ಪೂನಮ್ ರಾಣಿಯ ಕೂದಲನ್ನು ಎರಡು ಭಾಗಗಳನ್ನಾಗಿಸಿ, ಎಣ್ಣೆ ಹಚ್ಚಿ ಜಡೆಗಳನ್ನು ಬಿಗಿಯಾಗಿ ಹೆಣೆದು ಇನ್ನೇನು ರಬ್ಬರ್ ಬ್ಯಾಂಡ್ ಹಾಕಬೇಕೆನ್ನುವಷ್ಟರಲ್ಲಿ ರಾಣಿ ಎದ್ದು ತನ್ನ ಸ್ನೇಹಿತರು ಮತ್ತು ಒಡಹುಟ್ಟಿದವರೊಡನೆ ಆಡಲು ಹೊರಗೆ ಓಡಿದಳು. ʼʼದೋಸ್ತ್ ಸಬ್ ಆಬಿತೈ, ಈ ಸಬ್ ಸಾಂಜ್ ಹೋಯಿತೇ ಘೌರ್ ಸಾ ಭೈಗ್ ಜೈ ಚೈ ಖೇಲಾ ಲೇಲ್ [ಸ್ನೇಹಿತರು ಬಂದ ತಕ್ಷಣ, ಅವರೆಲ್ಲರೂ ಸಂಜೆ ಆಟವಾಡಲು ಹೊರಡುತ್ತಾರೆ]ʼʼ ಎಂದು ಪೂನಮ್ ದೇವಿ ತನ್ನ ಮಕ್ಕಳ ಬಗ್ಗೆ ಹೇಳುತ್ತಾ ಅಡುಗೆ ಸಿದ್ಧಪಡಿಸುತ್ತಿದ್ದರು. ರಾಣಿ, ಅವರ ಎಂಟು ವರ್ಷದ, ಎರಡನೇ ಮಗಳು.
ಪೂನಮ್ ಅವರಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಆದರೆ ಅವರ ನಾಲ್ಕು ಮಕ್ಕಳಲ್ಲಿ ಕಿರಿಯವನಾದ ಮಗನಿಗೆ ಮಾತ್ರವೇ ಜನ್ಮ ಪ್ರಮಾಣ ಪತ್ರ ಮಾಡಿಸಲಾಗಿದೆ. "ಹಮ್ರಾ ಲಾಗ್ ಮೇ ಎತ್ತೆ ಪಾಯಿ ರಹಿತಾಯ್ ತಾ ಬನ್ವಾಯೇ ಲೇತಿಯೇ ಸಬ್ ಕೇ [ನನ್ನ ಬಳಿ ಹಣವಿದ್ದಿದ್ದರೆ, ಉಳಿದ ಮೂವರಿಗೂ ಅದು ಸಿಕ್ಕುತ್ತಿತ್ತು]” ಎಂದು ಅವರು ಹೇಳುತ್ತಾರೆ.”
ಅವರ ಅರೆಬರೆ ನಿರ್ಮಿತ ಮನೆಗೆ ಬಿಹಾರದ ಗ್ರಾಮೀಣ ಪ್ರದೇಶದ ಅನೇಕ ಮನೆಗಳಿಗಿರುವಂತೆ ಬಿದಿರಿನಿಂದ ನಿರ್ಮಿಸಲಾದ ಬೇಲಿಯಿದೆ. ದಿನಗೂಲಿ ಕಾರ್ಮಿಕರಾಗಿರುವ ಮನೋಜ್ (38) ಅವರನ್ನು ವಿವಾಹವಾದ ಅವರು ಬಿಹಾರದ ಮಧುಬನಿ ಜಿಲ್ಲೆಯ ಬೇನಿಪಟ್ಟಿ ಬ್ಲಾಕ್‌ನ ಏಕ್ತಾರಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಮನೋಜ್ ತಿಂಗಳಿಗೆ ಸುಮಾರು 6,000 ರೂ. ಗಳಿಸುತ್ತಾರೆ.
"ನನಗೆ ಈಗ 25 ವರ್ಷ ಮತ್ತು ಕೆಲವು ತಿಂಗಳುಗಳು" ಎಂದು ಪೂನಂ ಹೇಳುತ್ತಾರೆ [ಲೇಖನದಲ್ಲಿರುವ ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ). "ನನ್ನ ಆಧಾರ್ ಕಾರ್ಡ್ ನನ್ನ ಗಂಡನ ಹತ್ತಿರವಿದೆ. ಅವರು ಇದೀಗ ಮನೆಯಲ್ಲಿಲ್ಲ. ಮದುವೆಯಾದಾಗ ನನಗೆ ಎಷ್ಟು ವಯಸ್ಸಾಗಿತ್ತು ಎಂದು ನನಗೆ ಖಚಿತವಾಗಿ ನೆನಪಿಲ್ಲ." ಅವರಿಗೆ ಈಗ 25 ವರ್ಷವೆಂದರೆ ಮದುವೆಯ ಸಮಯದಲ್ಲಿ ಅಂದಾಜು 14 ವರ್ಷವಿದ್ದಿರಬಹುದು.
ಪೂನಮ್ ಎಲ್ಲ ಮಕ್ಕಳಿಗೂ ಮನೆಯಲ್ಲೇ ಜನ್ಮ ನೀಡಿದರು. "ದಾಯಿ (ಸೂಲಗಿತ್ತಿ) ಪ್ರತಿ ಹೆರಿಗೆಗೂ ಸಹಾಯ ಮಾಡಿದ್ದರು. ಪರಿಸ್ಥಿತಿ ಗಂಭೀರವೆಂದು ಕಂಡುಬಂದರೆ ಮಾತ್ರ ನಾವು ಆಸ್ಪತ್ರೆಗಳಿಗೆ ಹೋಗುವುದನ್ನು ಪರಿಗಣಿಸುತ್ತೇವೆ" ಎಂದು ಮನೋಜ್ ಅವರ ಚಿಕ್ಕಮ್ಮ 57 ವರ್ಷದ ಶಾಂತಿ ದೇವಿ ಹೇಳುತ್ತಾರೆ. ಅವರು ಅದೇ ಮೊಹಲ್ಲಾದಲ್ಲಿ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದು ಪೂನಮ್ ಅವರನ್ನು ತನ್ನ ಸ್ವಂತ ಸೊಸೆಯಂತೆ ಕಾಳಜಿ ಮಾಡುತ್ತಾರೆ.
"ನಮ್ಮಲ್ಲಿನ ಹೆಚ್ಚಿನವರಂತೆ, ಪೂನಮ್‌ಗೆ ಜನನ ಪ್ರಮಾಣಪತ್ರವನ್ನು ಪಡೆಯುವ ವಿಧಾನ ತಿಳಿದಿರಲಿಲ್ಲ" ಎಂದು ಶಾಂತಿ ದೇವಿ ಹೇಳುತ್ತಾರೆ. "ಅದನ್ನು ಮಾಡಿಸಲು, ಜಿಲ್ಲಾ ಆಸ್ಪತ್ರೆಗೆ ಹೋಗಿ ನಿರ್ದಿಷ್ಟ ಪ್ರಮಾಣದ ಹಣವನ್ನು ಪಾವತಿಸಬೇಕು. ಎಷ್ಟೆನ್ನುವುದು ನನಗೂ ಗೊತ್ತಿಲ್ಲ."
ಜನನ ಪ್ರಮಾಣಪತ್ರಕ್ಕೆ ಹಣ ನೀಡಬೇಕೆ?
" ತಕ್ಖನ್ ಕಿ [ಖಂಡಿತವಾಗಿಯೂ]! ಅವರು ಇಲ್ಲಿ ಅದನ್ನು ಪ್ರಮಾಣಪತ್ರ ಉಚಿತವಾಗಿ ನೀಡುವುದಿಲ್ಲ. ಅವರು ಬೇರೆಡೆ ಹಾಗೆಯೇ ಕೊಡುತ್ತಾರೆಯೇ?" ಪೂನಮ್ 'ಅವರು' ಎನ್ನುತ್ತಿರುವುದು ಆಶಾ ಕಾರ್ಯಕರ್ತೆಯರ ಕುರಿತು (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು) ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು. "ಪಾಯ್ ಲೈ ಛಾಯ್, ಓಹಿ ದುವಾರೆ ನೈ ಬನ್ಬಾಯಿ ಛಿಯಾಯ್ [ಅವರೆಲ್ಲರೂ ಹಣ ಕೇಳುತ್ತಾರೆ ಹೀಗಾಗಿಯೇ ನಮಗೆ ಪ್ರಮಾಣಪತ್ರ ಮಾಡಿಸಲು ಸಾಧ್ಯವಾಗಲಿಲ್ಲ" ಎಂದು ಶಾಂತಿ ಹೇಳುತ್ತಾರೆ.]
ಪೂನಮ್ ಮತ್ತು ಶಾಂತಿ ದೇವಿ ಇಬ್ಬರೂ - ಮತ್ತು ಈ ಮೊಹಲ್ಲಾದಲ್ಲಿರುವ ಪ್ರತಿಯೊಬ್ಬರೂ ಮೈಥಿಲಿ ಭಾಷೆ ಮಾತನಾಡುತ್ತಾರೆ. ಈ ಭಾಷೆಯು ದೇಶದಲ್ಲಿ 1.3 ದಶಲಕ್ಷಕ್ಕೂ ಹೆಚ್ಚು ಭಾಷಿಕರನ್ನು ಹೊಂದಿದೆ, ಮುಖ್ಯವಾಗಿ ಬಿಹಾರದ ಮಧುಬನಿ, ದರ್ಭಂಗಾ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ಈ ಭಾಷೆಯ ಜನರು ಆದಿಕವಾಗಿದ್ದಾರೆ. ಇದು ನೆರೆಯ ನೇಪಾಳದಲ್ಲಿ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, ಏಕ್ತಾರಾದಲ್ಲಿರುವ ಪ್ರಾಥಮಿಕ್ ಸ್ವಾಸ್ಥ್ಯ ಕೇಂದ್ರವು (ಪ್ರಾಥಮಿಕ ಆರೋಗ್ಯ ಕೇಂದ್ರ) ಪೂನಮ್ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿದೆ. ಕಾಂಪೌಂಡರ್ ಕಾಣಿಸಿಕೊಳ್ಳುವ ಅಪರೂಪದ ದಿನಗಳನ್ನು ಹೊರತುಪಡಿಸಿ, ಪಿಎಚ್‌ಸಿ ಹೆಚ್ಚಾಗಿ ಮುಚ್ಚಿರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. "ಕೊನೆಯ ಬಾರಿಗೆ ಅವರು ಇಲ್ಲಿಗೆ ಬಂದಿರುವುದು ಮೂರು ದಿನಗಳ ಹಿಂದೆ. ಅವರು ಸಾಮಾನ್ಯವಾಗಿ ವಾರಕ್ಕೆ ಎರಡು ಬಾರಿ ಆಸ್ಪತ್ರೆಯನ್ನು ತೆರೆಯುತ್ತಾರೆ, ಆದರೆ ವೈದ್ಯರು ಸಹ ವಿರಳವಾಗಿ ಬರುತ್ತಾರೆ ಮತ್ತು ನಾವು ಅವರನ್ನು ತಿಂಗಳುಗಳಿಂದ ನೋಡಿಲ್ಲ" ಎಂದು ಪೂನಮ್ ಅವರ ನೆರೆಯ ರಾಜ್ ಲಕ್ಷ್ಮಿ ಮಹತೋ ಹೇಳುತ್ತಾರೆ, ಅವರು 50ರ ಪ್ರಾಯದವರು. "ದುಲಾರ್ ಚಂದ್ರ ಅವರ ಪತ್ನಿ ಇಲ್ಲಿನ ದಾಯಿ. ನಾವೆಲ್ಲರೂ ಅವರನ್ನೇ ಹೆರಿಗೆಗೆ ಕರೆಯುತ್ತೇವೆ. ಅವರು ಹತ್ತಿರದ ಹಳ್ಳಿಯಲ್ಲಿ ವಾಸಿಸುತ್ತಾರೆ. ಅವರು ವಿಶ್ವಾಸಾರ್ಹ ಮಹಿಳೆ."
ರಿಸರ್ಚ್ ರಿವ್ಯೂ ಇಂಟರ್ ನ್ಯಾಷನಲ್ ಜರ್ನಲ್‌ನಲ್ಲಿ ಪ್ರಕಟವಾದ 2019ರ ವರದಿಯು ಹೀಗೆ ಹೇಳುತ್ತದೆ: "ನೀತಿ ಆಯೋಗದ ಪ್ರಕಾರ, ಭಾರತದಲ್ಲಿ 6 ಲಕ್ಷ ವೈದ್ಯರು, 20 ಲಕ್ಷ ದಾದಿಯರು ಮತ್ತು 2 ಲಕ್ಷ ದಂತ ಶಸ್ತ್ರಚಿಕಿತ್ಸಕರ ಕೊರತೆಯಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) 1:1,000 ರೋಗಿಗಳ ಅನುಪಾತಕ್ಕೆ ವೈದ್ಯರನ್ನು ಶಿಫಾರಸು ಮಾಡಿದರೂ, ಗ್ರಾಮೀಣ ಭಾರತದಲ್ಲಿ ಇದು 1:11,082 ಮತ್ತು ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಇದು 1:28,391ರಷ್ಟು ಕಡಿಮೆಯಿದೆ ಮತ್ತು ಉತ್ತರ ಪ್ರದೇಶದಲ್ಲಿ ಇದು 1:19,962."
"ಭಾರತದ 1.14 ದಶಲಕ್ಷ ನೋಂದಾಯಿತ [ಅಲೋಪತಿಕ್] ವೈದ್ಯರಲ್ಲಿ ಸುಮಾರು 80%ರಷ್ಟು ವೈದ್ಯರು ದೇಶದ ಜನಸಂಖ್ಯೆಯ ಕೇವಲ 31%ರಷ್ಟು ಜನರು ವಾಸಿಸುವ ನಗರಗಳಲ್ಲಿ ಕೆಲಸ ಮಾಡುತ್ತಾರೆ" ಎಂದು ವರದಿಯು ಹೇಳುತ್ತದೆ. ಪಿಎಚ್‌ಸಿಗಳು, ಜಿಲ್ಲಾ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಂತಹ ಭೌತಿಕ ಮೂಲಸೌಕರ್ಯಗಳದ್ದೂ ಇದು ಅದೇ ಕಥೆ. ಇದು ಪೂನಮ್ ಮನೆಗೆ ಪಿಎಚ್ ಸಿಯ ಸಾಮೀಪ್ಯವನ್ನು ಇನ್ನಷ್ಟು ವಿಪರ್ಯಾಸಕರಗೊಳಿಸುತ್ತದೆ.
ನಾವು ಪೂನಮ್ ಅವರ ಮನೆಯ ದಲಾನ್‌ನಲ್ಲಿ ನಿಂತು ಮಾತನಾಡುತ್ತಿದ್ದೆವು - ವರಾಂಡ ಮತ್ತು ಮನೆಯ ಕೋಣೆಗಳ ನಡುವಿನ ಅರೆ ತೆರೆದ ಪ್ರದೇಶ. ಬಿಹಾರದಲ್ಲಿ, ದಲಾನ್ ಅನ್ನು ಹೆಚ್ಚಾಗಿ ಪುರುಷರು ಅಥವಾ ಹಿರಿಯರು ವಾಸಸ್ಥಳವಾಗಿ ಬಳಸುತ್ತಾರೆ. ಸ್ವಲ್ಪ ಸಮಯದ ನಂತರ, ನೆರೆಹೊರೆಯ ಇನ್ನೂ ಕೆಲವು ಮಹಿಳೆಯರು ನಮ್ಮೊಂದಿಗೆ ಸೇರಿಕೊಂಡರು. ಅವರು ಕೋಣೆಯೊಳಗೆ ಹೋಗಲು ಬಯಸಿದರಾದರೂ, ನಾವು ದಲಾನ್‌ನಲ್ಲಿಯೇ ಮಾತುಕತೆ ಮುಂದುವರೆಸಿದೆವು.
"ನನ್ನ ಮಗಳ ಹೆರಿಗೆಯ ಸಮಯದಲ್ಲಿ, ನಾವು ಬೆನಿಪಟ್ಟಿ ಆಸ್ಪತ್ರಾಲ್ (ಆಸ್ಪತ್ರೆಗೆ) ಧಾವಿಸಿದೆವು. ಡೆಲಿವರಿಯನ್ನು ಮೊದಲು ಮನೆಯಲ್ಲಿಯೇ ಮಾಡಲು ಯೋಜಿಸಲಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ದಾಯಿ ಊರಿನಲ್ಲಿಲ್ಲವೆಂದು ಎಂದು ನಮಗೆ ತಿಳಿಯಿತು. ಆದ್ದರಿಂದ ನಾನು ಮತ್ತು ನನ್ನ ಮಗ ಅವಳನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದೆವು. ಹೆರಿಗೆಯಾದ ನಂತರ, ಕರ್ತವ್ಯದಲ್ಲಿದ್ದ ನರ್ಸ್ ನಮ್ಮ ಬಳಿ 500 ರೂಪಾಯಿಗಳನ್ನು ಕೇಳಿದಳು. ನಮ್ಮಿಂದ ಆ ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಅವಳಿಗೆ ಹೇಳಿದೆ ಮತ್ತು ಇದರ ಪರಿಣಾಮವಾಗಿ, ಅವಳು ಜನನ ಪ್ರಮಾಣಪತ್ರವನ್ನು ಪಡೆಯಲು ನಮ್ಮನ್ನು ಹೆಣಗಾಡುವಂತೆ ಮಾಡಿದಳು" ಎಂದು ರಾಜ್ ಲಕ್ಷ್ಮಿ ಹೇಳುತ್ತಾರೆ.
ಮತ್ತು ಆ ಅನುಭವವು, ಆರೋಗ್ಯ ಸರಪಳಿಯ ಅತ್ಯಂತ ಕೆಳತುದಿಯಲ್ಲಿ, ಇಲ್ಲಿ ಬಡ ಮಹಿಳೆಯರು ಎದುರಿಸುತ್ತಿರುವ ಹಿಂಸೆ, ವ್ಯಂಗ್ಯ ಮತ್ತು ಸಂದಿಗ್ಧತೆಗಳ ಕಥೆಯನ್ನು ಒಟ್ಟಾಗಿ ತೋರಿಸುತ್ತದೆ.
ಮೂಲ ಸೌಕರ್ಯದ ಕೊರತೆಯೊಡನೆ, ಮುಖ ತೋರಿಸದ ವೈದ್ಯರಯ, ಕೈಗೆಟುಕದ ಅಥವಾ ಅಪಾಯಕಾರಿ ರೂಪದಲ್ಲಿ ಅಸಮರ್ಥವಾಗಿರುವ ಖಾಸಗಿ ವೈದ್ಯಕೀಯ ಸೇವೆಗಳು ಬಡ ಮಹಿಳೆಯರು ಆಶಾಗಳ ಸಹಾಯದ ಮೇಲೆ ಹೆಚ್ಚು ಅವಲಂಬಿತರಾಗುವಂತೆ ಮಾಡಿವೆ. ಗ್ರಾಮ ಗ್ರಾಮ ಮಟ್ಟದಲ್ಲಿ ಕೋವಿಡ್ ವಿರುದ್ಧದ ಯುದ್ಧದ ಮುಂಚೂಣಿಯಲ್ಲಿದ್ದರೆ, ಅದು ಆಶಾ ಕಾರ್ಯಕರ್ತೆಯರು ಮಾತ್ರ.
ಎಲ್ಲರೂ ಸುರಕ್ಷತೆಗಾಗಿ ಚಡಪಡಿಸುತ್ತಾ ಮನೆಯಲ್ಲೇ ತಮ್ಮನ್ನು ಬಂಧಿಸಿಕೊಳ್ಳುತ್ತಿದ್ದ ಸಮಯದಲ್ಲಿ, ಈ ಆಶಾ ಕಾರ್ಯಕರ್ತೆಯರು ಮನೆಯಿಂದ ಹೊರನಡೆದು ಊರಿನ ಮನೆಬಾಗಿಲುಗಳನ್ನು ಎಡತಾಕುತ್ತಿದ್ದರು. ಲಸಿಕೆಗಳು, ಔಷಧಿ ವಿತರಣೆ, ಪ್ರಸವಪೂರ್ವ ಮತ್ತು ಪ್ರಸವದ ನಂತರದ ಆರೈಕೆಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ಬಳಿ ಹೋಗುತ್ತಿದ್ದರು. ಈ ಕೆಲಸಗಳಲ್ಲದೆ ಅವರಿಗೆ ನಿಯೋಜಿಸಲಾದ ಇತರ ವಿವಿಧ ಕಾರ್ಯಗಳನ್ನೂ ಸಹ ಅವರು ಮಾಡಬೇಕಿತ್ತು.
ಆದ್ದರಿಂದಲೇ ಸಣ್ಣ ಭ್ರಷ್ಟಾಚಾರವು ಸ್ಥಳೀಯ ಆಕ್ಸಿಲರಿ ನರ್ಸ್ ವಿಡ್‌ವೈಫ್ (ಎಎನ್ಎಂ), ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮಟ್ಟದಲ್ಲಿ ತಲೆ ಎತ್ತಿದಾಗ, ಪೂನಮ್ ಮತ್ತು ರಾಜ್ ಲಕ್ಷ್ಮಿಯಂತಹ ಮಹಿಳೆಯರು ಅಸಹಾಯಕರಾಗಿಬಿಡುತ್ತಾರೆ. ನಮಗೆ ಬೇಡಿಕೆಯ ಮೊತ್ತವು ಚಿಕ್ಕದಾಗಿ ಕಾಣಿಸಬಹುದು ಆದರೆ ಇಲ್ಲಿನ ಬಡ ಮಹಿಳೆಯರಿಗೆ, ಈ ಮೊತ್ತಗಳು ಅವರು ಭರಿಸಬಹುದಾದುದಕ್ಕಿಂತ ಹೆಚ್ಚು.
ಈ ರೀತಿ ಲಂಚ ಕೇಳುವ ಕೆಲವರು ಸೇರಿದಂತೆ ಆಶಾ ಕಾರ್ಯಕರ್ತೆಯರೆಲ್ಲರೂ ತೀವ್ರ ಒತ್ತಡದಲ್ಲಿದ್ದಾರೆ. ದೇಶಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದಾರೆ. ಅವರ ಮುಖ್ಯ ಕೆಲಸವೆಂದರೆ ಭಾರತದ ಗ್ರಾಮೀಣ ಜನರನ್ನು ಆರೋಗ್ಯ ವ್ಯವಸ್ಥೆಯ ಸಂಪರ್ಕಕ್ಕೆ ತರುವುದು. ಅವರು ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ಹಲವು ಕೆಲಸಗಳನ್ನು ಮಾಡುತ್ತಾರೆ. ದೇಶದ ಅನೇಕ ಭಾಗಗಳಲ್ಲಿ, ಅವರು ಕಳೆದ ವರ್ಷದ ಏಪ್ರಿಲ್ ತಿಂಗಳಿನಿಂದ ಪ್ರತಿದಿನ 25 ಮನೆಗಳಿಗೆ ಭೇಟಿ ನೀಡಬೇಕಿರುತ್ತದೆ. ಮತ್ತು ತಿಂಗಳಲ್ಲಿ ಕನಿಷ್ಟ ನಾಲ್ಕು ಬಾರಿ ಕೊರೊನಾ ವೈರಸ್ ಸಮೀಕ್ಷೆಗಾಗಿ ಆ ಮೆನಗಳಿಗೆ ಭೇಟಿ ನೀಡಬೇಕು. ಇದೆಲ್ಲವನ್ನೂ ಅವರು ಕನಿಷ್ಟ ಸುರಕ್ಷಾ ಸೌಲಭ್ಯಗಳೊಡನೆ ಮಾಡಬೇಕಿದೆ.
2018ರಲ್ಲಿ, ಸಾಂಕ್ರಾಮಿಕ ಪಿಡುಗಿಗೂ ಬಹಳ ಹಿಂದೆಯೇ, ಬಿಹಾರದ 93,687 ಸಂಖ್ಯೆಯ ಆಶಾ ಕಾರ್ಯಕರ್ತೆಯರ ಭಾರತದ ಎರಡನೇ ಅತಿ ದೊಡ್ಡ ಗುಂಪು ಉತ್ತಮ ವೇತನಕ್ಕಾಗಿ ಒತ್ತಾಯಿಸಿ ಬೃಹತ್ ಮುಷ್ಕರವನ್ನು ನಡೆಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು. ಆದರೆ ಆ ನಂತರ ಏನೂ ಬದಲಾಗಲಿಲ್ಲ.
ದರ್ಭಂಗಾದ ಆಶಾ ಮೀನಾ ದೇವಿ ಹೇಳುವಂತೆ: 'ನಾವು ಎಷ್ಟು ಕಡಿಮೆ ಸಂಬಳ ಪಡೆಯುತ್ತೇವೆಯೆನ್ನುವುದು ನಿಮಗೆ ತಿಳಿದಿದೆ. ಅವರು (ನವಜಾತ ಶಿಶುಗಳಿರುವ ಕುಟುಂಬಗಳು) ನಮಗೆ ಸಂತೋಷದಿಂದ ನೀಡುವ ಹಣವನ್ನು ತೆಗೆದುಕೊಳ್ಳದಿದ್ದರೆ ನಾವು ಹೇಗೆ ಬದುಕು ನಡೆಸುವುದು?'
ಈ ವರ್ಷದ ಮಾರ್ಚಿಯಲ್ಲಿ ಆಶಾ ಸಂಯುಕ್ತ ಸಂಘರ್ಷ್ ಮಂಚ್ ನೇತೃತ್ವದಲ್ಲಿ ಅವರು ಮತ್ತೆ ಪ್ರತಿಭಟನೆ ನಡೆಸಿದರು, "ಏಕ್ ಹಜಾರ್ ಮೇ ದಮ್ ನಹಿ, ಇಕೀಸ್ ಹಜಾರ್ ಮಾಸಿಕ್ ಮಂದೇ ಸೇ ಕಮ್ ನಹಿ [1,000 ರೂಪಾಯಿ ಹೆಚ್ಚಳ ಸಾಕಾಗುವುದಿಲ್ಲ, 21,000 ಮಾಸಿಕ ಗೌರವ ಧನಕ್ಕಿಂತ ಕಡಿಮೆಗೆ ಒಪ್ಪಬೇಡಿ)." ಆಶಾ ಕಾರ್ಮಿಕರಿಗೆ ಸರ್ಕಾರಿ ಉದ್ಯೋಗಿ ಸ್ಥಾನಮಾನವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು. ಪ್ರಸ್ತುತ, ಬಿಹಾರದ ಆಶಾ ಕಾರ್ಯಕರ್ತೆಯ ಸರಾಸರಿ ಮಾಸಿಕ ಆದಾಯ 3,000 ರೂಪಾಯಿಗಳಾಗಿದ್ದು ಇದರಲ್ಲಿ ಅವರು ಮಾಡುವ ವಿವಿಧ ಕೆಲಸಗಳಿಗೆ ನೀಡಲಾಗುವ ʼಗೌರವ ಧನವೂʼ ಸೇರಿದೆ.
ಪ್ರತಿ ಬಾರಿ ಮುಷ್ಕರಕ್ಕೆ ಇಳಿದಾಗಲೂ ಸರ್ಕಾರಗಳು ಅವರಿಗೆ ಭರವಸೆಗಳನ್ನು ನೀಡುವಂತೆ ತೋರುತ್ತದೆ - ನಂತರ ತನ್ನ ಬದ್ಧತೆಗಳನ್ನು ನಿರಾಕರಿಸುತ್ತವೆ. ಇಂದಿಗೂ ಅವರಿಗೆ ಇತರೆ ಸರ್ಕಾರಿ ಉದ್ಯೋಗಗಳಂತೆ ಸಂಬಳ, ಪಿಂಚಣಿ ಅಥವಾ ಇತರೆ ಉದ್ಯೋಗ ಭತ್ಯೆಗಳು ಯಾವುದೂ ಸಿಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಶಾ ಕಾರ್ಯಕರ್ತೆ ಅಥವಾ ಅಂಗನವಾಡಿ ಕಾರ್ಯಕರ್ತೆಯಾಗಿ ಬದುಕುವುದು ಮತ್ತು ಕೆಲಸ ಮಾಡುವುದು ತುಂಬಾ ಕಷ್ಟಕರವಾಗುತ್ತದೆ.
ದರ್ಭಂಗಾದ ಆಶಾ ಮೀನಾ ದೇವಿ ಹೇಳುವಂತೆ: 'ನಾವು ಎಷ್ಟು ಕಡಿಮೆ ಸಂಬಳ ಪಡೆಯುತ್ತೇವೆಯೆನ್ನುವುದು ನಿಮಗೆ ತಿಳಿದಿದೆ. ಅವರು (ನವಜಾತ ಶಿಶುಗಳಿರುವ ಕುಟುಂಬಗಳು) ನಮಗೆ ಸಂತೋಷದಿಂದ ನೀಡುವ ಹಣವನ್ನು ತೆಗೆದುಕೊಳ್ಳದಿದ್ದರೆ ನಾವು ಹೇಗೆ ಬದುಕು ನಡೆಸುವುದು?' ನಾವು ಹಣಕ್ಕಾಗಿ ಯಾರನ್ನೂ ಪೀಡಿಸುವುದಿಲ್ಲ ಅಥವಾ ಇಷ್ಟೇ ಹಣ ಕೊಡಬೇಕೆಂದು ಕೇಳುವುದಿಲ್ಲ. ಅವರು ನೀಡಿದ್ದನ್ನು ಸಂತೋಷದಿಂದ ತೆಗೆದುಕೊಳ್ಳುತ್ತೇವೆ. ಅದು ಹೆರಿಗೆಯಾದರೂ ಅಷ್ಟೇ ಜನನ ಪ್ರಮಾಣಪತ್ರಕ್ಕಾದರೂ ಅಷ್ಟೇ.
ಮತ್ತು ಈ ವಿಷಯ ಅವರ ಮತ್ತು ಇತರ ಕೆಲವರ ವಿಷಯದಲ್ಲಿ ನಿಜವಾಗಿರಬಹುದು. ದೇಶಾದ್ಯಂತ ಹಣಕ್ಕಾಗಿ ಬಾಯಿ ಬಿಡದ ಲಕ್ಷಾಂತರ ಆಶಾ ಕಾರ್ಯಕರ್ತರಿದ್ದಾರೆ. ಆದರೆ ಮಧುಬನಿ ಮತ್ತು ಬಿಹಾರದ ಇತರ ಕೆಲವು ಭಾಗಗಳಲ್ಲಿ ಸುಲಿಗೆಗೆ ಸಮನಾದ ಬೇಡಿಕೆಗಳ ಬಗ್ಗೆ ಮಾತನಾಡುವ ಅತ್ಯಂತ ಬಡ ಮಹಿಳೆಯರ ಅನುಭವ ಹಾಗಿಲ್ಲ.
ಮನೋಜ್ ತಮ್ಮ ಪೋಷಕರು ಮತ್ತು ಮೊದಲ ಮೂರು ಮಕ್ಕಳಾದ ಅಂಜಲಿ (10), ರಾಣಿ (8) ಮತ್ತು ಸೋನಾಕ್ಷಿ (5 ) ಮತ್ತು ತನ್ನ ಪತ್ನಿಯೊಡನೆ ಬದುಕುತ್ತಿದ್ದರು. ಆದರೆ ಅವರ ಹೆತ್ತವರು ಈಗ ಬದುಕಿಲ್ಲ. ಅವರ ಮರಣದ ನಂತರ ಅವರ ನಾಲ್ಕನೇ ಮಗು ಮತ್ತು ಒಬ್ಬನೇ ಮಗ ರಾಜ (ಈಗ ಎರಡೂವರೆ ವರ್ಷ) ಜನಿಸಿದ. ಪೂನಂ ಹೇಳುತ್ತಾರೆ, “ನನ್ನ ಅತ್ತೆಗೆ ಕ್ಯಾನ್ಸರ್ ಇತ್ತು. ಯಾವ ಬಗೆ ಕ್ಯಾನ್ಸರ್ ಎಂದು ನನಗೆ ತಿಳಿದಿಲ್ಲ. ಅವರು ಸುಮಾರು 4-5 ವರ್ಷಗಳ ಹಿಂದೆ ತೀರಿಕೊಂಡರು. ಅದರ ನಂತರ, 3 ವರ್ಷಗಳ ಹಿಂದೆ ನನ್ನ ಮಾವ ತೀರಿಕೊಂಡರು. ಅವರು ಮೊಮ್ಮಗನಿಗಾಗಿ ಹಂಬಲಿಸುತ್ತಿದ್ದರು. ರಾಜನನ್ನು ನೋಡಲು ಅವರು ಬದುಕಿರಬೇಕಿತ್ತು," ಎಂದು ಪೂನಮ್ ಹೇಳುತ್ತಾರೆ.
ಪೂನಂ 6ನೇ ತರಗತಿವರೆಗೆ ಮತ್ತು ಅವರ ಪತಿ 10ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಪೂನಂ ಹೇಳುತ್ತಾರೆ, “ನೋಡಿ, ಆರಂಭದಲ್ಲಿ ನನಗೆ ಜನಂ ಪತ್ರಿ (ಜನನ ಪ್ರಮಾಣಪತ್ರ) ಬಗ್ಗೆ ತಿಳಿದಿರಲಿಲ್ಲ. ನನ್ನ ಮೂರನೇ ಮಗು ಹುಟ್ಟಿದ ನಂತರ 'ಆಶಾ' ನನ್ನ ಬಳಿ ಹಣ ಕೇಳಿದಾಗ, ಜನನ ಪ್ರಮಾಣಪತ್ರ ಮಾಡಿಸಬೇಕಿರುತ್ತದೆ ಎಂದು ನನಗೆ ತಿಳಿಯಿತು. ನನಗೆ ನೆನಪಿರುವಂತೆ 300 ರೂಪಾಯಿ ಕೇಳಿದ್ದರು. ಇದು ಸಾಮಾನ್ಯ ಶುಲ್ಕ ಎಂದು ನಾನು ಭಾವಿಸಿದೆ. ಆದರೆ ನಂತರ ಪ್ರಮಾಣಪತ್ರಕ್ಕಾಗಿ ನಾವು ಯಾರಿಗೂ ಹಣ ನೀಡಬೇಕಾಗಿಲ್ಲ ಇದನ್ನು ಆಸ್ಪತ್ರೆಯಿಂದ ಉಚಿತವಾಗಿ ಪಡೆಯುವುದು ನಮ್ಮ ಹಕ್ಕು ಎಂದು ನನ್ನ ಪತಿ ಹೇಳಿದರು."
ಪೂನಂ ಮುಂದುವರೆದು, “ಕಹಲ್‌ಕಯೀ ಅದಾಯಿ ಸೌ ರುಪಯಾ ದಿಯೌ ಹಮ್ ಜನಮ್ ಪತ್ರಿ ಬನ್ವಾ ದೇಬ್ [ನಾನು ಅವಳಿಗೆ 250 ರೂಪಾಯಿ ಕೊಟ್ಟರೆ, ಜನನ ಪ್ರಮಾಣ ಪತ್ರ ಮಾಡಿಸಿಕೊಡುವುದಾಗಿ ಹೇಳಿದಳು] ಆಕೆ 50 ರೂಪಾಯಿ ಕಡಿಮೆ ಮಾಡಿದ್ದರಿಂದಾಗಿ ಮಗನಿಗೆ ಪ್ರಮಾಣ ಪತ್ರ ಮಾಡಿಸಿದೆವು. ಆದರೆ ಮೂವರು ಹೆಣ್ಣು ಮಕ್ಕಳಿಗೆ ಒಟ್ಟು 750 ರೂಪಾಯಿಗಳನ್ನು ಭರಿಸುವುದು ನಮ್ಮಿಂದ ಸಾಧ್ಯವಾಗಲಿಲ್ಲ." ಎಂದು ಪೂನಮ್ ಹೇಳುತ್ತಾರೆ.
ಜನನ ಪ್ರಮಾಣಪತ್ರವನ್ನು ಪಡೆಯುವ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ಪೂನಂ ಹೇಳುತ್ತಾರೆ, “ಅದನ್ನು ಸ್ವತಃ ನಾವೇ ಮಾಡಿಸಲು ಪ್ರಯತ್ನಿಸಿದಲ್ಲಿ, ಅದಕ್ಕಾಗಿ ನಾವು ಬೇನಿಪಟ್ಟಿ ಆಸ್ಪತ್ರೆಗೆ (ಬ್ಲಾಕ್ ಹೆಡ್ ಕ್ವಾರ್ಟರ್ಸ್) ಹೋಗಬೇಕಾಗುತ್ತದೆ. ಅಲ್ಲಿ, ನಾವು ಸಫಾಯಿವಾಲಿಗಳಿಗೆ ಸ್ವಲ್ಪ ಹಣವನ್ನು ಪಾವತಿಸಬೇಕು. ಹೀಗಾಗಿ ಇಲ್ಲಿ ಆಶಾಗೆ ಕೊಡುವುದಿರಲಿ ಅಥವಾ ಬೇನಿಪಟ್ಟಿಯವರೆಗೂ ಹೋಗುವುದಿರಲಿ ಎರಡೂ ರೀತಿಯಲ್ಲಿ ಹಣ ಖರ್ಚು ಮಾಡಬೇಕು. ಹಾಗಾಗಿ ನಾವು ಸುಮ್ಮನಾಗಿಬಿಡುತ್ತೇವೆ. ಭವಿಷ್ಯದಲ್ಲಿ ಆ ಪ್ರಮಾಣಪತ್ರಗಳ ಅಗತ್ಯವಿದ್ದಲ್ಲಿ, ನಂತರ ನೋಡಿದರಾಯಿತು. ನನ್ನ ಪತಿ ಕಷ್ಟಪಟ್ಟು ದುಡಿದು ದಿನಕ್ಕೆ 200 ರೂಪಾಯಿ ಕೂಡಾ ಗಳಿಸುವುದಿಲ್ಲ. ನಾಲ್ಕು ದಿನ ಅವರು ಗಳಿಸುವಷ್ಟು ದುಡ್ಡನ್ನು ಒಂದೇ ದಿನದಲ್ಲಿ ಖರ್ಚು ಮಾಡಿ ಮುಗಿಸುವುದು ಹೇಗೆ?”
ಇದಕ್ಕೆ ತಮ್ಮ ಮಾತನ್ನು ಸೇರಿಸುತ್ತಾ ಶಾಂತಿ ಹೇಳುತ್ತಾರೆ, "ನಾನು ಒಮ್ಮೆ 'ಆಶಾ' ಜೊತೆ ಜಗಳವಾಡಿದ್ದೆ. ಪ್ರಮಾಣಪತ್ರಕ್ಕಾಗಿ ಹಣ ನೀಡಬೇಕೆಂದಾದರೆ ನಾವು ಅದನ್ನು ಮಾಡಿಸುವುದೇ ಇಲ್ಲ ಎಂದು ನಾನು ಆಕೆಗೆ ಸ್ಪಷ್ಟವಾಗಿ ಹೇಳಿದೆ."
ಆ ಹೊತ್ತಿಗೆ ಪೂನಮ್ ಅವರ ನೆರೆಹೊರೆಯವರಲ್ಲಿ ಹೆಚ್ಚಿನವರು ಹಳ್ಳಿಯ ವಾರದ ಹಾಟ್‌ಗೆ (ಸಂತೆ) ಹೋಗಲು ಪ್ರಾರಂಭಿಸಿದರು, ಬೇಗ ಹೊರಟರೆ ಅವರು ಕತ್ತಲೆಯಾಗುವುದರೊಳಗೆ ಸಂತೆ ತಲುಪಬಹುದು, ಸಂತೆಯಲ್ಲಿ ಸಿಕ್ಕಿದ ಪೂನಮ್ ಹೇಳಿದರು, “ನಾನು ಸೋನಾಕ್ಷಿಯ ತಂದೆಗಾಗಿ ಕಾಯುತ್ತಿದ್ದೇನೆ (ಪೂನಮ್ ಮನೋಜ್ ಅವರನ್ನು ಈ ರೀತಿಯಾಗಿ ಕರೆಯುತ್ತಾರೆ) ಅವರು ಬಂದರೆ ನಾವು ಕೂಡ ಸ್ವಲ್ಪ ತರಕಾರಿಗಳು ಅಥವಾ ಮೀನುಗಳನ್ನು ತೆಗೆದುಕೊಂಡು ಹೋಗಬಹುದು. ಮೂರು ದಿನಗಳಿಂದ ನಿರಂತರವಾಗಿ ದಾಲ್, ಅನ್ನ ಮಾಡುತ್ತಿದ್ದೇನೆ. ಸೋನಾಕ್ಷಿಗೆ ರೋಹು (ಮೀನಿನ) ರುಚಿ ತುಂಬಾ ಇಷ್ಟ."
ಕೊನೆಗೆ ಅಲ್ಲಿಂದ ಹೊರಡುವಾಗ, ಅವರ ಬದುಕಿನಲ್ಲಿ ಹೆಣ್ಣುಮಕ್ಕಳಿಗೆ ಜನನ ಪ್ರಮಾಣಪತ್ರ ಮಾಡಿಸುವುದಕ್ಕಿಂತಲೂ ಹೆಚ್ಚು ತುರ್ತಿನ ವಿಷಯಗಳಿವೆ ಎನ್ನಿಸಿತು.
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳುಹಿಸಿ
ಜಿಗ್ಯಾಸ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು