೆಗಾರರನ್ನು ದುರ್ಬಲಗೊಳಿಸುತ್ತಿದ್ದವು. ಹೊಸ ನಾರ್ಮಲ್: ಈಗ ಕೊಯ್ಲು ಮಾಡಿ ಸಂಗ್ರಹಿಸಿಟ್ಟಿರುವ ಅವರ ಬೆಳೆಗಳನ್ನು ಯಾರು ಕೊಳ್ಳುತ್ತಾರೆ?
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಮಾತಿನಲ್ಲಿ, "ನಾವು ಪ್ರಸ್ತುತ ಎರಡನೇ ಮಹಾಯುದ್ಧದ ನಂತರದ ಭೀಕರ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದ್ದೇವೆ ಮತ್ತು 1870ರ ನಂತರದ ಮೊದಲ ಕುಸಿತವನ್ನು ಅನುಭವಿಸುತ್ತಿದ್ದೇವೆ. "ಪ್ರಪಂಚದಾದ್ಯಂತದ ಆದಾಯ ಮತ್ತು ಬಳಕೆ ಎರಡರಲ್ಲೂ ಭಾರಿ ಕಡಿತವಾಗುವುದನ್ನು ಭಾರತ ತಪ್ಪಿಸಲು ಸಾಧ್ಯವಿಲ್ಲ. ಮತ್ತು ಇದು ಇಲ್ಲಿನ ನಗದು ಬೆಳೆ ರೈತರನ್ನು ನಾಶಪಡಿಸುತ್ತದೆ. ಕಳೆದ ವರ್ಷ, ಚೀನಾ ನಮ್ಮ ದೇಶದ ಹತ್ತಿಯ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿತ್ತು. ಆದರೆ ಇಂದು, ಚೀನಾದೊಂದಿಗಿನ ನಮ್ಮ ಸಂಬಂಧವು ಕಳೆದ ಹಲವಾರು ದಶಕಗಳಿಗಿಂತ ಹೆಚ್ಚು ಹದಗೆಟ್ಟಿದೆ. ಮತ್ತು ಈಗ ಎರಡೂ ದೇಶಗಳು ಬಿಕ್ಕಟ್ಟಿನಲ್ಲಿವೆ. ಪ್ರಸ್ತುತ, ನಮ್ಮ ದೇಶದಲ್ಲಿ ಮತ್ತು ನಮ್ಮಂತಹ ಇತರ ದೇಶಗಳಲ್ಲಿ ದೊಡ್ಡ ಪ್ರಮಾಣದ ದಾಸ್ತಾನು ಹೊಂದಿರುವ ಹತ್ತಿ, ಕಬ್ಬು, ವೆನಿಲ್ಲಾ ಮತ್ತು ಇತರ ನಗದು ಬೆಳೆಗಳನ್ನು ಯಾರು ಖರೀದಿಸುತ್ತಾರೆ? ಮತ್ತು ಯಾವ ವೆಚ್ಚದಲ್ಲಿ?
ಮತ್ತು ಹೆಚ್ಚು ಹೆಚ್ಚು ಭೂಮಿಯನ್ನು ವಾಣಿಜ್ಯ ಬೆಳೆಗಳಿಗೆ ಮೀಸಲಿಟ್ಟು, ಈಗ ನಿರುದ್ಯೋಗ ವಿಪರೀತ ಹೆಚ್ಚಿ, ಆಹಾರದ ಕೊರತೆಯೂ ಎದುರಾದರೆ ಏನಾಗಬಹುದು? "...
ನಾವು ಐತಿಹಾಸಿಕ ಮಟ್ಟದ ಬರಗಾಲವನ್ನು ಎದುರಿಸಬೇಕಾಗಬಹುದು.
" ಎಂದು ಎಚ್ಚರಿಸುತ್ತಾರೆ ಗುಟೆರೆಸ್.
ಕೋವಿಡ್ -19 ಬಗ್ಗೆ ಗುಟೆರೆಸ್ ಹೇಳಿದ ಇನ್ನೊಂದು ವಿಷಯವಿದೆ: “ಇದು ಎಲ್ಲೆಡೆಯಲ್ಲಿನ ತಪ್ಪು ಮತ್ತು ಸುಳ್ಳುಗಳನ್ನು ಬಹಿರಂಗಪಡಿಸುತ್ತಿದೆ: ಮುಕ್ತ ಮಾರುಕಟ್ಟೆಗಳು ಎಲ್ಲರಿಗೂ ಆರೋಗ್ಯ ರಕ್ಷಣೆಯನ್ನು ನೀಡಬಲ್ಲವು ಎಂಬ ಸುಳ್ಳು; ಪಾವತಿಸದ ಆರೈಕೆ ಕೆಲಸವು ಕೆಲಸ ಮಾಡುವುದಿಲ್ಲ ಎಂಬ ಕಲ್ಪನೆ. ಎಲ್ಲವನ್ನ ಬಯಲು ಮಾಡುತ್ತಿದೆ"
ನಾರ್ಮಲ್: ಅಂತರ್ಜಾಲದಲ್ಲಿ ಅವರ ಹಿಡಿತ, ಸಾಫ್ಟ್‌ವೇರ್ ಸೂಪರ್ ಪವರ್ ಆಗುವ ಹಾದಿ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ವಿಶ್ವದ ಎರಡನೇ ಅತಿದೊಡ್ಡ ಸಿಲಿಕಾನ್ ಕಣಿವೆಯನ್ನು ನಿರ್ಮಿಸುವ ಅವರ ದೂರದೃಷ್ಟಿ ಮತ್ತು ಬುದ್ಧಿವಂತಿಕೆಯಲ್ಲಿ ಭಾರತದ ಗಣ್ಯರ ವಿಷಯದಲ್ಲಿ ಎಂದಿಗೂ ತಡೆಯಿರುವುದಿಲ್ಲ. (ಇದೆಲ್ಲದರ ಜೊತೆ, ಸಿಲಿಕಾನ್ ಕಣಿವೆಯ ನಿರ್ಮಾಣದಲ್ಲಿ ಭಾರತೀಯರು ಮೇಲುಗೈ ಹೊಂದಿದ್ದರು). ಕಳೆದ 30 ವರ್ಷಗಳಿಂದ ಇದು ನಾರ್ಮಲ್.
ಬೆಂಗಳೂರಿನಿಂದ ಹೊರಟು ಕರ್ನಾಟಕದ ಹಳ್ಳಿಯೊಂದಕ್ಕೆ ಹೋಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ವರದಿ ಮಾಡಿದ ವಾಸ್ತವತೆಯನ್ನು ನೋಡಿ: 2018ರಲ್ಲಿ ಗ್ರಾಮೀಣ ಕರ್ನಾಟಕದ ಕೇವಲ 2% ಕುಟುಂಬಗಳಲ್ಲಿ ಮಾತ್ರ ಕಂಪ್ಯೂಟರ್ ಇತ್ತು. (ಹೆಚ್ಚು ಅಪಹಾಸ್ಯಕ್ಕೊಳಗಾದ ಉತ್ತರ ಪ್ರದೇಶದಲ್ಲಿ, ಈ ಸಂಖ್ಯೆ ಶೇ 4ರಷ್ಟಿತ್ತು). ಗ್ರಾಮೀಣ ಕರ್ನಾಟಕದಲ್ಲಿ ಕೇವಲ 8.3ರಷ್ಟು ಕುಟುಂಬಗಳಿಗೆ ಮಾತ್ರ ಇಂಟರ್ನೆಟ್ ಪ್ರವೇಶವಿತ್ತು. ಈ ಗ್ರಾಮೀಣ ಕರ್ನಾಟಕವು 37.4 ಮಿಲಿಯನ್ ಜನರನ್ನು ಹೊಂದಿದೆ ಅಥವಾ ರಾಜ್ಯದ ಜನಸಂಖ್ಯೆಯ ಶೇಕಡಾ 61ರಷ್ಟು ಜನಸಂಖ್ಯೆಯನ್ನು ಹೊಂದಿದ್ದರೆ. ಎರಡನೇ ಸಿಲಿಕಾನ್ ಕಣಿವೆ ಬೆಂಗಳೂರಿನಲ್ಲಿ, ಕೇವಲ 14 ಶೇಕಡಾ ಇದೆ.
ಹೊಸ ನಾರ್ಮಲ್ ಸಂಗತಿಯೆಂದರೆ, ‘ಆನ್‌ಲೈನ್ ಶಿಕ್ಷಣ’ಕ್ಕೆ ಒತ್ತಾಯಿಸುವ ಕಾರ್ಪೋರೇಷನ್‌ಗಳು ಆ ಮೂಲಕ ಶತಕೋಟಿಗಳನ್ನು ಸಂಪಾದಿಸಲು ನಿಂತಿವೆ . ಅವರ ಸಂಖ್ಯೆ ಈಗಾಗಲೇ ದೊಡ್ಡ ಮೊತ್ತದಲ್ಲಿತ್ತು - ಆದರೆ ಈಗ ಅವುಗಳ ಮೌಲ್ಯವನ್ನು ದ್ವಿಗುಣವಾಗುತ್ತದೆ. ಸಮಾಜ, ಜಾತಿ, ವರ್ಗ, ಲಿಂಗ ಮತ್ತು ಪ್ರದೇಶದ ಆಧಾರದಲ್ಲಿ ಈಗಾಗಲೇ ಅಂಚಿನಲ್ಲಿರುವವರನ್ನು ದೈತ್ಯಾಕಾರದ ಹೊರಗಿಡುವಿಕೆ ಸಾಂಕ್ರಾಮಿಕದಿಂದ ಈಗ ಕಾನೂನುಬದ್ಧಗೊಂಡಿದೆ (ಮಕ್ಕಳ ಕಲಿಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲ, ಸರಿ ತಾನೆ?). ಶ್ರೀಮಂತ ರಾಜ್ಯವಾದ ಮಹಾರಾಷ್ಟ್ರ ಸೇರಿದಂತೆ ಭಾರತೀಯ ಗ್ರಾಮಾಂತರದಲ್ಲಿ ಎಲ್ಲಿಯಾದರೂ ಗಮನಿಸಿಮತ್ತು ಅಲ್ಲಿ ಎಷ್ಟು ಮಕ್ಕಳು ತಮ್ಮ ಪಿಡಿಎಫ್ ‘ಪಾಠಗಳನ್ನು’ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬುದನ್ನು ನೋಡಿ. ಎಷ್ಟು ಮಂದಿ ಇಂಟರ್‌ನೆಟ್ ಪ್ರವೇಶವನ್ನು ಹೊಂದಿದ್ದಾರೆ - ಮತ್ತು ಅವರು ಆ ಸೌಲಭ್ಯವನ್ನು ಹೊಂದಿದ್ದಲ್ಲಿ, ಅವರು ಅದನ್ನು ಕೊನೆಯದಾಗಿ ಯಾವಾಗ ಬಳಸಿದರು ಎನ್ನುವುದನ್ನೂ ಗಮನಿಸಿ.
ಇದನ್ನೂ ಪರಿಗಣಿಸಿ: ದಿವಾಳಿಯಾದ, ಹೊಸದಾಗಿ ನಿರುದ್ಯೋಗಿಗಳಾದ ಪೋಷಕರು ತಮ್ಮ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಎಷ್ಟು ಹುಡುಗಿಯರು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ? ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ಹುಡುಗಿಯರನ್ನು ಶಾಲೆಯಿಂದ ಹೊರಗೆಳೆಯುವುದು ಹಳೆಯ ನಾರ್ಮಲ್ ಸಂಗತಿಯಾಗಿತ್ತು, ಈ ಪ್ರಕ್ರಿಯೆಯು ಈಗ ಲಾಕ್‌ಡೌನ್ ಅಡಿಯಲ್ಲಿ ತೀವ್ರವಾಗಿ ವೇಗಗೊಂಡಿದೆ.
ಸಾಂಕ್ರಾಮಿಕ ಪಿಡುಗಿನ ಮೊದಲಿನ ನಾರ್ಮಲ್ ಸಾಮಾಜಿಕ-ಧಾರ್ಮಿಕ ಮೂಲಭೂತವಾದಿಗಳು ಮತ್ತು ಆರ್ಥಿಕ ಮಾರುಕಟ್ಟೆ ಮೂಲಭೂತವಾದಿಗಳ ಒಕ್ಕೂಟದಿಂದ ನಡೆಸಲ್ಪಟ್ಟ ಭಾರತವಾಗಿತ್ತು, ಈ ವಿವಾಹಿತ ಸಂಗಾತಿಗಳು ಕಾರ್ಪೊರೇಟ್ ಮಾಧ್ಯಮ ಎಂದು ಕರೆಯಲ್ಪಡುವ ಹಾಸಿಗೆಯಲ್ಲಿ ಸಹಕರಿಸುತ್ತಿದ್ದರು. ಅನೇಕ ನಾಯಕರು ಸೈದ್ಧಾಂತಿಕವಾಗಿ ಎರಡೂ ಡೇರೆಗಳಲ್ಲಿ ಸಂತೋಷಪಡುತ್ತಿದ್ದರು.
2,000 ಬಿಲಿಯನ್ ರೂ (ಮನರಂಜನಾ ಉದ್ಯಮವೂ ಸೇರಿದಂತೆ) ಮೌಲ್ಯದ ಮಾಧ್ಯಮಗಳಿಗೆ ವಲಸೆ ಕಾರ್ಮಿಕರೊಂದಿಗೆ ದಶಕಗಳಿಂದ ಯಾವುದೇ ಸಂಬಂಧವಿರಲಿಲ್ಲ. ಆದಾಗ್ಯೂ, ಮಾರ್ಚ್ 25ರ ನಂತರ, ಈ ಕಾರ್ಮಿಕರ ಕಾಲ್ನಡಿಗೆ ಪ್ರಯಾಣವನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ಮುಳುಗಿದವು. ಯಾವುದೇ 'ರಾಷ್ಟ್ರೀಯ' ಪತ್ರಿಕೆಗಳಲ್ಲಿ ಕಾರ್ಮಿಕರ ಜಗತ್ತನ್ನು ಒಳಗೊಂಡ ಪೂರ್ಣ ಸಮಯದ ವರದಿಗಾರ, ಅಥವಾ ಕೃಷಿಯನ್ನು ಒಳಗೊಳ್ಳುವ ವರದಿಗಾರನೂ ಇರಲಿಲ್ಲ (ವಾಸ್ತವವಾಗಿ, 'ಕೃಷಿ ಪ್ರತಿನಿಧಿಯಾಗಿ' ಅವರ 'ಹಾಸ್ಯಾಸ್ಪದವೆನ್ನಿಸುವ' ಸ್ಥಾನ, ಮತ್ತು ಅವರ ಕೆಲಸ ಕೃಷಿ ಸಚಿವಾಲಯ ಮತ್ತು ಈಗ ಕೃಷಿ-ಉದ್ಯಮವನ್ನು ಒಳಗೊಳ್ಳುವುದಕ್ಕೆ ಮೀಸಲಾಗಿದೆ). ಆದಾಗ್ಯೂ, ಈ ಎರಡೂ ಕ್ಷೇತ್ರಗಳಿಗೆ ಪೂರ್ಣ ಸಮಯದ ಮಾನವಶಕ್ತಿ ಇಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ದೇಶದ 75% ಜನರ ಕುರಿತು ವರದಿ ಮಾಡುವುದು ಮುಖ್ಯವೆಂದು ಈ ಮಾಧ್ಯಮಗಳು ಭಾವಿಸುವುದಿಲ್ಲ.
ಮಾರ್ಚ್ 25ರ ನಂತರ ಹಲವಾರು ವಾರಗಳವರೆಗೆ, ನಿರೂಪಕರು ಮತ್ತು ಸಂಪಾದಕರು ವಲಸೆ ಕಾರ್ಮಿಕರನ್ನು ಭೇಟಿಯಾಗದಿದ್ದರೂ ಸಹ, ಈ ವಿಷಯದ ಬಗ್ಗೆ ತಿಳಿದಿರುವಂತೆ ನಟಿಸಿದರು. ಇದರ ನಡುವೆ, ಕೆಲವರು ಅವರ ಕಥೆಗಳನ್ನು ನಾವು ಮಾಧ್ಯಮದಲ್ಲಿ ಉತ್ತಮವಾಗಿ ಹೇಳಬೇಕಾಗಿದೆ ಎಂದು ಒಪ್ಪಿಕೊಂಡರು ಮತ್ತು ಕ್ಷಮೆಯಾಚಿಸಿದರು. ಈ ಸಮಯದಲ್ಲಿಯೇ ಕಾರ್ಪೊರೇಟ್ ಮಾಧ್ಯಮ ಮಾಲೀಕರು 1,000ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಸಿಬ್ಬಂದಿಗೆ ಮನೆ ದಾರಿ ತೋರಿಸಿದರು - ಮತ್ತು ಈ ಮೂಲಕ ವಲಸೆ ಸಮಸ್ಯೆಗಳ ಕುರಿತು ಸ್ವಲ್ಪ ಹೆಚ್ಚು ಆಳವಾದ ಮತ್ತು ಸ್ಥಿರವಾದ ವರದಿ ಮಾಡುವ ಸಾಧ್ಯತೆಯನ್ನೂ ಅಳಿಸಿಹಾಕಿದರು. ಅವರನ್ನು ವಜಾಗೊಳಿಸುವ ನಿರ್ಧಾರವನ್ನು ವಾಸ್ತವವಾಗಿ ಸಾಂಕ್ರಾಮಿಕ ಪಿಡುಗಿಗೂ ಮೊದಲೇ ತೆಗೆದುಕೊಳ್ಳಲಾಗಿದೆ. ಇದರಲ್ಲೂ ಈ ವಿಷಯದಲ್ಲಿ ಹೆಚ್ಚು ಸಾಧನೆ ಮಾಡಿದ ಮಾಧ್ಯಮ ಕಂಪನಿಗಳು ಹೆಚ್ಚು ಲಾಭದಲ್ಲಿರುವ ಕಂಪನಿಗಳಾಗಿವೆ.
ಈ ನಾರ್ಮಲ್‌ಗೆ ಎಂತಹ ಹೆಸರಿಟ್ಟರೂ ಅದು ಬೀರುವ ದುರ್ನಾತ ಅದೇ ಆಗಿರುತ್ತದೆ.
ಈಗ ದೂರದರ್ಶನದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದರಲ್ಲಿ ವ್ಯಕ್ತಿಯೊಬ್ಬರು ದೇಶವನ್ನು ನಡೆಸುತ್ತಿದ್ದಾರೆ. ಮತ್ತು ಹೆಚ್ಚಿನ ಚಾನೆಲ್‌ಗಳು ಸಾಮಾನ್ಯವಾಗಿ ಈ ಸಂಘಟಿತ ಸ್ವ-ಪ್ರಶಂಸೆಯನ್ನು ಪ್ರೈಮ್ ಟೈಮ್‌ನಲ್ಲಿ ಪ್ರಸಾರ ಮಾಡುತ್ತವೆ. ಕ್ಯಾಬಿನೆಟ್, ಸರ್ಕಾರ, ಸಂಸತ್ತು, ನ್ಯಾಯಾಲಯಗಳು, ಶಾಸಕಾಂಗ, ಪ್ರತಿಪಕ್ಷಗಳು ಇವುಗಳೆಲ್ಲ ಲೆಕ್ಕಕ್ಕೇ ಇಲ್ಲ. ತಂತ್ರಜ್ಞಾನದಲ್ಲಿ ನಮ್ಮ ಅದ್ಭುತ ಪ್ರತಿಭೆಯ ಹೊರತಾಗಿಯೂ, ಸಂಸತ್ತಿನ ಒಂದೇ ಒಂದು ಅಧಿವೇಶನವನ್ನು ಒಂದೇ ದಿನ ನಡೆಸಲು ನಮಗೆ ಸಾಧ್ಯವಾಗಲಿಲ್ಲ. ಇಲ್ಲ, ಲಾಕ್‌ಡೌನ್‌ನ ಸುಮಾರು 140 ದಿನಗಳ ನಂತರವೂ ಇವ್ಯಾವುದೂ ವರ್ಚುವಲ್ ಅಥವಾ ಆನ್‌ಲೈನ್ ದೂರದರ್ಶನದಲ್ಲಿ ಕಲಾಪ ನಡೆಸಲು ಆಗಿಲ್ಲ, ನಮಗಿಂತ ಕಡಿಮೆ ಜ್ಞಾನ ಹೊಂದಿರುವ ಇತರ ದೇಶಗಳು ಇಂತಹ ತಂತ್ರಜ್ಞಾನದ ಬಗ್ಗೆ ತಿಳಿದಿವೆ.
ಕೆಲವು ಯುರೋಪಿಯನ್ ದೇಶಗಳಲ್ಲಿ, ಸರ್ಕಾರಗಳು ನಾಲ್ಕು ದಶಕಗಳಲ್ಲಿ ನಾಶಪಡಿಸಿದ ಕಲ್ಯಾಣ ರಾಜ್ಯದ ಅಂಶಗಳನ್ನು ಪುನರುಜ್ಜೀವನಗೊಳಿಸಲು ಇಷ್ಟವಿಲ್ಲದೆ ಅಥವಾ ಭಾಗಶಃ ಪ್ರಯತ್ನಿಸುತ್ತಿರಬಹುದು. ಭಾರತದಲ್ಲಿ, ನಮ್ಮ ಮಾರುಕಟ್ಟೆಯಲ್ಲಿ ರಕ್ತ ಹೀರುವ ವೈದ್ಯರ ಮಧ್ಯಕಾಲೀನ ಸಿದ್ಧಾಂತವು ಇಂದಿಗೂ ಚಾಲ್ತಿಯಲ್ಲಿದೆ. ಈಗ ರಕ್ತವನ್ನು ಹೀರಿ ಕಸಿದುಕೊಳ್ಳಲು ಜಿಗಣೆಯಾಗಿ ಹೊರಬಂದಿದೆ. ಅವು ಇನ್ನೂ ಬಡವರ ರಕ್ತವನ್ನು ಹೀರಿಕೊಂಡಿಲ್ಲ. ಈ ಕೀಟಗಳು ತಾವು ಯಾವ ಕಾರಣಕ್ಕಾಗಿ ಮಾಡಲ್ಪಟ್ಟಿವೆಯೋ ಅದನ್ನು ಮಾಡಬೇಕಿದೆ.
ಪ್ರಗತಿಪರ ಚಳುವಳಿಗಳು ಏನು ಮಾಡುತ್ತವೆ? ಅವರು ಎಂದೂ ಹಳೆಯ ನಾರ್ಮಲ್ ಅನ್ನು ಒಪ್ಪಿಕೊಂಡಿಲ್ಲ. ಆದರೆ ಆ ಹಳೆಯ ದಿನಕ್ಕೆ ಹಿಂತಿರುಗಲು ಅವರಿಗೆ ಒಂದು ಕಾರಣವಿದೆ - ಅದು ನ್ಯಾಯ, ಸಮಾನತೆ ಮತ್ತು ಘನತೆಯಿಂದ ಬದುಕುವ ಹೋರಾಟದಿಂದ ಜಗತ್ತನ್ನು ಉಳಿಸುವುದು.
"ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ" ಎನ್ನುವುದು ನೀವು ಪುನರುಜ್ಜೀವನಗೊಳಿಸಲು ಬಯಸದ ಸತ್ತ ತಮಾಷೆಯಾಗಿದೆ. ಮುಖ್ಯ ಚೌಕಟ್ಟು ನ್ಯಾಯ, ಅದರ ಗುರಿ ಅಸಮಾನತೆಯನ್ನು ಕೊನೆಗೊಳಿಸುವುದು. ಮತ್ತು ಅದಕ್ಕೆ ಬೇಕಿರುವ ವಿಧಾನಗಳಲ್ಲಿ ಕೆಲವು ಈಗಾಗಲೇ ಅಸ್ತಿತ್ವದಲ್ಲಿವೆ, ಕೆಲವು ಇನ್ನೂ ಪತ್ತೆಯಾಗಿಲ್ಲ, ಕೆಲವು ಉಳಿದಿವೆ - ಆದರೆ ನಾವೆಲ್ಲರೂ ಆ ವಿಧಾನದತ್ತ ಗಮನ ಹರಿಸಬೇಕಾಗಿದೆ.
ಉದಾಹರಣೆಗೆ, ರೈತರು ಮತ್ತು ಕೃಷಿ ಕಾರ್ಮಿಕರ ಚಳುವಳಿಗಳು ಹವಾಮಾನ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳನ್ನು ಅರಿತುಕೊಳ್ಳದಿದ್ದರೆ (ಇದು ಈಗಾಗಲೇ ಭಾರತದಲ್ಲಿ ಕೃಷಿಯನ್ನು ನಾಶಪಡಿಸಿದೆ), ಅಥವಾ ಅವರು ತಮ್ಮದೇ ಆದ ರೀತಿಯಲ್ಲಿ ಯುದ್ಧಗಳನ್ನು ಸಂಯೋಜಿಸದಿದ್ದರೆ, ಅವರು ದೊಡ್ಡ ಬಿಕ್ಕಟ್ಟನ್ನು ಎದುರಿಸಲಿದ್ದಾರೆ. ಕಾರ್ಮಿಕ ಚಳುವಳಿಗಳು ಕೇಕ್‌ನ ದೊಡ್ಡ ತುಂಡಿಗಾಗಿ ಹೋರಾಡುವುದು ಮಾತ್ರವಲ್ಲ, ಬೇಕರಿಯ ಮಾಲೀಕತ್ವವನ್ನು ಪಡೆಯಲು ತಮ್ಮ ಹಳೆಯ ಅಸಾಧಾರಣ ಪ್ರಯತ್ನಗಳನ್ನು ಮುಂದುವರೆಸಬೇಕಾಗಿದೆ.
ಕೆಲವು ಗುರಿಗಳು ಸ್ಪಷ್ಟವಾಗಿವೆ: ಉದಾಹರಣೆಗೆ, ತೃತೀಯ ಜಗತ್ತಿನ ಸಾಲವನ್ನು ರದ್ದುಪಡಿಸುವುದು. ಆ ಮೂಲಕ ಭಾರತದಲ್ಲಿ ನಮ್ಮದೇ ಸಾಲದಿಂದ ಬಳಲುತ್ತಿರುವ ನಾಲ್ಕನೇ ಜಗತ್ತಿನ ಸಾಲವನ್ನು ಕೊನೆಗೊಳಿಸುವುದು.
ದೊಡ್ಡ ಕಂಪನಿಗಳ ಏಕಸ್ವಾಮ್ಯವನ್ನು ಕೊನೆಗೊಳಿಸಿ. ಆರೋಗ್ಯ, ಆಹಾರ ಮತ್ತು ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಿಂದ ಅವರನ್ನು ಸಂಪೂರ್ಣವಾಗಿ ತೆಗೆದುಹಾಕುವ ಮೂಲಕ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿ.
ಸಂಪನ್ಮೂಲಗಳನ್ನು ಕ್ರಾಂತಿಕಾರಿ ರೀತಿಯಲ್ಲಿ ಮರುಹಂಚಿಕೆ ಮಾಡಲು ಸರಕಾರಗಳ ಮೇಲೆ ಒತ್ತಡ ಹೇರುವ ಚಳುವಳಿಗಳು: ಮೊದಲಿಗೆ ಬಂಡವಾಳ ತೆರಿಗೆ, ಅದು ಶೇಕಡಾ ಒಂದು ಉನ್ನತ ಸ್ಥಾನದಲ್ಲಿದ್ದರೂ ಸಹ. ಬಹುರಾಷ್ಟ್ರೀಯ ಸಂಸ್ಥೆಗಳ ಮೇಲಿನ ತೆರಿಗೆಗಳು - ಅವು ಯಾವುದೇ ತೆರಿಗೆಗಳನ್ನು ಪಾವತಿಸುವುತ್ತಿಲ್ಲ. ಇದಲ್ಲದೆ, ಕಳೆದ ಕೆಲವು ದಶಕಗಳಲ್ಲಿ ಅನೇಕ ದೇಶಗಳು ಕ್ರಮೇಣ ರದ್ದುಗೊಳಿಸಿದ ಸುಂಕ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪುನರ್ರಚನೆ.
ಸಾಮೂಹಿಕ ಕ್ರಿಯೆಯ ಮೂಲಕ ಮಾತ್ರ ದೇಶಾದ್ಯಂತ ಆರೋಗ್ಯ ಮತ್ತು ಶಿಕ್ಷಣದ ಸಾರ್ವತ್ರಿಕ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರಗಳನ್ನು ಒತ್ತಾಯಿಸಬಹುದು. ಜನರ ಆರೋಗ್ಯಕ್ಕೆ ನ್ಯಾಯ ಒದಗಿಸಲು, ಆಹಾರಕ್ಕೆ ನ್ಯಾಯ ಒದಗಿಸಲು ನಮಗೆ ಸಾರ್ವಜನಿಕರ ಅಗತ್ಯವಿದೆ. ಈಗಾಗಲೇ ಕೆಲವು ಸ್ಪೂರ್ತಿದಾಯಕ ವಿಧಾನಗಳಿವೆ, ಆದರೆ ಕಂಪನಿಯಿಂದ ನಡೆಸಲ್ಪಡುವ ಮಾಧ್ಯಮಗಳು ಅದನ್ನು ನಿರ್ಲಕ್ಷಿಸುತ್ತಿವೆ.
ಕಾರ್ಪೊರೇಟ್ ಮಾಧ್ಯಮಗಳು ಸಾರ್ವಜನಿಕ ಚರ್ಚೆಯಿಂದ ತೆಗೆದುಹಾಕಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಹಕ್ಕುಗಳ ಬಗ್ಗೆ ನಾವು ಇಲ್ಲಿ ಮತ್ತು ಪ್ರಪಂಚದಾದ್ಯಂತ ಗಮನ ಹರಿಸಬೇಕಾಗಿದೆ. ಆರ್ಟಿಕಲ್ 23-28ರಂತಹ , 'ಟ್ರೇಡ್ ಯೂನಿಯನ್ ಅನ್ನು ರಚಿಸುವ ಮತ್ತು ಸೇರುವ ಹಕ್ಕು', ಕೆಲಸ ಮಾಡುವ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನ, ಪಾವತಿಸುವ ಹಕ್ಕನ್ನು ಒಳಗೊಂಡಿರುತ್ತದೆ, ಇದು ಘನತೆಯಿಂದ ಕೂಡಿದ ಜೀವನ ಮತ್ತು ಆರೋಗ್ಯ ಹಾಗೂ ಇನ್ನೂ ಹಲವಾರು ವಿಷಯಗಳನ್ನು ಖಾತ್ರಿಗೊಳಿಸುತ್ತದೆ.
ನಮ್ಮ ದೇಶದಲ್ಲಿ, ನಾವು ಭಾರತದ ಸಂವಿಧಾನದ ರಾಷ್ಟ್ರೀಯ ಆಡಳಿತದ ತತ್ವಗಳನ್ನು ಮತ್ತು ನಿರ್ದೇಶಕ ತತ್ವಗಳನ್ನು ಉತ್ತೇಜಿಸುವ ಅಗತ್ಯವಿದೆ - ಕೆಲಸ ಮಾಡುವ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕು ಮತ್ತು ಇನ್ನೂ ಅನೇಕ ನ್ಯಾಯಯುತ ಮತ್ತು ಜಾರಿಗೊಳಿಸುವ ನೀತಿಗಳು. ಅವು ಭಾರತದ ಸ್ವಾತಂತ್ರ್ಯ ಹೋರಾಟದಿಂದ ಹೊರಬಂದ ಸಂವಿಧಾನದ ಆತ್ಮ. ಕಳೆದ 30-40 ವರ್ಷಗಳಲ್ಲಿ ಸುಪ್ರೀಂಕೋರ್ಟ್‌ನ ಒಂದಕ್ಕಿಂತ ಹೆಚ್ಚು ತೀರ್ಪುಗಳು ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳಷ್ಟೇ ಮುಖ್ಯವೆಂದು ಅಭಿಪ್ರಾಯಪಟ್ಟಿದೆ.
ವೈಯಕ್ತಿಕ ಪ್ರಣಾಳಿಕೆಗಳಿಗಿಂತ, ಜನರು ತಮ್ಮ ಸಂವಿಧಾನ ಮತ್ತು ಅದಕ್ಕಾಗಿ ಪರಂಪರೆಯಾಗಿ ಪಡೆದ ಸ್ವಾತಂತ್ರ್ಯ ಹೋರಾಟಕ್ಕೆ ಆದ್ಯತೆ ನೀಡುತ್ತಾರೆ.
ಕಳೆದ ಮೂವತ್ತು ವರ್ಷಗಳಲ್ಲಿ, ಭಾರತದ ಪ್ರತಿಯೊಂದು ಸರ್ಕಾರ ಈ ತತ್ವಗಳನ್ನು ಮತ್ತು ಹಕ್ಕುಗಳನ್ನು ಮಾರುಕಟ್ಟೆ ವ್ಯವಸ್ಥೆಗಳ ಪರಿಚಯ ಮತ್ತು ನೈತಿಕ ಮೌಲ್ಯಗಳ ನಿರ್ಮೂಲನೆಯೊಂದಿಗೆ ಪ್ರತಿದಿನವೂ ಉಲ್ಲಂಘಿಸಿದೆ. ದೇಶದ ಜನರು, ಅವರ ಸಂಬಂಧ, ಭಾಗವಹಿಸುವಿಕೆ ಮತ್ತು ನಿಯಂತ್ರಣವನ್ನು ಹೊರಗಿರಿಸಿ ಇಡೀ ‘ಅಭಿವೃದ್ಧಿ’ಯ ಅಡಿಪಾಯವನ್ನು ರಚಿಸಲಾಗಿದೆ.
ಜನರ ಭಾಗವಹಿಸುವಿಕೆ ಇಲ್ಲದೆ, ಭವಿಷ್ಯದ ವಿಪತ್ತುಗಳನ್ನು ಬಿಡಿ, ನೀವು ಪ್ರಸ್ತುತ ಸಾಂಕ್ರಾಮಿಕ ಪಿಡುಗಿನ ವಿರುದ್ಧವೂ ಹೋರಾಡಲು ಸಾಧ್ಯವಿಲ್ಲ. ಕರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ ಕೇರಳದ ಯಶಸ್ಸು ಸ್ಥಳೀಯ ಸಮಿತಿಗಳಲ್ಲಿ ಸ್ಥಳೀಯ ಜನರ ಪಾಲ್ಗೊಳ್ಳುವಿಕೆಯನ್ನು ಆಧರಿಸಿದೆ, ಅಗ್ಗದ ಆಹಾರ ಪೂರೈಕೆ ಅಡಿಗೆಮನೆಗಳ ಜಾಲವನ್ನು ನಿರ್ಮಿಸುವುದು; ಸಂವಹನ, ಪತ್ತೆ, ಪ್ರತ್ಯೇಕಿಸುವಿಕೆ ಮತ್ತು ನಿಯಂತ್ರಿಸುವುದು - ಇವೆಲ್ಲವೂ ಈ ರಾಜ್ಯದಲ್ಲಿ ಜನರ ಭಾಗವಹಿಸುವಿಕೆಯಿಂದ ಸಾಧ್ಯವಾಗಿದೆ. ಈ ಸಾಂಕ್ರಾಮಿಕ ಮತ್ತು ಅದಕ್ಕೂ ಮೀರಿ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಉತ್ತಮ ಪಾಠ ಇಲ್ಲಿದೆ.
ಪ್ರಗತಿಪರ ಚಳವಳಿಯ ಅಡಿಪಾಯವೆಂದರೆ ನ್ಯಾಯ ಮತ್ತು ಸಮಾನತೆಯ ನಂಬಿಕೆ. ಭಾರತೀಯ ಸಂವಿಧಾನದಲ್ಲಿ - 'ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ...', ಇದಕ್ಕೆ ನಮ್ಮ ಕಾಲದಲ್ಲಿ ಲೈಂಗಿಕ ನ್ಯಾಯ ಮತ್ತು ಪರಿಸರ ನ್ಯಾಯವನ್ನೂ ಸಹ ಜೋಡಿಸಬೇಕು. ಈ ನ್ಯಾಯ ಮತ್ತು ಸಮಾನತೆಯನ್ನು ಯಾರು ತರಬಹುದು ಎಂಬುದನ್ನು ಸಂವಿಧಾನವು ಗುರುತಿಸುತ್ತದೆ. ಮಾರುಕಟ್ಟೆಯಲ್ಲ, ಕಾರ್ಪೊರೇಟ್ ಕಂಪನಿಗಳಲ್ಲ, ಅದು 'ನಾವು ಭಾರತದ ಜನರು'.
ಆದರೆ ಎಲ್ಲಾ ಪ್ರಗತಿಪರ ಚಳುವಳಿಗಳಲ್ಲಿ ಮತ್ತೊಂದು ಸಾರ್ವತ್ರಿಕ ನಂಬಿಕೆ ಇದೆ, ವ್ಯವಸ್ಥೆಯು ಸಿದ್ಧಪಡಿಸಿದ ಉತ್ಪನ್ನವಲ್ಲ, ಆದರೆ ಚಾಲ್ತಿಯಲ್ಲಿರುವ ವ್ಯವಸ್ಥೆಯಾಗಿದ್ದು, ಇದು ಅನೇಕ ವೈಫಲ್ಯಗಳನ್ನು ಹೊಂದಿದೆ ಮತ್ತು ಅನೇಕ ಬೃಹತ್ ಮತ್ತು ಅಪೂರ್ಣ ಕಾರ್ಯಸೂಚಿಗಳನ್ನು ಹೊಂದಿದೆ.
ಈ ಜೂನ್‌ನಲ್ಲಿ 97 ನೇ ವರ್ಷಕ್ಕೆ ಕಾಲಿಟ್ಟ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಭಾವು - ಒಮ್ಮೆ ನನಗೆ ಹೇಳಿದಂತೆ. “ನಾವು ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗಾಗಿ ಹೋರಾಡಿದೆವು. ನಾವು ಸ್ವಾತಂತ್ರ್ಯವನ್ನು ಗಳಿಸಿದ್ದೇವೆ.”
ನಾವು ಆ ಸ್ವಾತಂತ್ರ್ಯದ 73ನೇ ವಾರ್ಷಿಕೋತ್ಸವವನ್ನು ಸಮೀಪಿಸುತ್ತಿರುವಾಗ, ಆ ಅಪೂರ್ಣ ಸ್ವಾತಂತ್ರ್ಯದ ಕಾರ್ಯಸೂಚಿಗಾಗಿ ನಾವು ಹೋರಾಡಬೇಕಾಗಿದೆ.
ಈ ಲೇಖನ ಮೊದಲು ಫ್ರಂಟ್‌ಲೈನ್ ನಿಯತಕಾಲಿಕದಲ್ಲಿ ಪ್ರಕಟವಾಯಿತು.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳಿಸಿ
ಅನುವಾದ: ಶಂಕರ ಎನ್. ಕೆಂಚನೂರು