ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.
‘ಸಿಕ್ಕಿಂನಲ್ಲಿ 300 ಹಿಮಾಲಯನ್ ಯಾಕ್ ಪ್ರಾಣಿಗಳು ಹಸಿವಿನಿಂದ ಸಾವಿಗೀಡಾಗಿವೆ’
‘ಉತ್ತರ ಸಿಕ್ಕಿಂನಲ್ಲಿ ಹಿಮದಲ್ಲಿ ಸಿಲುಕಿದ ಸುಮಾರು 300 ಯಾಕ್ ಗಳು ಹಸಿವಿನಿಂದ ಮೃತಪಟ್ಟಿವೆ’
‘ಕರಗುತ್ತಿರುವ ಹಿಮವು ಸಿಕ್ಕಿಂ ಯಾಕ್ ದುರಂತವನ್ನು ಅನಾವೃತಗೊಳಿಸಿದೆ’
ಈ ವರ್ಷದ ಮೇ 12 ರ ಈ ಶೀರ್ಷಿಕೆ ಸಾಲುಗಳು ನನಗೆ ಮರ್ಮಾಘಾತವನ್ನಿತ್ತವು. ಪತ್ರಿಕಾ ಛಾಯಾಗ್ರಾಹಕನಾಗಿ ಹಿಮಾಲಯಕ್ಕೆ ನಾನು ಸ್ವತಃ ಕೈಗೊಂಡ ಪ್ರವಾಸದಲ್ಲಿ ಈ ಪ್ರಾಣಿಗಳನ್ನು ಸಾಕುವ ಅಲೆಮಾರಿ ಪಶುಪಾಲಕರು ಅವನ್ನು ರಕ್ಷಿಸಲು ಶತಾಯಗತಾಯ ಪ್ರಯತ್ನಿಸುತ್ತಾರೆಂಬುದನ್ನು ತಿಳಿದುಕೊಂಡಿದ್ದೇನೆ. ಜೀವನಾಧಾರದಂತಿರುವ ಈ ಬೃಹತ್ ಪರ್ವತ ಶ್ರೇಣಿಗಳಲ್ಲಿನ ಯಾಕ್ ಪ್ರಾಣಿಗಳು ಉನ್ನತ ಪ್ರದೇಶಗಳಲ್ಲಿನ ಪಶುಪಾಲಕರ ಜೀವನಾಡಿಗಳಾಗಿವೆ. ಇವರು ಬೇಸಿಗೆ ಹಾಗೂ ಚಳಿಗಾಲದ ನಿಗದಿತ ಮೇವುಮಾಳಗಳಿಗೆ ಜಾನುವಾರುಗಳನ್ನು ಕರೆದೊಯ್ಯುತ್ತಾರೆ. ಯಾಕ್ ಪ್ರಾಣಿಗಳು ಅವರ ಸಂಪಾದನೆಯ ಮೂಲ ಸಾಧನಗಳಾಗಿದ್ದು, ಚಳಿಗಾಲದಲ್ಲಿ ಆಹಾರದ ಅವಶ್ಯಕತೆಯನ್ನು ಪೂರೈಸುತ್ತವೆ.
ಯಾಕ್ ಪ್ರಾಣಿಗಳನ್ನು ಕುರಿತ ಮೇಲ್ಕಂಡ ಶೀರ್ಷಿಕೆ ಸಾಲುಗಳನ್ನೊಳಗೊಂಡ ಲೇಖನಗಳು, ಅವುಗಳ ಮರಣಕ್ಕೆ ಜಾಗತಿಕ ತಾಪಮಾನದ ಕಾರಣವನ್ನು ನೀಡುತ್ತವೆ. ಕಟ್ಟುಮಸ್ತಾದ ಈ ಪ್ರಾಣಿಗಳೇ ಹೀಗೆ ದುರಂತಕ್ಕೀಡಾಗುತ್ತಿದ್ದು, ಅವುಗಳ ಪಾಲಕರೂ ಸಹ ಆಪತ್ತಿಗೀಡಾಗುತ್ತಾರೆ. ಲಡಾಖ್ ನ ಹನ್ಲೆ ಕಣಿವೆಯ ಛಂಗ್ಪ ಕುಟುಂಬಗಳೆಡೆಗೆ ಹಿಂದುರುಗಿ, ಇವರಿಬ್ಬರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದೆ.
ಟಿಬೇಟ್ ಪ್ರಸ್ಥಭೂಮಿಯ ಪಶ್ವಿಮದ ಹರವು, ಅಂದರೆ ಭಾರತದ ಛಾಂಗ್ ಥಾಂಗ್ ಪ್ರದೇಶವು ಕಾಶ್ಮೀರಿ ತುಪ್ಪಟದ ಪ್ರಮುಖ ಉತ್ಪಾದನಾ ಸ್ಥಳವಾಗಿದೆಯಲ್ಲದೆ, ಅಲ್ಲಿ ಯಾಕ್ ಪ್ರಾಣಿಗಳನ್ನೂ ಸಹ ಸಾಕುತ್ತಾರೆ. ಲೆಹ್ ಜಿಲ್ಲೆಯ ನ್ಯೊಮ ಕ್ಷೇತ್ರದ ಹನ್ಲೆ ಕಣಿವೆಯ ಛಂಗ್ಪ; ದಿಖ್, ಖರ್ ಲೂಗ್, ಮಖ್, ರಖ್, ಯಲ್ಪ... ಹೀಗೆ ಪಶುಪಾಲನೆಯ ಅನೇಕ ಘಟಕಗಳ ನೆಲೆವೀಡಾಗಿದೆ. ದಿಖ್ ಮತ್ತು ರಖ್‍ಗಳಲ್ಲಿ ಬಹುಶಃ ಅತ್ಯುತ್ತಮ ಯಾಕ್ ಪಾಲಕರಿದ್ದಾರೆಂದು ಹೇಳಬಹುದು.
"ನಾವು ಹಲವಾರು ಯಾಕ್ ಗಳನ್ನು ಕಳೆದುಕೊಳ್ಳುತ್ತಿದ್ದೇವೆ" ಎನ್ನುತ್ತಾರೆ ಹನ್ಲೆಯ 35 ರ ದಿಕ್ ಪಶುಪಾಲಕ ಝಂಪಲ್ ಸೆರಿಂಗ್. "ಈಗ ಇಲ್ಲಿನ (ಉನ್ನತ ಪರ್ವತಗಳಲ್ಲಿನ) ಹವಾಮಾನವು ಊಹೆಗೆ ನಿಲುಕದಂತಾಗಿದೆ" ಸೆರಿಂಗ್ ಅವರ ಭೇಟಿಯನ್ನು ಸಾಧ್ಯವಾಗಿಸಿದ ಹನ್ಲೆಯಲ್ಲಿನ ಇಂಡಿಯನ್ ಅಸ್ಟ್ರೊನಾಮಿಕಲ್ ಅಬ್ಸರ್ವೇಟರಿಯಲ್ಲಿ ಕೆಲಸವನ್ನು ನಿರ್ವಹಿಸುವ ಖಲ್ಡೊ ಜಿಲ್ಲೆಯ ಸೋನಂ ದೋರ್ಜಿ ಅವರಿಗೆ ನನ್ನ ಧನ್ಯವಾದಗಳು. ಸುಮಾರು 14,000 ಅಡಿ ಎತ್ತರದಲ್ಲಿನ ವಿಶಾಲವಾದ ಖುರ್‍ನಲ್ಲಿ (ಲಡಾಖಿ ಭಾಷೆಯ ಸೇನೆಯ ಡೇರೆ) ಸೆರಿಂಗ್ ನಮ್ಮೊಂದಿಗೆ ಮಾತುಕತೆಗೆ ತೊಡಗಿದರು.
ಸಿಕ್ಕಿಂನ ಮೇ 2019 ರ ದುರ್ಘಟನೆಯ ಮೂರು ವರ್ಷಗಳ ಮೊದಲು ನೇಪಾಳದ ಇಂಟರ್‍ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‍ಮೆಂಟ್ ಸೆಂಟರ್, “ಇತ್ತೀಚಿನ ವರ್ಷಗಳಲ್ಲಿ ಭೂತಾನ್, ಭಾರತ ಮತ್ತು ನೇಪಾಳದ ಯಾಕ್ ಪ್ರಾಣಿಗಳ ಸಂಖ್ಯೆಯು ಕ್ಷೀಣಿಸುತ್ತಿರುವ”ಬಗ್ಗೆ ಲೇಖನವೊಂದನ್ನು ಪ್ರಕಟಿಸಿತು. 1977 ರಲ್ಲಿ ಭಾರತದ ಯಾಕ್ ಪ್ರಾಣಿಗಳ ಸಂಖ್ಯೆಯು 132,000 ರಷ್ಟಿದ್ದು, 1997 ರಲ್ಲಿ ಇದು 51,000 ಕ್ಕೆ ಕ್ಷೀಣಿಸಿದೆ ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ. ಕೇವಲ ಮೂರು ದಶಕಗಳಲ್ಲಿ ಇವು ಶೇ. 60 ರಷ್ಟು ಅವನತಿಗೀಡಾಗಿವೆ.
ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಸ್ಥಳೀಯ ಇಲಾಖೆಯ ದತ್ತಾಂಶಗಳು, ಲೆಹ್ ಜಿಲ್ಲೆಯ ಯಾಕ್ ಜಾನುವಾರುಗಳ ಸಂಖ್ಯೆಯು 1991 ರಲ್ಲಿ 30,000 ರಷ್ಟಿದ್ದು, 2010 ರಲ್ಲಿ ಅದು 13,000 ಕ್ಕೆ ಕ್ಷೀಣಿಸಿದೆಯೆಂದು ತಿಳಿಸುತ್ತದೆ. ಎರಡು ದಶಕಗಳಲ್ಲಿನ ಈ ಅವನತಿಯು ಶೇ. 57 ರಷ್ಟಿದೆ. ಸ್ಥಳೀಯ ದತ್ತಾಂಶವನ್ನು, ಸರ್ಕಾರಿ ದತ್ತಾಂಶದೊಂದಿಗೆ ಹೋಲಿಸಿದಾಗ ವ್ಯತ್ಯಾಸವು ಗೋಚರಿಸಿದ್ದು, ಅದರ ಪ್ರಕಾರ, 2012 ರಲ್ಲಿ ಯಾಕ್ ಜಾನುವಾರುಗಳ ಸಂಖ್ಯೆ 18,877 ರಷ್ಟಿದೆ. (ಹೀಗಿರುವಲ್ಲಿ, 21 ವರ್ಷಗಳಲ್ಲಿನ ಇವುಗಳ ಅವನತಿಯು ಶೇ. 37 ರಷ್ಟು!)
ದಿಖ್ ವಾಸಸ್ಥಾನವನ್ನು ತಲುಪುವುದು ಸುಲಭವಿರಲಿಲ್ಲ. ಅವರು ಜಾನುವಾರುಗಳನ್ನು ಮೇಯಿಸುವ ಬಯಲು ಪ್ರದೇಶವು ಇತರೆ ಮೇವುಮಾಳದ ಘಟಕಗಳಿಗಿಂತಲೂ ಎತ್ತರದಲ್ಲಿದೆ. ಅಲ್ಲದೆ, ಅವರು ಗುಡಾರಗಳನ್ನು ನಿರ್ಮಿಸುವ ಪ್ರದೇಶಗಳು ಭಾರತ-ಚೀನಾದ ಗಡಿ ಭಾಗದಲ್ಲಿದ್ದು, ಅಲ್ಲಿಗೆ ಅಸೈನಿಕರನ್ನು (ಸಿವಿಲಿಯನ್) ನಿರ್ಬಂಧಿಸಲಾಗಿದೆ. ಅದು ವಸಂತ ಕಾಲವಾದುದರಿಂದ, ಸೋನಂ ದೋರ್ಜಿಯವರ ಸಹಾಯದಿಂದ ನಾನು ಆ ವಾಸಸ್ಥಾನವನ್ನು ತಲುಪಿದೆ.
"ಯಾಕ್ ಜಾನುವಾರುಗಳು ಬಹಳ ಅದ್ಭುತವಾದವುಗಳು", ಎನ್ನುವ ಝಂಪಲ್ ಸೆರಿಂಗ್, "ಯಾಕ್ ಪ್ರಾಣಿಗಳಿಗೆ ಹಿಮಗಟ್ಟಿಸುವ ತಾಪಮಾನವು ರೂಢಿಯಾಗಿದ್ದು, ಮೈನಸ್ 35 ಅಥವ ಮೈನಸ್ 40 ಡಿಗ್ರಿ ಸೆಲ್ಸಿಯಸ್‍ನಲ್ಲೂ ಬದುಕುಳಿಯಬಲ್ಲವು. ಆದಾಗ್ಯೂ, ತಾಪಮಾನವು 12 ಅಥವ 13 ಡಿಗ್ರಿಗಳಿಗೆ ಏರಿದಲ್ಲಿ ಇವಕ್ಕೆ ತ್ರಾಸದಾಯಕವೆನಿಸುತ್ತದೆ. ಕೊರೆಯುವ ಚಳಿಗಾಲದಲ್ಲೂ, ನಿಧಾನಗತಿಯ ಅವುಗಳ ಚಯಾಪಚಯದಿಂದಾಗಿ (ಮೆಟಬಾಲಿಸಂ), ಅವು ಶರೀರದ ತಾಪಮಾನವನ್ನು ಕಾಯ್ದುಕೊಂಡು ಬದುಕುಳಿಯುತ್ತವೆ." ಆದರೆ ಹವಾಮಾನದಲ್ಲಿನ ಏರಿಳಿತವು ಇವುಗಳಿಗೆ ತೊಂದರೆದಾಯಕ.
ದಿಖ್ ವಾಸಸ್ಥಾನದಿಂದ ಸುಮಾರು 40 ಕಿ. ಮೀ. ದೂರದ ಕಾಲಾ ಪರಿಯಲ್ಲಿ (ಕಪ್ಪು ಪರ್ವತ), ಸಿರಿಂಗ್ ಛಾನ್‍ಛಂ ಅವರನ್ನು ಭೇಟಿಯಾದೆ. ಹನ್ಲೆ ಕಣಿವೆಯ ಕೆಲವೇ ಯಾಕ್ ಒಡತಿಯರಲ್ಲಿ ಇವರೂ ಒಬ್ಬರು. "ಹಿಂದಿಗಿಂತಲೂ ಈಗ ಬೆಚ್ಚಗಿನ ವಾತಾವರಣವಿರುವುದರಿಂದ ಕುರಿ, ಪಶ್ಮಿನ ಮೇಕೆ ಮತ್ತು ಯಾಕ್ ಗಳ ಶರೀರದ ಮೇಲೆ ಮೊದಲಿನಂತೆ ಒತ್ತಾಗಿ ಕೂದಲು ಬೆಳೆಯುತ್ತಿಲ್ಲ. ಅದು ಬಹಳ ವಿರಳ ಹಾಗೂ ಹಗುರವಾಗಿದೆ. ಅವು ಬಹಳ ದುರ್ಬಲವಾಗಿರುವಂತೆ ತೋರುತ್ತದೆ ದುರ್ಬಲ ಯಾಕ್‍ಗಳಿಂದ ನಮಗೆ ಉತ್ಪತ್ತಿಯೂ ಕಡಿಮೆ. ಹಾಲಿನ ಪ್ರಮಾಣವೂ ಕಡಿಮೆಯಾಗುತ್ತದೆಯಾದ್ದರಿಂದ ವರಮಾನವು ಕುಂಠಿತಗೊಳ್ಳುತ್ತದೆ. ಕಳೆದ ಐದು ವರ್ಷಗಳಿಂದ ಯಾಕ್ ನಿಂದ ದೊರೆಯುವ ನಮ್ಮ ಆದಾಯವು ಗಮನಾರ್ಹವಾಗಿ ಕ್ಷೀಣಿಸಿದೆ." ಎನ್ನುತ್ತಾರೆ ಆಕೆ. ರಖ್ ಜಾನುವಾರುಗಳ ಹಿಂಡಿನ ಘಟಕದಿಂದ ಇವರು ಜಾನುವಾರುಗಳನ್ನು ಋತುಮಾನಗಳಿಗೆ ತಕ್ಕಂತೆ ವಿವಿಧ ಮೇವುಮಾಳಗಳಿಗೆ ಕರೆದೊಯ್ದು ಮೇಯಲು ಅನುವು ಮಾಡಿಕೊಡುತ್ತಾರೆ. ಇಲ್ಲಿ ಪಶುಗಳ ಹಿಂಡನ್ನು ಮೇಯಿಸುವವರ ಸರಾಸರಿ ಕೌಟುಂಬಿಕ ಆದಾಯವು ಎಲ್ಲ ಮೂಲಗಳನ್ನೂ ಒಳಗೊಂಡಂತೆ ಮಾಹೆಯಾನ ಸುಮಾರು 8,500 ರೂ. ಗಳೆಂಬುದಾಗಿ ಸ್ವಯಂ ಸಂಶೋಧಕರ ಅಧ್ಯಯನಗಳಿಂದ ತಿಳಿದುಬರುತ್ತದೆ.
ಯಾಕ್ ಪ್ರಾಣಿಯ ಹಾಲು ಈ ಜನರ ಪ್ರಮುಖ ಆದಾಯವಾಗಿದ್ದು, ಯಾಕ್ ನ ಪಾಲನೆಯಿಂದ ದೊರೆಯುವ ಆದಾಯದಲ್ಲಿ ಇದರ ಪಾಲು ಶೇ. 60 ರಷ್ಟಿದೆ. ಛಂಗ್ಪಗಳ ಉಳಿದ ಆದಾಯವು ಖುಲೂ (ಯಾಕ್ ನ ಕೂದಲು) ಮತ್ತು ತುಪ್ಪಟದಿಂದ ದೊರೆಯುತ್ತದೆ. ಹೀಗಾಗಿ ಯಾಕ್ ಗಳ ಸಂಖ್ಯೆ ಹಾಗೂ ಹಾಲಿನ ಉತ್ಪಾದನೆಯು ಕ್ಷೀಣಿಸುತ್ತಿರುವುದರಿಂದ ಅವರ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಈ ಎಲ್ಲ ಅಂಶಗಳಿಂದಾಗಿ ಯಾಕ್ ಸಂಬಂಧಿತ ಅರ್ಥವ್ಯವಸ್ಥೆಯು ಅಪಾರ ಸಂಕಷ್ಟಕ್ಕೀಡಾಗಿದೆ.
"ಈಗ, ನಿರೀಕ್ಷಿತ ಸಮಯದಲ್ಲಿ ಮಳೆ ಹಾಗೂ ಹಿಮವು ಸುರಿಯುತ್ತಿಲ್ಲವಾಗಿ, ಪರ್ವತಗಳ ಮೇಲೆ ಸಾಕಷ್ಟು ಹುಲ್ಲು ಲಭ್ಯವಿಲ್ಲ. ಈ ಕಾರಣದಿಂದ ಇಲ್ಲಿ ಜಾನುವಾರುಗಳನ್ನು ಮೇಯಿಸಲು ಬರುವವರ ಸಂಖ್ಯೆಯು ಕ್ಷೀಣಿಸಿದೆ. ಹುಲ್ಲಿನ ಅಭಾವ ಹಾಗೂ ತತ್ಸಂಬಂಧಿತ ತೊಂದರೆಗಳಿಂದಾಗಿ ಅವರ ಸಂಖ್ಯೆ ಶೇ. 40 ರಷ್ಟು ಕುಸಿದಿದೆ. (ಇಲ್ಲಿ 290 ಪಶುಪಾಲಕರ ಕುಟುಂಬಗಳಿವೆಯೆಂದು ಅಂದಾಜಿಸಲಾಗಿದೆ)"
ಅಬ್ಸರ್ವೇಟರಿಯಲ್ಲಿ ಕೆಲಸ ನಿರ್ವಹಿಸುವ ಸೋನಂ ದೋರ್ಜಿ, ನನ್ನ ಈ ಪ್ರವಾಸಕ್ಕೆ ನೆರವಾಗಿದ್ದು, ಇವರು ಪರ್ವತಗಳಲ್ಲಿನ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸುವವರಾಗಿದ್ದಾರೆ.
ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ನಾನು 15 ವರ್ಷದವನಾಗಿದ್ದಾಗ, ಇಲ್ಲಿ ಬಹಳ ಶೀತವಿರುತ್ತಿದ್ದು, ಅದನ್ನು ಬಲ್ಲವರು ಅದು, ಮೈನಸ್ 35 ಡಿಗ್ರಿಗೆ ಇಳಿಯುತ್ತಿತ್ತೆಂದು ಹೇಳುತ್ತಾರೆ.
"ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ನಾನು 15 ವರ್ಷದವನಿದ್ದಾಗ (ನನಗೀಗ 43. ಸುಮಾರು 30 ವರ್ಷಗಳ ಹಿಂದಿನ ಸ್ಥಿತಿಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ.) ಇಲ್ಲಿ ಬಹಳ ಶೀತವಿರುತ್ತಿತ್ತು. ತಾಪಮಾನವನ್ನು ನಾನು ಅಳೆಯುತ್ತಿರಲಿಲ್ಲವಾದರೂ, ಅದು ಮೈನಸ್ 35 ಡಿಗ್ರಿ ಸೆಲ್ಸಿಯಸ್‍ಗೆ ಇಳಿಯುತ್ತದೆಂದು ತಿಳಿದವರು ಹೇಳುತ್ತಿದ್ದರು. ಹೀಗಾಗಿ ಜನರ ದಿರಿಸೂ ಸಹ ಈ ತೀಕ್ಷ್ಣ ಛಳಿಯನ್ನು ಭರಿಸುವಂತೆ ಇರತಕ್ಕದ್ದು. ಅವು, ಈಗ ಅವರು ಧರಿಸುವ ಸಿಂಥೆಟಿಕ್ ಜಾಕೆಟ್‍ಗಳಲ್ಲ. ಅವರ ಟೋಪಿ, ದಿರಿಸು ಮುಂತಾದ ಎಲ್ಲವನ್ನು ಪಶ್ಮಿನ ಕುರಿಯ ತುಪ್ಪಳದಿಂದ ನೇಯಲಾಗುತ್ತಿತ್ತು. ಸ್ಥಳೀಯ ಬಟ್ಟೆಯಿಂದ ಪಾದರಕ್ಷೆಯನ್ನು ತಯಾರಿಸಿ ಅದರ ಒಳ ಭಾಗಕ್ಕೆ ಮಟ್ಟಸಗೊಳಿಸಿದ ಯಾಕ್‍ನ ಚರ್ಮದ ತುಂಡನ್ನಿಟ್ಟು, ಪಟ್ಟಿಯಿಂದ ಪಾದರಕ್ಷೆಗಳನ್ನು ಮಂಡಿಯುದ್ದಕ್ಕೂ ಕಟ್ಟಬಹುದಿತ್ತು. ಈಗ ಅಂತಹ ಪಾದರಕ್ಷೆಗಳು ಎಲ್ಲಿಯೂ ಕಾಣಸಿಗವು." ಎನ್ನುತ್ತಾರವರು.
ಹಿಮಾಲಯದ ಪಶ್ಚಿಮ ವಲಯದ ಲಡಾಖ್, ಲಹವ್ಲ್ ಹಾಗೂ ಸ್ಪಿತಿಯ ಹವಾಮಾನದಲ್ಲಿ ಬಿಸಿಯೇರುತ್ತಿದೆಯೆಂದು ಸಂಶೋಧಕರಾದ ತುಂಡುಪ್ ಅಗ್ಮೊ ಹಾಗೂ ಎಸ್. ಎನ್. ಮಿಶ್ರ, 2016 ರ ತಮ್ಮ ಸಂಶೋಧನಾ ಬರಹದಲ್ಲಿ ತಿಳಿಯಪಡಿಸುತ್ತಾರೆ. ಲೆಹ್ ನ ಕನಿಷ್ಠ ಉಷ್ಣಾಂಶವು ಏರುಗತಿಯಲ್ಲಿ ಸಾಗಿದ್ದು, "ಕಳೆದ 35 ವರ್ಷಗಳಿಂದಲೂ ಚಳಿಗಾಲದ ಎಲ್ಲ ತಿಂಗಳುಗಳಲ್ಲಿನ ಉಷ್ಣಾಂಶವು ಮೈನಸ್ ಒಂದು ಡಿಗ್ರಿ ಸೆಲ್ಸಿಯಸ್‍ಗೆ ಹತ್ತಿರದಲ್ಲಿದ್ದು, ಬೇಸಿಗೆಯ ತಿಂಗಳುಗಳಲ್ಲಿ ಮೈನಸ್ 0.5 ಡಿಗ್ರಿ ಸೆಲ್ಸಿಯಸ್‍ಗೆ ಹತ್ತಿರದಲ್ಲಿರುತ್ತದೆ. ನವೆಂಬರ್‍ನಿಂದ ಮಾರ್ಚ್‍ವರೆಗಿನ ಅವಕ್ಷೇಪಣವೂ ಕ್ಷೀಣಗತಿಯಲ್ಲಿದೆ. ಅಂದರೆ ಹಿಮ ಸುರಿತವೂ ಸಹ ಕುಂಠಿತಗೊಂಡಿದೆಯೆಂಬುದಾಗಿ ಹವಾಮಾನ ಇಲಾಖೆಯಿಂದ (ಲೆಹ್ ನ ಏರ್‍ಫೋರ್ಸ್ ಸ್ಟೇಶನ್) ಪಡೆದ ದತ್ತಾಂಶವು ಸ್ಪಷ್ಟಪಡಿಸುತ್ತದೆ."
"ಲಡಾಖ್, ಲಹವ್ಲ್ ಮತ್ತು ಸ್ಪತಿಯಲ್ಲಿ ಕಳೆದ ಕೆಲವು ವರ್ಷಗಳಿಂದಲೂ ಜಾಗತಿ ಹವಾಮಾನದ ಬದಲಾವಣೆಯ ಪರಿಣಾಮಗಳು ಹೆಚ್ಚಾಗಿ ಕಂಡುಬರುತ್ತಿವೆ. ಮಳೆ ಹಾಗೂ ಹಿಮಪಾತದ ಸ್ವರೂಪಗಳೂ ಬದಲಾಗುತ್ತಿವೆ; ಚಿಕ್ಕ ಹಿಮರಾಶಿಗಳು ಮತ್ತು ಶಾಶ್ವತ ಹಿಮದ ಕ್ಷೇತ್ರಗಳು ಕರಗುತ್ತಿದ್ದು, ನದಿ/ತೊರೆಗಳಲ್ಲಿನ ನೀರಿನ ಹರಿವಿನ ಮೇಲೆ ಪರಿಣಾಮವನ್ನು ಬೀರುತ್ತಿದ್ದು, ತಾಪಮಾನ ಮತ್ತು ತೇವಾಂಶದಲ್ಲಿನ ಹೆಚ್ಚಳದಿಂದಾಗಿ, ಕ್ರಿಮಿಗಳು ಹಾಗೂ ಉಪದ್ರವಕಾರಿ ಪಿಡುಗುಗಳು ಲಗ್ಗೆಯಿಡುತ್ತಿವೆ." ಎಂದು ಸಹ ಅವರು ತಿಳಿಸುತ್ತಾರೆ.
ಝಂಪಲ್ ಸೆರಿಂಗ್ ಅವರ ಡೇರೆಯಲ್ಲಿ, ಆತನ ಗೆಳೆಯ ಸಂಗ್ಡ ದೋರ್ಜಿ, "ಈ ಬಾರಿ ಎಷ್ಟು ರಿಬೊಗಳು ನಿಮಗೆ ಕಾಣಸಿಕ್ಕವು?" ಎಂದು ಕೇಳಿದರು.
ಛಂಗ್ಪಗಳು ರಿಬೊ ಎಂಬ ಡೇರೆಗಳಲ್ಲಿ ವಾಸಿಸುತ್ತಾರೆ. ರಿಬೊಗಳ ನಿರ್ಮಾಣಕ್ಕೆಂದು, ಯಾಕ್ ನ ತುಪ್ಪಟದಿಂದ ಕುಟುಂಬದವರು ದಾರದ ಎಳೆಯನ್ನು ತೆಗೆಯುತ್ತಾರೆ. ಇದನ್ನು ಹೆಣೆದು, ಒಟ್ಟಾಗಿ ಹೊಲಿಯುತ್ತಾರೆ. ಈ ವಸ್ತ್ರವು ಅಲೆಮಾರಿಗಳನ್ನು ಅತಿಯಾದ ಶೀತ ಹಾಗೂ ಶೀತ ಗಾಳಿಯಿಂದ ರಕ್ಷಿಸುತ್ತದೆ.
"ಬಹುತೇಕ ಕುಟುಂಬಗಳವರು ಸ್ವಂತ ರಿಬೊವನ್ನು (ಈಗ) ಹೊಂದಿರುವುದಿಲ್ಲ" ಎನ್ನುತ್ತಾರೆ ಸಂಗ್ಡ. "ಹೊಸ ರಿಬೊವನ್ನು ಹೊಲೆಯಲು ತುಪ್ಪಟಮೆಲ್ಲಿದೆ? ಕಳೆದ ಕೆಲವು ವರ್ಷಗಳಲ್ಲಿ ಯಾಕ್ ತುಪ್ಪಟವು ಗಮನಾರ್ಹವಾಗಿ ಕಡಿಮೆಯಾಗಿದೆ. ರಿಬೊ ಇಲ್ಲದಿದ್ದಲ್ಲಿ ನಮ್ಮ ಅಲೆಮಾರಿ ಜೀವನವಿಧಾನದ ಪ್ರಮುಖ ಭಾಗವೇ ಇಲ್ಲದಂತೆ. ಇದಕ್ಕೆ ನಾನು ಬೆಚ್ಚಗಿನ ಚಳಿಗಾಲವನ್ನು ನಿಂದಿಸುತ್ತೇನೆ." ಎನ್ನುತ್ತಾರವರು.
ಸಿಕ್ಕಿಂನಲ್ಲಿ ಮೇನಲ್ಲಿ ಜರುಗಿದ ಘಟನೆಯು ಸಂಪೂರ್ಣವಾಗಿ ಆಕಸ್ಮಿಕವಾದುದಲ್ಲ. ಮುಂದೆ ಇದಕ್ಕಿಂತಲೂ ಹೆಚ್ಚಿನ ಸಂಕಷ್ಟವಿರಬಹುದು. ಪಶುಪಾಲಕರು ಹವಾಮಾನ ಬದಲಾವಣೆಗಳು ಎಂಬ ಪದವನ್ನು ಬಳಸುವುದಿಲ್ಲವಾದರೂ ಅದರ ಪರಿಣಾಮಗಳನ್ನು ಚೆನ್ನಾಗಿ ವಿವರಿಸುತ್ತಾರೆ. ಪ್ರಮುಖ ಬದಲಾವಣೆಗಳು ಘಟಿಸಿವೆಯೆಂಬುದು ಅವರಿಗೆ ಅರ್ಥವಾಗಿದೆ ಎಂಬುದನ್ನು ಸೋನಮ್ ದೋರ್ಜಿ ಮತ್ತು ಸೆರಿಂಗ್ ಛೋನ್ ಛುಂ ಅವರ ಮಾತುಗಳು ನಮಗೆ ತಿಳಿಸುತ್ತವೆ. ಕೆಲವು ಪ್ರಮುಖ ವ್ಯತ್ಯಾಸಗಳು ಹಾಗೂ ಪರಿವರ್ತನೆಗಳು ಗಮನಾರ್ಹವಾಗಿ ಮನುಷ್ಯರಿಂದಲೇ ಘಟಿಸಿವೆಯೆಂಬುದನ್ನೂ ಅವರು ಅರ್ಥೈಸಿಕೊಂಡಿದ್ದಾರೆ. ಬಹುಶಃ ಇದೇ ಕಾರಣದಿಂದ, 60 ರ ಅನುಭವಿ ನನ್ನೊಂದಿಗೆ, "ಹೌದು, ಪರ್ವತಗಳ ಹವಾಮಾನವು ಊಹಿಸಲಸಾಧ್ಯವಾಗಿದೆ. ಬಹುಶಃ ನಾವು ಪರ್ವತ ದೇವರನ್ನು ಸಿಟ್ಟಿಗೆಬ್ಬಿಸಿದ್ದೇವೆ." ಎಂದರು.
ಮುಖಪುಟ ಚಿತ್ರ: ಸ್ಯಾಂಕ್ಚುಅರಿ ಏಷ್ಯ ಹಾಗೂ ನಮಗೆ ತಮ್ಮ ಚಿತ್ರಗಳನ್ನು ಬಳಸಿಕೊಳ್ಳಲು ಅನುಮತಿಯಿತ್ತ ರೋಹನ್ ಭಟೆ ಅವರಿಗೆ ನಮ್ಮ ವಿಶೇಷ ಧನ್ಯವಾದಗಳು.
ಪರಿಯ ವತಿಯಿಂದ ಕೈಗೊಳ್ಳುತ್ತಿರುವ ದೇಶಾದ್ಯಂತದ ಪರಿಸರದ ಬದಲಾವಣೆಯನ್ನು ವರದಿಸುವ ಯೋಜನೆಯು ಯುಎನ್‍ಡಿಪಿ ಆಶ್ರಯದಲ್ಲಿನ ಕಾರ್ಯಾಚರಣೆಯಾಗಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಲಾಗುತ್ತಿದೆ.
ಈ ಲೇಖನವನ್ನು ಪ್ರಕಟಿಸಲು ಬಯಸುತ್ತೀರಾ? zahra@ruralindiaonline.org ಗೆ ಬರೆದು ಅದರ ಪ್ರತಿಯನ್ನು namita@ruralindiaonline.org ಸಲ್ಲಿಸಿ.
ಅನುವಾದ: ಶೈಲಜ ಜಿ. ಪಿ.