ಆಕೆ ಕಾಲುದಾರಿಯ ಮೇಲೆ ಬರಿಗೈಯಲ್ಲಿ ನಿಂತಿದ್ದಳು. ನೋವಿನ ಜೀವಂತ ಸ್ಮಾರಕದಂತೆ. ಅವರ ಪಾಪದ ಹಿಡಿತದಿಂದ ಏನನ್ನೂ ಉಳಿಸುವ ಪ್ರಯತ್ನವನ್ನು ಆಕೆ ಈಗ ಕೈಬಿಟ್ಟಿದ್ದಳು. ಅಂಕಿಅಂಶಗಳನ್ನು ಮನಸ್ಸಿನಲ್ಲಿ ಸ್ಥಿರವಾಗಿಟ್ಟುಕೊಳ್ಳುವುದು ಕಷ್ಟಕರವಾದ ಕಾರಣ ನಷ್ಟದ ಲೆಕ್ಕಾಚಾರವನ್ನು ಸಹ ನಿಲ್ಲಿಸಿದಳು. ಆಕೆಯಲ್ಲಿದ್ದಿದ್ದು ಆಘಾತ, ಭಯ, ಆಕ್ರಮಣಶೀಲತೆ, ಪ್ರತಿರೋಧ, ಹತಾಶೆ ಮತ್ತು ಹತಾಶೆ - ಕೆಲವು ನಿಮಿಷಗಳ ಅವಧಿಯಲ್ಲಿ ಆಕೆ ಹಲವು ಭಾವಗಳನ್ನು ಅನುಭವಿಸಿದ್ದಳು. ಈಗ, ಅವಳ ಕೆನ್ನೆಗಳ ಗುಂಟ ಕಣ್ಣೀರು ಹರಿಯುತ್ತದೆ ಮತ್ತು ಗಂಟಲಿನಲ್ಲಿ ನೋವಿನೊಂದಿಗೆ ಉಸಿರುಗಟ್ಟಿಸುವ ಬಿಕ್ಕಳಿಕೆ, ಬೀದಿಯ ಎರಡೂ ಬದಿಯಲ್ಲಿ ನಿಂತಿರುವ ಅನೇಕರಂತೆ ಅವಳು ಚಂಡಮಾರುತವನ್ನು ನೋಡುತ್ತಿದ್ದಳು. ಬುಲ್ಡೋಜರ್‌ನ ಪಾದದಡಿಯಲ್ಲಿ ಅವರ ಬದುಕು ನಜ್ಜುಗುಜ್ಜಾಗಿತ್ತು. ಕೆಲ ದಿನಗಳ ಹಿಂದೆ ನಡೆದ ಗಲಭೆಗಳು ಸಾಕಾಗಲಿಲ್ಲವೆಂಬಂತೆ.

ಕಳೆದ ಕೆಲವು ಸಮಯಗಳಿಂದ ಸಮಯ ಬದಲಾಗುತ್ತಿದೆ ಎಂದು ನಜ್ಮಾ ಅರ್ಥಮಾಡಿಕೊಂಡಿದ್ದಳು. ರಶ್ಮಿಯ ಬಳಿ ಹೆಪ್ಪಿಗೆಂದು ಮೊಸರು ಕೇಳಲು ಹೋದಾಗ ಅವಳು ನೋಡಿದ ನೋಟ ಎಂದಿನಂತಿರಲಿಲ್ಲ, ಅಥವಾ ಶಾಹೀನ್ ಬಾಗ್‌ನಲ್ಲಿ ಪ್ರತಿಭಟಿಸುವ ಮಹಿಳೆಯರೊಂದಿಗೆ ಸೇರಿಕೊಂಡ ನಂತರ ಪ್ರತಿದಿನ ಅವಳನ್ನು ದುಸ್ವಪ್ನವೊಂದು ಕಾಡುತ್ತಿತ್ತು, ಅವಳಿಗೆ ತನ್ನ ಸುತ್ತಲೂ ಆಳವಾದ ಕಂದಕ ಸಣ್ಣ ತುಂಡು ಭೂಮಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಂತೆ ಭಾಸವಾಗುತ್ತಿತ್ತು. ಏನು ಬದಲಾಗುತ್ತಿತ್ತೋ ಅದು ಅವಳೊಳಗೇ ಇತ್ತು, ಅವಳು ವಸ್ತುಗಳ ಬಗ್ಗೆ, ತನ್ನ ಬಗ್ಗೆ, ತನ್ನ ಹೆ‍ಣ್ಣುಮಕ್ಕಳ ಬಗ್ಗೆ, ತನ್ನ ದೇಶದ ಬಗ್ಗೆ ಹೆದರುತ್ತಿದ್ದಳು.

ತಮ್ಮದು ಎಂದು ಭಾವಿಸಿದ್ದನ್ನು ಅವರು ಕಸಿದುಕೊಳ್ಳುವುದು ಆ ಕುಟುಂಬದ ಇತಿಹಾಸದಲ್ಲಿ ಇದೇ ಮೊದಲಲ್ಲ. ಈ ಭಾವನೆ ದಾದಿಗೂ ತಿಳಿದಿದೆ ಎಂದು ಅವಳಿಗೆ ಖಚಿತವಿತ್ತು, ಕೋಮುಗಲಭೆಕೋರರು ದ್ವೇಷದ ಜ್ವಾಲೆಗಳನ್ನು ಪರಂಪರಾಗತವಾಗಿಸಿದ್ದಾರೆ. ಈ ನಡುವೆ ಒಂದು ಕಿರುಬೆರಳು ಅವಳ ಸೆರಗಿನ ತುದಿಯನ್ನು ಎಳೆಯತೊಡಗಿತು. ಅವಳು ತಿರುಗಿ ಅಸಹಾಯಕ ಮುಗುಳ್ನಗೆಯೊಂದಿಗೆ ಅತ್ತ ನೋಡಿದಳು. ಆ ಕ್ಷಣಕ್ಕೆ ಅವಳಲ್ಲೊಂದು ದೃಢ ನಿರ್ಧಾರದ ಯೋಚನೆ ಮೂಡತೊಡಗಿತು...

ಪ್ರತಿಷ್ಠ ಪಾಂಡ್ಯ ದನಿಯಲ್ಲಿ ಪದ್ಯವನ್ನು ಕೇಳಿ

ಕಾಡು ಹೂವು

ನಿಮ್ಮ ಭಯಾನಕ, ನಿರ್ದಯಿ ಬ್ಲೇಡುಗಳು
ಎಲ್ಲವನ್ನೂ ಗುಡಿಸಿ ಬದಿಗೆ ಸರಿಸಬಲ್ಲವು
ಇತಿಹಾಸದ ಗುಂಡಿಯಿಂದ ಭೂತವನ್ನು ಬಡಿದೆಬ್ಬಿಸಬಲ್ಲವು
ಮಸೀದಿ, ಮಿನಾರುಗಳನ್ನು ಹೊಡೆದುರುಳಿಸಬಲ್ಲವು
ಆ ಹಲ್ಲುಗಳು ಹಳೆಯ ಅಶ್ವತ್ಥ ವೃಕ್ಷವನ್ನೇ ಬುಡಮೇಲು ಮಾಡಬಲ್ಲವು
ಹಕ್ಕಿಗೂಡುಗಳನ್ನು ನೆಲಕ್ಕೆ ಚೆಲ್ಲಬಲ್ಲವು.
ಬುಲೆಟ್ ರೈಲಿಗೆ ದಾರಿ ಮಾಡಿಕೊಡಲೆಂದು
ಗಿಡಗಳು, ಬಂಡೆಗಳನ್ನೆಲ್ಲ ಕಿತ್ತೆಸೆಯಬಲ್ಲವು
ಯುದ್ಧ ಭೂಮಿಯ ಅಡೆತಡೆಗಳನ್ನು ತೊಡೆದು
ಗುಂಡು ಹಾರಿಸಲು ಗುರಿಯನ್ನಿಡಬಲ್ಲವು.
ಚೂಪಾದ ಉಗುರುಗಳಿಗೆ ತಿಳಿದಿದೆ
ಪ್ರತಿರೋಧಗಳನ್ನು ಹೇಗೆ
ಇನ್ನಿಲ್ಲದಂತೆ ಕಿತ್ತು ಬಿಸಾಡುವುದೆಂದು
ಅವುಗಳಿಗೆ ಗೊತ್ತು ಎಲ್ಲವನ್ನೂ ಸವರಿ
ಸಮತಟ್ಟು ಮಾಡುವುದು ಹೇಗೆಂದು.

ಇದೆಲ್ಲವನ್ನೂ ಮಾಡಿ ಮುಗಿಸಿದ ನಂತರ
ನೀವು ಈ ಕೆಲವು ಪರಾಗಕಣಗೊಳಡನೆ ವ್ಯವಹರಿಸಬೇಕು
ಇವು ಬಹಳ ದಹನಶೀಲ, ಶಕ್ತಿಶಾಲಿ, ಮೃದು, ಪ್ರೇಮಭರಿತ
ಈ ಪರಾಗ ಕಣಗಳು
ಪುಸ್ತಕದ ಪುಟಗಳ ನಡುವಿನಿಂದ ಪದಗಳಾಗಿ
ನಾಲಗೆಯ ತುದಿಯಿಂದ ಶಬ್ಧಗಳಾಗಿ ಹೊರಹೊಮ್ಮುತ್ತವೆ
ಆದರೆ ಈ ಪ್ರತಿರೋಧದ ಪುಸ್ತಕಗಳನ್ನು ಹರಿಯುವುದು
ನುಡಿವ ನಾಲಿಗೆಯನ್ನು ಕೀಳುವುದು
ಬಹಳ ಸುಲಭ
ನಿಮಗೆ ಇದಕ್ಕೆಲ್ಲ ಬುಲ್ಡೋಜರ್ ಬೇಕಿಲ್ಲ

ಆದರೆ
ಗಾಳಿಯಲ್ಲಿ ಬೆರೆತು
ಹಕ್ಕಿ, ಜೇನುನೊಣಗಳ ಬೆನ್ನೇರಿ
ನದಿಗಳ ಅಲೆಯ ಮೇಲೇರಿ ಸಾಗುವ
ಕವಿತೆಯ ಸಾಲೊಂದರಲ್ಲಿ ಅಡಗಿ ಕೂರುವ
ಎಲ್ಲಿಯೂ ನಿಲ್ಲದೆ, ಒಂದಿಷ್ಟೂ ದಣಿಯದೆ
ಅಲ್ಲಿ, ಇಲ್ಲಿ, ಎಲ್ಲೆಂದರಲ್ಲಿ ತಲುಪುವ ಇದನ್ನೇನು ಮಾಡುತ್ತೀರಿ ನೀವು?

ಧೂಳಿನೊಂದಿಗೆ ಹಾರುತ್ತವೆ
ಈ ಪರಾಗ ಕಣಗಳು
ಈ ಸಣ್ಣ, ಹಳದಿ ಒಣ ಹಟಮಾರಿ ಕಣಗಳು
ಎಲ್ಲ ಹೊಲ, ಗಿಡ, ಹೂದಳ
ಮನಸುಗಳು, ನಾಲಗೆ
ಎಲ್ಲದರ ಮೇಲೂ ಪಸರಿಸುತ್ತವೆ
ನೋಡಿ ಹೇಗೆ ಅರಳಿ ನಿಲ್ಲುತ್ತವೆ!
ಈಗ ಹೊಳಪಿನ ಹೂಗಳ ತೋಟವೇ ನೆರೆದಿದೆ
ಗಾಢ ವಾಸನೆಯ ಹೂಗಳು
ಭೂಮಿಯ ತುಂಬಾ ಅರಳುವವು
ಭರವಸೆಯ ನಗೆ ಚೆಲ್ಲಿ
ಅವು ನಿಮ್ಮ ಬುಲ್ಡೋಜರ್ ಬ್ಲೇಡಿಗೆ ಸಿಗುವುದಿಲ್ಲ
ಅವುಗಳ ಹಲ್ಲಿನ ನಡುವಿನಿಂದ ತಪ್ಪಿಸಿಕೊಂಡು
ನಿಮ್ಮೆದುರೇ ಅರಳಿ ನಿಲ್ಲಲಿವೆ
ಈ ಕಾಡು ಹೂಗಳು!
ನೋಡಿ ಹೇಗೆ ಅರಳಿ ನಿಂತಿವೆ ಕಾಡು ಹೂಗಳು!


ಅನುವಾದ: ಶಂಕರ. ಎನ್.
ಕೆಂಚನೂರು

Poem and Text : Pratishtha Pandya

Pratishtha Pandya is a poet and a translator who works across Gujarati and English. She also writes and translates for PARI.

Other stories by Pratishtha Pandya
Illustration : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru