"ಪ್ರಸ್ತುತ ಪರಿಸ್ಥಿತಿ ಹಾಗಿಲ್ಲ. ಈಗ ಇಲ್ಲಿನ ಪರಿಸ್ಥಿತಿ ಬದಲಾಗಿದೆ. ಇಂದಿನ ಮಹಿಳೆಯರಿಗೆ ಗರ್ಭನಿರೋಧಕದ ಯಾವ ವಿಧಾನಗಳು ಲಭ್ಯವಿವೆ ಎಂಬುದು ಚೆನ್ನಾಗಿ ತಿಳಿದಿದೆ,” ಎಂದು ಸೂರ್ಯನ ಬೆಳಕು ಬೀಳುತ್ತಿದ್ದ ತನ್ನ ಮನೆಯ ವರಾಂಡದಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದ ಸಲ್ಹಾ ಖಾತೂನ್ ಹೇಳಿದರು. ಅವರ ಮನೆಗೆ ಇಟ್ಟಿಗೆ ಬಳಸಿ ಗಾರೆಯಿಂದ ಕಟ್ಟಲಾಗಿತ್ತು. ಅದರ ಗೋಡೆಗಳಿಗೆ ಸಮುದ್ರ ಹಸಿರು ಬಣ್ಣ ಬಳಿಯಲಾಗಿತ್ತು.
ಅವರು ಇದನ್ನು ತಮ್ಮ ಅನುಭವದ ಮೂಲಕವೇ ಹೇಳುತ್ತಿದ್ದಾರೆ. ಕಳೆದ ಒಂದು ದಶಕದಿಂದ, ಸಲ್ಹಾ, ತನ್ನ ಸೋದರಳಿಯನ ಪತ್ನಿ ಶಮಾ ಪರ್ವೀನ್ ಜೊತೆಗೂಡಿ, ಬಿಹಾರದ ಮಧುಬನಿ ಜಿಲ್ಲೆಯ ಹಸನ್ ಪುರ ಗ್ರಾಮದಲ್ಲಿ ಅನೌಪಚಾರಿಕವಾಗಿ ನಿಯೋಜಿಸಲ್ಪಟ್ಟ ಕುಟುಂಬ ಯೋಜನೆ ಮತ್ತು ಮುಟ್ಟಿನ ನೈರ್ಮಲ್ಯ ಸಲಹೆಗಾರರಾಗಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಹೆಚ್ಚಾಗಿ ಗರ್ಭನಿರೋಧಕ ಕುರಿತು ಪ್ರಶ್ನೆಗಳು ಮತ್ತು ವಿನಂತಿಗಳೊಡನೆ ಅವರನ್ನು ಸಂಪರ್ಕಿಸುತ್ತಾರೆ. ಅವರು ಕೇಳುವ ಪ್ರಶ್ನೆಗಳು ಇಬ್ಬರು ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವುದು ಹೇಗೆ, ಲಸಿಕೆ ಯಾವ ಸಮಯದಿಂದ ಪ್ರಾರಂಭವಾಗುತ್ತದೆ ಈ ರೀತಿಯಲ್ಲಿರುತ್ತವೆ. ಮತ್ತು ಕೆಲವೊಮ್ಮೆ ಮಹಿಳೆಯರು ಅಗತ್ಯವಿದ್ದಲ್ಲಿ ಗರ್ಭನಿರೋಧಕ ಚುಚ್ಚುಮದ್ದುಗಳನ್ನು ರಹಸ್ಯವಾಗಿ ಪಡೆಯಲು ಬರುತ್ತಾರೆ.
ಶಮಾ ಅವರ ಮನೆಯ ಮೂಲೆಯ ಕೋಣೆಯಲ್ಲೊಂದು ಚಿಕ್ಕ ಔಷಧಾಲಯವಿದೆ, ಅಲ್ಲಿ ಕಪಾಟಿನಲ್ಲಿ ಔಷಧಿಯ ಸಣ್ಣ ಬಾಟಲಿಗಳು ಮತ್ತು ಮಾತ್ರೆಗಳ ಪ್ಯಾಕೇಟುಗಳನ್ನು ಇಡಲಾಗಿದೆ. 40 ವರ್ಷದ ಶಮಾ ಮತ್ತು 50 ವರ್ಷದ ಸಲ್ಹಾ- ಇಬ್ಬರೂ ತರಬೇತಿ ಪಡೆದ ದಾದಿಯರು-ಇವುಗಳನ್ನು ಸ್ನಾಯುಗಳಿಗೆ ಚುಚ್ಚುತ್ತಾರೆ. "ಕೆಲವೊಮ್ಮೆ ಮಹಿಳೆಯರು ಒಂಟಿಯಾಗಿ ಬರುತ್ತಾರೆ, ಚುಚ್ಚುಮದ್ದು ತೆಗೆದುಕೊಂಡು ಬೇಗ ಹೊರಡುತ್ತಾರೆ. ಅವರ ಮನೆಯಲ್ಲಿರುವವರಿಗೆ ಇದು ತಿಳಿಯಬಾರದೆನ್ನುವುದು ಅದರ ಹಿಂದಿನ ಉದ್ದೇಶ." ಎಂದು ಸಲ್ಹಾ ಹೇಳುತ್ತಾರೆ. "ಉಳಿದಂತೆ ಬೇರೆ ಮಹಿಳೆಯರು ತಮ್ಮ ಪತಿ ಅಥವಾ ಸಂಬಂಧಿಕರೊಂದಿಗೆ ಬರುತ್ತಾರೆ."
ಇದು ಒಂದು ದಶಕದ ಹಿಂದಿನ ನಾಟಕೀಯ ಬದಲಾವಣೆಯಾಗಿದ್ದು, ಫೂಲ್ ಪರಾಸ್ ಬ್ಲಾಕ್‌ನ ಸೈನಿ ಗ್ರಾಮ ಪಂಚಾಯತ್‌ನಲ್ಲಿ ಸುಮಾರು 2,500 ಜನಸಂಖ್ಯೆ ಹೊಂದಿರುವ ಹಸನ್ ಪುರ ಗ್ರಾಮದ ನಿವಾಸಿಗಳು ಕುಟುಂಬ ಯೋಜನಾ ತಂತ್ರಗಳನ್ನು ಅಷ್ಟೇನೂ ಬಳಸುತ್ತಿರಲಿಲ್ಲ.
ಬದಲಾವಣೆ ಹೇಗೆ ಬಂತು? "ಇದು ಒಳಗಿನ ವಿಷಯ" ಎಂದು ಶಮಾ ಹೇಳುತ್ತಾರೆ.
ಹಸನ್ ಪುರದ ಕಡಿಮೆ ಗರ್ಭನಿರೋಧಕ ಬಳಕೆಯ ಇತಿಹಾಸವು ರಾಜ್ಯವ್ಯಾಪಿ ಸನ್ನಿವೇಶವನ್ನು ಸೂಚಿಸುತ್ತದೆ-ಬಿಹಾರದಲ್ಲಿ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) ಎನ್‌ಎಫ್‌ಎಚ್‌ಎಸ್-4 (2015-16) ಪ್ರಕಾರ 3.4 ಆಗಿತ್ತು-ಇದು ಅಖಿಲ ಭಾರತ ದರವಾದ 2.2ಕ್ಕಿಂತ ಹೆಚ್ಚು. (ಟಿಎಫ್‌ಆರ್ ಎಂದರೆ ಮಹಿಳೆ ತನ್ನ ಸಂತಾನೋತ್ಪತ್ತಿ ಅವಧಿಯಲ್ಲಿ ಜನ್ಮ ನೀಡುವ ಸರಾಸರಿ ಮಕ್ಕಳ ಸಂಖ್ಯೆ.)
ಎನ್‌ಎಫ್‌ಎಚ್‌ಎಸ್-5 (2019-20) ರಲ್ಲಿ ರಾಜ್ಯದ ಟಿಎಫ್‌ಆರ್ 3ಕ್ಕೆ ಇಳಿದಿದೆ, ಮತ್ತು ಈ ಕುಸಿತವು ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ 4 ಮತ್ತು 5ನೇ ಸುತ್ತುಗಳ ನಡುವೆ ರಾಜ್ಯದಲ್ಲಿ ಗರ್ಭನಿರೋಧಕ ಬಳಕೆಯ ಹೆಚ್ಚಳದೊಂದಿಗೆ ಸೇರಿಕೊಂಡಿದೆ-24.1 ಶೇಕಡದಿಂದ 55.8 %.
ಸ್ತ್ರೀ ಸಂತಾನಹರಣವು ಆಧುನಿಕ ಗರ್ಭನಿರೋಧಕ ವಿಧಾನಗಳಲ್ಲಿ (ಎನ್‌ಎಫ್‌ಎಚ್‌ಎಸ್-4ರ ಪ್ರಕಾರ) ಅತ್ಯಂತ ವ್ಯಾಪಕವಾಗಿ ಬಳಸಿರುವಂತೆ (86 ಪ್ರತಿಶತಃ) ಕಂಡುಬರುತ್ತದೆ. ಎನ್‌ಎಫ್‌ಎಚ್‌ಎಸ್-5ರ ಅಂಕಿಗಳ ವಿವರಗಳು ಇನ್ನೂ ಲಭ್ಯವಿಲ್ಲ. ಆದರೆ ಗರ್ಭನಿರೋಧಕ ಚುಚ್ಚುಮದ್ದು ಸೇರಿದಂತೆ ಹೊಸ ಗರ್ಭನಿರೋಧಕಗಳ ಬಳಕೆಯು ಎರಡು ಸಂತತಿಯ ನಡುವಿನ ಮಧ್ಯಂತರವನ್ನು ಖಚಿತಪಡಿಸಿಕೊಳ್ಳುವುದು ರಾಜ್ಯ ನೀತಿಯ ಪ್ರಮುಖ ಅಂಶವಾಗಿದೆ.
ಹಸನ್ ಪುರದಲ್ಲಿಯೂ ಸಹ, ಸಲ್ಹಾ ಮತ್ತು ಶಮಾ ಗಮನಿಸಿದಂತೆ, ಹೆಚ್ಚಿನ ಮಹಿಳೆಯರು ಗರ್ಭನಿರೋಧಕವನ್ನು ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ - ಮುಖ್ಯವಾಗಿ ಮಾತ್ರೆಗಳು, ಆದರೆ ಡಿಪೋ-ಮೆಡ್ರಾಕ್ಸಿ ಪ್ರೊಜೆಸ್ಟರಾನ್ ಅಸಿಟೇಟ್ (ಡಿಎಂಪಿಎ) ಎಂದು ಕರೆಯಲಾಗುವ ಹಾರ್ಮೋನ್ ಚುಚ್ಚುಮದ್ದು, ಇದು ಭಾರತದಲ್ಲಿ 'ಡೆಪೊ-ಪ್ರೊವೆರಾ' ಮತ್ತು 'ಪರಿ' ಎನ್ನುವ ಹೆಸರಿನಲ್ಲಿ ಮಾರಾಟವಾಗುತ್ತದೆ. ಸರ್ಕಾರಿ ಔಷಧಾಲಯಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು 'ಅಂತರಾ' ಎಂಬ ಬ್ರಾಂಡ್ ಹೆಸರಿನಲ್ಲಿ ಡಿಎಂಪಿಎ ಯನ್ನು ನೀಡುತ್ತವೆ. 2017ರಲ್ಲಿ ಭಾರತದಲ್ಲಿ ಇದರ ಲಭ್ಯತೆ ಪ್ರಾರಂಭವಾಗುವವರೆಗೂ, 'ಡೆಪೊ' ಅನ್ನು ಸಾಮಾನ್ಯವಾಗಿ ಲಾಭರಹಿತ ಗುಂಪುಗಳು ಸೇರಿದಂತೆ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ನೆರೆಯ ನೇಪಾಳದಿಂದ ಬಿಹಾರಕ್ಕೆ ಆಮದು ಮಾಡಿಕೊಳ್ಳುತ್ತಿದ್ದವು. ಸರ್ಕಾರಿ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ, ಬೇರೆಡೆ ಪ್ರತಿ ಚುಚ್ಚುಮದ್ದಿನ ಬೆಲೆ ರೂ. 245ರಿಂದ 350ರವರೆಗೆ ಇರುತ್ತದೆ, ಅಲ್ಲಿ ಅದು ಉಚಿತವಾಗಿ ಸಿಗುತ್ತದೆ.
ಗರ್ಭನಿರೋಧಕ ಚುಚ್ಚುಮದ್ದುಗಳ ಟೀಕಾಕಾರರು ಸಹ ಇದ್ದಾರೆ, ವಿಶೇಷವಾಗಿ ತೊಂಬತ್ತರ ದಶಕದಲ್ಲಿ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ಗುಂಪುಗಳು ಮತ್ತು ಆರೋಗ್ಯ ಕಾರ್ಯಕರ್ತರು ಅನೇಕ ವರ್ಷಗಳ ಕಾಲ ಇದನ್ನು ವಿರೋಧಿಸಿದರು, ಚುಚ್ಚುಮದ್ದುಗಳು ಅತಿಯಾದ ಅಥವಾ ಕಡಿಮೆ ಮುಟ್ಟಿನ ಸಮಯದ ರಕ್ತಸ್ರಾವ, ಮೊಡವೆಗಳು, ತೂಕ ಹೆಚ್ಚಳ, ತೂಕ ನಷ್ಟ ಮತ್ತು ಋತುಚಕ್ರ ವೈಫಲ್ಯದಂತಹ ಅಡ್ಡ ಪರಿಣಾಮಗಳನ್ನು ಬೀರಬಹುದು ಎನ್ನುವುದು ಅವರ ಕಳವಳವಾಗಿತ್ತು. ಭಾರತದಲ್ಲಿ ಡಿಎಂಪಿಎ ಮಾರಾಟಕ್ಕೆ 2017ರ ಮೊದಲು ಅನುಮತಿಯಿದ್ದಿರಲಿಲ್ಲ. ಅನುಮಾನಗಳು, ಅನೇಕ ಪರೀಕ್ಷೆಗಳು, ವಿವಿಧ ಗುಂಪುಗಳಿಂದ ಪ್ರತಿಕ್ರಿಯೆ ಮತ್ತು ವಿಧಾನವು ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇತರ ಅನೇಕ ವಿಷಯಗಳು ಇದರ ಹಿಂದಿದ್ದವು. ಪ್ರಸ್ತುತ, ಇದನ್ನು ದೇಶದಲ್ಲಿಯೇ ಉತ್ಪಾದಿಸಲಾಗುತ್ತಿದೆ.
ಈ ಚುಚ್ಚುಮದ್ದನ್ನು ಅಕ್ಟೋಬರ್ 2017ರಲ್ಲಿ ಬಿಹಾರದ ಅಂತರಾ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು, ಮತ್ತು ಜೂನ್ 2019ರಿಂದ ಎಲ್ಲಾ ನಗರ ಮತ್ತು ಗ್ರಾಮೀಣ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳಲ್ಲಿ ಲಭ್ಯವಿದೆ. ರಾಜ್ಯ ಸರ್ಕಾರದ ದತ್ತಾಂಶದ ಪ್ರಕಾರ, ಆಗಸ್ಟ್ 2019ರ ಪ್ರಕಾರ 4,24,427 ಇಂಜೆಕ್ಷನ್ ಡೋಸ್‌ಗಳನ್ನು ನೀಡಲಾಗಿದೆ, ಇದು ದೇಶದಲ್ಲೇ ಅತಿ ಹೆಚ್ಚು. ಒಮ್ಮೆ ಚುಚ್ಚುಮದ್ದು ನೀಡಿದ ಶೇಕಡಾ 48.8ರಷ್ಟು ಮಹಿಳೆಯರು ಅದರ ಎರಡನೇ ಡೋಸ್ ತೆಗೆದುಕೊಂಡಿದ್ದರು.
ಡಿಎಂಪಿಎಯನ್ನು ಸತತ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಳಸಿದರೆ, ಅದು ಅಪಾಯಕಾರಿಯಾಗಬಹುದೆನ್ನುವ ಕಳವಳಗಳಿವೆ. ಅಧ್ಯಯನ ಹೇಳುವ ಅಪಾಯಗಳಲ್ಲಿ ಒಂದು ಮೂಳೆ ಖನಿಜ ಸಾಂದ್ರತೆಯ ಇಳಿಕೆಯಾಗುತ್ತದೆಯೆನ್ನುವುದು (ಚುಚ್ಚುಮದ್ದು ನಿಂತಾಗ ಅದು ಮತ್ತೆ ಹೆಚ್ಚಾಗಬಹುದು ಎಂದು ನಂಬಲಾಗಿದೆ). ಡಿಎಂಪಿಎ ಬಳಸುವ ಮಹಿಳೆಯರನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ತಪಾಸಣೆ ಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸುತ್ತದೆ.
ಶಮಾ ಮತ್ತು ಸಲ್ಹಾ ಅವರು ಚುಚ್ಚುಮದ್ದಿನ ಸುರಕ್ಷತೆಯ ಕುರಿತು ಹೆಚ್ಚು ಹೆಚ್ಚು ಜಾಗರೂಕರಾಗಿರುವುದಾಗಿ ಹೇಳುತ್ತಾರೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಮಹಿಳೆಯರಿಗೆ ಚುಚ್ಚುಮದ್ದು ನೀಡುವುದಿಲ್ಲ, ಮತ್ತು ಈ ಇಬ್ಬರೂ ಆರೋಗ್ಯ ಸ್ವಯಂಸೇವಕರು ಚುಚ್ಚುಮದ್ದಿನ ಮೊದಲು ಅವರ ರಕ್ತದೊತ್ತಡವನ್ನು ಪರಿಶೀಲಿಸುತ್ತಾರೆ. ಇಲ್ಲಿಯವರೆಗೆ ಯಾರಿಂದಲೂ ಅಡ್ಡ ಪರಿಣಾಮಗಳ ಬಗ್ಗೆ ಯಾವುದೇ ದೂರು ಬಂದಿಲ್ಲವೆಂದು ಅವರು ಹೇಳುತ್ತಾರೆ.
ಹಳ್ಳಿಯಲ್ಲಿ ಎಷ್ಟು ಮಹಿಳೆಯರು ಡೆಪೋ-ಪ್ರೊವೆರಾವನ್ನು ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಅವರ ಬಳಿ ಯಾವುದೇ ಖಚಿತ ವಿವರವಿಲ್ಲ, ಆದರೆ ಈ ವಿಧಾನವು ಮಹಿಳೆಯರ ನಡುವೆ ಹೆಚ್ಚು ಜನಪ್ರಿಯವಾಗಿದೆ, ಬಹುಶಃ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಚುಚ್ಚುಮದ್ದಿನ ಆಯ್ಕೆ ಇದಕ್ಕೆ ಕಾರಣವಿರಬಹುದು. ಅಲ್ಲದೆ, ನಗರದಲ್ಲಿ ಕೆಲಸ ಮಾಡುವ ಮತ್ತು ವರ್ಷಕ್ಕೆ ಕೆಲವು ತಿಂಗಳುಗಳ ಕಾಲ ಹಳ್ಳಿಗೆ ಹಿಂದಿರುಗುವ ಗಂಡಂದಿರನ್ನು ಹೊಂದಿರುವ ಮಹಿಳೆಯರಿಗೆ ಇದು ಅಲ್ಪಾವಧಿಯ ಗರ್ಭನಿರೋಧಕದ ಸುಲಭ ಮಾರ್ಗವಾಗಿದೆ. (ಆರೋಗ್ಯ ಕಾರ್ಯಕರ್ತರ ಅಭಿಪ್ರಾಯಗಳು ಮತ್ತು ವೈದ್ಯಕೀಯ ಸಂಶೋಧನೆಗಳು ಸಂತಾನೋತ್ಪತ್ತಿ ಚಕ್ರವು ಚುಚ್ಚುಮದ್ದು ತೆಗೆದುಕೊಂಡ ಮೂರು ತಿಂಗಳ ನಂತರ ಮರಳುತ್ತದೆ ಎಂದು ಹೇಳುತ್ತವೆ.)
ಮಧುಬನಿಯಲ್ಲಿ ಗರ್ಭನಿರೋಧಕ ಚುಚ್ಚುಮದ್ದುಗಳ ಬಳಕೆ ಹೆಚ್ಚಾಗಲು ಮತ್ತೊಂದು ಕಾರಣವೆಂದರೆ ಘೋಘರ್ದಿಹ ಬ್ಲಾಕ್ ಸ್ವರಾಜ್ಯ ವಿಕಾಸ್ ಸಂಘದ (ಜಿಪಿಎಸ್ ವಿಎಸ್) ಕಾರ್ಯಗಳು. ವಿಕೇಂದ್ರೀಕೃತ ಪ್ರಜಾಪ್ರಭುತ್ವ ಮತ್ತು ಸಮುದಾಯ ಸ್ವಾವಲಂಬನೆಯ ಆದರ್ಶಗಳಿಂದ ಪ್ರೇರಿತವಾಗಿ 1970ರ ದಶಕದಲ್ಲಿ ವಿನೋಬಾ ಭಾವೆ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಬೆಂಬಲಿಗರಿಂದ ಈ ಸಂಘಟನೆ ಸ್ಥಾಪಿತವಾಯಿತು. (ವಿಕಾಸ ಸಂಘವು ರಾಜ್ಯ ಸರ್ಕಾರದ ರೋಗನಿರೋಧಕ ಅಭಿಯಾನಗಳು ಮತ್ತು ಸಂತಾನಹರಣ ಶಿಬಿರಗಳಲ್ಲಿಯೂ ಭಾಗಿಯಾಗಿದೆ. ಅಂತಹ ಶಿಬಿರಗಳಲ್ಲಿ 1990ರ ದಶಕದಲ್ಲಿ 'ಉದ್ದೇಶಿತ' ದೃಷ್ಟಿ ನೆಲೆಯನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅದು ವಿಮರ್ಶೆಗೀಡಾಗಿತ್ತು).
ಮುಸ್ಲಿಂ ಪ್ರಾಬಲ್ಯದ ಹಸನ್ ಪುರದಲ್ಲಿ, ಪೋಲಿಯೊ ಲಸಿಕೆ ಮತ್ತು ಕುಟುಂಬ ಯೋಜನೆಗಾಗಿ ಸಾರ್ವಜನಿಕ ಬೆಂಬಲ ಮತ್ತು ಸಲಕರಣೆಗಳ ಬಳಕೆ 2000 ಇಸವಿಯವರೆಗೆ ತುಂಬಾ ಕಡಿಮೆಯಿತ್ತು. ನಂತರ, ಜಿಪಿಎಸ್‌ವಿಎಸ್ ಈ ಗ್ರಾಮ ಮತ್ತು ಇತರ ಹಳ್ಳಿಗಳ ಮಹಿಳೆಯರನ್ನು ಸ್ವಸಹಾಯ ಗುಂಪುಗಳು ಮತ್ತು ಮಹಿಳಾ ಮಂಡಳಿಗಳಲ್ಲಿ ಸಂಘಟಿಸಲು ಪ್ರಾರಂಭಿಸಿತು. ಸಲ್ಹಾ ಇದೇ ರೀತಿಯ ಸ್ವಸಹಾಯ ಗುಂಪಿನ ಸದಸ್ಯರಾದರು ಮತ್ತು ಶಮಾ ಅವರನ್ನು ಅದರಲ್ಲಿ ಸೇರುವಂತೆ ಮನವೊಲಿಸಿದರು.
ಕಳೆದ ಮೂರು ವರ್ಷಗಳಲ್ಲಿ, ಈ ಇಬ್ಬರೂ ಮಹಿಳೆಯರು ಋತುಸ್ರಾವ, ನೈರ್ಮಲ್ಯ, ಪೌಷ್ಟಿಕತೆ ಮತ್ತು ಕುಟುಂಬ ಯೋಜನೆಯ ಬಗ್ಗೆ ಜಿಪಿಎಸ್‌ವಿಎಸ್ ನಡೆಸಿದ ತರಬೇತಿಗಳಲ್ಲಿ ಭಾಗವಹಿಸಿದ್ದಾರೆ. ವಿಕಾಸ್ ಸಂಘ ಕೆಲಸ ಮಾಡುತ್ತಿರುವ ಮಧುಬನಿ ಜಿಲ್ಲೆಯ ಸುಮಾರು 40 ಹಳ್ಳಿಗಳಲ್ಲಿ, ಸಂಸ್ಥೆಯು 'ಸಹೇಲಿ ನೆಟ್ ವರ್ಕ್' ಹೆಸರಿನಲ್ಲಿ ಮಹಿಳೆಯರನ್ನು ಸಂಘಟಿಸಿತು ಮತ್ತು ಈ ಮಹಿಳೆಯರಿಗೆ ಮಾರಾಟ ಮಾಡಬಹುದಾದ ಮುಟ್ಟಿನ ಪ್ಯಾಡ್‌ಗಳು, ಕಾಂಡೋಮ್‌ಗಳು ಮತ್ತು ಜನನ ನಿಯಂತ್ರಣ ಮಾತ್ರೆಗಳಿರುವ ಕಿಟ್ ಬ್ಯಾಗ್ ಅನ್ನು ನೀಡಲು ಪ್ರಾರಂಭಿಸಿತು. ಈ ಉಪಕ್ರಮದ ಪರಿಣಾಮವಾಗಿ, ಗರ್ಭನಿರೋಧಕ ಸಾಧನಗಳು ಮಹಿಳೆಯರ ಮನೆ ಬಾಗಿಲನ್ನು ತಲುಪಿವೆ, ಮತ್ತು ಅದೂ ಇಬ್ಬರು ಸಾಮಾನ್ಯ ಮಹಿಳೆಯರ ಮೂಲಕ. 2019ರಲ್ಲಿ, ಡಿಎಂಪಿಎ ಪರಿ ಬ್ರಾಂಡ್ ಹೆಸರಿನಲ್ಲಿ ಲಭ್ಯವಾಗಲು ಪ್ರಾರಂಭಿಸಿದಾಗ, ಅದನ್ನು ಕಿಟ್-ಬ್ಯಾಗಿನಲ್ಲಿ ಸೇರಿಸಲಾಯಿತು.
"ಈಗ ಸಹೇಲಿ ನೆಟ್ ವರ್ಕ್ ಸುಮಾರು 32 ಮಹಿಳೆಯರ ಮಾರಾಟ ಜಾಲವನ್ನು ಹೊಂದಿದೆ. ನಾವು ಅವರುಗಳನ್ನು ಸ್ಥಳೀಯ ಸಗಟು ವ್ಯಾಪಾರಿಯೊಂದಿಗೆ ಸಂಪರ್ಕ ಮಾಡಿಸಿದ್ದೇವೆ, ಅವರಿಂದ ಈ ಮಹಿಳೆಯರು ಸಗಟು ಬೆಲೆಗೆ ವಸ್ತುಗಳನ್ನು ಖರೀದಿಸುತ್ತಾರೆ" ಎಂದು ಮಧುಬನಿ ಮೂಲದ ಜಿಪಿಎಸ್‌ವಿಎಸ್ ನ ಸಿಇಒ ರಮೇಶ್ ಕುಮಾರ್ ಸಿಂಗ್ ಹೇಳುತ್ತಾರೆ. ಇದಕ್ಕಾಗಿ ಸಂಸ್ಥೆಯು ಆರಂಭದಲ್ಲಿ ಕೆಲವು ಮಹಿಳೆಯರಿಗೆ ಆರಂಭಿಕ ಬಂಡವಾಳವನ್ನು ಒದಗಿಸಿತು. "ಮಾರಾಟವಾದ ಪ್ರತಿ ವಸ್ತುವಿನ ಮೇಲೆ ಅವರು 2 ರೂ.ಗಳ ಲಾಭ ಗಳಿಸಬಹುದು" ಎಂದು ಸಿಂಗ್ ಹೇಳುತ್ತಾರೆ.
ಹಸನ್ ಪುರದಲ್ಲಿ, ಕೆಲವು ಮಹಿಳೆಯರು ಗರ್ಭನಿರೋಧಕ ಚುಚ್ಚುಮದ್ದುಗಳನ್ನು ಬಳಸಲು ಪ್ರಾರಂಭಿಸಿದಾಗ, ಎರಡನೇ ಡೋಸ್ ತೆಗೆದುಕೊಳ್ಳುವ ಮೊದಲು ಎರಡು ಡೋಸ್‌ಗಳ ನಡುವೆ ಮೂರು ತಿಂಗಳ ಅಂತರದ ನಂತರ ಎರಡು ವಾರಗಳಿಗಿಂತ ಹೆಚ್ಚು ಸಮಯ ಮೀರದಿರುವಂತೆ ಅವರು ನೋಡಿಕೊಳ್ಳಬೇಕಿರುತ್ತದೆ. ಆಗ ಶಮಾ ಮತ್ತು ಸಲ್ಹಾ ಮತ್ತು ಇತರ 10 ಮಹಿಳೆಯರ ಗುಂಪು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್ ಎಂ (ಆಕ್ಸಿಲರಿ ನರ್ಸ್-ಮಿಡ್‌ವೈಫ್ಸ್)ಅವರಿಂದ ಚುಚ್ಚುಮದ್ದು ನೀಡುವುದನ್ನು ಕಲಿತರು. (ಹಸನ್ ಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ, ಹತ್ತಿರದ ಪಿಎಚ್‌ಸಿಗಳು ಫೂಲ್ಪರಾಸ್ ಮತ್ತು ಝಂಝರ್ ಪುರದಲ್ಲಿ ಇಲ್ಲಿಗೆ 16 ಮತ್ತು 20 ಕಿ.ಮೀ ದೂರದಲ್ಲಿವೆ).
ಫೂಲ್ ಪರಾಸ್ ಪಿಎಚ್‌ಸಿಯಲ್ಲಿ ಅಂತರಾ ಚುಚ್ಚುಮದ್ದು ತೆಗೆದುಕೊಂಡವರಲ್ಲಿ ಮೂರು ಮಕ್ಕಳ ತಾಯಿ ಯುವತಿ ಉಜ್ಮಾ (ಹೆಸರು ಬದಲಾಯಿಸಲಾಗಿದೆ)ಕೂಡಾ ಒಬ್ಬರು, ಅವರು ಬೇಗನೆ ಮಕ್ಕಳನ್ನು ಹೆತ್ತಿದ್ದಲ್ಲದೆ ಒಂದರ ಹಿಂದೆ ಒಂದರಂತೆ ಮಕ್ಕಳನ್ನುಹಡೆದರು. "ನನ್ನ ಪತಿ ಕೆಲಸಕ್ಕಾಗಿ ದೆಹಲಿ ಮತ್ತು ಇತರ ಕಡೆಗಳಿಗೆ ಹೋಗುತ್ತಾರೆ. ಅವರು ಮನೆಗೆ ಹಿಂದಿರುಗಿದಾಗಲೆಲ್ಲಾ ಸೂಯಿ [ಚುಚ್ಚುಮದ್ದು] ತೆಗೆದುಕೊಳ್ಳುವುದು ಸರಿಯೆಂದು ನಾವು ನಿರ್ಧರಿಸಿದ್ದೇವೆ" ಎಂದು ಅವರು ಹೇಳುತ್ತಾರೆ. "ಈಗ ಸಮಯ ಬಹಳ ಕಠಿಣವಾಗಿದೆ, ನಾವು ದೊಡ್ಡ ಕುಟುಂಬವನ್ನು ಹೊಂದಲು ಸಾಧ್ಯವಿಲ್ಲ." ಉಜ್ಮಾ ಅವರು ಈಗ ಟ್ಯೂಬಲ್ ಲಿಗೇಶನ್ ಮೂಲಕ "ಶಾಶ್ವತ" ಪರಿಹಾರವನ್ನು ಪರಿಗಣಿಸುತ್ತಿರುವುದಾಗಿಯೂ ಹೇಳುತ್ತಾರೆ.
'ಸಂಚಾರಿ ಆರೋಗ್ಯ ಕಾರ್ಯಕರ್ತರಾಗಿ' ತರಬೇತಿ ಪಡೆದ ಮಹಿಳೆಯರು ಸಹ ಉಚಿತವಾಗಿ ಅಂತರಾ ಇಂಜೆಕ್ಷನ್ ಪಡೆಯಲು ಬಯಸುವ ಮಹಿಳೆಯರಿಗೆ ಸಹಾಯ ಮಾಡುತ್ತಾರೆ, ಇದಕ್ಕಾಗಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಿ ನೋಂದಾಯಿಸಿಕೊಳ್ಳಬೇಕು. ದೀರ್ಘಾವಧಿಯಲ್ಲಿ ಅಂಗನವಾಡಿಯಲ್ಲೂ ಮಹಿಳೆಯರಿಗೆ ಅಂತರಾ ಸಿಗುವ ನಿರೀಕ್ಷೆಯಿದೆ ಎನ್ನುತ್ತಾರೆ ಶಮಾ ಮತ್ತು ಸಲ್ಹಾ. ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗರ್ಭನಿರೋಧಕ ಚುಚ್ಚುಮದ್ದುಗಳ ಪುಸ್ತಕದ ಪ್ರಕಾರ, ಈ ಚುಚ್ಚುಮದ್ದುಗಳು ಮೂರನೇ ಹಂತದಲ್ಲಿ ಉಪ ಕೇಂದ್ರಗಳಲ್ಲಿಯೂ ಲಭ್ಯವಿರುತ್ತವೆ.
“ಈಗ ಮಹಿಳೆಯರು ಎರಡು ಮಕ್ಕಳ ನಂತರ ಒಂದು “ಬ್ರೇಕ್” ಪಡೆಯುತ್ತಾರೆ” ಎಂದು ಶಮಾ ಹೇಳುತ್ತಾರೆ.
ಆದರೆ ಈ ಬದಲಾವಣೆ ಹಸನ್ ಪುರಕ್ಕೆ ಬರಲು ಸಮಯ ಹಿಡಿಯಿತು. "ಲಂಬಾ ಲಗಾ (ಸಾಕಷ್ಟು ಸಮಯ ಹಿಡಿಯಿತು), ಆದರೆ ನಾವು ಅದನ್ನು ಆಗು ಮಾಡಿದ್ದೇವೆ" ಎಂದು ಶಮಾ ಹೇಳುತ್ತಾರೆ.
ಶಮಾ ಅವರ ಪತಿ 40 ವರ್ಷದ ರಹಮತುಲ್ಲಾ ಅವರು ಎಂಬಿಬಿಎಸ್ ಪದವಿ ಹೊಂದಿಲ್ಲವಾದರೂ ಅಬು ಹಸನ್ ಪುರದಲ್ಲಿ ವೈದ್ಯಕೀಯ ಸೇವೆ ನೀಡುತ್ತಾರೆ. ಅವರ ಸಹಕಾರದಿಂದ ಶಮ ಅವರು ಸುಮಾರು 15 ವರ್ಷಗಳ ಹಿಂದೆ ಮದರಸಾ ಮಂಡಳಿಯ ಅಲೀಮ್ ಮಟ್ಟದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆ ಸಹಾಯ ಮತ್ತು ಮಹಿಳೆಯರ ಗುಂಪಿನೊಂದಿಗಿನ ಅವಳ ಕೆಲಸವು, ಶಾಮಾ ತನ್ನ ಗಂಡನೊಂದಿಗೆ ಅವರ ರೌಂಡ್ಸ್‌ಗಳಿಗೆ ಹೋದ ಅನುಭವ, ಕೆಲವೊಮ್ಮೆ ಹೆರಿಗೆಗಾಗಿ ಹೋಗುವುದು ಅಥವಾ ರೋಗಿಗಳನ್ನು ಮನೆಯ ಕ್ಲಿನಿಕ್ಕಿನಲ್ಲಿ ಆರಾಮವಾಗಿರಿಸಲು ಪ್ರೇರೇಪಿಸಿತು.
ಆದಾಗ್ಯೂ, ಶಮಾ ಮತ್ತು ಸಲ್ಹಾ ತಮ್ಮ ಮುಸ್ಲಿಂ ಪ್ರಾಬಲ್ಯದ ಹಳ್ಳಿಯಲ್ಲಿ ಗರ್ಭನಿರೋಧಕದ ವಿಷಯದ ಬಗ್ಗೆ ಧಾರ್ಮಿಕ ನಂಬಿಕೆಯಂತಹ ಸೂಕ್ಷ್ಮ ವಿಷಯವನ್ನು ನಿಭಾಯಿಸಬೇಕಾಯಿತು ಎಂದು ಭಾವಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಸಮಯ ಕಳೆದಂತೆ ಸಮಾಜವು ವಿಷಯಗಳನ್ನು ವಿಭಿನ್ನವಾಗಿ ನೋಡಲು ಪ್ರಾರಂಭಿಸಿದೆ ಎಂದು ಅವರು ಹೇಳುತ್ತಾರೆ
ಶಮಾ ಅವರಿಗೆ 1991ರಲ್ಲಿ ಅವರು ಹದಿಹರೆಯದಲ್ಲಿರುವಾಗಲೇ ಮದುವೆಯಾಯಿತು.ಅವರು ಸುಪಾಲ್ ಜಿಲ್ಲೆಯಲ್ಲಿರುವ ದುಬಿಯಾಯ್‌ನಿಂದ ಹಸನ್ ಪುರಕ್ಕೆ ಬಂದರು. "ನಾನು ಕಟ್ಟುನಿಟ್ಟಾದ ಪರ್ದಾ ಧರಿಸುತ್ತಿದ್ದೆ. ನಾನು ನನ್ನ ಮೊಹಲ್ಲಾವನ್ನು ಸಹ ನೋಡಿರಲಿಲ್ಲ" ಎಂದು ಅವರು ಹೇಳುತ್ತಾರೆ. ಆದರೆ ಅವರು ಮಹಿಳೆಯರ ಗುಂಪಿನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ನಂತರ ಎಲ್ಲವೂ ಬದಲಾಯಿತು. "ಈಗ ನಾನು ಮಗುವನ್ನು ಸಂಪೂರ್ಣವಾಗಿ ಪರೀಕ್ಷೆ ಮಾಡಬಲ್ಲೆ. ನಾನು ಚುಚ್ಚಮದ್ದು ನೀಡಬಲ್ಲೆ, ಸಲೈನ್ ಡ್ರಿಪ್ ಕೂಡಾ ಹಾಕಬಲ್ಲೆ. ಇತ್ನಾ ಕರ್ ಲೇತಾ ಹೂಂ [ಇಷ್ಟು ಮಾಡಬಲ್ಲೆ]," ಎಂದು ಅವರು ಹೇಳುತ್ತಾರೆ.
ಶಮಾ ಮತ್ತು ರಹಮತುಲ್ಲಾ ಅಬು ದಂಪತಿಗೆ ಮೂವರು ಮಕ್ಕಳಿದ್ದಾರೆ. ಹಿರಿಯ ಮಗ 28ನೇ ವಯಸ್ಸಿನಲ್ಲಿಯೂ ಅವಿವಾಹಿತನಾಗಿದ್ದಾನೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಅವರ ಮಗಳು ಪದವಿ ಪಡೆದಿದ್ದು ಮುಂದೆ ಬಿ.ಎಡ್ ಮಾಡುವ ಬಯಕೆಯಲ್ಲಿದ್ದಾರೆ. "ಮಾಷಾಲ್ಲಾ, ಅವಳು ಶಿಕ್ಷಕಿಯಾಗುತ್ತಾಳೆ" ಎಂದು ಶಮಾ ಹೇಳುತ್ತಾರೆ. ಕಿರಿಯ ಮಗ ಕಾಲೇಜು ಓದುತ್ತಿದ್ದಾನೆ.
ಹಸನ್ ಪುರದ ಮಹಿಳೆಯರ ಬಳಿ ಶಮಾ ಅವರ ಕುಟುಂಬಗಳನ್ನು ಸಣ್ಣ ಕುಟುಂಬಗಳನ್ನಾಗಿರಿಸಿಕೊಳ್ಳುವಂತೆ ಹೇಳಿದರೆ ಅವರು ಆ ಮಾತುಗಳಲ್ಲಿ ವಿಶ್ವಾಸವಿರಿಸುತ್ತಾರೆ. "ಕೆಲವೊಮ್ಮೆ ಅವರು ಬೇರೆ ಬೇರೆ ಆರೋಗ್ಯ ಸಮಸ್ಯೆಗಳೊಂದಿಗೆ ನನ್ನ ಬಳಿಗೆ ಬರುತ್ತಾರೆ, ನಂತರ ನಾನು ಗರ್ಭನಿರೋಧಕದ ಬಗ್ಗೆ ಅವರಿಗೆ ಸಲಹೆ ನೀಡುತ್ತೇನೆ. ಕುಟುಂಬವು ಚಿಕ್ಕದಾಗಿದ್ದಷ್ಟೂ ಅವರು ಹೆಚ್ಚು ಸಂತೋಷವಾಗಿರುತ್ತಾರೆ."
ಶಮಾ ತನ್ನ ಮನೆಯ ಹೊರ ಜಗಲಿಯಲ್ಲಿ ಪ್ರತಿದಿನ 5ರಿಂದ 16 ವರ್ಷ ವಯಸ್ಸಿನ 40 ಮಕ್ಕಳಿಗೆ ಕಲಿಸುತ್ತಾರೆ. ಮನೆಯ ಗೋಡೆಗಳಿಂದ ಬಣ್ಣ ಉದುರುತ್ತಿದೆ, ಆದರೆ ಅದರ ಸ್ತಂಭಗಳು ಮತ್ತು ಕಮಾನುಗಳ ನಡುವಿನಿಂದ ಬರುವ ಬೆಳಕು ವರಾಂಡವನ್ನು ಬೆಳಗಿಸುತ್ತದೆ. ಅವರು ಶಾಲೆಯ ಪಠ್ಯಕ್ರಮದ ಜೊತೆಗೆ ಕಸೂತಿ ಅಥವಾ ಹೊಲಿಗೆ ಮತ್ತು ಸಂಗೀತನ್ನೂ ಕಲಿಸುತ್ತಾರೆ. ಮತ್ತು ಇಲ್ಲಿ, ಹದಿಹರೆಯದ ಹುಡುಗಿಯರು ತಮ್ಮ ಮನಸ್ಸನ್ನು ಶಮಾ ಅವರೊಡನೆ ಹಂಚಿಕೊಳ್ಳಬಹುದು.
ಅವರ ಹಳೆಯ ವಿದ್ಯಾರ್ಥಿನಿಯರಲ್ಲಿ ಒಬ್ಬರಾದ 18 ವರ್ಷದ ಗಜಲಾ ಖಾತೂನ್. "ತಾಯಿಯ ಮಡಿಲು ಮಗುವಿನ ಮೊದಲ ಮದರಸಾ. ಆರೋಗ್ಯ ಮತ್ತು ಎಲ್ಲಾ ಉತ್ತಮ ಕಲಿಕೆ ಇಲ್ಲಿಂದ ಪ್ರಾರಂಭವಾಗುತ್ತದೆ," ಎಂದು ಶಮಾ ಅವರಿಂದ ಕಲಿತ ಒಂದು ಸಾಲನ್ನು ಪುನರಾವರ್ತಿಸುತ್ತಾರೆ. "ಮುಟ್ಟಿನ ಸಮಯದಲ್ಲಿ ಏನು ಮಾಡಬೇಕು ಮತ್ತು ಮದುವೆಗೆ ಸರಿಯಾದ ವಯಸ್ಸು ಯಾವುದು ಎಂಬುದರವರೆಗೆ ಸಾಕಷ್ಟು ವಿಷಯಗಳನ್ನು ನಾನಿಲ್ಲಿ ಕಲಿತಿದ್ದೇನೆ. ನನ್ನ ಮನೆಯ ಎಲ್ಲಾ ಮಹಿಳೆಯರು ಈಗ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ, ಬಟ್ಟೆಯ ಬಳಕೆ ನಿಲ್ಲಿಸಿದ್ದಾರೆ" ಎಂದು ಅವರು ವಿವರಿಸುತ್ತಾರೆ. "ನಾನು ನನ್ನ ಪೌಷ್ಟಿಕಾಂಶದ ಬಗ್ಗೆಯೂ ಕಾಳಜಿ ವಹಿಸುತ್ತೇನೆ. ನಾನು ಆರೋಗ್ಯವಾಗಿದ್ದರೆ, ಭವಿಷ್ಯದಲ್ಲಿ ನನ್ನ ಮಕ್ಕಳು ಆರೋಗ್ಯವಾಗಿರುತ್ತಾರೆ."
ಸಮುದಾಯವು ಸಲ್ಹಾ ಅವರನ್ನು ಸಹ ನಂಬುತ್ತದೆ (ಅವರು ತನ್ನ ಕುಟುಂಬದ ಬಗ್ಗೆ ಹೆಚ್ಚು ಮಾತನಾಡಲು ಬಯಸಲಿಲ್ಲ). ಅವರು ಈಗ ಹಸನ್ ಪುರ್ ಮಹಿಳಾ ಮಂಡಲದ ಒಂಬತ್ತು ಸ್ವಸಹಾಯ ಗುಂಪುಗಳ ಮುಖ್ಯಸ್ಥರಾಗಿದ್ದಾರೆ. ಪ್ರತಿ ಗುಂಪಿನಲ್ಲಿ 12-18 ಮಹಿಳೆಯರು ತಿಂಗಳಿಗೆ 500ರಿಂದ 750 ರೂ.ಗಳವರೆಗೆ ಉಳಿತಾಯ ಮಾಡುತ್ತಾರೆ. ಗುಂಪು ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ಆಗಾಗ್ಗೆ, ಗುಂಪಿನಲ್ಲಿ ಅನೇಕ ಯುವತಿಯರು ಇರುತ್ತಾರೆ, ಮತ್ತು ಸಲ್ಹಾ ಅಲ್ಲಿ ಗರ್ಭನಿರೋಧಕದ ಕುರಿತ ಚರ್ಚೆಯನ್ನು ಪ್ರೋತ್ಸಾಹಿಸುತ್ತಾರೆ.
"ನಮ್ಮ 300 ಮಹಿಳಾ ಗುಂಪುಗಳನ್ನು ಕಸ್ತೂರಬಾ ಮಹಿಳಾ ಮಂಡಳಿ ಎಂದು ಕರೆಯಲಾಗುತ್ತದೆ ಮತ್ತು ಈ ರೀತಿಯ ಸಂಪ್ರದಾಯವಾದಿ ಸಮಾಜಗಳಲ್ಲಿಯೂ ಸಹ ಗ್ರಾಮದ ಮಹಿಳಾ ಸಬಲೀಕರಣದ ಕನಸುಗಳನ್ನು ನನಸು ಮಾಡುವುದು ನಮ್ಮ ಪ್ರಯತ್ನವಾಗಿದೆ" ಎಂದು 1970ರ ದಶಕದ ಕೊನೆಯಲ್ಲಿ ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಜಿಪಿಎಸ್ವಿಎಸ್ ನ ಮಧುಬನಿ ಮೂಲದ ಮಾಜಿ ಅಧ್ಯಕ್ಷ ಜಿತೇಂದ್ರ ಕುಮಾರ್ ಹೇಳುತ್ತಾರೆ. ತನ್ನ ಕೆಲಸದ ಒಟ್ಟಾರೆ ಸ್ವರೂಪವು ಸಮುದಾಯಗಳು ಶಮಾ ಮತ್ತು ಸಲ್ಹಾ ಅವರಂತಹ ಸ್ವಯಂಸೇವಕರನ್ನು ನಂಬಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳುತ್ತಾರೆ. "ಪಲ್ಸ್ ಪೋಲಿಯೊ ಹನಿಗಳು ಹುಡುಗರನ್ನು ನಪುಂಸಕರನ್ನಾಗಿ ಮಾಡುತ್ತವೆ ಎಂಬ ವದಂತಿಗಳು ಈ ಪ್ರದೇಶಗಳಲ್ಲಿ ಇದ್ದವು. ಬದಲಾವಣೆ ಯಾವಾಗಲೂ ಸಮಯ ತೆಗೆದುಕೊಳ್ಳುತ್ತದೆ..."
ಆದಾಗ್ಯೂ, ಶಮಾ ಮತ್ತು ಸಲ್ಹಾ ತಮ್ಮ ಮುಸ್ಲಿಂ ಪ್ರಾಬಲ್ಯದ ಹಳ್ಳಿಯಲ್ಲಿ ಗರ್ಭನಿರೋಧಕದ ವಿಷಯದ ಬಗ್ಗೆ ಧಾರ್ಮಿಕ ನಂಬಿಕೆಗಳ ಸೂಕ್ಷ್ಮ ವಿಷಯವನ್ನು ನಿಭಾಯಿಸಬೇಕಾಗಿ ಬಂದಂತೆ ತೋರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಸಮಯ ಕಳೆದಂತೆ, ಸಮಾಜವು ವಿಷಯಗಳನ್ನು ಬೇರೆ ರೀತಿಯಲ್ಲಿ ನೋಡಲು ಪ್ರಾರಂಭಿಸಿದೆ ಎಂದು ಅವರು ಹೇಳುತ್ತಾರೆ.
"ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತೇನೆ" ಎನ್ನುತ್ತಾ ಶಮಾ ಹೇಳುತ್ತಾರೆ. "ಕಳೆದ ವರ್ಷ, ಬಿಎ ಪದವಿ ಪಡೆದಿರುವ ನನ್ನ ಸಂಬಂಧಿಯೊಬ್ಬರು ಮತ್ತೆ ಗರ್ಭಿಣಿಯಾದರು. ಅವರಿಗೆ ಈಗಾಗಲೇ ಮೂವರು ಮಕ್ಕಳಿದ್ದವು. ಮತ್ತು ಅವರ ಕೊನೆಯ ಮಗು ಸಿಝೇರಿಯನ್ ಮೂಲಕ ಜನಿಸಿತು. ನಾನು ಅವಳಿಗೆ ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಿದ್ದೆ, ಅವಳ ಹೊಟ್ಟೆ ತರೆದ ರೀತಿಯಲ್ಲಿತ್ತು. ತೀವ್ರ ತೊಂದರೆಗಳಿಗೆ ಒಳಗಾಗಿದ್ದ ಅವರು ಗರ್ಭಕೋಶ ತೆಗೆಯಲು ಈ ಬಾರಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಎಲ್ಲ ಚಿಕಿತ್ಸೆಗಳಿಗಾಗಿ 3-4 ಲಕ್ಷ ರೂ.ಗಳನ್ನು ಖರ್ಚು ಮಾಡಿದರು. ಅಂತಹ ಘಟನೆಗಳು ಇತರ ಮಹಿಳೆಯರನ್ನು ಸುರಕ್ಷಿತ ಗರ್ಭನಿರೋಧಕ ತಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸುತ್ತವೆ ಎಂದು ಅವರು ವಿವರಿಸುತ್ತಾರೆ.
ಜನರು ಈಗ ಗುನಾಹ್ ಅಥವಾ ಪಾಪದ ಸೂಕ್ಷ್ಮತೆಗಳನ್ನು ಪರಿಗಣಿಸಲು ಸಿದ್ಧರಾಗಿದ್ದಾರೆ ಎಂದು ಸಲ್ಹಾ ಹೇಳುತ್ತಾರೆ. "ನನ್ನ ಧರ್ಮವೂ ಹೇಳುತ್ತದೆ, ನೀವು ನಿಮ್ಮ ಮಗುವನ್ನು ನೋಡಿಕೊಳ್ಳಬೇಕು, ಅದರ ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಬೇಕು ಮಗುವಿಗೆ ಉತ್ತಮ ಬಟ್ಟೆಗಳನ್ನು ನೀಡಬೇಕು, ಅದನ್ನು ಚೆನ್ನಾಗಿ ಬೆಳೆಸಬೇಕು..." ಎಂದು ಅವರು ಹೇಳುತ್ತಾರೆ. "ನಾವು ಒಂದು ಡಜನ್ ಅಥವಾ ಅರ್ಧ ಡಜನ್ ಮಕ್ಕಳನ್ನು ಹುಟ್ಟಿಸಿ, ನಂತರ ಅವರನ್ನು ಹಾಗೇ ಅಲೆಯಲು ಬಿಟ್ಟೆವು - ನಮ್ಮ ಧರ್ಮವು ಮಕ್ಕಳನ್ನು ಹೊಂದಿರಿ ಮತ್ತು ಅವರನ್ನು ಅಲೆಯಲು ಬಿಡಿ ಎಂದು ಹೇಳುವುದಿಲ್ಲ."
ಹಳೆಯ ಭಯದ ಕಾಲ ಈಗ ಮುಗಿದಿದೆ ಎಂದು ಸಲ್ಹಾ ಹೇಳುತ್ತಾರೆ. "ಅತ್ತೆ ಈಗ ಮನೆಯನ್ನು ಆಳುವುದಿಲ್ಲ. ಮಗ ಸಂಪಾದನೆ ಮಾಡಿ ಮನೆಯಲ್ಲಿರುವ ಹೆಂಡತಿಗೆ ಹಣ ಕಳುಹಿಸುತ್ತಾನೆ. ಅವಳೇ ಮನೆಯ ಮುಖಿಯಾ (ಮುಖ್ಯಸ್ಥೆ) ಕಾಪರ್-ಟಿ, ಅಥವಾ ಜನನ ನಿಯಂತ್ರಣ ಮಾತ್ರೆಗಳು ಅಥವಾ ಚುಚ್ಚುಮದ್ದುಗಳನ್ನು ಬಳಸಿಕೊಂಡು ಇಬ್ಬರು ಮಕ್ಕಳ ನಡುವಿನ ಅಂತರವನ್ನು ಕಾಪಾಡಿಕೊಳ್ಳುವ ಬಗ್ಗೆ ನಾವು ಅವರಿಗೆ ಕಲಿಸುತ್ತೇವೆ. ಮತ್ತು ಎರಡು ಅಥವಾ ಮೂರು ಮಕ್ಕಳಿದ್ದರೆ, ಶಸ್ತ್ರಚಿಕಿತ್ಸೆಗೆ (ಸಂತಾನಹರಣ ಶಸ್ತ್ರಚಿಕಿತ್ಸೆ) ಒಳಗಾಗುವಂತೆ ನಾವು ಅವಳಿಗೆ ಶಿಫಾರಸು ಮಾಡುತ್ತೇವೆ."
ಹಸನ್ ಪುರದ ಜನರು ಈ ಪ್ರಯತ್ನಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಸಲ್ಹಾ ಪ್ರಕಾರ: "ಲೈನ್ ಪೇ ಆಗಯೇ.[ದಾರಿಗೆ ಬಂದಿದ್ದಾರೆ]"
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಇದಕ್ಕಾಗಿ ಈ ಇ - ಮೈಲ್ ವಿಳಾಸವನ್ನು ಸಂಪರ್ಕಿಸಿ : zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org . ಈ ವಿಳಾಸಕ್ಕೆ ಕಳಿಸಿ
ಅನುವಾದ: ಶಂಕರ ಎನ್. ಕೆಂಚನೂರು