ಎಳಿಲ್‌ ಅಣ್ಣನ ನೆನಪೆನ್ನುವುದು ನನ್ನ ಪಾಲಿಗೆ ಮುಗಿಯದ ಖಜಾನೆ. ಅದು ನನ್ನೊಳಗೆ ಕಾಡು ಹೊಳೆಯಂತೆ ಪ್ರವಹಿಸುತ್ತದೆ. ಈ ಹೊಳೆ ದಟ್ಟ ನೆರಳುಗಳ ವರ್ಣರಂಜಿತ ಕಾಡುಗಳನ್ನು ದಾಟಿ, ಎತ್ತರದ ನರ್ತಿಸುವ ಮರಗಳ ನಡುವೆ ಜಿಪ್ಸಿ ರಾಜರ ಕತೆಯಾಗಿ ಬೆಟ್ಟದ ತುದಿಗೆ ಕರೆದೊಯ್ಯುತ್ತದೆ. ಅಲ್ಲಿಂದ ನೋಡಿದರೆ ಜಗತ್ತು ಕನಸಿನ ಲೋಕದಂತೆ ಕಾಣುತ್ತದೆ. ಅಲ್ಲಿಂ ಅಣ್ಣ ನನ್ನನ್ನು ಇದ್ದಕ್ಕಿದ್ದಂತೆ ನಕ್ಷತ್ರಗಳತ್ತ ಎಸೆಯುತ್ತಾನೆ. ನಾನು ಜೇಡಿ ಮಣ್ಣಾಗಿ ಬದಲಾಗುವ ತನಕ ನನ್ನನ್ನು ನೆಲದತ್ತ ತಳ್ಳುತ್ತಾನೆ.

ಅವನು ಕೂಡ ಮಣ್ಣಿನಿಂದಲೇ ಮಾಡಲ್ಪಟ್ಟವನು. ಅವನ ಬದುಕೇ ಹಾಗಿತ್ತು. ಒಬ್ಬ ಜೋಕರ್‌, ಶಿಕ್ಷಕ, ಮಗು, ನಟ ಹೀಗೆ ಜೇಡಿ ಮಣ್ಣಿನ ಹಾಗೆ ಏನು ಬೇಕಾದರೂ ಆಗಬಲ್ಲಂತ ಜೇಡಿ ಮಣ್ಣಿನಂತಹ ನಮ್ಯತೆ ಆತನಿಗಿತ್ತು.

ಅವನು ಮಕ್ಕಳಿಗೆ ಹೇಳುತ್ತಿದ್ದ ರಾಜರ ಕತೆಗಳನ್ನು ಕೇಳುತ್ತಲೇ ಬೆಳೆದವ ನಾನು. ಆದರೆ ಈಗ ನಾನು ಅವನ ಕತೆ ಹೇಳಬೇಕಿದೆ. ಮನುಷ್ಯನ ಹಿಂದಿರುವ ಕತೆ ಮತ್ತು ಫೋಟೊಗಳ ಹಿಂದಿರುವ ಕತೆ. ಐದು ವರ್ಷಗಳಿಗೂ ಹೆಚ್ಚು ಕಾಲ ನನ್ನೊಳಗೆ ಬದುಕುತ್ತಿರುವ ಕತೆ.

*****

ಆರ್. ಎಳಿಲರಸನ್ ಎನ್ನುವ ವಿದೂಷಕರ ರಾಜ, ಸುತ್ತಲೂ ಜಿಗಿಯುವ ಇಲಿ, ಹುಬ್ಬುಗಂಟಿಕ್ಕುವ ವರ್ಣರಂಜಿತ ಪಕ್ಷಿ, ದುಷ್ಟತನವಿಲ್ಲದ ತೋಳ, ಸಿಂಹ ಎಲ್ಲವೂ ಆಗಬಲ್ಲರು. ಇದೆಲ್ಲವೂ ಆ ದಿನದ ಕಥೆಯ ಮೇಲೆ ಅವಲಂಬಿತವಾಗಿರುತ್ತದೆ. ಅವರು ತಮಿಳು ನಾಡಿನಾದ್ಯಂತ ಕಾಡುಗಳು ಮತ್ತು ನಗರಗಳ ಮೂಲಕ ಪ್ರಯಾಣಿಸುವಾಗ ತಮ್ಮ ಬೆನ್ನಿನ ಮೇಲೆ ದೊಡ್ಡ ಹಸಿರು ಚೀಲದಲ್ಲಿ 30ಕ್ಕೂ ಹೆಚ್ಚು ವರ್ಷಗಳಿಂದ ಸಾಗಿಸುತ್ತಿರುವ ಕಥೆಗಳು.

ಅದು 2018. ನಾವು ನಾಗಪಟ್ಟಣಂನ ಸರ್ಕಾರಿ ಶಾಲೆಯ ಆವರಣದಲ್ಲಿದ್ದೆವು. ಗಜ ಚಂಡಮಾರುತದ ಹೊಡೆತಕ್ಕೆ ಬೇರುಸಹಿತ ಕಿತ್ತುಬಿದ್ದ ಮರಗಳಿಂದ ಕತ್ತರಿಸಿದ ಮರದ ದಿಮ್ಮಿಗಳ ರಾಶಿಗಳು, ಸುತ್ತಲೂ ಬಿದ್ದು ಶಾಲಾ ಆವರಣ ಪಾಳುಬಿದ್ದ ಟಿಂಬರ್‌ ಟಿಂಬ್‌ ಡಿಪೋದಂತೆ ಕಾಣುತ್ತಿತ್ತು. ಆದರೆ ತಮಿಳುನಾಡಿನ ಈ ಅತ್ಯಂತ ನತದೃಷ್ಟ ಜಿಲ್ಲೆಯ ನೆರೆ ಪೀಡಿತ ಆವರಣದಲ್ಲಿ ಮಕ್ಕಳ ಕಲರವವು ಆ ವಾತಾವರಣಕ್ಕೊಂದು ಜೀವ ತಂದುಕೊಟ್ಟಿತ್ತು.

"ವಂ ದಾ ನೇ ತೆನ್ನ ಪಾರುಂಗ ಕಟ್ಟಿಯ ಕ್ಕಾ ರನ್ ಆಮಾ ಕಟ್ಟಿಯಕಾರನ್. ವಾರಾ ನೆ ತೆನ್ನ ಪಾರುಂಗಾ (ನೋಡು, ವಿದೂಷಕ ಬಂದಿದ್ದಾನೆ, ಹೌದು, ಬರುತ್ತಿರುವ ವಿದೂಷಕ, ನೋಡು)."

PHOTO • M. Palani Kumar

ಎಳಿಲ್ ಅಣ ಮಕ್ಕಳನ್ನು ನಾಟಕಕ್ಕೆ ಸಿದ್ಧಪಡಿಸುವ ಮೊದಲು ಅವರೊಂದಿಗೆ ಕುಳಿತು, ಅವರ ಆಸಕ್ತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ

PHOTO • M. Palani Kumar

2018ರಲ್ಲಿ ಗಜ ಚಂಡಮಾರುತದ ನಂತರ ಅವರು ನಾಗಪಟ್ಟಿಣಂನಲ್ಲಿ ನಡೆಸಿದ ಕಲಾ ಶಿಬಿರವು ಮಕ್ಕಳು ಮತ್ತು ಅವರ ನಗುವನ್ನು ಮತ್ತೆ ತರಗತಿಗೆ ಕರೆತಂದಿತು

ಬಿಳಿ ಮತ್ತು ಹಳದಿ ಬಣ್ಣದಿಂದ ಚಿತ್ರಿಸಲಾದ ಮುಖ, ಮೂಗಿನ ಮೇಲೆ ಒಂದು ಮತ್ತು ಕೆನ್ನೆಗಳ ಮೇಲೆ ಎರಡು ಕೆಂಪು ಚುಕ್ಕೆಗಳು, ತಲೆಯ ಮೇಲೆ ಕೋಡಂಗಿ ಟೋಪಿಯಾಗಿ ಆಕಾಶ-ನೀಲಿ ಪ್ಲಾಸ್ಟಿಕ್ ಚೀಲ, ತುಟಿಗಳ ಮೇಲೆ ತಮಾಷೆಯ ಹಾಡು ಮತ್ತು ಕೈಕಾಲುಗಳಲ್ಲಿ ನಿರಾತಂಕ ಲಯ - ಅವನು ನಗೆಯ ದಂಗೆಯಂತೆ ಕಾಣುತ್ತಿದ್ದನು. ಸುತ್ತಲೂ ನಗೆಯ ಹೊನಲು ಹರಡಿತ್ತು. ಎಳಿಲ್ ಅಣ್ಣನ ಕಲಾ ಶಿಬಿರಗಳು ಈ ರೀತಿಯಾಗಿ ಪ್ರಾರಂಭವಾಗುತ್ತವೆ, ಅದು ಜಾವಧು ಬೆಟ್ಟಗಳಲ್ಲಿರುವ ಒಂದು ಸಣ್ಣ ಸಾರ್ವಜನಿಕ ಶಾಲೆಯಾಗಿರಬಹುದು, ಅಥವಾ ಚೆನ್ನೈಯ ಸ್ವಾಂಕಿ ಖಾಸಗಿ ಶಾಲೆಯಾಗಿರಬಹುದು, ಬುಡಕಟ್ಟು ಮಕ್ಕಳಿಗಾಗಿ ಸತ್ಯಮಂಗಲಂ ಕಾಡುಗಳಲ್ಲಿನ ದೂರದಲ್ಲಿನ ಶಾಲೆಯಿರಲಿ, ಅಥವಾ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಿರಲಿ. ಅಣ್ಣ ಒಂದು ಹಾಡು ಹಾಡುತ್ತಾನೆ, ಒಂದು ಸಣ್ಣ ಸ್ಕಿಟ್, ಇದು ಮಕ್ಕಳು ಓಡುವಾಗ, ಆಡುವಾಗ, ನಗುವಾಗ ಮತ್ತು ಹಾಡುವಾಗ ತಮ್ಮ ಸಂಕೋಚಗಳನ್ನು ಬಿಡಲು ಸಹಾಯ ಮಾಡುತ್ತದೆ.

ತರಬೇತಿ ಪಡೆದ ಕಲಾವಿದನಾದ ಅಣ್ಣ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ಏನನ್ನೂ ಕೇಳುವುದಿಲ್ಲ. ಪ್ರತ್ಯೇಕ ಹೋಟೆಲ್ ಅಥವಾ ವಸತಿ ವ್ಯವಸ್ಥೆ, ವಿಶೇಷ ಸಲಕರಣೆ ಯಾವುದೂ ಬೇಕಿರಲಿಲಲ್ಲ ಅವರಿಗೆ. ಅವರು ವಿದ್ಯುತ್, ನೀರು ಅಥವಾ ಅಲಂಕಾರಿಕ ಕರಕುಶಲ ವಸ್ತುಗಳಿಲ್ಲದೆಯೂ ಕೆಲಸ ಮಾಡುತ್ತಿದ್ದರು. ಅವರು ಮಕ್ಕಳನ್ನು ಭೇಟಿಯಾಗಲು, ಸಂವಹನ ನಡೆಸಲು, ಅವರೊಂದಿಗೆ ಕೆಲಸ ಮಾಡಲು ಮಾತ್ರವೇ ಸದಾ ತುಡಿಯುತ್ತಿದ್ದರು. ಅದರ ಮುಂದೆ ಉಳಿದೆಲ್ಲವೂ ಹಿಂದಕ್ಕೆ ಸರಿಯುತ್ತವೆ. ನೀವು ಮಕ್ಕಳನ್ನು ಅವರ ಬದುಕಿನಿಂದ ಬೇರೆಯಾಗಿ ನೋಡಲು ಸಾಧ್ಯವಿಲ್ಲ. ಮಕ್ಕಳ ವಿಷಯಕ್ಕೆ ಬಂದಾಗ ಅವರು ಮೋಡಿಗಾರ ಮತ್ತು ಕ್ರಿಯಾಶೀಲ ವ್ಯಕ್ತಿ.

ಒಮ್ಮೆ ಅವರು ಸತ್ಯಮಂಗಲದ ಒಂದು ಹಳ್ಳಿಯಲ್ಲಿ ಬಣ್ಣಗಳನ್ನು ನೋಡದ ಮಕ್ಕಳೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಕಲ್ಪನೆಗೆ ತೋಚಿದ್ದನ್ನು ರಚಿಸಲು ಬಣ್ಣಗಳನ್ನು ಬಳಸಲು ಮಕ್ಕಳಿಗೆ ಮೊದಲ ಬಾರಿಗೆ ಸಹಾಯ ಮಾಡಿದರು, ಆ ಮಕ್ಕಳು ತಮಗಾಗಿ ಹೊಸ ಅನುಭವವನ್ನು ಕಂಡುಕೊಳ್ಳಲು ಸಹಾಯ ಮಾಡಿದರು. ಕಳೆದ 22 ವರ್ಷಗಳಿಂದ, ಅವರು ತಮ್ಮ ಕಲಾ ಶಾಲೆ ಕಳಿಮಣ್ ವಿರಳ್ಗಳ್ [ಜೇಡಿಮಣ್ಣಿನ ಬೆರಳುಗಳು] ಸಂಸ್ಥೆಯನ್ನು ಪ್ರಾರಂಭಿಸಿದಾಗಿನಿಂದ, ಮಕ್ಕಳಿಗಾಗಿ ದಣಿವರಿಯದೆ ಈ ಅನುಭವಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ರೋಗಕ್ಕೆ ಶರಣಾಗುವುದನ್ನು ನಾನು ಎಂದೂ ಕಂಡಿಲ್ಲ. ಮಕ್ಕಳೊಂದಿಗಿನ ಅವರ ಕೆಲಸವೇ ಅವರ ಪಾಲಿಗೆ ಚಿಕಿತ್ಸೆ ಮತ್ತು ಮಕ್ಕಳೆದುರು ಕಾಣಿಸಿಕೊಳ್ಳಲು ಅವರು ಸದಾ ಸಿದ್ಧವಿರುತ್ತಿದ್ದರು.

ಒಮ್ಮೆ ಅವರು ಸತ್ಯಮಂಗಲದ ಒಂದು ಹಳ್ಳಿಯಲ್ಲಿ ಬಣ್ಣಗಳನ್ನು ನೋಡದ ಮಕ್ಕಳೊಂದಿಗೆ ಕೆಲಸ ಮಾಡಿದರು. ಅವರು ತಮ್ಮ ಕಲ್ಪನೆಗೆ ತೋಚಿದ್ದನ್ನು ರಚಿಸಲು ಬಣ್ಣಗಳನ್ನು ಬಳಸಲು ಮಕ್ಕಳಿಗೆ ಮೊದಲ ಬಾರಿಗೆ ಸಹಾಯ ಮಾಡಿದರು, ಆ ಮಕ್ಕಳು ತಮಗಾಗಿ ಹೊಸ ಅನುಭವವನ್ನು ಕಂಡುಕೊಳ್ಳಲು ಸಹಾಯ ಮಾಡಿದರು. ಕಳೆದ 22 ವರ್ಷಗಳಿಂದ, ಅವರು ತಮ್ಮ ಕಲಾ ಶಾಲೆ ಕಳಿಮಣ್ ವಿರಳ್ಗಳ್ [ಜೇಡಿಮಣ್ಣಿನ ಬೆರಳುಗಳು] ಸಂಸ್ಥೆಯನ್ನು ಪ್ರಾರಂಭಿಸಿದಾಗಿನಿಂದ, ಮಕ್ಕಳಿಗಾಗಿ ದಣಿವರಿಯದೆ ಈ ಅನುಭವಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ರೋಗಕ್ಕೆ ಶರಣಾಗುವುದನ್ನು ನಾನು ಎಂದೂ ಕಂಡಿಲ್ಲ. ಮಕ್ಕಳೊಂದಿಗಿನ ಅವರ ಕೆಲಸವೇ ಅವರ ಪಾಲಿಗೆ ಚಿಕಿತ್ಸೆ ಮತ್ತು ಮಕ್ಕಳೆದುರು ಕಾಣಿಸಿಕೊಳ್ಳಲು ಅವರು ಸದಾ ಸಿದ್ಧವಿರುತ್ತಿದ್ದರು.

"ಆದರೆ ನನ್ನ ಕೃತಿಗಳು ಮಾರಾಟವಾಗಲು ಪ್ರಾರಂಭಿಸಿದಾಗ, ಅವು ಸಾಮಾನ್ಯ ಜನರನ್ನು ತಲುಪುತ್ತಿಲ್ಲವೆನ್ನುವುದು ನನ್ನ ಅರಿವಿಗೆ ಬಂತು" ಎಂದು ಅವರು ಹೇಳುತ್ತಾರೆ. ಆಗ ನಾನು ಜನಸಾಮಾನ್ಯರೊಂದಿಗೆ ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಪ್ರಾರಂಭಿಸಿದೆ, ಮತ್ತು ಗ್ರಾಮೀಣ ಪ್ರದೇಶಗಳು, ತಮಿಳುನಾಡಿನ ಐದು ಭೂಪ್ರದೇಶಗಳು (ಗುಡ್ಡಗಾಡು, ಕಡಲತೀರ, ಮರುಭೂಮಿ, ಕಾಡು, ಹೊಲಗಳು) ನಾನು ಇರಲು ಬಯಸಿದ ಸ್ಥಳಗಳು ಎಂದು ನಿರ್ಧರಿಸಿದೆ. ನಾನು ನನ್ನ ಮಕ್ಕಳೊಂದಿಗೆ ಜೇಡಿಮಣ್ಣು ಮತ್ತು ಕರಕುಶಲ ವಸ್ತುಗಳಿಂದ ಆಟಿಕೆಗಳನ್ನು ತಯಾರಿಸುವ ಕೆಲಸ ಮಾಡಲು ಪ್ರಾರಂಭಿಸಿದೆ.” ಅವರು ಕಾಗದದ ಮುಖವಾಡಗಳು, ಜೇಡಿಮಣ್ಣಿನ ಮುಖವಾಡಗಳು, ಜೇಡಿಮಣ್ಣಿನ ಮಾದರಿಗಳು, ರೇಖಾಚಿತ್ರಗಳು, ವರ್ಣಚಿತ್ರಗಳು, ಗಾಜಿನ ವರ್ಣಚಿತ್ರಗಳು, ಒರಿಗಾಮಿಗಳನ್ನು ಹೇಗೆ ತಯಾರಿಸುವುದು ಎಂದು ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದರು.

PHOTO • M. Palani Kumar
PHOTO • M. Palani Kumar

ಎಡ: ಸತ್ಯಮಂಗಲಂನ ಮಕ್ಕಳಿಗೆ ಮೊದಲ ಬಾರಿಗೆ ಬಣ್ಣಗಳ ಮಾಯಾಜಾಲವನ್ನು ಪರಿಚಯಿಸಲಾಗುತ್ತಿದೆ. ಬಲ: ಕಾವೇರಿಪಟ್ಟಣಂನ ಮಕ್ಕಳು ಕಾರ್ಡ್ ಬೋರ್ಡ್ ಮತ್ತು ವೃತ್ತಪತ್ರಿಕೆಯನ್ನು ಬಳಸಿ ಜಿಂಕೆ ಕಿರೀಟಗಳನ್ನು ತಯಾರಿಸುತ್ತಿರುವುದು

PHOTO • M. Palani Kumar
PHOTO • M. Palani Kumar

ಎಡ: ಕಾವೇರಿಪಟ್ಟಣಂನಲ್ಲಿ ನಡೆದ ಕಾರ್ಯಾಗಾರದ ಕೊನೆಯ ದಿನದಂದು ಪ್ರದರ್ಶಿಸಲಾದ ನಾಟಕಕ್ಕಾಗಿ ಅವರು ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಶಿರಸ್ತ್ರಾಣಗಳನ್ನು ಧರಿಸಿದ ಮಕ್ಕಳು. ಬಲ: ಪೆರಂಬಲೂರಿನ ಮಕ್ಕಳು ತಾವು ತಯಾರಿಸಿದ ಜೇಡಿಮಣ್ಣಿನ ಮುಖವಾಡಗಳನ್ನು ಪ್ರದರ್ಶಿಸುತ್ತಿದ್ದರು, ಪ್ರತಿಯೊಂದು ಮುಖವಾಡವೂ ವಿಶಿಷ್ಟ ಅಭಿವ್ಯಕ್ತಿಯನ್ನು ಹೊಂದಿದೆ

ನಮ್ಮ ಪ್ರಯಾಣಕ್ಕೆ ಎಂದಿಗೂ ಇಂತಹದ್ದೇ ಸಾರಿಗೆ ವಿಧಾನವೆಂದಿರಲಿಲ್ಲ. ಬಸ್‌, ವ್ಯಾನ್‌ ಹೀಗೆ ಸಿಕ್ಕ ವಾಹನ ಹತ್ತಿ ಹೊರಡುತ್ತಿದ್ದೆವು. ನಮ್ಮ ಅತಿದೊಡ್ಡ ದೊಡ್ಡ ಲಗೇಜ್‌ ಮಕ್ಕಳ ವಸ್ತುಗಳದ್ದಾಗಿರುತ್ತಿತ್ತು. ಎಳಿಲ್‌ ಅಣ್ಣನ ದೊಡ್ಡ ಹಸಿರು ಚೀಲವು ಡ್ರಾಯಿಂಗ್‌ ಬೋರ್ಡುಗಳು, ಪೇಂಟ್‌ ಬ್ರಷ್‌, ಬಣ್ಣಗಳು, ಫೆವಿಕಾಲ್‌ ಟ್ಯೂಬುಗಳು, ಕಂದು ಹಲಗೆ, ಗಾಜಿನ ಬಣ್ಣಗಳು, ಕಾಗದ, ಮತ್ತಿತರ ವಸ್ತುಗಳಿಂದ ತುಂಬಿ ತುಳುಕುತ್ತಿತ್ತು. ಚೆನ್ನೈಯ ಎಲ್ಲೀಸ್ ರಸ್ತೆಯಿಂದ ಪ್ಯಾರಿಯ ಮೂಲೆಯವರೆಗೆ, ಟ್ರಿಪ್ಲಿಕೇನ್ನಿಂದ ಎಗ್ಮೋರ್ವರೆಗೆ ಚೆನ್ನೈನ ಪ್ರತಿಯೊಂದು ಸಂಭಾವ್ಯ ನೆರೆಹೊರೆಗೆ ಅವರು ನಮ್ಮನ್ನು ಕರೆದೊಯ್ಯುತ್ತಿದ್ದರು. ಅಲ್ಲಿ ಸಾಕಷ್ಟು ಆರ್ಟ್‌ ಸಪ್ಲೈ ಸ್ಟೋರುಗಳನ್ನು ಕಾಣಬಹುದಿತ್ತು. ಅಷ್ಟು ಸುತ್ತಾಡುವ ಹೊತ್ತಿಗಾಗಲೇ ನಮಗೆ ಕಾಲು ನೋವು ಶುರುವಾಗಿರುತ್ತಿತ್ತು. ನಮ್ಮ ಬಿಲ್ 6-7 ಸಾವಿರದಷ್ಟಾಗುತ್ತಿತ್ತು.

ಅಣ್ಣನ ಬಳಿ ಎಂದಿಗೂ ಸಾಕಷ್ಟು ಹಣವಿರುತ್ತಿಲಿಲ್ಲ. ಅವರು ಅದನ್ನು ಸ್ನೇಹಿತರಿಂದ, ಸಣ್ಣ ಉದ್ಯೋಗಗಳಿಂದ, ಖಾಸಗಿ ಶಾಲೆಗಳೊಂದಿಗಿನ ತಮ್ಮ ಸ್ವಂತ ಕೆಲಸದಿಂದ ಭರಿಸಬೇಕಾಗುತ್ತಿತ್ತು, ಈ ಮೂಲಕ ಬುಡಕಟ್ಟು ಅಥವಾ ಅಂಗವಿಕಲ ಮಕ್ಕಳು ಉಚಿತ ಕಲಾ ಶಿಬಿರಗಳನ್ನು ಹೊಂದುತ್ತಿದ್ದರು. ನಾನು ಎಳಿಲ್ ಅಣ್ಣನೊಂದಿಗೆ ಪ್ರಯಾಣಿಸುತ್ತಿದ್ದ ಐದು ವರ್ಷಗಳಲ್ಲಿ, ಅವರು ತನ್ನ ಜೀವನೋತ್ಸಾಹವನ್ನು ಕಳೆದುಕೊಂಡಿದ್ದನ್ನು ನಾನು ಎಂದೂ ನೋಡಿಲ್ಲ. ತನಗಾಗಿ ಏನಾದರೂ ಉಳಿಸಿಕೊಳ್ಳುವ ಬಗ್ಗೆ ಅವರು ಎಂದಿಗೂ ಯೋಚಿಸಿಲ್ಲ, ಉಳಿಸಲು ಅವನ ಬಳಿ ಏನೂ ಉಳಿದಿಲ್ಲ. ಅವರು ಏನೇ ಗಳಿಸಿದರೂ, ಅವರು ಅದನ್ನು ನನ್ನಂತಹ ಸಹ-ಕಲಾವಿದರೊಂದಿಗೆ ಹಂಚಿಕೊಳ್ಳುತ್ತಿದ್ದರು.

ಶಿಕ್ಷಣ ವ್ಯವಸ್ಥೆಯು ಕಲಿಸಲು ವಿಫಲವಾಗಿದೆ ಎನ್ನಿಸುವಂತಹ ವಿಷಯಗಳನ್ನು ಮಕ್ಕಳಿಗೆ ಕಲಿಸುವ ಸಲುವಾಗಿ ಅವರು ಕೆಲವೊಮ್ಮೆ ಕಲಾಕೃತಿಗಳನ್ನು ತಯಾರಿಸಲು ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನೇ ಅಣ್ಣ ಬಳಸುತ್ತಿದ್ದರು. ಅವುಗಳಲ್ಲಿ ಜೇಟಿ ಮಣ್ಣು ಕೂಡಾ ಒಂದು. ಇದು ಎಲ್ಲೆಡೆ ಸುಲಭವಾಗಿ ದೊರೆಯುತ್ತದೆ. ಇದನ್ನು ಅವರು ಆಗಾಗ್ಗೆ ಬಳಸುತ್ತಿದ್ದರು. ಆದರೆ ಅದರಲ್ಲಿನ ಕಲ್ಲು, ಗಂಟು, ಅದನ್ನು ಒಡೆಯುವುದು, ಜರಡಿ ಹಿಡಿಯುವುದು ಹೀಗೆ ಸಂಸ್ಕರಿಸುವ ಎಲ್ಲ ಕೆಲಸಗಳನ್ನೂ ಅವರೊಬ್ಬರೇ ಮಾಡಿಕೊಳ್ಳುತ್ತಿದ್ದರು. ಈ ಜೇಡಿ ಮಣ್ಣು ನನಗೆ ಅವರನ್ನು ಮತ್ತು ಅವರ ಬದುಕನ್ನು ನೆನಪಿಸುತ್ತದೆ. ಅದರಂತೆಯೇ ಅವರ ಬದುಕು ಕೂಡಾ ಮಕ್ಕಳೊಡನೆ ಬೆರೆತು ಹೊಂದಿಕೊಂಡಿದೆ. ಅವರು ಮಕ್ಕಳಿಗೆ ಮುಖವಾಡಗಳನ್ನು ಹೇಗೆ ತಯಾರಿಸಬೇಕೆಂದು ಕಲಿಸುವುದನ್ನು ನೋಡುವುದೇ ಒಂದು ರೋಮಾಂಚನಕಾರಿ ಅನುಭವ. ಪ್ರತಿಯೊಂದು ಮುಖವಾಡವು ಅದರ ಮೇಲೆ ಒಂದು ವಿಶಿಷ್ಟ ಅಭಿವ್ಯಕ್ತಿಯನ್ನು ಹೊಂದಿರುತ್ತದೆ, ಆದರೆ ಮಕ್ಕಳ ಮುಖಗಳು ಶುದ್ಧ ಸಂತೋಷದ ಒಂದೇ ಅಭಿವ್ಯಕ್ತಿಯನ್ನು ಧರಿಸುತ್ತವೆ.

ಮಕ್ಕಳು ಮಣ್ಣನ್ನು ಎತ್ತಿಕೊಂಡು ಅದರಿಂದ ಮುಖವಾಡವನ್ನು ರೂಪಿಸಿದ ನಂತರ ಅವರ ಮುಖದಲ್ಲಿ ಮೂಡುವ ಸಂತೋಷವು ಬೆಲೆಕಟ್ಟಲಾಗದ್ದು. ಎಳಿಲ್‌ ಅಣ್ಣ ಮಕ್ಕಳು ಅವರ ಬದುಕಿಗೆ ಸಂಬಂಧಿಸಿದ ವಿಷಯಗಳ ಕುರಿತು ಯೋಚಿಸುವಂತೆ ಮಾಡುತ್ತಿದ್ದರು. ಮಕ್ಕಳ ಬಳಿ ಅವರ ಆಸಕ್ತಿಯ ಕುರಿತು ವಿಚಾರಿಸುತ್ತಾ, ಅವರಿಗೆ ತಮ್ಮ ಆಸಕ್ತಿಯನ್ನು ಅನುಸರಿಸುವಂತೆ ಹೇಳುತ್ತಿದ್ದರು. ಶಿಬಿರದ ಕೆಲವು ಮಕ್ಕಳು ಮನೆಯಲ್ಲಿ ನೀರು ಕಡಿಮೆಯಿರುವ ಅಥವಾ ನೀರಿಲ್ಲದ ಕಾರಣಕ್ಕಾಗಿ ನೀರಿನ ಟ್ಯಾಂಕುಗಳನ್ನು ಮಣ್ಣಿನಿಂದ ತಯಾರಿಸುತ್ತಿದ್ದರು. ಇನ್ನೂ ಕೆಲವು ಮಕ್ಕಳು ಆನೆಗಳನ್ನು ತಯಾರಿಸುತ್ತಿದ್ದರು. ಆದರೆ ಕಾಡಿನ ಮಕ್ಕಳು ಆನೆ ಸೊಂಡಿಲೆತ್ತಿಕೊಂಡಿರುವಂತೆ ತಯಾರಿಸುತ್ತಿದ್ದರು. ಇದು ಅವರಿಗೆ ಆನೆಗಳೊಡನೆ ಇರುವ ಸುಂದರ ಸಂಬಂಧವನ್ನು ಸೂಚಿಸುತ್ತಿತ್ತು.

PHOTO • M. Palani Kumar

ಜೇಡಿ ಮಣ್ಣು ಯಾವಾಗಲೂ ನನಗೆ ಎಳಿಲ್ ಅಣ್ಣ ಮತ್ತು ಮಕ್ಕಳೊಂದಿಗಿನ ಅವನ ಜೀವನವನ್ನು ನೆನಪಿಸುತ್ತದೆ. ಅವರು ಸ್ವತಃ ಜೇಡಿಮಣ್ಣಿನಂತೆ, ಹೊಂದಿಕೊಳ್ಳುವ ಸ್ವಭಾವದವರು. ನಾಗಪಟ್ಟಿಣಂನ ಶಾಲೆಯಲ್ಲಿ ಮುಖವಾಡಗಳನ್ನು ಹೇಗೆ ತಯಾರಿಸುವುದು ಎಂದು ಅವರು ಮಕ್ಕಳಿಗೆ ಕಲಿಸುವುದನ್ನು ನೋಡುವುದು ರೋಮಾಂಚನಕಾರಿ ಅನುಭವವಾಗಿತ್ತು

PHOTO • M. Palani Kumar

ಅವರು ಮಕ್ಕಳು ತಮ್ಮ ಬದುಕಿನ ನಡುವಿನಿಂದ ಆಲೋಚನೆಗಳು ಮತ್ತು ಚಿತ್ರಣಗಳನ್ನು ಎತ್ತಿಕೊಂಡು ಕಲಾಕೃತಿಗಳನ್ನು ರಚಿಸುವಂತೆ ಮಕ್ಕಳನ್ನು ಪ್ರೇರೇಪಿಸುತ್ತಿದ್ದರು. ಸತ್ಯಮಂಗಲದ ಅರಣ್ಯದಲ್ಲಿನ ಊರೊಂದರ ಬಾಲ ತನ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬರುವ ಸೊಂಡಿಲು ಎತ್ತಿಕೊಂಡಿರುವ ಆನೆಯನ್ನು ರಚಿಸಿರುವುದನ್ನು ಚಿತ್ರದಲ್ಲಿ ಕಾಣಬಹುದು

ಅವರು ಕಲಾ ಶಿಬಿರಗಳಿಗೆ ತಾನು ಬಳಸುವ ವಸ್ತುಗಳ ಬಗ್ಗೆ ಜಾಗರೂಕತೆಯಿಂದ ಯೋಚಿಸುತ್ತಿದ್ದರು. ಪರಿಪೂರ್ಣತೆಗಾಗಿ ಅವರ ಬಯಕೆ, ಮಕ್ಕಳಿಗೆ ಸರಿಯಾದ ರೀತಿಯ ವಸ್ತುಗಳನ್ನು ತಲುಪಿಸುವ ಕಾಳಜಿ, ಅವರನ್ನು ನಮಗೆ ಹೀರೋ ಆಗುವಂತೆ ಮಾಡಿತು. ಶಿಬಿರದ ಪ್ರತಿರಾತ್ರಿಯೂ ಎಳಿಲ್ ಅಣ್ಣ ಮತ್ತು ಇತರರು ಮಾರನೇ ದಿನಕ್ಕಾಗಿ ಸಾಮಾಗ್ರಿಗಳನ್ನು ತಯಾರಿಸುತ್ತಿದ್ದರು. ಕಣ್ಣಿಲ್ಲದ ಮಕ್ಕಳೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ಕಲಿಯಲು ಅವರು ತಮ್ಮ ಕಣ್ಣುಗಳನ್ನು ಶಿಬಿರದ ಮುಂದೆ ಕಟ್ಟಿಕೊಳ್ಳುತ್ತಿದ್ದರು. ಶ್ರವಣದೋಷವುಳ್ಳ ಮಕ್ಕಳಿಗೆ ತರಬೇತಿ ನೀಡುವ ಮೊದಲು ಅವರು ತಮ್ಮ ಕಿವಿಗಳನ್ನು ಮುಚ್ಚಿಕೊಳ್ಳುತ್ತಿದ್ದರು. ಅವರು ತಮ್ಮ ವಿದ್ಯಾರ್ಥಿಗಳ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ ರೀತಿ ನನ್ನ ಛಾಯಾಚಿತ್ರಗಳ ವಿಷಯಗಳೊಂದಿಗೆ ತೊಡಗಿಸಿಕೊಳ್ಳಲು ನನ್ನನ್ನು ಪ್ರೇರೇಪಿಸಿತು. ನಾನು ಕ್ಲಿಕ್ ಮಾಡುವ ಮೊದಲು ವಿಷಯದೊಡನೆ ಬೆರೆಯುವುದು ಮುಖ್ಯವಾಗಿತ್ತು.

ಎಳಿಲ್ ಅಣ್ಣ ಬಲೂನುಗಳ ಮಾಂತ್ರಿಕ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದರು. ಅವರು ಬಲೂನುಗಳೊಂದಿಗೆ ಆಡಿದ ಆಟಗಳು ಯಾವಾಗಲೂ ಅವನಿಗೆ ಸಣ್ಣ ಹುಡುಗರು ಮತ್ತು ಹುಡುಗಿಯರೊಂದಿಗೆ ಆಪ್ತರಾಗಲು ಸಹಾಯ ಮಾಡುತ್ತಿದ್ದವು. ತನ್ನ ಚೀಲದಲ್ಲಿ ದೊಡ್ಡ ದುಂಡಗಿನ ಬಲೂನುಗಳು, ಉದ್ದವಾದ ಹಾವಿನಂತಹವು, ತಿರುಚುವವು, ಶಿಳ್ಳೆ ಹೊಡೆಯುವವು, ನೀರು ತುಂಬಿದ ಬಲೂನುಗಳ ಹೊರೆಗಳನ್ನು ತುಂಬಿಕೊಂಡಿರುತ್ತಿದ್ದರು. ಅವು ಮಕ್ಕಳಲ್ಲಿ ಸಾಕಷ್ಟು ಉತ್ಸಾಹವನ್ನು ಹುಟ್ಟಿಸುತ್ತಿದ್ದವು. ಇದಾದ ನಂತರ ಹಾಡುಗಳು ಇರುತ್ತಿದ್ದವು.

"ನನ್ನ ಕೆಲಸದ ಸಮಯದಲ್ಲಿ, ಮಕ್ಕಳಿಗೆ ನಿರಂತರವಾಗಿ ಹಾಡುಗಳು ಮತ್ತು ಆಟಗಳು ಬೇಕು ಎಂದು ನಾನು ಅರಿತುಕೊಂಡಿದ್ದೇನೆ, ನಾನು ಸಾಮಾಜಿಕ ಸಂದೇಶಗಳನ್ನು ಹೊಂದಿರುವ ಹಾಡುಗಳು ಮತ್ತು ಆಟಗಳೊಡನೆ ಮಕ್ಕಳೊಡನೆ ಬೆರೆಯುತ್ತೇನೆ. ನಾನು ಅವರನ್ನು ಹಾಡುವಂತೆ ಮಾಡುತ್ತೇನೆ" ಎಂದು ಅಣ್ಣ ಹೇಳುತ್ತಾರೆ. ಅವರು ಎಲ್ಲೇ ಇದ್ದರು ಅಲ್ಲೊಂದು ಮಿಂಚಿನ ಸಂಚಾರವಿರುತ್ತಿತ್ತು. ಬುಡಕಟ್ಟು ಹಳ್ಳಿಗಳಿಂದ ಬಂದ ಮಕ್ಕಳಿಗೆ ಶಿಬಿರದ ನಂತರ ಅವರನ್ನು ಹೋಗಲು ಬಿಡುವುದು ಕಷ್ಟವಾಗುತ್ತದೆ. ಅವರು ಹಾಡುಗಳನ್ನು ಹಾಡುವಂತೆ ಒತ್ತಾಯಿಸುತ್ತಿದ್ದರು. ಅವರು ದಣಿವರಿಯದೆ ಹಾಡುತ್ತಿದ್ದರು. ಮಕ್ಕಳು ಸುತ್ತಲೂ ಇರುತ್ತಾರೆ, ಹಾಡುಗಳು ಕೂಡಾ.

ಅವರು ಸಂವಹನ ನಡೆಸಲು ಪ್ರಯತ್ನಿಸಿದ ರೀತಿ, ವಿದ್ಯಾರ್ಥಿಗಳ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ ರೀತಿ ನನ್ನ ಛಾಯಾಚಿತ್ರಗಳ ವಿಷಯಗಳೊಂದಿಗೆ ತೊಡಗಿಸಿಕೊಳ್ಳಲು ನನ್ನನ್ನು ಪ್ರೇರೇಪಿಸಿತು. ಪ್ರಾರಂಭದಲ್ಲಿ, ಛಾಯಾಗ್ರಹಣದ ಬಗ್ಗೆ ನನ್ನ ತಿಳುವಳಿಕೆ ಇನ್ನೂ ಆರಂಭಿಕ ಹಂತದಲ್ಲಿದ್ದಾಗ, ನಾನು ನನ್ನ ಛಾಯಾಚಿತ್ರಗಳನ್ನು ಎಳಿಲ್ ಅಣ್ಣನಿಗೆ ತೋರಿಸಿದೆ. ಅವರು ನನ್ನ ಚಿತ್ರದಲ್ಲಿರುವ ಜನರ ಬಳಿಗೆ ನನ್ನ ಫೋಟೊಗಳನ್ನು ಒಯ್ಯುವಂತೆ ಸೂಚಿಸಿದರು. “ಅವರು [ಚಿತ್ರದಲ್ಲಿರುವ ಜನರು] ನಿನಗೆ ನಿನ್ನ ಕೌಶಲವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವುದನ್ನು ಕಲಿಸುತ್ತಾರೆ.” ಎಂದಿದ್ದರು.

PHOTO • M. Palani Kumar

ಶಿಬಿರದ ನಂತರ ಎಳಿಲ್ ಅಣ್ಣ ಹೊರಡುವುದನ್ನು ಮಕ್ಕಳು ಇಷ್ಟಪಡುವುದಿಲ್ಲ. 'ಮಕ್ಕಳಿಗೆ ನಿರಂತರವಾಗಿ ಹಾಡುಗಳು ಮತ್ತು ಆಟಗಳು ಬೇಕಾಗುತ್ತವೆ. ನಾನು ಅವರನ್ನು ಹಾಡುವಂತೆ ಮಾಡುತ್ತೇನೆ'

PHOTO • M. Palani Kumar

ಸೇಲಂನಲ್ಲಿ, ಕಿವಿ ಮತ್ತು ಮಾತಿನ ಸಮಸ್ಯೆ ಹೊಂದಿರುವ ಮಕ್ಕಳ ಶಾಲೆಯಲ್ಲಿ ಬಲೂನುಗಳ ಆಟ

ಶಿಬಿರಗಳಲ್ಲಿ ಮಕ್ಕಳು ಯಾವಾಗಲೂ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದರು. ಅವರ ವರ್ಣಚಿತ್ರಗಳು, ಒರಿಗಾಮಿ ಮತ್ತು ಮಣ್ಣಿನ ಗೊಂಬೆಗಳು ಪ್ರದರ್ಶನದಲ್ಲಿರುತ್ತಿದ್ದವು. ಮಕ್ಕಳು ತಮ್ಮ ಪೋಷಕರು ಮತ್ತು ಒಡಹುಟ್ಟಿದವರನ್ನು ಕರೆತರುತ್ತಿದ್ದರು ಮತ್ತು ತಮ್ಮ ಪ್ರತಿಭೆಯನ್ನು ಹೆಮ್ಮೆಯಿಂದ ತೋರಿಸುತ್ತಿದ್ದರು. ಎಳಿಲ್ ಅಣ್ಣ ಅದನ್ನು ಅವರಿಗೆ ಒಂದು ಸಂಭ್ರಮದ ಆಚರಣೆಯನ್ನಾಗಿ ಮಾಡುತ್ತಿದ್ದರು. ಅವರು ಜನರನ್ನು ಕನಸು ಕಾಣುವಂತೆ ಮಾಡಿದರು. ನನ್ನ ಮೊದಲ ಫೋಟೊ ಪ್ರದರ್ಶನವು ಅವರು ಪೋಷಿಸಿದ ಅಂತಹ ಒಂದು ಕನಸಾಗಿತ್ತು. ಅವರ ಶಿಬಿರಗಳಿಂದಲೇ ನಾನು ಅದನ್ನು  ಮಾಡಲು ಸ್ಫೂರ್ತಿ ಪಡೆದಿದ್ದೆ. ಆದರೆ ಅದಕ್ಕಾಗಿ ನನ್ನ ಬಳಿ ಯಾವುದೇ ಹಣವಿರಲಿಲ್ಲ.

ಅಣ್ಣ ನನ್ನ ಬಳಿ ಹಣವಿದ್ದಾಗಲೆಲ್ಲ ಫೋಟೊ ಪ್ರಿಂಟ್‌ ತೆಗೆದು ಇರಿಸಿಕೊಳ್ಳುವಂತೆ ಹೇಳುತ್ತಿದ್ದರು. ಮುಂದೆ ನಾನು ದೊಡ್ಡ ಹೆಸರು ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸುತ್ತಿದ್ದರು, ಜನರ ಬಳಿ ಅವರು ನನ್ನ ಕುರಿತು ಮಾತನಾಡುತ್ತಿದ್ದರು. ನನ್ನ ಕೆಲಸದ ಬಗ್ಗೆ ಜನರ ಬಳಿ ಒಳ್ಳೆಯ ಮಾತುಗಳನ್ನಾಡುತ್ತಿದ್ದರು. ಇದೆಲ್ಲವೂ ನನಗೆ ಕೆಲಸ ಮಾಡಲು ಸ್ಫೂರ್ತಿ ನೀಡಿದೆ ಎನ್ನುವುದು ನನ್ನ ಭಾವನೆ. ಎಳಿಲ್‌ ಅಣ್ಣನ ಗುಂಪಿನ ಕಾರ್ಯಕರ್ತ ಮತ್ತು ರಂಗಕಲಾವಿದರೂ ಆದ ಕೃಣಾ ಪ್ರಸಾದ್‌ ನನಗೆ ಮೂಲಧನವಾಗಿ 10,000 ರೂಪಾಯಿಗಳನ್ನು ನೀಡಿದರು. ಮೊದಲ ಬಾರಿಗೆ ನನಗೆ ಫೋಟೊ ಪ್ರಿಂಟ್‌ ಹಾಕಿಸಲು ಸಾಧ್ಯವಾಯಿತು. ಅಣ್ಣ ನನಗೆ ಮರದಿಂದ ಫೋಟೊ ಫ್ರೇಮ್‌ ತಯಾರಿಸಲು ಹೇಳಿಕೊಟ್ಟಿದ್ದರು. ಅವರ ಬಳಿ ಸ್ಪಷ್ಟವಾದ ಯೋಜನೆಯಿತ್ತು. ಅವರಿಲ್ಲದೆ ನನ್ನ ಮೊದಲ ಫೋಟೊ ಎಕ್ಸಬಿಷನ್‌ ನಡೆಯವುದು ಸಾಧ್ಯವೇ ಇರಲಿಲ್ಲ.

ಆ ಫೋಟೊಗಳು ನಂತರ ರಂಜಿತ್ ಅಣ್ಣ (ಪಾ. ರಂಜಿತ್) ಮತ್ತು ಅವರ ನೀಲಂ ಸಾಂಸ್ಕೃತಿಕ ಕೇಂದ್ರವನ್ನು ತಲುಪಿದವು. ಇದು ಪ್ರಪಂಚದಾದ್ಯಂತದ ಇತರ ಅನೇಕ ಸ್ಥಳಗಳನ್ನು ತಲುಪಿತು, ಆದರೆ ಈ ಕಲ್ಪನೆಯು ಮೊದಲು ಮೊಳಕೆಯೊಡೆದ ಸ್ಥಳವೆಂದರೆ ಎಳಿಲ್ ಅಣ್ಣನ ಶಿಬಿರ. ನಾನು ಮೊದಲು ಅವರೊಂದಿಗೆ ಪ್ರಯಾಣಿಸಲು ಪ್ರಾರಂಭಿಸಿದಾಗ ನನಗೆ ಅನೇಕ ವಿಷಯಗಳ ಬಗ್ಗೆ ತಿಳಿದಿರಲಿಲ್ಲ. ಪ್ರಯಾಣದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ಆದರೆ ವಿಷಯಗಳನ್ನು ಬಲ್ಲವರು ಮತ್ತು ಗೊತ್ತಿಲ್ಲದವರ ನಡುವೆ ಅವನು ಎಂದಿಗೂ ತಾರತಮ್ಯ ಮಾಡುವುದಿಲ್ಲ. ಜನರನ್ನು ಕರೆತರಲು ಅವರು ನಮ್ಮನ್ನು ಪ್ರೋತ್ಸಾಹಿಸುತ್ತಾರೆ, ಅವರು ಕಡಿಮೆ ಪ್ರತಿಭಾವಂತರಾಗಿದ್ದರೂ ಪರವಾಗಿಲ್ಲ. "ನಾವು ಅವರಿಗೆ ಹೊಸ ವಿಷಯಗಳನ್ನು ಪರಿಚಯಿಸೋಣ, ನಾವು ಅವರೊಂದಿಗೆ ಪ್ರಯಾಣಿಸೋಣ" ಎಂದು ಅವರು ಹೇಳುತ್ತಿದ್ದರು. ಒಬ್ಬ ವ್ಯಕ್ತಿಯ ನ್ಯೂನತೆಗಳನ್ನು ಅವರು ಎಂದಿಗೂ ನೋಡಲಾರರು. ಮತ್ತು ಆ ರೀತಿಯಾಗಿ ಅವರು ಕಲಾವಿದರನ್ನು ತಯಾರಿಸಿದರು.

ಅವರು ಮಕ್ಕಳಲ್ಲಿದ್ದ ಕಲಾವಿದರು ಮತ್ತು ನಟರನ್ನು ಸಹ ಹೊರತೆಗೆದರು. "ನಾವು ಶ್ರವಣದೋಷವುಳ್ಳ ಮಕ್ಕಳಿಗೆ ಕಲಾ ಪ್ರಕಾರಗಳನ್ನು ಅನುಭವಿಸಲು ಕಲಿಸುತ್ತೇವೆ - ನಾವು ಅವರಿಗೆ ಬಣ್ಣ ಹಚ್ಚಲು, ಜೇಡಿಮಣ್ಣಿನಿಂದ ಜೀವನವನ್ನು ರಚಿಸಲು ಕಲಿಸುತ್ತೇವೆ. ದೃಷ್ಟಿಯಿಲ್ಲದ ಮಕ್ಕಳಿಗೆ, ಸಂಗೀತ ಮತ್ತು ರಂಗಭೂಮಿಯನ್ನು ಕಲಿಸುತ್ತೇವೆ. ಜೇಡಿಮಣ್ಣಿನಲ್ಲಿ ಮೂರು ಆಯಾಮದ ಶಿಲ್ಪಗಳನ್ನು ಕೆತ್ತಲು ಸಹ ನಾವು ಅವರಿಗೆ ಕಲಿಸುತ್ತೇವೆ. ಇದು ದೃಷ್ಟಿಯಿಲ್ಲದ ಮಕ್ಕಳಿಗೆ ಕಲೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಕ್ಕಳು ಅಂತಹ ಕಲಾ ಪ್ರಕಾರಗಳನ್ನು ಕಲಿತಾಗ, ಸಮಾಜದ ಬಗ್ಗೆ ಅವರ ತಿಳುವಳಿಕೆಯ ಭಾಗವಾಗಿ ಅವುಗಳನ್ನು ಕಲಿತಾಗ, ಅವರು ಸಹ ಸ್ವತಂತ್ರರಾಗುತ್ತಾರೆ" ಎನ್ನುತ್ತಿದ್ದರು

PHOTO • M. Palani Kumar

ಅಣ್ಣ ತಂಜಾವೂರಿನ ಅಂಧ ಮಕ್ಕಳ ಶಾಲೆಯ ಶಿಬಿರದ ವೇಳೆ ಮಕ್ಕಳೊಡನೆ ಮಗುವಾಗಿ ಬೆರೆತಿರುವುದು. ಶಿಬಿರವನ್ನು ಪ್ರಾರಂಭಿಸುವ ಮೊದಲು, ಅವರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ಕಲಿಯಲು ಅವರು ತನ್ನ ಕಣ್ಣುಗಳನ್ನು ಕಟ್ಟುಕೊಂಡಿದ್ದರು. ಶ್ರವಣದೋಷವುಳ್ಳ ಮಕ್ಕಳೊಂದಿಗೆ ಕೆಲಸ ಮಾಡುವಾಗ ಅವರು ಸಹ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುತ್ತಿದ್ದರು

PHOTO • M. Palani Kumar

ಮಕ್ಕಳು ಕಾವೇರಿಪಟ್ಟಣಂನಲ್ಲಿ ಓಯಿಲ್ ಆಟ್ಟಂ ಎಂಬ ಜಾನಪದ ನೃತ್ಯವನ್ನು ಅಭ್ಯಾಸ ಮಾಡುತ್ತಿರುವುದು. ಎಳಿಲ್ ಅಣ್ಣ ಹಲವಾರು ಜಾನಪದ ಕಲಾ ಪ್ರಕಾರಗಳಿಗೆ ಮಕ್ಕಳನ್ನು ಪರಿಚಯಿಸುತ್ತಾರೆ

ಮಕ್ಕಳೊಂದಿಗೆ ತನ್ನ ಕೆಲಸದ ಸಮಯದಲ್ಲಿ ಅವನು ಅರಿತುಕೊಂಡಂತೆ, "ಹಳ್ಳಿಗಳ ಮಕ್ಕಳು - ವಿಶೇಷವಾಗಿ ಹುಡುಗಿಯರು - ಶಾಲೆಯಲ್ಲಿಯೂ ಸಹ ತುಂಬಾ ನಾಚಿಕೆಪಡುತ್ತಾರೆ. ಅವರು ಶಿಕ್ಷಕರ ಮುಂದೆ ಯಾವುದೇ ಪ್ರಶ್ನೆಗಳನ್ನು ಕೇಳಲು ಅಥವಾ ಅನುಮಾನಗಳನ್ನು ಎತ್ತಲು ಹಿಂಜರಿಯುತ್ತಾರೆ." ಅವರು ಹೇಳುತ್ತಾರೆ, "ಸಾರ್ವಜನಿಕ ಭಾಷಣದಲ್ಲಿ ರಂಗಭೂಮಿಯ ಮೂಲಕ ಅವರಿಗೆ ತರಬೇತಿ ನೀಡಲು ನಾನು ನಿರ್ಧರಿಸಿದೆ. ಮತ್ತು ಇದನ್ನು ಮಾಡಲು ನಾನು ರಂಗಭೂಮಿ ಕಾರ್ಯಕರ್ತ ಕರುಣಾ ಪ್ರಸಾದ್ ಅವರಿಂದ ರಂಗಭೂಮಿಯಲ್ಲಿ ತರಗತಿಗಳನ್ನು ತೆಗೆದುಕೊಂಡೆ. ಕಲಾವಿದ ಪುರುಷೋತ್ತಮನ್ ಅವರ ಕೆಲವು ಮಾರ್ಗದರ್ಶನದೊಂದಿಗೆ, ನಾವು ಮಕ್ಕಳಿಗೆ ರಂಗಭೂಮಿಯಲ್ಲಿ ತರಬೇತಿ ನೀಡಲು ಪ್ರಾರಂಭಿಸಿದೆವು.

ಅವರು ತಮ್ಮ ಮಕ್ಕಳಿಗೆ ತರಬೇತಿ ನೀಡಲು ಇತರ ದೇಶಗಳ ಕಲಾವಿದರಿಂದ ಕಲಿತ ವಿವಿಧ ಕಲಾ ಪ್ರಕಾರಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ತಮ್ಮ ಸ್ವಂತ ಪರಿಸರಕ್ಕೆ ಮಕ್ಕಳನ್ನು ಸಂವೇದನಾಶೀಲರನ್ನಾಗಿ ಮಾಡಲು ಕೆಲಸ ಮಾಡುತ್ತಾರೆ. "ನಾವು ನಮ್ಮ ಶಿಬಿರಗಳ ಭಾಗವಾಗಿ ಪರಿಸರ ಚಲನಚಿತ್ರಗಳನ್ನು ಪ್ರದರ್ಶಿಸುತ್ತೇವೆ. ನಾವು ಅವರಿಗೆ ಜೀವನವನ್ನು ಅರ್ಥಮಾಡಿಕೊಳ್ಳುವ ಕಲೆಯನ್ನು ಕಲಿಸುತ್ತೇವೆ - ಅದು ಎಷ್ಟೇ ಚಿಕ್ಕದಾಗಿದ್ದರೂ, ಅದು ಪಕ್ಷಿಯಾಗಿರಲಿ ಅಥವಾ ಕೀಟವಾಗಿರಲಿ. ಅವರು ತಮ್ಮ ನೆರೆಹೊರೆಯಲ್ಲಿರುವ ಸಸ್ಯಗಳನ್ನು ಗುರುತಿಸಲು, ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಭೂಮಿಯನ್ನು ಗೌರವಿಸಲು ಮತ್ತು ರಕ್ಷಿಸಲು ಕಲಿಯುತ್ತಾರೆ. ನಾನು ಪರಿಸರ ವಿಜ್ಞಾನದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ನಾಟಕಗಳೊಂದಿಗೆ ಮಕ್ಕಳ ಮುಂದೆ ಹೋದೆ. ಅವರು ನಮ್ಮ ಸಸ್ಯಗಳು ಮತ್ತು ಪ್ರಾಣಿಗಳ ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ. ಉದಾಹರಣೆಗೆ, ಸಂಗಮ್ ಸಾಹಿತ್ಯವು 99 ಹೂವುಗಳನ್ನು ಉಲ್ಲೇಖಿಸುತ್ತದೆ. ನಮ್ಮ ಪ್ರಾಚೀನ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವಾಗ ನಾವು ಮಕ್ಕಳನ್ನು ಅವುಗಳ ಚಿತ್ರ ಬಿಡಿಸಲು, ಆ ಹೂಗಳ ಬಗ್ಗೆ ಹಾಡಲು ಹೇಳುತ್ತೇವೆ." ಎಳಿಲ್ ಅಣ್ಣ ವಿವರಿಸುತ್ತಾರೆ. ಅವರು ನಾಟಕಗಳಿಗೆ ಹೊಸ ಹಾಡುಗಳನ್ನು ರಚಿಸುತ್ತಿದ್ದರು. ಅವರು ಕೀಟಗಳು ಮತ್ತು ಪ್ರಾಣಿಗಳ ಬಗ್ಗೆ ಕಥೆಗಳನ್ನು ರಚಿಸುತ್ತಿದ್ದರು.

ಎಳಿಲ್ ಅಣ್ಣ ಹೆಚ್ಚಾಗಿ ಬುಡಕಟ್ಟು ಮತ್ತು ಕರಾವಳಿ ಹಳ್ಳಿಯ ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದರು, ಆದರೆ ಕೆಲವೊಮ್ಮೆ ಅವರು ನಗರ ಪ್ರದೇಶಗಳ ಮಕ್ಕಳೊಂದಿಗೆ ಕೆಲಸ ಮಾಡಿದ ಸಂದರ್ಭದಲ್ಲಿ, ಜಾನಪದ ಕಲೆ ಮತ್ತು ಜೀವನೋಪಾಯಗಳ ಬಗ್ಗೆ ಆ ಮಕ್ಕಳಿಗಿರುವ ಜ್ಞಾನದ ಕೊರತೆಯನ್ನು ಅವರು ಕಂಡುಕೊಂಡರು. ನಂತರ ಅವರು ಪರೈ ವಾದ್ಯ ಬಳಸುವ, ಆಭರಣದಂತಹ ಕಾಲ್ಗೆಜ್ಜೆಯೊಂದಿಗೆ ಪ್ರದರ್ಶನ ನೀಡುವ ಸಿಲಂಬು ಮತ್ತು ಹುಲಿ ಮುಖವಾಡಗಳನ್ನು ಬಳಸುವ ನೃತ್ಯ ರೂಪವಾದ ಪುಲಿ ಸೇರಿದಂತೆ ಜಾನಪದ ಕಲೆಯಿಂದ ತಂತ್ರಗಳನ್ನು ಅಳವಡಿಸಲು ಕೆಲಸ ಮಾಡಲು ಪ್ರಾರಂಭಿಸಿದರು. "ಈ ಕಲಾ ಪ್ರಕಾರಗಳನ್ನು ಮಕ್ಕಳಿಗೆ ತಲುಪಿಸುವ, ಅವುಗಳನ್ನು ಸಂರಕ್ಷಿಸಬೇಕಾದುದು ಬಹಳ ಮುಖ್ಯವೆಂದು ನಾನು ದೃಢವಾಗಿ ನಂಬುತ್ತೇನೆ. ಕಲಾ ಪ್ರಕಾರಗಳು ನಮ್ಮ ಮಕ್ಕಳನ್ನು ಸಂತೋಷವಾಗಿ ಮತ್ತು ಮುಕ್ತವಾಗಿಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಾನು ನಂಬುತ್ತೇನೆ" ಎಂದು ಎಳಿಲ್‌ ಅಣ್ಣ ಹೇಳುತ್ತಾರೆ.

ಐದರಿಂದ ಆರು ದಿನಗಳ ಕಾಲ ನಡೆಯುವ ಶಿಬಿರಗಳಲ್ಲಿ ಯಾವಾಗಲೂ ತಂಡದಲ್ಲಿ ಒಂದಕ್ಕಿಂತ ಹೆಚ್ಚು ಕಲಾವಿದರು ಇರುತ್ತಿದ್ದರು. ತಮಿಳರಸನ್, ಗಾಯಕ, ಚಿತ್ರಕಲಾವಿದ ರಾಕೇಶ್ ಕುಮಾರ್, ಶಿಲ್ಪಿ ಎಳಿಲ್ ಅಣ್ಣ, ಜಾನಪದ ಕಲಾವಿದರಾದ ವೇಲುಮುರುಗನ್ ಮತ್ತು ಆನಂದ್ ಎಲ್ಲರೂ ಒಂದೇ ತಂಡದಲ್ಲಿ ಇದ್ದ ಕಾಲವೊಂದಿತ್ತು. "ಸಹಜವಾಗಿ, ನಮ್ಮ ತಂಡದಲ್ಲಿ ಛಾಯಾಗ್ರಾಹಕರೂ ಇದ್ದಾರೆ, ಅವರು ನಮ್ಮ ಮಕ್ಕಳಿಗೆ ತಮ್ಮ ಜೀವನವನ್ನು ಫೋಟೋಗಳಲ್ಲಿ ದಾಖಲಿಸಲು ಕಲಿಸುತ್ತಾರೆ" ಎಂದು ಅಣ್ಣಾ ನನ್ನ ನೆರಳು ಬೆಳಕಿನ ಚಟುವಟಿಕೆಗಳನ್ನು ಉಲ್ಲೇಖಿಸಿ ಮೃದುವಾಗಿ ಹೇಳುತ್ತಾರೆ.

PHOTO • M. Palani Kumar

ತಿರುಚೆಂಗೋಡುವಿನಲ್ಲಿ ಶಿಬಿರದ ಕೊನೆಯ ದಿನವಾದ 'ಪ್ರದರ್ಶನ ದಿನ'ದಲ್ಲಿ ಪರೈ ಆಟ್ಟಂಗಾಗಿ ತಮಟೆ ನುಡಿಸುತ್ತಿರುವ ಮಕ್ಕಳು

PHOTO • M. Palani Kumar

ತಂಜಾವೂರಿನಲ್ಲಿ, ಭಾಗಶಃ ದೃಷ್ಟಿ ಹೊಂದಿರುವ ಹುಡುಗಿಯರು ಫೋಟೊ ತೆಗೆಯುತ್ತಿರುವುದು

ಮಕ್ಕಳು ಮತ್ತು ವಯಸ್ಕರು ನಗುವ ಸುಂದರ ಕ್ಷಣಗಳನ್ನು ಹೇಗೆ ಸೃಷ್ಟಿಸಬೇಕೆನ್ನುವುದು ಅವರಿಗೆ ತಿಳಿದಿದೆ. ನನ್ನ ಸ್ವಂತ ಹೆತ್ತವರೊಂದಿಗೆ ಅಂತಹ ಕ್ಷಣಗಳನ್ನು ಮರುಸೃಷ್ಟಿಸಲು ಅವರು ನನಗೆ ಸಹಾಯ ಮಾಡಿದರು. ನನ್ನ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ ನಂತರ ನಾನು ಕೆಲಸವಿಲ್ಲದೆ ಗುರಿಯಿಲ್ಲದೆ ಅಲೆದಾಡುತ್ತಿದ್ದಾಗ, ನಾನು ಛಾಯಾಗ್ರಹಣದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿದಾಗ, ಎಳಿಲ್ ಅಣ್ಣ ನನ್ನ ಹೆತ್ತವರೊಂದಿಗೆ ಇರಲು ಹೇಳಿದರು. ಅವರು ತನ್ನ ತಾಯಿಯೊಂದಿಗಿನ ಸಂಬಂಧದ ಬಗ್ಗೆ ಕಥೆಗಳನ್ನು ಹಂಚಿಕೊಂಡರು; ಅವರ ತಂದೆಯ ಮರಣದ ನಂತರ ತಾಯಿ ಅವರನ್ನು ಮತ್ತು ಅವನ ನಾಲ್ವರು ಸಹೋದರಿಯರನ್ನು ಏಕಾಂಗಿಯಾಗಿ ಬೆಳೆಸಿದ್ದರು. ತನ್ನ ತಾಯಿಯ ಹೋರಾಟದ ಬಗೆಗಿನ ಈ ಸಂಭಾಷಣೆಗಳ ಮೂಲಕವೇ ಎಳಿಲ್ ಅಣ್ಣ ನನ್ನನ್ನು ಬೆಳೆಸುವಲ್ಲಿ ನನ್ನ ಹೆತ್ತವರ ಪ್ರಯತ್ನಗಳ ಬಗ್ಗೆ ಯೋಚಿಸುವಂತೆ ಮಾಡಿದರು. ಹೀಗೆ ನಾನು ನನ್ನ ತಾಯಿಯನ್ನು ಗೌರವಿಸಲು ಆರಂಭಿಸಿದೆ. ಅವರ ಫೋಟೊ ತೆಗೆದೆ, ಅವರ ಬಗ್ಗೆ ಬರೆದೆ .

ನಾನು ಎಳಿಲ್ ಅಣ್ಣ ಅವರೊಂದಿಗೆ ಪ್ರಯಾಣಿಸಲು ಪ್ರಾರಂಭಿಸಿದಾಗ, ನಾಟಕಗಳನ್ನು ಸಂಘಟಿಸಲು, ಚಿತ್ರ ಬಿಡಿಸಲು ಮತ್ತು ಚಿತ್ರಿಸಲು, ಬಣ್ಣಗಳನ್ನು ರಚಿಸಲು ಮತ್ತು ಮಕ್ಕಳಿಗೆ ಛಾಯಾಗ್ರಹಣವನ್ನು ಕಲಿಸಲು ಪ್ರಾರಂಭಿಸಿದೆ. ಇದು ಮಕ್ಕಳು ಮತ್ತು ನನ್ನ ನಡುವಿನ ಸಂಭಾಷಣೆಯ ಜಗತ್ತನ್ನು ತೆರೆಯಿತು. ನಾನು ಅವರ ಕಥೆಗಳನ್ನು ಕೇಳಿದೆ, ಅವರ ಜೀವನವನ್ನು ಫೋಟೊಗಳಲ್ಲಿ ದಾಖಲಿಸಿದೆ. ನಾನು ಅವರೊಂದಿಗೆ ಮಾತನಾಡಿದ ನಂತರ, ಅವರೊಂದಿಗೆ ಆಟವಾಡಿದ ನಂತರ, ನೃತ್ಯ ಮಾಡಿದ ನಂತರ ಮತ್ತು ಅವರೊಂದಿಗೆ ಹಾಡಿದ ನಂತರ ಫೋಟೊಗಳನ್ನು ತೆಗೆದುಕೊಳ್ಳುವುದು ಒಂದು ರೀತಿಯ ಸಂಭ್ರಮಾಚರಣೇಯಾಗಿರುತ್ತಿತ್ತು. ನಾನು ಅವರೊಂದಿಗೆ ಅವರ ಮನೆಗಳಿಗೆ ಹೋದೆ, ಅವರೊಂದಿಗೆ ಊಟ ಮಾಡಿದೆ, ಅವರ ಹೆತ್ತವರೊಂದಿಗೆ ಮಾತನಾಡಿದೆ. ಜನರೊಂದಿಗೆ ಸಂಭಾಷಣೆ ನಡೆಸಿದ ನಂತರ, ಅವರೊಂದಿಗೆ ಜೀವನ ಮತ್ತು ಸಮಯವನ್ನು ಹಂಚಿಕೊಂಡ ನಂತರ ನಾನು ಫೋಟೊ ತೆಗೆದರೆ ಮ್ಯಾಜಿಕ್ ಸಂಭವಿಸುತ್ತದೆ ಎಂದು ನಾನು ಅರಿತುಕೊಂಡೆ.

ಕಳೆದ 22 ವರ್ಷಗಳಲ್ಲಿ, ಎಳಿಲ್ ಅಣ್ಣ ಅವರು ಕಳಿಮಣ್ನ್ ವಿರಳ್ಗಳ್ ಪ್ರಾರಂಭಿಸಿದಾಗಿನಿಂದ ಅವರು ಸ್ಪರ್ಶಿಸಿದ ಪ್ರತಿಯೊಂದು ಬದುಕಿಗೆ ಮ್ಯಾಜಿಕ್ ಮತ್ತು ಬೆಳಕನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. "ನಾವು ಬುಡಕಟ್ಟು ಮಕ್ಕಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತೇವೆ. ನಾವು ಅವರಿಗೆ ಶಿಕ್ಷಣದ ಮಹತ್ವವನ್ನು ಕಲಿಸುತ್ತೇವೆ. ನಾವು ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯನ್ನು ಸಹ ಕಲಿಸುತ್ತೇವೆ. ಮಕ್ಕಳು ಆತ್ಮರಕ್ಷಣೆಯಲ್ಲಿ ತರಬೇತಿ ಪಡೆದಾಗ ಅವರು ಆತ್ಮವಿಶ್ವಾಸವನ್ನು ಪಡೆಯುವುದನ್ನು ನಾವು ನೋಡಬಹುದು" ಎಂದು ಅವರು ಹೇಳುತ್ತಾರೆ.  ನಮ್ಮ ಮಕ್ಕಳನ್ನು ನಂಬುವುದು, ತರ್ಕಬದ್ಧ ಚಿಂತನೆ ಮತ್ತು ಆಲೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಳೆಸುವುದು ಅವರ ಉದ್ದೇಶವಾಗಿದೆ.

"ಎಲ್ಲರೂ ಸಮಾನರು ಎಂದು ನಾವು ಬಲವಾಗಿ ನಂಬುತ್ತೇವೆ ಮತ್ತು ಅದನ್ನೇ ಅವರಿಗೆ ಕಲಿಸುತ್ತೇವೆ" ಎಂದು ಅವರು ಹೇಳುತ್ತಾರೆ. "ಮತ್ತು ಅವರ ಸಂತೋಷದಲ್ಲಿ ನಾನು ನನ್ನ ಸಂತೋಷವನ್ನು ಕಂಡುಕೊಳ್ಳುತ್ತೇನೆ."

PHOTO • M. Palani Kumar

ಕೊಯಮತ್ತೂರಿನ ಶಾಲೆಯೊಂದರಲ್ಲಿ ಮಕ್ಕಳ ಮುಗುಳ್ನಗೆಯಿಂದ ಕೋಣೆಯನ್ನು ತುಂಬಿರುವ 'ಕನ್ನಡಿ' ಎಂಬ ನಾಟಕೀಯ ವ್ಯಾಯಾಮವನ್ನು ಎ ಳಿ ಲ್ ಅ ಣ್ಣ ಮುನ್ನಡೆಸುತ್ತಿದ್ದಾರೆ

PHOTO • M. Palani Kumar

ಳಿ ಲ್ ಅಣ್ಣ ಮತ್ತು ಅವರ ತಂಡವು ನಾಗಪಟ್ಟಿನಂನಲ್ಲಿ ಪಕ್ಷಿಗಳ ಬಗ್ಗೆ ನಾಟಕವನ್ನು ಅಭಿನಯಿಸುತ್ತಿ ರುವುದು

PHOTO • M. Palani Kumar

ತಿರುವಣ್ಣಾಮಲೈನಲ್ಲಿ ಮುಖವಾಡಗಳು, ವೇಷಭೂಷಣಗಳು ಮತ್ತು ಚಿತ್ರಿಸಿದ ಮುಖಗಳೊಂದಿಗೆ ಲಯನ್ ಕಿಂಗ್ ಎಂಬ ನಾಟಕವನ್ನು ಪ್ರದರ್ಶಿಸಲು ಸಿದ್ಧ ವಾಗಿರುವುದು

PHOTO • M. Palani Kumar

ಸತ್ಯಮಂಗಲಂನಲ್ಲಿ ಮಕ್ಕಳೊಂದಿಗೆ ಎ ಳಿ ಲ್ ಅಣ್ಣ. ನೀವು ಮಕ್ಕಳನ್ನು ಅವ ಬದುಕಿನಿಂದ ಹೊರತೆಗೆಯಲು ಸಾಧ್ಯವಿಲ್ಲ. ಮಕ್ಕಳ ವಿಷಯಕ್ಕೆ ಬಂದಾಗ ಅವ ರು ಮೋಡಿ ಗಾರ ಮತ್ತು ಕ್ರಿ ಯಾಶೀಲ ವ್ಯಕ್ತಿ

PHOTO • M. Palani Kumar

ಜಾವಧು ಬೆಟ್ಟಗಳಲ್ಲಿ, ಮಕ್ಕಳು ತಾವು ತಯಾರಿಸಿದ ಕಾಗದದ ಮುಖವಾಡಗಳೊಂದಿಗೆ ಪೋಸ್ ನೀಡು ತ್ತಿರುವುದು

PHOTO • M. Palani Kumar

ಕಾಂಚೀಪುರಂನ ಶ್ರವಣ ಮತ್ತು ವಾಕ್ ದೌರ್ಬಲ್ಯವುಳ್ಳ ಮಕ್ಕಳ ಶಾಲೆಯೊಂದರಲ್ಲಿ ಒರಿಗಾಮಿ ಕಾರ್ಯಾಗಾರದ ಸಮಯದಲ್ಲಿ ತಯಾರಿಸಿದ ಕಾಗದದ ಚಿಟ್ಟೆಗಳಿಂದ ಸುತ್ತುವರೆದಿರುವ ಮಗು

PHOTO • M. Palani Kumar

ಪೆರಂಬಲೂರಿನಲ್ಲಿ, ಮಕ್ಕಳು ರಂಗದ ಅಲಂಕಾರಕ್ಕಾಗಿ ತಮ್ಮದೇ ಆದ ಪೋಸ್ಟರ್ ಗಳನ್ನು ಬಿಡಿಸು ತ್ತಿರುವುದು . ವೇದಿಕೆಯನ್ನು ಕಾಗದ ಮತ್ತು ಬಟ್ಟೆಯಿಂದ ಮಾಡಲಾ ಗಿದೆ

PHOTO • M. Palani Kumar

ಳಿ ಲ್ ಅ ಣ್ಣ ಮತ್ತು ಮಕ್ಕಳು ಜಾವಧು ಬೆಟ್ಟಗಳಲ್ಲಿ ತಮ್ಮ ಸುತ್ತಲಿನ ಮರಗ ಕೊಂಬೆಗಳನ್ನು ಬಳಸಿಕೊಂಡು ಪ್ರಾಣಿಗಳ ಮಾದರಿಯನ್ನು ತಯಾರಿಸು ತ್ತಿರುವುದು

PHOTO • M. Palani Kumar

ನಾಗಪಟ್ಟಣಂನ ಶಾಲೆಯ ಆವರಣದಲ್ಲಿ ಮಕ್ಕಳೊಂದಿಗೆ ಕುಳಿತು ಕೊಂಡಿರು ವುದು

PHOTO • M. Palani Kumar

ಕಾಂಚೀಪುರಂನ ಶ್ರವಣದೋಷವುಳ್ಳ ಮಕ್ಕಳಿಗಾಗಿ ಶಾಲೆಯಲ್ಲಿನ ಹಾಸ್ಟೆಲ್ ಮಕ್ಕಳು ಹಳೆಯ ಸಿಡಿಗ ಳನ್ನು ಬಳಸಿ ಪ್ರಾಪರ್ಟಿ ಗಳನ್ನು ತಯಾರಿಸುತ್ತಿ ರುವುದು

PHOTO • M. Palani Kumar

ಸೇಲಂನ ಶಾಲೆಯಲ್ಲಿ ಮಕ್ಕಳು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸು ತ್ತಿರುವುದು

PHOTO • M. Palani Kumar

ವಸ್ತುಪ್ರದರ್ಶನ ದಿನದಂದು ಮಕ್ಕಳೊಂದಿಗೆ ಎ ಳಿ ಲ್ ಅಣ್ಣ ಅವರು ಸತ್ಯಮಂಗಲಂನ ಶಿಬಿರದಲ್ಲಿ ಮಾಡಿದ ಕಲಾಕೃತಿಗಳನ್ನು ನೋಡಲು ಹಳ್ಳಿಯನ್ನು ಸ್ವಾಗತಿಸು ತ್ತಿದ್ದಾರೆ

PHOTO • M. Palani Kumar

ಕಾವೇರಿಪಟ್ಟಣಂನಲ್ಲಿ ಪ್ರದರ್ಶನ ದಿನದಂದು ಎ ಳಿ ಲ್ ಅಣ್ಣ ಅವರು ಪೊಯಿ ಕಾ ಲ್ ಕು ದು ರೈ ಟ್ಟಂ ಎಂಬ ಜಾನಪದ ನೃತ್ಯವನ್ನು ಪರಿಚಯಿಸಿದರು. ಪೊಯಿ ಕಾ ಲ್ ಕು ದು ರೈ, ಅಥವಾ ನಕಲಿ ಕಾಲುಗಳನ್ನು ಹೊಂದಿರುವ ಕುದುರೆಯನ್ನು ಕಾರ್ಡ್ ಬೋರ್ಡ್ ಮತ್ತು ಬಟ್ಟೆಯಿಂದ ತಯಾರಿಸಲಾಗುತ್ತದೆ

PHOTO • M. Palani Kumar

ಕಾವೇರಿಪಟ್ಟಣದಲ್ಲಿ ಶಿಬಿರದ ಕೊನೆಯ ದಿನ, ಎ ಳಿ ಲ್ ಅಣ್ಣನ ತಂಡ ಮತ್ತು ಮಕ್ಕಳು 'ಪಾ ಪ್ರ ಪ ಬೈ ಬೈ ಬೈ, ಬೈ ಬೈ ಪಾ ಪ್ರಪ ' ಎಂದು ಕೂಗುತ್ತಾ ವಿದಾಯ ಹೇಳುತ್ತಿರುವುದು

ವಿಡಿಯೋ ನೋಡಿ: ನಾಗಪಟ್ಟಿಣಂನಲ್ಲಿ ಮಕ್ಕಳನ್ನು ಹಾಡಿ ಕುಣಿಸುವ ಆರ್. ಎಳಿಲರಸನ್

ಲೇಖಕರು ಕವಿತಾ ಮುರಳೀಧರನ್ ಅವರಿಗೆ ಅನುವಾದದ ವಿಷಯದಲ್ಲಿ ಮಾಡಿದ ಕೆಲಸಗಳಿಗೆ ಮತ್ತು ಸಲಹೆಗಳನ್ನು ನೀಡಿದ ಅಪರ್ಣಾ ಕಾರ್ತಿಕೇಯನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ .

ವಿ.ಸೂ : ಈ ಪ್ರಬಂಧವು ಪ್ರಕಟಣೆಗೆ ಸಿದ್ಧವಾಗುತ್ತಿದ್ದಂತೆ, ಜುಲೈ 23, 2022ರಂದು, ಆರ್. ಎ ಳಿಲ ರಸನ್ ಅವರು Guillain-Barré syndrome ( ಗ್ಯುಲೈನ್- ಬಾರ್ರೆ ಸಿಂ ಡ್ರೋಮ್)ನಿಂದ ಬಳಲುತ್ತಿದ್ದರು, ಇದು ದೇಹದ ರೋಗನಿರೋಧಕ ವ್ಯವಸ್ಥೆಯು ನರಗಳ ಮೇಲೆ ದಾಳಿ ಮಾಡುವ ಗಂಭೀರ ನರ ಶಾಸ್ತ್ರಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದೆ. ಈ ರೋಗವು ಬಾಹ್ಯ ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಅನುವಾದ : ಶಂಕರ . ಎನ್ . ಕೆಂಚನೂರು

M. Palani Kumar

M. Palani Kumar is PARI's Staff Photographer and documents the lives of the marginalised. He was earlier a 2019 PARI Fellow. Palani was the cinematographer for ‘Kakoos’, a documentary on manual scavengers in Tamil Nadu, by filmmaker Divya Bharathi.

Other stories by M. Palani Kumar
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru