ಎಂ. ಕರುಪ್ಪಯ್ಯ ತಾನು ಕೊಂಬು ನುಡಿಸುತ್ತಿರುವಾಗಲೇ ಸಾಯಬೇಕೆಂದು ಬಯಸುತ್ತಾರೆ. ಈ ಕೊಂಬು ಎನ್ನುವುದು ಐತಿಹಾಸಿಕವಾಗಿ ಯುದ್ಧದ ಪ್ರಾರಂಭವನ್ನು ಘೋಷಿಸಲೆಂದು ಊದುವ ದೊಡ್ಡ ದನಿಯ ಗಾಳಿ ವಾದ್ಯ. ಇದೊಂದು ರೀತಿಯಲ್ಲಿ ಸಂಗೀತಕ್ಕಾಗಿ ಸಾಯುವುದೇ ಆಗಿದೆ. ಆದರೆ ಹಿತ್ತಾಳೆ ಅಥವಾ ಕಂಚಿನಿಂದ ಮಾಡಿದ ಮತ್ತು ಆನೆಯ ಸೊಂಡಿಲಿನ ಆಕಾರದಲ್ಲಿರುವ ಈ ಕೊಂಬನ್ನು ನುಡಿಸುತ್ತಾ ಪ್ರಪಂಚದಿಂದ ನಿರ್ಗಮಿಸಲು ಕರುಪ್ಪಯ್ಯ ಬಯಸುವುದು ಈ ಕಾರಣಕ್ಕಲ್ಲ.

49 ವರ್ಷದ ಕರುಪ್ಪಯ್ಯನವರ ಪಾಲಿಗೆ ಕೊಂಬು ಒಂದು ಮಹಾನ್‌ ಕಲಾ ಪ್ರಕಾರ. ಮತ್ತು ಅವರು ನಾಲ್ಕನೇ ತಲೆಮಾರಿನ ಕಲಾವಿದ, ಮದುರೈನಲ್ಲಿರುವ ತನ್ನ ಹಳ್ಳಿಯಲ್ಲಿ ಜೀವನಕ್ಕಾಗಿ ಸಂಪಾದಿಸಲು ಅವರು ಬಲವಂತವಾಗಿ ಆಟೊರಿಕ್ಷಾಕ್ಕಿಂತ ವಾದ್ಯಕ್ಕೆ ಹೆಚ್ಚು ಅಂಟಿಕೊಂಡಿದ್ದಾರೆ.

ಸುಮಾರು ಮೂರು ದಶಕಗಳ ಹಿಂದೆ, ಈ ಕಲೆ “ಉನ್ನತ” ರೂಪದಲ್ಲಿತ್ತು ಎಂದು ಕರುಪ್ಪಯ್ಯ ಹೇಳುತ್ತಾರೆ. 1991ರಲ್ಲಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರೆದುರು ನುಡಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ಅಂದು ಅವರು ಕೊಂಬಿನ ದನಿಗೆ ಮರುಳಾಗಿದ್ದರು! ನಮ್ಮನ್ನು ಇನ್ನೊಮ್ಮೆ ಬಾರಿಸುವಂತೆ ಕೇಳಿಕೊಂಡರು"

ಆದರೆ ಇತ್ತೀಚಿನ ದಿನಗಳಲ್ಲಿ, ಅವರಿಗೆ ಮತ್ತು ತಿರುಪರಂಕುಂಡ್ರಮ್ ಬ್ಲಾಕ್‌ನಲ್ಲಿರುವ ಅವರ ಗ್ರಾಮವಾದ ಮೇಲಕುಯಿಲ್ಕುಡಿಯಲ್ಲಿರುವ ಇತರ ಕೊಂಬು ಕಲಾವಿದರಿಗೆ ಕೆಲಸವು ತೀರಾ ಕಡಿಮೆಯಾಗಿದೆ. ಈಗಾಗಲೇ ಕ್ಷೀಣಿಸುತ್ತಿದ್ದ ಈ ಲಯಬದ್ಧ ಕಲಾ ಪ್ರಕಾರವು ಪ್ರಸ್ತುತ ಪಾಪ್ ಸಂಸ್ಕೃತಿಯಿಂದ ಸಾಕಷ್ಟು ಮರೆಯಾಗುತ್ತಿದೆ, ಜೊತಗೆ ಮಾರ್ಚ್ 2020ರಿಂದ ಕೋವಿಡ್ ಲಾಕ್‌ಡೌನ್‌ಗಳಲ್ಲಿ ಬಹಳವಾಗಿ ದುರ್ಭರ ದಿನಗಳನ್ನು ಕಂಡಿತು. ಕಲಾವಿದರು ಕೆಲಸ ಮತ್ತು ಹಣದ ಕೊರತೆಯನ್ನು ಎದುರಿಸುತ್ತಿದ್ದಾರೆ.

ಕರುಪ್ಪಯ್ಯನವರಿಗೆ ದೇವಾಲಯದ ಉತ್ಸವ, ಸಾರ್ವಜನಿಕ ಸಮಾರಂಭ ಅಥವಾ ಸಾವಿನ ಸಮಯದಲ್ಲಿ ಕೆಲಸ ಸಿಕ್ಕಿದರೆ, ಅವರಿಗೆ ಒಂದು ಕೆಲಸಕ್ಕೆ 700ರಿಂದ 1000 ರೂ. ಸಿಗುತ್ತದೆ. “ಕಳೆದ ವರ್ಷದಿಂದ, ಲಾಕ್‌ಡೌನ್‌ ಕಾರಣ ನಾವು ಅಳಗರ್ ಕೋಯಿಲ್ ತಿರುವಿಳಾದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ, ನಾವು ಸತತವಾಗಿ ಎಂಟು ದಿನ ಕೆಲಸ ಮಾಡುತ್ತಿದ್ದೆವು.” ಮಧುರೈನಿಂದ 20 ಕಿ.ಮೀ ದೂರದಲ್ಲಿರುವ ಅಳಗರ್ ಕೋಯಿಲ್ ದೇವಸ್ಥಾನದಲ್ಲಿ ಪ್ರತಿವರ್ಷ (ಏಪ್ರಿಲ್-ಮೇ) ಆಚರಿಸಲಾಗುವ ಈ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಕೊಂಬು ಕಲಾವಿದರು ಅಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ.

“ಎಲ್ಲರೂ ಕೊಂಬು ನುಡಿಸಲು ಸಾಧ್ಯವಿಲ್ಲ. ಇದು ಸಾಕಷ್ಟು ಕೌಶಲ್ಯವನ್ನು ಬಯಸುತ್ತದೆ” ಎಂದು ಜಾನಪದ ಕಲಾವಿದರು ಮತ್ತು ಕಲೆಗಳನ್ನು ಬೆಂಬಲಿಸುವ ಚೆನ್ನೈನ ಸಂಘಟನೆಯಾದ ಆಲ್ಟರ್ನೇಟಿವ್‌ ಮೀಡಿಯಾ ಸೆಂಟರ್ (ಎಎಂಸಿ) ಸಂಸ್ಥಾಪಕ ಆರ್.ಕಾಳೀಶ್ವರನ್ ಹೇಳುತ್ತಾರೆ. ವಾದ್ಯವನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ ನುಡಿಸಲಾಗುತ್ತದೆ, ಮತ್ತು ಅದರ ನಂತರ ನಡು ನಡುವೆ ನುಡಿಸಲಾಗುತ್ತದೆ,  ಆದರೆ ನಿರಂತರವಾಗಿ ನುಡಿಸಲಾಗುವುದಿಲ್ಲ. ಆದ್ದರಿಂದ ಕಲಾವಿದರು ಸಾಮಾನ್ಯವಾಗಿ 15 ನಿಮಿಷಗಳ ಕಾಲ ನುಡಿಸುತ್ತಾರೆ, ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತಾರೆ ನಂತರ ಮತ್ತೆ 15 ನಿಮಿಷಗಳ ಕಾಲ ನುಡಿಸುತ್ತಾರೆ." ವಿಶಿಷ್ಟವಾಗಿ, ಕಲಾವಿದ ಬಹಳ ಆಳವಾದ ಉಸಿರನ್ನು ಎಳೆಯುತ್ತಾನೆ ಮತ್ತು ಅದರೊಳಗೆ [ಕೊಂಬು] ಊದುತ್ತಾನೆ." ಉಸಿರಾಟದ ಬಗ್ಗೆ ಅವರಿಗಿರುವ ಪಾಂಡಿತ್ಯ ಅದ್ಭುತ, ಸುಮಾರು 100 ವರ್ಷ ವಯಸ್ಸಿನ ಕಲಾವಿದರು ಈಗಲೂ ಇದ್ದಾರೆ ಎಂದು ಕಾಳೀಶ್ವರನ್ ಹೇಳುತ್ತಾರೆ.

Left: M. Karuppiah is a fourth-generation kombu artiste. Right: K. Periasamy is the leader of the artistes' group in Melakuyilkudi
PHOTO • M. Palani Kumar
Left: M. Karuppiah is a fourth-generation kombu artiste. Right: K. Periasamy is the leader of the artistes' group in Melakuyilkudi
PHOTO • M. Palani Kumar

ಎಡ: ಎಂ. ಕರುಪ್ಪಯ್ಯ ನಾಲ್ಕನೇ ತಲೆಮಾರಿನ ಕೊಂಬು ಕಲಾವಿದ. ಬಲ: ಮೇಲಕುಯಿಲ್ಕುಡಿಯಲ್ಲಿನ ಕಲಾವಿದರ ಗುಂಪಿನ ನಾಯಕ ಕೆ. ಪರಿಯಾಸಾಮಿ

ಕೆ. ಪೆರಿಯಾಸಾಮಿ (65), ಮೆಲಕುಯಿಲ್ಕುಡಿಯಲ್ಲಿನ ಕಲಾವಿದರ ಗುಂಪಾದ ʼಕೊಂಬು ಕಾಳೈ ಕುಳುʼವಿನ ಮುಖ್ಯಸ್ಥರು. ಅವರಿಗೆ ತಿಳಿದಿರುವುದು ಕೊಂಬು ನುಡಿಸುವುದು ಮಾತ್ರ. ಈ ಕಲೆಯನ್ನು ಅವರು ಅನೇಕರಿಗೆ ಕಲಿಸಿದ್ದಾರೆ. ಪ್ರಸ್ತುತ 30ರಿಂದ 65 ವರ್ಷದೊಳಗಿನ ಈ ವಾದ್ಯವನ್ನು ನುಡಿಸುತ್ತಿರುವ ಹೆಚ್ಚಿನ ಜನರು ಇವರಿಂದ ಈ ಕಲೆಯನ್ನು ಕಲಿತವರು. “ನಮಗೆ ಬೇರೆ ಯಾವುದೇ ಕೆಲಸ ಸಿಗುವುದಿಲ್ಲ. ಈಗ ನಮ್ಮಲ್ಲಿರುವುದು ಪಡಿತರ ಅರಿಸಿ [ಅಕ್ಕಿ] ಮಾತ್ರ, ಅದು ಕೂಡ ಕಳಪೆ ಗುಣಮಟ್ಟದ್ದಾಗಿದೆ. ನಾವು ಹೇಗೆ ಬದುಕು ನಡೆಸುವುದು?” ಪೆರಿಯಾಸಾಮಿ ಹೇಳುತ್ತಾರೆ.

ಅವರ ಮನೆಯಲ್ಲಿದ್ದ ಅಮೂಲ್ಯ ವಸ್ತುಗಳಾದ - ಸ್ಟೀಲಿನ ಮಡಕೆ, ಕಂಚಿನ ಅನ್ನದ ಪಾತ್ರೆ, ಅವರ ಹೆಂಡತಿಯ ತಾಳಿ ಎಲ್ಲವನ್ನೂ ಅಡವಿಟ್ಟಿದ್ದಾರೆ. "ಈಗ ನಮ್ಮಲ್ಲಿ ನೀರು ತರಲು ಇರುವ ಪ್ಲಾಸ್ಟಿಕ್‌ ಬಿಂದಿಗಳನ್ನು ಬಿಟ್ಟು ಏನೂ ಉಳಿದಿಲ್ಲ" ಎಂದು ನಿಟ್ಟುಸಿರು ಬಿಡುತ್ತಾ ಪೆರಿಯಾಸಾಮಿ ಹೇಳುತ್ತಾರೆ. ಆದರೆ ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಅವರು ತನ್ನ ಬದುಕಿಗಿಂತ ಈ ಕಲಾ ಪ್ರಕಾರದ ಕುರಿತಾಗಿಯೇ ಚಿಂತಿತರಾಗಿದ್ದಾರೆ. ಸರಕಾರ ಕಲೆ ಮತ್ತು ಕಲಾವಿದರ ಸಹಾಯಕ್ಕೆ ಬರದಿದ್ದರೆ ಕಲಾವಿದರೊಂದಿಗೆ ಕಲೆಯೂ ನಾಶವಾಗುತ್ತದೆಯೆಂದು ನಿರಾಶೆಯಿಂದ ಹೇಳುತ್ತಾರೆ.

ಮೇಲಕುಯಿಲ್ಕುಡಿಯ 20ಕ್ಕೂ ಹೆಚ್ಚಿನ ಕೊಂಬು ಕಲಾವಿದರ ನಡುವೆ 15 ವಾದ್ಯಗಳಿವೆ. ಕೊಂಬುಗಳು ಸಮುದಾಯದೊಡನೆ 40 ವರ್ಷಗಳಿಂದಲೂ ಇವೆ. ಕುಟುಂಬ ಆಸ್ತಿಯಾಗಿ ಬರುವ ವಾದ್ಯಗಳಾದ ಹಳೆಯ ಕೊಂಬನ್ನು ಅಂಟಿನ ಟೇಪ್‌ ಸುತ್ತಿ ಜೋಪಾನ ಮಾಡಲಾಗುತ್ತದೆ. ಕಾಲ ಕೆಟ್ಟದಿರುವಾಗ, ಈ ವಾದ್ಯಗಾರರು ತಮ್ಮ ಕೊಂಬನ್ನು ಅಡವಿಡುತ್ತಾರೆ ಅಥವಾ ಮಾರಾಟ ಮಾಡುತ್ತಾರೆ. ಹೊಸ ಉಪಕರಣಗಳು ದುಬಾರಿಯಾಗಿದ್ದು, ರೂ. 20,000-25,000 ಬೆಲೆ ಬಾಳುತ್ತವೆ, ಮತ್ತು 250 ಕಿಲೋಮೀಟರ್ ದೂರದಲ್ಲಿರುವ ಕುಂಬಕೋಣಂನಲ್ಲಿ ಮಾತ್ರ ದೊರೆಯುತ್ತವೆ.

ತಮ್ಮ 30ರ ಹರೆಯದಲ್ಲಿರುವ ಪಿ. ಮಗರಾಜನ್ ಮತ್ತು ಜಿ. ಪಾಲ್‌ಪಾಂಡಿ, ತಮಗೆ 10 ವರ್ಷ ತುಂಬುವ ಮೊದಲೇ ಕೊಂಬು ನುಡಿಸುವುದನ್ನು ಕಲಿತಿದ್ದರು. ಅವರಿಬ್ಬರೂ ಈ ಕಲಾ ಪ್ರಕಾರದೊಂದಿಗೇ ಬೆಳೆದಿದ್ದಾರೆ ಮತ್ತು ಆಗಲೇ ಸಂಭಾವನೆ ಪಡೆದಿದ್ದೂ ಇದೆ. “ನಾನು 10 ವರ್ಷದವನಿದ್ದಾಗ, ಕೊಂಬು ಊದಿದ್ದಕ್ಕಾಗಿ ನನ್ನ ಪಾಲು 50 ರೂಪಾಯಿಗಳನ್ನು ನೀಡಿದರು. ಅಂದು ನಾನು ರೋಮಾಂಚನಗೊಂಡಿದ್ದೆ. ಈಗ ನನಗೆ 700 ರೂಪಾಯಿ ಸಿಗುತ್ತದೆ” ಎಂದು ಮಗಾರಾಜನ್ ಹೇಳುತ್ತಾರೆ.

ಕಲ್ಲು ಕೆಲಸ ಮಾಡುವ ಪಾಲ್‌ಪಾಂಡಿ ದಿನಕ್ಕೆ 700 ರೂಪಾಯಿಗಳನ್ನು ದುಡಿಯುತ್ತಾರೆ. ಸ್ಥಿರ ಆದಾಯ ಮತ್ತು ನಿರಂತರ ಕೆಲಸದ ಹೊರತಾಗಿಯೂ ಅವರಿಗೆ ಖುಷಿ ಕೊಡುವುದು ಕೊಂಬು ಊದುವ ಕೆಲಸ. ಈ ಕೆಲಸವನ್ನು ಅವರು ಅವರ ತಾತನಿಂದ ಕಲಿತರು. "ತಾತ ಇರುವವರೆಗೂ ನನಗೆ ಈ ಕಲೆಯ ಮಹತ್ವ ತಿಳಿದಿರಲಿಲ್ಲ." ಎಂದು ಅವರು ಹೇಳುತ್ತಾರೆ. ಈಗ ಲಾಕ್‌ಡೌನ್‌ ಅವರಿಗೆ ಎರಡೆರಡು ಹೊಡೆತವನ್ನು ನೀಡಿದೆ. ಅತ್ತ ಕೊಂಬು ಊದುವ ಕೆಲಸವೂ ಇಲ್ಲ ಇತ್ತ ನಿರ್ಮಾಣ ಕಾರ್ಯಗಳೂ ನಿಂತಿವೆ. "ನಾನು ಸಹಾಯಕ್ಕಾಗಿ ಕಾಯುತ್ತಿದ್ದೇನೆ"

"ಸಹಾಯ ಕಾಳೀಶ್ವರನ್ ಸರ್ ಅವರಿಂದ ಬಂದಿದೆ" ಎಂದು ಕರುಪ್ಪಯ್ಯ ಹೇಳುತ್ತಾರೆ. ಮೇ ತಿಂಗಳಲ್ಲಿ ತಮಿಳುನಾಡು ಲಾಕ್‌ಡೌನ್‌ ಆದಾಗ ಕಾಳೀಶ್ವರನ್‌ ಅವರ ಎಎಂಸಿ ಪ್ರತಿ ಕಲಾವಿದ ಕುಟುಂಬಕ್ಕೆ 10 ಕಿಲೋ ಅಕ್ಕಿ ನೀಡಿತು. ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿರುವ, ಕರುಪ್ಪಯ್ಯನವರದು ದೊಡ್ಡ ಕುಟುಂಬ. ಆದರೆ ಅವರು ನೋಡಿಕೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ. "ನಾವು ಹೊಲಗಳಿಂದ ಬದನೆಕಾಯಿ ಮತ್ತು ಈರುಳ್ಳಿಯಂತಹ ತರಕಾರಿಗಳನ್ನು ಕಿತ್ತು ತಂದು ಬಳಸಬಹುದು. ಆದರೆ ನಗರಗಳಲ್ಲಿನ ಜನರು ಏನು ಮಾಡುತ್ತಾರೆ? ”

PHOTO • M. Palani Kumar

ಕೊಂಬು ಕಾಳೈ ಕುಳು, ಮೇಲಕುಯಿಲ್ಕುಡಿಯಲ್ಲಿನ ಕೊಂಬು ಕಲಾವಿದರ ಗುಂಪು ಮತ್ತು ಕೆಲವು ಕುಟುಂಬ ಸದಸ್ಯರು

PHOTO • M. Palani Kumar

ಕೆ. ಪೆರಿಯಾಸಾಮಿ ತಮ್ಮ ಮೊ‌ಮ್ಮಕ್ಕಳೊಂದಿಗೆ. ಅವರು ಈ ಸಾಂಪ್ರದಾಯಿಕ ವಾದ್ಯವನ್ನು ನುಡಿಸಲು ಅನೇಕರಿಗೆ ಕಲಿಸಿದ್ದಾರೆ

PHOTO • M. Palani Kumar

ಜಿ.ಪಾಲ್‌ಪಾಂಡಿ ಅವರಿಗೆ ತಮ್ಮ ಅಜ್ಜನಿಂದ ನುಡಿಸಲು ಕಲಿತ ಕೊಂಬು ಕಲೆಯೆಂದರೆ ಪ್ರೀತಿ

PHOTO • M. Palani Kumar

ಸತೀಶ್, 10 (ಎಡ), ಮತ್ತು ಕೆ.ಅರುಸಾಮೆ, 17 (ಬಲ), ಮೇಲಕುಯಿಲ್ಕುಡಿಯ ಮುಂದಿನ ತಲೆಮಾರಿನ ಕೊಂಬು ಕಲಾವಿದರು. ಅವರು ಈ ವಾದ್ಯ ಪರಂಪರೆ ಮುಂದುವರಿಸಲು ಉತ್ಸುಕರಾಗಿದ್ದಾರೆ

PHOTO • M. Palani Kumar

ಎಡ: ಎ. ಮಲರ್, ವಯಸ್ಸು 55. 1991ರಲ್ಲಿ ಅವರು ಕೊಂಬು ನುಡಿಸಿದ ಸಂಭಾವನೆಯಾಗಿ ದಿನಕ್ಕೆ 100 ರೂ ಪಡೆಯುತ್ತಿದ್ದರು. ಈಗ ನನಗೆ 800-1000 ರೂ ಸಿಗುತ್ತಿದೆ ಎನ್ನುತ್ತಾರೆ. ಬಲ: ತನಗೆ ಈಗ ಸಾಕಷ್ಟು ಕೆಲಸ ಸಿಗುತ್ತಿಲ್ಲವೆನ್ನುವುದು ಕರುಪ್ಪಯ್ಯನವರ ಅಳಲು

PHOTO • M. Palani Kumar

ಪಿ. ಮಗರಾಜನ್, 35, ತನ್ನ ಏಳನೇ ವಯಸ್ಸಿನಲ್ಲಿ ವಾದ್ಯ ನುಡಿಸಲು ಪ್ರಾರಂಭಿಸಿದರು

PHOTO • M. Palani Kumar

ಪಿ. ಆಂಡಿ, 57, ಮೇಲಕುಯಿಲ್ಕುಡಿಯಲ್ಲಿ ಮಕ್ಕಳಿಗೆ ಕೊಂಬು ನುಡಿಸುವ ತರಬೇತಿ ನೀಡುತ್ತಾರೆ

PHOTO • M. Palani Kumar

ಎಡದಿಂದ: ಪಿ. ಆಂಡಿ, ಪಿ. ಮಗರಾಜನ್, ಮತ್ತೊಬ್ಬ ಕಲಾವಿದ (ಹೆಸರು ತಿಳಿದಿಲ್ಲ) ಮತ್ತು ಕೆ. ಪೆರಿಯಸಾಮಿ, ಅವರ ವಾದ್ಯಗಳೊಂದಿಗೆ. ಎಸ್ ಆಕಾರದ ಕೊಂಬು ಹಿತ್ತಾಳೆ ಅಥವಾ ಕಂಚಿನಿಂದ ಮಾಡಲ್ಪಟ್ಟಿರುತ್ತದೆ

ಈ ಲೇಖನದ ಪಠ್ಯವನ್ನು ವರದಿಗಾರರ ಸಹಯೋಗದೊಂದಿಗೆ ಅಪರ್ಣಾ ಕಾರ್ತಿಕೇಯನ್ ಬರೆದಿದ್ದಾರೆ.

ಅನುವಾದ: ಶಂಕರ ಎನ್. ಕೆಂಚನೂರು

M. Palani Kumar

M. Palani Kumar is PARI's Staff Photographer and documents the lives of the marginalised. He was earlier a 2019 PARI Fellow. Palani was the cinematographer for ‘Kakoos’, a documentary on manual scavengers in Tamil Nadu, by filmmaker Divya Bharathi.

Other stories by M. Palani Kumar
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru