“ಆ ದಿನ ಮಧ್ಯಾಹ್ನ ನಾನು ಬದುಕುಳಿಯುತ್ತೇನೆಂದು ಅಂದುಕೊಂಡಿರಲಿಲ್ಲ. ಆ ದಿನ ನನ್ನ ನೀರು ಒಡೆದಿತ್ತು. ಹತ್ತಿರದಲ್ಲಿ ಯಾವುದೇ ಆಸ್ಪತ್ರೆಯಾಗಲಿ, ಆರೋಗ್ಯ ಕಾರ್ಯಕರ್ತರಾಗಲಿ ಇದ್ದಿರಲಿಲ್ಲ. ಶಿಮ್ಲಾದ ಆಸ್ಪತ್ರೆಗೆ ಹೊರಟಾಗ ನಾನು ಜೀಪಿನಲ್ಲೇ ಹೆರಿಗೆಯಾಗುವ ಸ್ಥಿತಿಯಲ್ಲಿದ್ದೆ. ನಾನು ಸ್ವಲ್ಪ ಹೊತ್ತು ತಡೆದುಕೊಳ್ಳುವ ಕೂಡಾ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ. ಕೊನೆಗೆ ಬೊಲೆರೊದಲ್ಲೇ ಮಗುವಿಗೆ ಜನ್ಮ ನೀಡಿದೆ.” ಈ ವರದಿಗಾರರು ಅನುರಾಧ ಮಹತೋ (ಹೆಸರು ಬದಲಾಯಿಸಲಾಗಿದೆ) ಅವರನ್ನು ಭೇಟಿಯಾಗುವಾಗ ಮೇಲೆ ಹೇಳಿದ ಘಟನೆ ನಡೆದು ಆರು ತಿಂಗಳಾಗಿತ್ತು. ಆದರೆ ಅವರು ಘಟನೆ ನಿನ್ನೆಯಷ್ಟೇ ನಡೆಯಿತೇನೊ ಎಂಬಂತೆ ನೆನಪಿನಿಂದ ವಿವರಿಸುತ್ತಿದ್ದರು.

"ಆಗ ಮಧ್ಯಾಹ್ನ ಸುಮಾರು ಮೂರು ಗಂಟೆಯಾಗಿತ್ತು. ನೀರು ಒಡೆದ ತಕ್ಷಣ ನನ್ನ ಪತಿ ಆಶಾ ದೀದಿಗೆ ಮಾಹಿತಿ ನೀಡಿದರು. ಅವರು ಮುಂದಿನ 15 ಅಥವಾ 20 ನಿಮಿಷಗಳಲ್ಲಿ ಬಂದರು. ಅವರು ಬಂದ ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಕರೆಸಲು ಕರೆ ಮಾಡಿದ್ದು ನೆನಪಿದೆ. ಆ ದಿನ ಮಳೆ ಸುರಿಯುತ್ತಿತ್ತು. ಆಂಬ್ಯುಲೆನ್ಸ್ ಜನರು 10 ನಿಮಿಷಗಳಲ್ಲಿ ಹೊರಡುವುದಾಗಿ ಹೇಳಿದರು  , ಆದರೆ ಅವರು ನಮ್ಮ ಸ್ಥಳವನ್ನು ತಲುಪಲು ಸಾಮಾನ್ಯಕ್ಕಿಂತ ಕನಿಷ್ಠ ಒಂದು ಗಂಟೆ ಹೆಚ್ಚು ತೆಗೆದುಕೊಳ್ಳುತ್ತಿದ್ದರು," ಎಂದು ತನ್ನ ಬದುಕಿನ 20ರ ದಶಕದ ಕೊನೆಯಲ್ಲಿ ಅನುರಾಧಾ ಹೇಳುತ್ತಾರೆ. ಇಲ್ಲಿ ಮಳೆ ಬಂದಾಗ ರಸ್ತೆಗಳು ಹೇಗೆ ಅಪಾಯಕಾರಿಯಾಗುತ್ತವೆ ಎಂದು ಅವರು ವಿವರಿಸುತ್ತಿದ್ದರು.

ಆಕೆ ಹಿಮಾಚಲ ಪ್ರದೇಶದ ಕೋಟಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ತಾತ್ಕಾಲಿಕ ತಗಡಿನ ಗುಡಿಸಲಿನಲ್ಲಿ ತನ್ನ ಮೂವರು ಮಕ್ಕಳು ಮತ್ತು ವಲಸೆ ಕಾರ್ಮಿಕ ಪತಿಯೊಂದಿಗೆ ವಾಸಿಸುತ್ತಿದ್ದಾರೆ. ಈ ಕುಟುಂಬವು ಮೂಲತಃ ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದವರು.

2020ರಲ್ಲಿ ಶಿಮ್ಲಾ ಜಿಲ್ಲೆಯ ಮಶೋರ್ಬಾ ಬ್ಲಾಕ್‌ನ ಕೋಟಿಯಲ್ಲಿ  ತನ್ನ ಪತಿಯನ್ನು ಬಂದು ಸೇರಿಕೊಂಡ ಅನುರಾಧಾ, "ಆರ್ಥಿಕ ಸಮಸ್ಯೆಗಳಿಂದಾಗಿ ನಾವು ನಮ್ಮ ಗ್ರಾಮದಿಂದ [ಬಿಹಾರದ] ಇಲ್ಲಿಗೆ ಸ್ಥಳಾಂತರಗೊಳ್ಳಬೇಕಾಯಿತು. ಎರಡು ಸ್ಥಳಗಳಲ್ಲಿ ಬಾಡಿಗೆಯನ್ನು ಪಾವತಿಸುವುದು ಕಷ್ಟಕರವಾಗಿತ್ತು." ಆಕೆಯ 38 ವರ್ಷದ ಪತಿ ರಾಮ್ ಮಹತೋ (ಹೆಸರು ಬದಲಾಯಿಸಲಾಗಿದೆ), ನಿರ್ಮಾಣ ಸ್ಥಳದಲ್ಲಿ ಗಾರೆ ಕೆಲಸ ಮಾಡುತ್ತಾರೆ ಮತ್ತು ಅವರ ಕೆಲಸವು ಅವರನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗಬೇಕಾಗುತ್ತದೆ. ಪ್ರಸ್ತುತ, ಅವರು ತಮ್ಮ ತಗಡಿನ ಗುಡಿಸಲಿನ ಮುಂಭಾಗದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಾಮಾನ್ಯ ದಿನಗಳಲ್ಲಿಯೂ ಆಂಬ್ಯುಲೆನ್ಸ್ ಅವರ ಮನೆಯ ಬಳಿ ಸುಲಭವಾಗಿ ಬರಲು ಸಾಧ್ಯವಿಲ್ಲ. ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಶಿಮ್ಲಾದ ಜಿಲ್ಲಾ ಕೇಂದ್ರದಲ್ಲಿರುವ ಕಮಲಾ ನೆಹರು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಬಂದರೆ, ಕೋಟಿಯನ್ನು ತಲುಪಲು 1.5 ರಿಂದ 2 ಗಂಟೆಗಳು ಬೇಕಾಗುತ್ತದೆ. ಆದರೆ ಮಳೆ ಮತ್ತು ಹಿಮಪಾತದ ಸಮಯದಲ್ಲಿ ಅದು ದುಪ್ಪಟ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.

Anuradha sits with six-month-old Sanju, outside her room.
PHOTO • Jigyasa Mishra
Her second son has been pestering her but noodles for three days now
PHOTO • Jigyasa Mishra

ಎಡಕ್ಕೆ: ಅನುರಾಧಾ ತನ್ನ ಕೋಣೆಯ ಹೊರಗೆ ಆರು ತಿಂಗಳ ಸಂಜು ಜೊತೆ ಕುಳಿತಿದ್ದಾರೆ. ಬಲ: ಅವರ ಎರಡನೇ ಮಗ ಮೂರು ದಿನಗಳಿಂದ ನೂಡಲ್ಸ್ ಬೇಕೆಂದು ಅವರನ್ನು ಪೀಡಿಸುತ್ತಿದ್ದಾನೆ

ಅನುರಾಧ ಅವರ ಮನೆಯಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಹತ್ತಿರದ ಹಳ್ಳಿಗಳು ಮತ್ತು ಕುಗ್ರಾಮಗಳಿಂದ ಬರುವ ಸುಮಾರು 5,000 ಜನರಿಗೆ ಸೇವೆ ಸಲ್ಲಿಸುತ್ತದೆ ಎಂದು ಈ ಪ್ರದೇಶದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ರೀನಾ ದೇವಿ ಹೇಳುತ್ತಾರೆ. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಯಾರೂ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವುದಿಲ್ಲ -  24 ಗಂಟೆಗಳ ಆಂಬ್ಯುಲೆನ್ಸ್‌ ಸೇವೆಯಂತಹ ಕಡ್ಡಾಯ ಅಗತ್ಯ ಸೇವೆಗಳು ಸಹ. "ನಾವು 108 ಸೇವೆಯನ್ನು ಡಯಲ್ ಮಾಡಿದಾಗ, ವಾಹನವು ಒಂದೇ ಕರೆಯಲ್ಲಿ ಸುಲಭವಾಗಿ ಬರುವುದಿಲ್ಲ. ಇಲ್ಲಿ ಆಂಬ್ಯುಲೆನ್ಸ್ ಪಡೆಯುವುದು ಕಷ್ಟದ ಕೆಲಸ. ಬದಲಿಗೆ ನಮ್ಮದೇ ಆದ ವಾಹನಗಳನ್ನು ವ್ಯವಸ್ಥೆ ಮಾಡುವಂತೆ ಅವರು ನಮಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾರೆ" ಎಂದು ಅವರು ಹೇಳುತ್ತಾರೆ.

ನಿಯಮಾನುಸಾರ, ಪ್ರಸೂತಿ-ಸ್ತ್ರೀರೋಗತಜ್ಞ ಮತ್ತು 10 ಸ್ಟಾಫ್ ನರ್ಸುಗಳ ತಂಡವನ್ನು ಹೊಂದಿರುವ ಸಿಎಚ್‌ಸಿ, ಸಿಸೇರಿಯನ್ ವಿಭಾಗ ಮತ್ತು ಇತರ ವೈದ್ಯಕೀಯ ಸೌಲಭ್ಯಗಳಂತಹ ಅಗತ್ಯ ಮತ್ತು ತುರ್ತು ಪ್ರಸೂತಿ ಆರೈಕೆಯನ್ನು ನೀಡಲು ಸಮರ್ಥವಾಗಿರಬೇಕು. ಎಲ್ಲಾ ತುರ್ತು ಸೇವೆಗಳು ದಿನದ 24 ಗಂಟೆಯೂ ಲಭ್ಯವಿರಬೇಕು. ಆದಾಗ್ಯೂ, ಕೋಟಿಯಲ್ಲಿ, ಸಿಎಚ್‌ಸಿ ಸಂಜೆ ಆರು ಗಂಟೆಗೆ ಮುಚ್ಚುತ್ತದೆ, ಮತ್ತು ಅದು ತೆರೆದಿದ್ದರೂ ಸಹ ಕರ್ತವ್ಯದಲ್ಲಿ ಸ್ತ್ರೀರೋಗ ತಜ್ಞರಿರುವುದಿಲ್ಲ.

"ಹೆರಿಗೆ ಕೊಠಡಿಯು ಕಾರ್ಯನಿರ್ವಹಿಸದ ಕಾರಣ ಅದನ್ನು ಸಿಬ್ಬಂದಿಗೆ ಅಡುಗೆಮನೆಯಾಗಿ ಪರಿವರ್ತಿಸಲಾಗಿದೆ" ಎಂದು ಗ್ರಾಮದ ಅಂಗಡಿಕಾರ ಹರೀಶ್ ಜೋಶಿ ಹೇಳುತ್ತಾರೆ. "ನನ್ನ ಸಹೋದರಿ ಕೂಡ ಇದೇ ರೀತಿ ನರಳುತ್ತಿದ್ದಳು ಮತ್ತು ಸೂಲಗಿತ್ತಿಯ ಮೇಲ್ವಿಚಾರಣೆಯಲ್ಲಿ ಅವಳು ಮನೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕಾಯಿತು. ಇದು ನಡೆದಿದ್ದು ಮೂರು ವರ್ಷಗಳ ಹಿಂದೆ, ಆದರೆ ಪರಿಸ್ಥಿತಿ ಇನ್ನೂ ಹಾಗೆಯೇ ಇದೆ. ಸಿಎಚ್‌ಸಿ ತೆರೆದಿದೆಯೇ ಅಥವಾ ಮುಚ್ಚಿದೆಯೇ ಎಂಬುದು ಅಂತಹ ಸಂದರ್ಭಗಳಲ್ಲಿ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ" ಎಂದು ಅವರು ಹೇಳುತ್ತಾರೆ.

ಗ್ರಾಮದಲ್ಲಿ ವಾಸಿಸುವ ಸೂಲಗಿತ್ತಿ ಅನುರಾಧಾರಿಗೆ ಯಾವುದೇ ಸಹಾಯ ಮಾಡಲಿಲ್ಲ ಎಂದು ರೀನಾ ಹೇಳುತ್ತಾರೆ. "ಇತರ ಜಾತಿಗಳಿಗೆ ಸೇರಿದ ಜನರ ಮನೆಗಳಿಗೆ ಭೇಟಿ ನೀಡಲು ಅವಳು ಇಷ್ಟಪಡುವುದಿಲ್ಲ" ಎಂದು ಆಶಾ ಕಾರ್ಯಕರ್ತೆ ಹೇಳುತ್ತಾರೆ.  "ಅದಕ್ಕಾಗಿಯೇ ನಾವು ಮೊದಲೇ ಆಸ್ಪತ್ರೆಗೆ ಹೋಗಲು ನಿರ್ಧರಿಸಿದ್ದೇವೆ" ಎಂದು ಅನುರಾಧಾ ಅವರು ಮಗುವಿಗೆ ಜನ್ಮ ನೀಡಿದ ದಿನದಂದು ಅವರೊಂದಿಗೆ ಬಂದಿದ್ದ ರೀನಾ ಹೇಳುತ್ತಾರೆ.

"ಸುಮಾರು 20 ನಿಮಿಷಗಳ ಕಾಯುವಿಕೆಯ ನಂತರ, ನನ್ನ ನೋವು ಉಲ್ಬಣಗೊಂಡಾಗ, ಆಶಾ ದೀದಿ ನನ್ನ ಗಂಡನೊಂದಿಗೆ ಚರ್ಚಿಸಿದರು ಮತ್ತು ನನ್ನನ್ನು ಬಾಡಿಗೆ ವಾಹನದಲ್ಲಿ ಶಿಮ್ಲಾಗೆ ಕರೆದೊಯ್ಯಲು ನಿರ್ಧರಿಸಿದರು" ಎಂದು ಅನುರಾಧಾ ಹೇಳುತ್ತಾರೆ . ಬಾಡಿಗೆ ಒಂದು ಬದಿಗೆ 4,000 ರೂಪಾಯಿಗಳಾಗಿತ್ತು. ಆದರೆ ನಾವು ಇಲ್ಲಿಂದ ಹೊರಟ 10 ನಿಮಿಷಗಳ ನಂತರ, ನಾನು ಬೊಲೆರೊದ ಹಿಂದಿನ ಸೀಟಿಗೆ ತಲುಪಿಸಿದೆ." ಅನುರಾಧಾ ಅವರ ಕುಟುಂಬಕ್ಕೆ ಶಿಮ್ಲಾಕ್ಕೆ ತೆರಳಲು ತಗಲುವ ಪೂರ್ಣ ಬಾಡಿಗೆಯನ್ನು ವಿಧಿಸಲಾಯಿತು. ಆದರೆ ಅವರು ಕೊಡುವ ಸ್ಥಿತಿಯಲ್ಲಿರಲಿಲ್ಲ.

Reena Devi, an ASHA worker in the village still makes regular visits to check on Anuradha and her baby boy.
PHOTO • Jigyasa Mishra
The approach road to Anuradha's makeshift tin hut goes through the hilly area of Koti village
PHOTO • Jigyasa Mishra

ಎಡ: ಗ್ರಾಮದ ಆಶಾ ಕಾರ್ಯಕರ್ತೆ ರೀನಾ ದೇವಿ ಈಗಲೂ ಅನುರಾಧಾ ಮತ್ತು ಅವರ ಗಂಡು ಮಗುವನ್ನು ಪರೀಕ್ಷಿಸಲು ನಿಯಮಿತವಾಗಿ ಭೇಟಿ ನೀಡುತ್ತಾರೆ. ಬಲ: ಅನುರಾಧ ಅವರ ತಾತ್ಕಾಲಿಕ ತಗಡಿನ ಗುಡಿಸಲಿಗೆ ಸಂಪರ್ಕ ರಸ್ತೆ ಕೋಟಿ ಗ್ರಾಮದ ಗುಡ್ಡಗಾಡು ಪ್ರದೇಶದ ಮೂಲಕ ಹಾದು ಹೋಗುತ್ತದೆ

"ಮಗುವಿಗೆ ಜನ್ಮ ನೀಡಿದಾಗ ನಾವು ಕೇವಲ ಮೂರು ಕಿಲೋಮೀಟರ್ ದೂರವನ್ನು ಕ್ರಮಿಸಿದ್ದೆವು" ಎಂದು ರೀನಾ ಹೇಳುತ್ತಾರೆ. "ನಮ್ಮ ಬಳಿ ಕೆಲವು ಸ್ವಚ್ಛವಾದ ಬಟ್ಟೆಗಳು, ನೀರಿನ ಬಾಟಲಿಗಳು ಮತ್ತು ಬಳಸದ ಬ್ಲೇಡ್ ಇರುವುದನ್ನು ನಾನು ಖಚಿತಪಡಿಸಿಕೊಂಡಿದ್ದೆ. ದೇವರ ದಯೆ! ಹೊಕ್ಕುಳಬಳ್ಳಿಯನ್ನು ಕತ್ತರಿಸುವುದು - ನಾನು ಅದನ್ನು ಮೊದಲು ಸ್ವತಃ ಮಾಡಿರಲಿಲ್ಲ. ಆದರೆ ಅದನ್ನು ಹೇಗೆ ಮಾಡಲಾಗುತ್ತದೆ ಎಂದು ನಾನು ನೋಡಿದ್ದೆ. ಹೀಗಾಗಿ ನಾನು ಅದನ್ನು ನಿರ್ವಹಿಸಲು ಸಾಧ್ಯವಾಯಿತು," ಎಂದು ಆಶಾ ಕಾರ್ಯಕರ್ತೆ ಹೇಳುತ್ತಾರೆ.

ಅನುರಾಧಾ ಆ ರಾತ್ರಿ ಬದುಕುಳಿದಿರುವುದು ಆಕೆಯ ಅದೃಷ್ಟ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ತಾಯಂದಿರ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಸುಧಾರಣೆಯ ಹೊರತಾಗಿಯೂ, ಗರ್ಭಧಾರಣೆ ಮತ್ತು ಹೆರಿಗೆಯ ತೊಡಕುಗಳಿಂದಾಗಿ ಪ್ರತಿದಿನ 800ಕ್ಕೂ ಹೆಚ್ಚು ಮಹಿಳೆಯರು ಸಾಯುತ್ತಿದ್ದಾರೆ. ಹೆಚ್ಚಿನ ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. 2017ರಲ್ಲಿ, ಜಾಗತಿಕ ತಾಯಂದಿರ ಸಾವಿನಲ್ಲಿ ಭಾರತದ ಪಾಲು ಶೇಕಡಾ 12ರಷ್ಟಿದೆ.

ಭಾರತದಲ್ಲಿ ತಾಯಂದಿರ ಮರಣ ಪ್ರಮಾಣ (ಎಂಎಂಆರ್) - ಪ್ರತಿ 100,000 ಜೀವಂತ ಜನನಗಳಿಗೆ ತಾಯಂದಿರ ಮರಣ - 2017-19 ರಲ್ಲಿ 103ರಷ್ಟಿತ್ತು. 2030ರ ವೇಳೆಗೆ ಜಾಗತಿಕ ಎಂಎಂಆರ್ ಅನ್ನು 70 ಅಥವಾ ಅದಕ್ಕಿಂತ ಕಡಿಮೆಗೆ ಇಳಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಿಂದ (ಎಸ್‌ಡಿಜಿ) ವರದಿ ಮಾಡಲಾದ ಸಂಖ್ಯೆಯು ಇನ್ನೂ ಕ್ರಮಿಸಬೇಕಿರುವ ಮಾರ್ಗವಾಗಿದೆ. ಅನುಪಾತವು ಆರೋಗ್ಯ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಪ್ರಮುಖ ಸೂಚಕವಾಗಿದೆ; ಇದು ಹೆಚ್ಚಿನ ಸಂಖ್ಯೆಯು ಸಂಪನ್ಮೂಲ ಅಸಮಾನತೆಯನ್ನು ತೋರಿಸುತ್ತದೆ.

ಹಿಮಾಚಲ ಪ್ರದೇಶದಲ್ಲಿ ತಾಯಂದಿರ ಮರಣದ ಬಗ್ಗೆ ದತ್ತಾಂಶವು ಸುಲಭವಾಗಿ ಲಭ್ಯವಿಲ್ಲ. ನೀತಿ ಆಯೋಗದ ಎಸ್‌ಡಿಜಿ ಇಂಡಿಯಾ ಸೂಚ್ಯಂಕ 2020-21ರಲ್ಲಿ ತಮಿಳುನಾಡಿನ ಜೊತೆಗೆ ರಾಜ್ಯವು ಎರಡನೇ ಸ್ಥಾನದಲ್ಲಿದ್ದರೂ, ಅದರ ಉನ್ನತ ಶ್ರೇಯಾಂಕವು ಬಡತನದಲ್ಲಿ ದೂರದ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಗ್ರಾಮೀಣ ಮಹಿಳೆಯರ ಗರ್ಭಿಣಿ ಆರೋಗ್ಯ ಸಮಸ್ಯೆಗಳನ್ನು ಪ್ರತಿಬಿಂಬಿಸುವುದಿಲ್ಲ. ಅನುರಾಧಾ ಅವರಂತಹ ಮಹಿಳೆಯರು ಪೌಷ್ಟಿಕತೆ, ತಾಯಿಯ ಯೋಗಕ್ಷೇಮ, ಪ್ರಸವೋತ್ತರ ಆರೈಕೆ ಮತ್ತು ಆರೋಗ್ಯ ಮೂಲಸೌಕರ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅನುರಾಧ ಅವರ ಪತಿ ರಾಮ್ ಖಾಸಗಿ ಕಂಪನಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಕೆಲಸವಿರುವ ತಿಂಗಳುಗಳಲ್ಲಿ, ಅವರು "ತಿಂಗಳಿಗೆ ಸುಮಾರು 12,000 ರೂಪಾಯಿಗಳನ್ನು ಸಂಪಾದಿಸುತ್ತಾರೆ, ಅದರಲ್ಲಿ 2,000 ರೂಪಾಯಿಗಳನ್ನು ಮನೆ ಬಾಡಿಗೆಯಾಗಿ ಕಡಿತಗೊಳಿಸಲಾಗುತ್ತದೆ" ಎಂದು ಅನುರಾಧಾ ಹೇಳುತ್ತಾರೆ. "ಒಳಗಿರುವ ಎಲ್ಲವೂ ನಮಗೆ ಸೇರಿದ್ದು" ಎಂದು ಅವರು ಹೇಳುತ್ತಾರೆ.

ಒಂದು ಒಂಟಿ ಮರದ ಹಾಸಿಗೆ, ಮತ್ತು ಅಲ್ಯೂಮಿನಿಯಂ ಟ್ರಂಕು ಸಣ್ಣ ಬಟ್ಟೆಗಳು ಮತ್ತು ಪಾತ್ರೆಗಳಿಂದ ಮುಚ್ಚಲ್ಪಟ್ಟಿದೆ, ಅದು ಹಾಸಿಗೆಯಾಗಿಯೂ ಬದಲಾಗುತ್ತದೆ, ಈ ಹಾಸಿಗೆ ಅವರ 8 x 10 ಅಡಿ ತಗಡಿನ ಕೋಣೆಯಲ್ಲಿ ಹೆಚ್ಚಿನ ಜಾಗವನ್ನು ತೆಗೆದುಕೊಳ್ಳುತ್ತದೆ. "ನಮ್ಮ ಬಳಿ ಉಳಿತಾಯವೇ ಇಲ್ಲ. ಆರೋಗ್ಯ ಸಮಸ್ಯೆ ಅಥವಾ ಇನ್ನಾವುದೇ ರೀತಿಯ ತುರ್ತು ಪರಿಸ್ಥಿತಿ ಇದ್ದರೆ, ನಾವು ಮಕ್ಕಳಿಗೆ ಆಹಾರ, ಔಷಧಿಗಳು ಮತ್ತು ಹಾಲಿನಂತಹ ಅಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು ಮತ್ತು ಸಾಲ ಪಡೆಯಬೇಕು" ಎಂದು ಅನುರಾಧಾ ಹೇಳುತ್ತಾರೆ.

Anuradha inside her one-room house.
PHOTO • Jigyasa Mishra
They have to live in little rented rooms near construction sites, where her husband works
PHOTO • Jigyasa Mishra

ಎಡ: ಅನುರಾಧಾ ತನ್ನ ಒಂದು ಕೋಣೆಯ ಮನೆಯೊಳಗೆ. ಬಲ: ಅವರು ಪತಿಗೆ ಕೆಲಸವಿರುವಲ್ಲೇ ನಿರ್ಮಾಣ ಸ್ಥಳಗಳ ಬಳಿ ಸಣ್ಣ ಬಾಡಿಗೆ ಕೋಣೆಗಳಲ್ಲಿ ವಾಸಿಸಬೇಕಾಗುತ್ತದೆ

ಅವರ ಗರ್ಭಧಾರಣೆಯು 2021ರಲ್ಲಿ ಅವರ ಕುಟುಂಬದ ಆರ್ಥಿಕ ಒತ್ತಡವನ್ನು ಹೆಚ್ಚಿಸಿತು, ವಿಶೇಷವಾಗಿ ದೇಶದಲ್ಲಿ ಕೋವಿಡ್ -19 ಸರ್ವವ್ಯಾಪಿ ರೋಗವು ಉಲ್ಬಣಗೊಳ್ಳುವುದರೊಂದಿಗೆ. ಆ ಸಮಯದಲ್ಲಿ ಪತಿ ರಾಮ ಅವರಿಗೆ ಕೆಲಸವಿರಲಿಲ್ಲ. ಅವರು ಕೂಲಿಯ ಹೆಸರಿನಲ್ಲಿ 4,000 ರೂ.ಗಳನ್ನು ಪಡೆದರು. ಕುಟುಂಬವು ಆಗಲೂ ಬಾಡಿಗೆಯನ್ನು ಪಾವತಿಸಬೇಕಾಗಿತ್ತು ಮತ್ತು ಉಳಿದ 2,000 ರೂ.ಗಳಲ್ಲಿ ಬದುಕು ನಡೆಸಬೇಕಾಗಿತ್ತು. ಆಶಾ ದೀದಿ ಅನುರಾಧಾಗೆ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಪೂರೈಸಿದರು, ಆದರೆ ನಿಯಮಿತ ತಪಾಸಣೆಗಳು ದೂರ ಮತ್ತು ವೆಚ್ಚದ ಕಾರಣದಿಂದಾಗಿ ಅಸಾಧ್ಯವಾಗಿದ್ದವು.

"ಸಿಎಚ್‌ಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅನುರಾಧಾಗೆ ಒತ್ತಡ-ಮುಕ್ತ ಹೆರಿಗೆಯಾಗುತ್ತಿತ್ತು ಮತ್ತು ಅವರು ಟ್ಯಾಕ್ಸಿಗಾಗಿ 4,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತಿರಲಿಲ್ಲ" ಎಂದು ರೀನಾ ಹೇಳುತ್ತಾರೆ. "ಸಿಎಚ್‌ಸಿಯು ನಿಯೋಜಿತ ಹೆರಿಗೆ ಕೊಠಡಿಯನ್ನು ಹೊಂದಿದೆ, ಆದರೆ ಅದು ಕಾರ್ಯನಿರ್ವಹಿಸುತ್ತಿಲ್ಲ" ಎಂದು ಅವರು ಹೇಳುತ್ತಾರೆ.

"ಸಿಎಚ್‌ಸಿ ಕೋಟಿಯಲ್ಲಿ [ಮಕ್ಕಳ] ಹೆರಿಗೆ ಸೌಲಭ್ಯಗಳ ಅಲಭ್ಯತೆಯಿಂದಾಗಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ, ಆದರೆ ಸಿಬ್ಬಂದಿ ಕೊರತೆಯಿಂದಾಗಿ ವಿಷಯಗಳು ನಮ್ಮ ನಿಯಂತ್ರಣದಲ್ಲಿಲ್ಲ" ಎಂದು ಶಿಮ್ಲಾ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಸುರೇಖಾ ಚೋಪ್ಡಾ ಹೇಳುತ್ತಾರೆ.  "ಹೆರಿಗೆಗಳನ್ನು ನಿರ್ವಹಿಸಲು ಸ್ತ್ರೀರೋಗತಜ್ಞರು, ನರ್ಸ್ ಅಥವಾ ಸಾಕಷ್ಟು ಸ್ವಚ್ಛತಾ ಸಿಬ್ಬಂದಿ ಅಗತ್ಯವಿರುವಷ್ಟು ಲಭ್ಯವಿಲ್ಲ. ದೇಶಾದ್ಯಂತ ಜಿಲ್ಲೆಗಳು ಮತ್ತು ರಾಜ್ಯಗಳ ಕಹಿ ಸತ್ಯವಾಗಿ ಉಳಿದಿರುವ ಕೋಟಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ನಿಯೋಜನೆಗೊಳ್ಳಲು ವೈದ್ಯರು ಬಯಸುವುದಿಲ್ಲ" ಎಂದು ಅವರು ಹೇಳುತ್ತಾರೆ.

2005ರಲ್ಲಿ 66ರಷ್ಟಿದ್ದ ಸಿಎಚ್‌ಸಿ ಸಂಖ್ಯೆ 2020ರಲ್ಲಿ 85 ಏರಿದೆ. ಸಂಖ್ಯೆಯಲ್ಲಿನ ಹೆಚ್ಚಳದ ಹೊರತಾಗಿಯೂ - ಮತ್ತು ತಜ್ಞ ವೈದ್ಯರ ಸಂಖ್ಯೆಯಲ್ಲಿ, 2005ರಲ್ಲಿ 3,550ರಿಂದ 2020ರಲ್ಲಿ 4,957ಕ್ಕೆ ಏರಿಕೆಯಾಗಿದ್ದರೂ - ಹಿಮಾಚಲ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಸೂತಿ-ಸ್ತ್ರೀರೋಗ ತಜ್ಞರ ಕೊರತೆ ಶೇಕಡಾ 94ರಷ್ಟಿದೆ ಎಂದು 2019-2019-20 ರ ಗ್ರಾಮೀಣ ಆರೋಗ್ಯ ಅಂಕಿಅಂಶಗಳು ತಿಳಿಸಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಗತ್ಯವಿರುವ 85ರ ಬದಲು ಕೇವಲ 5 ಪ್ರಸೂತಿ-ಸ್ತ್ರೀರೋಗ ತಜ್ಞರು ಮಾತ್ರ ಸ್ಥಾನದಲ್ಲಿದ್ದಾರೆ. ಇದರ ಪರಿಣಾಮವಾಗಿ ಗರ್ಭಿಣಿಯರು ಅಗಾಧವಾದ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ.

ಅನುರಾಧ ಅವರ ಮನೆಯಿಂದ ಆರು ಕಿಲೋಮೀಟರ್ ದೂರದಲ್ಲಿ ವಾಸಿಸುವ 35 ವರ್ಷದ ಶೀಲಾ ಚೌಹಾಣ್ ಅವರು 2020ರ ಜನವರಿಯಲ್ಲಿ ತನ್ನ ಮಗಳಿಗೆ ಜನ್ಮ ನೀಡಲು ಶಿಮ್ಲಾದ ಖಾಸಗಿ ಆಸ್ಪತ್ರೆಗೆ ಪ್ರಯಾಣಿಸಿದರು. "ಮಗುವಿಗೆ ಜನ್ಮ ನೀಡಿ ತಿಂಗಳುಗಳೇ ಕಳೆದಿವೆ ಆದರೆ ನಾನು ಈಗಲೂ  ಸಾಲದಲ್ಲಿದ್ದೇನೆ" ಎಂದು ಶೀಲಾ ಪರಿಗೆ ತಿಳಿಸಿದರು.

ಕೋಟಿ ಗ್ರಾಮದಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿರುವ ಆಕೆ ಮತ್ತು ಆಕೆಯ 40 ವರ್ಷದ ಪತಿ ಗೋಪಾಲ್ ಚೌಹಾಣ್ ನೆರೆಹೊರೆಯವರಿಂದ 20,000 ರೂ.ಗಳನ್ನು ಸಾಲ ಪಡೆದಿದ್ದರು. ಎರಡು ವರ್ಷಗಳ ನಂತರವೂ, ಅವರು ಇನ್ನೂ 5,000 ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.

PHOTO • Jigyasa Mishra
Rena Devi at CHC Koti
PHOTO • Jigyasa Mishra

ಎಡ: ಮನೆಯ ಪಕ್ಕದಲ್ಲೇ ಇರುವ ನಿರ್ಮಾಣ ಸ್ಥಳ, ಪ್ರಸ್ತುತ ರಾಮ್ ಕೆಲಸ ಇಲ್ಲಿಯೇ ಮಾಡುತ್ತಿದ್ದಾರೆ. ಬಲ: ಕೋಟಿಯ ಸಿಎಚ್‌ಸಿ ಬಳಿ ರೇನಾ ದೇವಿ

ಶಿಮ್ಲಾ ಆಸ್ಪತ್ರೆಯಲ್ಲಿ ಒಂದು ರಾತ್ರಿಗಿಂತ ಹೆಚ್ಚು ಸಮಯ ಕಳೆಯಲು ಶೀಲಾಗೆ ಸಾಧ್ಯವಾಗಲಿಲ್ಲ, ಏಕೆಂದರೆ ಕೋಣೆಯ ದೈನಂದಿನ ದರವು 5,000 ರೂ. ಆಗಿತ್ತು. ಮರುದಿನ, ಅವರು, ಗೋಪಾಲ್ ಮತ್ತು ಶಿಶು ಶಿಮ್ಲಾದಿಂದ 2,000 ರೂ.ಗಳಿಗೆ ಬಾಡಿಗೆಗೆ ಪಡೆದ ಖಾಸಗಿ ಟ್ಯಾಕ್ಸಿಯಲ್ಲಿ ಕೋಟಿಗೆ ಹೊರಟರು. ಹಿಮಾಚ್ಛಾದಿತ ಓಣಿಗಳಿಂದಾಗಿ ಟ್ಯಾಕ್ಸಿ ಅವರನ್ನು ಗಮ್ಯಸ್ಥಾನದ ಮುಂಚಿನ ಒಂದು ಬಿಂದುವಿನಲ್ಲಿ ಇಳಿಸಿತು, ಮುಂದೆ ಹೋಗಲು ನಿರಾಕರಿಸಿತು. "ಆ ರಾತ್ರಿಯ ಬಗ್ಗೆ ಯೋಚಿಸಿದರೆ ಈಗಲೂ ದಿಗ್ಭ್ರಮೆಯಾಗುತ್ತದೆ. ಅಲ್ಲಿ ಸಾಕಷ್ಟು ಹಿಮ ಬೀಳುತ್ತಿತ್ತು, ಮತ್ತು ನಾನು ಮಗುವಿಗೆ ಜನ್ಮ ನೀಡಿದ ಕೇವಲ ಒಂದು ದಿನದ ನಂತರ ಮೊಣಕಾಲು ಆಳದ ಹಿಮದಲ್ಲಿ ನಡೆಯುತ್ತಿದ್ದೆ," ಎಂದು ಶೀಲಾ ಹೇಳುತ್ತಾರೆ.

"ಈ ಸಿಎಚ್‌ಸಿ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನಾವು ಶಿಮ್ಲಾಗೆ ಹೋಗಿ ಆ ಹಣವನ್ನು ಖರ್ಚು ಮಾಡುವ ಅಗತ್ಯವಿರಲಿಲ್ಲ, ಅಥವಾ ನನ್ನ ಹೆಂಡತಿ ಹೆರಿಗೆಯಾದ ಒಂದು ದಿನದೊಳಗೆ ಹಿಮದ ಮೂಲಕ ನಡೆಯಬೇಕಾಗುತ್ತಿರಲಿಲ್ಲ" ಎಂದು ಗೋಪಾಲ್ ಹೇಳುತ್ತಾರೆ.

ಆರೋಗ್ಯ ರಕ್ಷಣಾ ಸೌಲಭ್ಯವು ಹೇಗಿರಬೇಕೋ ಹಾಗೆ ಕಾರ್ಯನಿರ್ವಹಿಸಿದ್ದರೆ, ಶೀಲಾ ಮತ್ತು ಅನುರಾಧಾ ಇಬ್ಬರೂ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಸಂಪೂರ್ಣ  ಉಚಿತ ಮತ್ತು ನಗದುರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿತ್ತು, ಸರ್ಕಾರದ ಯೋಜನೆಯ ಮೂಲಕ, ಅವರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸಿಸೇರಿಯನ್ ವಿಭಾಗ ಸೇರಿದಂತೆ ಉಚಿತ ಹೆರಿಗೆಗೆ ಅರ್ಹರಾಗುತ್ತಿದ್ದರು. ಅವರು ಔಷಧಿಗಳು ಮತ್ತು ಬಳಕೆಯ ವಸ್ತುಗಳು, ರೋಗನಿರ್ಣಯ, ಆಹಾರ ಮತ್ತು ಅಗತ್ಯವಿದ್ದರೆ ರಕ್ತವನ್ನು ಸಹ ಪಡೆಯಬಹುದಾಗಿತ್ತು - ಮತ್ತು ಸಾರಿಗೆ ಸಹ - ಇವೆಲ್ಲವೂ ಯಾವುದೇ ವೈಯಕ್ತಿಕ ವೆಚ್ಚವಿಲ್ಲದೆ.  ಆದರೆ ಎಲ್ಲವೂ ಕಾಗದದ ಮೇಲೆಯೇ ಉಳಿಯಿತು.

"ಆ ರಾತ್ರಿ ನಮ್ಮ ಎರಡು ದಿನದ ಮಗಳ ಕುರಿತು ನಾವು ಬಹಳ ಭಯಭೀತರಾಗಿದ್ದೆವು," ಎಂದು ಗೋಪಾಲ್ ಹೇಳುತ್ತಾರೆ, "ಅವಳು ಚಳಿಯಿಂದಾಗಿ ಸಾಯುವ ಭಯವಿತ್ತು."

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಹಾಗಿದ್ದಲ್ಲಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳುಹಿಸಿ

ಅನುವಾದ : ಶಂಕರ. ಎನ್. ಕೆಂಚನೂರು

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Illustration : Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Editor : Pratishtha Pandya

Pratishtha Pandya is a poet and a translator who works across Gujarati and English. She also writes and translates for PARI.

Other stories by Pratishtha Pandya
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru