ಈ ವರ್ಷದ ಜನವರಿಯಲ್ಲಿ ಮೊದಲ ಬಾರಿಗೆ ಅಜ್ಜಿಯಾದಾಗ ಶಾಂತಿ ಮಾಂಝಿಯವರ ವಯಸ್ಸು 36 ವರ್ಷ. ಆ ರಾತ್ರಿ, ಅವರು ಇನ್ನೂ ಒಂದನ್ನು ಮೊದಲ ಬಾರಿಗೆ ಸಾಧಿಸಿದರು - ಎರಡು ದಶಕಗಳ ಅವಧಿಯಲ್ಲಿ ಮನೆಯಲ್ಲಿ ಲಭ್ಯವಿರುವ ಖಾಸಗಿತನದ ಮಿತಿಯಲ್ಲೇ, ಯಾವುದೇ ವೈದ್ಯರು ಮತ್ತು ನರ್ಸ್ಗಳ ಸಹಾಯವಿಲ್ಲದೆ ಏಳು ಮಕ್ಕಳಿಗೆ ಜನ್ಮ ನೀಡಿದ ಗಟ್ಟಿ ಹೆಣ್ಣು, ಕೊನೆಗೂ ಆಸ್ಪತ್ರೆಯ ಮುಖ ನೋಡಿದರು.
"ನನ್ನ ಮಗಳು ಗಂಟೆಗಳ ಕಾಲ ನೋವಿನಿಂದ ಬಳಲುತ್ತಿದ್ದಳು ಆದರೆ ಮಗು ಹೊರಗೆ ಬರಲಿಲ್ಲ. ಕೊನೆಗೆ ನಾವು ಟೆಂಪೋ ತರಿಸಬೇಕಾಯಿತು,” ಎಂದು ಅವರು ಹೇಳುತ್ತಾರೆ, ಆಕೆಯ ಹಿರಿಯ ಮಗಳು ಮಮತಾ ಮನೆಯಲ್ಲಿ ಹೆರಿಗೆ ನೋವು ಎದುರಿಸಿದ ದಿನವನ್ನು ನೆನಪಿಸಿಕೊಂಡರು. ಇಲ್ಲಿ ʼಟೆಂಪೋʼ ಎಂದರೆ ಕೇವಲ ಮೂರು ಕಿಲೋಮೀಟರ್ ದೂರದ ಶಿಯೋಹರ್ ಪಟ್ಟಣದಿಂದ ನಾಲ್ಕು ಕಿಲೋಮೀಟರ್ ದೂರದ ಊರನ್ನು ತಲುಪಲು ಸಂಜೆಯ ಹೊತ್ತಿನಲ್ಲಿ ಒಂದು ಗಂಟೆಯಷ್ಟು ಸಮಯ ತೆಗೆದುಕೊಂಡ ತ್ರಿಚಕ್ರ ಪ್ರಯಾಣಿಕ ವಾಹನ. ಮಮತಾರನ್ನು ತರಾತುರಿಯಲ್ಲಿ ಶಿಯೋಹರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಹಲವಾರು ಗಂಟೆಗಳ ನಂತರ ಗಂಡು ಮಗುವಿಗೆ ಜನ್ಮ ನೀಡಿದರು.
“ಅವರು 800 ರೂಪಾಯಿಗಳ ಬಾಡಿಗೆ ಪಡೆದರು." ಶಾಂತಿ ಗೊಣಗುತ್ತಾರೆ, ಟೆಂಪೋ ಬಾಡಿಗೆ ಬಗ್ಗೆ ಈಗಲೂ ಆಕ್ರೋಶ ವ್ಯಕ್ತಪಡಿಸಿದರು."ನಮ್ಮ ತೋಲಾದಲ್ಲಿನ ಯಾರೂ ಆಸ್ಪತ್ರೆಗೆ ಹೋಗುವುದಿಲ್ಲ, ಹೀಗಾಗಿ ಆಂಬ್ಯುಲೆನ್ಸ್ ಇದೆಯೇ ಎನ್ನುವುದರ ಕುರಿತು ನಮಗೆ ತಿಳಿದಿಲ್ಲ."
ಆ ದಿನ ಶಾಂತಿ ತನ್ನ ಕೊನೆಯ ಮಗು, ನಾಲ್ಕು ವರ್ಷದ ಕಾಜಲ್‌ಗೆ ಮಲಗುವ ಮುನ್ನ ಏನಾದರೂ ತಿನ್ನಿಸಬೇಕಿದ್ದ ಕಾರಣ ರಾತ್ರಿಯ ನಂತರ ಮನೆಗೆ ಮರಳಬೇಕಾಯಿತು."ನಾನೀಗ ಅಜ್ಜಿಯಾಗಿದ್ದೇನೆ, ಆದರೆ ನನಗೆ ತಾಯಿಯ ಜವಾಬ್ದಾರಿಯೂ ಇದೆ." ಎಂದು ಅವರು ಹೇಳುತ್ತಾರೆ. ಮಮತಾ ಮತ್ತು ಕಾಜಲ್ ಜೊತೆಗೆ, ಅವರಿಗೆ ಇನ್ನೂ ಮೂವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಮಾಂಝಿ ಕುಟುಂಬವು ಉತ್ತರ ಬಿಹಾರದ ಶಿಯೋಹರ್ ಬ್ಲಾಕ್ ಮತ್ತು ಜಿಲ್ಲೆಯ ಮಾಧೋಪುರ್ ಅನಂತ ಗ್ರಾಮದ ಹೊರಗೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಗುಡಿಸಲುಗಳ ಸಮೂಹವಾದ ಮುಸಹರ್ ತೋಲಾದಲ್ಲಿ ವಾಸಿಸುತ್ತಿದೆ. ತೋಲಾದಲ್ಲಿರುವ ಸುಮಾರು 40 ಮಣ್ಣು ಮತ್ತು ಬಿದಿರಿನ ಗುಡಿಸಲುಗಳು ಸುಮಾರು 300-400 ಜನರಿಗೆ ನೆಲೆಯಾಗಿವೆ. ಇವರೆಲ್ಲರೂ ಮುಸಹರ್ ಜಾತಿಗೆ ಸೇರಿದವರು, ಅವರನ್ನು ಬಿಹಾರದ ಅತ್ಯಂತ ಹಿಂದುಳಿದ ಜಾತಿಗಳ ಪಟ್ಟಿಯಾದ ಮಹಾದಲಿತ ಸಮುದಾಯದ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲೇ ಮೂಲೆಗಳಲ್ಲಿ ಸುತ್ತಲೂ ಬೇಲಿಯಂತಹ ನಿರ್ಮಾಣದ ಒಳಗೆ ಆಡು ಅಥವಾ ಹಸುಗಳನ್ನು ಬಿಡಲಾಗಿತ್ತು.
ಶಾಂತಿ ಆಗಷ್ಟೇ ತೋಲಾದ ಒಂದು ತುದಿಯಲ್ಲಿರುವ ಊರಿನ ಹ್ಯಾಂಡ್ ಪಂಪ್ನಿಂದ ಕೆಂಪು ಪ್ಲಾಸ್ಟಿಕ್ ಬಕೆಟಿನಲ್ಲಿ ನೀರನ್ನು ತರುತ್ತಿದ್ದರು. ಆಗ ಸಮಯ ಬೆಳಗಿನ 9 ಗಂಟೆಯಾಗಿತ್ತು. ಅವರು ಅವರ ಮನೆಯ ಹೊರಗಿನ ಓರೆಯಾದ ರಸ್ತೆಯಲ್ಲಿ ನಿಂತಿದ್ದರು. ಅಲ್ಲೇ ಹತ್ತಿರದಲ್ಲಿ ಪಕ್ಕದ ಮನೆಯವರ ಎಮ್ಮೆ ಅಲ್ಲಿದ್ದ ಸಿಮೆಂಟ್ ತೊಟ್ಟಿಯಿಂದ ನೀರನ್ನು ಕುಡಿಯುತ್ತಿತ್ತು. ಸ್ಥಳೀಯ ಉಪಭಾಷೆಯಲ್ಲಿ ಮಾತನಾಡುತ್ತಾ ಅವರು ಹೇಳುತ್ತಾರೆ, ತನಗೆ ತನ್ನ ಹೆರಿಗೆ ಸಮಯದಲ್ಲಿ ಒಮ್ಮೆಯೂ ತೊಂದರೆಯಾಗಿರಲಿಲ್ಲ, "ಸಾತ್ ಗೋ" ಅಥವಾ ಏಳೂ ಹೆರಿಗೆಗಳು ಕನಿಷ್ಟ ಗೊಂದಲಗಳೊಡನೆ ಮುಗಿದು ಹೋದವು.
ಹೊಕ್ಕುಳಬಳ್ಳಿಯನ್ನು ಯಾರು ಕತ್ತರಿಸಿದರು ಎಂದು ಕೇಳಿದಾಗ ಅವರು "ಮೇರಿ ದೆಯಾದಿನ್" ಎಂದು ಹೆಗಲು ಹಾರಿಸುತ್ತ ಉತ್ತರಿಸಿದರು. ದೆಯಾದಿನ್ ಎಂದರೆ ಗಂಡನ ಸಹೋದರನ ಪತ್ನಿ. ಬಳ್ಳಿಯನ್ನು ಕತ್ತರಿಸಲು ಏನು ಬಳಸಲಾಗಿತ್ತು? ಅವರು ಸುಮ್ಮನೆ ತಲೆಯಾಡಿಸಿದರು, ಅವರಿಗೆ ಗೊತ್ತಿರಲಿಲ್ಲ. ಅಲ್ಲಿ ಸೇರಿದ್ದ ಸುಮಾರು 10-12 ಊರಿನ ಮಹಿಳೆಯರು ಮನೆಯ ಚಾಕುವನ್ನು ತೊಳೆದು ಬಳಸುತ್ತಾರೆ ಎಂದು ಹೇಳುತ್ತಾರೆ-ಇದರ ಕುರಿತು ಯಾರೂ ಯೋಚಿಸಿದಂತೆ ತೋರುತ್ತಿಲ್ಲ.
ಮಾಧೋಪುರ ಅನಂತದ ಈ ಮುಸಾಹರ್ ತೋಲಾದ ಬಹುತೇಕ ಮಹಿಳೆಯರು ಇದೇ ರೀತಿ ತಮ್ಮ ಗುಡಿಸಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ - ಆದರೂ ಕೆಲವರು ಹೇಳುವಂತೆ, ತೊಡಕಿನ ಹೆರಿಗೆಯ ಸಂದರ್ಭಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಹಾಡಿಯಲ್ಲಿ ಯಾವುದೇ ತಜ್ಞ ಹೆರಿಗೆ ಸಹಾಯಕರು ಲಭ್ಯವಿಲ್ಲ. ಇಲ್ಲಿನ ಹೆಚ್ಚಿನ ಮಹಿಳೆಯರಿಗೆ ಕನಿಷ್ಠ ನಾಲ್ಕು ಅಥವಾ ಐದು ಮಕ್ಕಳಿದ್ದಾರೆ, ಮತ್ತು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಇದೆಯೇ ಅಥವಾ ಅಲ್ಲಿ ಹೆರಿಗೆಗಳನ್ನು ಮಾಡಿಸಲಾಗುತ್ತದೆಯೇ ಎನ್ನುವ ಮಾಹಿತಿ ಯಾರಿಗೂ ಇಲ್ಲ.ತಮ್ಮ ಹಳ್ಳಿಯಲ್ಲಿ ಆರೋಗ್ಯ ಕೇಂದ್ರವಿದೆಯೇ ಅಥವಾ ಸರಕಾರ ನಡೆಸುವ ಔಷಧಾಲಯವಿದೆಯೇ ಎಂದು ಕೇಳಿದಾಗ "ನನಗೆ ಖಚಿತವಾಗಿ ತಿಳಿದಿಲ್ಲ" ಎಂದು ಶಾಂತಿ ಹೇಳುತ್ತಾರೆ.
68 ವರ್ಷದ ಭಗುಲಾನಿಯಾ ದೇವಿ, ಮಾಧೋಪುರ ಅನಂತ್ನಲ್ಲಿ ಒಂದು ಹೊಸ ಕ್ಲಿನಿಕ್ ಇರುವ ಬಗ್ಗೆ ಕೇಳಿದ್ದಾರೆ, "ಆದರೆ ನಾನು ಅಲ್ಲಿಗೆ ಹೋಗಿಲ್ಲ. ಅಲ್ಲಿ ಮಹಿಳಾ ವೈದ್ಯರು ಲಭ್ಯರಿದ್ದಾರೆಯೇ ಎನ್ನುವುದು ನನಗೆ ತಿಳಿದಿಲ್ಲ.” 70 ವರ್ಷದ ಶಾಂತಿ ಚುಲಾಯ್ ಮಾಂಝಿ ತನ್ನ ತೋಲಾದ ಮಹಿಳೆಯರಿಗೆ ಯಾರೂ ಮಾಹಿತಿ ಈ ಕುರಿತು ನೀಡಿಲ್ಲ ಹಾಗಾಗಿ "ಹೊಸ ಕ್ಲಿನಿಕ್ ಇದ್ದರೂ ನಮಗೆ ಹೇಗೆ ತಿಳಿಯುತ್ತದೆ?"
ಮಾಧೋಪುರ ಅನಂತ್‌ನಲ್ಲಿ ಪಿಎಚ್ಸಿ ಇಲ್ಲ, ಆದರೆ ಇದು ಉಪ ಕೇಂದ್ರವನ್ನು ಹೊಂದಿದೆ. ನಾವು ಭೇಟಿ ನೀಡುವುದು ಮಧ್ಯಾಹ್ನವಾಗಿರುವುದರಿಂದ ಹೆಚ್ಚಿನ ಸಮಯ ಮುಚ್ಚಿರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. 2011-12ರ ಜಿಲ್ಲಾ ಆರೋಗ್ಯ ಕ್ರಿಯಾ ಯೋಜನೆಯು ಶಿಯೋಹರ್ ಬ್ಲಾಕ್ಗೆ 24 ಉಪ ಕೇಂದ್ರಗಳ ಅಗತ್ಯವಿದೆ ಎಂದು ಹೇಳುತ್ತದೆ-ಇದು 10 ಉಪ ಕೇಂದ್ರಗಳನ್ನು ಹೊಂದಿತ್ತು.
ಶಾಂತಿ ತನ್ನ ಯಾವುದೇ ಗರ್ಭಾವಸ್ಥೆಯಲ್ಲಿ ಅಂಗನವಾಡಿಯಿಂದ ಯಾವುದೇ ಕಬ್ಬಿಣ ಅಥವಾ ಕ್ಯಾಲ್ಸಿಯಂ ಪೂರಕಗಳನ್ನು ಸ್ವೀಕರಿಸಲಿಲ್ಲ, ಅಥವಾ ತನ್ನ ಮಗಳಿಗೂ ಇದು ಸಿಕ್ಕಿಲ್ಲ ಎಂದು ಹೇಳುತ್ತಾರೆ. ಮತ್ತು ಅವರು ಯಾವುದೇ ಚೆಕ್-ಅಪ್ಗಳಿಗಾಗಿಯೂ ಹೋಗಿಲ್ಲ.
ಅವರು ತನ್ನ ಪ್ರತಿಯೊಂದು ಗರ್ಭಾವಸ್ಥೆಯಲ್ಲೂ ಹೆರಿಗೆಯ ದಿನದವರೆಗೂ ಕೆಲಸ ಮಾಡುತ್ತಿದ್ದರು. ಪ್ರತಿ ಹೆರಿಗೆಯ ನಂತರ "10 ದಿನಗಳು ಕಳೆದ ಕೂಡಲೇ, ನಾನು ಕೆಲಸಕ್ಕೆ ಮರಳಿದೆ" ಎಂದು ಅವರು ಹೇಳುತ್ತಾರೆ.
ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಯೋಜನೆಯಡಿ, ಗರ್ಭಿಣಿ ಅಥವಾ ಬಾಣಂತಿಯರು ಹಾಗೂ ಶಿಶುಗಳಿಗೆ ಪೌಷ್ಟಿಕಾಂಶ ಪೂರೈಕೆಗೆ ಕಿರಾಣಿ ಪ್ಯಾಕೇಜ್ ಅಥವಾ ಅಂಗನವಾಡಿಯಲ್ಲಿ ಬಿಸಿಯಾದ, ಬೇಯಿಸಿದ ಊಟವನ್ನು ನೀಡಲಾಗುತ್ತದೆ. ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಕನಿಷ್ಠ 180 ದಿನಗಳವರೆಗೆ ಕಬ್ಬಿಣಾಂಶವಿರುವ ಫೋಲಿಕ್ ಆಸಿಡ್ ಮಾತ್ರೆಗಳು ಮತ್ತು ಕ್ಯಾಲ್ಸಿಯಂ ಪೂರಕಗಳನ್ನು ಪೂರೈಸಬೇಕು. ಏಳು ಮಕ್ಕಳು ಮತ್ತು ಈಗ ಮೊಮ್ಮಗ ಜನಿಸಿದ್ದರೂ, ಶಾಂತಿ ಇಂತಹ ಯೋಜನೆ ಬಗ್ಗೆ ಕೇಳಿಲ್ಲ ಎಂದು ಹೇಳುತ್ತಾರೆ.
ಮುಂದಿನ ಊರಾದ ಮಾಲಿ ಪೋಖರ್ ಭಿಂಡಾ ಗ್ರಾಮದಲ್ಲಿ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿರುವ (ಆಶಾ) ಕಲಾವತಿ ದೇವಿ ಅವರು ಮುಸಹರ್ ತೋಲಾದ ಮಹಿಳೆಯರು ಯಾವುದೇ ಅಂಗನವಾಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ ಎಂದು ಹೇಳುತ್ತಾರೆ. "ಈ ಪ್ರದೇಶಕ್ಕೆ ಸಂಬಂಧಿಸಿ ಎರಡು ಅಂಗನವಾಡಿಗಳಿವೆ, ಒಂದು ಮಾಲಿ ಪೋಖರ್ ಭಿಂಡಾ ಮತ್ತು ಒಂದು ಖೈರ್ವಾ ದಾರಾಪ್, ಪಂಚಾಯತ್ ಗ್ರಾಮ. ಮಹಿಳೆಯರಿಗೆ ತಾವು ಯಾವುದರಲ್ಲಿ ನೋಂದಾಯಿಸಿಕೊಳ್ಳಬೇಕೆಂದು ತಿಳಿದಿಲ್ಲ, ಮತ್ತು ಅವರು ಕೊನೆಗೆ ಯಾವುದರಲ್ಲೂ ನೋಂದಾಯಿಸಿಕೊಳ್ಳುವುದಿಲ್ಲ. ಎರಡೂ ಹಳ್ಳಿಗಳು ಮುಸಹರ್ ತೋಲಾದಿಂದ ಸುಮಾರು 2.5 ಕಿಮೀ ದೂರದಲ್ಲಿವೆ.
ರಸ್ತೆಯಲ್ಲಿ ಶಾಂತಿಯವರ ಸುತ್ತ ಜಮಾಯಿಸಿದ್ದ ಮಹಿಳೆಯರು ಅಂಗನವಾಡಿಯಲ್ಲಿ ಸಿಗುವ ಪೂರಕ ಮಾತ್ರೆಗಳ ಕುರಿತಾಗಲೀ ಅಥವಾ ಇವುಗಳನ್ನು ಪಡೆಯುವುದು ತಮ್ಮ ಹಕ್ಕೆನ್ನುವುದರ ಕುರಿತು ನಮಗೆ ಯಾವುದೇ ಮಾಹಿತಿಯಿರಲಿಲ್ಲ ಎನ್ನುತ್ತಾರೆ.
ಇತರ ಸರ್ಕಾರಿ-ಕಡ್ಡಾಯ ಸೌಲಭ್ಯಗಳನ್ನು ಪ್ರವೇಶಿಸುವುದು ತಮಗೆ ಅಸಾಧ್ಯವೆಂದು ಹಿರಿಯ ಮಹಿಳೆಯರು ದೂರುತ್ತಾರೆ. 71ರ ಹರೆಯದ ಧೋಗರಿ ದೇವಿ ತಾನು ಇದುವರೆಗೂ ವಿಧವಾ ವೇತನ ಪಡೆದಿಲ್ಲ ಎಂದು ಹೇಳುತ್ತಾರೆ. ಭಗುಲಾನಿಯಾ ದೇವಿ, ಇವರು ವಿಧವೆಯಲ್ಲ ಆದರೆ ಅವರ ಖಾತೆಗೆ ತಿಂಗಳಿಗೊಮ್ಮೆ 400 ರೂ. ಬರುತ್ತದೆ ಆದರೆ ಅದು ಯಾಕೆಂದು ಅವರಿಗೆ ತಿಳಿದಿಲ್ಲ.
ಆಶಾ ಕಾರ್ಯಕರ್ತೆಯಾಗಿರುವ ಕಲಾವತಿ, ಮಹಿಳೆಯರಿಗೆ ಇರುವ ತಮ್ಮ ಗರ್ಭಾವಸ್ಥೆಯಲ್ಲಿ ಮತ್ತು ನಂತರದ ಅವರ ಹಕ್ಕುಗಳ ಕುರಿತ ಗೊಂದಲ ಮತ್ತು ಅವರ ಶಿಕ್ಷಣದ ಕೊರತೆಯೇ ಇದಕ್ಕೆಲ್ಲ ಕಾರಣ ಎಂದು ದೂರುತ್ತಾರೆ. “ಪ್ರತಿಯೊಬ್ಬರೂ ಐದು, ಆರು, ಏಳು ಮಕ್ಕಳನ್ನು ಹೊಂದಿದ್ದಾರೆ. ಮಕ್ಕಳು ದಿನವಿಡೀ ಅಲ್ಲಿ ಇಲ್ಲಿ ಓಡಾಡುತ್ತಿರುತ್ತಾರೆ. ಖೈರ್ವಾ ದಾರಪ್ ಅಂಗನವಾಡಿಯಲ್ಲಿ ಸೇರಿಸುವಂತೆ ನಾನು ಅವರಿಗೆ ಹಲವು ಬಾರಿ ಹೇಳಿದ್ದೇನೆ, ಆದರೆ ಅವರು ಕೇಳುವುದಿಲ್ಲ" ಎಂದು ಅವರು ಹೇಳುತ್ತಾರೆ.
ಬಳ್ಳಿಯನ್ನು ಕತ್ತರಿಸಲು ಏನು ಬಳಸಲಾಗಿತ್ತು? ಅಲ್ಲಿ ಸೇರಿದ್ದ ಸುಮಾರು 10-12 ಊರಿನ ಮಹಿಳೆಯರು ಮನೆಯ ಚಾಕುವನ್ನು ತೊಳೆದು ಬಳಸುತ್ತಾರೆ ಎಂದು ಹೇಳುತ್ತಾರೆ-ಇದರ ಕುರಿತು ಯಾರೂ ಯೋಚಿಸಿದಂತೆ ತೋರುತ್ತಿಲ್ಲ
ಮಾಧೋಪುರ ಅನಂತದಲ್ಲಿ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ತೋಲಾದ ಸಮೀಪದಲ್ಲಿದೆ, ಆದರೆ ಮುಸಹರ್ ಸಮುದಾಯದ ಕೆಲವೇ ಮಕ್ಕಳು ಅಲ್ಲಿ ಹಾಜರಾಗುತ್ತಾರೆ. ಶಾಂತಿಯು ಪತಿ ಮತ್ತು ಅವರ ಏಳು ಮಕ್ಕಳಂತೆ ಸಂಪೂರ್ಣ ಅನಕ್ಷರಸ್ಥೆ. "ಏನೇ ಮಾಡಿದರು ದಿನಗೂಲಿಗಳಾಗಿ ಕೆಲಸ ಮಾಡಲೇಬೇಕಾಗುತ್ತದೆ" ಎಂದು ಹಿರಿಯ ನಾಗರಿಕರಾದ ಧೋಗರಿ ದೇವಿ ಹೇಳುತ್ತಾರೆ.
ಬಿಹಾರದ ಪರಿಶಿಷ್ಟ ಜಾತಿಗಳು ಅತ್ಯಂತ ಕಡಿಮೆ ಮಟ್ಟದ ಸಾಕ್ಷರತೆಯನ್ನು ಹೊಂದಿವೆ. ಅಖಿಲ ಭಾರತ ಮಟ್ಟದಲ್ಲಿ ಪರಿಶಿಷ್ಟ ಜಾತಿಯವರಲ್ಲಿ ಶೇಕಡ 54.7 ಸಾಕ್ಷರತೆಯಿದ್ದು ಇಲ್ಲಿ 28.5 ಶೇಕಡಾ ಎಂದರೆ ಅದರ ಅರ್ಧದಷ್ಟಿದೆ (ಜನಗಣತಿ 2001ರಲ್ಲಿ ಉಲ್ಲೇಖಿತಗೊಂಡಿರುವಂತೆ). ಈ ಗುಂಪುಗಳಲ್ಲಿ, ಮುಸಹರ್ ಸಮುದಾಯದ ಸಾಕ್ಷರತೆಯ ಪ್ರಮಾಣವು ತೀರಾ ಕಡಿಮೆ, ಎಂದರೆ ಶೇಕಡಾ 9ರಷ್ಟು. ಮುಸಹರ್ ಕುಟುಂಬಗಳು ಮೊದಲಿನಿಂದಲೂ ಕೃಷಿ ಆಸ್ತಿಯನ್ನು ಹೊಂದಿಲ್ಲ.
ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ ಅಭಿವೃದ್ಧಿಯ ಕುರಿತು ನೀತಿ ಆಯೋಗದ ಒಂದು ಸಮೀಕ್ಷೆಯ ವರದಿಯು ಬಿಹಾರದ ಮುಸಹರ್ ಸಮುದಾಯದಲ್ಲಿ ಕೇವಲ 10.1ರಷ್ಟು ಜನರು ಮಾತ್ರ ಜಾನುವಾರುಗಳನ್ನು ಹೊಂದಿದ್ದಾರೆ, ಇದು ಎಸ್ಸಿ ಗುಂಪುಗಳಲ್ಲಿಯೇ ಅತ್ಯಂತ ಕಡಿಮೆ. ಕೇವಲ 1.4 ಪ್ರತಿಶತ ಮುಸಹರ್ ಕುಟುಂಬಗಳು ಮಾತ್ರ ಎತ್ತುಗಳನ್ನು ಹೊಂದಿದ್ದವು, ಮತ್ತೆ ಇದು ಕೂಡಾ ಅತ್ಯಂತ ಕಡಿಮೆ.
ನೀತಿ ಆಯೋಗದ ವರದಿಯ ಪ್ರಕಾರ, ಕೆಲವು ಮುಸಾಹರ್ಗಳು ಹಂದಿಗಳನ್ನು ಸಾಕುತ್ತಾರೆ, ಇದು ಸಾಂಪ್ರದಾಯಿಕ ಉದ್ಯೋಗವಾಗಿದ್ದು, ಅವುಗಳನ್ನು ಇತರ ಜಾತಿಗಳು ಮಾಲಿನ್ಯಕಾರಕವೆಂದು ಪರಿಗಣಿಸಿವೆ. ಮತ್ತು ವಾಹನಗಳ ಕುರಿತ ಸರ್ವೇಯಲ್ಲಿ ಇತರ ಪರಿಶಿಷ್ಟ ಜಾತಿ ಕುಟುಂಬಗಳು ಸೈಕಲ್, ರಿಕ್ಷಾ, ಸ್ಕೂಟರ್ ಅಥವಾ ಮೋಟಾರ್ ಸೈಕಲ್ಗಳನ್ನು ಹೊಂದಿದ್ದರೆ, ಮುಸಹರ್ ಕುಟುಂಬಗಳು ಯಾವುದೇ ವಾಹನಗಳ ಮಾಲೀಕತ್ವವನ್ನು ಹೊಂದಿಲ್ಲದಿರುವುದು ಕಂಡುಬಂದಿದೆ.
ಶಾಂತಿಯವರ ಕುಟುಂಬವು ಹಂದಿಗಳನ್ನು ಸಾಕುವುದಿಲ್ಲ. ಮತ್ತು ಅವರು ಕೆಲವು ಆಡುಗಳು ಮತ್ತು ಕೆಲವು ಕೋಳಿಗಳನ್ನು ಹೊಂದಿದ್ದರೂ, ಇವುಗಳನ್ನು ಮಾರಾಟ ಮಾಡುವುದಿಲ್ಲ - ಅವರು ಹಾಲು ಮತ್ತು ಮೊಟ್ಟೆಗಳನ್ನು ತಮ್ಮ ಆಹಾರದಲ್ಲಿ ಬಳಸುತ್ತಾರೆ. "ನಾವು ಮೊದಲಿನಿಂದಲೂ ಬದುಕು ಸಾಗಿಸಲು ಕೆಲಸ ಮಾಡುತ್ತಿದ್ದೇವೆ. ನಾವು ಬಿಹಾರದ ಇತರ ಭಾಗಗಳಲ್ಲಿ ಮತ್ತು ಇತರ ರಾಜ್ಯಗಳಲ್ಲಿಯೂ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ,” ಎಂದು ಅವರು ಹೇಳುತ್ತಾರೆ, ದಂಪತಿಗಳ ರಾಜ್ಯದೆಲ್ಲಡೆ ಕೆಲಸಕ್ಕೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗಿದ್ದಾಗಿ ಹೇಳುತ್ತಾರೆ.
"ನಾವು ಅಲ್ಲಿ ತಿಂಗಳುಗಳ ಕಾಲ, ಕೆಲವೊಮ್ಮೆ ಆರು ತಿಂಗಳುಗಳ ಕಾಲ ವಾಸಿಸುತ್ತಿದ್ದೆವು. ಒಮ್ಮೆ ನಾವು ಕಾಶ್ಮೀರದಲ್ಲಿ ಸುಮಾರು ಒಂದು ವರ್ಷ ಇದ್ದೆವು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದೆವು,” ಎಂದು ಶಾಂತಿ ಹೇಳುತ್ತಾರೆ. ಆ ಸಮಯದಲ್ಲಿ ಅವರು ಗರ್ಭಿಣಿಯಾಗಿದ್ದರು, ಆದರೂ ಅವರು ಆಗ ಯಾವ ಮಗ ಅಥವಾ ಮಗಳ ಬಸುರಿಯಾಗಿದ್ದರು ಎನ್ನುವುದು ಅವರಿಗೆ ನೆನಪಿಲ್ಲ. "ಇದು ಸುಮಾರು ಆರು ವರ್ಷಗಳ ಹಿಂದೆ." ಅವರಿಗೆ ಕಾಶ್ಮೀರದ ಯಾವ ಭಾಗವೆನ್ನುವುದು ಕೂಡಾ ಗೊತ್ತಿಲ್ಲ, ಅದೊಂದು ದೊಡ್ಡ ಇಟ್ಟಿಗೆ ಗೂಡಾಗಿತ್ತು, ಅಲ್ಲಿ ಎಲ್ಲಾ ಕಾರ್ಮಿಕರು ಬಿಹಾರದಿಂದ ಬಂದವರು.
ಕೂಲಿ ದರಗಳು ಇಲ್ಲಿಗಿಂತಲೂ ಅಲ್ಲಿ ಉತ್ತಮವಾಗಿದ್ದವು. ಬಿಹಾರದಲ್ಲಿ 1,000 ಇಟ್ಟಿಗೆಗಳಿಗೆ 450-600 ರೂ.ಗಳಿದ್ದರೆ ಅಲ್ಲಿ 650 ಸಿಗುತ್ತಿತ್ತು. ಜೊತೆಗೆ ಶಾಂತಿ ದಂಪತಿಗಳೊಡನೆ ಮಕ್ಕಳೂ ಕೆಲಸ ಮಾಡುತ್ತಿದ್ದ ಕಾರಣ ದಿನವೊಂದಕ್ಕೆ ಹೆಚ್ಚು ಇಟ್ಟಿಗೆಗಳನ್ನು ತಯಾರಿಸಬಹುದಿತ್ತು. ಆದರೆ ಆ ವರ್ಷ ತಾವು ಎಷ್ಟು ಸಂಪಾದಿಸಿದೆವು ಎನ್ನುವುದು ಅವರಿಗೆ ನೆನಪಾಗಲಿಲ್ಲ. “ಆದರೆ ನಾವು ಕೂಡಲೇ ಮನೆಗೆ ಮರಳಲು ಬಯಸಿದ್ದೆವು," ಅವರು ನೆನಪಿಸಿಕೊಳ್ಳುತ್ತಾರೆ, "ಕಡಿಮೆ ಹಣದೊಂದಿಗೆ ಕೂಡ."
ಪ್ರಸ್ತುತ, ಅವರ ಗಂಡ ಡೋರಿಖ್ ಮಾಂಜಿ, 38, ಪಂಜಾಬ್‌ನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ಮನೆಗೆ ತಿಂಗಳಿಗೆ 4,000ದಿಂದ 5,000 ರೂಪಾಯಿಗಳ ತನಕ ಕಳುಹಿಸುತ್ತಾರೆ. ಮಹಾಮಾರಿ ಮತ್ತು ಲಾಕ್‌ಡೌನ್‌ಗಳ ಕಾರಣಕ್ಕೆ ಕಡಿಮೆ ಕೆಲಸ ಲಭ್ಯವಿದೆ ಮತ್ತು ಗುತ್ತಿಗೆದಾರರು ಈಗೀಗ ಪುರುಷರನ್ನು ಮಾತ್ರ ನೇಮಿಸಿಕೊಳ್ಳಲು ಆದ್ಯತೆ ನೀಡುತ್ತಾರೆ. ತಾನು ಊರಿನಲ್ಲೇ ಉಳಿದಿದ್ದಕ್ಕೆ ಕಾರಣ ಹೇಳುತ್ತಾ ಶಾಂತಿಯವರು "ಆದರೆ ಬಟವಾಡೆಯದೇ ಸಮಸ್ಯೆ, ಬಟವಾಡೆಗಾಗಿ ಮಾಲಿಕರು ದಿನಗಟ್ಟಲೆ ಅಲೆಯುವಂತೆ ಮಾಡುತ್ತಾರೆ." ತನ್ನ ಬನಿಹಾರಿ ಅಥವಾ ವೇತನವನ್ನು ಪಡೆಯಲು ಒಂದೇ ರೈತನ ಮನೆಗೆ ಹಲವು ಬಾರಿ ತಿರುಗಬೇಕಾಗುತ್ತದೆ ಎಂದು ದೂರುತ್ತಾರೆ. "ಒಂದೇ ನೆಮ್ಮದಿಯ ವಿಷಯವೆಂದರೆ ನಾವು ಮನೆಯಲ್ಲಿದ್ದೇವೆ" ಎಂದು ಅವರು ಹೇಳುತ್ತಾರೆ.
ಅವರ ಮಗಳು ಕಾಜಲ್ ಊರಿನ ರಸ್ತೆಯಲ್ಲೇ ಇತರ ಮಕ್ಕಳೊಂದಿಗೆ ಆಟದಲ್ಲಿ ಮುಳುಗಿದ್ದಳು. ಅಂದು ಬೆಳಗಿನ ಸಮಯ ಮಳೆ ಬರುತ್ತಿತ್ತು. ನಮ್ಮ ಫೋಟೊಗಳಿಗಾಗಿ ಶಾಂತಿ ತನ್ನ ಮಗಳ ಬಳಿ ಆಕೆಯ ಬಳಿ ಇರುವ ಎರಡು ಒಳ್ಳೆಯ ಫ್ರಾಕ್‌ಗಳಲ್ಲಿ ಒಂದನ್ನು ಧರಿಸುವಂತೆ ಹೇಳಿದರು. ಸ್ವಲ್ಪ ಸಮಯದಲ್ಲೇ ನಂತರ, ಮಗು ಕೆಸರು ತುಂಬಿದ ರಸ್ತೆಯಲ್ಲಿ ನಡೆಯುತ್ತಾ ಅಂಗಿಯನ್ನು ಕಿತ್ತೆಸೆದು ಕಲ್ಲು ಮತ್ತು ಕೋಲುಗಳೊಂದಿಗೆ ಆಡುತ್ತಿದ್ದ ತನ್ನ ಸ್ನೇಹಿತರನ್ನು ಸೇರಿಕೊಂಡಿತು.
ಶಿಯೋಹರ್ ಬಿಹಾರದಲ್ಲಿ ಭೌಗೋಳಿಕವಾಗಿ ಮತ್ತು ಜನಸಂಖ್ಯೆಯಲ್ಲಿ ಚಿಕ್ಕ ಜಿಲ್ಲೆಯಾಗಿದ್ದು, 1994ರಲ್ಲಿ ಸೀತಾಮಡಿಯಿಂದ ಇದನ್ನು ಬೇರ್ಪಡಿಸಿ ಸೃಷ್ಟಿಸಲಾಗಿದೆ. ಶಿಯೋಹರ್‌ನ ಜಿಲ್ಲಾ ಕೇಂದ್ರವು ಇದರ ಏಕೈಕ ಪಟ್ಟಣವಾಗಿದೆ. ಬಾಗಮತಿ, ಜಿಲ್ಲೆಯ ಪ್ರಮುಖ ನದಿ ಮತ್ತು ಗಂಗಾನದಿಯ ಪ್ರಮುಖ ಉಪನದಿ, ಈ ನದಿಯು ನೇಪಾಳದಲ್ಲಿ ಮಳೆ ನೀರಿನಿಂದ ಉಕ್ಕಿ ಹರಿಯುವುದರಿಂದ, ಮಳೆಗಾಲದಲ್ಲಿ ಹಳ್ಳಿಗಳು ಹಲವು ಬಾರಿ ಪ್ರವಾಹಕ್ಕೆ ಸಿಲುಕುತ್ತವೆ, ಉತ್ತರ ಬಿಹಾರದಾದ್ಯಂತ ಕೋಸಿ ಮತ್ತು ಇತರೆ ನದಿ ವ್ಯವಸ್ಥೆಗಳು ಅವುಗಳ ಅಪಾಯದ ಮಟ್ಟಗಳಿಗೆ ಹತ್ತಿರದಲ್ಲಿವೆ. ಈ ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಜನಪ್ರಿಯವಾಗಿದೆ, ಎರಡೂ ಹೆಚ್ಚು ನೀರನ್ನು ಬೇಡುವ ಬೆಳೆಗಳು.
ಮುಸಹರ್ ತೋಲಾ-ಮಾಧೋಪುರ್ ಅನಂತ್‌ನಲ್ಲಿ, ಜನರು ಸ್ಥಳೀಯ ಭತ್ತದ ಗದ್ದೆಗಳಲ್ಲಿ ಮತ್ತು ನಿರ್ಮಾಣ ಸ್ಥಳಗಳಲ್ಲಿ ಮತ್ತು ದೂರದ ಊರುಗಳಲ್ಲಿನ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವರಿಗೆ ಸಣ್ಣ ಭೂಮಿಯನ್ನು ಹೊಂದಿರುವ ಸಂಬಂಧಿಕರಿದ್ದಾರೆ, ಅವರುಗಳು ಒಂದು ಅಥವಾ ಎರಡು ಕತ್ತಾಗಳಷ್ಟು (ಒಂದು ಎಕರೆಯ ಒಂದು ಭಾಗ) ಭೂಮಿಯನ್ನು ಹೊಂದಿದ್ದಾರೆ. ಆದರೆ ಇಲ್ಲಿ ಯಾರೂ ಭೂಮಿಯನ್ನು ಹೊಂದಿಲ್ಲ.
ಶಾಂತಿಯವರ ಕೂದಲು ಗಂಟು ಗಂಟಾಗಿವೆ. ಅದು ಅವರ ಬೆರಗುಗೊಳಿಸುವ ನಗುವಿನ ಎದರು ಅದು ಎದ್ದು ಕಾಣುತ್ತಿತ್ತು. ಆ ಕುರಿತು ಅವರನ್ನು ಕೇಳಿದಾಗ ಅಲ್ಲಿದ್ದ ಇತರ ಮಹಿಳೆಯರೂ ತಮ್ಮ ಸೆರಗನ್ನು ಸರಿಸಿ ತೋರಿಸಿದರು. ಅವರ ಕೂದಲು ಕೂಡ ಗಂಟಾಗಿತ್ತು. ಇದು ಅಘೋರಿ ಶಿವನಿಗೆ" ಎಂದು ಶಾಂತಿ ಹೇಳುತ್ತಾರೆ, ಆದರೆ ಇದನ್ನು ಹರಕೆಯಾಗಿ ಅರ್ಪಿಸುವುದಿಲ್ಲ ಎಂದು ಕೂಡಾ ಹೇಳಿದರು. "ಅದು ರಾತ್ರೋ ರಾತ್ರಿ ಹೀಗೆ ಗಂಟು ಗಂಟಾಯಿತು" ಎಂದು ಅವರು ಹೇಳುತ್ತಾರೆ.
ಕಲಾವತಿಯವರ ಪ್ರಕಾರ ಈ ಮಾತು ನಂಬಲರ್ಹವಲ್ಲ ಮತ್ತು ಮುಸಹರ್ ತೋಲಾದ ಮಹಿಳೆಯರು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದಿಲ್ಲ ಎಂದು ಹೇಳುತ್ತಾರೆ. ಅವರಂತಹ ಆಶಾ ಕಾರ್ಯಕರ್ತೆಯರು ಪ್ರತಿ ಸಾಂಸ್ಥಿಕ ಹೆರಿಗೆಗೆಗೆ ಪ್ರೋತ್ಸಾಹಕವಾಗಿ 600 ರೂ. ಪಡೆಯಲು ಅರ್ಹರು, ಆದರೆ ಮಹಾಮಾರಿಯ ಸಮಯದಲ್ಲಿ ಆ ಹಣವನ್ನು ಭಾಗಶಃ ಮಾತ್ರ ಪಾವತಿಸಲಾಗಿದೆ ಎಂದು ಕಲಾವತಿ ಹೇಳುತ್ತಾರೆ. "ಜನರನ್ನು ಆಸ್ಪತ್ರೆಗೆ ಹೋಗುವಂತೆ ಮನವೊಲಿಸುವುದು ತುಂಬಾ ಕಷ್ಟ, ಜೊತೆಗೆ ನಂತರ ಹಣವೂ ಬರುವುದಿಲ್ಲ" ಎಂದು ಅವರು ಹೇಳುತ್ತಾರೆ.
ಮುಸಹರ್ ಅಲ್ಲದ ಜನರು ಈ ಸಮುದಾಯದ ಕುರಿತು ಅವರೆಲ್ಲರೂ ಬಹಳ ಹಟಮಾರಿತನದಿಂದ ತಮ್ಮದೇ ದಾರಿಯಲ್ಲಿ ನಡೆಯುತ್ತಾರೆನ್ನುವ ಗ್ರಹಿಕೆಯು ಶಾಂತಿಯವರು ನನ್ನೊಂದಿಗೆ ಅವರ ಆಚರಣೆಗಳ ಕುರಿತು ಹೆಚ್ಚು ತೆರೆದುಕೊಳ್ಳದೇ ಇರಲು ಕಾರಣವಿರಬಹುದು. ಪೌಷ್ಟಿಕತೆಯಕುರಿತು ಮಾತನಾಡಲು ಅವರು ಒಪ್ಪಲಿಲ್ಲ. ನಾನು ಮುಸಹರ್‌ಗಳ ಪ್ರಚಲಿತ ರೂಢಿಗತ ಅಭ್ಯಾಸಗಳ ಕುರಿತು ಕೇಳಿದಾಗ "ನಾವು ದಂಶಕಗಳನ್ನು ತಿನ್ನುವುದಿಲ್ಲ," ಎಂದಷ್ಟೇ ಅವರು ಹೇಳಿದರು.
ಕಲಾವತಿ ಇದನ್ನು ಒಪ್ಪುತ್ತಾರೆ - ಈ ಮುಸಹರ್ ತೋಲಾದಲ್ಲಿ, ಇವರ ಆಹಾರ ಸಾಮಾನ್ಯವಾಗಿ ಅನ್ನ ಮತ್ತು ಆಲೂಗಡ್ಡೆಯಾಗಿರುತ್ತದೆ. "ಯಾರೂ ಹಸಿರು ತರಕಾರಿಗಳನ್ನು ತಿನ್ನುವುದಿಲ್ಲ, ಅದು ಖಚಿತ" ಎಂದು ಕಲಾವತಿ ಹೇಳುತ್ತಾರೆ, ಈ ಹಾಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ವ್ಯಾಪಕವಾಗಿ ಹರಡಿದೆ.
ಹಳ್ಳಿಯಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ (ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿ) ಶಾಂತಿ ಸಬ್ಸಿಡಿ ಅಕ್ಕಿ ಮತ್ತು ಗೋಧಿಯನ್ನು ಪಡೆಯುತ್ತಾರೆ, ಇದು ಪ್ರತಿ ತಿಂಗಳು ಒಟ್ಟು ಸುಮಾರು 27 ಕಿಲೋ ದೊರೆಯುತ್ತದೆ. "ಎಲ್ಲಾ ಮಕ್ಕಳನ್ನು ಪಡಿತರ ಚೀಟಿಯಲ್ಲಿ ಸೇರಿಸಲಾಗಿಲ್ಲ, ಹೀಗಾಗಿ ನಾವು ಕಿರಿಯರ ಧಾನ್ಯದ ಪಾಲನ್ನು ಪಡೆಯಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ. ಇಂದಿನ ಊಟ ಅನ್ನ ಮತ್ತು ಆಲೂಗಡ್ಡೆ ಮತ್ತು ಹೆಸರು ಬೇಳೆ ಎಂದು ಅವರು ಹೇಳುತ್ತಾರೆ. ರಾತ್ರಿಯ ಊಟಕ್ಕೆ ರೊಟ್ಟಿ ಇರುತ್ತದೆ. ಮೊಟ್ಟೆ, ಹಾಲು ಮತ್ತು ಹಸಿರು ತರಕಾರಿಗಳು ಮನೆಯಲ್ಲಿ ಅಪರೂಪ, ಮತ್ತು ಹಣ್ಣುಗಳು ಇನ್ನೂ ಅಪರೂಪ.
ನಿಮ್ಮ ಮಗಳಿಗೂ ಇಷ್ಟು ಮಕ್ಕಳು ಹುಟ್ಟುತ್ತಾರೆಯೇ ಎಂದು ನಾನು ಕೇಳಿದಾಗ ಅವರು ನಗುತ್ತಾರೆ. ಮಮತಾ ಅವರ ಸಂಸಾರವು ನೇಪಾಳದ ಗಡಿಯಲ್ಲಿ ವಾಸಿಸುತ್ತದೆ. "ಅದು ನನಗೆ ಗೊತ್ತಿಲ್ಲ, ಆದರೆ ಆಕೆಗೆ ಆಸ್ಪತ್ರೆಯ ಅಗತ್ಯವಿದ್ದರೆ, ಅವಳು ಬಹುಶಃ ಇಲ್ಲಿಗೆ ಬರುತ್ತಾಳೆ."
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಇದಕ್ಕಾಗಿ ಈ ಇ - ಮೈಲ್ ವಿಳಾಸವನ್ನು ಸಂಪರ್ಕಿಸಿ : zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳಿಸಿ
ಅನುವಾದ: ಶಂಕರ ಎನ್. ಕೆಂಚನೂರು