"ನಾನು ಶಾಲೆಯಲ್ಲಿ ಏನು ಕಲಿಯುತ್ತೇನೋ ಅದು ನನ್ನ ಮನೆಯ ವಾಸ್ತವಕ್ಕೆ ವಿರುದ್ಧವಾಗಿದೆ."
ಪ್ರಿಯಾ ಪರ್ವತ ರಾಜ್ಯ ಉತ್ತರಾಖಂಡದ ರಜಪೂತ ಸಮುದಾಯಕ್ಕೆ ಸೇರಿದ 16 ವರ್ಷದ ಶಾಲಾ ಬಾಲಕಿ. ಅವರು ಋತುಸ್ರಾವದ ಸಮಯದಲ್ಲಿ ಅನುಸರಿಸಬೇಕಾದ ಕಠಿಣ ಮತ್ತು ಸ್ಪಷ್ಟವಾಗಿ ರೂಪಿಸಲಾದ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ. "ಪರಿಸ್ಥಿತಿ ಎರಡು ವಿಭಿನ್ನ ಪ್ರಪಂಚಗಳಲ್ಲಿ ವಾಸಿಸುವಂತಿದೆ. ಮನೆಯಲ್ಲಿ ನನ್ನನ್ನು ನಾನು ಪ್ರತ್ಯೇಕಿಸಿಕೊಳ್ಳುವಂತೆ ಮತ್ತು ಎಲ್ಲಾ ಪದ್ಧತಿಗಳು ಮತ್ತು ನಿರ್ಬಂಧಗಳನ್ನು ಅನುಸರಿಸುವಂತೆ ಮಾಡಲಾಗಿದೆ, ಆದರೆ ಶಾಲೆಯಲ್ಲಿ ಮಹಿಳೆಯರು ಪುರುಷರಿಗೆ ಸಮಾನರು ಎಂದು ನನಗೆ ಕಲಿಸಲಾಗುತ್ತದೆ" ಎಂದು ಅವರು ಹೇಳುತ್ತಾರೆ.
11ನೇ ತರಗತಿಯ ವಿದ್ಯಾರ್ಥಿನಿಯಾದ ಪ್ರಿಯಾ ಓದುತ್ತಿರುವ ಶಾಲೆಯು ಅವರ ಹಳ್ಳಿಯಲ್ಲಿರುವ ಮನೆಯಿಂದ ಏಳು ಕಿಲೋಮೀಟರ್ ದೂರದ ನಾನಕ್‌ಮಠ ಪಟ್ಟಣದಲ್ಲಿದೆ. ಪ್ರತಿದಿನ ಆಕೆ ಸೈಕಲ್ ಮೂಲಕ ಶಾಲೆಗೆ ಹೋಗಿ ಬರುತ್ತಾರೆ. ಉತ್ತಮ ವಿದ್ಯಾರ್ಥಿನಿಯಾದ ಅವರು ಆರಂಭದಲ್ಲಿ ಈ ವಿಷಯದ ಬಗ್ಗೆ ಸ್ವತಃ ಶಿಕ್ಷಣ ಪಡೆಯಲು ಪ್ರಯತ್ನಿಸಿದರು. "ನಾನು ಪುಸ್ತಕಗಳನ್ನು ಓದುತ್ತೇನೆ ಮತ್ತು ನಾನು ಏನೆಲ್ಲ ಮಾಡಬಲ್ಲೆ ಎಂದು ಭಾವಿಸಿದ್ದೆ; ನಾನು ಜಗತ್ತನ್ನು ಬದಲಾಯಿಸುತ್ತೇನೆ ಎನ್ನುವುದು ನನ್ನ ಯೋಚನೆಯಾಗಿತ್ತು. ಆದರೆ ಈ ಪದ್ಧತಿಗಳಿಗೆ ಯಾವುದೇ ಅರ್ಥವಿಲ್ಲ ಎಂದು ನನ್ನ ಕುಟುಂಬಕ್ಕೆ ಮನವರಿಕೆ ಮಾಡಿಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅವರೊಂದಿಗೆ ಹಗಲಿರುಳು ವಾಸಿಸುತ್ತಿದ್ದೇನೆ ಆದರೆ ಈ ನಿರ್ಬಂಧಗಳಿಗೆ ಯಾವುದೇ ಅರ್ಥವಿಲ್ಲವೆಂದು ಅವರಿಗೆ ಅರ್ಥವಾಗುವಂತೆ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ.
ಈ ನಿಯಮಗಳು ಮತ್ತು ನಿಬಂಧನೆಗಳ ಕುರಿತು ಆಕೆಗಿದ್ದ ಅಶಾಂತಿ ಮತ್ತು ಅಸಮ್ಮತಿ ಭಾವ ಇನ್ನೂ ಕಡಿಮೆಯಾಗಿಲ್ಲವಾದರೂ ಈಗೀಗ ಆಕೆ ತನ್ನ ಹೆತ್ತವರು ಹೇಳಿದಂತೆ ಕೇಳಲು ಆರಂಭಿಸಿದ್ದಾರೆ.
ಪ್ರಿಯಾ ಮತ್ತು ಅವರ ಕುಟುಂಬವು ರಾಜ್ಯದಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಕೃಷಿ ಪ್ರದೇಶವಾದ ತೇರೈ (ತಗ್ಗು ಪ್ರದೇಶ) ಪ್ರದೇಶದಲ್ಲಿ ವಾಸಿಸುತ್ತಿದೆ (ಜನಗಣತಿ 2011). ಈ ಪ್ರದೇಶವು ಖಾರಿಫ್, ರಬಿ ಮತ್ತು ಜೈದ್ ಎಂಬ ಮೂರು ಬೆಳೆ ಹಂಗಾಮುಗಳನ್ನು ಹೊಂದಿದೆ ಮತ್ತು ಇಲ್ಲಿನ ಹೆಚ್ಚಿನ ಜನಸಂಖ್ಯೆಯು ಕೃಷಿಯಲ್ಲಿ ನಿರತವಾಗಿದೆ ಮತ್ತು ಜಾನುವಾರುಗಳನ್ನು, ಹೆಚ್ಚಾಗಿ ಹಸುಗಳು ಮತ್ತು ಎಮ್ಮೆಗಳನ್ನು ಸಾಕುತ್ತದೆ.
ಹತ್ತಿರದ ಇನ್ನೊಂದು ರಜಪೂತ ಕುಟುಂಬದಲ್ಲಿ, ವಿಧಾ ಋತುಚಕ್ರದ ಸಮಯದಲ್ಲಿ ತನ್ನ ಬದುಕಿನ ವ್ಯವಸ್ಥೆಗಳನ್ನು ವಿವರಿಸುತ್ತಾರೆ: "ಮುಂದಿನ ಆರು ದಿನಗಳವರೆಗೆ, ನಾನು ನನ್ನ ಕೋಣೆಗೆ ಸೀಮಿತವಾಗಿರುತ್ತೇನೆ. ಹೊರಗೆ ಸುತ್ತಾಡದಂತೆ ನನಗೆ [ಅವಳ ತಾಯಿ ಮತ್ತು ತಂದೆಯ ಅಜ್ಜಿ] ಹೇಳಿದ್ದಾರೆ. ನನ್ನ ತಾಯಿ ನನಗೆ ಏನು ಬೇಕೋ ಅದನ್ನು ತರುತ್ತಾರೆ."
ಕೋಣೆಯಲ್ಲಿ ಎರಡು ಹಾಸಿಗೆಗಳು, ಡ್ರೆಸ್ಸಿಂಗ್ ಟೇಬಲ್ ಮತ್ತು ಅಲ್ಮೆರಾ ಇವೆ. 15 ವರ್ಷದ ವಿಧಾ ತನ್ನ ಸಾಮಾನ್ಯ ಮರದ ಮಂಚದ ಹಾಸಿಗೆಯ ಮೇಲೆ ಮಲಗುವುದಿಲ್ಲ, ಆದರೆ ಅವರು ತನಗೆ ಬೆನ್ನುನೋವನ್ನು ತರುತ್ತದೆ ಎಂದು ಹೇಳುವ ಶೀಟ್ ಮುಚ್ಚಿದ ತೆಳುವಾದ ಮಂಚದ ಮೇಲೆ ಮಲಗುತ್ತಾರೆ, "ಕುಟುಂಬದ ಮನಸ್ಸಿನ ಸಮಾಧಾನಕ್ಕಾಗಿ" ಈ ರಿವಾಜನ್ನು ಪಾಲಿಸುತ್ತಾರೆ.
ಈ ಕಟ್ಟುನಿಟ್ಟಾದ ಕಡ್ಡಾಯ ಪ್ರತ್ಯೇಕತೆಯ ಸಮಯದಲ್ಲಿ, ವಿಧಾಗೆ ಶಾಲೆಗೆ ಹೋಗಲು ಅನುಮತಿಸಲಾಗುತ್ತದೆ, ಆದರೆ ಶಾಲೆ ಮುಗಿದ ನಂತರ ನಾನಕ್‌ಮಠದ ಬಳಿಯ ನಾಗಲಾ ಗ್ರಾಮದಲ್ಲಿರುವ ತನ್ನ ಮನೆಯಲ್ಲಿನ ಈ ಕೋಣೆಗೆ ನೇರವಾಗಿ ಬರಬೇಕು. ಅವಳ ತಾಯಿಯ ಫೋನ್ ಮತ್ತು ಕೆಲವು ಪುಸ್ತಕಗಳು ಈ 11ನೇ ತರಗತಿಯ ವಿದ್ಯಾರ್ಥಿಗೆ ಸಮಯವನ್ನು ಕಳೆಯಲು ಸಹಾಯ ಮಾಡುತ್ತವೆ.
ಒಬ್ಬ ಮಹಿಳೆ ಕುಟುಂಬದ ಇತರರಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಪ್ರಾರಂಭಿಸಿದಾಗ ಮತ್ತು ತನ್ನ ವಸ್ತುಗಳನ್ನು ಒಂದು ಬದಿಗೆ ಸರಿಸಿದಾಗ ಅದು ಅವಳು ಮುಟ್ಟಾಗಿದ್ದಾಳೆ ಎನ್ನುವುದನ್ನು ಎಲ್ಲರಿಗೂ ಸಾಂಕೇತಿಕವಾಗಿ ತೋರಿಸುತ್ತದೆ. ಯಾರು ಮುಟ್ಟಾಗಿದ್ದಾರೆ ಮತ್ತು ಯಾರು ಮುಟ್ಟಾಗಿಲ್ಲ ಎನ್ನುವುದು ಸಾರ್ವಜನಿಕರಿಗೆ ತಿಳಿಸುವ ಅಂಶದ ಕುರಿತು ವಿಧಾ ಅಸಮಾಧಾನ ವ್ಯಕ್ತಪಡಿಸುತ್ತಾರೆ . ಅವಳು ಹೇಳುತ್ತಾಳೆ, "ಪ್ರತಿಯೊಬ್ಬರೂ ಅದನ್ನು ತಿಳಿದುಕೊಳ್ಳುತ್ತಾರೆ ಮತ್ತು ಚರ್ಚಿಸುತ್ತಾರೆ. ಅವಳು [ಮುಟ್ಟಾದ ವ್ಯಕ್ತಿಯು] ಪ್ರಾಣಿಗಳು ಮತ್ತು ಹಣ್ಣುಗಳನ್ನು ನೀಡುವ ಮರಗಳನ್ನು ಮುಟ್ಟಲು ಅಥವಾ ಆಹಾರವನ್ನು ಬೇಯಿಸಲು ಮತ್ತು ಬಡಿಸಲು ಮತ್ತು ಅವರು ವಾಸಿಸುವ ಸಿತಾರಗಂಜ್ ಬ್ಲಾಕ್‌ನಲ್ಲಿರುವ ದೇವಾಲಯದಿಂದ ಪ್ರಸಾದಗಳನ್ನು ಸ್ವೀಕರಿಸಲು ಸಹ ಅನುಮತಿಸಲಾಗುವುದಿಲ್ಲ."
ಮಹಿಳೆಯರನ್ನು 'ಅಶುದ್ಧ' ಮತ್ತು 'ಅಶುಭ' ಎಂದು ಪರಿಗಣಿಸುವ ಈ ದೃಷ್ಟಿಕೋನವು ಉಧಮ್ ಸಿಂಗ್ ನಗರದ ಜನಸಂಖ್ಯಾವರದಿಯಲ್ಲಿ ಪ್ರತಿಬಿಂಬಿತವಾಗಿದೆ, ಇದು ಪ್ರತಿ 1,000 ಪುರುಷರಿಗೆ 920 ಮಹಿಳೆಯರ ಕಳಪೆ ಲಿಂಗಾನುಪಾತವನ್ನು ತೋರಿಸುತ್ತದೆ, ಇದು ರಾಜ್ಯದ ಸರಾಸರಿ 963ಕ್ಕಿಂತ ಕಡಿಮೆಯಾಗಿದೆ. ಅಲ್ಲದೆ, ಇಲ್ಲಿ ಸಾಕ್ಷರತೆಯ ಪ್ರಮಾಣವು ಪುರುಷರಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ - 82 ಪ್ರತಿಶತ, ಮತ್ತು ಮಹಿಳೆಯರಲ್ಲಿ ಇದು 65 ಪ್ರತಿಶತ (ಜನಗಣತಿ 2011).
ಮಹಿಳೆಯರನ್ನು 'ಅಶುದ್ಧ' ಮತ್ತು 'ಅಶುಭ' ಎಂದು ಪರಿಗಣಿಸುವ ಈ ದೃಷ್ಟಿಕೋನವು ಉಧಮ್ ಸಿಂಗ್ ನಗರದ ಜನಸಂಖ್ಯಾಸ್ಥಿತಿ ಅಧ್ಯಯನದಲ್ಲೂ ಪ್ರತಿಬಿಂಬಿತವಾಗಿದೆ, ಇದು ಪ್ರತಿ 1,000 ಪುರುಷರಿಗೆ 920 ಮಹಿಳೆಯರ ಕಳಪೆ ಲಿಂಗಾನುಪಾತವನ್ನು ತೋರಿಸುತ್ತದೆ, ಇದು ರಾಜ್ಯದ ಸರಾಸರಿ 963ಕ್ಕಿಂತ ಕಡಿಮೆಯಾಗಿದೆ
ವಿಧಾʼರ ಹಾಸಿಗೆಯ ಕೆಳಗೆ ಒಂದು ತಟ್ಟೆ , ಒಂದು ಬಟ್ಟಲು, ಸ್ಟೀಲ್ ಲೋಟ ಮತ್ತು ಚಮಚವಿದೆ, ಅದನ್ನು ಅವರು ಈ ಸಮಯದಲ್ಲಿ ತಿನ್ನಲು ಬಳಸಬೇಕು. ನಾಲ್ಕನೇ ದಿನ ಬೇಗನೆ ಎದ್ದು ಈ ಪಾತ್ರೆಗಳನ್ನು ಬಿಸಿಲಿನಲ್ಲಿ ತೊಳೆದು ಒಣಗಿಸುತ್ತಾರೆ. "ನಂತರ ನನ್ನ ತಾಯಿ ಪಾತ್ರೆಗಳ ಮೇಲೆ ಗೋಮೂತ್ರವನ್ನು ಸಿಂಪಡಿಸುತ್ತಾರೆ, ಅವುಗಳನ್ನು ಮತ್ತೆ ತೊಳೆಯುತ್ತಾರೆ ಮತ್ತು ಅವುಗಳನ್ನು ಮತ್ತೆ ಅಡುಗೆಮನೆಯಲ್ಲಿ ಇಡುತ್ತಾರೆ. ಮುಂದಿನ ಎರಡು ದಿನಗಳವರೆಗೆ ನನಗೆ ವಿವಿಧ ಪಾತ್ರೆಗಳನ್ನು ನೀಡಲಾಗುತ್ತದೆ" ಎಂದು ಅವರು ಹೇಳುತ್ತಾ, ಅವರು ಅನುಸರಿಸಬೇಕಾದ ವಿಸ್ತೃತ ಕಾರ್ಯವಿಧಾನಗಳನ್ನು ವಿವರಿಸಿದರು.
ಮನೆಯ ಹೊರಗೆ ತಿರುಗಾಡುವುದನ್ನು ಮತ್ತು "ಆ ದಿನಗಳಲ್ಲಿ ಧರಿಸಲು ನನ್ನ ತಾಯಿ ನನಗೆ ನೀಡಿದ ಬಟ್ಟೆಗಳನ್ನು ಹೊರತುಪಡಿಸಿ" ಇತರ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ" ಎಂದು ಅವರು ಹೇಳುತ್ತಾರೆ. ಅವರು ಧರಿಸುವ ಎರಡು ಜೊತೆ ಬಟ್ಟೆಗಳನ್ನು ಒಗೆಯಬೇಕು ಮತ್ತು ಒಣಗಿಸಲು ಮನೆಯ ಹಿಂಭಾಗದಲ್ಲಿ ನೇತುಹಾಕಬೇಕು ಮತ್ತು ಅವುಗಳನ್ನು ಇತರ ಬಟ್ಟೆಗಳೊಂದಿಗೆ ಬೆರೆಸಬಾರದು.
ವಿಧಾ ಅವರ ತಂದೆ ಸೈನ್ಯದಲ್ಲಿದ್ದಾರೆ ಮತ್ತು ಅವರ ತಾಯಿಯೇ 13 ಜನರಿರುವ ಮನೆಯನ್ನು ನಿರ್ವಹಿಸುತ್ತಾರೆ. ಇಷ್ಟು ದೊಡ್ಡ ಕುಟುಂಬದಲ್ಲಿ ಪ್ರತ್ಯೇಕವಾಗಿರುವುದು ಅವರಿಗೆ ಮುಜುಗರವನ್ನುಂಟುಮಾಡುತ್ತದೆ, ವಿಶೇಷವಾಗಿ ತನ್ನ ಚಿಕ್ಕ ತಮ್ಮಂದಿರಿಗೆ ಅದನ್ನು ವಿವರಿಸುವುದು: "ಇದು ಒಂದು ಕಾಯಿಲೆಯಾಗಿದ್ದು, ಇದಕ್ಕಾಗಿ ಹುಡುಗಿಯರು ಇತರರಿಂದ ಪ್ರತ್ಯೇಕವಾಗಿ ಜೀವಿಸಬೇಕಾಗುತ್ತದೆ ಎಂದು ನನ್ನ ಕುಟುಂಬ ಸದಸ್ಯರು ಅವರಿಗೆ ಹೇಳಿದ್ದಾರೆ. ಯಾರಾದರೂ ತಿಳಿಯದೆ ನನ್ನನ್ನು ಸ್ಪರ್ಶಿಸಿದರೆ, ಅವರನ್ನು 'ಅಶುದ್ಧ' ಎಂದು ಪರಿಗಣಿಸಲಾಗುತ್ತದೆ, ಮತ್ತು ಅವರ ಮೇಲೆ ಗೋಮೂತ್ರ ಸಿಂಪಡಿಸಿದ ನಂತರವೇ ಅವರು 'ಸ್ವಚ್ಛ'ವಾಗುತ್ತಾರೆ. ಆ ಆರು ದಿನಗಳಲ್ಲಿ, ವಿಧಾ ಸಂಪರ್ಕಕ್ಕೆ ಬರುವ ಎಲ್ಲವನ್ನೂ ಗೋಮೂತ್ರದಿಂದ ಶುದ್ಧಿಗೊಳಿಸಲಾಗುತ್ತದೆ. ಕುಟುಂಬವು ನಾಲ್ಕು ಹಸುಗಳನ್ನು ಹೊಂದಿರುವುದರಿಂದ ಅವುಗಳ ಮೂತ್ರವು ಸುಲಭವಾಗಿ ಲಭ್ಯವಾಗುತ್ತದೆ.
ಸಮುದಾಯವು ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ, ಆದರೆ ಅದು ಅಲ್ಪಪ್ರಮಾಣದಲ್ಲಿದೆ. ಆದ್ದರಿಂದ 2022ರಲ್ಲಿ ವಿಧಾ ಮಲಗಲು ಪ್ರತ್ಯೇಕ ಹಾಸಿಗೆಯನ್ನು ಪಡೆದರೆ, ಅದೇ ಹಳ್ಳಿಯ 70ರ ಹರೆಯದ ಬೀನಾ, ಮುಟ್ಟಿನ ಸಮಯದಲ್ಲಿ ಹೇಗೆ ದನದ ಕೊಟ್ಟಿಗೆಯಲ್ಲಿ ಉಳಿಯಬೇಕಿತ್ತೆನ್ನುವುದನ್ನು ಎಂದು ವಿವರಿಸುತ್ತಾರೆ. "ನಾವು ಕುಳಿತುಕೊಳ್ಳಲು ನೆಲದ ಮೇಲೆ ಪೈನ್ ಎಲೆಗಳನ್ನು ಹರಡುತ್ತಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಇನ್ನೊಬ್ಬ ವಯಸ್ಸಾದ ಮಹಿಳೆ ಹಿಂದಿನ ಕಾಲವನ್ನು ನೆನಪಿಸಿಕೊಳ್ಳುತ್ತಾರೆ, "ನನಗೆ ಒಣ ರೊಟ್ಟಿಗಳೊಂದಿಗೆ ಫೀಖಿ [ಸಕ್ಕರೆರಹಿತ] ಚಾಯ್ ನೀಡಲಾಗುತ್ತಿತ್ತು. ಅಥವಾ ಪ್ರಾಣಿಗಳಿಗೆ ನೀಡುವಂತಹ ಒರಟು ಧಾನ್ಯದಿಂದ ಮಾಡಿದ ರೊಟ್ಟಿಗಳನ್ನು ಕೊಡುತ್ತಿದ್ದರು. ಕೆಲವೊಮ್ಮೆ ಅವರು ನಮ್ಮ ಬಗ್ಗೆ ಮರೆತುಬಿಡುತ್ತಿದ್ದರು ಮತ್ತು ನಾವು ಹಸಿದುಕೊಂಡೇ ಇರುತ್ತಿದ್ದೆವು."
ಅನೇಕ ಮಹಿಳೆಯರು ಮತ್ತು ಪುರುಷರು ಈ ಆಚರಣೆಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ವಿಧಿಸಲಾಗಿದೆ ಎಂದು ನಂಬುತ್ತಾರೆ ಮತ್ತು ಆದ್ದರಿಂದ ಅದನ್ನು ಪ್ರಶ್ನಿಸಲಾಗುವುದಿಲ್ಲ. ಕೆಲವು ಮಹಿಳೆಯರು ತಮಗೆ ಮುಜುಗರವಾಗಿದೆ ಎಂದು ಹೇಳಿದರು ಆದರೆ ಅವರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳದಿದ್ದರೆ ದೇವರುಗಳು ಅಸಮಾಧಾನಗೊಳ್ಳುತ್ತಾರೆಂದು ನಂಬುತ್ತಾರೆನ್ನುವುದಾಗಿ ಅವರು ಹೇಳಿದರು.
ಹಳ್ಳಿಯ ಯುವಕನಾಗಿ, ವಿನಯ್ ತಾನು ಅಪರೂಪಕ್ಕೊಮ್ಮೆ ಮುಟ್ಟಾದ ಮಹಿಳೆಯರನ್ನು ಭೇಟಿಯಾಗುತ್ತೇನೆ ಅಥವಾ ಮುಖಾಮುಖಿಯಾಗುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ. ಬೆಳೆದು ದೊಡ್ಡವನಾಗುವ ಸಮಯದಲ್ಲಿ ' ಮಮ್ಮಿ ಅ ಚೂ ತ್ ಹೋ ಗಯೀ ಹೈ (ಮಮ್ಮಿಯನ್ನು ಈಗ ಮುಟ್ಟುವಂತಿಲ್ಲ)' ಎಂದು ಅವರಿಗೆ ಹೇಳಲಾಗುತ್ತಿತ್ತು.
ಈ 29 ವರ್ಷದ ಯುವಕ ತನ್ನ ಪತ್ನಿಯೊಂದಿಗೆ ನಾನಕಮಠ ಪಟ್ಟಣದ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಉತ್ತರಾಖಂಡದ ಚಂಪಾವತ್ ಜಿಲ್ಲೆಯವರಾದ ಅವರು ದಶಕದ ಹಿಂದೆ ಖಾಸಗಿ ಶಾಲೆಯಲ್ಲಿ ಬೋಧನೆ ಮಾಡಲು ಪ್ರಾರಂಭಿಸಿದಾಗ ಇಲ್ಲಿಗೆ ಸ್ಥಳಾಂತರಗೊಂಡರು. "ಇದು ನೈಸರ್ಗಿಕ ಪ್ರಕ್ರಿಯೆ ಎಂದು ನಮಗೆ ಎಂದಿಗೂ ಹೇಳಲಾಗುವುದಿಲ್ಲ. ನಾವು ಬಾಲ್ಯದಿಂದಲೇ ಈ ನಿರ್ಬಂಧಗಳನ್ನು ಅನುಸರಿಸುವುದನ್ನು ನಿಲ್ಲಿಸಿದರೆ, ಪುರುಷರು ಯಾವುದೇ ಹುಡುಗಿ ಅಥವಾ ಮಹಿಳೆಯನ್ನು ಅವಳ ಋತುಚಕ್ರದ ಸಮಯದಲ್ಲಿ ಕೀಳಾಗಿ ನೋಡುವುದಿಲ್ಲ," ಎಂದು ಅವರು ಹೇಳುತ್ತಾರೆ.
ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುವುದು ಮತ್ತು ನಂತರ ವಿಲೇವಾರಿ ಮಾಡುವುದು ಒಂದು ಸವಾಲಾಗಿದೆ. ಹಳ್ಳಿಯಲ್ಲಿರುವ ಒಂಟಿ ಅಂಗಡಿಯಲ್ಲಿ ಸಿಗಬಹುದು ಅಥವಾ ಕೆಲವೊಮ್ಮೆ ಸಿಗದೆಹೋಗಬಹುದು ಅದೂ ಅಲ್ಲದೆ ಚಾವಿಯಂತಹ ಯುವತಿಯರು ಪ್ಯಾಡ್ ಕೇಳಿದಾಗ ಅಂಗಡಿಯವರಿಂದ ವಿಚಿತ್ರ ನೋಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಮನೆಗೆ ಹೋಗುವಾಗ, ಅವರು ತಮ್ಮ ಖರೀದಿಗಳನ್ನು ಇಣುಕುವ ಕಣ್ಣುಗಳಿಂದ ಮರೆಮಾಡಬೇಕಾದ ಅನಿವಾರ್ಯತೆಗೂ ಒಳಗಾಗುತ್ತಾರೆ. ಅಂತಿಮವಾಗಿ, ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದಕ್ಕಾಗಿ ಅವರು 500 ಮೀಟರ್ ದೂರದಲ್ಲಿರುವ ಕಾಲುವೆಗೆ ನಡೆದುಹೋಗಬೇಕಾಗುತ್ತದೆ, ಜೊತೆಗೆ ಅದನ್ನು ಎಸೆಯುವ ಮೊದಲು ಯಾರೂ ನೋಡುತ್ತಿಲ್ಲ ಎನ್ನುವುದನ್ನು ಪರಿಶೀಲಿಸಲು ಸುತ್ತಲೂ ತ್ವರಿತವಾಗಿ ನೋಡಬೇಕಾಗುತ್ತದೆ.
ಇಲ್ಲಿ ಮಗುವನ್ನು ಹೆರುವುದೆಂದರೆ ಇನ್ನಷ್ಟು ಕಟ್ಟುಪಾಡುಗಳಿಗೆ ಒಳಗಾಗುವುದು
'ಅಶುದ್ಧತೆ'ಯ ಕಲ್ಪನೆಯು ಈಗಷ್ಟೇ ಮಗುವೊಂದಕ್ಕೆ ಜನ್ಮ ನೀಡಿದವರಿಗೂ ವಿಸ್ತರಿಸುತ್ತದೆ. ಲತಾ ಅವರಿಗೆ ಹದಿಹರೆಯದ ಮಕ್ಕಳಿದ್ದಾರೆ, ಆದರೆ ಅವರು ತನ್ನ ಹೆರಿಗೆಯ ಸಮಯ ಚೆನ್ನಾಗಿ ನೆನಪಿದೆ: "ಮುಟ್ಟಾದ ಹುಡುಗಿಯರಿಗೆ 4ರಿಂದ 6 ದಿನಗಳ ಕಾಲ ಮನೆಯ ಹೊರಗಿಟ್ಟರೆ, ಹೆರಿಗೆಯಾದ ಮಹಿಳೆಯರನ್ನು 11 ದಿನಗಳವರೆಗೆ ಮನೆಯ ಇತರ ಭಾಗಗಳಿಂದ ಪ್ರತ್ಯೇಕವಾಗಿರಿಸಲಾಗುತ್ತದೆ. ಕೆಲವೊಮ್ಮೆ ಇದು 15 ದಿನಗಳಾಗಿರಬಹುದು, ಅಂದರೆ ಮಗುವಿನ ನಾಮಕರಣ ಸಮಾರಂಭ ಮುಗಿಯುವವರೆಗೂ ಇರಬಹುದು." ಲತಾ 15 ವರ್ಷದ ಹುಡುಗಿ ಮತ್ತು 12 ವರ್ಷದ ಹುಡುಗನಿಗೆ ತಾಯಿಯಾಗಿದ್ದಾರೆ ಮತ್ತು ಬಾಣಂತಿ ತಾಯಿ ಮಲಗುವ ಹಾಸಿಗೆಯನ್ನು ಮನೆಯ ಉಳಿದ ಭಾಗಗಳಿಂದ ಗುರುತಿಸಲು ಹಸುವಿನ ಸಗಣಿಯ ಒಂದು ಗೆರೆಯನ್ನು ಎಳೆಯಲಾಗುತ್ತದೆ ಎಂದು ಹೇಳುತ್ತಾರೆ.
ಖತಿಮಾ ಬ್ಲಾಕ್‌ನ ಝಂಕತ್ ಗ್ರಾಮದಲ್ಲಿ ವಾಸಿಸುತ್ತಿದ್ದಾಗ, ಲತಾ ತನ್ನ ಗಂಡನ ವಿಸ್ತೃತ ಕುಟುಂಬದೊಂದಿಗೆ ವಾಸಿಸುತ್ತಿದ್ದ ಕಾರಣ ಈ ನಿಯಮಗಳನ್ನು ಪಾಲಿಸುತ್ತಿದ್ದರು. ಅವರ ಮತ್ತು ಅವರ ಪತಿ ಹೊರಗೆ ಹೋದಾಗ ಮಾತ್ರ ಅವಳು ಈ ಆಚರಣೆಗಳನ್ನು ನಿಲ್ಲಿಸಿದ್ದರು. "ಕಳೆದ ಕೆಲವು ವರ್ಷಗಳಿಂದ, ನಾವು ಈ ಸಂಪ್ರದಾಯಗಳನ್ನು ಮತ್ತೆ ನಂಬಲು ಪ್ರಾರಂಭಿಸಿದ್ದೇವೆ" ಎಂದು ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲತಾ ಹೇಳುತ್ತಾರೆ. "ಮುಟ್ಟಾದ ಸ್ತ್ರೀಯು ಅನಾರೋಗ್ಯಕ್ಕೆ ಒಳಗಾದರೆ, ದೇವತೆಗಳು ದುಃಖಿತರಾಗಿದ್ದಾರೆಂದು ಹೇಳಲಾಗುತ್ತದೆ. [ಕುಟುಂಬ ಮತ್ತು ಹಳ್ಳಿಯಲ್ಲಿ] ಎಲ್ಲಾ ಸಮಸ್ಯೆಗಳಿಗೆ ಈ ಅಭ್ಯಾಸಗಳ ಅನುಸರಣೆ ಇಲ್ಲದಿರುವುದೇ ಕಾರಣ" ಎಂದು ಅವರು ತಮ್ಮ ಅನುಸರಣೆಯನ್ನು ವಿವರಿಸುವ ಪ್ರಯತ್ನದಲ್ಲಿ ಹೇಳುತ್ತಾರೆ.
ನವಜಾತ ಶಿಶುವಿರುವ ಕುಟುಂಬದ ಕೈಯಿಂದ ಒಂದು ಲೋಟ ನೀರನ್ನು ಸಹ ಹಳ್ಳಿಯಲ್ಲಿ ಯಾರೂ ಸ್ವೀಕರಿಸುವುದಿಲ್ಲ. ಆ ಸಮಯದಲ್ಲಿ ಇಡೀ ಕುಟುಂಬವನ್ನು 'ಅಶುದ್ಧ' ಎಂದು ಪರಿಗಣಿಸಲಾಗುತ್ತದೆ ಮತ್ತು ಮಗು ಈ ವಿಷಯದಲ್ಲಿ ಮಗುವಿನ ಲಿಂಗ ಯಾವುದಾಗಿದ್ದರೂ ನಿಯಮ ಅದೇ ಆಗಿರುತ್ತದೆ. ಮಹಿಳೆ ಅಥವಾ ನವಜಾತ ಶಿಶುವನ್ನು ಮುಟ್ಟುವ ಯಾರೇ ಆಗಲಿ ಗೋಮೂತ್ರವನ್ನು ಚಿಮುಕಿಸಿಕೊಂಡು ತಮ್ಮನ್ನು ತಾವು ಶುದ್ಧಿಗೊಳಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ, ಹನ್ನೊಂದನೇ ದಿನದಂದು, ಮಹಿಳೆ ಮತ್ತು ಮಗುವಿಗೆ ಸ್ನಾನ ಮಾಡಿಸಿ ಅವರನ್ನು ಗೋಮೂತ್ರದಿಂದ ತೊಳೆಯಲಾಗುತ್ತದೆ, ನಂತರ ನಾಮಕರಣ ಸಮಾರಂಭ ನಡೆಯುತ್ತದೆ.
ಲತಾ ಅವರ 31 ವರ್ಷದ ಅತ್ತಿಗೆ ಸವಿತಾರಿಗೆ ಅವರ 17ನೇ ವಯಸ್ಸಿನಲ್ಲಿ ವಿವಾಹವಾಗಿತ್ತು. ಅವರು ಈ ಸಂಪ್ರದಾಯಗಳನ್ನು ಪಾಲಿಸುವಂತೆ ಕುಟುಂಬದಿಂದ ಒತ್ತಡವನ್ನು ಎದುರಿಸಿದ್ದರು. ಮದುವೆಯಾದ ಮೊದಲ ವರ್ಷದಲ್ಲಿ ಒಳ ಉಡುಪುಗಳಿಲ್ಲದೆ ಕೇವಲ ಸೀರೆಯೊಂದನ್ನೇ ಉಟ್ಟುಕೊಂಡು ಆಹಾರ ಸೇವಿಸಿದ್ದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. "ನನ್ನ ಮೊದಲ ಮಗುವಿನ ಜನನದ ನಂತರ ನಾನು ಅದನ್ನು ನಿಲ್ಲಿಸಿದೆ", ಎಂದು ಅವರು ಹೇಳುತ್ತಾರೆ. ಬಾಣಂತನದ ನಂತರ ಅವರ ಋತುಚಕ್ರ ಆರಂಭಗೊಂಡ ದಿನದಿಂದ ಅವರು ಪುನಃ ನೆಲದ ಮೇಲೆ ಮಲಗಲು ಆರಂಭಿಸಿರುವುದಾಗಿ ಒಪ್ಪಿಕೊಂಡರು.
ಅಂತಹ ಅಭ್ಯಾಸಗಳನ್ನು ಅನುಸರಿಸುವ ಮನೆಗಳಲ್ಲಿ ಬೆಳೆಯುವ, ಆ ಪ್ರದೇಶದ ಹುಡುಗರಿಗೆ ಏನು ಯೋಚಿಸಬೇಕೆಂದು ತಿಳಿದಿಲ್ಲ. 10ನೇ ತರಗತಿಯಲ್ಲಿ ಓದುತ್ತಿರುವ ಈ ಗ್ರಾಮದ ಹುಡುಗ ನಿಖಿಲ್ ಬಾರ್ಕಿದಂಡಿ, ಕಳೆದ ವರ್ಷ ಋತುಸ್ರಾವದ ಬಗ್ಗೆ ಓದಿದ್ದನಾದರೂ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ, ಅದೇನೇ ಇದ್ದರೂ "ಮಹಿಳೆಯರನ್ನು ಪ್ರತ್ಯೇಕವಾಗಿಡುವ ಕಲ್ಪನೆಯು ಅಸಮಂಜಸವಾಗಿದೆ ಎಂದು ನನಗನ್ನಿಸಿತು," ಎಂದು ಅವನು ಹೇಳುತ್ತಾನೆ. ಆದಾಗ್ಯೂ ಅವನು ಈ ಬಗ್ಗೆ ಮನೆಯಲ್ಲಿ ಮಾತನಾಡಿದರೆ ಕುಟುಂಬದ ವಯಸ್ಕರು ಅವನನ್ನು ಬೈಯುತ್ತಾರೆಂದು ಹೇಳುತ್ತಾನೆ.
ಇದೇ ಭಯವನ್ನು ದಿವ್ಯಾಂಶ್ ಸಹ ಹೊಂದಿದ್ದಾನೆ. ಸುಂಖರಿ ಗ್ರಾಮದ 12 ವರ್ಷದ ಶಾಲಾ ಬಾಲಕ, ತನ್ನ ತಾಯಿ ತಿಂಗಳಲ್ಲಿ ಐದು ದಿನಗಳ ಕಾಲ ಪ್ರತ್ಯೇಕವಾಗಿ ಕುಳಿತುಕೊಳ್ಳುವುದನ್ನು ನೋಡುತ್ತಿದ್ದಾನೆ, ಆದರೆ ಅದು ಏಕೆಂದು ಅವನಿಗೆ ಅರ್ಥವಾಗಲಿಲ್ಲ. "ಈ ವಿಷಯ ನನಗೆ ಎಷ್ಟು ಸಾಮಾನ್ಯವಾಗಿದೆಯೆಂದರೆ, ಇದು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗೆ ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಈಗ ಹೀಗೆ ನಡೆಸಿಕೊಳ್ಳುವುದು ಸರಿ ಎಂದು ನಾನು ಭಾವಿಸುವುದಿಲ್ಲ. ನಾನು ದೊಡ್ಡವನಾದ ನಂತರ ನಾನು ಸಂಪ್ರದಾಯಗಳನ್ನು ಪಾಲಿಸುತ್ತೇನೆಯೇ ಅಥವಾ ನಿಲ್ಲಿಸಬಲ್ಲೆನೇ,?" ಎಂದು ಅವರು ಆಶ್ಚರ್ಯ ಪಡುತ್ತಾರೆ.
ಹಳ್ಳಿಯ ಹಿರಿಯರಾದ ನರೇಂದರ್ ಅವರು ಈ ವಿಷಯದಲ್ಲಿ ಯಾವುದೇ ದ್ವಂದ್ವವನ್ನು ಅನುಭವಿಸುವುದಿಲ್ಲ. ಅವರು ಹೇಳುವಂತೆ, “ಉತ್ತರಾಂಚಲ [ಉತ್ತರಾಖಂಡದ ಹಳೆಯ ಹೆಸರು] ದೇವತೆಗಳ ವಾಸಸ್ಥಾನವಾಗಿದೆ. ಆದ್ದರಿಂದ [ಈ] ಸಂಪ್ರದಾಯಗಳು ಇಲ್ಲಿ ಮುಖ್ಯವಾಗಿವೆ"
ತಮ್ಮ ಸಮುದಾಯದ ಹುಡುಗಿಯರು ಋತುಮತಿಯರಾಗುವ ಮೊದಲೇ 9-10 ವರ್ಷ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದರು ಎಂದು ಅವರು ಹೇಳುತ್ತಾರೆ. "ಅವಳು ಋತುಮತಿಯಾದರೆ, ನಾವು ಕನ್ಯಾದಾನವನ್ನು ಹೇಗೆ ಮಾಡುವುದು,?" ಎಂದು ಅವರು ಮಗಳನ್ನು ಗಂಡನಿಗೆ 'ಉಡುಗೊರೆಯಾಗಿ' ನೀಡುವ ವೈವಾಹಿಕ ಸಂಪ್ರದಾಯದ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ. "ಈಗ ಸರ್ಕಾರವು ಮದುವೆಯ ವಯಸ್ಸನ್ನು 21ಕ್ಕೆ ಬದಲಾಯಿಸಿದೆ. ಅಂದಿನಿಂದ, ಸರ್ಕಾರ ಮತ್ತು ನಾವು ವಿಭಿನ್ನ ನಿಯಮಗಳನ್ನು ಹೊಂದಿದ್ದೇವೆ" ಎಂದು ಅವರು ಹೇಳಿದರು.
ಈ ಸ್ಟೋರಿಯನ್ನು ಹಿಂದಿಯಲ್ಲಿ ವರದಿ ಮಾಡಲಾ ಗಿದೆ. ಜನರ ಗೌಪ್ಯತೆಯನ್ನು ರಕ್ಷಿ ಸುವ ಸಲುವಾಗಿ ಈ ವರದಿಯಲ್ಲಿ ಬರುವ ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ.
ಈ ಸ್ಟೋರಿಯನ್ನು ಬರೆಯುವಲ್ಲಿ ಸಹಾಯ ಮಾಡಿದ್ದಕ್ಕಾಗಿ ಪರಿ ಎಜುಕೇಶನ್ ತಂಡವು ರೋಹನ್ ಚೋಪ್ರಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತದೆ.
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: zahra@ruralindiaonline.org ಒಂದು ಪ್ರತಿಯನ್ನು namita@ruralindiaonline.org. ಈ ವಿಳಾಸಕ್ಕೆ ಕಳುಹಿಸಿ
ಅನುವಾದ: ಶಂಕರ. ಎನ್. ಕೆಂಚನೂರು