ಗಡುಸಾಗಿದ್ದ ಮಣ್ಣಿನ ಚಿಕ್ಕ ಗೂಡೊಂದರಲ್ಲಿ ಏಡಿಯು ಸತ್ತುಬಿದ್ದಿದ್ದು, ಅದರ ಕಾಲುಗಳು ಶರೀರದಿಂದ ಪ್ರತ್ಯೇಕಗೊಂಡಿದ್ದವು. ತನ್ನ ಐದು ಎಕರೆಯ ಭತ್ತದ ಜಮೀನಿನಾದ್ಯಂತ ಇದ್ದ ಕುಳಿಗಳನ್ನು ತೋರಿಸುತ್ತಾ ದೇವೇಂದ್ರ ಭೊಂಗಡೆ, “ಧಗೆಯ ಕಾರಣದಿಂದಾಗಿ ಇವು ಸಾಯುತ್ತಿವೆ” ಎಂದು ತಿಳಿಸಿದರು.
ಒಣಗುತ್ತಿರುವ ಹಳದಿ ವರ್ಣಯುಕ್ತ ಹಸಿರು ಭತ್ತದ ನಡುವೆ ನಿಂತ 30ರ ಹೊಸ್ತಿಲಲ್ಲಿರುವ ಆತ ಆತಂಕದಿಂದ ಹೇಳತೊಡಗಿದರು: “ಮಳೆ ಸುರಿದಲ್ಲಿ, ಏಡಿಗಳು ಕಾವು ಕೊಡಲು ಹಿಂಡು ಹಿಂಡಾಗಿ ಚಲಿಸುವುದನ್ನು ನೋಡುತ್ತೀರಿ. ನನ್ನ ಎಳೆಯ ಗಿಡಗಳು ಉಳಿಯುವುದಿಲ್ಲ.”
542 ಜನರ (2011ರ ಜನಗಣತಿ) ಆತನ ಜಿಲ್ಲೆ, ರಾವಣ್‍ವಾಡಿಯಲ್ಲಿ, ಜೂನ್ ಮೊದಲಾರ್ಧದಲ್ಲಿನ ಮಳೆಗಾಲದ ಆರಂಭದಲ್ಲಿ ರೈತರು ತಮ್ಮ ಜಮೀನಿನ ಚಿಕ್ಕ ಸಸಿಪಾತಿಗಳಲ್ಲಿ ಬೀಜಗಳನ್ನು ಬಿತ್ತುತ್ತಾರೆ. ಒಂದೆರಡು ಬಾರಿ ಉತ್ತಮವಾಗಿ ಮಳೆ ಸುರಿದ ನಂತರ ಒಡ್ಡುಗಳಿಂದ ಸುತ್ತುವರಿದ ನೇಗಿಲ ಸಾಲುಗಳು ಕೆಸರಿನ ನೀರಿನಿಂದ ತುಂಬುತ್ತಿದ್ದಂತೆಯೇ 3ರಿಂದ 4ವಾರಗಳ ಸಸಿಗಳನ್ನು ತಮ್ಮ ಹೊಲಗಳಲ್ಲಿ ನೆಡುತ್ತಾರೆ.
ಮಳೆಗಾಲವು ಪ್ರಾರಂಭಗೊಳ್ಳುವ ಆರು ವಾರಗಳ ಕಳೆದು, ಈ ವರ್ಷದ ಜುಲೈ 20ರ ನಂತರದಲ್ಲೂ ರಾವಣ್‍ವಾಡಿಯಲ್ಲಿ ಮಳೆಯು ಸುರಿದಿಲ್ಲ. ಎರಡು ಬಾರಿ ತುಂತುರು ಮಳೆಯಾದಾಗ್ಯೂ, ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಲಿಲ್ಲ ಎನ್ನುತ್ತಾರೆ ಭೊಂಗಡೆ. ಬಾವಿಗಳನ್ನು ಹೊಂದಿರುವ ರೈತರು, ಭತ್ತದ ಸಸಿಗಳಿಗೆ ನೀರನ್ನು ಒದಗಿಸುತ್ತಿದ್ದಾರೆ. ಬಹುತೇಕ ಜಮೀನುಗಳಲ್ಲಿ ಕೆಲಸವಿಲ್ಲದ ಕಾರಣ, ಭೂರಹಿತ ಕಾರ್ಮಿಕರು ದಿನಗೂಲಿಯನ್ನರಸಿ ಗ್ರಾಮವನ್ನು ತೊರೆಯುತ್ತಿದ್ದಾರೆ.
*****
ಸುಮಾರು 20 ಕಿ.ಮೀ. ದೂರದ ಗರಡ ಜಂಗ್ಲಿ ಗ್ರಾಮದಲ್ಲಿ ಲಕ್ಷ್ಮಣ್ ಬಂಟೆ ಎಂಬುವವರೂ ಕೆಲವು ಸಮಯದಿಂದ ಈ ಅಭಾವವನ್ನು ಗಮನಿಸುತ್ತಿದ್ದಾರೆ. ಜೂನ್ ಮತ್ತು ಜುಲೈನಲ್ಲಿ ಮಳೆಯೇ ಇಲ್ಲವಾಗಿದೆ ಎಂದ ಅವರ ಮಾತಿಗೆ ಇತರರೂ ಹೌದೆಂದು ತಲೆಯಾಡಿಸಿದರು. 2ರಿಂದ 3 ವರ್ಷಗಳಿಗೊಮ್ಮೆ ಅವರು ತಮ್ಮೆಲ್ಲ ಮುಂಗಾರು ಬೆಳೆಯನ್ನೂ ಕಳೆದುಕೊಳ್ಳುತ್ತಾರೆ.
ಸುಮಾರು 50ವರ್ಷದ ಬಂಟೆ, ತಮ್ಮ ಬಾಲ್ಯದಲ್ಲಿ ಹೀಗಿರಲಿಲ್ಲವೆಂತಲೂ; ಮಳೆಯು ಏಕರೂಪವಾಗಿದ್ದು, ಭತ್ತದ ಫಸಲನ್ನು ನಾವು ಆಶ್ರಯಿಸಬಹುದಾಗಿತ್ತು ಎಂಬುದಾಗಿಯೂ ನೆನೆಸಿಕೊಳ್ಳುತ್ತಾರೆ.
2019 ನಷ್ಟದ ಮತ್ತೊಂದು ವರ್ಷವೆಂಬುದಾಗಿ ಹೇಳಬಹುದು. ರೈತರು ವ್ಯಾಕುಲಗೊಂಡಿದ್ದರು. “ಮುಂಗಾರಿನಲ್ಲಿ ನನ್ನ ಭೂಮಿಯು ಸಾಗುವಳಿ ಇಲ್ಲದಂತಾಗುತ್ತದೆ”ಎಂದು ಭಯಭೀತರಾಗಿದ್ದ ನಾರಾಯಣ್ ಉಯಿಕೆ, (ನೆಲದಲ್ಲಿ ಕುಳಿತವರು: ಮುಖಪುಟ ಚಿತ್ರವನ್ನು ಗಮನಿಸಿ.) 1.5 ಎಕರೆಯ ಭೂಮಿಯಲ್ಲಿ 5 ದಶಕಗಳಿಂದಲೂ ವ್ಯವಸಾಯದಲ್ಲಿ ತೊಡಗಿರುವ 70 ವರ್ಷದ ಹಿರಿಯರು. ಇವರು ಕೂಲಿ ಕಾರ್ಮಿಕರಾಗಿ ತಮ್ಮ ಬಹುಪಾಲು ಜೀವನವನ್ನು ವ್ಯಯಿಸಿದ್ದಾರೆ. “2015 ಹಾಗೂ 2017ರಲ್ಲೂ ಭೂಮಿಯು ಪಾಳು ಬಿದ್ದಿತ್ತು...” ಎಂಬುದನ್ನು ನೆನಪಿಸಿಕೊಂಡ ಅವರು, “ಕಳೆದ ವರ್ಷವೂ ಸಹ ಮಳೆಯು ವಿಳಂಬದಿಂದಾಗಿ, ಬಿತ್ತನೆಯು ತಡವಾಯಿತು. ಮಳೆಯು ತಡವಾದಲ್ಲಿ, ಫಸಲು ಹಾಗೂ ವರಮಾನವೂ ಕುಂಠಿತಗೊಳ್ಳುತ್ತದೆ. ರೈತರು ಬಿತ್ತನೆಗೆ ಕೂಲಿಯವರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಕಾರಣ, ಕೃಷಿ ಸಂಬಂಧಿತ ಕೂಲಿಯ ಕೆಲಸಗಳೂ ವಿರಳವಾಗುತ್ತವೆ”ಎಂದು ಅವರು ತಿಳಿಸಿದರು.
ಭಂಡಾರ ತಾಲ್ಲೂಕು ಮತ್ತು ಜಿಲ್ಲೆಯಿಂದ ಸುಮಾರು 20 ಮೈಲಿ ದೂರದಲ್ಲಿರುವ 496 ಜನರನ್ನೊಳಗೊಂಡ ಗರಡ ಜಂಗ್ಲಿಯು ಸಣ್ಣದೊಂದು ಗ್ರಾಮ. ರಾವಣ್‍ವಾಡಿಯಂತೆಯೇ ಇಲ್ಲಿನ ಅನೇಕ ರೈತರು, ಒಂದರಿಂದ ನಾಲ್ಕು ಎಕರೆಗಳ ಚಿಕ್ಕ ಜಮೀನುಗಳನ್ನು ಹೊಂದಿದ್ದು, ನೀರಾವರಿಗೆ ಮಳೆಯನ್ನೇ ಆಶ್ರಯಿಸಿದ್ದಾರೆ. ಮಳೆಯು ವಿಫಲಗೊಂಡಲ್ಲಿ, ಜಮೀನಿನ ಕೃಷಿಯೂ ವಿಫಲವಾಗುತ್ತದೆ ಎನ್ನುತ್ತಾರೆ ಗೊಂಡ್ ಆದಿವಾಸಿಯಾದ ಉಯಿಕೆ.
ಈ ವರ್ಷದ ಜುಲೈ 20ರ ಸುಮಾರಿಗೆ ಇವರ ಗ್ರಾಮದ ಬಹುತೇಕ ಎಲ್ಲ ಜಮೀನುಗಳ ಬಿತ್ತನೆಯನ್ನೂ ನಿಲ್ಲಿಸಲಾಯಿತಲ್ಲದೆ, ಸಸಿಪಾತಿಗಳಲ್ಲಿನ ಸಸಿಗಳೆಲ್ಲವೂ ಒಣಗತೊಡಗಿದವು.
ಆದರೆ ದುರ್ಗಾಬಾಯಿ ದಿಘೋರೆಯವರ ಜಮೀನಿನಲ್ಲಿ ಅರ್ಧಕ್ಕೆ ಬೆಳೆದ ಎಳೆಯ ಗಿಡಗಳನ್ನು ನಾಟಿಮಾಡುವ ಹತಾಶ ಪ್ರಯತ್ನವನ್ನು ತ್ವರಿತಗೊಳಿಸಲಾಯಿತು. ಇವರ ಜಮೀನಿನಲ್ಲಿ ಕೊಳವೆಬಾವಿಯು ಸೌಲಭ್ಯವಿತ್ತು. ಗರಡದಲ್ಲಿ ಕೇವಲ ನಾಲ್ಕು ಅಥವ ಐದು ರೈತರಿಗೆ ಮಾತ್ರ ಈ ಅನುಕೂಲವಿದೆ. 80 ಅಡಿಯ ಅವರ ಬಾವಿಯು ಒಣಗಿದಾಗ, ಎರಡು ವರ್ಷಗಳ ಕೆಳಗೆ ಬಾವಿಯಲ್ಲಿಯೇ 150 ಅಡಿ ಆಳದ ಕೊಳವೆಬಾವಿಯನ್ನು ಇವರು ಕೊರೆಸಿದರು. ಇದೂ ಸಹ ಒಣಗಿದಾಗ 2018ರಲ್ಲಿ ಹೊಸ ಕೊಳವೆಬಾವಿಯನ್ನು ಕೊರೆಸಲಾಯಿತು.
ಕೊಳವೆಬಾವಿಗಳು ಇಲ್ಲಿನ ಹೊಸ ದೃಶ್ಯಗಳಾಗಿವೆ. ಕೆಲವು ವರ್ಷಗಳ ಹಿಂದೆ ಇವು ಈ ಭಾಗದಲ್ಲೆಲ್ಲಿಯೂ ಕಂಡುಬರುತ್ತಿರಲಿಲ್ಲ. “ಹಿಂದೆಲ್ಲ ಕೊಳವೆಬಾವಿಯ ಅವಶ್ಯಕತೆಯೇ ಇರಲಿಲ್ಲ. ಈಗ ನೀರು ಸಿಗುವುದೇ ದುರ್ಲಭವೆನಿಸಿದೆ. ಮಳೆಯನ್ನು ನೆಚ್ಚುವಂತೆಯೇ ಇಲ್ಲ. ಹೀಗಾಗಿ ಜನರು ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ”ಎಂಬುದಾಗಿ ಅವರು ತಿಳಿಸಿದರು.
ಊರಿನ ಎರಡು ಮಾಲ್‍ಗುಜಾರಿ ಕೆರೆಗಳೂ ಮಾರ್ಚ್ 2019ರಿಂದಲೂ ಒಣಗಿಹೋಗಿವೆ ಎಂಬ ವಿಷಯವನ್ನು ಬಂಟೆ ತಿಳಿಸಿದರು. ಸಾಮಾನ್ಯವಾಗಿ ಮಳೆಯಿಲ್ಲದ ತಿಂಗಳುಗಳಲ್ಲಿಯೂ ಇದರಲ್ಲಿ ಸ್ವಲ್ಪ ನೀರಿರುತ್ತಿತ್ತು. ಕೊಳವೆಬಾವಿಗಳ ಸಂಖ್ಯೆ ಹೆಚ್ಚಾಗಿದ್ದು ಅವು ಕೆರೆಗಳ ಅಂತರ್ಜಲವನ್ನು ಬರಿದುಮಾಡುತ್ತಿವೆ.
ಸ್ಥಳೀಯ ಅರಸರ ಮೇಲ್ವಿಚಾರಣೆಯಲ್ಲಿ, 17ರಿಂದ 18ನೇ ಶತಮಾನದಲ್ಲಿ ವಿದರ್ಭದಲ್ಲಿ ಭತ್ತವನ್ನು ಬೆಳೆಯುವ ಪೂರ್ವ ಭಾಗದ ಜಿಲ್ಲೆಗಳಲ್ಲಿ ಈ ರಕ್ಷಣಾ ಕೆರೆಗಳನ್ನು ನಿರ್ಮಿಸಲಾಯಿತು. ಮಹಾರಾಷ್ಟ್ರವು ನಿರ್ಮಾಣವಾದ ನಂತರ ರಾಜ್ಯ ನೀರಾವರಿ ಇಲಾಖೆಯು ದೊಡ್ಡ ಕೆರೆಗಳ ಉಸ್ತುವಾರಿ ಹಾಗೂ ಪರಿಚಾಲನೆಯನ್ನು ವಹಿಸಿಕೊಂಡಿತು. ಚಿಕ್ಕ ಕೆರೆಗಳ ನಿರ್ವಹಣೆಯು ಜಿಲ್ಲಾ ಪರಿಷತ್‍ನ ಸುಪರ್ದಿಗೊಳಪಟ್ಟಿದೆ. ಈ ಜಲ ಮೂಲಗಳನ್ನು ಸ್ಥಳೀಯ ಸಮುದಾಯಗಳು ನಿರ್ವಹಿಸುತ್ತಿದ್ದು, ಮೀನುಗಾರಿಕೆ ಹಾಗೂ ನೀರಾವರಿಗೆ ಅವನ್ನು ಬಳಸಲಾಗುತ್ತಿತ್ತು. ಭಂಡಾರ, ಚಂದ್ರಾಪುರ್, ಗಡ್ಚಿರೋಲಿ, ಗೊಂಡಿಯ ಮತ್ತು ನಾಗ್ಪುರ್ ಜಿಲ್ಲೆಗಳಲ್ಲಿ ಇಂತಹ ಸುಮಾರು 7,000 ಕೆರೆಗಳಿವೆಯಾದರೂ, ಅನೇಕ ಕೆರೆಗಳನ್ನು ಹಿಂದಿನಿಂದಲೂ ಉಪೇಕ್ಷಿಸಲಾಗಿದ್ದು ಅವು ಜೀರ್ಣಾವಸ್ಥೆಯಲ್ಲಿವೆ.
ಅನೇಕ ಯುವಕರು ಭಂಡಾರ ಜಿಲ್ಲೆ, ನಾಗ್ಪುರ್, ಮುಂಬೈ, ಪುಣೆ, ಹೈದರಾಬಾದ್, ರಾಯ್‍ಪುರ್ ಮತ್ತಿತರೆ ಪ್ರದೇಶಗಳಿಗೆ ವಲಸೆಹೋಗಿದ್ದು; ಟ್ರಕ್‍ಗಳನ್ನು ಸ್ವಚ್ಛಗೊಳಿಸುವ ಅಥವ ತಮಗೆ ದೊರೆತ ಇತರೆ ಯಾವುದೇ ಕೆಲಸಗಳಲ್ಲಿ ತೊಡಗಿದ್ದಾರೆ. ಜಮೀನುಗಳಲ್ಲಿನ ಅಲೆಮಾರಿ ಕಾರ್ಮಿಕರಾಗಿಯೂ ಇವರು ದುಡಿಯುತ್ತಿದ್ದಾರೆ.
ಈ ವಲಸೆಯು ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ: ಮಹಾರಾಷ್ಟ್ರದಲ್ಲಿನ ಜನಸಂಖ್ಯೆಯಲ್ಲಿನ ಹೆಚ್ಚಳವು 2001ರ ಜನಗಣತಿಯಿಂದ 2011ರ ಜನಗಣತಿಯವರೆಗೆ ಶೇ. 15.99ರಷ್ಟಿದೆ. ಭಂಡಾರದ ಜನಸಂಖ್ಯೆಯಲ್ಲಿನ ಹೆಚ್ಚಳವು ಸದರಿ ಅವಧಿಯಲ್ಲಿ ಕೇವಲ ಶೇ. 5.66ರಷ್ಟಿದೆ. ನಮ್ಮ ಸಂವಾದದಲ್ಲಿ ಪುನರಾವರ್ತಿತಗೊಂಡ ಇದರ ಮುಖ್ಯ ಕಾರಣಗಳೆಂದರೆ: ಕೃಷಿಯನ್ನು ಕುರಿತ ಜನರ ಯಾವುದೇ ನಿರೀಕ್ಷೆಗಳು ಇಂದು ಕೈಗೂಡುತ್ತಿಲ್ಲ. ಕೃಷಿಸಂಬಂಧಿತ ಕೆಲಸಗಳು ಕ್ಷೀಣಿಸುತ್ತಿದ್ದು, ಗೃಹಸ್ಥಿಯ ಖರ್ಚುಗಳನ್ನು ನಿಭಾಯಿಸುವುದು ಅವರಿಗೆ ದುಸ್ಸಾಧ್ಯವೆನಿಸಿದೆ.
*****
ಭಂಡಾರ ಜಿಲ್ಲೆಯಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇಲ್ಲಿನ ಜಮೀನುಗಳು ಕಾಡಿನೊಂದಿಗೆ ಹಾಸುಹೊಕ್ಕಾಗಿವೆ. ಇಲ್ಲಿನ ವಾರ್ಷಿಕ ಸರಾಸರಿ ಮಳೆಯು 1,250 ಮಿ.ಮೀ.ನಿಂದ 1,500 ಮಿ.ಮೀ.ನಷ್ಟಿದೆ (ಕೇಂದ್ರೀಯ ಅಂತರ್ಜಲ ಸಮಿತಿಯ ವರದಿಯಂತೆ). ಸಾರ್ವಕಾಲಿಕ ವೈನ್‍ಗಂಗ ನದಿಯು ಏಳು ತಾಲ್ಲೂಕುಗಳ ಈ ಜಿಲ್ಲೆಯ ಮೂಲಕ ಹರಿಯುತ್ತದೆ. ಭಂಡಾರದಲ್ಲಿಯೂ ಋತುಕಾಲಿಕ ನದಿಗಳಿದ್ದು, ಸುಮಾರು 1,500 ಮಾಲ್‍ಗುಜಾರಿ ನೀರಿನ ಕೆರೆಗಳಿವೆ ಎಂಬುದಾಗಿ ವಿದರ್ಭ ನೀರಾವರಿ ಅಭಿವೃದ್ಧಿ ನಿಗಮದ ವರದಿಯು ತಿಳಿಸುತ್ತದೆ. ಇದಕ್ಕೆ ಋತುಕಾಲಿಕ ವಲಸೆಯ ದೀರ್ಘ ಇತಿಹಾಸವಿದೆ. ಪಶ್ಚಿಮ ವಿದರ್ಭಕ್ಕೆ ಹೋಲಿಸಿದಲ್ಲಿ ಭಂಡಾರದಲ್ಲಿ ರೈತರ ಆತ್ಮಹತ್ಯೆಯ ವರದಿಗಳು ವಿಫುಲವಾಗಿಲ್ಲ.
ಶೇ. 19.48ರಷ್ಟು ಪ್ರದೇಶವು ಮಾತ್ರವೇ ನಗರೀಕರಣಗೊಂಡಿರುವ ಈ ಜಿಲ್ಲೆಯು, ಸಣ್ಣ ಮತ್ತು ಬಡರೈತರನ್ನೊಳಗೊಂಡಿದೆ. ಈ ರೈತರು ತಮ್ಮ ಸ್ವಂತ ಜಮೀನುಗಳಿಂದ ಹಾಗೂ ಕೃಷಿ ಸಂಬಂಧಿತ ಕೆಲಸಗಳ ನಿರ್ವಹಣೆಯಿಂದ ಆದಾಯವನ್ನು ಗಳಿಸುತ್ತಾರೆ. ಆದರೆ ಸದೃಢ ನೀರಾವರಿ ವ್ಯವಸ್ಥೆಯಿಲ್ಲದ ಕಾರಣ ಕೃಷಿಯು ಮಳೆಯನ್ನೇ ಬಹುವಾಗಿ ಅವಲಂಬಿಸಿದೆ. ಮಳೆಗಾಲದ ಕೊನೆಗೆ, ಅಕ್ಟೋಬರ್ ನಂತರ ಕೆಲವು ಜಮೀನುಗಳಿಗೆ ಮಾತ್ರವೇ ಸಾಕಷ್ಟು ಕೆರೆಯ ನೀರು ದೊರೆಯುತ್ತದೆ.
ಭಂಡಾರವು ನೆಲೆಗೊಂಡಿರುವ ಮಧ್ಯ ಭಾರತದಲ್ಲಿ, ಜೂನ್‍ನಿಂದ ಸೆಪ್ಟೆಂಬರ್‍ವರೆಗಿನ ಮಳೆಗಾಲವು ಕ್ಷೀಣಿಸುತ್ತಿದ್ದು, ಅತ್ಯಧಿಕ ಪ್ರಮಾಣದ ಮಳೆಯ ಸಂದರ್ಭಗಳು ಹೆಚ್ಚಾಗುತ್ತಿವೆಯೆಂಬುದಾಗಿ ಅನೇಕ ವರದಿಗಳಿಂದ ತಿಳಿದುಬಂದಿದೆ. ಪುಣೆಯ ಭಾರತೀಯ ಉಷ್ಣವಲಯದ ಪವನ ವಿಜ್ಞಾನ ಸಂಸ್ಥಾನದ 2009ರ
ಅಧ್ಯಯನವು
ಈ ಪ್ರವೃತ್ತಿಯ ಬಗ್ಗೆ ಮಾಹಿತಿ ನೀಡುತ್ತದೆ. ವಿಶ್ವಬ್ಯಾಂಕ್‍ನ 2008ರ
ಅಧ್ಯಯನವು
ಭಂಡಾರ ಜಿಲ್ಲೆಯನ್ನು ಹವಾಮಾನಕ್ಕೆ ಸಂಬಂಧಿಸಿದಂತೆ ಅಪಾಯಕಾರಿಯಾದ 10 ಪ್ರದೇಶಗಳಲ್ಲಿ ಒಂದೆಂಬುದಾಗಿ ಗುರುತಿಸಿದೆ. ಉಳಿದ ಒಂಭತ್ತು ಸಮೀಪಗ್ರಾಹಿ ಜಿಲ್ಲೆಗಳು ವಿದರ್ಭ, ಛತ್ತೀಸ್‍ಗಡ್ ಮತ್ತು ಮಧ್ಯ ಪ್ರದೇಶಗಳಲ್ಲಿದ್ದು; ಈ ಎಲ್ಲವೂ ಮಧ್ಯ ಭಾರತದಲ್ಲಿ ನೆಲೆಗೊಂಡಿವೆ. ‘ಹವಾಮಾನಕ್ಕೆ ಸಂಬಂಧಿಸಿದಂತೆ ಅಪಾಯಕಾರಿ’ಯಾದ ಪ್ರದೇಶಗಳಲ್ಲಿನ ಸರಾಸರಿ ಹವಾಮಾನದಲ್ಲಿನ ಬದಲಾವಣೆಗಳು ಜೀವನ ಮಟ್ಟವನ್ನು ಕುರಿತಂತೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತವೆ. ಇದೇ ಪರಿಸ್ಥಿತಿಯು ಮುಂದುವರಿದಲ್ಲಿ ಈ ಅಪಾಯಕಾರಿ ಪ್ರದೇಶಗಳಲ್ಲಿನ ಜನರು ಬೃಹತ್ ಪ್ರಮಾಣದ ಆರ್ಥಿಕ ಆಘಾತಗಳನ್ನು ಎದುರಿಸುತ್ತಾರೆ ಎಂಬುದಾಗಿ ಈ ಅಧ್ಯಯನವು ಎಚ್ಚರಿಸುತ್ತದೆ.
ಭಾರತೀಯ ಪವನವಿಜ್ಞಾನ ಇಲಾಖೆಯ ಮಳೆಯ ದತ್ತಾಂಶಗಳನ್ನು ಆಧರಿಸಿ, 2018ರಲ್ಲಿ ರಿವೈಟಲೈಜಿಂಗ್ ರೈನ್‍ಫೆಡ್ ಅಗ್ರಿಕಲ್ಚರ್ ನೆಟ್‍ವರ್ಕ್ ಮಹಾರಾಷ್ಟ್ರವನ್ನು ಕುರಿತ ತಥ್ಯ-ಪತ್ರವೊಂದನ್ನು (fact-sheet) ಸಂಕಲನಗೊಳಿಸಿದ್ದು, ಸದರಿ ಮಾಹಿತಿಗಳು ಹೀಗಿವೆ: 1) 2000ದಿಂದ 2017ರವರೆಗೆ ವಿದರ್ಭದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಒಣ ಹವೆಯ ಆವರ್ತನ ಹಾಗೂ ತೀವ್ರತೆಯು ಹೆಚ್ಚಾಗಿದೆ. 2) ದೀರ್ಘಾವಧಿ ವಾರ್ಷಿಕ ಮಳೆಯ ಸರಾಸರಿ ಪ್ರಮಾಣವು ಬಹುತೇಕ ಸ್ಥಿರವಾಗಿದ್ದಾಗ್ಯೂ ಮಳೆಯ ದಿನಗಳು ಕಡಿಮೆಯಾಗಿವೆ. ಅಂದರೆ ಈ ಪ್ರದೇಶಗಳಲ್ಲಿ ಸುರಿಯುವ ಮಳೆಯ ಪ್ರಮಾಣದಲ್ಲಿ ಬದಲಾವಣೆಯಿಲ್ಲದಾಗ್ಯೂ ಮಳೆಯ ದಿನಗಳ ಸಂಖ್ಯೆ ಕಡಿಮೆಯಾಗಿದ್ದು, ಇದು ಫಸಲಿನ ಬೆಳವಣಿಗೆಯನ್ನು ಪ್ರಭಾವಿಸುತ್ತದೆ.
ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್‍ಸ್ಟಿಟ್ಯೂಟ್‍ನ (TERI) 2014ರ ಅಧ್ಯಯನದಲ್ಲಿ ಗಮನಿಸಲಾದಂತೆ; “1901ರಿಂದ 2003ರವರೆಗಿನ ಅವಧಿಯ ಮಳೆಯ ದತ್ತಾಂಶವು, ಜುಲೈ ತಿಂಗಳ ಮಾನ್ಸೂನ್ ಮಳೆಯು ಕ್ಷೀಣಿಸುತ್ತಿದ್ದು (ರಾಜ್ಯಾದ್ಯಂತ), ಆಗಸ್ಟ್‍ನ ಮಳೆಯ ಪ್ರಮಾಣವು ಹೆಚ್ಚಾಗುತ್ತಿದೆಯೆಂಬುದಾಗಿ ತಿಳಿಸುತ್ತದೆ. ವಿಶೇಷವಾಗಿ ಋತುವಿನ ಮೊದಲ ಅರ್ಧ ಭಾಗದಲ್ಲಿ ಮಾನ್ಸೂನ್ ನ ಮಳೆಯು ಅತ್ಯಧಿಕವಾಗಿ ಸುರಿದ ಸಂದರ್ಭಗಳು ಹೆಚ್ಚುತ್ತಿವೆ.”
ವಿದರ್ಭಕ್ಕಾಗಿ ಕೈಗೊಳ್ಳಲಾದ Assessing Climate Change Vulnerability and Adaptation Strategies for Maharashtra: Maharashtra State Adaptation Action Plan on Climate Change ಎಂಬ ಅಧ್ಯಯನವು; “ದೀರ್ಘ ಒಣ ಹವೆ, ಇತ್ತೀಚಿನ ಮಳೆಯ ಅಸ್ಥಿರತೆಯಲ್ಲಿನ ಹೆಚ್ಚಳ ಮತ್ತು ಮಳೆಯ ಪ್ರಮಾಣವು ಕಡಿಮೆಯಾಗಿರುವ ಸಂಗತಿಗಳು”ಪ್ರಮುಖ ಆಘಾತಕಾರಿ ಅಂಶಗಳೆಂಬುದನ್ನು ಒತ್ತಿ ಹೇಳಿದೆ.
ಅತ್ಯಧಿಕ ಮಳೆಯ ಪ್ರಮಾಣವು ಶೇ. 14ರಿಂದ 18ರವರೆಗೆ ತಲುಪಬಹುದಾದ ಜಿಲ್ಲೆಗಳ ಸಮೂಹದಲ್ಲಿ ಭಂಡಾರವು ನೆಲೆಗೊಂಡಿದೆ (ಮೂಲಾಧಾರಕ್ಕೆ ತುಲನಾತ್ಮಕವಾಗಿ). ಮಳೆಗಾಲದಲ್ಲಿನ ಒಣ ಹವೆಯ ದಿನಗಳೂ ಸಹ ಹೆಚ್ಚಾಗುತ್ತದೆಂದು ಊಹಿಸಲಾಗಿದೆ. ಅಧ್ಯಯನದಲ್ಲಿ ಗಮನಿಸಿರುವಂತೆ ನಾಗ್ಪುರ್ ವಿಭಾಗದಲ್ಲಿ (ಭಂಡಾರವು ನೆಲೆಗೊಂಡಿರುವ), ಸರಾಸರಿ ಹೆಚ್ಚಳವು (ವಾರ್ಷಿಕ ಮಧ್ಯಸ್ಥ ತಾಪಮಾನ 27.19 ಡಿಗ್ರಿಗೂ ಅಧಿಕ), 2030ರ ವೇಳೆಗೆ 1.18ರಿಂದ 1.4, 2050ರ ವೇಳೆಗೆ 1.95ರಿಂದ 2.2, 2070ರ ವೇಳೆಗೆ 2.88ರಿಂದ 3.16 ಡಿಗ್ರಿಗಳೆಂಬುದಾಗಿ ತಿಳಿಸಲಾಗಿದ್ದು ಇದು ರಾಜ್ಯದ ಯಾವುದೇ ವಲಯಕ್ಕಿಂತಲೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿದೆ.
ಭಂಡಾರದಲ್ಲಿನ ಕೃಷಿ ಅಧಿಕಾರಿಗಳೂ ಸಹ ಮಳೆಯನ್ನು ಅತಿಯಾಗಿ ಅವಲಂಬಿಸಿದ ತಮ್ಮ ಜಿಲ್ಲೆಯಲ್ಲಿನ ಈ ಆರಂಭಿಕ ಬದಲಾವಣೆಗಳನ್ನು ಗಮನಿಸಿದ್ದಾರೆ. ಈಗಲೂ ಸರ್ಕಾರಿ ಬರಹಗಳು ಹಾಗೂ ಜಿಲ್ಲೆಯ ಯೋಜನೆಗಳಲ್ಲಿ ಇದರ ಪಾರಂಪರಿಕ ಕೆರೆಗಳು, ನದಿಗಳು ಮತ್ತು ಸಾಕಷ್ಟು ಮಳೆಯ ಕಾರಣದಿಂದಾಗಿ ಈ ಪ್ರದೇಶವನ್ನು ಉತ್ತಮ ನೀರಾವರಿ ಪ್ರದೇಶವೆಂಬುದಾಗಿ ವರ್ಗೀಕರಿಸಲಾಗಿದೆ. ಭಂಡಾರದ ಪ್ರಾದೇಶಿಕ ಕೃಷಿ ಅಧೀಕ್ಷಕರಾದ ಮಿಲಿಂದ್ ಲಾಡ್ ಅವರು, “ಜಿಲ್ಲೆಯಲ್ಲಿ ಮಳೆಯ ತಡವಾಗುತ್ತಿರುವ ಪ್ರವೃತ್ತಿಯು ಅವಿರತವಾಗಿದ್ದು ಇದರಿಂದಾಗಿ ಬಿತ್ತನೆ ಹಾಗೂ ಫಸಲಿಗೆ ಹಾನಿಯುಂಟಾಗುತ್ತಿದೆ. ಇದಕ್ಕೂ ಹಿಂದೆ 60ರಿಂದ 65 ದಿನಗಳವರೆಗೆ ಮಳೆಯು ಸುರಿಯುತ್ತಿದ್ದು; ಕಳೆದ ದಶಕದಿಂದ ಜೂನ್ ಸೆಪ್ಟೆಂಬರ್ ಅವಧಿಯಲ್ಲಿ, 40ರಿಂದ 45 ದಿನಗಳವರೆಗೆ ಮಾತ್ರವೇ ಮಳೆಯನ್ನು ಕಾಣಬಹುದಾಗಿದೆ. ಭಂಡಾರದಲ್ಲಿನ ರಾಜ್ಯಾದಾಯವಿರುವ 20 ಗ್ರಾಮಗಳ ಸಮೂಹಕ್ಕೆ ಈ ವರ್ಷದಲ್ಲಿ ಕೇವಲ 6ರಿಂದ 7 ದಿನಗಳ ಮಳೆಯಷ್ಟೇ ಲಭ್ಯವಾಗಿದೆ”ಎಂದು ತಿಳಿಸುತ್ತಾರೆ.
“ಮಾನ್ಸೂನ್ ವಿಳಂಬವಾದಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯುವುದು ಸಾಧ್ಯವಾಗದು. ಸಸಿತೋಟದ 21 ದಿನಗಳ ಅವಧಿಯ ಬಳಿಕ ಭತ್ತದ ನಾಟಿಯು ತಡವಾದಲ್ಲಿ ಪ್ರತಿ ದಿನಕ್ಕೆ, ಪ್ರತಿ ಹೆಕ್ಟೇರಿಗೆ 10 ಕೆ.ಜಿ.ಯಷ್ಟು ಉತ್ಪನ್ನವು ಕುಂಠಿತವಾಗುತ್ತದೆ”ಎಂದು ಸಹ ಅವರು ತಿಳಿಸಿದರು.
ಸಸಿಪಾತಿಗಳಲ್ಲಿ ಎಳೆಯ ಚಿಗುರುಗಳನ್ನು ಬೆಳೆಸಿ ನಂತರ ಅವನ್ನು ನಾಟಿ ಮಾಡುವ ಬದಲಾಗಿ, ಬೀಜಗಳನ್ನು ಚೆಲ್ಲುವ ಸಾಂಪ್ರದಾಯಿಕ ವಿಧಾನವನ್ನು ಜಿಲ್ಲೆಯಲ್ಲಿ ಕ್ರಮೇಣ ಅನುಸರಿಸಲಾಗುತ್ತಿದೆ. ಆದರೆ ನಾಟಿಯ ವಿಧಾನದಂತೆ, ಬೀಜಗಳನ್ನು ಚೆಲ್ಲುವ ವಿಧಾನದಲ್ಲಿ ಗಿಡಗಳ ಚಿಗುರುವಿಕೆಯ ಸಾಧ್ಯತೆಯು ಕಡಿಮೆಯಿರುವ ಕಾರಣ; ಫಸಲಿನ ಪ್ರಮಾಣವು ಸಹ ಕಡಿಮೆಯಾಗುತ್ತದೆ. ಮೊದಲ ಮಳೆಯ ಅಭಾವದಿಂದಾಗಿ, ಸಸಿತೋಟದಲ್ಲಿನ ಎಳೆಯ ಚಿಗುರುಗಳು ಬೆಳೆಯದೆ ಬೆಳೆಯು ಸಂಪೂರ್ಣವಾಗಿ ಹಾನಿಗೀಡಾಗುತ್ತದೆ. ಆದರೆ ಬೀಜಗಳನ್ನು ಚೆಲ್ಲುವ ವಿಧಾನದಲ್ಲಿ ರೈತರು ಭಾಗಶಃ ಹಾನಿಯನ್ನಷ್ಟೇ ಅನುಭವಿಸುತ್ತಾರೆ.
ಸ್ಥಳೀಯ ಬೀಜ ಸಂರಕ್ಷಣೆಯ ನಿಟ್ಟಿನಲ್ಲಿ ಪೂರ್ವ ವಿದರ್ಭದ ಭತ್ತದ ಬೆಳೆಗಾರರೊಂದಿಗೆ ತಮ್ಮನ್ನು ತೊಡಗಿಸಿಕೊಂಡ ಭಂಡಾರದಲ್ಲಿನ ಸ್ವಯಂಸೇವಾ ಸಂಸ್ಥೆಯಾದ ಗ್ರಾಮೀಣ ಯುವ ಪ್ರಗತಿಕ್ ಮಂಡಲನ ಅಧ್ಯಕ್ಷರಾದ ಅವಿಲ್ ಬೊರ್ಕರ್, “ಜೂನ್-ಜುಲೈನಲ್ಲಿ ಸಸಿತೋಟ ಹಾಗೂ ನಾಟಿಗೆ ಭತ್ತದ ಬೆಳೆಗೆ ಉತ್ತಮ ಮಳೆಯು ಅವಶ್ಯಕ. ಮಾನ್ಸೂನ್ ಈಗ ಬದಲಾಗುತ್ತಿದೆ. ಬದಲಾವಣೆಯು ಅಲ್ಪ ಪ್ರಮಾಣದಲ್ಲಿದ್ದಲ್ಲಿ ಜನರು ಅದನ್ನು ನಿಭಾಯಿಸಬಲ್ಲರು. ಆದರೆ ಮಾನ್ಸೂನ್ ವಿಫಲವಾದಲ್ಲಿ ಅವರು ಅದನ್ನು ಭರಿಸಲಾರರು”ಎಂದು ತಿಳಿಸುತ್ತಾರೆ.
*****
ಜುಲೈ ತಿಂಗಳ ಅಂತಿಮ ಭಾಗದಲ್ಲಿ ಭಂಡಾರದಲ್ಲಿ ಮಳೆಯು ತನ್ನ ಎಂದಿನ ಗತಿಯನ್ನು ಪಡೆದುಕೊಳ್ಳತೊಡಗಿದೆ. ಆದರೆ ಆಗ ಮುಂಗಾರು ಬೆಳೆ, ಭತ್ತದ ಬಿತ್ತನೆಗೆ ಅಡಚಣೆಯುಂಟಾಗಿದ್ದು ಜುಲೈ ಅಂತಿಮ ಭಾಗದಷ್ಟು ಹೊತ್ತಿಗೆ ಕೇವಲ ಶೇ. 12ರಷ್ಟು ಬಿತ್ತನೆಯನ್ನು ಕೈಗೊಳ್ಳಲಾಗಿದೆಯೆಂದು ಪ್ರಾದೇಶಿಕ ಕೃಷಿ ಅಧೀಕ್ಷಕ ಮಿಲಿಂದ್ ಲಾಡ್ ತಿಳಿಸುತ್ತಾರೆ. ಮುಂಗಾರಿನಲ್ಲಿ ಭಂಡಾರದಲ್ಲಿನ 1.25 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿಯನ್ನು ಭತ್ತವು ಆವರಿಸಿರುತ್ತದೆ.
ಮೀನುಗಾರರ ಸಮುದಾಯಕ್ಕೆ ಆಸರೆಯಾಗಿರುವ ಅನೇಕ ಮಾಲ್‍ಗುಜಾರಿ ಕೆರೆಗಳೂ ಸಹ ಒಣಗಿವೆ. ರೈತರ ನಡುವೆ ಸದಾ ನೀರಿನದೇ ಮಾತು. ಜಮೀನಿನ ವ್ಯವಸಾಯವು ಇವರ ಜೀವನೋಪಾಯದ ಏಕೈಕ ದಾರಿಯಾಗಿದೆ. ಇಲ್ಲಿನ ಜನರು ತಿಳಿಸುವಂತೆ ಮಾನ್ಸೂನ್‍ನ ಮೊದಲೆರಡು ತಿಂಗಳಲ್ಲಿ, ಇಲ್ಲಿನ ಜನರು ಭೂರಹಿತರಿಗೆ ಭಂಡಾರದಲ್ಲಿ ಯಾವುದೇ ಕೆಲಸ ದೊರೆಯಲಿಲ್ಲ. ಈಗ ಮಳೆಯಾದರೂ ಸಹ ಮುಂಗಾರು ಬೆಳೆಯು ಸರಿಪಡಿಸಲಾಗದಷ್ಟು ಹಾನಿಗೀಡಾಗಿದೆ.
ಎಕರೆಗಟ್ಟಲೆ ಪ್ರದೇಶದಲ್ಲಿ ತೇವವಿಲ್ಲದ ಕಾರಣ ಬಿಸಿಲಿಗೆ ಗಟ್ಟಿಯಾಗಿ ತೇಪೆ ಹಾಕಿದಂತೆ ಕಾಣುವ ಕಂದು ವರ್ಣದ ನೇಗಿಲು ಹೊಡೆದ ತುಂಡು ನೆಲಗಳಲ್ಲಿ ಅಲ್ಲಲ್ಲೇ ಹಳದಿ-ಹಸಿರು ವರ್ಣದ ಮುರುಟಿ ಹೋದ ಸಸಿಗಳ ಮಡಿಗಳನ್ನು ಕಾಣಬಹುದು. ಕುಡಿಯೊಡೆದ ಸಸಿಗಳು ಸೊರಗಿವೆ. ಕೆಲವು ಸಸಿತೋಟಗಳು ಹಸಿರು ವರ್ಣದಲ್ಲಿದ್ದು ಅವಕ್ಕೆ ಗೊಬ್ಬರವನ್ನು ಚೆಲ್ಲಿರುವ ಕಾರಣದಿಂದಾಗಿ ಅವು ತಾತ್ಕಾಲಿಕವಾಗಿ ಚಿಗುರೊಡೆದಿವೆ.
ಗರಡ ಮತ್ತು ರಾವಣ್‍ವಾಡಿಯ ಜೊತೆಗೆ, ಭಂಡಾರದಲ್ಲಿನ ಧರ್‍ಗಾಂವ್ ವೃತ್ತದ 20 ಗ್ರಾಮಗಳಲ್ಲಿ ಈ ವರ್ಷದಲ್ಲಿ ಉತ್ತಮ ಮಳೆಯಿಲ್ಲ. ಕಳೆದ ಕೆಲವು ವರ್ಷಗಳಿಂದಲೂ ಇದೇ ಪರಿಸ್ಥಿತಿಯಿದೆಯೆಂಬುದಾಗಿ ಲಾಡ್ ತಿಳಿಸುತ್ತಾರೆ. 2019ರಲ್ಲಿ ಜೂನ್‍ನಿಂದ ಆಗಸ್ಟ್ 15ರವರೆಗೆ, ಭಂಡಾರದಲ್ಲಿನ ಒಟ್ಟಾರೆ ಕೊರತೆಯು ಶೇ. 20ರಷ್ಟಿದ್ದು, ಜುಲೈ 25ರ ನಂತರ 736 ಮಿ.ಮೀ ಮಳೆಯನ್ನು ದಾಖಲಿಸಲಾಗಿದೆ (ಆ ಅವಧಿಯ ದೀರ್ಘಕಾಲೀನ ಸರಾಸರಿ 852 ಮಿ.ಮೀ). ಅಂದರೆ ಆಗಸ್ಟ್‍ನ ಮೊದಲ ಹದಿನೈದು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿನ ಮಳೆಯ ಕೊರತೆಯು ಹೆಚ್ಚಿನ ಪ್ರಮಾಣದಲ್ಲಿದೆ.
ಭಾರತೀಯ ಪವನ ವಿಜ್ಞಾನ ಇಲಾಖೆಯ ವೃತ್ತವಾರು ದತ್ತಾಂಶವು ಈ ಮಳೆಯೂ ಸಹ ಅನಿಯಮಿತವಾಗಿದೆಯೆಂದು ತಿಳಿಸುತ್ತದೆ. ಉತ್ತರದ ತುಮ್ಸರ್‍ನಲ್ಲಿ ಮಳೆಯು ಉತ್ತಮವಾಗಿದ್ದು ಮಧ್ಯ ಭಾಗದ ಧರ್‍ಗಾಂವ್ ನಲ್ಲಿ ಮಳೆಯ ಕೊರತೆಯಿದೆ. ದಕ್ಷಿಣದ ಪೌನಿಯಲ್ಲಿ ಮಳೆಯು ಉತ್ತಮವಾಗಿದೆ.
ವಿಸ್ತøತ ದತ್ತಾಂಶಗಳು; ಜಮೀನುಗಳಲ್ಲಿ ಜನರಿಂದ ಗಮನಿಸಲ್ಪಟ್ಟ ಭೂಮಿಯ ಸೂಕ್ಷ್ಮ ಅವಲೋಕನಗಳನ್ನು ಪ್ರತಿಬಿಂಬಿಸುವುದಿಲ್ಲ. ವೃಷ್ಟಿಮಾಪಕ (rain-gauge) ಕೇಂದ್ರದಲ್ಲಿ ಇಡೀ ದಿನದ ಮಳೆಸುರಿತವು ದಾಖಲಾದಾಗ್ಯೂ, ಮಳೆಯು ಸ್ವಲ್ಪ ಸಮಯದವರೆಗೂ ರಭಸದಿಂದ ಸುರಿದು ಒಮ್ಮೊಮ್ಮೆ ಕೆಲವು ನಿಮಿಷಗಳವರೆಗೆ ಮಾತ್ರವೇ ಸುರಿಯುತ್ತದೆ. ತಾಪಮಾನ, ಉಷ್ಣತೆ ಅಥವ ತೇವಾಂಶವನ್ನು ಕುರಿತ ಗ್ರಾಮ ಮಟ್ಟದ ಸಂಬದ್ಧ ದತ್ತಾಂಶಗಳಿಲ್ಲ.
ಈ ವರ್ಷ ತಮ್ಮ ಜಮೀನಿನಲ್ಲಿನ ಶೇ. 75ರಷ್ಟು ಭಾಗದಲ್ಲಿ ಬಿತ್ತನೆಯನ್ನು ಕೈಗೊಳ್ಳದ ಎಲ್ಲ ರೈತರಿಗೆ ವಿಮಾ ಕಂಪನಿಯು ಪರಿಹಾರವನ್ನು ನೀಡಬೇಕೆಂದು ಜಿಲ್ಲಾಧಿಕಾರಿ, ಡಾ. ನರೇಶ್ ಗೀತೆಯವರು ಆಗಸ್ಟ್ 14ರಂದು ಸೂಚನೆ ನೀಡಿದರು. ಪ್ರಾರಂಭದಲ್ಲಿನ ಅಂದಾಜಿನ ಪ್ರಕಾರ ಅಂತಹ ರೈತರ ಸಂಖ್ಯೆ 1.67 ಲಕ್ಷದಷ್ಟಿದ್ದು, ಬಿತ್ತನೆಯನ್ನು ಕೈಗೊಳ್ಳದ ಭೂಮಿಯ ವ್ಯಾಪ್ತಿಯು 75,440 ಹೆಕ್ಟೇರ್‍ನಷ್ಟಿದೆ.
ಸೆಪ್ಟೆಂಬರ್ ವೇಳೆಗೆ ಭಂಡಾರದಲ್ಲಿ 1,237.4 ಮಿ.ಮೀ. (ಜೂನ್ ತಿಂಗಳಿನಿಂದ ಪ್ರಾರಂಭಗೊಂಡ) ಅಥವ ಈ ಅವಧಿಯಲ್ಲಿನ (1,280 ಮಿ.ಮೀ.) ದೀರ್ಘಕಾಲೀನ ವಾರ್ಷಿಕ ಸರಾಸರಿಯ ಶೇ. 96.7ರಷ್ಟು ಮಳೆಯು ದಾಖಲಿಸಲ್ಪಟ್ಟಿದೆ. ಈ ಬಹುತೇಕ ಮಳೆಯು ಆಗಸ್ಟ್ ಮತ್ತು ಸೆಪ್ಟೆಂಬರ್‍ನಲ್ಲಿ ಸುರಿದ ಕಾರಣ, ಜೂನ್-ಜುಲೈ ನಂತರದ ಮುಂಗಾರಿನ ಬೆಳೆಯ ಬಿತ್ತನೆಗೆ ಈಗಾಗಲೇ ಅಡಚಣೆಯುಂಟಾಗಿದೆ. ರಾವಣ್‍ವಾಡಿ, ಗರಡ ಜಂಗ್ಲಿ ಮತ್ತು ವಾಕೇಶ್ವರ್‍ನಲ್ಲಿಯ ಮಾಲ್‍ಗುಜಾರಿ ಕೆರೆಗಳು ಮಳೆಯ ನೀರಿನಿಂದ ಭರ್ತಿಯಾಗಿವೆ. ಅನೇಕ ರೈತರು ಆಗಸ್ಟ್ ಮೊದಲ ವಾರದಲ್ಲಿ ಮರು ಬಿತ್ತನೆಯನ್ನು ಕೈಗೊಂಡರು. ಕೆಲವರು ಕ್ಷಿಪ್ರದಲ್ಲೇ ಫಸಲನ್ನು ನೀಡುವ ಕೆಲವು ಪ್ರಕಾರದ ಬೀಜಗಳನ್ನು ಬಿತ್ತಿದರು. ಫಸಲು ಕಡಿಮೆಯಾಗಬಹುದಾದ ಹಾಗೂ ಸುಗ್ಗಿಯನ್ನು ಒಂದು ತಿಂಗಳ ನಂತರ ನವೆಂಬರ್‍ನ ಅಂತಿಮ ಭಾಗಕ್ಕೆ ಮುಂದೂಡುವ ಸಾಧ್ಯತೆಗಳಿವೆ.
*****
ಈ ಹಿಂದೆ ಜುಲೈನಲ್ಲಿ 66 ವರ್ಷದ ಮರೋತಿ ಹಾಗೂ 62 ವರ್ಷದ ನಿರ್ಮಲ ಮಸ್ಕೆ, ತೊಂದರೆಗೀಡಾಗಿದ್ದರು. ಯಾವುದೇ ಊಹೆಗೂ ನಿಲುಕದ ಮಳೆಯನ್ನು ಆಧರಿಸಿದ ಬದುಕು ಕಷ್ಟಕರ. 4 ಅಥವ 5 ದಿನಗಳ, ಕೆಲವೊಮ್ಮೆ 7 ದಿನಗಳವರೆಗೂ ಎಡೆಬಿಡದಂತೆ ಸುರಿಯುತ್ತಿದ್ದ ಮಳೆಯು ಈಗ ಇಲ್ಲದಂತಾಗಿದೆ. ಕೆಲವು ಗಂಟೆಗಳವರೆಗೆ ದಿಢೀರನೆ ಮಳೆ ಸುರಿದು, ಒಣ ಹವೆ ಹಾಗೂ ಧಗೆಯು ಕಾಣಿಸಿಕೊಳ್ಳುತ್ತದೆ.
ಮೃಗ ನಕ್ಷತ್ರ ಅಥವ ಜೂನ್ ಪ್ರಾರಂಭದಿಂದ ಜುಲೈ ಪ್ರಾರಂಭದ ಅವಧಿಯವರೆಗೆ ಸುಮಾರು ಒಂದು ದಶಕದಿಂದಲೂ ಉತ್ತಮ ಮಳೆಯನ್ನು ಇವರು ಕಂಡಿಲ್ಲ. ಈ ಅವಧಿಯಲ್ಲಿ ಇವರು ಭತ್ತವನ್ನು ಸಸಿತೋಟಗಳಲ್ಲಿ ಬಿತ್ತು, 21 ದಿನಗಳ ಎಳೆಯ ಚಿಗುರುಗಳನ್ನು ಬದುಗಳ ನಡುವಿನ ನೀರಿನಿಂದ ತೊಯ್ದ ತುಂಡು ನೆಲಗಳಲ್ಲಿ ನಾಟಿ ಮಾಡುತ್ತಾರೆ. ಅಕ್ಟೋಬರ್ ಅಂತ್ಯದ ವೇಳೆಗೆ, ಅವರ ಭತ್ತವು ಕೊಯ್ಲಿಗೆ ಅಣಿಯಾಗುತ್ತದೆ. ಈಗ ನವೆಂಬರ್ ಮತ್ತು ಕೆಲವೊಮ್ಮೆ ಡಿಸೆಂಬರ್‍ವರೆಗೂ ಫಸಲಿನ ಕೊಯ್ಲಿಗೆ ಕಾಯಬೇಕಾದ ಪರಿಸ್ಥಿತಿಯಿದೆ. ಮಳೆಯು ತಡವಾದ ಕಾರಣ ಎಕರೆವಾರು ಉತ್ಪನ್ನಕ್ಕೆ ನಷ್ಟವುಂಟಾಗಿದ್ದು, ದೀರ್ಘಾವಧಿಯ ಉತ್ತಮ ಗುಣಮಟ್ಟದ ಭತ್ತದ ಪ್ರಕಾರಗಳನ್ನು ಬೆಳೆಯುವ ಅವಕಾಶವು ಸೀಮಿತಗೊಂಡಿದೆ.
ನಾನು ಅವರ ಜಿಲ್ಲೆ ವಾಕೇಶ್ವರಕ್ಕೆ ಭೇಟಿಯಿತ್ತಾಗ, “ಈ ವೇಳೆಗಾಗಲೇ ನಾವು ನಾಟಿಯಲ್ಲಿ ತೊಡಗಿರುತ್ತಿದ್ದೆವು” ಎಂಬುದಾಗಿ ತಿಳಿಸಿದರು. ಇತರೆ ಹಲವಾರು ರೈತರಂತೆ ಮಸ್ಕೆಯವರುಗಳು ಜಮೀನಿನಲ್ಲಿ ಎಳೆಯ ಚಿಗುರುಗಳನ್ನು ನೆಡುವ ಸಲುವಾಗಿ ಮಳೆಗಾಗಿ ಎದುರು ನೋಡುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ಕೆಲಸವನ್ನು ನಿರ್ವಹಿಸುವ ಏಳು ಕೂಲಿಗಾರರಿಗೆ ಎರಡು ತಿಂಗಳಿನಿಂದಲೂ ವಾಸ್ತವವಾಗಿ ಕೆಲಸವೇ ಇಲ್ಲದಂತಾಗಿದೆ ಎಂದು ಅವರು ತಿಳಿಸಿದರು.
ಮಸ್ಕೆ ಅವರ ಹಳೆಯ ಮನೆಯ ಮುಂಭಾಗದಲ್ಲಿನ ಎರಡು ಎಕರೆಗಳ ಜಮೀನಿನಲ್ಲಿ ಅವರು ತರಕಾರಿ ಹಾಗೂ ಭತ್ತದ ಸ್ಥಳೀಯ ಪ್ರಕಾರಗಳನ್ನು ಬೆಳೆಯುತ್ತಾರೆ. ಅವರ ಕುಟುಂಬವು 15 ಎಕರೆ ಜಮೀನನ್ನು ಹೊಂದಿದೆ. ಅವರ ಮರೋತಿ ಗ್ರಾಮದಲ್ಲಿ ಬೆಳೆಯನ್ನು ಕುರಿತ ನಿಖರವಾದ ಯೋಜನೆ ಹಾಗೂ ಹೆಚ್ಚಿನ ಫಸಲಿಗೆ ಇವರು ಪ್ರಸಿದ್ಧರಾಗಿದ್ದಾರೆ. ಆದರೆ ಮಳೆ ಸುರಿತದಲ್ಲಿನ ಬದಲಾವಣೆಗಳು, ಊಹೆಗೆ ನಿಲುಕದ ಮಳೆಯ ಪ್ರವೃತ್ತಿ, ಮಳೆಯ ಅನಿಯಮಿತ ಹರವು ಮುಂತಾದ ಕಾರಣಗಳಿಂದಾಗಿ ಇವರಿಗೆ ದಿಕ್ಕುತೋಚದಂತಾಗಿದೆ. ಯಾವಾಗ ಹಾಗೂ ಎಷ್ಟು ಮಳೆ ಸುರಿಯುತ್ತದೆಂಬ ಅರಿವಿಲ್ಲದಿದ್ದಲ್ಲಿ ನಿಮ್ಮ ಫಸಲನ್ನು ಕುರಿತಂತೆ ಪೂರ್ವಭಾವಿಯಾಗಿ ಯೋಜಿಸುತ್ತೀರಾದರೂ ಹೇಗೆ? ಎನ್ನುತ್ತಾರವರು.
ದೇಶಾದ್ಯಂತ ಪರಿಸರದಲ್ಲಿ ಬದಲಾವಣೆಗಳಾಗುತ್ತಿವೆ. ಯುಎನ್‍ಡಿಪಿ ಆಶ್ರಯದಲ್ಲಿ ಪರಿಯ ವತಿಯಿಂದ ಅವನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ:
zahra@ruralindiaonline.org
with a cc to
namita@ruralindiaonline.org
.
ಅನುವಾದ: ಶೈಲಜ ಜಿ. ಪಿ.