ಕೋವಿಡ್ -19 ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳಲೆಂದು ಮಹೇಂದ್ರ ಫುಟಾಣೇ ಮೇ 5ರ ಬೆಳಿಗ್ಗೆ ತನ್ನ ಮನೆಯಿಂದ ಹೊರಟು, 12 ದಿನಗಳ ನಂತರ ಮನೆಗೆ ಮರಳಿದರು. "ಇದೊಂದು ರೋಮಾಂಚಕಾರಿ ದಿನವಾಗಿರಬೇಕಿತ್ತು, ಆದರೆ ದುಃಸ್ವಪ್ನವಾಗಿ ಬದಲಾಯಿತು" ಎಂದು ಮಹೇಂದ್ರ ಹೇಳುತ್ತಾರೆ.

ಅಂದು ಮಹೇಂದ್ರ ಲಸಿಕೆ ಪಡೆಯುವ ಮೊದಲೇ ಅವರನ್ನು ಪೋಲಿಸರು ಬಂಧಿಸಿದರು.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನೆಕ್ನೂರ್ ಗ್ರಾಮದ ನಿವಾಸಿ ಮಹೇಂದ್ರ (43) ಅನೇಕ ಪ್ರಯತ್ನಗಳ ನಂತರ ಕೋವಿನ್ ವೇದಿಕೆಯಲ್ಲಿ ತಮ್ಮ ಲಸಿಕೆ ಪಡೆಯುವ ಸಮಯವನ್ನು ಕಾಯ್ದಿರಿಸಿದ್ದರು. ಅವರು ಹೇಳುತ್ತಾರೆ, "ಮೇ 5]ರಂದು ಬೆಳಿಗ್ಗೆ 9ರಿಂದ 11ರವರೆಗೆ ಲಸಿಕೆ ಪಡೆಯಲು ಸಮಯ ನಿಗದಿ ಮಾಡಲಾಗಿದೆ ಎಂದು ತಿಳಿಸುವ ಸಂದೇಶ ನನಗೆ ಬಂದಿತ್ತು." ಅವರು ತನಗಾಗಿ ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವರ ಕೆಲವು ಕುಟುಂಬ ಸದಸ್ಯರಿಗೆಂದು ವ್ಯಾಕ್ಸಿನೇಷನ್ ಪಡೆಯಲು ಸ್ಲಾಟ್ ಪಡೆದೊದ್ದರು. ನಾವು ನಮ್ಮ ಮೊದಲ ಡೋಸ್‌ ಲಸಿಕೆ ಪಡೆಯುವುದನ್ನು ಎದುರು ನೋಡುತ್ತಿದ್ದೆವು. ಕೋವಿಡ್ -19 ರ ಎರಡನೇ ಅಲೆ ಭಯಾನಕವಾಗಿದೆ, ”ಎಂದು ಮಹೇಂದ್ರ ಹೇಳುತ್ತಾರೆ.

ಅವರ ಕುಟುಂಬವು ನೆಕ್ನೂರ್‌ನಿಂದ 25 ಕಿ.ಮೀ ದೂರದಲ್ಲಿರುವ ಬೀಡ್ ನಗರದ ಲಸಿಕಾ ಕೇಂದ್ರವನ್ನು ತಲುಪಿದಾಗ ಅವರ ಭರವಸೆಗಳು ಮಣ್ಣುಪಾಲಾದವು. ಲಸಿಕಾ ಕೇಂದ್ರದಲ್ಲಿ ಲಸಿಕೆಯ ಕೊರತೆಯಿಂದಾಗಿ, 18-44 ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ನಿಲ್ಲಿಸಿದ್ದರು. ಮಹೇಂದ್ರ "ಅಲ್ಲಿ ಪೋಲಿಸರನ್ನು ಕಾವಲಿಗಿರಿಸಲಾಗಿತ್ತು" ಎಂದು ಹೇಳಿದರು. ನಾವು ನಮಗೆ ಲಸಿಕೆಗೆ ಸಮಯ ನೀಡಿರುವ ಸಂದೇಶವನ್ನು ತೋರಿಸಲು ಹೋದಾಗ ಅವರು ನಮ್ಮೊಂದಿಗೆ ನಿಂದನೆಯ ಭಾಷೆಯಲ್ಲಿ ಮಾತನಾಡಿದರು"

ಸರದಿಯಲ್ಲಿ ನಿಂತಿರುವ ಜನರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭವಾಗಿ ಲಾಠಿ ಪ್ರಹಾರದೊಂದಿಗೆ ವಾಗ್ವಾದ ಕೊನೆಗೊಂಡಿತು ಮತ್ತು ಮಹೇಂದ್ರ, ಅವರ ಮಗ ಪಾರ್ಥ್, ಸಹೋದರ ನಿತಿನ್ ಮತ್ತು ಸೋದರಸಂಬಂಧಿ ವಿವೇಕ್ ಸೇರಿದಂತೆ ಆರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಅನುರಾಧಾ ಗವಾನೆ ಘಟನೆಯ ಎಫ್‌ಐಆರ್ ದಾಖಲಿಸಿದ್ದು, ಇದರಲ್ಲಿ ಆರು ಮಂದಿ ವ್ಯಾಕ್ಸಿನೇಷನ್ ಕ್ಯೂ ಮುರಿದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಕಾನ್‌ಸ್ಟೆಬಲ್‌ಗಳನ್ನು ನಿಂದಿಸಿದ್ದಾರೆ, ಅವಮಾನಿಸಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಎಫ್‌ಐಆರ್ ಹೇಳುತ್ತದೆ. ಕಾನೂನುಬಾಹಿರ ಗುಂಪುಗೂಡುವಿಕೆ, ಗಲಭೆ, ಸಾರ್ವಜನಿಕ ಸೇವಕರಿಗೆ ಹಲ್ಲೆ, ಮತ್ತು ಶಾಂತಿ ಉಲ್ಲಂಘನೆ ಸೇರಿದಂತೆ ಹನ್ನೊಂದು ಆರೋಪಗಳನ್ನು ಪಟ್ಟಿ ಮಾಡಲಾಗಿದೆ.

Mahendra Phutane was given an appointment for getting vaccinated, but he couldn't get the first dose because of a shortage of vaccines
PHOTO • Parth M.N.

ಲಸಿಕೆ ಪಡೆಯಲು ಮಹೇಂದ್ರ ಫುಟಾಣೆ ಅವರಿಗೆ ಅಪಾಯಿಂಟ್ಮೆಂಟ್ ನೀಡಲಾಯಿತು, ಆದರೆ ಲಸಿಕೆ ಕೊರತೆಯಿಂದಾಗಿ ಅವರಿಗೆ ಮೊದಲ ಡೋಸ್ ಸಿಗಲಿಲ್ಲ.

ಆದರೆ, ಈ ಆರೋಪಗಳನ್ನು ಮಹೇಂದ್ರ ನಿರಾಕರಿಸುತ್ತಾರೆ. "ಅಲ್ಲಿ ಒಂದಿಷ್ಟು ವಾಗ್ವಾದ ನಡೆಯಿತು, ಆದರೆ ಮೊದಲು ಬಲಪ್ರಯೋಗ ಮಾಡಿದರು ಮತ್ತು ಪೊಲೀಸ್ ಠಾಣೆಯಲ್ಲಿಯೂ ನಮ್ಮನ್ನು ಹೊಡೆದರು" ಎಂದು ಅವರು ಹೇಳುತ್ತಾರೆ. ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ 39 ವರ್ಷದ ನಿತಿನ್ ಅವರನ್ನು ಸಹ ಪೊಲೀಸರು ಬಿಡಲಿಲ್ಲ ಎಂದು ಮಹೇಂದ್ರ ಹೇಳುತ್ತಾರೆ. "ಪೊಲೀಸರು ಆತನನ್ನೂ ಹೊಡೆದರು. ಘಟನೆಯ ನಂತರ ಅವನು ಖಿನ್ನತೆಗೆ ಒಳಗಾಗಿದ್ದರಿಂದ ನಾವು ಆತನ ಮೇಲೆ ನಿಗಾ ಇಡಬೇಕಾಯಿತು. ಜೈಲಿನಲ್ಲಿ ಅವನು ಮಣಿಕಟ್ಟನ್ನು ಕತ್ತರಿಸಿಕೊಳ್ಳಲು ಪ್ರಯತ್ನಿಸಿದ್ದ" ಎಂದು ಅವರು ಹೇಳುತ್ತಾರೆ.

ಮೇ 17ರಂದು ಜಾಮೀನಿನ ಮೇಲೆ ಬಿಡುಗಡೆಯಾದ ಮಹೇಂದ್ರ ತಮ್ಮ ಗಾಯಗಳ ಫೋಟೋಗಳನ್ನು ನನಗೆ ತೋರಿಸಿದರು. ಕಪ್ಪು ಮತ್ತು ನೀಲಿ ಗುರುತುಗಳು ಲಾಠಿಪ್ರಹಾರದಿಂದಾಗಿ ಉಂಟಾಗಿದ್ದು ಎಂದು ಅವರು ಹೇಳಿದರು. "ಈ ಎಲ್ಲದರ ಅಗತ್ಯವಿರಲಿಲ್ಲ" ಎಂದು ಅವರು ಹೇಳುತ್ತಾರೆ. "ಅವರು ಸಾಕಷ್ಟು ಲಸಿಕೆಗಳನ್ನು ಹೊಂದಿಲ್ಲವೆಲ್ಲಂದ ಮೇಲೆ, ಯಾಕೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಹೇಳಿ ಕರೆಯಿಸಬೇಕಿತ್ತು?"

ವ್ಯಾಕ್ಸಿನ್‌ಗಳ ಕೊರತೆಯು ಭಾರತದಲ್ಲಿ 2021ರ ಜನವರಿ 16ರಂದು ಹಂತಹಂತವಾಗಿ ಪ್ರಾರಂಭಿಸಲಾದ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನದ ಮೇಲೆ ಕೆಟ್ಟ ಪರಿಣಾವನ್ನು ಬೀರಿದೆ. ಈ ಅಭಿಯಾನದಡಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರು ಮೊದಲು ಚುಚ್ಚುಮದ್ದನ್ನು ಪಡೆದರು.

ಮಾರ್ಚ್ 1ರಿಂದ, 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರೂ ಲಸಿಕೆಗಳಿಗೆ ಅರ್ಹರೆಂದು ಹೇಳಲಾಯಿತು. ಆದರೆ ಏಪ್ರಿಲ್‌ ತಿಂಗಳಿನಲ್ಲಿ 45ರಿಂದ 59 ವರ್ಷ ವಯಸ್ಸಿನವರು ಲಸಿಕೆಗಳನ್ನು ಪಡೆಯಲು ಪ್ರಾರಂಭಿಸಿದಾಗ ಸಮಸ್ಯೆ ಪ್ರಾರಂಭವಾಯಿತು – ಲಸಿಕೆಯ ಕೊರತೆ ಎದುರಾಯಿತು.

ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದೊಂದಿಗೆ ಮಾತನಾಡುತ್ತಾ, ಲಸಿಕೆಗಳ ಕೊರತೆಗೆ ಕಾರಣ ಕೇಂದ್ರವು ಲಸಿಕೆಗಳನ್ನು ಅಸಮಾನವಾಗಿ ವಿತರಿಸಿರುವುದು ಎಂದು ಆರೋಪಿಸಿದರು. “ಮಹಾರಾಷ್ಟ್ರಕ್ಕೆ ಗುರುವಾರ [ಏಪ್ರಿಲ್ 8] 7.5 ಲಕ್ಷ ಲಸಿಕೆ ಪ್ರಮಾಣವನ್ನು ನೀಡಲಾಗಿದ್ದು. ಉತ್ತರ ಪ್ರದೇಶಕ್ಕೆ 48 ಲಕ್ಷ ಡೋಸ್, ಮಧ್ಯಪ್ರದೇಶಕ್ಕೆ 40 ಲಕ್ಷ, ಗುಜರಾತಿಗೆ 30 ಲಕ್ಷ ಮತ್ತು ಹರಿಯಾಣಕ್ಕೆ 24 ಲಕ್ಷ ಡೋಸ್ ನೀಡಲಾಗಿದೆ." ರಾಜ್ಯವು ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಲಸಿಕೆಗಳನ್ನು ನೀಡುತ್ತಿದೆ.

ಏಪ್ರಿಲ್ನಿಂದ ಮೇವರೆಗೆ ಮಹಾರಾಷ್ಟ್ರದಲ್ಲಿ ಲಸಿಕೆ ಕೊರತೆಯಿತ್ತು. 18-44 ವಯಸ್ಸಿನವರಿಗೆ (ಮೇ 1 ರಿಂದ) ಲಸಿಕೆ ಪ್ರಾರಂಭವಾದ ತಕ್ಷಣ, ಕೆಲವೇ ದಿನಗಳಲ್ಲಿ ಅದನ್ನು ನಿಲ್ಲಿಸಲಾಯಿತು. ಲಭ್ಯವಿರುವ ಲಸಿಕೆಯನ್ನು ಮೊದಲು ವಯಸ್ಸಾದವರಿಗೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ನಿರ್ಧರಿಸಿತು.

ಲಸಿಕೆಯ ಕೊರತೆಯಿಂದಾಗಿ ಒಳನಾಡಿನಲ್ಲಿ ವ್ಯಾಕ್ಸಿನೇಷನ್ ವೇಗ ಕಡಿಮೆಯಾಗಿದೆ.

ಮೇ 31ರ ಹೊತ್ತಿಗೆ, ಬೀಡ್‌ನ ಜನಸಂಖ್ಯೆಯ ಕೇವಲ 14.4 ಪ್ರತಿಶತದಷ್ಟು, ಅಂದರೆ ಸುಮಾರು 2.94 ಲಕ್ಷ ಜನರು ಲಸಿಕೆಯ ಮೊದಲ ಡೋಸೇಜ್ ಪಡೆದಿದ್ದರು. ಕೇವಲ 4.5 ಪ್ರತಿಶತದಷ್ಟು ಜನರು ಲಸಿಕೆಯ ಎರಡೂ ಡೋಸೇಜ್ ಪಡೆದಿದ್ದಾರೆ.‌

ಬೀಡ್ ಎಲ್ಲಾ ವಯೋಮಾನದ 20.4 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದೆ ಎಂದು ಜಿಲ್ಲಾ ರೋಗನಿರೋಧಕ ಅಧಿಕಾರಿ ಸಂಜಯ್ ಕದಮ್ ಹೇಳುತ್ತಾರೆ. ಮೇ 31ರ ಹೊತ್ತಿಗೆ, ಶೇಕಡಾ 14.4ರಷ್ಟು, ಎಂದರೆ ಸುಮಾರು 2.94 ಲಕ್ಷ ಜನರು - ತಮ್ಮ ಮೊದಲ ಡೋಸೇಜ್ ಪಡೆದಿದ್ದಾರೆ. ಕೇವಲ 4.5 ಶೇಕಡಾ, 91,700 ಜನರು ಎರಡೂ ಡೋಸೇಜುಗಳನ್ನು ಪಡೆದಿದ್ದಾರೆ.

45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 9.1 ಲಕ್ಷ ಜನರಲ್ಲಿ, ಶೇಕಡಾ 25.7ರಷ್ಟು ಜನರು ಮೊದಲ ಡೋಸೇಜ್ ಪಡೆದಿದ್ದಾರೆ, ಆದರೆ ಕೇವಲ 7 ಶೇಕಡಾ ಮಾತ್ರ ಎರಡನೆಯದನ್ನು ಪಡೆದಿದ್ದಾರೆ. ಬೀಡ್‌ನ 18-44 ವಯೋಮಾನದ 11 ಲಕ್ಷ ಜನರಲ್ಲಿ, ಕೇವಲ 11,700 - ಕೇವಲ 1 ಶೇಕಡಾ - ಮೇ 31ರೊಳಗೆ ತಮ್ಮ ಮೊದಲ ಡೋಸೇಜ್ ಪಡೆದಿದ್ದಾರೆ.‌

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಮಹಾರಾಷ್ಟ್ರದಲ್ಲಿ ನೀಡಲಾಗುತ್ತಿದ್ದರೂ, ನೀಡಲಾಗುತ್ತಿರುವ ಹೆಚ್ಚಿನ ಡೋಸೇಜ್‌ಗಳು ಕೋವಿಶೀಲ್ಡ್. ಸರ್ಕಾರದಿಂದ ನಡೆಸಲ್ಪಡುವ ಬೀಡ್‌ನ ವ್ಯಾಕ್ಸಿನೇಷನ್ ಕೇಂದ್ರಗಳು ರಾಜ್ಯದ ಕೋಟಾದಿಂದ ಲಸಿಕೆಗಳನ್ನು ಸ್ವೀಕರಿಸುತ್ತವೆ ಮತ್ತು ಅವುಗಳನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡುತ್ತವೆ.

ಆದರೆ, ಇಲ್ಲಿಂದ 400 ಕಿ.ಮೀ ದೂರದಲ್ಲಿರುವ ಮುಂಬೈನ ಖಾಸಗಿ ಆಸ್ಪತ್ರೆಗಳು ಒಂದು ಡೋಸ್‌ಗೆ 800-1,500 ರೂನಂತೆ ನೀಡುತ್ತಿವೆ. ಶ್ರೀಮಂತ ಮತ್ತು ನಗರ ಮಧ್ಯಮ ವರ್ಗದವರು ವ್ಯಾಕ್ಸಿನೇಷನ್ಗಾಗಿ ಪ್ರೀಮಿಯಂ ಪಾವತಿಸುತ್ತಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಅವರು ಕೋವಿಶೀಲ್ಡ್ ಖರೀದಿಯ ವೆಚ್ಚಕ್ಕಿಂತ ಶೇಕಡಾ 16-66 ಮತ್ತು ಕೋವ್ಯಾಕ್ಸಿನ್‌ ಬೆಲೆಯ ಶೇ 4ರಷ್ಟು ಹೆಚ್ಚು ಪಾವತಿಸುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಸ್ಥಳೀಯವಾಗಿ ತಯಾರಿಸಿದ 25 ಪ್ರತಿಶತದಷ್ಟು ಲಸಿಕೆಗಳನ್ನು ಖರೀದಿಸಲು ಅವಕಾಶ ನೀಡುವುದು ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ರೋಗನಿರೋಧಕ ಕಾರ್ಯತಂತ್ರದ ಒಂದು ಭಾಗವಾಗಿದೆ, ಇದು ಮೇ 1ರಿಂದ ಜಾರಿಗೆ ಬಂದಿತು. ಖಾಸಗಿ ಆಸ್ಪತ್ರೆಗಳು ಸಂಗ್ರಹಿಸಿದ ಡೋಸೇಜ್‌ಗಳನ್ನು ಮುಖ್ಯವಾಗಿ 18-44 ವಯಸ್ಸಿನವರಿಗೆ ಬಳಸಲಾಗುತ್ತಿದೆ.

At first, Prasad Sarvadnya was hesitant to get vaccinated. He changed his mind when cases of Covid-19 started increasing in Beed
PHOTO • Parth M.N.

ಆರಂಭದಲ್ಲಿ,  ಪ್ರಸಾದ್ ಸರ್ವಾದ್ನ್ಯ ಲಸಿಕೆ ಪಡೆಯಲು  ಹಿಂಜರಿಯುತ್ತಿದ್ದರು. ಬೀಡ್‌ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ, ಅವರು ತನ್ನ ಮನಸ್ಸನ್ನು ಬದಲಾಯಿಸಿದರು.

ಆದರೆ, ಕೇಂದ್ರದ ಈ ವ್ಯಾಕ್ಸಿನೇಷನ್ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಜೂನ್ 2ರಂದು, ಖಾಸಗಿ ಆಸ್ಪತ್ರೆಗಳಿಗೆ ಸಮನಾಗಿ ರಾಜ್ಯಗಳಿಗೆ ನೀಡಲಾಗುವ ಶೇಕಡಾ 25 ರಷ್ಟು ಕೋಟಾವು "ಸಂಪೂರ್ಣವಾಗಿ ಅಸಮಂಜಸವಾಗಿದೆ ಮತ್ತು ಸಾಮಾಜಿಕ ವಾಸ್ತವತೆಗಳಿಂದ ದೂರವಿದೆ" ಎಂದು ನ್ಯಾಯಾಲಯ ಹೇಳಿದೆ . ತಮ್ಮ ದೊಡ್ಡ ಜನಸಂಖ್ಯೆಯ ವ್ಯಾಕ್ಸಿನೇಷನ್ ಜವಾಬ್ದಾರಿಯನ್ನು ರಾಜ್ಯಗಳು ಭರಿಸಬೇಕಾದರೆ, "ಖಾಸಗಿ ಆಸ್ಪತ್ರೆಗಳಿಗೆ ನೀಡುವ ಕೋಟಾವನ್ನು ಕಡಿಮೆ ಮಾಡಬೇಕು" ಎಂದು ನ್ಯಾಯಾಲಯ ಹೇಳಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಸಮಾನ ಇಂಟರ್‌ನೆಟ್‌ ಲಭ್ಯವಿಲ್ಲದಿರುವುದು ಅಸಮಾನ ಲಸಿಕೆ ಪಡೆಯುವಿಕೆಗೆ ಕಾರಣವಾಗಿದೆ. ಕೋವಿನ್ ಪ್ಲಾಟ್‌ಫಾರ್ಮ್ ಮೂಲಕ ಮಾತ್ರವೇ ಲಸಿಕೆ ಪಡಡಡಡೆಯುವ ಸಮಯ ನಿರ್ಧರಿಸುವದು ಸಾಧ್ಯವಿರುವುದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಗಮನಿಸಿದಂತೆ: "18-44 ವರ್ಷದೊಳಗಿನ ಈ ದೇಶದ ಗಮನಾರ್ಹ ಜನಸಂಖ್ಯೆಗೆ ಲಸಿಕೆ ನೀಡಲು ಡಿಜಿಟಲ್ ಪೋರ್ಟಲ್ ಅನ್ನು ಪ್ರತ್ಯೇಕವಾಗಿ ಅವಲಂಬಿಸಿರುವ ವ್ಯಾಕ್ಸಿನೇಷನ್ ನೀತಿಯು ಈ ರೀತಿಯ ಡಿಜಿಟಲ್ ವಿಭಜನೆಯಿಂದಾಗಿ ಸಾರ್ವತ್ರಿಕ ರೋಗನಿರೋಧಕ ಗುರಿಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ."

ರಾಷ್ಟ್ರೀಯ ಮಾದರಿ ಸಮೀಕ್ಷೆಯ (2017-18) ಪ್ರಕಾರ, ಮಹಾರಾಷ್ಟ್ರದ ಕೇವಲ 18.5 ರಷ್ಟು ಗ್ರಾಮೀಣ ಕುಟುಂಬಗಳ ಬಳಿ ಮಾತ್ರವೇ ಇಂಟರ್ನೆಟ್ ಸೌಲಭ್ಯವಿದೆ. ಇದಲ್ಲದೆ, ಗ್ರಾಮೀಣ ಮಹಾರಾಷ್ಟ್ರದ 6 ಜನರಲ್ಲಿಒಬ್ಬರ ಬಳಿ ಮಾತ್ರ "ಇಂಟರ್ನೆಟ್ ಬಳಸುವ ಸಾಮರ್ಥ್ಯ" ಇತ್ತು. ಮಹಿಳೆಯರಲ್ಲಿ, ಈ ಸಂಖ್ಯೆ 11ರಲ್ಲಿ 1 ಆಗಿತ್ತು.

ಈ ರೀತಿಯಾದರೆ ತಂತ್ರಜ್ಞಾನ ಸ್ನೇಹಿ, ನಗರ ಮಧ್ಯಮ ವರ್ಗದವರು ಮಹಾಮಾರಿಯ ಮೂರನೇ ಅಲೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. "ಆದರೆ ಬೀಡ್ನಂತಹ ಗ್ರಾಮೀಣ ಪ್ರದೇಶದ ಜನರು ಈ ಸಾಂಕ್ರಾಮಿಕ ಪಿಡುಗಿನ ಅಪಾಯವನ್ನು ಎದುರಿಸುತ್ತಾರೆ" ಎಂದು ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಿನ್ಸ್ ಗಲಾಂಡೆ ಹೇಳುತ್ತಾರೆ.

ಲಸಿಕೆಯನ್ನು ನೀಡುವ ವೇಗವು ಹೆಚ್ಚಾಗದಿದ್ದರೆ, ಅನೇಕ ಜನರ ಜೀವಕ್ಕೆ ಅಪಾಯವಿದೆಯೆಂದು ಗಲಾಂಡೆ ಅಭಿಪ್ರಾಯಪಡುತ್ತಾರೆ. ಅವರು ಹೇಳುತ್ತಾರೆ, "ಗ್ರಾಮೀಣ ಪ್ರದೇಶಗಳಲ್ಲಿ ಈ ಅಪಾಯ ಹೆಚ್ಚು, ಏಕೆಂದರೆ ಈ ಪ್ರದೇಶಗಳಲ್ಲಿನ ಆರೋಗ್ಯ ಮೂಲಸೌಕರ್ಯಗಳು ನಗರ ಪ್ರದೇಶಗಳಂತೆ ಉತ್ತಮವಾಗಿಲ್ಲ. ಕೋವಿಡ್ -19 ಹರಡುವುದನ್ನು ತಡೆಯಲು, ನಾವು ನಮ್ಮ ಗ್ರಾಮಗಳನ್ನು ಲಸಿಕೆ ನೀಡುವ ಮೂಲಕ ರಕ್ಷಿಸಬೇಕು."

Sangeeta Kale, a 55-year-old farmer in Neknoor village, hasn't taken the vaccine because she's afraid of falling ill afterwards
PHOTO • Parth M.N.

ಲಸಿಕೆ ಪಡೆದ ನಂತರ ಅನಾರೋಗ್ಯ ಕಾಡಬಹುದೆನ್ನುವ ಕಾರಣಕ್ಕೆ ನೆಕ್ನೂರ್ ಗ್ರಾಮದ 55 ವರ್ಷದ ಸಂಗೀತಾ ಕಾಳೆ ಇದುವರೆಗೆ ಲಸಿಕೆ ಪಡೆದಿಲ್ಲ,

ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯು ಸರ್ಕಾರಿ ಮಟ್ಟದಲ್ಲಿ ಗೋಚರಿಸದಿದ್ದರೂ, ಬೀಡ್‌ನ ಜನರು ಅದನ್ನು ಅನುಭವಿಸುತ್ತಿದ್ದಾರೆ. ನೆಕ್ನೂರಿನಲ್ಲಿ 18 ಎಕರೆ ಭೂಮಿಯನ್ನು ಹೊಂದಿರುವ 48 ವರ್ಷದ ರೈತ ಪ್ರಸಾದ್ ಸರ್ವದ್ನ್ಯ ಹೇಳುತ್ತಾರೆ, “ಜನರು ಆರಂಭದಲ್ಲಿ ಹಿಂಜರಿಯುತ್ತಿದ್ದರು ಮತ್ತು ಗೊಂದಲಕ್ಕೊಳಗಾಗಿದ್ದರು. ನನ್ನ ವಿಷಯದಲ್ಲೂ ಅದೇ ಆಗಿತ್ತು." ಅವರು ವಿವರಿಸುತ್ತಾರೆ, "ಜ್ವರ ಮತ್ತು ಮೈಕೈ ನೋವುಗಳು ಕರೋನದ ಲಕ್ಷಣವಾಗಿರಬಹುದು ಎಂದು ನೀವು ಕೇಳಿದಾಗ, ಮತ್ತು ವ್ಯಾಕ್ಸಿನೇಷನ್ ಮಾಡಿದ ನಂತರ ನಿಮಗೆ ಜ್ವರ ಬರಬಹುದು ಎಂದು ಹೇಳಿದರೆ ಅದನ್ನು ಪಡೆಯಲು ಯಾರೂ ಬಯಸುವುದಿಲ್ಲ."

ಆದರೆ ಮಾರ್ಚ್ ಅಂತ್ಯದ ವೇಳೆಗೆ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ ಜನರು ಭಯಭೀತರಾಗಿದ್ದರು ಎಂದು ಪ್ರಸಾದ್ ಹೇಳುತ್ತಾರೆ. "ಈಗ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಬಯಸುತ್ತಾರೆ."

ಮಾರ್ಚ್ ಅಂತ್ಯದಲ್ಲಿ, ಪ್ರಸಾದ್ ತಮ್ಮ ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿರುವ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋದರು, ಮತ್ತು ಅಲ್ಲಿ ಲಸಿಕೆ ಪಡೆಯಲು ಜನಸಮೂಹ ಉತ್ಸುರಾಗಿರುವುದು ಕಂಡುಬಂದಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳುವುದು ಅಲ್ಲಿ ಬಹಳ ಕಷ್ಟವಿತ್ತು. “ಇಲ್ಲಿ ಯಾರೂ ಕೋವಿನ್ ಬಳಸುವುದಿಲ್ಲ. ಸ್ಮಾರ್ಟ್‌ ಫೋನ್ ಹೊಂದಿರುವವರು ಸಹ ಅದರಲ್ಲಿ ಲಸಿಕೆಗಾಗಿ ಸಮಯವನ್ನು ಪಡೆಯಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ. "ನಾವು ನೇರವಾಗಿ ಆಧಾರ್ ಕಾರ್ಡ್‌ನೊಂದಿಗೆ ಕೇಂದ್ರಕ್ಕೆ ಹೋಗಿ ಅಲ್ಲಿ ಲಸಿಕೆಗಾಗಿ ಸಮಯವನ್ನು ಪಡೆಯುತ್ತೇವೆ."

ಕೆಲವು ಗಂಟೆಗಳ ಕಾಲ ಕಾಯ್ದ ನಂತರ ಪ್ರಸಾದ್ ಅವರಿಗೆ ಮೊದಲ ಡೋಸ್ ಸಿಕ್ಕಿತು. ಕೆಲವು ದಿನಗಳ ನಂತರ, ಅವರೊಂದಿಗೆ ಕೇಂದ್ರದಲ್ಲಿದ್ದ ಕೆಲವರು ಕೊರೋನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಪ್ರಸಾದ್ ಹೇಳುತ್ತಾರೆ, "ಇದು ನನಗೆ ಚಿಂತೆ ತಂದಿತು. ನನಗೆ ಜ್ವರವಿತ್ತು, ಆದರೆ ಇದು ಲಸಿಕೆಯ ಪರಿಣಾಮದ ಕೂಡ ಆಗಿರಬಹುದು. ಮೂರು ದಿನಗಳ ನಂತರವೂ ಜ್ವರ ಕಡಿಮೆಯಾಗದಿದ್ದಾಗ, ನನ್ನ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ನಾನು ಕೋವಿಡ್ ಪಾಸಿಟಿವ್ ಬಂದಿತು. ಪುಣ್ಯಕ್ಕೆ ಯಾವುದೇ ಅಪಾಯವೆದುರಿಸದೆ ಪಾರಾದೆ. " ಅವರು ಮೇ ಎರಡನೇ ವಾರದಲ್ಲಿ ಲಸಿಕೆಯ ಎರಡನೇ ಪ್ರಮಾಣವನ್ನು ಪಡೆದರು.

ಜನಸಂದಣಿಯನ್ನು ತಪ್ಪಿಸಲು ಬೀಡ್‌ನ ಲಸಿಕೆ ಕೇಂದ್ರಗಳಲ್ಲಿ ಈಗ ಟೋಕನ್‌ಗಳನ್ನು ನೀಡಲಾಗುತ್ತಿದೆ; ದಿನಕ್ಕೆ ಸುಮಾರು 100. ಟೋಕನ್ ಅಷ್ಟೇನೂ ಸಹಾಯ ಮಾಡುತ್ತಿರಲಿಲ್ಲ ಎಂದು 55 ವರ್ಷದ ಸಂಗೀತ ಕಾಳೆ ಹೇಳುತ್ತಾರೆ, ಅವರು ನೆಕ್ನೂರ್‌ನಲ್ಲಿ ವಾಸಿಸುತ್ತಿದ್ದು ತನ್ನ ಐದು ಎಕರೆ ಭೂಮಿಯಲ್ಲಿ ಸೋಯಾಬೀನ್ ಮತ್ತು ತೊಗರಿ ಕೃಷಿ ಮಾಡುತ್ತಾರೆ. ಅವರು ಹೇಳುತ್ತಾರೆ, “ಮೊದಲು ಜನಸಮೂಹವು ಲಸಿಕೆಗಾಗಿ ಸೇರುತ್ತಿತ್ತು, ಈಗ ಅದು ಟೋಕನ್‌ಗಾಗಿ ಒಟ್ಟುಗೂಡುತ್ತಿದೆ. ಟೋಕನ್ ವಿತರಿಸಿದ ನಂತರ ಜನರು ಹೊರಟು ಹೋಗುತ್ತಾರೆ, ಆದ್ದರಿಂದ ಜನಸಮೂಹವು ಇಡೀ ದಿನದ ಬದಲು ಬೆಳಿಗ್ಗೆ ಕೆಲವೇ ಗಂಟೆಗಳವರೆಗೆ ಒಟ್ಟುಗೂಡುತ್ತದೆ. "

ಸಂಗೀತಾ ತನ್ನ ಮೊದಲ ಡೋಸ್ ಇನ್ನೂ ಪಡೆದುಕೊಂಡಿಲ್ಲ ಏಕೆಂದರೆ ಅವರು ಹೆದರುತ್ತಿದ್ದಾರೆ. ಟೋಕನ್ ಪಡೆಯಲು ಅವರು ಬೆಳಿಗ್ಗೆ 6 ಗಂಟೆಗೆ ಕೇಂದ್ರಕ್ಕೆ ಹೋಗಬೇಕಾಗಿತ್ತು. “ಬಹಳಷ್ಟು ಜನರು ಮುಂಜಾನೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ, ಅದನ್ನು ನೋಡಿದರೆ ಭಯವಾಗುತ್ತದೆ. ನಾನು ಇನ್ನೂ ನನ್ನ ಮೊದಲ ಡೋಸ್ ತೆಗೆದುಕೊಂಡಿಲ್ಲ ಏಕೆಂದರೆ ನಾನು ನಂತರ ಬರಬಹುದಾದ ಜ್ವರದಿಂದಾಗಿ ಹೆದರುತ್ತಿದ್ದೇನೆ.”

PHOTO • Parth M.N.

94 ವರ್ಷದ ರುಕ್ಮಿಣಿ ಶಿಂಧೆ ತನ್ನ ಎರಡನೇ ಡೋಸ್ ಪಡೆಯಲು ಕಾಯುತ್ತಿದ್ದಾರೆ. ಕೋವಿಡ್ -19 ಲಸಿಕೆ ಬಗ್ಗೆ ತನ್ನ ನೆರೆಹೊರೆಯವರ ಭಯವನ್ನು ಅವಳು ನಿವಾರಿಸುತ್ತಾರೆ.

ಸಂಗೀತ ಅವರ ನೆರೆಯ ರುಕ್ಮಿಣಿ ಶಿಂಧೆ, "ಏನೂ ಆಗುವುದಿಲ್ಲ. ನಿಮ್ಮ ದೇಹದಲ್ಲಿ ಸ್ವಲ್ಪ ನೋಯುತ್ತಿರುವಂತೆ ನಿಮಗೆ ಅನ್ನಿಸಬಹುದು, ಅಷ್ಟೆ. ನನಗೆ ಅದೂ ಆಗಲಿಲ್ಲ" ಎಂದು ಹೇಳುತ್ತಾರೆ.

94 ವರ್ಷದ ರುಕ್ಮಿಣಿ ಶೀಘ್ರದಲ್ಲೇ 100ರ ಗಡಿ ದಾಟಲಿದ್ದಾರೆ. "ನೂರಕ್ಕೆ ಆರು ಕಡಿಮೆ" ಎಂದು ತನ್ನ ವಯಸ್ಸಿನ ಬಗ್ಗೆ ಕೇಳಿದಾಗ ಅವರು ಹೇಳುತ್ತಾರೆ. ಏಪ್ರಿಲ್ ಮಧ್ಯದಲ್ಲಿ ಅವರಿಗೆ ಲಸಿಕೆ ನೀಡಲಾಯಿತು. "ನಾನು ಈಗ ನನ್ನ ಎರಡನೆಯ ಡೋಸ್ ತೆಗೆದುಕೊಳ್ಳಲು ಕಾಯುತ್ತಿದ್ದೇನೆ. ಅವರು ಎರಡು ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿದ್ದಾರೆ."

ಮೇ ಎರಡನೇ ವಾರದಲ್ಲಿ, ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಮಧ್ಯಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ಹೆಚ್ಚಿಸಲಾಯಿತು. ಕೇಂದ್ರ ಸರ್ಕಾರವು ಹೊಸ ಅಧ್ಯಯನದ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಂಡಿತು, ಇದರಲ್ಲಿ ಡೋಸ್‌ಗಳ ನಡುವೆ ಹೆಚ್ಚಿನ ಮಧ್ಯಂತರ ಇದ್ದಾಗ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ ಎನ್ನಲಾಗಿದೆ. ಇದರೊಂದಿಗೆ ಲಸಿಕೆ ತಯಾರಕರು ಮತ್ತು ಸರ್ಕಾರಗಳು ಸಹ ಲಸಿಕೆ ತಯಾರಿಸಲು ಮತ್ತು ವಿತರಿಸಲು ಹೆಚ್ಚಿನ ಸಮಯವನ್ನು ಪಡೆದುಕೊಂಡಿವೆ.

ಆದಾಗ್ಯೂ, ವ್ಯಾಕ್ಸಿನೇಷನ್ ವೇಗವನ್ನು ಆದಷ್ಟು ಬೇಗ ಹೆಚ್ಚಿಸಬೇಕಾಗಿದೆ.

ಇಡೀ ಬೀಡ್ ಜಿಲ್ಲೆಯಲ್ಲಿ ಒಟ್ಟು 350 ವ್ಯಾಕ್ಸಿನೇಷನ್ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲಿ ಎಎನ್‌ಎಂ ದಿನಕ್ಕೆ 300 ಜನರಿಗೆ ಲಸಿಕೆ ನೀಡಬಹುದು ಎಂದು ಅನಾಮಧೇಯರಾಗುಳಿಯಲು ಬಯಸಿದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದರು. "ನಾವು ಪ್ರತಿ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಒಬ್ಬ ದಾದಿಯನ್ನು ನೇಮಿಸಿಕೊಂಡರೆ, ದಿನಕ್ಕೆ 1.5 ಲಕ್ಷ ಜನರಿಗೆ ಲಸಿಕೆ ಹಾಕಬಹುದು" ಎಂದು ಅವರು ಹೇಳುತ್ತಾರೆ. "ಆದರೆ ಸಾಕಷ್ಟು ಲಸಿಕೆಗಳು ಲಭ್ಯವಿಲ್ಲ, ಆದ್ದರಿಂದ ನಾವು ಪ್ರಸ್ತುತ ದಿನಕ್ಕೆ ಸರಾಸರಿ 10,000 ಡೋಸೇಜ್ ನೀಡುತ್ತಿದ್ದೇವೆ."‌

"ಇದು ಹೀಗೆಯೇ ಮುಂದುವರಿದರೆ, ಜಿಲ್ಲೆಯ ಇಡೀ ಜನಸಂಖ್ಯೆಗೆ ಲಸಿಕೆ ಹಾಕಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಮತ್ತೊಂದೆಡೆ, ಕೆಲವೇ ತಿಂಗಳುಗಳಲ್ಲಿ ಮೂರನೇ ಅಲೆ ಬರುತ್ತಿದೆ" ಎಂದು ಅಧಿಕಾರಿ ಹೇಳುತ್ತಾರೆ.

ಮತ್ತು ಅಂತಿಮವಾಗಿ: ಜೂನ್ 7 ರಂದು ಸಂಜೆ 5 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರೀಯ ರೋಗನಿರೋಧಕ ನೀತಿಯಲ್ಲಿ ಬದಲಾವಣೆಗಳನ್ನು ಘೋಷಿಸಿದರು. ಲಸಿಕೆ ಖರೀದಿಗೆ ಕೇಂದ್ರ ಸರ್ಕಾರವು ರಾಜ್ಯಗಳ ಕೋಟಾವನ್ನು ತೆಗೆದುಕೊಳ್ಳುತ್ತಿದೆ, ಮತ್ತು ಈಗ ದೇಶದಲ್ಲಿ ಉತ್ಪತ್ತಿಯಾಗುವ ಶೇಕಡಾ 75 ರಷ್ಟು ಲಸಿಕೆಗಳನ್ನು ಖರೀದಿಸಲಿದೆ. ಖಾಸಗಿ ಆಸ್ಪತ್ರೆಗಳು ತಮ್ಮ 25% ಕೋಟಾವನ್ನು ಪಡೆಯುವುದನ್ನು ಮುಂದುವರಿಸುತ್ತವೆ. ರಾಜ್ಯಗಳು ಕೇಂದ್ರ ಸರ್ಕಾರದಿಂದ ಲಸಿಕೆಗಳನ್ನು ಪಡೆಯುವುದನ್ನು ಮುಂದುವರಿಸಲಿವೆ, ಆದರೆ ಲಸಿಕೆ ವಿತರಣೆಯಲ್ಲಿ ಈಗಿರುವ ಕಾರ್ಯವಿಧಾನವು ಬದಲಾಗುತ್ತದೆಯೋ ಇಲ್ಲವೋ ಎಂದು ಪ್ರಧಾನಿ ಸ್ಪಷ್ಟಪಡಿಸಿಲ್ಲ. ಎಲ್ಲಾ ವಯಸ್ಕರಿಗೆ (18 ವರ್ಷ ಮತ್ತು ಮೇಲ್ಪಟ್ಟವರು) ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು, ಆದರೆ ಖಾಸಗಿ ಆಸ್ಪತ್ರೆಗಳು ಸೇವಾ ಶುಲ್ಕವಾಗಿ 150 ರೂ ಪಡೆಯಬಹುದು. ಜೂನ್ 21 ರಿಂದ ಹೊಸ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ಹೇಳಿದರು. " ಕೋವಿನ್ ಪ್ಲಾಟ್‌ ಫಾರ್ಮ್ ಅನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ" ಎಂದು ಅವರು ಹೇಳಿದರು.

ಅನುವಾದ: ಶಂಕರ ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru