ಬಂಧನದ ಆಘಾತದಿಂದ ಎಳೆಯ ಖಮ್ರಿ ಇನ್ನೂ ಚೇತರಿಸಿಕೊಂಡಿಲ್ಲ.
“ಅದರ ಆರೋಗ್ಯ ಮರಳಲು ಇನ್ನಷ್ಟು ದಿನ ಬೇಕು” ಎನ್ನುತ್ತಾರೆ ಕಮ್ಮಭಾಯಿ ಲಖಾಭಾಯಿ ರಬರಿ.
ಪಶುಪಾಲಕರಾದ ಅವರು ತಮ್ಮ ಸಣ್ಣ ಒಂಟೆಯ ಕುರಿತು ಮಾತನಾಡುತ್ತಿದ್ದರು.
2022ರ ಜನವರಿಯಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಸ್ಥಳೀಯ ಪೊಲೀಸರು 58 ಒಂಟೆಗಳನ್ನು ವಶಕ್ಕೆ ಪಡೆದ ಅಸಾಧಾರಣ ಘಟನೆಗಳನ್ನು ನೆನಪಿಸಿಕೊಂಡರೆ ಕಮ್ಮಭಾಯ್ ಅವರ ಭರವಸೆಯ ಧ್ವನಿಯನ್ನು ಅರ್ಥಮಾಡಿಕೊಳ್ಳಬಹುದು. ಒಂದು ತಿಂಗಳ ನಂತರ ಫೆಬ್ರವರಿಯಲ್ಲಿ ಬಿಡುಗಡೆಯಾದರೂ, ಎಲ್ಲಾ ಒಂಟೆಗಳು ಕಳಪೆ ಆರೋಗ್ಯದ ಚಿಹ್ನೆಗಳನ್ನು ತೋರಿಸಿದವು.
ಅವುಗಳನ್ನು ಸಾಕುತ್ತಿದ್ದ ಪಶುಪಾಲಕರು, ಬಂಧನದಲ್ಲಿದ್ದ ಸಮಯದಲ್ಲಿ ತಮ್ಮ ಒಂಟೆಗಳಿಗೆ ತಮ್ಮ ನಿಯಮಿತ ಆಹಾರವನ್ನು ತಿನ್ನಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ. ಅವುಗಳನ್ನು ಇರಿಸಲಾದ ಗೋ ಸಂರಕ್ಷಣಾ ಕೇಂದ್ರವು ವಾಸ್ತವವಾಗಿ ದನಗಳ ಆಶ್ರಯ ತಾಣವಾಗಿತ್ತು. "ಅವು ಬಯಲಿನಲ್ಲಿ ಮೇಯುವ ಪ್ರಾಣಿಗಳು ಮತ್ತು ದೊಡ್ಡ ಮರಗಳ ಎಲೆಗಳನ್ನು ತಿನ್ನುತ್ತವೆ," ಎಂದು ಕಮ್ಮಭಾಯ್ ಹೇಳುತ್ತಾರೆ. ಅವು ದನಗಳ ಆಹಾರವನ್ನು ತಿನ್ನುವುದಿಲ್ಲ."


ಎಡ: ಒಂಟೆಗಳನ್ನು ಬಂಧಿಸಿ ಅಮರಾವತಿ ಜಿಲ್ಲೆಯ ಗೋರಕ್ಷಣಾ ಸಂಸ್ಥೆಯ ಸೀಮಿತ ಸ್ಥಳದಲ್ಲಿ ಇರಿಸಲಾಯಿತು. ಬಲ: ಬಂಧನದ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಖಮ್ರಿ ಎಂಬ ಎಳೆಯ ಗಂಡು ಒಂಟೆಯೊಂದಿಗೆ ಕಮ್ಮಭಾಯ್
ಹೀಗಾಗಿ ಅವುಗಳಿಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಸೋಯಾಬೀನ್ ಮತ್ತು ಇತರ ಬೆಳೆಗಳ ಹುಲ್ಲು ಇತ್ಯಾದಿ ಮೇವು ಅವುಗಳಿಗೆ ಬಲವಂತವಾಗಿ ತಿನ್ನಿಸಿದ ಕಾರಣ ಅವುಗಳ ಆರೋಗ್ಯ ಏರುಪೇರಾಯಿತು. 2022ರ ಫೆಬ್ರವರಿ ತಿಂಗಳ ಮಧ್ಯ ಭಾಗದಲ್ಲಿ ಅವುಗಳ ಆತಂಕಭರಿತ ಮಾಲಿಕರ ಬಳಿಗೆ ಮರಳುವ ಹೊತ್ತಿಗೆ ಅವು ಬಳಲಿದ್ದವು. ಅಲ್ಲದೆ ಅವುಗಳ ಸಾವಿನ ಸಂಖ್ಯೆ ಹೆಚ್ಚತೊಡಗಿತು. ಜುಲೈ ತಿಂಗಳ ವೇಳೆಗೆ 24 ಒಂಟೆಗಳು ಮರಣ ಹೊಂದಿದ್ದವು.
ಹಠಾತ್ ಪ್ರತ್ಯೇಕತೆ ಮತ್ತು ನಂತರದ ಬಂಧನದ ಆಘಾತವೇ ಇದಕ್ಕೆ ಕಾರಣ ಎಂದು ಮಾಲೀಕರು ದೂಷಿಸುತ್ತಾರೆ. ಕಮ್ಮಭಾಯ್ ಅವರಂತಹ ನಾಲ್ವರು ಮಾಲೀಕರು ರಬರಿ ಸಮುದಾಯಕ್ಕೆ ಸೇರಿದವರು; ಒಬ್ಬರು ಫಕೀರಣಿ ಜಾಟ್. ಇವರೆಲ್ಲರೂ ಮೂಲತಃ ಗುಜರಾತಿನ ಕಛ್-ಭುಜ್ ಜಿಲ್ಲೆಯ ಸಾಂಪ್ರದಾಯಿಕ ಒಂಟೆ ಸಾಕಾಣಿಕೆದಾರರು.
ಒಂದು ಕ್ರೂರ ಸನ್ನಿವೇಶದಲ್ಲಿ, ಅಸಹಾಯಕ ಪಶುಪಾಲಕರು ಕೇಂದ್ರವು ನಿರ್ಧರಿಸಿದ ಸೂಕ್ತವಲ್ಲದ ಆಹಾರಕ್ಕಾಗಿ ಪ್ರತಿ ಒಂಟೆಯ ದೈನಂದಿನ ಮೇವಿಗೆ 350 ರೂ.ಗಳನ್ನು ಪಾವತಿಸಬೇಕಾಯಿತು. ಗೋರಕ್ಷಣ ಸಂಸ್ಥೆಯ ಲೆಕ್ಕಾಚಾರದಂತೆ ಬಿಲ್ 4 ಲಕ್ಷ ರೂ. ಗೋಶಾಲೆಯು ತನ್ನನ್ನು ಒಂದು ಸ್ವಯಂಸೇವಾ ಸಂಸ್ಥೆ ಎಂದು ಕರೆದುಕೊಳ್ಳುತ್ತದೆ ಆದರೆ ಒಂಟೆಗಳ ಆರೈಕೆ ಮತ್ತು ಪೋಷಣೆಗಾಗಿ ಅದು ರಬರಿಗಳಿಗೆ ಶುಲ್ಕವನ್ನು ವಿಧಿಸಿತು.
"ವಿದರ್ಭದೆಲ್ಲೆಡೆಯಿರುವ ನಮ್ಮ ಜನರಿಂದ ಹಣವನ್ನು ಸಂಗ್ರಹಿಸಲು ನಮಗೆ ಎರಡು ದಿನಗಳು ಬೇಕಾಯಿತು" ಎಂದು ಸರಕುಗಳನ್ನು ಸಾಗಿಸಲು ಒಂಟೆಗಳನ್ನು ಬಳಸುವ ಅನುಭವಿ ಪಶುಪಾಲಕ ಜಕಾರ ರಬರಿ ಹೇಳುತ್ತಾರೆ. ಅವರು ನಾಗ್ಪುರ ಜಿಲ್ಲೆಯ ಸಿರ್ಸಿ ಗ್ರಾಮದ ಡೇರಾ (ಶಿಬಿರ/ನೆಲೆ)ದಲ್ಲಿ ವಾಸಿಸುತ್ತಿದ್ದಾರೆ ಮತ್ತು ಮಧ್ಯ ಭಾರತದಾದ್ಯಂತ ಸಾಗಿಸಲಾಗುವ ಒಂಟೆಗಳನ್ನು ಸ್ವೀಕರಿಸಬೇಕಿದ್ದ ಈ ಸ್ಥಳದಿಂದ 20 ಕುಟುಂಬಗಳಲ್ಲಿ ಒಬ್ಬರಾಗಿದ್ದರು.


ಎಡ: ಅಮರಾವತಿ ಮೂಲದ ಪ್ರಾಣಿ ರಕ್ಷಣಾ ಸಂಸ್ಥೆಯ ಕಾರ್ಯಕರ್ತರ ಕೇಂದ್ರದಲ್ಲಿನ ಒಳಜಗಳದಿಂದಾಗಿ ಒಂಟೆಯ ಕಾಲಿಗೆ ಗಾಯಗಳಾಗಿವೆ. ಬಲ: ಅಮರಾವತಿಯ ಸರ್ಕಾರಿ ಪಶುವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪಶುವೈದ್ಯರಿಗೆ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಒಂಟೆಗಳನ್ನು ಟ್ಯಾಗ್ ಮಾಡಲು ಸಹಾಯ ಮಾಡುತ್ತಿರುವ ರಬರಿ ಮಾಲೀಕರು
*****
ಒಂದು ವರ್ಷದ ಹಿಂದೆ ಹೈದರಾಬಾದಿನ ಸ್ವಯಂ ಘೋಷಿತ ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಐವರು ಪಶುಪಾಲಕರ ವಿರುದ್ಧ ತಲೇಗಾಂವ್ ದಶಾಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೈದರಾಬಾದಿನ ಕಸಾಯಿಖಾನೆಗಳಿಗೆ ಒಂಟೆಗಳನ್ನು ಸಾಗಿಸುತ್ತಿದ್ದ ಆರೋಪ ಅವರ ಮೇಲಿತ್ತು. ರಬರಿಗಳು ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದರು. ಅಮರಾವತಿ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಬರುವ ನಿಂಗವ್ಹಾನ್ ಎಂಬ ಹಳ್ಳಿಯಲ್ಲಿ ಪೊಲೀಸರು ಐವರು ಪಶುಪಾಲಕರನ್ನು ಬಂದಿಸಿದರು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಸೆಕ್ಷನ್ 11 (1) (ಡಿ) ಅಡಿಯಲ್ಲಿ ಮಾಲೀಕರ ವಿರುದ್ಧ ಆರೋಪ ಹೊರಿಸಲಾಯಿತು ಮತ್ತು ಒಂಟೆಗಳನ್ನು ಬಂಧನದಲ್ಲಿ ಅಮರಾವತಿಯ ಗೋರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಯಿತು. (ಓದಿ: ಕಛ್ ಒಂಟೆಗಳ ಬಂಧನ: ಅನಾಥ ಹಡಗುಗಳು ).
ಸ್ಥಳೀಯ ನ್ಯಾಯಾಲಯವು ತಕ್ಷಣವೇ ಮಾಲೀಕರಿಗೆ ಜಾಮೀನು ನೀಡಿದ್ದರೂ, ಅವರ ಜಾನುವಾರುಗಳ ಕುರಿತಾದ ಹೋರಾಟವು ಮುಂದಕ್ಕೆಳೆಯಲ್ಪಟ್ಟಿತು ಮತ್ತು ಜಿಲ್ಲಾ ನ್ಯಾಯಾಲಯದವರೆಗೆ ಹೋಯಿತು. ಜನವರಿ 25, 2022ರಂದು ಅಮರಾವತಿಯ ಮ್ಯಾಜಿಸ್ಟ್ರೇಟ್ ಒಂಟೆಗಳ ಕಸ್ಟಡಿ ಹಕ್ಕುಗಳಿಗಾಗಿ ಗೋರಕ್ಷಣ್ ಸಂಸ್ಥೆ ಸೇರಿದಂತೆ ಮೂರು ಪ್ರಾಣಿ ಹಕ್ಕುಗಳ ಸಂಘಟನೆಗಳ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಕೆಲವು ಷರತ್ತುಗಳನ್ನು ಪೂರೈಸಿದ ನಂತರ ಐದು ರಬರಿ ಪಶುಪಾಲಕರಿಗೆ ಅರ್ಜಿ ಸಲ್ಲಿಸಲು ಅದು ಅವಕಾಶ ನೀಡಿತು.
ಗೋರಕ್ಷಣಾ ಸಂಸ್ಥೆಯು ಖಚಿತಪಡಿಸಿದಂತೆ ಪ್ರಾಣಿಗಳ ನಿರ್ವಹಣೆ ಮತ್ತು ಆರೈಕೆಗಾಗಿ 'ಸೂಕ್ತ ಶುಲ್ಕ' ಪಾವತಿಸುವಂತೆ ಪಶುಪಾಲಕರಿಗೆ ತಿಳಿಸಲಾಯಿತು. ಫೆಬ್ರವರಿ 2022ರಲ್ಲಿ, ಅಮರಾವತಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರತಿ ಒಂಟೆಗೆ ದಿನಕ್ಕೆ 200 ರೂ.ಗಳ ಶುಲ್ಕವನ್ನು ನಿಗದಿಪಡಿಸಿತು.
ಈಗಾಗಲೇ ಶುಲ್ಕವನ್ನು ಅತಿಯಾಗಿ ಪಾವತಿಸಿದ್ದರಿಂದ ಹೆಚ್ಚುವರಿ ಹಣವನ್ನು ಸಂಗ್ರಹಿಸಬೇಕಾದ ಅಗತ್ಯ ಬೀಳದ ಕಾರಣ ರಬರಿಗಳಿಗೆ ಇದು ಪರಿಹಾರವಾಗಿತ್ತು.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಮರಾವತಿ ಪಟ್ಟಣದ ಹೊರವಲಯದಲ್ಲಿ ಕುಸಿದುಬಿದ್ದ ಒಂಟೆಯನ್ನು ರಬರಿ ಸಮುದಾಯದ ಪಶುಪಾಲಕ ಉಪಚರಿಸುತ್ತಿರುವುದು
"ನ್ಯಾಯಾಲಯದ ವೆಚ್ಚಗಳು, ವಕೀಲರ ಶುಲ್ಕ ಮತ್ತು ಐವರು ಪಶುಪಾಲಕ ಆರೋಪಿಗಳನ್ನು ನೋಡಿಕೊಳ್ಳಲು ನಾವು ಸುಮಾರು 10 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇವೆ" ಎಂದು ಜಕಾರಾ ರಬರಿ ಹೇಳುತ್ತಾರೆ.
ಫೆಬ್ರವರಿ 2022ರ ಮಧ್ಯದಲ್ಲಿ ಒಂಟೆಗಳನ್ನು ಅಂತಿಮವಾಗಿ ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಯಿತು, ಅವರು ತಮ್ಮ ಒಂಟೆಗಳು ಅನಾರೋಗ್ಯದಿಂದ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಗಮನಿಸಿದರು. ಅವುಗಳಲ್ಲಿ ಎರಡು ಒಂಟೆಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಮರಾವತಿ ಪಟ್ಟಣದ ಹೊರವಲಯದಲ್ಲಿ ಸಾವನ್ನಪ್ಪಿದವು.
ಮುಂದಿನ 3-4 ತಿಂಗಳುಗಳಲ್ಲಿ, ಇತರವು ಸಹ ಬೀಳತೊಡಗಿದವು. ಛತ್ತೀಸ್ಗಢದ ಬಲೋಡಾ ಬಜಾರ್ ಜಿಲ್ಲೆಯ ತಾವು ತಂಗಿರುವ ಬಿಡಾರದಿಂದ ದೂರವಾಣಿಯಲ್ಲಿ ಪರಿಯೊಂದಿಗೆ ಮಾತನಾಡಿದ ಸಾಜನ್ ರಬರಿ, "ಮಾರ್ಚ್ನಿಂದ ಏಪ್ರಿಲ್ ತನಕ, ಒಂಟೆಗಳ ಅನಾರೋಗ್ಯದ ಕಾರಣದಿಂದಾಗಿ ನಾವು ಹೆಚ್ಚು ದೂರ ನಡೆಯಲು ಸಾಧ್ಯವಾಗಲಿಲ್ಲ" ಎಂದು ಹೇಳುತ್ತಾರೆ. "ಬೇಸಿಗೆಯಲ್ಲಿ ಅವುಗಳಿಗೆ ನಮ್ಮ ಡೇರಾಗಳಿಗೆ ಹೋಗುವ ದಾರಿಯುದ್ದಕ್ಕೂ ಹಸಿರು ಎಲೆ ತಿನ್ನಲು ಸಿಗಲಿಲ್ಲ ಮತ್ತು ಮಾನ್ಸೂನ್ ಬಂದಾಗ, ಅವು ತುಂಬಾ ದುರ್ಬಲವಾಗಿದ್ದವು, ಅನಾರೋಗ್ಯಕ್ಕೆ ಒಳಗಾಗಿ ಒಂದೊಂದೇ ಒಂಟೆ ಸಾಯತೊಡಗಿದವು" ಎಂದು ಅವರು ಹೇಳುತ್ತಾರೆ. ಅವರು ಗುಂಪಿನಿಂದ ಪಡೆದ ನಾಲ್ಕು ಒಂಟೆಗಳಲ್ಲಿ, ಎರಡು ಸತ್ತವು.
ವಾಸ್ತವವಾಗಿ ಛತ್ತೀಸಗಢ ಮತ್ತು ಆಂಧ್ರಪ್ರದೇಶದ ರಬರಿ ಸಮುದಾಯಗಳಿಗೆ ಮೀಸಲಾದ ಹೆಚ್ಚಿನ ಒಂಟೆಗಳು ದಾರಿಯಲ್ಲಿ ಅಥವಾ ಅವರ ಬಿಡಾರಗಳನ್ನು ತಲುಪಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದವು.
ಬದುಕುಳಿದ 34 ಒಂಟೆಗಳು ತಮ್ಮ ಬಂಧನದ ಆಘಾತದಿಂದ ಇನ್ನೂ ಚೇತರಿಸಿಕೊಳ್ಳಬೇಕಾಗಿದೆ.


ಎಡ: ಕೇಂದ್ರದಲ್ಲಿ ತಮ್ಮ ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾದವು ಎಂದು ರಬರಿ ಪಶುಪಾಲಕರು ಹೇಳುತ್ತಾರೆ. ಬಲ: ಅವರ ಜಾನುವಾರುಗಳನ್ನು ವಶಕ್ಕೆ ಪಡೆದ ನಂತರ ಕಾರವಾನ್ ವಾರ್ಧಾ ಜಿಲ್ಲೆಯ ತಮ್ಮ ಬಿಡಾರದ ಕಡೆಗೆ ನಡೆದುಕೊಂಡು ಹೋಗುತ್ತಿದೆ. 'ನಮಗೆ ತೊಂದರೆ ಕೊಡುವುದರಿಂದ ದೂರುದಾರರಿಗೆ ಏನು ಲಾಭವಾಯಿತು?'
*****
ಜೀವ ಉಳಿದಿದ್ದು ಖಮ್ರಿಯ ಅದೃಷ್ಟ
ಕಮ್ಮಭಾಯ್ ಅವರು ಎರಡು ವರ್ಷದ ಈ ಎಳೆಯ ಒಂಟೆ ಸಂಪೂರ್ಣವಾಗಿ ಸುಧಾರಿಸಿಕೊಳ್ಳುವ ತನಕ ಸಾರಿಗೆಗೆ ಬಳಸುವುದಿಲ್ಲ ಎಂದು ಹೇಳುತ್ತಾರೆ.
ಇತರ ಒಂಟೆಗಳ ಜೊತೆಗೆ, ಇದನ್ನು ಮರಕ್ಕೆ ಕಟ್ಟಲಾಗಿದೆ, ಅಲ್ಲಿ ಕಮ್ಮ ಭಾಯ್ ಅವರು ಜನವರಿ 2023ರಲ್ಲಿ ಹತ್ತಿ ಹೊಲದಲ್ಲಿ ತೆರವುಗೊಳಿಸಿದ ಭಾಗದಲ್ಲಿ ಬಿಡಾರ ಹೂಡಿದ್ದಾರೆ. ಖಮ್ರಿಗೆ ಬೆರ್ ಮರದ ಎಲೆಗಳೆಂದರೆ; ಪ್ರಸ್ತುತ ಋತುವಿನಲ್ಲಿ ರಸಭರಿತ ಹಣ್ಣುಗಳನ್ನು ಸಹ ಅವನು ತಿನ್ನಲಿದ್ದಾನೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗನ್ಘಾಟ್ ಪಟ್ಟಣದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ನಾಗ್ಪುರ-ಅದಿಲಾಬಾದ್ ಹೆದ್ದಾರಿಯಲ್ಲಿರುವ ವಾನಿ ಎಂಬ ಸಣ್ಣ ಹಳ್ಳಿಯ ಬಳಿ ರಬರಿ ಪಶುಪಾಲಕರು ಮತ್ತು ಅವರ ಜಾನುವಾರುಗಳು ಬೀಡುಬಿಟ್ಟಿದ್ದಾರೆ. ಸಮುದಾಯವು ತಮ್ಮ ಆಡುಗಳು, ಕುರಿಗಳು ಮತ್ತು ಒಂಟೆಗಳ ಹಿಂಡುಗಳೊಂದಿಗೆ ಪಶ್ಚಿಮ ಮತ್ತು ಮಧ್ಯ ಭಾರತದ ಕಡೆಗೆ ಸಾಗುತ್ತಿದೆ.


ವಾರ್ಧಾ ಜಿಲ್ಲೆಯ ಹಿಂಗನ್ಘಾಟ್ ಪಟ್ಟಣದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಸಣ್ಣ ಹಳ್ಳಿಯಾದ ವಾನಿ ಬಳಿಯ ಡೇರಾದಲ್ಲಿ ಕಮ್ಮಭಾಯ್ ಅವರ ಆಡುಗಳು (ಎಡ), ಕುರಿಗಳು ಮತ್ತು ಒಂಟೆಗಳು (ಬಲ)
2022ರ ಅಗ್ನಿಪರೀಕ್ಷೆಯಿಂದ ಬದುಕುಳಿದ ಒಂಟೆಗಳು ಪ್ರಸ್ತುತ ಅವುಗಳ ಮಾಲೀಕರ ಆರೈಕೆಯಲ್ಲಿವೆ. ಕಮ್ಮ ಭಾಯ್ ಒಂಟೆಗಳು ಬಹುಶಃ 18 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತಮ್ಮ ಪೂರ್ಣ ಜೀವನವನ್ನು ಅವು ಬದುಕಲಿವೆ ಎಂದು ಆಶಿಸುತ್ತಾರೆ.
"ಈ ಘಟನೆಯು ನಮ್ಮನ್ನು ತುಂಬಾ ಕಾಡಿತು" ಎಂದು ಕಮ್ಮಾ ಅವರ ಹಿರಿಯ ಸಹೋದರ ಮತ್ತು ವಿದರ್ಭದ ರಬರಿಗಳ ನಾಯಕ ಮತ್ತು ಸಮುದಾಯದ ಪರವಾಗಿ ಕಾನೂನು ಹೋರಾಟ ನಡೆಸುತ್ತಿರುವ ಮಶ್ರು ಹೇಳುತ್ತಾರೆ. "ಹಮ್ಕೊ ಪರೇಶಾನ್ ಕರ್ಕೆ ಇನ್ಕೊ ಕ್ಯಾ ಮಿಲಾ [ನಮಗೆ ತೊಂದರೆ ನೀಡಿ ದೂರುದಾರರು ಏನು ಗಳಿಸಿದರು]?" ಎಂದು ಅವರು ಆಶ್ಚರ್ಯ ಪಡುತ್ತಾರೆ.
ಹೈಕೋರ್ಟಿನಲ್ಲಿ ಪ್ರಕರಣದ ವಿರುದ್ಧ ಹೋರಾಡುವ ಮೂಲಕ ಪರಿಹಾರವನ್ನು ಪಡೆಯಬೇಕೇ ಎಂಬ ಬಗ್ಗೆ ಅವರು ಇನ್ನೂ ಚರ್ಚಿಸುತ್ತಿರುವುದಾಗಿ ಹೇಳುತ್ತಾರೆ.
ಏತನ್ಮಧ್ಯೆ, ಪೊಲೀಸರು ಅಮರಾವತಿಯ ಸೆಷನ್ಸ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ, ಆದರೆ ಪ್ರಕರಣ ಇನ್ನೂ ವಿಚಾರಣೆಗೆ ಬಂದಿಲ್ಲ. "ನಾವು ಈ ಪ್ರಕರಣದ ವಿರುದ್ಧ ಹೋರಾಡುತ್ತೇವೆ" ಎಂದು ಮಶ್ರು ರಬರಿ ಹೇಳುತ್ತಾರೆ.
"ನಮ್ಮ ಘನತೆ ಅಪಾಯದಲ್ಲಿದೆ."
ಅನುವಾದ: ಶಂಕರ. ಎನ್. ಕೆಂಚನೂರು