ಇದೊಂದು 152 ಮುಖ್ಯ ಯಾರ್ಡ್‌ಗಳು, 279 ಸಬ್ ಯಾರ್ಡ್‌ಗಳು ಮತ್ತು ಪಂಜಾಬ್ ನಾದ್ಯಂತ ಇರುವ 1,389 ಖರೀದಿ ಕೇಂದ್ರಗಳ (2019-20ರಲ್ಲಿ) ದೊಡ್ಡ ಜಾಲವಾಗಿದೆ. ಈ ಮಂಡಿಗಳ ಜಾಲವು ಜಸ್ವಿಂದರ್ ಸಿಂಗ್ ಅವರ ಪಾಲಿಗೆ ಸುರಕ್ಷಾ ಕವಚವಾಗಿದೆ. ಈ ಮಂಡಿ ವ್ಯವಸ್ಥೆಯಲ್ಲಿ ಒಬ್ಬ ರೈತ ತಾನು ಸುರಕ್ಷಿತ ಎಂದು ಭಾವಿಸುತ್ತಾನೆ ಎಂದು ಸಂಗ್ರೂರ್ ಜಿಲ್ಲೆಯ ಲೊಂಗೋವಾಲ್ ಪಟ್ಟಣದ 42 ವರ್ಷದ ಜಸ್ವಿಂದರ್ ಹೇಳುತ್ತಾರೆ, ಅವರ ಕುಟುಂಬವು ತಮ್ಮ 17 ಎಕರೆ ನೆಲದಲ್ಲಿ ಬೇಸಾಯ ಮಾಡುತ್ತದೆ. "ನಾನು ನನ್ನ ಫಸಲನ್ನು ಮಂಡಿಗೆ ಯಾವುದೇ ಹಿಂಜರಿಕೆ ಅಥವಾ ಭಯವಿಲ್ಲದೆ ತೆಗೆದುಕೊಂಡು ಹೋಗಬಹುದು, ನನಗೆ ಅಲ್ಲಿ ಹಣ ಸಿಗುವ ಭರವಸೆಯಿರುತ್ತದೆ. ನನಗೆ ಇಲ್ಲಿನ ವ್ಯವಹಾರ ಪ್ರಕ್ರಿಯೆಯ ಸಂಪೂರ್ಣ ಅರಿವಿದೆ ಹೀಗಾಗಿ ನನ್ನ ಪಾಲಿನ ಹಣ ನನಗೆ ಸಿಗುವ ಖಾತರಿಯಿರುತ್ತದೆ..ʼʼ
ಮುಖ್ಯ (ಅಥವಾ ಪ್ರಧಾನ) ಯಾರ್ಡುಗಳು ದೊಡ್ಡ ಮಂಡಿಗಳಾಗಿವೆ (ಇಲ್ಲಿನ ಫೋಟೋಗಳಲ್ಲಿ ಸುನಮ್‌ನಲ್ಲಿರುವಂತೆ). ಈ ಯಾರ್ಡುಗಳು ರೈತರಿಗೆಂದೇ ಮೀಸಲಿಡಲಾಗಿರುವ ಫಸಲಿನ ಚೀಲಗಳನ್ನು ಜೋಡಿಸಿಡಲು ವಿವಿಧ ಸೌಲಭ್ಯಗಳು ಮತ್ತು ಜಾಗಗಳನ್ನು ಹೊಂದಿವೆ, ಈ ಸ್ಥಳವು ಸಾಮಾನ್ಯವಾಗಿ ಅವರ ಅರ್ಹತಿಯಾ ( ಕಮಿಷನ್ ಏಜೆಂಟರು ) ಅಂಗಡಿಗಳ ಮುಂದೆ ಇರುತ್ತದೆ. ಮುಖ್ಯ ಯಾರ್ಡಿನಲ್ಲಿ ಆ ವರ್ಷದ ಉತ್ಪನ್ನಗಳಿಗೆ ಸ್ಥಳ ಕಡಿಮೆಯಿದ್ದರೆ ಹತ್ತಿರದ ಸಬ್-ಯಾರ್ಡ್‌ಗಳು ಹೆಚ್ಚುವರಿ ಸ್ಥಳಗಳಾಗಿವೆ. ಸಣ್ಣ ಮಂಡಿಗಳು ಖರೀದಿ ಕೇಂದ್ರಗಳಾಗಿ ಕೆಲಸ ಮಾಡುತ್ತವೆ. ಇವು ಹೆಚ್ಚಾಗಿ ಹಳ್ಳಿಗಳಲ್ಲಿರುತ್ತವೆ (ಇಲ್ಲಿನ ಫೋಟೋಗಳಲ್ಲಿರುವ ಶೆರಾನ್ ಮಂಡಿಯಂತೆ). ಇದು ಒಟ್ಟಾರೆ ಪಂಜಾಬಿನ ವಿಶಾಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹೊಂದಿರುವ ಜಾಲ.
"ನನ್ನ ಬೆಳೆಯನ್ನು ಮಾರಾಟ ಮಾಡಿದ ನಂತರ, ಅರ್ಹತಿಯಾ ನನಗೆ ಜೆ-ಫಾರ್ಮ್ ನೀಡುತ್ತಾರೆ ಮತ್ತು ದುಡ್ಡು ಬರುವ ತನಕ ಅದು ಆಶ್ವಾಸನಾ ಪತ್ರವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಜಸ್ವಿಂದರ್ ಹೇಳುತ್ತಾರೆ. "ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಇದು ಸರ್ಕಾರದ ವ್ಯವಸ್ಥೆಯಾಗಿರುವುದರಿಂದ, ನನಗೆ ಬರಬೇಕಾದ ಹಣಕ್ಕೆ ಏನಾದರೂ ಅಪಾಯ ಎದುರಾದಲ್ಲಿ, ನಾನು ಕಾನೂನಿನ ಅಡಿಯಲ್ಲಿ ಸುರಕ್ಷಿತ ಮತ್ತು ಅದು ದೊಡ್ಡ ಭದ್ರತೆಯೆನ್ನುವುದು ನನಗೆ ತಿಳಿದಿದೆ" ಎಂದು ಅವರು ಮುಂದುವರೆದು ಹೇಳುತ್ತಾರೆ (1961 ರ ಪಂಜಾಬ್ ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾಯ್ದೆಯನ್ನು ಉಲ್ಲೇಖಿಸಿ).
ಖಾಸಗಿ ವ್ಯಾಪಾರಿಗಳು ಅಥವಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ ಮಾರ್ಕ್‌ಫೆಡ್ (ಪಂಜಾಬ್ ಸ್ಟೇಟ್ ಕೋಆಪರೇಟಿವ್ ಸಪ್ಲೈ & ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್)ನಂತಹ ಸರ್ಕಾರಿ ಏಜೆನ್ಸಿಗಳಿಂದ ನಿಯಂತ್ರಿತ ಪ್ರಕ್ರಿಯೆಯಲ್ಲಿ ಬೆಳೆಗಳನ್ನು ಸಂಗ್ರಹಿಸಲಾಗಿದೆ ಎನ್ನುವುದನ್ನು ನೆಟ್‌ವರ್ಕ್ ಖಚಿತಪಡಿಸುತ್ತದೆ, ಇದು ಮುಖ್ಯವಾಗಿ ಗೋಧಿ ಮತ್ತು ಭತ್ತವನ್ನು ಸರ್ಕಾರಿ-ಆದೇಶದ ಕನಿಷ್ಠ ಬೆಂಬಲ ಬೆಲೆಯಡಿ (ಎಮ್‌ಎಸ್‌ಪಿ) ಖರೀದಿಸುತ್ತದೆ. ಧಾನ್ಯವು ಪಂಜಾಬ್‌ನ ಯಾವುದೇ ಮಂಡಿಗಳನ್ನು ತಲುಪಿದ ನಂತರ, ಅದರಲ್ಲಿರುವ ತೇವಾಂಶದ ಪ್ರಮಾಣದಂತಹ ನಿರ್ದಿಷ್ಟ ಮಾನದಂಡಗಳ ಪ್ರಕಾರ ಎಫ್‌ಸಿಐ ಅಥವಾ ಮಾರ್ಕ್‌ಫೆಡ್ ಅಧಿಕಾರಿಗಳು ಅದರ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ನಂತರ ಧಾನ್ಯವನ್ನು ಹರಾಜು ಮಾಡಿ ಮಾರಾಟ ಮಾಡಲಾಗುತ್ತದೆ. ಈ ಸರಪಳಿಯಲ್ಲಿ ನಿರ್ಣಾಯಕ ಕೊಂಡಿಯಾಗಿರುವ ಅರ್ಹತಿಯಾಗಳ ಮೂಲಕ ಈ ಪ್ರಕ್ರಿಯೆಯು ಸಾಗುತ್ತದೆ.
ಹತ್ತಿರದಲ್ಲೇ ಲಭ್ಯತೆ ಮತ್ತು ವಿಶ್ವಾಸಾರ್ಹತೆಯು ಇಂತಹ ವ್ಯವಸ್ಥೆಯ ಪ್ರಮುಖ ಪ್ರಯೋಜನಗಳಾಗಿವೆ ಎಂದು ಪಟಿಯಾಲ ಜಿಲ್ಲೆಯ ಪತ್ರಾನ್ ತಹಸಿಲ್‌ನ ದುಗಲ್ ಕಲಾನ್ ಎನ್ನುವ ಹಳ್ಳಿಯ 32 ವರ್ಷದ ಅಮನ್‌ದೀಪ್ ಕೌರ್ ಹೇಳುತ್ತಾರೆ. “ನನಗೆ ಇದರಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ನನ್ನ ಉತ್ಪನ್ನಗಳನ್ನು ಹಳ್ಳಿಯ ಮಂಡಿಗೆ [ಖರೀದಿ ಕೇಂದ್ರ] ಕೊಂಡೊಯ್ಯಬಹುದು. ಇದು ಅನುಕೂಲಕರವಾಗಿದೆ ಮತ್ತು ನನ್ನ ಬೆಳೆಗೆ [ಎಮ್‌ಎಸ್‌ಪಿ ಪ್ರಕಾರ] ನಾನು ಪಡೆಯಲಿರುವ ದರ ನನಗೆ ತಿಳಿದಿರುತ್ತದೆ. ರಾಜ್ಯದಲ್ಲಿ ಕಬ್ಬಿನ ವಿಷಯದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ಅದಕ್ಕೆ ಈಗ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇಲ್ಲ, ಹಾಗಾಗಿ ರೈತರು ತಮ್ಮ ಉತ್ಪನ್ನಗಳನ್ನು ಕೆಲವೊಮ್ಮೆ ಒಂದು ನಗರಕ್ಕೆ ತೆಗೆದುಕೊಂಡು ಹೋಗಬೇಕು ಇನ್ನೆಲ್ಲೋ ಅಲ್ಲಿಗಿಂತ ಉತ್ತಮ ಬೆಲೆಯಿದ್ದಲ್ಲಿ ಅಲ್ಲಿಗೆ ಕೊಂಡುಹೋಗಬೇಕು. ಒಳ್ಳೆಯ ರೇಟಿಗೆಂದು ಎಷ್ಟು ಊರನ್ನು ಅಲೆಯಲು ಸಾಧ್ಯ?ʼʼ

ಕೊಯ್ಲು ಯಂತ್ರವೊಂದು ಗೋಧಿಯನ್ನು ಟ್ರ್ಯಾಕ್ಟರಿಗೆ ಸುರಿಯುತ್ತಿರುವುದು, ಟ್ರ್ಯಾಕ್ಟರ್ ಅದನ್ನು ಸಂಗ್ರೂರ್ ಜಿಲ್ಲೆಗೆ ಹತ್ತಿರದ ಸುನಮ್ ಮಂಡಿಗೆ ಸಾಗಿಸುತ್ತದೆ. ಈ ಪ್ರಕ್ರಿಯೆಯನ್ನು ದಿನವಿಡೀ ಅನೇಕ ಬಾರಿ ಪುನರಾವರ್ತಿಸಲಾಗುತ್ತದೆ. ಕೊಯ್ಲಿನ ಹಂಗಾಮು ಏಪ್ರಿಲ್ ಮಧ್ಯಭಾಗದಲ್ಲಿ ಬೈಸಾಖಿಯ ಸುಮಾರಿಗೆ ಪ್ರಾರಂಭವಾಗುತ್ತದೆ ಮತ್ತು ಮುಂದಿನ 10 ದಿನಗಳವರೆಗೆ ಈ ಕಾರ್ಯ ಚಟುವಟಿಕೆ ಉತ್ತುಂಗದಲ್ಲಿರುತ್ತದೆ
ಅಮನ್ ದೀಪ್ ಅವರ ಕುಟುಂಬವು 22 ಎಕರೆಗಳಲ್ಲಿ ಬೇಸಾಯ ನಡೆಸುತ್ತದೆ- ಅದರಲ್ಲಿ ಅವರದೇ ಆದ ಆರು ಎಕರೆ ಹೊಲವಿದ್ದರೆ ಉಳಿದವುಗಳನ್ನು ಗುತ್ತಿಗೆಗೆ ತೆಗೆದುಕೊಳ್ಳಲಾಗಿದೆ. "ನಾವು ಅರ್ಹತಿಯಾಗಳ ಮೇಲೂ ಹೆಚ್ಚು ಅವಲಂಬಿತರಾಗಿದ್ದೇವೆ," ಎಂದು ಅವರು ಹೇಳುತ್ತಾರೆ. "ಉದಾಹರಣೆಗೆ, ಮಳೆ ಬಂದು ನಮ್ಮ ಗೋಧಿ ಕೊಯ್ಲು ಒದ್ದೆಯಾದರೆ, ಅದು ಒಣಗುವವರೆಗೆ ಮತ್ತು ಅದರ ಮಾರಾಟ ಖಾತರಿಯಾಗುವ ತನಕ ನಾವು ಅದನ್ನು ಅರ್ಹತಿಯಾಗಳ ಜವಬ್ದಾರಿಯಡಿ ಮಂಡಿಯಲ್ಲಿ 15 ದಿನಗಳವರೆಗೆ ಬಿಡಬಹುದು. ಖಾಸಗಿ ಮಂಡಿಯಲ್ಲಿ ಅದು ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ."
"ಒಮ್ಮೆ ನಾವು ನಮ್ಮ ಉತ್ಪನ್ನವನ್ನು ಮಾರಿದರೆ ಆರು ತಿಂಗಳ ನಂತರ ಅದರ ಹಣ ಬರುತ್ತದೆ, ಆದರೆ ಮಾರಾಟದ ಹಣ ಬರುವವರೆಗೂ ಬದುಕು ನಡೆಸಲು ಆರ್ಹತಿಯಾ ನಮಗೆ ಮುಂಗಡ ಹಣವನ್ನು ನೀಡುತ್ತಾರೆ" ಎಂದು ಗೋಧಿ ಬೆಳೆಗಾರರಾದ ಸಂಗ್ರೂರ್ ತಹಸಿಲ್ (ಮತ್ತು ಜಿಲ್ಲೆ)ನ ಮಾಂಗ್ವಾಲ್ ಎನ್ನುವ ಹಳ್ಳಿಯ 27 ವರ್ಷದ ಜಗಜೀವನ್ ಸಿಂಗ್ ಹೇಳುತ್ತಾರೆ. ಇವರು ಮೂರು ಎಕರೆಯಲ್ಲಿ ಭತ್ತವನ್ನೂ ಬೆಳೆಯುತ್ತಾರೆ. "ಇದಲ್ಲದೆ, ಮಂಡಿಯಲ್ಲಿ ಬೆಂಬಲ ಬೆಲೆಯಿಂದಾಗಿ ಕನಿಷ್ಟ ನಮ್ಮ ಬೆಳೆ ವೆಚ್ಚವಾದರೂ ಕೈಗೆ ಸಿಗುವ ಭರವಸೆಯಿರುತ್ತದೆ."
ಆದಾಗ್ಯೂ, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, 2020, ಮಧ್ಯವರ್ತಿಗಳನ್ನು ತೆಗೆದುಹಾಕಲು ಮತ್ತು ರೈತನು ತನ್ನ ಉತ್ಪನ್ನಗಳನ್ನು ನೇರವಾಗಿ ಖರೀದಿಸುವವನಿಗೆ ಮಾರಾಟ ಮಾಡಲು ಅನುಮತಿಸುವ ಗುರಿಯನ್ನು ಹೊಂದಿದೆ. ಇದು 1960ರ ದಶಕದ ಮಧ್ಯಭಾಗದಲ್ಲಿ ಹಸಿರು ಕ್ರಾಂತಿಯ ಅವಧಿಯಲ್ಲಿ ಪ್ರಾರಂಭವಾಗಿ ಪಂಜಾಬಿನಲ್ಲಿ ದಶಕಗಳಿಂದ ನಿರ್ಮಿಸಲಾಗಿರುವ ವಿಶ್ವಾಸಾರ್ಹ ಮಾರುಕಟ್ಟೆ ಸರಪಳಿಯಲ್ಲಿ ಅರ್ಹತಿಯಾ ಮತ್ತು ಇತರ ಸಂಪರ್ಕಗಳೊಂದಿಗಿನ ಎಪಿಎಂಸಿ ಮಂಡಿಗಳ ಸರಪಳಿಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ.
ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಈ ಕಾನೂನನ್ನು ವಿರೋಧಿಸುತ್ತಿದ್ದಾರೆ. ಈ ಕಾನೂನು ತಮ್ಮನ್ನು ಹಲವು ದಶಕಗಳಿಂದ ಕಾಪಾಡಿಕೊಂಡು ಬಂದಿರುವ ಈ ಬೆಂಬಲ ವ್ಯವಸ್ಥೆಯನ್ನು ತೊಡೆದುಹಾಕುತ್ತದೆಯೆನ್ನುವುದು ಅವರ ಕಳವಳ. ಈ ಕಾನೂನಿನೊಡನೆ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ-2020 ,ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 ಕಾಯ್ದೆಗಳನ್ನೂ. ರೈತರು ವಿರೋಧಿಸುತ್ತಿದ್ದಾರೆ. ಈ ಕಾನೂನುಗಳನ್ನು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳ ಮೂಲಕ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳ ರೂಪದಲ್ಲಿ ಪರಿಚಯಿಸಲಾಯಿತು, ಅದೇ ತಿಂಗಳ 20 ರಂದು ಅವುಗಳನ್ನು ಕಾಯ್ದೆ ರೂಪದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲಾಯಿತು.
ಈ ಪ್ರತಿಭಟನೆಗಳು ನವೆಂಬರ್ 26, 2020ರಂದು ಪ್ರಾರಂಭವಾದವು ಮತ್ತು ಅದಕ್ಕೂ ಮೊದಲೇ ಪಂಜಾಬಿನಲ್ಲಿ ಪ್ರಾರಂಭವಾಗಿದ್ದವು- ಆಗಸ್ಟ್ ಮಧ್ಯಭಾಗದಲ್ಲಿ ಪ್ರಾರಂಭವಾದ ಕೋಲಾಹಲಗಳು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಹೋರಾಟದ ರೂಪು ಪಡೆದಿತ್ತು.
ಪಂಜಾಬ್‌ನ ಅರ್ತಿಯಾಗಳ ಅಸೋಸಿಯೇಷನ್ ರೈತರ ಪ್ರತಿಭಟನೆಗಳನ್ನು ಬೆಂಬಲಿಸುತ್ತದೆ. ಅದರ ಅಧ್ಯಕ್ಷರಾದ ರವೀಂದರ್ ಚೀಮಾ, ಮಂಡಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಒಂದು ಆಯ್ಕೆಯನ್ನು ಒದಗಿಸುತ್ತದೆ ಎಂದು ಹೇಳುತ್ತಾರೆ. "ಸರ್ಕಾರಿ ಸಂಸ್ಥೆಗಳ ಜೊತೆಯಲ್ಲಿ, [ಖಾಸಗಿ] ವ್ಯಾಪಾರಿಗಳೂ ಮಂಡಿಗಳಲ್ಲಿ ಇರುತ್ತಾರೆ. ಹಾಗಾಗಿ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲವೆನ್ನಿಸಿದರೆ ಇಲ್ಲೇ ಇನ್ನೊಂದು ಆಯ್ಕೆಯಿದೆ. ಹೊಸ ಕಾನೂನು ರೈತನ ಬಳಿ ಇರುವ ಈ ಚೌಕಾಶಿ ಶಕ್ತಿಯನ್ನು ಇಲ್ಲವಾಗಿಸುತ್ತದೆ ಮತ್ತು ವ್ಯಾಪಾರಿಗೆ ಖರೀದಿಯನ್ನು ಮಂಡಿಗಳ ಹೊರಗೆ ಮಾರಾಟ ಮಾಡಲು ಅವಕಾಶ ನೀಡುತ್ತದೆ - ಅಂದರೆ ಯಾವುದೇ ತೆರಿಗೆ ಇಲ್ಲ (ಎಂಎಸ್‌ಪಿ ಮೇಲೆ ವ್ಯಾಪಾರಿ ತೆರಿಗೆ ಪಾವತಿಸಬೇಕು). ಹಾಗಾಗಿ ಯಾವುದೇ ವ್ಯಾಪಾರಿಗಳು ಮಂಡಿಗೆ ಧಾನ್ಯ ಖರೀದಿಸಲು ಬರುವುದಿಲ್ಲ ಮತ್ತು ಎಪಿಎಂಸಿ ವ್ಯವಸ್ಥೆಯು ದಿನಗಳೆದಂತೆ ಬೆಲೆ ಕಳೆದುಕೊಳ್ಳುತ್ತದೆ. ಎಂದು ಚೀಮಾ ಹೇಳುತ್ತಾರೆ.

ಹಸಿರು ಕ್ರಾಂತಿ ಯುಗದ ನಂತರ ಪಂಜಾಬಿನಲ್ಲಿ ಕೊಯ್ಲು ಪ್ರಕ್ರಿಯೆಯನ್ನು ಹೆಚ್ಚಾಗಿ ಯಾಂತ್ರೀಕೃತಗೊಳಿಸಲಾಗಿದೆ. 2019-20ರಲ್ಲಿ ರಾಜ್ಯದಲ್ಲಿ ಸುಮಾರು 176 ಲಕ್ಷ ಟನ್ ಗೋಧಿಯನ್ನು ಉತ್ಪಾದಿಸಲಾಯಿತು, ಇದನ್ನು ಸುಮಾರು 35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಯಿತು, ಪ್ರತಿ ಎಕರೆಗೆ ಸರಾಸರಿ 20.3 ಕ್ವಿಂಟಾಲ್ ಇಳುವರಿ ಬಂದಿದೆ

ಏಪ್ರಿಲ್ 14, 2021ರಂದು ಸಂಗ್ರೂರ್ ಜಿಲ್ಲೆಯ ಸುನಮ್ ಮಂಡಿಯಲ್ಲಿ ಗೋಧಿಯನ್ನು ಇಳಿಸುತ್ತಿರುವುದು

ಪಂಜಾಬಿನ ಎಲ್ಲ ರೈತರು ತಮ್ಮ ಉತ್ಪನ್ನಗಳನ್ನು ಹರಾಜಿಗೆ ಮಂಡಿಗಳಿಗೆ ತರುತ್ತಾರೆ: ಸುಮಾರು 132 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರಾಜ್ಯ ಮತ್ತು ಒಕ್ಕೂಟ ಸರ್ಕಾರದ ಸಂಸ್ಥೆಗಳು 2021ರಲ್ಲಿ ಖರೀದಿಸಿದವು (ಖಾಸಗಿ ವ್ಯಾಪಾರಿಗಳು ಒಟ್ಟು ಉತ್ಪನ್ನದ ಶೇಕಡಾ 1ಕ್ಕಿಂತಲೂ ಕಡಿಮೆ ಖರೀದಿಸುತ್ತಾರೆ)

ಸಂಗ್ರೂರ್ ಜಿಲ್ಲೆಯ ಶೆರಾನ್ ಗ್ರಾಮದ 66 ವರ್ಷದ ರೈತರಾದ ರೂಪ್ ಸಿಂಗ್: ಅವರು ಸ್ಥಳೀಯ ಮಂಡಿಯಲ್ಲಿ ತಮ್ಮ ಉತ್ಪನ್ನಗಳೊಂದಿಗೆ ಕುಳಿತಿದ್ದರು ಮತ್ತು ಅದು ಬಂದಾಗಿನಿಂದ ಅದನ್ನು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ – ಈ ಪ್ರಕ್ರಿಯೆಯು 3ರಿಂದ 7 ದಿನಗಳವರೆಗೆ ತೆಗೆದುಕೊಳ್ಳಬಹುದು

ಸುನಮ್ ಯಾರ್ಡಿನಲ್ಲಿ ಗೋಧಿಯನ್ನು ಹೊತ್ತ ಮಹಿಳಾ ಕಾರ್ಮಿಕರು, ಧಾನ್ಯದಿಂದ ಹೊಟ್ಟನ್ನು ತೆಗೆಯುವ ಥ್ರೆಷರ್‌ಗೆ ಸಾಗಿಸುತ್ತಿರುವುದು. ಮಹಿಳೆಯರು ಮಂಡಿ ಕೆಲಸದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ

ಸುನಮ್ ಮಂಡಿಯಲ್ಲಿ ಕಾರ್ಮಿಕರೊಬ್ಬರು ಗೋಧಿಯ ರಾಶಿಯನ್ನು ಸ್ವಚ್ಛಗೊಳಿಸುತ್ತಿರುವುದು, ಅವರಿಲ್ಲಿ ಮೇಲ್ಭಾಗದಲ್ಲಿರುವ ಹೊಟ್ಟನ್ನು ಗುಡಿಸಿ ತೆಗೆಯುತ್ತಿದ್ದಾರೆ, ಅವರ ಹಿಂದೆ ಥ್ರೆಷರ್ ಕಾರ್ಯಪ್ರವೃತ್ತವಾಗಿದೆ

ಶೆರಾನ್ ಮಂಡಿಯಲ್ಲಿ ಕೆಲಸಗಾರರೊಬ್ಬರು ಮಾರಾಟವಾದ ಗೋಧಿಯ ಚೀಲಗಳನ್ನು ಹೊಲಿಯುತ್ತಿರುವುದು. ಈ ಪ್ರಕ್ರಿಯೆಗಾಗಿ ಕಾರ್ಮಿಕರನ್ನು ಅರ್ಹತಿಯಾಗಳೇ ನೇಮಿಸಿಕೊಳ್ಳುತ್ತಾರೆ

ಶೆರಾನ್ ಮಂಡಿಯಲ್ಲಿ, ಏಪ್ರಿಲ್ 15, 2021: ಗೋಧಿಯನ್ನು ತೂಗುತ್ತಿರುವುದು

ಶೆರಾನ್ ಮಂಡಿಯ ಕಾರ್ಮಿಕರು ಮಧ್ಯಾಹ್ನದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು. ಇಲ್ಲಿನ ಹೆಚ್ಚಿನ ಕಾರ್ಮಿಕರು ಈಗ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದವರು

ಸುನಮ್ ಮಂಡಿಯಲ್ಲಿ ಕಾರ್ಮಿಕರು ಮತ್ತು ರೈತರು ಗೋಧಿಯ ಮೂಟೆಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು, ಇದರಲ್ಲಿ ಸರ್ಕಾರಿ ಸಂಸ್ಥೆಗಳು ಖರೀದಿಸಿದ ಧಾನ್ಯಗಳ ಸಂಗ್ರಹವಿದೆ

ಮಾರಾಟವಾದ ಗೋಧಿ ಚೀಲಗಳನ್ನು ಟ್ರಕ್ಕುಗಳಿಗೆ ಲೋಡ್ ಮಾಡಲಾಗುತ್ತದೆ, ಅವು ಉತ್ಪನ್ನಗಳನ್ನು ಗೋಡೌನ್ ಗಳು ಮತ್ತು ಮಾರುಕಟ್ಟೆಗಳಿಗೆ ಸಾಗಿಸುತ್ತವೆ

ಶೆರಾನ್ ಮಂಡಿಯಲ್ಲಿ ಸಂಜೆ ಕಾರ್ಮಿಕರು. ಕೊಯ್ಲಿನ ಉತ್ತುಂಗದ ದಿನಗಳಲ್ಲಿ ಗೋಧಿ ಕೊಯ್ಲಿನ ಪ್ರಮಾಣವು ದೊಡ್ಡದಾಗಿರುತ್ತದೆ, ಆದ್ದರಿಂದ ಅವರು ಹೆಚ್ಚಿನ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ರಾತ್ರಿಯಲ್ಲೂ ಧಾನ್ಯಗಳಿಂದ ತುಂಬಿದ ಟ್ರ್ಯಾಕ್ಟರುಗಳು ಇಲ್ಲಿಗೆ ಆಗಮಿಸುತ್ತವೆ

ಶೆರಾನ್ ಮಂಡಿಯಲ್ಲಿ ಇನ್ನೂ ಮಾರಾಟವಾಗದ ಗೋಧಿಯ ರಾಶಿಯ ನಡುವೆ ರೈತರೊಬ್ಬರು ನಡೆದು ಹೋಗುತ್ತಿರುವುದು

ಶೆರಾನ್ ಮಂಡಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ರೈತರು

ರೈತರೊಬ್ಬರು ತಾನು ತಂದಿರುವ ಗೋಧಿ ಮಾರಾಟವಾಗುವವರೆಗೂ ರಾತ್ರಿಯ ವೇಳೆ ಮಲಗಲು ತಾತ್ಕಾಲಿಕ ಹಾಸಿಗೆ ಸಿದ್ಧಪಡಿಸುತ್ತಿರುವುದು

ಸಂಗ್ರೂರ್ ಜಿಲ್ಲೆಯ ನಮೋಲ್ ಗ್ರಾಮದ ಮಹೇಂದರ್ ಸಿಂಗ್ ಸುನಮ್ ಮಂಡಿಯೊಳಗಿನ ತಮ್ಮ ಅರ್ತಿಯಾ ಅಂಗಡಿಯಲ್ಲಿ ಕುಳಿತಿರುವುದು. ಅರ್ಹತಿಯಾಗಳು ಲೇವಾದೇವಿಗಾರ ಪಾತ್ರ ನಿರ್ವಹಿಸುವುದಲ್ಲದೆ, ರೈತರಿಗೆ ಕೀಟನಾಶಕಗಳು, ರಸಗೊಬ್ಬರಗಳು ಮತ್ತು ಇತರ ಕೃಷಿ ಪೂರಕಗಳನ್ನು ಒದಗಿಸುವುದರಲ್ಲಿಯೂ ಸಹಾಯ ಮಾಡುತ್ತಾರೆ

ರವೀಂದರ್ ಸಿಂಗ್ ಚೀಮಾ, ಪಂಜಾಬ್‌ನ ಅರ್ಹತಿಯಾ ಅಸೋಸಿಯೇಶನ್‌ನ ಸುನಮ್ ಮಂಡಿ ವಿಭಾಗದ ಅಧ್ಯಕ್ಷರು. ಖಚಿತವಾದ ಬೆಂಬಲ ಬೆಲೆಯಿಲ್ಲದೆ ಹೋದರೆ ರೈತನನ್ನು ಖಾಸಗಿ ವ್ಯಾಪಾರಿ ಶೋಷಣೆಗೊಳಪಡಿಸುತ್ತಾನೆ ಎಂದು ಅವರು ಹೇಳುತ್ತಾರೆ

ಸಂಗ್ರೂರ್ ಜಿಲ್ಲೆಯ ಸುನಮ್ ಮಂಡಿ ಒಂದು ಪ್ರಮುಖ ಮಂಡಿಯಾಗಿದೆ. ರಾಜ್ಯದ ಮಂಡಿಗಳಲ್ಲಿ ಚಟುವಟಿಕೆಯ ಮುಖ್ಯ ಹಂಗಾಮು ಗೋಧಿ ಕೊಯ್ಲು (ಏಪ್ರಿಲ್) ಮತ್ತು ಭತ್ತದ ಕೊಯ್ಲು (ಅಕ್ಟೋಬರ್-ನವೆಂಬರ್) ಸಮಯದಲ್ಲಿಯಾದರೂ, ಈ ಮಾರುಕಟ್ಟೆಗಳು ವರ್ಷವಿಡೀ ಕಾರ್ಯನಿರ್ವಹಿಸುತ್ತಾ, ಬೇಳೆಕಾಳುಗಳು, ನಡುನಡುವೆ ಬರುವ ಹತ್ತಿ ಮತ್ತು ಎಣ್ಣೆಕಾಳುಗಳಂತಹ ಇತರ ಬೆಳೆಗಳ ವ್ಯವಾಹರ ಮಾಡುತ್ತವೆ
ಈ ಲೇಖನದಲ್ಲಿ ಬಳಸಲಾಗಿರುವ ಫೋಟೋಗಳನ್ನು ಏಪ್ರಿಲ್ 14-15,2021ರಂದು ತೆಗೆದುಕೊಳ್ಳಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು